ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೫    
ಡಿ.ಪಿ.ಸತೀಶ್
ಸೋಮವಾರ, 7 ಸೆಪ್ಟೆಂಬರ್ 2009 (04:33 IST)
ಶ್ರೀನಗರದ ಹಾದಿಯಲ್ಲಿ

ಕಾಶ್ಮೀರದಲ್ಲಿ ನನ್ನ ಡ್ರೈವರ್ ಇಸ್ಮಾಯಿಲ್ ಧರ್. ಇಪ್ಪತ್ತೈದರ ಆಸುಪಾಸಿನ ಇಸ್ಮಾಯಿಲ್ ಗೆ ಇಡೀ ಜಮ್ಮು ಕಾಶ್ಮೀರ ತನ್ನ ಮುಂಗೈಯಷ್ಚೇ ಪರಿಚಿತ. ನಾನು ಶ್ರೀನಗರದಲ್ಲಿ ವಿಮಾನ ಇಳಿಯುವ ಮೊದಲೇ ಇವನಿಗೆ ನಾನು ಬರುತ್ತಿರುವ ಸುಳಿವು ಹೇಗೋ ಗೊತ್ತಾಗುತ್ತೆ. ಮುಗುಳ್ನಗುತ್ತಾ ಬ್ರಾಡ್ ವೇ ಹೊಟೆಲ್ ನಲ್ಲಿ ಕೆಲವೇ ನಿಮಿಷಗಳಲ್ಲಿ ಹಾಜರಾಗುತ್ತಾನೆ. ಇವನದು ನೇಕಾರ ಕುಟುಂಬ. ಕಾಶ್ಮೀರಿ ಶಾಲ್ ನೇಯ್ದು ಮಾರಾಟಮಾಡಿ ಬದುಕುವುದು ಇವರ ಮುಖ್ಯ ಉದ್ಯೋಗ.

ಷೇಕ್ ಅಬ್ದುಲ್ಲಾ ಕೂಡಾ ಬಡ ನೇಕಾರ ಕುಟುಂಬದಿಂದಲೇ ಬಂದವರು. ಒಂದು ದಿನ ಹೀಗೆ ಹಜ್ರತ್ ಬಾಲ್ ಕಡೆ ಹೋಗುತ್ತಿದ್ದಾಗ, ಷೇಕ್ ಅಬ್ದುಲ್ಲಾರ ಸಮಾಧಿ ಬಳಿ ಜೀಪ್ ನಿಲ್ಲಿಸಲು ಕೈಸನ್ನೆ ಮಾಡಿದೆ. ‘ನಿನಗೆ ಷೇಕ್ ಆಬ್ದುಲ್ಲಾ ಬಗ್ಗೆ ಏನನಿಸುತ್ತೆ’ ಎಂದು ಪ್ರಶ್ನಿಸಿದೆ.

"ಅವರು ನಿಮಗೆ ಸ್ವಾತಂತ್ರ್ಯಬೇಕಾದರೆ ಕೇವಲ ಆಲೂಗೆಡ್ಡೆ ತಿಂದು ಬದುಕಲು ಸಿದ್ಧರಾಗಿ ಎಂದು ಕಾಶ್ಮೀರಿಗಳಿಗೆ ಹೇಳಿದರು. ಆದರೆ ನಮ್ಮ ಹಿರಿಯರು ಕೇವಲ ಆಲೂಗೆಡ್ಡೆ ತಿಂದು ಬದುಕಲು ಹೇಗೆ ಸಾಧ್ಯ. ನಮಗೆ ಅನ್ನ, ಹಕ್ಕಾ, ಮಟನ್, ಬಿರಿಯಾನಿ, ಚಿಕನ್ ಎಲ್ಲಾ ಬೇಕು ಎಂದು ಉತ್ತರಿಸಿದರು. ಆದ್ದರಿಂದ ನಮಗೆ ಸ್ವಾತಂತ್ರ್ಯ ಸಿಗಲಿಲ್ಲ. ನಮ್ಮ ಹಿರಿಯರು ಕೆಲವು ವರ್ಷ ಆಲೂಗೆಡ್ಡೆ ತಿಂದು ಬದುಕಲು ಒಪ್ಪಿದ್ದರೆ, ನಮಗೆ ಸ್ವಾತಂತ್ರ್ಯ ಸಿಗುತ್ತಿತ್ತು " ಎಂದು ಮುಗ್ಧವಾಗಿ ಉತ್ತರಿಸಿದ.

