ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕವಲಕ್ಕಿ ಡಾಕ್ಟರ ಡೈರಿ: ಹಂದಿಜ್ವರದ ಹೊತ್ತಲ್ಲಿ ಮರಣವ್ಯಾಧಿಗಳ ನೆನಪು    
ಡಾ|| ಅನುಪಮಾ ಎಚ್. ಎಸ್.
ಬುಧವಾರ, 26 ಆಗಸ್ಟ್ 2009 (05:24 IST)
ಸಿಡುಬಿನ ದೇವತೆಗೆ ಶಾಂತಿಯ ಪೂಜೆ

ಹಂದಿಜ್ವರದ ಭೀತಿಯ ಜ್ವರ ಎಲ್ಲಕಡೆ ತೀವ್ರವಾಗಿ ಹರಡುತ್ತ, ಜನರೆಲ್ಲ ಅಂತ್ಯಕಾಲ ಸಮೀಪಿಸಿದ ದುಗುಡದಲ್ಲಿರುವವರಂತೆ ಮೂಗುಮುಖ ಮುಚ್ಚುವ ಮುಖಗವಸು ತೊಟ್ಟು ತಿರುಗುತ್ತ, ಬರೀ ಬಲಿಯನ್ನಷ್ಟೇ ತೋರಿಸುವ ಸುದ್ದಿಮಾಧ್ಯಮಗಳ ತಾಜಾಸುದ್ದಿಗಾಗಿ ತವಕಿಸುತ್ತ, ಎಲ್ಲ ಮುಗಿದೇ ಹೋಗಬಹುದೇನೋ ಎಂಬ ಆತಂಕದಲ್ಲಿರುವಾಗ....

ಮೊನ್ನೆ ಕ್ಲಿನಿಕ್ಕಿಗೆ ಬಂದ ಎಂಭತ್ತು ವರ್ಷದ ಕೇಶಿ ಅಜ್ಜಿ ನಾನು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು ನೋಡಿ ಗಲಗಲನೆ ನಗಾಡಿಬಿಟ್ಟಿತು. ‘ನಿಮ್ಗೂ ಬಂದೋಯ್ತೇನ್ರಾ ಅಮ ಹಂದಿಜ್ವರ?’ ಅಂತ ಕೇಳಿತು. ಅಷ್ಟೊತ್ತಿಗೆ ತೀವ್ರ ಧಾವಂತದಲ್ಲಿ ಎಳೆಯನೊಬ್ಬ ಓಡೋಡುತ್ತ ಬಂದವನೇ ‘ಗೊತ್ತಾಗ್ದೇ ನಿನ್ನೆ ಹಂದಿಹೊಡ್ದು ತಿಂದುಬಿಟ್ವಿ, ಇಂದು ನನಗೆ ಜ್ವರ ಬಂದದೆ. ಟೀವೀಲಿ ನೋಡಿದ್ದೇ ಕಂಗಾಲಾಗಿಹೋಯ್ತು. ಇದು ಹಂದಿಜ್ವರನಾ?’ ಎಂದು ಒಂದೇ ಉಸುರಲ್ಲಿ ಕೇಳಿದ. ನಾನು ಬಾಯಿ ಬಿಡುವ ಮೊದಲೇ ಕೇಶಿ ಅಜ್ಜಿ ಏನು ಹೇಳಿತು ಗೊತ್ತೆ? ‘ತಮಾ, ತಿಂದುದ್ನ ಅರ‍್ಗುಸ್ಕಬೇಕೇ ಹೊರ್ತ ಹೆದರ‍್ಬಾರ್ದು. ಏನೂ ಆಗುದಿಲ್ಲ. ನಮ್ಮೂರ‍್ಗೆ ಮಂಗನ ಕಾಯ್ಲೆ ಆಯ್ತು, ಇಲಿಜ್ವರ ಆಯ್ತು, ಅದೆಂತದೋ ಚಿಕನ್ ಜ್ವರ ಆಯ್ತು, ಈಗ ಹಂದಿಜ್ವರ ಅಷ್ಟೆಯ. ಹೆಚ್ಚಂದ್ರೆ ಏನಾಗ್ಬೋದೋ ತಮಾ? ಸಾವು ಬರಬೋದು ಅಷ್ಟೇಯ. ಅದು ಎಂದಾದ್ರು ಒಂದಿನ ಈ ಕಾಯ್ಲೆ ಅಲ್ದಿದ್ರೆ ಮತ್ತೊಂದು ಕಾಯ್ಲೆಗೋ ಮತ್ತೆಂತಕೋ ಬರುದೆಯಾ. ನೀ ಹೆದರಬೇಡ, ನಮ್ಕಾಲದ ಕತಿ ಕೇಳಬೇಕು ನೀನು..’ ಎನ್ನುತ್ತ ತನ್ನ ಕವಳದ ಗಂಟು ಬಿಚ್ಚಿ ತಂಬಾಕು ಸುಣ್ಣದ ಡಬ್ಬಿ ಅರಸುತ್ತ ತನ್ನ ನೆನಪಿನ ಚೀಲ ಬಿಚ್ಚಿತು...

