ಸಿದ್ದಾಪುರದ ಮುಗದೂರಿನ ನಾಟಕದ ಮಾಸ್ತರ ಚಂದ್ರಶೇಖರನಿಗೆ ಮೊನ್ನೆ ಬುಧವಾರ ಸಂತೆಯಲ್ಲಿ ಸಿಕ್ಕ ಸ್ನೇಹಿತ ರಾಮಚಂದ್ರ, ಬಿಳಗಿ ಸಮೀಪದ ಹೂವಿನ ಮನೆ ಗ್ರಾಮದಲ್ಲಿ ಒಂದು ನಾಟಕ ಆಡಿಸುವ ಪ್ರೊಜೆಕ್ಟ್ ದೊರಕಿದೆ, ಅಲ್ಲಿಯ ಮಹಿಳಾ ಮಂಡಳದವರಿಗೆ ನಾಟಕ ಕಲಿಸಬೇಕು. ಒಂದು ಉತ್ತಮವಾದ ನಾಟಕ ಆಯ್ದುಕೊಂಡು ನಾಳೆಯೇ ನೀನು ಹೂವಿನ ಮನೆಗೆ ಹೊರಡ ಬೇಕು ಎಂದು ಮಾತು ಶುರುವಿಟ್ಟ.
ಒಂದೇ ಉಸುರಿನಲ್ಲಿ ಮಾತನಾಡಿದ ರಾಮಚಂದ್ರನನ್ನು ತಡೆದು ಚಂದ್ರಶೇಖರ ‘ಅದ್ಯಾಕೋ ಹಂಗೆ ಆರು ತಿಂಗಳಿಗೆ ಹುಟ್ಟಿದಂಗೆ ಆಡ್ತೀಯಾ? ಬಾ ನಿರ್ಮಲಾ ಹೋಟೆಲ್‌ಗೆ ಹೋಗಿ ಬಿಸಿಬಿಸಿ ಚಾ ಕುಡಿತಾ ಮಾತಾಡೋಣ’ ಎಂದು ಅವನನ್ನು ಎಳೆದುಕೊಂಡು ಹೊರಟ. ಹೋಟೆಲ್‌ನ ಮೂಲೆಯ ಟೇಬಲ್‌ನಲ್ಲಿ ಕುಳಿತುಕೊಂಡು ಚಂದ್ರಶೇಖರ ಚಹಾಕ್ಕೆ ಆರ್ಡರ್ ಮಾಡಿದ. ‘ಈಗ ಹೇಳು ಏನು ವಿಷಯ’ ಎಂದು ಪೀಠಿಕೆ ಹಾಕಿದ. ಅದಕ್ಕೆ ರಾಮಚಂದ್ರ ‘ಎರಡು ದಿನದಲ್ಲಿ ನಾನು ಅಲ್ಲಿಗೆ ಬರುತ್ತೇನೆ. ಅಲ್ಲಿ ಹೋದವನು ವೆಂಕಟರಮಣ ಭಟ್ರು ಅಂತ ಒಬ್ಬರು ಊರ ಮುಖಂಡರಿದ್ದಾರೆ. ನನಗೆ ತುಂಬಾ ಪರಿಚಿತರು ಅವರ ಮನೇಲಿ ಉಳಿದುಕೋ. ನಾನು ಬಂದ ನಂತರ ನಾಟಕಕ್ಕೆ ಪಾತ್ರಗಳನ್ನು ಆಯ್ಕೆ ಮಾಡೋಣವಂತೆ. ಅಲ್ಲಿಯವರೆಗೆ ನೀನು ಊರ ಪರಿಸರ ಹಾಗೂ ಯಾವ ನಾಟಕ ಅಲ್ಲಿ ಸೂಕ್ತ ಎಂಬುದನ್ನು ಗುರುತಿಸಿಟ್ಟುಕೋ’ ಎಂದವನು ಗಡಿಬಿಡಿಯಲ್ಲಿ ಹೊರಟೇ ಬಿಟ್ಟ. ಇಲ್ಲಿಯವರೆಗೆ ಮುಗದೂರು, ಕಣಸೆ, ಕೊಂಡ್ಲಿ ಎಂದು ತಿರುಗುತ್ತ, ಆಚೀಚೆ ಇರುವ ತನ್ನ ಸ್ನೇಹಿತರನ್ನೇ ಕಟ್ಟಿಕೊಂಡು ನಾಟಕ ಮಾಡಿಸುತ್ತಿದ್ದ ಚಂದ್ರಶೇಖರನಿಗೆ ಬರೀ ಹೆಂಗಸರನ್ನು ಕಟ್ಟಿಕೊಂಡು ನಾಟಕ ಆಡಿಸಬೇಕು, ಅದೂ ಹೂವಿನ ಮನೆಯ ಮಹಿಳಾ ಮಣಿಗಳಿಗೆ, ಸವಾಲಿನ ಹಾಗೂ ಖುಷಿಯ ವಿಷಯ ಎನಿಸಿತು.
ಮುಗದೂರಿನಿಂದ ಹೂವಿನ ಮನೆ ಅಬ್ಬಬ್ಬಾ ಅಂದರೆ ಸುಮಾರು ೩೦ ಕಿಲೋ ಮೀಟರ್ ಇರಬಹುದೇನೋ. ಮುಗದೂರಿನಿಂದ ಸಿದ್ದಾಪುರಕ್ಕೆ ಹೋಗಿ ಅಲ್ಲಿಂದ ಹೂವಿನ ಮನೆಗೆ ಬಸ್ಸನ್ನು ಹಿಡಿಯಬೇಕಿತ್ತು. ಮಾರನೇ ದಿನ ಎದ್ದವನೇ ಚಂದ್ರಶೇಖರ ತನ್ನ ಪಕ್ಕಾ ನಿರ್ದೇಶಕನ ದಿರಿಸುಗಳನ್ನು ಹಾಗೂ ಕೆಲವು ನಾಟಕದ ಪುಸ್ತಕಗಳನ್ನು ಒಂದು ಹತ್ತಿಯ ಜೋಳಿಗೆಗೆ ತುಂಬಿಕೊಂಡು ಹೊರಡಲು ರೆಡಿಯಾದ. ಬಸ್ ಸ್ಟಾಂಡ್ ಹಿಂದೆ ಸೈಕಲ್ ಇಟ್ಟು ಹೋಗಬಹುದು ಎಂದುಕೊಂಡು ತನ್ನ ಸೈಕಲ್ ತೆಗೆದುಕೊಂಡು ಸಿದ್ದಾಪುರದ ಕಡೆ ಸವಾರಿ ಹೊರಟ.
********
ಹೂವಿನ ಮನೆಯ ಕಡೆ ಹೋಗುವ ಬಸ್ಸು ತುಂಬಿ ತುಳುಕುತಿತ್ತು. ಹೇಗೋ ಬಸ್ ಹತ್ತಿದವನಿಗೆ ಡ್ರೈವರ್ ಹಿಂದಿನ ಸೀಟೊಂದು ಕಾಲಿ ಇರುವುದು ಕಾಣಿಸಿತು. ಇಷ್ಟೆಲ್ಲ ಜನ ಜೋತಾಡಿಕೊಂಡು ನಿಂತಿದ್ದಾರೆ ಆದರೆ ಯಾರೂ ಆ ಸೀಟಿನೆಡೆಗೆ ಹೋಗುತ್ತಿಲ್ಲವಲ್ಲ ಎಂಬ ಆಶ್ಚರ್ಯದೊಂದಿಗೆ ಎಲ್ಲರನ್ನೂ ದೂಡಿಕೊಂಡು, ಅವರ ಕೆಂಗಣ್ಣನ್ನು ಎದುರಿಸುತ್ತ ಕಾಲಿ ಕಂಡ ಸೀಟಿನೆಡೆಗೆ ನುಗ್ಗಿದ. ಕೆದರಿದ ಕೂದಲಿನ ಸುರೂಪಿ ಹೆಂಗಸೊಬ್ಬಳು ತಾನು ಒಂದು ಸೀಟಿನಲ್ಲಿ ಕುಳಿತದ್ದಲ್ಲದೆ ಪಕ್ಕ ಬಿದಿರ ಬುಟ್ಟಿಯೊಂದನ್ನು ಇಟ್ಟು ಕುಳಿತುಕೊಂಡಿದ್ದಳು. ಪಕ್ಕಕ್ಕೆ ಹೋಗಿ ನಿಂತ ಚಂದ್ರಶೇಖರನನ್ನು ನೋಡಿದ ಹೆಂಗಸು ಬುಟ್ಟಿಯ ಕಡೆಗೊಮ್ಮೆ ನೋಡಿ, ತೆಗೆದು ಸೀಟಿಗೆದುರು ಇರುವ ಜಾಗದಲ್ಲಿ ಇಟ್ಟು ಕುಳಿತುಕೊಳ್ಳಲು ಅನುವು ಮಾಡಿಕೊಟ್ಟಳು. ಚಂದ್ರಶೇಖರ ತನ್ನ ಹೆಗಲ ಚೀಲವನ್ನು ಇಳಿಸಿ ಅವಳ ಪಕ್ಕದಲ್ಲಿ ಕುಳಿತುಕೊಂಡ. ಯಾವುದೋ ಯೋಚನೆಯಲ್ಲಿ ಮುಳುಗಿದ್ದಂತೆ ತೋರುತ್ತಿದ್ದ ಅವಳು ಆಗಾಗ ತಂತಾನೆ ಮಾತನಾಡಿಕೊಳ್ಳುತ್ತಿದ್ದುದನ್ನು ಚಂದ್ರಶೇಖರ ಗಮನಿಸಿದ. ಇವಳ ಸಮಸ್ಯೆ ಏನು ಎಂದು ಕೇಳಬೇಕೆನಿಸಿತು. ಬಸ್ಸು ಹೊರಟ ನಂತರದಲ್ಲಿ ನಿಧಾನಕ್ಕೆ ಮಾತನಾಡಿಸಿದರಾಯ್ತು ಎಂದುಕೊಂಡು ಸುಮ್ಮನಾದ. ಕೆಲವು ನಿಮಿಷಗಳ ನಂತರ ಪಕ್ಕದಲ್ಲಿ ಕುಳಿತವಳು ಸೊಂಟಕ್ಕೆ ಸಿಕ್ಕಿಸಿದ್ದ ಪಾಲಿತಿನ್ ಕವರ್ ತೆಗೆದು ಒಂದು ಹಿಡಿ ಅಡಿಕೆ, ಎರಡೆರಡು ಎಲೆಗಳನ್ನೂ, ಜೊತೆಗೆ ಒಂದಿಷ್ಟು ತಂಬಾಕಿನ ಎಸಳನ್ನೂ ಬಾಯಿಗೆಸೆದುಕೊಂಡು ಕುಳಿತಳು. ಎಲ್ಲವನ್ನೂ ಗಮನಿಸಿದ ಇವನಿಗೆ ಈಕೆ ಹೂವಿನ ಮನೆಯವಳೇ ಆಗಿದ್ದರೆ ನಾನು ನಿರ್ದೇಶಿಸುತ್ತಿರುವ ನಾಟಕದಲ್ಲಿ ಒಂದು ಪಾತ್ರ ಕೊಡಬಹುದೇನೋ ಎಂದೆನಿಸಿತು.
