ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕಣಗಾಲ್ ಸರಣಿ: ನೂರು ರೂ. ಕೊಟ್ಟು ಹೊರಟುಹೋಗು ಎಂದರು    
ಪಿ.ಎಚ್. ವಿಶ್ವನಾಥ್
ಬುಧವಾರ, 23 ಸೆಪ್ಟೆಂಬರ್ 2009 (05:01 IST)
ಪುಟ್ಟಣ್ಣ ಕಣಗಾಲ್

ಪುಟ್ಟಣ್ಣನವರು ಬೆಂಗಳೂರಿನಲ್ಲಿದ್ದಾಗ ಏರ್ ಲೈನ್ಸ್ ಹೋಟೆಲ್‌ನಲ್ಲಿ ಇರುತ್ತಾರೆನ್ನುವುದು ಕನ್‌ಫರ್ಮ್ ಆದ ಮೇಲೆ ನನ್ನ ಏರ್‌ಲೈನ್ಸ್ ಯಾತ್ರೆ ಪ್ರಾರಂಭವಾಯಿತು. ಆದರೆ ಡೈರೆಕ್ಟರ್‌ನ ನೋಡೋದು ಅಷ್ಟು ಸುಲಭವಾಗಿರಲಿಲ್ಲ, ಯವಾಗಲೂ ಅವರ ಟೀಮ್‌ನವರು ನಾಲ್ಕೈದು ಜನರು ಇದ್ದೇಇರುತ್ತಿದ್ದರು. ಅವರು ಬಿಸಿಯಾಗಿದ್ದಾರೆ, ಡಿಸ್ಕಷನ್‌ನಲ್ಲಿದ್ದಾರೆ, ಅವರನ್ನ ನೋಡೋಕಾಗಲ್ಲ ಏನೂಂತ ಇಲ್ಲೇ ಹೇಳಿ ಹೀಗೆ ಏನಾದರೂ ಹೇಳುತ್ತಿದ್ದರಾಗಲೀ ನನ್ನನ್ನು ಒಳಗೆ ಬಿಡಲೇ ಇಲ್ಲ. ಸುಮಾರು ದಿನಗಳು ನಾನು ಹೊರಗೆ ಕಾಯುತ್ತಿರುವಾಗ ಅವರು ರೆಡಿಯಾಗಿ ತಮ್ಮ ರೂಂನಿಂದ ಹೊರಬಂದು ಕಾರಿನಲ್ಲಿ ಹತ್ತಿ ಹೋಗುತ್ತಿದ್ದರು. ಆದರೆ ನನಗೆ ಅವರನ್ನು ನೇರವಾಗಿ ಹೋಗಿ ಮಾತಾಡಿಸಲು ಆಗಲಿಲ್ಲ. ಅವರ ಕಣ್ಣಿಗೆ ಬಿದ್ದರೆ ಅವರು ನನ್ನನ್ನು ಗುರುತಿಸಬಹುದು, ಮಾತಾಡಿಸಬಹುದು ಎಂದುಕೊಂಡು ಅವರಿಗೆ ಕಾಣುವಂತೆ ದೂರದಲ್ಲಿ ನಿಂತಿರುತ್ತಿದ್ದೆ, ಅದೂ ಪ್ರಯೋಜನಕ್ಕೆ ಬರಲಿಲ್ಲ. ಯಾವಾಗಲೂ ಅಲ್ಲೇ ನಿಂತಿರುತ್ತಿದ್ದ ನನ್ನ ಕಡೆಗೆ ನೋಡಿ ಒಂದೆರೆಡು ಬಾರಿ ಅವರು ಪಕ್ಕದಲಿದ್ದವರ ಬಳಿ ನನ್ನ ಬಗ್ಗೆ ಕೇಳಿದಂತೆ ಅನ್ನಿಸಿತು, ಅವರು ಏನು ಹೇಳುತಿದ್ದರೋ ಏನೋ ಅಂತೂ ಮಾತನಾಡಿಸದೆ ಹಾಗೇ ಹೊರಟು ಹೋಗುತ್ತಿದ್ದರು.

