ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕವಿ ಪತಿಯ ಮಲ್ಲಿಗೆ ಪರಿಮಳ ಅರಸಿ ವೆಂಕಮ್ಮನವರೂ ಹೋದರು    
ಸಿಂಧು
ಗುರುವಾರ, 27 ಆಗಸ್ಟ್ 2009 (08:13 IST)
ಕೆಎಸ್ ನ ದಂಪತಿ

ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ..

ಎಂದು ಪುಟ್ಟ ಸಂಸಾರದ ಮದುವೆಯ ನಂತರದ ಮೊದಲ ಕೆಲ ರಸನಿಮಿಷಗಳನ್ನ ಅಕ್ಷರಶಃ ಪದಗಳಿಗೆ ಇಳಿಸಿ ಪಾಕ ಹೊಯ್ದವರ ಹಿಂದೆ, ಆರು ವರ್ಷಗಳ ನಂತರ ಅವರು ಕೂಗದೆಯೋ ಕೂಗಿಯೋ ಹೋಗಿಬಿಟ್ಟಿದ್ದಾರೆ ವೆಂಕಮ್ಮ.

ವೆಂಕಮ್ಮ ಹೋಗ್ ಬಿಟ್ರು ಕಣೇ ಅಂತ ಅವನು ಓಡಿ ಬಂದು ಹೇಳಿ ಮುಗಿಸಿದ ಕೆಲ ನಿಮಿಷಗಳಲ್ಲಿ ಕವಿಪತ್ನಿ ಇನ್ನಿಲ್ಲ ಅಂತ ಗೆಳೆಯರು ಮೆಸೇಜ್ ಮಾಡಿದ್ದರು.

ಎಲ್ಲ ರಸನಿಮಿಷಗಳನ್ನ ಕವಿಸಮಯಗಳನ್ನ ಉಪಮೆ ರೂಪಕಗಳನ್ನ ಪ್ರತಿಮಾಲಂಕಾರಗಳನ್ನ ಬದಿಗಿಟ್ಟು ನೋಡಿದರೆ ಅವರು ಕೆ.ಎಸ್.ನ ಎಂಬ ಭಾವಮಾಂತ್ರಿಕನಿಗೆ ಇಂಬಾಗಿ ನಿಂತ ಗೃಹಿಣಿ. ವಯಸ್ಸು ಮತ್ತು ಅನಾರೋಗ್ಯಗಳ ನಿಮಿತ್ತವಿಟ್ಟು ತೆರೆದ ಬಾಗಿಲಿನಿಂದ ಹೊರಗೆ ಹೊರಟ ಕವಿಚೇತನವನ್ನ ‘೬೭’ ವರ್ಷಗಳ ಕಾಲ ಸಂಭಾಳಿಸಿಕೊಂಡು ಬಂದ ಪತ್ನಿ; ನಿತ್ಯಕಾರ್ಯಗಳನ್ನ ದಿನದಿನದ ನೆಮ್ಮದಿ ಕೆಡದ ಹಾಗೆ ನೋಡಿಕೊಂಡು; ಉತ್ಸವಮೂರ್ತಿಯನ್ನ ಅಲಂಕಾರವನ್ನ ಇದ್ದದ್ದರಲ್ಲೆ ಅಚ್ಚುಕಟ್ಟಾಗಿ ಮಾಡಿದ ಸ್ತ್ರೀ ರತ್ನ. ಕವಿಯು ಸುಮ್ಮನೆ ಮೌನದಲಿ ಮಾತು ಹುಡುಕುತ್ತ ಹೊರಟಾಗ ಇವರು ಮಾತಿನ ಹಾದಿಯಲ್ಲೆ ಬದುಕನ್ನ ಸರಿದೂಗಿಸಿಕೊಂಡು ನಡೆದರು.

