ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಭಾನುವಾರದ ವಿಶೇಷ: ಎಸ್ ಗಂಗಾಧರಯ್ಯ ಬರೆದ ಸಣ್ಣಕಥೆ ‘ಸೋನೆ ಮಳೆ’    
ಎಸ್.ಗಂಗಾಧರಯ್ಯ
ಶನಿವಾರ, 29 ಆಗಸ್ಟ್ 2009 (10:03 IST)
ಪ್ರಿಯ ಚಂದು,
ಯಾಕೋ ನನ್ನೊಳಗಿನ ಭಾವಗಳನ್ನು ಇಲ್ಲಿಯೇ ಈ ಕ್ಷಣದಲ್ಲಿಯೇ ಬಯಲಾಗಿಸಬೇಕೆನಿಸಿದೆ. ಅದಕ್ಕಾಗಿ ಈ ಒಸಗೆ. ಇದನ್ನೋದಿ ನೀನು ಉತ್ತರಿಸಬೇಕೆಂದಿಲ್ಲ. ಇದು ನನ್ನ ಭಾವ. ಅದೇ ಜಾಗದಲ್ಲಿ ಅದೇ ಬಯಲಲ್ಲಿ ಹಾಗೇ ಕೂತಿದ್ದೇನೆ ಚಂದು, ಹಿಂದಿನದೆಲ್ಲ ನೆನಪಾಗುತ್ತಿದೆ...

ಕಪ್ಪು ಮೋಡಗಳ ಹಿಂದೆ ದಡಿ ಮಳೆ ಕುಕ್ಕರುಗಾಲಿನಲ್ಲಿ ಕೂತು ಕಾಯುತ್ತಿದೆ ಧರೆಗಿಳಿವ ಕ್ಷಣಕಾಗಿ. ಯಾವ ಕ್ಷಣದಲ್ಲಿ ಬೇಕಾದರೂ ಮಳೆ ಸುರಿಯಬಹುದು. ಆದರೂ ಆ ಕಪ್ಪು ಮೋಡಗಳ ಕತ್ತಲಂಥ ಅಂಚಿನಲ್ಲಿ ಅಲ್ಲಲ್ಲಿ ಬೆಳ್ಳಿ ಬೆಳಕೂ ಇಣುಕುತ್ತಿದೆ.

ಎದುರಿನ ಬಂಡೆಯನ್ನೇ ದಿಟ್ಟಿಸುತ್ತಿರುವ ನನ್ನ ಕಣ್ಣುಗಳು ತುಂಬಿ ತುಂಬಿ ಬರುತ್ತಿವೆ. ದಿಟ್ಟಿಸಿದಂತೆಲ್ಲಾ ನೆನಪುಗಳು ದಟ್ಟಗೊಳ್ಳುವುದ ಕಂಡು ನಾನು ಗಲಿಬಿಲಿಯಾಗುತ್ತಿದ್ದೇನೆ. ಆ ಬಂಡೆಯ ಎದೆಯ ಮೇಲೆ ನನ್ನ ಮತ್ತು ನಿನ್ನ ಹೆಸರುಗಳಿವೆ ಚಂದು. ಅವು ಮಳೆ ಬಿಸಿಲುಗಳ ಹೊಡೆತಕ್ಕೆ ಮಾಸಿಹೋಗಿವೆ. ಆದರೆ ಪೂರ ಅಳಿಸಿಹೋಗಲಿಲ್ಲ. ಅಲ್ಲಿಂದ ದೃಷ್ಟಿಯನ್ನು ಕಿತ್ತು, ನನ್ನ ತೊಡೆಗಳ ಮೇಲೆ ಕೂತಿರುವ, ಮಗಳು ಸಮೃದ್ಧಿಯ ನೆತ್ತಿಗೊಂದು ಮುತ್ತಿಟ್ಟೆ. ನನ್ನ ಪ್ರೀತಿಯ ಸ್ಪರ್ಶಕ್ಕೆ ಪುಳಕಗೊಂಡ ಆ ಕಂದ, ಕೂತ ಕಡೆಯಿಂದಲೇ ಕತ್ತನ್ನು ಮೇಲೆತ್ತಿ, ಮುಗುಳ್ನಗೆ ಚೆಲ್ಲಿ ನನ್ನ ತೊಡೆಗಳನ್ನು ಮತ್ತೂ ಬಿಗಿಯಾಗಿ ಹಿಡಿದು ಕೂತು ಕೊಂಡಿದೆ. ನಾವಿಬ್ಬರೂ ಕೂತ ಈ ಜಾಗದಿಂದ ಕೆಳಕ್ಕೆ ಕೊಂಚ ದೂರದಲ್ಲಿ ಕಡಿದಾದ ಬಂಡೆಗಳ ಆಳದಲ್ಲಿ ಕಡಲ ಅಲೆಗಳು ಘರ್ಜಿಸುತ್ತಿವೆ.

ಹೊತ್ತು ಮುಳುಗುತ್ತಿದೆ. ಅಲ್ಲಲ್ಲಿ ಸಣ್ಣ ಪುಟ್ಟ ಬಂಡೆಗಳ ಮೇಲಿದ್ದ ಪ್ರೇಮಿಗಳ ಜೋಡಿಗಳು ಕಾವಿಗೆ ಕೂತ ಕೋಳಿಗಳಂತೆ ಕಾಣುತ್ತಿವೆ. ಇವುಗಳನ್ನು ಬಿಟ್ಟರೆ ಇಡೀ ವಾತಾವರಣ ನಿರ್ಜನವಾಗಿದೆ. ಕಣ್ಣಿಗೆಟುಕುವಷ್ಟು ದೂರದಲ್ಲಿ ಕಡಲ ನಡುವಲ್ಲಿ ಪುಟಾಣಿ ದ್ವೀಪವೊಂದು ಕಾಣುತ್ತಿದೆ. ನಮ್ಮಿಬ್ಬರ ಮನಸ್ಸುಗಳು ಯಾಕೆ ದ್ವೀಪಗಳ ಥರಾ ಆಗಿಹೋಯಿತು ಚಂದು? ಆ ದ್ವೀಪದ ಗಿಡಮರಗಳ ಹಿಂದೆ ಮುಳುಗುತ್ತಿದ್ದ ಸೂರ್ಯ ಮರೆಯಾಗುತ್ತಿದ್ದಾನೆ. ಅಲೆಗಳ ಆರ್ಭಟದ ಜೊತೆಗೆ ಗಾಳಿಯೂ ಗುಟುರು ಹಾಕುತ್ತಿದೆ.

ಮುಂಜಾನೆಯಿಂದ ಸಂಜೆಯವರೆಗೆ ಹೀಗೆ ಮುಗುಮ್ಮಾಗಿ ಕೂತ, ನನ್ನನ್ನು ಕಂಡು ಸಮೃದ್ಧಿಗೆ ಬೇಸರವಾಗತೊಡಗಿದೆ. ಮೇಲೆದ್ದು ಹೊರಡುವಂತೆ ಪೀಡಿಸಹತ್ತಿದ್ದಾಳೆ. ನಾನು ಅದೂ ಇದೂ ಹೇಳಿ ಕೂಡಿಸಿಕೊಂಡಿದ್ದೇನೆ. ಅವಳಿಗೆ ನಾನು ಎಂದಿನಂತಿಲ್ಲ ಎಂಬ ಅರಿವಾದಂತೆ, ಮುಖ ಇಳಿಬಿಟ್ಟುಕೊಂಡು ಇದ್ದಲ್ಲೇ ಸುಮ್ಮನಾಗಿದೆ. ಕತ್ತಲು ಇಷ್ಟಿಷ್ಟೇ ಇಳಿಯತೊಡಗಿದೆ. ಇದರ ಜೊತೆಗೆ ನನ್ನ ಎದೆಯೊಳಗೆ ದುಗುಡ ಕೂಡಾ ದಡದಡಿಸುತ್ತಿದೆ. ಆದರೂ ಮೇಲೇಳುವ ಪ್ರಯತ್ನ ಮಾಡಿಲ್ಲ. ಅಷ್ಟಕ್ಕೂ ಎದ್ದು ದಡಬಡಿಸಿ ಹೋಗುವ ಅವಸರವಾದರೂ ಏನಿದೆ ನನಗೆ ? ಈವತ್ತು ಇದ್ದಕ್ಕಿದ್ದಂತೆ ನನಗೆದುರಾದ ಆ ಒಬ್ಬ ಅನಾಮಿಕ ಕುಡುಕನ ಕುರಿತು ಹೇಳಬೇಕು ಅನ್ನಿಸಿದೆ ಚಂದು.

