ನಾ. ದಿವಾಕರ ಮತ್ತು ದಿಲೀಪ್ ಆರ್ ಹೊನ್ನವಳ್ಳಿ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆಯೊಂದರ ಅನುವಾದಗಳು ಇಲ್ಲಿವೆ. ಈ ಕವಿತೆಯ ಅನೇಕ ಅನುವಾದಗಳನ್ನು ಹಿಂದೆ ಓದಿದ್ದೀರಿ. ಈ ಅನುವಾದಕರ ಜೊತೆಗೆ ಕೆಂಡಸಂಪಿಗೆಯ ಓದುಗರಾದ ನೀವೂ ಸ್ಪರ್ಧೆಗಿಳಿಯಬಹುದು. ದಯವಿಟ್ಟು ನಿಮ್ಮ ಹೆಸರಿನ ಜೊತೆಗೆ ನಿಮ್ಮ ಅನುವಾದವನ್ನೂ editor@kendasampige.com ಈ ವಿಳಾಸಕ್ಕೆ ಇಮೇಲ್ ಮಾಡಿ. ಎಲ್ಲ ಅನುವಾದಗಳ ನಂತರ ಅನಂತಮೂರ್ತಿ ಮತ್ತು ಓ.ಎಲ್.ನಾಗಭೂಷಣಸ್ವಾಮಿಯವರು ಈ ಅನುವಾದ ಕಮ್ಮಟದ ಮೇಲಿನ ತಮ್ಮ ಅನಿಸಿಕೆಗಳನ್ನು ಬರೆಯಲಿದ್ದಾರೆ. ಬನ್ನಿ. ಈ ಅನುವಾದ ಯಜ್ಞದಲ್ಲಿ ಪಾಲುಗೊಳ್ಳಿ.ಯಾರಿಗೆ ಗೊತ್ತು ಈ ಇಬ್ಬರು ಘಟಾನುಘಟಿಗಳು ತಮ್ಮ ಅನುವಾದಕ್ಕಿಂತ ನಿಮ್ಮದೇ ಚಂದ ಎಂದು ಒಪ್ಪಿಕೊಳ್ಳಲೂಬಹುದು!
ಮೊದಲಿಗೆ ನಾ. ದಿವಾಕರ ಮತ್ತು ದಿಲೀಪ್ ಆರ್ ಹೊನ್ನವಳ್ಳಿ ಅವರ ಅನುವಾದ. ನಂತರ ಕ್ರಮವಾಗಿ ಅಹಲ್ಯಾ ಬಲ್ಲಾಳ, ಸುದರ್ಶನ್ , ಯೋಗೀಂದ್ರ ಮರವಂತೆ, ರವಿ ಹಂಜ್ , ಶಿಶಿರಾ, ಓಎಲ್ ಎನ್, ಅನಂತಮೂರ್ತಿಯವರ ಅನುವಾದ. ಅದರ ಕೆಳಗೆ ಈ ಕವಿತೆಯ ಒಂದು ಇಂಗ್ಲೀಷ್ ರೂಪಾಂತರ. ಅದರ ಕೆಳಗೆ ಮೂಲ ಜರ್ಮನ್ ಕವಿತೆ.
******
ಸೋಪಾನ
ನೀ ಯಾರೇ ಆಗಿರು ;
ಎಲ್ಲವೂ ಚಿರಪರಿಚಿತವಾಗಿರುವ ಜಗತ್ತಿನಲ್ಲಿ
ನಿನ್ನ ಖಾಸಗಿ ಕೋಣೆಯ ಸರಳುಗಳಿಂದ
ಇಣುಕಿದಾಗ
ನಿನ್ನ ಭವ್ಯ ಮಹಲು
ಬೃಹದಾಕಾಶದ ಮುಂದೆ
ತೃಣಮಾತ್ರವಾಗಿ ಕಾಣುತ್ತದೆ !
ನೀ ಯಾರೇ ಆಗಿರು ;
ನಿನ್ನ ನಿತ್ರಾಣ ಕಂಗಳು
ಜಡಗಟ್ಟಿದ ಪ್ರಥಮ
ಸೋಪಾನದಿಂದ
ದೂರಸರಿಯೆ ಹಿಂಜರಿದಾವು ;
ತಾಳ್ಮೆಯಿಂದ ಒಂದು ಕಪ್ಪು ಚುಕ್ಕೆಯನು
ಅಕಳಂಕ ಬಾನ ಹಣೆಗೆ ಲೇಪಿಸು
ನೀನು ದಿಗ್ವಿಜಯನಾಗುತ್ತೀಯೆ !