ಇಡೀ ಕನ್ನಡನಾಡಿನ ಸಹೃದಯರ ಮಾನಸದಲ್ಲಿ ಎಂದೂ ಮುಕ್ಕಾಗದ ಸದಾ ತಿಳಿಬೆಳದಿಂಗಳಂತೆ ಹೊಳೆಯುವ ನವಿರು ದಾಂಪತ್ಯದ ಕಲ್ಪನೆಗಳನ್ನ ಕೆ.ಎಸ್.ನ ಕಟ್ಟಿಕೊಡುತ್ತ ಕೂತ ಹಾಗೆ,
ಇವರು :

ಖಾಲಿಯಾದ ಪೆನ್ನಿಗೆ ಇಂಕು ತುಂಬಿದವರು,
ಮುದುರಿ ಬಿದ್ದ ಹಾಳೆಗಳ ಸುಕ್ಕು ನೇವರಿಸಿ ಮತ್ತೆ ಬರೆಯಲು ಎತ್ತಿಟ್ಟವರು,
ಹರಿದ ಪುಸ್ತಕದ ಒಳ್ಳೆ ಹಾಳೆಗಳನ್ನ ಕಾಪಿಟ್ಟು ಬರೆಯುವ ಟೇಬಲ್ ಸಜ್ಜು ಗೊಳಿಸಿದವರು,
ಮನೆಯಿಂದ ಮನೆಗೆ ಸಂಸಾರ ದಾಟಿಸುವಾಗ
ಒಲೆ ಆರದಂತೆ, ಬೆನ್ನಿಗೆ ಚಾಪೆಯಿರುವಂತೆ, ಮುರಿದ ಕೊಡವಾದರೂ ನೀರು ದೊರೆಯುವಂತೆ ನೋಡಿಕೊಂಡವರು,
ಬದುಕಿನ ನೊಗವ ಹೊತ್ತು ಬಾಗಿದ ಕವಿಚೇತನದ ಸಮಸಮಕ್ಕೂ ಕತ್ತು ಇಟ್ಟು,
ಕತ್ತು ನೋಯುವಾಗ ಎಣ್ಣೆ ಸವರಿದವರು,

ಇಳಿ ಸಂಜೆಯಲ್ಲಿ ಹಾಡಮೊಗ್ಗು ಬಿಡಿಸಿ ಹರಡಿ ಕೂತು, ನೇಯುವ ಹೂಗಾರನಿಗೆ ಚಳಿಯ ಕುಳಿರು ತಾಕದಂತೆ ಸ್ವೆಟರ್ ತೊಡಿಸಿದವರು, ಬೆಳಗ ಬೆಳಕು ಮನದಲ್ಲಿ ಬನಿಯಿಳಿಸಿ ಕವಿತೆ ಮೂಡುವ ಹೊತ್ತಿಗೆ ಬಿಸಿಬಿಸಿ ಕಾಫಿ ಕೈಗಿಟ್ಟವರು,

ಅಲ್ಲೊಂದು ಇಲ್ಲೊಂದು ವೇದಿಕೆಗಳ ಪಲ್ಲಕ್ಕಿಯಲಿ ಕವಿ ಹತ್ತಿಳಿಯುವಾಗ ಮನೆಯ ಹೊಸ್ತಿಲಲಿ ಹೊರಡುವ ಮೊದಲು ಮುಂಗುರಳ ತಿದ್ದಿ ಕಳಿಸಿದವರು,
ಕವಿತೆಗಳನ್ನ ಓದದೆ ಉಳಿದೂ ಕವಿತೆಗಳನ್ನು ಓದಿ ಬರಿಯ ಸನ್ಮಾನ ಯಾಕೆ ಎಂದು ನೋಡಬಂದವರಿಗೆ ಹೇಳಿದವರು,
ರತ್ನವೊಂದು ಮಡಿಲಿನಲ್ಲಿ ಹೊಳೆಯುತ್ತ ಕುಳಿತಿದೆ ಎಂಬ ಎಚ್ಚರದ ಅರಿವಿನಲ್ಲಿ ಬದುಕಿನ ಕನಸನ್ನ ನೋಡಿದವರು,
ನೊಂದಮನದಲಿ ಬಿರುನುಡಿಯಾಡಿದ್ದರೇನೊ ಮರುಕ್ಷಣವೇ ತಂಪುಹಾಲಿನ ಬಟ್ಟಲ ಕೈಗಿಟ್ಟವರು,
ಸಿಡುಕಿದರೂ ಮರೆಯದೆ ಕವಿಯ ಜೇಬಲಿ ನಶ್ಯದ ಡಬ್ಬಿಯ ತುಂಬಿಟ್ಟವರು,

