ಟರ್ಕಿಯ ಸುಲ್ತಾನ್ ಕೊಸೆನ್ ಎನ್ನುವ ಈ ವ್ಯಕ್ತಿಯ ಎತ್ತರ ಬರೋಬ್ಬರಿ ೮ ಅಡಿ ೧ ಅಂಗುಲ. ೨೦೧೦ರಲ್ಲಿ ಹೊರಬರಲಿರುವ ಗಿನ್ನಿಸ್ ರೆಕಾರ್ಡ್ ಆವೃತ್ತಿಯಲ್ಲಿ ‘ವಿಶ್ವದ ಅತಿ ಎತ್ತರದ ಮನುಷ್ಯ’ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುತ್ತಿದ್ದಾನೆ. ಮಾತ್ರವಲ್ಲ, ಅತಿ ಉದ್ದದ ಅಂಗೈ ಉಳ್ಳ, ಅತಿ ಉದ್ದದ ಪಾದಗಳುಳ್ಳ ದಾಖಲೆಗಳೂ ಇತನ ಹೆಸರಿಗೆ ಸಲ್ಲುತ್ತಿವೆ.
೨೭ ವರ್ಷದ ಇತನ ಅಂಗೈಗಳು ಸುಮಾರು ೧೦.೮ ಅಂಗುಲವಿದೆಯಂತೆ. ಅಂತೆಯೇ ಪಾದ ೧೪.೩ ಅಂಗುಲ ಉದ್ದವಿದೆ. ದೇಹದಲ್ಲಿನ ಅಧಿಕ ಹಾರ್ಮೋನು ಉತ್ಪತ್ತಿಯಿಂದಾಗಿ ಈ ‘ಬೆಳವಣಿಗೆ’ ಕಂಡುಕೊಂಡಿರುವ ಕೊಸೆನ್, ಸದ್ಯ ಹುಡುಗಿಯ ಹುಡುಕಾಟದಲ್ಲಿದ್ದಾನೆ.
‘ನನ್ನ ಎತ್ತರಕ್ಕೆ ಹೊಂದುವಂತಹ ಕಾರನ್ನ ಹುಡುಕಿಕೊಳ್ಳುವುದು ನನ್ನ ಮೊದಲ ಆದ್ಯತೆ. ಆದರೆ, ಅದಕ್ಕಿಂತ ಮೊದಲು, ನಾನು ಒಬ್ಬ ಚೆಲುವೆಯನ್ನ ಮದುವೆಯಾಗಬಯಸುತ್ತೇನೆ.’ ಅಂತ ತಮ್ಮ ಮನದ ಇಂಗಿತ ವ್ಯಕ್ತಪಡಿಸುತ್ತಾರೆ ಕೊಸೆನ್.
‘ಈವರೆಗೆ ನನಗೊಬ್ಬಳು ಗರ್ಲ್ ಫ್ರೆಂಡನ್ನ ಹುಡುಕಿಕೊಳ್ಳುವುದು ಸಾಧ್ಯವಾಗಿಲ್ಲ. ಎಲ್ಲ ಹುಡುಗಿಯರೂ ನನ್ನ ನೋಡಿದರೆ ಭಯ ಪಡುತ್ತಾರೆ. ಈಗಲಾದರೂ ಹುಡುಕುವ ಪ್ರಯತ್ನ ಮಾಡುತ್ತೇನೆ. ಈಗ ಸ್ಪಲ್ಪ ಫೇಮಸ್ ಆದ್ರೆ ಹೆಚ್ಚೆಚ್ಚು ಹುಡುಗಿರನ್ನ ಭೇಟಿ ಮಾಡಬಹುದು. ಆಗ ವಿವಾಹದ ಅದೃಷ್ಟ ಕೈಗೂಡಲೂ ಬಹುದು.’ ಅಂತ ಆಸೆ ವ್ಯಕ್ತಪಡಿಸುತ್ತಾರೆ.