ಈ ಮಧ್ಯಾಹ್ನ ನಾನು ಮಗಳೊಂದಿಗೆ ಸಮುದ್ರದ ತಡಿಯ ಈ ಪುಟ್ಟ ಊರಿನಲ್ಲಿ ಬಸ್ಸಿನಿಂದ ಇಳಿದಾಗ ಬಿಸಿಲು ಬಿಡದೇ ತದಕುತ್ತಿತ್ತು. ಮಗಳಿಗೆ ತಿಂಡಿ ಕೊಡಿಸಿ ನಾನೀಗ ಕೂತಿದ್ದ ಜಾಗಕ್ಕೆ ಬರುವಾಗ, ಆ ಕುಡುಕನನ್ನು ಕಂಡೆ. ಕಂಠಪೂರ್ತಿ ಕುಡಿದು ಆತ ತನ್ನಷ್ಟಕ್ಕೇ ತಾನು ಏನನ್ನೋ ಮಾತಾಡಿಕೊಳ್ಳುತ್ತಿದ್ದ. ನಾನೂ ಕುತೂಹಲಕ್ಕೆಂದು ಕೊಂಚ ಹೊತ್ತು ಅಲ್ಲಿಯೇ ನಿಂತೆ. ನಾನಲ್ಲಿ ಕಂಡ ದೃಶ್ಯ ನಿಜಕ್ಕೂ ನನ್ನನ್ನು ದಂಗು ಬಡಿಸಿತು. ಆ ಕುಡುಕ, ತನ್ನ ಮನೆಗೆ ಹೋಗಿ ಹೆಂಡತಿ ಮಕ್ಕಳನ್ನು ಮುಖಾಮುಖಿಯಾಗುವ ದೃಶ್ಯದ ರಿಹರ್ಸಲ್ ಮಾಡಿಕೊಳ್ಳುತ್ತಿದ್ದ ಚಂದು. ಅವನ ಕೈಯಲ್ಲೊಂದು ಹೂವಿನ ಪೊಟ್ಟಣವಿತ್ತು. ತನ್ನೆದುರಿಗಿದ್ದ ಮರವನ್ನೇ ತನ್ನ ಮನೆ ಅಂತಲೂ, ಎಡಭಾಗಕ್ಕಿದ್ದ ಕಲ್ಲುಬಂಡೆಯನ್ನೇ ತನ್ನ ಹೆಂಡತಿಯೆಂತಲೂ ಬಲಭಾಗಕ್ಕಿದ್ದ ಪುಟಾಣಿ ಗಿಡವನ್ನೇ ತನ್ನ ಮಕ್ಕಳೆಂತಲೂ ತಿಳಿದು ಮಾತನಾಡುತ್ತಿದ್ದ. ನಾನಿವತ್ತು ಕೊಂಚ ಹೆಚ್ಚು ಕುಡಿದು ಬಂದಿದ್ದೇನೆಂದೂ ಇದಕ್ಕಾಗಿ ನೀನು ಬೇಸರ ಮಾಡಿಕೊಳ್ಳಬಾರದೆಂದೂ ಕಲ್ಲಿನ ದುಂಡಿಯನ್ನು ಮುಟ್ಟಿ ಮುಟ್ಟಿ ಗೋಗರೆಯುತ್ತಿದ್ದ. ನಂತರ ಚಂಗನೆ ಪುಟಾಣಿ ಗಿಡಗಳತ್ತ ನೆಗೆದು ‘ಅಯ್ಯೋ ನನ್ನ ಕಂದಮ್ಮಗಳ ನೋಡಿ, ನಿಮ್ಮ ಅಮ್ಮ ಹೇಗೆ ಹೊಡೆಯುತ್ತಾಳೆ’ ಅಂತ ಜೋರಾಗಿ ಅಳುತ್ತಿದ್ದ. ‘ಬಿಡಿ ನಿಮಗ್ಯಾರಿಗೂ ನನ್ನ ಬಗ್ಗೆ ಕೊಂಚವೂ ಪ್ರೀತಿಯಿಲ್ಲ’ ಅಂತಂದುಕೊಂಡು, ತನ್ನ ಕೈಲಿದ್ದ ಹೂವಿನ ಪೊಟ್ಟಣವನ್ನು ಮರದ ಗೆಣ್ಣಿನ ಮೇಲಿಟ್ಟು ಕೂರುತ್ತಿದ್ದ. ಕೊಂಚ ಹೊತ್ತು ಹಾಗೇ ಕೂತವನು ಮತ್ತೆ ಏನನ್ನೋ ಜ್ಞಾಪಿಸಿಕೊಂಡವನಂತೆ, ಮೇಲೆದ್ದು ಮೇಲಿನದೆಲ್ಲವನ್ನೂ ಉರು ಹೊಡೆದಂತೆ, ಪುನರಾವರ್ತಿಸುತ್ತಿದ್ದ. ಕುಡುಕನ ಬಗ್ಗೆ ನನಗೆ ಯಾಕೋ ಅಯ್ಯೋ ಅನ್ನಿಸಿತು.

ಅಲೆಯೊಂದು ಮಾಮೂಲಿಗಿಂತ ಬಿರುಸಾಗಿ ಬಂಡೆಗೆ ಬಂದೆರಗುತ್ತಿದೆ ಚಂದು. ಅದರ ಸದ್ದು ತಿಳಿಗತ್ತಲ ಎದೆಯ ಮೌನವನ್ನು ಫಕ್ಕನೆ ಕಲಕಿದಂತಾಗಿದೆ. ನನಗೆ ಮತ್ತೂ ಭಯವಾಗತೊಡಗಿದೆ. ಸುತ್ತ ಎತ್ತ ನೋಡಿದರೂ ನೀನೇ ಅನ್ನುವವರಿಲ್ಲ, ಮಡಿಲಲ್ಲಿ ಮಲಗಿದ್ದ ಮಗುವನ್ನು ಮಾತಾಡಿಸಿದೆ. ಅದಾಗಲೇ ನಿದ್ದೆಯಲ್ಲಿ ಕಳೆದುಹೋಗಿದೆ. ನನಗೆ ಎಲ್ಲಿಲ್ಲದ ಅಳು ತುಂಬಿಬಂದಿದೆ. ನಾನು ಕೂತ ಬಂಡೆ ಎದುರಿನ ಕಡಲು ಬೀಸುವ ಗಾಳಿ ಕಾಡುವ ಕತ್ತಲೆಗಳಿಗೆ ತನ್ನ ಸ್ಥಿತಿ ಮೊದಲೇ ಗೊತ್ತಿತ್ತು ಅನ್ನಿಸತೊಡಗಿದೆ ಚಂದು. ಗೊತ್ತಿದ್ದೂ ನೀವೇಕೆ ನನ್ನ ವಂಚಿಸಿದಿರಿ ಅಂತ ಕೂಗಿ ಕೇಳಬೇಕೆನಿಸಿದೆ. ಆದರೆ ದನಿ ಹೊರಡುತ್ತಲೇ ಇಲ್ಲ. ಮಲಗಿದ್ದ ಮಗುವನ್ನು ಸುಮ್ಮನೆ ಬಾಚಿ ಮುತ್ತಿಟ್ಟೆ. ಗಂಟಲು ಒಣಗಿ ಬರುತ್ತಿದೆ ಚಂದು...

ಹತ್ತು ವರ್ಷಗಳ ಹಿಂದೆ ನೀನು ಇದೇ ಬಂಡೆಯ ಎದುರಿಗೆ ಹೀಗೆಯೇ ಕೂರಿಸಿಕೊಂಡು ಭವಿಷ್ಯದ ಕನಸುಗಳನ್ನು ಮೊಗೆದು ಕೊಟ್ಟಿದ್ದೆ. ಮುಳುಗುವ ಸೂರ್ಯ, ಕಡಲಿನ ಅಲೆಗಳು ಹೀಗೆ ಇಲ್ಲಿನ ಎಲ್ಲದನ್ನೂ ಹೊಸದಾಗಿ ಕಂಡವನಂತೆ ಹಕ್ಕಿಯಂತೆ ಹಗುರಾಗಿ ಹಾರಾಡಿದ್ದೆ...

ಆ ದಿನ ನಿನ್ನೊಂದಿಗೆ ಇಲ್ಲಿಗೆ ಬಂದಾಗ, ಹಿಂದಿನ ದಿನವಷ್ಟೇ ಪರೀಕ್ಷೆಗಳು ಮುಗಿದಿದ್ದವು. ನನ್ನ ಗೆಳತಿಯರೆಲ್ಲಾ ಊರಿಗೆ ಹೋಗುವ ತರಾತುರಿಯಲ್ಲಿದ್ದರು. ನಾನು ಮಾತ್ರ ನಿರುಮ್ಮಳವಾಗಿ ನಿನ್ನ ಜೊತೆ ಬಸ್ಸು ಹತ್ತಿ ಈ ಊರಿಗೆ ಬಂದು ಬಿಟ್ಟಿದ್ದೆ. ಈ ಮಲೆನಾಡಿನ ಹಸಿರು, ಸುರಿವ ಮಳೆ, ಕಡಲು, ಅದೆಷ್ಟು ಮುದ ಕೊಟ್ಟಿದ್ದವು, ಎಷ್ಟು ಹೇಳಿದರೂ ಕೇಳದೇ ಅಂದು ನೀನು ಇದೋ ಈ ತನ್ನೆದುರಿನ ಕೋಡುಗಲ್ಲಿನಂಥ ಬಂಡೆಯನ್ನು ಹತ್ತಿ ಮೊಳೆಯೊಂದರಿಂದ ‘ಚಂದು-ಬೀನಾ’ ಅಂತ ಬಂಡೆಯ ಎದೆಗೆ ಹಚ್ಚೆ ಹಾಕಿ ಬಂದಿದ್ದೆ.. ಅದು ಇನ್ನೂ ಹಾಗೇ ಇದೆ ಚಂದು..