ನಿಲ್ದಾಣವೊಂದರಲಿ ಕವಿ ಪಯಣವ ನಿಲ್ಲಿಸಿ ನಡೆದು ಹೋದರೆ, ಇವರು ಇಲ್ಲೆ ಉಳಿದು ನೆನಪುಗಳನ್ನ ಪುಟವಿಟ್ಟು ಕಾಯ್ದವರು,
ಇನ್ನೆಂದೋ ಮುಗಿಯಲಿರುವ ತಮ್ಮ ಪಯಣದಂದು ಜೊತೆಯಲಿರಲೆಂದು ಪುಟ್ಟ ಬಾಚಣಿಕೆಯನ್ನ ಮಡಿಲಲ್ಲಿಟ್ಟು ಅವರ ಬಿಳಿಗುರುಳ ನೇವರಿಸಲು ಕಾದವರು,
ಬೇಸಿರಿ, ಬೆಂಡೋಲೆಗಳು ನಕ್ಷತ್ರದಾಭರಣಗಳ ಅಷ್ಟಸಿರಿಗಳ ಕವಿತೆಯ ಅರಮನೆಯಲಿ ಹೊದ್ದವರು
ಮಕ್ಕಳಿಗೆ ದಿಕ್ಕಾಗಿ, ಗಂಡನಿಗೆ ಮೆಚ್ಚಾಗಿ, ಪಯಣ ನಿಲ್ಲುವವರೆಗೂ, ನಿಂತ ಮೇಲೂ ಜೊತೆಯಾಗಿ ನಡೆದವರು

ನಿನ್ನೆ ಬದುಕಿನ ಭಾರವನ್ನು ಇಳುಹಿ, ಜೊತೆಗಾರನ ನೆಲೆಗೆ ತೆರಳಿದ್ದಾರೆ.

ಕೆಲವರ್ಷಗಳ ಹಿಂದೆ ನನ್ನ ಮೆಚ್ಚಿನ ಕವಿಯನ್ನ ಅವರ ಮನೆಯಲ್ಲಿಯೇ ಮಾತನ್ನಾಡಿಸುವ ಸಂದರ್ಭ ನನಗೆ ಒದಗಿಬಂದಿತ್ತು. ಮನಸ್ಸು ಹಿಗ್ಗಿ ಹೀರೇಕಾಯಾಗಿದ್ದರೂ, ಏನನ್ನು ಮಾತನಾಡಲಿ, ಏನು ಕೇಳಲಿ ಎಂಬ ಗೊಂದಲವಿತ್ತು. ಅಷ್ಟು ಹಿರಿಯ ಚೇತನ, ನಾನು ಹೋಗಿ ಸುಮ್ಮನೆ ನೋಡುತ್ತ ಕೂತರೆ ಅವರ ಸಮಯವನ್ನ ವ್ಯರ್ಥ ಮಾಡಿದಂತಲ್ಲವೇ ಎಂಬ ಯೋಚನೆಯಿತ್ತು. ಹೇಗೋ ಹೋಗಿಬಿಟ್ಟೆ.

ಕೆಎಸ್ ನ ದಂಪತಿಪುಟ್ಟ ಮನೆಯ ದಿವಾನದಲ್ಲಿ ಕವಿತೆಯ ಬರವನ್ನ ಕಾಯುತ್ತ ಕೂತ ಕವಿಚೈತನ್ಯವಿತ್ತು. ನೋಡಿದ್ದ ಹಲವು ಫೋಟೊಗಳ ಪ್ರತಿಕೃತಿಯಂತೆ ಕೂತ ಅವರ ನಿಮೀಲಿತ ದೃಷ್ಟಿ ಮನೆಯಂಗಳದ ಗಿಡದ ಮೇಲಿತ್ತು. ಕುಶಲವನ್ನ ವಿಚಾರಿಸಿದ ಕವಿ ಏನು ಓದಿದ್ದೀರಿ ಎಂದು ಕೇಳಿ ಮುಂದೆ ನಮ್ಮನ್ನೆ ಮಾತನಾಡಲು ಬಿಟ್ಟು ಸುಮ್ಮನಾದರು. ನಾನು ಮಾತನಾಡಲೆ ಇಲ್ಲ. ನೋಡುತ್ತ ಕೂತೆ. ಮಾತನ್ನ ಮೀರಿದ ಸಂಭಾಷಣೆಯ, ಸಂವೇದನೆಯನ್ನ ಅವತ್ತು ನಾನು ಅನುಭವಿಸಿದ್ದೆ.

