ಅಕ್ಟೋಬರ್ ೨, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
‘ಗಜ಼ಲ್’ ಎಂಬ ಪ್ರೇಮಗೀತೆಗಳ ಕುರಿತು ಫಕೀರ್ ಬರೆದದ್ದು    
ಫಕೀರ್ ಮುಹಮ್ಮದ್ ಕಟ್ಪಾಡಿ
ಗುರುವಾರ, 29 ಡಿಸೆಂಬರ್ 2011 (01:04 IST)
(ಪ್ರೇಮಕವಿ ಹಫೀಜ್)

ಗಜ಼ಲ್ ಕಾವ್ಯ ಪ್ರಕಾರ ಉರ್ದು ಸಾಹಿತ್ಯದ ಜನಪ್ರಿಯ ಭಾಗ. ಜನಪ್ರಿಯ ಎಂದ ಕೂಡಲೇ ಗಂಭೀರ ಸಾಹಿತ್ಯದ ಭಾಗವಲ್ಲವೆಂಬ ಅಭಿಪ್ರಾಯ ಮೂಡುವುದು ಸಹಜ. ಆದರೆ ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜ಼ಲ್ ಗಂಭೀರ ಕಾವ್ಯವೂ ಹೌದು. ಶೃಂಗಾರ, ಪ್ರೇಮ, ವಿರಹಗೀತೆಯೂ ಹೌದು. ಪ್ರಿಯತಮೆಯೊಂದಿಗೆ ಮಾಡುವ ಸರಸಸಲ್ಲಾಪವೂ ಆಗಿರಬಹುದು, ಅಗಲಿದ ಪ್ರಿಯತಮೆ ವಿರಹವೇದನೆಯನ್ನು ತೋಡಿಕೊಳ್ಳುವ ಮಾರ್ಗವೂ ಆಗಬಹುದು. ಈ ಗಜ಼ಲ್‌ನ ಮೂಲ ಫಾರಸಿ ಜಾನಪದ ಕಾವ್ಯದಲ್ಲಿದೆ ಎಂಬ ಅಭಿಪ್ರಾಯವಿದೆ. ಗಜ಼ಲ್ ಅಂದರೆ ಪಾರಸಿ ಭಾಷೆಯಲ್ಲಿ ಜಿಂಕೆ, ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಮಾನವನಿಗೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾರಸವನ್ನೊಳಗೊಂಡ ‘ಗಜ಼ಲ್’ ಎಂದು ಅರ್ಥೈಸುತ್ತಾರೆ. ಫಾರಸಿ ಭಾಷೆಯ ಕಾವ್ಯಪ್ರಕಾರಲ್ಲಿ ಗಜ಼ಲ್ ಸಮೃದ್ಧವಾಗಿದೆ. ಗಜ಼ಲ್ ಪದ್ಯಗಳಿಗೆ ಅರಸರ ಆಸ್ತಾನದ ಹೊಗಳು ಭಟ್ಟರ ಪ್ರಶಂಸೆಯ ‘ಖಾಸಿದಾ’ ಎಂಬ ೬ನೇ ಶತಮಾನದ ಅರಬಿ ಪದ್ಯಗಳು ಮೂಲವೆಂದೂ ಮತ್ತೊಂದು ಹೇಳಿಕೆಯಿದೆ. ಸ್ವರೂಪದಲ್ಲಿ ಗಜ಼ಲ್ ‘ಷೇರ್’ ಎಂಬ ದ್ವಿಪದಿಯಲ್ಲಿದ್ದು, ಒಂದು ದ್ವಿಪದಿ ಇನ್ನೊಂದು ದ್ವಿಪದಿಯ ಸಾಲುಗಳೊಂದಿಗೆ ಸಂಬಂಧವಿಟ್ಟುಕೊಳ್ಳಬೇಕಾದ ನಿಯಮವಿಲ್ಲ. ಗಜ಼ಲ್‌ನ ದ್ವಿಪದಿಗಳು ಸ್ವತಂತ್ರವಾಗಿಯೂ ಇರಬಹುದು. ಒಂದು ಗಜ಼ಲ್‌ನಲ್ಲಿ ಸಾಧಾರಣವಾಗಿ ೫ ರಿಂದ ೨೧ರಷ್ಟು ದ್ವಿಪದಿಗಳಿರುತ್ತವೆ. ಕನ್ನಡದ ಭಾವಗೀತೆಗಳಿಗೆ ಹೋಲಿಸಬಹುದಾದ ಗಜ಼ಲ್, ಸಂಕೇತಗಳ ಮೂಲಕ ವ್ಯಕ್ತಪಡಿಸುವ ಸೂಕ್ಷ್ಮ, ವಿವಶತೆಯ ದಿವ್ಯ ಭಾವತರಂಗಗಳು ಮತ್ತು ಕರುಣಾರಸ ಪ್ರಧಾನವಾದ ದ್ವಪದಿಗುಚ್ಛಗಳು. ಮತ್ಲಾ, ಕಾಫಿಯಾ, ರದೀಪ್ ಮತ್ತು ಮುಕ್ತಾ ಎಂಬ ಸೂತ್ರಗಳು ಗಜ಼ಲ್‌ನ ಮುಖ್ಯ ಲಕ್ಷಣಗಳಾಗಿವೆ. ಮತ್ಲಾ ಗಜ಼ಲ್‌ನ ಮೊದಲ ದ್ವಿಪದಿ ಅಥವಾ ಷೇರ್. ಕಾಫಿಯಾ ಮತ್ತು ರದೀಪ್ ಎಂಬುದನ್ನು ಪಲ್ಲವಿ, ಅನುಪಲ್ಲವಿಯೆಂದು ನಾವು ಅರ್ಥೈಸಬಹುದು. ಮುಕ್ತಾ ಗಜ಼ಲ್‌ನ ಕೊನೆ ಮತ್ತು ಗಜ಼ಲ್‌ನ ಮುಕ್ತಾಯ ಚರಣದಲ್ಲಿ ಕವಿ ತನ್ನ ‘ತಖಲ್ಲುಸ್’ ಯಾ ಕಾವ್ಯನಾಮವನ್ನು ಸೇರಿಸುತ್ತಾನೆ. ಪ್ರಾಸ, ಲಯ ಮತ್ತು ಅಲಂಕಾರಗಳು ಕೂಡ ಸಾಕಷ್ಟು ಮಿತಿಯಲ್ಲಿ ಬಳಸಲಾಗುತ್ತದೆ.

ಉರ್ದು ಸಾಹಿತ್ಯ

ಉರ್ದು ಭಾಷೆಯ ಸಾಹಿತ್ಯ ಭಾರತದಲ್ಲಿ ೧೨ನೆಯ ಶತಮಾನದಲ್ಲಿ ಹುಟ್ಟಿಕೊಂಡಿತೆಂಬ ಮಾಹಿತಿಸಿಗುತ್ತದೆ. ಸೂಫಿ ಸಂತರು ಜನರೊಂದಿಗೆ ಬೆರೆಯಲು ಬಳಸುತ್ತಿದ್ದ ಜನರ ಭಾಷೆಯಾದ ಹಿಂದವಿ, ಕಡಿಬೋಲಿ ಮುಂತಾದ ಮೂಲ ಭಾಷೆ, ಅರಸರ ಆಸ್ಥಾನದ ಫಾರಸಿ ಭಾಷೆಯೊಂದಿಗೆ ಸಂಕರಗೊಂಡು ಹುಟ್ಟಿದ ಭಾಷೆ ಉರ್ದು. ಇವು ಸೈನಿಕರ ದಂಡಿನ ಬೀಡುಗಳಲ್ಲಿ ಹುಟ್ಟಿದ ಭಾಷೆಯೆನ್ನಲಾಗುತ್ತದೆ. ಈ ಭಾಷೆಯನ್ನು ಸಮೃದ್ಧಗೊಳಿಸುವುದರಲ್ಲಿ ಸೂಫಿ ಸಂತರದ್ದು ಬಹು ಮುಖ್ಯ ಪಾತ್ರವಿದೆ. ಸೂಫಿ ಸಂತ ಕವಿ ಅಮೀರ್ ಖುಸ್ರೋ (೧೨೫೩-೧೩೨೫)ಪ್ರಥಮ ಉರ್ದು ಕವಿಯೆನ್ನಲಾಗುತ್ತದೆ. ಜೊತೆಗೆ ಕರ್ನಾಟಕದ ಸೂಫಿ ಸಂತ ಕಲಬುರ್ಗಿಯ ಖ್ವಾಜಾ ಬಂದೇ ನವಾಜ಼್ ಗೀಸುದಿರಾಜ್(೧೩೨೧-೧೪೨೨) ಉರ್ದು ಗದ್ಯ ಪ್ರಕಾರದ ಮೊದಲ ಬರಹಗಾರರೆಂದು ಗುರುತಿಸಲಾಗಿದೆ. ಹೀಗೆ ಉರ್ದುಭಾಷೆಯ ಕರ್ನಾಟಕ ಮತ್ತು ಕನ್ನಡದ ಜೊತೆಗಿನ ಸಂಬಂಧ ಅತ್ಯಂತ ಮೂಲದ್ದು. ಕನ್ನಡ ಭಾಷೆಗಿರುವ ಹೆಚ್ಚುಕಮ್ಮಿ ಹದಿನೈದು ಶತಮಾನಗಳ ಹಿರಿತನದ, ಭವ್ಯ ಪರಂಪರೆಯ ಎದುರು ಉರ್ದು ತೀರ ಇತ್ತೀಚಿನ ಭಾಷೆಯಾದರೂ ಈ ಭಾಷೆಯ ಸಾಹಿತ್ಯದ ಬೆಳವಣಿಗೆ ಅದ್ಭುತ ರೀತಿಯದ್ದು. ಉರ್ದು ಆಸ್ಥಾನದ ಆಡಳಿತ ಭಾಷೆಯಾಗುವ ಮುಂಚೆ ಫಾರಸಿ ಭಾಷೆ ದೆಹಲಿಯ ಸುಲ್ತಾನರ ಆಡಳಿತ ಭಾಷೆಯಾಗಿತ್ತು. ಉರ್ದು ಸಾಹಿತ್ಯಕ್ಕೆ ಇದರಿಂದಾಗಿ ಅರಸೊತ್ತಿಗೆಯ ಪ್ರೋತ್ಸಾಹ ದೊರೆಯಿತು. ಮುಖ್ಯವಾಗಿ ಉರ್ದು ಕಾವ್ಯಕ್ಕೆ ಆಸ್ಥಾನದ ಪ್ರೋತ್ಸಾಹದ ಸಿಂಹಪಾಲು ದೊರೆಯಿತು. ಉರ್ದು ಕಾವ್ಯ ವಿಭಾಗದಲ್ಲಿ ಬಜ಼್ಮ, ನಜ್ಮ್, ಗಜ಼ಲ್, ನಾತಾ, ಖವ್ವಾಲಿ ಮುಂತಾದ ಪ್ರಕಾರಗಳು ಬೆಳೆದವು. ಇವುಗಳಲ್ಲಿ ಪ್ರಮುಖವಾದದ್ದು ಗಜ಼ಲ್. ಭಾರತೀಯ, ಫಾರಸಿ, ಅರೆಬಿಕ್, ಈ ಮೂರು ಸಂಸ್ಕೃತಿಗಳ ಮಿಶ್ರ ಕಾವ್ಯಪ್ರಕಾರವೆನಿಸಿದ ಉರ್ದು ಗಜ಼ಲ್, ಇಸ್ಲಾಮಿಕ್ ಜಗತ್ತಿಗೆ ಭಾರತ ನೀಡಿದ ಅಮೂಲ್ಯ ಕೊಡುಗೆಯೆನಿಸಿದೆ.

