ತಂಗಿ ಸಾವಿತ್ರಿ ಹಾವಿಗೆ ಬಹಳ ಹೆದರುತ್ತಿದ್ದಳು. ಹಾವು ಹೋಗಲಿ ಒಂದು ಎರೆ ಹುಳವೆಂದರೂ ನಡುಗಿ ಸಾಯುತ್ತಿದ್ದಳು. ಸಾವಿರ ಕಾಲಿನ ಜರಿ (centipede-ಸೆಂಟೀಪೇಡ್ ಅಂದರೆ ನೂರು ಕಾಲಿನ ಜರಿಗಿಂತ ದೊಡ್ಡದು) ಮುಟ್ಟಿದ ತಕ್ಷಣ ಚಕ್ಕುಲಿಯಂತೆ ಸುತ್ತಿಕೊಳ್ಳುತ್ತದೆ. ಅದನ್ನು ತಂದು ನಾನು ಅವಳಿಗೆ ಹೆದರಿಸುತ್ತಿದ್ದೆ. ನನ್ನ ಕೈಯಲ್ಲಿ ಹುಳವಿದ್ದರೂ ತನ್ನನ್ನು ಕಚ್ಚಿ ಕೊಂದೇ ಹಾಕಿತೇನೋ ಅನ್ನುವಷ್ಟು ಚೀರಾಡುತ್ತಿದ್ದಳು. ಡೊಂಬರಾಟದವರು ಹಾವಾಡಿಗರು ಎಲ್ಲ ರಸ್ತೆಯ ಕೂಟಿಗೆ ಮಾತ್ರ ಬರುತ್ತಿದ್ದರು. ಮನೆಯ ಹತ್ತಿರ ಬರುವ ದುರುಗ ಮುರುಗಿಯವರನ್ನು ಮಾತ್ರ ಬಹಳ ಭಕ್ತಿಯಿಂದ ನೋಡುತ್ತಿದ್ದಳು. ‘ಶರಣು ಬಾರವ್ವಾ ಮಾತಾಯಿಗೆ ತಾನಿ ತಂದಾನ ದೇವಿ ದುರಗಮ್ಮ ಬಂದಳೆ ತಾನಿ ತಂದನ ಭಕ್ತರ ಪೊರೆಯವ್ವಾ ತಾನಿ ತಂದಾನ’ ಅಂತ ದುರಗ ಮುರಗಿ ತನ್ನ ಪೆಟ್ಟಿಗೆ ಇಳಿಸಿ, ಒಂದು ಚಾಪೆ ಹಾಸಿ ದೇವಿ ಮೂರ್ತಿ ಹೊರಗೆ ತೆಗೆದು ಗಂಟೆ, ಚಾಟಿ, ನವಿಲು ಗರಿ, ಅರಿಷಣ-ಕುಂಕುಮ ಎಲ್ಲಾ ಸಾಲಾಗಿ ಇಡುತ್ತಿದ್ದ. ಢೋಲು ಬಾರಿಸುತ್ತ ಅವನ ಹೆಂಡತಿ ಹಾಡುತ್ತಿದ್ದಳು. ಅವನು ಪೂಜೆ ಮಾಡಿ ಗಿರಿ ಗಿರಿ ಗಿರಿ ತಿರುಗುತ್ತ ಚಾಟಿಯಿಂದ ಛಟಲ್ ಛಟಲ್ ಎಂದು ರಟ್ಟಿಗೆ ಹೊಡೆದು ಕೊಳ್ಳುತ್ತಿದ್ದ. ಕೆಲವೊಮ್ಮೆ ರಟ್ಟೆಯಿಂದ ರಕ್ತ ಸೋರುತ್ತಿತ್ತು. ನಮ್ಮ ಮನೆಯ ಹಿತ್ತಲಲ್ಲಿ ಬೆಳೆದ ಉರಾಳ ಸೊಪ್ಪು ಒಂದಿಷ್ಟು ಕೊಟ್ಟು ರಸ ಹಚ್ಚಿಕೊ ರಕ್ತ ನಿಲ್ಲುತ್ತದೆ ಎಂದು ಹೇಳುತ್ತಿದ್ದೆ ನಾನು. ಉರಾಳ ಸೊಪ್ಪು ಧಾರವಾಡದ ಭಾಷೆಯಲ್ಲಿ ಟೀಕಿ ತಪ್ಪಲ ಅನ್ನುತ್ತಾರೆ. ಅದರಲ್ಲಿ ಅಯೋಡಿನ್ ಕಂಟೆಂಟ್ ಇರುತ್ತದೆ ಎಂದು ಇತ್ತೀಚೆಗೆ ಸಂಶೋಧನೆಯಿಂದ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಒಂದು ಮೊರದ ತುಂಬ ಅಕ್ಕಿ ಅವನಿಗೆ ನಮ್ಮ ಮನೆಯಿಂದ ಕೊಡುತ್ತಿದ್ದರು.