ಕಾಫಿ ತಂದ ವೆಂಕಮ್ಮ ಮಾತನಾಡಿದರು, ವಿಚಾರಿಸಿದರು. ನಾವು ಮಲ್ಲಿಗೆಯ ಮಾಲೆಯನ್ನ ಕೊಂಡುಹೋಗಿದ್ದೆವು ವೆಂಕಮ್ಮನವರಿಗೆಂದು. ನನ್ನ ಕೈಯಲ್ಲಿಯೂ ಇತ್ತು ಕವಿಯ ಮಲ್ಲಿಗೆಯಮಾಲೆ. ಕೊಂಡು ಓದಿದರೆ ಕನ್ನಡವನ್ನ ಪೋಷಿಸುತ್ತೀರಿ ಎಂಬರ್ಥದ ಮಾತನ್ನ ಹೇಳಿದ ಕವಿ ಸಹಿ ಹಾಕಿದರು.

ಜನ ಸನ್ಮಾನ ಮಾಡುತ್ತಾರೆ, ಶಾಲು ಹೊದೆಸುತ್ತಾರೆ, ಎಲ್ಲಿ ಸಿಕ್ಕರೂ ಮಾತನಾಡಿಸುತ್ತಾರೆ ಪುಸ್ತಕವನ್ನ ಕೊಳ್ಳುವವರಿಲ್ಲ, ನಾವು ವಿಚಾರಿಸದೆ ನೀವೇ ಕೊಂಡುಬಂದಿದ್ದನ್ನು ನೋಡಿ ಸಂತೋಷವಾಯಿತು ಎಂದದ್ದು ವೆಂಕಮ್ಮ. ಅವರ ಮಾತಿನಲಿ ವ್ಯವಹಾರವಿತ್ತು, ಬದುಕನ್ನು ಕಟ್ಟುವ ಕಾಳಜಿಯಿತ್ತು. ಕವಿ ನೆಮ್ಮದಿಯಾಗಿ ಕೂತು ಬರೆಯಲು ಬೇಕಿದ್ದ ಮನಸ್ಸಮಾಧಾನವನ್ನು ಹೊಂದಿಸುವ ಛಾತಿಯಿತ್ತು.

ಅವರು ಮಹಾಕವಿ, ಹೆಂಡತಿ ಬರಿಯ ವ್ಯವಹಾರ ನೋಡುತ್ತಾರೆ ಎನ್ನುವವರು ಅವರನ್ನ ಕಂಡವರಲ್ಲ ಎಂಬುದು ನನ್ನ ಭಾವನೆ. ಈ ತಾಯಿ ಮನೆಯನ್ನ ನೋಡಿಕೊಂಡು ಬದುಕನ್ನ ಸಂಭಾಳಿಸಿಕೊಂಡು, ಕವಿಯ ಅಂತರಂಗದ ಮೌನವನ್ನ ಕಾಯಲಿಕ್ಕೆಂದು ಮಾತಿನ ವ್ಯವಹಾರವನ್ನ ತಾನಿಟ್ಟುಕೊಂಡು ನಡೆಸಿದ್ದಕ್ಕೇ ಅವರು ಪೇಟೆಯ ಬದಿ ತಿರುಗದೆ, ಅಂಗಳದಲ್ಲಿ ಕೂತು ಕವಿತೆಗಳನ್ನ ನೇಯುತ್ತ ಹೋದರು ಎಂದು ಸ್ಪಷ್ಟವಾಗುತ್ತದೆ.

ಈಕೆ ಕವಿತೆಯನ್ನ ಓದಲಿಲ್ಲವೆಂದವರುಂಟು.. ಆದರೆ ಕವಿತೆ ಬರೆಯಲು ಅನುವು ಮಾಡಿಕೊಟ್ಟ ದೊಡ್ಡ ಕೈಂಕರ್ಯ ಇವರದು. ಕವಿಯ ಮೂಲಸ್ಫೂರ್ತಿ ಅವರ ಅಂತರಂಗದ ಚೈತನ್ಯ. ಆ ಚೈತನ್ಯ್ವದೊರತೆ ಹಸಿಯಾಗಿರುವಂತೆ ಕಾಪಿಟ್ಟವರು ಕವಿಪತ್ನಿ.

