ಸೆಪ್ಟೆಂಬರ್ ೨೦, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಕತೆ ‘ಪ್ರಾಜೆಕ್ಟ್ ಬ್ರೀಜ್’    
ವಿಕ್ರಂ ಹತ್ವಾರ್
ಶನಿವಾರ, 21 ಜನವರಿ 2012 (07:29 IST)
ಚಿತ್ರಗಳು: ವಿಷ್ಣು

ಯಾರದೋ ಒಣ ಮೂಕಭಾವದ ಕೈಯಿಂದ ಜಾರಿಕೊಂಡ ಬಿಡಿ ಹೂವುಗಳು, ಮತ್ಯಾರದೋ ಆವೇಶದ ಕೈಬೀಸಿಗೆ ಟರಮಿಸುವ ತಮಟೆ, ಇವೆರಡಕ್ಕೂ ನಂಟೇ ಇಲ್ಲದಂತೆ ಹೆಣದ ವಾಹನವೊಂದು ನಡುವೆ ಸಾಗುತ್ತಿದ್ದರೆ, ಕಿಂಚಿತ್ತೂ ರಿಯಾಯಿತಿ ಸಲ್ಲಿಸದೆ ಅದನ್ನು ಓವರ್ ಟೆಕ್ ಮಾಡುವ ಸ್ಥಿತಿಗೆ ತಲುಪಿದ್ದ ಶ್ಯಾಮ್. ಅವನು ಆ ಒಳರಸ್ತೆಯಿಂದ ಬರುವಾಗ, ರಸ್ತೆಯ ಶುರುವಿನಲ್ಲಿ ಇಟ್ಟ ಕೈಯನ್ನು ಹಾರನ್ ಮೇಲಿಂದ ತೆಗೆಯುತ್ತಿದ್ದದ್ದು ಈ ಮುಖ್ಯರಸ್ತೆಗೆ ಬಂದ ಮೇಲೆಯೇ. ಅವನೊಳಗಿನ ವ್ಯಗ್ರತೆಯ ಕುದಿತವೆಲ್ಲ ಈ ಹಾರನ್ ವರಲುವಿಕೆಯಲ್ಲಿ ಹೊರಹೊಮ್ಮುತ್ತಿತ್ತು. ನಾನವನನ್ನು ಮೊದಲು ಗಮನಿಸಿದ್ದು ರಸ್ತೆಯುದ್ದ ವರಲುತ್ತ ಎಲ್ಲರ ಸಾವಧಾನವನ್ನು ಸೀಳುತ್ತ ಬರುವ ಈ ಹಾರನ್ ಸದ್ದಿನಿಂದಲೇ. ಇಲ್ಲದಿದ್ದರೆ, ದಿನಕ್ಕೆ ಸಾವಿರಾರು ಜನರು ಹಾದು ಹೋಗುವ ಈ ಸಂಗಮ ಸ್ಥಳದಿಂದ ಯಾರು ತಾನೆ ನನ್ನ ನೆನಪಿನಲ್ಲಿ ಉಳಿದಾರು? ನಾನು ಮಾತ್ರವಲ್ಲ, ಇಲ್ಲಿ ಕಾಯುತ್ತ ನಿಂತ ಸವಾರರೆಲ್ಲರ ಗಮನ ಆ ರಸ್ತೆಯ ಕಡೆಗೊಮ್ಮೆ ಹೋಗದೆ ಇರುತ್ತಿರಲಿಲ್ಲ. ದೂರದ ಅಗೋಚರ ಕ್ಷೀಣತರಂಗ, ಹತ್ತಿರಾಗುತ್ತಿದ್ದಂತೆ ಹೆಚ್ಚಾಗುತ್ತ, ಗೋಚರದಲ್ಲಿ ನಿಲ್ಲುವವರೆಗೆ ಕೆಲ ಸವಾರರ ಕತ್ತು ಸರ್ತಾಗುತ್ತಿರಲಿಲ್ಲ.

ರಸ್ತೆಯುದ್ದಕ್ಕು ಆ ಹಾರನ್ ಸದ್ದು ಎಬ್ಬಿಸಿದ ಕ್ಷೋಭೆಯಲ್ಲಿ ಶ್ಯಾಮನಿಗೆ ಬಿದ್ದ ಶಾಪಗಳ ಲೆಕ್ಕವಿಲ್ಲ. ರಸ್ತೆ ಪಕ್ಕದ ಗಾಡಿಯಲ್ಲಿ ತರಕಾರಿ ಆರಿಸುತ್ತಿರುವ ಹೆಂಗಸರು ಬೆಚ್ಚಿ, ಇನ್ನಷ್ಟು ಹಿಂದೆ ಸರಿದು ಮಣಮಣಿಸುತ್ತಿದ್ದರು. ಬೈಕು ಸ್ಕೂಟಿ ಸವಾರರ ಬ್ಯಾಲನ್ಸ್ ತಪ್ಪಿ ಪಕ್ಕ ಸರಿದು ‘ಒಂದಲ್ಲ ಒಂದಿವ್ಸ ಗ್ಯಾರಂಟಿ ಆಯ್ಕೊಂತಾನೆ ನನ್ ಮಗ..’ ಎಂದು ಕೆಲವರು ಭವಿಷ್ಯ ಹೇಳಿದರೆ, ಕೆಲವರು ಕೈ ತೋರಿಸಿ ‘ಏಯ್ ಲೋಫರ್!’ ಎಂದು ಆವಾಜ್ ಹಾಕುತ್ತಿದ್ದರು. ರಸ್ತೆ ದಾಟಲು ಮೊದಲು ಹೆಜ್ಜೆ ಇಟ್ಟು ನಂತರ ಎಡಬಲ ನೋಡುವ ಧಾವಂತದ ಜನರು ‘ಏನ್ರೀ ಮೈಮೇಲೇ ಬರ್ತಾನೆ’ ಎಂದು ಸಿಡುಕುತ್ತಿದ್ದರು. ಸಣ್ಣ ಹುಡುಗರು ಸೈಕಲನ್ನು ಗಕ್ಕನೆ ನಿಲ್ಲಿಸಿ ನಿಂತುಬಿಡುತ್ತಿದ್ದರು. ರಸ್ತೆ ಪಕ್ಕದ ಅಂಗಡಿಯವರು ಗಿರಾಕಿಗಳಿಗೆ ಒಂದು ಕೈಯಿಂದ ಚಿಲ್ಲರೆ ಕೊಡುತ್ತ ಮತ್ತೊಂದು ಕೈಯಿಂದ ಹಣೆ ಚಚ್ಚಿಕೊಂಡು ‘ಅದೇನ್ ಅರ್ಜೆಂಟು ರ್ರೀ ಜನಕ್ಕೆ’ ಅಂತ ಅತೃಪ್ತಿ ಸೂಚಿಸುತ್ತಿದ್ದರು. ಆ ಸಣ್ಣ ರಸ್ತೆಯಲ್ಲು ಕೊಡೆ ಬಿಡಿಸಿಕೊಡು ವಯ್ಯಾರದಲ್ಲಿ ನಡೆಯುವ ಹುಡುಗಿ ಕನಲಿ ‘ಸ್ಟುಪಿಡ್’ ಎಂದು ಮೂಗು ಮುರಿಯುತ್ತಿದ್ದಳು. ಫುಟ್ ಪಾತ್ ಇದ್ದರೂ ಅದರ ಮೇಲೆ ನಡೆಯದೆ ಅಡ್ಡಾದಿಡ್ಡಿ ಚದುರಿಕೊಂಡು ಹರಿದಾಡುವ ಎಚ್ಚರಗೇಡಿ ಜನಸಂದಣಿಯ ಓಣಿಯಲ್ಲಿ, ಶ್ಯಾಮ್‌ನ ಕಪ್ಪು ಸ್ಯಾಂಟ್ರೋ ಕಾರು ಯವುದಕ್ಕೂ ಕ್ಯಾರೇ ಎನ್ನದೆ ತನ್ನ ದಾರಿ ಛೇದಿಸಿಕೊಂಡು ಸಾಗುತ್ತಿತ್ತು.

