ಪ್ರೊಫೆಸರ್ ರಾಜೇಂದ್ರ ಚೆನ್ನಿ ಬರೆಯುವ ಲೋಕದ ಅತ್ಯುತ್ತಮ ಕಥಾ ಬರಹಗಳ ಕುರಿತ ಸರಣಿ ಇನ್ನು ಮುಂದೆ ಕೆಂಡಸಂಪಿಗೆಯಲ್ಲಿ ಕಂತುಕಂತಾಗಿ ಮೂಡಿಬರಲಿದೆ. ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುವ ಇಸಾಬೆಲ್ ಅಯೆಂದೇಯವರ ಕಾದಂಬರಿ ‘ಇವಾ ಲೂನಾ'ದ ಕುರಿತ ಈ ಬರಹದೊಂದಿಗೆ ಈ ಸರಣಿ ಆರಂಭಗೊಳ್ಳುತ್ತಿದೆ.
`ನನ್ನ ಹೆಸರು ಈವಾ, ಅಂದರೆ ಜೀವನ...' ಹೀಗೆ ಶುರುವಾಗುತ್ತದೆ ಇವಾ ಲೂನಾಳ ವಿಚಿತ್ರವಾದ ಕಥೆ. ಅದನ್ನು ಅವಳು ತನ್ನ ಜೀವನ ಚರಿತ್ರೆಯ ಹಾಗೆ ಹೇಳುತ್ತಾ ಹೋಗುತ್ತಾಳೆಯಾದರೂ ಹಾಗಂತ ಎಲ್ಲವನ್ನೂ ನಂಬುವ ಹಾಗಿಲ್ಲ. ಏಕೆಂದರೆ, ಅವಳು ಕತೆಗಾರ್ತಿ. ಚಿಕ್ಕ ಹುಡುಗಿಯಾದಾಗಿನಿಂದ ತನ್ನ ಕಲ್ಪನೆಯಲ್ಲಿ ಕತೆಗಳನ್ನು ನೇಯುತ್ತಾ ಅವುಗಳನ್ನು ಹೇಳುವುದರ ಮೂಲಕವೇ ಬದುಕುವ ದಾರಿ ಕಂಡುಕೊಂಡವಳು. ಕತೆ ಹೇಳುವುದು ಅವಳಿಗೆ ಬಳುವಳಿಯಾಗಿ ಬಂದಿದ್ದು ಅವಳ ತಾಯಿಯಿಂದ. ತಾಯಿ ಕೊನ್ಸುಯಲೋ ಕೂಡ ಕತೆಗಳ ಮೂಲಕವೇ ತನ್ನ ಜಗತ್ತನ್ನು ಸೃಷ್ಟಿಮಾಡಿಕೊಂಡಿದ್ದವಳು. ಹಾಗಂತ ಈ ಕಥೆಯಲ್ಲಿ ನಿಜ ಯಾವುದು? ಕಲ್ಪನೆಯಿಂದ ಬಂದದ್ದು ಯಾವುದು? ಎಂದು ಕೇಳುವುದರಿಂದ ಪ್ರಯೋಜನವಿಲ್ಲ. ಏಕೆಂದರೆ, ಇಲ್ಲಿ ವಾಸ್ತವವೂ ಕೂಡ ಕತೆಗಳಿಂದಲೇ ಸೃಷ್ಟಿಯಾಗುತ್ತದೆ.
ಇವಾ ಲೂನಾ ಚಿಲಿ ದೇಶದ, ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುವ ಇಸಾಬೆಲ್ ಅಯೆಂದೇ ಬರೆದ ಕಾದಂಬರಿ. ಅಯೆಂದೆ ಕೂಡ ಲ್ಯಾಟಿನ್ ಅಮೇರಿಕನ್ ದೇಶಗಳ ಮಾಂತ್ರಿಕ ವಾಸ್ತವವಾದಿ ಕಾದಂಬರಿ ಸಂಪ್ರದಾಯದಲ್ಲಿ ಬರೆಯುವ ಲೇಖಕಿ. ಈ ಸಂಪ್ರದಾಯವು ಒಂದು ರೀತಿಯಲ್ಲಿ ಪುರುಷಕೇಂದ್ರಿತವಾದುದು. ಅಷ್ಟು ಮಾತ್ರವಲ್ಲ, ಲ್ಯಾಟಿನ್ ಅಮೇರಿಕನ್ ಸಮಾಜಗಳು ಆಧುನಿಕ ಯುಗದಲ್ಲಿಯೂ machismo ಎನ್ನುವ ಹೆಸರಿನಲ್ಲಿ ಪುರುಷತ್ವವನ್ನು ಆರಾಧಿಸುವ ಸಂಪ್ರದಾಯ ಹೊಂದಿವೆ. ಇದು ಅನೇಕ ಛದ್ಮರೂಪಗಳಲ್ಲಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಸಾಹಿತ್ಯವೂ ಸೇರಿದಂತೆ ಸಂಸ್ಕೃತಿಯ ಕ್ಷೇತ್ರದಲ್ಲಿ ಪುರುಷ ಪ್ರಾಧಾನ್ಯವು ಬಲಿಷ್ಠವಾಗಿದೆ. ಇವುಗಳ ಮಧ್ಯೆ ಸ್ತ್ರೀಪರ ಚಿಂತನೆ, ಸ್ತ್ರೀವಾದಿ ಚಳುವಳಿಗಳೂ ಬೆಳೆದುಬಂದದ್ದು ವಿಶೇಷವಾಗಿದೆ. ಇಂಥ ಸನ್ನಿವೇಶದಲ್ಲಿ ಯಾವುದೇ ಸಿದ್ಧಾಂತವನ್ನೂ ಹೆಚ್ಚಾಗಿ ಅನುಸರಿಸದೇ, ಅಪಾರವಾದ ಜೀವನ ಪ್ರೀತಿಯಿಂದ ಬರೆಯುವ ಅಯೆಂದೇ ತಮ್ಮ ಕಾವ್ಯಮಯ ಶೈಲಿ, ಪ್ರಯೋಗಶೀಲ ಕಥನಕ್ರಮ ಹಾಗೂ ಸ್ವಚ್ಛಂದದಿಂದಾಗಿ ಆಕರ್ಷಕವಾದ ಕತೆ, ಕಾದಂಬರಿಗಳನ್ನು ಬರೆದಿದ್ದಾರೆ. ಹೆಣ್ಣಿನ ಜೀವನೋತ್ಸಾಹ, ಲೈಂಗಿಕತೆ, ಪ್ರೀತಿಯ ಹುಡುಕಾಟ ಇವುಗಳನ್ನು ಎಗ್ಗಿಲ್ಲದಂತೆ ವರ್ಣಿಸುವುದರ ಮೂಲಕ ಪರೋಕ್ಷವಾಗಿ ಪುರುಷ ಪ್ರಾಧಾನ್ಯವನ್ನು ಪ್ರಶ್ನಿಸಿದ್ದಾರೆ.
ಅರೇಬಿಯನ್ ನೈಟ್ಸ್ ನ ಶಹರಜಾದೆಯಂತೆ ಇವಾ ಲೂನಾಳಿಗೆ ಕೂಡ ಕತೆ ಹೇಳುವುದರ ಮೂಲಕವೇ ಬದುಕಬೇಕಾಗಿದೆ. ಕತೆಗಳ ಮೂಲಕ ಕಷ್ಟಕರವಾದ ತನ್ನ ಬದುಕನ್ನು ಸಹನೀಯವಾಗಿ ಮಾತ್ರವಲ್ಲ ರೋಚಕವಾಗಿಸಿಕೊಳ್ಳುತ್ತಾಳೆ. ಅವಳ ತಾಯಿ ಕೊನ್ಸುಯಲೋ ಮತ್ತು ಇಂಡಿಯನ್ ಬುಡಕಟ್ಟಿನ ಅಪರಿಚಿತನ ಸಂಗದಿಂದಾಗಿ ಹುಟ್ಟಿದ ಇವಾಳ ಬಾಲ್ಯ ಸಾಮಾನ್ಯವಾದುದಲ್ಲ. ಶವಗಳನ್ನು ಕೊಳೆಯದಂತೆ ರಕ್ಷಿಸುವ ವಿದ್ಯೆ ಬಲ್ಲ ವೈದ್ಯನೊಬ್ಬನ ಸಹಾಯಕಳಾದ ಕೊನ್ಸುಯಲೋ ಇವಾಳನ್ನು ಬೆಳೆಸುವುದು ಶವಗಳು, ಅರ್ಥವಾಗದ ಲ್ಯಾಟಿನ್ ಭಾಷೆಯ ಗ್ರಂಥಗಳು ಹಾಗೂ ವಿಕ್ಷಿಪ್ತ ವೈದ್ಯನ ಗೊಣಗಾಟಗಳ ಮಧ್ಯೆ. ತಾಯಿಯಿಂದ ಬದುಕುವ ಛಲವನ್ನೂ ಕತೆಗಾರಿಕೆಯನ್ನು ಪಡೆವ ಇವಾ ತಾಯಿಯ ಸಾವಿನ ನಂತರ ವಿಚಿತ್ರ ಸನ್ನಿವೇಶಗಳಲ್ಲಿ, ವಿಕ್ಷಿಪ್ತ ಹೆಂಗಸರ ದೇಖರೇಖಿಯಲ್ಲಿ ಬೆಳೆಯುತ್ತಾಳೆ. ಅದರಲ್ಲಿ ಒಬ್ಬಳು ಅಧಿಕಾರಿಗಳಿಗೆ, ಪೊಲೀಸರಿಗೆ ಸೇರಿದಂತೆ ಎಲ್ಲರಿಗೂ ಬೇಕಾದ ವೇಶ್ಯಾವಾಟಿಕೆಯನ್ನು ನಡೆಸುವವಳು. ಅಲ್ಲಿ ಬಾಲ್ಯದ ಸ್ನೇಹಿತನ ಸಹಾಯದಿಂದ ಇವಾ ಬದುಕುವ ಗಟ್ಟಿಗತನವನ್ನು ಕಲಿಯುತ್ತಾಳೆ.
ಅಲ್ಲಿಂದಾಚೆಗೆ ಅವಳ ಅಲೆಮಾರಿ ಜೀವನದ ಒಂದೊಂದೇ ಘಟ್ಟಗಳು ಶುರುವಾಗುತ್ತವೆ. ಪ್ರತಿ ಹಂತದಲ್ಲಿಯೂ ವಿಕ್ಷಿಪ್ತ ವ್ಯಕ್ತಿತ್ವ ನಡವಳಿಕೆ ಹಾಗೂ ನಂಬಿಕೆಗಳ ಹಲವಾರು ವ್ಯಕ್ತಿಗಳ ಸಂಗಾತಿತನದಲ್ಲಿ ಇವಾ ಬೆಳೆಯುತ್ತಾಳೆ. ತನ್ನ ವ್ಯಕ್ತಿತ್ವ, ಲೈಂಗಿಕತೆ ಹಾಗೂ ಪ್ರೀತಿಯ ತೀವ್ರತೆಗಳನ್ನು ಕಂಡುಕೊಳ್ಳುತ್ತಾಳೆ. ಮಧ್ಯಮವರ್ಗದ ಹೆಣ್ಣು ತೀರಾ ಸಾಮಾನ್ಯವಾದ ಕೌಟುಂಬಿಕ ಸಂದರ್ಭಗಳಲ್ಲಿ ಬೆಳೆದು ಪ್ರಬುದ್ಧಳಾಗುವುದನ್ನು ಜೇನ್ ಆಸ್ಟೆನ್ ತನ್ನ ಕಾದಂಬರಿಗಳಲ್ಲಿ ವರ್ಣಿಸುವುದರಿಂದ, ಇವಾ ಲೂನಾ ಇಂಥ ಮಾದರಿಯನ್ನು ಅದ್ಭುತವಾಗಿ ಅಣಕುಮಾಡಿ ಬುಡಮೇಲು ಮಾಡುತ್ತದೆ. ಇದೂ ಇವಾಳ ಶಿಕ್ಷಣದ ಕತೆಯೇ. ಆದರೆ ಪ್ರಕ್ಷುಬ್ಧ ದೇಶವಾದ ಚಿಲಿಯ ಗಲ್ಲಿಗಳಲ್ಲಿ, ವೇಶ್ಯಾವಾಟಿಕೆಗಳಲ್ಲಿ, ಕ್ರಾಂತಿಕಾರಿಗಳ ಶಿಬಿರಗಳಲ್ಲಿ ಈ ಶಿಕ್ಷಣ ನಡೆಯುತ್ತದೆ. ಇವಾ ಸುರಕ್ಷಿತ ಮಧ್ಯಮವರ್ಗದ ನಯ-ನಾಜೂಕಿನ ಹೆಣ್ಣು ಮಗು ಅಲ್ಲ. ಚಿಲಿ ದೇಶದ ರಾಜಕೀಯದಂತೆ ಅತಾರ್ಕಿಕವಾಗಿ ಬದಲಾಗುವ ಬದುಕಿನ ಸನ್ನಿವೇಶಗಳಲ್ಲಿ ಬದುಕಲಿಕ್ಕಾಗಿ ಏನನ್ನೂ ಮಾಡಲು ಸಿದ್ಧಳಿರುವ ಗಟ್ಟಿಗಿತ್ತಿ ಅವಳು. ಅವಳ ಶಿಕ್ಷಕರು ಧಾರ್ಮಿಕ ಹುಚ್ಚಿನ ಎಲ್ಟಿರಾ, ವೇಶ್ಯಾವಾಟಿಕೆಯ ಒಡತಿಯಾದ ಪೆತ್ರೋನಾ, ಬೀದಿಗಳ್ಳನಾದ ನರಾನೋ, ಉಭಯಲಿಂಗಿಯಾದ ............ ಮುಂತಾದವರು.
ಇಡೀ ಕಾದಂಬರಿ ಮಧ್ಯಮವರ್ಗದ ಸಜ್ಜನಿಕೆಯ ಮೌಲ್ಯಗಳನ್ನು ಅಕ್ಷರಶಃ ಚಿಂದಿ ಉಡಾಯಿಸುತ್ತದೆ. ಅಷ್ಟು ಮಾತ್ರವಲ್ಲ, ವ್ಯಕ್ತಿತ್ವ, ಗುರುತು ಇವೇ ಮುಂತಾದ ಜಡವಾದ ಪರಿಕಲ್ಪನೆಗಳನ್ನೇ ಛಿದ್ರಗೊಳಿಸುತ್ತದೆ. ಇವಾಳ ಗೆಳೆಯ ಗೆಳತಿಯರು ಹಲವಾರು ಜನಾಂಗ, ದೇಶ ಹಾಗೂ ಧರ್ಮಗಳಿಗೆ ಸೇರಿದವರು. ಅವರಾರಿಗೂ ರಾಷ್ಟ್ರ, ಸಮಾಜ ಧರ್ಮಗಳ ಗುರುತುಗಳು ಮುಖ್ಯವಾಗಿಲ್ಲ. ಒಂದು ರೀತಿಯಲ್ಲಿ ಇವೆರೆಲ್ಲರದೂ ತಮ್ಮದೇ ಆದ ಗುಪ್ತ ಸಮಾಜ. ಸ್ವೀಕೃತ ಮೌಲ್ಯಗಳ ದೃಷ್ಟಿಯಲ್ಲಿ ಹಾಗೂ ರಾಷ್ಟ್ರದ ಕಾನೂನಿನ ದೃಷ್ಟಿಯಲ್ಲಿ ಇವರೆಲ್ಲ ಅಪರಾಧಿಗಳಿರಬಹುದು. ಆದರೆ, ಪ್ರೀತಿ, ಗೆಳೆತನ, ಸಾಹಸಪ್ರಿಯತೆ ಹಾಗೂ ವೈಯಕ್ತಿಕ ಸಂಬಂಧಗಳ ನಿಷ್ಠೆಯಿಂದ ತಮ್ಮದೇ
ವಿಚಿತ್ರ ನೈತಿಕತೆ ಉಳ್ಳವರು.
ಸ್ವತಃ ಇವಾಳಿಗೆ ಒಂದೇ ವ್ಯಕ್ತಿತ್ವವಿಲ್ಲ. ಅವಳು ಹರಿವ ನದಿಯಂತೆ ಪಾತ್ರ ಬದಲಾಯಿಸುತ್ತಾಳೆ. ಅವಳೇನು ಸ್ತ್ರೀವಾದಿಯೂ ಅಲ್ಲ, ಕ್ರಾಂತಿಕಾರಿಯೂ ಅಲ್ಲ. ಗಂಡಸಿನ ಪ್ರೀತಿ ಅವಳಿಗೆ ಬೇಕು. ಅದನ್ನು ಮುಕ್ತವಾಗಿ, ಸ್ವಚ್ಛಂದವಾಗಿ ಹುಡುಕಿ ಪಡೆಯುತ್ತಾಳೆ. ಅವಳಿಗೆ ನೈತಿಕ ಕಟ್ಟಳೆಗಳ ಬಂಧನವಿಲ್ಲ. ಏಕೆಂದರೆ, ಅವಳ ಹೆಸರೇ ಇವಾ - ಜೀವನ.
ಇವಾಳ ರೋಚಕ, ಸಾಹಸಮಯ ಬದುಕಿನ ಹಿನ್ನೆಲೆಯಾಗಿ ಚಿಲಿ ದೇಶದ ರಾಜಕೀಯವಿದೆ. ಹಲವಾರು ಸರ್ವಾಧಿಕಾರಿಗಳು, ಮಿಲಿಟರಿ ಆಡಳಿತಗಾರರು ಕಾದಂಬರಿಯಲ್ಲಿ ವ್ಯಂಗ್ಯಚಿತ್ರಗಳಂತೆ ಬಂದುಹೋಗುತ್ತಾರೆ. ಅವರಿಂದಾಗಿ ಚಿಲಿ ಯಾವಾಗಲೂ ಪ್ರಕ್ಷುಬ್ಧವಾಗಿ ವಿಪ್ಲವಗಳಿಂದ ಕೂಡಿರುತ್ತದೆ. ಕಾದಂಬರಿ ಈ ಹುಚ್ಚು ರಾಜಕೀಯವನ್ನು ಅದ್ಭುತವಾಗಿ ವಿಡಂಬನೆ ಮಾಡುವುದರ ಮೂಲಕ ವಿದ್ರೋಹದ ಕೆಲಸವನ್ನು ಮಾಡುತ್ತದೆ. ಇವಾಳಂಥ, ಅವಳ ಸಂಗಾತಿಯಂಥ ಜನಸಾಮಾನ್ಯರನ್ನು ತನ್ನ ತೆವಲುಗಳಿಗಾಗಿ ಬೇಟೆಯಾಡುವ, ಬಂಧಿಸುವ ಕ್ರೂರ ರಾಜಕೀಯವನ್ನು ಕಾದಂಬರಿ ವಿಡಂಬನೆಯ ಮೂಲಕ ಗುರುತಿಸುತ್ತದೆ. ಹೀಗಾಗಿ ಇಡೀ ಕಾದಂಬರಿ ಸ್ವೀಕೃತ ಮೌಲ್ಯಗಳು, ಅಧಿಕಾರಸ್ಥ ರಾಜಕೀಯ ಹಾಗೂ ಲೈಂಗಿಕ ಕಟ್ಟಳೆಗಳನ್ನು ಭಗ್ನಗೊಳಿಸುತ್ತದೆ.
ಇವಾ ಲೂನಾ ಕಾದಂಬರಿಯ ಆಕರ್ಷಣೆಯಿರುವುದು ಅದರ ಕಥನದ ರಂಜಕ, ಉತ್ಸಾಹಭರಿತ ಶೈಲಿಯಲ್ಲಿ ಮತ್ತು ಭಾಷೆಯ ಅಪೂರ್ವವಾದ ಶಕ್ತಿಪೂರ್ಣತೆಯಲ್ಲಿ. ಅಯೆಂದೆ ಅವರ ಭಾಷೆ ಸಹಜವಾಗಿಯೇ ರೂಪಕನಿಷ್ಠವಾದ ಭಾಷೆ. ವಸ್ತುಪ್ರಪಂಚವನ್ನು, ಮನುಷ್ಯಪ್ರಪಂಚವನ್ನು ಕಣ್ಣಿಗೆ ಮೂರ್ತವಾಗಿ ಚಿತ್ರಕಟ್ಟುವಂಥ ರೂಪಕ ಭಾಷೆ. ಅಲ್ಲದೇ ನಿರೂಪಕಿಯಾದ ಇವಾ ಲೂನಾಳ ಸೃಜನಶೀಲ ಕಲ್ಪನಾಶಕ್ತಿ ಬರಡು ವಾಸ್ತವವನ್ನು ತನ್ನ ಬಣ್ಣಗಳಿಂದ ಚಂದವಾಗಿಸದೇ ನೋಡುವುದಿಲ್ಲ. ಹೀಗಾಗಿ ಇವಾ ಲೂನಾ ಕಾದಂಬರಿಯನ್ನು ಓದುವುದೆಂದರೆ ತನ್ನ ಸಂಪೂರ್ಣ ಶರೀರದೊಂದಿಗೆ ಅವತರಿಸಿರುವ ಕಾದಂಬರಿ ಪ್ರಪಂಚವೊಂದನ್ನು ಪ್ರವೇಶಿಸಿದಂತೆ.
[ಮುಂದಿನ ವಾರ: ಖಾಲಿದ್ ಹೊಸೈನಿ ಅವರ ಕಾದಂಬರಿ ಎ ಥೌಸಂಡ್ ಸ್ಪ್ಲೆಂಡಿಡ್ ಸನ್ಸ್]