ಆ ಘಟನೆ ನಡೆದದ್ದು ಹೀಗೆ. ನನ್ನ ಅಣ್ಣ ಅನಂತ ಅತ್ಯಂತ ಬುದ್ಧಿವಂತನಿದ್ದ. ಸಿದ್ಧಾಪುರದ ಸಿದ್ಧಿ ವಿನಾಯಕ ಹೈಸ್ಕೂಲಿಗೆ ಮುಖ್ಯಮಂತ್ರಿಯಾಗಿದ್ದ. ೯ ನೆಯ ಕ್ಲಾಸಿನಲಿದ್ದ. ಆಗೆಲ್ಲ ೮ ನೆಯ ಕ್ಲಾಸಿನಿಂದ ಇಂಗ್ಲಿಷ್ ಶುರುವಾಗುತ್ತಿತ್ತು. ಆದರೆ ನಮ್ಮ ಮನೆಯ ಮಕ್ಕಳೆಲ್ಲ ಎಲ್ಲಾ ವಿಷಯಗಳಲ್ಲೂ ಟೀಚರ್ಸ್ ಗಿಂತ ಜಾಣರಿದ್ದರು. ಹಾಗೆಂದು ಯಾರೂ ಗರ್ವಿಷ್ಠರೂ ಅವಿಧೇಯರೂ ಅಲ್ಲ. ದೀಕ್ಷಿತ ಮಾಸ್ತರು ಕ್ಲಾಸಿನಲ್ಲಿ ಇಂಗ್ಲಿಷ್ ಗ್ರಾಮರ್ ಕಲಿಸುತ್ತಿದ್ದರಂತೆ. ಅನಂತ ಅವರ ಪೆಟ್ ಸ್ಟೂಡೆಂಟ್ ಇದ್ದ. ಆ ದಿನ ಆ ಕ್ಷಣ ಅದೆಂಥ ಕೆಟ್ಟ ಗಳಿಗೆಯಾಗಿತ್ತೋ ಬೋರ್ಡಿನ ಮೇಲೆ ತಪ್ಪು ಬರೆದರಂತೆ. ಇಡೀ ಕ್ಲಾಸಿನವರು ತಪ್ಪು ಬರೆದುಕೊಳ್ಳುತ್ತಾರೆಂದು ಅನಂತ ಸಾವಕಾಶವಾಗಿ ಸರ್ ಎಂದು ನಿಂತು ಅವರ ಬಳಿ ಹೋಗಿ ಕಿವಿಯಲ್ಲಿ ಬೋರ್ಡಿನ ಮೇಲೆ ತಪ್ಪು ಬರೆದದ್ದನ್ನು ಹೇಳಿದನಂತೆ.
ತಕ್ಷಣ ಕೆಂಡಾಮಂಡಲವಾದ ದೀಕ್ಷಿತರು ‘ಗೆಟ್ ಔಟ್ ಯೂ ರ‍್ಯಾಸ್ಕಲ್’ ಅಂದರಂತೆ. ಅನಂತ ಕ್ಲಾಸಿನಿಂದ ಹೊರಗೆ ಹೋಗಲಿಲ್ಲ. ತನ್ನ ಜಾಗದಲ್ಲಿ ಹೋಗಿ ಕೂತ. ಮತ್ತೆ ದೀಕ್ಷಿತರು ಕೂಗಿ
‘ಸ್ಟ್ಯಾಂಡ್ ಅಪ್’ ಅಂದರಂತೆ. ಅನಂತ ಎದ್ದು ನಿಂತ.
‘ನಿನ್ನ ಕ್ಲಾಸಿಂದ ಹೊರಗೆ ಹಾಕಿದೇನಿ ಹೊರಗೆ ನಡಿ’ ಅಂದರಂತೆ
‘ನಾನೇನು ಮಾಡಿದೇನಿ ಹೊರಗೆ ಹಾಕ್ಲಿಕ್ಕೆ, ನಾ ಹೋಗದಿಲ್ಲ’ಅಂದನಂತೆ.
‘ನೀ ಹೋಗ್ತೀಯೋ? ನಾ ಹೋಗ್ಲೋ? ಇಷ್ಟೆಲ್ಲ ಹುಡುಗರ ಅಭ್ಯಾಸ ಹಾಳಾಗ್ತದೆ’ ಅಂದ ತಕ್ಷಣ
‘ನನ್ನಿಂದ ಯಾರಿಗೂ ಹಾಳಾಗೋದು ಬ್ಯಾಡಾ, ನಾನೇ ಹೋಗ್ತೇನಿ’ ಅಂತ ತನ್ನ ಪುಸ್ತಕಗಳನ್ನು ಜೋಡಿಸಿಕೊಂಡು ಹೊರಗೆ ಬಂದನಂತೆ.