ಪತ್ರಿಕೆಗಳಲ್ಲಿ ‘ಫಲಿತಾಂಶ’ ಚಿತ್ರದ ಸಿದ್ಧತೆಗಳ ಬಗ್ಗೆ ವರದಿಗಳು ಬರತೊಡಗಿದವು. ‘ಕಾಲೇಜುರಂಗ’ ಚಿತ್ರದ ಸುದ್ದಿಗಳೂ ಪ್ರಕಟವಾಗುತ್ತಿದ್ದವು. ಏರ್‌ಲೈನ್ಸ್ ಯಾತ್ರೆ ಪ್ರತಿದಿನ ಎನ್ನುವಂತೆ ನಡೆಯುತ್ತಿದ್ದರೂ ನನಗೆ ಪುಟ್ಟಣ್ಣನವರನ್ನು ಒಮ್ಮೆಕೂಡ ಮಾತನಾಡಿಸಲು ಸಾಧ್ಯವಾಗಲೇ ಇಲ್ಲ. ಹೀಗೆ ಒಂದು ದಿನ ಪುಟ್ಟಣ್ಣನವರ ಸಹಾಯಕರುಗಳಿಂದ ಅವರನ್ನ ನೋಡೋಕಾಗಲ್ಲ ಅಂತ ಹೇಳಿಸಿಕೊಂಡು ತುಂಬಾ ನಿರಾಶನಾಗಿ ಬೇಸರದಲ್ಲಿ ಕಾಲೆಳೆದುಕೊಂಡು ಹಿಂತಿರುಗುತ್ತಿದ್ದಾಗ ಸಪ್ಲಯರ್ ರಾಮು ಕಾಫಿ ಟ್ರೇ ಹಿಡಿದುಕೊಂಡು ಅವರ ರೂಮಿನ ಕಡೆಗೇ ಹೋಗುತ್ತಿದ್ದವರು ನನ್ನ ಅವಸ್ಥೆ ಕೇಳಿ ತಿಳಿದು ಒಂದು ಐಡಿಯಾ ಕೊಟ್ಟರು. ನೀವು ಬೆಳಗಿನ ಹೊತ್ತು ಬಂದರೆ ಯಾರಾದರೂ ಇದ್ದೇಯಿರುತ್ತಾರೆ, ಮಧ್ಯಾಹ್ನದ ನಂತರ ಎಲ್ಲಾ ಹೊರಟುಹೋಗಿರುತ್ತಾರೆ, ಆ ಸಮಯದಲ್ಲಿ ನೀವು ಅವರನ್ನು ಭೇಟಿಯಾಗಿ ಎಂದು ಸಲಹೆಕೊಟ್ಟರು.

ನನಗಂತೂ ಬೇರೆ ಏನೂ ಕೆಲಸವಿರಲಿಲ್ಲ ಅಂದೇ ಮದ್ಯಾಹ್ನ ಮೂರು ಗಂಟೆಯವರೆಗೆ ಕಾದಿದ್ದು ನೋಡಿಕೊಂಡು ಹೋಗಲೇ ಬೇಕೆಂದು ತೀರ್ಮಾನಿಸಿದೆ. ಮಧ್ಯಾಹ್ನದವರೆಗೆ ಕಾಲ ಹಾಕಬೇಕಾಗಿತ್ತು. ಅಲ್ಲೇ ಎಲ್ಲಾದರೂ ಕಾಫಿ ತಿಂಡಿ ಊಟ ಅಂದುಕೊಂಡು ಹೊತ್ತು ಕಳೆಯಬಹುದಿತ್ತು, ಆದರೆ ಅಲ್ಲೆಲ್ಲಾ ತಿನ್ನುವಷ್ಟು ಹಣ ನನ್ನಲ್ಲಿರಲಿಲ್ಲ. ತುಂಬಾ ದೂರಕ್ಕೆ ಹೋದರೆ ನಾನು ಬರುವುದರೊಳಗೆ ಪುಟ್ಟಣ್ಣನವರು ಮತ್ತೆಲ್ಲಾದರೂ ಹೊರಟು ಹೋದರೆ ಕಷ್ಟ ಎಂದುಕೊಂಡು ಅಲ್ಲೇ ಕಾಂಪೌಂಡಿನ ಸುತ್ತ ಪುಟ್ಟಣ್ಣನವರ ತಂಡದ ಸದಸ್ಯರ ಕಣ್ಣು ತಪ್ಪಿಸಿ ಏರ್‌ಲೈನ್ಸ್ ಹೋಟೆಲ್‌ನ ಗಾರ್ಡನ್ ರೆಸ್ಟೋರೆಂಟ್‌ನಲ್ಲಿ ಟೇಬಲ್‌ಗಳ ಮೇಲಿಟ್ಟಿರುತ್ತಿದ್ದ ಗ್ಲಾಸ್‌ಗಳಲ್ಲಿನ ನೀರಿನಿಂದಲೇ ಹಸಿವನ್ನು ಹಿಂಗಿಸಿಕೊಳ್ಳಲು ಯತ್ನಿಸುತ್ತಾ ಕಾಲ ಹಾಕತೊಡಗಿದೆ.   

ಮಧ್ಯಾಹ್ನದ ಅವರ ನಿದ್ದೆಯಾದಮೇಲೆ ಕಾಫಿ ಕುಡಿಯುತ್ತಿದ್ದಾಗ ಸಪ್ಲೆಯರ್ ಡೈರೆಕ್ಟರ್‌ರನ್ನು ಕೇಳಿ ನನ್ನನ್ನು ಒಳಗೆ ಕಳಿಸಿದರು.

