ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಪೆಜತ್ತಾಯ ಆತ್ಮಕಥೆ : ನಾನು ಕೊಳ್ಳದ ತೆಂಗಿನ ತೋಟ    
ಎಸ್.ಎಂ. ಪೆಜತ್ತಾಯ
ಗುರುವಾರ, 20 ಆಗಸ್ಟ್ 2009 (06:16 IST)
ಕೈಗೆಟುಕದ ತೆಂಗು

ಸಾವಿರದ ಒಂಭೈನೂರ ಎಂಭತ್ತನೇ ಇಸವಿ. ಅಲ್ಲಿನ ತನಕ ಶಿವಮೊಗ್ಗದಲ್ಲಿ ವಾಸವಾಗಿದ್ದ ನಾವು ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಲು ಬೆಂಗಳೂರಿಗೆ ಬರಬೇಕಾಯಿತು. ನಮ್ಮ ದೊಡ್ಡ ಮಗಳು ರಾಧಿಕ ೧೯೭೨ರಲ್ಲಿ ಹುಟ್ಟಿದಳು. ಅವಳನ್ನು ಶಾಲೆಗೆ ಸೇರಿಸುವ ತನಕ ನಾವು ಬಾಳೆಹೊಳೆಯ ಸುಳಿಮನೆ ಕಾಫಿ ತೋಟದಲ್ಲಿ ನೆಲೆಸಿದ್ದೆವು. ರಾಧಿಕಾಳಿಗೆ ನಾಲ್ಕು ವರ್ಷ ತುಂಬುತ್ತಲೇ ನಾವು ಅವಳ ವಿದ್ಯಾಭ್ಯಾಸದ ಬಗ್ಗೆ ಬಹಳ ಯೋಚಿಸಿದೆವು.

ನಮ್ಮ ತೋಟದ ಪಕ್ಕದಲ್ಲೇ ಕೆಳಭಾಗ ಹೈಯರ್ ಪ್ರೈಮರಿ ಕನ್ನಡ ಶಾಲೆ ಇತ್ತು. ನಮ್ಮ ತೋಟದಲ್ಲಿದ್ದ ಮಕ್ಕಳು ಅದೇ ಶಾಲೆಗೆ ಹೋಗುತ್ತಿದ್ದರು. ಏಳನೇ ಕ್ಲಾಸಿನವರೆಗೆ ಆ ಶಾಲೆಯಲ್ಲಿ ಕ್ಲಾಸುಗಳು ನಡೆಯುತ್ತಿದ್ದುವು. ಹೆಡ್ ಮಾಸ್ಟರ್ ರಂಗಪ್ಪ ಒಳ್ಳೆಯ ಶಿಕ್ಷಕರಾಗಿದ್ದರು. ಅವರ ಸಹಾಯಕ್ಕೆ ಇನ್ನಿಬ್ಬರು ಸಹಾಯಕ ಶಿಕ್ಷಕರು ಇದ್ದರು. ಈ ಮೂವರು ಮೇಷ್ಟರುಗಳು ಏಳು ಕ್ಲಾಸುಗಳನ್ನು ನಿಭಾಯಿಸಬೇಕಿತ್ತು. ಶಿಕ್ಷಕರು ಕಷ್ಟಪಟ್ಟು ಮಕ್ಕಳಿಗೆ ಕಲಿಸಿ ಶಾಲೆಗೆ ಒಳ್ಳೆಯ ಹೆಸರು ತಂದಿದ್ದರು.

ನಾನು ಯಾವ ಕೆಲಸ ಮಾಡಬೇಕಾದರೂ ಸ್ವಲ್ಪ ಮುಂದಾಲೋಚನೆ ಮಾಡುವ ಸ್ವಭಾವದವನು. ನನ್ನ ಮಗಳನ್ನು ನಮ್ಮ ತೋಟದ ಪಕ್ಕದ ಶಾಲೆಗೆ ಹಾಕಿದರೆ, ಶಾಲೆಯ ಮಾಸ್ಟರುಗಳು ನನ್ನ ಮಗಳಿಗೆ ಬೈದು ಹೆದರಿಸುವುದಿಲ್ಲ. ಆ ಶಾಲೆಯ ಪ್ರಾರಂಭ ಆಗಬೇಕಿದ್ದರೆ ನಮ್ಮ ವತಿಯಿಂದ ದೊಡ್ಡ ದೇಣಿಗೆ ಕೊಡಲ್ಪಟ್ಟಿತ್ತು. ವಸತಿಯ ಏರ್ಪಾಡು ಸರಿಯಾಗಿ ಸಿಕ್ಕದೇ ಒಬ್ಬರು ಮೇಸ್ಟರು ನಮ್ಮ ತೋಟದಲ್ಲೇ ವಾಸವಾಗಿದ್ದರು. ಹಾಗಾಗಿ, ದಾಕ್ಷಿಣ್ಯದಿಂದ "ತಾವು ನಮ್ಮ ಮಕ್ಕಳ ಬಗ್ಗೆ ನಿರ್ದಾಕ್ಷಿಣ್ಯದಿಂದ ವರ್ತಿಸಿ! " ಎಂದು ಕೇಳಿಕೊಂಡರೂ, ನಮ್ಮ ಶಾಲೆಯ ಮೇಸ್ಟ್ರುಗಳು "ನಮ್ಮ ಮನೆಯ ಮಕ್ಕಳು ಏನು ತಪ್ಪುಮಾಡಿದರೂ ಬೈದು ಶಿಕ್ಷಿಸಿ ತಿದ್ದುವುದಿಲ್ಲ " ಎಂಬ ವಿಚಾರ ನನಗೆ ಮನದಟ್ಟಾಗಿತ್ತು. ಅದಲ್ಲದೆ, ನಮ್ಮ ಮನೆಯ ಮಕ್ಕಳು ನಮ್ಮ ತೋಟದ ಕಾರ್ಮಿಕರ ಮಕ್ಕಳ ಜತೆಗೆ ಶಾಲೆಗೆ ಹೋಗಿ ಸಾಮಾನ್ಯರಂತೆ ಪಾಠ ಕಲಿತರೂ, ನಮ್ಮಲ್ಲಿಯ ಕಾರ್ಮಿಕರ ಮಕ್ಕಳು ನಮ್ಮ ಮನೆಯ ಮಕ್ಕಳಿಗೆ ಸಹಜವಾಗಿ ಗೌರವ ಕೊಡುತ್ತಾರೆ. ಇದರಿಂದ ನಮ್ಮ ಮನೆಯ ಮಕ್ಕಳಿಗೆ (ಅವರಿಗೆ ಅರಿವಿಲ್ಲದಂತೆಯೇ) ಸ್ವಲ್ಪ "ಅಹಂಭಾವ ಬೆಳೆಯುವ ಸಾಧ್ಯತೆ ಕೂಡಾ ಇದೆ " ಎಂಬ ವಿಚಾರವನ್ನು ಕೂಡಾ ನಾನು ಕಂಡುಕೊಂಡೆ.

ತೆಂಗಿನ ತೋಟನಾನು ಕಂಡಂತೆ, ನಮ್ಮ ಅಕ್ಕಪಕ್ಕದ ಪ್ಲಾಂಟರುಗಳ ಮಕ್ಕಳು ಸ್ಥಳೀಯ ಶಾಲೆಗಳಲ್ಲಿ ಕಲಿತಾಗ ಪ್ರಾಥಮಿಕ ಶಾಲಾ ಮಟ್ಟವನ್ನು ಸುಲಭವಾಗಿ ದಾಟುತ್ತಿದ್ದರು. ಹೈಸ್ಕೂಲು ವಿದ್ಯಾಭ್ಯಾಸಕ್ಕಾಗಿ ಅವರು ಪಟ್ಟಣಗಳ ಶಾಲೆ ಸೇರಿದ ಮೇಲೆ, ಅವರು ಪಟ್ಟಣಗಳ ಶಾಲೆಗಳಲ್ಲಿ ‘ಹತ್ತರೊಟ್ಟಿಗೆ ಹನ್ನೊಂದು’ ಎಂಬಂತಾಗಿ ಉಪಾಧ್ಯಾಯರುಗಳ ಹೆಚ್ಚಿನ ನಿಗಾ ಇಲ್ಲದೆ, ಪದೇ ಪದೇ ನಾಪಾಸಾಗುತ್ತಿದ್ದುದು ನನಗೆ ಗೋಚರವಾಯಿತು. ಕಾಲೇಜು ಮಟ್ಟದ ವಿದ್ಯಾಭಾಸದ ಸಮಯದಲ್ಲಿ ಈ ವಿ.ಐ.ಪಿ. ಸ್ವಭಾವಗಳನ್ನು ಒಗ್ಗಿಸಿಕೊಂಡ ಮಕ್ಕಳು ತಮ್ಮ ಪಿ.ಯೂ.ಸಿ. ಕ್ಲಾಸುಗಳನ್ನು ದಾಟಲು ‘ಬಹು ಕಷ್ಟ’ ಪಡುವುದನ್ನು ಕೂಡಾ ನಾನು ಗಮನಿಸಿದೆ.