ಸಿದ್ದಾಪುರದಿಂದ ಹೂವಿನ ಮನೆಗೆ ಹೋಗುವ ಕುಮಟಾ ರಸ್ತೆಯನ್ನು ಇತ್ತೀಚೆಗೆ ರಿಪೇರಿ ಮಾಡಿದ್ದರಿಂದ ಏರು ತಗ್ಗುಗಳಿಲ್ಲದ ಹಾದಿಯಲ್ಲಿಯಲ್ಲಿ ಬಸ್ಸು ತೊಟ್ಟಿಲಂತೆ ತೂಗುತ್ತಿತ್ತು. ಚಂದ್ರಶೇಖರನಿಗೆ ನಿದ್ದೆ ಬಂದಂತೆನಿಸಿ ಪಕ್ಕಕ್ಕೆ ಕುಳಿತವಳನ್ನು ಮಾತನಾಡಿಸುವ ಎಂದುಕೊಂಡು ಅವಳೆಡೆಗೆ ನೋಡಿದ. ಅವಳೋ ಕುಪ್ಪುಸದಿಂದ ಹೊರಗಿಳಿದಿದ್ದ ಎದೆಯನ್ನು ಯಾವುದೇ ಲಜ್ಜೆಯಿಲ್ಲದೆ ಒಳಸೇರಿಸುವುದರಲ್ಲಿ ಮಗ್ನಳಾಗಿದ್ದಳು. ಅವಳ ಈ ಅವತಾರ ನೋಡಿದ ಚಂದ್ರಶೇಖರನಿಗೆ ತಾನು ಹೋಗುತ್ತಿರುವುದು ಹಳ್ಳಿಗೆ ಅಲ್ಲಂತೂ ಎಲ್ಲರೂ ತುಂಬಿದೆದೆಯವರೇ ಆಗಿರುತ್ತಾರೆ. ಹೇಗಪ್ಪಾ ಅವರನ್ನು ನಾಟಕದಲ್ಲಿನ ಗಂಡು ಪಾತ್ರಗಳಿಗೆ ಹೊಂದಿಸುವುದು? ಎಂದು ಪೋಲಿ ಯೋಚನೆಯೊಂದು ಹಾಯ್ದು ಹೋಯ್ತು. ಈತ ಅವಳೆಡೆಗೆ ನೋಡುತ್ತಿರುವುದನ್ನು ಗಮನಿಸಿದ ಆಕೆ, "ತಾವು ಯಾವೂರಿಗೆ ಹೊರಟಿದ್ದು" ಎಂಬಂತೆ ಪ್ರಶ್ನೆ ಎಸೆದು ಮತ್ತೆ ತಾಂಬೂಲ ಧ್ಯಾನ ಮಗ್ನಳಾದಳು. ತಾನು ಹೂವಿನ ಮನೆಗೆ ಹೊರಟಿರುವುದು ಎಂದು ಹೇಳಿ ಸುಮ್ಮನಾದ. ಒಮ್ಮೆಗೆ ಆಶ್ಚರ್ಯಗೊಂಡವಳಂತೆ ಆಕೆ "ಓ ಹೌದಾ ಹಂಗಾದ್ರೇ ನೀವೂ ನಮ್ಮೂರಿಗೆ ಹೊಂಟಿರೋದು" ಎಂದು ಇಷ್ಟಗಲ ನಗೆ ನಕ್ಕಳು. ಕಿಡಕಿಯ ಹೊರ ತಲೆಹಾಕಿ ಪಿಚಕ್ಕನೆ ಉಗುಳಿ, ಏನೋ ಗಡಿಬಿಡಿಗೆ ಬಿದ್ದವಳಂತೆ ಬಾಯಿಯಿಂದ ಹೊರಗಿಳಿದ ಕವಳದ ರಸವನ್ನು ಕೈಯಿಂದ ಒರೆಸಿಕೊಳ್ಳುತ್ತ "ಅಲ್ಲಿ ಯಾರ ಮನೆಗೆ ಹೊರಟಿರೋದು ?" ಎಂಬ ಪ್ರಶ್ನೆ ಕೇಳಿ ಉತ್ತರದ ನಿರೀಕ್ಷೆಯಲ್ಲಿ ಕುಳಿತಳು. ತಾನು ನಾಟಕದ ಮಾಸ್ತರ ಎಂದು ಹೇಳಲಿಚ್ಚಿಸದ ಚಂದ್ರಶೇಖರ "ಭಟ್ರ ಮನೆಗೆ" ಎಂದು ಹೇಳಿ ಸುಮ್ಮನಾದ. "ಅರೇ ಎಂಟ್ರಮಣ ಭಟ್ರ ಮನೆಗೆ ಹೊಂಟಿದ್ರೋ.." ಎಂದು ರಾಗವೆಳೆದಳು. ನಾನು ಹೆಸರೇ ಹೇಳದಿದ್ದರೂ ವೆಂಕಟ್ರಮಣ ಭಟ್ರ ಮನೆ ಎಂದು ಇಕೆಗೆ ಹೇಗೆ ಗೊತ್ತಾಯ್ತು ಎಂದು ಚಂದ್ರಶೇಖರನಿಗೆ ಆಶ್ಚರ್ಯವಾಯ್ತು. ಸ್ವಲ್ಪ ಹೊತ್ತು ಸುಮ್ಮನಿದ್ದ ಆಕೆ "ಓಹೋ ಎಂಟ್ರಮಣ ಭಟ್ರ ಕೂಸು ಮಾಯಮ್ಮನ ನೋಡೋಕೆ ಹೊರಟಿರೋ ಮಾಣಿಯೋ ನೀವು?’ ಎಂದು ಕೇಳಿದಳು. ಬಣ್ಣದಲ್ಲಿ ಮಾತ್ರ ಬ್ರಾಹ್ಮಣನಂತಿರುವ ಚಂದ್ರಶೇಖರನಿಗೆ ತನ್ನನ್ನು ಮಾಣಿ ಎಂದು ಆಕೆ ಕೂಗಿದ್ದಕ್ಕೆ ಒಳಗೊಳಗೆ ಖುಷಿಯಾಯ್ತು. ಆ ಖುಷಿಯಲ್ಲಿ ಮಾತನಾಡುವಾಗ ಅವಳ ಮುಖದಲ್ಲಿ ಉಂಟಾದ ಬದಲಾವಣೆಗಳನ್ನು ಚಂದ್ರಶೇಖರ ಗಮನಿಸಲಿಲ್ಲ. ಮಾಯಾ ಹೇಗಿರಬಹುದು? ಭಟ್ರಿಗೆ ಅವಳೊಬ್ಬಳೇ ಮಗಳೋ ಹೇಗೆ? ಮತ್ತೆ ರಾಮಚಂದ್ರ ಏನೂ ಹೇಳಲೇ ಇಲ್ಲವಲ್ಲಾ! ಗಡಿಬಿಡಿಯಲ್ಲಿದ್ದ ಮರೆತನಂತ ಕಾಣುತ್ತದೆ. ಇರಲಿ ನಾನು ಅಲ್ಲಿಗೇ ಹೋಗುತ್ತಿದ್ದೇನಲ್ಲ ನೋಡಿದರಾಯ್ತು. ಹೇಗಿದ್ದಾಳೋ ಏನೋ? ಹೇಗಾದ್ರೂ ಮಾಡಿ ಅವಳನ್ನು ತಾನು ನಿರ್ದೇಶಿಸುತ್ತಿರುವ ನಾಟಕದ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ಭಟ್ಟರ ಕೂಸು ತೆಳ್ಳಗೆ ಬೆಳ್ಳಗೆ ಚೆನ್ನಾಗೇ ಇರ‍್ತಾಳೆ. ಒಳಗೊಳಗೆ ಖುಷಿಯಾದ ಚಂದ್ರಶೇಖರ ಸಾಧ್ಯವಾದರೆ ಅಲ್ಲಿರುವಷ್ಟು ದಿನ ಭಟ್ಟರ ಕೂಸಿನ ಜೊತೆ ಚೆನ್ನಾಗೇ ಇದ್ದು ತನ್ನ ಕಾಲೇಜು ದಿನಗಳ ಯೋಚನೆಯಂತೆ ಭಟ್ಟರ ಕೂಸನ್ನೇ ಮದುವೆಯಾಗುವ ಕನಸೂ ಕೈಗೂಡಿಸಿಕೊಳ್ಳುವುದು ಎಂದು ಲೆಕ್ಕ ಹಾಕಿದ. ಕ್ಷಣದಲ್ಲಿ ಎಲ್ಲವನ್ನೂ ಯೋಚಿಸಿದ ಚಂದ್ರಶೇಖರ ಅವಳ ಪ್ರಶ್ನೆಗೆ ಏನೂ ಉತ್ತರ ಕೊಡದೆ ಸುಮ್ಮನಾದ. ತಾನು ಆಡಿಸಲು ಹೊರಟಿರುವ ನಾಟಕಕ್ಕಿಂತ ಬ್ರಾಹ್ಮಣರ ಕೂಸಿನ ಮನಸು ಕದಿಯಲು ಏನೇನು ಮಾಡಬಹುದು ಎಂಬುದನ್ನು ಯೋಚಿಸುತ್ತ ಹಾಗೆಯೇ ನಿದ್ದೆ ಹೋದ.