ನಾನು ರೂಂನ ಬಾಗಿಲ ಬಳಿ ನಿಂತಿದ್ದೆ ಬಚ್ಚಲುಮನೆಯಿಂದ ಹೊರಬಂದವರು ನನ್ನನ್ನು ನೋಡಿ ಅಲ್ಲೇ ಇದ್ದ ಖುರ್ಚಿಯನ್ನು ತೋರಿಸಿ ‘ಕೂತುಕೊಳ್ರೀ...’ ಅಂತ ನನಗೆ ಹೇಳಿ ಸಪ್ಲಯರ್‌ಗೆ ಇನ್ನೊಂದು ಕಾಫಿ ತರಲು ಹೇಳಿದರು. ಅವರು ಕಾಫಿ ಕುಡಿಯತೊಡಗಿದಾಗ, ನಾನು ನಿಂತುಕೊಂಡೇ ಅವರನ್ನು ಚಿತ್ರದುರ್ಗದಲ್ಲಿ ಎರೆಡುಬಾರಿ ಭೇಟಿಯಾಗಿದ್ದು, ಅವರು ನನಗೆ ಅವರ ಬಳಿ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದು, ಈಗ ನಾನು ಆರು ತಿಂಗಳಿನಿಂದ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದು ಎಲ್ಲ ಹೇಳಿದೆ. ಅವರಿಗೆ ನನ್ನ ಗುರ್ತು ಹತ್ತಲಿಲ್ಲ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ಚಿತ್ರದ ದೃಶ್ಯನಾನು ಕಾಫಿ ಕುಡಿಯುವವರೆಗೂ ಅವರು ಏನೂ ಹೇಳಲಿಲ್ಲ. ನಂತರ ಎದ್ದು ಅವರ ಜೇಬಿನಿಂದ ೧೦೦ ರೂಪಾಯಿಗಳ ನೋಟೊಂದನ್ನು ತೆಗೆದು ನನ್ನ ಕೈಗೆ ನೀಡಿ ‘ತಗೊ ಛಾರ್ಜಿಗೆ, ಊರಿಗೆ ಹೋಗು. ಅಲ್ಲಿ ನಿನ್ನ ಅಪ್ಪ ಅಮ್ಮ ಎಷ್ಟು ಪರದಾಡ್‌ತಿರುತ್ತಾರೋ ಏನೋ, ಸಿನೆಮಾ ನೀನು ಅಂದುಕೊಂಡಿರೋ ಅಷ್ಟು ಸುಲಭ ಅಲ್ಲ, ಇದು ಹೊರಗಿನಿಂದ ನೋಡೋಕಷ್ಟೆ ಆಕರ್ಷಕವಾಗಿರುತ್ತೆ, ನನ್ನನ್ನ ನೋಡೋಕೇ ನಿನಗೆ ಆರು ತಿಂಗಳಾಯಿತು ಅಂದೆ, ಅಂಥವನು ಇಲ್ಲಿ ಹೇಗೆ ಬದುಕಿ ಮುಂದೆ ಬರ್ತೀಯ. ನನ್ನ ಮಾತು ಕೇಳು, ಊರಿಗೆ ಹೋಗಿ ಎಲ್ಲಾದರೂ ಕೆಲಸಕ್ಕೆ ಸೇರಿ ಅಪ್ಪ ಅಮ್ಮನ್ನ ಚನ್ನಾಗಿ ನೋಡ್ಕೋ.’ ಎಂದರು. ನಾನು ಏನನ್ನೂ ಹೇಳದೇ ಹಣವನ್ನು ಕೈಯ್ಯಲ್ಲಿ ಹಿಡಿದುಕೊಂಡು ಅವರ ಮುಖವನ್ನೇ ನೋಡುತ್ತಾ ನಿಂತೆ  ತಗೋ ಇನ್ನೂ ಸಾಲದೇ ಇದ್ದರೆ ಎಂದು ಇನ್ನೊಂದು ನೂರು ರೂಪಾಯಿಯ ನೋಟನ್ನು ಮುಂದೆ ಹಿಡಿದರು.

ನನ್ನ ಕೈಯಲ್ಲಿದ್ದ ೧೦೦ ರೂಪಾಯಿಗಳ ನೋಟನ್ನು ಅವರಿಗೆ ಹಿಂತಿರುಗಿಸಿ ‘ನನಗೆ ಡೈರೆಕ್ಷನ್ ವಿಭಾಗದಲ್ಲಿ ಕೆಲಸ ಕೊಡಲು ಸಾಧ್ಯವಾಗದಿದ್ದರೆ ನಿಮ್ಮ ಬಳಿ ಯಾವುದಾದರೂ ಕೆಲಸ ಕೊಡಿ, ಒಂದು ವೇಳೆ ನೀವು ಕೆಲಸ ಕೊಡಲಿಲ್ಲಾಂದ್ರು ನಾನು ಮತ್ತೆ ಊರಿಗೆ ಹೋಗೊಲ್ಲ, ನಿಮ್ಮ ಬಳಿ ಕೆಲಸಕ್ಕೆ ಸೇರಿಕೊಂಡಮೇಲೇನೆ ನಾನು ಊರಿಗೆ ಹೋಗಿ ಮತ್ತೆ ಅಪ್ಪ ಅಮ್ಮನ ಮುಖ ನೋಡೋದು.’ ಅಂದೆ ಧೃಢವಾಗಿ.