ನಮಗಿಬ್ಬರಿಗೂ ಎಂ.ಎ ಗೆ ಸೀಟು ಸಿಕ್ಕಿದ್ದು ವೇಟಿಂಗ್ ಲೀಸ್ಟ್ ನಲ್ಲಿ ಅಲ್ಲವೇ ಚಂದು? ಅವತ್ತೇ ನಾವಿಬ್ಬರೂ ಒಬ್ಬರನ್ನೊಬ್ಬರು ಮೊದಲು ನೋಡಿದ್ದು. ನೋಟೀಸ್ ಬೋರ್ಡಿನಲ್ಲಿ ನನ್ನ ಹೆಸರನ್ನು ನೋಡಿ ನೀನು, ಮೂರನೆಯ ಮಹಡಿಯಿಂದ ಕೆಳಕ್ಕೆ ನೋಡುತ್ತಾ ಏನನ್ನೋ ಹುಡುಕುತ್ತಿರುವವನಂತೆ ನಟಿಸುತ್ತಿದ್ದೆ. ನನ್ನ ಕಣ್ಣು ತಪ್ಪಿ ಕದ್ದು ಕದ್ದು ನನ್ನನ್ನೇ ನೋಡುತ್ತಿದ್ದೆ. ನಾನು ಅತ್ತ ನೋಡಿದ ಕೂಡಲೇ ನಾಚಿ ನೀರಾಗಿ ಬಿಡುತ್ತಿದ್ದೆ. ಆದರೆ ಆ ನಾಚಿಕೆಯಲ್ಲಿ ಅದೆಂಥ ಮಾಯೆಯಿತ್ತು. ನನಗಿಂತ ಕುಳ್ಳಗಿದ್ದ ಅಷ್ಟು ಸುಂದರನೂ ಅಲ್ಲದ ನಿನ್ನನ್ನು ಅಂದು ನೋಡಿದಾಗಿನಿಂದ ಅದಾವ ಭಾವ ನನ್ನನ್ನು ಅತ್ತ ಸೆಳೆಯಿತು ನನಗಂತೂ ತಿಳಿಯದು. ಈ ಪ್ರೀತಿಗೆ ಇಂಥ ಸೆಳೆತವಿದೆಯೇ, ಇರಬಹುದು ಎಂದುಕೊಂಡಿದ್ದೆ. ಹಾಗೆ ನೋಡಿದರೆ ನೀನು ಅಂತಹ ಬುದ್ಧಿವಂತನೂ ಆಗಿರಲಿಲ್ಲ. ನಿನಗೆ ಪರೀಕ್ಷೆಗಳೆಂದರೆ ಅಲರ್ಜಿ. ಹತ್ತನೆಯ ತರಗತಿಯಿಂದಲೂ ಪರೀಕ್ಷೆಗಳಲ್ಲಿ ನೀನು ಐವತ್ತರ ಅಂಕಿಯನ್ನು ದಾಟಿದ್ದಿಲ್ಲ. ನಿನಗೆ ಪರೀಕ್ಷೆಯ ಓದಿಗಿಂತ ಇನ್ನಿತರ ಓದಿನಲ್ಲಿ ಇನ್ನಿಲ್ಲದ ಆಸಕ್ತಿ. ಕ್ಲಾಸಿನಲ್ಲಿ ಮೇಷ್ಟ್ರು ಪಾಠ ಮಾಡುತ್ತಿದ್ದರೆ, ನೀನು ಮಾತ್ರ ನನ್ನನ್ನೇ ಕಿತ್ತು ತಿನ್ನುವವನಂತೆ ನೋಡುತ್ತಾ ಕೂತು ಬಿಡುತ್ತಿದ್ದೆ. ಲೈಬ್ರರಿಗೆ ಹೋದರೆ ನನಗರಿವಿಲ್ಲದಂತೆ ನನ್ನ ಹಿಂದೆಯೇ ಬರುತ್ತಿದ್ದೆ. ನಿನ್ನತ್ತ ನಾನೊಂದು ಸಣ್ಣ ನಗು ಬೀರಿದರೆ ಸಾಕು ಸಂತೃಪ್ತನಾಗಿಬಿಡುತ್ತಿದ್ದೆ. ಆಗ ನಿನಗೆ ನನ್ನನ್ನು ಮಾತನಾಡಿಸುವಷ್ಟು ಧೈರ್ಯ ಕೂಡಾ ಇರಲಿಲ್ಲ. ಅಪ್ಪಿ ತಪ್ಪಿ ನಾನು ಎದುರಾದರೆ ಸಾಕು, ನಿನ್ನ ಮುಖ ಕೆಂಪೇರಿಬಿಡುತ್ತಿತ್ತು. ಅಷ್ಟಕ್ಕೂ ನಿನ್ನನ್ನು ಮೊದಲು ಮಾತನಾಡಿಸಿದ್ದು ನಾನೇ.

ಮಾಮೂಲಿ ಕ್ರಾಪಿಗಿಂತ ಕೊಂಚ ಪಕ್ಕಕ್ಕೆ ಬೈತಲೆ ತೆಗೆದುಕೊಂಡವನಂತೆ ತಲೆ ಬಾಚಿಕೊಳ್ಳುತ್ತಿದ್ದೆ. ಉದ್ದನೆಯ ಗೆಡ್ಡೆ ಮೂಗಿನ ಕೆಳಗೆ ತುಟಿಗಳು ಪೂರಾ ಮುಚ್ಚಿಕೊಳ್ಳುವಂತೆ ಮೀಸೆ ಬೆಳೆಸಿಕೊಂಡಿದ್ದೆ. ನಿನ್ನ ಮೀಸೆಯನ್ನು ಕಂಡು ನನ್ನ ಗೆಳತಿಯರು ಮೀಸೆಮಾಮಾ ಅಂತ ಅಣಕಿಸಿಕೊಳ್ಳುತ್ತಿದ್ದರು. ಅವರ ಅಣಕ ಅತಿಯಾದಂತೆಲ್ಲಾ ತನಗೆ ನಿನ್ನನ್ನು ಮತ್ತೆ ಮತ್ತೆ ಮಾತನಾಡಿಸಬೇಕು ಅನಿಸುತ್ತಿತ್ತು.

ನಮ್ಮ ಮದುವೆಗೆ ಅಮ್ಮನನ್ನು ಅತ್ತೂ ಕರೆದೂ ಒಪ್ಪಿಸಿದ್ದೆ ಅಲ್ಲವೇ ಚಂದು? ಆದರೆ ಅಪ್ಪ ಮಾತ್ರ ದೂರ್ವಾಸ ಮುನಿಯಂತೆ ‘ನಿನ್ನ ಈ ಅವಸರದ ತೀರ್ಮಾನಕ್ಕಾಗಿ ನೀನು ಮುಂದೊಂದು ದಿನ ಪಶ್ಚಾತ್ತಾಪ ಪಡುತ್ತೀಯ, ಆಗ ನಿನಗೆ ನರಳುವುದನ್ನು ಬಿಟ್ಟರೆ ಬೇರೇನೂ ಉಳಿದಿರುವುದಿಲ್ಲ’ ಅಂತ ಅಂದಿದ್ದ. ಅಲ್ಲ, ಅಪ್ಪನಿಗೆ ಅದು ಹ್ಯಾಗೆ ಇಂಥ ಸಂದರ್ಭಗಳ ಮುಂದಾಲೋಚನೆ ಆಗಲೇ ಹೊಳೆದಿತ್ತೋ ಯಾರು ಬಲ್ಲರು? ಅಮ್ಮ ಗದರಿಕೊಂಡಾಗಲೆಲ್ಲ ನನ್ನ ನೆರವಿಗೆ ಬರುತ್ತಿದ್ದ ಅಪ್ಪ ಇವರೇ ಏನು? ಅಂತ ಸಂಶಯ ಕಾಡಿತ್ತು ನನಗೆ. ಆಗ ಅಪ್ಪನ ಕುರಿತು ನಾನು ಮೊಟ್ಟ ಮೊದಲು ಮುನಿಸಿಕೊಂಡಿದ್ದೆ. ಇದಕ್ಕೆ ತನ್ನ ಒಪ್ಪಿಗೆ ಮಾತ್ರ ಕೇಳಲೇ ಬೇಡ ಅಂತ ಅಪ್ಪ ಖಡಾ ಖಂಡಿತವಾಗಿ ಹೇಳಿಬಿಟ್ಟಾಗ, ಅಪ್ಪನ ಬಗ್ಗೆ ಇರುವ ವಾತ್ಸಲ್ಯವೆಲ್ಲ ಆ ಕ್ಷಣದಲ್ಲಿ ಮಣ್ಣು ಪಾಲಾಗಿತ್ತು. ಇನ್ನು ಅವರು ನನ್ನ ಮುಖ, ನಾನು ಅವರ ಮುಖ ನೋಡಲಾರೆವೆಂದು ಸಂಕಟವಾದರೂ ನನಗೆ ನಿನ್ನ ಆಕರ್ಷಣೆಯೇ ಎಲ್ಲಕ್ಕಿಂತ ಮುಖ್ಯವೆನಿಸಿತ್ತು ಆಗ.

ನಿನಗೆ ನಾನೇ ಧೈರ್ಯ ತುಂಬಿ, ರಿಜಿಸ್ಟರ್ ಮದುವೆ ಮಾಡಿಕೊಂಡು ಮನೆಗೆ ಬಂದಾಗ, ಅಪ್ಪ ತನ್ನ ರೂಮಿನಿಂದ ಹೊರಬರಲೇ ಇಲ್ಲ ನೆನಪಿದೆಯಾ? ಅಮ್ಮನ ಕಣ್ಣೀರನ್ನು ಕಂಡು, ಅಪ್ಪನ ಬಗ್ಗೆ ರೇಗಿ ಹೋಗಿತ್ತು. ಅಬ್ಬಾ, ಅಂದು ನನ್ನ ಎದೆಯಲ್ಲಿ ಅದೆಂಥಾ ಅವ್ಯಕ್ತ ಭಯ, ದಿಗಿಲುಗಳು ಮಡುಗಟ್ಟಿಕೊಂಡಿದ್ದವು. ಎಷ್ಟೆಲ್ಲಾ ಧೈರ್ಯ ತುಂಬಿಕೊಂಡರೂ ಎಲ್ಲಿಂದಲೋ ದುಃಖ ಆವರಿಸಿಕೊಂಡು ಬಿಕ್ಕಿ ಬಿಕ್ಕಿ ಅಳುವಂತಾಗಿತ್ತು. ನಂತರ ನಿನ್ನ ಜೊತೆ ನಿನ್ನೂರಿಗೆ ಹೊರಟು ನಿಂತಾಗ ಅಮ್ಮನ ಕಣ್ಣೀರಿನ ಮುಂದೆ ನಾನು ಕುಬ್ಜಳಾಗಿ ಬಿಟ್ಟಿದ್ದೀನಿ ಅನ್ನಿಸಿತ್ತು. ಇರುವ ಒಬ್ಬಳೇ ಮಗಳು ಮನೆಬಿಟ್ಟು ಹೋಗುತ್ತಿದ್ದಾಳೆ ಅನಿಸುತ್ತಿದ್ದಾಗೂ ಅಪ್ಪ ತನ್ನ ರೂಮಿನಲ್ಲಿ ತನ್ನ ಪಾಡಿಗೆ ತಾನು ಅದ್ಯಾವುದೋ ಪುಸ್ತಕದೊಳಗೆ ಮುಳುಗಿಹೋಗಿದ್ದ. ಅಷ್ಟು ದೂರ ಹೋಗಿ ಅದ್ಯಾಕೋ ಮನೆಯತ್ತ ತಿರುಗಿ ನೋಡಬೇಕು ಅನಿಸಿದರೆ, ಅಪ್ಪ ಕಿಟಕಿಯಲ್ಲಿ! ಇಂದು ಕೂಡ ಅಪ್ಪನ ಆ ಅಂದಿನ ನೋಟವೇ ಇರಿಯುತ್ತಿದೆ.