ತಮ್ಮ ಎತ್ತರಕ್ಕೆ ತಕ್ಕಂತ ಬಟ್ಟೆ ಸಿಗದಿರುವುದು, ಸಾಮಾನ್ಯ ಕಾರಿನಲ್ಲಿ ಕೂರಲು ಆಗದಿರುವುದು-ಕೂತರೂ ಮುದುರಿ ಕೂರಬೇಕಾಗುವುದು ಅವರ ಇನ್ನಿತರ ಕಷ್ಟಗಳು. ‘ನಾನು ಎಲ್ಲರಂತೆ ಶಾಪಿಂಗಿಗೆ ಹೋಗುವುದೂ ಸಾಧ್ಯವಿಲ್ಲ. ನನಗೆಂದೇ ವಿಶೇಷ ಬೇಡಿಕೆ ಇಟ್ಟು ಬಟ್ಟೆ ಹೊಲಿಸಬೇಕು. ಬಾಗಿಲುಗಳ ಮುಂದೆ ಬಗ್ಗಿಯೇ ನಡೆಯಬೇಕು’ ಅಂತ ತಮ್ಮ ಅಳಲು ತೋಡಿಕೊಳ್ಳುತ್ತಾರೆ.
‘ನನ್ನೀ ಎತ್ತರದಿಂದ ಆಗಿರುವ ಉಪಯೋಗ ಅಂದರೆ, ದೂರದಿಂದಲೇ ನಾನು ವ್ಯಕ್ತಿಗಳನ್ನ ಗುರುತಿಸಬಲ್ಲೆ. ಆದರೆ ಜನ ನನ್ನನ್ನ ವಿದ್ಯುತ್ ಬಲ್ಬ್ ಗಳನ್ನ ಬದಲಾಯಿಸಲಿಕ್ಕೆ, ಮನೆಯ ಪರದೆಗಳನ್ನ ನೇತುಹಾಕಲಿಕ್ಕೆ.... ಇಂತಹ ಕೆಲಸಕ್ಕೆ ಹೆಚ್ಚು ಉಪಯೋಗಿಸಿಕೊಳ್ತಾರೆ.’ ಅಂತ ಬೇಸರ ವ್ಯಕ್ತಪಡಿಸುತ್ತಾರೆ.
ಗಿನ್ನಿಸ್ ರೆಕಾರ್ಡ್ ವಕ್ತಾರರ ಹೇಳಿಕೆಯಂತೆ, ಕಳೆದ ಒಂದು ದಶಕದಲ್ಲಿ ಎಂಟು ಅಡಿ ಮೇಲ್ಪಟ್ಟು ಎತ್ತರ ಹೊಂದಿರುವ ವ್ಯಕ್ತಿಯಾಗಿ ದಾಖಲಾದ ಮೊದಲ ವ್ಯಕ್ತಿ ಈತನಾಗಿದ್ದಾನೆ.
ತನ್ನ ಹತ್ತನೇ ವರ್ಷದವರೆಗೂ ಸಾಮಾನ್ಯ ಬೆಳವಣಿಗೆ ಹೊಂದಿದ್ದ ಕೊಸೆನ್, ಬಳಿಕ ಪಿಟ್ಯೂಟರಿ ಗ್ರಂಥಿಯಲ್ಲಿನ ಬದಲಾವಣೆಯಿಂದಾಗಿ ಹೀಗೆ ಅಡ್ಡಾದಿಡ್ಡಿ ಬೆಳೆದಿದ್ದಾರೆ. ಕಳೆದ ವರ್ಷ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನ ಕಿತ್ತೊಗೆಯಲಾಗಿದ್ದು, ಅಲ್ಲಿಗೆ ಅವರ ದೈಹಿಕ ಬೆಳವಣಿಗೆ ನಿಂತಿದೆ.
ಸದ್ಯ ಲಂಡನ್ನಿನಲ್ಲಿ ಸುತ್ತುತ್ತ ಆಕರ್ಷಣೆಯ ಕೇಂದ್ರವಾಗಿರುವ ಸುಲ್ತಾನ್, ಮುಂದೆ ಅಮೆರಿಕಾ ಹಾಗೂ ಜರ್ಮನಿಗಳಿಗೂ ಭೇಟಿ ನೀಡಲಿದ್ದಾರೆ.
|