ಜಾನಪದ ಕಲೆಗಳ ತೊಟ್ಟಿಲು ಎಂದು ಪ್ರಸಿದ್ಧಿಯಾಗಿರುವ ಬಿಜಾಪುರ ಹಾಗು ಬಾಗಲಕೋಟೆ ಜಿಲ್ಲೆಗಳಲ್ಲಿ, ೨೧ನೇ ಶತಮಾನದ ಆಧುನಿಕ ತಂತ್ರಜ್ಞಾನದ ಬಿರುಗಾಳಿಯ ನಡುವೆಯೂ ಅನೇಕ ಜಾನಪದ ಕಲೆಗಳು ಇಂದಿಗೂ ಜೀವಂತವಾಗಿವೆ. ಡೊಳ್ಳುಕುಣಿತ, ಕರಡಿಮಜಲು, ಚೌಡಕಿ, ಖಣಿ(ಚಿಕ್ಕಹಲಗಿ), ಸಂಬಾಳ ಎಂಬ ಹಾಡು, ನೃತ್ಯದ ಪ್ರಕಾರಗಳು ಮತ್ತು ಸಣ್ಣಾಟ, ದೊಡ್ಡಾಟ ಎಂಬ ಜಾನಪದ ನಾಟಕ ಪ್ರಕಾರಗಳು ಗ್ರಾಮಾಂತರ ಪ್ರದೇಶದ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಾ ಎಲ್ಲಾ ವಯೋಮಾನದವರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆಯುತ್ತಿವೆ. ಇವುಗಳಲ್ಲಿ ಸಣ್ಣಾಟದ ಒಂದು ಪ್ರಕಾರವಾದ ಶ್ರೀ ಕೃಷ್ಣ ಪಾರಿಜಾತ ಎಂಬ ನಾಟಕ ಅತ್ಯಂತ ಜನಪ್ರಿಯವಾಗಿದೆ.
ಕರ್ನಾಟಕದ ರಂಗಭೂಮಿಯ ಇತಿಹಾಸ ನಮ್ಮನ್ನು ಹನ್ನೊಂದನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ರಂಗಭೂಮಿಗೆ ಅಸ್ತಿಭಾರ ಹಾಕಿದ್ದೇ ಉತ್ತರ ಕರ್ನಾಟಕ ಎಂಬುದನ್ನು ಚರಿತ್ರೆಯ ಪುಟಗಳು ದಾಖಲಿಸಿವೆ. ಕ್ರಿ.ಶ. ೧೦೪೫ರಲ್ಲಿ ಧಾರವಾಡ ಸಮೀಪದ ಮುಗಧ ಎಂಬ ಗ್ರಾಮದಲ್ಲಿ ಸಿಕ್ಕಿರುವ ಒಂದು ಶಾಸನದಲ್ಲಿ ರಂಗಭೂಮಿ ಕುರಿತಂತೆ ‘ಶ್ರೀ ಮನ್ಮಹಾ ಸಾಮನ್ತಂ ಮಾರ್ತಾಂನ್ಡಯ್ಯಂ ತಮ್ಮ ಮುತ್ತಯ್ಯಂ ಮಾಡಿಸಿದ ಬಸದಿಯಂ ಪಡಿಸಲಿಸಿ ನಾಟಕ ಶಾಲೆಯಂ ಮಾಡಿಸಿ, ತನ್ನ ಕೀರ್ತಿಶಿಳಾಸ್ತಂಭಮಂ ಆ ಚಂದ್ರಾರ್ಕತಾರಂಬರಂ ನಿಲಿಸಿದಂ’ ಎಂದು ದಾಖಲಾಗಿದೆ. ಕನ್ನಡದ ವರಕವಿ ದ.ರಾ. ಬೇಂದ್ರೆಯವರನ್ನು ‘ನರಬಲಿ’ ಎಂಬ ಕವಿತೆ ಬರೆದ ಕಾರಣಕ್ಕಾಗಿ ಅವರ ಶಿಕ್ಷಕ ಹುದ್ದೆಯನ್ನು ಕಸಿದುಕೊಂಡ ಬ್ರಿಟೀಷ್ ಸರಕಾರ ಅವರನ್ನು ಇದೇ ಗ್ರಾಮದಲ್ಲಿ ೧೯೨೮ರಲ್ಲಿ ಹತ್ತು ತಿಂಗಳ ಕಾಲ ಸೆರೆಮನೆಗೆ ದೂಡಿದ್ದನ್ನು ಇಲ್ಲಿ ನೆನೆಯಬಹುದು.