ಭುವನಗಿರಿಯ ಕೆರೆ ದಾಟುತ್ತಲೇ ಇರುವ ಕ್ರಾಸ್‌ನಲ್ಲಿ ಬಸ್ಸು ತಿರುಗಿಕೊಂಡಾಗ ಪಕ್ಕನೇ ಈತನಿಗೆ ಎಚ್ಚರವಾಯಿತು. ‘ಇನ್ನೇನು ಒಂದು ಹತ್ತಿಪ್ಪತ್ತು ನಿಮಿಷ ಅಷ್ಟೇ ಊರು ಬಂದು ಬಿಡತೈತಿ’ ಎಂದು ಪಕ್ಕಕ್ಕೆ ಕುಳಿತವಳು ಹೇಳಿದಳು. ಇವನು ಓಹೋ ಎಂದು ಮುಖ ಮಾಡಿ ಕುಳಿತ. ಇಲ್ಲಿಯವರೆಗೆ ಎದುರು ಇಟ್ಟ ಬುಟ್ಟಿಯ ಕಡೆಗೆ ಗಮನ ಹರಿಸದ ಈತ ಅದರಿಂದ ಬರುತ್ತಿರುವ ಶಬ್ಧದಿಂದ ಕುತೂಹಲ ತಾಳಲಾರದೆ ಎದುರಿರುವ ಬುಟ್ಟಿಯ ಕಡೆಗೆ ಬೆರಳು ಮಾಡಿ ಏನದು ಎಂದು ಅವಳನ್ನು ಕೇಳಿದ. ‘ಓ ಅದಾ? ನಾಟಿ ಕೋಳಿ. ಸಂತೆಗೆ ಅಂತ ತಗಂಡು ಹೋಗಿದ್ದೆ ಆದರೆ ನಿನ್ನೇನೆ ಸಂತೆ ಮುಗಿದು ಹೋಯ್ತಂತೆ ಅದ್ಕೆ ವಾಪಾಸ್ ತಗಂಡು ಬಂದೆ’ ಎನ್ನುತ್ತಾಳೆ. ಅರೇ ಇದೇನಿದು ಸಿದ್ಧಾಪುರದ ಸುತ್ತಮುತ್ತಲಿನ ಎಲ್ಲರಿಗೂ ತಿಳಿದಿದೆ ಬುಧವಾರ ಸಂತೆಯೆಂದು ಇವಳಿಗೆ ಗೊತ್ತಿರಲಿಲ್ಲವಾ? ಚಂದ್ರಶೇಖರ ಕ್ಷಣ ಯೋಚಿಸಿದ. ತನ್ನ ಯೋಚನೆಯನ್ನು ಅವಳಿಗೆ ತಿಳಿಸುವಾ ಎಂದುಕೊಂಡು ಅವಳೆಡೆಗೆ ನೋಡಿದ ಆಕೆ ಆಗಲೇ ಇನ್ನೊಂದು ಕವಳಕ್ಕೆ ರೆಡಿಯಾಗುತ್ತಿದ್ದಳು.
*******
‘ಯಾರ್ರೀ ಅದು ಹೂವಿನ ಮನೆ ಸ್ಟಾಪ್‌ನವರು ಇಳಿದುಕೊಳ್ರೀ’ ಎಂದು ಕಂಡಕ್ಟರ್ ಕೂಗಿದ್ದನ್ನು ಕೇಳಿದ ಚಂದ್ರಶೇಖರ ಸೀಟಿನಿಂದ ಮೇಲೆದ್ದ. ಬಸ್ಸಿನಿಂದ ಇಳಿದು ಆಚೀಚೆ ನೋಡಿ ಭಟ್ಟರ ಮನೆ ದಾರಿ ಯಾರನ್ನು ಕೇಳುವುದು ಎಂದು ನೋಡುತ್ತಿದ್ದ. ಅಷ್ಟರಲ್ಲೇ ಬಸ್ಸಿನೊಳಗಿಂದ ಆ ಹೆಂಗಸು ಹಿಡಿರೀ ಹಿಡಿರೀ ಎಂದು ಕೂಗಿಕೊಂಡದ್ದನ್ನು ಇತ ಕೇಳುತ್ತಾನೆ. ಯಾಕೆ ಎಂದು ಯೋಚಿಸುವಷ್ಟರಲ್ಲಿ ಕೊ ಕ್ಕೊ ಕ್ಕೋ... ಎನ್ನುತ್ತ ಕೋಳಿಯೊಂದು ಈತನ ತಲೆಯನ್ನು ಸವರಿ ಹಾರಿಹೋಯ್ತು. ಅದರ ಹಿಂದೆಯೇ ಅದೇ ಕೆದರಿದ ಕೂದಲ ಹೆಂಗಸು ಹಿಡ್ಕೋಳಿ ಹಿಡ್ಕೋಳಿ ನನ್ನ ಕೋಳಿ ಹಾರ್‌ಹೋಯ್ತು ಎಂದು ಕೂಗುತ್ತಾ ತಡಬಡಿಸಿ ಬಸ್ಸಿಳಿಯಲು ಹೆಣಗುತ್ತಿದ್ದಳು. ಬಸ್ಸಿಳಿದು ನಿಂತ ಚಂದ್ರಶೇಖರನಲ್ಲಿ ಅದೆಲ್ಲಿತ್ತೋ ಉಮೇದು ಕೋಳಿಯ ಹಿಂದೆ ಓಡತೊಡಗಿದ. ಕೋಳಿ ಓಡಿ ಓಡಿ ಸುಸ್ತಾಗಿ ವಿಶಾಲ ಬಯಲಿನ ಮಧ್ಯೆ ನಿಂತಿತು. ಈತ ಬಾ ಬಾ ಬಾ ಎನ್ನುತ್ತ ಕಾಲಿ ಕೈಯಲ್ಲಿ ಕಾಳು ಹಿಡಿದವನಂತೆ ನಟಿಸುತ್ತ ಕೋಳಿಯನ್ನು ಹಿಡಿದುಕೊಂಡ. ಅವನ ಹಿಂದೆ ಓಡಿ ಬಂದ ಹೆಂಗಸು ಈತನಿಂದ ಕೋಳಿಯನ್ನು ತೆಗೆದುಕೊಂಡು ಆತ ಕೋಳಿಯನ್ನು ಹಿಡಿಯುವ ಹುಮ್ಮಸ್ಸಿನಲ್ಲಿ ಬಿಟ್ಟು ಓಡಿ ಬಂದಿದ್ದ ಚೀಲವನ್ನು ಕೊಟ್ಟು ಸಣ್ಣ ಹುಡುಗಿಯಂತೆ ನಾಚಿ ನಕ್ಕಳು. ಏನೋ ಅದ್ಭುತವಾದುದನ್ನು ಸಾಧಿಸಿದೆ. ಊರಿಗೆ ಕಾಲಿಡುತ್ತಲೇ ಒಂದು ಜಯ ಸಿಕ್ಕಿತು, ಇನ್ನು ನಾಟಕ ಚೆನ್ನಾಗಾಗುವುದಂತು ಗ್ಯಾರಂಟಿ ಎಂದು ಚಂದ್ರಶೇಖರ ಅಂದುಕೊಂಡ. ವೆಂಕಟ್ರಮಣ ಭಟ್ರ ಮನೆ ವಿಳಾಸವನ್ನು ಅವಳಲ್ಲೇ ಕೇಳಿದರಾಯ್ತು ಎಂದುಕೊಳ್ಳುವುದರೊಳಗಾಗಿ ಆಕೆ ಅಷ್ಟು ದೂರ ಹೋಗಿಯಾಗಿತ್ತು. ಅವಳೆಲ್ಲಿ ಮೊದಲೇ ಹೋಗಿ ವೆಂಕಟ್ರಮಣ ಭಟ್ಟರಲ್ಲಿ ಮಾಯಮ್ಮನ ನೋಡೋಕೆ ಯಾರೋ ಗಂಡು ಬರ‍್ತಾ ಇದ್ದಾರೆ ಎಂದು ಹೇಳಿ ಬಿಡುವಳೋ ಎಂದು ಇವನಿಗೆ ಕ್ಷಣ ಭಯವಾಯ್ತು.
ರಸ್ತೆ ದಾಟಿ ಆಚೆ ಇರುವ ಕಿರಾಣಿ ಅಂಗಡಿಯಲ್ಲಿ ಭಟ್ಟರ ಮನೆ ದಾರಿ ಕೇಳಿದರಾಯ್ತು ಎಂದು ಅಲ್ಲಿಂದ ಹೊರಟ. ಕಿರಾಣಿ ಅಂಗಡಿಯಲ್ಲಿ ಒಂದು ಸಿಗರೇಟು ಕೊಂಡು ಅವರಲ್ಲಿ ಇನ್ನೇನು ವೆಂಕಟ್ರಮಣ ಭಟ್ರ ಮನೆ ವಿಳಾಸ ಕೇಳಬೇಕು ಎಂದುಕೊಳ್ಳುವಷ್ಟರಲ್ಲೇ ಅಂಗಡಿಯಾತ ‘ವೆಂಕಟ್ರಮಣ ಭಟ್ರ ಮನೆ ದಾರಿ ಕೇಳೋಕೆ ಯೋಚನೆ ಮಾಡ್ತಾ ಇದಿರೋ’ ಎಂದು ನಗುತ್ತ ಕೇಳಿದ. ಚಂದ್ರಶೇಖರನಿಗೆ ಆಶ್ಚರ್ಯದ ಜೊತೆಗೆ ಈ ಊರಲ್ಲಿ ಭಟ್ರ ಪಾಪ್ಯುಲಾರಿಟಿ ಬಗ್ಗೆ ಹೆಮ್ಮೆ ಎನಿಸಿತು. ಸ್ನೇಹಿತ ಹೇಳಿದಂತೆ ವೆಂಕಟ್ರಮಣ ಭಟ್ರು ಈ ಊರಿನ ಎಲ್ಲರಿಗೂ ಪರಿಚಯವಿರುವಂತಹ ದೊಟ್ಟ ಮನುಷ್ಯರೇ ಇರಬಹುದು. ಆದರೇ ಅಂಗಡಿಯವನ್ಯಾಕೆ ಅದನ್ನು ವ್ಯಂಗ್ಯ ನಗುವಿನ ದಾಟಿಯಲ್ಲಿ ಕೇಳಿದ ಎಂಬುದು ಆತನಿಗೆ ತಿಳಿಯಲಿಲ್ಲ.
ಭಟ್ರ ಮನೆ ಹಾದಿ ಕೇಳಿ ಹೊರಟವನಿಗೆ ಮೊದಲು ಸಿಕ್ಕಿದ್ದು ಹರಿಜನರ ಕೇರಿ. ಕೇರಿ ದಾಟುತ್ತಲೇ ಎಲ್ಲ ಗುಡಿಸಲುಗಳನ್ನು ನುಂಗಿ ಹಾಕುವಂತೆ ಕಾಣುತ್ತಿತ್ತು ವಿಶಾಲವಾದ ಮನೆ. ಏನೊಂದು ವಿಚಾರಿಸದೆ ಖಾತ್ರಿಗೊಂಡವನಂತೆ ಆ ಮನೆಯ ಕಡೆ ಹೆಜ್ಜೆ ಹಾಕಿದ. ಮಾಯಮ್ಮನ ನೊಡೋಕೆ ಬಂದಿರೋ ಗಂಡೋ ನೀವು? ಎಂದು ಯಾರೋ ಕೂಗಿದಂತಾಯ್ತು. ಆಚೀಚೆ ನೋಡಿದ ಯಾರೂ ಕಾಣಲಿಲ್ಲ. ತನ್ನ ಭ್ರಾಂತಿಗೆ ತಾನೇ ನಗುತ್ತ. ಹೇಗಿರಬಹುದು ಮಾಯಾ? ಎಂದು ಯೋಚಿಸುತ್ತ ದೊಡ್ಡ ಮನೆಯ ಎದುರು ಬಂದು ನಿಂತ.
