ಮುಂಜಾವ ಐದು ಘಂಟೆಗೆ ಮಲಗುವ ಕೋಣೆಯ ಕಿಟಕಿಯ ಪರದೆಯ ಸಂದಿಯಿಂದ ಚೂರು ಸಂಕೋಚ ಇಲ್ಲದೆ ಇಣುಕುವ ಸೂರ್ಯ ; ಮತ್ತೆ ರಾತ್ರಿ ಒಂಬತ್ತು ಹತ್ತರವರೆಗಿನ ಬಿಸಿಲು... ಆಗಸ್ಟ್ ತಿಂಗಳು ‘ಬ್ರಿಟಿಷ್ ಸಮ್ಮರ್’ ನ ಉಮೇದಿಯ ಕಡೆಯ ದಿನಗಳು. ಹೊತ್ತು -ಗೊತ್ತು ಇಲ್ಲದ ಸೂರ್ಯನ ತಂಟೆಗೆ ಬೇಸತ್ತು ಕಣ್ಣಿಗೆ ಟವೆಲ್ಲೋ ,ತುಂಡು ಬಟ್ಟೆಯೂ ಬಿಗಿದುಕೊಂಡು ವೈಶಾಖದ ರಾತ್ರಿ ಕಳೆದವ ನಾನು...
ಅಂತೂ ಸೂರ್ಯನ ವಹಿವಾಟುಗಳು ದಿನಕಳೆದಂತೆ ಕಡಿಮೆ ಆದ್ದಕ್ಕೆ ಖುಷಿಯಲ್ಲೇ ಕಣ್ಣುಜ್ಜಿಕೊಂಡು ಎದ್ದೆ. ನನ್ನ ಜೊತೆಗೆ ಹಾಸಿಗೆಯ ಸ್ಪ್ರಿಂಗ್ ಗಳ ಬೆಳಗಿನ ಆಲಸ್ಯದ ಮೈಮುರಿತದ ಶಬ್ದಕ್ಕೆ ಎದ್ದ ಮಗಳು "ಅಮ್ಮಾ , ಹಸಿವೆ " ಎಂದಳು. ನನಗೂ ಹಸಿವೆ ಮತ್ತು ಅಮ್ಮ ಜೊತೆಗೆ ನೆನಪಾಗಿ ,ಇಷ್ಟೊತ್ತಿಗೆ ಅಮ್ಮ ಮರವಂತೆ ಮನೆಯಲ್ಲಿ ತಲೆ ಸ್ನಾನ ಮುಗಿಸಿ, ಕಪ್ಪು-ಬಿಳಿ ಒದ್ದೆ ಕೂದಲ ರಾಶಿಯನ್ನು ಬೆನ್ನ ಮೇಲೆ ಬಿಡಿಸಿ ಹೊದ್ದು , ಎರಡೂ ಕೈಯಲ್ಲಿ ಹಿಡಿದ ಉದಯವಾಣಿಯ ಸುದ್ದಿಗಳನ್ನು ತಿರುಗಿಸುತ್ತಿರಬಹುದು... ಓದುತ್ತ ಬಾಡಿದ ಕಣ್ಣಿಗೆ ಕೋಳಿ ನಿದ್ರೆ ಆವರಿಸಿ ಇನ್ನೇನು ಪೇಪರು ಸುದ್ದಿ ಸಮೇತ ತಲೆಯ ಮೇಲೆ ಎರಗಿದಾಗ ಗಕ್ಕನೆ ಎಚ್ಚೆತ್ತು , ಮದ್ಯಾಹ್ನದ ಊಟಕ್ಕೆ ಡೈನಿಂಗ್ ಟೇಬಲ್ಲಿನ ಚೌಕ ರಂಗಸ್ಥಳಕ್ಕೆ ಸುತ್ತು ಬರುತ್ತಾ ಬಟ್ಟಲುಗಳನ್ನು ಇಟ್ಟಿರಬಹುದಲ್ಲ ಎಂದುಕೊಂಡೆ. ಬ್ರಿಸ್ಟಲ್ ನಲ್ಲಿ ನನಗೆ ಕಾಣುವ ಸೂರ್ಯನ ಇನ್ನೊಂದು ಮಗ್ಗುಲಿನ ಮುಖಕ್ಕೆ ಇದೆಲ್ಲ ಸಲೀಸಾಗಿ ಕಾಣಸಿಗುವುದಕ್ಕೆ ಅಸೂಯೆಯಿಂದ ಗೊಣಗುತ್ತ ಆಫೀಸಿಗೆ ತಯಾರಾದೆ.