ಗಜ಼ಲ್ ಕಾವ್ಯಪ್ರಕಾರ ಸರಳ ಮತ್ತು ಆಕರ್ಷಕವಾಗಿರುವುದರಿಂದ ಇವುಗಳಲ್ಲಿ ಅಡಕವಾದ, ಸಾಮಾನ್ಯ ಜನರಿಗೆ ಅಪ್ಯಾಯಮಾನವೆನಿಸುವ ಮನುಷ್ಯನ ಬದುಕಿಗೆ ಸಂಬಂಧಿಸಿದ ಪ್ರೇಮ ವ್ಯಾಖ್ಯೆ, ಮಾನವೀಯ ಮತ್ತು ದೈವಿಕ ಪ್ರೇಮದ ಹಲವು ಸರಳ ಆಧ್ಯಾತ್ಮಿಕ ಆಯಾಮಗಳು ಜನಪ್ರಿಯತೆಗೆ ಮುಖ್ಯಕಾರಣ. ಅನೈತಿಕ ಮತ್ತು ಅಪ್ರಾಪ್ತ ಪ್ರೇಮಕ್ಕೆ ಸೀಮಿತಗೊಂಡು ಪ್ರೇಮದ ಪಾರಂಪರಿಕ ಅರ್ಥವ್ಯಾಪ್ತಿಗೆ ಒಂದು ಕಾಲಘಟ್ಟದಲ್ಲಿ ಗಜ಼ಲ್ ಸೀಮಿತಗೊಂಡಿತ್ತು. ಗಜ಼ಲ್ ಕಾವ್ಯ ಪ್ರಕಾರಕ್ಕೆ ಪ್ರೇಮದ ವಿಶಾಲ ಮತ್ತು ಅತ್ಯಂತ ಮಹತ್ವದ ಆಧ್ಯಾತ್ಮಿಕ ಅರ್ಥವನ್ನು ನೀಡಿದ್ದು ಭಾರತ ಮೂಲದ ಸೂಫಿ ಪಂಥಕ್ಕೆ ಸೇರಿದ ಆಧ್ಯಾತ್ಮಿಕ ಕವಿಗಳು. ಪ್ರೇಮದ ಆಧ್ಯಾತ್ಮಿಕ ಆಯಾಮಗಳನ್ನು ಸೂಫಿ ಪಂಥದ ಸಂತ ಕವಿಗಳು ಗಜ಼ಲ್‌ಗಳ ಮೂಲಕ ದೇವರ ಜೊತೆಗಿನ ಅಲೌಕಿಕ ಪ್ರೇಮ ಸಂಬಂಧವನ್ನು ವ್ಯಕ್ತಪಡಿಸಿದರು. ಪ್ರೇಮ ಮನುಷ್ಯನ ಬದುಕನ್ನು ಪೂರ್ಣಗೊಳಿಸುತ್ತದೆ, ಪ್ರೇಮ ಸಾಕಾರವಾದಲ್ಲಿ ಮನುಷ್ಯನ ಬೌದ್ಧಿಕ ನೆಲೆ ಉತ್ತಮಗೊಳ್ಳುತ್ತದೆ ಎಂದು ಇವರು ಗಜ಼ಲ್‌ಗಳ ಮೂಲಕ ಸಂದೇಶವನ್ನಿತ್ತರು. ಸಂಪ್ರದಾಯಿಕ ಗಜ಼ಲ್‌ಗಳಲ್ಲಿ ಕಾಮದ ನೇರ ಮತ್ತು ಅತಿಯೆನಿಸುವ ವರ್ಣನೆ ಅಥವಾ ಕಾಮೇಚ್ಛೆಯ ವರ್ಣನೆ ಕಾಣಸಿಗದು, ಬದಲಿಗೆ ಆಧ್ಯಾತ್ಮಿಕ ಪ್ರೇಮ ಕಾಣಸಿಗುತ್ತದೆ. ಈ ಪ್ರೇಮ ಗಂಡು ಹೆಣ್ಣಿನ ಮಧ್ಯೆಯೂ ಇರಬಹುದು, ಪರುಷರ ಮಧ್ಯೆಯೂ, ಸ್ನೇಹ ಸಂಬಂಧವೂ ಇರಬಹುದು. ಪಾರಂಪರಿಕ ಧಾರ್ಮಿಕ ಪುರೋಹಿತರು ಅದುವರೆಗೆ ದೇವರಿಗೆ ಭಯಪಡುವ ಮೂಲಕ ಬದುಕು ನೈತಿಕ ಕಡಿವಾಣವನ್ನು ಹಾಕಿಕೊಂಡು ಉಜ್ವಲವಾಗುತ್ತದೆನ್ನುವುದನ್ನು ಕೇಳುತ್ತಿದ್ದ ಸಾಮಾನ್ಯ ಜನರಿಗೆ ಸೂಫಿ ಕವಿಗಳು ಹೇಳುವ ದೈವಿಕ ಪ್ರೇಮದ ಸರಳ ವ್ಯಾಖ್ಯಾನ ಅಪ್ಯಾಯಮಾನಕರವೆನಿಸಿತು. 

ಅಮೀರ್ ಖುಸ್ರೋ

ಉರ್ದು ಕಾವ್ಯ ಪ್ರಕಾರವನ್ನು ಆಸ್ಥಾನದಿಂದ ಮುಕ್ತಗೊಳಿಸಿ ಜನರೆಡೆಗೆ ತರುವುದರಲ್ಲಿಯೂ ಕೂಡ ಸೂಫಿ ಸಂತ ಕವಿಗಳದ್ದು ಬಹುಮುಖ್ಯವಾದ ಕೊಡುಗೆಯಿದೆ. ಸರಳ ಗಜ಼ಲ್‌ಗಳ ಮೂಲಕ ಅಲೌಕಿಕ ಪ್ರೇಮ, ವಿರಹ, ತ್ಯಾಗ, ನಿಷ್ಕಲ್ಮಷ ಬದುಕಿನ ವಿವಿಧ ಆಯಾಮವನ್ನು, ಆಧ್ಯಾತ್ಮವನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಮೂಲಕ ಈ ಪ್ರಕಾರವನ್ನು ಸೂಫಿ ಕವಿಗಳು ಜನಪ್ರಿಯಗೊಳಿಸಿದರು. ಸೂಫಿಗಳಿಂದ ಮತ್ತು ರಾಜಮನೆತನದವರ ಪ್ರೋತ್ಸಾಹದಿಂದ ದಕ್ಷಿಣ ಏಸ್ಯಾದ ಅನೇಕ ದೇಶಗಳಲ್ಲಿ ಗಜ಼ಲ್ ಜನಪ್ರಿಯವಾಯಿತು. ಅಮೀರ್ ಖುಸ್ರೋ ಮತ್ತು ಮೀರ್ ತಖೀ ಮೀರ್, ಗಜ಼ಲ್‌ನ ಅದ್ಭುತ ಪ್ರತಿಭೆಯ ಸೂಫಿ ಕವಿಗಳೆನಿಸಿದರು. ಅಮೀರ್ ಖುಸ್ರೋ ಉರ್ದು ಕಾವ್ಯಕ್ಕೆ, ಅದರಲ್ಲೂ ಮುಖ್ಯವಾಗಿ ಗಜ಼ಲ್ ಪ್ರಕಾರಕ್ಕೆ ಸಂಗೀತದ ಮೆರುಗನ್ನು ನೀಡಿದನಲ್ಲದೆ ಭಾರತದ ಹಿಂದುಸ್ತಾನಿ ಸಂಗೀತಕ್ಕೆ ‘ಖಯಾಲ್’, ‘ತರಾನಾ’ ಮುಂತಾದ ಅನೇಕ ರಾಗಗಳನ್ನು, ತಬ್ಲಾ, ಸಿತಾರ್ ಮುಂತಾದ ವಾದ್ಯಗಳನ್ನು ಪರಿಚಯಿಸಿದ. ತನ್ನ ಪದ್ಯಗಳಲ್ಲಿ ಉತ್ಕಟ ದೇಶಾಭಿಮಾನ ಬೆಳೆಸಿದ ಖುಸ್ರೋ ಭಾರತವನ್ನು ಒಂದು ಸ್ವರ್ಗ ಸದೃಶ ದೇಶವೆಂದು ಹಾಡಿ ಹೊಗಳಿದ. ಅದಕ್ಕೆ ಕಾರಣಗಳನ್ನು ನೀಡಿದ. ಸ್ವರ್ಗದ ಪಕ್ಷಿ ನವಿಲು ಈ ದೇಶದಲ್ಲಿ ಅಡ್ಡಾಡುತ್ತಿದೆ, ಈ ನೆಲದಲ್ಲಿ ದೊಡ್ಡ ದೊಡ್ಡ ನದಿಗಳು ಹರಿಯುತ್ತಿದೆ, ನಳನಳಿಸುವ ಹಸಿರಿನ ತೋಟಗಳು, ಉದ್ಯಾನಗಳು ಇಲ್ಲಿ ವಿಪುಲವಾಗಿವೆ, ಸ್ವರ್ಗದಲ್ಲಿರುವ ಬಂಗಾರವರ್ಣದ ಬಾಳೆ ಹಣ್ಣು ಇಲ್ಲಿ ಹೇರಳವಾಗಿದೆ ಎಂದೆಲ್ಲ ವಿವರಿಸಿದ. ಇವನ ಫಾರಸಿ ದ್ವಿಪದಿಯೊಂದು ಹೀಗಿದೆ.