ನೀರವತೆಯಲಿ ಅರ್ಥ
ಶೋಧಿಸುವ ಪದಲಾಲಿತ್ಯದಂತೆ
ವಿಶ್ವದ ವ್ಯಾಪ್ತಿ ಅಪಾರ
ದೃಷ್ಟಿ ಅತೀತ ;
ಬದುಕಿನ ಅರ್ಥದ
ಉತ್ಖನನದಲಿ ನೀ ತೊಡಗಿರುವಂತೆಯೇ
ಅವು ನಿನ್ನ ಕಣ್ಣೋಟಗಳೊಡನೆ
ಎಂದೋ ಜಾರಿಬಿಟ್ಟಿರುತ್ತವೆ
ಸಾಗಿ ದಿಗಂತದಿಂದಾಚೆ !
-ನಾ. ದಿವಾಕರ
******
ಕರೆ
ಯಾರೇ ಆಗಿದ್ದರೂ ನೀನು: ಸಂಜೆಗೆ ತೆರೆದುಕೊ,
ಒಗ್ಗಿಬಿಟ್ಟಿರುವ ಕೋಣೆಯಿಂದ ಆಚೆ ಹೋಗಿ;
ನಿನ್ನ ಆವಾಸಕ್ಕೂ ಭೂಮಕ್ಕೂ ಹೋಲಿಕೆ ಇಲ್ಲ
ಯಾರೇ ಆಗಿದ್ದರೂ ನೀನು.
ಕಣ್ಣಿಂದ, ಸವೆದ ರೆಪ್ಪೆಗಳನ್ನು ಸರಿಸಲೂ
ಬಳಲಿರುವ ನಿನ್ನ ಕಣ್ಣುಗಳಿಂದ,
ನಿಧಾನಕ್ಕೆ, ಒಂದೇ ಒಂದು ಮಬ್ಬು ಮುತ್ತಿದ ಮರವನ್ನು
ಎತ್ತಿ ಆಕಾಶದ ಮುಂದೆ ಇಡು, ತಿಲಕವನ್ನಿಟ್ಟಂತೆ.
ಇಗೋ ರಂಗವನ್ನು ಸಜ್ಜುಮಾಡಿದೆ. ಅದು ತುಂಬಾ ವಿಶಾಲ
ಮತ್ತದು ನಿಶ್ಶಬ್ದವಾಗಿ ಮಾಗುತ್ತಿರುವ ನಾದದಂತೆ.
ಅವುಗಳ ಅರ್ಥ ಒಳಗಣ್ಣಿಗೆ ಆಗುತ್ತಿದ್ದಂತೆ,
ಹೊರಗಣ್ಣು ಮೆಲ್ಲನೆ ಇಂಗಲು, ಅವು ಬಿಡುತ್ತವೆ...
-ದಿಲೀಪ್ ಆರ್ ಹೊನ್ನವಳ್ಳಿ
*****
ಪ್ರವೇಶ
ಯಾರೇ ಆಗಿರು ನೀನು :ನಡೆ ಹೊರಗಿನ ಸಂಜೆಗೆ
ಎಲ್ಲವೂ ಅತಿಪರಿಚಿತವಾಗಿರುವ ನಿನ್ನದೇ ಪಡಸಾಲೆಯಿಂದ ಆಚೆಗೆ
ನಿನ್ನ ಮನೆಯೇ ಕೊನೆ, ಅದರೆದುರು ಅಗಾಧ ಅಂತರಿಕ್ಷ
ನೀನು ಯಾರಾಗಿದ್ದರೇನು.
ಸವೆದ ಹೊಸ್ತಿಲುಗಳನು ತಮ್ಮ ಸುಸ್ತಿನಲಿ
ಇನಿತೇ ದಾಟಬಲ್ಲ ನಿನ್ನ ಕಣ್ಣುಗಳಿಂದ
ತುಂಬ ನಿಧಾನಕೆ ಏರಿಸು ಒಂದು ಕಪ್ಪು ಮರವ
ಆಗಸದಲಿ ಇರಿಸದನು, ಕೋಮಲ, ಒಂಟಿಯಾಗಿ.
ಇದರೊಂದಿಗೆ ವಿಶ್ವದ ನಿರ್ಮಿತಿ, ನಿನ್ನಿಂದ. ಅದೆಷ್ಟು ಹಿರಿದು
ಮೌನದಲಿ ಇನ್ನೂ ಮಾಗುತಿರುವ ಒಂದು ಪದದಂತೆ .
ಮತ್ತೆ, ನಿನ್ನಿಚ್ಛೆ ಅವುಗಳ ಅರ್ಥವ ಬಿಗಿಯಾಗಿ ಹಿಡಿಯುತ್ತಿದ್ದಂತೆ
ಅವು ಕೂಡ ನಿನ್ನ ಕಣ್ಣುಗಳನು ಹೋಗಗೊಡುತ್ತವೆ, ಮೃದುವಾಗಿ.
-ಅಹಲ್ಯಾ ಬಲ್ಲಾಳ
(Based on the Stephen Michell’s translation of Rilke’s poem.)
