ವರ್ಷಗಳ ಹಿಂದೆ ಇಂಗ್ಲೆಂಡಿಗೆ ಹೋಗಿದ್ದಾಗ ಅಲ್ಲಿನ ಶುಚಿತ್ವ ಬೆರಗು ಹುಟ್ಟಿಸಿತ್ತು. ನಮ್ಮ ಭಾರತದೇಶ ಹಲವು ಸಹಸ್ರ ವರ್ಷಗಳ ಇತಿಹಾಸಗಳಿಂದ ಕೂಡಿದ್ದು, ಹಳತಾಗಿ ಜಡ್ಡುಗಟ್ಟಿದೆ ಎಂದೂ ಮಿತಿಮೀರಿದ ಜನಸಂಖ್ಯೆಯಿಂದ ಕೂಡಿದ್ದು ಹತೋಟಿ ಕಷ್ಟಸಾಧ್ಯವೆಂದೂ ಶುಚಿತ್ವ ಕಾಪಾಡುವುದು ಸುಲಭದ ಕೆಲಸವಲ್ಲವೆಂದೂ- ನಂಬಿಕೊಂಡಿದ್ದೆ. ಮತ್ತೊಮ್ಮೆ ಸಿಂಗಾಪುರದ ಬೀದಿಗಳಲ್ಲಿ ತಿರುಗಾಡಿದಾಗ ಅದು ಕೆಲವೇ ಶತಮಾನಗಳ ಇತಿಹಾಸದಿಂದ ಕೂಡಿದ್ದೆಂದೂ ಜನಸಂಖ್ಯೆ ಬಹಳ ಕಡಿಮೆಯೆಂದೂ ಅಲ್ಲಿ ಶುಚಿತ್ವ ಕಾಪಾಡುವುದು ಸುಲಭವೆಂದೂ ತೀರ್ಮಾನ ತಾಳಿದ್ದೆ. ಅಲ್ಲಿನ ಸ್ವಚ್ಛತೆ ನಿಜಕ್ಕೂ ಅದ್ಭುತವೇ ಸರಿ ಎಂದೂ ಬೆರಗುವಟ್ಟಿದ್ದೆ. ಕಸ ಕೈಯಲ್ಲಿ ಹಿಡಿದುಕೊಂಡು ಮೈಲುಗಟ್ಟಲೆ ನಡೆದರೂ ಅದನ್ನು ಕಸದ ಬುಟ್ಟಿಯಲ್ಲಲ್ಲದೆ ಇನ್ನೊಂದೆಡೆ ಹಾಕಲಾರರು. ಅಥವಾ ತಮ್ಮ ವಾಹನದೊಳಗಿರುವ ಪುಟ್ಟ ಕಸದ ತೊಟ್ಟಿಯೊಳಕ್ಕೆ ಇಳಿಬಿಟ್ಟು, ಮನೆಗೆ ತಂದು ಮಾರನೆಯ ಬೆಳಗ್ಗಿನ ಕಸದ ಚೀಲದಲ್ಲಿ ಹಾಕಿಬಿಡುತ್ತಿದ್ದರು.
ಪ್ರತಿಮನೆಯಲ್ಲೂ ನಿತ್ಯದ ಕಸವನ್ನು ಎರಡಾಗಿ ವಿಭಜಿಸಿ ಜೀರ್ಣಗೊಳ್ಳುವ ಕಸವನ್ನು ಒಂದರಲ್ಲಿಯೂ ಪ್ಲಾಸ್ಟಿಕ್ ಜಾತಿಯ ಕಸವನ್ನು ಇನ್ನೊಂದರಲ್ಲಿಯೂ ತುಂಬಿಸಿಟ್ಟುಬಿಟ್ಟರೆ ಸರಿ; ಮನೆಯವರ ಕಸದ ವಿಲೇವಾರಿ ಅಲ್ಲಿಗೆ ಮುಗಿಯಿತು. ಕಸ ಸಂಬಂಧವಾದ ವಿದೇಶೀಯರ ಎಚ್ಚರಿಕೆ ಹಾಗೂ ಶಿಸ್ತಿಗೆ ನಿಜಕ್ಕೂ ನಾನು ಮಾರು ಹೋಗಿದ್ದೆ ಹಾಗೂ ಜಗತ್ತಿನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶದಂತಹ ಏಷ್ಯಾದ ದೇಶಗಳೇ ಕೊಳಕು ದೇಶಗಳೆಂಬ ತೀರ್ಮಾನಕ್ಕೆ ಬಂದಿದ್ದೆ.