ಅಗರ್ ಫಿರ್ದೌಸ್ ಖರ್ ರೂಹೆ ಜ಼ಮೀನ್,
ಹಮೀನ್ ಅಸ್ತ್, ಹಮೀನ್ ಅಸ್ತ್, ಹಮೀನ್ ಅಸ್ತ್.

(ಭೂಮಿಯ ಮೇಲೆ ಸ್ವರ್ಗ ಇರುವುದೆಂದಾದರೆ,
ಅದು ಇಲ್ಲಿಯೇ ಇದೆ, ಇಲ್ಲಿಯೇ ಇದೆ, ಇಲ್ಲಿಯೇ ಇದೆ)

ಖುಸ್ರೋ ಹಿಂದವಿ(ಹಿಂದಿ/ಪಂಜಾಬಿಯ ಮೂಲ ಭಾಷೆ)ಯಲ್ಲಿ ಬರೆದ ಒಂದು ದ್ವಿಪದಿ  ಹೀಗಿದೆ:

ಖುಸ್ರೊ ದರಿಯಾ ಪ್ರೇಮ್ ಕಾ ಉಲ್ಟಿ ವಾಕಿ ದಾರ್
ಜೋ ಉತ್‌ರಾ ಸೋ ಡೂಬ್ ಗಯಾ, ಜೋ ಡೂಬ್ ಗಯಾ ಸೋ ಪಾರ್

(ಹಿಂದಕ್ಕೆ ಹರಿಯುವ ಪ್ರೇಮ ನದಿ, ಖುಸ್ರೋ
ಹಾರಿದವನು ಮುಳುಗುವ, ಮುಳುಗಿದವನು ಪಾರಾಗುವ)

ಮೀರ್ ತಖೀ ಮೀರ್

ಮೀರ್ ತಖೀ ಮೀರ್ ಉರ್ದು ಗಜ಼ಲ್ ಜಗತ್ತಿನ ಚಕ್ರವರ್ತಿಯೆನಿಸಿದ ಪ್ರತಿಭಾವಂತ(೧೭೨೩-೧೮೧೦) ಭಾರತೀಯ ಸಂಸ್ಕೃತಿಯ ಅಂತಃಕರಣ ಹೊಂದಿದ್ದರಿಂದ ಫಾರಸಿ ಭಾಷೆಯ ಮೆರಗನ್ನು ಬಹು ಸೂಕ್ಷ್ಮರೀತಿಯಲ್ಲಿ ಬೆರೆಸಿದ್ದರಿಂದ ಅದ್ವಿತೀಯ ಪ್ರತಿಭಾವಂತನೆನಿಸಿದ ಈ ಮಲಾಮತಿ ಪರಂಪರೆಯ ಸೂಫಿ ಕವಿ, ಹೃದಯಾಂತರಾಳದ ದುಃಖ, ಸಂಕಷ್ಟಗಳು, ಸೂಕ್ಷ್ಮ ತುಡಿತಗಳು ಮೀರನ ಕಾವ್ಯಸೃಷ್ಟಿಯ ಮೂಲ. ಎಲ್ಲ ಕಾವ್ಯ ಪ್ರಕಾರಗಳನ್ನು ಮಣಿಸಿ ತನ್ನ ಕೃತಿಗಳಲ್ಲಿ ಗುಲಾಮನಾಗಿಸಿದ್ದಾನೆಂದು ಹೇಳಬಹುದು. ಮೀರನ ಕೃತಿಗಳಲ್ಲಿ ಮುಖ್ಯವಾದದ್ದು ‘ಕುಲ್ಲಿಯಾತ್’ ೧೩,೫೮೫ ದ್ವಿಪದಿಗಳನ್ನೊಳಗೊಂಡ ಗಜ಼ಲ್, ಮಸ್ನವಿ, ರುಬಾಯಿ, ಖಾಸಿದಾ, ಮುನ್ತೆಜಾದ್ ಮುಂತಾದ ಎಲ್ಲ ಉರ್ದು ಕಾವ್ಯ ಪ್ರಕಾರಗಳನ್ನೂ ಒಳಗೊಂಡಿರುವುದು ಈ ಕೃತಿಯ ವಿಶೇಷ.

ಮೀರ್‌ಕೆ ದೀನೆ ಮಜ್‌ಹಬ್ ಪೂಚ್‌ತೇ ಉನೇ ತೋ
ಕಶ್‌ಕೆ ಖೈಂಚಾ ದೇರ್‌ಮೇಂ ಬೈಟಾ, ಕಬ್‌ಕಾ ತರ್ಕ್ ಇಸ್ಲಾಮ್ ಕಿಯಾ

ಮೀರನ ಜಾತಿ ಧರ್ಮವನು ಏನು ಕೇಳುವನೋ ಅವನು?
ನಾಮ ಹಣೆಯಲಿ ಧರಿಸಿ ಕೂತಿರುವನವನು ದೇವಸ್ಥಾನದಲಿ, ಎಂದೋ ದೂರವಿಟ್ಟು ಇಸ್ಲಾಮನು.

ಜೋರ್ ಕಿಸ್ ದಿಲ್‌ಜಲೇಕಿ ಹೈ ಎ ಫಲಕ್
ಶೋಲಾ ಎಕ್ ಸುಬ್ಹಾ ಯಹಾಂಸೆ ಉಠಾ ಹೈ.

ಯಾವ ಹೃದಯರೋಗಿಯ ನೋವು ಈ ಆಕಾಶ?
ಒಂದು ಕಿಡಿ ಎದ್ದಿತು ಮುಂಜಾನೆ ಇಲ್ಲಿಂದ.

ಬೇಖುದೀ ಲೇಗಯಿ ಕಹಾಂ ಹಮ್‌ಕೊ
ದೇರ್‌ಸೆ ಇಂತ್‌ಜಾರ್ ಹೈ ಅಪ್‌ನಾ

ನಶ್ವರತೆ ಎಲ್ಲಿಗೆ ಕರೆದೊಯ್ಯಿತು ನನ್ನನ್ನು
ನನಗಾಗಿ ನಾನು ಕಾದಿರುವೆ ಎಂದಿನಿಂದ.