*****
೧೯೦೨ರಲ್ಲಿ ಪ್ರಕಟಗೊಂಡ ರಿಲ್ಕನ the book of images ಪುಸ್ತಕದ ಮೊದಲ ಪದ್ಯ ಇದು. eingang ಗೆ preface ಎಂದೂ ಅರ್ಥೈಸಬಹುದಂತೆ. ಹಾಗಾಗಿ ಇದೊಂದು ಮುನ್ನುಡಿಯ ಪದ್ಯವಾಗಿ ಕಂಡಿತು. ಪುಸ್ತಕಕ್ಕೆ ಮೆಲುದನಿಯ ಆಹ್ವಾನವಾಗಿ, ಓದುಗನನ್ನು ಉತ್ತೇಜಿಸುವ ಕಿವಿಮಾತಿನ ಹಾಗೆ ಕಂಡಿತು. ಪುಸ್ತಕದ ಹೆಸರಿಗೆ ಅನ್ವಯದಂತೆ ಓದುಗ ತನ್ನ ಲೋಕವನ್ನು ತಾನೇ ಚಿತ್ರಿಸಿಕೊಳ್ಳುವ, ಅದರಿಂದ ಬಿಡುಗಡೆ ಪಡೆಯುವ ಸ್ವಾತಂತ್ರ್ಯವನ್ನು ನೆನಪಿಸುತ್ತಿದ್ದಂತೆ ಕಂಡಿತು. ಪದ್ಯದ ಸಂದರ್ಭವನ್ನು ಮನಸ್ಸಿನಲ್ಲಿಟ್ಟುಕೊಂಡು, ಅದರ ಅರ್ಥವನ್ನು ತೀರ ಹಿಗ್ಗಿಸಿಕೊಳ್ಳದೆ ಅನುವಾದಿಸಿಕೊಂಡೆ.
ಮುನ್ನುಡಿ
ಅಪರಿಚಿತ:
ಈ ಇರುಳಿನ ಮುನ್ನ
ನಿನ್ನ ಆ ಸಕಲ ಪರಿಚಿತ ಕೋಣೆಯಿಂದಾಚೆ
ಹೆಜ್ಜೆ ಇಡು;
ನಿನ್ನ ಮನೆಯೇ
ಅಗಾಧ ಅಪರಿಚಿತದ ಮುನ್ನಿನ ಕಡೆಯ ಸವಾಲು
ಯಾರೇ ಆಗಿರು ನೀನು.
ಸವೆದ ದಾರಂದದ
ಚೌಕಟ್ಟಿನಾಚೆ ಕಾಣಲು ತಿಣುಕುವ
ಮಂದಗಣ್ಣುಗಳನ್ನೇ ಬಳಸು-
ಜೋಪಾನವಾಗಿ
ಇರುಳಿನ ಆಕಾಶಕ್ಕಡ್ಡವಾಗಿ
ಸಪೂರ ಒಂಟಿ ಕಪ್ಪು ಮರವ
ಎತ್ತಿ ಹಿಡಿ ನಿಶ್ಚಲ.
ನೋಡು- ಒಂದು ಲೋಕವನ್ನೇ ಕಟ್ಟಿಕೊಂಡುಬಿಟ್ಟಿದ್ದೀಯ
ವಿಶಾಲವಾಗಿ
ಸ್ತಬ್ಧದಲ್ಲಿ ಕಳಿಯುವ ಮಾತಿನ ಹಾಗೆ.
ನಿನಗದರ ಭಾವಾರ್ಥ
ಪರಿಚಿತವಾದ ಹಾಗೆ
ಮೆಲ್ಲಗೆ
ಕಣ್ಣಿಗೆ
ಬಿಡುಗಡೆ...
-ಸುದರ್ಶನ್
*****
ಹೊರಬಾಗಿಲು
ನೀನ್ಯಾರೆ ಆಗಿದ್ದರೂ.....ಹೊರಗಿನ ಸಂಜೆಗೆ ಕಾಲಿಡು
ನಿತ್ಯ ಪರಿಚಿತ ಗೋಡೆ ಮಾಡುಗಳ ಆಚೆ ಅಡಿ ಇಡು
ನಿನ್ನ ಮನೆಯೋ ವಿಶಾಲ ವಿಶ್ವದ ಎದುರು ಬರೇ ಕಿರುಗೂಡು .
ಸತತ ನೋಟದಿಂದ ಬಳಲಿ ಬಾಡಿದ
ಸವೆದ ಕಟ್ಟೆಯನ್ನು ದಾಟಲು ಸೋತು ಸೊರಗಿದ
ನಿನ್ನ ಕಣ್ಣುಗಳು.
ಬಲು ನಿಧಾನಕ್ಕೆ ಎತ್ತು ಒಂದು ಕಪ್ಪು ಒಂಟಿ ಮರವ
ಸಣಕಲು ಏಕಾಂಗಿ ಮರವ
ಗಗನಕ್ಕೆ ಎದುರಾಗಿ ಹಿಡಿ ಅದನು ಆಧರಿಸು.