ಆದ್ದರಿಂದ ತೊಂಬತ್ತ ಐದು ಕಿಲೋಮೀಟರ್ ದೂರದ ಶಿವಮೊಗ್ಗಾ ಪಟ್ಟಣದಲ್ಲಿ ನನ್ನ ಮಗಳನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡಿದೆ. ನಾನು ನನ್ನ ಮಗಳು ನಾನು ಕಲಿತಂತೆಯೇ ಕನ್ನಡ ಮಾಧ್ಯಮದಲ್ಲಿಯೇ ಕಲಿಯಲಿ! ಎಂದು ಬಯಸಿದರೂ, ನನ್ನ ಹಿತೈಶಿಗಳಲ್ಲಿ ಹೆಚ್ಚಿನವರು ನನ್ನ ಮಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಲು ಸಲಹೆ ಇತ್ತರು. "ಮುಂದಿನ ಓದಿಗೆ ಸಹಕಾರಿ ಆಗಬಹುದು" ಎಂಬ ಆಕಾಂಕ್ಷೆಯಿಂದ ನನ್ನ ಮಗಳನ್ನು ಶಿವಮೊಗ್ಗದ ಮೇರಿ ಇಮ್ಮಾಕ್ಯುಲೇಟ್ ಕಾನ್ವೆಂಟ್‌ಗೆ ಸೇರಿಸಿದೆ.

ನಾಲ್ಕು ವರುಷದ ಚಿಕ್ಕ ಮಗುವನ್ನು ತಾಯಿಯಿಂದ ಅಗಲಿಸಿ ಹಾಸ್ಟೆಲ್‌ನಲ್ಲಿ ಇರಿಸಿ ಓದಿಸಲು ನಾವು ಒಪ್ಪಲಿಲ್ಲ. ಹಾಸ್ಟೆಲ್ ವಾಸ ಮಾಡಿದ ಚಿಕ್ಕ ಮಕ್ಕಳಿಗೆ ತಮ್ಮ ಮನೆಯ ಮಾತು, ನಡೆ, ನುಡಿ ಮತ್ತು ಸಂಸ್ಕೃತಿ ರೂಢಿಯಾಗುವುದು ತುಂಬಾ ಕಷ್ಟ. ಹಾಗಾಗಿ, ನಾವು ಶಿವಮೊಗ್ಗದಲ್ಲಿ ಒಂದು ಬಾಡಿಗೆಯ ಬಿಡಾರ ಮಾಡಿದೆವು. ನಗರ ವಾಸದ ಖರ್ಚು ವೆಚ್ಚ ಭರಿಸಿಕೊಳ್ಳಲು ನಾನು ಮೊದಲಿನ ಕೆಲವು ತಿಂಗಳು ತಂಪು ಪಾನೀಯಗಳ ಏಜೆನ್ಸಿ ಪಡೆದು ದುಡಿಯುತ್ತಿದ್ದೆ. ತದನಂತರ ಒಂದು ‘ಪಾಲೀಥೀನ್ ಬ್ಯಾಗ್ ’ ತಯಾರಿಸುವ ಒಂದು ಕಾರ್ಖಾನೆಯನ್ನು ನನ್ನ ಮಿತ್ರರ ಸಹಯೋಗದಿಂದ ಕೊಂಡುಕೊಂಡು ನಡೆಸಿದೆ. ವಾರಕ್ಕೆ ಐದು ದಿನ ಶಿವಮೊಗ್ಗದಲ್ಲಿ ಮತ್ತು ವಾರಾಂತ್ಯದಲ್ಲಿ ನಮ್ಮ ಸುಳಿಮನೆ ಕಾಫಿ ತೋಟದಲ್ಲಿ ದುಡಿಯ ಹತ್ತಿದೆ. ಈ ಏರ್ಪಾಡು ಚೆನ್ನಾಗಿಯೇ ನಡೆಯುತ್ತಿತ್ತು.

ಹೊಸಬಗೆಯ ಲಿಲ್ಲೀ ಹೂವು೧೯೭೬ರಲ್ಲಿ ನಮ್ಮ ಎರಡನೇ ಮಗಳು ರಚನಾ ಹುಟ್ಟಿದಳು. ರಚನಾಗೆ ನಾಲ್ಕು ವರುಷ ತುಂಬುವಾಗ, ಶಿವಮೊಗ್ಗದ ಕಾನ್ವೆಂಟಿನ ‘ ಕನ್ನಡೀಕರಣ ’ ಶುರುವಾಯಿತು. ರಚನಾ ತನ್ನ ಅಕ್ಕ ರಾಧಿಕಾ ಓದುತ್ತಿದ್ದ ಕಾನ್ವೆಂಟ್ ಸೇರಿದರೂ, ಕನ್ನಡ ಮಾಧ್ಯಮದಲ್ಲಿ ಓದಬೇಕಾಯಿತು. ಈ ಅನಿರೀಕ್ಷಿತ ಬಡಲಾವಣೆಯಿಂದಾಗಿ "ದೊಡ್ಡ ಮಗಳಿಗೆ ಇಂಗ್ಲಿಷ್ ಮಾಧ್ಯಮದ ಓದು ಮತ್ತು ಚಿಕ್ಕವಳಿಗೆ ಕನ್ನಡ ಮಾಧ್ಯಮದ ಓದು" ಎಂಬುದು ಖಂಡಿತವಾಯಿತು. ಮಕ್ಕಳಿಗೆ ಈ ಮಾಧ್ಯಮಗಳ ತಾರತಮ್ಯ ಸೃಷ್ಟಿಸಲು ನಮ್ಮ ಮನಸ್ಸು ಒಪ್ಪದೇ, ಚೆನ್ನಾಗಿ ನಡೆಯುತ್ತಿದ್ದ ಪ್ಲಾಸ್ಟಿಕ್ ಕಾರ್ಖಾನೆಯನ್ನು ಮಾರಿ, ನಾವು ಅನಾಮತ್ತಾಗಿ ಬೆಂಗಳೂರಿಗೆ ಬಂದು ನೆಲೆಸಬೇಕಾಯಿತು.

