ಮಂಗಳೂರು ಮೂಲದ ರಾಮ್ ಗಣೇಶ್ ಭಟ್ ಅವರು ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮೂವತ್ತೆರಡು ವರ್ಷ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಇತ್ತೀಚೆಗೆ ಸೈಕಲ್ ಸವಾರಿಯ ಹುಚ್ಚು ಹತ್ತಿಸಿಕೊಂಡು ತಮ್ಮ ಪ್ರೀತಿಯ ಗೇರು ಸೈಕಲ್ಲನ್ನೇರಿ ತಾವು ನಿವೃತ್ತಿ ಹೊಂದುವ ಹೊತ್ತಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರದ ಖಾಮಗಾ೦ವ್ ಎಂಬಲ್ಲಿಗೆ ಹೋಗಿ ತಮ್ಮ ಹಳೆಯ ಗೆಳೆಯರನ್ನು ನೋಡಿ ಬಂದಿದ್ದಾರೆ, ರಾಮ್ ಗಣೇಶ್ ಭಟ್ ಅವರ ಸುಮಾರು ಸಾವಿರದ ಎಂಟು ನೂರು ಕಿಲೋಮೀಟರ್ ದೂರದ ಈ ಸೈಕಲ್ ಸವಾರಿಯ ಕತೆ ಇನ್ನು ಕೆಲವು ಕಂತುಗಳಲ್ಲಿ ಕೆಂಡಸಂಪಿಗೆಯಲ್ಲಿ ಮೂಡಿಬರಲಿದೆ. ಚೇತೋಹಾರಿಯಾಗಿರುವ ಈ ಬರಹ ಓದುವವರಲ್ಲಿ ಹೊಸ ಉತ್ಸಾಹವನ್ನೂ, ಹೊಸ ಹೊಸ ಸಾಹಸಗಳ ಕನಸುಗಳನ್ನೂ ಮೂಡಿಸಲಿ ಎಂಬುದು ನಮ್ಮ ಆಶಯ.
ರೊಯಲ್ ಎನ್ಫೀಲ್ಡ್ ಬುಲೆಟ್ ಮೋಟಾರ್ ಬೈಕ್ ನಲ್ಲಿ ಅತಿ ದೂರ ಪಯಣಿಸಬೇಕೆಂದು ಮೊದಲಿಂದಲೂ ನನಗೊಂದು ಕನಸಿತ್ತು. ಆದರೆ ಕೆಲಸದ ಒತ್ತಡದಿಂದ ಅದು ನನಸಾಗಲಿಲ್ಲ. ೨೦೦೯ರ ಮಧ್ಯದಲ್ಲಿ ಕೆಲಸದಿಂದ ನಿವೃತ್ತಿ ಪಡೆದ ನಂತರ ನನ್ನ ಕನಸನ್ನು ನನಸು ಮಾಡಲು ನಿರ್ಧರಿಸಿದೆ. ಆದರೆ ನನ್ನ ಹೆ೦ಡತಿ ಮಾತ್ರ, ನಾನು ನನ್ನ ೫೮ನೆ ಪ್ರಾಯದಲ್ಲಿ ಬುಲೆಟ್ ಮೋಟಾರ್ ಬೈಕ್ ಖರೀದಿಸಿ ಅದನ್ನು ಓಡಿಸುವ ನನ್ನ ಆಸೆಗೆ ಒತ್ತಾಸೆಯಾಗಿ ನಿಲ್ಲಲಿಲ್ಲ. ಏತನ್ಮಧ್ಯೆ ಎಪ್ರಿಲ್ ೨೦೦೯ರಲ್ಲಿ ನನ್ನ ಅಳಿಯ ದೀಪಕ್ ೩ ದಿನ ಚೆನ್ನೈಗೆ ಹೋಗುವುದಿತ್ತು. ಆತ ತನ್ನ ಹೀರೊ ಹಾಕ್ ಸೈಕಲನ್ನು ನನ್ನ ಬಳಿ ಬಿಟ್ಟುಹೋಗಿದ್ದ. ನಾನು ಚಿಕ್ಕವನಿದ್ದಾಗ, ಶಾಲೆಗೆ ರಜೆ ಇರುವ ಸಮಯದಲ್ಲಿ ಸೈಕಲ್ ಸವಾರಿ ಮಾಡಿದ್ದರೂ, ಅದರ ಬಗ್ಗೆ ಅಂತಹ ವಿಶೇಷ ಆಸಕ್ತಿ ಬರಲಿಲ್ಲ. ಆದರೆ ಗೇರಿರುವ ಹೀರೊ ಹಾಕ್ ಸೈಕಲನ್ನು ೩ ದಿನ ಓಡಿಸಿದಾಗ ಒ೦ದು ವಿಶೇಷವಾದ ಸಂತೋಷವಾಯಿತು, ವಿಶಿಷ್ಟ ಅನುಭವವಾಯಿತು. ನಾನು ಸೈಕಲ್ ಓಡಿಸಿದ್ದನ್ನು ನೋಡಿದ ನನ್ನ ಹೆ೦ಡತಿ ಹೇಳಿದಳು, ``ನೀವು ಮೋಟಾರ್ ಬೈಕಿನ ಬದಲು ಸೈಕಲ್ ಯಾಕೆ ಖರೀದಿ ಮಾಡಬಾರದು? ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಅಲ್ದೆ ಹಾಲು, ತರಕಾರಿ, ಹಣ್ಣು ತರ್ಲಿಕ್ಕು ಸುಲಭ ಆಗ್ತದೆ.''
ನನ್ನ ಹೆ೦ಡತಿಯ ಮಾತು/ಸಲಹೆ ನನ್ನ ತಲೆಯಲ್ಲಿ ತಿರುಗಲು ಶುರುವಾಯಿತು. ಅವಳ ಮಾತಿನ ಮೇಲೆ ದೀರ್ಘಾಲೋಚನೆ ಮಾಡಿದೆ. ಮೋಟಾರ್ ಬೈಕ್ ಬದಲು ಸೈಕಲ್ ಖರೀದಿಸುವುದೆ ಉತ್ತಮ ಎಂದೆನಿಸಿತು. ಇದರಿಂದ ಪರಿಸರಕ್ಕೂ ಒಳ್ಳೆಯದು, ಅಲ್ಲದೆ ಪೆಟ್ರೋಲ್ ಉರಿಸುವ ಬದಲು ದೇಹದ ಕೊಬ್ಬನ್ನು ಉರಿಸಿದರಾಯಿತು ಎಂದೆನಿಸಿತು. ಈ ಬಗ್ಗೆ ಅಂತರ್ಜಾಲದಲ್ಲಿ ಹಗಲು-ರಾತ್ರಿ ಜಾಲಾಡಿಸಿ, ದೀರ್ಘ ಅಭ್ಯಸಿಸಿ ನಂತರ, ಗೇರಿನ ರೋಡ್ ಸೈಕಲ್ ಖರೀದಿಸಲು ತೀರ್ಮಾನಿಸಿದೆ. ಅದರ೦ತೆ ಜೂನ್ ೨೦೦೯ರಲ್ಲಿ ಮು೦ಭಾಗದಲ್ಲಿ ೨ ಮತ್ತು ಹಿ೦ಭಾಗದಲ್ಲಿ ೭ ಗೇರಿರುವ ರೇಸರ್ ಸೈಕಲನ್ನು ಖರೀದಿಸಿದೆ.
ನನ್ನ ಹೊಸ ಸೈಕಲ್ ನನ್ನ ಹೊಸ ಸಂಗಾತಿ ಆಯಿತು. ನಾನು ಒಬ್ಬನೇ ಇದ್ದಾಗ ಬೆಂಗಳೂರಿನಲ್ಲಿ ಪ್ರಯಾಣಿಸಲು ಕಾರಿಗಿಂತ ಸೈಕಲ್ ಉತ್ತಮ ವಾಹನ ಎನಿಸಿತು. ನನ್ನ ಹೊಸ ಸ೦ಗಾತಿಯೊಡನೆ ನಿಕಟ ಸಂಬಂಧ ಬೆಳೆಸಿಕೊ೦ಡೆ. ಪದೇ ಪದೇ ಪೇಟೆಗೆ, ಬ್ಯಾಂಕಿಗೆ ಮತ್ತು ಬೆಂಗಳೂರಿನಲ್ಲಿ ಎಲ್ಲ ಕಡೆಗೆ ಅದರಿಂದಲೇ ಹೋಗಲು ಶುರು ಮಾಡಿದೆ.
ಮನಸ್ಸಿನಾಳದಲ್ಲೇ ಬೆಂಗಳೂರಿನಿಂದ ೧೨೦೦ ಕಿಲೋಮೀಟರ್ ದೂರದಲ್ಲಿ ಮಹಾರಾಷ್ಟ್ರದಲ್ಲಿರುವ ಶೆಗಾ೦ವ್-ಖಾಮಗಾ೦ವ್ ಎನ್ನುವ ಜಾಗಕ್ಕೆ (ನಾನು ನಿವೃತ್ತಿ ಆಗುವ ಮೊದಲು ಇದ್ದ ಜಾಗ) ಅಲ್ಲಿ೦ದ ಮು೦ದೆ ನಾಸಿಕ್-ಮುಂಬೈಗೆ (೬೦೦ ಕಿ.ಮಿ.) ಹೋಗುವ ಬಯಕೆ ಮೂಡಿತು. ಖಾಮಗಾ೦ವ್ ನಲ್ಲಿ ನನ್ನ ಜೊತೆ ಕೆಲಸ ಮಾಡಿದ ನನ್ನ ಮಿತ್ರರನ್ನು ಬೇರೆಯೇ ರೀತಿಯಲ್ಲಿ ಸೈಕಲ್ ನಲ್ಲಿ ಹೋಗಿ ಭೇಟಿ ಆಗುವ ಎಂಬ ವಿಚಾರ ಬಂದಿತು. ಶೆಗಾ೦ವ್, ಖಾಮಗಾ೦ವ್ ನಿ೦ದ ೨೦ ಕಿ.ಮಿ. ದೂರದಲ್ಲಿದ್ದು ಅಲ್ಲಿ ಗಜಾನನ ಮಹಾರಾಜರ ಆಶ್ರಮವಿದೆ. ಈ ಆಶ್ರಮಕ್ಕೆ ಪ್ರತಿದಿನ ಸಾವಿರಾರು ಯಾತ್ರಿಗಳು ದೇಶದ ನಾನಾ ಭಾಗಗಳಿ೦ದ ದರ್ಶನಕ್ಕಾಗಿ ಬರುತ್ತಾರೆ. ಆಶ್ರಮದಿ೦ದ ಸುಮಾರು ೫ ಕಿ.ಮಿ. ದೂರದಲ್ಲಿ ಆನ೦ದಸಾಗರ ಎ೦ಬ ಉಪವನವಿದೆ. ಆಶ್ರಮದ ಟ್ರಸ್ಟಿನವರೇ ಈ ಉಪವನದ ಆಡಳಿತವನ್ನು ಅತ್ಯ೦ತ ಶಿಸ್ತಿನಿ೦ದ, ದಕ್ಷತೆಯಿಂದ ನೋಡಿಕೊಳ್ಳುತ್ತಾರೆ. ಈ ಉಪವನವು ಅತ್ಯ೦ತ ವಿಶಾಲ ಹಾಗೂ ಸು೦ದರವಾಗಿದ್ದು ಮಕ್ಕಳಿಗಲ್ಲದೆ ದೊಡ್ಡವರಿಗೂ ಅನೇಕ ರೀತಿಯ ಆಟಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸ೦ಜೆ ನಡೆಸುವ ಸ೦ಗೀತ-ಕಾರ೦ಜಿ ಪ್ರೇಕ್ಷಣೀಯ ಸ್ಥಳವಾಗಿದೆ. ಇದಲ್ಲದೆ ಯಾತ್ರಿಗಳಿಗಾಗಿ ಅಲ್ಲೊಂದು ಧ್ಯಾನ ಕೇ೦ದ್ರವೂ ಇದೆ. ಒಟ್ಟಿನಲ್ಲಿ ಪ್ರತಿಯೊಬ್ಬರೂ ಒಮ್ಮೆಯಾದರೂ ಆನ೦ದಸಾಗರಕ್ಕೆ ಭೇಟಿ ನೀಡಲೇಬೇಕಾದ ಸ್ಥಳ ಎ೦ದು ಹೇಳಿದರೆ ಅತಿಶಯೋಕ್ತಿಯಲ್ಲ.
ಡಿಸೆಂಬರ್ ತಿ೦ಗಳು ಖಾಮಗಾ೦ವ್ ನಲ್ಲಿ ಉತ್ತಮ ಹವೆ ಇರುವ ಸಮಯ. ಕ್ಯಾಲೆಂಡರನ್ನು ನೋಡಿ ಡಿಸೆಂಬರ್ ೨೦೦೯ ರಲ್ಲಿ ನನ್ನ ಪ್ರಯಾಣಕ್ಕೆ ಹೊರಡುವ ದಿನ ನಿರ್ಧರಿಸಿದೆ. ಗೂಗಲ್ ಮ್ಯಾಪ್ ನೋಡಿ ಬೆಂಗಳೂರಿನಿಂದ ಖಾಮಗಾ೦ವ್ ಗೆ ಯಾವ ಮಾರ್ಗದಿಂದ ಹೋದರೆ ಉತ್ತಮ ಎಂಬುದನ್ನು ಕಂಡುಕೊಂಡೆ. ಬೆಂಗಳೂರ್-ಗುಲ್ಬರ್ಗ-ಲಾತುರ್ (ಮಹಾರಾಷ್ಟ್ರ) ಮಾರ್ಗ ಸರಿ ಎಂದು ಕಂಡಿತು. ಅಲ್ಲದೆ ಇವುಗಳ ನಡುವೆ ಬರುವ ಊರಿನ ಹೆಸರನ್ನು (ರಾತ್ರಿ ಮಲಗಲು ಸೌಕರ್ಯ ಇರುವ) ನನ್ನ ಡೈರಿಯಲ್ಲಿ ನೋ೦ದಾಯಿಸಿಕೊ೦ಡೆ. ಎಲ್ಲ ಮಾಹಿತಿ ಸಂಗ್ರಹಿಸಿದ ನಂತರ ಸವಿಸ್ತಾರವಾಗಿ ಪ್ರಯಾಣಿಸುವ ಪಟ್ಟಿಯನ್ನು ತಯಾರಿಸಿದೆ.
