ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಪಟೇಲ್ ಮಂಜಯ್ಯನವರು ಮೊಮ್ಮಗಳಿಗೆ ಬರೆದ ಪತ್ರ    
ಸಿಂಧು
ಬುಧವಾರ, 13 ಜನವರಿ 2010 (11:08 IST)
ಸುರಗಿ ಹೂವು

-ಉಭಯ ಕುಶಲೋಪರಿ ಸಾಂಪ್ರತ-
ಅಚ್ಚುಮೆಚ್ಚಿನ ಮೊಮ್ಮಗಳು ಚಂದನಳಿಗೆ,
 
ಅಕ್ಕರೆಯ ನಲ್ಮುತ್ತುಗಳನ್ನ ಒತ್ತುತ್ತಾ ಈ ಪತ್ರವನ್ನ ಆರಂಭಿಸುತ್ತಿದ್ದೇನೆ.

ಅದಾಗಿ ನೀನು, ನಿನ್ನ ಅಮ್ಮ, ಅಪ್ಪಾಜಿ ಆರೋಗ್ಯವಾಗಿದ್ದೀರೆಂದು ಭಾವಿಸುತ್ತಿದ್ದೇನೆ. ಇಲ್ಲೆ ಎಲ್ಲವೂ ಎಂದಿನಂತೆ ಸುಸೂತ್ರವಾಗಿ ನಡೆಯುತ್ತಿದೆ.

ಮೊನ್ನೆ ಮಕ್ಕಿಗದ್ದೆಯ ಬ್ಯಾಣದ ಕಡೆ ಕಣ್ಣಾಡಿಸಲು ಹೊರಟೆ. ಹಳ್ಳದ ದಂಡೆಯ ಅಪ್ಪೆ ಮರದ ತುಂಬ ಮಿಡಿ ಕಚ್ಚಿಕೊಂಡಿದೆ. ನಿನಗಂತಲೇ ಅತ್ತೆಗೆ ಹೇಳಿ ಒಂದು ಜಾಡಿ ಉಪ್ಪೂರಿದ ಕಾಯಿಗಳನ್ನ ಹಾಕಿಸಿರುತ್ತ್ತೇನೆ. (ಹೌದು, ನಿನ್ನ ಊರಿನ ಪಯಣಕ್ಕೆ ಇದು ಮೊದಲ ಆಮಿಷ :) ) ಅಲ್ಲಿನ ಕೆಲಸ ಮುಗಿಸಿ ಮನೆಗೆ ಬರುವಾಗ ನೋಡುತ್ತೇನೆ ಸುರಗಿ ಮರದ ತುಂಬ ಮುತ್ತು ಪೋಣಿಸಿದಂತಹ ಮೊಗ್ಗುಗಳು. ಮನೆಮೊಗ್ಗು. ಇನ್ನೂ ಎರಡು ಮೂರು ದಿನ ಬೇಕು ಬಿರಿಮೊಗ್ಗಾಗಲು. ಈ ಪತ್ರ ನಿನ್ನನ್ನು ತಲುಪುವ ಹೊತ್ತಿಗೆ ಅವು ಘಮಘಮಿಸುತ್ತಿರುತ್ತವೆ ಎಂದೇ ಗಡಿಬಿಡಿಯಲ್ಲಿ ಬರೆಯಲು ಕೂತಿದ್ದೇನೆ. ಬರೆಯಲೇ ಒಂದು ದಿನ ಬೇಕು. ಆಮೇಲೆ ಅದನ್ನ ನಿನ್ನ ಈಮೇಲಿಗೆ ಕಳಿಸುವ ಹೊತ್ತಿಗೆ ಸರಿಯಾಗಿ ಕರೆಂಟು ಹೋಗಿ, ಬಂದು,ಒಟ್ರಾಶಿ ಒಂದಿನ ಇಡೀ ಇಂಟರ್ ನೆಟ್ಟು ಹಿಡಿದು ಕಳಿಸುವ ಹೊತ್ತಿಗೆ ಅಲ್ಲಿ ಸಂಕ್ರಮಣದ ಸೂರ್ಯನ್ನ ಸ್ವಾಗತಿಸಲು ದಕ್ಷಿಣಾಯನದ ಸಂಜೆಮುಗಿಲು ಕೆಂಪಗೆ ರಂಗೇರಿರುತ್ತದೆ. :) ಇಲ್ಲಿ ಮೊದಲ ಸೂರ್ಯನ ಬೆಳಕು. ನಾವು ಪೂರ್ವಸೂರಿಗಳು ಅಂತ ನನ್ನಜ್ಜ ಹೇಳುತ್ತಿದ್ದ ಅದೆಂತದು ಅಂತ ಇನ್ನೂ ನನಗೆ ಅರ್ಥವಾಗಿಲ್ಲ. ನಿನಗೆ ಗೊತ್ತಾದಾಗ ನಂಗೆ ಹೇಳು.