ಮಿರ್ಜಾ ಗಾಲಿಬ್

ಉರ್ದು ಮತ್ತು ಫಾರಸಿಯಲ್ಲಿ ಬರೆಯುತ್ತಿದ್ದ ಇನ್ನೊಬ್ಬ ಬಹು ಮುಖ್ಯ ಕವಿ ಮಿರ್ಜಾ ಅಸದುಲ್ಲಾ ಖಾನ್ ಗಾಲಿಬ್(೧೭೯೭-೧೮೬೯). ಗಾಲಿಬ್ ಗಜ಼ಲ್ ಕಾವ್ಯ ಪ್ರಕಾರಕ್ಕೆ ವಿಶಾಲವಾದ ಆಯಾಮವನ್ನು, ದಾರ್ಶನಿಕತೆಯನ್ನು, ವಸ್ತುವಿನಲ್ಲಿ ವೈಶಿಷ್ಟ್ಯವನ್ನು ನೀಡಿದ ಮಹತ್ವದ ಕವಿ. ೧೮೫೭ರಲ್ಲಿ ಸಿಪಾಯಿದಂಗೆಯ ಮೂಲಕ ನಡೆದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವುದರಲ್ಲಿ ಯಶಸ್ವಿಯಾದ ಬ್ರಿಟಿಷರು, ತನ್ನ ನಿಕಟವರ್ತಿ ಮತ್ತು ಆಶ್ರಯದಾತ ಕೊನೆಯ ಮೊಗಲ್ ಬಾದಶಾ ಬಹದ್ದೂರ್ ಷಾ ಜಫರ್‌ನನ್ನು ಕೆಟ್ಟದಾಗಿ ನಡೆಸಿಕೊಂಡದ್ದನ್ನು ಕಂಡ ಕವಿ ಗಾಲಿಬ್ ತುಂಬ ನೊಂದಿದ್ದರು. ದೆಹಲಿಯ ಮುಸ್ಲಿಮರು ಮನೆಬಿಟ್ಟು ಹೊರಬಾರದಂತೆ ಬ್ರಿಟಿಷ್ ಅರಸರ ಕಟ್ಟುನಿಟ್ಟಾದ ನಿಷೇಧಾಜ್ಞೆಯನ್ನು ಸೈನಿಕರು ಜಾರಿಗೆತಂದಿದ್ದರು. ಮನೆಯಿಂದ ಹೊರಗೆ ಬಂದವರನ್ನು ಅವರಿಂದಲೇ ಆಯುಧವನ್ನು ಆರಿಸಿಕೊಳ್ಳಲು ಹೇಳಿ ಅದೇ ಆಯುಧದಿಂದ ಕೊಂದುಹಾಕುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮನೆಯೊಳಗೆ ಹೆಚ್ಚು ದಿನ ನಿಲ್ಲಲಾಗದ ಗಾಲಿಬ್ ತನ್ನ ಮನೆಯಿಂದ ಹೊರಗೆ ಬಂದರು. ಸೈನಿಕರ ಕರ್ನಲನೊಬ್ಬ ಇವರನ್ನು ಪ್ರಶ್ನಿಸಿದ ನೀನು ಮುಸ್ಲಿಮನೇನು? ಎಂದು. ಅದಕ್ಕೆ ಗಾಲಿಬ್ ಅರ್ಧ ಮಾತ್ರ ಎಂದು ಉತ್ತರಿಸಿದರಂತೆ. ಕರ್ನಲ್ ಆಶ್ಚರ್ಯಗೊಂಡು, ’ಅದು ಹೇಗೆ ಸಾಧ್ಯ?’ ಅಂತ ಕೇಳಿದನಂತೆ. ಗಾಲಿಬ್ ಅದಕ್ಕೆ ಹೀಗೆ ಉತ್ತರಿಸಿದರಂತೆ, ನಾನು ಧರ್ಮ ನಿಷೇಧಿಸಿದ್ದನ್ನು(ಶರಾಬನ್ನು) ಕುಡಿಯುತ್ತೇನೆ, ಆದರೆ ನಿಷಿದ್ಧಪಡಿಸಿದ್ದನ್ನು (ಹಂದಿ ಮಾಂಸವನ್ನು) ತಿನ್ನುವುದಿಲ್ಲ. ಕರ್ನಲ್ ಇವರ ಉತ್ತರ ಕೇಳಿ ನಕ್ಕು ಅವರನ್ನು ಬಿಟ್ಟುಬಿಟ್ಟನಂತೆ. ಆದರೆ ಗಾಲಿಬ್ ಬಹಳವಾಗಿ ಆತಂಕಕ್ಕೊಳಗಾಗಿ ೧೮೫೭ರಿಂದ ೧೮೬೯ ಫೆಬ್ರವರಿಯಲ್ಲಿ ಅವರು ತೀರಿಕೊಳ್ಳುವ ತನಕ ತನ್ನ ಕಣ್ಣೆದುರೇ ತನ್ನ ದೇಶದ ಪರಿಸ್ಥಿತಿ ಚಿಂತಾಜನಕವಾದದ್ದನ್ನು ಕಂಡು ಈ ಹತ್ತು ವರ್ಷಗಳ ಕಾಲದಲ್ಲಿ ಬರಿ ಎರಡು ಗಜ಼ಲ್‌ಗಳನ್ನು ಮಾತ್ರ ಬರೆಯಲು ಅವರಿಗೆ ಸಾಧ್ಯವಾಯಿತೆಂಬ ದಾಖಲೆಯಿದೆ. ಗಾಲಿಬ್ ಗಜ಼ಲ್ ಕಾವ್ಯ ಸೃಷ್ಟಿಯಲ್ಲಿ ಎಷ್ಟು ಶ್ರೀಮಂತನೆಂದರೆ ಗಾಲಿಬ್‌ನಿಗೆ ಗಾಲಿಬನೇ ಹೋಲಿಕೆ ಎಂದು ಉರ್ದು ಕಾವ್ಯಜಗತ್ತಿನಲ್ಲಿ ಅದ್ವಿತೀಯನೆಂಬ ವ್ಯಾಖ್ಯಾನವಿದೆ. ಆದರೆ ಬದುಕಿನಲ್ಲಿ ಇವರು ಅತ್ಯಂತ ಬಡತನದಲ್ಲಿ ನಲುಗಿದವರ. ಒಂದಿಷ್ಟು ದ್ರಾಕ್ಷಾರಸವನ್ನು ಸೇವಿಸುವುದಕ್ಕಾಗಿ ಶರಾಬಿನ ಅಡ್ಡೆಯಲ್ಲಿ ಸಾಲಮಾಡಿ ತೀರಿಸಲಾಗದೆ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು. ಹೀಗೆ ಈ ಉರ್ದುವಿನ ಮಹಾಕವಿಯೆನಿಸಿದ ಗಾಲಿಬ್ ತನ್ನ ಬದುಕಿನಲ್ಲಿ ಅತ್ಯಂತ ದಾರುಣವಾಗಿ ಸಂಕಷ್ಟಗಳನ್ನು, ನೋವನ್ನು ಉಂಡವರ. ಪಂಚಾಕ್ಷರಿ ಹಿರೇಮಠರವರು ಅನುವಾದಿಸಿದ ಗಾಲಿಬನ ಕೆಲವು ಗಜ಼ಲ್ ಸಾಲುಗಳು ಹೀಗಿವೆ:

ನಾನು ಮನುಷ್ಯ ಸ್ವಭಾವದವನಾಗಿದ್ದೇನೆ, ಮನುಷ್ಯನಾಗಿ ಹುಟ್ಟಿದ್ದೇನೆ
ನನಗೆಷ್ಟು ಸಾಧ್ಯವೋ ಅಷ್ಟು ಪಾಪಮಾಡಬಲ್ಲೆ ಎನ್ನುವ ಅಭಿಮಾನ ನನಗಿದೆ....

*

ದ್ರಾಕ್ಷಾರಸದ ನನ್ನ ಪೂಜೆಯನ್ನು ನಾನೆಂದೂ ನಿಲ್ಲಿಸುವುದಿಲ್ಲ
ಭೋರಿಡುವ ಗಾಳಿಯ ಸುಳಿಯಲ್ಲಿ ನಾನು ಸದಾ ಜಿಗಿಯುತ್ತಿರುತ್ತೇನೆ.

*       

ಹಿಂದುಸ್ಥಾನದ ರಾಜಧಾನಿ ಹೂವಿನ ನೆರಳಾಗಿತ್ತು ಅಂದು,
ಅಂದಿನ ವೈಭವಯುಕ್ತ ಸುಂದರಕಾಲ ಸಂದುಹೋಗಿದೆ ಇಂದು.

*

ನನ್ನ ಗುಡಿಸಲಿನ ನರನರಗಳಲ್ಲಿ ಹೊರಹೊಮ್ಮುವ ಬಿಸಿಲತಾಪವ ಕೇಳದಿರು
ಈ ತಾಪಕ್ಕೆ ಹೆದರಿ ನಾನು ಆಕಾಶದಲ್ಲಿ ಹಾರಾಡುತ್ತಿಲ್ಲ.

*

ಸೌಂದರ್ಯವೇ, ಒಮ್ಮೆ ಸಕಲ ವೈಭವದೊಡನೆ ನಿನ್ನ ನೋಡುವ ಆಸೆ
ಎಷ್ಟು ಕಾಲದವರೆಗೆ ಇಣಿಕಿ ನೋಡಲಿ ಮನದ ಕನ್ನಡಿಯ ಬಿಂಬಗಳ?

*

ಮಂದಿರವಾವುದು? ಆವುದು ಕಾಬಾ?
ಪ್ರಗತಿವಿರೋಧವ ಬಯಸುವ ಕಟ್ಟು ಕಥೆ ಮಿಥ್ಯೆಗಳನು

ಅಂಥದೆ ನಿರಾಶೆಯ ಕನಸನು ಪೋಷಿಸಿ ರಕ್ಷಿಸಿ ಬೆಳೆಸುವ ಕೇಂದ್ರ!
ಮಂದಿರವಾವುದು? ಆವುದು ಕಾಬ?

*

ಸಾಗರದ ತುಮುಲ ತನ್ನ ದಡದ ಎಲ್ಲೆ ಮೀರಿ ಹೆಚ್ಚಿದೆ
ನೀನು ‘ಸಾಕ್ಷಿ’ಯಾಗಿ ಸುರೆ ಸುರಿದಾಗ ನನ್ನ ಚಿತ್ತ ಕದಡಿದೆ!

*

ಆಶ್ಚರ್ಯವೇನಿಲ್ಲ, ದೇವರ ಕರುಣೆ ಸಂತಸಕರವಾಗುವುದರಲ್ಲಿ
ಏಕೆಂದರೆ ನಾಚಿ ಪಾಪಕ್ಕಾಗಿ ನಾನು ಯಾವ ಬೇಡಿಕೆಯನ್ನೂ ಮಂಡಿಸಿಲ್ಲ.

*

ಅಸದ್ ಎಂಬ ಕಾವ್ಯನಾಮದೊಂದಿಗೆ ಗಾಲಿಬ್ ಬರೆದ ಉರ್ದು ಗಜ಼ಲ್‌ಗಳು ಇಂದಿಗೂ ಗಜಲ್ ಗಾಯಕರ ಅತಿಆಕರ್ಷಣೆಯ ಕೇಂದ್ರವಾಗಿದೆ. ಈ ಗಜ಼ಲ್‌ಗಳು ವಿಶ್ವದ ಎಲ್ಲೆಡೆ ಬಹಳ ಜನಪ್ರಿಯವಾಗಿವೆ.

ಕವಿ ಇಕ್ಬಾಲ್(೧೮೭೭-೧೯೩೮)

೧೮೭೭ರ ನವೆಂಬರ್ ೯ರಂದು (ಪಾಕಿಸ್ತಾನದ)ಪಂಜಾಬಿನ ಸಿಯಾಲ್‌ಕೋಟ್‌ನಲ್ಲಿ ಜನಿಸಿದ ವಿಶ್ವವಿಖ್ಯಾತ ಫಾರಸಿ ಮತ್ತು ಉರ್ದು ಭಾಷೆಗಳ ತತ್ವಜ್ಞಾನಿ ಕವಿ, ಭಾರತದಲ್ಲಿ ‘ಸಾರೇ ಜಹಾಂಸೆ ಅಚ್ಛಾ’ ಕವಿಯೆಂದೇ ಪ್ರಖ್ಯಾತ. ಇವರು ವಿಶಾಲ ಮಾನವೀಯತೆಯ ಪ್ರತಿಪಾದಕರು ಮತ್ತು ವಿಶ್ವಮಾನವ ಸಂದೇಶವನ್ನು ನೀಡುವ ಕವಿಯಾದರೂ ಕೆಲವರು ಸಂಕುಚಿತ ದೃಷ್ಟಿಕೋನದ ಮೂಲಕ ಇಸ್ಲಾಮಿಕ್ ಕವಿಯೆಂದು ಹೇಳುವುದಿದೆ. ಇಕ್ಬಾಲ್ ಧರ್ಮನಿಷ್ಠ ಮುಸ್ಲಿಮನಾಗಿದ್ದರೂ ಮುಲ್ಲಾ ಮೌಲವಿಗಳ ಹಳೆಯ ಮೌಲ್ಯಕ್ಕೆ ಕಟ್ಟುಬಿದ್ದ ಧಾರ್ಮಿಕ ವ್ಯಾಖ್ಯಾನವನ್ನು ವಿರೋಧಿಸಿದ್ದರು.