ಅಷ್ಟಕ್ಕೆ ಬಿಡದ ದೀಕ್ಷಿತರು ‘ಇನ್ನೆಂದೂ ಶಾಲೆ ಕಡೆ ಮುಖ ಮಾಡ್ಬೇಡ ನಿನ್ನಂಥ ಕೆಲಸಕ್ಕೆ ಬಾರದ ಹುಡುಗ ಈ ಶಾಲೆಗೆ ಬರ‍್ಲಿಕ್ಕೆ ಯೋಗ್ಯ ಅಲ್ಲ’ ಅಂದರಂತೆ.
ಅನಂತ ದಡಬಡ ಮನೆಗೆ ಬಂದು ರೆನ್ ಅಂಡ್ ಮಾರ್ಟಿನ್ ಇಂಗ್ಲಿಷ್ ಗ್ರಾಮರ್ ಮನೆಯಿಂದ ತೆಗೆದುಕೊಂಡು ಹೋಗಿ ‘ಸರ್ ಮೊದ್ಲು ನೀವು ಸರಿಯಾಗಿ ಕಲೀರಿ. ಆಮೇಲೆ ಮಕ್ಕಳಿಗೆ ಕಲಿಸಬಹುದು. ಇದು ನಿಮಗೆ ಗಿಫ್ಟು’ ಅಂತ ಪುಸ್ತಕವನ್ನು ಟೇಬಲ್ ಮೇಲಿಟ್ಟು ಹೊರಟು ಬಂದ.
ನಡೆದದ್ದು ಇಷ್ಟೇ. ಆಗಿನ್ನು ರಾಮಕೃಷ್ಣ ಹೆಗಡೆಯವರು ಮಂತ್ರಿಯಾಗಿರಲಿಲ್ಲ. ಅವರ ಅಣ್ಣ ಗಣೇಶ ಹೆಗ್ಡೆಯ ಬಲ ದೀಕ್ಷಿತರಿಗಿತ್ತು. ದೀಕ್ಷಿತರು ಗಣೇಶ ಹೆಗಡೆಯವರ ಬಲದ ಮೇಲೆ ಈ ಘಟನೆಯನ್ನು ತೀರ ರಾದ್ಧಾಂತ ಮಾಡಿದರು. ಮಾರನೆಯದಿನ ಅನಂತ ಶಾಲೆಗೆ ಹೋಗಲಿಲ್ಲ. ಹೆಡ್‌ಮಾಸ್ಟರ್ ಸಿ. ಪದ್ಮನಾಭ ಆಚಾರ್ಯ ಅನಂತನನ್ನು ಶಾಲೆಗೆ ಕರೆಸಿದರು.
ಇಡೀ ಸ್ಟಾಫ್ ಆಫೀಸಿನಲ್ಲಿತ್ತು. ನಾನೂ ಹೋಗಿ ಹೊರಗೆ ನಿಂತಿದ್ದೆ. ಅನಂತನಿಗೆ ದೀಕ್ಷಿತರ ಕಾಲು ಮುಟ್ಟಿ ‘ನನ್ನದು ತಪ್ಪಾಯಿತು ಸರ್. ಇನ್ನೆಂದೂ ಹೀಗೆ ಮಾಡುವದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳು’ ಅಂದರು. ‘ನಾನೇನೂ ತಪ್ಪು ಮಾಡಿಲ್ಲ ನಾನೇಕೆ ಕ್ಷಮೆ ಕೇಳಲಿ?’ ಎಂದ ಅನಂತ.
‘ದೀಕ್ಷಿತರು ನಿನ್ನ ಟೀಚರು ನಿನಗಿಂತ ವಯಸ್ಸಿನಲ್ಲಿ ದೊಡ್ಡವರು ಕ್ಷಮೆ ಕೇಳು’
‘ಅರೆ ದೊಡ್ಡವರಿದ್ದಾರೆಂದಾಕ್ಷಣ ತಪ್ಪು ಮಾಡದ ನಾನೇಕೇ ಕ್ಷಮೆ ಕೇಳಲಿ ಸಾಧ್ಯವೇ ಇಲ್ಲ. ನಾನೊಂದು ವೇಳೆ ತಪ್ಪು ಮಾಡಿದ್ದರೆ ಹೊಡೆತ ಕೂಡ ತಿನ್ನಲು ಸಿದ್ಧನಿದ್ದೇನೆ. ಆದರೆ ಸುಮ್ಮ-ಸುಮ್ಮನೆ ಯಾಕೆ ಕ್ಷಮೆ ಕೇಳಲಿ. ತಪ್ಪು ಮಾಡಿದ್ದು ದೀಕ್ಷತರು ನಾನಲ್ಲ.’ ಅಂದ.