ಬೆಂಗಳೂರಿಗೆ ಬಂದು ಮಕ್ಕಳಿಬ್ಬರನ್ನೂ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದಾಯಿತು. ಬೆಂಗಳೂರಿನಿಂದ ನಮ್ಮ ತೋಟ ೩೪೦ ಕಿ.ಮೀ. ದೂರ. ಆದರೂ, ಪ್ರತೀ ವಾರಾಂತ್ಯದಲ್ಲಿ ನಾವು ತೋಟಕ್ಕೆ ಹೋಗಿ ಬರುತ್ತಿದ್ದೆವು. ಶಹರಕ್ಕೆ ಬಂದು ನೆಲಸಿದ ಮೇಲೆ ಬೆಂಗಳೂರಿನಲ್ಲಿ ಒಂದು ವ್ಯಾಪ್ತಿ ಬೇಕಲ್ಲವೇ? "ದ್ರಾಕ್ಷಿಯ ತೋಟ ಮಾಡೋಣ! " ಎಂದು ಆಲೋಚಿಸಿ ಬೆಂಗಳೂರು ಶಹರದ ಆಸು ಪಾಸಿನಲ್ಲಿ ಹತ್ತು ಎಕರೆಯಷ್ಟು ಜಮೀನು ಹುಡುಕುವ ಪ್ರಯತ್ನದಲ್ಲಿ ತೊಡಗಿದೆ. ಬೆಂಗಳೂರಿನ ಸುತ್ತಮುತ್ತ ದ್ರಾಕ್ಷಿಯ ಬೆಳೆ ಚೆನ್ನಾಗಿಯೇ ಬರುವುದು ಕಂಡುಬಂತು.
ಸದಾ ಮೋಡದಿಂದ ಕೂಡಿದ ವಾತಾವರಣ ಇರುವ ಬೆಂಗಳೂರಿನ ಹವಾಮಾನದಲ್ಲಿ ಲಾಭದಾಯಕವಾಗಿ ದ್ರಾಕ್ಷಿ ಬೆಳೆಯಬೇಕಾದರೆ, ದಿನ ಬಿಟ್ಟು ದಿನ ಎಂಬಂತೆ ಕೀಟನಾಶಕ ಮತ್ತು ರೋಗನಾಶಕ ರಾಸಾಯನಿಕಗಳನ್ನು ಸಿಂಪಡಣೆ ಮಾಡಲೇ ಬೇಕು ಎಂದು ತಿಳಿದುಬಂತು. ಈ ಅತೀ ಹೆಚ್ಚಿನ ರಾಸಾಯನಿಕ ಬಳಕೆ ನನ್ನ ಮನಸ್ಸಿಗೆ ಒಪ್ಪಿಗೆ ಆಗಲಿಲ್ಲ. " ಈ ರಾಸಾಯನಿಕಗಳ ಶೇಷಾಂಶವು ತಿನ್ನುವ ದ್ರಾಕ್ಷಿ ಹಣ್ಣುಗಳಲ್ಲಿ ಉಳಿದುಕೊಂಡು ಗ್ರಾಹಕರ ಹೊಟ್ಟೆಗೆ ಸೇರುವುದು ಖಚಿತ! " ಎಂದು ನನಗೆ ಮನವರಿಕೆಯಾಯಿತು.

ಇಬ್ಬನಿಯಲ್ಲಿ ಮಿಂಚುವ ಹೊಂಗೆಯ ಹೂವುಗಳು‘ಈ ವಿಷ ಪ್ರಸರಣ ಬೇಸಾಯದ ಗೊಡವೆ ಬೇಡ!’ ಎಂದು ಬೆಂಗಳೂರಿನ ಆಸುಪಾಸಿನಲ್ಲಿ ತೆಂಗಿನ ತೋಟ ಮಾಡುವ ಅಥವಾ ಒಳ್ಳೆಯ ತೆಂಗಿನ ತೋಟ ಸಿಕ್ಕರೆ ಕೊಳ್ಳುವ ಆಲೋಚನೆ ಮಾಡಿದೆ. ಒಂದೆರಡು ತಿಂಗಳು ಹುಡುಕಾಟ ಮಾಡಿದರೂ, ಸರಿಯಾದ ಜಮೀನು ಅಥವಾ ತೋಟ ಕಂಡು ಬರಲಿಲ್ಲ.

ನಾನು ಒಂದು ದಿನ ನನ್ನ ಬ್ಯಾಂಕಿಗೆ ಹೋದಾಗ ನನ್ನ ಗುರುತಿನ ಬ್ಯಾಂಕ್ ಅಧಿಕಾರಿಯೊಬ್ಬರು ನನ್ನೊಂದಿಗೆ ಮಾತನಾಡುತ್ತಾ, ತಮ್ಮ ಹೆಂಡತಿಯ ತಂದೆಯವರು ಒಂದು ಫಸಲಿಗೆ ಬರಲು ಶುರುವಾಗಿದ್ದ ತೆಂಗಿನ ತೋಟವನ್ನು ಸೋವಿಯಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಆ ತೋಟ ಬೆಂಗಳೂರು ಜಿಲ್ಲೆಯ ಪಕ್ಕದ ಕೋಲಾರ ಜಿಲ್ಲೆಯಲ್ಲಿ ಇತ್ತು. ಅದು ಕೋಲಾರ ಜಿಲ್ಲೆಯ ಶಿಡ್ಲ ಘಟ್ಟ ಎಂಬ ಊರಿನ ಹೊರ ವಲಯದಲ್ಲಿ ಇತ್ತು. ಆ ತೋಟವು ಸ್ವಲ್ಪ ದೂರ ಆದರೂ, ಇಪ್ಪತ್ತು ಎಕರೆಯಷ್ಟು ವಿಸ್ತೀರ್ಣದ ತೆಂಗಿನ ತೋಟ ಆದುದರಿಂದ ಪರವಾಗಿಲ್ಲ, ಅದನ್ನು ಕೊಂಡು ಒಳ್ಳೆಯ ನಂಬಿಕಸ್ಥ ಮ್ಯಾನೇಜರನ್ನು ಇಟ್ಟು ನಡೆಸುವ ಧೈರ್ಯಮಾಡಿದೆನು.

ನನಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನನ್ನ ಅಕ್ಕನಿಗೆ ತೆಂಗಿನ ತೋಟ ಮಾಡಿ ಕೊಟ್ಟ ಅನುಭವ ಕೂಡಾ ಇದೆ. ಹೇಗೂ ಕಲ್ಪ ವೃಕ್ಷದ ಬೆಳೆ! ಒಂದು ಕೈ ನೋಡಿಯೇ ಬಿಡೋಣ! ಎಂದು ನಿರ್ಧರಿಸಿ, ಅಡ್ವಾನ್ಸ್ ಕೊಡಬೇಕಾದ ಹಣ ಹಿಡಿದುಕೊಂಡೇ ಶಿಡ್ಲ ಘಟ್ಟಕ್ಕೆ ಹೋದೆ. ತೋಟದ ಮಾಲಿಕರು ಶಿಡ್ಲ ಘಟ್ಟ ಪೇಟೆಯಲ್ಲೇ ವಾಸವಾಗಿದ್ದರು. ಅವರು ಕೂಡಾ ನನ್ನಂತೆ ಮಂಗಳೂರು ಮೂಲದವರು. ಶಿಡ್ಲ ಘಟ್ಟದ ಬಸ್ ಸ್ಟಾಂಡ್ ಸಮೀಪದಲ್ಲಿ ಒಂದು ಚಿಕ್ಕ ಉಪಹಾರ ಗೃಹವನ್ನು ನಡೆಸುತ್ತಿದ್ದರು.

ವಸಂತ ಮಾಸ ಬಂದಾಗ ಹುಲ್ಲುಗಳಲ್ಲೂ  ಹೂವುಆ ಸಮಯ ‘ಹೋಟೆಲ್ ತಿಂಡಿ ಬೆಲೆ ಹೆಚ್ಚಿಸಬಾರದು’ ಎನ್ನುವ ಚಳವಳಿಯು ನಮ್ಮ ರಾಜ್ಯದಾದ್ಯಂತ ನಡೆಯುತ್ತಿತ್ತು. ಅವರು ವ್ಯಾಪಾರದಲ್ಲಿ ಲಾಭ ಕಾಣದೇ, ಸ್ವಲ್ಪ ಹಣದ ಮುಗ್ಗಟ್ಟಿನಲ್ಲಿ ಇದ್ದಂತೆ ಕಂಡುಬಂತು. ಕಾಲೇಜು ಓದುತ್ತಿದ್ದ ಇಬ್ಬರು ಗಂಡು ಮಕ್ಕಳ ಓದಿನ ಖರ್ಚುಗಳ ಪೂರೈಕೆ  ಮತ್ತು ಬೆಳೆದು ನಿಂತ ಹೆಣ್ಣುಮಕ್ಕಳ ಮದುವೆ ಮಾಡುವ ಜವಾಬ್ದಾರಿ ಕೂಡಾ ಅವರ ಮೇಲೆ ಇದೆ ಎಂದು ಅವರೊಡನೆ ಸಂಭಾಷಿಸಿದಾಗ ತಿಳಿದುಬಂತು. ನಾನು ಅವರೊಂದಿಗೆ ಮಾತನಾಡುವಾಗಲೇ ‘ಅವರು ಮುಗ್ಧ ಸ್ವಭಾವದ ಸಾಧು ಮನುಷ್ಯ ’ ಎಂದು ನನಗೆ ಮನವರಿಕೆ ಆಯಿತು.