ನಾನು ಹತ್ತಿರದಿಂದ ನೋಡಲು ಅವಕಾಶವಿದ್ದ ಎಲ್ಲ ಮಹಾಕವಿಗಳ ಹೊಟ್ಟೆಯನ್ನು, ಬೆನ್ನನ್ನೂ ಕಾಯ್ದವರು ಅವರ ಅರ್ಧಾಂಗಿಯರೇ.

ನನ್ನ ಸ್ನೇಹಿತರು ಕವಿಯ ಫೋಟೋ ತೆಗೆಯಲು ಅನುವಾದರು. ಒಂದ್ನಿಮಿಷ ಇರಿ ಅಂತ ಎದ್ದ ವೆಂಕಮ್ಮ,ತಮ್ಮ ನಿರಿಯಲ್ಲಿ ಸಿಕ್ಕಿಸಿದ್ದ ಪುಟ್ಟ ಬಾಚಣಿಕೆಯಿಂದ ಕವಿಯ ಬಿಳಿಯಾದ ಒಪ್ಪವಾಗಿದ್ದ ಮುಂದಲೆಗೂದಲನ್ನ ಮತ್ತೊಮ್ಮೆ ಒಪ್ಪವಾಗಿಸಿ ಬಾಚಿ, ಗಲ್ಲ ಹಿಡಿದು ನೋಡಿ, ಈಗ ತೆಗೆಯಿರಿ ಅಂದು ಹಿಂದೆ ಸರಿದರು. ಈ ಒಂದು ನಡವಳಿಕೆ ನನಗೆ ಕವಿಯ, ಮತ್ತು ಅವರ ದಾಂಪತ್ಯದ, ವೆಂಕಮ್ಮನವರ ಹಿರಿತನದ ದರ್ಶನ ಮಾಡಿಸಿತು.

ಸ್ವಲ್ಪ ಹೊತ್ತಿನ ಬಳಿಕ ನಾವು ಇಬ್ಬರಿಗೂ ನಮಸ್ಕರಿಸಿ ತಿರುಗಿ ಬಂದೆವು. ಅವರಿಬ್ಬರ ನೊಂದ ಬದುಕಿನ ಅಂಗಳದಲ್ಲಿ ಮಲ್ಲಿಗೆಯ ಪರಿಮಳ ನೆಮ್ಮದಿಯನ್ನೊದಗಿಸಿತ್ತು ಎಂಬ ಮಾತನ್ನ ನಾನು ಕೇಳಿಬಲ್ಲೆ.

ಜತೆಗಾತಿಯಿಲ್ಲದ ಕವಿ ಜೀವ ಮೇಲೆ ಚಡಪಡಿಸುತ್ತಿತ್ತೇನೋ? ಅವರ ದೇಖರೇಖೆ ನೋಡಲು ಮನೆಯೊಡತಿ ಈಗ ಹೋಗಿಬಿಟ್ಟಿದ್ದಾರೆ ಎಂದರೆ ಕವಿತೆಯೆಂದುಕೊಳ್ಳಬೇಡಿ. ಅದು ಅವರ ಅನುರೂಪ ದಾಂಪತ್ಯದ ಪ್ರತಿಫಲನ.

ಕವಿಯದೇ ಮಾತಿನಲ್ಲಿ ಹೇಳುವುದಾದರೆ..
ಕವಿಪತ್ನಿಗೆ ಗೊತ್ತು - ತಡವಾಗಿ ಬಂದವಳು ಎಂಬ ಸಿಟ್ಟೇನಿಲ್ಲ ತುಂಬ ಸಂತಸ ಅವರಿಗೆ ಇವರ ಕಂಡು.. ಅಂತ.
 
ವೆಂಕಮ್ಮನವರು ಅನಾರೋಗ್ಯ ಅನುಭವಿಸಿ ಈಗ ಶಾಂತವಾಗಿ ಮಲಗಿದ್ದಾರೆ. ಅವರ ತುಂಬು ಕುಟುಂಬಕ್ಕೆ ಅಗಲಿಕೆಯ ದುಃಖ ತಾಳಿಕೊಳ್ಳುವ ಮನಶ್ಯಕ್ತಿ ಇರಲಿ.

ನಾವು ಓದುಗರು ಮತ್ತು ಕೆಂಡಸಂಪಿಗೆಯ ಆರ್ದ್ರ ನಮನಗಳು ವೆಂಕಮ್ಮನವರಿಗೆ.