ಆಗ ನೀನು ನನ್ನ ಬಗ್ಗೆ ಅದೆಷ್ಟು ತಲೆ ಕೆಡಿಸಿಕೊಂಡಿದ್ದೆ. ನನ್ನನ್ನು ನೋಡದೇ ಒಂದು ದಿನ ಕೂಡ ಇರುತ್ತಿರಲಿಲ್ಲ. ಆಗ ನಿನ್ನ ಐಲಾಟಗಳು ಒಂದೇ ಎರಡೇ. ನಾನಿನ್ನೂ ಬೆಳಗಿನ ತಿಂಡಿ ಮುಗಿಸುವದಕ್ಕೆ ಮುಂಚೆಯೇ ನನ್ನ ಹಾಸ್ಟೇಲಿನ ಎದುರು ಹಾಜರಾಗಿರುತ್ತಿದ್ದೆ. ಸಣ್ಣಪುಟ್ಟದಕ್ಕೆಲ್ಲಾ ಹುಡುಗಿಯರ ಥರಾ ಗೋಳೋ ಅಂತ ಅಳುತ್ತಿದ್ದೆ. ಇದನ್ನು ಕಂಡ ನನ್ನ ರೂಂಮೇಟ್ಸ್ ಮತ್ತು ಹಾಸ್ಟೆಲಿನ ಕೆಲ ಹುಡುಗಿಯರು ನಿನ್ನನ್ನು ಕಂಡರೆ ಸಾಕು, ಮುಸು ಮುಸು ನಗುತ್ತಿದ್ದರು. ಆಗೆಲ್ಲ ನನಗೆ ಸ್ವಲ್ಪ ಇರುಸು ಮುರುಸಾಗುತ್ತಿತ್ತು. ಆದರೂ ನಿನ್ನ ಸಾಮೀಪ್ಯದಲ್ಲಿ ಸುಖವಿತ್ತು, ನಿನ್ನ ಸನಿಹವೆಂದರೆ ಎದೆ ತುಂಬಿ ಬರುತ್ತಿತ್ತು.

ಅಷ್ಟು ಹೊತ್ತಿಗಾಗಲೇ ನೀನು ಕಥೆ, ಕವನ ಅಂತ ತಲೆ ಕೆಡಿಸಿಕೊಂಡಿದ್ದೆ. ಎಷ್ಟೋ ಸಲ ‘ಇವು ಕ್ಲಾಸಿನಲ್ಲಿ ಮೇಷ್ಟ್ರು ಪಾಠ ಮಾಡುವಾಗ ಬರೆದವುಗಳು’ ಅಂತ ಕೆಲ ಪದ್ಯಗಳ ಸಾಲುಗಳನ್ನು ತೋರಿಸುತ್ತಿದ್ದೆ. ನಿನ್ನ ಮೊದಲ ಕತೆ, ಪತ್ರಿಕೆಯಲ್ಲಿ ಪ್ರಕಟವಾದಾಗ ನನಗೆಷ್ಟು ಖುಷಿಯಾಗಿತ್ತು ಗೊತ್ತ? ಆ ದಿನ ರಾತ್ರಿ ನಿನ್ನ ಕತೆಯ ಒಂದೊಂದು ಅಕ್ಷರವನ್ನು ಅಕ್ಕರೆಯಿಂದ ನನ್ನ ಕಣ್ಣುಗಳಲ್ಲಿ ತುಂಬಿಕೊಂಡಿದ್ದೆ. ನಿನ್ನ ಹೆಸರಿಗೆ ಮುತ್ತಿಟ್ಟಿದ್ದೆ. ಆ ಕತೆಯ ನಾಯಕಿ, ವ್ಯವಸ್ಥೆಯ ವಿರುದ್ಧ ನಿಂತು, ಅಪ್ಪ ಅಮ್ಮಂದಿರನ್ನು ಬಿಟ್ಟು ನೆಚ್ಚಿನ ಹುಡುಗನೊಂದಿಗೆ ಹೋಗುವಾಗ, ನೀನು ಅವಳ ಬಾಯಿಂದ ಅದೆಷ್ಟು ಅರ್ಥಪೂರ್ಣವಾಗಿ ಮಾತಾಡಿಸಿದ್ದೆ. ಈ ಬರೆಯುವ ಗೀಳಿನ ಜೊತೆಗೆ ನೀನು ಯಾವುದ್ಯಾವುದೋ ಸಂಘಟನೆಗಳಲ್ಲೂ ಗುರುತಿಸಿಕೊಂಡಿದ್ದೆ. ‘ಇವತ್ತು ರಾತ್ರಿ ಪೂರಾ ವಾಲ್ ರೈಟಿಂಗ್ ಮಾಡಿದ್ದೇ ಆಯ್ತು’ ‘ನಾಳೆ ಒಂದು ಪ್ರತಿಭಟನಾ ಸಭೆ ಇದೆ’ ಹೀಗೆ ಏನೇನೋ ಹೇಳುತ್ತಿದ್ದೆ. ಆಗೆಲ್ಲ ನನಗೆ ನಿನ್ನ ಬಗ್ಗೆ ಎಂಥದೋ ಕುತೂಹಲ. ಅಬ್ಬಾ ಎಂಥ ಹಸುಗೂಸಿನಂಥವನು, ಏನೊಂದನ್ನೂ ಬಚ್ಚಿಟ್ಟುಕೊಳ್ಳುವವನೇ ಅಲ್ಲ ಎಂಬ ಅಭಿಮಾನ ಕಾಡುತ್ತಿತ್ತು.

ಹ್ಞಾ, ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ, ಅಂದು ಇನ್ನೂ ಪೂರಾ ಕತ್ತಲಾಗಿರಲೇ ಇಲ್ಲ. ನನ್ನ ಹಾಸ್ಟೆಲ್ ಎದುರಿನ ಪಾರ್ಕಿನಲ್ಲೆ ಅದ್ಹೇಗೆ ನನ್ನನ್ನು ಬಾಚಿ ತಬ್ಬಿ ಮುತ್ತಿಟ್ಟು ಬಿಟ್ಟಿದ್ದೆ ನೀನು. ಅಷ್ಟು ಮೆದು ಹೃದಯಿಯಾದ ನಿನಗೆ ಅಂದು ಅದೆಲ್ಲಿಂದ ಬಂತು ಅಂಥಾ ಧೈರ್ಯ? ಅಬ್ಬಾ ಅದೆಷ್ಟು ಬಿಸಿಯಿತ್ತು ಆಗ ನಿನ್ನ ಮೈಯಲ್ಲಿ. ನಾನಂತೂ ಪೂರಾ ತಂಡುಹೊಡೆದು ಹೋಗಿದ್ದೆ. ದಡ್ ಅಂತ ನಿನ್ನನ್ನು ಹಿಂದಕ್ಕೆ ತಳ್ಳಿ ಮಾತು ಮರೆತವಳಂತೆ ಕೂತುಬಿಟ್ಟಿದ್ದೆ. ಆಗ ನಿನ್ನ ದೈನೇಸಿ ಸ್ಥಿತಿಯನ್ನು ಜ್ಞಾಪಿಸಿಕೊಂಡು ನಾನೆಷ್ಟು ಸಲ ನಕ್ಕಿಲ್ಲ. ಮತ್ತೊಂದು ದಿನ ಅಪ್ಪುಗೆಯ ಬಿಸಿಯಲ್ಲಿದ್ದ ಜೋಡಿಯೊಂದನ್ನು ತೋರಿಸಿ, ‘ನೋಡು ನೀನೂ ಇದೀಯಾ’ ಅನ್ನುವಂತೆ ನನ್ನತ್ತ ನೋಡಿ ಅಣಕಿಸಿದ್ದೆ. ಆಕ್ಷಣ ನನಗೆ ನಿನ್ನ ಕುರಿತು ಮೊದಲ ಬಾರಿಗೆ ಏನೋ ಭಯ ಎಂಥದೋ ಕಸಿವಿಸಿ ಕವಿದುಕೊಂಡಿತ್ತು. ಒಂದು ಮಾತು ಕೂಡಾ ಆಡದೆ ರಪ್ ಅಂತ ಕೊಡವಿಕೊಂಡು ಹಾಸ್ಟೆಲ್ ಸೇರಿಕೊಂಡು ಬಿಟ್ಟಿದ್ದೆ.

ಮನೆಬಿಟ್ಟು ಹೊರಡುವ ಹಿಂದಿನ ದಿನದ ಘಟನೆಯಿಂದ ನಾನು ಭೂಮಿಗಿಳಿದು ಹೋಗಿದ್ದೇನೆ.ನನ್ನ ಚಂದು ನೀನು, ಈ ಮಟ್ಟಕ್ಕೆ ಇಳಿಯುತ್ತೀ ಅಂತ ನನಗೆ ಕಲ್ಪಿಸಿಕೊಳ್ಳಲೂ ಅಸಾಧ್ಯವಾಗಿತ್ತು. ಕೇವಲ ಒಂದು ಕ್ಷುಲ್ಲಕ ಕಾರಣಕ್ಕಾಗಿ ನನ್ನ ಮೇಲೆ ಕೈ ಮಾಡಿದ್ದೆ. ಇನ್ನೂ ಹೀಗೆ ಇಂಥ ಗಂಡ ಹೆಂಡತಿ ನಾಟಕ ಆಡುವುದರಲ್ಲಿ ಅರ್ಥವಿಲ್ಲ ಅನ್ನುವ ತೀರ್ಮಾನಕ್ಕೆ ಬಂದಿದ್ದೆ ನಾನು. ಎಲ್ಲಾ ಸಂಬಂಧಗಳ ಋಣಗಳ ಕಡಿದುಕೊಂಡು ದೂರಾಗುವ ಕಡುಪಿನ ನೋವುಗಳಿಗೆ ಎದೆಯನ್ನು ಗಟ್ಟಿಮಾಡಿಕೊಂಡೆ. ಆ ಕ್ಷಣದಿಂದಲೇ ಆ ಮನೆ ಅಲ್ಲಿಯ ಎಲ್ಲದೂ ನನ್ನದಲ್ಲ ಅನ್ನಿಸಿತು. ಆ ಇಡೀ ರಾತ್ರಿ ಮನೆಯ ಮುಂದಿನ ಕಲ್ಲುಬೆಂಚಿನ ಮೇಲೆ ಕೂತು, ಅದೆಷ್ಟೋ ಹುಟ್ಟುವ ನಕ್ಷತ್ರಗಳು ಹುಟ್ಟಿ, ಮುಳುಗುವ ನಕ್ಷತ್ರಗಳು ಮುಳುಗಿ, ಕಪ್ಪನೆಯ ಮೋಡಗಳು ಬಿಳಿಯಾಗುತ್ತಾ ಬಿಳಿಯ ಮೋಡಗಳು ಕಪ್ಪಾಗುತ್ತಾ ಚಂದದ ಚಂದಿರನ ಮುಸುಕುತ್ತಾ ಮರೆಯಾಗುತ್ತಾ ಬೀಸೋ ಗಾಳಿಯ ಹೊತ್ತು ಹೊರಳಾಡುತ್ತಾ ಮುಗಿಲಂಥ ಮುಗಿಲೆಲ್ಲಾ ಬೆಳ್ಳಿ ರೇಖುಗಳ ಮಿನುಗಲ್ಲಿ ಬೆಳಗುತ್ತಾ ಮಾನವನ ನೋವು ಅವಮಾನ ಸಣ್ಣತನಗಳಿಗೆ ಸವಾಲೆಂಬಂತೆ ಇದ್ದ ಮುಗಿಲಿಗೆ ಮುಖವಿಟ್ಟು ಕಳೆದಿದ್ದೆ.