ಸುಮಾರು ಹನ್ನೆರಡು ವರ್ಷಗಳಷ್ಟು ಹಿಂದೆ ಅವರು ಆ ತೋಟದ ಜಮೀನು ಕೊಂಡು ತೆಂಗಿನ ಸಸಿ ಇಡಿಸಿದ್ದರಂತೆ. ಜಮೀನಿನಲ್ಲಿ ಭಗೀರಥ ಪ್ರಯತ್ನ ಮಾಡಿ ನಾಲ್ಕು ಭಾವಿ ತೋಡಿಸಿದ ನಂತರ ಅವರಿಗೆ ಸಾಕಾಗುವಷ್ಟು ನೀರು ಸಿಕ್ಕಿತಂತೆ. ಆ ಬೆಂಗಾಡು ಪ್ರದೇಶದಲ್ಲಿ ತೆಂಗಿನ ಗಿಡಗಳನ್ನು ನೆಟ್ಟು, ನೀರು ಉಣಿಸಿ ಅವನ್ನು ಪ್ರೀತಿಯಿಂದ ಸಾಕಿದ್ದರಂತೆ. ದಿನಾ ಐದು ಮೈಲಿ ಸೈಕಲ್ ತುಳಿದು, ತೋಟಕ್ಕೆ ಹೋಗಿ, ತೆಂಗಿನ ಸಸಿಗಳ ನಿಗಾ ನೋಡಿದ ಕಥೆಯನ್ನು ಅವರು ನನಗೆ ಹೇಳಿದರು. ಹನ್ನೆರಡು ವರ್ಷಗಳಿಂದ ತನ್ನ ವ್ಯಾಪಾರದ ಲಾಭದ ಹಣವನ್ನೆಲ್ಲಾ ಅವರು ಆ ಜಮೀನಿಗೆ ಸುರಿದಿದ್ದರು.

ಆಗಲೇ, ವ್ಯಾಪಾರಸ್ಥರೊಬ್ಬರು ಅವರ ಆಸ್ತಿಯನ್ನು ಬಹಳ ಸೋವಿಯಾಗಿ ಕೇಳಿ, ಕೊಳ್ಳುವ ಹವಣಿಕೆಯಲ್ಲಿ ಇದ್ದರು. ಪುಣ್ಯವಶಾತ್, ಅವರಿಂದ ಅವರು ಮುಂಗಡ ಪಡೆದು ಮಾರುವುದಾಗಿ ಮಾತು ಕೊಟ್ಟಿರಲಿಲ್ಲ. ಆದರೂ, ಒಂದೆರಡು ದಿನಗಳಲ್ಲಿ ತನ್ನ ಜಮೀನು ಮಾರಾಟಮಾಡಿಯೇ ಬಿಡಬೇಕು ಎಂದು ಅವರು ನಿರ್ಧರಿಸಿದಂತೆ ಕಂಡಿತು. ಅವರ ದೊಡ್ಡ ಅಳಿಯನ ಪರಿಚಯಸ್ಥನಾದ ನಾನು, ಜಮೀನನ್ನು ಆ ವ್ಯಾಪಾರಸ್ಥರು ಕೇಳಿದ ಕ್ರಯಕ್ಕೆ ಖರೀದಿಸಿದರೆ ತುಂಬ ಸಂತೋಷ ಅಂದು ಹೇಳಿದರು.

ನನಗೆ ‘ ಆ ಜಮೀನು ಅಷ್ಟು ಕಡಿಮೆ ಕ್ರಯಕ್ಕೆ ಸಿಕ್ಕುವುದು!’ ಎಂದು ತಿಳಿದು ಮನದೊಳಗೆ ಸಂತೋಷ ಉಂಟಾಯಿತು. " ದಯವಿಟ್ಟು ತಮ್ಮ ಜಮೀನನ್ನು ನಮಗೆ ತೋರಿಸಿ " ಎಂದೆ.  
ತೋಟದ ಮಾಲಿಕರನ್ನು ನಾನು ಮತ್ತು ನನ್ನ ಪತ್ನಿ ಸರೋಜಮ್ಮ ನಮ್ಮ ಕಾರಿನಲ್ಲಿ ಕುಳ್ಳಿರಿಸಿ ಕೊಂಡು, ಅವರ ತೋಟದ ಕಡೆಗೆ ಹೊರಟೆವು. ಊರ ಹೊರಗೆ ಸುಮಾರು ನಾಲ್ಕು ಮೈಲು ಸಾಗುತ್ತಲೇ, ಆ ಬೆಂಗಾಡು ಸೀಮೆಯ ಬಟ್ಟ ಬಯಲು ಜಾಗದಲ್ಲಿ ಆ ಇಪ್ಪತ್ತು ಎಕರೆಯ ತೋಟ ನಂದನ ವನದಂತೆ ನಳನಳಿಸುತ್ತಿರುವುದು ನಮಗೆ ಕಂಡುಬಂತು. ತಂತಿ ಬೇಲಿಯ ಗೇಟಿನ ಬಳಿ ಕಾರು ನಿಲ್ಲಿಸಿ, ಅವರೊಡನೆ ಆ ತೋಟವನ್ನು ನಾವು ಸುತ್ತಿದೆವು.

ಶ್ರಾವಣದಲ್ಲಿ  ಬೇಲಿಯೂ ಹೂವು ಬಿಡುತ್ತೆ!ವಿದ್ಯುತ್ ಪಂಪು ಅಳವಡಿಸಿದ ಬ್ರಹ್ಮಾಂಡವಾದ ನಾಲ್ಕು ಮಟ್ಟೆ ಭಾವಿಗಳನ್ನು ಮತ್ತು ಭರ್ಜರಿ ಫಸಲು ನೀಡಲು ತಯಾರಾಗಿ ನಿಂತಿದ್ದ ಎಳೇ ತೆಂಗಿನ ಮರಗಳನ್ನು ಅವರು ನಮಗೆ ತೋರಿಸಿ ನಿಟ್ಟುಸಿರು ಬಿಟ್ಟರು. ಆ ದೊಡ್ಡ ಬಾವಿಗಳಿಗೆ ಅವರು ಮಾಡಿದ್ದ ಖರ್ಚನ್ನು ನನಗೆ ಊಹಿಸಲೂ ಕಷ್ಟವಾಯಿತು. ತೋಟವನ್ನು ತೋರಿಸಿದನಂತರ, ಅವರು ತಮ್ಮ ಆಳಿನ ಹಸ್ತ ಎಳನೀರು ಕೊಯ್ಯಲು ಹೇಳಿದರು. ನಾನು " ರಾಯರೇ! ದಯವಿಟ್ಟು ಎಳನೀರು ಕೊಯ್ಯಿಸಬೇಡಿರಿ. ಎಳೇ ಮರದಿಂದ ಎಳನೀರು ಕೊಯ್ದರೆ ಮರಕ್ಕೆ ನಂಜಾಗುತ್ತದೆ ಎಂದು ಹಳ್ಳಿಯಲ್ಲಿ ಹೇಳುತ್ತಾರೆ " ಎಂದೆ.

ಆಗ ರಾಯರು, " ನಿಮ್ಮ ಮಾತು ಸರಿ. ಈ ಮರಗಳನ್ನು ಮನೆಯ ಮಕ್ಕಳಂತೆ ಇದುವರೆಗೆ ಸಾಕಿದ್ದೇನೆ. ನಾನು ಇದುವರೆಗೆ ಈ ತೋಟದ ಒಂದು ಎಳನೀರು ಕುಡಿದಿಲ್ಲ! ಆದರೆ, ಕೊಳ್ಳ ಬಂದ ಗಿರಾಕಿಯ ಎದುರು ಈ ಭಾವನೆ ತೋರಿಸಿದರೆ ಅವರು ನಗುವುದಿಲ್ಲವೇ? " ಎಂದರು.