ಕಾಫಿರ ಘರ್ಷಣೆಗೆ ತಯಾರಿ ಮಾಡುತಿರೆ, ಮುಲ್ಲಾ ಮಾತ್ರ ಮಾಡುತಿಹನು
ಯೋಜನೆಗಳ, ದೇವರ ಹೆಸರಲಿ ತೊಂದರೆ ಕೊಡುವುದಕೆ ಕಾಯುತಿಹನು. 

‘ವಿಪರ್ಯಾಸವೆಂದರೆ ಈ ಕವಿಯನ್ನು ರಾಜಕೀಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಅವರ ಕಾವ್ಯಕ್ಕೆ ಮಹತ್ವ ನೀಡದೆ, ತಪ್ಪು ಕಲ್ಪನೆಗಳೇ ಹೆಚ್ಚು ಪ್ರಚಾರದಲ್ಲಿರುವುದು! ಇಸ್ಲಾಮಿಗೆ ನಿಷ್ಠನಾಗಿದ್ದರೂ, ಗೀತೆಯ ಬಗ್ಗೆ ಆಕರ್ಷಿತನಾಗಿ ಸಂಸ್ಕೃತ ಕಲಿತು ವೇದಗಳನ್ನು ಅಭ್ಯಾಸ ಮಾಡಿದ್ದ. ಒಂದೆಡೆ ಇಸ್ಲಾಮಿನ ಆಧ್ಯಾತ್ಮ ಮತ್ತು ದೇಶ ವಿಭಜನೆಯ ಪರವಾಗಿ ಈ ಕವಿ ಹೇಳಿದ ಮಾತುಗಳಿಗೆ ಧರ್ಮಾಂಧರ ಹೊಗಳಿಕೆ ಗಳಿಸಿದ್ದರೆ, ಇನ್ನೊಂದೆಡೆ, ಶ್ರೀರಾಮನನ್ನು, ಬುದ್ಧನನ್ನು, ಗುರುನಾನಕನನ್ನು ಪ್ರಶಂಸೆ ಮಾಡಿದ್ದಕ್ಕೆ ಉಲೇಮಾಗಳ ಫತ್ವಾವನ್ನೂ ಈ ಕವಿ ಎದುರಿಸಿದ್ದ’ ಎನ್ನುತ್ತಾರೆ ಖ್ಯಾತ ಪತ್ರಕರ್ತ, ಸಾಹಿತಿ ಖುಷ್ವಂತ್ ಸಿಂಘ್. ಕಲ್ಲು ಮಣ್ಣು, ಇಟ್ಟಿಗೆ ಗಾರೆಗಳಿಂದ ಕಟ್ಟಲಾದ ಮಂದಿರ ಮಸೀದಿಗಳಲ್ಲಿ ಮಾತ್ರ ಇದ್ದಾನೆಂದು ಪ್ರತಿಪಾದಿಸುವ ಮುಲ್ಲಾ, ಪುರೋಹಿತರು, ಪೂಜಾರಿಗಳ ಪರಂಪರಾಗತ ವಾದವನ್ನು ತಿರಸ್ಕರಿಸಲು ಮತ್ತು ‘ನಯಾ ಶಿವಾಲಾ’ ಹೊಸ ಶಿವ ಮಂದಿರವನ್ನು ಕಟ್ಟಲು ಯುವಕರಿಗೆ ಕರೆ ನೀಡಿದ.

ದೇಶವೆಂದರೇನು? ಹೇಗೆ ವಹಿಸುವೆ ನಾಯಕತ್ವ?
ಪಾಪ, ಮುಲ್ಲಾ! ಅದು ನಿಲುಕದು ಅವನ ಯೋಚನೆಗೆ. 

ಸ್ವಂತಿಕೆ ಮತ್ತು ಸ್ವಾಭಿಮಾನವನ್ನು ತನ್ನ ದ್ವಿಪದಿಗಳ ಮೂಲಕ ವಿಶಿಷ್ಟವಾಗಿ ಹೃದಯ ತಟ್ಟುವ ರೀತಿಯಲ್ಲಿ ವ್ಯಕ್ತಪಡಿಸಿದ ಈ ಕವಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದ.

ಖುದೀ ಕೋ ಕರ್ ಬುಲಂದ್ ಇತ್‌ನಾ ಕೆ ಹರ್ ತಕ್‌ದೀರ್ ಸೆ ಪೆಹಲೇ
ಖುದಾ ಬಂದೇ ಸೆ ಖುದ್ ಪೂಚೆ, ಬತಾ ತೇರೀ ರಜ಼ಾ ಕ್ಯಾ ಹೈ?

ಸ್ವಂತಿಕೆಯನ್ನು ಬಲಗೊಳಿಸು ಸಾಕಷ್ಟು, ಪ್ರತಿಯೊಂದು ವಿಧಿಲೀಲೆಯ ಎದುರು
ದೇವರು ಕೇಳಬೇಕು ಮನುಜನನು ವಿವಶವಾಗಿ, ‘ಹೇಳು, ನಿನ್ನ ಇಚ್ಛೆ ಏನೆಂದು?’

ತೂ ಅಪ್‌ನೇ ಸರ್ ನವಿಸ್ತ್ ಖುದ್ ಅಪ್‌ನೇ ಕಲಮ್ ಸೆ ಲಿಖ್
ಕೆಹ್ ಖಾಲೀ ರಖೀ ಹೈ ಖಾನಾ-ಎ-ಹಕ್ ನೆ ತೇರಿ ಜಬೀನ್

ಸ್ವಂತ ಲೇಖನಿಯ ಮೂಲಕ ಬರೆ ನಿನ್ನ ಬದುಕಿನ ಹಣೆಬರಹವ
ಇರಿಸಿಹನು ದೇವರು, ಹಣೆಯಲಿ, ನಿನ್ನ ಹಕ್ಕಿನ ಖಾಲಿ ಜಾಗವ. 

ಕವಿ ಇಕ್ಬಾಲ ಅತ್ಯದ್ಭುತವಾದ ರಾಷ್ಟ್ರ ಪ್ರೇಮವನ್ನು, ಜಾತ್ಯತೀತ ಸಂದೇಶವನ್ನು ನೀಡಿದ್ದರು. ಹಿಮಾಲಯವನ್ನು, ಗಂಗಾನದಿಯನ್ನು, ಭಾರತದ ಕೀರ್ತಿಯನ್ನು ವಿಶ್ವದಲ್ಲಿ ಮೆರೆಸಿದ ಕವಿ ಭಾರತ ನೆಲದ ಕಣಕಣವೂ ತನಗೆ ಪವಿತ್ರವೆಂದ. ಇಂದು ರಾಷ್ಟ್ರಗೀತೆಯ ಸಮಾನ ಸ್ಧಾನವನ್ನು ಜನ ಮನದಲ್ಲಿ ಪಡೆದ ‘ತರಾನಾ ಎ ಹಿಂದ್’ ಅಥವಾ ‘ಸಾರೇ ಜಹಾಂ ಸೆ ಅಚ್ಛಾ’ ಭಾರತದಲ್ಲಿ ಇಂದಿಗೂ ರಾಷ್ಟ್ರಪ್ರೇಮದ ಮಿಂಚಿನ ಸಂಚಾರ ನಡೆಸುತ್ತಿದೆ.

ಮಜ಼್‌ಹಬ್ ನಹೀ ಸಿಕಾತಾ, ಆಪಸ್ ಮೆ ಭೈರ್ ರಖ್‌ನಾ
ಹಿಂದಿ ಹೈ ಹಮ್ ವತನ್ ಹೈ, ಹಿಂದೂಸ್‌ತಾಂ ಹಮಾರಾ

ಧರ್ಮ ಕಲಿಸದು ನಮಗೆ,  ಹಗೆಯ ಇರಿಸಿಕೊಳಲು,
ಭಾರತವು ನಮ್ಮ ದೇಶ, ಹಿಂದೂಸ್ತಾನ ನಮದು.

ಗಜ಼ಲ್‌ಗಳನ್ನು ದ್ವಿಪದಿಗಳನ್ನು, ಚೌಪದಿಗಳನ್ನು ಬಳಸಿಕೊಂಡು ಸ್ವಾಭಿಮಾನ, ದೇಶಪ್ರೇಮವನ್ನು ಸಶಕ್ತವಾಗಿ ಮೂಡಿಸಿದ ಕವಿ ಡಾ. ಇಕ್ಬಾಲ್ ಅಷ್ಟೇ ಪ್ರಭಾವಿಯಾಗಿ ಗಜ಼ಲ್‌ಗಳ ಮೂಲಕ ಪ್ರೇಮ ಸಂದೇಶವನ್ನು ಸಾರಿದ. ಇವನು ಬರೆದ ಅನೇಕ ಗಜ಼ಲ್‌ಗಳು ಜಗತ್ತಿನಾದ್ಯಂತ ಜನರ ಮನಸೂರೆಗೊಂಡಿವೆ. ಇವರ ಒಂದು ಗಜ಼ಲ್‌ನ ಕೆಲವು ಸಾಲುಗಳು ಹೀಗಿವೆ:

ಸಿತಾರೋಂಸೆ ಆಗೇ ಜಹಾಂ ಔರ್ ಭೀ ಹೈ     
ಅಭೀ ಇಶ್ಕ್ ಕೀ ಇಮ್ತಿಹಾಂ ಔರ್ ಭೀ ಹೈ.   