ದೂರದ ಸೈಕಲ್ ಪ್ರಯಾಣಕ್ಕೆ ನನ್ನ ಸಿದ್ಧತೆ ಶುರುವಾಯಿತು. ಪ್ರತಿ ಶನಿವಾರ ಹಾಗು ರವಿವಾರ ಬೆಂಗಳೂರಿನ ಆಸುಪಾಸಿನಲ್ಲಿ ದೂರದ ಸೈಕಲ್ ಸವಾರಿ ಶುರು ಮಾಡಿದೆ. ೨೦ ಕಿಲೋಮೀಟರ್ ನಿಂದ ಶುರು ಮಾಡಿದ ನನ್ನ ಸವಾರಿಯನ್ನು ೫೦-೬೦ ಕಿಲೋಮೀಟರ್ ವರೆಗೆ ಏರಿಸಿದೆ. ನಾನು ರೂಪಿಸಿಕೊಂಡ ದೂರದ ಸೈಕಲ್ ಪ್ರಯಾಣಕ್ಕೆ ಮಾನಸಿಕ ಸಂತುಲನ ಹಾಗು ದೈಹಿಕ ಸ್ಥಿರತೆಯ ಅಳವಡಿಕೆ ಅಗತ್ಯವಿತ್ತು.
Indian Cyclist.in ಎ೦ಬ ಅ೦ತರ್ಜಾಲ ಗು೦ಪಿಗೆ ನೋ೦ದಾಯಿಸಿಕೊ೦ಡು ಬೇರೆ ಬೇರೆ ಸದಸ್ಯರೊಡನೆ ಸೈಕಲ್ ನಲ್ಲಿ ದೂರ ಪ್ರಯಾಣ ಮಾಡುವ ವಿಷಯದ ಬಗ್ಗೆ ಚರ್ಚಿಸಿದೆ. ಇದು ಅತ್ಯ೦ತ ಉಪಯುಕ್ತವಾಗಿತ್ತು.
ನನ್ನ ಹೆ೦ಡತಿಯ ಜೊತೆ ಡಿಸೆ೦ಬರ್ ೨೦೦೯ ಕ್ಕೆ ಇಟ್ಟುಕೊ೦ಡ ನನ್ನ ದೂರದ ಸೈಕಲ್ ಪ್ರಯಾಣದ ಪ್ಲಾನನ್ನು ಹೇಳಲಿಲ್ಲ. ನನ್ನ ೫೮ನೆ ವಯಸ್ಸಿನಲ್ಲಿ ಅವಳ ಒಪ್ಪಿಗೆ ಇದಕ್ಕೆ ಸಿಗುವುದಿಲ್ಲ ಎಂದು ಖಂಡಿತವಾಗಿಯೂ ನನಗೆ ತಿಳಿದಿತ್ತು.
ಸೆಪ್ಟೆ೦ಬರ್-ಅಕ್ಟೋಬರ್ ೨೦೦೯ ರಲ್ಲಿ ನಾನು ಮ೦ಗಳೂರಿಗೆ ಹೋದಾಗ ಸೈಕಲ್ ಒಟ್ಟಿಗೆ ತೆಗೆದುಕೊ೦ಡು ಹೋಗಿದ್ದೆ. ಮ೦ಗಳೂರಿನಲ್ಲಿ ಇದ್ದ ೩ ವಾರ ಕಾಲದಲ್ಲಿ ಎಲ್ಲಾ ಕಡೆಗೆ ಸೈಕಲ್ ನಲ್ಲಿ ತಿರುಗಿದೆ. ಉಪ್ಪಳ, ಪುತ್ತೂರು ಮತ್ತು ಉಡುಪಿಯಲ್ಲಿರುವ ನನ್ನ ಸ೦ಬ೦ಧಿಕರ ಮನೆಗೆ ಸೈಕಲ್ ನಲ್ಲಿಯೆ ಪ್ರಯಾಣ ಮಾಡಿ ಬ೦ದೆ. 3/4th ಕಾಲಿನ ಪ್ಯಾಂಟು, ಸ್ಪೊರ್ಟ್ಸ್ ಶ್ಯೂಸ್, ಟಿ ಶರ್ಟು, ಕೈಗೆ ಗ್ಲೌಸ್, ತಲೆಗೆ ಸೈಕಲ್ ಹೆಲ್ಮೆಟ್, ಕಣ್ಣಿಗೆ ಗಾಗಲ್ ಇದು ನನ್ನ ಪೋಷಾಕಾಗಿತ್ತು. ಈ ಪೋಷಾಕಿನಲ್ಲಿ ನನ್ನನ್ನು ಮೊದಲನೆಯ ಸಲ ನೋಡಿದಾಗ ನನ್ನ ಸ೦ಬ೦ಧಿಕರಿಗೆ ನಾನು ಯಾರೆ೦ದು ಪರಿಚಯವಾಗಲಿಲ್ಲ. ಯಾರೋ ದಾರಿ ಕೇಳಲು ಬ೦ದಿರಬಹುದು ಎ೦ದೆನಿಸಿತು. ನಾನು ಹಾಕಿದ ಗಾಗಲ್
ತೆಗೆದಾಗಲೆ ನಾನು ಯಾರೆ೦ದು ಅವರಿಗೆ ತಿಳಿಯಿತು.
ದಿನಾ೦ಕ ೨೨.೧೧.೨೦೦೯ ಕ್ಕೆ ನಾನು ಮತ್ತು ನನ್ನ ಇನ್ನೊಬ್ಬ ಮಿತ್ರ ಕಾರ್ತಿಕ್ ಬೆಂಗಳೂರಿನಿಂದ ಮೈಸೂರಿಗೆ ೧೬೦ ಕಿಲೋಮೀಟರ್ ದೂರವನ್ನು ಒಂದೇ ದಿನದಲ್ಲಿ ಸೈಕಲ್ ನಲ್ಲಿ ಕ್ರಮಿಸಿದೆವು. ಮೈಸೂರ್ ಪ್ರಯಾಣ ಹಾಗೂ ಮ೦ಗಳೂರಿನಲ್ಲಿ ನಾನು ಮಾಡಿದ ಸೈಕಲ್ ಸವಾರಿ, ಇವುಗಳಿ೦ದ ಸಿಕ್ಕಿರುವ ಅನುಭವ ನಾನು ಡಿಸೆ೦ಬರ್ ೨೦೦೯ ಕ್ಕೆ ಇಟ್ಟುಕೊ೦ಡ ದೂರದ ಶೆಗಾ೦ವ್-ಖಾಮಗಾ೦ವ್, ನಾಸಿಕ್-ಮುಂಬೈ ಸೈಕಲ್ ಪ್ರಯಾಣಕ್ಕೆ ಧೈರ್ಯ ತುಂಬಲು ಪೂರಕವಾಗಿತ್ತು.
ಮೈಸೂರಿನಿಂದ ಬಂದ ನಂತರ ನಾನು ನನ್ನ ಹೆ೦ಡತಿಯ ಹತ್ತಿರ ಡಿಸೆಂಬರ್ ೨೦೦೯ ರಲ್ಲಿ ಒಟ್ಟು ೧೮೦೦ ಕಿ.ಮಿ. ದೂರ ಸೈಕಲ್ ನಲ್ಲಿ ಹೋಗುವ ಟೂರ್ ಪ್ಲಾನ್ ಹೇಳಿದೆ. ನನ್ನ ಟೂರ್ ಪ್ಲಾನ್ ಕೇಳಿ ಅವಳಿಗೆ ದಿಗ್ಬ್ರಮೆ ಹಾಗು ಆಘಾತವಾಯಿತು. ಮುಂದಿನ ಕೆಲವು ದಿನ ನನ್ನನ್ನು ಸೈಕಲ್ ಪ್ರಯಾಣದಿಂದ ದೂರವಿಡುವ ಎಲ್ಲ ಪ್ರಯತ್ನವನ್ನು ಮಾಡಿದಳು. ನನ್ನ ಕುಟು೦ಬದ ಎಲ್ಲಾ ಸದಸ್ಯರು: ನನ್ನ ಹೆ೦ಡತಿ, ಮಕ್ಕಳು ಅಲ್ಲದೆ ನನ್ನ ಅಳಿಯ ಸಹಿತ ನನ್ನ ದೂರದ ಸೈಕಲ್ ಪ್ರಯಾಣಕ್ಕೆ ವಿರುದ್ಧವಾದರು. ಸಹಜವಾಗಿ ಅವರಿಗೆ, ನನ್ನ ಸೈಕಲ್ ಪ್ರಯಾಣಕ್ಕಿ೦ತ ನನ್ನ ಸುರಕ್ಷತೆಯ ಬಗ್ಗೆ ಹೆಚ್ಹಿನ ಕಾಳಜಿಯಿತ್ತು. ಆದರೆ ನನ್ನ ನಿರ್ಧಾರ ಪ್ರಬಲವಾಗಿತ್ತು. ನಾನು ಅವರಿಗೆ ಆಶ್ವಾಸನೆ ಕೊಟ್ಟು ಹೇಳಿದೆ "ಚಿಂತೆ ಮಾಡ್ಬೇಡಿ. ಒಂದು ವೇಳೆ ದಾರಿಯಲ್ಲಿ ನನಗೆ ಒಂದು ಚೂರಾದ್ರೂ ಮೈಯಲ್ಲಿ ಅಶಕ್ತತೆ, ಇಲ್ಲ ಜ್ವರದ ಸೂಚನೆ ಬಂದ್ರೆ ನನ್ನ ಪ್ರಯಾಣ ಅಲ್ಲೇ ರದ್ದು ಮಾಡಿ ಸೈಕಲ್ಲನ್ನು ಬಸ್ಸಿನಲ್ಲಿ ಹಾಕ್ಕೊಂಡು ಬೆಂಗಳೂರಿಗೆ ವಾಪಸ್ ಬರ್ತೆನೆ".
ನನ್ನ ಸ್ಪಷ್ಟ ನಿರ್ಧಾರ ನೋಡಿದ ನಂತರ ಅವರೆಲ್ಲರೂ ಪ್ರಾಮಾಣಿಕವಾಗಿ ನನ್ನ ತಯಾರಿಗೆ ಸಹಾಯ ಮಾಡಲು ಶುರು ಮಾಡಿದರು. ಯಾವ ಯಾವ ಬಟ್ಟೆ ಕೊಂಡೊಯ್ಯಬೇಕು, ಏನೇನು ತಿನ್ನಬೇಕು-ಕುಡಿಯಬೇಕು, ಪ್ರತಿದಿನ ಎಷ್ಟು ಕಿ. ಮಿ. ಪೆಡಲ್ ಮಾಡಬೇಕು ಮತ್ತು ನನ್ನದು ರೇಸರ್ ಸೈಕಲ್ ಆಗಿದ್ದು ಅದಕ್ಕೆ ಹಿಂದೆ ಕ್ಯಾರಿಯರ್ ಇಲ್ಲದರಿಂದ ಬೆನ್ನಿಗೆ ಹಾಕುವ ಬ್ಯಾಗಿನ ಭಾರ ಎಷ್ಟು ಕಡಿಮೆ ಇರಬೇಕು ಇತ್ಯಾದಿ... ಇತ್ಯಾದಿ.
ರಾಮ್ ಗಣೇಶ್ ಭಟ್ಟರ ಗೇರು ಸೈಕಲ್ ಯಾನ- ೨
ಡಿಸೆಂಬರ್ ೮, ೨೦೦೯ ರ ಬೆಳಿಗ್ಗೆ ೬ ಗಂಟೆಗೆ ಬೆಂಗಳೂರಿನ ನನ್ನ ವೈಟ್ಫೀಲ್ಡ್ ಮನೆಯಿಂದ ನನ್ನ ಕುಟುಂಬದ ಸದಸ್ಯರ ಶುಭ ಹಾರೈಕೆಯಿಂದ ನನ್ನ ಸೈಕಲ್ ಪ್ರಯಾಣ ಶುರುವಾಯಿತು. ಆ ಸಮಯ ನನಗೆ ಸಂಭ್ರಮದ ಮತ್ತು ಕಾತರದ ಘಳಿಗೆಯಾಗಿತ್ತು. 3/4th ಕಾಲಿನ ಪ್ಯಾಂಟು, ಸ್ಪೊರ್ಟ್ಸ್ ಶ್ಶುಸ್, ಟಿ ಶರ್ಟು, ಕೈಗೆ ಗ್ಲೌಸ್, ತಲೆಗೆ ಸೈಕಲ್ ಹೆಲ್ಮೆಟ್, ಕಣ್ಣ್ಣಿಗೆ ಗಾಗಲ್, ಬೆನ್ನ ಹಿಂದೆ ೫ ಕಿಲೊ ಭಾರದ ಬ್ಯಾಗ್ ಇವು ನನ್ನ ಸಮವಸ್ತ್ರವಾಗಿದ್ದವು. ಮೇಲೆ ತಿಳಿಸಿದ೦ತೆ ನನ್ನ ಪರಿಚಯದವರೂ ನನ್ನನ್ನು ಈ ಪೋಷಾಕಿನಲ್ಲಿ ಮೊದಲನೆಯ ಸಲ ಗುರುತಿಸುವುದು ಕಷ್ವವಾಗಿತ್ತು.
ಮೊದಲು ನಾನು ೧೨೫ ಕಿ.ಮಿ. ಪ್ರತಿದಿನ ಪೆಡಲ್ ಮಾಡಿ ನಾಲ್ಕನೆಯ ದಿನ ಸ೦ಪೂರ್ಣ ವಿಶ್ರಾ೦ತಿ ತೆಗೆದುಕೊಳ್ಳಬೇಕೆ೦ದು ಯೋಜಿಸಿದ್ದೆ. ಆದರೆ ನ೦ತರ ಅದನ್ನು ಬದಲಾಯಿಸಿ ಪ್ರತಿದಿನ ಸರಾಸರಿ ೧೦೦ ಕಿ.ಮಿ. ಪೆಡಲ್ ಎಲ್ಲಾ ದಿನ ಮಾಡುವುದಾಗಿ ನಿರ್ಧರಿಸಿದೆ. ಅದೇ ರೀತಿ ಮೊದಲು ನಾನು ಹಿಂದುಪುರ್-ಅನಂತಪುರ್-ಗುಲ್ಬರ್ಗ-ಮಹಾರಾಷ್ಟ್ರ ಮಾರ್ಗದಿಂದ ಹೋಗಬೇಕೆಂದು ಎಣಿಸಿದ್ದೆ. ಈ ಮಾರ್ಗದಲ್ಲಿ ನಾನು ಬಹುತೇಕ ಆಂಧ್ರಪ್ರದೇಶ ಭಾಗದಿಂದ ಪೆಡ್ಲಿಂಗ್ ಮಾಡುವುದಾಗಿತ್ತು. ಆದರೆ ಡಿಸೆಂಬರ್ ೨೦೦೯ ರಲ್ಲಿ ಆಂಧ್ರದಲ್ಲಿ ತೆಲಂಗಾಣ ಬಿಸಿ ಸುದ್ದಿ ಆಗಿದ್ದರಿಂದ ನನ್ನ ಪ್ರಯಾಣದ ದಿಕ್ಕು ಬದಲಾಯಿಸಿದೆ. ತುಮಕೂರ್-ಚೆಳ್ಳಕೆರೆ -ಬಳ್ಳಾರಿ-ಗುಲ್ಬರ್ಗ ಮಾರ್ಗವಾಗಿ ಸೈಕಲ್ ಸವಾರಿ ತಿರುಗಿಸಿದೆ. ಈ ಮಾರ್ಗ ಆಂಧ್ರಪ್ರದೇಶ್ ಮಾರ್ಗಕ್ಕಿಂತ ೬೦ ಕಿ.ಮಿ. ದೂರ ಆದರೂ ಬಹುತೇಕ ಕರ್ನಾಟಕ ಮಾರ್ಗದಿಂದಲೇ ಪ್ರಯಾಣ; ಕೇವಲ ಬಳ್ಳಾರಿ ಹತ್ತಿರ ಒಬಳಾಪುರಂನಲ್ಲಿ ಸ್ವಲ್ಪ ಆಂಧ್ರ ಭಾಗ ಸಿಕ್ಕುವುದು.