ಅಡಿಕೆ ಮರಗಳ ಕಂಬಗಳನ್ನು ನಿಲ್ಲಿಸಿ ಮೇಲೆ ಅಡಿಕೆಯ ದಬ್ಬೆ ಹೊದೆಸಿ ಮಾಡಿದ ಚಪ್ಪರವಿರುವ ದೊಡ್ಡ ಅಂಗಳದಲ್ಲಿ ಬಂದು ನಿಂತಾಗ ಅಲ್ಲಿ ಯಾರೂ ಕಾಣಲಿಲ್ಲ. ಎತ್ತರದ ಹಜಾರದ ಮೆಟ್ಟಿಲು ಹತ್ತಿ ಕಡುಗಪ್ಪು ಬೀಟೆಯ ಮರದಿಂದ ಮಾಡಿದ ದೊಡ್ಡ ಬಾಗಿಲಿಗೆ ಇದ್ದ ಚಿಲಕವನ್ನು ಬಡಿದು, ಒಂದೆರಡು ಸಲ ಸದ್ದು ಮಾಡಿ ಕಾಯುತ್ತಿದ್ದ. ಕೆಲವು ನಿಮಿಷಗಳಾದರೂ ಯಾರೂ ಬಾಗಿಲು ತೆಗೆಯುವ ಲಕ್ಷಣ ಕಾಣಲಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿ ಸುಮ್ಮನಾಗುವ ಬದಲು ಭಟ್ರೇ... ಎಂದು ಕೂಗಿದ. ಮಾಯಾ ಬಂದು ಬಾಗಿಲು ತೆಗೆಯಬಹುದು ಎಂದು ಕಲ್ಪಿಸಿಕೊಂಡ. ಮಾಯಾ ಎಂದು ಕೂಗಲೇ? ಎಂದು ಕ್ಷಣ ಯೋಚಿಸಿದ. ಬಂದೆ ಬಂದೆ ಎಂದು ಗಂಡು ಧ್ವನಿ ಅದ್ಯಾವುದೋ ತುದಿಯಿಂದ ಕೂಗಿದಂತಾಯ್ತು. ಕೆಲ ಕ್ಷಣಗಳ ನಂತರ ಯಾರದೂ? ಎಂದು ಪ್ರಶ್ನಿಸುತ್ತ ಗಂಡು ಜೀವವೊಂದು ಬರುತ್ತಿರುವುದನ್ನು ಈತನ ಕಿವಿ ಗಮನಿಸಿತು. ವ್ಯಕ್ತಿ ಹತ್ತಿರ ಬರುತ್ತಿರುವುದನ್ನು ಈತ ಆ ಧ್ವನಿ ದೊಡ್ಡದಾಗುವುದರಿಂದ ಗುರುತಿಸಿದ. ಮಾಯಾ ಜೊತೆಗಿರಬಹುದೇ? ಅಥವಾ ಬಾಗಿಲ ಮರೆಯಲ್ಲಿ ನಿಂತು ನನ್ನ ಕದ್ದು ನೋಡಬಹುದೇನೋ ಎಂದುಕೊಂಡ. ಅಥವಾ ಆ ಹೆಂಗಸು ಬಂದು ಹೇಳಿರಬಹುದೇನೋ? ಸೀರೆ ಗೀರೆ ಉಟ್ಟುಕೊಂಡು ತಯಾರಾಗುತ್ತಿರಬಹುದು. ಹಾಗೆನಾದ್ರೂ ಆಗಿದ್ರೇ ನಾನು ಏನು ಮಾಡುವುದು ಎಂದು ಯೋಚಿಸಿದ.
ಬಾಗಿಲು ಕಿರ್ ಎಂದು ಶಬ್ಧ ಮಾಡುತ್ತ ತೆರೆದುಕೊಂಡಿತು. ತಲೆಗೆ ರುಮಾಲು ಸುತ್ತಿದ್ದ ಬೆಳ್ಳಂ ಬಿಳಿ ಬಣ್ಣದ ದೇಹವೊಂದು ಇಣುಕಿ ನೋಡಿತು. ಇವರೇ ವೆಂಕಟ್ರಮಣ ಭಟ್ರು ಇರಬಹುದೋ ಎಂದು ಈತ ಯೋಚಿಸುವುದನ್ನು ಗಮನಿಸಿದ ವ್ಯಕ್ತಿ ‘ಯಾರು ನೀವು, ಏನಾಗಬೇಕಿತ್ತು?’ ಎಂದು ಪ್ರಶ್ನೆ ಎಸೆದು ನೋಡುತ್ತ ಕುಳಿತಿತು. ಅವರ ಮುಖದಲ್ಲಿದ್ದ ಆಶ್ಚರ್ಯ ಹಾಗೂ ಕುತೂಹಲ ಗಮನಿಸಿದ ಚಂದ್ರಶೇಖರ ಆ ಹೆಂಗಸು ಇವರಿಗೆ ಏನೂ ಹೇಳಲಿಲ್ಲ ಎಂಬುದನ್ನು ಊಹಿಸಿದ. ಆದರೂ ತಾನು ಯೋಚಿಸಿದಂತೆ ನಡೆದರೆ ನಾನು ಮಾಯಾಳನ್ನು ಮದುವೆಯಾಗುವುದು ಗ್ಯಾರಂಟಿಯಲ್ಲವೇ ಎಂದುಕೊಂಡು ನಿಂತಲ್ಲೇ ಆಚೀಚೆ ಮಾಯಾ ಕಾಣಬಹುದೋ ಎಂದು ಗಮನಿಸಿದ.
ಚಂದ್ರಶೇಖರ ತನ್ನ ಹೆಸರು ಮತ್ತು ಅವರ ಪರಿಚಯದ ರಾಮಚಂದ್ರನ ಕುರಿತು ತಿಳಿಸಿ. ತಾನು ನಾಟಕದ ಮಾಸ್ತರು ಎಂಬುದನ್ನು ಹೇಳಿ, ವೆಂಕಟ್ರಮಣ ಭಟ್ರು... ಎಂದು ರಾಗವೆಳೆದ. ಅವನ ಈ ಸಂಶಯ ಕಂಡ ಎದುರು ನಿಂತ ಆಕೃತಿ ನಾನೇ ವೆಂಕಟ್ರಮಣ ಭಟ್ಟ ಎಂದು ಅವನ ಸಂಶಯವನ್ನು ಬಗೆಹರಿಸಿತು. ‘ನೀವು ಬಂದಿದ್ದು ಒಳ್ಳೆದಾಯ್ತು. ರಾಮಚಂದ್ರನೇ ಕರೆದುಕೊಂಡು ಬರ‍್ತಾನಂತ ಅಂದುಕೊಂಡಿದ್ದೆ. ದಾರಿಯಲ್ಲಿ ಏನು ತೊಂದ್ರೆ ಆಗಿಲ್ಲವಲ್ಲ? ಬನ್ನಿ ಒಳಗೆ’ ಎಂದು ಕರೆದು ಅವರು ಮನೆಯೊಳಗೆ ನಡೆದರು.
ಬೀಟೆ ಮರದಿಂದ ಮಾಡಿದ ಹೆಬ್ಬಾಗಿಲಿನಿಂದ ಒಳಗೆ ಕಾಲಿಡುತ್ತಲೇ ಕೆಲವು ಹೆಜ್ಜೆಗಳ ನಂತರ ಗವ್ವೆನ್ನುವ ಕತ್ತಲು ಕಣ್ಣಿಗೆ ಅಡರಿಕೊಂಡಿತು. ಮುಂದೆ ಎಲ್ಲಿ ಕಾಲಿಡಬೇಕು ಎಂದು ಗೊತ್ತಾಗದೇ ಚಂದ್ರಶೇಖರ ಅಲ್ಲೇ ನಿಂತು ಮುಂದಿನ ದಾರಿ ಕಾಣಬಹುದೋ ಎಂದು ಕಾಯುತ್ತಿದ್ದ. ಒಳಗೆ ಕತ್ತಲಲ್ಲಿ ಲೀನವಾದ ಭಟ್ಟರು ಈತ ಬರದಿರುವುದರಿಂದ ಮತ್ತೆ ವಾಪಸು ಬಂದರು. ಅವರು ಬರುವುದನ್ನು ಹೆಜ್ಜೆ ಸದ್ದಿನಿಂದ ತಿಳಿದ ಈತ ಹೆಜ್ಜೆ ಕಿತ್ತಿಟ್ಟ, ಕತ್ತಲಿಂದ ಮುಂದಿರುವುದು ಕಾಣದ್ದರಿಂದ ಬಾಗಿಲ ಚೌಕಟ್ಟಿಗೆ ದಡಾರನೆ ತಲೆ ಬಡಿಸಿಕೊಂಡ.
ಅಷ್ಟರಲ್ಲೇ ಬಂದ ಭಟ್ಟರು ‘ಅಯ್ಯೋ ತಲೆಗೆ ತಾಗಿತೊ? ಬಗ್ಗಿ ಬನ್ನಿ, ಕತ್ತಲಿದೆ. ಕತ್ತಲು ನಮಗೆ ರೂಡಿಯಾಗಿದೆ’ ಎಂದು ಮುಂದೆ ನಡೆದರು. ಚಂದ್ರಶೇಖರನಿಗೆ ತಾನೆಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿಯಲಿಲ್ಲ. ಅಲ್ಲಲ್ಲಿ ಮಣ್ಣ ಗೋಡೆಯ ಕಂಡಿಯಿಂದ ಬರುವ ಬೆಳಕು ಬಿಟ್ಟರೆ ಅಲ್ಲಿ ನಡು ಹಗಲಿನಲ್ಲೂ ಘೋರ ಕತ್ತಲಿತ್ತು. ಬಾಗಿಲು ಬಂದಾಗೆಲ್ಲಾ ತಡವರಿಸಿ ತಡವರಿಸಿ ತಲೆಯನ್ನು ಆದಷ್ಟು ಬಗ್ಗಿಸಿ ಅವರ ಹಿಂದೆ ಹಿಂದೆ ನಡೆಯತೊಡಗಿದ. ಭಟ್ಟರು ಮುಂದೆ ಹೋಗಿದ್ದರು. ಈತ ಕತ್ತಲಲ್ಲಿ ಕವಣೆ ಬೀಸಿದಂತೆ ನಡೆಯುತ್ತಿದ್ದ. ಅದೆಷ್ಟನೇ ಕೋಣೆಯೋ? ಕೋಣೆಯ ಮೂಲೆಯಿಂದ ಯಾರೋ ಗೆಜ್ಜೆ ಸದ್ದು ಮಾಡುತ್ತ ಅವನ ಹಿಂದಿನಿಂದ ಹೊರಗೆ ಓಡಿ ಹೋದಂತಾಯ್ತು. ಇಲ್ಲಿಯವರೆಗೆ ಧೈರ್ಯದಿಂದ ಹೆಜ್ಜೆ ಹಾಕಿದವನಿಗೆ ಒಮ್ಮೆಗೆ ಭಯ ಎನಿಸಿತು. ತಕ್ಷಣ ಅವನಿಗೆ ಮಾಯಾ ನೆನಪಾದಳು. ಸದ್ದು ಹೋದ ದಾರಿಯಲ್ಲಿ ತಿರುಗಿ ನೋಡಿದ. ಕತ್ತಲೋ ಕತ್ತಲು, ತಾನೆಲ್ಲಿದ್ದೇನೆ ಎಂಬುದೇ ಈತನಿಗೆ ತಿಳಿಯಲಿಲ್ಲ. ಮುಂದೆ ನಡೆದ ಭಟ್ಟರು ಎಲ್ಲಿ ಹೋದರೋ? ತಾನು ಈ ಕತ್ತಲ ಕೂಪದಿಂದ ಹೇಗೆ ಹೊರ ಹೋಗುವುದು ಎಂಬ ಯೋಚನೆಯಲ್ಲಿ ಮುಳುಗಿದ. ತಡಬಡಾಯಿಸಿ ಆದಷ್ಟು ಭಟ್ಟರ ಸಮೀಪಕ್ಕೆ ಹೋಗಲು ಹವಣಿಸಿದ. ಆದರೂ ಹೆಜ್ಜೆ ಕಿತ್ತಿಡುವುದು ಕಷ್ಟವಾದಾಗ ಭಟ್ರೇ... ಎಂದು ಕೂಗಿದ. ಅದೆಲ್ಲಿಂದಲೋ ಕತ್ತಲ ಒಳಗಿಂದ ಎಲ್ಲಿದ್ದೀರಿ ಮಾಸ್ತರೇ? ಇಲ್ಲಿ ಬನ್ನಿ ಹೀಗೆ ಎಂದು ಧ್ವನಿಯೊಂದು ಕರೆದಂತಾಯ್ತು. ಈತನಿಗೆ ತನಗೆ ಮಾತ್ರ ಕಾಣುತ್ತಿಲ್ಲವೋ ಅಥವಾ ಈ ಮನೆಯ ಒಳಗೇ ಹೀಗಿದೆಯೋ ಎಂಬ ಗೊಂದಲ ಉಂಟಾಯ್ತು.