ಪೇಟೆಯ ಕೂಟಿನಲ್ಲಿ ನಡೆಯುವ ಹಾವಾಡಿಗರ ಆಟ ನೋಡಲು ರೆಗ್ಯುಲರ್ ಹೋಗುತ್ತಿದ್ದ ನಾನು ಕೆಲವೊಮ್ಮೆ ತಂಗಿ ಸಾವಿಯನ್ನು ಕರೆದು ಹೋಗುತ್ತಿದ್ದೆ. ಬುಟ್ಟಿಯಿಂದ ಹಾವು ತೆಗೆದ ತಕ್ಷಣ ಅವಳು ಅಳಲು ಶುರು ಮಾಡುತ್ತಿದ್ದಳು. ಅದು ಹೆಡೆ ಬಿಚ್ಚಿ ಆಡುವಾಗಂತೂ ಥರಥರ ನಡುಗುತ್ತಿದ್ದಳು. ರಾತ್ರಿ ಮಲಗಿದಾಗ ಹೊದಕೆಯ ದಾರ ತಾಗಿದರೆ ಚಿಟ್ಟೆಂದು ಚೀರುತ್ತಿದ್ದಳು. ಹಾವು ಬಂತು ಹಾವು ಬಂತು ಎಂದು ಮೈಯ್ಯೆಲ್ಲ ಬೆವರಿ ಎದ್ದು ಕೂಡುತ್ತಿದ್ದಳು. ಮರುದಿನ ಬೆಳಿಗ್ಗೆ ನಾವು ಹಿಂದಿನ ದಿನ ಎಲ್ಲೆಲ್ಲಿ ಹೋಗಿದ್ದೆವು ಎಂಬ ತನಿಖೆ ನಡೆದು ತಂಗಿಯನ್ನು ಹೆದರಿಸಿದೆನೆಂದು ಮತ್ತೆ ಅಮ್ಮನಿಂದ ಪೆಟ್ಟು ಬೀಳುತ್ತಿತ್ತು. ನನಗೆ ಅವಳನ್ನು ಹೆದರಿಸುವ ಉದ್ದೇಶ ಎಳ್ಳೆಷ್ಟೂ ಇರುತ್ತಿರಲಿಲ್ಲ. ನಾನು ನೋಡಿ ಎಂಜಾಯ್ ಮಾಡಿದ ಹಾವಿನಾಟ ಅವಳೂ ನೋಡಿ ಖುಷಿ ಪಡಲಿ, ಹಾವಿನ ಬಗ್ಗೆ ಅವಳಿಗಿರುವ ಹೆದರಿಕೆ ಹೋಗಲಿ ಎಂದಿರುತ್ತಿತ್ತು. ಆದರೆ ಅದು ಹಾಗಾಗದೆ ಅವಳು ಎಂಟೆಂಟು ದಿನ ಜ್ವರ ಬಂದು ಮಲಗಿ ಬಿಡುತ್ತಿದ್ದಳು. ಅವಳು ಆಟಾ-ಗೀಟ ಆಡುವ ಸ್ವಭಾವದವಳಲ್ಲ. ಬಹಳ ಗಂಭೀರೆ. ಒಂದು ಮೂಲೆ ಹಿಡಿದು ಕೂತು ಯಾವಾಗಲೂ ಏನಾದರೂ ತಿನ್ನುತ್ತಿರುತ್ತಿದ್ದಳು. ತನ್ನ ಹತ್ತಿರ ಇರುವ ಏನನ್ನು ಯಾವ ಕಾರಣಕ್ಕೂ ಕಳೆದುಕೊಳ್ಳುಲು ಅವಳು ಮನಸ್ಸು ಮಾಡುತ್ತಿರಲಿಲ್ಲ.