ಹೀಗೆ, ತನ್ನ ಮನೆಯಿಂದ ಹೊರಟು ಒಂದು ಗಂಟೆಯ ಒಳಗೆ ಆಫೀಸು ಸೇರಬೇಕೆನ್ನುವ ವ್ಯವಧಾನರಹಿತ ಶ್ಯಾಮನ ಕಾರು ಇತ್ತೀಚೆಗೆ ಬಹಳ ಮಂಕಾಗಿದೆ. ಆಂಬುಲೆನ್ಸಿನ ಸೈರನ್ನಿಗೆ ಮಾತ್ರ ದಾರಿ ಬಿಡುತ್ತಿದ್ದ ಅವನ ಕಾರು ಈಗ ಸೈಕಲ್ ಸವಾರರಿಗು ದಾರಿ ಬಿಡುತ್ತಿದೆ. ಮುಖ್ಯವಾಗಿ ಶಾರ್ಟ್ ಕಟ್ ದಾರಿ ಅಂತ ಪಕ್ಕದ ಒಳ ರಸ್ತೆಯಿಂದ ನುಗ್ಗಿ ಬಂದು ಇಲ್ಲಿ ಮುಖ್ಯ ರಸ್ತೆ ಸೇರುವುದನ್ನು ಬಿಟ್ಟು ಎದುರಿನ ಮುಖ್ಯರಸ್ತೆಯಿಂದಲೇ ಬಂದು ಈ ವೃತ್ತದಿಂದ ನನ್ನನ್ನು ಹಾದು ಹೋಗುತ್ತಿದ್ದಾನೆ.

ಎಂದಿನಂತೆ ಈವತ್ತೂ ಸಿಕ್ಕಾಪಟ್ಟೆ ಟ್ರಾಫಿಕ್ ಇದೆ. ಅವನ ಕಾರು ಈ ವೃತ್ತಕ್ಕೆ ಬರಬೇಕಿದ್ದರೆ ಇನ್ನೊಂದು ಇಪ್ಪತ್ತು ನಿಮಿಷವಾದರು ಬೇಕು. ಆದರೂ ಅವನಲ್ಲಿ ಯಾವುದೇ ಅಸಹನೆಯಿಲ್ಲ. ಕಾರಿನ ಬಳಿ ಬಂದು ಕೈ ತಟ್ಟಿದ ಹಿಜಾಡಗೆ ಪರ್ಸಿನಿಂದ ಹತ್ತು ರೂಪಾಯಿ ತೆಗೆದು ಕೊಟ್ಟ. ಆಶೀರ್ವಾದ ಎನ್ನುವಂತೆ ಸ್ಟೇರಿಂಗ್ ಮುಟ್ಟಿ ಕೈ ತಟ್ಟುತ್ತ ಹಿಜಡಾ ಮುಂದೆ ಸಾಗಿದ. ಶ್ಯಾಮ್ ಕಾರಿನ ಗ್ಲಾಸು ಏರಿಸಿದ. ಏ.ಸಿ ಹಾಕಿಕೊಂಡಿರಬೇಕು. ಅವನು ಹೀಗೆ ಕಾರಿನ ಕಿಟಕಿ ಗ್ಲಾಸು ಹಾಕಿಕೊಂಡು ಗಾಡಿ ಓಡಿಸಿದ್ದನ್ನು ನಾನು ಕಂಡಿಲ್ಲ. ಸ್ಟೇರಿಂಗ್ ಹಿಡಿದ ಬಲಗೈ ಕಿಟಕಿಯ ಮೇಲೆ ಅರ್ಧ ಹೊರಚಾಚಿಕೊಂಡಿರುತ್ತಿತ್ತು. ಎಡಗೈ ಗೇರಿನ ಮೇಲಿರುತ್ತಿತ್ತು. ಮಿಂಚಿನಂತೆ ಸಾಗುವಾಗಲು ಸುತ್ತಲಿನ ಜಗತ್ತನ್ನೊಮ್ಮೆ ಅಳೆದುಬಿಡುತ್ತಿದ್ದ. ಅಳೆದದ್ದು ಬೆಳೆಯುತ್ತ ಹೋಗಿ ಅದರ ಭಾರಕ್ಕೆ ಜರ್ಝರಿತನಾಗಿ ಈ `Tall Dark Handsome' ಕುಸಿದು ಮರಗಟ್ಟಿ ಹೋಗಿದ್ದಾನೆ.

ಓಹ್! ಅಲ್ಲಿ ನೋಡಿ. ಯಾವುದೋ ಕಂಪನಿಯ ಬಸ್ಸು, ಸಿಗ್ನಲ್ ಕೆಂಪಾದ ಮೇಲೂ ದಾಟಲು ಹೋಗಿ ಎದುರಿಂದ ಬಲಕ್ಕೆ ತಿರುಗಲು ಹೊರಟ ವಾಹನಗಳಿಗೆ ಅಡ್ಡವಾಗಿ ರಸ್ತೆ ಮಧ್ಯಕ್ಕೆ ನಿಂತುಬಿಟ್ಟಿದೆ.....ಇಲ್ಲಿ ಯಾರಿಗೆ ಅವಸರ ಇಲ್ಲ ಹೇಳಿ? ಇನ್ನು ಶ್ಯಾಮ್ ಈ ವೃತ್ತ ದಾಟಬೇಕಿದ್ದರೆ ಇನ್ನೂ ಮೂವತ್ತೋ ನಲವತ್ತೋ ನಿಮಿಷ ಆಗಬಹುದು. ಅಷ್ಟರಲ್ಲಿ ಅವನು ಹೀಗೆ ಮಂಕಾಗಿರುವುದರ ಹಿಂದಿನ ಕಥೆ ಹೇಳಿಬಿಡುತ್ತೇನೆ. ಜೀವ ಬಂದಾಗಿನಿಂದ ಮುಖವೆಲ್ಲ ಕಣ್ಣಾಗಿ ಲಕ್ಷಾಂತರ ಜನರನ್ನು ನೋಡುತ್ತ ಇಲ್ಲೇ ನಿಂತೂ ನಿಂತೂ ಕಥೆಗಾರನಾಗಿ ಹೋದ ನನ್ನ ಹಣೆಯಬರಹಕ್ಕೆ ಅವನ ಘಟಿತಗಳೆಲ್ಲ ಒದಗಿಬರುವ ಸಂಕಟವನ್ನು ಹೀಗಾದರು ನಿವಾರಿಸಿಕೊಳ್ಳುತ್ತೇನೆ. ಒಂದು ಅಂಜನ ಹಾಕಿದ ಅಂಗೈಯ ಹಾಗೆ ಕಾಣುವ ಈ ಜಗತ್ತಿನ ರೇಖೆಗಳ ಗೋಜಲಿನಲ್ಲಿ ಈ ಎಲ್ಲ ನಿರಾಸಕ್ತಿ, ವ್ಯಗ್ರತೆ, ಅಸಹನೆ, ಆತಂಕ, ಒತ್ತಡಗಳ ಏಕಮೂಲವಿರುವುದು ನನ್ನನ್ನು ದಾಟುತ್ತಿದ್ದಂತೆ ಎರಡೂವರೆ ಕಿಲೋಮೀಟರ್ ದೂರದಲ್ಲಿರುವ ಐ.ಟಿ ಪಾರ್ಕಿನ ಕಂಪನಿಯೊಂದರ ಕಾನ್‌ಫರೆನ್ಸ್ ರೂಮಿನಲ್ಲಿ...