[ಚಿತ್ರಕೃಪೆ- ಡಿ.ಸಿ.ನಾಗೇಶ್]

ಪುಟದ ಮೊದಲಿಗೆ
 
Votes:  6     Rating: 5    
 
 
ಸಂಬಂಧಿಸಿದ ಲೇಖನಗಳು
  ದೆಹಲಿಯ ಚಳಿಗೆಂದು ರೇಣುಕಾ ಬರೆದದ್ದು
  ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ
  ಸುದ್ದಿ ಮಾಧ್ಯಮಗಳು ಮತ್ತು ಹೊಣೆಗಾರಿಕೆ
  ಅವತಾರ ನೋಡಿ ವೈಶಾಲಿ ಬರೆದದ್ದು
  ಕ್ರಿಕೆಟಿನ ತವರುಮನೆಯ ಕಳವಳಗಳು: ಯೋಗೀಂದ್ರ ಬರಹ
  ಹಾರಲಾರದ ಹಕ್ಕಿ- ಒಂದು ಸೂಫಿ ಕಥೆ
  ನಿರ್ದೇಶಕ ಅಭಯಸಿಂಹರಿಗೆ ಪ್ರೇಕ್ಷಕ ಬರೆದ ಪತ್ರ
  ಮಹಾಲಿಂಗೇಶ್ವರ ಭಟ್ ಬರೆದ ಪ್ರೇಮ ಕವಿತೆ
  `ರಣ್' ಚಿತ್ರದಲ್ಲೂ ಸತ್ಯ ಸತ್ತಿಲ್ಲವೆ?
  ಪ್ರೇಮಶೇಖರರ `ಕನ್ನಡಿ' : ಭಾನುವಾರ ದೆಹಲಿಯಲ್ಲಿ ಬಿಡುಗಡೆ
  ರಾಷ್ಟ್ರಪ್ರಶಸ್ತಿಯ ಗುಬ್ಬಚ್ಚಿಗಳು : ಅಭಯಸಿಂಹ ಬರಹ
  ಕುಸುಮ ರೋಗವೂ ಟೀವಿ ಸ್ಟೋರೀನೂ: ಪ್ರಿಯಾ ಬರಹ
  ‘ಇವಳನ್ನು ಹುಚ್ಚಿ ಎಂದು ಒಪ್ಪಲಾರೆ' : ಗಂಗಾಧರಯ್ಯ ಬರಹ
  ಗಣರಾಜ್ಯೋತ್ಸವ ಮತ್ತು ದೇವನೂರು: ಒಂದು ಮಾತುಕತೆ
  ಗಣ ರಾಜ್ಯೋತ್ಸವ ಸ್ಪೆಷಲ್- ಆರು ದಶಕಗಳ ಗಣತಂತ್ರ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಲಂಕೇಶರ ಲಘು ಕಥಾಪ್ರಸಂಗಗಳು- ಬಸವರಾಜು ಬರಹ
  ಈಗ ವಿಷ್ಣು ಇಲ್ಲ; ಮಾರ್ಕೆಟ್ ಇದೆ
  ಮಗನಿಗೇ ಶಿಷ್ಯನಾದ ಓಶೋರ ತಂದೆ- ರಾಘು ಬರಹ
  ಫೇಸ್ಬುಕ್ಕಲ್ಲಿ ಇಲ್ಲ ಅಂದ್ರೆ ಬದುಕೀನೇ ಇಲ್ವಾ?
  ತಿರುಮಲೇಶ್ ಅನುವಾದಿಸಿದ ಬ್ರೌನಿಂಗ್ ಕವಿತೆ
  ಕಾಮ್ರೇಡ್ ನೀಲಾ ಕಂಡ `ಕೆಂಪು ಬಸುದಾ'
  ಚಾಮಯ್ಯ ಮೇಷ್ಟರೂ ಹೋಗಿಬಿಟ್ಟರು
  ಕಣ್ಣುಮುಚ್ಚಿದ ಕಾಮ್ರೇಡ್ ಬಸು- ಅನಂತಮೂರ್ತಿ ಹೇಳಿದ್ದು
  ಭಾನುವಾರದ ವಿಶೇಷ- ಸಂಧ್ಯಾದೇವಿ ಬರೆದ ಕವನ ಕಥನ
  ಹೈಟಿಯಲ್ಲಿ ಕೊಲೆಗಡುಕಿ ವಸುಂಧರೆ