ಆಗ ನಾನು "ರಾಯರೇ! ನನ್ನ ಈ ಕೈಗಳು ಸಾವಿರಾರು ತೆಂಗಿನ ಗಿಡ ಹಚ್ಚಿದ ಕೈಗಳು. ನಾನು ನೆಟ್ಟ ಮರಗಳಿಂದ ಎಳನೀರು ಕೀಳಿಸಲು ನನಗೆ ಇಂದಿಗೂ ಮನಸ್ಸು ಒಪ್ಪುವುದಿಲ್ಲ. " ಎಂದೆ.
ನನ್ನ ಮಾತು ಕೇಳಿ ಅವರ ಕಣ್ಣುಗಳಲ್ಲಿ ನೀರೂರಿತು.ನನಗೆ ಅವರೊಡನೆ "ಏಕಾಂತದಲ್ಲಿ ಮಾತನಾಡಬೇಕು!" ಅನಿಸಿತು.

ಅವರನ್ನು ತೋಟದ ಒಳಗೆ ಸ್ವಲ್ಪ ದೂರ ಕರೆದು ಕೊಂಡು ಹೋಗಿ ಏಕಾಂತದಲ್ಲಿ "ರಾಯರೇ! ನಾನೂ ಒಬ್ಬ ಬೇಸಾಯಗಾರ. ದಯವಿಟ್ಟು ವೃತ್ತಿಬಾಂಧವನಾದ ನನ್ನೊಡನೆ ಸಂಕೋಚ ಬೇಡ. ದಯವಿಟ್ಟು ನೀವು ಈ ನಂದನವನದಂತಹಾ ತೋಟವನ್ನು ಇಷ್ಟು ಸೋವಿಯಾಗಿ ಮಾರಾಟ ಮಾಡುವ ಆಲೋಚನೆ ಯಾಕೆ ಮಾಡುತ್ತಿದ್ದೀರಿ? " ಎಂದು ಕೇಳಿದೆ.

ಬಿಳಿಯ ಲಾಂಟಾನದ ಹೂವಿನ ಸೊಬಗುಆಗ ರಾಯರು ಭಾವೋವೇದ್ವೇಗದಿಂದ ತನ್ನ ಕಥೆ ಹೇಳಿದರು. " ನಾನು ಈ ಊರಿಗೆ ಅಲ್ಪ ಬಂಡವಾಳದೊಡನೆ ಬಂದು ಒಂದು ಉಪಹಾರ ಗೃಹ ಶುರುಮಾಡಿದೆ. ದೇವರ ದಯೆಯಿಂದ ವ್ಯಾಪಾರ ಚೆನ್ನಾಗಿಯೇ ಆಯಿತು. ಚಿಕ್ಕಂದಿನಿಂದಲೂ ತೆಂಗಿನ ತೋಟ ಮಾಡುವ ಹಂಬಲ ನನಗೆ! ದೇವರ ದಯದಿಂದ ಈ ಜಾಗ ಹನ್ನೆರಡು ವರ್ಷಗಳ ಹಿಂದೆ ಕಡಿಮೆ ಕ್ರಯದಲ್ಲಿ ಸಿಕ್ಕಿತು. ಮೊದಲು ಬಾವಿ ತೋಡಿಸಿದೆ. ಈ ಇಪ್ಪತ್ತು ಎಕರೆಗೆ ಸಾಕಾಗುವಷ್ಟು ನೀರು ಹುಟ್ಟಿಸಿಕೊಳ್ಳಲು ಬಹಳ ಖರ್ಚಾಯಿತು. ಆನಂತರ ಗಿಡಗಳನ್ನು ನೆಟ್ಟು ಅವನ್ನು ಮಕ್ಕಳಂತೆ ಪೋಷಿಸಿದೆ. ಈಗ ಮರಗಳು ಒಳ್ಳೆಯ ಫಸಲಿಗೆ ನಿಲ್ಲಲು ತಯಾರಾಗಿವೆ. ನನ್ನ ದೊಡ್ಡ ಮಗಳ ಮದುವೆಯನ್ನೇನೋ ಸಲೀಸಾಗಿ ಉಳಿತಾಯದ ಹಣದಿಂದ ಮಾಡಿಬಿಟ್ಟೆ. ಈಗ ಇಬ್ಬರು ಕಾಲೇಜು ಓದುವ ಗಂಡು ಮಕ್ಕಳ ವಿದ್ಯಾಭ್ಯಾಸ ಹಾಗೂ ಉಳಿದಿಬ್ಬರು ಹೆಣ್ಣು ಮಕ್ಕಳ ಮದುವೆಯ ಖರ್ಚು ನಾನು ನಿಭಾಯಿಸಬೇಕಾಗಿದೆ. ಇದು ತನಕ ನಾನು ಎಂದೂ, ಯಾರೊಡನೆಯೂ, ಒಂದು ಪೈಸೆ ಸಾಲ ಮಾಡಿದವನಲ್ಲ. ಆದರೆ ನಾನು ಈಗ ಸಾಲ ಮಾಡದೇ ಬೇರೆ ದಾರಿಯೇ ಇಲ್ಲ! ಈ ತೋಟ ಮಾಡುವುದಕ್ಕೆ ಮೊದಲು ನನ್ನ ಕೈಯ್ಯಲ್ಲಿ ನಾಲ್ಕು ಕಾಸು ಇದ್ದಾಗ, " ಈ ಆಸ್ತಿ ಎರಡು ಗಂಡು ಮಕ್ಕಳಿಗೆ " ಎಂದು ಸಂಕಲ್ಪ ಮಾಡಿದ್ದೆ. ಇದರ ಜತೆಗೆ, ಇದೇ ಊರೊಳಗೆ ಎರಡು ದೊಡ್ಡ ಸೈಟುಗಳನ್ನು ಕೊಂಡು ಇಟ್ಟಿದ್ದೂ ಇವೆ. ಆ ಸೈಟುಗಳು ನನ್ನ ಹೆಸರಿನಲ್ಲಿ ಇದ್ದರೂ, ‘ಅವು ನನ್ನ ಮಕ್ಕಳಿಗೆ ವಾಸದ ಮನೆ ಕಟ್ಟಲು’ ಎಂದು ತೀರ್ಮಾನಿಸಿದ್ದರಿಂದ, ಅವನ್ನು ಮಾರಲು ನನಗೆ ಇಷ್ಟವಿಲ್ಲ! ಹಾಲಿ, ನಾವು ವಾಸ ಇರುವುದು ಬಾಡಿಗೆಯ ಮನೆ. ಹೋಟೆಲ್‌ನ ಜಾಗವೂ ಭೋಗ್ಯದ್ದು! ಕೂಡಿಟ್ಟ ನಗ ನಾಣ್ಯ ಒಂದೂ ಇಲ್ಲ! ಆದ್ದರಿಂದ, ಈಗ ಮಾರಲು ಇನ್ನು ಉಳಿದುದು ಈ ತೆಂಗಿನ ತೋಟ ಮಾತ್ರ! ಈ ತೋಟವನ್ನು  ಮಾರಿದರೆ,  ನಾನು ಬೆಂಗಳೂರಿನಲ್ಲಿ ಕಾಲೇಜು ಓದುತ್ತಿರುವ ಇಬ್ಬರು ಹುಡುಗರ ವಿದ್ಯಾಭ್ಯಾಸಕ್ಕೆ ಹಣ ಪೂರೈಸಿ, ಉಳಿದ ಹಣದಲ್ಲಿ ಮದುವೆಗೆ ತಯಾರಾದ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿಕೊಟ್ಟರೆ, ನನ್ನ ಜವಾಬ್ದಾರಿ ನಿಭಾಯಿಸಿದಂತೆ ಆಯಿತು!  ಹೀಗೆ ಅಭಿಪ್ರಾಯ ಮಾಡಿ ಈ ನಿರ್ಧಾರ ತೆಗೆದುಕೊಂಡೆ. " ಎಂದರು.