***

ಆವತ್ತು ಆ ಕಾನ್‌ಫರೆನ್ಸ್ ರೂಮಿನಲ್ಲಿ ಏ.ಸಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಶ್ಯಾಮ್ ಮತ್ತು ಪ್ರಾಜೆಕ್ಟಿನ ಲೀಡ್ ಆಗಿದ್ದ ಪ್ರತಾಪ್ ಮೇಜಿನ ಒಂದು ಪಕ್ಕಕ್ಕೆ ಸರಿದರೆ, ಎದುರಿನಲ್ಲಿ ಪ್ರಾಜೆಕ್ಟಿನ ಮ್ಯಾನೇಜರ್ ಶ್ರೀನಿಯ ಜೊತೆ ಹೊಸಬನೊಬ್ಬ ಕುರ್ಚಿ ಹಿಡಿದರು. ಸಣ್ಣದೊಂದು ‘ಅಪ್‌ಡೇಟ್’ ಇದೆಯೆಂದು ಶ್ರೀನಿ ಶ್ಯಾಮ್‌ನನ್ನು ಕೆಲಸದ ನಡುವೆ ಎಬ್ಬಿಸಿಕೊಂಡು ಬಂದಿದ್ದ. ಎಲ್ಲರೂ ಗಾಲಿ ಕುರ್ಚಿಯಲ್ಲಿ ಕುಳಿತು ಮುಂದಕ್ಕೆ ತಳ್ಳಿ ಮೇಜನ್ನು ಹಿಡಿದು ಸ್ಥಾಯಿಯಾಗುವ ಮುನ್ನವೇ ಶ್ರೀನಿ ಯಾವುದೇ ಪೀಠಿಕೆ ಇಲ್ಲದೆ, ನೇರವಾಗಿ ಲಘುವಾಗಿ, ‘ಪ್ರತಾಪ್ ರಿಸೈನ್ ಮಾಡಿದ್ದಾನೆ’ ಎಂದ. ತತ್‌ಕ್ಷಣವೇ ‘ಮುಗ್ದೇ ಹೋಯ್ತು....’ ಎನಿಸಿತು ಶ್ಯಾಮನಿಗೆ. ಆದರೂ ಅಷ್ಟೇ ಲಘುವಾಗಿ ‘ಓಹ್ ಓಕೆ’ ಎಂದು ಪ್ರತಾಪ್‌ನತ್ತ ಒಮ್ಮೆ ನೋಡಿ ಕಿರಿದಾಗಿ ನಕ್ಕ.

ಪ್ರತಾಪ್ ಹೀಗೆ ಇದ್ದಕ್ಕಿದ್ದ ಹಾಗೆ ರಿಸೈನ್ ಮಾಡಿದ್ದನ್ನು ಒಂದು ಕ್ಷಣ ನಂಬದಾದ. ಪ್ರತಾಪ್ ಮತ್ತು ಶ್ಯಾಮ್ ಇಬ್ಬರೂ ಸೇರಿ ಈ ಪ್ರಾಜೆಕ್ಟನ್ನು ಕಟ್ಟಿ ಬೆಳೆಸಿದ್ದರು. ಪ್ರಾಜೆಕ್ಟಿನ ಹೆಸರು ‘ಬ್ರೀಝ್’; ಅಂದರೆ ತಂಗಾಳಿ. ಮೊದಲಿಗೆ ಐದು ಜನರೊಂದಿಗೆ ಶುರುವಾದ ಪ್ರಾಜೆಕ್ಟು ಎಂಟೇ ತಿಂಗಳಲ್ಲಿ ಕ್ರಮೇಣ ಮೂವತ್ತು ಜನಕ್ಕೆ ಬೆಳೆಯಿತು. ಮೊದಲೆಲ್ಲ ಐದು ಹತ್ತು ರಿಪೋರ್ಟುಗಳನ್ನು ಮಾತ್ರ ತಯಾರಿಸುತ್ತಿದ್ದವರು ಇಪ್ಪತ್ತು ಮೂವತ್ತು ಐವತ್ತು ರಿಪೋರ್ಟು ಮಾಡಿಕೊಡಬೇಕಾಗಿ ಬಂತು. ಅದರಲ್ಲು ಸಿಂಗಪೂರಿನ ಗ್ರಾಹಕರು ವಿಪರೀತ ಒತ್ತಡ ಹೇರುತ್ತಿದ್ದರು. ಗ್ರಾಹಕರಿಗಿಂತ ಹೆಚ್ಚಾಗಿ ಭಾರತದವನೇ ಆದ ಬ್ಯಾಂಕಿನ ಐ.ಟಿ ಮ್ಯಾನೇಜರ್ ಸೋನಿ ಒತ್ತಡ ಹೇರುತ್ತಿದ್ದ. ಅವನಿಗಲ್ಲಿ ತನ್ನ ಪ್ರತಿಷ್ಠೆಯನ್ನು ಕಾಯ್ದುಕೊಳ್ಳಬೇಕಿತ್ತು. ತನ್ನನ್ನು ತಾನು ನಿರೂಪಿಸಿಕೊಳ್ಳಬೇಕಿತ್ತು. ‘ಈ ವರ್ಷದಲ್ಲಿ ನಾವು ಒಟ್ಟಾರೆ ಎಪ್ಪತ್ತೈದು ರಿಪೋರ್ಟು ತಯಾರು ಮಾಡಿ ಕೊಡಲೇಬೇಕು. ಎಷ್ಟು ಜನ ಬೇಕು ಅಂತ ಹೇಳಿ, ಅದಕ್ಕಾಗಿ ಪ್ರಾಜೆಕ್ಟಿನ ಮೊತ್ತ ಎಷ್ಟು ಹೆಚ್ಚುತ್ತದೆ ತಿಳಿಸಿ, ಹೇಗಾದರು ಪ್ಲ್ಯಾನ್ ಮಾಡಿ. ಈ ಆರು ತಿಂಗಳಲ್ಲಿ ಬರೀ ಇಪ್ಪತ್ತೈದು ರಿಪೋರ್ಟು ಸಿದ್ಧವಾಗಿದೆ, ನೀವು ಏನುಬೇಕಾದರು ಮಾಡಿ, ಇನ್ನಾರು ತಿಂಗಳಲ್ಲಿ ಇನ್ನೂ ಐವತ್ತು ರಿಪೋರ್ಟು ಆಗಲೇಬೇಕು’ ಅಂತ ಸ್ಪಷ್ಟವಾಗಿ ತಿಳಿಸಿದ್ದ. ಆದ್ದರಿಂದ ಪ್ರಾಜೆಕ್ಟಿನ ಲೀಡ್ ಆಗಿದ್ದ ಪ್ರತಾಪ್ ಜೊತೆ ಶ್ಯಾಮ್ ಕೂಡ ಸೂಕ್ತ ಅಭ್ಯರ್ಥಿಗಳಿಗಾಗಿ ಕಂಪನಿಯ ಒಳಗೂ ಹೊರಗೂ ಹುಡುಕಾಡಿ ಇಂಟರ್‌ವೀವ್ಯ್ ನಡೆಸಿ ಜನರನ್ನು ಆಯ್ದುಕೊಳ್ಳುತ್ತಿದ್ದರು. ಮೊದಮೊದಲು ಸಾಕಷ್ಟು ಪರಿಣತಿ ಹೊಂದಿರುವ ಅನುಭವಿಗಳನ್ನು ಮಾತ್ರ ಆಯ್ದುಕೊಳ್ಳಲು ನಿರ್ಧರಿಸಿ ಕಠಿಣವಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಮೂವತ್ತು ಜನರ ಇಂಟರ್‌ವ್ಯೀವ್ ನಡೆಸಿದರೂ ಯಾರೂ ಆಯ್ಕೆ ಆಗಲಿಲ್ಲ. ಎಂಟು-ಹತ್ತು ವರ್ಷದ ಅನುಭವಿಗಳ ಪರಿಣತಿಯೂ ಅಷ್ಟಕ್ಕಷ್ಟೇ ಎನ್ನುವಂತಿತ್ತು. ಕೊನೆಗೆ ತಂತ್ರಾಂಶಗಳ ಪ್ರಾಥಮಿಕ ಜ್ಞಾನವಿದ್ದರೂ ಸಾಕು ಎಂದು ತಮ್ಮ ಕಂಪನಿಯಲ್ಲಿ ಯಾರ್ಯಾರು ಲಭ್ಯವಿದ್ದರೋ ಎಲ್ಲರನ್ನೂ ಪ್ರಾಜೆಕ್ಟಿಗೆ ಸೇರಿಸಿಕೊಳ್ಳತೊಡಗಿದರು. ಕಂಪನಿಯ ಹೊರಗಿನಿಂದಲೂ ಜನರನ್ನು ಸೆಳೆಯತೊಡಗಿದರು. ಹುಡುಗರು, ಹುಡುಗಿಯರು, ಮದುವೆಯಾದವರು, ಆಗದವರು, ಕೆಲಸಹೋಗಿ ಮನೆಯಲ್ಲಿ ಕುಳಿತವರು, ಯಾರಾದರು ಸರಿ, ಕೆಲಸ ಮಾಡುವ ಕನಿಷ್ಠ ಹುಮ್ಮಸ್ಸು ಮತ್ತು ಕೆಲಸ ಕಲಿಯಬಹುದಾದ ಕನಿಷ್ಠ ಯೋಗ್ಯತೆ ಇದೆಯೆಂದು ತಿಳಿದ ತಕ್ಷಣ ಅವರನ್ನು ಆಯ್ದುಕೊಳ್ಳುತ್ತಿದ್ದರು. ಕೆಲಸ ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದ ಸಲೀಂ, ಹೊಸ ಪ್ರಾಜೆಕ್ಟಿಗಾಗಿ ಹುಡುಕುತ್ತಿದ್ದ ಪ್ರವೀಣ್, ಯಾವುದಾದರು ಸರಿ ಒಟ್ಟಿನಲ್ಲಿ ಈ ದೇಶ ಬಿಟ್ಟು ಹೋಗಬೇಕು ಅಂತ onsite ಅವಕಾಶಕ್ಕಾಗಿ ತವಕಿಸುತ್ತಿದ್ದ ಸುಹಾಸ್, ಬೇರೆ ಕಂಪನಿಯಿಂದ ಹೆಚ್ಚಿನ ಸಂಬಳಕ್ಕಾಗಿ ಈ ಕಂಪನಿ ಸೇರಿದ್ದ ಪಲ್ಲವಿ ಮತ್ತು ಜಾರ್ಜ್, ಇವರೆಲ್ಲ ಪ್ರಾಜೆಕ್ಟಿಗೆ ಸೇರಿದ್ದು ಆಗಲೇ. ಎಲ್ಲರಿಗು ‘ಬ್ರೀಝ್’ ಪ್ರಾಜೆಕ್ಟಿಗೆ ಸಿಳುಕಿಕೊಂಡಿದ್ದು ಆ ಕ್ಷಣಕ್ಕೆ ತಂಗಾಳಿ ಬೀಸಿದಂತಿತ್ತು. ಆದರೆ ಆ ಹೆಸರು ಮುಂದಿನ ದಿನಗಳಲ್ಲಿ ಎಂಥ ದೊಡ್ಡ ಕುಹಕವಾಗಿ ಕೇಳಿಸಬಹುದು ಎಂಬುದರ ಕಲ್ಪನೆ ಅವರಲ್ಲಿ ಯಾರಿಗೂ ಇರಲಿಲ್ಲ.