  `ಗೌಡ್ರು ಬಯ್ದಿದ್ದು ಒಂದ್ಸಲ... ಆದರೆ ನೀವು?'
  ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು
  ಪಟೇಲ್ ಮಂಜಯ್ಯನವರು ಮೊಮ್ಮಗಳಿಗೆ ಬರೆದ ಪತ್ರ
  ಕನ್ನಡದ ಪಾಪುಗೆ 90 ವರ್ಷ
  ಕೆಟ್ಟ ಮಾತಾಡಿ ಗಮನ ಸೆಳೆದ ಗೌಡರು
  ಒಂದು ಮಂದಹಾಸದಂತೆ ಮತ್ತೆ ಕೆಂಡಸಂಪಿಗೆ
  ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ
  ಪರಮಾಣು ವಿದ್ಯುತ್ ಪರಿಸರ ಸ್ನೇಹಿಯೇ?
  ಸ್ವರ್ಗದ ಬಾಗಿಲು: ಒಂದು ಸೂಫಿ ಕಥೆ
  ಕರುನಾಡ ಕಲಾವಿದನಿಗೆ ಸಿಂಗಪುರದಿಂದ ಮೂರ್ತಿ ಬರೆದ ಪತ್ರ
  ಫೇಸ್ ಬುಕ್ಕಿನಲ್ಲಿ ಗೊರಿಲ್ಲಾ ಗೆಳೆಯರು
  ಯುರೋಪ್ ಪ್ರವಾಸದ ಕಸಾನುಭೂತಿ
  ಎಡಚರಿಗೊಂದು ಸಂತಸದ ಹೊಸ ಚಡ್ಡಿ
  ‘ಮಾನ್ಸೆಂಟೋ’ ಅವಾಂತರಗಳು: ಒಂದು ಸಾಕ್ಷ್ಯಚಿತ್ರ
  ಮುಕುಂದ ಜೋಶಿ ಅನುವಾದಿಸಿದ ಹಿಂದಿ ಕವಿತೆ
  ಗೂಗಲ್ ಗೆ ಚೀನಾದಲ್ಲಿ ಗಿರಾಕಿಗಳೇ ಇಲ್ಲ
  ಅಹೋಬಲ ಶಂಕರರ ಕುರಿತು ಉಮಾ: ಇನ್ನಷ್ಟು
  ನಾನು ಕಂಡ ಅಹೋಬಲ ಶಂಕರ: ಉಮಾ ಸಂಪಾದಕೀಯ
  ಬಿಜೆಪಿಗೆ ಜಿನ್ನಾ ಎಂಬ ‘ಜಿನ್ನು’ ಹಿಡಿದಿದೆಯೇ?
  ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನ ಮಂಡಲ: ಒಂದು ಪರಿಚಯ
  ಸೂಫಿ ಕಥೆ: ‘ಬಗ್ದಾದಿಗೆ ಬಂದ ಮೃತ್ಯು ದೂತ’
  ಎತ್ತರದ ಹುಡುಗನ ಕಷ್ಟಗಳು
  ರಾಮಚಂದ್ರ ದೇವ ಬರೆದ ಒಂದು ಹಳೆಯ ಕವಿತೆ
  ಇನ್ನು ನಾವು ಬಲ್ಬಿಗೆ ವಿದಾಯ ಹೇಳಬಹುದೇ?
  ನೂರಏಳರ ಅಜ್ಜಿಗೆ ಇಪ್ಪತ್ಮೂರನೇ ಮದುವೆಯಾಗುವಾಸೆ!
  ಅನುಪಮಾ ಅನುವಾದಿಸಿದ ನಾಮದೇವ್ ಕವಿತೆ
  ಚೀನಾ: ದುಡಿವವರ ಕೈಗೆ ಅಂತರ್ಜಾಲ ಬಲ
  ಉಮಾ ಸಂಪಾದಕೀಯ:ತಿಮ್ಮಯ್ಯನೂ, ರಾಮಾಗಳೂ,ಲಿಂಗ ಲೆಕ್ಕಾಚಾರಗಳೂ
  ನಗರದ ದೃಶ್ಯಗಳು, ಕಾಡಿನ ಸದ್ದುಗಳು: ರಾಜೇಶ್ವರಿ ಬರಹ