ಕ್ಷಣ ಸುಮ್ಮನೆ ನಿಂತು ಕತ್ತಲಲ್ಲಿರುವ ಬೆಳಕನ್ನು ಗುರುತಿಸಲು ಸಮಯ ಮಾಡಿಕೊಟ್ಟ. ಸ್ವಲ್ಪ ಸಮಯದ ನಂತರ ಅಲ್ಲೆಲ್ಲೋ ದೂರದಲ್ಲಿ ಸಣ್ಣಗೆ ಬೆಳಕು ಬರುತ್ತಿರುವಂತೆ ಕಾಣಿಸತೊಡಗಿತು. ಬೆಳಕು ಕಂಡ ಕಡೆಗೆ ಸರಸರ ಹೆಜ್ಜೆ ಹಾಕಿದ. ಕತ್ತಲ ಕೋಣೆಗಳನ್ನು ದಾಟಿಕೊಂಡು ಬೆಳಕಿರುವ ಕೊನೆಯ ಕೋಣೆಗೆ ಬಂದು ತಲುಪಿದ. ಭಟ್ಟರು ಹಿತ್ತಿಲಲ್ಲಿ ಒಣಗಿಸಿದ ಕಾಳು ಮೆಣಸಿನಲ್ಲಿ ಕಾಲಾಡಿಸುತ್ತ ನಿಂತಿದ್ದರು.
ಈತ ಬರುವುದನ್ನೇ ಕಾಯುತ್ತಿದ್ದವರಂತಿದ್ದ ಭಟ್ಟರು ‘ನನಗೆ ಈ ನಾಟಕ ಗೀಟಕದ ಹುಚ್ಚಿಲ್ಲ ನೋಡಿ. ಅದೇನೋ ನಮ್ಮೂರಿನ ಹೆಂಗಸರ ತಲೆಯಲ್ಲಿ ಆ ರಾಮಚಂದ್ರ ಹುಳಬಿಟ್ಟು ಹೋಗಿದ್ದಾನೆ. ಊರ ಹೆಂಗಸರೆಲ್ಲ ನಾಟಕ ನಾಟಕ ಅಂತ ಒಂದೇ ಸಮನೆ ಒತ್ತಾಯ ಮಾಡಿದ್ದರಿಂದ ಊರ ಹಿರಿಯನಾದ ನಾನು ನಿಮ್ಮನ್ನು ಕರೆಸುವಂತಾಯ್ತು. ಅದಿರಲಿ ಒಳಗಿನ ಕತ್ತಲೆಗೆ ಹೆದರಿಕೊಂಡಿರೋ?’ ಎಂದು ಪ್ರಶ್ನೆ ಎಸೆದು ಒಣಗಿಸಿದ ಕಾಳು ಮೆಣಸಿನ ಬೀಜದಲ್ಲಿ ಕಾಲಾಡಿಸಿ ಬೆರಳಿನಿಂದ ಕಸ ತೆಗೆದು ಎಸೆಯತೊಡಗಿದರು. ‘ಇಲ್ಲಾ, ಹೆದರಿಕೆಯೇನೂ ಆಗಲಿಲ್ಲ, ಆದರೆ ಹೊರಗೆ ದಾರಿಯೆಲ್ಲಿದೆ ಎಂದು ತಿಳಿಯದೇ ಕ್ಷಣ ಗೊಂದವಾಯ್ತು.’ ಎಂದು ಈತ ಹೇಳಿದ್ದನ್ನು ಅವರು ಕೇಳಿಸಿಕೊಂಡಂತಿರಲಿಲ್ಲ.
ಚಂದ್ರಶೇಖರನ ಮಾತಿಗೆ ಯಾವ ಪ್ರತಿಕ್ರಿಯೆಯೂ ನೀಡದೆ ಭಟ್ಟರು ‘ಇಲ್ಲೇ ಹಿಂದೆ ನಮ್ಮ ಹಿತ್ತಿಲು ಮನೆ ಇದೆ. ಗಾಳಿ ಬೆಳಕು ಸಾಕಷ್ಟು ಬರುವಂತ ಮನೆ ಅದು. ನೀವು ನಮ್ಮೂರಲ್ಲಿ ಇರುವಷ್ಟು ದಿನ ಅಲ್ಲಿರಬಹುದು. ಊಟ ತಿಂಡಿಗೆಲ್ಲ ಇಲ್ಲೇ ಪಕ್ಕದಲ್ಲಿರುವ ಪೂಜಾರಿಯ ಹೋಟೆಲಿಗೆ ಹೇಳುತ್ತೇನೆ. ನಿಮಗೆ ಊಟ ಮಾಡಬೇಕೆನಿಸಿದಾಗ ಅಲ್ಲಿ ಹೋಗಿ ಊಟ ಮಾಡಬಹುದು. ಬನ್ನಿ ಹಿತ್ತಿಲ ಮನೆ ತೋರಿಸ್ತೀನಿ’ ಎಂದು ಪಕ್ಕದಲ್ಲಿದ್ದ ಚಪ್ಪಲಿ ಮೆಟ್ಟಿ ನಡೆಯತೊಡಗಿದರು. ಚಪ್ಪಲಿಯನ್ನು ಮನೆಯ ಎದುರಗೇ ಬಿಟ್ಟು ಬಂದಿದ್ದ ಚಂದ್ರಶೇಖರ ಹಾಗೇ ನಡೆಯತೊಡಗಿದ. ಭಟ್ರು ತಮ್ಮ ಸಂಸಾರದ ಬಗ್ಗೆ ಏನೂ ಹೇಳುತ್ತಿಲ್ಲವಲ್ಲ ಎಂದು ಯೋಚಿಸುತ್ತ ನಡೆಯುತ್ತಿದ್ದವನ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು. ಅಮ್ಮಾ ಎಂದು ಈತ ಕೂಗಿದ್ದ ಕಂಡು ಭಟ್ಟರು ಹಿಂದೆ ತಿರುಗಿದರು. ‘ಅಯ್ಯೋ ಮುಳ್ಳು ಕಪ್ಪಿತೋ? ನಾನೆಂತ ದಡ್ಡ ನೋಡ್ರಿ, ನಿಮ್ಮನ್ನು ಹಂಗೆ ಹೊರಗಿನಿಂದಲೇ ಹಿಂದಿನ ಮನೆಗೆ ಕರೆದುಕೊಂಡು ಬರಬಹುದಾಗಿತ್ತು. ನಾನು ಕಡೆಗೆ ಆಳಿನ ಕೈಯಲ್ಲಿ ಚಪ್ಪಲಿಯನ್ನು ಕಳುಹಿಸುತ್ತೇನೆ. ನೀವು ನಿಧಾನ ಬನ್ನಿ. ಒಳ್ಳೇದೆ ಆಯ್ತು ನಿಮ್ಮನ್ನು ಮನೆಯೊಳಗಿಂದ ಕರೆದುಕೊಂಡು ಬಂದಿದ್ದು. ನಮ್ಮ ಮನೆಯೊಳಗಿನ ಕತ್ತಲ ಪರಿಚಯ ಆದಂಗಾಯ್ತು’ ಎಂದು ನಕ್ಕರು. ಚಂದ್ರಶೇಖರ ಕಾಲಿಗೆ ಚುಚ್ಚಿದ್ದ ಮುಳ್ಳನ್ನು ತೆಗೆದೆಸೆಯುವಾಗ ಪಕ್ಕನೆ ಈತನಿಗೆ ಬಸ್ಸಿನಲ್ಲಿ ಆ ಹೆಂಗಸು ಹೇಳಿದ ಮಾಯಾ ನೆನಪಾದಳು. ಭಟ್ಟರಲ್ಲಿ ಕೇಳಿ ಬಿಡಲೇ ಎಂದು ಯೋಚಿಸಿ ಮುಂದೆ ಹೋಗುತ್ತಿದ್ದ ಅವರ ಸನಿಹಕ್ಕೆ ಹೋಗಲು ಜೋರಾಗಿ ನಡೆಯತೊಡಗಿದ. ಭಟ್ಟರ ಸನಿಹ ಹೋಗುತ್ತಲೇ ‘ಮನೆಯಲ್ಲಿ ಯಾರೂ ಕಾಣಲಿಲ್ಲ, ಒಬ್ಬರೇ ಇರುವುದೋ?’ ಎಂದು ಪ್ರಶ್ನೆ ಎಸೆದು ಅವರತ್ತ ನೋಡಿದ. ಯಾವುದೋ ಗಹನ ಆಲೋಚನೆಯಲ್ಲಿ ಸುಮ್ಮನೆ ಮುಂದೆ ನಡೆಯುತ್ತಿದ್ದ ಅವರಿಂದ ಯಾವ ಉತ್ತರವೂ ಬರಲಿಲ್ಲ. ಕೇಳಬಾರದಿತ್ತೇನೋ ಎಂದುಕೊಂಡು ಅವರ ಜೊತೆ ಸುಮ್ಮನೆ ನಡೆದ.