ಅದಕ್ಕೂ ಮುಂಚೆಯೇ ಪ್ರತಾಪ್ ರಿಸೈನ್ ಮಾಡಿದ್ದಾನೆ. ‘ನಾವು ಪ್ರತಾಪ್‌ನನ್ನು ಮುಂದುವರೆಯಲು ಕೇಳಿಕೊಂಡೆವು. ಆದರೆ ಅವನಿಗಿರುವ ಸಕಾರಣ ತಿಳಿದ ಮೇಲೆ ನಮಗೂ ಬೇರೇನೂ ಹೇಳುವಂತಿಲ್ಲ, ಅಲ್ವಾ ಪ್ರತಾಪ್?’ ಶ್ರೀನಿ ಪ್ರತಾಪ್‌ನತ್ತ ನೋಡಿ ನಕ್ಕು, ‘ಮನೆಯಿಂದ ಇಲ್ಲಿಗೆ ಬರೋಕೆ ಎರಡು ಗಂಟೆ ಆಗುತ್ತೆ ಅನ್ನೋ ಕಾರಣಕ್ಕೆ ಪ್ರತಾಪ್ ಕೆಲಸ ಬಿಡ್ತಿದ್ದಾನೆ’ ಎಂದು ಶ್ಯಾಮ್‌ಗೆ ಹೇಳಿದ. ಇದೇನು ದರಿದ್ರ ಟ್ರಾಫಿಕ್ಕು ಮಾರ್ರಾಯ ಅಂತ ಪ್ರತಾಪ್ ಹಲವು ಬಾರಿ ಹಲುಬಿದ್ದಾನೆ. ಅಲ್ಲೇ ಮನೆಯ ಹತ್ತಿರ ಯಾವುದಾದರು ಕಂಪನಿ ನೋಡಿಕೊಳ್ಳಬೇಕು ಅಂತ ಹಲವು ಸಲ ಹೇಳಿಕೊಂಡಿದ್ದಿದೆ. ಆದರೆ ಹಠಾತ್ತನೆ ರಿಸೈನ್ ಮಾಡುತ್ತಾನೆ ಎಂದುಕೊಂಡಿರಲಿಲ್ಲ. ‘ಓಹ್ ಓಕೆ. ಅಲ್ಲೇ ಮನೆಯ ಹತ್ತಿರ ಯಾವುದೋ ಕಂಪನಿಯಲ್ಲಿ ಕೆಲಸ ಸಿಕ್ತಾ?’ ಎಂದು ಕೇಳಿ ಅವನ ಉತ್ತರಕ್ಕೂ ಕಾಯದೆ, ಶ್ರೀನಿಯ ಮುಂದಿನ ಯೋಜನೆಗಳು ಏನಿರಬಹುದೆಂದು ಶ್ಯಾಮ್ ಅವನ ಮಾತಿಗಾಗಿ ನಿರೀಕ್ಷಿಸಿದ.

‘ಈಗಿನ ಟೀಮ್ ಬಹಳ ಹೊಸತು. ಇರುವುದರಲ್ಲಿ ನೀನು ಮತ್ತು ಅನನ್ಯ ಅನುಭವಿಗಳು. ಈಗ ನಿನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪ್ರತಾಪ್‌ನ ಜವಾಬ್ದಾರಿಗಳೆಲ್ಲ ನಿನಗೆ ವರ್ಗಾವಣೆಯಾಗಲಿದೆ. ನಿನ್ನ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸುತ್ತೇವೆ’ ಎಂದು ಶ್ಯಾಮ್ ನಿರೀಕ್ಷಿಸಿದ ಮಾತುಗಳನ್ನೇ ಶ್ರೀನಿ ಆಡಿದ. ಕೊನೆಯಲ್ಲಿ ನಿರೀಕ್ಷಿಸಿರದ ಬೆಳವಣಿಗೆಯೊಂದನ್ನು ತಿಳಿಸಿದ. ‘ಈತ ಸಂಜಯ್. ಎಂಟು ವರ್ಷ ಅನುಭವ ಇದೆ. ಪ್ರಾಜೆಕ್ಟ್ ಲೀಡ್ ಆಗಿ ಕೆಲಸ ಮಾಡಿದ್ದಾರೆ. ಟೀಮ್ ಬಹಳ ದೊಡ್ಡದಿದೆ ಮತ್ತು ಎಲ್ಲ ಹೊಸಬರಿದ್ದಾರೆ. ಆದ್ದರಿಂದ ನಿನಗೆ ಸಹಾಯ ಆಗಲೆಂದು ಇವರು ಈ ಪ್ರಾಜೆಕ್ಟಿನ ಮೇಲ್ವಿಚಾರಣೆ ವಹಿಸಿಕೊಳ್ಳಲಿದ್ದಾರೆ. ನೀನಿನ್ನು ಸಂಜಯ್‌ಗೆ ರಿಪೋರ್ಟ್ ಮಾಡಲಿದ್ದೀಯ’ ಎಂದು ಸಂಜಯ್‌ನನ್ನು ಪರಿಚಯಿಸಿದ. ಅದೊಂದೇ ಸಲ ಶ್ಯಾಮ್ ಸಂಜಯ್‌ನ ಕೈಕುಲಕಿದ್ದು. ಅದರಲ್ಲೆ ಆ ಆರಡಿ ಹ್ಯಾಂಡ್‌ಸಮ್ ಶ್ವೇತಾಕೃತಿಯ ಬಿಗುವು ಮತ್ತು ಜಿಗುಟುತನಗಳ ಕಮಟು ಬಡಿಯಿತು.