ಒಂದು ಕ್ಷಣ ನನ್ನ ಮುಖವನ್ನೇ ನೋಡುತ್ತಿದ್ದವರು ‘ನಿಮ್ಮ ತಂದೆಗೆ ಕಾಗದ ಬರಿ ಪುಟ್ಟಣ್ಣನವರ ಜೊತೆ ಕೆಲಸಮಾಡ್ತಿದೀನಿ ಅಂತ, ಅವರಿಂದ ಒಪ್ಪಿ ಕಾಗದ ಬಂದ ಮೇಲೆ ಬಾ ನನ್ನ ಹತ್ತಿರ ಕೆಲಸ ಮಾಡುವೆಯಂತೆ.’ ಅಂದರು ಆ ನೂರು ರೂಪಾಯಿಯನ್ನು ಮತ್ತೆ ನನಗೇ ಕೊಟ್ಟು. ನಾನು ನೂರು ರೂಪಾಯಿ ತಗೊಂಡು ಮೂಕನಾಗಿ ಹೊರಗೆ ಬಂದೆ, ಥ್ಯಾಂಕ್ಸ್ ಹೇಳೋಕೆ ಸಪ್ಲಯರ್ ಹುಡುಕಿದೆ, ಷಿಫಟ್ ಮುಗೀತು ಅಂದರು. ಆ ನೂರು ರೂಪಾಯಿಗಳ ನೋಟನ್ನು ಹಾಗೇ ಕೆಲವು ದಿನಗಳು ಜೋಪಾನವಾಗಿ ಕಾಪಾಡಿಕೊಂಡು ಬಂದೆ, ಆದರೆ ಹಸಿವು ನನ್ನ ಗುರುಗಳ ನೆನಪಾಗಿ ಉಳಿಯಬಹುದಾಗಿದ್ದ ಆ ನೋಟನ್ನ ಬಹಳ ದಿನ ನನ್ನ ಹತ್ತಿರ ಉಳಿಸಲಿಲ್ಲ.

ಹೊತ್ತಿ ಉರಿದ ಲ್ಯಾಬೊರೇಟರಿ

‘ಕಾಲೇಜು ರಂಗ’ ಚಿತ್ರೀಕರಣ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಕಾಲೇಜಿನಲ್ಲಿ ಕಲ್ಯಾಣ್‌ಕುಮಾರ್ ಬಾಟನಿ ಹೆಡ್ ಆಗಿರುತ್ತಾರೆ. ಅವರನ್ನು ಕಾಲೇಜಿನ ಪ್ರಿನ್ಸಿಪಾಲ್ ಮಾಡುವ ಸಾಧ್ಯತೆಗಳಿರುತ್ತವೆ. ಅವರ ವಿರೋಧಿ ಗುಂಪಿನ ಲೀಡರ್ ಲೋಕನಾಥ್‌ರವರು ಕಾಲೇಜಿನ ಪರ್ಮನೆಂಟ್ ಪ್ರಿನ್ಸಿಪಾಲ್ ಆಗಬೇಕೆಂದು ಎಲ್ಲಾ ರೀತಿಯಿಂದಲೂ ಶತಪ್ರಯತ್ನ ನಡೆಸುತ್ತಿರುತ್ತಾರೆ. ಅವರ ಆಸೆಗೆ ತುಪ್ಪ ಸುರಿದು ಅದು ಹೆಚ್ಚು ಪ್ರಜ್ವಲವಾಗಿ ಉರಿಯುವಂತೆ ಅವರ ಪುಂಡ ಹಿಂಬಾಲಕರೆಲ್ಲರೂ ಸಪೋರ್ಟಿಗೆ ನಿಂತಿರುತ್ತಾರೆ. ತಮ್ಮ ಆಸೆಗೆ ಅಡಚಣೆಯಾಗಿದ್ದ ಕಲ್ಯಾಣ್‌ಕುಮಾರ್ ಅವರನ್ನು ಹೇಗಾದರೂ ತಮ್ಮ ದಾರಿಯಿಂದ ಹೊರಗಿಡಬೇಕೆಂದು ಶತ ಪ್ರಯತ್ನ ನಡೆಸಿರುತ್ತಾರೆ. ಕಲ್ಯಾಣ್‌ಕುಮಾರ್ ರವರು ಕಷ್ಟಪಟ್ಟು ಸಂಶೋಧನೆಗಳನ್ನು ನಡೆಸಿ ಬರೆದಿಟ್ಟಿದ್ದ ಪೇಪರ್ಸ್‌ಗಳನ್ನೆಲ್ಲಾ ಅವರು ಬಾಟನಿ ದಿಪಾರ್ಟ್‌ಮೆಂಟಿನ ತಮ್ಮ ಛೇಂಬರಿನಲ್ಲಿ ಇಟ್ಟುಕೊಂಡಿರುತ್ತಾರೆ. ಅವುಗಳನ್ನು ನಾಶ ಪಡಿಸುವ ಉದ್ದೇಶದಿಂದ ಅವರಿಲ್ಲದಾಗ ಅವರ ವಿರೊಧಿ ಗುಂಪಿನ ಹುಡುಗರ ಸಹಾಯ ಪಡೆದು ಅವರ ಛೇಂಬರ್‌ಗೆ ಬೆಂಕಿ ಹಾಕಿಸುತ್ತಾರೆ ಲೋಕನಾಥ್. ಆ ದೃಶ್ಯವನ್ನು ಚಿತ್ರೀಕರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು ದಿನವನ್ನೂ ನಿಗಧಿಗೊಳಿಸಲಾಗಿತ್ತು. ಕಾಲೇಜು ರಂಗ ಚಿತ್ರದ ಕಾಲೇಜು ಸೆಟ್ಟನ್ನು ಮೂರುಕಡೆ ಹಾಕಲಾಗಿತ್ತು. ಪ್ರೀಮಿಯರ್ ಸ್ಟುಡಿಯೋ ಕಾಂಪೌಂಡಿನಲ್ಲೇ ಮೈದಾನದಲ್ಲಿ ಕಾಲೇಜಿನ ಮುಂಭಾಗದ ಎಕ್ಸ್‌ಟೀರಿಯರ್, ಫೌಂಟೈನ್, ರಸ್ತೆ ಇತ್ಯಾದಿ ಹಾಗೂ ದೊಡ್ಡ ಫ್ಲೋರ‍್ನಲ್ಲಿ ಕಾರಿಡಾರ್‌ನ ಎಲ್ಲಾ ಭಾಗಗಳು ಮತ್ತು ಮತ್ತೊಂದು ಕಡೆ ಕ್ಲಾಸ್ ರೂಮ್‌ಗಳು, ಲ್ಯಾಬೊರೇಟರಿಗಳು, ಆಫೀಸ್, ಮೀಟಿಂಗ್ ಹಾಲ್, ಪ್ರಿನ್ಸಿಪಾಲ್ ಚೇಂಬರ್ ಹಾಗೂ ಇತರ ಇಂಟೀರಿಯರ‍್ಗಳನ್ನು ಹಾಕಲಾಗಿತ್ತು.