ಇತ್ತೀಚೆಗೆ ಜರ್ಮನಿ, ಸ್ವಿಟ್ಸರ್ ಲ್ಯಾಂಡ್ ಹಾಗೂ ಫ್ರಾನ್ಸ್ ಗಳಿಗೆ ಭೇಟಿ ನೀಡಿದ್ದೆ. ಆಗಲೇ ಅವರ ಮನೆ ದೋಸೆ ಕೂಡಾ ತೂತು ಎಂಬುದು ಅರಿವಿಗೆ ಬಂದದ್ದು. ಈ ಯಾವುದೇ ರಾಷ್ಟ್ರಗಳಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಬಾರದೆಂಬ ನಿಯಮವಿಲ್ಲ. ಸೇದುವವರಿಗಾಗಿ ರೈಲ್ವೆ ನಿಲ್ದಾಣದಲ್ಲಿ, ಬಸ್ ಸ್ಟ್ಯಾಂಡಿನಲ್ಲಿ, ಎಲ್ಲೆಂದರಲ್ಲಿ ಬೂದಿಯ ಟ್ರೇಗಳನ್ನು ಸ್ಥಾಪನೆ ಮಾಡಿದ್ದಾರೆ. ಹಾಗಾಗಿ ಸೇದುವವರಿಗೆ ನಿರಾಳ. ಒಂದೊಂದು ಟ್ರೇಯ ಸುತ್ತಲೂ ಕೆಲವೊಮ್ಮೆ ಹತ್ತಾರು ಜನ ಜಮಾಯಿಸಿ ಬಸೋ ಬಸೋ ಎಂಬುದಾಗಿ ಹೊಗೆ ಬಿಡುತ್ತಿರುತ್ತಾರೆ. ಅವರೆಲ್ಲ ಬಿಸಾಕುವ ಬಡ್ಡುಗಳು ಟ್ರೇಗೆ ಬೀಳಬೇಕೆಂದೇನೂ ಇಲ್ಲ. ನಮ್ಮಂತೆಯೇ ಕಾಲಡಿಗೆ ಹಾಕಿ ಜಜ್ಜಿ ಬಿಡುವವರೂ ಜಜ್ಜದೆ ಬಿಡುವವರೂ ಬೇಕಾದಷ್ಟು ಜನ. ದೊಡ್ಡದೊಡ್ಡ ರೈಲ್ವೆ ಸ್ಟೇಶನ್ ಗಳಲ್ಲಿ ಉಸಿರು ಬಿಡಲಾಗದಷ್ಟು ಹೊಗೆವಾಸನೆ. ಗಂಡಸರಿಗಿಂತ ಹೆಂಗಸರು ಹೊಗೆ ಬಿಡುವುದರಲ್ಲಿ ಬಲಾಢ್ಯರು. ಗರ್ಭಿಣಿಹೆಂಗಸರು ಯಾವ ಮುಲಾಜೂ ಇಲ್ಲದೆ ತಮ್ಮ ಹೊಟ್ಟೆಯಲ್ಲಿರುವ ಕೂಸಿಗೆ ಅದಾಗಲೇ ಸಿಗರೇಟು ಸೇದುವುದನ್ನು ಕಲಿಸಿಕೊಡುವ ತರಾತುರಿಯಲ್ಲಿದ್ದವರಂತೆ ಕಾಣಿಸುತ್ತಾರೆ!
ಯಾರನ್ನಾದರೂ ಈ ಕುರಿತು ಪ್ರಶ್ನಿಸಿದರೆ ಇಲ್ಲಿನ ಹವಾಮಾನ ನಿಮ್ಮನ್ನೂ ಸೇದಿಸಿಬಿಡುತ್ತದೆ ಎನ್ನುತ್ತಾರೆ. ನನ್ನ ಪ್ರಶ್ನೆ ಅದಲ್ಲ; ರಾಶಿರಾಶಿ ಸಿಗರೇಟ್ ಬಡ್ಡುಗಳನ್ನು ಸ್ವಚ್ಛತೆಯ ಕುರಿತು ಲವಲೇಶವೂ ಯೋಚಿಸದೆ ಸಿಕ್ಕಸಿಕ್ಕಲ್ಲಿ ಬಿಸಾಕುತ್ತಾರಲ್ಲಾ; ಇದಕ್ಕೇನನ್ನೋಣ? ಪಕ್ಕದಲ್ಲಿರುವವರೆಲ್ಲರೂ ಸಿಗರೇಟ್ ಸೇದುವವರೇ ಎಂಬ ಭ್ರಮೆ ಅಲ್ಲಿ ಪ್ರತಿಯೊಬ್ಬರಲ್ಲಿಯೂ ಇದೆ. ಒಂದೇ ಸಮಾಧಾನವೆಂದರೆ ಬಸ್ಸು, ಟ್ರೇನುಗಳ ಒಳಗಡೆ ಸೇದುವುದಿಲ್ಲ. ಆದರೆ ರಾತ್ರಿಯ ಬಸ್ಸುಗಳಲ್ಲಿ ಬಿಯರ್ ಕುಡಿಯುತ್ತ ಗಲಾಟೆ ಎಬ್ಬಿಸುತ್ತ ಸಾಗುವವರು ಅಲ್ಲೂ ಇದ್ದಾರೆ. ಟ್ರೇನುಗಳಲ್ಲಿ ತಿಂಡಿ ತಿನ್ನುವ ಖಯಾಲಿ ಅಲ್ಲಿ ಹೆಚ್ಚು. ಅದಕ್ಕಾಗಿ ಕಸಹಾಕುವ ವ್ಯವಸ್ಥೆ ಪ್ರತಿ ಸೀಟಿನ ಪಕ್ಕದಲ್ಲೂ ಇರುತ್ತದೆ. ಆದರೂ ಅಲ್ಲಿನ ಯುಜನತೆ ಕಸವನ್ನು ಎತ್ತಿಎತ್ತಿ ಟ್ರೇನಿನಿಂದ ಹೊರಕ್ಕೆ ಬಿಸಾಡುತ್ತಿರುತ್ತಾರೆ.