ಆಗ ಹುಟ್ಟಿಸಿದೆ ನೀನು ಹೊಸ ಲೋಕವನ್ನು
ಅಗಾಧ-ಆಳ ಮೌನದಲ್ಲಿ ಅರಳುವ ಮಾತಿನಂತೆ
ನಿನ್ನ ಮನಸು ಇಚ್ಚೆಗೆ ಅರ್ಥಗಳು ನಿಲುಕುವಾಗ
ಮೆತ್ತಗೆ ಮರೆಯಾಗುತ್ತವೆ ತೆರೆಸುತ್ತ ಕಣ್ಣು
-ಯೋಗೀಂದ್ರ ಮರವಂತೆ
********
ಅನುಭಾವ
ಮೂರ್ತ ರೂಪಿ ನೀನಾರಾದರೇನು?
ನಡಿ ಹೊರಗೆ ನಿನ್ನ ಪರಿಚಿತ ಕಿರು ಕೋಣೆಯಿಂದ,
ಅನಂತ ವಿಶ್ವವ ಎದುರಿರುವ ಕಿರು ಮನೆಯಿಂದ;
ಮೂರ್ತ ರೂಪಿ ನೀನಾರಾದರೇನು?
ನೋಡು ನಿನ್ನ ನಿಸ್ತೇಜ ಕಣ್ಣುಗಳಿಂದ,
ಇನ್ನೂ ಅಲ್ಲಿ ಹುದುಗಿರಬಹುದಾದ ಸವೆದ ಕಾಂತಿಯಿಂದ;
ಎತ್ತಿಕೋ ಅಲ್ಲಿ ಬಿದ್ದಿರುವ ಕರಿಯ ಕೊರಡನ್ನ
ಹುಗಿಯದನು ಸ್ಥಿರವಾಗಿ ಆಕಾಶದೆಡೆಗೆ.
ಅಸ್ಥಿರದ ಅಸ್ತಿತ್ವದಾ ನಿನ್ನ ಲೋಕ
ಸ್ಥಿರವಾಗುವುದು ಅನಂತದಲಿ ಅನಂತಾನಂತ
ಮೌನದಲಿ ಮಾಗುತಿಹ ನಿಶ್ಯಬ್ದ ಜಗದಂತೆ;
ಇದನೀನರಿತ ಆ ಕ್ಷಣ,
ಸ್ಖಲಿಸುವವು ಸುಖದೀ ನಿನ್ನ ಅಕ್ಷಣ...
-ರವಿ ಹಂಜ್
*****
ಪ್ರವೇಶ
ನೀಯಾರೆ ಆಗಿರು: ಇಡು ಹೆಜ್ಜೆ ಹೊರಗೆ ಆ ಸಂಜೆಯೊಳಗೆ
ಹೊರ ಬಂದು ನಿನ್ನಾ ಪರಿಚಯದ ನಾಲ್ಕು ಗೋಡೆಗಳೊಳಗಿಂದ ;
ನಿಂತಿದೆ ನಿನ್ನ ಮನೆ ಕೊನೆಯ ತೊಡಕಾಗಿ
ಬೃಹತ್ತಾದ ಬಯಲು ಸೀಮೆಯ ಹಿಂದೆ:
ನೀಯಾರೆ ಆಗಿರು.
ತುಳಿದು ಪಳೆಯುಳಿಕೆಯಾದ ಹೊಸಿಲ ಮೀರದ
ನಿನ್ನೀ ಸೋತ ಕಂಗಳಲಿ,
ಎತ್ತೊಂದು ಕರಿಮರವ ನಿಧಾನವಾಗಿ
ಇಡದನ್ನ ಬ್ರಹ್ಮಾಂಡದೆದುರು, ಸಪೂರವಾದ ಈ ಒಂದೇ ಒಂದ.
ಈಗ ಸೃಷ್ಟಿಸಿದ್ದೀಯೆ ವಿಶಾಲವಾದೊಂದು ಲೋಕವಿದರಿಂದ,
ಮೌನದಾಳದಲಿ ಇನ್ನೂ ಪಕ್ವವಾಗುತಿಹ ಶಬ್ದದಂತೆ.
ಗ್ರಹಿಸುತಿರೆ ಇದರರ್ಥವ ನಿನ್ನಾ ಮನಸ್ಸಿನ್ನೂ,
ನವಿರಾಗಿ ಬಿಟ್ಟು ಕೊಡುವುದದು ನಿನ್ನೀ ಕಂಗಳ.
-ಶಿಶಿರ
*****
ಯಾರಾದರೇನು ನೀನು ಹೊರಗೆ ಬಾರಯ್ಯಾ, ಈ ಸಂಜೆ ನಿನ್ನ ರೂಮು ಬಿಟ್ಟು,
ಎಲ್ಲಾ ಗೊತ್ತಿರುವುದೇ ಅಲ್ಲಿ, ಬಿಟ್ಟು ಬಾ. ವಿಶಾಲ ಬಯಲಲ್ಲಿ ಇಕ್ಕಟ್ಟು ಮನೆ ಬಿಟ್ಟು.