ವರ್ಗಾವಣೆಯ ವಿಚಾರ ಒಂದು ನೆಪ ಮಾತ್ರ. ಕೆಲಸ ಸಿಕ್ಕಿದ ಮೇಲೆ ನೀನು ನಿನ್ನ ಊರಿಂದ ದೂರ ಉಳಿದಿದ್ದಾದರೂ ಎಷ್ಟು ದಿನ?ಕೆಲವೇ ಕೆಲವು ತಿಂಗಳು ತಾನೆ? ನೀನು ನಿನ್ನೂರಿನ ಪಕ್ಕದ ಕಾಲೇಜಿಗೆ ವರ್ಗಾವಣೆ ತೆಗೆದುಕೊಳ್ಳಲು ಪಟ್ಟ ಪಡಿಪಾಟಲು, ಅನುಸರಿಸಿದ ಮಾರ್ಗ ನನಗೆ ನಿಜಕ್ಕೂ ಸಿಟ್ಟು ತರಿಸಿತ್ತು. ಆಗ ನಾನು ಕೊಂಚ ಪ್ರತಿಭಟಿಸಿದ್ದೆ. ವರ್ಗಾವಣೆ ಮಾಡಿಕೊಂಡದ್ದಕ್ಕಲ್ಲ. ನೀನು ನಡೆದುಕೊಂಡ ರೀತಿಗೆ. ಆಗ ನೀನು ಸಮಜಾಯಿಸಿ ಕೊಟ್ಟದ್ದು, ನೀನು ನಿನ್ನ ಅಪ್ಪ ಅಮ್ಮಂದಿರ ಇಳಿವಯಸ್ಸಿನಲ್ಲಿ ಜೊತೆಗಿರಬೇಕು. ಹಳ್ಳಿಯ ಸೊಗಡಿಗೆ ಹತ್ತಿರವಿರಬೇಕು, ಅಂತ. ಅಂದು ಕಾಲೇಜಿನಿಂದ ಬಂದ ನೀನು ಎಂಥದೋ ದುಗುಡದಲ್ಲಿದ್ದೆ. ಮನೆಗೆ ಬಂದವನೇ ಮಾತು ಕಳೆದುಕೊಂಡವನಂತೆ ಕೂತು ಬಿಟ್ಟಿದ್ದೆ. ನಾನು ಮಾತಾಡಿಸಿದ್ದಕ್ಕೆ, ನಿನ್ನ ಟ್ರಾನ್ಸ್ಫರ್ ಆರ್ಡರನ್ನು ತಣ್ಣಗೆ ನನ್ನ ಕೈಗಿಟ್ಟೆ. ನನಗೆ ನಿನ್ನ ನಡತೆ ಅತಿ ಅನ್ನಿಸಿತ್ತು ಚಂದು. ಪ್ರಗತಿಪರವಾಗಿ ಯೋಚಿಸಬಲ್ಲ, ಪ್ರಾಮಾಣಿಕತೆಯ ಬಗ್ಗೆ ಬರೆಯಬಲ್ಲ, ಭಾಷಣ ಬಿಗಿಯಬಲ್ಲ ನಿನಗೆ ಅಂದು ಏನಾಗಿದೆ ಅಂದುಕೊಂಡೆ. ಇದಕ್ಕೆಲ್ಲಾ ಇಷ್ಟೊಂದು ತಲೆಕೆಡಿಸಿಕೊಳ್ಳುವ ಅಗತ್ಯವೇನಿದೆ ಅಂತ ಯೋಚಿಸುತ್ತಾ ನಿನ್ನನ್ನು ಸಮಾಧಾನಗೊಳಿಸಲೆತ್ನಿಸುತ್ತ ನಾನು ಏನೋ ಹೇಳಲುಪಕ್ರಮಿಸಿದೆ...

‘ನೋಡು ಚಂದು, ಈ ಥರ ಸರ್ಕಾರಿ ನೌಕರಿಯಲ್ಲಿರುವವರಿಗೆ ಇದೆಲ್ಲ ಇದ್ದದ್ದೇ, ನೀನು ಇದಕ್ಕೆಲ್ಲ ತುಂಬಾ ಸೆಂಟಿಮೆಂಟಲ್ ಆಗಿ ಕೂತರೆ ಹೇಗೆ ಹೇಳು? ಎಲ್ಲಾ ಸರ್ಕಾರಿ ನೌಕರರಿಗೂ ಅಪ್ಪ ಅಮ್ಮ ಸಂಬಂಧಿಕರು ಅಂತ ಇದ್ದೇ ಇರ‍್ತಾರೆ. ಹಾಗೇನೇ ಅಷ್ಟೋ ಇಷ್ಟೋ ಆಸ್ತಿ ಕೂಡಾ. ಒಬ್ಬ ಸರ್ಕಾರೀ ಕೆಲಸದಲ್ಲಿರುವವ ಇಲ್ಲೇ ಉಳೀಬೇಕೂ ಇಂಥ ಕಡೆಗೇ ವರ್ಗ ತೆಗೋಬೇಕೂ ಅಂತ ಹಟ ಹಿಡಿದು ಕೂತರೆ ಹೇಗೆ ?’ ಇನ್ನೂ ನನ್ನ ಮಾತು ಪೂರಾ ಮುಗಿದಿರಲಿಲ್ಲ.. ನನ್ನ ಜುಟ್ಟು ಹಿಡಿದು ನೀನು ಒಮ್ಮೆಲೇ ಕಿರುಚಿ ಬಿಟ್ಟಿದ್ದೆ.. ‘ನಿನ್ನಂಥ ಕಾಂಕ್ರೀಟು ಕಾಡಲ್ಲಿ ಬೆಳೆದ ಗೂಬೆಗಳಿಗೆ ನನ್ನಂಥವನ ಹಳ್ಳಿಯ ಸಂವೇದನೆಗಳು ಅರ್ಥವಾಗೋದಿಲ್ಲ, ನಿನ್ನ ಕೃತಕ ಬದುಕಿನಲ್ಲಿ ಸಂಬಂಧಗಳು ಪೂರಾ ಸೊರಗಿಬಿಡುತ್ತವೆ.. ಅಪ್ಪ ಅಮ್ಮ ಅಂದರೆ, ನಿನ್ನಂಥವರಿಗೆ ಕೇವಲ ಹೆರುವ ಯಂತ್ರಗಳು.. ಅಷ್ಟೇ.. ನಿನ್ನಂಥ ಗಯ್ಯಾಳಿಗಳಿಗೆಲ್ಲಿ ತಿಳಿಯಬೇಕು ಇದೆಲ್ಲಾ..’

ನಿನ್ನ ಇಂಥ ವರ್ತನೆ ನನಗೆ ತುಂಬಾ ಅನಿರೀಕ್ಷಿತವಾಗಿತ್ತು. ನೀನು ಇಷ್ಟು ಸಣ್ಣವನಾದೆಯಲ್ಲಾ ಅಂತ ಅಸಹ್ಯ ಹುಟ್ಟಿತು. ಅಳು ನುಗ್ಗಿ ಬಂತು. ಹಾಗೇ ತಡೆಯಲಾರದೇ ನಾನೂ ಸಹ ಕಿರುಚಿಕೊಂಡೆ.. ‘ಬಾಯಿಗೆ ಬಂದದ್ದನ್ನೆಲ್ಲಾ ಬೊಗಳಬೇಡ, ಇಂಥ ಮೊಂಡುವಾದಕ್ಕಿಳಿಯುವುದು, ಹೆಂಡತಿಯ ಮೇಲೆ ಕೈ ಮಾಡುವುದು, ಸತ್ಯಕ್ಕೆ ಮುಖಾ ಮುಖಿಯಾಗಲು ಹೆದರುವುದು ಹೇಡಿಗಳ ಲಕ್ಷಣ.. ನಿನ್ನ ಅಪ್ಪ ಅಮ್ಮಂದಿರನ್ನು ಪಾಲಿಸಬೇಕೆನ್ನುವ ನಿನ್ನ ಆಸಕ್ತಿಯ ಹಿಂದಿರುವ ಸ್ವಾರ್ಥ, ಸಣ್ಣತನ ಹೇಸಿಗೆ ತರಿಸುತ್ತಿದೆ. ನಿನ್ನಂಥವನು ಅದೇನು ಬರೆಯುತ್ತಿಯೋ ನನಗಂತೂ ತಿಳಿಯದು..’