ಕೇಶಿಗೆ ಈಗಿರುವುದು ಒಂದೇ ಕಣ್ಣು. ಮತ್ತೊಂದು ಕಣ್ಣು ಚಿಕ್ಕಂದಿನ ಮೈಲಿಬೇನೆಗೆ ಕರಗಿ ಹೋಗಿದೆ. ಇರುವ ಒಂದೇ ಕಣ್ಣಿಗೆ ಪೊರೆ ಬಂದು ಅದೂ ಮಸುಕು ಮಸುಕಾಗಿ ಕಾಣುತ್ತಾ ಇರುವಾಗ, ಕಣ್ಣಿನ ಆಪರೇಶನ್ ಮಾಡಿಸಿಕೋ ಎಂದರೆ ಅವಳು ಏನು ಮಾಡಿದರೂ ಒಪ್ಪಲಿಲ್ಲ. ಎಂಭತ್ತು ವರ್ಷದ ತನಗೇಕೆ ಆಪರೇಶನ್ ಎಂಬುದು ಅವಳ ವಾದ. ಅವಳ ಗಂಡ ಕ್ಯಾಸನದೂ ಅಜ್ಜಿಯ ಮಾತಿಗೆ ಅನುಮೋದನೆ. ಜೋಡಿಯೆಂದರೆ ಅವರದು. ಸಣ್ಣವಳಿದ್ದಾಗ ಅಜ್ಜಿಗೆ ಮೈಲಿಬೇನೆ ಆಗಿ ಆ ಕಾಯಿಲೆಯಲ್ಲಿ ಅದರ ಅಪ್ಪ ಅಮ್ಮ ಹಾಗೂ ಪೂರಾ ಕುಟುಂಬ ನಾಶವಾಗಿ ಈ ಕೇಶಿಯೊಂದೇ ಉಳಿದಿದ್ದಂತೆ. ಅವಳ ಮಾವನ ಮನೆಯಲ್ಲೇ ಬೆಳೆದ ಅಜ್ಜಿ ಕೊನೆಗೆ ಮಾವನ ಮಗನಾದ ಕ್ಯಾಸ - ಅವನೂ ಮೈಲಿಬೇನೆಯಾಗಿ ಕಿವಿ ದೂರವಾಗಿದ್ದವನೇ - ಅವನನ್ನೇ ಮದುವೆಯಾಗಿ ಅಲ್ಲೇ ನೆಲೆ ನಿಂತಿತಂತೆ. ಅವರದ್ದು ‘ದೇವ್ರೇ ಮಾಡಿದ ಜೋಡಿ’ ಎಂದೇ ಎಲ್ಲ ಹೇಳುವಷ್ಟು ಅನ್ಯೋನ್ಯ ದಂಪತಿಗಳು. ಅವರಿಗೆ ಗನಸ್ಥರಾದ ಎಂಟು ಜನ ಮಕ್ಕಳು. ಈಗ ಆ ಕುಟುಂಬದ ಸಂಖ್ಯೆ ನೂರು ದಾಟಿರಬಹುದು.

ಇಂತಹ ಮೈಲಿಬೇನೆಯಾದ ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರನ್ನು ನಾವಿಂದು ನೋಡುತ್ತೇವೆ. ಅದೇ ಮುಖಚಹರೆ ಹೊತ್ತ ಕೆಲವು ಸಿನಿಮಾ ನಟರೂ ಇದ್ದಾರೆ. ಈ ಮೈಲಿ ಮುಖಗಳು ಕಾಣುವುದೂ, ಅವರು ಊರ ಜೀವ ಹಿಂಡಿದ ಆ ಕಾಯಿಲೆಯನ್ನು ನೆನಪು ಮಾಡುವುದೂ ಬರಬರುತ್ತಾ ಕಡಿಮೆಯಾಗುತ್ತಿದೆ. ಆ ಕಾಯಿಲೆಯಂತೇ ಅದರ ನೆನಪೂ ಜನರ ಮನದಿಂದ ಮರೆಯಾಗುತ್ತಿದೆ...

