ಕಳೆದ ಮೂರು ವರ್ಷದ ಹಿಂದೆ ಜಿಯಾಂಗ್ ಡಬಾವೊ ಎಂಬ ವ್ಯಕ್ತಿ ಚೀನಾದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಯಂತ್ರಕ್ಕೆ ಸಿಕ್ಕು ತನ್ನ ಕೈ ಕಳೆದುಕೊಂಡ. ಆತನ ಬಾಸ್ ಪರಿಹಾರ ನೀಡಲು ನಿರಾಕರಿಸಿದ. ಉದ್ಯೋಗವನ್ನೂ ಕಳೆದುಕೊಂಡ ಜಿಯಾಂಗ್, ದಿಕ್ಕು ತೋಚದೆ ಅಂತರ್ಜಾಲದ ಮೊರೆ ಹೋದ. ಅಲ್ಲಿ, QQ ಎನ್ನುವ ಪ್ರಸಿದ್ಧ ಸೋಷಿಯಲ್ ನೆಟ್ ವರ್ಕ್ ತಾಣವೊಂದರಲ್ಲಿ ವಕೀಲರೊಬ್ಬರು ಸಹಾಯಕ್ಕೆ ಬಂದರು. ಅಂತೂ ಜಿಯಾಂಗ್ ೩೦,೦೦೦ ಡಾಲರ್ ಪರಿಹಾರವನ್ನ ಪಡೆಯುವಲ್ಲಿ ಯಶಸ್ವಿಯಾದ.
ಜಿಯಾಂಗ್ ನ ಈ ಪ್ರಕರಣ ಚೀನಾದಲ್ಲಿ ವೆಬ್ ಬಳಕೆ ಹೆಚ್ಚಾಗುತ್ತಿರುವುದಕ್ಕೆ ಮತ್ತು ಸರ್ವವ್ಯಾಪಿಯಾಗುತ್ತಿರುವುದಕ್ಕೆ ಸಾಕ್ಷಿ. ಅದರಲ್ಲೂ ವೆಬ್ ತಾಣಗಳು ಅಲ್ಲಿನ ಕಾರ್ಮಿಕ ವರ್ಗದ ಧ್ವನಿಯಾಗುವತ್ತ ಮುನ್ನಡೆದಿವೆ.
ವೆಬ್ ಬಳಕೆಯಲ್ಲಿನ ಈ ಬೆಳವಣಿಗೆ ಅಲ್ಲಿನ ಆಡಳಿತ ಮತ್ತು ಕಾರ್ಖಾನೆಗಳ ನಿದ್ದೆಕೆಡಿಸಿದ್ದು, ವೆಬ್ ಫೋರಂಗಳತ್ತ ಕಣ್ಣಿಡುವಂತೆ ಮಾಡಿವೆ. ಕಾರ್ಮಿಕರ ದೂರುಗಳಿಗೆ ಸ್ಪಂದಿಸುವಂತಹ ತಾಣಗಳನ್ನ ಮುಚ್ಚಿಸಲಾಗುತ್ತಿದೆ ಅಥವಾ ಕಾರ್ಮಿಕರ ಪ್ರತಿಭಟನೆ ಇನ್ನಿತರ ಸುದ್ದಿಗಳನ್ನ ವೆಬ್ ಗಳಿಂದ ಬಲವಂತವಾಗಿ ತೆಗೆಯಲಾಗುತ್ತಿದೆ.
ಕಳೆದ ಜುಲೈನಲ್ಲಿ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಉಯಿಘರ್ ಗಳನ್ನ ಗಲಭೆಗೆ ಪ್ರಚೋದಿಸಲು ಮೂಲಭೂತವಾದಿಗಳು ಅಂತರ್ಜಾಲವನ್ನ ಬಳಸಿಕೊಂಡಿದ್ದರು ಎನ್ನುವುದು ಚೀನಾದ ಆಡಳಿತಾಧಿಕಾರಿಗಳ ವಾದ: ಪರಿಣಾಮ ಆ ಪ್ರದೇಶದಲ್ಲಿನ ಅಂತರ್ಜಾಲ ಸೇವೆಯನ್ನ ಕೆಲವು ದಿನಗಳ ವರೆಗೆ ಕಡಿತಗೊಳಿಸಲಾಗಿತ್ತು.
‘ಚೀನಾದ ಕಾರ್ಮಿಕ ವರ್ಗ ಯಾವಾಗ ದಂಗೆ ಏಳುತ್ತಾರೆ ಅಂತ ಯಾರೂ ಭವಿಷ್ಯ ಹೇಳಲಾರರು. ಅದು ಎಂದಾದರೂ ಒಮ್ಮೆ ಸಂಭವಿಸಿದರೂ,ಅದರಿಂದಾಗುವ ಪರಿಣಾಮ ಅಗಾಧ’ ಅಂತಾರೆ ಚೀನೀಸ್ ಯುನಿವರ್ಸಿಟಿ ಆಫ್ ಹಾಂಕಾಂಗ್ ನ ಪ್ರಾಧ್ಯಾಪಕ ಜಾಕ್ ಕ್ಯೂ.