ಮಾನಸಿಕ ಸಂತುಲನ ಹಾಗು ದೈಹಿಕ ಸ್ಥಿರತೆ
ಮೊದಲ ೩ ದಿನಗಳ ಸೈಕಲ್ ಪ್ರಯಾಣದಲ್ಲಿ ಮಾನಸಿಕ ಸಂತುಲನ ಹಾಗು ದೈಹಿಕ ಸ್ಥಿರತೆಯ ಗಡಿ ಪರೀಕ್ಷೆ ದಾಟುವುದು ಮುಖ್ಯ. ಮೊದಲನೆಯ ದಿನ (೮.೧೨.೦೯) ಬೆಂಗಳೂರಿನಿಂದ ಸುಮಾರು ೧೩೦ ಕಿ.ಮಿ. ಪೆಡಲ್ ಸ೦ಜೆ ೭ ಗ೦ಟೆಗೆ ಶಿರ್ ಊರು ತಲುಪಿದೆನು. ಹೈವೆದಲ್ಲಿಯೆ ಇರುವ ಕಾಮತ್ ಹೋಟೆಲ್ ನಲ್ಲಿ ರಾತ್ರಿ ಕಳೆಯಲು ರೂಮ್ ಕೇಳಿದಾಗ ಲಾಡ್ಜ್ ನ ವ್ಯವಸ್ಥೆ ಬ೦ದು ಮಾಡಿದ್ದಾ
ರೆ ಎ೦ದು ತಿಳಿಯಿತು. ಅಲ್ಲಿ೦ದ ಶಿರ್ ಊರಿನ ಒಳಗೆ ಹೋಗಿ ಲಾಡ್ಜ್ ನಲ್ಲಿ ಉಳಿದೆನು. ಶಿರ್ ಸಣ್ಣ ಊರಾದರೂ ನಾನು ತ೦ಗಿದ ಲಾಡ್ಜ್ ನ ಎದುರೇ ಮದುವೆಯ ಸಭಾಗೃಹದಲ್ಲಿ ಮುಸ್ಲಿಮ್ ಕುಟು೦ಬದ ಮದುವೆ ನಡೆಯುತ್ತಲಿತ್ತು. ಮದುವೆಯ ಸಡಗರದಲ್ಲಿ ರ೦ಗು-ರ೦ಗಿನ ಉಡುಪಿನಲ್ಲಿ ಜನರ ಓಡಾಟ ನಡಯುತ್ತಿದ್ದು ಸದ್ದು-ಗದ್ದಲವಿದ್ದರೂ, ೧೩೦ ಕಿ.ಮಿ. ಪೆಡಲ್ ಮಾಡಿ ಬ೦ದ ನಾನು ನನಗರಿವಿಲ್ಲದೆ ನಿದ್ರಾ ಲೋಕಕ್ಕೆ ಹೋದೆನು.
ಮರು ದಿನ (೯.೧೨.೦೯) ಬೆಳಿಗ್ಗೆ ೬ ಗ೦ಟೆಗೆ ಶಿರ್ ದಿ೦ದ ಹೊರಟೆ. ಶಿರ್-ಚಿತ್ರದುರ್ಗ ರಸ್ತೆ ಅತ್ಯುತ್ತಮವಾಗಿದೆ. ಚಿತ್ರದುರ್ಗಕ್ಕಿ೦ತ ೪೦ ಕಿ.ಮಿ. ಮೊದಲು ಚೆಳ್ಳಕೆರೆ-ಬಳ್ಳಾರಿ ಮಾರ್ಗ ಹಿಡಿದು ಹೋಗಬೇಕು. ಪೆಡಲ್ ಮಾಡುತ್ತ-ಮಾಡುತ್ತ ೯೦ ಕಿ.ಮಿ. ಸ೦ದಿಸಿ ಸ೦ಜೆಯ ೪ ಗ೦ಟೆಗೆ ಚೆಳ್ಳಕೆರೆ ಊರು ತಲುಪಿದೆ. ಚೆಳ್ಳಕೆರೆಯಿ೦ದ ಬಳ್ಳಾರಿ ಸುಮಾರು ೧೧೦ ಕಿ.ಮಿ. ದೂರವಿದೆ. ಬಳ್ಳಾರಿ-ಚೆಳ್ಳಕೆರೆ ನಡುವೆ ರಾತ್ರಿ ತ೦ಗಲು ಯೋಗ್ಯ ಸ್ಠಳ / ಊರಿಲ್ಲ. ಆದ್ದರಿ೦ದ ಚೆಳ್ಳಕೆರೆಯಲ್ಲಿ ಹೈವೆ ಬದಿಯಲ್ಲಿ ಇರುವ 'ಹೋಟೆಲ್ ಗ೦ಧರ್ವ'ದಲ್ಲಿ ರಾತ್ರಿ ತ೦ಗಿದೆ. 'ಹೋಟೆಲ್ ಗ೦ಧರ್ವ' ಹೊಸದಾಗಿ ೧೫ ದಿನಗಳ ಹಿ೦ದೆಯೆ ಉದ್ಘಾಟಿಸಲ್ಪಟ್ಟಿದ್ದರಿ೦ದ ಊಟ-ವಸತಿ ಚೆನ್ನಾಗಿತ್ತು.
ಮೂರನೆಯ ದಿನ (೧೦.೧೨.೦೯) ಪೆಡಲ್ ಮಾಡುವುದು ಅತ್ಯಂತ ದಣಿವಿನ ಕೆಲಸ. ಆದರೆ ಕಳೆದ ೬ ತಿಂಗಳಿನಿಂದ ಇಂತಹ ಪರಿಸ್ಥಿತಿಗೆ ನಾನು ಒಗ್ಗಿಕೊಂಡಿದ್ದರಿಂದ ಯಾವುದೆ ಆಡ್ಡಿ ಬಂದರೆ ಅದನ್ನು ಎದುರಿಸಬಲ್ಲೆ ಎಂಬ ಧೈರ್ಯ ಮನದಾಳದಲ್ಲಿ ಮೂಡಿತ್ತು. ಆ ಧೈರ್ಯದ ಮೇಲೆ ೧೧೦ ಕಿ.ಮಿ. ಪೆಡಲ್ ಮಾಡಿ ಸ೦ಜೆ ೬ ಗ೦ಟೆಗೆ ಬಳ್ಳಾರಿ ತಲುಪಿದೆ. ಬಳ್ಳಾರಿ ತಲುಪುವ ಕೊನೆಯ ಎರಡು ತಾಸು ಗಾಳಿ ನನ್ನ ವಿರುದ್ಧವಾಗಿ ಬೀಸುತ್ತಿದ್ದುದರಿ೦ದ ಪೆಡಲ್ ಮಾಡುವುದೂ ಅಷ್ಟೇ ಕಷ್ಟಕರವಾಗಿತ್ತು. ರಸ್ತೆಯೂ ಇಕ್ಕಟ್ಟಾಗಿ, ಸಾರಿಗೆ ನಿಯಮ ಪುಸ್ತಕಕ್ಕೆ ಸೀಮಿತವೋ ಎ೦ಬ೦ತೆ ಜನರು ಯದ್ವಾ-ತಿದ್ವಾ ವಾಹನಗಳನ್ನು ಬಿಡುವುದು ಕ೦ಡು ಬ೦ತು. ಅ೦ತೂ ಬಳ್ಳಾರಿ ತಲುಪಿದಾಗ ದೇಹಕ್ಕೆ ಅತ್ಯ೦ತ ದಣಿವಾದರೂ ಯಶಸ್ವಿಯಾಗಿ ಮುಟ್ಟಿದೆನೆ೦ಬ ಸ೦ತೋಷ ಮನಸ್ಸಿಗಾಯಿತು.
ಬಳ್ಳಾರಿಯ ನಂತರ ನಾನು ಹಿಂತಿರುಗಿ ನೋಡುವ ಪರಿಸ್ಥಿತಿ ಬರಲಿಲ್ಲ. ನನ್ನ ದೇಹ-ಮನಸ್ಸು ಎರಡೂ ಒಗ್ಗಿಕೊ೦ಡು ಮು೦ದಿನ ಪ್ರಯಾಣಕ್ಕೆ ಪಕ್ವವಾದವು. ನಾನು ಎಡೆಬಿಡದೆ ಪೆಡಲ್ ಮಾಡಲು ಶುರು ಮಾಡಿದ್ದು ಅಲ್ಲದೆ ಪ್ರತಿಯೊಂದು ಕ್ಷಣವನ್ನೂ ಆನಂದಿಸಲು ಶುರು ಮಾಡಿದೆ; ಬೆಳಗ್ಗಿನ ರಸ್ತೆಯ ಬದಿಯಲ್ಲಿ ಸಿಕ್ಕುವ ಟೀ ಸ್ಟಾಲಿನ ಬಿಸಿಯಾದ ಚಹದ ಸೇವನೆ, ಕೆಲವು ಕಡೆಗೆ ರಸ್ತೆಯ ಎರಡೂ ಭಾಗದಲ್ಲಿ ನಿಂತಿರುವ ಹಚ್ಚ ಹಸಿರಿನ ಗಿಡಗಳ ಮತ್ತು ಗದ್ದೆಯ ರಮ್ಯವಾದ ನೋಟ, ಮಧ್ಯಾಹ್ನ ಡಾಭಾದಲ್ಲಿ ಸಿಗುವ ಬಿಸಿ-ಬಿಸಿಯಾದ ಊಟ, ಕುತೂಹಲದಿಂದ ನನ್ನ ಸೈಕಲ್ ಮತ್ತು ನನ್ನ ಪೋಷಾಕನ್ನು ನೋಡುವ ಹಳ್ಳಿಯ ಮುಗ್ಧ ಜನರು ಮತ್ತು ಮಕ್ಕಳು, ಕೆಲವೆಡೆ ಘಟ್ಟ ಹತ್ತುವಾಗ ಎದುಸಿರು ಬಂದರೂ ಘಟ್ಟ ಇಳಿಯುವಾಗ ಸಿಕ್ಕುವ ಆನಂದ ಬೇರೆಯೆ ಇತ್ಯಾದಿ, ಇತ್ಯಾದಿ. ಪ್ರತಿ ದಿನ ಬೆಳಿಗ್ಗೆ ೬ ಗಂಟೆಗೆ ಪೆಡ್ಲಿ೦ಗ್ ಶುರು ಮಾಡಿ, ನಡು-ನಡುವೆ ಮರದ ಕೆಳಗೆ, ರಸ್ತೆಯ ಬದಿಯ ಕಟ್ಟೆಯ ಮೇಲೆ ವಿಶ್ರಾಂತಿ ತೆಗೆದುಕೊಳ್ಳುತ್ತಾ ಸಂಜೆ ೭ ಗಂಟೆಗೆ ಊರು ತಲುಪಿ ರಾತ್ರಿ ಲಾಡ್ಜ್ ನಲ್ಲಿ ನಿದ್ರಿಸುತ್ತಿದ್ದೆ. ದಿನಕ್ಕೆ ಸರಾಸರಿ ೧೦೦ ಕಿ.ಮಿ. ದೂರವನ್ನು ಸೈಕಲ್ ನಲ್ಲಿ ಕ್ರಮಿಸುತ್ತಿದ್ದೆ.

ಸೈಕಲ್ ನ ಸುರಕ್ಷಿತತೆ
ನನ್ನ ಸೈಕಲ್ ನ ಭಾರ ತು೦ಬಾ ಕಡಿಮೆ. ಸರಾಗವಾಗಿ ಒ೦ದೇ ಕೈಯಲ್ಲಿ ಎತ್ತಬಹುದು. ಅದಕ್ಕೆ ಬೀಗ ಹಾಕಿದರೂ ಹೆಸರಿಗೆ ಬೀಗ ಹಾಕಿದೆ ಎನ್ನಬಹುದು. ಅದಲ್ಲದೆ ಅದರ ಎರಡೂ ಚಕ್ರಗಳು Quick Release System (ಕೂಡಲೆ ಬಿಚ್ಹುವ೦ತಹ ಕ್ರಮ)ದಿ೦ದ ಕೂಡಿದ್ದರಿ೦ದ ಕೆಲವೇ ಸೆಕೆ೦ಡುಗಳಲ್ಲಿ ಚಕ್ರಗಳನ್ನು ಬಿಚ್ಹಬಹುದು. ಸೈಕಲ್ ನ ಭಾರವೂ ಕಡಿಮೆ ಇದ್ದುದರಿ೦ದ, ಅಲ್ಲಿ-ಇಲ್ಲಿ ಪಾರ್ಕ್ ಮಾಡಿ ಹೋದರೆ, ಸುಲಭದಲ್ಲಿ ಎತ್ತುಕೊ೦ಡು ಹೋಗಲು ಕಳ್ಳ-ಕಾಕರಿಗೆ ಅನುವು ಮಾಡಿಕೊಟ್ಟ೦ತೆ. ಅದನ್ನು ಲಾಡ್ಜ್ ನ ರೂಮಿನಲ್ಲಿ ಇಟ್ಟರೆ ಮಾತ್ರ ಅದು ಸುರಕ್ಷಿತ. ನಾನೂ ನಿಶ್ಚಿಂತೆಯಿ೦ದ ಮಲಗಬಹುದು. ಇದೇ ಉದ್ದೇಶದಿ೦ದ ಹೋಟೆಲ್ / ಲಾಡ್ಜ್ ನಲ್ಲಿ ರೂಮ್ ಮಾಡುವ ಮೊದಲು ಮೆನೇಜರಿಗೆ ಸೈಕಲ್ ನ್ನು ರೂಮಿನಲ್ಲಿ ಇಟ್ಟುಕೊಳ್ಳಲು ಅನುಮತಿ ಕೇಳುತ್ತಿದ್ದೆ. ಕೆಲವರು ಮೊದಲು ಒಪ್ಪದಿದ್ದರೂ, ನಾನು ಬೆ೦ಗಳೂರಿನಿ೦ದ ಸೈಕಲ್ ನಲ್ಲಿ ಪ್ರಯಾಣ ಮಾಡುತ್ತಿರುವುದು ಕೇಳಿದಾಗ ಮತ್ತು ನನ್ನ ಸೈಕಲ್ ಪ್ರತ್ಯಕ್ಷ ನೋಡಿದಾಗ ರೂಮಿನಲ್ಲಿ ನನ್ನ ಜೊತೆ ಅದನ್ನು ಇಟ್ಟುಕೊಳ್ಳಲು ಅನುಮತಿ ನೀಡುತ್ತಿದ್ದರು. ನಾನು ನಿಶ್ಚಿಂತೆಯಿ೦ದ ಮಲಗಲು ಮತ್ತು ನನ್ನ ದೂರದ ಪ್ರಯಾಣ ಯಶಸ್ವಿಯಾಗಿ ಮುಗಿಸಲು ಇದು ಅತ್ಯ೦ತ ಅವಶ್ಯವಾಗಿತ್ತು.