*****

ಮೈಲಿಬೇನೆಗೆ ಒಳಗಾದ ಮಗುಒಂದಾನೊಂದು ಕಾಲದಲ್ಲಿ ಮನುಷ್ಯ ಸಮಾಜವನ್ನು ಇನ್ನಿಲ್ಲದಂತೆ ಕಾಡಿದ ಹಲವು ರೋಗಗಳನ್ನು ನಾವಿಂದು ಕಾಣುವುದೇ ಇಲ್ಲ. ನಿಷ್ಕಾರುಣ್ಯದಿಂದ ಮಕ್ಕಳು ಮುದುಕರೆನ್ನದೇ ಲಕ್ಷಗಟ್ಟಲೇ ಜನರನ್ನು ಕೊಂದು, ಹಲವು ಸಂಸಾರಗಳನ್ನು ನಾಶ ಮಾಡಿ, ಬದುಕುಳಿದವರಿಗೂ ಜೀವನ ದುರ್ಭರವಾಗುವಂತೆ ಮಾಡುತ್ತಿದ್ದ ಕಾಯಿಲೆಗಳು ಇಂದು ಚರಿತ್ರೆಯ ಪುಟಗಳಲ್ಲಿ ಸೇರಿಹೋಗಿವೆ. ನಾವಿಂದು ಅಂತಹ ಒಂದೂ ಕೇಸು ನೋಡದ, ಆದರೆ ‘ಅದು ಹೀಗಿತ್ತಂತೆ’ ಎಂಬ ಅಚ್ಚರಿ ದಿಗ್ಭ್ರಮೆಗಳಿಂದ ಓದಿ ತಿಳಿದುಕೊಂಡು ಅದರ ಬಗೆಗಿನ ಎಚ್ಚರವನ್ನಷ್ಟೇ ಇರಿಸಿಕೊಂಡ ಎರಡು ಕಾಯಿಲೆಗಳು - ಮೈಲಿಬೇನೆ ಹಾಗೂ ಪ್ಲೇಗ್ - ಅವುಗಳ ಬಗ್ಗೆ ‘ಹೀಗೊಂದು ಶ್ರದ್ಧಾಂಜಲಿ’....

ಮೈಲಿಬೇನೆ ಅಥವಾ ಸ್ಮಾಲ್ ಪಾಕ್ಸ್ ಕ್ರಿ.ಪೂ. ೧೦೦೦೦ ವರ್ಷಗಳಷ್ಟು ಹಳೆಯದೆನ್ನುತ್ತಾರೆ. ಆಗ ಇದ್ದುದಕ್ಕೆ ಸಾಕ್ಷಿ ಆಧಾರಗಳಿಲ್ಲವಾದರೂ ಯಾವಾಗ ಮಾನವ ಅಲೆಮಾರಿ ಜೀವನ ತ್ಯಜಿಸಿ ಕೃಷಿಗಾಗಿ ಒಂದೇ ಪ್ರದೇಶದಲ್ಲಿ ನೆಲೆ ನಿಲ್ಲಲು ಶುರು ಮಾಡಿದನೋ ಆವಾಗಿನಿಂದ ಇದು ಮನುಷ್ಯನನ್ನು ಪೀಡಿಸುತ್ತಿರಬಹುದೆಂಬ ಒಂದು ಅಂದಾಜಿದೆ. ಕ್ರಿ.ಪೂ. ೧೫೦೦ರ ಸುಮಾರಿನ ಈಜಿಪ್ತಿನ ಮಮ್ಮಿಗಳ ದೇಹದ ಮೇಲಿನ ಕಲೆಗಳು ಮೈಲಿಬೇನೆಯ ವೆಂದು ಹೇಳುತ್ತಾರೆ. ಕ್ರಿ.ಪೂ. ೧೧೦೦ರ ಸುಮಾರಿಗೆ ಚೈನಾದಲ್ಲೂ ಇದು ಇತ್ತೆಂದು ಬಗ್ಗೆ ಶಂಕಿಸಲಾಗಿದೆ. ಒಟ್ಟಾರೆ ಮಾನವಕುಲವನ್ನು ಸಾವಿರಾರು ವರ್ಷಗಳಿಂದ ಕಾಡುತ್ತಾ ಬಂದಿರುವ ಈ ಕಾಯಿಲೆಗೆ ಕಾರಣ ‘ವೇರಿಯೋಲ’ ಎಂಬ ವೈರಸ್. ಮೊದಲು ಜ್ವರ, ತಲೆನೋವಿನಂತಹ ಸಾಧಾರಣ ರೋಗಲಕ್ಷಣ ಹೊಂದಿದ್ದು ಬರಬರುತ್ತ ವಾಂತಿ, ಮೈಮೇಲೆಲ್ಲ ದೊಡ್ಡ ಗುಳ್ಳೆಗಳೆದ್ದು ಅಪಸ್ಮಾರವುಂಟಾಗುವ ತನಕ ಜ್ವರ ಹೆಚ್ಚುತ್ತಿತ್ತು. ಎದ್ದ ಗುಳ್ಳೆಗಳು ಮಾಯ್ದ ಮೇಲೂ ಖಾಯಂ ಕಲೆಯನ್ನುಂಟುಮಾಡುತ್ತಿದ್ದವು. ಮರಣ ಪ್ರಮಾಣ ಶೇ.೨೦-೬೦ರಷ್ಟು. ಅದೂ ಮಕ್ಕಳು ಮತ್ತು ಮಹಿಳೆಯರಲ್ಲಿ ಜಾಸ್ತಿ. ಬದುಕುಳಿದವರಿಗೆ ನರಸಂಬಂಧಿ ರೋಗಗಳು, ಕುಂಠಿತ ಬೆಳವಣಿಗೆ, ಕಿವುಡು, ಕುರುಡು.. ಹೀಗೇ ನಾನಾತೆರನ ತೊಂದರೆಗಳುಂಟಾಗುತ್ತಿದ್ದವು.

