ನನಗೆ ಶ್ರೀನಗರದ ಮೈಕೊರೆಯುವ ಚಳಿಯಲ್ಲಿ ಮೈತುಂಬಾ ಸ್ವೆಟರ್, ಜಾಕೆಟ್ ಧರಿಸಿ ನಡೆಯುವುದೆಂದರೆ ಭಾರೀ ಇಷ್ಟ. ಈ ಅವಕಾಶವನ್ನು ನಾನೆಂದೂ ಮಿಸ್ ಮಾಡಿಕೊಳ್ಳುವುದಿಲ್ಲ. ಆ ದಿನ ಕಾಫೀ ಅರೇಬಿಕಾದಿಂದ ಎರಡು ಮಗ್ ಕಾಫೀ ಹೀರಿ ರಸ್ತೆಗಿಳಿದಾಗ, ಭಯಂಕರ ಚಳಿಗಾಳಿ ಬೀಸುತ್ತಿತ್ತು. ಅದನ್ನು ಆಸ್ವಾದಿಸುತ್ತಾ ದಲ್ ಗೇಟ್ ಕಡೆಗೆ ನಡೆದೆ. ಕಾಶ್ಮೀರದ ಉನ್ನತ ನಾಯಕರು ವಾಸಿಸುವ ಗುಪ್ಕರ್ ರೋಡ್ ನ ಪ್ರವೇಶಕ್ಕೆ ಭದ್ರತಾಪಡೆಗಳು ಮುಳ್ಳುತಂತಿಯ ಬೇಲಿ ಹಾಕುತ್ತಿದ್ದವು. ಅವರೆಡೆಗೆ ಕಳ್ಳನೋಟ ಬೀರುತ್ತಾ ಎಡಗಡೆ ತಿರುಗಿದೆ. ವಿಶಾಲವಾದ ದಲ್ ಸರೋವರ ಚಳಿಯಲ್ಲಿ ಅರ್ಧ ಹೆಪ್ಪುಗಟ್ಟಿತ್ತು. ಶಿಕಾರಾ ಮಾಲಿಕರು ದಡದಲ್ಲಿ ಕುಳಿತು ಸಿಗರೇಟ್ ಸೇದುತ್ತಿದ್ದರು. ಕೆಲವರು ಕಾಂಗ್ಡಿ ಎದುರು ಚಳಿ ಕಾಸುತ್ತಿದ್ದರು.
ನನಗರಿವಿಲ್ಲದೇ ಕಾಲುಗಳು ನನ್ನನ್ನು ಶಂಕರಾಚಾರ್ಯ ಪರ್ವತದತ್ತ ಎಳೆದುಕೊಂಡು ಹೋದವು. ಸುಮಾರು 10 ವರ್ಷಗಳ ನಂತರ ಇಲ್ಲಿಗೆ ಜನರನ್ನು ಮತ್ತೆ ಬಿಡಲಾಗುತ್ತಿದೆ. ಭೌದ್ಧ ಧರ್ಮದ ಅತ್ಯುನ್ನತ ನಗರವಾಗಿದ್ದ ಶ್ರೀನಗರದಲ್ಲಿ ಭೌದ್ಧ ಧರ್ಮವನ್ನು ನಾಶಮಾಡಿ, ಹಿಂದೂ ಧರ್ಮ ಪುನರ್ ಸ್ಥಾಪಿಸಿದ ಶಂಕರರು, ಇದೇ ಪರ್ವತದ ಮೇಲೆ ತಪಸ್ಸು ಮಾಡಿದರು ಎಂದು ಪ್ರತೀತಿ. ಇದೆಲ್ಲಾ 1300 ವರ್ಷಗಳ ಹಿಂದಿನ ಕತೆ.