‘ಮಾನಸ ಸರೋವರ’ ಚಿತ್ರದ ದೃಶ್ಯಕಾಲೇಜು ಕಾಣುವಂತೆ ಇಡೀ ಕಾಲೇಜಿನ ಹೊರಭಾಗ ಮತ್ತು ಒಳ ಭಾಗದಲ್ಲಿ ಎಲ್ಲಾ ವಿಭಾಗಗಳನ್ನೂ ನಿಜವಾದ ಕಾಲೇಜಿನ ಭ್ರಮೆ ಹುಟ್ಟಿಸುವ ರೀತಿಯಲ್ಲಿ ಸೆಟ್ಟನ್ನು ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯ ಮದರಾಸಿನ ಆರ್ಟ್ ಡೈರೆಕ್ಟರ್ ಸುಬ್ರಮಣ್ಯಂ ಹಾಕಿದ್ದರು. ಆರ್ಟ್ ಡೈರೆಕ್ಟರ್ ಸುಬ್ರಮಣ್ಯಂ ಅವರು ತುಂಬಾ ಅನುಭವವಿರುವ ವಯಸ್ಸಾದ ವ್ಯಕ್ತಿ, ಏನನ್ನು ಕೇಳಿದರೂ ಸಮಯಕ್ಕೆ ಮುಂಚಿತವಾಗೇ ಅಚ್ಚುಕಟ್ಟಾಗಿ ಸಿದ್ಧ ಗೊಳಿಸಿ ಚಿತ್ರೀಕರಣಕ್ಕೆ ಮೊದಲೇ ನಮ್ಮನ್ನು ಕರೆದುಕೊಂಡು ಹೋಗಿ ತೋರಿಸಿ, ನಾವೇನಾದರೂ ಕರೆಕ್ಷನ್ ಹೇಳಿದರೆ ಅದನ್ನು ಸರಿಪಡಿಸಿ ಚಿತ್ರೀಕರಣಕ್ಕೆ ಮುಂಚೆ ನಿರ್ದೇಶಕರಿಗೆ ತೋರಿಸಿ ಅವರು ಹೇಳಿದ ತಿದ್ದುಪಡಿಗಳನ್ನು ಸರಿಪಡಿಸಿ ನಂತರ ಚಿತ್ರೀಕರಣಕ್ಕೆ ಬಿಟ್ಟುಕೊಡುತ್ತಿದ್ದರು. ಇಡೀ ಚಿತ್ರವನ್ನು ಸಂಪೂರ್ಣವಾಗಿ ಸ್ಟುಡಿಯೋದ ಒಳಗೆ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡಿದರೂ ಯಾವತ್ತೂ ಅವರಿಂದ ಒಂದೇ ಒಂದು ಗಂಟೆ ಸಹ ತಡವಾಗಿರಲಿಲ್ಲ. ಆ ರೀತಿಯಲ್ಲಿ ಸಮಯಕ್ಕೆ ಮೊದಲೇ ಅವಶ್ಯಕತೆಗಳನ್ನು ಅರಿತು ಸೆಟ್‌ಗಳನ್ನು ಸಿದ್ಧ ಪಡಿಸಿ ಅವುಗಳನ್ನು ಫರ್ನಿಚರ‍್ಗಳಿಂದ ಡೆಕೋರೇಟ್ ಮಾಡಿ ಶೂಟಿಂಗ್ ಪ್ರಾರಂಭವಾಗುವವರೆಗೆ ಸ್ಥಳದಲ್ಲೇ ಇದ್ದು ಒಂದು ದೃಶ್ಯ ಚಿತ್ರೀಕರಣವಾದ ನಂತರವೇ ಅವರು ಬೇರೆ ಕೆಲಸಕ್ಕೆ ಹೋಗುತ್ತಿದ್ದುದು.