ಇಡೀ ಸ್ಟಾಫಿನ ಪ್ರತಿಯೊಬ್ಬ ಟೀಚರ್ ಒತ್ತಾಯಿಸಿದರು. ಅನಂತ ಕ್ಷಮೆ ಕೇಳಲಿಲ್ಲ. ಇನ್ನು ನಿನ್ನನ್ನು ಶಾಲೆಗೆ ಸೇರಿಸಿಕೊಳ್ಳುವದಿಲ್ಲ ಅಂದರು.
‘ಅದರಿಂದ ನನಗೇನೂ ಹಾನಿಯಿಲ್ಲ. ಇಂಥ ಶಾಲೆಗೆ ಬಂದು ತಪ್ಪು-ತಪ್ಪು ಕಲಿಯುವದಕ್ಕಿಂತ ಮನೆಯಲ್ಲಿ ನನಗೆ ನಮ್ಮಪ್ಪ ಸರಿಯಾಗಿ ಕಲಿಸುತ್ತಾನೆ. ಅಲ್ಲೇ ಕಲಿತೇನಿ’ ಎಂದು ಮನೆಗೆ ಬಂದು ಬಿಟ್ಟ.
ಬೇರೆ ಮಕ್ಕಳಾದರೆ ಶಾಲೆ ಬಿಟ್ಟು ಪೋಲಿ ಬಿದ್ದು ಅಲೆದಾಡುತ್ತಿದ್ದರು. ಅಧ್ಯಯನಶೀಲ ಅನಂತ ಮನೆಯಲ್ಲಿ ಕೂತು ಫ್ರೆಂಚ್, ಗ್ರೀಕ್, ಲ್ಯಾಟಿನ್, ಜರ್ಮನ್ ಭಾಷೆಗಳನ್ನು ಅತ್ಯಂತ ಚೆನ್ನಾಗಿ ಅಭ್ಯಸಿಸಿದ. ಸಿದ್ದಾಪುರದ ಮೆಟ್ರಿಕ್ ಕ್ಲಾಸಿನವರಿಗೆ - ಸಾಗರದಿಂದ ವಾರಕ್ಕೊಮ್ಮೆ ಬರುವ ಕಾಲೇಜು ಹುಡುಗರಿಗೆ ಗಣಿತ, ಸೈನ್ಸ್, ಇಂಗ್ಲಿಷ್ ಹೇಳಿಕೊಡುತ್ತಿದ್ದ ದುಡ್ಡಿಗಲ್ಲ ಫ್ರೀ. ಒಂದೇ ಒಂದು ಬಾರಿ ಯಾರ ಮುಂದೂ ಶಾಲೆಯ ಘಟನೆ ಹೇಳುವದಾಗಲಿ ದೀಕ್ಷಿತರನ್ನು ಬಯ್ದದ್ದಾಗಲಿ ನಾನು ಕೇಳಲಿಲ್ಲ. ಮನೆಯ ಕಟ್ಟೆಯ ಮೇಲೆ ಅನಂತ ತನ್ನಷ್ಟಕ್ಕೆ ತಾನು ಓದುತ್ತ ಬರೆಯುತ್ತ ಕುಳಿತಿರುತ್ತಿದ್ದ. ಆತ ಎಂದೆಂದೂ ಯಾರ ತಂಟೆಗೂ ಹೋದವನಲ್ಲ. ನಾವು ಸುಮ್ಮನಿದ್ದು ಬಿಟ್ಟರಾಯಿತೇ? ಜನ ಸುಮ್ಮನಿರಬೇಕಲ್ಲ.