ಚಂದ್ರಶೇಖರನ ಪ್ರಶ್ನೆಯ ನಂತರ ಒಂದೂ ಮಾತನಾಡದ ಭಟ್ಟರು ಹಿತ್ತಿಲ ಮನೆಯ ಬೀಗ ಹಾಕಿಲ್ಲದ ಬಾಗಿಲನ್ನು ಸರಿಸುತ್ತ. ‘ಇದೇ ನೋಡ್ರಿ ನಮ್ಮ ಹಿತ್ತಿಲ ಮನೆ. ಆಗಾಗ ನಮ್ಮ ಕೆಲಸದವರು ಇಲ್ಲಿ ಉಳಿದುಕೊಳ್ಳುವುದುಂಟು.’ ಎಂದು ನಕ್ಕದ್ದು ಈತನಿಗೆ ನಿರಾಳವೆನಿಸಿತ್ತು. ನಾನು ಕೇಳಿದ ಪ್ರಶ್ನೆ ಇವರಿಗೆ ಸಿಟ್ಟು ತರಿಸಲಿಲ್ಲವಲ್ಲ ಸಧ್ಯ ಎಂದುಕೊಂಡ. ಸಾಕಷ್ಟು ಬೆಳಕಿರುವ ಹಾಗೂ ಈಗಿನ ಜಮಾನಾದ್ದು ಎನಿಸುವಂತಹ ವಾಸ್ತು ಇರುವ ಸಣ್ಣ ಚೊಕ್ಕದಾದ ಮನೆ ಅದು. ಭಟ್ಟರು ಅಲ್ಲೇ ಇರುವ ಖುರ್ಚಿಯಲ್ಲಿ ಕೂತು ಚಂದ್ರಶೇಖರನಿಗೆ ‘ಇಲ್ಲೇ ಹಿಂದೆ ಸ್ನಾನದ ಮನೆ ಇದೆ. ಹಿತ್ತಿಲ ಬಾಗಿಲ ದಾಟಿ ಹೋದರೆ ಅಲ್ಲೇ ಕಕ್ಕಸು ಮನೆ. ನೀವು ಸುಧಾರಿಸಿಕೊಂಡು ಊಟಕ್ಕೆ ಹೊರಡಿ. ಯಾವುದಕ್ಕೂ ಸಂಕೋಚ ಮಾಡಿಕೊಳ್ಳಬೇಡಿ. ನಾನು ಹೋಗಿ ಪೂಜಾರಿ ಹೋಟೆಲ್‌ಗೆ ಹೇಳಿ ಬರುತ್ತೇನೆ. ನಾಟಕದ ಕನಸು ಕಾಣುತ್ತಿರುವ ನಮ್ಮ ಮಹಿಳಾ ಮಂಡಳದವರಿಗೂ ಹೇಳಿ ಬರುತ್ತೇನೆ. ನಾಳೆ ಸಂಜೆ ಅವರೆಲ್ಲರನ್ನೂ ಸಭೆ ಸೇರಲು ಹೇಳುತ್ತೇನೆ’ ಎಂದರು. ಈತ ಆಯ್ತು ಎಂದು ಹೇಳಿದ್ದನ್ನು ಅವರು ಕೇಳಿದರೋ ಇಲ್ಲವೋ. ಎದ್ದು ‘ನೀವು ಸುಧಾರಿಸಿಕೊಳ್ಳಿ ನಾನು ಸಂಜೆ ಸಿಗುತ್ತೇನೆ’ ಎಂದು ಹೊರಟರು. ಭಟ್ಟರು ತಮ್ಮ ಸಂಸಾರದ ಬಗ್ಗೆ ಕೇಳಿದರೂ ಏನು ಹೇಳಲಿಲ್ಲವಲ್ಲ. ಮಾಯಾ ಇಲ್ಲೆಲ್ಲಾದ್ರೂ ಕಾಣಬಹುದೋ ಎಂದು ಅತ್ತಿತ್ತ ಹುಡುಕುವಂತೆ ಚಂದ್ರಶೇಖರ ತೋಟದ ಮರದ ಸಾಲಿನಲ್ಲೆಲ್ಲ ಕಣ್ಣಾಡಿಸಿದ.
ಮನೆಯನ್ನೆಲ್ಲ ಒಮ್ಮೆ ಅವಲೋಕಿಸಿದ ಚಂದ್ರಶೇಖರ ಮುಖ ತೊಳೆದು ಗೋಡೆಯಲ್ಲಿ ನೇತಾಡುತ್ತಿರುವ ಕನ್ನಡಿಯೊಳಗೆ ಇಣುಕಿದಾಗ ಅಲ್ಲಿ ಅಂಟಿಸಿದ್ದ ಕೆಂಪು ಬಿಂದಿ ಕಂಡಿತು. ಮನಸೊಳಗಿದ್ದ ಮಾಯಾ ದುತ್ತನೆ ಎದುರು ನಿಂತಂತೆ ಆತನಿಗೆ ಎನಿಸಿತು. ಈ ಕನ್ನಡಿಯೊಳಗೆ ಅವಳ ಮುಖ ಹೇಗೆ ಕಾಣಬಹುದು ಎಂದು ಕಲ್ಪಿಸಿಕೊಂಡ. ಅವಳೆಲ್ಲಾದರೂ ಕುತೂಹಲದಿಂದ ಹಿತ್ತಿಲ ಮನೆಯಲ್ಲಿರುವ ನನ್ನ ನೋಡಲು ಬರಬಹುದೇ ಎಂದು ಕಿಡಕಿಯಲ್ಲಿ ಇಣುಕಿಣುಕಿ ನೋಡಿದ. ಅವೆಲ್ಲ ಯೋಚನೆಯ ನಡುವೆ ಭಟ್ಟರೇಕೆ ಅವರ ಸಂಸಾರದ ವಿಷಯ ಹೇಳಲಿಲ್ಲ. ಮಾಯಾ ತುಂಬ ಸುಂದರಿಯೇ ಇರಬೇಕು. ಭಟ್ಟರು ಪರಿಚಯಿಸಿಕೊಟ್ಟಿದ್ದರೆ ನನ್ನ ನಾಟಕದಲ್ಲಿ ಅವಳಿಗೊಂದು ಪಾತ್ರ ನೀಡಬಹುದಿತ್ತು ಎಂದುಕೊಂಡ. ತನ್ನ ಕಾಲೇಜು ದಿನಗಳ ಕನಸು ಇನ್ನೇನು ನನಸಾಗೇ ಬಿಟ್ಟಿತು ಎಂದು ಸುಮ್ಮಸುಮ್ಮನೆ ಖುಷಿಯಾದ.
ಆದರೂ ಮನಸೊಳಗೆ ಹೊಕ್ಕ ಮಾಯಾ ಹೊರಬರಲೇ ಇಲ್ಲ. ಕೈಕಾಲು ತೊಳೆದುಕೊಂಡು ಮನೆಯ ಕಿಡಕಿಯ ಹತ್ತಿರ ಇದ್ದ ಆರಾಮ ಖುರ್ಚಿಯಲ್ಲಿ ಕುಳಿತುಕೊಂಡ. ಬಹಳ ಹೊತ್ತಿನವರೆಗೆ ಕಿಡಕಿಯ ಆಚೆ ಕಾಣುವ ಭಟ್ಟರ ಮುಖ್ಯ ಮನೆಯ ಬಾಗಿಲನ್ನೇ ನೋಡುತ್ತ ಕುಳಿತ. ಅವಳೆಲ್ಲಾದರೂ ಹೊರಗೆ ಬರಬಹುದೋ ಎಂದು ಕಾಯ್ದ. ಒಮ್ಮೆ ಇದೇನು ಹುಚ್ಚು ನನಗೆ ಅವಳ್ಯಾರೋ ಬಸ್ಸಿನಲ್ಲಿ ಹೇಳಿದಳು ಎಂದು ನಾನು ಇಷ್ಟೆಲ್ಲಾ ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದುಕೊಂಡು, ಊಟಕ್ಕಾಗಿ ಭಟ್ಟರು ಹೇಳಿದ ಪೂಜಾರಿ ಹೋಟೆಲ್ ಹುಡುಕಿ ಹೊರಟ.
ಅಷ್ಟರಲ್ಲಾಗಲೇ ಊರ ತುಂಬೆಲ್ಲಾ ನಾಟಕದ ಮಾಸ್ತರು ಬಂದ ಸುದ್ದಿ ಹರಡಿತ್ತು. ‘ಸಿದ್ದಾಪುರದಿಂದ ಮಾಸ್ತರೊಬ್ಬರು ಮಯಿಳಾ ಮಂಡಳದ ಹೆಂಗಸರಿಗೆ ನಾಟಕ ಕಲ್ಸಾಕೆ ಬಂದಾರಂತೆ. ನಮ್ಮ ಹೆಂಗಸರು ಅವನಹತ್ರ ನಾಟಕ ಕಲಿಬೇಕಾ’ ಎಂದು ಊರ ಹಳೆ ಕುಡುಕರೆಲ್ಲ ಪೆಟ್ಟಿಗೆ ಅಂಗಡಿಗಳಲ್ಲಿ ಬಿದಿರು ಮಟ್ಟಿಯ ಪಕ್ಕದ ಕಳ್ಳಬಟ್ಟಿ ಮಾರುವವನ ಸುತ್ತ ಕುಳಿತು ಮಾತನಾಡತೊಡಗಿದರು. ಏರು ಮಧ್ಯಾಹ್ನವೇ ಹೂವಿನ ಮನೆಯ ಕಳ್ಳಬಟ್ಟಿ ಮಾರುವ ಬಿದಿರು ಮಟ್ಟಿಗಳ ಆಚಿಚೆಯೆಲ್ಲ ಜನ ತುಂಬಿ ಹೋದರು. ನಾಟಕದ ಮಾಸ್ತರರ ನೆಪದಲ್ಲಿ ಎಲ್ಲಾ ಎರಡೆರಡು ಲೋಟ ಜಾಸ್ತಿ ಕುಡಿದರು. ಗುಟಕಾ ಪರಾಗ್‌ಗಳ ಮಾಲೆಯನ್ನೇ ಕೆಲವರು ಕೊರಳಿಗೆ ಹಾಕಿಕೊಂಡು ನೆನಪಾದಾಗೆಲ್ಲ ಜಗಿಯತೊಡಗಿದರು. ನಾಟಕದ ಮಾಸ್ತರನನ್ನೇ ಜಗಿಯುವಂತೆ, ಅವನನ್ನೇ ಗಟ ಗಟ ಕುಡಿದಂತೆ ಕನಸು ಕಾಣತೊಡಗಿದರು.