ತಹೀ ಜಿಂದಗೀ ಸೆ ನಹೀ ಏ ಫಿಜ಼ಾಯೇಂ
ಯಹಾಂ ಸೈಕಡೋಂ ಕಾರವಾಂ ಔರ್ ಭೀ ಹೈ

ಕನಾಹತ್ ನ ಕರ್ ಆಲಮೇ-ರಂಗೊ-ಬೂ ಪರ್
ಚಮನ್ ಔರ್ ಭಿ ಆಶಿಯಾಂ ಔರ್ ಭಿ ಹೈ

ತಾರೆಗಳ ಮುಂದೆ ಪ್ರಪಂಚ ಇನ್ನೂ ಇದೆ
ಇದೇ ಅಲ್ಲ, ಪ್ರೇಮದ ಪರೀಕ್ಷೆ ಇನ್ನೂ ಇದೆ.

ಖಾಲಿ ಬದುಕಿನಿಂದ ಇಲ್ಲ ಈ ವಾತಾವರಣ
ಇಲ್ಲಿ ಕೋಟ್ಯಾನುಕೋಟಿ ಸಾಲುಗಳು ಇನ್ನೂ ಇದೆ.

ತುಷ್ಟನಾಗದಿರು ಕಂಡು ಜಗದ ಬಣ್ಣ, ವಾಸನೆಯ ಮೇಲೆ
ಹೂದೋಟಗಳು, ಕನಸಿನ ಮನೆಗಳು ಇನ್ನೂ ಇದೆ.

ಈ ಕವಿ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದ, ಹಲವಾರು ವಿವಾದಗಳಲ್ಲಿ ಸಿಲುಕಿದ್ದ. ಈ ಕವಿಯು ಇವನ್ನೆಲ್ಲ ಎದುರಿಸಿ ಬದುಕಿದ ಮತ್ತು ಜನ ಮಾನಸದಲ್ಲಿ ಗಟ್ಟಿ ಮನೆಮಾಡಿ ಜಯಿಸಿದ ಕೂಡ.

ಆಧುನಿಕ ಗಜ಼ಲ್ ಕವಿಗಳು

ಮೇಲೆ ಹೇಳಲಾದ ಉರ್ದು ಗಜ಼ಲ್ ಕಾವ್ಯ ಪ್ರಕಾರದ ದಿಗ್ಗಜರೆನಿಸಿದ ಕವಿಗಳಲ್ಲದೆ ಇನ್ನೂ ಹಲವಾರು ಹೆಸರಾಂತ ಕವಿಗಳು ಇದ್ದಾರೆ. ಅವರಲ್ಲಿ ಕೆಲವರ ಹೆಸರುಗಳನ್ನಷ್ಟೆ ಇಲ್ಲಿ ಹೇಳಲು ಸಾಧ್ಯವಾಗುತ್ತದೆ. ೧೬ನೇ ಶತಮಾನದ ಕವಿ ಮುಹಮ್ಮದ್ ಖುಲಿ ಕುತುಬ್ ಷಾ, ೧೭ನೇ ಶತಮಾನದ ವಲೀ ಮುಹಮ್ಮದ್ ವಲೀ ದಖ್ಖನಿ, ೧೮ನೇ ಶತಮಾನದಲ್ಲಿ ಪ್ರಖ್ಯಾತರಾದ ಫಾಯಿಜ಼್ ದಹಲವಿ ಖಾನ್ ಆರಝೂ, ಮುಬಾರಕ್ ಆಬರೂ, ನಜ಼ೀರ್ ಅಕ್ಬರಾಬಾದಿ, ಖ್ವಾಜಾ ಮೀರ್ ದರ್ದ್, ೧೯ನೇ ಶತಮಾನದ ಖ್ಯಾತರಾದ ಮಿರ್ಜಾ ಸಲಾಮತ್ ಅಲಿ, ಬಹದ್ದೂರ್ ಷಾ ಜಫರ್II, ೨೦ನೇ ಶತಮಾನದಲ್ಲಿ ಹೆಸರುವಾಸಿಯಾದ ಜಿಗರ್ ಮುರಾದಾಬಾದಿ, ಫಿರಾಕ್ ಘೋರಕ್‌ಪುರಿ, ಸಾಹಿರ್ ಲುಧಿಯಾನವಿ, ಫೈಜ಼್ ಅಹ್ಮದ್ ಫೈಜ಼್, ಜಾನಿಸಾರ್ ಅಖ್ತರ್, ಮಜ್ರೂಹ್ ಸುಲ್ತಾನ್‌ಪುರಿ, ಜಫರ್ ಇಕ್ಬಾಲ್, ಮಖ್ದೂಮ್ ಮೊಹಿಯುದ್ದೀನ್ ಮುಂತಾದವರು. ೨೧ನೇ ಶತಮಾನದ ಖ್ಯಾತರಾದ ಶಕೀಲ್ ಬದಾಯುನಿ, ತನ್ವೀರ್ ಫೂಲ್, ಕೈಫಿ ಆಝ್ಮಿ, ರಾಹತ್ ಇಂದೋರಿ ಮುಂತಾದವರು ತಮ್ಮ ಕೃತಿಯ ಮೂಲಕ ಶ್ರೇಷ್ಠ ಗಜ಼ಲ್ ಕವಿಗಳೆನಿಸಿದರು. ಕರ್ನಾಟಕದಲ್ಲಿ ಉರ್ದು ಭಾಷೆಯ ಕವಿಗಳು ಇಂದಿಗೂ ನೂರಾರು ಮಂದಿ ಇದ್ದಾರೆ. ಇವರೆಲ್ಲರೂ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ, ಹಲವರು ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಯನ್ನು ಪಡೆದಿದ್ದಾರೆ. ಅವರ ಪೈಕಿ ಹಮೀದ್ ಅಲ್ಮಾಸ್(ಬೆಂಗಳೂರು), ಹುಸ್ನಾ ಸರ್‌ವರ್(ಮೈಸೂರು), ಶೈದಾ ರೂಮಾನಿ (ರಾಯಚೂರು), ದಿ. ಡಾ. ಕೆ. ಮುದ್ದಣ್ಣ ‘ಮಂಜರ್’, ಖಲೀಲ್ ಮಾಮೂನ್, ಮಾಹೆರ್ ಮನ್ಸೂರ್(ಬೆಂಗಳೂರು), ಶಕೀಲ್ ಮಜ್ಹರಿ(ಬಳ್ಳಾರಿ), ಇಕ್ಬಾಲ್ ಹಾಶಿಮಿ(ಬಿಜಾಪುರ) ಮುಂತಾದ ಕೆಲವೇ ಕೆಲವರನ್ನು ಇಲ್ಲಿ ಹೆಸರಿಸಬಹುದು.

ಗಜ಼ಲ್‌ಗಳನ್ನು ಹಾಡುಗಾರರು ಹಾಡುವ ಮೂಲಕ ಶಾಸ್ತ್ರೀಯ ಮತ್ತು ಲಘು ಶಾಸ್ತ್ರೀಯ ಸಂಗೀತವನ್ನು ಅಳವಡಿಸಿಕೊಳ್ಳುವ ಮೂಲಕ ಜಗಜೀತ್ ಸಿಂಗ್, ಚಿತ್ರಾ ಸಿಂಗ್, ಮುಹಮ್ಮದ್ ರಫಿ, ಲತಾ ಮಂಗೇಷ್ಕರ್, ಆಶಾ ಭೋಂನ್ಸ್ಲೆ, ತಲತ್ ಮಹಮೂದ್, ಪಂಕಜ್ ಉದಾಸ್, ತಲತ್ ಅಜ಼ೀಜ಼್, ಪಾಕಿಸ್ತಾನದ ಗುಲಾಂ ಮುಹಮ್ಮದ್, ಮೆಹದೀ ಹಸನ್, ನುಸ್ರತ್ ಫತೇ ಅಲಿ ಖಾನ್, ಆಬಿದಾ ಪರ್ವಿನ್, ರಾಹತ್ ಫತೇ ಅಲಿ ಖಾನ್, ಫರೀದಾ ಖಾನುಮ್, ನೂರ್ ಜಹಾನ್, ಇಕ್ಬಾಲ್ ಬಾನೂ ಮುಂತಾದವರು ವಿಶ್ವದಾದ್ಯಂತ ಖ್ಯಾತನಾಮರೆನಿಸಿದರು.