ಸವೆದ ಹೊಸ್ತಿಲ ನೋಡಿ ನೋಡಿ ದಣಿದ ಕಣ್ಣು ಪಡೆಯಲಿ ಬಿಡುಗಡೆ,
ನಿಧಾನ ನಿಧಾನ ಬಡಕಲು ಕಪ್ಪು ಮರವನ್ನೆತ್ತಿ ಒಂಟಿ, ನಿಲ್ಲಿಸು ಆಕಾಶಕ್ಕೆದುರಾಗಿ.
ಸೃಷ್ಟಿಸುವೆ ಲೋಕವನ್ನೇ, ಕಾಣುವೆ ಅದು ಅರಳುವುದನ್ನೇ
ನಾಲಗೆಯಲ್ಲಿ ನಿಶ್ಚಲ ನಿಂತ ನಿನ್ನ ಮಾತು ಮಾಗುವಂತೆ
ಕೊನೆಗೂ ಒಮ್ಮೆ ಅದರ ಸತ್ಯ ಅರಿತಾಗ
ಮೆಲ್ಲಗೆ ಮುಚ್ಚಿಕೋ ಕಣ್ಣು, ಬಿಟ್ಟು ಬಿಡು ಮುಕ್ತವಾಗಿ.
ಇದು ನಾನು ಅನುವಾದ ಮಾಡಲೆಂದು ಇಟ್ಟುಕೊಂಡಿದ್ದ ಕವಿತೆ. ಅನಂತಮೂರ್ತಿಯವರು ತಮ್ಮ ಅನುವಾದ ನೋಡಲು ಅವಕಾಶ ಮಾಡಿಕೊಟ್ಟಾಗ ನೋಡಿ ತಟ್ಟನೆ ಹೀಗೆ ಮಾಡಿದೆ. ಸಮಾಧಾನವಾಗಿಲ್ಲ. ಮಿಚೆಲ್‌ನ ಜೊತೆಗೆ ಇತರ ಅನುವಾದಗಳನ್ನೂ ನೋಡಿ ಬಳಸಿಕೊಂಡಿದ್ದೇನೆ.
ಅನುವಾದವೆಂದೂ ಪೂರಾ ಕಟ್ಟಿ ಮುಗಿಯದ ಮನೆಯ ಹಾಗೆ. ಜರ್ಮನ್ ಪದಗಳು ಕೆಲವನ್ನು ನೋಡಬೇಕು. ಸುಮ್ಮನೆ ಅನುವಾದ ಮಾಡಿದರೆ ಅರ್ಥದ ನೆರಳು ಅಷ್ಟೇ ಸುಳಿಯುತ್ತದೆ. ನನ್ನ ಅನುವಾದವೂ ಈಗ ಹಾಗೇ ಇದ್ದೀತು. ಇನ್ನೂ ಎಷ್ಟೋ ರಿಪೇರಿ ಕೆಲಸ ಉಳಿದೇ ಇವೆ. ಕಟ್ಟುತಿರುವ ಮನೆ ನೋಡಿದವರು ತಮ್ಮ ಸಜೆಶನ್ ಕೊಡಲಿ ಎಂದು ಬಯಸುವ ಹಾಗೆ ಈ ಅನುವಾದ ಕೂಡ ಅರೆಬರೆಯಾಗಿ ನಿಮ್ಮೆದುರು ಬಂದಿದೆ.
ನನಗನ್ನಿಸುತ್ತದೆ ಅನಂತಮೂರ್ತಿಯವರ ಅನುವಾದದಲ್ಲಿ ನಾಟಕೀಯತೆ ಸ್ವಲ್ಪ ಹೆಚ್ಚಾಯಿತು, ಅಷ್ಟೊಂದು ನಾಟಕೀಯತೆ ಬೇಕಾಗಿಲ್ಲ ಎಂದು. ಹಾಗೆ ಹೆಚ್ಚಾಗಿ ರಿಲ್ಕ್ ತರುವ ಕಾಂಟ್ರಾಸ್ಟ್‌ಗಳು ಹಿನ್ನೆಲೆಗೆ ಸರಿದು ‘ಯಾರೋ ಒಬ್ಬಾತ’ ಮುನ್ನೆಲೆಗೆ ಬರುತ್ತಾನೆ. ನನಗನ್ನಿಸುವ ಹಾಗೆ ಆ ಯಾರೋ ಒಬ್ಬನಿಗಿಂತ ಅವನು ಮಾಡಬೇಕಾದ ಕ್ರಿಯೆ ಮುಖ್ಯ. ಕೊನೆಯ ಸಾಲುಗಳಲ್ಲಿ ಅನಂತಮೂರ್ತಿ ರಿಲ್ಕ್‌ನದಲ್ಲದ ಮಾತು ಹೇಳಿದ್ದಾರೆ ಅನ್ನಿಸುತ್ತದೆ.