ಈಗ ಆದದ್ದಿಷ್ಟೆ. ಯುರೋಪಿನ ಜನರು ಸ್ವಚ್ಛತೆಯ ಕಡೆಗೆ ವಿಶೇಷ ಗಮನ ಕೊಡುತ್ತಾರೆಂದು ಇಷ್ಟು ಕಾಲ ನಂಬಿಕೊಂಡು ಬಂದದ್ದು ಸುಳ್ಳಾಯಿತಲ್ಲ ಎಂಬುದು. ಅದರಲ್ಲೂ ಸಿಗರೇಟು ಬಡ್ಡುಗಳ ಮೇಲಾಟ ಕಳಂಕದೋಪಾದಿಯಲ್ಲಿ ಆ ರಾಷ್ಟ್ರಗಳನ್ನು ಆವರಿಸಿಕೊಂಡಿದೆಯಲ್ಲ. ಹದಿನೆಂಟು ವಯಸ್ಸಿಗೆ ಮೇಲ್ಪಟ್ಟವರು ಮಾತ್ರ ತಮ್ಮಲ್ಲಿರುವ ಕಾರ್ಡುಗಳನ್ನು ಬಳಸಿ ರಸ್ತೆಬದಿಯ ಯಾವುದೇ ಸಿಗರೇಟ್ ಯಂತ್ರದಿಂದ ಸಿಗರೇಟ್ ಖರೀದಿಸಬಹುದು ಎಂಬೊಂದು ನಿಯಮವಿದೆ. ಅದು ಕೂಡಾ ಇಡೀ ಪ್ಯಾಕೇಟ್! ಸಿಂಗಲ್ ಸಿಗರೇಟ್ ಮಾರುವ ವ್ಯವಸ್ಥೆ ಅಲ್ಲಿಲ್ಲ. ಅಂದರೆ ಸಿಗರೇಟ್ ಸೇದುವ ಕ್ರಿಯೆಯನ್ನು ಆ ದೇಶದವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರ್ಥ. ಮೇಲಾಗಿ ಸಿಗರೇಟಿನ ಯಂತ್ರದ ಬಳಿ ಯಾರೂ ಇರುವುದಿಲ್ಲ. ಅದೂ ಸೌಕರ್ಯವೇ. ಅದಲ್ಲದಿದ್ದರೂ ಸಿಗರೇಟ್ ಸೇದುವ ಬಗ್ಗೆ ಯಾರೂ ಯಾರ ಬಗ್ಗೆಯೂ ಹೆದರುವ ಕಾರಣವಿಲ್ಲ. ಅಲ್ಲಿ ಯಾವ ತಂದೆತಾಯಿಯೂ ತಮ್ಮ ಮಕ್ಕಳೆದುರು ಸಿಗರೇಟು ಸೇದುವುದಕ್ಕೆ ಸಂಕೋಚ ಪಡುವುದಿಲ್ಲ.
ಇದನ್ನೆಲ್ಲ ಕಂಡಾಗ ನಮ್ಮ ದೇಶವೇ ಹಂತಹಂತವಾಗಿ ಸ್ವಚ್ಛತಾ ಆಂದೋಲನವನ್ನು ಜಾರಿಗೆ ತರುವ ಪ್ರಯತ್ನದಲ್ಲಿದೆ ಹಾಗೂ ಯಶಸ್ವಿಯಾಗುವ ಹಂತದಲ್ಲಿದೆ ಎಂದು ತೋರಿಹೋದರೆ ಆಶ್ಚರ್ಯವಿಲ್ಲ.
[ಚಿತ್ರಗಳು-ಸಂಗ್ರಹದಿಂದ]