ನನ್ನ ದಿನ ನಿತ್ಯದ ಆಹಾರ
ನನ್ನ ದಿನ ನಿತ್ಯದ ಆಹಾರದ ಕ್ರಮ ಕಟ್ಟು-ನಿಟ್ಟಾಗಿ ಈ ಕೆಳಗಿನ೦ತ್ತಿತ್ತು:
- ೬-೭ ಲೀಟರ್ ಮಿನರಲ್ ವಾಟರ್
- ೧ ಲೀಟರ್ ಸ್ಲೈಸ್ (ಮ್ಯಾ೦ಗೊ ಡ್ರಿ೦ಕ್ಸ್)
- ೩ ಫೈವ್ ಸ್ಟಾರ್ ಚಾಕ್ಲೇಟು
- ೫-೬ ಗ್ಲುಕೋಸ್ ಬಿಸ್ಕೇಟ್
- ೩-೪ ಬಾಳೆಹಣ್ಣುಗಳು
- ೧ ಎಳನೀರು
- ೪-೫ ಬಾದಾಮಿ
- ಬೆಳಗ್ಗೆ ತಿ೦ಡಿ - ಚಹ, ಇಡ್ಲಿ-ಸಾ೦ಬಾರು ಕರ್ನಾಟಕದಲ್ಲಿ, ಪೋಹಾ (ಅವಲಕ್ಕಿ) ಮಹಾರಾಷ್ಟ್ರದಲ್ಲಿ
- ಸ೦ಜೆ ಚಹ
- ಊಟ - ರೊಟ್ಟಿ /ಚಪಾತಿ, ದಾಲ್, ತಾಜಾ ತರಕಾರಿ (ಇದ್ದರೆ) ಪದಾರ್ಥ, ಮೊಸರು
ರಾಮ್ ಗಣೇಶ್ ಭಟ್ಟರ ಸೈಕಲ್ ಯಾನ-೩ : ಮಸ್ಕಿ-ಶಹಾಪುರ್ ಇತ್ಯಾದಿ
ನಾಲ್ಕನೆಯ ದಿನ (೧೧.೧೨.೦೯) ಬಳ್ಳಾರಿಯಿ೦ದ ಬೆಳಿಗ್ಗೆ ೬ ಗ೦ಟೆಗೆ ಪೆಡಲ್ ಶುರು ಮಾಡಿದ ನಾನು ಸ೦ಜೆ ೭ ಗ೦ಟೆಗೆ ಸುಮಾರು ೧೩೦ ಕಿ.ಮಿ. ಸ೦ದಿಸಿ ಮಸ್ಕಿ ಊರು ತಲುಪಿದೆ. ನನಗೆ ತಿಳಿದ ಪ್ರಕಾರ ಮಸ್ಕಿಯಲ್ಲಿ ರಾತ್ರಿ ತ೦ಗಲು ಲಾಡ್ಜ್ ಗಳಿವೆಯೆ೦ದು. ಆದರೆ ಅಲ್ಲಿ ತಲುಪಿದ ನ೦ತರ ಅಲ್ಲಿ ಲಾಡ್ಜಿನ ವ್ಯವಸ್ಥೆ ಇಲ್ಲವೆ೦ದು ತಿಳಿಯಿತು. ಯಾರೊ ಹೇಳಿದರು, ಊರಿನ ೫ ಕಿ.ಮಿ. ಹಿ೦ದೆ ದೇವಸ್ಥಾನವಿದೆ ಅಲ್ಲಿ ರಾತ್ರಿ ಕಳೆಯಬಹುದೆ೦ದು. ನನ್ನ ಹತ್ತಿರ ೩ ಸೆಟ್ ಬಟ್ಟೆ ಇತ್ತು. ಪ್ರತಿ ದಿನ ಲಾಡ್ಜ್ ತಲುಪಿದ ನ೦ತರ ದಿನವಿಡೀ ಹಾಕಿದ ಬಟ್ಟೆಗಳನ್ನು ತೊಳೆದು ಫ್ಯಾನ್ ಜೋರಾಗಿ ಹಾಕಿ ಬಟ್ಟೆಯನ್ನು ಅದರಡಿಗೆ ಹಾಕಿದಾಗ ಬೆಳಿಗ್ಗೆಯ ಒಳಗೆ ಬಟ್ಟೆಯೆಲ್ಲ ಒಣಗುತ್ತಿದ್ದವು. ದೇವಸ್ಥಾನದಲ್ಲಿ ಈ ಸೌಕರ್ಯ ಅಪೇಕ್ಷಿಸುವಹಾಗಿಲ್ಲ. ಮಸ್ಕಿಯಿ೦ದ ಮು೦ದಿನ ಊರು ಲಿ೦ಗಸುಗುರ ೩೦ ಕಿ.ಮಿ. ದೂರದಲ್ಲಿದೆ. ಲಿ೦ಗಸುಗುರಿನಲ್ಲಿ ಲಾಡ್ಜ್ ನ ವ್ಯವಸ್ಥೆ ಇದೆಯೆ೦ದು ತಿಳಿಯಿತು. ಕತ್ತಲಾಗಿದ್ದರೂ ಇನ್ನು ಬೇರೆ ದಾರಿ ಇಲ್ಲದೆ ಲಿ೦ಗಸುಗುರಿಗೆ ಪೆಡ್ಲಿ೦ಗ್ ಮಾಡಿ ಹೊರಡಬೇಕು ಎನ್ನುವಾಗ ಯಾರೋ ಹೆಳಿದರು "ಮಸ್ಕಿಯಲ್ಲಿಯೆ ಹೊಸ ಲಾಡ್ಜ್ ತಯಾರಾಗ್ತಾ ಇದೆ. ಲಾಡ್ಜ್ ನ ಮಾಲೀಕರ ಹತ್ತಿರ ಕೇಳಿ ನೋಡಿ. ಲಾಡ್ಜ್ ನ ಮಾಲೀಕರ ಹೆಸರು ಸ೦ಜೀವ ರೆಡ್ಡಿ ಎ೦ದು." ನಾನು ಹೋಗಿ ಅವರನ್ನು ಭೇಟಿಯಾದೆ. ನನ್ನ ಸುದೈವವೊ ಏನೊ? ನಾನು ಬೆ೦ಗಳೂರಿನಿ೦ದ ಸೈಕಲ್ ನಿ೦ದ ಬ೦ದ ವಿಷಯ ತಿಳಿದು ನನ್ನ ಮು೦ದಿನ ಪರಿಸ್ಥಿತಿ ಆರ್ಥವಾಗಿ ಆ ದಿನ ರಾತ್ರಿ ತ೦ಗಲು ನನಗೆ ರೂಮ್ ಕೊಟ್ಟರು. ಮಸ್ಕಿ ಸಣ್ಣ ಊರು. ಲಾಡ್ಜಿನ ಹತ್ತಿರ ಬಾರ್ ನ ಹೋಟೆಲ್ ಗಳು ಕ೦ಡಿತೆ ಹೊರತು ಸಾದಾ ಶಾಖಾಹಾರಿ ಊಟ ಸಿಗುವ ಹೋಟೆಲ್ ಕಾಣಲಿಲ್ಲ. ನನ್ನ ಪರಿಸ್ಥಿತಿ ಕ೦ಡ ಒಬ್ಬ ಹತ್ತಿರದಲ್ಲೆ ಇರುವ ಲಿ೦ಗಾಯತರ ಖಾನಾವಳಿ ತೋರಿಸಿದ. ಲಿ೦ಗಾಯತ ಕುಟು೦ಬದವರೊಬ್ಬರು ಅದನ್ನು ನಡೆಸುತ್ತಿದ್ದು ಶುದ್ದ ಶಾಖಾಹಾರಿ ಊಟ ನನಗೆ ಅಲ್ಲಿ ದೊರೆಯಿತು.
ದಿನಾ೦ಕ ೧೨.೧೨.೦೯ (ಐದನೆಯ ದಿನ) ಮಸ್ಕಿಯಿ೦ದ ಲಿ೦ಗಸುಗುರ ಮಾರ್ಗವಾಗಿ ಶಹಾಪುರ್ ಕ್ಕೆ ಹೊರಟೆ. ಲಿ೦ಗಸುಗುರ-ಶಹಾಪುರ್ ನಡುವೆ ದೇವಾಪುರ ಎ೦ಬ ಹಳ್ಳಿಯಿದೆ. ನಾನು ರಸ್ತೆಯ ಬದಿಯಲ್ಲಿ ಇರುವ ಅ೦ಗಡಿಯಲ್ಲಿ ಎಳನೀರು ಮತ್ತು ಮ್ಯಾ೦ಗೊ ಡ್ರಿ೦ಕ್ಸ್ ಕೊ೦ಡುಕೊ೦ಡೆ. ಅ೦ಗಡಿಯ ಮಾಲೀಕನ ಹೆಸರು ಹಿರೇಮಠ, ಅವನ ಮಗನ ಹೆಸರು ರವಿ ಕಿರಣ್ ಎ೦ದು. ನಾನು ಬೆ೦ಗಳೂರಿನಿ೦ದ ಸೈಕಲ್ ನಿ೦ದ ಬರುತ್ತಿರುವುದನ್ನು ಕೇಳಿ ನನ್ನಿ೦ದ ಹಣವನ್ನೆ ತೆಗೆದುಕೊಳ್ಳಲಿಲ್ಲ. "ನೀವು ವ್ಯಾಪಾರ ನಡೆಸುವವವರು, ಹಣ ತೆಗೆದುಕೊಳ್ಳಲೇಬೇಕು" ಎ೦ದು ನಾನು ಆಗ್ರಹ ಮಾಡಿದರೂ ಹಣ ತೆಗೆದುಕೊಳ್ಳಲಿಲ್ಲ. ಸವಿ ನೆನಪಿಗಾಗಿ ಅವರ ಫೋಟೋ ನನ್ನ ಕೆಮರಾದಲ್ಲಿ ಸೆರೆ ಹಿಡಿದು ಶಹಾಪುರ್ ಗೆ ನನ್ನ ಪ್ರಯಾಣ ಮು೦ದುವರೆಸಿದೆ.
ಹಿರೇಮಠ ಮತ್ತು ರವಿ ಕಿರಣ್ ಜೊತೆ 
ಮಸ್ಕಿಯಿ೦ದ ಬೆಳಿಗ್ಗೆ ಹೊರಟ ನಾನು ಸ೦ಜೆ ೬ ಗ೦ಟೆಗೆ ಸುಮಾರು ೯೦ ಕಿ.ಮಿ. ಪೆಡಲ್ ಮಾಡಿ ಶಹಾಪುರ್ ತಲುಪಿದೆ. ಶಹಾಪುರ್ ನಲ್ಲಿ ಇರುವ ಹೋಟೆಲ್ ಆಶ್ರಯ ಲಾಡ್ಜ್ ಮತ್ತು ಆಮ೦ತ್ರಣ ಉಪಹಾರ ಗೃಹ ಉಡುಪಿಯವರದ್ದು. ಊಟ-ವಸತಿ ಎರಡರ ವ್ಯವಸ್ಥೆಯೂ ಇಲ್ಲಿ ಚೆನ್ನಾಗಿದೆ. ನಾನು ಶಹಾಪುರ್ ತಲುಪಿ ಹೋಟೆಲ್ ನ ಹತ್ತಿರ ಸೈಕಲ್ ನಿಲ್ಲಿಸುತ್ತಿರುವಾಗ ಹತ್ತಿರದಲ್ಲೆ ನಿ೦ತ ೪-೫ ಜನ (ನೋಡಿದರೆ ರಾಜಕೀಯ ಜನರ೦ತೆ ಕ೦ಡರು) ನನ್ನ ಹತ್ತಿರ ಬ೦ದು. ಏನ್ರಿ ನಿಮ್ಮ ಹೆಸ್ರು? ಎಲ್ಲಿ೦ದ ಬ೦ದ್ರಿ? ಎಲ್ಲಿಗೆ ಹೋಗ್ತೀರಿ? ಇ೦ತಹ ಅನೇಕ ಪ್ರಶ್ನೆಗಳನ್ನು ಕೇಳಿದರು. ನಾನು ಭಯಪಡದೆ ಧೈರ್ಯವಾಗಿ-ಸಮಧಾನದಿ೦ದ ಅವರ ಪ್ರಶ್ನೆಗಳಿಗೆಲ್ಲ ಉತ್ತರಿಸಿದೆ. ನಾನು ಕನ್ನಡದವನೇ ಎ೦ದು ಅವರಿಗೆ ಗೊತ್ತಾದಾಗ, ಪ್ರಾದೇಶಿಕ ಪ್ರಭಾವವೋ ಏನೊ? ಕನ್ನಡದವನೊಬ್ಬ ಬೆ೦ಗಳೂರಿನಿ೦ದ ಸೈಕಲ್ ಪ್ರಯಾಣ ಮಾಡಿ ಬರುತ್ತಿರುವುದನ್ನು ಕೇಳಿ ನನ್ನ ಮು೦ದಿನ ಪ್ರಯಾಣಕ್ಕೆ ಶುಭ ಹಾರೈಕೆ ಕೋರಿದರು. ತ್ವರಿತವಾಗಿ ಅವರಿಗೆ ಧನ್ಯವಾದಗಳನ್ನು ಹೇಳಿ ನಾನು ಲಾಡ್ಜ್ ನೊಳಗೆ ಹೋದೆ.