ಎಲ್ಲರ ಮನೆಯ ದೊಸೆಯಷ್ಟೇ ತೂತಿನ ಕಂದುಬಣ್ಣದ ರಾಗಿ ದೋಸೆ ಪ್ಲೇಟಿನಲ್ಲಿ ಮುರುಟಿ ಕುಳಿತಿತ್ತು. ದೋಸೆಯ ಮಡಿಕೆಯೊಳಗೆ ಅಡಗಿ ಕುಳಿತು ಹಲ್ಲು ಕಡಿಯುತ್ತಿದ್ದವು ಹಸಿ ಮೆಣಸಿನ ಚಕ್ರಗಳು. ತಿಂಡಿ-ತೀರ್ಥ ಮುಗಿಸಿದವನೇ ಕಾರಿನಲ್ಲಿ ರಸ್ತೆಗೆ ಧುಮುಕಿದೆ. ಕೆಲಸದ ಸಮಯಕ್ಕೆ ತುಂಬಿ ತುಳುಕುವ ರಸ್ತೆಗಳೆಲ್ಲ ಬಣ ಬಣ ಎನ್ನುವಾಗ ಋತುಪರ್ಣನಂತೆ ರಥ ಓಡಿಸಿ ಆಫೀಸು ತಲುಪಿದೆ. ಶಾಲೆ ಮಕ್ಕಳಿಗೆ ಆಗಸ್ಟ್ ತಿಂಗಳು ಬೇಸಿಗೆ ರಜೆಯ ಸಮಯ ಆದ್ದರಿಂದ , ಮಕ್ಕಳನ್ನು ಕರೆದುಕೊಂಡು ತಿರುಗಾಟಕ್ಕೆ ಹೋದವರ ನೆನಪಿಗೆ... ಸದ್ದು ಗದ್ದಲ ಇಲ್ಲದೆ ಹಂದಿ ಜ್ವರ ತಾಗಿಸಿಕೊಂಡು ಅಜ್ಞಾತ ವಾಸಕ್ಕೆ ಹೋದವರ ಸ್ಮರಣೆಗೆ.... ರಸ್ತೆ ಆಫೀಸು ಖಾಲಿ ಖಾಲಿ. ಮೂಗಿನ ಮೇಲೆ ಬೆರಳಿಡಬೇಡಿ , ಉಗುರು ಕಚ್ಚಬೇಡಿ , ಕೈ ತೊಳೆದು ಮುಟ್ಟಿರಿ , ಮುಟ್ಟಿದರೆ ಕೈ ತೊಳೆಯಿರಿ ಎನ್ನುವ ಸೂಚನಾ ಫಲಕಗಳು ಹಂದಿ ಜ್ವರದೊಟ್ಟಿಗೆ ಹೋರಾಡಲು ಆಫೀಸಿನೊಳಗೆ ಅಲ್ಲಲ್ಲಿ ಜೋತು ಬಿದ್ದಿದ್ದವು. ಟ್ರೇನಿಂಗಿಗೆ ಎಂದು ಹೊಸತಾಗಿ ಸೇರಿಕೊಂಡಿರುವ ಹಾಲೆಂಡಿನ ಹುಡುಗಿಯೋ ತನ್ನ ಮೇಜಿನೆದುರು ಕುಳಿತು ಕೆಲಸ ಆರಂಭಿಸಿದ ಕೂಡಲೇ ಚಿನ್ನದ ಹುಬ್ಬುಗಳ ನಡುವೆ ಕಗ್ಗಂಟು ಕಾಣಿಸುತ್ತಿತ್ತು. ಕೆಲ ಹುಡುಗರು ಇದನ್ನು ನೋಡಿ, ಇವಳ ಕಷ್ಟಗಳಿಗೆ ಪರಿಹಾರ ಹುಡುಕುವವರಂತೆ ಗುಂಯ್ ಗುಂಯ್ ಗುಟ್ಟುತ್ತ ದುಂಭಿಯಂತೆ ಸುತ್ತು ಬರುತ್ತಿದ್ದರು.