ರಂಗಭೂಮಿಯ ಪರಂಪರೆ ಎಂದರೆ ಅದರ ಮೂಲ ಸ್ವರೂಪ ಜಾನಪದ ರಂಗಭೂಮಿಯೇ ಆಗಿದೆ. ಜಾನಪದ ರಂಗಭೂಮಿಯಲ್ಲಿ ಬಯಲಾಟ ಪ್ರಸಿದ್ಧಿಯಾಗಿದ್ದು ಅದು ಪ್ರಾದೇಶಿಕ ಭಿನ್ನತೆಯ ಆಧಾರದ ಮೇಲೆ ಅನೇಕ ರೂಪಗಳನ್ನು ಪಡೆದುಕೊಂಡಿದೆ. ಮೂಡಲಪಾಯ, ಪಡುವಲಪಾಯ, ಸಣ್ಣಾಟ, ದೊಡ್ಡಾಟ, ಯಕ್ಷಗಾನ, ತಾಳಮದ್ದಲೆ ಹಾಗೂ ಯಕ್ಷಗಾನದಲ್ಲಿ ತೆಂಕತಿಟ್ಟು, ಬಡಗತಿಟ್ಟು ಎಂಬ ಬೇಧಗಳು ಮತ್ತು ಸಣ್ಣಾಟದಲ್ಲಿ ರಾಧನಾಟ, ರಾಜನಾಟ, ದೊಡ್ಡಾಟದಲ್ಲಿ ದಾಸರಾಟ, ಶರಣರಾಟ ಎಂಬೆಲ್ಲಾ ಪ್ರಕಾರಗಳು ಟಿಸಿಲೊಡೆದು ಬೆಳೆದು ಬಂದಿವೆ. ಪಾಯ ಎಂದರೆ ಪದ್ಧತಿ ಎಂದರ್ಥ. ಪಡುವಲ ಪಾಯ ಪಶ್ಚಿಮ ಪದ್ಧತಿಯಾದರೆ, ಮೂಡಲ ಪಾಯ ಪೂರ್ವ ದಿಕ್ಕಿನ ಪದ್ಧತಿಯಾಗಿದೆ. ಮೂಡಲಪಾಯದಲ್ಲಿ ದೊಡ್ಡಾಟ, ಸಣ್ಣಾಟಗಳಾಗಿ ವಿಭಾಗಗೊಂಡು ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಜನಪ್ರಿಯವಾದಂತೆ ಪಡುವಲಪಾಯದ ಯಕ್ಷಗಾನ ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯ ಪ್ರದರ್ಶನ ಕಲೆಯಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.
ಉತ್ತರ ಕರ್ನಾಟಕದಲ್ಲಿ ಇಂದಿಗೂ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವ ‘ಶ್ರೀ ಕೃಷ್ಣ ಪಾರಿಜಾತ’ ಎಂಬ ನಾಟಕ ಸಣ್ಣ ಪ್ರಕಾರಗಳಲ್ಲಿ ಒಂದು. ಇವತ್ತಿಗೂ ಕೂಡ ಬಿಜಾಪುರ ಜಿಲ್ಲೆಯಲ್ಲಿ ೧೭ ತಂಡಗಳು, ಬಾಗಲಕೋಟೆ ಜಿಲ್ಲೆಯಲ್ಲಿ ೩೧ ತಂಡಗಳು ಈ ನಾಟಕವನ್ನು ಪ್ರದರ್ಶಿಸುತ್ತಾ ಜೀವಂತವಾಗಿಟ್ಟಿವೆ.