ಅವರ ಮಾತು ಕೇಳಿ ನಾನು ಜೋರಾಗಿ ನಕ್ಕು ಬಿಟ್ಟೆ! " ಸಾರ್! ಸಾಲವೇ ಇಲ್ಲದ ನೀವು ಈ ರೀತಿ ಅಸ್ತಿ ಮಾರಲು ತಯಾರಾಗಿರುವುದನ್ನು ಕಂಡು ನನಗೆ ತಡೆಯಲಾರದ ನಗು ಬರುತ್ತಾ ಇದೆ!  ಕಾಫಿ ತೋಟ ಮಾಡುವ ಮಂದಿ ನಾವು! ಇಂದು ನಾವು ಕಳುಹಿಸಿದ ಕಾಫಿಗೆ ಮುಂದಿನ ವರ್ಷಗಳಲ್ಲಿ ನಮ್ಮ ಕಾಫಿ ಬೋರ್ಡ್ ಹಣ ಕೊಡುವುದು ರೂಢಿ! ಹಾಗಾಗಿ, ಸಾಲ ಮಾಡದೇ ನಾವು ಕಾಫಿ ತೋಟ ನಡೆಸುವುದು ಸಾಧ್ಯವೇ ಇಲ್ಲ! ನನ್ನ ಕಥೆ ಹೀಗೆ ಇದ್ದರೂ, ಇನ್ನೂ ಸ್ವಲ್ಪ ಸಾಲವನ್ನೇ ಮಾಡಿ, ನಿಮ್ಮ ತೋಟ ಕೊಳ್ಳಲು ಬಂದಿದ್ದೇನೆ! ತಾವು ನನಗಿಂತ ಹಿರಿಯರು!  ದಯವಿಟ್ಟು ನನ್ನ ಮಾತು ಕೇಳಿ! ಈ ತೋಟವನ್ನು ನೀವು ಜೀವದಿಂದ ಇರುವ ತನಕ ಮಾರಬೇಡಿರಿ!  ನಾನು ಕೊಳ್ಳಲು ಬಂದ ಗಿರಾಕಿ ಆದರೂ,  ತಾವು ಈ ತೋಟ ಮಾಡಲು ಪಟ್ಟ ದೈಹಿಕ ಕಷ್ಟ ಮತ್ತು ಈ ಜಮೀನಿನಲ್ಲಿ ತಾವು ಸುರಿಸಿದ ಬೆವರು ಹಾಗೂ ತಾವು ಖರ್ಚುಮಾಡಿದ ಹಣದ ಅಗಾಧತೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ! ಈ ಜಮೀನನ್ನು ತಾವು ಮಾರಿ ಬಿಟ್ಟರೆ, ತಾವು ತಮ್ಮ ಈ ಪ್ರೀತಿಯ ಈ ಮರಗಳನ್ನು ಮಾರಿದನಂತರ ಸಂತೋಷದಿಂದ ಇರಲು ಸಾಧ್ಯವೇ ಇಲ್ಲ ಎಂದು ನನಗೆ ಅನಿಸುತ್ತದೆ! ಎಲ್ಲಾದರೂ ಈ ತೋಟವನ್ನು ಮಾರಿದರೆ ನೀವು ಮುಂದೆ ಪಶ್ಚಾತ್ತಾಪ ಪಡುತ್ತೀರಿ! ಇನ್ನೊಮ್ಮೆ ಈ ತರಹದ ತೋಟವನ್ನು ಮಾಡುವುದಾಗಲೀ ಅಥವಾ ಕೊಳ್ಳುವುದಾಗಲೀ ತಮಗೆ ಮುಂದಕ್ಕೆ ಸಾಧ್ಯವಾಗದು. ಈ ತೋಟವನ್ನೇ ಯಾವುದಾದರೂ ಒಳ್ಳೆಯ ಬ್ಯಾಂಕಿಗೆ ಅಡಮಾನ ಇಟ್ಟು, ಸ್ವಲ್ಪ ಸಾಲ ತೆಗೆದುಕೊಂಡು ನಿಮ್ಮ ಈಗಿನ ಅಗತ್ಯಗಳನ್ನು ಪೂರೈಸಿ ಕೊಳ್ಳಿ! ಇದು ನನ್ನ ಕಳಕಳಿಯ ಬೇಡಿಕೆ! " ಎಂದೆ.

ಕೋಳಿ ಜುಟ್ಟಿನ ಹೂವು ( ಉಚ್ಚೆಕಾಯಿ ಮರದ ಹೂವು )ರಾಯರು ಸ್ವಲ್ಪ ಹೊತ್ತು ದಿಗ್ಮೂಢರಾಗಿ ಕುಳಿತು ಕೊಂಡರು." ಕೊಳ್ಳಲು ಬಂದ ಗಿರಾಕಿ ಹೀಗೆ ಯಾಕೆ ಮಾತನಾಡುತ್ತಾ ಇದ್ದಾನೆ? " ಎಂದು ಅವರಿಗೆ ಬಹಳ ಆಶ್ಚರ್ಯವಾಯಿತು. ಒಂದು ಐದು ನಿಮಿಷ ಕಳೆದಮೇಲೆ ಅವರಿಗೆ ನನ್ನ ಮಾತು ಅರ್ಥವಾದಂತೆ ಕಂಡಿತು. ಆದರೂ, ನಿಧಾನವಾಗಿ ಅವರು ಹೀಗೆಂದರು. "ಪೆಜತ್ತಾಯರೇ! ಒಂದು ಲೆಕ್ಕದಲ್ಲಿ ನೀವೆನ್ನುವುದೇ ಸರಿ! ಆದರೆ, ಈ ಜೀವನದಲ್ಲಿ ನಾನು ಎಂದಿಗೂ ಸಾಲ ಮಾಡಿದ ಮನುಷ್ಯನೇ ಅಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚಿದವನು. ಈಗಿನ ತಾತ್ಕಾಲಿಕವಾದ ಸಂಕಷ್ಟಗಳನ್ನು ನಿಭಾಯಿಸಲು ಈ ತೀರ್ಮಾನ ತೆಗೆದುಕೊಂಡಿದ್ದೆ.  ಆದರೆ, ಈಗಲೂ ತಾವು ತಿಳಿಸಿದ ಪ್ರಕಾರ ಸಾಲ ಮಾಡಲು ನನ್ನ ಮನ ಒಪ್ಪುವುದಿಲ್ಲ!  ಏನು ಮಾಡಲಿ? "

ಆಗ ನಾನು " ರಾಯರೇ, ಈಗ ನೀವು ಹಣ ಅಷ್ಟು ಅರ್ಜೆಂಟಾಗಿ ಬೇಕಿದ್ದರೆ, ನಿಮ್ಮ ಗಂಡು ಮಕ್ಕಳಿಗೆ ತೆಗೆದಿರಿಸಿದ ಆ ಸೈಟುಗಳನ್ನು ಮಾರಿಬಿಡಿ! ವಿದ್ಯಾವಂತರಾದ ನಿಮ್ಮ ಗಂಡು ಮಕ್ಕಳು ಈ ಚಿಕ್ಕ ಊರಿಗೆ ಬಂದು ನೆಲಸುವುದು ಅಷ್ಟರಲ್ಲೇ ಇದೆ! ಮುಂದಕ್ಕೆ ಅದೇ ಹಣಕ್ಕೆ ಬಡ್ಡಿ ಸೇರಿಸಿ ಬೆಂಗಳೂರಿನಲ್ಲಿ ಆ ಹುಡುಗರಿಗೆ ಸೈಟು ಕೊಡಿಸಿದರೆ ಆಯಿತು! " ಎಂದೆ.

