ಸಂದೀಪನಾಯಕರು ತಮ್ಮ ಈ ಮೊದಲ ಕಥಾಸಂಕಲನಕ್ಕಾಗಿ ಛಂದ ಪುಸ್ತಕ ಬಹುಮಾನ ಪಡೆದಿದ್ದಾರೆ. ಬದುಕಿನ ನಿಯಾಮಕತೆಗೆ ಒಳಗಾಗಿಯೂ, ಅದರ ವ್ಯಾಕರಣವಿಲ್ಲದ ಸಂಬಂಧಗಳ ಪಾರಮ್ಯವನ್ನು ಅತ್ಯಂತ ನಿರುದ್ವಿಗ್ನವಾಗಿ ನೋಡುವುದು ಈ ಕಥೆಗಳ ಮುಖ್ಯ ಗುಣ. ಕಥಾನಕವು ಸಹಜವಾಗಿ ಅಪೇಕ್ಷಿಸುವ ತಿರುವುಗಳತ್ತ ಗಮನವಿಡದೆ, ಅಚ್ಚರಿಗಳನ್ನು ಅಲಕ್ಷಿಸಿ, ಭಾಷೆಯ ಬೆಡಗಿಗೆ ಮನಸೋಲದೆ ಕಥನಕ್ರಿಯೆಯ ಸ್ವಾಭಾವಿಕತೆಗೆ ಒಪ್ಪಿಸಿಕೊಂಡಂತಿರುವ ಈ ಕಥೆಗಳು ಆ ಕಾರಣದಿಂದಾಗಿಯೇ ಗಮನ ಸೆಳೆಯುತ್ತವೆ. ಸೀಮಿತ ವ್ಯಾಪ್ತಿಯ ಪಾತ್ರಗಳ ಪುಟ್ಟ ಪುಟ್ಟ ಸೂಕ್ಷ್ಮಗಳನ್ನೂ ಕಥೆಗಳಲ್ಲಿ ಕಾಪಾಡಿಕೊಳ್ಳುವ ರೀತಿ ಇಷ್ಟವಾಗುತ್ತದೆ. ಇದಕ್ಕಾಗಿ ಸಂದೀಪ ಹುಡುಕಿಕೊಂಡಿರುವುದು 'ಗೋಡೆಗೆ ಬರೆದ ನವಿಲಿನ ರೂಪಕವನ್ನು'. ಭಾಷೆಯಿಲ್ಲದ, ಕನಸಿಲ್ಲದ, ಜೀವವಿಲ್ಲದ ಚಿತ್ರವೂ ಕಟ್ಟಿಕೊಡುವ ಭಾಷೆ, ಕನಸು, ಜೀವಿತದ ಉತ್ಕಟತೆಯ ಸೆಲೆಯನ್ನು ಅವರು ಪಾತ್ರಗಳಲ್ಲಿ ಹುಡುಕುತ್ತಾರೆ.
ಬದುಕನ್ನು ಕಟ್ಟಿಕೊಳ್ಳುವ ಕಾಯಕಕ್ಕೆ ಒಗ್ಗಿಕೊಂಡಂತಿರುವ ಇಲ್ಲಿಯ ಪಾತ್ರಗಳು ಕಾಯುವಿಕೆಯ ಸ್ವರೂಪ ಮತ್ತು ಹುಡುಕಾಟದ ತೀವ್ರತೆಯಲ್ಲಿ ದಣಿಯುತ್ತವೆ. ಹೂಮಾರುವ ಹೆಣ್ಣು, ಮನೆಕೆಲಸದ ಹುಡುಗಿ, ಅಂಗಡಿಗಳಲ್ಲಿ ದಿನಗೂಲಿಮಾಡುವವರು, ಮತ್ತೊಬ್ಬರ ಮನೆಯನ್ನು ಕಾಯುವವರು ಇಂಥ ಚಿಕ್ಕ ಜೀವಗಳ ಹುಡುಕಾಟಗಳು ಇಲ್ಲಿ ತುಂಬಿಕೊಂಡಿವೆ. 'ಆನೆ ಸಾಕಿದ ಮನೆಗೆ ಎರಡು ಹೂದಂಡೆ' ಎಂಬ ಕಥೆ ಇದರ ಸಮರ್ಥ ಅಭಿವ್ಯಕ್ತಿಯಾಗಿದೆ. ಯಾವುದೋ ಕಾಲದಲ್ಲಿ ಆನೆ ಸಾಕಿದ್ದರ ನೆನಪಿನ ಕೋಟೆಯಲ್ಲೇ ಭ್ರಮಿತರಂತೆ ಬಾಳುವ ಅಮ್ಮನವರ ಮನೆಗೆ ಪ್ರತಿದಿನವೂ ಹೂದಂಡೆ ಕಟ್ಟಿ ಮಾರುವ ನಾಗವೇಣಿಯ ಮೂಲಕ ಕಥೆ ಸಾಗುತ್ತದೆ. ಮಗಳ ಮದುವೆಗಾಗಿ ಅವರು ನೀಡಬೇಕಿರುವ ಬಾಕಿ ಹಣಕ್ಕಿಂತಲೂ ಔದಾರ್ಯದ ನಡೆಯೊಂದನ್ನು ದಿನವೂ ನಿರೀಕ್ಷಿಸುವ ನಾಗವೇಣಿಗೆ ಆ ಮನೆಯ ಶಿಥಿಲತೆಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗೆ ನೋಡಿದರೆ ಯಾವ ಅತೃಪ್ತಿಯೂ ಇಲ್ಲಿ ಮುಖಾಮುಖಿಯಾಗುವುದಿಲ್ಲ. ಕಟ್ಟಿಕೊಳ್ಳುವುದನ್ನು ಮರೆಯುವ ಚರಿತ್ರೆ ಕಟ್ಟಿಕೊಳ್ಳಲೇಬೇಕಾದ ವರ್ತಮಾನದ ಜೀವಂತಿಕೆಗಳೆರಡೂ ದಿನವೂ ಕಟ್ಟಲ್ಪಡುವ ಮತ್ತು ಬಾಡುವ ಹೂದಂಡೆಯಲ್ಲಿ ಐಕ್ಯವಾಗುತ್ತವೆ. ಕಲಾತ್ಮಕತೆಯ ದೃಷ್ಟಿಯಿಂದಲೂ ಇದೊಂದು ಮುಖ್ಯ ಕಥೆ.