ಇರಲಿ ಈಗ ಸುರಗಿಯ ಮರದ ನೆಳಲಿಗೆ ಬರೋಣ. ಹೋದ ಸಂಕ್ರಾಂತಿಯಲ್ಲಿ ಸುರಗಿಯ ಮುತ್ತುಮೊಗ್ಗುಗಳನ್ನ ಶೆಟ್ಟಿಬಿಡಾರದ ನಾಗಿಯ ಹತ್ತಿರ ಕೀಳಿಸಿ ಪೋಣಿಸಿಕೊಂಡು, ಅತ್ತೆಯ ಹತ್ತಿರ ಐದೆಳೆಯ ಜಡೆ ಹೆಣೆಸಿಕೊಂಡು ಅದನ್ನ ಉದ್ದಕೆ ಮುಡಿದು ನಿಂತ ನನ್ನ ಪೋರಿ ಚಂದುವಿನ ಹೂನಗೆಯ ನೆನಪು ನನ್ನನ್ನು ಮಾಗಿ ಬೆಳಗಿನ ಇಬ್ಬನಿಯಂತೆ ತೋಯಿಸಿವೆ. ಬೆಳಿಗ್ಗೆ ಮುಂಚೆ ಮನೆಯ ಚಿಟ್ಟೆ ಮೇಲೆ ಕುಂತರೆ ಕಾಣುವ ಬೆಟ್ಟಸಾಲುಗಳನ್ನ ಕವಿದು ನಿಂತ ಹೊಗರಿನ ಹಾಗೆ ಒಂದು ನೆನಪಿನ ಹಿಂದೆ ಇನ್ನೊಂದು, ಅದರ ಹಿಂದೆ ಮಗದೊಂದು, ಅರ್ಜುನನಿಗೆ ಕೊಟ್ಟಿದ್ದರೆ ನೆನಪಿನ ಬಾಣಗಳಿಂದ ಸೇತುವೆಯನ್ನೇ ಕಟ್ಟುತ್ತಿದ್ದನೇನೋ, ಸ್ವರ್ಗದಿಂದ ಈ ಬಾರಿ ಐರಾವತದ ಬದಲು ನನ್ನ ಕಾಮಧೇನು ಚಂದು ಇಳಿದು ಬರುತ್ತಿದ್ದಳೇನೋ ಅನ್ನಿಸಿಬಿಟ್ಟಿತು.

ಈ ಅಜ್ಜ ಹೀಗೇ ಅಲ್ಲವೇನೇ ಮಗಳೆ, ಮಾತಿಗೊಂದು ನೆನಪು, ನೆನಪಿಗೊಂದು ಕತೆ, ಕತೆಗೊಂದು ಪುರಾಣ.. :) ಅಷ್ಟಿಲ್ಲದೆ ಊರ ಬಸ್ಸು ತಪ್ಪಿ ಹೋದಾಗ ಪುಟ್ಟಪಾದಗಳ ನಿನ್ನನ್ನ ಈ ಇಳಿವಯಸ್ಸಿನ ಮುದುಕನಿಗೆ ಗುಡ್ಡಗಾಡು ಸುತ್ತಿಸಿ ಶಿರವಂತೆಯಿಂದ ಮುಂಗಳೀಮನೆಗೆ ಕರೆದುಕೊಂಡು ಬರಲಾಗುತ್ತಿತ್ತಾ?