ಹೆಂಗಸರೆಲ್ಲ ಊರಿನ ನೀರು ಸೇದುವ ಬಾವಿ, ಬಟ್ಟೆ ತೊಳೆಯುವ ಕೆರೆಗಳಲ್ಲೆಲ್ಲ, ತಮ್ಮ ನಾಟಕದ ಉಮೇದಿಗೆ ಭಟ್ಟರು ಮಾಸ್ತರನನ್ನು ಕರೆಸಿದ್ದಕ್ಕೆ ಖುಷಿಯಾಗಿ ಮಾತನಾಡತೊಡಗಿದರು. ನಾಟಕದಲ್ಲಿ ಗಂಡು ಪಾತ್ರ ಹಾಕಲಾಗುವುದಿಲ್ಲ ಎಂಬ ಕಾರಣಕ್ಕೆ ಉಬ್ಬಿದೆದೆಯ ಹೆಂಗಸರು ತಮ್ಮ ಎದೆ ಈ ಪಾಟಿ ಬೆಳೆದುನಿಂತಿದ್ದಕ್ಕೆ ಮರುಗತೊಡಗಿದರು. ಅಯ್ಯೋ ಆಚೆ ಮನೆ ಹುಡುಗಿಯಂತೆ ಸಣ್ಣ ಎದೆ ಇದ್ದಿದ್ದರೆ ನಾನು ನಾಟಕದಲ್ಲಿ ಯಾವುದಾದರೂ ಗಂಡು ಪಾತ್ರ ಹಾಕಬಹುದಿತ್ತು. ಈ ನೆಪದಲ್ಲಾದರೂ ನನ್ನ ಗಂಡನಿಗೆ ಶೆಡ್ಡು ಹೊಡಿಬಹುದಿತ್ತು ಎಂದು ಮಾತನಾಡಿಕೊಳ್ಳತೊಡಗಿದರು.
ಪೂಜಾರಿ ಹೋಟೆಲ್ ಹುಡುಕಿ ಹೊರಟ ಚಂದ್ರಶೇಖರನನ್ನು ನೋಡಿದ ಊರ ಹೆಂಗಸರು ಈತ ನಾಟಕದ ಮಸ್ತರು ಎಂಬುದನ್ನು ಊಹಿಸಿದರು. ಮಾಸ್ತರು ಪೂಜಾರಿ ಹೋಟೆಲ್‌ಗೆ ಹೊರಟಿದ್ದಾರೆ, ಎಂಬ ಸುದ್ದಿ ಒಬ್ಬರಿಂದ ಒಬ್ಬರಿಗೆ ಹಿತ್ತಿಲ ಬಾಗಿಲ ಮೂಲಕ ದಾಟಿತ್ತು. ಹೆಂಗಸರೆಲ್ಲ ಒಬ್ಬೊಬ್ಬರಾಗಿ ಮನೆಯ ಹಿತ್ತಿಲಿನಿಂದ ಎದುರು ಬಾಗಿಲ ಬಳಿ ನಿಂತು ನಾಟಕದ ಮಾಸ್ತರನನ್ನು ಕುತೂಹಲ ಹಾಗೂ ನಾಚಿಕೆಯಿಂದ ನೋಡತೊಡಗಿದರು. ಕೆಲವು ಹೆಂಗಸರು ನಿಧಾನಕ್ಕೆ ಬೀದಿಯಲ್ಲಿ ನಡೆದು ಸುತ್ತ ಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ತಾವು ಟೆಂಟ್‌ನಲ್ಲಿ ನೋಡಿದ ರಾಜ್‌ಕುಮಾರ್ ಸಿನೆಮಾದ ಯಾವುದೋ ಪಾತ್ರವನ್ನು ನಟಿಸುತ್ತಲೋ, ಅಥವಾ ಯಾವುದೋ ನಾಯಕಿಯ ಮಾತುಗಳನ್ನು ಉದುರಿಸುತ್ತ ಹಾಗೆ ಬಂದು ಹೀಗೆ ಮಾಯವಾಗುತ್ತಿದ್ದರು. ಚಂದ್ರಶೇಖರನಿಗೆ ಹೆಂಗಸರ ಈ ವರ್ತನೆ ವಿಚಿತ್ರ ಎನಿಸಿತು. ಪೂಜಾರಿಯ ಹೋಟೆಲ್‌ನಲ್ಲಿ ಊಟ ಮಾಡಿದ ಚಂದ್ರಶೇಖರ ಊರೆಲ್ಲ ಒಂದು ಸುತ್ತು ಹೊಡೆದ. ಎಲ್ಲಾದರೂ ಆವತ್ತು ಬಸ್ಸಿನಲ್ಲಿ ಸಿಕ್ಕ ಹೆಂಗಸು ಕಾಣಬಹುದೋ ಅವಳಲ್ಲೇ ಭಟ್ಟರ ಮಗಳು ಮಾಯಾಳ ಕುರಿತು ಕೇಳಬಹುದು ಎಂದುಕೊಂಡ. ಊರೆಲ್ಲ ಸುತ್ತಿದರೂ ಆವತ್ತು ಅವನಿಗೆ ಆ ಹೆಂಗಸು ಕಣ್ಣಿಗೆ ಬೀಳಲಿಲ್ಲ.
ಆವತ್ತು ಸಾಯಂಕಾಲ ತಾನು ಉಳಿದುಕೊಂಡ ಹಿತ್ತಿಲ ಮನೆಯ ಸಮೀಪ ಭಟ್ಟರು ಬರಬಹುದೋ ಎಂದು ಚಂದ್ರಶೇಖರ ಕಾಯ್ದ. ಭಟ್ಟರು ಬರಲಿಲ್ಲ. ಜೊತೆ ಮಾತನಾಡಲೂ ಯಾರೂ ಇಲ್ಲದೆ ಯೋಚನೆಯಲ್ಲೆಲ್ಲ ನೀವು ಮಾಯಮ್ಮನ ನೋಡೋಕೆ ಹೊರಟಿರೋ ಗಂಡೋ? ಎಂಬ ಆ ಹೆಂಗಸಿನ ಮಾತೇ ಬರುತ್ತಿತ್ತು. ರಾತ್ರಿಯೆಲ್ಲ ಚಂದ್ರಶೇಖರ ನಿದ್ದೆ ಬರದೆ ಹೊರಳಾಡಿದ. ಕ್ಷಣಕ್ಕೊಮ್ಮೆ ಕಿಡಕಿಯ ಸಮೀಪ ಬಂದು ನೋಡಿದ. ಭಟ್ಟರು ಒಮ್ಮೆ ಬಿಟ್ಟು ಹೋದವರು ಮತ್ತೆ ಅವನಿದ್ದಲಲ್ಲಿಗೆ ಬರಲಿಲ್ಲ. ಭಟ್ಟರ ವರ್ತನೆ ಇವನಿಗೆ ವಿಚಿತ್ರವಾಗಿ ಕಾಣುತ್ತಿತ್ತು. ಅವರು ಮಾಯಾ ಬಗ್ಗೆ ಹೇಳದಿದ್ದುದೇಕೆ? ನಾನೆಲ್ಲಾದರೂ ಅವಳಿಗೆ ನಾಟಕದಲ್ಲಿ ನಟಿಸುವಂತೆ ಒತ್ತಾಯಿಸುತ್ತೇನೆ ಎಂದೋ? ಅಥವಾ ನನ್ನ ಮನಸ್ಸಿನಲ್ಲಿಯ ಯೋಚನೆ ಅವರಿಗೆ ತಿಳಿದುಬಿಟ್ಟಿತೋ? ಎಂದು ರಾತ್ರಿಯೆಲ್ಲ ಯೋಚಿಸಿದ.
ಬೆಳಿಗ್ಗೆ ಎದ್ದವನಿಗೆ ಮತ್ತದೇ ಕುತೂಹಲ ಮನದಲ್ಲಿ ಕೊರೆಯುತ್ತಿತ್ತು. ಏನಾದರಾಗಲಿ ನನ್ನ ಕುತೂಹಲವನ್ನು ಇವತ್ತು ತಣಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿಕೊಂಡ ಚಂದ್ರಶೇಖರ ಭಟ್ಟರನ್ನು ಈ ಕುರಿತು ಕೇಳಿ ಬಿಡಬೇಕು ಎಂದುಕೊಂಡು ಮುಖ ತೊಳೆದುಕೊಂಡು ಅವರ ದೊಡ್ಡ ಮನೆಯತ್ತ ಹೊರಟ. ಭಟ್ಟರ ಮನೆಯ ಹಿತ್ತಿಲ ಬಾಗಿಲ ಬಳಿ ನಿಂತು ಭಟ್ರೆ ಭಟ್ರೇ ಎಂದು ಕೂಗುತ್ತ ಬಾಗಿಲು ಬಡಿದ. ಭಟ್ಟರಿಲ್ಲದಿದ್ದರೆ ಮಾಯಾ ಬಂದು ಬಾಗಿಲು ತೆಗೆಯಬಹುದು ಎಂಬ ಆಸೆಯಿಂದ ಮತ್ತೆ ಮತ್ತೆ ಬಾಗಿಲು ಬಡಿದ.
ಮೈಯೆಲ್ಲಾ ಕಿವಿಯಾಗಿ ಯಾರಾದರೂ ಬರುವ ಸದ್ದು ಕೇಳುವುದೋ ಎಂದು ಆಲಿಸುತ್ತ ನಿಂತ. ಸ್ವಲ್ಪ ಹೊತ್ತು ಕಾದವನಿಗೆ ಯಾರೂ ಬರುವ ಲಕ್ಷಣ ಕಾಣಲಿಲ್ಲ. ಮತ್ತೊಮ್ಮೆ ಬಾಗಿಲು ಬಡಿದು ಭಟ್ಟರೇ ಎಂದು ಕರೆಯದೇ ಧೈರ್ಯ ಮಾಡಿ ಮಾಯಾ ಎಂದು ಕೂಗಿದ. ಯಾರೋ ಗೆಜ್ಜೆ ಸದ್ದು ಮಾಡುತ್ತ ಓಡಿ ಬಂದಂತಾಯ್ತು. ತನ್ನ ಕನಸು ಸಾಕಾರವಾಗುವ ಹಂತ ಬಂದೇ ಬಿಟ್ಟಿತು. ಅವಳನ್ನು ಒಲಿಸಿಕೊಳ್ಳಲು ತಾನು ಯಾವ್ಯಾವ ಪಟ್ಟುಗಳನ್ನು ಹಾಕಬೇಕು ಎಂದು ಆ ಕ್ಷಣದಲ್ಲೇ ಯೋಚಿಸಿದ. ಬಾಗಿಲ ಬಳಿ ಬಂದಂತೆ ಎನಿಸಿದ ಗೆಜ್ಜೆ ಸದ್ದು ಸುಮ್ಮನಾಯ್ತು. ಕ್ಷಣ ಕಾಯ್ದ... ಕ್ಷಣ ಕ್ಷಣ ಕಾಯ್ದ ಬಾಗಿಲು ತೆರೆದುಕೊಳ್ಳುವ ಲಕ್ಷಣ ಕಾಣಲಿಲ್ಲ.