ಇದು ಅತಿ ಸರಳವಾಗಿ ತೋರಿದರೂ, ಇಡೀ ಕಾಶ್ಮೀರದ ಹೋರಾಟದ ಮೂಲಕ್ಕೇ ಬೆಳಕು ಚೆಲ್ಲುತ್ತದೆ.

*****

ಡ್ರೈವರ್ ಇಸ್ಮಾಯಿಲ್ ಧರ್ಇಸ್ಮಾಯಿಲ್ ಗೆ ಹರಿ ಪರ್ವತದ ಕಡೆ ಜೀಪ್ ಓಡಿಸಲು ಸೂಚಿಸಿದೆ. ದಲ್ ಸರೋವರದ ಎದುರಿನಲ್ಲೇ ಇರುವ ಬೃಹತ್ ಹರಿ ಪರ್ವತಕ್ಕೆ ಪ್ರಾಚೀನ ಇತಿಹಾಸವಿದೆ. ಕಾಶ್ಮೀರದ ಸೃಷ್ಟಿಯ ಮೂಲ ಕಾರಣಗಳಲ್ಲಿ ಹರಿ ಪರ್ವತವೂ ಒಂದು. ಹಿಂದೂ ಪುರಾಣಗಳ ಪ್ರಕಾರ ಇಡೀ ಕಾಶ್ಮೀರ ಸರೋವರವಾಗಿತ್ತು. ಕಾಶ್ಯಪ ಮುನಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಆದರೆ ಭಯಂಕರ ರಾಕ್ಷಸನೊಬ್ಬ ಅವರಿಗೆ ತೊಂದರೆಕೊಡಲು ಆರಂಭಿಸಿದ. ರಕ್ಷಣೆಗಾಗಿ ಅವರು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಈಶ್ವರನಲ್ಲಿ ಪ್ರಾರ್ಥನೆ ಮಾಡಿದರು. ಈ ದೇವತೆಗಳು ಬೆನ್ನಟ್ಟಿದಾಗೆಲ್ಲಾ ರಾಕ್ಷಸ ಸರೋವರದ ನೀರಿನಲ್ಲಿ ಅಡಗಿ ಕೂರುತ್ತಿದ್ದ. ರಾಕ್ಷಸನನ್ನು ನೀರಿನಿಂದ ಹೊರತರಲು ವಿಷ್ಣು ಉಪಾಯ ಹೂಡಿದ. ಹಂದಿಯ ಅವತಾರ ಧರಿಸಿ ಸರೋವರಕ್ಕೆ ಒಂದು ಕಡೆ ತೂತು ಕೊರೆದ. ಸರೋವರದ ನೀರೆಲ್ಲಾ ಖಾಲಿಯಾಗಿ ರಾಕ್ಷಸ ಶ್ರೀನಗರದ ದಲ್ ಸರೋವರದತ್ತ ಓಟಕಿತ್ತ. ಇದನ್ನು ಗಮನಿಸಿದ ಪಾರ್ವತಿ ಮೈನಾ ಹಕ್ಕಿಯ ರೂಪ ಧರಿಸಿ ಸಣ್ಣ ಕಲ್ಲೊಂದನ್ನು ಅವನ ತಲೆ ಮೇಲೆ ಎಸೆದಳು. ಆ ಕಲ್ಲೇ ಪರ್ವತಾಕಾರ ತಳೆದು ರಾಕ್ಷಸ ಹತನಾದ ಮತ್ತು ಕಾಶ್ಮೀರ ಕಣಿವೆಯ ಸೃಷ್ಟಿಯಾಯ್ತು ಎನ್ನುವುದೇ ಈ ಕತೆ. ಈ ರೀತಿ ಪರ್ವತಾಕಾರ ತಳೆದ ಕಲ್ಲೇ ಈ ಹರಿ ಪರ್ವತ.