ಶ್ರೀ ಕೃಷ್ಣ ಪಾರಿಜಾತ ನಾಟಕದ ಹುಟ್ಟಿನ ಮೂಲವಿರುವುದು ನಮ್ಮ ನೆರೆಯ ಮಹಾರಾಷ್ಟ್ರದಲ್ಲಿ. ಅಲ್ಲಿನ ದಾಸ ಪರಂಪರೆಯಿಂದ ಒಡಮೂಡಿದ ‘ತಮಾಷಾ’ ಎಂಬ ಜಾನಪದ ಪ್ರಕಾರದಿಂದ ಪ್ರೇರಣೆಗೊಂಡು ನಮ್ಮ ಉತ್ತರ ಕರ್ನಾಟಕದ ಜನಪದರು ಇಲ್ಲಿ ಇದನ್ನು ‘ಶ್ರೀ ಕೃಷ್ಣ ಪಾರಿಜಾತ’ ಹೆಸರಿನಲ್ಲಿ ಹಾಡು ನೃತ್ಯದ ಮೂಲಕ ಪ್ರದರ್ಶಿಸ ತೊಡಗಿದರು. ದಾಸರಾಟದ ಶ್ರಿ ಕೃಷ್ಣ ಪಾರಿಜಾತ ನಾಟಕ ವ್ಯಾಸ ಮಹಾಭಾರತದ ಪೌರಾಣಿಕ ಕತೆಯನ್ನು ಒಳಗೊಂಡಿದೆ. ೧೯ನೇ ಶತಮಾನದಲ್ಲಿ ಇದನ್ನು ಪ್ರಥಮ ಬಾರಿಗೆ ರಚಿಸಿದವನು ರಾಯಚೂರು ಜಿಲ್ಲೆಯ ಅಪರಾಳ ಗ್ರಾಮದ ತಮ್ಮಣ್ಣ ಎಂಬ ಜಾನಪದ ಕವಿ. ನಂತರ ಬೆಳಗಾಂ ಜಿಲ್ಲೆ, ಗೋಕಾಕ ತಾಲೂಕಿನ ಕುಲಗೊಂಡ ಗ್ರಾಮದ ಮತ್ತೊಬ್ಬ ಜನಪದ ಕವಿ ತಮ್ಮಣ್ಣದಾಸ ಎಂಬಾತ ಕತೆಯನ್ನು ಪರಿಷ್ಕರಿಸಿ ಅದಕ್ಕೆ ನಾಟಕ ರೂಪಕೊಟ್ಟು ಬೆಳಗಾವಿ ಜಿಲ್ಲೆಯಲ್ಲಿ ಜನಪ್ರಿಯಗೊಳಿಸಿದ. ನಂತರ ಈ ನಾಟಕ ಇತರ ಜಿಲ್ಲೆಗಳಿಗೂ ಹರಡುತ್ತಾ ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಶಾಶ್ವತವಾಗಿ ನೆಲೆಯೂರಿತು.
ನಾಟಕದ ಮುಖ್ಯ ಸಾರಾಂಶ ಇಷ್ಟೆ. ದೇವಲೋಕದಿಂದ ನಾರದ ತಂದಿತ್ತ ಪಾರಿಜಾತ ಹೂವನ್ನು ಶ್ರೀ ಕೃಷ್ಣ ರುಕ್ಮಿಣಿಗೆ ನೀಡುತ್ತಾನೆ. ಇದರಿಂದ ಸತ್ಯಭಾಮಳಲ್ಲಿ ಅಸೂಯೆ, ತಳಮಳ ಉಂಟಾಗಿ ಸಿಡಿದೇಳುತ್ತಾಳೆ. ಸತ್ಯಭಾಮೆಯನ್ನು ಒಲಿಸಲು ಶ್ರೀ ಕೃಷ್ಣ ಕೊರವಂಜಿಯ ವೇಷತಾಳಿ ಪ್ರಯತ್ನಪಟ್ಟು ವಿಫಲನಾಗುತ್ತಾನೆ. ಕಡೆಗೆ ಪಾರಿಜಾತ ಗಿಡವೊಂದನ್ನು ತಂದು ಸತ್ಯಭಾಮೆಯ ಮನೆಯಂಗಳದಲ್ಲಿ ನೆಡುತ್ತಾನೆ. ಆದರೆ ಗಿಡದ ಹೂಗಳೆಲ್ಲಾ ಹಾರಿಹೋಗಿ ರುಕ್ಮಿಣಿ ಮನೆಯಂಗಳಕ್ಕೆ ಬೀಳುತ್ತವೆ. ಇದರಿಂದಾಗಿ ಭಕ್ತಿಗಿಂತ ತನ್ನ ಮೋಹಕ ಸೌಂದರ್ಯವೇ ಪ್ರಬಲವಾದದ್ದು ಎಂದು ನಂಬಿಕೊಂಡಿದ್ದ ಸತ್ಯಭಾಮಳಿಗೆ ಗರ್ವಭಂಗವಾಗಿ ರುಕ್ಮಿಣಿಯ ಜೊತೆ ಸ್ನೇಹ ಭಾವದಿಂದ ಜೀವಿಸುವುದರೊಂದಿಗೆ ಮುಕ್ತಾಯವಾಗುವ ಈ ನಾಟಕದ ಪ್ರದರ್ಶನ ಕೂಡ ಅತ್ಯಂತ ಸರಳವಾದದ್ದು.