ಆರನೆಯ ದಿನ (೧೩.೧೨.೦೯) ಬೆಳಿಗ್ಗೆ ಆಮ೦ತ್ರಣ ಹೋಟೆಲ್ ನಲ್ಲಿಯೆ ಚಹ ಕುಡಿದು ೬.೩೦ ಕ್ಕೆ ಶಹಾಪುರ್ ನಿ೦ದ ಪೆಡ್ಲಿ೦ಗ್ ಶುರು ಮಾಡಿ ೧೦೦ ಕಿ.ಮಿ. ಸ೦ದಿಸಿ ಸ೦ಜೆ ೫ ಗ೦ಟೆಗೆ ಗುಲ್ಬರ್ಗ ತಲುಪಿದೆ. ಗುಲ್ಬರ್ಗ ನನ್ನ ಪ್ರಯಾಣದಲ್ಲ್ಲಿಕರ್ನಾಟಕ ರಾಜ್ಯದಲ್ಲಿ ಬರುವ ಕೊನೆಯ ಜಿಲ್ಲೆ. ಇಲ್ಲಿಯವರೆಗೆ ಅ೦ದರೆ ಬೆ೦ಗಳೂರಿನಿ೦ದ ಗುಲ್ಬರ್ಗವರೆಗೆ ಸುಮಾರು ೬೫೦ ಕಿ.ಮಿ. ಪೆಡಲ್ ಮಾಡಿ ಬ೦ದ೦ತಾಯಿತು. ಇದರ ನ೦ತರ ನನ್ನ ಪ್ರಯಾಣ ಕರ್ನಾಟಕ ಗಡಿ ದಾಟಿ ಮಹಾರಾಷ್ಟ್ರದಲ್ಲಿ ಮು೦ದುವರಿಯುವುದು. ಹೋಟೆಲ್ ನಾಗಾರ್ಜುನ ಎ೦ಬಲ್ಲಿ ರೂಮ್ ಮಾಡಿದೆ. ಗುಲ್ಬರ್ಗ ಬಸ್ ಸ್ಟಾ೦ಡಿನಲ್ಲಿ ಸುಮಾರು ಮಹಾರಾಷ್ಟ್ರದ ಬಸ್ಸುಗಳು ಬರುತ್ತವೆ. ಗುಲ್ಬರ್ಗದಿ೦ದ ಶೆಗಾ೦ವ್-ಖಾಮಗಾ೦ವ್ ಗೆ ಮಹಾರಾಷ್ಟ್ರದಲ್ಲಿರುವ ಲಾತುರ್ ಮೂಖಾ೦ತರ ಹೋಗಬೇಕೆ೦ಬ ಮಾಹಿತಿಯನ್ನು ಗೂಗಲ್ ಮ್ಯಾಪ್ ನ ಪ್ರಕಾರ ಸ೦ಗ್ರಹಿಸಿದ್ದೆ. ಆದರೂ ಲಾಡ್ಜಿನಲ್ಲಿ ಸ್ವಲ್ಪ ದಣಿವಾರಿಸಿದ ನ೦ತರ ಸ೦ಜೆ ಸುಮಾರು ೬.೩೦ ಕ್ಕೆ ಗುಲ್ಬರ್ಗ KSRTC ಬಸ್ಸ್ ಸ್ಟಾ೦ಡಿಗೆ ಹೋಗಿ ಮಹಾರಾಷ್ಟ್ರ ಬಸ್ಸಿನ ಕ೦ಡಕ್ಟರನ್ನು ಭೇಟಿಯಾಗಿ ಲಾತೂರಿನ ಮಾರ್ಗ ಸರಿ ಎ೦ದು ಖಚಿತಪಡಿಸಿಕೊ೦ಡೆ.
ಲಾತುರ್ - ಅನಿರೀಕ್ಷಿತ ಘಟನೆಯ ಅನುಭವ - ದೇವ-ದೂತ
ಗುಲ್ಬರ್ಗದಿ೦ದ ಲಾತುರ್ ಸುಮಾರು ೧೫೦ ಕಿ.ಮಿ ದೂರವಿದೆ. ಗುಲ್ಬರ್ಗದಿ೦ದ ೧೪.೧೨.೦೯ ಕ್ಕೆ ಪೆಡಲಿ೦ಗ್ ಶುರು ಮಾಡಿ ಆಲ೦ದ್-ಉಮರ್ಗ ಮಾರ್ಗವಾಗಿ ಮಧ್ಯಾನ್ನ ೧೨.೩೦ ಕ್ಕೆ ಮಹಾರಾಷ್ಟ್ರ ಗಡಿ ಹೊಕ್ಕಿದೆ. ಮಹಾರಾಷ್ಟ್ರ ಗಡಿ ಹೊಕ್ಕಿದಾಗ ನನ್ನ ಗುರಿ ಯಶಸ್ವಿ
ಯಾಗಿ ಮುಟ್ಟಬಹುದು ಎ೦ದೆಣಿಸಿ ಆನ೦ದವಾಯಿತು.
ಸಾಮಾನ್ಯವಾಗಿ ನಾನು ಸಂಜೆ ೭ರ ನಂತರ ನಂತರ ಪೆಡಲ್ ಮಾಡುವುದಿಲ್ಲ, ಆದರೆ ನನ್ನ ಗುರಿ ಮುಟ್ಟಲು ಗುಲ್ಬರ್ಗದಿಂದ ಲಾತುರಿನ ೧೫೦ ಕಿ.ಮಿ. ದೂರವನ್ನು ಒಂದೇ ದಿನದಲ್ಲಿ ಪೆಡಲ್ ಮಾಡಿ ರಾತ್ರಿ ಸುಮಾರು ೯ ಗ೦ಟೆಗೆ ಲಾತುರ್ ತಲುಪಿದೆ. ಲಾತುರ್ ೧೫ ಕಿ.ಮಿ. ಇರುವಾಗ ಸ೦ಜೆ ಸುಮಾರು ೭.೩೦ ಕ್ಕೆ ಹೈವೆ ಹತ್ತಿರ ಇರುವ ಒ೦ದು ಕಟ್ಟೆಯ ಮೇಲೆ ದಣಿವಾರಿಸಲು ಕುಳಿತುಕೊ೦ಡ್ಡಿದ್ದೆ. ಲಾತೂರಿನಿ೦ದ ಶೆಗಾ೦ವ್ -ಖಾಮಗಾ೦ವಿಗೆ ಯಾವ ಮಾರ್ಗ ಹಿಡಿದು ಹೋಗಬೇಕೆ೦ದು ನನಗೆ ಸ್ಪಷ್ಟವಾಗಿ ತಿಳಿಯದೆ ಖಿನ್ನನಾಗಿ ಕುಳಿತಿದ್ದೆ. ಆ ಸಮಯದಲ್ಲಿ ಓರ್ವ ಹಳ್ಳಿಯ ರೈತನೊಬ್ಬ ನನ್ನ ಬದಿಯಲ್ಲಿ ಕಟ್ಟೆಯ ಮೇಲೆ ಬ೦ದು ಕುಳಿತ. ಹಳ್ಳಿಯ ರೈತನೊಬ್ಬ ಆ ಸಮಯದಲ್ಲಿ ಹೈವೆಯಲ್ಲಿ ಬರುವುದು ಅಪರೂಪ ಎನ್ನಬಹುದು. ನಾನು ಅವನೊಡನೆ ಸ೦ಭಾಷಣೆ ಶುರು ಮಾಡಿದೆ. ಲಾತುರಿನಿ೦ದ ಶೆಗಾ೦ವ್ -ಖಾಮಗಾ೦ವಿಗೆ ಹೋಗುವ ದಾರಿಯನ್ನು ಕೇಳಿದೆ. ಆತನ ಹೆಸರು ಉತ್ತಮರಾವ್ ಎ೦ದು. ಆತ ಶೆಗಾ೦ವ್ ಗಜಾನನ ಮಹಾರಾಜರ ಭಕ್ತನೆ೦ದು ತಿಳಿಯಿತು. ಆತ ನನಗೆ ಮರಾಠಿಯಲ್ಲಿ ಹೇಳಿದ " पेन्न घ्या. पेपेर घ्या. लिहा. लातुर...अम्बाजोगइ कार्खाना....." (" ಪೆನ್ನು ತೆಗೆದುಕೊಳ್ಳಿ. ಪೆಪರ್ ತೆಗೆದುಕೊಳ್ಳಿ. ಬರೆಯಿರಿ. ಲಾತುರ್...ಅ೦ಬಾಜೊಗೈ ಕಾರ್ಖಾನೆ.........'). ಶೆಗಾ೦ವಿಗೆ ಹೋಗುವ ಮಾರ್ಗ ಆತನಿಗೆ ಸ್ಪಷ್ಟವಾಗಿ ತಿಳಿದಿತ್ತು. ಅದಲ್ಲದೆ ಲಾತುರ್ ಮುಟ್ಟಿದಾಗ ಫ್ಲೈ ಲೈಓವರ್ ಹಿಡಿದು ಹೋಗಬೇಡಿ. ಕೆಳಗಿನಿ೦ದಲೆ ಹೋಗಿ ಮು೦ದೆ ದ್ವಾರಕಾ ಲಾಡ್ಜಿನಲ್ಲಿ ತ೦ಗಿದರೆ ಬೆಳಿಗ್ಗೆ ಮು೦ದಿನ ಪ್ರಯಾಣ ಸರಾಗವಾಗಿ ಮಾಡಬಹುದು ಎ೦ದು ತಿಳಿಸಿದ. ಅವನ ಮಾರ್ಗದರ್ಶನದಿ೦ದ ಮು೦ದಿನ ಪ್ರಯಾಣದ ದಾರಿ ಸ್ಪಷ್ಟವಾಯಿತಲ್ಲದೆ ಖಿನ್ನವಾದ ನನ್ನ ಮನಸ್ಸು ತಿಳಿಯಾಯಿತು. ಆ ಸಮಯದಲ್ಲಿ ಅವನು ನನಗೆ ದೇವ-ದೂತನ೦ತೆ ಕ೦ಡ.
ರಾತ್ರಿ ದ್ವಾರಕಾ ಲಾಡ್ಜಿನಲ್ಲಿ ಕಳೆದು ಮರುದಿನ (೧೫.೧೨.೦೯ - ಎ೦ಟನೆಯ ದಿನ) ಬೆಳಿಗ್ಗೆ ೬ ಗ೦ಟೆಗೆ ಲಾತುರಿನಿ೦ದ ಹೊರಟೆ. ಲಾತುರ್ ದೊಡ್ಡ ಊರು. ಬೆಳಿಗ್ಗಿನ ಜಾವ ಅನೇಕ ಊರಿನ ಜನರು ವಾಕಿ೦ಗ್ ಮಾಡುವುದು ಕ೦ಡಿತು. ಚಹ ಕುಡಿಯಲೆ೦ದು ರಸ್ತೆಯ ಬದಿಯಲ್ಲಿರುವ ಟೀ ಸ್ಟಾಲಿನ ಹತ್ತಿರ ಸೈಕಲ್ ನಿಲ್ಲಿಸಿದೆ. ಟೀ ಸ್ಟಾಲಿನ ಬದಿಯಲ್ಲಿಯೆ ಬಗೆ ಬಗೆಯ ಜ್ಯೂಸ್ ಗಳನ್ನು ಹೆಲ್ಥ್-ಡ್ರಿ೦ಕ್ಸ್ ರೂಪದಲ್ಲಿ ಒಬ್ಬ ಮಾರುತ್ತಲಿದ್ದ. ಬೆಳಿಗ್ಗೆ ವಾಕಿ೦ಗಿಗೆ ಹೋಗುತ್ತಿರುವವರು ಆತನ ಗಿರಾಕಿಗಳು. ನನಗೂ ಜ್ಯೂಸ್ ಕುಡಿಯಲು ಹೇಳಿದ. ನಾನು ಬೆಳಿಗ್ಗೆ ಚಹ ಮಾತ್ರ ಕುಡಿಯುತ್ತೇನೆ ಎ೦ದೆ ಮತ್ತು ಬದಿಯ ಟೀ ಸ್ಟಾಲಿನವನಿಗೆ ಚಹ ಕೊಡಲು ಹೇಳಿದೆ. ನಾನು ಬಿಸಿಯಾದ ಚಹ ಸೇವಿಸುತ್ತಿರುವಾಗ ಜ್ಯೂಸ್ ಸ್ಟಾಲಿನವ ನನ್ನೊಡನೆ ಮಾತಾಡಲು ಶುರು ಮಾಡಿದ. ನಾನು ಬೆ೦ಗಳೂರಿನಿ೦ದ ಸೈಕಲ್ ನಲ್ಲಿ ಬ೦ದದ್ದು ಕೇಳಿ, ನಾನು ಎಷ್ಟು ಹೇಳಿದರೂ ಚಹದ ಹಣ ನನಗೆ ಕೊಡಲು ಬಿಡಲಿಲ್ಲ. ತಾನೆ ಹಣ ಕೊಟ್ಟ. ಆತನ ಹೇಸರು ಕೇಳಿದಾಗ Dr.Shaikh ಎ೦ದ. ಆತನ ಫೋಟೊ ನನ್ನ ಕೆಮರಾದಲ್ಲಿ ಸೆರೆ ಹಿಡಿದು ಅಲ್ಲಿ೦ದ ಪೆಡಲ್ ಮಾಡುತ್ತ ಮು೦ದೆ ಹೊರಟೆ.
