ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈ ದಿನ ಲಂಕೇಶ್ ತೀರಿಹೋಗಿ ಹತ್ತು ವರ್ಷಗಳಾದವು.ಅವರ ನೆನಪಿಗೆ ರಶೀದ್ ಬರೆದ ಒಂದು ಕವಿತೆ ಇಲ್ಲಿದೆ
ನಾವು ಎಲ್ಲರೂ
ನೀವು ಇದ್ದಿದ್ದರೆ
ಈ ಎಲ್ಲದರ ಕುರಿತು
ಏನು ತೀರ್ಮಾನ ತೆಗೆದುಕೊಳ್ಳುತ್ತಿದ್ದಿರಿ ಎಂದು
ಯೋಚಿಸುತ್ತಾ ಕುಳಿತಿರುವೆವು.
ಹೀಗೆ ನೀವು ಸಾರ್ವಜನಿಕ ತೀರ್ಮಾನಗಳನ್ನು
ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಬಹುಶಃ
ನಮಗೆ ಗೊತ್ತಿಲ್ಲ ಎನ್ನುವುದೂ ಒಂದು
ಚರ್ಚೆಯ ವಿಷಯವಾಗಿರುವುದು.
ನಿಮ್ಮ ಬಕ್ಕತಲೆಯ ಒಳಗೆ ಸುಳಿದಾಡುತ್ತಿದ್ದ
ಮಿಂಚುಗಳು,ಅಳ್ಳೆದೆಯವರ ಮೇಲೆ ಸದಾ ಮಸೆಯುತ್ತಿದ್ದ ಸೃಜನಶೀಲ
ಮಚ್ಚು ಮತ್ತು ಎಲ್ಲ ಸುಂದರಿಯರ ಬೆವರಸೆಲೆ
ಹುಡುಕಿಕೊಂಡು ಅಂಡಲೆಯುತ್ತಿದ್ದ
ಮಹಾನಾಚುಗೆಬುರುಕ ವಿಧ್ವತ್ತು.
ನಡೆಯುತ್ತಿರುವುದು ಸದಾ ತಂತಿಯ ಮೇಲೆಂಬ
ದೊಂಬರ ಹುಡುಗಿಯ
ವಿನಾಕಾರಣ ಆಪತ್ತಿನ ಭಯ,ಅದಕ್ಕೂ ಮಿಗಿಲಾಗಿದ್ದ
ಅವ್ವನಂತಹ ಮೊಸರು ಮಾರುವ ನಿಯತ್ತು.
ನಾಚುಗೆಯ, ಲೆಕ್ಕಾಚಾರದ, ಪತರಗುಟ್ಟುವ,
ಕವಿತೆಯ, ಗದ್ಯದ, ಬೈಗುಳಗಳ
ಈ ಎಲ್ಲದರ ತಳದಲ್ಲಿ ಉಳಿಯುವ
ಅಲ್ಲೋಲಕಲ್ಲೋಲದಂತಹ ಏಕಾಂತದ ನಡುವೆಯೂ
ನೀವು ನೀಡುತ್ತಿದ್ದ ಕಠಿಣ ಏಟು.
ಅವುಗಳನು ಉಂಡೂ ಸುಖಿಸುತ್ತಿದ್ದ
ಮಹಾ ಪೋಕರಿ ಸಾಮಾಜಿಕ ಮನಸ್ಸು.
ಹಾದರದವಳ ಮಹಾ ಲೆಕ್ಕಾಚಾರ
ಮತ್ತು ಗರತಿಯ ಹುಚ್ಚುಕೋಡಿ ಮನಸ್ಸು
ಲಂಕೇಶ್ ನೀವು ಇದ್ದಿದ್ದರೆ ಕೌದಿಯೊಳಗೆ ಸದಾ
ತಾಪದಿಂದ ಕಾತರಿಸುತ್ತಿದ್ದ ನಿಮಗೆ ಬಹಳಷ್ಟು ಕಥೆಕಟ್ಟಿ
ಹೇಳ ಬಹುದಿತ್ತು. ಮತ್ತು ಬಹಳಷ್ಟು ಕೇಳಬಹುದಿತ್ತು
ಈ ಎಲ್ಲ ಬಿಕ್ಕಟ್ಟು ಯಾಕೆ ಬೇಕಿತ್ತು!