ನನಗೆ ದೊರೆತ ಮೂರು ಅನುವಾದಗಳಲ್ಲಿ, ಹೀಗಿವೆ. ಯಾರೋ ಒಬ್ಬಾತನಗಿಂತ ಅವನು ತನ್ನೊಳಗೆ ಹೊಳೆದದ್ದಕ್ಕೂ ಬಿಡುಗಡೆ ನೀಡುವುದು ಮುಖ್ಯ:
And, just as your will grasps their meaning,
they in turn will let go, delicately, of your eyes . . .
It ripens like the words still in your mouth.
And when at last you comprehend its truth,
Then close your eyes and gently set it free.
And as your will seizes on its meaning,
tenderly your eyes let it go. . .
ಕೊನೆಯ ಸಾಲುಗಳಲ್ಲಿ ಆಗಿರುವ ಅರ್ಥ ವ್ಯತ್ಯಾಸ ತುಂಬ ದೊಡ್ಡದು.
ಅನುವಾದ ಮಾಡುವಾಗ ನಮ್ಮ ನಮ್ಮ ಪೂರ್ವಾಗ್ರಹಗಳು ಅರ್ಥವನ್ನು ನಿಯಂತ್ರಿಸುತ್ತವೆ. ಅನಂತಮೂರ್ತಿಯವರು ಇತ್ತೀಚಿನ ಕವಿತೆಗಳಲ್ಲಿ ಅನುವಾದಗಳಲ್ಲಿ ವಿಭಾವ ಅನ್ನುವುದನ್ನು ಚಿಂತಿಸುತ್ತಿದ್ದಾರೆ. ವಸ್ತುವೊಂದು ಅದೇ ಆಗಿರುವಂತೆಯೇ ಇನ್ನೇನೋ ಆಗಿರುವ ಬೆರಗು ಅವರಿಗೆ ಮುಖ್ಯವಾಗಿ ಕಂಡಿದೆ. ಹಾಗಾಗಿ ಕೊನೆಯ ಸಾಲುಗಳಲ್ಲಿ ಮರವು ಮರವೇ ಅಗಿದ್ದೂ ಇನ್ನೇನನ್ನೋ ಹೊಳೆಸುವ ವಸ್ತುವಾಗಿ ಅವರ ಅನುವಾದದಲ್ಲಿ ರೂಪ ತಾಳಿದೆ.
ಯಾರೋ ಒಬ್ಬಾತನ ಬಿಡುಗಡೆ, ಅವನು ಪಡೆದ ಅರಿವಿನ ಬಿಡುಗಡೆ ಎರಡೂ ರಿಲ್ಕ್‌ನ ಕವಿತೆಯಲ್ಲಿ ಮುಖ್ಯ. ಜೊತೆಗೇ ಸಾಧ್ಯವಾದಷ್ಟೂ ಮಟ್ಟಿಗೆ ಬಳಕೆಯ ಕನ್ನಡ ಪದಗಳನ್ನೇ ಬಳಸಿ ಅನುವಾದ ಮಾಡಬೇಕು ಅನ್ನುವುದು ನನ್ನ ಧೋರಣೆ.
ಆಶಯದಲ್ಲಿ ಈ ಕವಿತೆ ಕುವೆಂಪು ಅವರ ಅನಿಕೇತನ ಕವಿತೆಯನ್ನು ನೆನಪಿಗೆ ತರುತ್ತದಲ್ಲವೆ?
- ಓ.ಎಲ್.ನಾಗಭೂಷಣಸ್ವಾಮಿ
*******
ನನ್ನ ಬ್ರೆಕ್ಟ್ ಸಂಕಲನದ ನಂತರ ಇನ್ನೊಂದು ಪುಸ್ತಕದ ತಯಾರಿಯಲ್ಲಿ ಇದ್ದೇನೆ.