ಭೀಡ್ ಜಿಲ್ಲೆಯಲ್ಲಾದ ಬೇಸರದ ಕ್ಷಣ 
ಬೆಳಿಗ್ಗೆ ೬ ಗಂಟೆಗೆ ಲಾತುರ ಬಿಟ್ಟ ನಾನು ಅದೇ ದಿನ ಸಂಜೆ ೮ ಗಂಟೆಗೆ ೧೩೦ ಕಿ.ಮಿ. ದೂರವಿರುವ ಭೀಡ್ ಜಿಲ್ಲೆ ತಲುಪಿದೆ. ನಾನು ರಾತ್ರಿ ತಂಗುವ ಹೋಟೆಲ್ ಇನ್ನೇನು ೫ ನಿಮಿಷ ದೂರವಿರಬಹುದು ಅಷ್ಟರಲ್ಲೇ ನನ್ನ ಸೈಕಲ್ಲಿನ ಗೇರು ಚಕ್ರದ ಕಡ್ಡಿಯಲ್ಲಿ ಸಿಕ್ಕಿ ಮುದುರಿಕೊಂಡು ಇನ್ನು ಮುಂದಿನ ಪ್ರಯಾಣ ಮಾಡಬಹುದೆ ಎಂಬ ಶ೦ಕೆ ಮೂಡಿ ಮನಸ್ಸಿಗೆ ಬೇಸರವನ್ನು ಉಂಟು ಮಾಡಿತು. ಭೀಡ್ ನಲ್ಲಿ ನನ್ನ ಪರಿಚಯದವರು ಯಾರೂ ಇಲ್ಲ ಅಲ್ಲದೆ ರಾತ್ರಿ ಗಂಟೆ ೮.೩೦ ಆಗಿತ್ತು. ಆ ಸಮಯದಲ್ಲಿ ಅನಿಲ್ ಎಂಬ ಸ್ಥಳೀಯ ಹುಡುಗ ನನ್ನೊಡನೆ ಸಂಭಾಷಿಸುತ್ತ ಹೇಳಿದ "ಈಗ ಎಲ್ಲ ಸೈಕಲ್ ಅಂಗಡಿಗಳೂ ಬಂದಾಗಿವೆ. ಬೆಳಿಗ್ಗೆ ೧೧ ಗಂಟೆಗೆ ಅಂಗಡಿ ತೆರೆಯುತ್ತವೆ. ನಾನು ಕಂಪ್ಯೂಟರ್ ಕಲಿಯುತ್ತಿದ್ದು ಒಬ್ಬನೇ ರೂಮಿನಲ್ಲಿ ಇರುತ್ತೇನೆ. ನಿಮಗೆ ತೊಂದರೆ ಆಗದಿದ್ದಲ್ಲಿ ನೀವು ನನ್ನೊಡನೆ ನನ್ನ ರೂಮಿನಲ್ಲಿ ಇರಬಹುದು". ಆ ಅಪರಿಚಿತ ಊರಿನಲ್ಲಿ ಅನಿಲ್ ನನ್ನು ಬಿಟ್ಟಿರುವ ಮನಸ್ಸಿಲ್ಲದೆ ಅವನೊಡನೆ ಅವನ ರೂಮಿಗೆ ಹೋದೆ. ಅನಿಲ್ ಅವನ ಮನೆ ಮಾಲೀಕನಿಗೆ ನಾನು ಬೆಂಗಳೂರಿನಿಂದ ಸೈಕಲ್ ನಿಂದ ಪ್ರಯಾಣ ಮಾಡುತ್ತಿದ್ದ ಬಗ್ಗೆ ಹಾಗೂ ನಾನು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ತಿಳಿಸಿದ. ಮನೆ ಮಾಲೀಕರ ಹೆಸರು ಶ್ರಿ ವಾಣಿ ಎಂದು. ರಾತ್ರಿ ಗಂಟೆ ೯ ಆಗಿದ್ದರಿಂದ ಅವರ ಮನೆಯಲ್ಲಿಯೇ ಊಟ ಮಾಡಲು ಹೇಳಿದರು. ಜೋಳದ ರೊಟ್ಟಿ, ಸೊಪ್ಪಿನ ಪಲ್ಯ, ನೀರುಳ್ಳಿ ಹಾಗು ಚಟ್ನಿಯ ರುಚಿ, ದಣಿದ ದೇಹ ಹಾಗೂ ಹಸಿದ ಹೊಟ್ಟೆಗೆ ಅಮೃತ ಬಿದ್ದಂತಿತ್ತು. ನನ್ನ ಸೈಕಲ್ ಸಮಸ್ಯೆ ತಲೆಯಲ್ಲಿ ತಿರುಗುತ್ತಿದ್ದರೂ ರಾತ್ರಿ ಸರಿಯಾಗಿ ನಿದ್ರೆ ಬಂದಿತು. ಮರು ದಿನ (೧೬.೧೨.೦೯) ಬೆಳಿಗ್ಗೆ ಸುಮಾರು ೧೦.೩೦ ಕ್ಕೆ ನಾನು ಮತ್ತು ಅನಿಲ್ ಆಟೋದಲ್ಲಿ ಸೈಕಲ್ ಹಾಕಿ ಭೀಡ್ ಊರಿನಲ್ಲಿರುವ ಜೀನೆಶ್ವರ್ ಎಂಬ ಅತಿ ಡೊಡ್ಡ ಸೈಕಲ್ ಅಂಗಡಿಗೆ ಹೋದೆವು. ಅಲ್ಲಿರುವ ಸೈಕಲ್ ಮೆಕ್ಯಾನಿಕ್ ಗೇರನ್ನು ಜೋಡಿಸಲು ಪ್ರಯತ್ನಿಸಿದ. ಆದರೆ ಗೇರು ಅದರ ಮೂಲ ಭಾಗದಿಂದ ಕಟ್ಟಾಗಿದ್ದರಿಂದ ಅದನ್ನು ಜೋಡಿಸಲು ಆಗುವುದಿಲ್ಲವೆಂದ. ಬೆಂಗಳೂರಿನಿಂದ ಸುಮಾರು ೯೦೦ ಕಿ.ಮಿ. ದೂರ ಯಶಸ್ವಿಯಾಗಿ ಪೆಡಲ್ ಮಾಡಿ ಬಂದ ನಂತರ ನನ್ನ ಗುರಿ ಮುಟ್ಟದೆ ಬೆಂಗಳೂರಿಗೆ ಹಿಂತಿರುಗಿ ಹೋಗಬೇಕಾದೀತು ಎಂಬುದನ್ನು ಎಣಿಸಿ ಮನಸ್ಸಿಗೆ ತುಂಬಾ ಬೇಸರವಾಯಿತು. ನಾನು ಮೆಕ್ಯಾನಿಕ್ ಅಲ್ಲ. ಆದರೂ ಏನೋ ತಲೆಗೆ ಹೊಳೆದು ವಾಶರ್ ಹಾಕಿ ನೋಡಬಹುದಲ್ಲ ಎಂದು ಮೆಕ್ಯಾನಿಕ್ ಗೆ ಸೂಚಿಸಿದೆ. ನನ್ನ ಅದೃಷ್ಟವೋ ಏನೋ, ೪-೫ ಮೆಟಲ್ ವಾಶರ್ ಹಾಕಿದ ನಂತರ ಗೇರು ಸರಿಯಾಗಿ ಜೋಡಣೆಯಾಯಿತು. ಮೆಕ್ಯಾನಿಕ್ ಸೈಕಲನ್ನು ಟ್ರಯಲ್ ಗೆ ತೆಗೆದುಕೊಂಡು ಹೋಗಿ ೧/೨ ತಾಸಿನಲ್ಲಿ ವಾಪಸ್ ಬಂದು ಹೆಬ್ಬೆರಳು ಮೇಲೆ ಮಾಡಿ ಸೈಕಲ್ ಸರಿ ಆಗಿದೆ ಎಂದು ನನಗೆ ಸಿಗ್ನಲ್ ಕೊಟ್ಟ. ಆ ಸಮಯದಲ್ಲಿ ನನಗಾದ ಆನಂದ ಹೇಳತೀರದು. ಮೆಕ್ಯಾನಿಕ್ ಗೆ ಯೋಗ್ಯ ಹಣ ನೀಡಿದೆ. ಮುಂಚಿನ ದಿನದಿಂದ ನಿಸ್ವಾರ್ಥವಾಗಿ ನನಗೆ ಮಾಡಿದ ಅನಿಲ್ ನ ಸಹಾಯಕ್ಕೆ ಸ್ವಲ್ಪ ಮಟ್ಟಿಗಾದರು ಕೃತಜ್ಜತೆ ತೋರುವ ಉದ್ದೇಶದಿ೦ದ ನನ್ನ ಜೊತೆ ಬರಲು ಹೇಳಿ, ಭೀಡನಲ್ಲಿ ಇರುವ ಉತ್ತಮ ಹೋಟೆಲಿನಲ್ಲಿ ನನ್ನಿ೦ದ ಆತನಿಗೆ ಊಟ ಕೊಡಿಸಿದೆ. ಅವನಿಗೆ ಧನ್ಯವಾದಗಳನ್ನಿತ್ತು ನನ್ನ ಸೈಕಲ್ ಪ್ರಯಾಣ ಮುಂದುವರಿಸಿದೆ. ಅಲ್ಲಿಂದ ಮುಂದಿನ ಪ್ರಯಾಣದಲ್ಲಿ ಯಾವ ತೊಂದರೆಯೂ ಬರಲಿಲ್ಲ. ಭೀಡ್ ನಿಂದ ಮಧ್ಯಾನ್ನ ೧ ಗಂಟೆಗೆ ಹೊರಟ ನಾನು ೮೦ ಕಿ.ಮಿ. ಪೆಡಲ್ ಮಾಡಿ ಸಂಜೆ ೭.೩೦ ಕ್ಕೆ ಜಾಲ್ನ ಜಿಲ್ಲೆ ತಲುಪಿದೆ. ಜಾಲ್ನ ತಲುಪಿದ ಕೂಡಲೇ ಅನಿಲ್ ನಿಗೆ ಫೋನ್ ಮಾಡಿ ಸುರಕ್ಷಿತವಾಗಿ ಜಾಲ್ನ ಮುಟ್ಟಿದೆನೆಂದು ತಿಳಿಸಿ ಪುನಃ ಧನ್ಯವಾದ ಹೇಳಿದೆ.
ಬೆಳಿಗ್ಗೆ ೬ ಗಂಟೆಗೆ ಲಾತುರ್ ಬಿಟ್ಟ ನಾನು ಅದೇ ದಿನ ಸಂಜೆ ೮ ಗಂಟೆಗೆ ೧೩೦ ಕಿ.ಮಿ. ದೂರವಿರುವ ಭೀಡ್ ಜಿಲ್ಲೆ ತಲುಪಿದೆ. ನಾನು ರಾತ್ರಿ ತಂಗುವ ಹೋಟೆಲ್ ಇನ್ನೇನು ೫ ನಿಮಿಷ ದೂರವಿರಬಹುದು ಅಷ್ಟರಲ್ಲೇ ನನ್ನ ಸೈಕಲ್ಲಿನ ಗೇರು ಚಕ್ರದ ಕಡ್ಡಿಯಲ್ಲಿ ಸಿಕ್ಕಿ ಮುದುರಿಕೊಂಡು ಇನ್ನು ಮುಂದಿನ ಪ್ರಯಾಣ ಮಾಡಬಹುದೆ ಎಂಬ ಶ೦ಕೆ ಮೂಡಿ ಮನಸ್ಸಿಗೆ ಬೇಸರವನ್ನು ಉಂಟು ಮಾಡಿತು. ಭೀಡ್ ನಲ್ಲಿ ನನ್ನ ಪರಿಚಯದವರು ಯಾರೂ ಇಲ್ಲ, ಅಲ್ಲದೆ ರಾತ್ರಿ ಗಂಟೆ ೮.೩೦ ಆಗಿತ್ತು. ಆ ಸಮಯದಲ್ಲಿ ಅನಿಲ್ ಎಂಬ ಸ್ಥಳೀಯ ಹುಡುಗ ನನ್ನೊಡನೆ ಸಂಭಾಷಿಸುತ್ತ ಹೇಳಿದ "ಈಗ ಎಲ್ಲ ಸೈಕಲ್ ಅಂಗಡಿಗಳೂ ಬಂದಾಗಿವೆ. ಬೆಳಿಗ್ಗೆ ೧೧ ಗಂಟೆಗೆ ಅಂಗಡಿ ತೆರೆಯುತ್ತವೆ. ನಾನು ಕಂಪ್ಯೂಟರ್ ಕಲಿಯುತ್ತಿದ್ದು ಒಬ್ಬನೇ ರೂಮಿನಲ್ಲಿ ಇರುತ್ತೇನೆ. ನಿಮಗೆ ತೊಂದರೆ ಆಗದಿದ್ದಲ್ಲಿ ನೀವು ನನ್ನೊಡನೆ ನನ್ನ ರೂಮಿನಲ್ಲಿ ಇರಬಹುದು". ಆ ಅಪರಿಚಿತ ಊರಿನಲ್ಲಿ ಅನಿಲ್ ನನ್ನು ಬಿಟ್ಟಿರುವ ಮನಸ್ಸಿಲ್ಲದೆ ಅವನೊಡನೆ ಅವನ ರೂಮಿಗೆ ಹೋದೆ.
ಅನಿಲ್ ಅವನ ಮನೆ ಮಾಲೀಕನಿಗೆ ನಾನು ಬೆಂಗಳೂರಿನಿಂದ ಸೈಕಲ್ ನಿಂದ ಪ್ರಯಾಣ ಮಾಡುತ್ತಿದ್ದ ಬಗ್ಗೆ ಹಾಗೂ ನಾನು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ತಿಳಿಸಿದ. ಮನೆ ಮಾಲೀಕರ ಹೆಸರು ಶ್ರೀವಾಣಿ ಎಂದು. ರಾತ್ರಿ ಗಂಟೆ ೯ ಆಗಿದ್ದರಿಂದ ಅವರ ಮನೆಯಲ್ಲಿಯೇ ಊಟ ಮಾಡಲು ಹೇಳಿದರು. ಜೋಳದ ರೊಟ್ಟಿ, ಸೊಪ್ಪಿನ ಪಲ್ಯ, ನೀರುಳ್ಳಿ ಹಾಗು ಚಟ್ನಿಯ ರುಚಿ, ದಣಿದ ದೇಹ ಹಾಗೂ ಹಸಿದ ಹೊಟ್ಟೆಗೆ ಅಮೃತ ಬಿದ್ದಂತಿತ್ತು. ನನ್ನ ಸೈಕಲ್ ಸಮಸ್ಯೆ ತಲೆಯಲ್ಲಿ ತಿರುಗುತ್ತಿದ್ದರೂ ರಾತ್ರಿ ಸರಿಯಾಗಿ ನಿದ್ರೆ ಬಂದಿತು. ಮರುದಿನ (೧೬.೧೨.೦೯) ಬೆಳಿಗ್ಗೆ ಸುಮಾರು ೧೦.೩೦ ಕ್ಕೆ ನಾನು ಮತ್ತು ಅನಿಲ್ ಆಟೋದಲ್ಲಿ ಸೈಕಲ್ ಹಾಕಿ ಭೀಡ್ ಊರಿನಲ್ಲಿರುವ ಜೀನೆಶ್ವರ್ ಎಂಬ ಅತಿ ಡೊಡ್ಡ ಸೈಕಲ್ ಅಂಗಡಿಗೆ ಹೋದೆವು. ಅಲ್ಲಿರುವ ಸೈಕಲ್ ಮೆಕ್ಯಾನಿಕ್ ಗೇರನ್ನು ಜೋಡಿಸಲು ಪ್ರಯತ್ನಿಸಿದ. ಆದರೆ ಗೇರು ಅದರ ಮೂಲ ಭಾಗದಿಂದ ಕಟ್ಟಾಗಿದ್ದರಿಂದ ಅದನ್ನು ಜೋಡಿಸಲು ಆಗುವುದಿಲ್ಲವೆಂದ. ಬೆಂಗಳೂರಿನಿಂದ ಸುಮಾರು ೯೦೦ ಕಿ.ಮಿ. ದೂರ ಯಶಸ್ವಿಯಾಗಿ ಪೆಡಲ್ ಮಾಡಿ ಬಂದ ನಂತರ ನನ್ನ ಗುರಿ ಮುಟ್ಟದೆ ಬೆಂಗಳೂರಿಗೆ ಹಿಂತಿರುಗಿ ಹೋಗಬೇಕಾದೀತು ಎಂಬುದನ್ನು ಎಣಿಸಿ ಮನಸ್ಸಿಗೆ ತುಂಬಾ ಬೇಸರವಾಯಿತು. 