*****
ಕೀಲಗುರಂ ಸಿನೆಮಾ
ಚಳಿಗಾಲ ಮತ್ತು ಬೇಸಿಗೆಯಲ್ಲಿ ಅಂದರೆ ನವೆಂಬರ್‌ನಿಂದ ಮೇ ವರೆಗೆ ಸಿದ್ದಾಪುರದಲ್ಲಿ ಒಂದು ಸಿನೆಮಾ ಟೆಂಟು ಹಾಕುತ್ತಿದ್ದರು. ಆಗೆಲ್ಲ ಸಿನೆಮಾ ಟಿಕೆಟ್ ದರ ನಾಲ್ಕಾಣೆ-ನೆಲ, ಎಂಟಾಣೆ ಬೆಂಚ್, ಹನ್ನೆರಡಾಣೆ ಕುರ್ಚಿ-ಎರಡೆ ಬೆಂಚು, ಐದು ಅಥವಾ ಆರು ಕುರ್ಚಿಗಳಿರುತ್ತಿದ್ದವು. ಸುಮ್ಮನೆ ದುಡ್ಡು ದಂಡ ಎಂದು ನೆಲಕ್ಕೆ ಹೋಗುವವರೆ ಬಹಳ ಜನರಿರುತ್ತಿದ್ದರು. ಸಿನೆಮಾಕ್ಕೆ ಹೋಗುವದೆಂದರೆ ನನಗೆ ಬಹಳ ಸಂಭ್ರಮದ ವಿಷಯ. ಒಂದೇ ಸಿನೆಮಾ ತಿಂಗಳು ಗಟ್ಟಲೆ ಇರುತ್ತಿತ್ತು. ಎಂಟು ಗಂಟೆ ರಾತ್ರಿಗೆ ಶುರುವಾಗಿ ಸಮಯ ೧೨ ಗಂಟೆಗೆ ಮುಗಿಯುತ್ತಿತ್ತು. ೩ ೧/೨ ೪ ತಾಸಿನ ಸಿನೆಮಾ ಆಗಿನ ಕಾಲದಲ್ಲಿ ಇನ್ನು ಎರಡು ತಾಸು ಇದ್ದರೂ ಜನ ಬೇಜಾರಿಲ್ಲದೆ ನೋಡುತ್ತಿದ್ದರು. ಹದಿನೈದು ದಿನಗಳ ಮೊದಲೆ ಸಿನೆಮಾಕ್ಕೆ ಹೋಗುವದೆಂದು ನಾನು ಅಕ್ಕಪಕ್ಕದ ಮನೆಯವರೊಡನೆ ನಿಶ್ಚಯಿಸಿರುತ್ತಿದ್ದೆ. ನಮ್ಮ ಮನೆಯ ಜನರು ಸಿನೆಮಾಕ್ಕೆ ಬರುತ್ತಿರಲಿಲ್ಲ. ಎರಡು ಗೋಣೀಚೀಲ ಒಂದು ತಳ್ಳನೆಯ ಪಂಚೆ ನಾಲ್ಕಾಣಿ ಟಿಕೆಟ್ಟಿನ ದುಡ್ಡು ಶೇಂಗಾ ಕೊಬ್ಬರಿ-ಬೆಲ್ಲ ಇಂಥದ್ದು. ಇಂಟರವ್ಯೂನಲ್ಲಿ ತಿನ್ನಲು ಲಂಗದ ಜೇಬಿನಲ್ಲಿ ಹಾಕಿಕೊಂಡು ತಂಗಿ ತಮ್ಮ ಇಬ್ಬರನ್ನು ಕರೆದು ಕೊಂಡು ಹೋಗುತ್ತಿದ್ದೆ. ಬಹಳ ದೂರ ನಡೆದೇ ಹೋಗುತ್ತಿದ್ದೆವು. ಊರ ಹೊರಗೆ ಟೆಂಟು. ಟೆಂಟಿನ ಹತ್ತಿರ ಬಂದಾಕ್ಷಣ ಗೋಣೀಚೀಲ ಪಂಚೆ ಎಲ್ಲ ತಂಗಿಯ ಕೈಗೆ ಕೊಟ್ಟು ಟಿಕೆಟ್ಟು ಕೊಂಡು ಬರುತ್ತಿದ್ದೆ. ತಮ್ಮನನ್ನು ಸೊಂಟದ ಮೇಲೆ ಎತ್ತಿಕೊಂಡು ಪೂರಾ ಬಗ್ಗಿ ಕೂಡ್ರಲು ಹೇಳಿ ಅವನ ಮೇಲೆ ಪಂಚೆ ಹೊದಿಸಿ, ಗೇಟ್‌ನಲ್ಲಿ ಟಿಕೇಟು ಕೊಡುತ್ತಿದ್ದೆ ಇದ್ಯಾರು ಅಂತಿದ್ರು. ‘ನನ್ನ ತಮ್ಮ ಅವನಿಗೆ ೩ ವರ್ಷ ಆಗಿಲ್ಲ ನಿದ್ದೆ ಬಂದಿದೆ ಅವನಿಗೆ’ ಅಂತ ಹೇಳಿ ನನ್ನ ತಂಗಿಯನ್ನು ತೋರಿಸಿ ‘ಪಕ್ಕದ ಮನೆ ಹುಡುಗಿ ಅವಳ ತಾಯಿ ಟಿಕೆಟ್ಟು ತರ‍್ಲಿಕ್ಕೆ ಹೋಗಿದ್ದಾರೆ. ಇವಳನ್ನು ಒಳಗೆ ಕರ‍್ಕೊಂಡು ಹೋಗ್ಲೀ.........?’ ಅಂತ ಕೇಳಿ ಅವಳನ್ನು ಕರ‍್ಕೊಂಡು ಹೋಗ್ತಿದ್ದೆ. ಒಳಗೆ ಹೋಗಿ ತಮ್ಮನ್ನ ಇಳಿಸಿ ಗೋಣೀ ಚೀಲ ಹಾಸಿ ಇಬ್ರನ್ನು ಕೂಡಿಸಿ ನಾನು ಕೂಡ್ರತಿದ್ದೆ. ಸಿನೆಮಾ ಪರದೆಗೆ ಬಹಳ ಹತ್ತಿರ ಕೂತಿದ್ದೆವೆಂದು ಭಾರಿ ಖುಷಿ ಇರುತ್ತಿತ್ತು. ಅಷ್ಟರಲ್ಲಿ ನಮ್ಮ ಓಣಿಯ ಜನರೆಲ್ಲ ಹಿಂಡು ಹಿಂಡಾಗಿ ಬರುತ್ತಿದ್ದರು. ಆ ಗದ್ದಲದಲ್ಲಿ ಯಾರೂ ನನ್ನ ತಂಗಿ-ತಮ್ಮನ ಕಡೆ ಲಕ್ಷ್ಯಕೊಡುತ್ತಿರಲೇ ಇಲ್ಲ.
ಮೂರು ಬೆಲ್ ಆಗಿ ಸಿನೆಮಾ ಶುರುವಾಗುತ್ತಿತ್ತು. ಒಂದನೆ ಬೆಲ್ ಆದ ತಕ್ಷಣ ಜನ ಟಿಕೆಟ್ಟು ಹಿಡಿದು ನುಗ್ಗುತ್ತಿದ್ದರು ಎರಡನೆ ಬೆಲ್ ಆದ ತಕ್ಷಣ ಎಲ್ಲ ಕೂಡುತ್ತಿದ್ದರು. ಮೂರನೆ ಬೆಲ್ ಆದ ಕೂಡಲೆ ಸಿನೇಮಾ ಶುರು. ಈಗಿನ ಹಾಗೆ ಅಡ್ವಟೈಸ್‌ಮೆಂಟುಗಳು ಇರುತ್ತಿರಲಿಲ್ಲ. ಒಂದೂವರೆ ಎರಡು ತಾಸುಗಳ ನಂತರ ಇಂಟ್ರವಲ್ ಸಿನೆಮಾದಲ್ಲಿ ಬರುವ ಪ್ರತಿಯೊಂದು ಸಣ್ಣ ಪುಟ್ಟ ಜಾದು-ಮಾಯದ ಸೀನುಗಳಿಗೂ ತಮ್ಮ ತಂಗಿ ಹೆದರುತ್ತಿದ್ದರು. ನಾನು ಅವರಿಬ್ಬರ ಕಣ್ಣು ಮುಚ್ಚುತ್ತಿದ್ದೆ. ನಾನು ಮಾತ್ರ ಲಕ್ಷ ಕೊಟ್ಟು ನೋಡುತ್ತಿದ್ದೆ. ಕೀಲಿ ಕೊಟ್ಟರೆ ಆಕಾಶದಲ್ಲಿ ಹಾರುವ ಮರದ ಕುದುರೆಯ ಟೆಕ್ನಿಕ್‌ನ ಕಥೆ. ರಾಜಕುಮಾರ ಅದನ್ನ ಹತ್ತಿ ಆಕಾಶದಲ್ಲಿ ಹಾರಿ ತಿರುಗಿ ಕೆಳಗೆ ಒರಟು ತಿಳಿಯದೆ ಏನೇನೋ ಅನಾಹುತವಾಗುವ ಕತೆ. ರಾಕ್ಷಿಸಿಯೊಬ್ಬಳು ಪ್ರಾಣಿ ಮನುಷ್ಯರನ್ನೆಲ್ಲ ತಿಂದು ಆ ರಕ್ತವನ್ನು ರಾಣಿಯ ಬಾಯಿಗೆ ಒರೆಸಿ ರಾಜ ರಾಣಿಯನ್ನು ಅಡವಿಗಟ್ಟಿ ಹೀಗೆ. ಇಷ್ಟು ಧೈರ್ಯವಂತಳಾದ ನಾನೂ ಹೆದರಿದಾಗ ತಂಗಿ-ತಮ್ಮ ಅಳಲು ಪ್ರಾರಂಭಿಸಿದ್ದರು.
ಅಕ್ಕಪಕ್ಕದವರು ಎಲ್ಲರೂ ರಾಣಿಯ ಕಷ್ಟಕ್ಕೆ ಬಿಕ್ಕಿ-ಬಿಕ್ಕಿ ಅಳುತ್ತಿದ್ದಾಗ ನಮ್ಮನ್ನು ಸಮಾಧಾನ ಮಾಡುವವರು ಯಾರು? ಅಂತೂ-ಇಂತೂ ಧೈರ್ಯ ತಂದು ಕೊಂಡು ಗೋಣೀಚಿಲ ಪಂಚೆ ತಂಗಿ-ತಮ್ಮಂದಿರ ಜೊತೆ ಮನೆಗೆ ಹೊರಟರೆ ದಾರಿಯಲ್ಲಿರುವ ದೊಡ್ಡ ಬಸರಿ ಮರದ ಭೂತದ ಹೆದರಿಕೆ. ಆ ಮರದಲ್ಲೊಂದು ಭೂತವಿದ್ದು ಅದು ಏಳು ಮಕ್ಕಳ ತಾಯಿ. ಯಾರಾದರೂ ಬೆನ್ನಿಗೆ ಹೊಡೆದರೆ ಮೂರು ದಿನದಲ್ಲಿ ಅವರು ಸಾಯುತ್ತಾರೆ ಎಂದು ಜನ ಮಾತಾಡುತ್ತಿದ್ದರು. ಊರಲ್ಲಿ ಯಾರೆ ಸತ್ತರೂ ಮೂರು ದಿನದ ಕೆಳಗೆ ಸಿನೆಮಾಕ್ಕೆ ಹೋಗಿದ್ರೋ ಹೆಂಗೆ.....? ಅಂತಾನೇ ಕೇಳ್ತಿದ್ರು. ಜನರ ಗುಂಪಿನಲ್ಲಿ ನಡುವೆ ನಡುವೆ ನುಸಿಳಿ ಹೇಗೋ ಮನೆ ಮುಟ್ಟುತ್ತಿದ್ದೆ. ಇದರ ನಂತರ ತಂಗಿ-ತಮ್ಮ ಎಂದೂ ಸಿನೆಮಾಕ್ಕೆ ಬರಲಿಲ್ಲ. ಆದರೆ ನಾನು ಹೋಗುತ್ತಿದ್ದೆ. ರತ್ನಗಿರಿಯ ರಹಸ್ಯ-ಚಿತ್ರಲೇಖಾ ಎಲ್ಲ ೪-೪ ತಾಸುಗಳ ಸಿನೆಮಾ ಅಷ್ಟು ದೀರ್ಘ ಸಮಯ ಕೂತರೂ ಸಿನೆಮಾ ಬೇಗ ಮುಗಿದ ಹಾಗೆ ನನಗೆ ಅನಿಸಿತ್ತಿತ್ತು. ಫೈಟಿಂಗ್ ಸೀನು ಬಂದರೆ ನಾನು