ಛೆ, ಚಂದು, ಇವೆಲ್ಲಾ ನನ್ನನ್ನು ಹೀಗೇಕೆ ಕಾಡುತ್ತಿವೆ? ಆ ನೆನಪುಗಳೇಕೆ ಕತ್ತಲೆಗೆ ಹಚ್ಚಿಕೊಂಡ ದೊಂದಿಯಂತೆ ಬಿಚ್ಚಿಕೊಂಡು ಉರಿಯಹತ್ತಿವೆ? ಇಷ್ಟೆಲ್ಲಾ ರಾದ್ಧಾಂತದ ಅಗತ್ಯವಿತ್ತೇ ? ನೀನು ಈ ಸಮಯದಲ್ಲಿ ನನಗಾಗಿ ನಮ್ಮಿಬ್ಬರ ಈ ಕಂದನಿಗಾಗಿ ನನ್ನಂತೆಯೇ ಹಂಬಲಿಸುತ್ತಿದ್ದಿಯಾ? ಅಥವಾ.. ಅಂದೇ ಅದನ್ನೆಲ್ಲಾ ನುಂಗಿಕೊಂಡು ನಾನೇ ತೆಪ್ಪಗಿದ್ದು ಬಿಡಬೇಕಿತ್ತೇ ? ಅಲ್ಲಾ, ಆ ದಿನ ನನಗೆ ಹಾಗೆ ಚಟೀರ್ ಅಂತ ಕೆನ್ನೆಗೆ ಭಾರಿಸಲು ನಿನಗೆ ಮನಸ್ಸಾದರೂ ಹೇಗೆ ಬಂತು? ಅದೇಕೆ ಹಾಗೆ ಆ ದಿನ ದೆವ್ವ ಹಿಡಿದವನಂತೆ ಹ್ಞೂಂಕರಿಸಿದೆ ? ಅಬ್ಬಾ, ಆಗಿನ ನಿನ್ನ ಅವತಾರ ನನಗೀಗಲೂ ನಡುಕ ಹುಟ್ಟಿಸುತ್ತಿದೆ.. ನೀನು ಕೊಟ್ಟ ಏಟಿಗೆ ಕಣ್ಣುಗಳು ಮಂಜಾಗಿ, ತಲೆ ಸುತ್ತು ಬಂದು ಬಿದ್ದುಬಿಟ್ಟೆ.. ನೀನೋ ಒಮ್ಮೆಯೂ ಹತ್ತಿರಕ್ಕೆ ಬಂದು ಏನಾಯ್ತು ಅಂತ ಕೇಳುವ ಸೌಜನ್ಯವನ್ನೂ ಸಹ ತೋರಲಿಲ್ಲ. ಅದಿರಲಿ, ಆ ರಾತ್ರಿ ಕಳೆದು ಬೆಳಗಾದರೂ ‘ಏನೋ ಆಗಿದ್ದು ಆಗಿ ಹೋಯ್ತು’ ಅಂತ ಸಮಾಧಾನ ಮಾಡಲೂ ಮುಂದೆ ಬರಲಿಲ್ಲ. ನಮ್ಮಿಬ್ಬರ ಮಗಳಿಗೀಗ ನಾಲ್ಕು ವರ್ಷ. ಮದುವೆಯಾದ ಎರಡು ವರ್ಷಕ್ಕೆ ಹುಟ್ಟಿದವಳು, ಇಷ್ಟೂ ವರ್ಷಗಳಲ್ಲಿ ನಾನು ತವರು ಮನೆಗೆ ಅಂತ ಹೋಗಿದ್ದು ಬೆರಳೆಣಿಕೆಯಷ್ಟು ಸರ್ತಿ ಮಾತ್ರ. ಅಮ್ಮನನ್ನು ಬಿಟ್ಟರೆ, ಅಪ್ಪ ಒಮ್ಮೆಯೂ ನನಗೆ ಮುಖಕೊಟ್ಟು ಮಾತಾಡಿಲ್ಲ. ಅಮ್ಮನೇ ಆಗಾಗ ನಿನ್ನೂರಿಗೆ ಬಂದು ನನ್ನ ನೋಡಿಕೊಂಡು ಹೋಗುತ್ತಿದ್ದಳು. ಅಪ್ಪ ಬರದೇ ಇದ್ದದ್ದು ಕೂಡ ನನ್ನನ್ನು ಹಂಗಿಸಲು ನಿನಗೊಂದು ಕುಂಟು ನೆಪವಾಗಿತ್ತು. ನಿನ್ನ ಇಂಥ ವರ್ತನೆಗೆ ಕಾರಣಗಳನ್ನು ಹುಡುಕಿ ಸೋತಿದ್ದೇನೆ ಚಂದು...

ಏಳು ವರ್ಷಗಳ ಹಿಂದೆ ಇಲ್ಲಿಗೆ ಬಂದಾಗ ಇದೇ ಹೋಟೆಲಿನಲ್ಲಿ ಉಳಿದಿದ್ದೆವು. ಅದೂ ನಾನು ಈಗ ಉಳಿದುಕೊಂಡ ಪಕ್ಕದ ರೂಮಿನಲ್ಲೇ.. ವಿಳಾಸ ಬರೆಸುವಾಗ ನನ್ನನ್ನು ನಿನ್ನ ಹೆಂಡತಿ ಅಂತ ಎಷ್ಟು ಸಲೀಸಾಗಿ ಹೇಳಿಬಿಟ್ಟಿದ್ದೆ.. ರಿಸೆಪ್ಶನ್ ಕೌಂಟರಿನಲ್ಲಿದ್ದ ಆ ಹುಡುಗಿ, ನನ್ನನ್ನು ಮೇಲಿಂದ ಕೆಳಗಿನವರೆಗೂ ಒಮ್ಮೆ ನೋಡಿ, ತುಂಟ ನಗೆ ಬೀರಿದ್ದಳು..

ಅಬ್ಬಾ, ಹೀಗೆ ಸಾಯುವ ಧೈರ್ಯ ತುಂಬಿಕೊಳ್ಳಲೇ ನನಗೆ ಎರಡು ದಿನಗಳು ಹಿಡಿದವು.. ಸಾಯಬೇಕೆಂದು ಇಲ್ಲಿಗೇ ಯಾಕೆ ಬಂದೆ? ಅನ್ನುವುದಕ್ಕೂ ನನ್ನಲ್ಲಿ ಉತ್ತರವಿಲ್ಲ. ಬಂದ ಮೊದಲ ದಿನ ರಾತ್ರಿಯವರೆಗೂ ಇದೇ ಬಂಡೆಯ ಪಕ್ಕದಲ್ಲಿ ಕೂತು, ನಂತರ ಸೀದಾ ನಡೆದು ಹೋಟೆಲ್ ರೂಮು ಹಿಡಿದಿದ್ದೆ.. ಅದರ ಮಾರನೇಯ ದಿನ,ಅಂದರೆ ಇಂದು, ಇದೇ ನನ್ನ ಜೀವನದ ಕೊನೆಯ ದಿನವೆಂಬಂತೆ ಈ ಪುಟ್ಟ ಊರಿನ ರಸ್ತೆಗಳಲ್ಲೆಲ್ಲಾ ಮಗಳ ಕೈ ಹಿಡಿದು ಓಡಾಡಿದೆ. ಅವಳು ಕೇಳಿದ್ದನ್ನೆಲ್ಲಾ ಕೊಡಿಸಿದೆ..ಕಡಲ ತಡಿಯನ್ನ ತಲುಪುವ ಹೊತ್ತಿಗೆ ಮತ್ತೊಂದು ಸಾಯಂಕಾಲ ಬಂದಿದೆ...ಎಂದೂ ಕಡಲನ್ನೇ ಕಾಣದಿದ್ದ ನಮ್ಮ ಮಗಳು ಸಮೃದ್ಧಿ, ಹಿರಿ ಹಿರಿ ಹಿಗ್ಗುತ್ತಿದ್ದಾಳೆ. ದೂರದಲ್ಲಿ ಅಲೆಗಳ ಊರೊಳಗಿಂದ, ಅವುಗಳ ಎದೆಯ ಮೇಲಿನ ಮುದುಕಾದ ಸೂರ್ಯ, ತನ್ನ ಸಾಯುವ ಮುಂಚಿನ ಕೆಂಪನ್ನು ಚೆಲ್ಲಿ, ಅವುಗಳ ಕುಣಿತದಲ್ಲಿ ಪ್ರತಿಫಲಿಸುತ್ತಿದ್ದಾನೆ. ಇಡೀ ಕಡಲ ತಡಿ ಗಿಜಿಗುಡುತ್ತಿದೆ. ಕೆಲವರು ಅಲೆಗಳೊಡನೆ ಆಟವಾಡುತ್ತಿದ್ದಾರೆ, ಕೆಲವರು ನೆಂದು ತೊಪ್ಪೆಯಾಗಿ ಅರೆಬೆತ್ತಲಾಗಿ ಮರಳಲ್ಲಿ ಉರುಳಾಡುತ್ತಿದ್ದಾರೆ. ಮತ್ತೆ ಕೆಲವರು ನೀರಿಗಿಳಿಯುತ್ತಿದ್ದಾರೆ.

ಮರಳ ದಿನ್ನೆಯೊಂದರ ಮೇಲೆ ಕೂತಿದ್ದ ನನ್ನ ಕೈಬಿಡಿಸಿಕೊಂಡು, ಸಮೃದ್ಧಿ ಹತ್ತರದಲ್ಲೇ ಆಡುತ್ತಿದ್ದ ಮಕ್ಕಳ ಗುಂಪಿನತ್ತ ಓಡುತ್ತಿದ್ದಾಳೆ. ಕೂತಲ್ಲೇ ನನಗೆ ಮನಸ್ಸು ಪೂರಾ ಖಾಲಿಯಾಗುತ್ತಿದೆ ಅನಿಸುತ್ತಿದೆ. ಎದೆಯ ಭಾವಗಳೆಲ್ಲಾ ಬತ್ತಿ ಹೋಗುತ್ತಿರುವಂಥಾ ಅನುಭವವಾಗತೊಡಗಿದೆ. ಭಾವಗಳೆಲ್ಲಾ ಬಯಲಾಗಿ ಹೋಗುತ್ತಿದೆ ಅನಿಸುತ್ತಾ ವಿಚಿತ್ರ ದುಗುಡವೊಂದು ಮುತ್ತಿಕೊಳ್ಳ ಹತ್ತಿದೆ. ಯಾವುದೋ ಅಪರಿಚಿತ ಲೋಕಕ್ಕೆ ಅನಾಮತ್ತು ಜಿಗಿದು ಚಕಿತಗೊಂಡು, ಮತ್ತೆ ವಾಸ್ತವಕ್ಕೆ ಬಂದವಳಂತೆ ಸುತ್ತಲೂ ಕಣ್ಣಾಡಿಸುತ್ತಿದ್ದೇನೆ. ಕಡಲ ತಡಿಯಲ್ಲಿ ಮರಳೋ ಮರಳೋ. ಜನವೋ ಜನ, ಥರಾವರಿ ಸದ್ದುಗಳು.. ಥರಾವರಿ ಹಕ್ಕಿಗಳು.. ನನ್ನ ಎದುರಿಗೇ ಕೆಲ ಮಕ್ಕಳು ಮರಳಿನಲ್ಲಿ ಮನೆ ಕಟ್ಟುವ ಆಟ ಆಡುತ್ತಿವೆ.. ತಾವು ಕಟ್ಟುತ್ತಿದ್ದ ಮನೆಗಳನ್ನು ಅಲೆಗಳು ಅಳಿಸಿ ಹಾಕುವುದನ್ನು ಬೆರಗಾಗಿ ನೋಡುತ್ತಿವೆ.

ಎಷ್ಟು ನೋಡಿದರೂ, ಎತ್ತ ನೋಡಿದರೂ,ನನ್ನೊಳಗಿನ ದಡಗುಡುವ ದುಗುಡ ತಮಣೆಗೊಳ್ಳುತ್ತಿಲ್ಲ. ಎಂಥದೋ ಉದ್ವೇಗ ಶೂನ್ಯದಂಥ ಅನುಭವ, ನನ್ನ ಪ್ರೀತಿಯ ಚಂದು.. ನಾನು ನಿನ್ನನ್ನು ಈಗಲೂ ಹೀಗೆ ಕರೆಯ ಬೇಕಾದಕ್ಕೇ.. ನನಗೇನೂ ನೋವಿಲ್ಲ.. ಅಂದು ಅಷ್ಟೆಲ್ಲಾ ಕನಸು ತುಂಬಿದವನು.. ಚುಕ್ಕಿ ಚಂದ್ರಮರನ್ನು ಅಂಗೈಯಲ್ಲಿ ತೋರಿಸುವ ಹುಮ್ಮಸ್ಸು ತೋರಿದವನು ನೀನೇ ಅಂತ ನನ್ನಿಂದ ಈಗ ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ..ಬದುಕಲ್ಲಿ ಹೊಸದೊಂದು ಗ್ರಹಿಕೆಯನ್ನು ಕೊಟ್ಟ ನೀನು, ಹೆಂಡತಿ ಅಂದರೆ, ಗೆಳತಿ ಅಂತ ಕೂಡಾ ಅರ್ಥವಾಗದೇ ವರ್ತಿಸಿದ್ದು ಇನ್ನೂ ಈಗಲೂ ಈ ಕ್ಷಣದಲೂ ವಾಕರಿಕೆ ತರಿಸುತ್ತಿದೆ..

ನನ್ನ ಕೊರಳ ಸೆರೆ ಹಿಗ್ಗುತ್ತಿದೆ.. ಸಮೃದ್ಧಿಯನ್ನು ಕರೆದು ಕೊಂಡು ಅದೇ ನಮ್ಮ ಬಂಡೆಯ ಹತ್ತಿರ ಬರುವ ಹೊತ್ತಿಗೆ, ಸೂರ್ಯ ಅದೋ ತನ್ನ ಅಂತಿಮ ಯಾತ್ರೆಯ ಕುರುಹನ್ನು ಅಚ್ಚೊತ್ತುತ್ತಿದ್ದಾನೆ.. ಸಂಜೆಯ ಕತ್ತಲು ಮತ್ತೂ ಇಳಿಯುತ್ತಾ ಗಟ್ಟಿಗೊಳ್ಳುತ್ತಿದೆ. ಜನರ ಗುಂಪು ಕರಗತೊಡಗಿದೆ.. ಚಂದು, ನೀನೊಮ್ಮೆ ಇಲ್ಲೇ ಕೂತು ಅಂದಿದ್ದೆ.. ‘ಬೀನಾ, ಈ ಜಾಗ ಸಾಯುವವರಿಗೆ ಎಷ್ಟು ಸಲೀಸಾಗಿದೆ, ಒಮ್ಮೆ ಕಣ್ಣು ಮುಚ್ಚಿ ಜಿಗಿದರೆ ಸಾಕು, ಅಲೆಗಳ ಎದೆಯಲ್ಲಿ ಹೇಳ ಹೆಸರಿಲ್ಲದಂತೆ ಕರಗಿ ಹೋಗಿಬಿಡಬಹುದು.. ಆದರೆ, ಬೀನಾ.. ಈ ಸಾಯೋದು ಅನ್ನೋದು ಅಷ್ಟು ಸುಲಭ ಅಲ್ಲ ಅಲ್ಲವಾ ?’ ಇಂದು ನಿನ್ನ ಆ ಮಾತು ಮತ್ತೆ ಮತ್ತೆ ನನಗೆ ಯಾಕೆ, ಯಾವ ಕಾರಣಕ್ಕೆ ನೆನಪಾಗುತ್ತಿದೆಯೋ ಗೊತ್ತಿಲ್ಲ ಚಂದು,

ಕಡಲೆಲ್ಲಾ ಕಪ್ಪೋ ಕಪ್ಪೋ. ಕತ್ತಲಲ್ಲಿ ಅಲೆಗಳ ಸದ್ದು ಮುಗಿಲು ಮುಟ್ಟುತ್ತಿದೆ.. ಎಲ್ಲೋ ದೂರದಿಂದ ಕೇಕೆ ನಗು ಮಾತುಗಳು ತೇಲಿಬರುತ್ತಿವೆ.. ಹಾಗೆ ಬಂದ ದನಿಗಳು ಅಲೆಗಳ ಸದ್ದಿನೊಂದಿಗೆ ಪ್ರತಿಧ್ವನಿಸುತ್ತಿವೆ, ಮನಸ್ಸು ಪೂರಾ ಮಸುಕು.. ಎಲ್ಲಾ ಅಸ್ಪಷ್ಟ.. ಇದ್ದಕ್ಕಿದ್ದಂತೆ ನನಗೆ ತುಂಬಾ ಹತ್ತಿರದಲ್ಲೇ ಮನುಷ್ಯರ ದನಿ ಕೇಳಿಸುತ್ತಿದೆ ಚಂದೂ. ನಾನು ಭಯದಿಂದ ಬೆವೆತು ಹೋಗಿದ್ದೇನೆ.. ಈ ಕತ್ತಲಲ್ಲೇ ಅತ್ತ ತಿರುಗಿ ಕಣ್ಣು ಕೀಲಿಸಿ ನೋಡುತ್ತಿದ್ದೇನೆ.. ನಾನು ಕೂತಲ್ಲಿಂದ ಕೆಲವೇ ಕೆಲವು ಅಂತರದಲ್ಲಿ ಯಾರೋ ಒಬ್ಬ ಬಡಬಡಿಸುತ್ತಿದ್ದಾನೆ.. ಮತ್ತೂ ಗಮನವಿಟ್ಟು ನೋಡಿದರೆ, ನಿನ್ನೆ ನೋಡಿದ ಅದೇ ಕುಡುಕ.. ಆ ಅವನ ಮೀಸೆ ನಿನ್ನ ಮೀಸೆಯಂತೆಯೇ ಇದೆ ಚಂದು.. ಆ ಅವನ ದನಿ ನಿನ್ನ ದನಿಯಂತೆಯೇ ಇದೆ ಚಂದೂ.. ಆದರೆ ಅದು ನೀನಲ್ಲ.. ಇದೀಗ ಸಾವು ನನ್ನನ್ನು ಬಿಟ್ಟು, ಮುಳುಗುವ ಸೂರ್ಯನೊಂದಿಗೆ ಓಡಿಬಿಟ್ಟಿದೆ ಅನಿಸುತ್ತಿದೆ ಚಂದು.. ಆ ಕತ್ತಲಲ್ಲೂ ಪುಟ್ಟ ಬಂಡೆಗೆ ಎದುರಾಗಿ ನಿಂತು ಆತ ಅದೇ ರಿಹರ್ಸಲ್‌ನಲ್ಲಿ ತೊಡಗಿದ್ದಾನೆ..

ದಡಿ ಮಳೆಯ ಸೂಚನೆ ನೀಡಿದ್ದ ಮೋಡಗಳು ಅದ್ಯಾಕೋ ಹಾಗೇ ಕರಗಿ ಹೋಗಿ ಸೋನೆ ಮಳೆಗಿಳಿದು ಆ ಸೋನೆ ಮಳೆಯೂ ಮೆಲ್ಲಗೆ ಬಲು ಮೆಲ್ಲಗೆ ದೂಬರು ಮಳೆಗೆ ತಿರುಗಿ ತೊಟ ತೊಟ ತೊಟ್ಟಿಕ್ಕುತ್ತಿದೆ. ಇಂಥ ಮಳೆಯ ಆಟವನ್ನು ಮುಗಿಲ ಪಡಸಾಲೆಯಲ್ಲಿ ಕುಕ್ಕರುಗಾಲಲ್ಲಿ ಕೂತು ವೀಕ್ಷಿಸುತ್ತಿರುವಂತೆ ತಾರೆಗಳು ಕರಗುತ್ತಿರುವ ಕರಿ ಮೋಡಗಳ ಆಜು ಬಾಜಿನಲ್ಲಿ ಅಲ್ಲಲ್ಲಿ ಇಣುಕುತ್ತಿವೆ.