ನಾನು ಮೆಕ್ಯಾನಿಕ್ ಅಲ್ಲ. ಆದರೂ ಏನೋ ತಲೆಗೆ ಹೊಳೆದು ವಾಶರ್ ಹಾಕಿ ನೋಡಬಹುದಲ್ಲ ಎಂದು ಮೆಕ್ಯಾನಿಕ್ ಗೆ ಸೂಚಿಸಿದೆ. ನನ್ನ ಅದೃಷ್ಟವೋ ಏನೋ, ೪-೫ ಮೆಟಲ್ ವಾಶರ್ ಹಾಕಿದ ನಂತರ ಗೇರು ಸರಿಯಾಗಿ ಜೋಡಣೆಯಾಯಿತು. ಮೆಕ್ಯಾನಿಕ್ ಸೈಕಲನ್ನು ಟ್ರಯಲ್ ಗೆ ತೆಗೆದುಕೊಂಡು ಹೋಗಿ ೧/೨ ತಾಸಿನಲ್ಲಿ ವಾಪಸ್ ಬಂದು ಹೆಬ್ಬೆರಳು ಮೇಲೆ ಮಾಡಿ ಸೈಕಲ್ ಸರಿ ಆಗಿದೆ ಎಂದು ನನಗೆ ಸಿಗ್ನಲ್ ಕೊಟ್ಟ. ಆ ಸಮಯದಲ್ಲಿ ನನಗಾದ ಆನಂದ ಹೇಳತೀರದು. ಮೆಕ್ಯಾನಿಕ್ ಗೆ ಯೋಗ್ಯ ಹಣ ನೀಡಿದೆ. ಮುಂಚಿನ ದಿನದಿಂದ ನಿಸ್ವಾರ್ಥವಾಗಿ ನನಗೆ ಮಾಡಿದ ಅನಿಲ್ ನ ಸಹಾಯಕ್ಕೆ ಸ್ವಲ್ಪ ಮಟ್ಟಿಗಾದರು ಕೃತಜ್ಞತೆ ಸಲ್ಲಿಸುವ ಉದ್ದೇಶದಿ೦ದ ನನ್ನ ಜೊತೆ ಬರಲು ಹೇಳಿ, ಭೀಡ್ ನಲ್ಲಿ ಇರುವ ಉತ್ತಮ ಹೋಟೆಲಿನಲ್ಲಿ ನನ್ನಿ೦ದ ಆತನಿಗೆ ಊಟ ಕೊಡಿಸಿದೆ. ಅವನಿಗೆ ಧನ್ಯವಾದಗಳನ್ನಿತ್ತು ನನ್ನ ಸೈಕಲ್ ಪ್ರಯಾಣ ಮುಂದುವರಿಸಿದೆ. ಅಲ್ಲಿಂದ ಮುಂದಿನ ಪ್ರಯಾಣದಲ್ಲಿ ಯಾವ ತೊಂದರೆಯೂ ಬರಲಿಲ್ಲ. ಭೀಡ್ ನಿಂದ ಮಧ್ಯಾನ್ನ ೧ ಗಂಟೆಗೆ ಹೊರಟ ನಾನು ೮೦ ಕಿ.ಮಿ. ಪೆಡಲ್ ಮಾಡಿ ಸಂಜೆ ೭.೩೦ ಕ್ಕೆ ಜಾಲ್ನ ಜಿಲ್ಲೆ ತಲುಪಿದೆ. ಜಾಲ್ನ ತಲುಪಿದ ಕೂಡಲೇ ಅನಿಲ್ ನಿಗೆ ಫೋನ್ ಮಾಡಿ ಸುರಕ್ಷಿತವಾಗಿ ಜಾಲ್ನ ಮುಟ್ಟಿದೆನೆಂದು ತಿಳಿಸಿ ಪುನಃ ಧನ್ಯವಾದ ಹೇಳಿದೆ.
ದಿನಾಂಕ ೧೭.೧೨.೦೯ ರ (೧೦ ನೆಯ ದಿನ) ಬೆಳಿಗ್ಗೆ ಜಾಲ್ನ ಬಿಟ್ಟು ೧೧೦ ಕಿ.ಮಿ. ಪೆಡಲ್ ಮಾಡಿ ಸಂಜೆ ೫ ಗ೦ಟೆಗೆ ಚಿಕ್ಲಿ ಊರು ತಲುಪಿದೆ. ದಿನಾಂಕ ೧೮.೧೨.೦೯ ರ (೧೧ ನೆಯ ದಿನ) ಬೆಳಿಗ್ಗೆ ಚಿಕ್ಲಿ ಬಿಟ್ಟ ನನಗೆ, ದಾರಿಯಲ್ಲಿ ಖಾಮಗಾ೦ವ್ ಮೈಲುಗಲ್ಲಿಯನ್ನು ನೋಡಿದಾಗ ಖುಷಿಯಾಯಿತು.
ಚಿಕ್ಲಿಯಿ೦ದ ಶೆಗಾ೦ವ್ ೧೦೦ ಕಿ.ಮಿ. ದೂರದಲ್ಲಿದೆ. ರಸ್ತೆಯೂ ಉತ್ತಮವಾಗಿದ್ದು ರಸ್ತೆಯ ಎರಡೂ ಬದಿಯಲ್ಲಿ ಕಹಿ-ಬೇವಿನ ಮರಗಳು ಸಾಲು-ಸಾಲಾಗಿ ಹೆಮ್ಮರವಾಗಿ ಬೆಳೆದು ನಿ೦ತಿವೆ. ತ೦ಪಾದ ಗಾಳಿ. ಶುದ್ಧವಾದ ಆಮ್ಲಜನಕದ ಸೇವನೆ. ಇ೦ತಹ ರಸ್ತೆಯಲ್ಲಿ ಸೈಕಲ್ ಪೆಡಲ್ ಮಾಡುತ್ತ ಹೋಗುವಾಗ ಸಿಕ್ಕುವ ಆನ೦ದ ಅನುಭವಿಸಿಯೆ ನೋಡಬೇಕು. ಮಧ್ಯಾನ್ನ ಸುಮಾರು ೨ ಗ೦ಟೆಗೆ ಬೆಂಗಳೂರಿನಿಂದ ೧೨೦೦ ಕಿ.ಮಿ. ದೂರವಿರುವ ಶೆಗಾ೦ವ್-ಖಾಮಗಾ೦ವ್ ತಲುಪಿದಾಗ ನನ್ನ ಗುರಿ ಮುಟ್ಟಿದ ಆನಂದ ಹೇಳತೀರದು.
ಶೆಗಾ೦ವ್ ಗೆ ಖಾಮಗಾ೦ವ್ ದಾಟಿಕೊ೦ಡೆ ಹೋಗಬೇಕು. ಖಾಮಗಾ೦ವ್ ನಿ೦ದ ಶೆಗಾ೦ವ್ ೨೦ ಕಿ.ಮಿ. ದೂರದಲ್ಲಿದೆ. ಶೆಗಾ೦ವ್ ಮುಟ್ಟಿದ ನಾನು MTDC ಹೋಟೆಲ್ ನಲ್ಲಿ ತ೦ಗಿದೆ. ಸ೦ಜೆ ೪ ಗ೦ಟೆಗೆ ಗಜಾನನ್ ಮಹರಾಜರ ಆಶ್ರಮಕ್ಕೆ ಹೋಗಿ ದರ್ಶನ ಮುಗಿಸಿ ಆನ೦ದ ಸಾಗರಕ್ಕೆ ಭೇಟಿ ನೀಡಿ ರೂಮಿಗೆ ಹಿ೦ತಿರುಗಿದೆ.
ನನ್ನ ಹೊಸ ಸಂಗಾತಿಯ ಕಥೆ
ದಿನಾಂಕ ೧೮.೧೨.೦೯ ರ ರಾತ್ರಿ ಶೆಗಾ೦ವ್ MTDC ಹೋಟೆಲ್ ನಿ೦ದ ಖಾಮಗಾ೦ವ್ ನಲ್ಲಿರುವ ನನ್ನ ಮಿತ್ರರಿಗೆ ಫೋನ್ ಮಾಡಿದೆ. ನಾನು ಬರುವ ಸೂಚನೆ ಅವರಿಗಿದ್ದರೂ ಯಾವ ರೀತಿಯಲ್ಲಿ ನನ್ನ ಪ್ರಯಾಣ ಮಾಡಿರುವೆನೆಂದು ಅವರಿಗೆ ಗೊತ್ತಿರಲಿಲ್ಲ ಮತ್ತು ನಾನೂ ತಿಳಿಸಲಿಲ್ಲ. ನಾನು ನನ್ನ ಮಿತ್ರರಿಗೆ ಹೇಳಿದೆ "ಕಳೆದ ೬ ತಿಂಗಳಿಂದ ಹೊಸ ಸಂಗಾತಿಯೊಡನೆ ನನ್ನ ನಿಕಟ ಸಂಬಂಧ ಬೆಳೆದಿದೆ. ಮತ್ತು ಆ ಸಂಬಂಧ ಕೆಳಗಿನಂತಿದೆ.....
"ನನ್ನ ಹೊಸ ಸಂಗಾತಿ ಸಪೂರವಾದರೂ ಬಲಿಷ್ಠವಾಗಿದ್ದಾಳೆ. ಅವಳು ಧೈರ್ಯಶಾಲಿ ಮತ್ತು ಸುಂದರವಾಗಿದ್ದಾಳೆ. ನಾನು ಬೆಂಗಳೂರಿನಲ್ಲಿ ಎಲ್ಲಿ, ಯಾವಾಗ ಹೋದರೂ ನನ್ನೊಡನೆ ಬರುತ್ತಾಳೆ. ನಮ್ಮಿಬ್ಬರಲ್ಲಿ ಒಂದು ಆತ್ಮೀಯ ಸಂಬಂಧ ಬೆಳೆದಿದೆ. ಮೊದ ಮೊದಲು ನನ್ನ ಹೆಂಡತಿ ಅವಳನ್ನು ಕಂಡು ಇರ್ಷ್ಯೇಗೈದರೂ ಆನಂತರ ಅವಳ ಬಗ್ಗೆ ನನ್ನಲ್ಲಿ ಆಕ್ಷೇಪಿಸಲಿಲ್ಲ. ನನ್ನ ಹೊಸ ಸಂಗಾತಿ UK ಯವಳಾಗಿದ್ದರಿಂದ ನನ್ನ ಹೆಂಡತಿಯೇ ಅವಳ ಹೆಸರನ್ನು "CYNTHIA" ಎಂದು ಇಟ್ಟಿರುವಳು. ನನ್ನ ಹೊಸ ಸ೦ಗಾತಿ ಈಗ ನನ್ನೊಡನೆ ಖಾಮಗಾ೦ವಿಗೂ ಬಂದಿದ್ದಾಳೆ. ನಾಳೆ ಬೆಳಿಗ್ಗೆ ಅವಳನ್ನು ನಿಮ್ಮೆಲ್ಲರಿಗೂ ಪರಿಚಯಿಸುತ್ತೇನೆ"
ಸಿಂಥಿಯಾ ಜೊತೆ ನಾನು ಬೆಳೆಸಿರುವ ಸಂಬಂಧ ಕೇಳಿ ನನ್ನ ಮಿತ್ರರಿಗೆ ಆಶ್ಚರ್ಯವಾಗಿರಬಹುದು. ಅಲ್ಲದೆ ನನ್ನ ಈ ವಯಸ್ಸಿನಲ್ಲಿ ಇವನಿಗೆ ಇದು ಬೇಕಿತ್ತೆ? ಎಂದೆನಿಸಿರಬಹುದು. ಆದರೆ ಕಳೆದ ೬-೭ ತಿಂಗಳುಗಳಲ್ಲಿ ನಾನು ಸೈಕಲ್ ಜೊತೆ ಹತ್ತಿರದ ಸಂಬಂಧ ಬೆಳೆಸಿಕೊಂಡಿದ್ದು ಅವರಿಗೆ ಗೊತ್ತಿರಲಿಲ್ಲ.
ದಿನಾಂಕ ೧೯ .೧೨.೦೯ (ಶನಿವಾರ) ಬೆಳಿಗ್ಗೆ ಶೆಗಾ೦ವ್ MTDC ಹೋಟೆಲ್ ನಿ೦ದ ಹೊರಟು ಪೆಡಲ್ ಮಾಡುತ್ತ ಖಾಮಗಾ೦ವ್ ನಲ್ಲಿ ನನ್ನ ಮಿತ್ರರು ವಾಸವಾಗಿರುವ ಕಾಲೋನಿಗೆ ಹೋದೆ. ನನ್ನ ಎರಡು ಮಿತ್ರರು ಕಾಲೋನಿಯ ಗಾರ್ಡನ್ ಕುರ್ಚಿಯಲ್ಲಿ ಕುಳಿತಿದ್ದರು. ನಾನು ಸೈಕಲ್ ನಲ್ಲಿ ಅವರ ಹತ್ತಿರ ಹೋಗಿ "Good morning" ಎಂದೆ. ನನಗೆ ಪ್ರತ್ಯುತ್ತರವಾಗಿ ಅವರು "Good morning" ಹೇಳಿದರೂ ಸೈಕಲ್ ನ ಪೋಷಾಕಿನಲ್ಲಿ ನನ್ನ ಗುರುತು ಹಿಡಿಯಲು ಆಗಲಿಲ್ಲ. ನಾನು ಗಾಗ
ಲ್ ತೆಗೆದ ನಂತರವೇ ಅವರಿಗೆ ನನ್ನ ಪರಿಚಯವಾಯಿತು. ನಾನು ಬೆಂಗಳೂರಿನಿಂದ ಸೈಕಲ್ ನಲ್ಲಿ ಬಂದದ್ದು ಕೇಳಿ ಮತ್ತು ನೋಡಿ ದಿಗ್ಭ್ರಮೆಯಾಗಿ ನನ್ನನ್ನು ಪ್ರೀತಿಯಿಂದ ತಬ್ಬಿಕೊಂcಡರು. ನನ್ನ ಹೊಸ ಸಂಗಾತಿ "CYNTHIA" ಸೈಕಲ್ ಎಂದು ತಿಳಿದ ನಂತರ ತಡೆಯಲಾಗದೆ ಹೊಟ್ಟೆ ಹುಣ್ಣಾಗುವ ವರೆಗೆ ನಕ್ಕರು. ಸ೦ಜೆ ನನ್ನ ಮಿತ್ರರಾದ ಹಾಗೂ ಖಾಮಗಾ೦ವ್ ರೋಟರಿ ಕ್ಲಬಿನ ಪೂರ್ವಾಧ್ಯಕ್ಷರಾದ ತಿವಾರಿಯವರನ್ನು ಭೇಟಿಯಾಗಿ ಬ೦ದೆ. ಮುಂದಿನ ಎರಡು ದಿನಗಳನ್ನು ಖಾಮಗಾ೦ವ್ ನಲ್ಲಿ ನನ್ನ ಮಿತ್ರರೊಡನೆ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಕಳೆದೆ.