ಅಂತಹ ಕಾಯಿಲೆಯೊಂದು ಈಗ ಹೇಳಹೆಸರಿಲ್ಲದ್ದಾಗಿದ್ದರೆ ಅದರ ಕೀರ್ತಿ ‘ಎಡ್ವರ್ಡ ಜೆನ್ನರ್’ಗೆ ಸಲ್ಲಬೇಕು.

ಮೈಲಿಬೇನೆ ಅಥವಾ ಸ್ಮಾಲ್ ಪಾಕ್ಸ್ ನ ಪರಿಣಾಮಪ್ರಾಚೀನ ಚೀನಾ, ಭಾರತ ಹಾಗೂ ಟರ್ಕಿಗಳಲ್ಲಿ ಮೈಲಿಬೇನೆಯಾದವರ ಕೀವನ್ನು ತಮ್ಮ ದೇಹಕ್ಕೆ ಸೇರಿಸುವುದು ನಡೆದೇ ಇತ್ತು. ಟರ್ಕಿಗೆ ಇಂಗ್ಲೆಂಡಿನ ರಾಯಭಾರಿಯಾಗಿದ್ದ ಲೇಡಿ ಮಾಂಟೆಗು ಇದರ ಬಗ್ಗೆ ಬರೆದಿದ್ದಾಳೆ. ಜೆನ್ನರನು ಲಸಿಕೆ ಕಂಡುಹಿಡಿಯುವ ಅರ್ಧಶತಮಾನ ಮೊದಲೇ ಅವಳು ಇಂಗ್ಲೆಂಡಿನಲ್ಲಿ ಈ ಕ್ರಮವನ್ನು ಜನಪ್ರಿಯಗೊಳಿಸಲೆತ್ನಿಸಿದ್ದಳು. ಆದರೆ ಈ ವಿಧಾನದಲ್ಲಿ ತೀವ್ರವಾದ ರೋಗಬಂದು ಕೆಲವರು ಸಾವನ್ನಪ್ಪುವ ಸಾಧ್ಯತೆಯೂ ಇತ್ತು. ನಂತರ ಜೆನ್ನರನು ೧೮ನೇ ಶತಮಾನದ ಪೂರ್ವಾರ್ಧದಲ್ಲಿ ದನಗಳ ಸಿಡುಬಿಗೆ ಒಳಗಾದ ಗೌಳಿಗರನ್ನು ಮೈಲಿಬೇನೆಯು ಹೆಚ್ಚು ತೊಂದರೆಗೊಳಪಡಿಸದೇ ಇದ್ದುದ್ದನ್ನು ಗಮನಿಸಿದ. ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೇ ಅವನನ್ನು ಮೈಲಿಬೇನೆ ಬಾಧಿಸಿತ್ತು. ವೈರಸ್ಸಿನಿಂದ ಬರುವ ಕಾಯಿಲೆಯಿದು ಎಂದು ತಿಳಿಯುವ ಮುನ್ನವೇ ದನಗಳ ಸಿಡುಬಿನ ಗುಳ್ಳೆಗಳ ಕೀವನ್ನೇ ತೆಗೆದು ಶುದ್ಧೀಕರಿಸಿ ಲಸಿಕೆ ತಯಾರು ಮಾಡಿದ. ಅದನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರದಿದ್ದಾಗ ಸ್ವತಃ ತನ್ನ ಪುಟ್ಟ ಮಕ್ಕಳಿಗೆ ಲಸಿಕೆ ಮೊದಲು ನೀಡಿದ. ನಂತರ ಲಸಿಕೆ ತೆಗೆದುಕೊಂಡವರೂ ದನಗಳ ಸಿಡುಬಿನ ಲಸಿಕೆ ಹಾಕಿ ತಮಗೂ ಕೋಡುಮೂಡಬಹುದು ಎಂದು ಹೆದರಿದ್ದರಂತೆ! ಲಸಿಕೆ ತೆಗೆದುಕೊಂಡ ಕೆಲವರಲ್ಲಿ ಮೈಲಿಬೇನೆಯು ತುಂಬ ಲಘುರೂಪದಲ್ಲಿ ಕಾಣಿಸಿಕೊಂಡಿತು ಹಾಗೂ ಹಲವರಿಗೆ ಅದು ಬರಲೇ ಇಲ್ಲ.

ನಂತರದ ವರ್ಷಗಳಲ್ಲಿ ಜೆನ್ನರನ ಲಸಿಕಾ ಕಾರ್ಯಕ್ರಮ ತುಂಬ ಜನಪ್ರಿಯವಾಯಿತು. ನೆಪೋಲಿಯನ್ ತನ್ನ ಸೈನಿಕರಿಗೆಲ್ಲ ಲಸಿಕೆ ಹಾಕಿಸಿದ. ಅಮೆರಿಕದ ಅಧ್ಯಕ್ಷ ಥಾಮಸ್ ಜಫರ‍್ಸನ್ ಕುಟುಂಬದವರೆಲ್ಲ ಲಸಿಕೆ ತೆಗೆದುಕೊಂಡರು. ಜೆನ್ನರನ ಸೂತ್ರಗಳ ಆಧಾರದ ಮೇರೆಗೆ ಬೇರೆ ಕಾಯಿಲೆಗಳಿಗೆ ಲಸಿಕೆಗಳನ್ನು ತಯಾರುಮಾಡಲಾಯಿತು. ಯಾವುದೇ ಒಬ್ಬ ವ್ಯಕ್ತಿಯಿಂದ ಅತಿ ಹೆಚ್ಚು ಮಾನವ ಜೀವಿಗಳು ಉಳಿದಿದ್ದೇ ಆದಲ್ಲಿ ಅದು ಎಡ್ವರ್ಡ್ ಜೆನ್ನರನಿಂದ. ಅವನನ್ನು ‘ಇಮ್ಯುನಾಲಜಿಯ ಪಿತಾಮಹ’ ಎನ್ನಲಾಗುತ್ತದೆ.

ಭಾರತದಲ್ಲಿ ಕೊನೆಯ ಮೈಲಿಬೇನೆ ಕೇಸು ಪತ್ತೆಯಾದದ್ದು ೧೯೭೫ರ ಮೇನಲ್ಲಿ. ನಂತರ ಭಾರತವನ್ನು ‘ಮೈಲಿಬೇನೆ ಮುಕ್ತ ರಾಷ್ಟ್ರ’ ಎಂದು ಘೋಷಿಸಲಾಯಿತು. ೧೯೮೦ರಲ್ಲಿ ವಿಶ್ವವು ಮೈಲಿಬೇನೆ ಮುಕ್ತ ಎಂದು ಘೋಷಿಸಲಾಯಿತು. ಸುಮ್ಮನೇ ಲಸಿಕೆ ಹಾಕುವುದರಿಂದ ತೀವ್ರ ಪರಿಣಾಮವಾಗುವ ಸಾಧ್ಯತೆಯಿರುವುದರಿಂದ ೧೯೮೨ರ ನಂತರ ಲಸಿಕೆ ಹಾಕುವುದನ್ನು ನಿಲ್ಲಿಸಲಾಗಿದೆ. ಆದರೂ ಒಮ್ಮೆಲೇ ೩೦೦ ಮಿಲಿಯನ್ ಜನರಿಗೆ ಲಸಿಕೆ ಹಾಕಲು ಸಾಧ್ಯವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಲಸಿಕಾ ಸಂಗ್ರಹವನ್ನು ಜಿನೀವಾ, ಟೊರಾಂಟೋ ಹಾಗೂ ನವದೆಹಲಿಗಳಲ್ಲಿಟ್ಟಿದೆ.

ಮೈಲಿಬೇನೆ ವಿರುದ್ಧ ಲಸಿಕೆ ಕಾರ್ಯಕ್ರಮಕೆಲವು ವರ್ಷಗಳ ಕೆಳಗೆ ಗುಜರಾತಿನ ಸೂರತ್‌ನಲ್ಲಿ ಇಲಿಗಳು ಸಾಯತೊಡಗಿ, ಜನರಿಗೆ ಪ್ಲೇಗ್ ರೀತಿಯ ಸಾಂಕ್ರಾಮಿಕ ರೋಗವೊಂದು ಕಾಣಿಸಿಕೊಂಡು ಕೆಲವು ಜನ ಸಾವನ್ನಪ್ಪಿದ್ದೇ ವಿಶ್ವಾದ್ಯಂತ ಎಲ್ಲರ ಗಮನ ಭಾರತದ ಮೇಲೆ ಬಿತ್ತು. ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು, ವೈದ್ಯರ ತಂಡ ಬಂದು ಹಲವು ತೆರನ ಪರೀಕ್ಷೆಗಳನ್ನು ನಡೆಸಿ ಅದು ನ್ಯುಮೋನಿಕ್ ಪ್ಲೇಗಿನ ಸಂಕ್ಷಿಪ್ತ ರೂಪ ಆಗಿರಬಹುದೆಂದೂ, ಅತಿ ಅಪಾಯಕಾರಿಯಲ್ಲದಿದ್ದರೂ ಸೂಕ್ತಕ್ರಮಗಳನ್ನು ತೆಗೆದುಕೊಳ್ಳಬೇಕೆಂದೂ, ತಿಳಿಸಿತು. ಹಳೆಯ ನೆನಪುಗಳ ಮೆಲುಕಲ್ಲೇ ಹಲವರು ನಡುಗಿದರು ಆಗ.

‘ಯೆರ‍್ಸೀನಿಯಾ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯಾದಿಂದ ಬರುವ ಪ್ಲೇಗ್ ಮೂಲತಃ ಮೂಷಿಕಗಳ ಕಾಯಿಲೆ. ಈ ಬ್ಯಾಕ್ಟೀರಿಯಾವು ನಿಸರ್ಗದಲ್ಲಿರುತ್ತದೆ, ಎಲ್ಲಾದರೊಮ್ಮೆ ಮಾನವ ಚಟುವಟಿಕೆಗಳ ಫಲವಾಗಿ ಮೂಷಿಕಗಳಿಂದ ಮನುಷ್ಯನಿಗೆ ಕಾಯಿಲೆ ವರ್ಗಾವಣೆಯಾಗುತ್ತದೆ.

೧೪ನೇ ಶತಮಾನದ ಯೂರೋಪಿನ ಮೂರನೇ ಒಂದು ಭಾಗ ಜನರು ಪ್ಲೇಗೆಂಬ ‘ಕಪ್ಪು ಸಾವಿ’ಗೆ ಸಿಕ್ಕಿ ನಾಶವಾದರು. ಈಗಲೂ ಶಾಲೆಯ ಮಕ್ಕಳು ಹೇಳಿಕೊಳ್ಳುವ ಕೆಳಗಿನ ನರ್ಸರಿ ರೈಮ್‌ ಅನ್ನು ಆ ಸಮಯದಲ್ಲಿ ಹಾಡಿಕೊಳ್ಳುತ್ತಿದ್ದದ್ದೆಂದು ನಂಬಲಾಗಿದೆ.

‘ ರಿಂಗ್ ಅರೌಂಡ್ ಅ ರೋಸೀ
ಎ ಪಾಕೆಟ್ ಫುಲ್ ಆಫ್ ಪೋಸೀಸ್
ಯು ಸರ್, ಐ ಸರ್,
ಆಲ್ ಫಾಲ್ ಡೌನ್ ...’