ರಾಯರಿಗೆ ಆಗ ಸ್ವಲ್ಪ ಸಮಾಧಾನ ಆದಂತೆ ಕಂಡಿತು. ಭಾರವಾದ ಮನಸ್ಸಿಂದಲೇ ನಮ್ಮ ಕಾರು ಹತ್ತಿ ಶಿಡ್ಲಘಟ್ಟಕ್ಕೆ ಬಂದರು. ಒತ್ತಾಯ ಮಾಡಿ ನಮಗೆ ಪುನಃ ಕಾಫಿ ತಿಂಡಿ ಕೊಡಿಸಿ ಬೀಳ್ಕೊಟ್ಟರು.

ನನ್ನ ಅತಿಯಾದ ಬುದ್ಧಿವಂತಿಕೆಯಿಂದ " ಸೋವಿಯಾಗಿ ಸಿಗುತ್ತಿದ್ದ ಆ ತೋಟ ಕೈಜಾರಿ ಹೋಗಿತ್ತು! " ಆ ಬಗ್ಗೆ ನಾನಾಗಲೀ, ನನ್ನ ಯಜಮಾನತಿ ಆಗಲೀ ತಲೆಕೆಡಿಸಿಕೊಳ್ಳಲಿಲ್ಲ. ನಾನು ಮುಂದಕ್ಕೆ ಬೆಂಗಳೂರಿನ ಸುತ್ತ ಜಮೀನು ಹುಡುಕುವುದನ್ನೇ ಬಿಟ್ಟು ಕಾಫಿ ತೋಟದ ಮೇಲೆ ಹೆಚ್ಚಿನ ನಿಗಾ ವಹಿಸಿ ಉತ್ತಮ ರೈತ ಅನ್ನಿಸಿಕೊಂಡೆ.

ಹತ್ತು ವರ್ಷಗಳು ಕಳೆದುವು. ಬೆಂಗಳೂರಿನಿಂದ ವರ್ಗವಾಗಿ ದೂರದ ಊರಿಗೆ ಹೋಗಿದ್ದ ಆ ರಾಯರ ಅಳಿಯ ಬ್ಯಾಂಕ್ ಮ್ಯಾನೇಜರಾಗಿ ಪುನಹಾ ಬೆಂಗಳೂರಿಗೆ ಬಂದರು. ಅಕಾಸ್ಮಾತ್, ಅವರನ್ನು ಕಂಡ ನಾನು ಅವರನ್ನು ಅಭಿನಂದಿಸಲು ಅವರ ಚೇಂಬರಿಗೆ ಹೋದೆ. ಆಗ ಅವರ ಮಾವನವರ ಯೋಗ ಕ್ಷೇಮದ ಬಗ್ಗೆ ವಿಚಾರಿಸಿದೆ. ಬ್ಯಾಂಕ್ ಮ್ಯಾನೇಜರರು ಬಹಳ ಸಂತೋಷದಿಂದ " ಅವರು ಚೆನ್ನಾಗಿ ಇದ್ದಾರೆ. ಊರೊಳಗಿನ ಆ ಎರಡು ಸೈಟುಗಳನ್ನು ಮಾರಿದರು.  ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ಹಣ ಒದಗಿಸಿದರು ಮತ್ತು ತನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನೂ ಮಾಡಿಕೊಟ್ಟರು. ಈಗ ಅವರಿಗೆ ಎಪ್ಪತ್ತರ ಹತ್ತಿರದ ಪ್ರಾಯ. ಆದ್ದರಿಂದ ಊರೊಳಗಿನ ಉಪಹಾರ ಗೃಹವನ್ನು ಬೇರೆಯವರಿಗೆ ವಹಿಸಿಕೊಟ್ಟು, ತಿಂಗಳಿಗೆ ಇಷ್ಟು ಎಂತ ಹಣ ಪಡೆಯುತ್ತಿದ್ದಾರೆ. ತಮ್ಮ ತೆಂಗಿನ ತೋಟದಲ್ಲೇ ಒಳ್ಳೆಯ ಬಂಗಲೆಯಂತಹಾ ಮನೆ ಕಟ್ಟಿಕೊಂಡು ಸಂತೋಷದಿಂದ ತಮ್ಮ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ!  ಆಗಾಗ ಅವರು ನಿಮ್ಮನ್ನು ನೆನಪಿಸಿ ಕೊಳ್ಳುತ್ತಾರೆ! ಆಗಾಗ ನಿಮ್ಮಗಳ ಯೋಗ ಕ್ಷೇಮ ವಿಚಾರಿಸುತ್ತಾ ಇರುತ್ತಾರೆ.  ನೀವು ಆ ದಿವಸ ಅವರ ತೋಟಕ್ಕೆ ಗಿರಾಕಿಯಾಗಿ ಹೋಗದೇ ಇರುತ್ತಿದ್ದರೆ, ಆ ತೋಟವನ್ನು ಬೇರೆಯರಿಗೆ ಮಾರಿಯೇ ಬಿಡುತ್ತಿದ್ದರಂತೆ! ನೀವು ನಿಮಗೆ ಬಿಡುವಾದಾಗ ಅವರನ್ನು ಕಂಡು ಮಾತನಾಡಿಸಿದರೆ ತುಂಬಾ ಸಂತೋಷ ಪಟ್ಟಾರು! " ಎಂದರು.

ಬ್ಯಾಂಕ್ ಮ್ಯಾನೇಜರರ ಮಾತುಗಳನ್ನು ಕೇಳಿ ನನಗೆ ಹಾಲು ಕುಡಿದಷ್ಟು ಸಂತೋಷವಾಯಿತು. ನಾನು ತೆಂಗಿನ ತೋಟದ ರಾಯರನ್ನು ಕಾಣಲು ಇದು ತನಕ ಶಿಡ್ಲ ಘಟ್ಟಕ್ಕೆ ಹೋಗಿಲ್ಲ! ಅಲ್ಲಿಗೆ ಹೋಗುವ ಅಗತ್ಯವೂ ನನಗೆ ಕಾಣುವುದಿಲ್ಲ.

‘ಕಷ್ಟಗಾರರಾದ ಹಿರಿಯ ರೈತರೊಬ್ಬರು ಸುಖವಾಗಿ ತನ್ನ ತೋಟದಲ್ಲಿ ನೆಲೆಸಿದ್ದಾರೆ! ಸುಖವಾಗಿ ಇದ್ದಾರೆ!’ ಎಂಬ ಒಳ್ಳೆಯ ವರ್ತಮಾನಕ್ಕಿಂತ ನನಗೆ ಹೆಚ್ಚಿನದು ಏನೂ ಬೇಕಿಲ್ಲ! ಅಂತಹಾ ಹಿರಿಯರ ಆಶೀರ್ವಾದದಿಂದ ನಾನೂ ನನ್ನ ಮಟ್ಟಿಗೆ ಸುಖ ಸಂತೋಷದಿಂದ ಕಾಫಿಯ ವ್ಯವಸಾಯ ಮಾಡುತ್ತಾ ಬದುಕಿದ್ದೇನೆ.

[ಚಿತ್ರಗಳು-ಲೇಖಕರದು]

[ಮುಂದುವರಿಯುವುದು]

[‘ಕಾಗದದ ದೋಣಿ’ ೨೩: ನನ್ನ ಅರ್ಧಲೋಕ ಯಾತ್ರೆ ಮತ್ತೆ]