‘ನಿನಗೆ ಈ ಕತೆ ಗೊತ್ತೆ’ ಎಂದು ಇಸ್ಮಾಯಿಲ್ ಗೆ ಕೇಳಿದೆ.
‘ಇದು ಗೊತ್ತಿಲ್ಲದವರು ಕಾಶ್ಮೀರದಲ್ಲಿ ಯಾರೂ ಇಲ್ಲ.’ ಎಂದು ಇಸ್ಮಾಯಿಲ್ ನನ್ನ ಮುಖ ನೋಡಿದ.

ಹರಿಪರ್ವತದ ಮೇಲೆ ಮಧ್ಯಯುಗದಲ್ಲಿ ಆಫ್ಘನ್ ಧಾಳಿಕೋರನೊಬ್ಬ ಕಟ್ಟಿಸಿದ ಬೃಹತ್ ಕೋಟೆಯೊಂದು ಇಂದಿಗೂ ಇದೆ. ಇದರೊಳಗೆ ವಿಷ್ಣುವಿನ ದೇವಾಲಯ, ಕೊಳ ಮತ್ತು ಒಂದು ಮಸೀದಿಯಿವೆ. ಪರ್ವತದ ಹತ್ತುತ್ತಿದ್ದ ನನ್ನನ್ನು ಸೈನಿಕನೊಬ್ಬ ಜೋರಾಗಿ ಕೂಗಿ ಕರೆದ. ನಾನು ಹರಿ ಪರ್ವತ ನೋಡಲು ಹೋಗುತ್ತಿರುವುದಾಗಿ ಹೇಳಿದೆ. ಈಗ ಯಾರಿಗೂ ಕೋಟೆಯ ಒಳಗೆ ಪ್ರವೇಶವಿಲ್ಲ. ಅದೀಗ ಸೈನ್ಯದ ಕ್ಯಾಂಪ್ ಆಗಿದೆ. ದೇವಾಲಯ, ಮಸೀದಿಗಳೂ ಬಾಗಿಲುಹಾಕಿವೆ ಸುಮ್ಮನೇ ವಾಪಸಾಗು, ಇಲ್ಲದಿದ್ದರೆ ಇಲ್ಲಸಲ್ಲದ ತೊಂದರೆಗಳಿಗೆ ಸಿಲುಕುತ್ತೀಯ ಎಂದು ಮೆಲುವಾಗಿ ಎಚ್ಚರಿಸಿದ.

ನಾನು ಏನೂ ಹೇಳದೆ ಹಿಂದಿರುಗಿದೆ. ನಾನು ನಿನಗೆ ಮೊದಲೇ ಹೇಳಲಿಲ್ಲವೇ ಎನ್ನುವ ರೀತಿಯ ಮುಖಮಾಡಿ ಇಸ್ಮಾಯಿಲ್ ನಕ್ಕ.

*****

ಗುಪ್ಕರ್ ರೋಡ್ ನ ಆರಂಭದಲ್ಲೇ ದಲ್ ಗೇಟ್ ಹತ್ತಿರ ಸುಮಾರು ಎಂಟತ್ತು ಸಸ್ಯಾಹಾರಿ ಡಾಬಾಗಳಿವೆ. ಇವನ್ನು ನಡೆಸುವವರೆಲ್ಲಾ ಹಿಂದೂಗಳು. ಇಸ್ಮಾಯಿಲ್ ಜೊತೆ ಗಣೇಶ್ ಡಾಬಾಗೆ ಹೋದೆ.

ಮೈನಸ್ ಡಿಗ್ರಿ ಚಳಿಯಲ್ಲಿ ರೋಟಿ, ದಾಲ್, ಬಟರ್ ತುಂಬಾ ರುಚಿಯಾಗಿದೆ ಎನಿಸಿತು. ಇತ್ತೀಚೆಗೆ ಪ್ರವಾಸಿಗಳು ಮತ್ತೆ ಬರುತ್ತಿರುವುದರಿಂದ ವ್ಯಾಪಾರ ಪರವಾಗಿಲ್ಲ ಎಂದು ಡಾಬಾ ಮಾಲೀಕ ರಾಜ್ ಕಿಶನ್ ಸಿಂಗ್ ಹೇಳಿದರು.

ಡಾಬಾದಿಂದ ಹೊರಬಂದು ಮೌಲಾನಾ ಆಜಾದ್ ರೋಡ್ ಕಡೆಗೆ ನಡೆಯುತ್ತಿದ್ದ ನನಗೆ ರಾಬರ್ಟ್ ಥೋರ್ಪ್ ನೆನಪಾದ. ದಲ್ ಗೇಟ್ ನ ಸಮೀಪವೇ ಅವನ ಭೀಕರ ಹತ್ಯೆಯಾಗಿತ್ತು. ಬ್ರಿಟೀಷ್ ಸೈನ್ಯದಲ್ಲಿ ಲೆಪ್ಚಿನೆಟ್ ಕರ್ನಲ್ ಆಗಿದ್ದ ರಾಬರ್ಟ್ ಥೋರ್ಪ್ ಕಾಶ್ಮೀರಕ್ಕಾಗಿ ಮಡಿದ ಮೊದಲ ಹುತಾತ್ಮ. ಮೊಗಲರ ಕೈಯಲ್ಲಿದ್ದ ಕಾಶ್ಮೀರ, ಔರಂಗಜೇಬ್ ನ ನಿಧನಾನಂತರ ಆಫ್ಘನ್ ಧಾಳಿಕೋರ ಅಹ್ಮದ್ ಷಾ ಅಬ್ದಾಲಿಯ ಪಾಲಾಯಿತು. ೧೮ ನೇ ಶತಮಾನದಲ್ಲಿ ಆಫ್ಗನ್ನರನ್ನು ಸೋಲಿಸಿ ಮಹಾರಾಜಾ ರಂಜೀತ್ ಸಿಂಗ್ ಕಾಶ್ಮೀರವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿದ.

ಈ ರಂಜೀತ್ ಸಿಂಗ್ ನನ್ನು ಸೋಲಿಸಲು ಬ್ರಿಟೀಷರಿಗೆ ಸಹಾಯಮಾಡಿದವನು, ರಂಜೀತ್ ಸಿಂಗ್ ಸೇನಾಧಿಕಾರಿ ಮತ್ತು ಜಮ್ಮುವಿನ ಆಡಳಿತಾಧಿಕಾರಿಯಾಗಿದ್ದ ಗುಲಾಬ್ ಸಿಂಗ್. ಇವನ ಉಪಕಾರಕ್ಕೆ ಪ್ರತಿಯಾಗಿ ಬ್ರಿಟೀಷರು ಕಾಶ್ಮೀರವನ್ನು ೭೫ ಲಕ್ಷ ರೂಪಾಯಿಗಳಿಗೆ ಗುಲಾಬ್ ಸಿಂಗ್ ಗೆ ೧೮೪೮ ರಲ್ಲಿ ಮಾರಿದರು.