ಆಸ್ಪತ್ರೆಯಲ್ಲಿ ಮಲಗಿರುವ ಮೋನಪ್ಪ ತನ್ನನ್ನು ನೋಡಲು ತನ್ನ ಚಿಕ್ಕವ್ವಿಯ ಮಗ ದಯಾನಂದ ಬರುವನೇನೋ ಎಂದು ಕಾಯುವುದರಿಂದ ಶುರುವಾಗುವ ' ಕರೆ' ಅದೇ ಕಾಯುವಿಕೆಯಲ್ಲಿಯೇ ಮುಗಿಯುತ್ತದೆ. ಇಪ್ಪತ್ತು ವರ್ಷಗಳ ನಂತರ ಸಿಗುವ ವೆಂಕಟಣ್ಣ 'ಮರೆತುಹೋದ ಒಂದು ಸಂಬಂಧ' ಎಂಬ ಕಥೆಯಲ್ಲಿ ಮಗಳನ್ನು ದೂಡಿಹೋದ ಅಳಿಯನ ಹುಡುಕಾಟದಲ್ಲಿ ಸವೆಯುತ್ತಿರುತ್ತಾನೆ. ಇಷ್ಟು ವರ್ಷಗಳ ನಂತರ ಸಿಕ್ಕ ತನ್ನ ದೂರದ ಸಂಬಂಧಿಯ ಕೈಗಳಲ್ಲಿ ಕೈಯನ್ನಿಟ್ಟು ಕಾಯುವ ಕನಸಲ್ಲಿ ನಿಲ್ಲುತ್ತಾನೆ. ಓಡಿಹೋಗಿದ್ದ ಅಕ್ಕನನ್ನು ಮತ್ತೆ ನೋಡಲು ಕಾಯುವ ಮನೆಗೆಲಸದ ದೇವಿ 'ಒಂಬತ್ತು ಎಂಟು ಎಂಟು' ಎಂಬ ಕಥೆಯಲ್ಲಿ ಕಳೆದುಹೋದ ದೂರವಾಣಿ ಸಂಖ್ಯೆಯಲ್ಲಿಯೇ ಮತ್ತೆ ಮತ್ತೆ ಡಯಲ್ ಮಾಡುವಲ್ಲಿಗೆ ಕಥೆ ಮುಗಿಯುತ್ತದೆ. ಅಂಗಡಿಯಲ್ಲಿ ಹೆಣ್ಣು ಬೊಂಬೆಗಳಿಗೆ ದಿನವೂ ಸೀರೆಯುಡಿಸುವ ಶರಣ್ ಪಾರುಮನೆಯಲ್ಲಿ ತನ್ನ ಕನಸಿನ ಬಟ್ಟೆ ಹೊದೆಸಿಕೊಳ್ಳುವ ಬೆಚ್ಚನೆಯ ಕನಸಿನ ಟೆಲಿಫೋನ್ ಬೂತ್‌ನ ಮಾನಸಿ ಬದುಕಿನ ವಾಸ್ತವತೆಯಲ್ಲಿ ನಗ್ನಳಾಗಿ ಕೂಸೊಂದಕ್ಕೆ ಆಕಾರ ಕೊಡತೊಡಗುತ್ತಾಳೆ. ಬಿಟ್ಟುಹೋದ ಗಂಡನ ಎರಡನೆಯ ಹೆಂಡತಿಯ ಮಕ್ಕಳಿಗೆ ತನ್ನ ಗಂಡನ ನಿವೃತ್ತಿವೇತನ, ವಿಮೆಯ ಹಣದ ಹಕ್ಕನ್ನು ಯಾವ ಷರತ್ತಿಲ್ಲದೇ ಬಿಟ್ಟುಕೊಡುವ ಭಾಗೀರಥಿ 'ಸಹಿ' ಎಂಬ ಕಥೆಯಲ್ಲಿ ಹೇಳುವುದು 'ಕಾಗದಪತ್ರದ ಮೇಲೆ ಬರೆದುಕೊಟ್ಟ ಹಾಗೆಯೇ ಎಲ್ಲವೂ ಇರುವುದಿಲ್ಲ. ನಿನ್ನ ಅಪ್ಪನೂ ಹಾಗೇ ತಿಳಕೊಂಡಿದ್ದ. ನೀನಾದರೂ ಒಬ್ಬ ಆಗಾಗ್ಗೆ ಬಂದು ಹೋಗ್ತಿರು' ಎಂದು.