ಕರಾವಳಿ ಪ್ರದೇಶದ ಯಕ್ಷಗಾನ ಅಥವಾ ದಕ್ಷಿಣ ಕರ್ನಾಟಕದ ಪೌರಾಣಿಕ ನಾಟಕಗಳ, ವೇಷಗಳ ಯಾವುದೇ ಅದ್ದೂರಿತನ ಇಲ್ಲಿ ಕಾಣುವುದಿಲ್ಲ. ಸಾಮಾನ್ಯವಾದ ಜುಬ್ಬ ಮತ್ತು ಕಚ್ಚೆ ಹಾಕಿಕೊಂಡ ವ್ಯಕ್ತಿ ಕೃಷ್ಣನ ಪಾತ್ರ ವಹಿಸಿದರೆ, ಸಾಧಾರಣ ಸೀರೆ ಧರಿಸಿ ರುಕ್ಮಿಣಿ, ಸತ್ಯಭಾಮೆಯರ ಪಾತ್ರವನ್ನು ಅಭಿನಯಿಸುತ್ತಾರೆ. ರಂಗಸಜ್ಜಿಕೆ ಕೂಡ ಅಷ್ಟೇ ಸರಳವಾಗಿರುತ್ತದೆ. ಸಾಮಾನ್ಯವಾಗಿ ೨ ರಿಂದ ೩ ಗಂಟೆಯೊಳಗೆ ಮುಕ್ತಾಯವಾಗುವ ಈ ನಾಟಕ ಕೆಲವೊಮ್ಮೆ ಪಾತ್ರಧಾರಿಗಳ ಸಂಭಾಷಣೆಯ ವೈಖರಿ ಮತ್ತು ವಾಕ್ ಚಾತುರ್ಯದ ಪರಿಣಾಮ ೬-೭ ಗಂಟೆಯವರೆಗೂ ಮುಂದುವರಿಯುತ್ತದೆ.
ಶ್ರೀ ಕೃಷ್ಣ ಪಾರಿಜಾತ ನಾಟಕವನ್ನು ಉತ್ತರ ಕರ್ನಾಟಕದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಕೌಜಲಗಿ ನಿಂಗವ್ವ ಎಂಬ ಅಭಿಜಾತ ಕಲಾವಿದೆಗೆ ಸಲ್ಲುತ್ತದೆ. ಈಕೆ ೧೯೦೪ರಲ್ಲಿ ಬೆಳಗಾವಿ ಜಿಲ್ಲೆಯಿಂದ ಬಿಜಾಪುರ ಜಿಲ್ಲೆಯ ಮಹಾಲಿಂಗಪುರಕ್ಕೆ ಬಂದು ನಾಟಕ ತಂಡ ಕಟ್ಟಿ ಶ್ರೀ ಕೃಷ್ಣ ಪಾರಿಜಾತ ಕಲೆಯನ್ನು ಪ್ರದರ್ಶಿಸುತ್ತಲೇ ದಂತಕತೆಯಾಗಿ ಹೋದಳು. ಈಕೆಯ ತಂಡದಲ್ಲಿ ಕೃಷ್ಣನ ಪಾತ್ರ ಮಾಡುತ್ತಿದ್ದ ನಣದಿ ರಾಮಚಂದ್ರ, ಬರಗಿ ರಾಚಯ್ಯ ಎಂಬುವವರ ಹೆಸರು ಇಂದಿಗೂ ಕೂಡ ಉತ್ತರ ಕರ್ನಾಟಕದ ನಾಟಕ ಪ್ರಿಯರ ಮನದಲ್ಲಿ ಹಸಿರಾಗಿದೆ.