ಕಾನ್‌ಫರೆನ್ಸ್ ರೂಮಿನಿಂದ ಹೊರಬಂದ ಮೇಲೆ ಶ್ರೀನಿಯೊಂದಿಗಿನ ವೈಯಕ್ತಿಕ ಎನಿಸಬೇಕಾದ ಮಾತುಕತೆಯ ರೀತಿಯಲ್ಲಿ ಶ್ಯಾಮ್ ನಿಧಾನಕ್ಕೆ ಕೇಳಿದ- ‘ಹಾಗಿದ್ರೆ ನನ್ನ ರಿಲೀಸ್ ವಿಚಾರ...’

‘ಅಯ್ಯೊ ಅದಕ್ಕೇನು. ಇನ್ನೊಂದು ಐದಾರು ತಿಂಗಳು. ಸಂಜಯ್ ಪ್ರಾಜೆಕ್ಟಿನ ಮೇಲೆ ಹಿಡಿತ ಸಾಧಿಸುತ್ತಿರುವಂತೆ ನಿನ್ನನ್ನು ಈ ಪ್ರಾಜೆಕ್ಟಿನಿಂದ ರಿಲೀಸ್ ಮಾಡುವ ಬಗ್ಗೆ ವ್ಯವಸ್ಥೆ ಮಾಡೋಣ’ ಅಂತ ಶ್ರೀನಿ ಹೇಳಿದಾಗ ಸ್ವಲ್ಪ ಸಮಾಧಾವೆನಿಸಿತು.

‘ಟೀಮ್‌ನ ನಿಯಂತ್ರಣ ಕಷ್ಟವಾಗಿದೆ ಶ್ರೀನಿ. ಹತ್ತು ಜನ ಒಂದು ಬ್ಲಾಕಿನಲ್ಲಿ ಕುಳಿತರೆ ಹತ್ತು ಜನ ಇನ್ನೊಂದು ಬ್ಲಾಕಿನಲ್ಲಿ. ಒಟ್ಟು ನಾಲ್ಕು ಬ್ಲಾಕಿನಲ್ಲಿ ನಮ್ಮ ಜನ ಹಂಚಿಹೋಗಿದ್ದಾರೆ. ಯಾರು ಏನು ಮಾಡುತ್ತಿದ್ದಾರೆ ಅನ್ನೋದೇ ಗೊತ್ತಾಗೊಲ್ಲ. ಒಬ್ಬೊಬ್ಬರನ್ನ ಒಂದೊಂದು ಕಡೆ ಹುಡುಕಬೇಕು’ ಎಂದು ಶ್ಯಾಮ್ ತನ್ನ ಕಷ್ಟ ಹೇಳಿಕೊಂಡ.

‘ಐ ನೋ ಐ ನೋ. ಹೊಸ ಬಿಲ್ಡಿಂಗಿನಲ್ಲಿ ನಮ್ಮ ಪ್ರಾಜೆಕ್ಟಿಗು ಸ್ಥಳ ಕೊಟ್ಟಿದ್ದಾರೆ. ಅಲ್ಲಿಗೆ ಶಿಫ್ಟ್ ಆದಮೇಲೆ ಸುಲಭ ಆಗುತ್ತೆ ಬಿಡು. ಸ್ವಲ್ಪ ದಿವ್ಸ ಅಷ್ಟೇ’ ಎಂದು ಶ್ರೀನಿ ಅದೇ ಐ.ಟಿ ಪಾರ್ಕಿನಲ್ಲಿ ತಮ್ಮ ಕಂಪನಿಯವರಿಗಾಗಿಯೇ ಪ್ರತ್ಯೇಕವಾಗಿ ಕಟ್ಟಿಸುತ್ತಿರುವ ಹದಿಮೂರು ಅಂತಸ್ತಿನ ಕಟ್ಟಡ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ಸುದ್ದಿ ತಿಳಿಸಿದ. ಪ್ರಾಜೆಕ್ಟಿನ ಸಮಸ್ಯೆಗಳ ಬಗ್ಗೆ ಶ್ರೀನಿಗೂ ಅರಿವಿದ್ದು ಅದರ ಕಡೆ ಗಮನ ಹರಿಸುತ್ತಿದ್ದಾನೆಂದು ಸಮಾಧಾನವಾಯಿತು ಶ್ಯಾಮ್‌ಗೆ. ತನ್ನ ರಿಲೀಸ್ ವಿಚಾರ ತಲೆಯಲ್ಲಿ ಇದ್ದಿದ್ದರಿಂದಲೇ ಸಂಜಯ್‌ನನ್ನು ಕರೆತಂದಿದ್ದಾನೆ ಎಂದುಕೊಂಡ. ಆದರೂ ಪೂರ್ತಿ ನಂಬಿಕೆ ಬರಲಿಲ್ಲ. ತನಗೆ ಇನ್ನು ಅಷ್ಟು ಸುಲಭದಲ್ಲಿ ರಿಲೀಸ್ ಸಿಗಲಿಕ್ಕಿಲ್ಲ ಅನಿಸಿತು. ಪ್ರಾಜೆಕ್ಟಿನ ಸ್ಥಿತಿಯೇ ಹಾಗಿತ್ತು. ಇಂಥ ಸಮಯದಲ್ಲಿ ಪ್ರತಾಪ್ ರಿಸೈನ್ ಮಾಡಿದ್ದು ಅವನ ಜಾಣತನವಾಗಿ ಕಂಡರೂ ತಾನು ಕಟ್ಟಿದ ಪ್ರಾಜೆಕ್ಟನ್ನು ಹೀಗೆ ಅರ್ಧಕ್ಕೇ ಬಿಟ್ಟು ಹೋಗುವ ಪ್ರತಾಪ್‌ನ ನಿರ್ಧಾರ ಶ್ಯಾಮ್‌ಗೆ ಸರಿಕಾಣಲಿಲ್ಲ.