ಯಾವುದಕ್ಕೂ ಇರಲಿ ಅಂತ ನಿನ್ನ ಮಾವನ ಹತ್ತಿರ ಮೊಬೈಲಿನಲ್ಲಿ ಫೋಟೋ ತೆಗ್ಸಿ ಈ ಪತ್ರದ ಜೊತೆಗೆ ಲಗತ್ತಿಸಿದ್ದೀನಿ ನೋಡು ಮೊಗ್ಗುಗಳನ್ನ. ಚಿತ್ರದ್ದೇ ಆದರೂ ಅದನ್ನ ನೋಡಿ ನಿನ್ನ ಮೊಗದಲ್ಲಿ ಬಿರಿವ ಹೂನಗೆಯ ಕಂಡು ಈ ಮೊಗ್ಗುಗಳು ಕಂಪು ಬೀರದೇ ಇರುವುದಿಲ್ಲ.

ನಿನ್ನ ಓದು ಹೇಗೆ ನಡೆದಿದೆ? ಈಗ ನೀನು ಪ್ರೌಢ ಹುಡುಗಿ, ಹೆಚ್ಚಿನ ಓದಿರುತ್ತದೆ. ಮೊದಲಿನಂತೆ ರಜೆ ಬಂದ ಕೂಡಲೆ ವಿಮಾನ ಹತ್ತಿ ಅಜ್ಜನ ಮನೆಗೆ ಬರಲು ಆಗುವುದಿಲ್ಲ. ಪ್ರಾಜೆಕ್ಟ್,ಓದು, ಪ್ರವೇಶ ಪರೀಕ್ಷೆಯ ತಯಾರಿ ಇತ್ಯಾದಿ ಇರುತ್ತದೆ. ಇಷ್ಟಲ್ಲದೆ ನೀನು ಈಜುಗಾತಿ. ಅಲ್ಲಲ್ಲಿ ನಡೆಯುವ ಪಂದ್ಯಗಳಲ್ಲೂ ಭಾಗವಹಿಸಬೇಕು. ಜೊತೆಜೊತೆಗೆ ಕಲಿವ ವಯೊಲಿನ್. ನಿನ್ನ ಸಮಯದೊತ್ತಡಕ್ಕೆ ಈ ವರುಷ ಅಜ್ಜನ ಮನೆಯ ತಿರುಗಾಟ ಕಷ್ಟ ಎಂದು ಗೊತ್ತಿರುವುದರಿಂದ ನಮ್ಮ ನಡುವಿನ ದೂರ ಸಹನೀಯವೆನಿಸಿದೆ. ನೆನಪುಗಳ ಚಾಪೆ ಬಿಚ್ಚಿ ಕೂರಲಿಕ್ಕೇನು ಕಷ್ಟ ಈ ಮುದುಕನಿಗೆ ಅಲ್ಲವಾ. ಹತ್ತಿ ಕೂತ ಕೂಡಲೇ ಅದು ನಿನ್ನಲ್ಲಿಗೇ ಕರೆದೊಯ್ಯುತ್ತದೆ.