ಕೌಜಲಗಿ ನಿಂಗವ್ವನ ನಂತರ ಶ್ರೀ ಕೃಷ್ಣ ಪಾರಿಜಾತ ನಾಟಕಕ್ಕೆ ರಾಷ್ಟ್ರ ಮಟ್ಟದ ಮನ್ನಣೆ ತಂದುಕೊಟ್ಟ ಕಲಾವಿದನೆಂದರೆ, ಕರ್ನಾಟಕ ಗಂಧರ್ವ, ಪಾರಿಜಾತ ಕೋಗಿಲೆ ಎಂಬ ಬಿರುದಿಗೆ ಪಾತ್ರವಾಗಿದ್ದ ಜಮಖಂಡಿಯ ಅಪ್ಪಾಲಾಲ್‌ನಧಾಫ್ ಎಂಬ ಅಪ್ಪಟ ದೇಸೀ ಪ್ರತಿಭೆ. ೧೯೩೫ರಲ್ಲಿ ನಾಟಕ ತಂಡ ಕಟ್ಟಿದ ಈ ಮುಸ್ಲಿಂ ಕಲಾವಿದ ಶ್ರೀ ಕೃಷ್ಣ ಪಾರಿಜಾತ ನಾಟಕವನ್ನು ಉತ್ತರ ಕರ್ನಾಟಕದಿಂದ ಹೊರತಂದು ಮುಂಬೈ, ದೆಹಲಿ, ಬೆಂಗಳೂರು, ಕೊಲ್ಕತ್ತ, ಚೆನ್ನೈ ನಗರಗಳಲ್ಲಿ ಪ್ರದರ್ಶಿಸಿ ಹಾಗೂ ದೂರದರ್ಶನದಲ್ಲೂ ಪ್ರದರ್ಶನ ನೀಡಿ ಈ ನಾಟಕಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ. ಅಂದಿನ ಅವಿಭಜಿತ ಬಿಜಾಪುರ ಜಿಲ್ಲೆಯ ನಾಟಕ ಮತ್ತು ಜನಪದ ಕಲೆಗಳಲ್ಲಿ ಇರುವ ವೈಶಿಷ್ಟ್ಯವೆಂದರೆ ಮುಸ್ಲಿಂ ಕುಟುಂಬದಿಂದ ಬಂದ ಕಲಾವಿದರು ಹೆಚ್ಚಾಗಿರುವುದು. ಕಲೆಗೆ ಜಾತಿ ಮತ್ತು ಧರ್ಮದ ಹಂಗಿಲ್ಲವೆಂಬುದನ್ನು ಈ ಭಾಗದ ಜನತೆ ತೋರಿಸಿ ಕೊಟ್ಟಿದ್ದಾರೆ. ಈ ಭವ್ಯ ಪರಂಪರೆ ಕೇವಲ ನಾಟಕಕ್ಕೆ ಸೀಮಿತವಾಗದೆ ಅನೇಕ ರೂಪು ತಾಳಿ ಜೀವ ನದಿಯಂತೆ ಹಬ್ಬ ಉತ್ಸವಗಳಲ್ಲಿ ಹರಿದು ಬರುತ್ತಿದೆ.
ಕೋಮು ಸೌಹಾರ್ದತೆಯ ಇಂತಹ ಮಾದರಿಗಳನ್ನು ಕಾಣಲು ನೀವು ಬಾಗಲಕೋಟೆಯಲ್ಲಿ ಪ್ರತಿ ವರ್ಷ ನಡೆಯುವ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಒಂದು ವಾರ ಕಾಲ ನಡೆಯುವ ಹೋಳಿ ಹಬ್ಬದ ಸಂದರ್ಭದಲ್ಲಿ ಜಾತಿ, ಧರ್ಮದ ಬೇಧವಿಲ್ಲದೆ ಪ್ರತಿ ದಿನ ಒಂದೊಂದು ಕೇರಿಯಿಂದ(ಮುಸ್ಲಿಂ ಕೇರಿ, ಹರಿಜನರ ಕೇರಿ, ಲಿಂಗಾಯಿತರ ಕೇರಿ, ಬಣಜಿಗರ ಕೇರಿ, ಬ್ರಾಹ್ಮಣರ ಕೇರಿ ಇತ್ಯಾದಿ) ಹೊರಡುವ ಬಂಡಿಗಳಲ್ಲಿ ಬಣ್ಣದ ಓಕುಳಿ ನೀರನ್ನು ತುಂಬಿಕೊಂಡು ಮೆರವಣಿಗೆಯ ಉದ್ದಕ್ಕೂ ಎಲ್ಲರತ್ತ ಎರಚುತ್ತಾ ಸಾಗುವುದನ್ನು ನೋಡುವುದೇ ಒಂದು ಆನಂದ. ಇದೇ ಸಂದರ್ಭದಲ್ಲಿ ಹಿಂದು-ಮುಸ್ಲಿಂ ಬೇಧವಿಲ್ಲದೆ ಮಕ್ಕಳು ಬಾಲಕೃಷ್ಣ, ರಾಮ, ಲವ-ಕುಶ, ಗಣೇಶನ ವೇಷ ಧರಿಸಿ ಮೆರವಣಿಗೆಯಲ್ಲಿ ಸಾಗುತ್ತಿದ್ದಂತೆ ನಮ್ಮ ಪೂರ್ವಿಕರ ಈ ಭವ್ಯ ಪರಿಕಲ್ಪನೆಗೆ ತಲೆ ಬಾಗಿ ನಮಿಸಬೇಕೆನಿಸುತ್ತದೆ.
(ಮಾಹಿತಿ ಕೃಪೆ- ಜೀನದತ್ತ ಹಡಗಲಿ)
[ಚಿತ್ರಗಳು-ಸಂಗ್ರಹದಿಂದ]
[ಗುಮ್ಮಟ ನಾಡಿನ ಕಥನ ೭]