‘ಸಣ್ಣಮ್ಮಾ ಎಷ್ಟು ಫಾರೆನ್ ಭಾಷೆ ಬಂದ್ರೇನು. ನಿಮ್ಮ ಪುಟ್ಟಪ್ಪಾ ಮಾಟ್ರಿಕ್ ಸಹಾ ಪಾಸಾಗಲಿಲ್ಲ. ನಮ್ಮ ಮಕ್ಕಳು ಪುಟ್ಟಪ್ಪನಷ್ಟು ಜಾಣರಲ್ದಿದ್ರೂ ಮೆಟ್ರಿಕ್ ಮಾಡಿದ್ರಪ್ಪಾ.’ ಅಂತ ನಮ್ಮಮ್ಮನ್ನ ಮನೇತನಕ ಬಂದು ಚುಚ್ಚಿ ಹೋಗುತ್ತಿದ್ದರು. ಮೆಟ್ರಿಕ್ ಪರೀಕ್ಷೆಗೆ ಹೈಸ್ಕೂಲಿನಿಂದಲೇ ಪರೀಕ್ಷೆ ಫಾರ್ಮ್ ತುಂಬಬೇಕಲ್ಲ. ಸಿದ್ಧಿವಿನಾಯಕ ಹೈಸ್ಕೂಲಿನಿಂದ ಅದು ಸಾಧ್ಯವಿರಲಿಲ್ಲ. ಅದಕ್ಕೆ ನನ್ನಮ್ಮಂದೇನು ತಪ್ಪು? ಅಥವಾ ಪುಟ್ಟಪ್ಪನದೇನು ತಪ್ಪು ಆತ ಯಾರ ಹತ್ತಿರವಾದರೂ ತಂಟೆ ತಕರಾರಿಗೆ ಹೋಗುತ್ತಿದ್ದನೇ.....? ಸಣ್ಣಮ್ಮನ ಮಕ್ಕಳು ಬುದ್ಧಿವಂತರೂ ಅಂದ್ರೆ ದೀಡ್ ಪಂಡಿತ್ರು ಅತಿ ಬುದ್ಧಿವಂತ್ರು......ಎಂದು ನಮ್ಮನ್ನ ಅಣಿಕಿಸುವಾಗ ಅವಳು ಬಿಕ್ಕಿ-ಬಿಕ್ಕಿ ಅಳುವದನ್ನೊಂದು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯವಿರಲಿಲ್ಲ. ಕಮೀಶನರಂಥವರೆಲ್ಲ ಸ್ನೇಹಿತರಿದ್ದ ಅಪ್ಪ ಎನ್ನಿಸಿಕೊಂಡವ ವಿನಾಕಾರಣ ಮಗನನ್ನು ಹೊಡೆದು ಅರೆ ಜೀವ ಮಾಡುತ್ತಿದ್ದವ ಮಗನಿಗಾಗಿ ಏನಾದರೂ ಮಾಡಬಹುದಿತ್ತಲ್ಲ......? ಮಾಡಲಿಲ್ಲ. ಊರ ನಿರ್ಗತಿಕರಿಗೆಲ್ಲ ಸಹಾಯ ಮಾಡುತ್ತಿದ್ದ. ಆದರೆ ಸಿಟ್ಟಿನ ಭರದಲ್ಲಿ ಅನಂತನ ಸ್ಕೂಲ್ ಲಿವ್ಹಿಂಗ್ ಸರ್ಟಿಫಿಕೇಟಿನಲ್ಲಿ ಕೆಂಪು ಶಾಯಿಯಿಂದ ಕೆಟ್ಟ ಹುಡುಗನೆಂದು ಬರೆದ ಶರಾ ಅಪ್ಪ ತಿದ್ದಿಸಲಿಲ್ಲ. ವಯಸ್ಸಿಗೆ ಮೀರಿದ ಗಾಂಭೀರ್ಯ. ಹಾಗಾಗಿ ಅನಂತನಿಗೆ ಬೇರೆ ಶಾಲೆಯಲ್ಲಿ ಪ್ರವೇಶ ಸಿಗುವದು ಅಸಾಧ್ಯವಿತ್ತು.
‘ಸುಮಿ ನೀನು ಕ್ಲಾಸಿನಲ್ಲಿ ಸುಮ್ಮನೇ ಕೂಡ್ರು. ಎದ್ದೆದ್ದು ಕುಣ್ದಾಡಿ ಪ್ರಶ್ನೆಗೆ ಉತ್ತರ ಕೊಡ್ಲಿಕ್ಕೆ ಹೋಗಬ್ಯಾಡಾ. ನನ್ನ ಮಕ್ಕಳನ್ನ ಎಲ್ರೂ ದಡ್ರು ಅಂತ ತಿಳಿದ್ರೆ ತಿಳೀಲಿ. ನೀ ಮಾತ್ರ ಸುಮ್ನೇ ಕೂತು ಮ್ಯಾಟ್ರಿಕ್ ಮುಗಿಸು. ಶಂಕ್ರ ಇಷ್ಟು ಕಷ್ಟ ಪಟ್ಟು ನಿನ್ನ ಫೀಸು ತುಂಬಿದಾನೆ. ನಿನ್ನ ಹಿಂದೆ ಸಾವಿ, ಗೋವಿಂದಾ ಇದ್ದಾರೆ. ಅವ್ರೂ ಅದೇ ಶಾಲೇಲಿ ಓದ್ಬೇಕು ನಿಂಗೆ ಈ ವಿಷಯ ಯಾವಾಗಲೂ ನೆನಪಿರಲಿ.’
ಅಮ್ಮನ ಈ ಎಚ್ಚರಿಕೆಯನ್ನು ನಾನು ಎಂ.ಎ. ಮಾಡಿದರೂ ಮರೆಯಲಿಲ್ಲ.
(ಮುಂದುವರಿಯುವುದು)
[ಸುಮಿತ್ರಾ ಮೋತಿಲಾಲ ಹಲವಾಯಿ ಆತ್ಮಕಥನ]