ಅಂದ ಹಾಗೆ ಒಂದು ವಿಷಯ ಹೇಳಲು ಮರೆತೆ. ಈಗ ಮೊದಲಿನ ಹಾಗೆ ದಿನಾ ಸಾಗರಕ್ಕೆ ತಿರುಗಾಡಲು ಆಗುವುದಿಲ್ಲ. ವಾರಕ್ಕೊಮ್ಮೆ ಹೋಗಲೂ ಆಲಸ್ಯ. ಇದರಿಂದ ಮೊದಲ ನಷ್ಟವೇನೆಂದರೆ ಎಂದಿನ ಹಾಗೆ ಲೈಬ್ರರಿಗೆ ಹೋಗಿಬರಲು ಆಗುತ್ತಿಲ್ಲ. ಈ ಬೇಸರವನ್ನೆಲ್ಲ ಕಳೆಯುವುದು ಹೇಗೆ ಅಂದಿದ್ದಕ್ಕೆ ನಿನ್ನ ವಿಕಾಸ ಭಾವಯ್ಯ ಎಷ್ಟೊಂದು ಕಂಪ್ಯೂಟರ್ ಪುಸ್ತಕಗಳನ್ನ ತೋರಿಸಿಕೊಟ್ಟಿದಾನೆ. ನೆಟ್ಟಿನಲ್ಲಿ ಕನ್ನಡ ಓದಿ ಒಂತರಾ ಖುಷಿಯಾಯಿತು. ಎಷ್ಟೇ ಆದರೂ ಅಡಿಗೆ ಮನೆಯಲ್ಲಿ ಒಲೆಕಟ್ಟೆಯ ಹತ್ತಿರದ ಕಿಟಕಿಯ ತಳಿಯಲ್ಲಿ ಕೂತು ಓದಿದ ಹಾಗಾಗುವುದಿಲ್ಲ. ಆದರೇನು ಎಲ್ಲೆಲ್ಲಿಂದಲೂ ಕುಳಿತು ಚಂದಚಂದವಾಗಿ ಕನ್ನಡ ಕತೆ, ಕವಿತೆ, ಪ್ರಬಂಧ ಬರೆಯುವವರ ಒಂದು ಬಳಗವೇ ಸಿಕ್ಕಿದೆ. ಓದುವವರಿಗೆ ರಸದೂಟ.

ಅಂತಹದರಲ್ಲಿ ಒಂದು ಕೆಂಡಸಂಪಿಗೆ.

ಸುರಗಿಯ ಘಮಕ್ಕೆ ಮನಸೋತವಳಿಗೆ, ಕತೆಗಳ ಮಡಿಲಲ್ಲಿ ಪವಡಿಸುವವಳಿಗೆ, ಕವಿತೆಯೆಂದರೆ ಕಣ್ಣರಳಿಸುವವಳಿಗೆ, ಕನ್ನಡವೆಂದರೆ ಮಂತ್ರಮುಗ್ಧಳಾಗುವವಳಿಗೆ, ಕನ್ನಡ ಸಾಹಿತ್ಯದ ವಿಶಾಲ ಹರಿವಿನಲ್ಲಿ ಈಸಬಯಸುವವಳಿಗೆ ಇದು ಮೆಚ್ಚಿನ ತಾಣವೇ ಆಗಲಿದೆ. ನಿನ್ನ ನಲ್ಮೆಯ ಓದನ್ನು ಹೀರಿ ಬೆಳೆಯಬೇಕಿರುವ ಒಂದು ಕಿರುವೃಕ್ಷವಿದು. ಕನ್ನಡದ ಎಲ್ಲ ನೆಲೆಯ ಬರಹಗಾರರನ್ನ ಪ್ರಸ್ತುತಪಡಿಸುವ ಈ ತಾಣದಲ್ಲಿ ನೀನು ನಿನ್ನ ನೆಚ್ಚಿನ ಕೊಂಬೆಯನ್ನೇರಿ ಸಾಹಿತ್ಯದ ಜೋಕಾಲಿ ಜೀಕಬಹುದು. ಹೇಗೇ ಜೀಕಿದರೂ ತೇಲಿಬರುವ ಗಾಳಿಯಲ್ಲಿ ಆಹ್ಲಾದದ ಸಂಪಿಗೆಯ ಘಮವಿರುತ್ತದೆ.

ದೀಪಾವಳಿ ಮುಗಿಸಿ ನಿನಗೆ ಪತ್ರ ಬರೆಯುವಾಗ ಈ ಬಗ್ಗೆ ಬರೆಯ ಬೇಕೆಂದಿದ್ದೆ, ಅಷ್ಟರಲ್ಲೇ ಯಾವುದೋ ಆಂತರಿಕ ಒತ್ತಡಗಳಿಂದ ಈ ವೆಬ್ ಪತ್ರಿಕೆ ಕೆಲಕಾಲ ಸುಮ್ಮಗಾಯಿತು. ಶಿಶಿರದ ಎಲೆಯುದುರುವಿಕೆಯ ಹಾಗೆ ಸುಮ್ಮನಿದ್ದ ಪತ್ರಿಕೆ ಈಗ ಮತ್ತೆ  ಸಂಕ್ರಮಣ ಕಾಲದಲ್ಲಿ ಚಿಗುರೊಡೆದಿದೆ. ಇದು ಕನ್ನಡದ ಮತ್ತು ಕನ್ನಡ ಓದುಗರ ಸಂಕ್ರಮಣ ಕಾಲ. ಮೂಲೆಮೂಲೆಯ ಓದುಗರು ಮತ್ತು ಬರಹಗಾರರ ಅಮೂರ್ತ ಸಮ್ಮಿಲನವನ್ನ ಅಂತರ್ಜಾಲ ಸಾಧಿಸಿದೆ. ಅದರಲ್ಲಿ ಈ ಪತ್ರಿಕೆ ಒಂದು ಮುಖ್ಯ ಕೊಂಡಿ. ಊರಿನ ಮತ್ತು ಸಮಸ್ತ ಪ್ರಪಂಚದ ಕನ್ನಡತನದ ವಿವಿಧ ಆಯಾಮಗಳನ್ನ ಕಟ್ಟಿಕೊಡುವ ಈ ಪತ್ರಿಕೆಯನ್ನ ನೀನು ಓದಲೇಬೇಕು. ಹೌದು ಕನ್ನಡದ ಸಾಮರ್ಥ್ಯ ಮತ್ತು ಮಿತಿಗೆ ಒರೆಗಲ್ಲು ಹಚ್ಚುವುದು ಇಂತಹ ಸೃಜನಶೀಲ ಪ್ರಯತ್ನಗಳೇ.

ನೋಡು ಓದಿ ನಿನಗೇನೆನ್ನಿಸಿತು ಅಂತ ಪತ್ರ ಬರಿ. ನೆಟ್ಟಲ್ಲಿ ಒಂದೆರಡು ಸಾಲು ಹಾಕಿದರೂ ಎಂದಿನಂತೆ ಪತ್ರದಲ್ಲಿ ನನಗೆ ಬರೆಯುವುದನ್ನ ಮರೆಯಬೇಡ.

ಈ ನೆಟ್ ಪತ್ರವನ್ನ ನಾನು ಇವತ್ತು ಮಾವನ ಸಹಾಯದಿಂದ ನಿನಗೆ ಕಳಿಸುತ್ತಿದ್ದೇನಾದರೂ ಬರೆದ ಕೂಡಲೇ ಪತ್ರವನ್ನು ಮಾತ್ರ ಎಂದಿನಂತೆ ಭಾವಯ್ಯನ ಹತ್ತಿರ ಕಳಿಸಿ ಸಾಗರದ ಪೋಸ್ಟ್ ಬಾಕ್ಸಿನಲ್ಲಿ ಹಾಕಿಸಿದ್ದೇನೆ. ನಾಲ್ಕು ಸುರಗಿಮೊಗ್ಗುಗಳೂ ಅದರಲ್ಲಿವೆ. ನಿನ್ನನ್ನು ತಲುಪುವಾಗ ಒಣಪಕಳೆಗಳೇ ಇರುತ್ತವಾದರೂ ಅದರ ಅರಿಷಿನ ಘಮ ತಾಜಾವಾಗೆ ಇರುತ್ತದೆ. ದೂರದಿಂದಾಗಿ ನಲುಗಿದರೂ, ಹಚ್ಚಗಿರುವ ನಮ್ಮ ನಡುವಿನ ಬಾಂಧವ್ಯದಂತೆ.

ನಿನ್ನ ಅಮ್ಮ ಮತ್ತು ಅಪ್ಪಾಜಿಗೆ ನನ್ನ ಆಶೀರ್ವಾದಗಳನ್ನು ತಿಳಿಸು. ನಿನ್ನ ಪರೀಕ್ಷೆಗಳೆಲ್ಲ ಮುಗಿದ ಮೇಲೆ ಯಾವುದೇ ನೆವ ಹೇಳದೆ ಇಲ್ಲಿಗೆ ಬರುವಂತೆ ಮಾಡಬೇಕೆಂಬುದು ನನ್ನ ಆಗ್ರಹವೆಂದು ಹೇಳಿದ್ದೇನಾಗಿ ತಿಳಿಸು.
ಓದು ಮತ್ತು ತಿಳುವಳಿಕೆಯಲ್ಲಿ ನೀನು ಎಂದಿನಂತೆ ಸೊಗಯಿಸುತ್ತಿರು, ಆರೋಗ್ಯದಿಂದ ಕೂಡಿರು, ಒಳ್ಳೆಯ ಮನಸ್ಸಿನಿಂದ ನಿನ್ನ ಕೆಲಸಗಳನ್ನು ಮಾಡು, ಎಂದಿನಂತೆ ಚಿಗುರುವಿಕೆಯೇ ಸ್ವಭಾವವಾದ ನೀನು ನಲಿವಿನಿಂದಿರು ಎಂದು ಆಶೀರ್ವದಿಸುತ್ತಿದ್ದೇನೆ. ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡಬೇಕು ಎನ್ನುವುದು ನಿಯಮ. ಅದನ್ನ ಪಾಲಿಸುವುದು ಸಂಸ್ಕೃತಿ.
 
ನಿಮಗೆಲ್ಲರಿಗೂ ಸಂಕ್ರಮಣದ ಶುಭಾಶಯಗಳು.

ನಿನ್ನ ಅತ್ತೆ, ಮಾವ, ಭಾವಯ್ಯ ಎಲ್ಲರೂ ನಿಮ್ಮನ್ನ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಟೈಗರ್ ಅಲ್ಲಿಂದಲೇ ಬೊಗಳಿ ತನ್ನ ಶುಭಾಶಯಗಳನ್ನು ನಿನಗೆ ತಿಳಿಸುತ್ತಿದ್ದಾನೆ.

ಅಕ್ಕರೆಯ ಬಿರಿಮುತ್ತುಗಳು ಮತ್ತು ಅಪ್ಪುಗೆಯೊಂದಿಗೆ
ಆಶೀರ್ವಾದಪೂರ್ವಕ
ನಿನ್ನ ಅಜ್ಜ
ಪಟೇಲ್ ಮಂಜಯ್ಯನವರು, ಮುಂಗಳೀಮನೆ, ಸಸರವಳ್ಳಿ ಗ್ರಾಮ, ಸಾಗರ ತಾಲೂಕು.

ಪುಟದ ಮೊದಲಿಗೆ
 
Votes:  1     Rating: 5    
 
 
ಸಂಬಂಧಿಸಿದ ಲೇಖನಗಳು
  ಕೋಮುಗಲಭೆಯೂ ಜೀವನ ಸರಪಳಿಯೂ:ಬಿ.ಕೆ.ಶಿವರಾಂ ನೆನಪುಗಳು
  ರಂಜಾನ್ ಎಂಬ ಉಪವಾಸ ಸಂಭ್ರಮ:ಫಕೀರ್ ಬರಹ
  ನಾವೆಲ್ಲ ಬೆಳೆದು ದೊಡ್ಡವರಾಗಿ!
  ಸೋಮವಾರ ಶಿವಮೊಗ್ಗದಲ್ಲಿ ತಾರಾನಾಥರ ಸರೋದ್
  ಶಿಕ್ಷಣವೆಂದರೆ ಶಿಕ್ಷೆಯೆಂದೇಕೆ ಕೆಲವೊಮ್ಮೆ ಕೇಳಿಸುತ್ತದೆ?
  ಮಾತಿನ ಮಳೆಯ ಯೋಗರಾಜ್ ಪಂಚರಂಗಿ
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....