ಗಂಟೆ ಹನ್ನೆರಡಕ್ಕೆ ಕೆಲಸದ ಜೋಂಪಿನಿಂದ ದಿಗ್ಗನೆ ಎದ್ದು ಕೆಲವರು ಕ್ಯಾಂಟೀನಿಗೆ ಕೆಲವರು ಬುತ್ತಿ ಚೀಲ ಹಿಡಿದು ಮರದ ನೆರಳಿಗೆ ಬಿರುಸಾಗಿ ನಡೆದರು. ಅಷ್ಟೊತ್ತಿಗೆ , ಎಂಟಿಆರ್ ಮಯ್ಯರು ವ್ಯಾಪಾರವನ್ನು ಸ್ವೀಡಿಶ್ ಕಂಪೆನಿಗೆ ಮಾರಿದ್ದರ ಬಗ್ಗೆ ತಲೆಬಿಸಿ ಮಾಡಿಕೊಂಡ ಪುಳಿಯೋಗರೆ , ನನ್ನ ಕುರ್ಚಿಯ ಎಡಬದಿಗೆ ಚೀಲದೊಳಗೆ ಕುಳಿತಲ್ಲೇ ಬೆವೆತು ಮುದ್ದೆಯಾಗಿತ್ತು. ಬುತ್ತಿ ಹಿಡಿದು ಕಾರು ಪಾರ್ಕಿನ ಕಡೆಗೆ ನಾನು ನಡೆದೆ. ಬರಡು ಬಿಸಿಲಲ್ಲಿ ಕಾದು ಒಣಗಿ ಬಿಸಿ ಉಗುಳುತ್ತಿದ್ದ ಕಾರಿನ ಕಿಟಕಿ ಇಳಿಸಿ ಊಟದ ಮುದ್ರೆಯಲ್ಲಿ ಕುಳಿತೆ. ಊಟಕ್ಕೆ ಎಲ್ಲೂ ಕೂರಬಹುದು; ಕುಳಿತಲ್ಲೇ ಊಟ ಮಾಡಬಹುದು. ಊಟ ಮುಗಿಸಿದವನಿಗೆ , ‘ಬ್ಲಾಕ್ ಬೆರಿ’ ಹಣ್ಣು (black berry ) ಕೊಯ್ದು ತಿನ್ನಲು ಆಗಸ್ಟ್ ತಿಂಗಳೇ ಸೂಕ್ತ ಕಾಲ ಎಂದ ಹಿರಿಯರ ಮಾತು ನೆನಪಾಗಿ, ತೂತು ತೂತಿನ ಬುಟ್ಟಿ ಹುಡುಕಿಕೊಂಡು ಬಂದು ಕೈಯಲ್ಲಿ ಹಿಡಿದುಕೊಂಡು ಹೊರಟೆ. ಬಯಲು ಪೊದೆ ಬೇಲಿ ಎಲ್ಲಿಯೂ ಬೆಳೆಯುವ ಗಿಡಗಂಟಿ ಅದು. ಅಲ್ಲಿ ಆಗ ಇಲ್ಲಿ ಆಗ ಎನ್ನುವ ವೈಯ್ಯಾರವೇ ತಿಳಿದಿಲ್ಲ ಪಾಪ ಅದಕ್ಕೆ. ಗಿಡದ ತುಂಬೆಲ್ಲ ತೂಗಿ ಉಯ್ಯಾಲೆ ಆಡುತ್ತಿರುವ ಕಪ್ಪು ಸುಂದರಿ -‘ಬ್ಲಾಕ್ ಬೆರಿ’ ಗೊಂಚಲುಗಳು ; ಬಿಡಿಹಣ್ಣು ತಿನ್ನುವುದಲ್ಲ , ಗೊಂಚಲೇ ಕೊಯ್ಯುವುದು ಗೊಂಚಲೇ ತಿನ್ನುವುದು. ಇವು ಕೂಡು ಕುಟುಂಬದ ನಮ್ರ ಸದಸ್ಯರಂತೆ ಒಂದಕ್ಕೊಂದು ಅಂಟಿಕೊಂಡೇ ತೇಯುವವು-ಬದುಕುವವು. ಬಿಸಿಲು ಏರಿದಷ್ಟು ಹಿಗ್ಗಿ ರಸ ತುಂಬಿ ರುಚಿಯಾಗುವ ಹಣ್ಣುಗಳು.