ಬ್ರೆಕ್ಟನ ನಂತರ ಯಾಕೆ ಇನ್ನೊಬ್ಬ ಜರ್ಮನ್ ಕವಿ ರಿಲ್ಕೆ ನನ್ನನ್ನು ಕಾಡುತ್ತ ಇದ್ದಾನೆ ಎಂದು ಆಶ್ಚರ್ಯಪಟ್ಟಿದ್ದೇನೆ. ಇಬ್ಬರೂ ಬೇರೆ ಬೇರೆ. ಮೂಲಕವನಗಳ ಲಯದ ಮಾಂತ್ರಿಕ ಗುಣ ತಿಳಿಯಲು ನಾನು ಹಲವು ವರ್ಷಗಳ ಹಿಂದೆ ಟ್ಯೂಬಿಂಗನ್ ಎಂಬ ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಆಧ್ಯಾಪಕನಾಗಿ ಇದ್ದಾಗ ರಿಲ್ಕೆಯ ದೊಡ್ಡ ವಿಮರ್ಶಕರೊಬ್ಬರಿಂದ (ಅವರಿಗೆ ಸುಮಾರು ೮೫ ವರ್ಷ ವಯಸ್ಸು) ರಿಲ್ಕೆಯ ಕವನಗಳನ್ನು ಓದಿಸಿಕೊಂಡು ಕೇಳಿದ್ದೆ. ನನ್ನ ಕಿವಿಯಲ್ಲಿ, ಮಾತ್ರವಲ್ಲ ಕಣ್ಣೆದುರು ಕೂಡ ‘ಪ್ಯಾಂಥರ‍್’ ಈಗಲೂ ಗಿರಗಿರನೆ ಸತತ ಪಂಜರದಲ್ಲಿ ಸುತ್ತುತ್ತಲೇ, ಕ್ಷಣ ನಿಂತು ಏನೋ ಕಂಡು (?) ಮತ್ತೆ ಸುತ್ತುತ್ತಲೇ ಇದೆ. ನಾನೂ ನಾಚುತ್ತ ನನ್ನ ಅನುವಾದವನ್ನು ಈ ಹಿರಿಯರಿಗೆ ಓದಿದ್ದೆ. ಕನ್ನಡಿಗನೊಬ್ಬನಿಗೆ ರಿಲ್ಕೆ ಪ್ರಿಯನಾದನೆಂದು ಈ ಹಿರಿಯರು ಸಂತೋಷಪಟ್ಟಿದ್ದರು. ಈ ಚಿರತೆ ಹೀಗೆ ಸುತ್ತುವುದು, ಕ್ಷಣ ನಿಂತು ನೋಡಿ ಮತ್ತೆ ಸುತ್ತವುದು ರಿಲ್ಕೆಯ ಜರ್ಮನ್ ನಲ್ಲಿ ಮಾತ್ರ,, ಅದು ಕೇವಲ ಅರ್ಥವಾಗುವ ಸಾಹಿತ್ಯವಲ್ಲ. ಒಳಗೆ ಅನುರಣನಗೊಳ್ಳುವ ನಾದೋಪಾಸನೆಯ ಲಯದ ಫಲ ಎಂದು ನಾನು ಹೇಳಿದ್ದೆ. ಇವನು ಅನುವಾದದಲ್ಲಿ ಸಿಗಲಾರ, ಇವನ ಭಾಷೆಯನ್ನು ಕಲಿತೇ ಮೂಲದಲ್ಲೇ ಓದಬೇಕು ಎನ್ನುವ ವಿನಯ ಅನುವಾದಕನಿಗೆ ಇರಬೇಕು. (ನಮ್ಮಲ್ಲಿ ಬೇಂದ್ರೆ ಬಗ್ಗೆ ಈ ಮಾತನ್ನು ಹೇಳಬಹುದು. ರಿಲ್ಕೆಗಿಂತ ಬ್ರೆಕ್ಟ್ ಅನುವಾದಕ್ಕೆ ಹೆಚ್ಚು ಲಭ್ಯ ಅನ್ನಿಸಿದೆ ನನಗೆ) ಹೊಸ ಭಾಷೆಯೊಂದನ್ನು ಕಲಿಯಲಾರದ ನನಗಂತೂ ಈ ವಿನಯ ಅತಿ ಅಗತ್ಯ.
ರಿಲ್ಕೆ ಕವಿಯಾಗಿ ವ್ಯಕ್ತಿಯಾಗಿ ಬ್ರೆಕ್ಟ್ ಗಿಂತ ಅನ್ಯ ಎಂದೆ. ಈ ಅನ್ಯವೂ ನನ್ನಲ್ಲಿ ಇಣುಕುವ ಒಂದು ಅಗತ್ಯ. ಮತಧರ್ಮಗಳಲ್ಲಿ ಕಳೆದುಹೋದಂತೆ ಕಾಣುವ ದೇವನೊಬ್ಬನ್ನು ಸೃಷ್ಟಿಸಿಕೊಳ್ಳುವ ಅಗತ್ಯ ಇದು. ನೀಚ್ಸೆ ದೇವರು ಸತ್ತ ಎಂದಾಗ ಏಸುವಿನ ತಂದೆ ಅವನೆದುರು ಇದ್ದ. ನೀಚ್ಸೆಯಿಂದ ಪ್ರಭಾವಿತನಾದ ರಿಲ್ಕೆ ಕ್ರಿಸ್ತಪೂರ್ವ ಲೋಕದ ಪೇಗನ್ ದೇವತೆಗಳನ್ನು ಆವಾಹಿಸಿಕೊಳ್ಳುತ್ತಾನೆ.