ಮುಂದಿನ ಸೋಮವಾರದಿಂದಲೇ ಸಂಜಯ್ ಶ್ಯಾಮ್‌ನ ಪಕ್ಕದ ಸಾಲಿನಲ್ಲಿ ಆಸೀನನಾಗಿಬಿಟ್ಟ. ಪ್ರತಾಪ್ ಪ್ರಾಜೆಕ್ಟಿನ ಅಷ್ಟೂ ವಿವರಗಳನ್ನು ಸಂಜಯ್‌ಗೆ ನೀಡತೊಡಗಿದ. ಅಲ್ಲಿವರೆಗೆ ಶ್ಯಾಮ್ ಒಬ್ಬನೇ ಪ್ರಾಜೆಕ್ಟಿನ ಅಷ್ಟೂ ಉಸ್ತುವಾರಿ ವಹಿಸಿಕೊಂಡ. ಸಿಂಗಪೂರಿನಲ್ಲಿರುವ ಬ್ಯಾಂಕಿನ ಐ.ಟಿ ಮ್ಯಾನೇಜರ್‌ಗಳೊಂದಿಗಿನ ನಿರಂತರ ಮೀಟಿಂಗು, ಮುಂದಿನ ಮೂರು ತಿಂಗಳಲ್ಲಿ ಯಾವ್ಯಾವ ರಿಪೋರ್ಟುಗಳನ್ನು ಸಿದ್ಧಪಡಿಸಬೇಕು, ಒಂದೊಂದು ರಿಪೋರ್ಟಿಗು ತಗಲುವ ಅಜಮಾಸು ಸಮಯದ ವೆಚ್ಚ, ಟೀಮಿನವರ ಉದ್ದೇಶಿತ ರಜಾ ದಿನಗಳು, ಅದಕ್ಕೆ ತಕ್ಕಂತೆ ಯಾರ್ಯಾರಿಗೆ ಯವ್ಯಾವ ರಿಪೋರ್ಟುಗಳನ್ನು ನಿಗದಿ ಮಾಡಿದರೆ ಬೇಗ ಮುಗಿಸಬಹುದೆನ್ನುವ ಲೆಕ್ಕಾಚಾರ, ಜೊತೆಯಲ್ಲಿ ಹೆಚ್ಚುವರಿ ರಜೆಗಳು ಬೀಳಬಹುದಾದ ಸಾಧ್ಯತೆಯನ್ನೂ ಗಣನೆಗೆ ತೆಗೆದುಕೊಂಡು, ಪ್ರತಿಯೊಂದು ರಿಪೋರ್ಟಿಗೂ ಒಂದೊಂದು ತಾರೀಖನ್ನು ನಿಗದಿಗೊಳಿಸಿ ಅದರೊಳಗೆ ಕೊನೆಗೊಳ್ಳಲೇಬೇಕಾದ ಗಡಿ ವಿಧಿಸಿ, ಎಲ್ಲವೂ ಸಸೂತ್ರವಾಗುವಂತೆ ಯೋಜಿಸಿದರು. ಅದನ್ನು ಸಾಂಗೋಪಾಂಗವಾಗಿ ತಮ್ಮ ಯೋಜನಾ ರಿಪೋರ್ಟುಗಳಲ್ಲಿ ನಿರೂಪಿಸಿದರು. ಏಕಕಾಲಕ್ಕೆ ಸರಿಸುಮಾರು ಹತ್ತರಿಂದ ಹನ್ನೆರಡು ರಿಪೋರ್ಟುಗಳ  ಕೆಲಸ ಶುರುವಾಗಿ, ಒಂದು ಮುಗಿಯುತ್ತಿದ್ದಂತೆ ಇನ್ನೊಂದರ ಕೆಲಸ ಶುರುವಾಗುವ ಹಾಗೆ ಮುಂದುವರಿದು, ಮೂರು ತಿಂಗಳಲ್ಲಿ ಎಲ್ಲಾ ಮೂವತ್ತು ರಿಪೋರ್ಟುಗಳು ಗ್ರಾಹಕರ ಟೆಸ್ಟಿಂಗಿಗೆ ಸಿದ್ಧವಿರುವುದೆಂದು, ಅದಾದ ಮೇಲೆ ಇದೇ ಯೋಜನೆಯ ಪ್ರಕಾರವಾಗಿ ಇನ್ನುಳಿದ ಇಪ್ಪತ್ತು ರಿಪೋರ್ಟುಗಳನ್ನು ಇನ್ನೆರಡು ತಿಂಗಳಲ್ಲಿ ಮುಗಿಸಬಹುದೆಂದು ನಿಶ್ಚಯಿಸಿದರು. ಅಲ್ಲಿಗೆ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ಹದಿನೈದರ ಒಳಗೆ ಒಟ್ಟು ‘ಎಪ್ಪತ್ತೈದು’ ರಿಪೋರ್ಟು ಸಿದ್ಧಪಡಿಸಿದ ಹಾಗಾಯಿತೆಂದು ಬ್ಯಾಂಕಿನ ಐ.ಟಿ ಮ್ಯಾನೇಜರ್‌ಗಳೂ ನಿರಾಳಗೊಂಡರು.

ಶ್ಯಾಮ್ ತನ್ನ ಈಮೇಲ್ ಸಿಗ್ನೇಚರಿನಲ್ಲಿ 'Genius is infinite capacity for taking pains' ಎಂಬ ಅಡಿನುಡಿ ಇರಿಸಿದ.

***

ಆ ಶುಕ್ರವಾರ ಸಂಜೆ ಏಳು ಗಂಟೆಗೆ ಪ್ರತಾಪ್‌ನ ಬೀಳ್ಕೊಡುಗೆ ಪಾರ್ಟಿಯೆಂದು ಎಲ್ಲರೂ ದೊಮ್ಮಲೂರಿನಲ್ಲಿರುವ ಬಾರ್ಬೀಕ್ಯೂ ನೇಷನ್‌ನಲ್ಲಿ ಸೇರಿದ್ದರು. ಆಫೀಸಿನಲ್ಲಿ ಸಿಂಗಪೂರಿನ ಮ್ಯಾನೇಜರ್‌ಗಳೊಂದಿಗೆ ಮಾತುಕತೆ ಮುಗಿಸಿಕೊಂಡು, ಶ್ಯಾಮ್ ತಡವಾಗಿ ಒಂಭತ್ತು ಗಂಟೆಯ ಸುಮಾರಿಗೆ ಬಂದ. ಅದಾಗಲೇ ಹಲವರು ಹೊರಟುಹೋಗಿದ್ದರು. ಅಲ್ಲೇ ಹತ್ತಿರದಲ್ಲಿ ಮನೆ ಇರುವವರು ಮತ್ರ ಉಳಿದಿದ್ದರು. ಪ್ರತಾಪ್ ತನಗೆ ಪ್ರಾಜೆಕ್ಟಿನವರು ಕೊಟ್ಟ ಗಂಧದ ಶ್ರೀನಿವಾಸನ ವಿಗ್ರಹ ತೋರಿಸಿದ. ‘ಓಹ್ ನೈಸ್. ನಿನಗೆ ಸರಿಯಾಗಿದೆ ಬಿಡು. ಪೂಜಾರಪ್ಪ ಪ್ರತಾಪ್’ ಎನ್ನುತ್ತ ನಕ್ಕು, ‘ಯಾರ ಆಯ್ಕೆ ಇದು? ಯಾರು ತಂದಿದ್ದು’ ಅಂತ ಕೇಳಿದ. ಇನ್ಯಾರು ಅನನ್ಯನೇ ಎಂದು ಅವಳತ್ತ ಕೈ ತೋರಿದ ಸುಹಾಸ್. ಟೀಮಿನಲ್ಲಿ ಎಲ್ಲರ ಬರ್ತ್ಡೇಯನ್ನು ಬರೆದಿಟ್ಟುಕೊಂಡು, ಎಲ್ಲರ ಬರ್ತ್ಡೇಗೆ ಕೇಕು ತರಿಸಿ ಸಂಭ್ರಮಿಸುವುದು, ಇಂಥ ಪಾರ್ಟಿಗಳನ್ನು ಎಲ್ಲರ ಅನುಕೂಲ ನೋಡಿಕೊಂಡು ಸ್ಥಳ ಸಮಯ ನಿಗದಿ ಮಾಡಿ ಆಯೋಜಿಸುವುದು, ಗಿಫ್ಟುಗಳ ವಿಷಯದಲ್ಲಿ ಆಸಕ್ತಿ ವಹಿಸಿ ನಾಲ್ಕಾರು ಕಡೆ ಓಡಾಡಿ ಕೊಂಡುಬರುವುದರಲ್ಲಿ, ಒಂದು ಮಗುವಿನ ತಾಯಿಯಾದರು ಅನನ್ಯಗೆ ಎಲ್ಲಿಲ್ಲದ ಹುಮ್ಮಸ್ಸು.