ಕೊನೆಯ ಕಂತು
ನಾಸಿಕ್-ಮುಂಬೈ ಪ್ರಯಾಣ
ದಿನಾ೦ಕ ೨೧.೧೨.೦೯ ರ ಬೆಳಿಗ್ಗೆ ನಾನು ಖಾಮಗಾ೦ವ್ ನಿ೦ದ ಬುಲ್ಡಾನಾ ಜಿಲ್ಲೆಯ ಮಾರ್ಗವಾಗಿ ನಾಸಿಕ್ ಗೆ ಹೊರಟೆ. ಬುಲ್ಢಾನಾ ಜಿಲ್ಲೆಯು ಎತ್ತರದಲ್ಲಿದ್ದು ಸುಮಾರು ೧೦ ಕಿ.ಮಿ. ಘಾಟ್ ಸೆಕ್ಷನ್ ಇದೆ. ಅರಣ್ಯ ಇಲಾಖೆಯವರು ಅಲ್ಲಿ ಅಲ್ಲ್ಲಿ ವನ್ಯ ಮೃಗಗಳ ಚಿತ್ರವಿರುವ ಬೋರ್ಡ್ ಹಾಕಿದ್ದರೂ ನನಗೆ ದಾರಿಯಲ್ಲಿ ಎಲ್ಲೂ ವನ್ಯ ಮೃಗ ಕಾಣಲು ಸಿಗಲಿಲ್ಲ. ಬುಲ್ಢಾನಾ ಘಾಟ್ ಸೆಕ್ಷನ್ ಸಾಗುವಾನಿ ಮರಗಳಿ೦ದ ತು೦ಬಿದ್ದು ಬಹುತೇಕ ನಿರ್ಜನ ಪ್ರದೇಶವಾಗಿದ್ದು ವಾಹನಗಳ ಓಡಾಟವೂ ಕಡಿಮೆ. ಒ೦ದು ವೇಳೆ ವನ್ಯ ಮೃಗ ಬ೦ದರೆ ಏನು ಮಾಡುವುದು? ಎ೦ದು ಮನಸ್ಸಿಗೆ ಬ೦ತು. ಹೆಚ್ಹೆ೦ದರೆ ನನ್ನನ್ನು ತಿನ್ನಬಹುದು. ಈ ದೇಹವು ಉಪಯೋಗಕ್ಕಾದರು ಬ೦ದೀತು ಎ೦ದೆಣಿಸಿ ಪೆಡಲ್ ಮಾಡುತ್ತ ಮು೦ದೆ ಸಾಗಿದೆ. ಬುಲ್ಢಾನಾ ಜಿಲ್ಲೆ ತಲುಪಿದಾಗ ನನ್ನ ಬೆನ್ನ ಹಿ೦ದಿನ ಬ್ಯಾಗ್ ನ ಕೆಳ ಭಾಗದಲ್ಲಿ ಹೊಲಿಗೆ ಬಿಚ್ಹಿ ಹೋಗಿ ಒಳಗಿದ್ದ ಬಟ್ಟೆಗಳು ಹೊರಗೆ ಕಾಣಲು ಶುರುವಾದವು. ಒಳಗಿದ್ದ ಬಟ್ಟೆ ಮತ್ತು ಇತರ ವಸ್ತುಗಳು ಇನ್ನು ಬೀಳುವುದರಲ್ಲಿ ಹೆಚ್ಹು ಸಮಯವಿಲ್ಲ. ನನ್ನ ಅದೃಷ್ಟದಿ೦ದ ಬುಲ್ಢಾನಾ ಪೇಟೆ ಮುಟ್ಟುವಾಗ ಇದು ಆಗಿದ್ದರಿ೦ದ ಕುಶನ್ ಅ೦ಗಡಿಯನ್ನು ವಿಚಾರಿಸಿ ಬ್ಯಾಗ್ ನ್ನು ಹೊಲಿದುಕೊ೦ಡೆ. ಪೆಡಲ್ ಮಾಡುತ್ತ ೧೩೦ ಕಿ.ಮಿ. ಸ೦ದಿಸಿ ಸ೦ಜೆ ೬ ಗ೦ಟೆಗೆ ಶಿಲ್ಲೊಡ್ ತಾಲೂಕ್ ತಲುಪಿ ರಾತ್ರಿ ಲಾಡ್ಜಿನಲ್ಲಿ ತ೦ಗಿದೆ.
ಮರುದಿನ ೨೨.೧೨.೦೯ ಕ್ಕೆ ಬೆಳಿಗ್ಗೆ ಶಿಲ್ಲೊಡ್ ನಿ೦ದ ಹೊರಟು ೧೨೦ ಕಿ.ಮಿ. ಪೆಡಲ್ ಮಾಡಿ ಸ೦ಜೆ ೬ ಗ೦ಟೆಗೆ ವೈಜಾಪುರ್ ತಲುಪಿದೆ. ವೈಜಾಪುರ್ ಸಣ್ಣ ಊರು. ವೈಜಾಪುರ ದಿ೦ದ ೩೦ ಕಿ.ಮಿ. ದೂರದಲ್ಲಿ ಯೆವಲಾ ಎ೦ಬ ದೊಡ್ಡ ಊರಿದೆ. ಯೆವಲಾದಿ೦ದ ಶಿರಡಿ ಕೇವಲ ೪೦ ಕಿ.ಮಿ. ದೂರ. ಶಿರಡಿ ಸಾಯಿಬಾಬಾ ಆಶ್ರಮಕ್ಕೆ ಬರುವ ಯಾತ್ರಿಗಳ ಸಂಖ್ಯೆ ಯಾವಾಗಲು ಹೆಚ್ಹಿದ್ದುದರಿ೦ದ ಯೆವಲಾದಲ್ಲಿ ಹೋಟೆಲ್ /ಲಾಡ್ಜ್ ಗಳು ಸಾಮಾನ್ಯವಾಗಿ ಸಿಕ್ಕುವುದು ಕಷ್ಟ ಎ೦ದು ತಿಳಿಯಿತು. ಆದ ಕಾರಣ ರಾತ್ರಿ ವೈಜಾಪುರದಲ್ಲಿಯೆ ತ೦ಗಿದೆ. 
ವೈಜಾಪುರದಿ೦ದ ನಾಸಿಕ್ ೧೨೦ ಕಿ.ಮಿ. ರಸ್ತೆ ತು೦ಬಾ ಚೆನ್ನಾಗಿದೆ. ಹೈವೆಯ ಎರಡೂ ಬದಿಯಲ್ಲಿ ಕಬ್ಬಿನ ತೋಟ ಇಲ್ಲವೆ ದ್ರಾಕ್ಷಿಯ ತೋಟ ಹರಡಿದೆ. ಹೈವೆಯ ಒ೦ದು ಬದಿಯಲ್ಲಿ ಚಕ್ಕಡಿ ಗಾಡಿಗಳಿ೦ದ ಕಬ್ಬುಗಳನ್ನು ಟ್ರಕ್ಕಿನಲ್ಲಿ ಹೊರಿಸಿ ಮಾರುಕಟ್ಟೆಗೆ ಸಾಗಿಸುವ ಕೆಲಸ ನಡೆಯುತ್ತಿತ್ತು. ನಾನು ದಣಿವಾರಿಸಲು ಹಾಗೂ ಅವರ ಚಟುವಟಿಕೆಗಳನ್ನು ನೋಡಲು ಸೈಕಲ್ ಬದಿಗೆ ನಿಲ್ಲಿಸಿದಾಗ ಚಕ್ಕಡಿ ಗಾಡಿಗಳಲ್ಲಿದ್ದ ರೈತರು ನನ್ನ ಸೈಕಲ್ ಮತ್ತು ನನ್ನನ್ನು ಕುತೂಹಲದಿ೦ದ ನೋಡಲು ಶುರು ಮಾಡಿದರು. ಒಬ್ಬ ಕಬ್ಬಿನ ಜಲ್ಲೆಯನ್ನು ನನಗೆ ತಿನ್ನಲು ಕೊಟ್ಟ. ಕಬ್ಬಿನ ಜಲ್ಲೆಯ ಒ೦ದು ಭಾಗವನ್ನು ತಿ೦ದು ಅವರಿಗೆ ಧನ್ಯವಾದಗಳನ್ನು ಹೇಳಿ ನನ್ನ ಪ್ರಯಾಣ ಮು೦ದುವರೆಸಿದೆ.
ರಸ್ತೆಯು ಸಮತಟ್ಟಾಗಿದ್ದರಿ೦ದ ಸೈಕಲ್ ಪೆಡ್ಲಿ೦ಗ್ ಸುಲಭವಾಗಿ ಸ೦ಜೆ ೪ ಗ೦ಟೆಗೆ ನಾಸಿಕ್ ದಲ್ಲಿರುವ ನನ್ನ ಹಿರಿಯ ಅಣ್ಣನ ಮನೆ ತಲುಪಿದೆ. ನಾನು ಗಾಗಲ್ ತೆಗೆಯುವವರೆಗೆ ಅಣ್ಣ-ಅತ್ತಿಗೆ ಇಬ್ಬರಿಗೂ ನನ್ನ ಪರಿಚಯವಾಗಲಿಲ್ಲ. ೨೩.೧೨.೦೯ ಮತ್ತು ೨೪.೧೨.೦೯ ಈ ಎರಡೂ ದಿನ ನಾಸಿಕ್ ದಲ್ಲಿ ವಿಶ್ರಾ೦ತಿ ಪಡೆದೆ.
ಹದಿನೆಂಟನೆಯ ದಿನ (೨೫.೧೨.೦೯) ನಾನು ನಾಸಿಕ್ ನಿಂದ ಹೊರಟು ಕಸಾರಾ ಘಾಟನ್ನು ಸಲೀಸಾಗಿ ಇಳಿದು ಸುಮಾರು ೧೫೦ ಕಿ.ಮಿ. ದೂರವನ್ನು ಕ್ರಮಿಸಿ ಅದೇ ದಿನ ಸಂಜೆ ೭.೩೦ ಗ೦ಟೆಗೆ ನವಿ-ಮುಂಬೈ CBD ಬೇಲಾಪುರ ತಲುಪಿದೆ. ರಾತ್ರಿ ನನ್ನ ಭಾವನವರ ಮನೆಯಲ್ಲಿ ಕಳೆದೆ.
ಮರುದಿನ ೨೬,೧೨,೦೯ ರ ಬೆಳಿಗ್ಗೆ CBD ಬೇಲಾಪುರದಿ೦ದ ಹೊರಟು ಬೆಳಿಗ್ಗೆಯ ೮.೩೦ ರ ಸುಮಾರಿಗೆ ಬಾ೦ದ್ರಾ (ಪೂರ್ವ) ನನ್ನ ತಮ್ಮನ ಮನೆಗೆ ಬ೦ದೆ. ನನ್ನ ತಮ್ಮ ಟೀವಿ ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟ / ಸರ್ವಿಸಿ೦ಗ್ ಮಾಡುತ್ತಾನೆ. ನಾನು ಮನೆಯ ಬಾಗಿಲಿನ ಬೆಲ್ ಒತ್ತಿದಾಗ ನಾನು ಎಣಿಸಿದ೦ತೆ ಅವನಿಗೆ ನನ್ನ ಗುರುತು ಹಿಡಿಯಲಾಗಲಿಲ್ಲ. ನಾನು ಫಾರಿನರ್ ಧಾಟಿಯಲ್ಲಿ ಹೇಳಿದೆ "I have come from Bandra West Carter Road. A friend of mine has referred your name to me for getting my imported TV repaired". ನನ್ನ ತಮ್ಮ ನಿಜವೆ೦ದು ನ೦ಬಿ ಅಡ್ರೆಸ್ ನೋಟ್ ಮಾಡಲು ಡೈರಿ ತೆಗೆದ. ನಾನು ಗಾಗಲ್ ತೆಗೆದಾಗ ಒ೦ದು ಕ್ಷಣಕ್ಕೆ ದಿಗ್ಭ್ರಮೆಯಾಗಿ ನನ್ನ ಗುರುತು ಹಿಡಿದ.
ಸಯಾನ್ - ಬಾ೦ದ್ರಾ ದಾರಿ
೨೭,೧೨,೦೯ ಕ್ಕೆ ನಾನು ಸೈಕಲ್ ನಲ್ಲಿ ಅ೦ಧೇರಿ, ಗೊರೇಗಾ೦ವ್ ಎಲ್ಲಾ ಕಡೆ ತಿರುಗಾಡಿ ಬ೦ದೆ.
೨೮.೧೨.೦೯ ಕ್ಕೆ ನಾನು ಮುಂಬೈನಿಂದ ವೊಲ್ವೊ ಬಸ್ಸಿನ ಲಗೆಜ್ ಕಂಪಾರ್ಟ್ಮೆಂಟ್ ನಲ್ಲಿ ನನ್ನ ಸೈಕಲ್ ಹಾಕಿ ೨೯.೧೨.೦೯ ಕ್ಕೆ ಬೆಳಿಗ್ಗೆ ೧೧ ಗ೦ಟೆಗೆ ಬೆಂಗಳೂರ್ ಕೆ.ಆರ್. ಮಾರ್ಕೇಟ್ ತಲುಪಿದೆ. ಲಗ್ಗೆಜ್ ಕಂಪಾರ್ಟ್ಮೆಂಟ್ ನಿ೦ದ ಸೈಕಲ್ ನ್ನು ಹೊರ ತೆಗೆದು, ಬಿಡಿಸಿದ ಸೈಕಲ್ ಚಕ್ರಗಳನ್ನು ಜೋಡಿಸಿ ೨೫ ಕಿ.ಮಿ. ಪೆಡಲ್ ಮಾಡಿ ಮಧ್ಯಾನ್ನ ಸುಮಾರು ೧ ಗ೦ಟೆಗೆ ಸುರಕ್ಷಿತವಾಗಿ ನನ್ನ ವೈಟ್ಫೀಲ್ಡ್ ಮನೆ ತಲುಪಿದೆ. ೨೦ ದಿನಗಳ ನನ್ನ ಸೈಕಲ್ ಟೂರ್ ಯಶಸ್ವಿಯಾಗಿ ನಾನು ಸುರಕ್ಷಿತವಾಗಿ ಮನೆ ತಲುಪಿದ್ದು ನೋಡಿ ನನ್ನ ಹೆಂಡತಿ ಸಮಾಧಾನದ ಉಸಿರು ಬಿಟ್ಟಳು.
ಈ ಟೂರಿನಿಂದ ನನ್ನ ತೂಕವು ೫ ಕಿಲೊ ಗ್ರಾಮ ಕಡಿಮೆ ಆಗಿದ್ದಲದೆ ನನ್ನ ಪ್ಯಾಂಟಿನ ಅಳತೆ ೩೪" ನಿಂದ ೩೨" ಗೆ ಇಳಿಯಿತು. ಬಾಡಿ ಮಾಸ್ ಇಂಡೆಕ್ಸ್ (BMI) ಸೈಕಲ್ ಪ್ರವಾಸದ ನಂತರ ಉತ್ತಮವಾಗಿ ತೋರಿಸುತ್ತಲಿದೆ. ಎಲ್ಲದಕ್ಕಿಂತ ಹೆಚ್ಚಿನ ಸಂತೋಷವೆಂದರೆ ೨೦ ದಿನಗಳಲ್ಲಿ ೧೮೦೦ ಕಿ.ಮಿ. ಪೆಡ್ಲಿ೦ಗ್ ಮಾಡಿ ಗುರಿ ಮುಟ್ಟಿದ ಸಮಾಧಾನ ಮತ್ತು ಸೈಕಲ್ ಪ್ರವಾಸದ ಸುಖಾನುಭವ ಅಲ್ಲದೆ ಆ ಅನುಭವವನ್ನು ಸೈಕಲ್ ನಿಂದಲೆ ಅನುಭವಿಸಲು ಸಾಧ್ಯ ಎಂದು ಮನಗಂಡಿದ್ದು.
(ಮುಗಿಯಿತು)