ಭಾರತದಲ್ಲಿ ಪ್ಲೇಗ್ ಬಂದ ವರದಿಚಿಗಟ ಕಚ್ಚಿದ ಕೆಂಪು ಗುರುತು, ವಾಸನೆ ತಡೆಗಟ್ಟಲು ಎಲ್ಲ ಕೊಂಡೊಯ್ಯುತ್ತಿದ್ದ ಹೂವುಗಳು, ಕೊನೆಗೆ ಎಲ್ಲರ ಸಾವು.. ಇದನ್ನೇ ಶಿಶುಗೀತೆಯಾಗಿ ಹಾಡುವ ಮಕ್ಕಳು.. ಎಂಥ ದಾರುಣ ಸಾವಿನ ಕಾಲವಿರಬಹುದು ಅದು!

ಪ್ಲೇಗಿನಲ್ಲಿ ಮೂರು ವಿಧದ ಕಾಯಿಲೆಗಳಿವೆ. ಬ್ಯುಬೋನಿಕ್ ಪ್ಲೇಗಿನಲ್ಲಿ ತೊಡೆಯ ಸಂದಿ ದುಗ್ಧರಸ ಗ್ರಂಥಿ(ಗಳಲೆಯ ಬೀಜ)ಗಳು ದೊಡ್ಡದಾಗುತ್ತವೆ. ತೀವ್ರ ಜ್ವರ, ತಲೆನೋವು ಬಂದು ಮಿದುಳಿನ ತನಕ ನಂಜು ಹರಡುತ್ತದೆ. ನ್ಯುಮೋನಿಕ್ ಪ್ಲೇಗಿನಲ್ಲಿ ಕೆಮ್ಮು, ರಕ್ತಕಫ, ಉಸಿರಾಟದ ತೊಂದರೆ, ಉಂಟಾಗಿ ರೋಗಿಯು ಉಸಿರು ಕಟ್ಟಿ ಬೇಗ ಸಾವನ್ನಪ್ಪುತ್ತಾನೆ. ಸೆಪ್ಟಿಸೆಮಿಕ್ ಪ್ಲೇಗಿನಲ್ಲಿ ದೇಹದ ಎಲ್ಲ ಭಾಗಗಳಿಗೂ ಹರಡಿದ ನಂಜಿನಿಂದ ಆಂತರಿಕ ರಕ್ತಸ್ರಾವವಾಗುತ್ತದೆ. ಚರ್ಮದ ಮೇಲೆಲ್ಲ ರಕ್ತಹೆಪ್ಪುಗಟ್ಟಿದಂತಿರುವ ಕಪ್ಪುಕಲೆಗಳು ತೋರುತ್ತವೆ. ಅದಕ್ಕೇ ‘ಕಪ್ಪು ಸಾವು’ ಎಂದು ಇದನ್ನು ಕರೆಯುವುದು. ಸಾವಿನ ಪ್ರಮಾಣ ಶೇ.೫೦ರಿಂದ ಶೇ.೧೦೦ರ ತನಕ.

ಪ್ಲೇಗ್ ಬಂದು ಉಳಿದವರುಭಾರತದಲ್ಲಿ ದಾಖಲಾಗಿರುವ ಮೊದಲ ಪ್ಲೇಗ್ ಸಾಂಕ್ರಾಮಿಕ ೧೬೧೨ರಲ್ಲಿ, ಜಹಾಂಗೀರನ ಕಾಲದಲ್ಲಿ. ಈ ಶತಮಾನದ ಮೊದಲ ದಶಕವಂತೂ ಪ್ರತಿ ವರ್ಷ ಪ್ಲೇಗಿಗೆ ಐದು ಲಕ್ಷ ಜನ ಸಾವನ್ನಪ್ಪುತ್ತಿದ್ದ ಕಾಲ! ನಂತರ ಶುರುವಾದ ಮಲೇರಿಯಾಕ್ಕಾಗಿ ತೀವ್ರ ಸಂಶೋಧನೆಗಳು ನಡೆದು, ಮಲೇರಿಯಾದ ಸೊಳ್ಳೆಗಳನ್ನು ನಿರ್ಮೂಲನೆ ಮಾಡಲಿಕ್ಕೆ ಸಿಂಪಡಿಸಿದ ಡಿಡಿಟಿಯಲ್ಲಿ ಚಿಗಟಗಳೂ ಸತ್ತು ಪ್ಲೇಗಿನ ಹಾವಳಿ ಸ್ವಲ್ಪ ಕಡಿಮೆಯಾಯಿತೆಂದೇ ಹೇಳಬಹುದು. ಪ್ರೊ. ವ್ಲದಿಮಿರ್ ಹಾಫ್ಕಿನ್ಸ್ ಅವರು ತಯಾರಿಸಿದ ಲಸಿಕೆಯೂ ಪರಿಣಾಮಕಾರಿಯಾಗಿದ್ದಲ್ಲದೇ, ಭಾರತ ಸಂಜಾತ ಅಮೆರಿಕದ ವೈದ್ಯವಿಜ್ಞಾನಿ ಡಾ. ಯಲ್ಲಪ್ರಗಡ ಸುಬ್ಬರಾವ್ ‘ಟೆಟ್ರಾಸೈಕ್ಲಿನ್’ ಎಂಬ ಅದ್ಭುತ ಜೀವಿರೋಧಕ ಕಂಡುಹಿಡಿದ ಬಳಿಕ ಪ್ಲೇಗೆಂಬ ಕಾಯಿಲೆ ೧೯೬೭ರಲ್ಲಿ ನಿರ್ಮೂಲವಾಯಿತೆಂದೇ ಹೇಳಬಹುದು.