ಮೊದಲು ಕಾಲೇಜಿನ ಕಾರಿಡಾರ್ ನಲ್ಲಿ ಬೆಂಕಿ ಹೊತ್ತಿಉರಿಯುವ ದೃಶ್ಯಗಳನ್ನು ಸಹಕಲಾವಿದರು ಮತ್ತು ಮುಖ್ಯ ಕಲಾವಿದರನ್ನು ಬಳಸಿ ಚಿತ್ರೀಕರಿಸಿಕೊಳ್ಳಲಾಯಿತು, ನಂತರ ಕಾಲೇಜಿನ ಹೊರಭಾಗದಿಂದ ಎಲ್ಲಾ ಕಲಾವಿದರು ವಿದ್ಯಾರ್ಥಿಗಳನ್ನು ಬಳಸಿ ಒಂದು ಇಡೀ ದಿನ ಚಿತ್ರೀಕರಣ ಮಾಡಿದೆವು. ಅದೇ ಚಿತ್ರದ ಕ್ಲೈಮ್ಯಾಕ್ಸ್‌ದೃಶ್ಯವಾದುದರಿಂದ ಸಹಕಲಾವಿದರು ಜೂನಿಯರ್ ಆರ್ಟಿಸ್ಟ್‌ಗಳನ್ನು ಸೇರಿಸಿ ಸುಮಾರು ಮುನ್ನೂರು ಜನ ಕಲಾವಿದರು ಚಿತ್ರೀಕರಣದಲ್ಲಿ ಪಾಲುಗೊಂಡಿದ್ದರು. ಬೆಂಕಿಯ ದೃಶ್ಯಗಳಾದ್ದರಿಂದ ತುಂಬಾ ಟೆನ್ಷನ್‌ನಲ್ಲೆ ಚಿತ್ರೀಕರಣ ಸಾಯಂಕಾಲದ ವೇಳೆಗೆ ಮುಗಿಯಿತು.

ಸಾಯಂಕಾಲ ಬ್ರೇಕ್ ಮಾಡಿ ತಿಂಡಿ ತಿಂದ ನಂತರ ಬಾಟನಿ ಡಿಪಾರ್ಟ್‌ಮೆಂಟ್ ಒಳ ಭಾಗಕ್ಕೆ ಬೆಂಕಿ ಹತ್ತಿ ಉರಿಯುವ ದೃಶ್ಯಗಳನ್ನು ಚಿತ್ರೀಕರಿಸುವ ಸಿದ್ಧತೆಗಳು ನಡೆಯುತ್ತಿದ್ದವು. ಬೆಂಕಿ ಹತ್ತಿ ಉರಿದು ಸುಟ್ಟು ಹೋಗುವ ದೃಶ್ಯಗಳಾದ್ದರಿಂದ ಅದನ್ನು ಸ್ಟುಡಿಯೋ ಕಾಂಪೌಂಡಿನ ಒಳಗೆ ಫ್ಲೋರ‍್ನ ಹೊರಭಾಗದಲ್ಲಿ ಇನ್ನೊಂಡು ಕಡೆ ಹಾಕಲಾಗಿತ್ತು. ಬೆಂಕಿ ಹತ್ತಿ ಇಡೀ ಸೆಟ್ ಉರಿದು ಭಸ್ಮವಾಗಿ ಹೊಗುವ ದೃಶ್ಯ, ಅದನ್ನು ಒಂದೇ ಟೇಕ್‌ನಲ್ಲಿ ಚಿತ್ರೀಕರಿಸಬೇಕು, ಏನಾದರೂ ತಪ್ಪಾದರೆ ಮತ್ತೊಮ್ಮೆ ರೀ ಟೇಕ್ ಮಾಡುವ ಅವಕಾಶವಿರುವುದಿಲ್ಲ. ಹಾಗಾಗೇ ಚಾರ್ಟ್ಸ್, ಲೈಬ್ರರಿ, ಲ್ಯಾಬೊರೇಟರಿ, ಬಟಾನಿಕಲ್ ಮ್ಯೂಸಿಯಮ್ ಎಲ್ಲವನ್ನೂ ಅತ್ಯಂತ ಅಚ್ಚುಕಟ್ಟಾಗಿ ಸಿದ್ದಗೊಳಿಸಿದ್ದರು. ಉರಿಯುವ ಬೆಂಕಿ ಎದ್ದು ಕಾಣಬೇಕೆಂದರೆ ರಾತ್ರಿ ಕತ್ತಲಿನಲ್ಲಿ ಮಾತ್ರ ಚಿತ್ರೀಕರಿಸಬೇಕಾಗಿದ್ದು ಆ ಸಮಯದಲ್ಲಿ ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತದೆ, ಕ್ಯಾಮೆರಾ ಎಲ್ಲಿ ಇಟ್ಟುಕೊಂಡರೆ ಸೆಟ್‌ನ ಹೊರಭಾಗ ಕಾಣುವುದಿಲ್ಲ ಎನ್ನುವುದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು, ನಾವು ಕಾಲೇಜಿನ ಹೊರಭಾಗದ ಚಿತ್ರೀಕರಣದಲ್ಲಿ ನಿರತರಾಗಿದ್ದಾಗ ಆರ್ಟ್ ಡೈರೆಕ್ಟರ್ ಸುಬ್ರಮಣ್ಯಮ್ ಆಗಾಗ ಬಂದು ನಮ್ಮನ್ನು ಕರೆದುಕೊಂಡು ಹೋಗಿ ತೋರಿಸಿ ಚರ್ಚಿಸಿ ಸಜ್ಜುಗೊಳಿಸುತ್ತಿದ್ದರು.