ಶ್ಯಾಮ್ ತನ್ನ ಜ್ಯಾಕೆಟ್ ತೆಗೆಯುತ್ತ ಟೇಬಲ್ಲಿನ ಮೇಲೊಮ್ಮೆ ಕಣ್ಣಾಡಿಸಿ, ‘ಬಹಳ ಧ್ವಂಸ ನಡೆದ ಹಾಗಿದೆ’ ಎಂದು ಹುಬ್ಬೇರಿಸಿ ನಕ್ಕು ಕುಳಿತ. ಪ್ಲೇಟಿಗೆ ಐನೂರಾಐವತ್ತು ರೂಪಾಯಿ ಬಫೆ ಊಟವೆಂದು ಎಲ್ಲರೂ ಎಗ್ಗಿಲ್ಲದೆ ದಾಳಿ ಮಾಡಿದ ಕುರುಹಾಗಿ ಅನ್ನಬ್ರಹ್ಮನ ಅವಶೇಷಗಳು ಟೇಬಲ್ಲಿನ ಮೇಲಿದ್ದವು. ‘ಅಯ್ಯೋ ಇದು ಬರೀ ಹತ್ತು ಪರ್ಸೆಂಟು ಮಾರ್ರಾಯಾ. ಪ್ರವೀಣ್ ಮತ್ತು ಸಲೀಂ ಸೇರಿ ನಿಮ್ಮಲ್ಲಿರುವ ಎಲ್ಲಾ ಪ್ರಾಣಿಗಳನ್ನೂ ತಂದು ಬಡೀರಿ ಅಂತ ಲೂಟಿ ಮಾಡಿದ್ದೇ ಮಾಡಿದ್ದು. ನೋಡಬೇಕಿತ್ತು ನೀನು. ಪಾಪ ಆ ವೈಟರ್ರು ಅದೆಷ್ಟು ಪ್ಲೇಟು ಬದಲಾಯಿಸಿದನೋ?’ ಎಂದು ಪ್ರತಾಪ್ ಹೇಳುತ್ತಿದ್ದಂತೆ, ‘ಹೌದು ಹೌದು. ಅದೆಷ್ಟು ತಿಂದ್ರಪ್ಪ ಅವರಿಬ್ಬರು ಈವತ್ತು. ಆದರೆ ಪ್ರತಾಪ್. ನೀನು ಯೋಚ್ನೆ ಮಾಡೋದು ಬೇಡ. ಬಿಲ್ ಏನೂ ಹೆಚ್ಚಾಗೊಲ್ಲ. ಎಷ್ಟು ತಿಂದ್ರೂ ಒಂದೇ ರೇಟು ತಾನೆ?’ ಎಂದು ಸಂಜಯ್ ಕೂಡ ಮಾತು ಸೇರಿಸಿ ನಕ್ಕ. ಅದೇ ಸಮಯಕ್ಕೆ ಪ್ರೀತಿ ಮಿಶ್ರಾ ಎರಡು ಸ್ಕೂಪ್ ವೆನಿಲ್ಲಾ ಐಸ್ ಕ್ರೀಮ್ ತಂದು ಶ್ಯಾಮ್‌ನ ಎದುರು ಕುಳಿತು, ‘ಈ ಚಾಕಲೇಟ್ ಐಸ್ ಕ್ರೀಮ್ ಒಂಚೂರೂ ಚೆನ್ನಾಗಿಲ್ಲ’ ಎಂದು, ಮೊದಲು ತಂದಿದ್ದ ಐಸ್ ಕ್ರೀಮಿನ ಕಪ್ಪನ್ನು ಪಕ್ಕಕ್ಕೆ ಸರಿಸಿದಳು. ಎಲ್ಲರೂ ನಕ್ಕರು. ಏನಕ್ಕೆಂದು ಅರ್ಥವಾಗದೆ ಪ್ರೀತಿ ಜಂಗೇರಿಸಿದಳು. ‘ಆ ಚಾಕಲೇಟ್ ಐಸ್ ಕ್ರೀಮ್ ಇಲ್ಲಿ ಕೊಡು’ ಎಂದು ಕುನಾಲ್ ಅವಳು ಬಿಟ್ಟ ಚಾಕಲೇಟ್ ಐಸ್ ಕ್ರೀಮನ್ನು ತಿನ್ನತೊಡಗಿದ.

‘ನಮ್ಮ ಅಫೀಸಿನ ಕ್ಯಾಂಟೀನಿನಲ್ಲಿ ಪ್ರತಿ ದಿವ್ಸ ಫುಡ್ ವೇಸ್ಟೇಜ್ ಅಂತ ಹಾಕಿರ್ತಾರಲ್ಲ...ಮೂವತ್ತು ಕೇಜಿ ಐವತ್ತು ಕೇಜಿ ಅಂತ. ಪ್ರತಿ ತಿಂಗಳು ಅದರಲ್ಲಿ ಅತಿ ಹೆಚ್ಚು ವೇಸ್ಟ್ ಫುಡ್ ಕಾಂಟ್ರಿಬ್ಯೂಟರ್ಸ್ ಯಾರು ಅಂತ ಟಾಪ್ ಟೆನ್ ಲಿಸ್ಟ್ ಹಾಕಿದರೆ, ಪ್ರತಿ ಸಲ ಪ್ರೀತಿ ಹೆಸರೇ ಮೊದಲಿರುತ್ತೆ’ ಎಂದು ಸಂಜಯ್ ಪ್ರೀತಿಯನ್ನು ಛೇಡಿಸಿದ. ಅದಕ್ಕವಳು, ‘ವೇ..ರ್ರಿ ಫನ್ನೀ..’ ಎಂದು ಐಸ್ ಕ್ರೀಮ್ ಚಪ್ಪರಿಸುತ್ತ ರಾಗವಾಗಿ ಹೇಳಿದಳು. ಸಂಜಯ್‌ನಿಗೆ ಪ್ರೀತಿ ಇಷ್ಟು ಸಲೀಸಾಗಿ ಉತ್ತರ ಕೊಟ್ಟಿದ್ದು ನೋಡಿ ಶ್ಯಾಮ್‌ಗೆ ಆಶ್ಚರ್ಯವಾಯಿತು.