ಭಾವಗಳನ್ನು ನೇರವಾಗಿ ವರ್ಣಿಸುವುದು ಕಾವ್ಯವಲ್ಲ ಒಂದು ಹೊರಗಿನ ವಸ್ತು ಒಳಗಿನದು ಆಗುವಂತೆ ಭಾವವನ್ನು ಅವತರಿಸುವುದು ಕಾವ್ಯವೆಂಬ ಪಾಠವನ್ನು ಶಿಲ್ಪಿ ರೋಡಿನ್ ನಿಂದ ಕಲಿತ ರಿಲ್ಕೆಯ ಒಂದು ಪದ್ಯ ಇಲ್ಲಿದೆ.
ನಾನು ಅನುವಾದಕ್ಕೆ ಆಯ್ದುಕೊಂಡ ಈ ಕವಿತೆ ರಿಲ್ಕನ ಮೊದಲ ಕವಿತೆಗಳಲ್ಲಿ ಒಂದು. ಸ್ಟೀಫನ್ ಮಿಚೆಲ್ [Stephen Mitchell] ನ ಇಂಗ್ಲಿಷ್ ಅನುವಾದವನ್ನು ನಾನು ನನ್ನ ಅನುವಾದಕ್ಕಾಗಿ ಬಳಸಿಕೊಂಡಿದ್ದೇನೆ.
ವಿಭಾವ
ಯಾರೇ ಆಗಿರು ನೀನು
ಕುಕ್ಕರಿಸಿ ಕೂತಿರಬೇಡ ನಿನ್ನ ಸನಾತನ ಸಜ್ಜು ಶಿಸ್ತಿನ ಕಿರುಕೋಣೆಯಲ್ಲಿ
ನಿನಗೇ ಗೊತ್ತಿರದ ಏನು ಮಣ್ಣು ಇದ್ದೀತು ಅಲ್ಲಿ?
ಮೂದೇವಿ ನಡಿ ಹೊರಗೆ;
ನೋಡು ಮುಸ್ಸಂಜೆ
ಅನಂತದ ಬಯಲಿನಲ್ಲಿ ಯಃಕಶ್ಚಿತ ನಿನ್ನ ಮನೆ.
ಯಾರೇ ಆಗಿರು ನೀನು, ಸುಸ್ತಾಗುವಷ್ಟು
ನೋಡಿ ನೋಡಿಯೇ ದಾಟದ ಎಷ್ಟು ಹೊಸ್ತಿಲು ಸವೆಸಿ
ಆಗಿದ್ದೇನು ? ಏ ಮೆಳ್ಳಗಣ್ಣ
ಉಜ್ಜಿಕೊ ಕಣ್ಣ.
ಅಗೋ ದೂರದ ಒಂದೇ ಒಂದು ಕಪ್ಪು ಮರ
ಕೃಷ ಕೋಮಲ ಸಪೂರ ಒಂಟಿ ಮರ
ನಿಧಾನ, ಬಲುನಿಧಾನ ಎತ್ತಿಕೊ.
ಆಕಾಶಕ್ಕೆ ಅದನ್ನು ಆನಿಸಿ ನಿಲ್ಲಿಸಿಕೊ
ಇದು ಈಗ ನೀನೇ ಕಟ್ಟಿಕೊಂಡ ಹೊಸ ಲೋಕ,
ಅಗಾಧ ಮೌನದಲ್ಲಿ ಮಾಗಿ ಫಲವಂತವಾಗುವ ಒಂದು ಶಬ್ದದಂತೆ ಅದು
ನಿನ್ನ ಸಂಕಲ್ಪ ಅದರ ಅರ್ಥಗಳನ್ನು ಗ್ರಹಿಸುತ್ತ ಇದ್ದಂತೆ
ಅವು ನಿನ್ನ ಕಣ್ಣುಗಳನ್ನು ಸ್ಫುಟಗೊಳಿಸಿ ಹಿಂದಿರುಗಿಸುತ್ತವೆ
-ಯು.ಆರ್. ಅನಂತಮೂರ್ತಿ
******
Entrance
Whovever you are: step out in to the evening
out of your living room, where everything is so known;
your house stands as the last thing before great space:
Whoever you are.
With your eyes, which in their fatigue can just barely
free themselves from the worn-out thresholds,
very slowly, lift a single black tree
and place it against the sky, slender and alone.
With this you have made the world. And it is large
and like a word that is still ripening in silence.
And, just as your will grasps their meaning,
they in turn will let go, delicately, of your eyes....
****
Eingang
Wer du auch seist: Am Abend tritt hinaus
aus deiner Stube, drin du alles weißt;
als letztes vor der Ferne liegt dein Haus:
Wer du auch seist.
Mit deinen Augen, welche müde kaum
von der verbrauchten Schwelle sich befrein,
hebst du ganz langsam einen schwarzen Baum
und stellst ihn vor den Himmel: schlank, allein.
Und hast die Welt gemacht. Und sie ist groß
und wie ein Wort, das noch im Schweigen reift.
Und wie dein Wille ihren Sinn begreift,
lassen sie deine Augen zärtlich los....
-Rainer Maria Rilke