ಭಯ ಮತ್ತಷ್ಟು ಗಟ್ಟಿಯಾಗುತ್ತಿದೆ.. ಚಂದು,ಈ ಪತ್ರವನ್ನು ಹೀಗೇ ಗಾಳಿಯಲ್ಲಿ ತೇಲಿಬಿಡಬೇಕು ಅನಿಸುತ್ತಿದೆ..ಇದು ಹಾಗೇ ನೆಲಕಚ್ಚಬಹುದು.. ನನ್ನ ಕೈಯೊಳಗಿರುವ ಈ ಪತ್ರ ಒಂದೆರಡು ಸಲ ನನ್ನ ಕೈಯಲ್ಲೇ ಯಾಕೋ ಪಟ ಪಟ ಹಾರಿ ಸದ್ದು ಮಾಡಿ ಈಗ.. ಹಾಗೇ ಈಗ ನಿಶ್ಯಬ್ದವಾಗಿದೆ.. ಮಗಳನ್ನು ಬಿಗಿಯಾಗಿ ತಬ್ಬಿಕೊಳ್ಳಬೇಕು ಅನಿಸುತಿದೆ.. ಅದು ಈ ಕತ್ತಲಿಗೆ ಹೆದರಿ ಗುಬ್ಬಚ್ಚಿ ಮರಿಯಾಗಿದೆ..  ಹೀಗೆ ಕೂರುವುದು ಅಸಾಧ್ಯ ಅನಿಸುತ್ತಿದೆ.. ತಡವರಿಸಿಕೊಂಡೇ ಎದ್ದು ನಿಂತಿದ್ದೇನೆ.. ತಲೆಯೋ ಸುತ್ತಿ ಸುತ್ತಿ ಬರುತ್ತಿದೆ.. ಈ ಕಡಲ ಕಡೆಗೆ ನೋಡಲೂ ಸಹ ಹೆದರಿಕೆಯಾಗುತ್ತಿದೆ.. ಹಿಂದಕ್ಕೆ ತಿರುಗಿದೆ ಚಂದು.. ಅದೋ ಅಲ್ಲಿ, ಇಲ್ಲೇ ಕೊಂಚ ದೂರದಲ್ಲಿ ನಾನಿದ್ದ ಹೋಟೆಲಿನಲ್ಲಿ ದೀಪಗಳು ಬೆಳಗುತ್ತಿವೆ.. ನನ್ನನ್ನು ತಬ್ಬಿಕೊಂಡಿರುವ ಸಮೃದ್ಧಿಯ ಕಣ್ಣಿನಲ್ಲೂ ಅಂಥದೇ ದೀಪದ ಮಿಂಚು.. ಕಡಲು ನನ್ನ ಬದುಕಿಗೆ ಹೊಸ ಸೂರ್ಯನನ್ನು ನೀಡಿದೆ ಚಂದೂ.. ಆ ಕುಡುಕ ದೂರವಾಗುತ್ತಿದ್ದಾನೆ.. ಸಮೃದ್ಧಿಯ ಪುಟ್ಟ ಗುಲಾಬಿ ಹಸ್ತದ ಬೆರಳುಗಳು ನನ್ನನ್ನೇ ಹಿಡಿದು ನಡೆಸುತ್ತಿವೆ.. ಮಳೆ..ಸೋನೆ ಮಳೆ..

ಕೆಳಗೆ ಮರಳಿನ ಉಸುಬಿನಲ್ಲಿ ಗುಸುಬಿಳಿಯುತ್ತಿರುವ ಕಾಲುಗಳು..ಮೇಲೆ ಮುಗಿಲಿನಲ್ಲಿ ಇಣುಕೋ ಆಟಕ್ಕಿಳಿದಿರುವ ತಾರೆಗಳು..

ಗುಡ್ ಬೈ ಚಂದು. ಭೂಮಿ ಗೋಲವಾಗಿದೆ.. ಎಂದಾದರೊಂದು ದಿನ ಭೇಟಿಯಾಗೋಣ.. ಸಾಧ್ಯವಾದಲ್ಲಿ ಗಂಡ ಹೆಂಡಿರೆಂಬ ಪಾತ್ರಧಾರಿಗಳ ಮುಖವಾಡಗಳನ್ನು ಖಂಡಿತ ಕಳಚಿಟ್ಟು.

ನಿನ್ನ ಗೆಳತಿ,
ಬೀನಾ.
ಪುಟದ ಮೊದಲಿಗೆ
 
Votes:  6     Rating: 3.17    
 
 
ಸಂಬಂಧಿಸಿದ ಲೇಖನಗಳು
  ಅರವಿಂದ ಬರೆದ ಇನ್ನೂ ಕೆಲವು ಕವಿತೆಗಳು
  ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ
  ಕೃಷ್ಣ ಜನ್ಮಾಷ್ಟಮಿಗೆ ಹೇಮಾ ಕವಿತೆಗಳು
  ಸಂಧ್ಯಾ ಬರೆದ ದಿನದ ಕವಿತೆ
  ಪ್ರಾಚೀ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈದೇಹಿ `ಸೂರ್ಯ ಸಾಂಗತ್ಯ'
  ಬೊಳುವಾರು ಗಾಂಧಿ ಕತೆಗೆ ಕೇಂದ್ರ ಸಾಹಿತ್ಯ ಸಮ್ಮಾನ
  ನಾ.ಡಿಸೋಜಾ ಬರೆದ ಒಂದು ‘ಲೈನ್’ ಪ್ರಕರಣ
  ಅರವಿಂದ ಬರೆದ ದಿನದ ಕವಿತೆ
  ವಿವೇಕ ಶಾನಭಾಗ ಕಂಡ ಜಯಂತ ಕಾಯ್ಕಿಣಿ `ಸ್ವಪ್ನದೋಷ'
  ಜಯಂತ ಕಾಯ್ಕಿಣಿ ಕತೆ `ಸ್ವಪ್ನ ದೋಷ'
  ಕೃತಿಯೂ, ಕರ್ತಾರನ ಪೂರ್ವಗ್ರಹಗಳೂ
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ
  ಬೆಡ್ ರೂಮಿಂದ ಈಚೆಗ ಬರದ ಭೈರಪ್ಪನವರ ಕವಲು
  ಸರ್ಜಾಶಂಕರ್ ಬರೆದ ಹರಳಿಮಠ ಪುರಾಣ
  ಭೈರಪ್ಪ ಎಂದರೆ ಏಕೆ ಕನಲುವಿರಿ?:ಸುಪ್ರೀತ್ ಬರಹ
  ರವಿಪ್ರಕಾಶ್ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ರಾಜೀವ್ ನಾಯಕರ ಕತೆ `ಎಸ್ಸೆಮ್ಮೆಸ್'
  ವಿಜಯಕಾಂತ ಪಾಟೀಲರ ಎರಡು ಕವಿತೆಗಳು
  ಸುಧೀರ್ ಕಾರ್ಕಳ ಬರೆದ ಬಿಯರ್ ಕವಿತೆ
  ಕನ್ನಂಬಾಡಿ ಶಿವಶಂಕರ್ ಕವಿತೆಗಳು
  ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ'
  ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು
  ರಶೀದ್ ಅನುವಾದಿಸಿದ ಒಂದು ಫ್ರೆಂಚ್ ಕವಿತೆ
  ಭಾನುವಾರದ ವಿಶೇಷ: ನಾ. ಡಿಸೋಜ ಕತೆ `ಮೂರು ಕೈ'
  ಹೊನ್ನವಳ್ಳಿ ಆರ್. ದಿಲೀಪ ಬರೆದ ಹತ್ತು ಹೊಳಹು
  ವೈಶಾಲಿ ಕನ್ನಡದಲ್ಲಿ ರಿಲ್ಕ್ ಮತ್ತು ಝೆನ್
  ‘ಹೊಸತೇನೂ ಹೇಳದ ಭೈರಪ್ಪನವರ ‘ಕವಲು’
  ರಜನಿ ಭಟ್ ಕತೆ `ಮಾರಪ್ಪನು ಹಾಗು ಸೋಡಾ ಕುಪ್ಪಿಯೂ..'
  ಎನ್.ಶಂಕರ್ ಬರೆದ ದಿನದ ಕವಿತೆ
  ತಿರುಮಲೇಶ್ ಕನ್ನಡಿಸಿದ ಎಜ್ರಾ ಪೌಂಡ್ ಕವಿತೆಗಳು
  ನನ್ನ ಗೆಳೆಯ ವೆಂಕಟ್, ನನ್ನ ಗಂಡ ವೆಂಕಟ್
  ವೆಂಕಟ್ ಮೋಂಟಡ್ಕ ಬರೆದ ಅಪೂರ್ಣ ಕಥೆ
  ದಿವ್ಯಪ್ರಕಾಶ್ ಬರೆದ ದಿನದ ಕವಿತೆ
  ವಿನಾಯಕ ಭಟ್ ತದ್ದಲಸೆ ಬರೆದ ದಿನದ ಕವಿತೆ
  ರಾಘವೇಂದ್ರ ಹೆಗಡೆ ಬರೆದ ದಿನದ ಕವಿತೆ
  ನಾಗರಾಜ ವಸ್ತಾರೆ ಬರೆದ ನಾಲ್ಕು ಕವಿತೆಗಳು
  ವೈಶಾಲಿ ಹೆಗಡೆ ಕತೆ `ಬೋಳುಮರಕ್ಕೊಂದು ಬಾನು'
  ರೇವನ್ ಜೇವೂರ್ ಬರೆದ ಹನಿಗವಿತೆಗಳು
  ಹರ್ಷಾದ್ ವರ್ಕಾಡಿ ಬರೆದ ದಿನದ ಕವಿತೆ
  ಆನಂದ ಈ.ಕುಂಚನೂರ ಬರೆದ ದಿನದ ಕವಿತೆ
  ಬಾಗೇಶ್ರೀ ಅನುವಾದಿಸಿದ ಬಿಲ್ಕಿಸ್ ಕವಿತೆ
  ವಿಶ್ವ ಶರ್ಮ ಬರೆದ ದಿನದ ಕವಿತೆ
  ಭಾಗೀರಥಿ ಹೆಗಡೆ ಬರೆದ ಕತೆ `ವಂದೇ ಮಾತರಂ'
  ಪದ್ಮನಾಭ ಭಟ್ ಶೇವ್ಕಾರ್ ಬರೆದ ಒಂದಿಷ್ಟು ಕವಿತೆಗಳು
  ರಮೇಶ್ ಸೋಗೆಮನೆ ಬರೆದ ದಿನದ ಕವಿತೆ
  ಎಸ್.ಕುಮಾರ್ ಅನುವಾದಿಸಿದ ಕ್ಯೂಬನ್ ಕವಿತೆ
  ಅನು ಪಾವಂಜೆ ಬರೆದ ದಿನದ ಕವಿತೆ
  ಕವಿ ಮತ್ತು ಕುಣಿಕೆದಾರನ ಯುಗದ ಕುಂದೇರಾ
  ಡಿ.ಎಸ್.ರಾಮಸ್ವಾಮಿ ಬರೆದ ದಿನದ ಕವಿತೆ
  ಬಸವಣ್ಣೆಪ್ಪ ಕಂಬಾರ ಬರೆದ ದಿನದ ಕವಿತೆ
  ಲಕ್ಷ್ಮಿ ಟಿ.ಎನ್. ಬರೆದ ದಿನದ ಕವಿತೆ
  ‘ಮಾಸ್ತಿ’ ಹುಟ್ಟು ಹಬ್ಬಕ್ಕೆ ನಿಸಾರ್ ಬರೆದ ಕವಿತೆ
  ಕಲಿಗಣನಾಥ ಗುಡದೂರು ಬರೆದ ಕತೆ `ಗಾಂಧಿಕಟ್ಟೆ'
  ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