ಇತರ ಭಾಷೆಗಳಲ್ಲಿ ಗಜ಼ಲ್

ಗಜ಼ಲ್ ಕಾವ್ಯ ಪ್ರಕಾರ ಎಷ್ಟು ಜನಪ್ರಿಯವಾಯಿತೆಂದರೆ ಭಾರತದಲ್ಲಿ ಎಲ್ಲ ಮುಖ್ಯ ಪ್ರಾಂತೀಯ ಭಾಷೆಗಳಲ್ಲೂ ಉರ್ದೂವಿನಿಂದ ಅನುವಾದಗೊಂಡದ್ದು ಮಾತ್ರವಲ್ಲ ಈ ಭಾಷೆಗಳಲ್ಲಿ ಮುಖ್ಯವಾಗಿ ಬಂಗಾಲಿ, ಕನ್ನಡ, ತೆಲುಗು, ಮರಾಠಿ, ಹಿಂದಿ ಭಾಷೆಗಳ ಕವಿಗಳು ಸ್ವತಂತ್ರವಾಗಿ ಗಜ಼ಲ್ ಬರೆಯತೊಡಗಿದರು. ದೇಶವಿದೇಶಗಳಲ್ಲಿ ಮುಖ್ಯವಾಗಿ ಯುರೋಪ್ ಮತ್ತು ಅಮೇರಿಕಾದಲ್ಲಿ ಇಂಗ್ಲಿಷ್, ಟರ್ಕಿಷ್, ರಷ್ಯನ್, ಜರ್ಮನ್ ಭಾಷೆಗಳಿಗೆ ಉರ್ದು ಗಜ಼ಲ್‌ಗಳು ಅನುವಾದಗೊಂಡವು ಮಾತ್ರವಲ್ಲ, ಇಂಗ್ಲಿಷ್‌ನಂತಹ ಭಾಷೆಗಳಲ್ಲಿ ಸ್ವತಂತ್ರ ಗಜ಼ಲ್ ಕಾವ್ಯವನ್ನು ರಚಿಸಲು ಕವಿಗಳು ತೊಡಗಿದರು. ಇವರ ಮುಖ್ಯವಾಗಿ ಜೇಮ್ಸ್ ಕ್ಲೆರೆನ್ಸ್, ಜೇಮ್ಸ್ ಎಜಯಿಲ್ ಫ್ಲೆಕ್ಕರ್, ಫಿಲ್ಲಿಸ್ ವೆಬ್ ಮುಂತಾದವರು ಗಜ಼ಲ್‌ನ ಸೂತ್ರಗಳಿಗೆ ಬದ್ಧವಾಗಿ ಮತ್ತು ಅರೆ ಬದ್ಧತೆಯಿಂದ ಪದ್ಯಗಳನ್ನು ಬರೆದರು. ಅರೆಬದ್ಧತೆಯ ದ್ವಿಪದಿಗಳನ್ನು ‘ಬಾಸ್ಟರ್ಡ್ ಗಜ಼ಲ್ಸ್’ ಎಂದು ಟೀಕಿಸಿ ಹೆಸರಿಸಲಾಯಿತು. ೧೯೯೦ರ ಸುಮಾರಿಗೆ ಇಂಗ್ಲಿಷ್ ಗಜ಼ಲ್‌ಗಳಿಗೆ ಮಾನ್ಯತೆ ದೊರೆತು ಅಮೇರಿಕಾದ ಕವಿಗಳಾದ ಜಾನ್ ಹೋಲೆಂಡರ್, ಡಬ್ಲ್ಯೂ. ಎಸ್. ಮೆರ‍್ವಿನ್ ಮುಂತಾದವರು ಸೂತ್ರ ಬದ್ಧ ಗಜಲ್‌ಗಳನ್ನು ಬರೆದರು. ಕಾಶ್ಮೀರಿ ಮೂಲದ ಅಮೇರಿಕನ್ ಕವಿ ಆಘಾ ಶಾಹೀದ್ ಅಲಿ ಈ ಇಂಗ್ಲಿಷ್ ಗಜ಼ಲ್‌ಗಳ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡಿದ್ದಲ್ಲದೆ, ೨೦೦೦ದಲ್ಲಿ ಖಚಿvishiಟಿg ಆisuಟಿiಣies-ಖeಚಿಟ ಉಚಿzಚಿಟs iಟಿ ಇಟಿgಟish ಎಂಬ ಹೆಸರಿನಲ್ಲಿ ಸಂಪಾದಿಸಿ ಪುಸ್ತಕವನ್ನು ಪ್ರಕಟಿಸಿದರು. 

ಕನ್ನಡ ಕಾವ್ಯಲೋಕದಲ್ಲಿ ಗಜ಼ಲ್‌ಗಳು

ಕನ್ನಡದಲ್ಲಿ ಸ್ವತಂತ್ರವಾಗಿ ಮತ್ತು ಸೂತ್ರ ಬದ್ಧವಾಗಿ ಗಜ಼ಲ್‌ಗಳನ್ನು ಬರೆದವರಲ್ಲಿ ಪ್ರಥಮರೆಂದರೆ ಶಾಂತರಸರು. ಬೆಂಗಳೂರಿನ ಡಾ. ಕೆ. ಮುದ್ದಣ್ಣರವರು ‘ಮಂಜರ್’ ಎಂಬ ಕಾವ್ಯನಾಮದಲ್ಲಿ ಸುಮಾರು ೫೦೦ರಷ್ಟು ಉರ್ದು ಗಜ಼ಲ್ ಬರೆದು ಖ್ಯಾತರಾಗಿದ್ದರಾದರೂ, ಇವರು ಅಲ್ಲಲ್ಲಿ ‘ಸತ್ಯಾನಂದ’ ಎಂಬ ಕಾವ್ಯನಾಮದಡಿಯಲ್ಲಿ ಕನ್ನಡ ಪದ್ಯಗಳು, ಉರ್ದು ಅನುವಾದಗಳನ್ನು ಬರೆದಿದ್ದರೇ ಹೊರತು ಸ್ವತಂತ್ರ ಗಜ಼ಲ್‌ಗಳನ್ನು ಕನ್ನಡದಲ್ಲಿ ಬರೆದದ್ದು ಕಮ್ಮಿ ಎನ್ನಬಹುದು. ಇವರು ೧೯೮೪ರಲ್ಲಿ ‘ಉರ್ದು ಗೀತೆಗಳು’ ಎಂಬ ಗಾಲಿಬ್, ಇಕ್ಬಾಲ್ ಮುಂತಾದ ಖ್ಯಾತನಾಮರ ಜೊತೆಗೆ ಆಧುನಿಕ ಕವಿಗಳ ಗಜ಼ಲ್‌ಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುತ್ತಾರೆ. ಮಿರ್ಜಾ ಗಾಲಿಬ್‌ರವರ ‘ಕೋಯಿ ಉಮೀದ್ ಬರ್ ನಹೀ ಆತೀ’ ಎಂದು ಶುರುವಾಗುವ ಒಂದು ಗಜ಼ನ್ನು ಡಾ. ಕೆ, ಮುದ್ದಣ್ಣ ಹೀಗೆ ಅನುವಾದಿಸಿದ್ದಾರೆ:

ಯಾವ ಆಸೆಯು ಫಲಿಸಲೊಲ್ಲದು
ಯಾವ ಹಾದಿಯು ತೋರಲೊಲ್ಲದು
ಬರುವ ಕಾಲಕೆ ಮೃತ್ಯು ಬರುವುದು
ನಿದ್ದೆ ಏತಕೆ ಬಾರಲೊಲ್ಲುದು?
ನನ್ನ ನೋಡಿಯೆ ನಗುತಲಿದ್ದೆ
ನಗುವು ಏತಕೆ ಈಗ ಬಾರದು
ನಾನು ಏರಿದ ಸ್ತರಗಳಲ್ಲಿ
ನನ್ನ ವಾರ್ತೆಯೆ ನನಗೆ ಬಾರದು
ಯಾವ ಮುಖದಿಂ ಯಾತ್ರೆ ಹೋಗುವೆ
‘ಗಾಲಿಬ್’ಗೆ ನಾಚಿಕೆಯೆ ಬಾರದು.

ಶಾಂತರಸರು ಸ್ವತಹ ಕನ್ನಡದ ಕಾದಂಬರಿಕಾರ, ಕತೆಗಾರ, ಕವಿಯಾಗಿದ್ದು ಉರ್ದು ಸಾಹಿತ್ಯದಿಂದ ‘ಉಮ್ರಾವ್ ಜಾನ್ ಅದ’ ಎಂಬ ಪ್ರಖ್ಯಾತ ಕಾದಂಬರಿಯನ್ನು, ‘ಉರ್ದು ಕಾವ್ಯದಲ್ಲಿ ಮದಿರೆ ಮತ್ತು ಯೌವ್ವನ’ ಮುಂತಾದ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಉರ್ದು ಗಜ಼ಲ್‌ಗಳನ್ನು ಅನುವಾದಿಸಿದ ಜೊತೆಗೆ, ಗಜ಼ಲ್ ಕಾವ್ಯದ ಸೂತ್ರಗಳಿಗೆ ಬದ್ಧವಾಗಿ ಕನ್ನಡ ಗಜಲ್‌ಗಳನ್ನು ಬರೆದಿದ್ದಾರೆ. ‘ಗಜ಼ಲ್ ಮತ್ತು ಬಿಡಿ ದ್ವಿಪದಿ’ ಎಂಬುದು ಅವರ ಪ್ರಕಟಿತ ಕೃತಿ. ಇವರ ಕನ್ನಡ ಗಜ಼ಲ್‌ಗಳನ್ನು ಹಂಪಿ ವಿಶ್ವ ವಿದ್ಯಾಲಯ ಪ್ರಕಟಿಸಲು ಕೈಗೆತ್ತಿಕೊಂಡಿದೆ. ಇವರ ಕೆಲವು ದ್ವಿಪದಿಗಳು ಗಜ಼ಲ್‌ಗಳು ಹೀಗಿವೆ:

ಅವಳ ಪೈಜಣದ ಧ್ವನಿ ಬರೆಯುತಿದೆ ಗಜ಼ಲ ಸಂಜೆಗೆಂಪಿನಲಿ
ಮಿಂದು ಮೆಲ್ಲನೆ ಬರುತಲಿದೆ ಅವಳ ಮೈಯ ಕಂಪಿನಲಿ.

*

ಏಸೋ ದಿನಗಳ ಬಳಿಕ ಓಲೆ ಬಂದಿದೆಯವಳ ಏನಿದೆಯೋ ಅಲ್ಲಿ
ಮುನಿಸೋ ಒಲವೋ ಅದನು ಸಹಿಸಲಿಕೆ ಬಟ್ಟಲವ ತುಂಬಿಕೊಡು ಸಾಕಿ.