ಪುಟದ ಮೊದಲಿಗೆ
 
Votes:  9     Rating: 4.56    
 
 
ಸಂಬಂಧಿಸಿದ ಲೇಖನಗಳು
  ಭಾಗವತ೨೯:ಸೃಷ್ಟಿಯ ಮುಖ,ಸಂಹಾರದ ಮುಖ
  ಮೂರ್ತಿ ಚರಿತೆ: ಕಿರುತೆರೆಯಲ್ಲಿ ಹಿರಿ ಚಿತ್ರಗಳು
  ಖೇಣಿ ಪುರಾಣ:ಕಾರಂಜಾ ರಾಜಕಾರಣ!
  ಹೇಮಾ ಬರೆಯುವ ಅಪ್ಪನ ನೆನಪುಗಳು ೧
  ತರೀಕೆರೆ ಹೊಸ ತಲೆಮಾರಿನ ಲೇಖಕರು: ವಿಕ್ರಮ ವಿಸಾಜಿ
  ಭಾಗವತ ೨೮:ಹಾಲೂಡುತ್ತ ಬಿಡುಗಡೆಗೊಂಡ ಪೂತನಾ
  ಗೂಬೆ ಹಿಡಿದ ಹುಡುಗ, ಬೆಕ್ಕು ತಂದ ಹುಡುಗಿ
  ಮೂರ್ತಿ ಚರಿತೆ: ಕನ್ನಡದ ನೆಲದಲ್ಲಿ
  ಮುಂಗಾರು ಕೊಂಡಿ ಕಳಚಿಕೊಂಡಿತು
  ಹೊಸ ತಲೆಮಾರಿನ ಲೇಖಕರು: ದೇವು ಪತ್ತಾರ
  ಭಾಗವತ೨೭:ಮೋಹವ ಹರಿಯುವ ಭಗವಂತ
  ಮೂರ್ತಿ ಚರಿತೆ: ಕ್ಷಣದಲ್ಲೇ ಪರಿಹಾರ!
  ವಡ್ಡರ್ಸೆ ೧೩: ‘ಚೆಲುವ ಕನ್ನಡನಾಡು' ಚಿಂದಿ!
  ತರೀಕೆರೆ ಹೊಸ ತಲೆಮಾರಿನ ಲೇಖಕರು: ಶೈಲಜ ಹಿರೇಮಠ
  ಭಾಗವತ ೨೫:ದಶರಥರಾಮನೂ, ಕೊಡಲಿರಾಮನೂ
  ಜೋಯಪ್ಪ ಸರಣಿ: ಕೊರೆದ ಚಿಪ್ಪು ಹಂದಿ
  ಮೂರ್ತಿ ಚರಿತೆ: ಸುರೈಯ್ಯಾ ಇಂದ ಕರಿಶ್ಮಾವರೆಗೆ
  ವಡ್ಡರ್ಸೆ ಸರಣಿ:ಮುಂಗಾರಿಗೆ ಕಾಸಿನ ಕಷ್ಟಗಳು
  ಭಾಗವತ:ತಿರುಪೆ ಎತ್ತಿದ ಭಗವಂತ
  ವಿ.ಕೆ.ಮೂರ್ತಿ ಚರಿತೆ: ಮದರಾಸಿನ ನೆನಪುಗಳು
  ಹೊಸ ತಲೆಮಾರಿನ ಲೇಖಕರು: ಬಿ.ಎಂ.ರಶೀದ್
  ವಡ್ಡರ್ಸೆ ಸರಣಿ-೧೧: ಕರಾವಳಿಯಲ್ಲಿ ಹರಿದ `ವರಶೆ' ಚಿಂತನೆ
  ತೋಳ್ಪಾಡಿ ಭಾಗವತ:ನರಮೃಗ ರೂಪದ ಭಗವಂತ
  ಮೂರ್ತಿ ಚರಿತೆ:ಶುರುವಾಯಿತು ಬಣ್ಣದ ಯುಗ
  ಚುನಾವಣೆಗಳನ್ನು ಗೆಲ್ಲದ ಖೇಣಿ ಕುಟುಂಬ
  ತರೀಕೆರೆ ಬರೆಯುವ ಹೊಸ ತಲೆಮಾರಿನ ಲೇಖಕರು: ವಿನಯಾ
  ವಡ್ಡರ್ಸೆ ಸರಣಿ-೧೦: ಬಸವಣ್ಣನ ಬುಲೆಟ್ ಸವಾರಿ
  ಭಾಗವತ:ಹಾಲ್ಗಡಲನ್ನು ಕಡೆದ ಕಥೆ
  ಅವರಿವರ ಕಣ್ಣಲ್ಲಿ ಕಂಡ ಮೂರ್ತಿ:ಉಮಾ ಸರಣಿ
  ಹೊಸ ತಲೆಮಾರಿನ ಲೇಖಕರು: ಮಂಜುನಾಥ್ ಲತಾ
  ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು
  ಗುರುವಿನ ಪ್ಯಾಂಟ್ ಕೇಳಿದ ಶಿಷ್ಯ!
  ಭಾಗವತ:ಭಗವಂತ ಮೀನಾದ ಕಥೆ
  ವಿ.ಕೆ.ಮೂರ್ತಿ ಚರಿತೆ: `ಗುರುದತ್ ಗಯಾ' ಎಂದ ಗುರುಸ್ವಾಮಿ
  ಖೇಣಿ ಪುರಾಣ 21: ರಾಜಕೀಯಕ್ಕೆ ಖೇಣಿ ಕುಟುಂಬ
  ತರೀಕೆರೆ ಹೊಸ ತಲೆಮಾರಿನ ಲೇಖಕರು:ಪೀರ್ ಬಾಶಾ
  ವಡ್ಡರ್ಸೆ ೮:ರಾಮಪ್ಪಣ್ಣನವರ ಮನೆಯ ಕೋಲ
  ಭಾಗವತ ೨೧:ಜಡಭರತನಾದ ಭರತಚಕ್ರವರ್ತಿ
  ವಿ.ಕೆ.ಮೂರ್ತಿ ಚರಿತೆ:ಎಂದೆಂದೂ ಕಾಡುವ ಛೋಟಿ ಬಹೂ
  ಖೇಣಿ ಪುರಾಣ:ಅಲ್ದೆ ಗುಂಡಪ್ಪ 'ಚೋರ ಚರಿತೆ'
  ವಡ್ಡರ್ಸೆ ಸರಣಿ-೭: ಎಡವಟ್ಟಾದ ಯಂತ್ರದ ಥಿಯರಿ
  ಹೊಸ ತಲೆಮಾರಿನ ಲೇಖಕರು: ಚಿದಾನಂದ ಸಾಲಿ
  ಭಾಗವತ:ಕಣ್ಣು ಕೊಟ್ಟು ನೋಟವನ್ನೂ ಕೊಟ್ಟ ಭಗವಂತ
  ಮೂರ್ತಿಚರಿತೆ:ಗ್ರೀಸ್,ಗ್ರೆಗರಿಪೆಕ್,ಗನ್ಸ್ಆಫ್ ನ್ಯಾವರೋನ್.
  ಕಹಿಯೋ ಸಿಹಿಯೋ ನೆನೆದರೆ ಜುಂ ಅನ್ನುವ ಪ್ರಸಂಗ
  ವಡ್ಡರ್ಸೆ ೬: ಕರಾವಳಿಯಲ್ಲಿ ಮುಂಗಾರು ತಲ್ಲಣ
  ಹೊಸ ತಲೆಮಾರಿನ ಲೇಖಕರು: ತಾರಿಣಿ ಶುಭದಾಯಿನಿ
  ಭಾಗವತ ೧೯:ಅಜಾಮಿಳನ ಮಗ ನಾರಾಯಣ
  ವಿ.ಕೆ.ಮೂರ್ತಿ ಚರಿತೆ:`..ಫೂಲ್' ಒಂದು ಅಪೂರ್ವ ಕೃತಿ
  ಖೇಣಿ ಪುರಾಣ- 19: ಕಲ್ಯಾಣದ ಆರಂಭ; ಮಂಟೇಸ್ವಾಮಿಯ ಅಂತ್ಯ
  ತರೀಕೆರೆ ಬರೆವ ಹೊಸಲೇಖಕರು:ಮಹಾಂತೇಶ ನವಲಕಲ್
  ವಡ್ಡರ್ಸೆ ಸರಣಿ-೫: ಬೆಂಬಲಕ್ಕೆ ಬಂದ ಇಂದೂಧರ
  ಭುವಿಯ ತಳದಲ್ಲಿರುವುದು ಹರಿವನೀರೂ,ಕುದಿವ ಲಾವಾರಸವೂ
  ವಿ.ಕೆ.ಮೂರ್ತಿ ಚರಿತೆ:ಬಿಸಿಲು ಕೋಲಿನ ಮಾಯೆ
  ಖೇಣಿ ಪುರಾಣ-18:ರೇಷ್ಮೆ ಕುಟುಂಬದ ಚೇತನ ಕಲ್ಲಪ್ಪ