ಇರುವೆ ಸೈನ್ಯ ಹತ್ತಿಳಿಯದ ಗಿಡ ಮರ ಇದೆಯೇ? ತಮ್ಮ ಹಗುರ ದೇಹವನ್ನು ಹೊತ್ತ ಕಡ್ಡಿ ಕಾಲುಗಳ ಮಾಂತ್ರಿಕ ಚಲನೆಯಿಂದ ಬ್ಲಾಕ್ ಬೆರಿ ಟೊಂಗೆ ಟಿಸಿಲುಗಳನ್ನು ಗುಡ್ಡದಂತೆ ಹತ್ತಿಳಿಯುತ್ತಾ , ಉಸಿರುಬಿಡುತ್ತಾ ದೃಢ ನಿಶ್ಚಯದಲ್ಲಿ ನಡೆಯುತ್ತಿವೆ. ಶಿಸ್ತಿನ ಸಾಲಿನಲ್ಲಿ ಚಲಿಸುವಾಗ ಅಕಸ್ಮಾತ್ ಎದುರಾಗುವ ಡಿಡಿಟಿ ಪುಡಿಯ ಬಿಳಿ ವಿಷವನ್ನೂ, ಕಸಪೊರಕೆಯ ಅಟ್ಟಹಾಸವನ್ನೂ ಜೀವಮಾನದಲ್ಲಿ ಕಂಡು ಕೇಳಿ ಅರಿಯದವರಂತೆ ನಿರ್ಭಿಡೆಯಿಂದ ಸಾಗುತ್ತಿವೆ. ನನ್ನ ದಾಪುಗಾಲು, ಇರುವೆಗಳ ಚುರುಕು ಹೆಜ್ಜೆಗಳು ಸಂಧಿಸಿದ್ದು ಬ್ಲಾಕ್ ಬೆರಿ ಗೊಂಚಲುಗಳ ಬಳಿ. ಇರುವೆಗಳಷ್ಟೇ ಅಲ್ಲ, ಜೇಡ , ಹುಳಹುಪ್ಪಟೆ ಹಾತೆಗಳು ಕೂಡ ಅಲ್ಲೇ ಪೊದೆ ಮರೆಯಲ್ಲಿ ಏನೋ ಗುಮಾನಿಯಲ್ಲಿ ಕೈ ಹಿಂದೆ ಕಟ್ಟಿಕೊಂಡು ತಿರುಗಾಡುತ್ತಿವೆ. ನನ್ನ ನೆರಳು ಇವುಗಳ ಮೇಲೆ ಬಿತ್ತೋ ಇಲ್ಲವೋ , ತತ್ತರಿಸಿ ಚೆಲ್ಲಾಪಿಲ್ಲಿ ಆಗಿ ಓಡಿದವು; ಸೈತಾನನ ಸಹವಾಸವೇ ಬೇಡ ಎಂದುಕೊಂಡು. ಅನುಕೂಲವೇ ಆಯಿತು ಎಂದು, ಮೈ ಕೈಯೆಲ್ಲ ಸಿಹಿ ತುಂಬಿಕೊಂಡು ಬೇಲಿ ಮೇಲೆ ಕುಳಿತ ಹಣ್ಣುಗಳ ರಾಶಿಯನ್ನು ಬುಟ್ಟಿಯಲ್ಲಿ ಜೋಡಿಸಿದೆ. ಇರುವೆಗಳು , ಜೇಡಗಳು ನನಗೆ ಬೆದರಿ ಚದುರಿದ್ದು ಮತ್ತೆ ನೆನಪಾಗಿ, ಹಾಗಾದರೆ ನಾನಂದುಕೊಂಡಷ್ಟು ಸಾಧು ಪ್ರಾಣಿ ನಾನಲ್ಲ ಎಂದು ಬೇಜಾರಾದರೂ ಬ್ಲಾಕ್ ಬೆರಿ ಸಿಹಿಯನ್ನು ನೆನೆಯುತ್ತ ಆಫೀಸು ಹೊಕ್ಕೆ.