ಔಷಧ ಗೊತ್ತಿಲ್ಲದ ಕಾಲದಲ್ಲಿ ಜನರು ಸಿಡುಬಿಗೊಂದು ಪ್ಲೇಗಿಗೊಂದು ದೇವರನ್ನು ಸೃಷ್ಟಿಮಾಡಿ, ಆ ದೇವತೆಯ ಸಿಟ್ಟಿನಿಂದ ಹೀಗಾಗುತ್ತದೆಯೆಂಬ ತೀರ್ಮಾನಕ್ಕೆ ಬಂದಿದ್ದರು. ಒಳ್ಳೆಯ ಮಾತಿನಲ್ಲಿ ಅವಳು ಕಾಯಿಲೆಯನ್ನು ತಹಬಂದಿಗೆ ತರದಿದ್ದರೆ, ಮೊರ-ಕಸಬರಿಕೆ-ಹಳೆಬಟ್ಟೆ ಇತ್ಯಾದಿಗಳ ಸಮೇತ ಊರಗಡಿ ದಾಟಿಸುತ್ತಿದ್ದರು. ಹೀಗೆ ಪ್ಲೇಗ್ ಹಾಗೂ ಮೈಲಿಬೇನೆ ಎಂಬ ಇಬ್ಬರು ಹೆಮ್ಮಾರಿಗಳು ಜಗತ್ತಿನಾದ್ಯಂತ ಎಲ್ಲರನ್ನು ಭಯದ ನೆರಳಿನಲ್ಲಿ ಹಿಡಿದಿಟ್ಟುಕೊಂಡಿದ್ದಾಗಲೇ, ಮುಂದುವರಿದ ವಿಜ್ಞಾನ ತಂತ್ರಜ್ಞಾನಗಳು ಮಾನವನ ಸಾವನ್ನು ಗೆಲ್ಲುವ ಛಲಕ್ಕೆ ಹೊಸ ಭಾಷ್ಯವನ್ನೇ ಬರೆದವು. ಆದರೆ ಇಂಥ ಕಾಯಿಲೆ ಸಾವಿನ ಕಾಲದಲ್ಲೂ ಕಲೆ, ಸಾಹಿತ್ಯ, ವಿಜ್ಞಾನ ಎಲ್ಲದರಲ್ಲಿ ಔನ್ನತ್ಯ ಸಾಧಿಸುತ್ತ, ಹಲವು ಹೋರಾಟ ಚಳುವಳಿಗಳನ್ನು ಹುಟ್ಟುಹಾಕುತ್ತ ಹೋದದ್ದನ್ನು, ಮಾನವ ಕಾಯಿಲೆಗೆ ಹೆದರಿ ಕೂರಲಿಲ್ಲವೆಂಬುದನ್ನೂ ನಾವು ಗಮನಿಸಬೇಕು.

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  6     Rating: 4.33    
 
 
ಸಂಬಂಧಿಸಿದ ಲೇಖನಗಳು
  ಗೋಲಗುಮ್ಮಟ ಫಡಾಯಿ-2:ಗುಂಬಜೊಳಗಿನ ಚೀಜೂ,ಅದರ ಆವಾಜೂ
  ಶುಕ್ರವಾರದ ಸಂಜೆಗೆ ಬ್ರಿಸ್ಟಲ್ ಪ್ರೇಮ ಶಾಯರಿ
  ಜಿಕೆಆರ್ ಪುಸ್ತಕ ಪ್ರೀತಿ-ರಾಜೀವ ‘ಗುರ್ಬಾಣಕ್ಕಿ'
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