ಕೆಲವು ವರ್ಷಗಳ ಹಿಂದಷ್ಟೇ ಚೀನಾದ ಕಾರ್ಮಿಕ ವರ್ಗಕ್ಕೆ ಕೈಗೆಟುಕದಾಗಿದ್ದ ಅಂತರ್ಜಾಲ ಈಗ ಇಂಟರ್ನೆಟ್ ಕೆಫೆಗಳ ವ್ಯಾಪಕ ಹೆಚ್ಚಳ ಹಾಗೂ ಮೊಬೈಲ್ ನಲ್ಲಿ ಅಂತರ್ಜಾಲ ಸೇವೆಯಿಂದಾಗಿ ಹೆಚ್ಚು ಬಳಕೆಗೆ ಬರುತ್ತಿದೆ. ಫೇಸ್ ಬುಕ್, ಟ್ವಿಟರ್ ಗಳಂತಹ ತಾಣಗಳು ಸೆನ್ಸಾರ್ ಗೆ ಒಳಪಟ್ಟಿರುವ ಚೀನಾದಲ್ಲಿ ಕಾರ್ಮಿಕ ತಾಣಗಳು ಸಂವಹನಕ್ಕೊಂದು ವೇದಿಕೆಯಾಗಿವೆ.
ಅಂತರ್ಜಾಲ ಸಂವಹನದಲ್ಲಿನ ಈ ಬೆಳವಣಿಗೆ, ಕಾರ್ಖಾನೆಗಳಲ್ಲೂ ಇಂಟರ್ನೆಟ್ ಕೇಂದ್ರಗಳನ್ನ ಹೊಂದಲು ಪ್ರೇರಣೆ ನೀಡಿವೆ. ಫಾಕ್ಸ್ ಕಾನ್ ನಂತಹ ದೊಡ್ಡ ದೊಡ್ಡ ಕಂಪನಿಗಳು ಈ ಸೌಲಭ್ಯ ಒದಗಿಸುತ್ತಿವೆ. ಈ ಕಂಪನಿ ತಮ್ಮದೇ ಆದ ಪ್ರತ್ಯೇಕ ವೆಬ್ ತಾಣವನ್ನ ಹೊಂದಿದ್ದು, ಈ ಮೂಲಕ ತಮ್ಮ ಕಾರ್ಮಿಕರಿಗೆ ವಾರ್ತಾ ಪತ್ರಗಳ ರವಾನೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಸಂವಹನ ನಡೆಸುತ್ತಿವೆ. ಕೆಲ ತಿಂಗಳ ಹಿಂದೆ ಇದೇ ಕಂಪನಿಯ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸಂದರ್ಭ ಸುದ್ದಿಗಾಗಿ ಈ ತಾಣಕ್ಕೆ ಸಾಕಷ್ಟು ಮಂದಿ ಭೇಟಿ ಕೊಟ್ಟಿದ್ದರು.
ಜಿಗರ್ ಅನ್ನುವ ಇನ್ನೊಂದು ತಾಣ ಅಲ್ಲಿನ ಕಾರ್ಮಿಕರ ಧ್ವನಿಗಳಿಗೆ ವೇದಿಕೆಯಾಗಿದ್ದು, ಇದರಲ್ಲಿ ಪ್ರತಿ ತಿಂಗಳು ಸುಮಾರು ಸಾವಿರದಷ್ಟು ಲೇಖನಗಳು ಪ್ರಕಟವಾಗುತ್ತವೆ. ಅವುಗಳಲ್ಲಿ ಬಹುತೇಕ ಲೇಖನಗಳು ಅಲ್ಲಿನ ಸರ್ಕಾರಿ ಕಾರ್ಖಾನೆಗಳ ನೌಕರರು ಖಾಸಗೀಕರಣ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ ಬರೆದ ಬರಹಗಳಾಗಿರುತ್ತವೆ.
‘ಚೀನಾದ ಮುಖ್ಯವಾಹಿನಿ ಮಾಧ್ಯಮ ಇಂತಹ ಲೇಖನಗಳನ್ನ ಪ್ರಕಟಿಸುವುದಿಲ್ಲ. ಕೆಲವು ವೆಬ್ ತಾಣಗಳಲ್ಲೂ ಇವುಗಳಿಗೆ ಅವಕಾಶವಿಲ್ಲ. ಆದರೆ ನಮ್ಮಲ್ಲಿ ನಿರ್ಬೀಡೆಯಿಂದ ಪ್ರಕಟಿಸುತ್ತೇವೆ’ ಅಂತಾರೆ ವೆಬ್ ನ ಸ್ಥಾಪಕರು.
|