ಇಲ್ಲಿಯ ಕಥೆಗಳಲ್ಲಿ ಸಾಯಬಹುದಾದ ಪಾತ್ರಗಳು ಸಾಯುವುದಿಲ್ಲ. ಸಂಭವಿಸಬಹುದಾದ ಸಂಘರ್ಷ ಸಂಭವಿಸುವುದಿಲ್ಲ. ಅರಳಬಹುದಾಗಿದ್ದ ಪ್ರೀತಿ ದಟ್ಟವಾಗಿ ಅರಳುವುದಿಲ್ಲ. ಆದರೂ ಆ ಎಲ್ಲ ಸಂದರ್ಭಗಳೂ ತಮ್ಮ ಸೂಚನೆಗಳಲ್ಲಿಯೇ ಬದುಕನ್ನು ಉಳಿಸಿಕೊಳ್ಳುತ್ತವೆ. ಸಾಧ್ಯವಾದರೆ ನವಿಲಿಗಾಗಿ, ಸಾಧ್ಯವಾಗದಿದ್ದರೆ ನವಿಲಿನ ಚಿತ್ರದ ಆಕಾರಕ್ಕಾಗಿ ಹಂಬಲಿಸುತ್ತವೆ, ಹೆಣಗುತ್ತವೆ ಇಲ್ಲವೇ ನಿರ್ಭಾವುಕವಾಗಿ ಸಲ್ಲುತ್ತವೆ. ಇವು ಬದುಕನ್ನು ಕಟ್ಟಿಕೊಳ್ಳುವ ತಲ್ಲಣದಲ್ಲಿ ಇರುವಂತೆಯೇ ಅಲ್ಲಿ ಹೆಕ್ಕಿ ತೆಗೆದ ಸಾಲುಗಳಲ್ಲಿ ಸಂದೀಪ ನಾಯಕರು ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ 'ಸ್ಥಿತಿ' ಮುಖ್ಯವಲ್ಲ. ಸ್ಥಿತಿಯೊಂದರ ಸುತ್ತಿನ ಸನ್ನಿವೇಶ ಬಾಳುವುದು ಮುಖ್ಯ. ಸನ್ನಿವೇಶದ ಇಂಥ ಪ್ರತಿಕ್ರಿಯೆಗಳನ್ನು ಉತ್ತರ ಕನ್ನಡದ ಪ್ರಾದೇಶಿಕ ಸೊಗಡಲ್ಲಿ ನಿರೂಪಿಸಲಾಗಿದೆ. ಕಥೆ ಮತ್ತು ಕಥನ ಕ್ರಿಯೆಗಳ ಮುಂದೆ ನಿರ್ಲಿಪ್ತರಂತೆ ಕಾಣುವ ಸಂದೀಪ ನಾಯಕರು ಎಲ್ಲವನ್ನೂ ಹೇಳದಿರುವ ತಮ್ಮ ಗಟ್ಟಿ ನಿರ್ಧಾರದಲ್ಲಿ ಒಮ್ಮೊಮ್ಮೆ ಪ್ರಬಂಧಕ್ಕೆ ಬಾಗಿದಂತೆ ತೋರುತ್ತದೆ. ಕಥೆಯಾಗದಿರುವ ಸನ್ನಿವೇಶಗಳೂ ಅಲ್ಲಲ್ಲಿ ಇವೆ. ಇದು ಅವರ ಮೊದಲ ಸಂಕಲನ. ಉತ್ತರ ಕನ್ನಡದ ಆಧುನಿಕ, ಶಕ್ತ ಕಥಾಪರಂಪರೆಯ ಮೂರನೆಯ ತಲೆಮಾರಿನ ಅವರು ಅದನ್ನು ಮುಂದುವರಿಸುವ ಭರವಸೆ ತೋರಿರುವುದು ಈ ಸಂಕಲನದ ಹೆಗ್ಗಳಿಕೆ.
ಗೋಡೆಗೆ ಬರೆದ ನವಿಲು (ಕಥಾ ಸಂಕಲನ)
ಲೇ: ಸಂದೀಪನಾಯಕ
ಪ್ರ: ಛಂದ ಪುಸ್ತಕ,ಬೆಂಗಳೂರು, ಪು: ೧೨೮, ಬೆಲೆ: ರೂ. ೬೦