[ಚಿತ್ರಗಳು-ಸಂಗ್ರಹದಿಂದ]

[ನನ್ನ ಸಿನಿಮಾ ಗುರು ಪುಟ್ಟಣ್ಣ ಕಣಗಾಲ್: ಪಿ.ಎಚ್. ವಿಶ್ವನಾಥ್ ಸರಣಿ]

ಪುಟದ ಮೊದಲಿಗೆ
 
Votes:  2     Rating: 4.5    
 
 
ಸಂಬಂಧಿಸಿದ ಲೇಖನಗಳು
  ಖೇಣಿ ಪುರಾಣ:ಕಾರಂಜಾ ರಾಜಕಾರಣ!
  ತರೀಕೆರೆ ಹೊಸ ತಲೆಮಾರಿನ ಲೇಖಕರು: ವಿಕ್ರಮ ವಿಸಾಜಿ
  ಭಾಗವತ ೨೮:ಹಾಲೂಡುತ್ತ ಬಿಡುಗಡೆಗೊಂಡ ಪೂತನಾ
  ಗೂಬೆ ಹಿಡಿದ ಹುಡುಗ, ಬೆಕ್ಕು ತಂದ ಹುಡುಗಿ
  ಮೂರ್ತಿ ಚರಿತೆ: ಕನ್ನಡದ ನೆಲದಲ್ಲಿ
  ಮುಂಗಾರು ಕೊಂಡಿ ಕಳಚಿಕೊಂಡಿತು
  ಹೊಸ ತಲೆಮಾರಿನ ಲೇಖಕರು: ದೇವು ಪತ್ತಾರ
  ಭಾಗವತ೨೭:ಮೋಹವ ಹರಿಯುವ ಭಗವಂತ
  ಮೂರ್ತಿ ಚರಿತೆ: ಕ್ಷಣದಲ್ಲೇ ಪರಿಹಾರ!
  ವಡ್ಡರ್ಸೆ ೧೩: ‘ಚೆಲುವ ಕನ್ನಡನಾಡು' ಚಿಂದಿ!
  ತರೀಕೆರೆ ಹೊಸ ತಲೆಮಾರಿನ ಲೇಖಕರು: ಶೈಲಜ ಹಿರೇಮಠ
  ಭಾಗವತ ೨೫:ದಶರಥರಾಮನೂ, ಕೊಡಲಿರಾಮನೂ
  ಜೋಯಪ್ಪ ಸರಣಿ: ಕೊರೆದ ಚಿಪ್ಪು ಹಂದಿ
  ಮೂರ್ತಿ ಚರಿತೆ: ಸುರೈಯ್ಯಾ ಇಂದ ಕರಿಶ್ಮಾವರೆಗೆ
  ವಡ್ಡರ್ಸೆ ಸರಣಿ:ಮುಂಗಾರಿಗೆ ಕಾಸಿನ ಕಷ್ಟಗಳು
  ಭಾಗವತ:ತಿರುಪೆ ಎತ್ತಿದ ಭಗವಂತ
  ವಿ.ಕೆ.ಮೂರ್ತಿ ಚರಿತೆ: ಮದರಾಸಿನ ನೆನಪುಗಳು
  ಹೊಸ ತಲೆಮಾರಿನ ಲೇಖಕರು: ಬಿ.ಎಂ.ರಶೀದ್
  ವಡ್ಡರ್ಸೆ ಸರಣಿ-೧೧: ಕರಾವಳಿಯಲ್ಲಿ ಹರಿದ `ವರಶೆ' ಚಿಂತನೆ
  ತೋಳ್ಪಾಡಿ ಭಾಗವತ:ನರಮೃಗ ರೂಪದ ಭಗವಂತ
  ಮೂರ್ತಿ ಚರಿತೆ:ಶುರುವಾಯಿತು ಬಣ್ಣದ ಯುಗ
  ಚುನಾವಣೆಗಳನ್ನು ಗೆಲ್ಲದ ಖೇಣಿ ಕುಟುಂಬ
  ತರೀಕೆರೆ ಬರೆಯುವ ಹೊಸ ತಲೆಮಾರಿನ ಲೇಖಕರು: ವಿನಯಾ
  ವಡ್ಡರ್ಸೆ ಸರಣಿ-೧೦: ಬಸವಣ್ಣನ ಬುಲೆಟ್ ಸವಾರಿ
  ಭಾಗವತ:ಹಾಲ್ಗಡಲನ್ನು ಕಡೆದ ಕಥೆ
  ಅವರಿವರ ಕಣ್ಣಲ್ಲಿ ಕಂಡ ಮೂರ್ತಿ:ಉಮಾ ಸರಣಿ
  ಹೊಸ ತಲೆಮಾರಿನ ಲೇಖಕರು: ಮಂಜುನಾಥ್ ಲತಾ
  ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು
  ಗುರುವಿನ ಪ್ಯಾಂಟ್ ಕೇಳಿದ ಶಿಷ್ಯ!
  ಭಾಗವತ:ಭಗವಂತ ಮೀನಾದ ಕಥೆ
  ವಿ.ಕೆ.ಮೂರ್ತಿ ಚರಿತೆ: `ಗುರುದತ್ ಗಯಾ' ಎಂದ ಗುರುಸ್ವಾಮಿ
  ಖೇಣಿ ಪುರಾಣ 21: ರಾಜಕೀಯಕ್ಕೆ ಖೇಣಿ ಕುಟುಂಬ
  ತರೀಕೆರೆ ಹೊಸ ತಲೆಮಾರಿನ ಲೇಖಕರು:ಪೀರ್ ಬಾಶಾ
  ವಡ್ಡರ್ಸೆ ೮:ರಾಮಪ್ಪಣ್ಣನವರ ಮನೆಯ ಕೋಲ
  ಭಾಗವತ ೨೧:ಜಡಭರತನಾದ ಭರತಚಕ್ರವರ್ತಿ
  ವಿ.ಕೆ.ಮೂರ್ತಿ ಚರಿತೆ:ಎಂದೆಂದೂ ಕಾಡುವ ಛೋಟಿ ಬಹೂ
  ಖೇಣಿ ಪುರಾಣ:ಅಲ್ದೆ ಗುಂಡಪ್ಪ 'ಚೋರ ಚರಿತೆ'
  ವಡ್ಡರ್ಸೆ ಸರಣಿ-೭: ಎಡವಟ್ಟಾದ ಯಂತ್ರದ ಥಿಯರಿ
  ಹೊಸ ತಲೆಮಾರಿನ ಲೇಖಕರು: ಚಿದಾನಂದ ಸಾಲಿ
  ಭಾಗವತ:ಕಣ್ಣು ಕೊಟ್ಟು ನೋಟವನ್ನೂ ಕೊಟ್ಟ ಭಗವಂತ
  ಮೂರ್ತಿಚರಿತೆ:ಗ್ರೀಸ್,ಗ್ರೆಗರಿಪೆಕ್,ಗನ್ಸ್ಆಫ್ ನ್ಯಾವರೋನ್.
  ಕಹಿಯೋ ಸಿಹಿಯೋ ನೆನೆದರೆ ಜುಂ ಅನ್ನುವ ಪ್ರಸಂಗ
  ವಡ್ಡರ್ಸೆ ೬: ಕರಾವಳಿಯಲ್ಲಿ ಮುಂಗಾರು ತಲ್ಲಣ
  ಹೊಸ ತಲೆಮಾರಿನ ಲೇಖಕರು: ತಾರಿಣಿ ಶುಭದಾಯಿನಿ
  ಭಾಗವತ ೧೯:ಅಜಾಮಿಳನ ಮಗ ನಾರಾಯಣ
  ವಿ.ಕೆ.ಮೂರ್ತಿ ಚರಿತೆ:`..ಫೂಲ್' ಒಂದು ಅಪೂರ್ವ ಕೃತಿ
  ಖೇಣಿ ಪುರಾಣ- 19: ಕಲ್ಯಾಣದ ಆರಂಭ; ಮಂಟೇಸ್ವಾಮಿಯ ಅಂತ್ಯ
  ತರೀಕೆರೆ ಬರೆವ ಹೊಸಲೇಖಕರು:ಮಹಾಂತೇಶ ನವಲಕಲ್
  ವಡ್ಡರ್ಸೆ ಸರಣಿ-೫: ಬೆಂಬಲಕ್ಕೆ ಬಂದ ಇಂದೂಧರ
  ಭುವಿಯ ತಳದಲ್ಲಿರುವುದು ಹರಿವನೀರೂ,ಕುದಿವ ಲಾವಾರಸವೂ
  ವಿ.ಕೆ.ಮೂರ್ತಿ ಚರಿತೆ:ಬಿಸಿಲು ಕೋಲಿನ ಮಾಯೆ
  ಖೇಣಿ ಪುರಾಣ-18:ರೇಷ್ಮೆ ಕುಟುಂಬದ ಚೇತನ ಕಲ್ಲಪ್ಪ
  ಚೆನ್ನಿ ಕಥಾಕಾಲ:ಟೋನಿ ಮಾರಿಸನ್ ಬರೆದ ಗುಲಾಮ ಕಥನ
  ಚೆನ್ನಿ ಕಥಾಕಾಲ:ಅರೆ ಇರುಳಿನ ಮಕ್ಕಳು
  ವಡ್ಡರ್ಸೆ ಸರಣಿ-೪: ವಡ್ಡರ್ಸೆ ಭಾಷಣ ವರದಿ ಮಾಡುವ ಸ್ಪರ್ಧೆ