ಪರ್ವತದ ತಳಭಾಗದಲ್ಲಿ ದಲ್ ಸರೋವರದತ್ತ ಮುಖ ಮಾಡಿರುವ ರಸ್ತೆಯಲ್ಲಿ ನಡೆದೆ. ಮೊದಲನೆಯ ಸೆಕ್ಯುರಿಟಿ ಗೇಟ್ ನಲ್ಲಿ ಹಿಂದೂ ಎನ್ನುವ ಕಾರಣಕ್ಕೊ ಅಥವಾ ಪತ್ರಕರ್ತನೆನ್ನುವ ಕಾರಣಕ್ಕೋ ಕಾಟಾಚಾರಕ್ಕೆ ಚೆಕ್ ಮಾಡಿ ಒಳಬಿಟ್ಟರು. ಅಲ್ಲಿಂದ ಸುಮಾರು ಮೂರು ಕಿಲೋ ಮೀಟರ್ ದೂರ ಕಾಡಿನೊಳಗೆ ಕಡಿದಾದ ಪರ್ವತ ಹತ್ತಲಾರಂಭಿಸಿದೆ. 45 ನಿಮಿಷದ ನಂತರ ಪರ್ವತದ ಮೇಲಿರುವ ಈಶ್ವರನ ದೇವಸ್ಥಾನದ ಮೆಟ್ಟಿಲುಗಳ ಹತ್ತಿರ ತಲುಪಿದೆ. ಇಲ್ಲಿ ಮೊಬೈಲ್ ಇತ್ಯಾದಿ ಭದ್ರತಾಪಡೆಗಳ ಕೈಗೆ ಕೊಟ್ಟು, ಕಡಿದಾದ ಸುಮಾರು 100 ಮೆಟ್ಟಿಲು ಹತ್ತಿ ದೇವಸ್ಥಾನ ತಲುಪಿದೆ. ಇಲ್ಲಿಂದ ಕಾಣುವ ಶ್ರೀನಗರದ ದೃಶ್ಯ ಅದ್ಭುತ. ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವಿಲ್ಲದ್ದು. ಶ್ರೀನಗರ ನಿಜಕ್ಕೂ ನದಿಗಳ, ಸರೋವರಗಳ ನಗರ. ಝೀಲಮ್ ನದಿ ನಗರದ ನಡುಭಾಗದಲ್ಲಿ ಹಾವಿನಂತೆ ಬಳುಕುತ್ತಾ ಹರಿಯುತ್ತದೆ. ಬೃಹತ್ ದಲ್ ಸರೋವರ, ನಾಗೀನ್ ಲೇಕ್ ಗಳೂ ಅದಕ್ಕೆ ಸಾಥ್ ನೀಡುತ್ತವೆ. ಹಿಮತುಂಬಿದ ಮಹಾನ್ ಪರ್ವತಗಳು ನಗರವನ್ನು ನಾಲ್ಕೂ ಭಾಗಗಳಲ್ಲಿ ಸುತ್ತುವರಿದಿವೆ.
ಗರ್ಭಗುಡಿಯಲ್ಲಿ ಸ್ಥಳೀಯ ಪಂಡಿತ ಅರ್ಚಕ ಕುಳಿತಿದ್ದ. ತೀರ್ಥ, ಪ್ರಸಾದದ ನಂತರ ಅವನನ್ನು ಮಾತಿಗೆಳೆದೆ. ‘ಈಗ ಕಾಶ್ಮೀರದಲ್ಲಿ ಎಷ್ಟು ಪಂಡಿತರಿದ್ದಾರೆ? ನಿನ್ನ ಮನೆ ಎಲ್ಲಿದೆ' ಎಂದೆ. `ಈಗ ಇಡೀ ಕಾಶ್ಮೀರದಲ್ಲಿ ಕೇವಲ 3000 ಸಾವಿರ ಪಂಡಿತರಿದ್ದಾರೆ. ಕಳೆದ ಐದಾರು ವರ್ಷದಲ್ಲಿ ಕೇವಲ 300-400 ಪಂಡಿತರು ವಾಪಸು ಬಂದಿದ್ದಾರೆ' ಎಂದು ಹೇಳಿದ. `ಸ್ಥಳೀಯ ಹಿಂದೂಗಳಾರೂ ಇಲ್ಲಿಗೆ ಬರಲ್ಲ. ಅವರಿಗೆ ಅವರದೇ ಬೇರೆ ಚಿಂತೆಗಳಿವೆ. ಪ್ರವಾಸಿಗರದೇ ಆದಾಯ' ಎಂದೂ ಅರ್ಚಕ ನಿಟ್ಟುಸಿರುಬಿಟ್ಟ.
ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವ ಸಮಯದಲ್ಲಿ 1990 ರ ಮೊದಲ ಭಾಗದಲ್ಲಿ ಸಾಮೂಹಿಕವಾಗಿ ವಲಸೆಹೋದ ಪಂಡಿತರನ್ನು ವಾಪಸು ಕರೆಸುವ ಬಗ್ಗೆ ದೊಡ್ಡ, ದೊಡ್ಡ ಚರ್ಚೆಯಾಗುತ್ತದೆ. ಇವರನ್ನು ಓಡಿಸಲು ಕಾರಣರಾದ ಇದೇ ಯಾಸೀನ್ ಮಲ್ಲಿಕ್, ಸೈಯದ್ ಆಲಿಶಾ ಗಿಲಾನಿ ಮುಂತಾದವರು... `ಪಂಡಿತರು ಕಾಶ್ಮೀರದ ಅವಿಭಾಜ್ಯ ಅಂಗ, ಅವರಿಲ್ಲದ ಕಾಶ್ಮೀರ, ಕಾಶ್ಮೀರವೇ ಅಲ್ಲ' ಎಂದು ಡಂಗೂರ ಸಾರುತ್ತಾರೆ. ಯಾಸೀನ್ ಮಲ್ಲಿಕ್ ನನ್ನ ಹತ್ತಿರವೇ ಈ ಮಾತನ್ನು ಕಳೆದ ಎಂಟು ವರ್ಷದಲ್ಲಿ ಹತ್ತಾರು ಸಲ ಹೇಳಿದ್ದಾನೆ. ಡಾ. ಫಾರೂಕ್ ಅಬ್ದುಲ್ಲಾರಿಂದ ಹಿಡಿದು ಈಗಿನ ಯುವ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತನಕ ಎಲ್ಲರೂ ಇದೇ ಮಾತನ್ನು ಹೇಳುತ್ತಲೇ ಇರುತ್ತಾರೆ. ಆದರೆ ಅದು ಅಷ್ಟು ಸುಲಭವಲ್ಲ.
ಅದೇ ಪಂಡಿತರನ್ನು ಕೇಳಿ. ಇವರ ಮಾತು ಕೇಳಿ ಕಣಿವೆಗೆ ವಾಪಸಾಗಲು ಅವರಾರೂ ತಯಾರಿಲ್ಲ. ಇದೆಲ್ಲಾ ಬರೀ ಬಡಾಯಿ. ನಾವು ವಾಪಸಾಗುವುದು ಯಾರಿಗೂ ಬೇಕಿಲ್ಲ ಎಂದು ಅವರು ಹೇಳುತ್ತಾರೆ. ಗುಲಾಮ್ ನಬಿ ಆಜಾದ್ ಮುಖ್ಯಮಂತ್ರಿಯಾಗಿದ್ದಾಗ, ಪಂಡಿತರನ್ನು ವಾಪಸು ಕರೆಸಲು ಶ್ರೀನಗರದ ಹೊರವಲಯದ ಬಡ್ ಗಾಮ್ ನಲ್ಲಿ ಕಾಲೋನಿಯೊಂದನ್ನು ಕಟ್ಟಲಾಯ್ತು. ಐದಾರು ಅಂತಸ್ತಿನ, ನಮ್ಮ ಅಪಾರ್ಟ್ ಮೆಂಟ್ ನಂತಹ ಈ ಕಾಲೋನಿಗೆ ಹದಿನಾರು ಅಡಿ ಎತ್ತರದ ಕಾಂಪೌಂಡ್, ಮುಳ್ಳುತಂತಿ ಬೇಲಿ, ಎಕೆ-47 ಹಿಡಿದ ಸುಮಾರು 30 ಅರೆಸೇನಾ ಪಡೆ ಯೋಧರನ್ನು ಕಾವಲಿಗೆ ಹಾಕಲಾಗಿದೆ. ತಮ್ಮದೇ ನೆಲದಲ್ಲಿ ಕೈಯಲ್ಲಿ ಜೀವ ಹಿಡಿದು ಬದುಕಲು ಈ ಕಾಲೋನಿಗೆ ಯಾರು ಬರುತ್ತಾರೆ ಹೇಳಿ? ಆದ್ದರಿಂದ ಇಲ್ಲಿನ ಜನಸಂಖ್ಯೆ ಇಂದಿಗೂ ಏರಿಲ್ಲ. ಪಂಡಿತರು ನಿಜಕ್ಕೂ ವಾಪಸು ಬರಬೇಕೆಂದು ಸರಕಾರಕ್ಕೆ, ಪ್ರತ್ಯೇಕತಾವಾದಿಗಳಿಗೆ ಆಸೆಯಿದ್ದರೆ, ಸಾವಿರಾರು ವರ್ಷಗಳಿಂದ ಪಂಡಿತರು ಎಲ್ಲಿದ್ದರೋ ಅಲ್ಲಿಗೇ ಅವರು ವಾಪಸಾಗುವಂತಾಗಬೇಕು. ಪಂಡಿತರು ತಮ್ಮ ಹಳ್ಳಿಗಳಿಗೆ, ಕೇಸರಿ, ಸೇಬು ಬೆಳೆಯುವ ತಮ್ಮ ಜಮೀನಿಗೆ, ಮುಸ್ಲಿಮರ ನೆರೆಹೊರೆಗೆ ವಾಪಸಾಗಲು ಬಯಸುತ್ತಾರೆ. ಶ್ರೀನಗರದ ಹೈ ಸೆಕ್ಯುರಿಟಿ ಪಂಡಿತರ ಗೆಟ್ಟೋಗಳಿಗಲ್ಲ.
ಶ್ರೀನಗರದ ಹಬ್ಬಾಕಡಲ್ ಪ್ರದೇಶ ಒಂದು ಕಾಲದಲ್ಲಿ ಬರೀ ಪಂಡಿತರೇ ಇದ್ದ ಪ್ರದೇಶ. ಈಗ ಇಲ್ಲಿ 50 ಕ್ಕಿಂತ ಕಡಿಮೆ ಪಂಡಿತರು ಇನ್ನೂ ವಾಸವಾಗಿದ್ದಾರೆ. ಬಹುತೇಕ ಪಂಡಿತರ ಮನೆಗಳು ಮುರಿದು ಬಿದ್ದಿವೆ. ಉಳಿದವು ತೀರಾ ಜೀರ್ಣಾವಸ್ಥೆಯಲ್ಲಿವೆ. ಇನ್ನೂ ಕೆಲವು ಬೇರೆಯವರ ಪಾಲಾಗಿವೆ. ದೆಹಲಿ, ಜಮ್ಮು ಮುಂತಾದೆಡೆ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ಅಥವಾ ಸ್ವಂತ ಮನೆಗಳಲ್ಲಿ ವಾಸಿಸುತ್ತಿರುವ, ಪಂಡಿತರು ಒಮ್ಮೊಮ್ಮೆ ಇಲ್ಲಿಗೆ ಬಂದು ತಮ್ಮ ಮನೆ ನೋಡಿ ವಾಪಸಾಗುತ್ತಾರೆ. ಬಹುತೇಕರು ಅನಾಮಧೇಯರಾಗಿ ಬಂದು ಸದ್ದಿಲ್ಲದೇ ವಾಪಸಾಗುತ್ತಾರೆ. ಇಲ್ಲದಿದ್ದರೆ, ಭಯೋತ್ಪಾದಕರು ಧಾಳಿ ಮಾಡಿಯಾರು ಎಂಬ ಭಯ. ನನ್ನ ಗೆಳತಿ ನೀತಾ ನೆಹರೂ ತನ್ನ ತಾಯಿಯ ಜೊತೆ ಕಳೆದ 10 ವರ್ಷದಲ್ಲಿ ಮೂರು ಸಲ ತನ್ನ ಮನೆ ನೋಡಲು ಬಂದಿದ್ದಾಳೆ, ಪ್ರತಿ ಸಲವೂ ಬಳೆ, ಬೆಂಡೋಲೆ ಮುಂತಾದವನ್ನು ತೆಗೆದಿಟ್ಟು, ಕುಂಕುಮ ಅಳಿಸಿ ಹಬ್ಬಾಕಡಲ್ ಗೆ ಕಾಲಿಟ್ಟಿದ್ದಾರೆ. ಕೆಲವೇ ನಿಮಿಷ ಮನೆಯ ಬಳಿ ನಿಂತು ಮೌನವಾಗಿ ವಾಪಸಾಗಿದ್ದಾರೆ. ಶ್ರೀನಗರದ್ದೇ ಈ ಪರಿಸ್ಥಿತಿಯಾದರೆ, ಇನ್ನು ಹಳ್ಳಿಗಳಿಗೆ ಪಂಡಿತರು ನಿರಾತಂಕವಾಗಿ ವಾಪಸಾಗಲು ಸಾಧ್ಯವೆ? ಕೆಲವರ ಪ್ರಕಾರ ಕಾಶ್ಮೀರದಲ್ಲಿ ಸುಮಾರು 300 ದೇವಾಲಯಗಳನ್ನು ಕಳೆದ ಐದಾರು ವರ್ಷಗಳಲ್ಲಿ ಪುನಹ ಬಾಗಿಲು ತೆರೆಯಲಾಗಿದೆ. ಎಷ್ಟೋ ಕಡೆ ಸ್ಥಳೀಯ ಮುಸ್ಲಿಮರು ದೇವಾಲಯಗಳ ಉಸ್ತುವಾರಿ, ಭದ್ರತೆಯ ಹೊಣೆ ಹೊತ್ತಿದ್ದಾರೆ. ಹೀಗಾಗಿ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ರಕ್ತಪಾತಕ್ಕೆ ಮೊದಲಿನ ಪರಿಸ್ಥಿತಿ ವಾಪಸಾಗುತ್ತಿದೆ.
ಆದರೆ ಕಳೆದ 20 ವರ್ಷಗಳಲ್ಲಿ ಒಂದು ಇಡೀ ತಲೆಮಾರೇ ಕಾಶ್ಮೀರದಲ್ಲಿ ಮರೆಯಾಗಿರುವುದರಿಂದ ಪರಿಸ್ಥಿತಿ ಸುಧಾರಿಸುವುದು ಸುಲಭವಲ್ಲ. ಈಗಿನ ಯುವ ಜನಾಂಗಕ್ಕೆ ಹಿಂದೂ-ಮುಸ್ಲಿಮ್ ಸಹಬಾಳ್ವೆಯ ಪರಿಚಯವೇ ಇಲ್ಲ. ಹೆಚ್ಚುತ್ತಿರುವ ಜಾಗತಿಕ ಭಯೋತ್ಪಾದನೆಯೂ ಸುಧಾರಿಸುತ್ತಿರುವ ಪರಿಸ್ಥಿತಿಗೆ ತುಪ್ಪ ಸುರಿಯುತ್ತಿದೆ. ಹೀಗೆ ಆಲೋಚಿಸುತ್ತಾ, ಹಬ್ಬಾಕಡಲ್ ನಿಂದ ಕರಣ್ ನಗರದತ್ತ ಕಾರು ತಿರುಗಿಸಿದೆ. ಆ ದಿನ ನನ್ನ ಮನಸ್ಸಿನ ತುಂಬಾ ಬರೀ ಪಂಡಿತರೇ ತುಂಬಿಹೋಗಿದ್ದರು. ರೀಗಲ್ ಚೌಕಕ್ಕೆ ವಾಪಸಾಗುವಾಗ ಬಾಗಿಲು ಹಾಕಿರುವ ದೇವಾಲಯಗಳನ್ನು ಎಣಿಸುತ್ತಾ ಹೋದೆ. ಅಹ್ದೂಸ್ ಹೋಟೆಲ್ ಹೊರಗಡೆ ಚಹಾ ಕುಡಿದು, ಮೌಲಾನಾ ಆಜಾದ್ ರಸ್ತೆಯ ಕಡೆ ಕಾಲಿಟ್ಟಾಗ ‘Indian Express'ನ ಯುವ ಪತ್ರಕರ್ತೆ ಮತ್ತು ಗೆಳತಿ ಮಾರೂಷಾ ಮುಝಾಫರ್ ಎದುರಿಗೇ ಬಂದಳು. `ಅರೇ ನೀನ್ಯಾವಾಗ ಊರಿಗೆ ವಾಪಸಾದೆ' ಎಂದೆ. `ರಜಾ ಹಾಕಿ ಬಂದಿದ್ದೇನೆ. ಮೂರು ದಿನಗಳ ನಂತರ ವಾಪಸ್ ದೆಹಲಿಗೆ' ಎಂದು ನಕ್ಕಳು. `ನಿನ್ನ ಬಾಸ್ ರಾಜ್ ದೀಪ್ ಸರ್ ದೇಸಾಯಿ ನಿನ್ನನ್ನು ಹುಡುಕುತ್ತಿರಬೇಕು, ನೀನು ನಾಳೆ ವಾಪಸಾಗದಿದ್ದರೆ ಅವರು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾಗೆ ಫೋನ್ ಮಾಡಿ ನಿನ್ನನ್ನು ಬಲವಂತವಾಗಿ ದೆಹಲಿ ವಿಮಾನ ಹತ್ತಿಸಲು ಹೇಳುತ್ತಾರೆ. ನೀನು ಕಾಶ್ಮೀರಕ್ಕೆ ಬಂದು ಈಗಾಗಲೇ ನಾಲ್ಕು ದಿನವಾಯ್ತಲ್ಲ' ಎಂದು ತುಂಟತನದಿಂದ ಕಣ್ಣರಳಿಸಿದಳು. ನಾನು ಶ್ರೀನಗರದಲ್ಲಿ ಇನ್ನೂ ಬಾಗಿಲು ಹಾಕಿರುವ ದೇವಾಲಯಗಳ ಗಣತಿ ಮಾಡುತ್ತಿದ್ದೇನೆ ಎಂದು ನಕ್ಕೆ. ಹಾಗಿದ್ದರೆ ನಾನೂ ನಿನ್ನ ಜೊತೆ ಬರ್ತೇನೆ. ಇಬ್ಬರೂ ಸೇರಿ ಲೆಕ್ಕಹಾಕೋಣ ಎಂದು ಕಿಲ ಕಿಲ ನಕ್ಕಳು. ನಮ್ಮ ಪಕ್ಕದಲ್ಲೇ ಇದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎದುರಿನ ಈಶ್ವರ ದೇವಾಲಯ ಬಾಗಿಲು ಹಾಕಿತ್ತು. ಅದರ ಎದುರು ಇಬ್ಬರು ಭದ್ರತಾಪಡೆ ಯೋಧರು ಕಾವಲು ನಿಂತಿದ್ದರು. ಇಬ್ಬರೂ ಗುಲ್ ಶನ್ ಬುಕ್ಸ್ ಅಂಗಡಿಯ ಒಳಹೊಕ್ಕೆವು. ಕೈಯಲ್ಲಿ ಅರ್ಧ ಡಜನ್ ಪುಸ್ತಕ ಹಿಡಿದು ಹೊರಬಂದಾಗ, ಸಂಜೆ 5 ಗಂಟೆಯಾಗಿತ್ತು. ಮಾರೂಷಾಳನ್ನು ಮನೆಗೆ ವಾಪಸು ಬಿಡಲು ಅವಳ ಮನೆಯಿರುವ ಹಜ್ರತ್ ಬಾಲ್ ಸಮೀಪದ ಸೌರಾದತ್ತ ಕಾರು ತಿರುಗಿಸಿದೆ. ದಲ್ ಸರೋವರದ ಬೌಲೆವರ್ಡ್ ಖಾಲಿ, ಖಾಲಿಯಾಗಿತ್ತು. ಶ್ರೀನಗರದ ಬಹುಪಾಲು ಜನ ಈಗಾಗಲೇ ಮನೆ ಸೇರಿದ್ದರು. ಉಳಿದ ಕೆಲವರು ನಮ್ಮಂತೆ ಮನೆ ದಾರಿ ಹಿಡಿದಿದ್ದರು.