*

ಕೆನ್ನೆ ಕನ್ನಡಿಯಲ್ಲಿ ನೋಡಿಕೊಂಡವು ಚುಕ್ಕೆ ತಮ್ಮ ರೂಪ
ಓರೆ ನೋಟದ ಕಾವ್ಯ ರಸಿಕರೆದೆಯಾಳದಲಿ ತುಂಬಿ ಬಂತು

*

ಶಾಂತರಸರು ಮೂಲತಹ ಪ್ರಯೋಗಶೀಲ ಕವಿ. ಸ್ವತಹ ಉರ್ದು ಸಾಹಿತ್ಯದ ಅಭಿಮಾನಿಯಾಗಿದ್ದ ಅವರು ಉರ್ದು ಕಾವ್ಯ ಪ್ರಕಾರಗಳಾದ ಗಜ಼ಲ್, ರುಬಾಯಿ, ನಜ್ಮ್, ಬಜ್ಮ್‌ಗಳನ್ನು ಅವುಗಳ ಕಾವ್ಯ ಲಕ್ಷಣಗಳನ್ನು ಕನ್ನಡದಲ್ಲಿ ಬಳಸಿ ಕಾವ್ಯರಚನೆ ಮಾಡುವ ಪ್ರಯೋಗವನ್ನು ಮಾಡಿದ್ದರು. ಅವರು ಯಶಸ್ಸು ಸಾಧಿಸಿದ್ದು ಗಜ಼ಲ್‌ಗಳನ್ನು ಉರ್ದು ಮೂಲದ ಲಕ್ಷಣಗಳನ್ನು, ಸೂತ್ರಗಳನ್ನು ಸರಿಯಾಗಿ ಬಳಸುವ ಮೂಲಕ ಕನ್ನಡದಲ್ಲಿ ಸ್ವತಂತ್ರವಾಗಿ ಬರೆಯುವ ಮೂಲಕ. ಹೀಗೆ ಶಾಂತರಸರು ಸಿದ್ಧರೂಪದ ಗಜ಼ಲ್‌ಗಳನ್ನು ಕನ್ನಡದಲ್ಲಿ ಬರೆದ ಪ್ರಥಮ ಕವಿಯೆನಿಸಿದ್ದಾರೆ. ಒಟ್ಟು ಹೆಚ್ಚು ಕಮ್ಮಿ ಇಂತಹ ೪೬ ಗಜ಼ಲ್‌ಗಳನ್ನು ‘ಅರಸ’ ಎಂಬ ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ  ನೀಡಿದ್ದಾರೆ. ಇವರ ಗಜ಼ಲ್‌ಗಳಲ್ಲಿ ಕಂಡು ಬರುವ ವಸ್ತು ಪ್ರೇಮ, ವಿರಹ, ವಿರಸ, ಪ್ರಣಯ, ನೋವು, ವಿಷಾದ ಮುಂತಾದ ಬದುಕಿನ ಹತ್ತು ಹಲವು ಆಯಾಮವನ್ನೊಳಗೊಂಡಿವೆ. ಅವರ ಗಜ಼ಲ್‌ನ ಮಾಧುರ್ಯದ ಒಂದು ಮಾದರಿ ಹೀಗಿದೆ:

ಅರುವತ್ತು ತುಂಬಿದರೂ ಮಧುವುಂಟು ಪ್ರಿಯಳೇ ಮಾಧುರ‍್ಯವುಂಟು
ಮೊದಲ ಮಳೆ ಬಿದ್ದ ನೆಲದ ವಾಸನೆ ನಿನ್ನ ಅಂಗಾಂಗದಲಿ ಉಂಟು
ಮುಪ್ಪಿಲ್ಲ ಆಗಸಕೆ ಎಂದೆಂದು ಕುಂದಿಲ್ಲ ಚುಕ್ಕೆ ಚಂದ್ರರಿಗೆ
ಆಗಸದ ಸೌಂದರ್ಯ ಚುಕ್ಕೆ ಚಂದ್ರಾಮರ ಕಳೆ ನಿನಗುಂಟು
ಕೊರತೆ ಕಾಣದು ಬೆಳಕು ಕತ್ತಲೆಗೆ ಕೊಡೆಂಬುದಿಲ್ಲವೇ ಇಲ್ಲ
ತುಳುಕುತಿದೆ ಬೆಳಕು ಮೈಯಲಿ ಕಂಗಳಿಗೆ ಕತ್ತಲೆಯ ಕಾಡಿಗೆಯುಂಟು
ಸಂಜೆಗೆಂಪದರ ಜೊತೆ ಹುಣ್ಣಿಮೆಯ ಬೆಳದಿಂಗಳೇನು ಬಲು ಚಂದ
ಸಂಜೆಯನು ಉಡುವ ಹುಣ್ಣಿಮೆಯ ತೊಡುವ ಫಲವು ನಿನ್ನಲಿನ್ನೂ ಉಂಟು
ಜೀವನರ್ಥವ ಪ್ರೇಮದ ಮರ್ಮವ ತಿಳಿದವಳೆಂದರೆ ನೀನೇ
ಅಂತೆಯೇ ನಿನ್ನಲಿ ಚೆಲುವಿನ ತವರೆ ಯೌವನಕಿನ್ನೂ ಮೌನವೇ ಉಂಟು
ಬದುಕು ಒಂದು ದಿನ ಮುಗಿಯುವುದು ಮರ್ತ್ಯದ ಸೊಗಸೇ ಅಡಗಿಹುದಿರಲಿ
ಸಾವಿಗೆ ಜೀವನ ದೀಕ್ಷೆಯನೀಯುವ ಒಲವಿನ ಶಕ್ತಿ ನಿನಗುಂಟು.

ಶಾಂತರಸರು ತಮ್ಮ ಎಂದಿನ ಕವನಗಳಲ್ಲಿ ವ್ಯಕ್ತಪಡಿಸುವ ಪ್ರೇಮ, ಪ್ರಣಯದ ರೀತಿಗೂ, ತಮ್ಮ ಗಜ಼ಲ್‌ಗಳಲ್ಲಿ ವ್ಯಕ್ತಪಡಿಸುವ ರೀತಿಯೂ ಭಿನ್ನವಾಗಿದೆ. ನೈತಿಕ ಎಲ್ಲೆಯನ್ನು ಮೀರದಂತೆ ಸಂಯಮದ ನಿರೂಪಣೆ ಇಲ್ಲಿ ಕಂಡುಬರುತ್ತದೆ. ‘ಮೊದಲ ಮಳೆಬಿದ್ದ ನೆಲದ ವಾಸನೆ ನಿನ್ನ ಅಂಗಾಂಗದಲಿ ಉಂಟು’ ಎಂಬಲ್ಲಿ ಮಾಧುರ್ಯ, ನಾಜೂಕುತನ ಒಟ್ಟಾಗಿ ಕಂಡು ಬರುತ್ತದೆ. ದೈಹಿಕ ವಾಸನೆಯನ್ನು ಮೀರಿದ ಸೌಂದರ್ಯೋಪಾಸನೆ, ದೈಹಿಕ ಮಿಲನವನ್ನು ಮೀರಿದ ಮಾನಸಿಕ ಮಿಲನವನ್ನು ಸಾಧಿಸುವುದನ್ನು ಮೇಲಿನ ಶಾಂತರಸರ ಸುಂದರ ಗಜ಼ಲ್‌ನಲ್ಲಿ ಕಾಣಬಹುದು.

ವಿರಸದಲ್ಲೂ ವಿನೋದದ ಸವಿಯನುಣ್ಣುವ ಪರಿಯನ್ನು ಅವರು ಇನ್ನೊಂದು ಗಜ಼ಲ್‌ನಲ್ಲಿ ಚೆನ್ನಾಗಿ ಮನಮುಟ್ಟುವಂತೆ ಹೇಳುತ್ತಾರೆ. ಅದರ ಕೆಲವು ಸಾಲುಗಳು ಹೀಗಿವೆ:

ಜೊತೆಗೂಡಿ ಇದ್ದರೂ ಅವಕಾಶ ಸಿಗಲಿಲ್ಲ ಎದೆಯೆದೆಯ ನೇಯಲು
ಜೊತಯಾಗಿ ನಡೆದರೂ ಹೆಜ್ಜೆಹೆಜ್ಜೆ ಏನೋ ಎಂಥದೋ ಕಾತರ
ಸಮದುಃಖಿಗಳು ನಾವು ಒಮ್ಮೆಯೂ ಸಮ ಸುಖವನುಂಡವರೆ ಅಲ್ಲ
ಹೀಗಿದ್ದರೂ ಸುಳ್ಳಲ್ಲ ಪರಿಸರಕೆ ಮೂಡಿದ್ದು ನಮ್ಮಿಂದ ನವಿರ

*

ಕನ್ನಡದ ಕವಿ ಶಾಂತರಸರು ನಮ್ಮನ್ನು ೨೦೦೮ರಲ್ಲಿ ಬಿಟ್ಟು ಅಗಲಿದರೂ, ಈ ಗಜ಼ಲ್ ಪರಂಪರೆಯನ್ನು ಮುಂದುವರಿಸಲು ತಮ್ಮ ಮುಂದಿನ ಯುವ ಕವಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ಮಾರ್ಗದಲ್ಲಿ ನಜೀರ್ ಚಂದಾವರ, ಎಚ್.ಎಸ್. ಮುಕ್ತಾಯಕ್ಕ, ಡಾ. ಬಸವರಾಜ ಸಬರದ, ಚಿದಾನಂದ ಸಾಲಿ, ಆರಿಫ್ ರಾಜಾ, ಶಾರದಾ ಮುಳ್ಳೂರು, ಡಾ. ದಸ್ತಗೀರ್ ಸಾಬ್ ದಿನ್ನಿ, ಹೇಮಲತ ವಸ್ತ್ರದ ಮತ್ತು ಇನ್ನೂ ಹಲವು ಕನ್ನಡದ ಕವಿಗಳು ಗಜ಼ಲ್ ಬರವಣಿಗೆಯನ್ನು ಮುಂದುವರಿಸಿದ್ದಾರೆ. ಶಾಂತರಸರ ಗಜ಼ಲ್‌ಗಳನ್ನು ಅವರ ಸವಿನೆನಪಿನೊಂದಿಗೆ ತೆಲುಗು/ಹಿಂದಿ ಚಿತ್ರ ಸಂಗೀತಕಾರ ಕಿರ್ವಾಣಿಯವರ ಸಂಗೀತ ನಿರ್ದೇಶನದೊಂದಿಗೆ ಕನ್ನಡದ ಹಾಡುಗಾರರು ಹಾಡಿದ ಸಿಡಿ ಜನಪ್ರಿಯವಾಗಿದೆ. ಗಜ಼ಲ್ ಕಾವ್ಯ ಪರಂಪರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಅವಕಾಶಗಳಿವೆ ಅಲ್ಲದೆ ಈ ಪ್ರಕಾರಕ್ಕೆ ಉಜ್ವಲ ಭವಿಷ್ಯವೂ ಕಾದಿದೆಯೆನ್ನಬಹುದು.  

ಪುಟದ ಮೊದಲಿಗೆ
 
Votes:  10     Rating: 4.9    
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು