ಯುರೋಪಿಯನ್ನರದು ಅಮೆರಿಕನ್ನರದು ಮುಗಿಯದ ಸರಸ-ವಿರಸ. ಎರಡನೆಯ ಮಹಾಯುದ್ಧ ಮುಗಿದು ಸುಮಾರು ಮೂವತ್ತು ವರ್ಷಗಳ ನಂತರ... ಹಳೆಯ ಕಹಿಯೋ ಅಲ್ಲ ಹೊಸ ಹುಳಿಯೋ ಅಮೆರಿಕಕ್ಕೆ ಸಡ್ಡು ಹೊಡೆಯಬೇಕೆಂದುಕೊಂಡರು. ಶಬ್ದದ ವೇಗಕ್ಕಿಂತ ಎರಡು ಪಾಲು ಹೆಚ್ಚಿನ ವೇಗದಲ್ಲಿ ಹಾರುವ ವಿಮಾನವನ್ನು ಹಾರಿ ಬಿಟ್ಟರು ಯುರೋಪಿಯನ್ನರು. ಕಾಂಕರ್ಡ್ ಎನ್ನುವ ವಿಮಾನ, ಮೂರು ದಶಕಗಳ ಸೇವೆ ಸಲ್ಲಿಸಿ, ತನ್ನ ಸೇವೆಯಿಂದ ನಿವೃತ್ತ ಆಗಿರುವುದು ಈಗ ಇತಿಹಾಸ. ವಿಮಾನ ತಯಾರಿಕೆಯ ಯುರೋಪಿಯನ್ ಒಕ್ಕೂಟ ಸ್ಥಾಪಿಸಿಕೊಂಡರು. ಅದರ ಹೆಸರು ಏರ್ ಬಸ್ (Airbus). ಅವರ ಉದ್ದೇಶಗಳು ಫಲಿಸುವಂತೆ , ಜಾಗತಿಕ ವಿಮಾನ ಮಾರುಕಟ್ಟೆಯ ಅರ್ಧ ಭಾಗವನ್ನು ಅಮೇರಿಕನ್ನರಿಂದ ಕಸಿದುಕೊಂಡರು.
ಮಹತ್ವಾಕಾಂಕ್ಷೆಗಳ ಸಮರವೂ ಒಂದು ನಶೆಯೇ ಇರಬೇಕು. ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ವ್ಯಾಪಾರಗಳ ನ್ಯಾಯಾಲಯದಲ್ಲಿ (ಡಬ್ಲ್ಯುಟಿಒ ) ಬೋಯಿಂಗ್ ಮತ್ತು ಏರ್ ಬಸ್ ಗಳು ಸರಕಾರಗಳು ಹೊಸ ವಿಮಾನಗಳ ತಯಾರಿಗೆ ಸಬ್ಸಿಡಿ ಅಥವಾ ಸಾಲ ನೀಡಬಾರದು. ಅದು ಎರಡು ವಿಮಾನ ಕಂಪೆನಿಗಳ ಸ್ಪರ್ಧೆ ಆಗದೆ ದೇಶಗಳ ಸರಕಾರಗಳ ನಡುವಿನ ಸ್ಪರ್ಧೆ ಆಗುತ್ತದೆ ಎಂದೆಲ್ಲ ಉದಾತ್ತ ಮೌಲ್ಯಗಳ ಮಾತಾಡುತ್ತಾ ಒಬ್ಬರು ಇನ್ನೊಬ್ಬರ ಮೇಲೆ ಅಪಾದನೆ ಮಾಡಿ ಕೇಸು ಹಾಕಿಕೊಂಡು ಕುಳಿತಿದ್ದಾರೆ .ಡಬ್ಲ್ಯುಟಿಒ ದ ಕಟಕಟೆಯಲ್ಲಿ ನಡೆಯುತ್ತಿರುವ ಸುದೀರ್ಘವಾದ ಕೇಸು ಇದು. ಅಮೆರಿಕದ ಮತ್ತು ಯುರೋಪಿನ ದೇಶಗಳ ಸರಕಾರಗಳು ತಮ್ಮ ವಿಮಾನ ಉದ್ಯಮದ ಹಿತಾಸಕ್ತಿಗೋಸ್ಕರ ಸಾಲ ಸಬ್ಸಿಡಿ ನೀಡುವುದು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ.
೨೦೦೦ನೆಯ ಇಸವಿಯ ಆಸುಪಾಸಿಗೆ ಏರ್ಬಸ್ ಕಂಪೆನಿಯಲ್ಲೊಬ್ಬರಿಗೆ ಜಗತ್ತಿನ ಅತ್ಯಂತ ದೊಡ್ಡ ವಿಮಾನವನ್ನು ತಾವು ಯುರೋಪಿಯನ್ನರು ತಯಾರಿಸಬೇಕೆಂಬ ಬೆಳಗಿನ ಜಾವದ ಕನಸು ಬಿತ್ತು. ಆಗ ಬೋಯಿಂಗ್ ಕಂಪೆನಿಯ ‘747’ ವಿಮಾನವೇ ಜಗತ್ತಿನ ಅತಿ ದೊಡ್ಡ ನಾಗರಿಕ ವಿಮಾನ. ಯುರೋಪಿನ ಮಿತ್ರರ ಕನಸಿಗೆ ಅಮೆರಿಕನ್ನರು ನಕ್ಕು, ಈ ಯುರೋಪಿನನವರು ಬರೇ ಭಾವವೇಶದಲ್ಲೇ ಬದುಕುವವರು ಎಂದು ನುಡಿದರು.
ಮಾರುಕಟ್ಟೆಯಲ್ಲಿ ಯಶಸ್ಸು ತಂದೀತೆ ಇಲ್ಲವೇ, ಸುರಿದ ಬಿಲಿಯನ್ ಗಟ್ಟಲೆ ಯುರೋ ಹಣ ವಸೂಲಿ ಆದೀತೆ ಇಲ್ಲವೇ ಎಂದು ಶಾಂತ ಮನಸ್ಸಿನಿಂದ ಯೋಚಿಸದೆ , ಹೃದಯದ ಬಡಿತವನ್ನು ಆಲಿಸಿ ಏರ್ಬಸ್ ತೆಗೆದುಕೊಂಡ ನಿರ್ಧಾರ ಅದಾಗಿತ್ತು. ಹತ್ತಿಪ್ಪತ್ತು ಸಾವಿರ ಜನರಿಗೆ , ವಿಮಾನ ಬದುಕಿರುವವರೆಗೆ ಅಂದರೆ ಇಪ್ಪತ್ತು ಮೂವತ್ತು ವರ್ಷಗಳ ಕಾಲ ನಿರಂತರ ಉದ್ಯೋಗ ಒದಗಿಸಬಲ್ಲದು ಮತ್ತು ತಮ್ಮ ಪತಾಕೆಯನ್ನು ಇನ್ನೂ ಮೇಲೆ ಹಾರಿಸಬಲ್ಲುದು ಎಂದು ಫ್ರಾನ್ಸ್ ,ಜರ್ಮನಿ, ಬ್ರಿಟನ್ , ಸ್ಪೇನ್ ಸರಕಾರಗಳು ಈ ನಿರ್ಧಾರಕ್ಕೆ ಹೂಂ ಗುಟ್ಟಿದ್ದೆ ತಡ, ಜಗತ್ತಿನ ಅತಿ ದೊಡ್ಡ ವಿಮಾನದ ಕೆಲಸ ಆರಂಭ ಆಯಿತು. ಏರ್ಬಸ್ ಸಂಸ್ಥೆಯ ಎಲ್ಲ ವಿಮಾನಗಳ ಹೆಸರು 'A3xx’ ನಿಂದ ಆರಂಭ ಆಗುತ್ತದೆ. ವಿಮಾನದ ಮೂಗಿನಿದ ಬಾಲದ ವರೆಗೂ ಎಂಭತ್ತು ಮೀಟರು, ಎಡ ರೆಕ್ಕೆಯ ಇಚೆ ತುದಿಯಿಂದ ಬಲ ರೆಕ್ಕೆಯ ಆಚೆ ತುದಿಗೂ ಎಂಭತ್ತು ಮೀಟರು, ಹಾಗಾಗಿ ಒಳ್ಳೆ ಮುಹೂರ್ತ ನೋಡಿ ಯಾರೋ ಈ ಕೂಸಿಗೆ ‘A380’ ಎಂದು ನಾಮಕರಣ ಮಾಡಿದರು. ಅಲ್ಲಿಂದಾಚೆಗೆ ಯುರೋಪಿನ ಸುದ್ದಿ ಮಾಧ್ಯಮಗಳಲ್ಲಿ ಇವಳದೇ ಸುದ್ದಿ. ಯುದ್ಧ , ವಿಮಾನಗಳು ಎಂದರೆ ಮಾತೆ ಮುಗಿಸದ ಯುರೋಪಿನ ಜನರಿಗೆ ಈ ವಿಮಾನದ ಬೆಳವಣಿಗೆಯೇ ರೋಚಕ ಅನುಭವ ಆಯಿತು.
‘A380’ ಬಾಲ್ಯ, ಯೌವ್ವನ ಕಳೆಯುವಾಗ ೨೦೦೫ನೆಯ ಇಸವಿ, ಇನ್ನೇನು ಇವಳು ಆಕಾಶದಲ್ಲಿ ಮೊದಲ ಬಾರಿ ಹಾರಬೇಕು; ಜಗತ್ತು ನಿಬ್ಬೆರಗಾಗಿ ನೋಡಬೇಕು.... ಆ ಸಮಯಕ್ಕೆ ವಿಮಾನ ಜೋಡಣೆಯಲ್ಲಿ ಕೆಲವು ಅಡಚಣೆಗಳು ಎದುರಾಗಿ, ವಿಮಾನ ಆಕಾಶಕ್ಕೆ ಏರುವುದು ಮುಂದೂಡಲ್ಪಟ್ಟಿತು. ಇಂತಹ ಅಡಚಣೆಗಳು, ಹೊಸ ತರದ ವಿಮಾನದ ತಯಾರಿಯಲ್ಲಿ ಸಾಮಾನ್ಯ. ತೀರ ಕ್ಷುಲ್ಲಕ ಎನ್ನುವ ಕಾರಣಗಳು, ಕಣ್ಣ ತಪ್ಪುಗಳು, ವಿಮಾನದ ಸಿದ್ಧವಾಗುವುದನ್ನು ಒಂದು ವರುಷದಷ್ಟು ತಡ ಮಾಡಬಲ್ಲದು, ಮುಂದೂಡ ಬಲ್ಲದು. ಅಮೆರಿಕದ ವಿಷಯ ಬಂದರೆ ಒಗ್ಗಟ್ಟಾಗಿ ತಾವು ಯುರೋಪಿಯನ್ನರೆಂದು ಎದೆ ತಟ್ಟಿ ಮಾತಾಡಿದರೂ, ಫ್ರಾನ್ಸ್ ,ಜರ್ಮನಿ, ಬ್ರಿಟನ್ , ಸ್ಪೇನ್ ಗಳನ್ನು ಅವರ ನಡುವಿನ ತಪ್ಪು ತಿಳುವಳಿಕೆಗಳು, ಸಂಶಯ, ಮುನಿಸು, ಅಸೂಯೆ, ಅಹಂಕಾರ ಮತ್ತೆ ವಿಮಾನ ವಿನ್ಯಾಸದ ಎಂದಿನ ಸವಾಲುಗಳು ಸಂಕೀರ್ಣತೆಗಳು ತೊಡಕಾಗಿ ಕಾಡುತ್ತಿರುತ್ತವೆ. ಯುರೋಪಿನ ಭಿನ್ನ ಭಿನ್ನ ಸಂಸ್ಕೃತಿಯ, ಭಾಷೆಯ ನಾಲ್ಕು ಪಾಲುದಾರ ದೇಶಗಳು ಕೆಲಸ ಹಂಚಿಕೊಂಡು , ಇನ್ನುಳಿದ ಚೂರುಪಾರು ಕೆಲಸಗಳನ್ನು ಸ್ವೀಡನ್, ಜಪಾನ್, ಮಲೇಶಿಯ , ಭಾರತ ಇನ್ನಿತರೆಡೆಗಳಿಗೆ ಹಂಚಿ , ಆಮೇಲೆ ಎಲ್ಲವನ್ನು ಜೋಡಿಸಿ ಪ್ರಯೋಗ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು , ಸರ್ಟಿಫಿಕೆಟ್ ಹಿಡಿದು ಕುಣಿಯುತ್ತ ವಿಮಾನ ಮಾರುಕಟ್ಟೆಗೆ ಬರುವ ಹೊತ್ತಿಗೆ ಬೆವರಿಳಿದಿರುತ್ತದೆ. ಹಳೆಯ ತಪ್ಪುಗಳ ಬಗ್ಗೆ ಚರ್ಚಿಸುತ್ತ , ಹೊಸ ಪಾಠಗಳನ್ನು ಕಲಿಯುತ್ತ, ಸುರಕ್ಷತೆಯ ಜಪ ಮಾಡುತ್ತಾ ವಿಮಾನಗಳು ರೂಪ ಪಡೆಯುತ್ತವೆ.
೨೦೦೭ರ ಹೊತ್ತಿಗೆ ನೂರೆಂಟು ವಿಘ್ನಗಳಿಂದ ಪಾರಾಗಿ A380 ಆಕಾಶಕ್ಕೆ ಹಾರಿತು ....ತನ್ನ ಪ್ರಸಿದ್ಧಿ, ಗಾತ್ರ , ತೂಕ , ಗಂಭೀರ ಚಲನೆಯಿಂದ ಆಕಾಶಕ್ಕೆ ತಾನೇ ಯಜಮಾನತಿಯಂತೆ ಓಡಾಡಲಾರಂಭಿಸಿತು. ಪ್ರಯಾಣಿಕರು, ಇಂಧನ ಇಲ್ಲದ ‘A380’ ಖಾಲಿ ವಿಮಾನದ ತೂಕ ೩೦೦ ಟನ್. ಜೊತೆಗೆ ದೂರ ಪ್ರಯಾಣವಾದರೆ ೨೦೦ ಟನ್ ಇಂಧನವನ್ನು ಹೊರಬಲ್ಲುದು, ಜೊತೆಗೆ ನೂರಾರು ಪ್ರಯಾಣಿಕರು ಮತ್ತವರ ಬ್ಯಾಗುಗಳು. ಈ ವಿಮಾನವನ್ನು ಆಕಾಶದಲ್ಲಿ ಯಾವ ಭಗವಂತ ತೇಲಿಸಿದರೂ ಸುಮಾರು ೫೬೦ ಟನ್ ಭಾರವನ್ನು ತೇಲಿಸಬೇಕಾದ ಹೊಣೆಗಾರಿಕೆ ಇದೆ. ಈ ವಿಮಾನದೊಳಗೆ ೩೦೦ ಕಿಲೋಮೀಟರು ಉದ್ದದ ವಿವಿಧ ತಂತಿಗಳು ಹರಿದಾಡುತ್ತವೆ .ಬರೇ ಸಾಮಾನ್ಯ ದರ್ಜೆಯ ಆಸನಗಳನ್ನು ಅಳವಡಿಸಿದರೆ ೮೫೦ ಜನರನ್ನು ಕೊಂಡೊಯ್ಯಬಲ್ಲ ಮೊದಲ ಸಂಪೂರ್ಣ ‘ಡಬಲ್ ಡೆಕ್ಕರ್’ ವಿಮಾನ ‘A380’ ಯುರೋಪಿಯನ್ನರಿಗೆ ಚಾರಿತ್ರಿಕ ವಿಮಾನ.
ವಿಮಾನದ ಗಾತ್ರದ ಬಗ್ಗೆ ಮಾತಾಡುವುದಾದರೆ ‘A380’ ಗೆ ಸರಿಸಮ ಇಲ್ಲ. ಏರ್ಬಸ್ ಬಯಸಿದ್ದೂ ಈ ಹೆಗ್ಗಳಿಕೆಯನ್ನೇ.... ಹನ್ನೆರಡು ತಾಸುಗಳ ಕಾಲ, ಸಮುದ್ರ ಮಟ್ಟದಿಂದ ಹತ್ತು ಕಿಲೋಮೀಟರ್ ಮೇಲೆ, ಸುಮಾರು ಸಾವಿರ ಜನರನ್ನು ಹೊತ್ತು, ಘಂಟೆಗೆ ಸಾವಿರ ಕಿಲೋಮೀಟರ್ ಅನ್ನು ಕ್ರಮಿಸುತ್ತ ಸಾಗುವ ಗಗನ ಸುಂದರಿಯ ಶಿಲ್ಪಿಗಳೆಂದು ಕರೆಸಿಕೊಳ್ಳುವುದನ್ನು. ಈಗ ಸೇವೆಯಲ್ಲಿರುವ A380 ಗಳಲ್ಲಿ ಯಾವುದೂ ಐದು ನೂರಕ್ಕಿಂತ ಹೆಚ್ಚಿನ ಆಸನಗಳನ್ನು ಹಾಕಿಸಿಕೊಂಡಿಲ್ಲ. ಒಂದು ವೇಳೆ ವಿಮಾನದ ತುಂಬ ಸಾಮಾನ್ಯ ದರ್ಜೆಯ ಸೀಟುಗಳನ್ನೇ ಹಾಕಿಸಿಕೊಂಡರೆ (ಸುಮಾರು ೮೫೦), ಆ ಎಲ್ಲ ಸೀಟುಗಳೂ ಭರ್ತಿಯಾದರೆ, ತಲಾ ಪ್ರಯಾಣಿಕನ ಲೆಕ್ಕದ ಇಂಧನ ಬಳಕೆ , ಯಾವುದೇ ಟೊಯೋಟಾ ಕಾರಿನ ಇಂಧನ ಬಳಕೆಗಿಂತಲೂ ಕಡಿಮೆ ಆಗಿರುತ್ತದೆ!
ಮತ್ತೆ A380, ಸದ್ದು ಮಾಡದೆ ಚಲಿಸುವ ವಿಮಾನ ಎನ್ನುವ ಹೆಸರನ್ನು ಪಡೆದಿದೆ. ಸಮೀಪದಲ್ಲೆ ನಿಂತು ನೋಡಿದರೂ ಕೇಳಿದರೂ ಈ ವಿಮಾನ ಏರುವ ಇಳಿಯುವ ಶಬ್ದವೇ ಕೇಳುವುದಿಲ್ಲ. ಸಿಂಗಾಪುರ್ ಏರ್ ಲೈನ್ಸ್ , ಆಸ್ಟ್ರೇಲಿಯಾದ ಕ್ವಾಂಟ್ಆಸ, ಕೊಲ್ಲಿ ದೇಶದ ಎಮಿರೇಟ್ಸ್ ಈಗಾಗಲೇ ‘A380’ ಅನ್ನು ಸೇವೆಗೆ ಬಳಸುತ್ತಿದ್ದಾರೆ. ವಿಜಯ್ ಮಲ್ಯ ಐದು ‘A380’ ಗಳನ್ನ ಕಾದಿರಿಸಿದ್ದಾರೆ. ಭಾರತದಿಂದ ಇದರ ಹಾರಾಟ ೨೦೧೩ ನೆಯ ಇಸವಿಯ ನಂತರ ಪ್ರಾರಂಭ ಆಗಬಹುದು. ಈಗಾಗಲೇ ಸೇವೆಯಲ್ಲಿರುವ ೧೮ ‘A380’ ವಿಮಾನಗಳನ್ನು ಬಿಟ್ಟು, ಸದ್ಯದ ಲೆಕ್ಕದಲ್ಲಿ ಇನ್ನೂ ೧೮೦ ವಿಮಾನಗಳು ಹೊರಬರಲಿಕ್ಕಿವೆ. ಆಗಸದಲ್ಲಿ ‘A380’ಯ ಓಡಾಟ ಚಂದವಾಗಿ ಕಂಡರೂ, ಹಾಕಿದ ಬಂಡವಾಳವನ್ನು ವಾಪಾಸು ಪಡೆಯಲು , ಇನ್ನೂ ಕನಿಷ್ಠ ೨೦೦ ವಿಮಾನಗಳು ಮಾರಾಟ ಆಗಬೇಕು (ಒಟ್ಟು ೪೦೦)! ಹತ್ತು ವರ್ಷಗಳ ಹಿಂದೆ ಮಹತ್ವಾಕಾಂಕ್ಷೆಯ ಮಸುಕಿನಲ್ಲಿ ತೆಗೆದುಕೊಂಡ ನಿರ್ಧಾರ ಸರಿಯೋ ತಪ್ಪೋ ಎಂದು ಆಗಾಗ ಅನೌಪಚಾರಿಕ ಚರ್ಚೆಗಳು ನಡೆದರೂ , A380 ಯುರೋಪಿಯನ್ನರ ಹೆಮ್ಮೆಯ ಮುದ್ದಿನ ವಿಮಾನ; ಕೆಲಸದ ಸಂಬಂಧ ಹೊಂದಿರುವ ನನ್ನಂತಹ ಸಾವಿರಾರು ಜನರಿಗೆ , ಇವಳ ಸಂಗ ಅವಿಸ್ಮರಣೀಯ ಅನುಭವ. ವಿಮಾನ ಸಂತತಿಯಲ್ಲಿ ಇನ್ನೊಬ್ಬಳು ಇಂತಹವಳು ಅಮೆರಿಕಾದಲ್ಲೋ, ಯುರೋಪಿನಲ್ಲೋ, ಭಾರತದಲ್ಲೋ, ಚೈನಾದಲ್ಲೋ ಹುಟ್ಟುವರೆಗೂ....‘A380’ ಯೇ ಆಕಾಶದ ರಾಣಿ.
[ಚಿತ್ರಗಳು-ಲೇಖಕರವು]