ತನ್ನ ೭೫ ಲಕ್ಷ ರೂಪಾಯಿ ವಾಪಸ್ ಪಡೆಯಲು ಇಡೀ ಕಾಶ್ಮೀರವನ್ನೇ ಸುಲಿಗೆ ಮಾಡಲು ಗುಲಾಬ್ ಸಿಂಗ್ ಆರಂಭಿಸಿದ. ಕಾಶ್ಮೀರದ ಅಸಹಾಯಕ ಜನ ಇವನ ದೌರ್ಜನ್ಯ, ಅನಾಚಾರ, ಹಿಂಸೆ, ಕೊಲೆಗಡುಕತನವನ್ನು ಮೌನವಾಗಿ ಸಹಿಸಿದರು. ಪ್ರತಿಭಟಿಸಿದವರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಯ್ತು. ಅಂದೇ ಬಹುಪಾಲು ಕಾಶ್ಮೀರಿಗಳಿಗೆ ಸ್ವಾತಂತ್ರ್ಯದ ಅರಿವಾಯ್ತು. ಅಂದಿನ ಭಾರತದ ಸರ್ಕಾರ ನಡೆಸುತ್ತಿದ್ದ ಬ್ರಿಟೀಷರ ಮೇಲೆ ತಿರಸ್ಕಾರದ ಬೀಜ ಹುಟ್ಟಿತು.

ಈ ಕಾಶ್ಮೀರಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದವನು ಮೂವತ್ತರ ಹರೆಯದ ರಾಬರ್ಟ್ ಥೋರ್ಪ್. ಅವನು ಬರೆದ ಪುಸ್ತಕ ‘Kashmir Misgovernment’ ಅಂದಿನ ದಾರುಣ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ.

ಈ ರಾಬರ್ಟ್ ಥೋರ್ಪ್ ನ ಚಟುವಚಿಕೆಗಳಿಂದ ಸಿಟ್ಟಿಗೆದ್ದ ಅಂದಿನ ರಾಜ ಪ್ರತಾಪ್ ಸಿಂಗ್ ಅವನನ್ನು ಮುಗಿಸಲು ಸಂಚು ರೂಪಿಸಿದ. ೧೮೬೮ ರ ಒಂದು ದಿನ ಬೆಳಿಗ್ಗೆ ಶಂಕರಾಚಾರ್ಯ ಪರ್ವತದ ಕಡೆ ನಡೆಯುತ್ತಿದ್ದ ಥೋರ್ಪ ನನ್ನು ರಾಜ ಕಳಿಸಿದ ಹಂತಕರು ಇರಿದು ಕೊಂದರು. ಅವನ ಸಮಾಧಿ ಇಂದಿಗೂ ಲಾಲ್ ಚೌಕದ ಹಿಂಭಾಗದ ಕ್ರಿಶ್ಚಿಯನ್ ಸೆಮಿಟರಿಯಲ್ಲಿ ಇನ್ನೂ ಇದೆ.

ರಾಬರ್ಟ್ ಥೋರ್ಪ್ ನನ್ನು ಇವತ್ತು ಯಾರೂ ನೆನಪು ಮಾಡಿಕೊಳ್ಳುವುದಿಲ್ಲ.

ಥೋರ್ಫ್ ನ ಸಮಾಧಿಯ ಸುತ್ತು ಗಿಡ ಗಂಟೆಗಳು ಬೆಳೆದು ಅದರ ಗುರುತೂ ಸಿಗದಂತೆ ಆಗಿದೆ. ಕ್ಷಣಕಾಲ ಅವನ ಸಮಾಧಿ ಬಳಿ ನಿಂತು ವಾಪಸಾದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಇನ್ನೂ ಅದೆಷ್ಟು ಸಾವಿರ ಥೋರ್ಪ್ ಗಳು ಜೀವಕೊಡಬೇಕೋ?

*******

ಶ್ರೀನಗರ ಪ್ರಪಂಚದ ಅತ್ಯಂತ ಪುರಾತನ ಜೀವಂತ ನಗರಗಳಲ್ಲಿ ಒಂದು. ಈ ನಗರಕ್ಕೆ ಸುಮಾರು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಇದು ಎರಡು ಸಾವಿರ ವರ್ಷಗಳ ಹಿಂದೆ ಬೌದ್ಧ ಧರ್ಮದ ಕೇಂದ್ರ ಸ್ಥಾನವಾಗಿತ್ತು. ಬೌದ್ಧ ಧರ್ಮದ ಅಂತಾರಾಷ್ಟ್ರೀಯ ಮಹಾ ಸಮ್ಮೇಳನಗಳು ನಡೆಯುತ್ತಿದ್ದ ಶ್ರೀನಗರಕ್ಕೆ ಪ್ರಪಂಚದ ವಿವಿಧ ಭಾಗಗಳಿಂದ ಐವತ್ತು ಸಾವಿರಕ್ಕೂ ಜಾಸ್ತಿ ಬೌದ್ಧ ಭಿಕ್ಷುಗಳು, ಪಂಡಿತರು, ರಾಜಾಧಿರಾಜರು ಆಗಮಿಸುತ್ತಿದ್ದರು ಎಂದು ಪ್ರತೀತಿ.

ಶ್ರೀನಗರದ ಹೊರವಲಯದಲ್ಲಿ ಬೌದ್ಧ ಧರ್ಮದ ಕುರುಹುಗಳು ಇನ್ನೂ ಇವೆ. ಏಳನೇ ಶತಮಾನದಲ್ಲಿ ಇಲ್ಲಿಗೆ ಬಂದ ಆದಿ ಶಂಕರರು ಬೌದ್ಧ ಧರ್ಮವನ್ನು ನಾಶಮಾಡಿ ಶಂಕರಾಚಾರ್ಯ ಪರ್ವತದ ಮೇಲೆ ತಪಸ್ಸು ಮಾಡಿದರು ಎಂದು ನಂಬಿಕೆ.

ಏಸು ಕ್ರಿಸ್ತ ಕೂಡಾ ಶ್ರೀನಗರದ ಬಳಿಯ ಪಹಲ್ ಗಾಮ್ ನಲ್ಲಿ ಕೊನೆಯುಸಿರು ಎಳೆದ ಎಂದು ಪ್ರತೀತಿ.

ದಕ್ಷಿಣ ಏಷ್ಯಾವನ್ನು ಕೇಂದ್ರ ಏಷ್ಯಾ ಮತ್ತು ಯುರೋಪ್ ಗಳಿಗೆ ಜೋಡಿಸುವ ನಗರ ಎಂದೇ ಶ್ರೀನಗರ ಸಾವಿರಾರು ವರ್ಷ ಹೆಸರಾಗಿತ್ತು. ಗುಪ್ತರು, ಮೌರ್ಯರು, ಕುಶಾನರು, ಮಂಗೋಲರು, ಮುಗಲರು, ಆಫ್ಘನ್ನರು, ಸಿಖ್ಖರು, ಡೋಗ್ರಾಗಳು, ಪಠಾಣರು ಸೇರಿ ಹತ್ತಾರು ಜನರ ಕೈವಶವಾದ ಕಾಶ್ಮೀರ ಮತ್ತು ಅದರ ರಾಜಧಾನಿ ಶ್ರೀನಗರ ನವಯೌವ್ವನೆ ಮತ್ತು ಚಿರನೂತನೆ.

[ಚಿತ್ರಗಳು-ಲೇಖಕರವು]

[ಡಿ.ಪಿ. ಸತೀಶ್ ಬರೆಯುವ ಕಾಶ್ಮೀರದ ಚಿತ್ರಗಳು- ೪]

ಪುಟದ ಮೊದಲಿಗೆ
 
Votes:  3     Rating: 3.67    
 
 
ಸಂಬಂಧಿಸಿದ ಲೇಖನಗಳು
  ಗೋಲಗುಮ್ಮಟ ಫಡಾಯಿ-2:ಗುಂಬಜೊಳಗಿನ ಚೀಜೂ,ಅದರ ಆವಾಜೂ
  ಶುಕ್ರವಾರದ ಸಂಜೆಗೆ ಬ್ರಿಸ್ಟಲ್ ಪ್ರೇಮ ಶಾಯರಿ
  ಜಿಕೆಆರ್ ಪುಸ್ತಕ ಪ್ರೀತಿ-ರಾಜೀವ ‘ಗುರ್ಬಾಣಕ್ಕಿ'
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