ಮತ್ತೆ ಮಾಯಾ ಎಂದು ಕೂಗುವ ಧೈರ್ಯ ಈತನಿಗಾಗಲಿಲ್ಲ. ಭಟ್ರೆ ಎಂದು ಕೂಗುತ್ತ ಹೆದರುತ್ತ ಹುಂಬ ಧೈರ್ಯದಿಂದ ಬಾಗಿಲನ್ನು ನೂಕಿದ. ಕಿರ್ ಎಂದು ಸದ್ದು ಮಾಡುತ್ತ ಬಾಗಿಲು ತೆರೆದುಕೊಂಡಿತು. ಒಳಗೆ ಗವ್ವೆನ್ನುವ ಕತ್ತಲನ್ನು ನೂಕಿಕೊಂಡು ಕೋಣೆಯ ನಡುವಿನವರೆಗೆ ಬೆಳಕು ಸರ್ರನೆ ನುಗ್ಗಿತು. ಯಾರಾದರೂ ಇರಬಹುದೇ ಎಂದು ಇಣುಕಿದ ಯಾರೂ ಕಾಣಿಸಲಿಲ್ಲ. ಅಲ್ಲೆಲ್ಲೋ ಮುಂದಿನ ಕೋಣೆಯ ಕತ್ತಲಲ್ಲಿ ಗೆಜ್ಜೆಯ ಸದ್ದು ಓಡಿದಂತಾಯ್ತು. ಇನ್ನೇನು ಕನಸಿನ ಕೂಸು ಸಿಕ್ಕೇ ಬಿಟ್ಟಳು ಎಂದುಕೊಂಡ ಚಂದ್ರಶೇಖರ ಮಾಯಾ ಎಂದು ಕೂಗುತ್ತ ಮುಂದಿನ ಕೋಣೆಯ ಕತ್ತಲಲ್ಲಿ ಮುನ್ನುಗ್ಗಿದ.
ಭಟ್ಟರು ಎಲ್ಲಾದರೂ ನನ್ನ ಈ ಅವತಾರದಲ್ಲಿ ನೋಡಿದರೇ ತಾನು ಇಲ್ಲಿಗೆ ಬಂದ ಕೆಲಸದ ಗತಿಯೇನು? ತನ್ನನ್ನು ಇಲ್ಲಿಗೆ ಕಳುಹಿಸಿದ ರಾಮಚಂದ್ರನಿಗೆ ಹೇಗೆ ಮುಖ ತೋರಿಸಲಿ ಎಂಬ ಯೋಚನೆ ಅವನಿಗೆ ಆ ಕ್ಷಣ ಬರದಿರಲಿಲ್ಲ. ಎರಡೆರಡು ಬಾರಿ ಕರೆದರೂ ಭಟ್ಟರು ಬರದಿರುವುದರಿಂದ ಅವರು ಒಳಗೆ ಇಲ್ಲ ಎಂಬುದು ಖಾತ್ರಿಗೊಂಡವನಂತೆ ಮುಂದೆ ನಡೆದ. ಮುಂದೆ ಮುಂದೆ ಹೋದಂತೆ ಆ ಗೆಜ್ಜೆ ಸದ್ದು ಕತ್ತಲಲ್ಲಿ ಲೀನವಾಯ್ತು. ಆವತ್ತು ತಡವರಿಸುತ್ತ ದಾಟಿ ಬಂದ ಎಲ್ಲ ಕೋಣೆಗಳನ್ನು ಸರಾಗವಾಗಿ ಈತ ದಾಟಿ ಎದುರು ಕೋಣೆಗೆ ಬಂದು ತಲುಪಿದ್ದ. ಇಲ್ಲೇ ಎಲ್ಲಾದರೂ ಇರಬಹುದೋ ಎಂದು ತುಸು ತೆರೆದ ಬಾಗಿಲಿನ ಬೆಳಕಲ್ಲೇ ಕೋಣೆಯ ತುಂಬ ಸೂಕ್ಷ್ಮವಾಗಿ ಅವಲೋಕಿಸಿದ. ಮಾಯಾ... ಮಾಯಾ ಎಂದು ಒಂದೆರಡು ಬಾರಿ ಮೆಲ್ಲಗೆ ಕರೆದ. ಅಷ್ಟರಲ್ಲೇ ಹೊರಗೆ ಏನೋ ಗಲಾಟೆ ಕೇಳಿದಂತಾಗಿ ಬೆಚ್ಚಿದ ಚಂದ್ರಶೇಖರ ತುಸು ತೆರೆದುಕೊಂಡಿದ್ದ ಬಾಗಿಲನ್ನು ತೆರೆಯಲೋ ಬೇಡವೋ ಎಂದುಕೊಂಡು ತೆರೆದ.
ಯಾರನ್ನೋ ಜೋರಾಗಿ ಬಯ್ಯುತ್ತಿದ್ದ ಭಟ್ಟರು ಹಾಗು ಇನ್ನೂ ಎರಡು ಜನ ಯಾರನ್ನೋ ಎಳೆದುಕೊಂಡು ಜೀಪಿನೊಳಗೆ ನೂಕುತ್ತಿದ್ದರು. ಕುತೂಹಲಗೊಂಡ ಚಂದ್ರಶೇಖರ ಭಟ್ಟರನ್ನು ಕೂಗಿದ. ಉಳಿದ ಇಬ್ಬರಿಗೆ ಏನೋ ಹೇಳಿ ಇತ್ತ ಬಂದ ಭಟ್ಟರಿಗೆ ಏನು? ಯಾರದು? ಎಂದು ಕೇಳಿದ. ನಮ್ಮೂರಲ್ಲಿ ಒಬ್ಳು ಹುಚ್ಚಿ ಇದ್ದಾಳೆ ಇವತ್ತು ಅವಳ ಹುಚ್ಚು ಜಾಸ್ತಿಯಾಗಿಬಿಟ್ಟಿದೆ. ಅದಕ್ಕೆ ಅವಳನ್ನು ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿಸುತ್ತಿದ್ದೆ ಎಂದು ಸಹಜವೆಂಬಂತೆ ಭಟ್ಟರು ಹೇಳಿದರು. ತನ್ನ ಸುತ್ತ ಮುತ್ತಲಿನ ಜನರಿಂದಲೇ ತನ್ನ ನಾಟಕದ ಪಾತ್ರಗಳಿಗೆ ಸ್ಪೂರ್ತಿ ಪಡೆಯುವ ಚಂದ್ರಶೇಖರ ಅವಳ್ಯಾರು ನೋಡೋಣ ಎಂದುಕೊಂಡು ಅತ್ತ ಹೆಜ್ಜೆ ಹಾಕಿದ. ಇನ್ನೇನು ಜೀಪಿನ ಸಮೀಪ ಹೋಗಬೇಕು ಅನ್ನುವಷ್ಟರಲ್ಲಿಯೇ ಈತನ ತಲೆಯ ಮೇಲೆ ಜೀಪಿನೊಳಗಿಂದ ತಪ್ಪಿಸಿಕೊಂಡು ಬಂದ ಕೋಳಿಯೊಂದು ಹಾರಿ ಹೋಯ್ತು. ಯಾವುದೋ ಜೋಶ್ ಬಂದವನಂತೆ ಹಿಡಿಯಲು ಹೊರಟವನು ತಕ್ಷಣ ಏನೋ ಸತ್ಯ ತಿಳಿದವನಂತೆ ನಿಂತುಕೊಂಡ.
ಅಲ್ಲಿಗೆ ಜೀಪಿನಲ್ಲಿರುವ ಹೆಂಗಸು ಯಾರೆಂಬುದು ಚಂದ್ರಶೇಖರನಿಗೆ ಖಾತ್ರಿಯಾಯ್ತು. ಮುಂದೇ ಹೋಗದೆ ತಿರುಗಿ ಬಂದ ಚಂದ್ರಶೇಖರ ‘ಭಟ್ಟರೆ ನಾಳೆ ಬೆಳಿಗ್ಗೆ ರಾಮಚಂದ್ರ ಬರಬಹುದೇನೋ, ಇವತ್ತು ಒಮ್ಮೆ ಮಹಿಳಾ ಮಂಡಳದ ಸಭೆ ಸೇರಿಸಿ ಬಿಡೋಣ. ನಾಳೆ ಪಾತ್ರಗಳ ಆಯ್ಕೆ ಮಾಡಿಸಿ ನಾಟಕದ ತಾಲೀಮು ಪ್ರಾರಂಭಿಸಿ ಬಿಡುತ್ತೇನೆ. ನಿಮ್ಮ ಮನೆಯಲ್ಲಂತೂ ನಾಟಕಕ್ಕೆ ಪಾತ್ರ ಹಾಕುವಂತಹ ಹೆಂಗಸರು, ಹುಡುಗಿಯರು ಯಾರೂ ಇಲ್ಲವೆನಿಸುತ್ತದೆ ?!’ ಎಂದ. ‘ಏ! ಬೇಗ ಹೊರಡ್ರೋ’ ಎಂದು ಜೀಪಿನಲ್ಲಿದ್ದವರನ್ನು ಕೂಗುತ್ತಾ ಭಟ್ಟರು ಚಂದ್ರಶೇಖರನ ಪ್ರಶ್ನೆಗೆ ಉತ್ತರ ಕೊಡದೆ ಕತ್ತಲು ಮನೆಯೊಳಗೆ ಮುನ್ನಡೆದರು. ಅವರ ಹಿಂಬಾಲಿಸಿ ಒಳಗೆ ಕಾಲಿಟ್ಟ ಚಂದ್ರಶೇಖರನ ಕಾಲಿಗೆ ಕತ್ತಲಲ್ಲಿ ಏನೋ ಮೆತ್ತಗೆ ತಾಗಿದಂತಾಯ್ತು. ಏನಿರಬಹುದು ಎಂದು ಬಗ್ಗಿ ತಡಕಾಡಿದವನ ಮುಖ ಪರಚಿ ಗೆಜ್ಜೆ ಕಟ್ಟಿದ ಕರಿ ಬೆಕ್ಕೊಂದು ಬಾಗಿಲ ಸಂದಿನಿಂದ ಓಡಿ ಹೋಯ್ತು. ಹೊರಗಿನಿಂದ ‘ಹಿಡ್ಕೋಳಿ... ಹಿಡ್ಕೋಳಿ ನನ್ನ ಕೋಳಿ ಹಾರ್ ಹೋಯ್ತು’ ಎಂಬ ಕೂಗು ಕೇಳಿ ಬರುತ್ತಿತ್ತು.
[ಚಿತ್ರಗಳು-ವಿಷ್ಣು]