ಹೂಂ... ಹೊಡಿ... ಹಾಕು... ಒದಿ.... ಬಡಿ.... ಬೀಳ್ಸು ಅಂತ ಆವೇಶದಿಂದ ಕೂಗುತ್ತಿದ್ದೆ. ವಿಲನ್ನಿಗೆ ಜೋರು ಪೆಟ್ಟು ಬಿದ್ದಾಗ ನಾನೇ ಗೆದ್ದಷ್ಟು ಖುಷಿಯಾಗುತ್ತಿತ್ತು. ಸಿನೆಮಾಗಳಲ್ಲಿಯ ಒಂದೆರಡು ಅರ್ಧಮರ್ಧ ಹಾಡು ಕೆಲವು ಆಕ್ಷನ್ಸ್ ಕಲಿತೇ ಬರುತ್ತಿದ್ದೆ. ಮುಂದಿನ ನಮ್ಮ ನಾಟಕಗಳಿಗೆ ಬೇಕಲ್ಲ.... ಚಂದಿರಾ..... ಚಂದಿರಾ ಅನ್ನುತ್ತ ಓಡಿ ಬಂದು ಕಿಟಿಕಿಯ ಹತ್ತಿರ ನಿಂತು ಕೈ ಎತ್ತಿ ಚಂದ್ರನ್ನ ಮುಟ್ಟೇ ಬಿಡ್ತಾರೇನೋ ಅನ್ನುವ ರೀತಿ ಅಭಿನಯ ಬಾ ಅನ್ನಲು ಕರೆಯಲು ಸನ್ನೆ ಹೋಗು ಎನ್ನಲು ಬೇಡ ಎನ್ನಲು ಸಿಕ್ಕಾಪಟ್ಟೆ ಕತ್ತು ಅಲುಗಾಡಿಸಿ ಕಣ್ಣುಗಳನ್ನು ಅತ್ತಿತ್ತ ಹೊರಳಿಸುವ ಅಭಿನಯ ನನಗಂತೂ ಫೆಂಟಾಸ್ಟಿಕ್ ಅನಿಸುತ್ತಿತ್ತು. ಈಗ ನೆನಸಿಕೊಂಡರೆ ಆಗಿನ ನನ್ನ ಮೂರ್ಖತನಕ್ಕೆ ನಗು ಬರುತ್ತದೆ. ಈಗಿನ ಜನರೇಶನ್ನಿನ ಸಿನೆಮಾ ಸ್ಟಾರ್ ಗಳು ಬುದ್ಧಿವಂತರು ಪ್ರಬುದ್ಧ ಅಭಿನಯ. ನಾವೆಷ್ಟು ಸ್ಟುಪಿಡ್ ಅನಿಸುತ್ತದೆ. ಒಬ್ಬಳೆ ಇದ್ದಾಗ ಕೆಲವೊಮ್ಮೆ ಇಂಟರ್‌ವಲ್‌ನಲ್ಲಿ ಸಾವಕಾಶವಾಗಿ ಹೋಗಿ ಬೆಂಚಿನ ಮೇಲೆ ಕೂತು ಬಿಡುತ್ತಿದ್ದೆ. ನಾಕಾಣೆಯಲ್ಲೇ ಥೇಟರಿನವರಿಗೆ ಟೋಪಿ ಹಾಕಿ ಬೆಂಚಿನ ಮೇಲೆ ಕೂತು ಬಿಟ್ಟಿ ಅವರಿಗೆ ಗೊತ್ತಾಗಲೇ ಇಲ್ಲ ಎಂದು ಸಂತೋಷ ಪಡುತ್ತಿದ್ದೆ. ಅವರಿಗೆಲ್ಲ ಗೊತ್ತಿರುತ್ತಿತ್ತು. ಏನೋ ಸಣ್ಣ ಹುಡುಗಿ ಪಾಪ ಎಂದು ಬಿಡುತ್ತಿದ್ದರು. ಆದರೆ ಅಷ್ಟು ತಿಳುವಳಿಕೆ ನನಗಿರಲಿಲ್ಲವಲ್ಲ.
(ಮುಂದುವರಿಯುವುದು)
[ ಸುಮಿತ್ರಾ ಮೋತಿಲಾಲ ಹಲವಾಯಿ ಆತ್ಮಕಥನ-೭]