ಬೆಳಗಿನಿಂದ ನಮ್ಮನ್ನು ತುಂಬಿಸಿಕೊಂಡು ಬೆಚ್ಚಾಗಿದ್ದ ಕುರ್ಚಿಗಳ ಕಾವು ಇಳಿದು ತಣ್ಣಗಾಗಿದ್ದವು. ಕೆಲವು ಕುರ್ಚಿಯ ಖಾಲಿಗಳು ಎದುರು ಬದುರಾಗಿ ಮುಖ ಮಾಡಿಕೊಂಡು ಹರಟೆ ಹೊಡೆಯುತ್ತಿದ್ದವು, ಇನ್ನು ಕೆಲವು ಮಾತು ಬಿಟ್ಟು ಮುಖ ಊದಿಸಿಕೊಂಡು ಬೇರೆ ಬೇರೆ ದಿಕ್ಕಿಗೆ ತಿರುಗಿಕೊಂಡಿದ್ದವು. ಹೊಸ ಸುದ್ದಿ ಏನಾದರು ಇದೆಯೇ ಎಂದು ನನ್ನ ಕುರ್ಚಿಯಲ್ಲಿ ವಿಚಾರಿಸುತ್ತಾ, ಹಣ್ಣಿನ ಬುಟ್ಟಿಗೆ ಮೇಜಿನ ಮೇಲೆ ಜಾಗ ಕೊಡಿಸಿ, ಒಂದೊಂದನ್ನೇ ಬಾಯಲ್ಲಿ ಕರಗಿಸಲು ಶುರು ಮಾಡಿದೆ. ಯಾವ ಮಾಯಕದಿಂದಲೋ ಏನೋ ತಟ್ಟನೆ ಜೋಡಿ ಇರುವೆಗಳು ಪ್ರತ್ಯಕ್ಷ ಆದವು. ಹಣ್ಣುಗಳ ಎಡೆಯಲ್ಲೋ ಬುಟ್ಟಿಯ ಕಣ್ಣುಗಳ ಬದಿಯಲ್ಲೋ ಕುಳಿತವು ಇರಬೇಕು. ಏನೋ ಧ್ಯಾನಕ್ಕೆ ಕುಳಿತವು ಪಕ್ಕನೆ ವಿಚಲಿತರಾಗಿದ್ದಕ್ಕೆ ಸಿಡಿಮಿಡಿಗೊಂಡಂತೆ ಹರಿದಾಡಿದವು. ಮೀಸೆ ಕುಣಿಸಿ ಶಾಪ ಕೊಡುವಂತೆ ಕೈ ಎತ್ತಿ ಸನ್ನೆ ಮಾಡಿ ಓಡಿ ಮರೆ ಆದವು. ಇರುವೆ ಜೋಡಿಗಳಿಗೆ ಭಂಗ ತಂದದ್ದಕ್ಕೆ ನನ್ನೊಳಗೆ ನಾಚಿದರೂ, ರಂಪ ಮಾಡಿ ಆಚೀಚಿನ ಜನರನ್ನು ಒಟ್ಟು ಮಾಡದೆ ನನ್ನ ಪಾಡಿಗೆ ನನ್ನನ್ನು ತಿನ್ನಲು ಬಿಟ್ಟು ನಡೆದದ್ದರ ಖುಷಿಗೆ ಇನ್ನೊಂದು ಗೊಂಚಲು ಬಾಯಲ್ಲಿಟ್ಟೆ. ಎಳೆತನದ ಅಪಕ್ವತೆಯೋ, ಬಲಿತದ್ದರ ಅಮಲೋ , ಕೆಟ್ಟ ಹುಳಿ! ತಿನ್ನಲೂ ಸೇರದೆ ಉಗಿಯಲೂ ಬಾರದೆ ಒದ್ದಾಡಿ , ಕಹಿ ಮಾತ್ರೆಯನ್ನು ನೀರಿನ ಪ್ರವಾಹದಲ್ಲಿ ತೇಲಿಸಿ ನುಂಗುವವರಂತೆ ನೀರಿನೊಡನೆ ಒಳ ದೂಡಿದೆ. ಬುಟ್ಟಿಯೊಳಗಿನ ಇನ್ನೊಂದು ಗೊಂಚಲು ಹುಳಿಯೋ ಸಿಹಿಯೋ ಎಂದು ನಾನು ತಬ್ಬಿಬ್ಬಾಗಿ ಯೋಚಿಸುತ್ತಿದ್ದರೆ , ಕೂಡು ಕುಟುಂಬದ ಉಳಿದ ಸದಸ್ಯರೆಲ್ಲ ಸೇರಿ ಶಾಪಗ್ರಸ್ತನೊಬ್ಬನನ್ನು ಕನಿಕರದಿಂದ ನೋಡುವಂತೆ ನನ್ನನ್ನು ನೋಡಹತ್ತಿದ್ದವು.
[ಚಿತ್ರಗಳು-ಲೇಖಕರು ಮತ್ತು ಸಂಗ್ರಹದಿಂದ]