ಲಖ್‌ನೌ ಹುಡುಗಿ ಪ್ರೀತಿ ಮಿಶ್ರಾ ಮತ್ತು ಡೆಲ್ಲಿಯ ಕುನಾಲ್‌ನನ್ನು ಶ್ಯಾಮ್ ಖುದ್ದಾಗಿ ಇಂಟರ್ವೀವ್ಯ್ ಮಾಡಿ ಪ್ರಾಜೆಕ್ಟಿಗೆ ಸೇರಿಸಿಕೊಂಡಿದ್ದ. ಯಾವುದಕ್ಕು ಒಂದಿಬ್ಬರು ಫ್ರೆಶರ್ಸು ಇರಲಿ, ಕೆಲಸ ಕಲಿಯುತ್ತ ಕೆಲಸದಲ್ಲಿ ನಿಧಾನವಾಗಿ ತೊಡಗಿಸಿಕೊಳ್ಳಿ ಎಂದು ಶ್ರೀನಿಯೇ ಹೇಳಿ ಇವರಿಬ್ಬರನ್ನು ಕಳಿಸಿದ್ದ. ತನ್ನ ಬಿಡುವಿಲ್ಲದ ಕೆಲಸಗಳ ನಡುವೆ ಊಟದ ಸಮಯದಲ್ಲಿ ಆಫೀಸಿನ ಕ್ಯಾಂಟೀನಿನಲ್ಲಿ ಇವರಿಬ್ಬರ ಇಣ್ಟರ್ವೀವ್ಯೂ ನಡೆಸಿದ್ದ ಶ್ಯಾಮ್. ಇಬ್ಬರೂ ಆಗಷ್ಟೇ ಕಾಲೇಜು ಮುಗಿಸಿ, ಕಂಪನಿಯ ವತಿಯಿಂದ ಕೊಡುವ ಎರಡು ತಿಂಗಳ ಟ್ರೈನಿಂಗ್ ಮುಗಿಸಿ ಪ್ರಾಜೆಕ್ಟಿಗಾಗಿ ಕಾಯುತ್ತಿದ್ದರು. ಇಬ್ಬರಲ್ಲೂ ಕೆಲಸ ಕಲಿಯುವ ಉತ್ಸಾಹ ಮತ್ತು ಚುರುಕುತನವಿರುವುದನ್ನು ಗಮನಿಸಿ ಪ್ರಾಜೆಕ್ಟಿಗೆ ಸೇರಿಸಿಕೊಂಡ. ಉದ್ದ ಗುಂಗುರು ಕೂದಲಿಂದ ಮುಚ್ಚಿ ಗರಿಹಗುರ ಕನ್ನಡಕ ತೊಟ್ಟ ಕುನಾಲ್‌ನ ಮುಖ ಸೌಮ್ಯವಾಗಿ ಕಂಡರೂ, ಕೆಲಸದ ವಿಚಾರದಲ್ಲಿ ಪ್ರೀತಿಗಿಂತ ಕುನಾಲ್ ಬಹಳ ಚುರುಕಾಗಿದ್ದಾನೆ ಅನಿಸಿತು. ಮಾತಿನಲ್ಲಿ ಬಹಳ ಚುರುಕಾಗಿದ್ದ ಪ್ರೀತಿ ಬಹಳ ಚಾಲೂ ಇದ್ದ ಹಾಗೆ ಕಂಡಳು. ಯಾವುದರ ಬಗ್ಗೆಯೂ ಮೊದಲೇ ನಿಶ್ಚಯ ತಾಳದೆ ಅವರನ್ನು ಪ್ರಾಜೆಕ್ಟಿನ ಇತರರಿಗೆ ಪರಿಚಯಿಸಿ, ಪ್ರವೀಣನಿಗೆ ಅವರಿಬ್ಬರಿಗೂ ಕೆಲಸ ಕಲಿಸುವಂತೆ ಹೇಳಿದ. ಅವರಿಬ್ಬರ ಮಧ್ಯೆ ಅಫೇರ್ ಇದೆ ಮತ್ತು ಅದು ಟ್ರೈನಿಂಗಿನ ಸಮಯದಲ್ಲೆ ಶುರುವಾಗಿತ್ತು ಎನ್ನುವುದು ಕ್ರಮೇಣ ಎಲ್ಲರಿಗೂ ತಿಳಿದು, ನೀಲಿಕಣ್ಣಿನ ಕುನಾಲ್ ಅಷ್ಟು ಸ್ಫುರದ್ರೂಪಿಯಾಗಿರುವಾಗ ಪ್ರೀತಿಗೆ ಗಾಳ ಹಾಕಿ ಉಪಯೋಗವಿಲ್ಲವೆಂದು ಪ್ರವೀಣನೂ ಸೇರಿ ಮಿಕ್ಕ ಹುಡಗರ ಉಮೇದು ನಂದಿಹೋಯಿತು. ಆದರೂ ಎಲ್ಲರೊಂದಿಗೂ ಸಲುಗೆಯಿಂದ ಮಾತಾಡುತ್ತಿದ್ದ ಪ್ರೀತಿಯ ಹತ್ತಿರ ಆಗಾಗ ಕೆಲ ಹುಡುಗರು ಟೈಮ್ ಪಾಸಿಗೆಂದು ಮಾತನಾಡುತ್ತ ಛೇಡಿಸುತ್ತ ಫ್ಲರ್ಟ್ ಮಾಡುತ್ತಿದ್ದರು. ಆದರೆ ಪ್ರೀತಿ ಪ್ರಾಜೆಕ್ಟ್ ಮ್ಯಾನೆಜರ್ ಆಗಿರುವ ಸಂಜಯ್‌ಗೆ ಇಷ್ಟು ಸಲೀಸಾಗಿ ಸಲುಗೆಯಿಂದ ಉತ್ತರ ನೀಡಿದ್ದು ಶ್ಯಾಮ್‌ನ ಗಮನ ಹರಿಯುವಂತೆ ಮಾಡಿತು. ಇದನ್ನು ಅನನ್ಯ ಕೂಡ ಗಮನಿಸದೆ ಇರಲಿಲ್ಲ. ಒಮ್ಮೆ ಶ್ಯಾಮ್‌ನತ್ತ ಏನೋ ಸೂಚಿಸುವಂತೆ ನೋಡಿ ಸುಮ್ಮನಾದಳು. ಕುನಾಲ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದವನಂತೆ ಪ್ರೀತಿ ತಿಂದು ಬಿಟ್ಟಿದ್ದ ಚಾಕಲೇಟ್ ಐಸ್ ಕ್ರೀಮನ್ನು ಚಪ್ಪರಿಸುತ್ತಿದ್ದ.

‘ಕೆಲಸ ಹೇಗೆ ನಡೀತಾ ಇದೆ ಕುನಾಲ್? How is it going?' ಎಂದು ಶ್ಯಾಮ್ ಕೇಳಿದ. ಪ್ರಾಜೆಕ್ಟಿಗೆ ಸೇರಿದಾಗಿನಿಂದ ಅವನೊಂದಿಗೆ ಕುಳಿತು ಲೋಕಾಭಿರಾಮ ಮಾತಾಡಿಯೇ ಇರಲಿಲ್ಲ. ಶ್ಯಾಮ್ ತನ್ನ ಕೆಲಸ, ಮೀಟಿಂಗುಗಳಲ್ಲೆ ಮುಳುಗಿರುತ್ತಿದ್ದ. ಕುನಾಲ್ ಈ ಕೆಲಸದಲ್ಲಿ ನಿರಾಸಕ್ತನಾದವನಂತೆ ‘ನಡೀತಿದೆ...’ ಎಂದ. ಅತ್ತ ಪ್ರತಾಪ್ ಮತ್ತು ಶ್ರೀನಿ ಅವರದೇ ಮಾತಿನಲ್ಲಿ ಮುಳುಗಿದ್ದರು. ಅನನ್ಯ ಮತ್ತು ಸುಹಾಸ್ ಅವರಲ್ಲೆ ಮಾತಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಟೇಬಲ್ ಕ್ಲೀನ್ ಮಾಡಲು ಬಂದವನು, ಪ್ರೀತಿಯ ಮುಂದಿದ್ದ ಐಸ್ ಕ್ರೀಮ್ ಕಪ್ಪಿನತ್ತ ಕೈ ಚಾಚುತ್ತ `Can I clear?' ಎಂದು ಕೇಳಿದ. ಅರ್ಧ ಸ್ಕೂಪ್ ಐಸ್ ಕ್ರೀಮು ಇನ್ನೂ ಉಳಿದಿತ್ತು. ‘ಸಾಕು. ತೆಗೆದುಕೊಂಡು ಹೋಗಿ’ ಎಂದಳು ಪ್ರೀತಿ. ಅವನು ಟೇಬಲ್ ಕ್ಲೀನ್ ಮಾಡುವವರೆಗೆ ಅಲ್ಲಿ ಮಾತಿಗೊಂದು ವಿರಾಮ ಬಿತ್ತು.

‘ಯಾಕೆ ಏನಾಯ್ತು? ಕೆಲಸ ಇಷ್ಟ ಆಗ್ತಿಲ್ವಾ?’ ಎಂದು ಶ್ಯಾಮ್ ಮಾಮೂಲಿಯಾಗಿ ಮಾತು ಮುಂದುವರೆಸಿದ. ಕುನಾಲ್, ‘ಹಾಗೇನು ಇಲ್ಲ. ಆದ್ರೆ ಇಲ್ಲಿ ಚ್ಯಾಲೆಂಜಿಂಗ್ ಅನ್ನಿಸುವಂಥದ್ದು ಏನೂ ಇಲ್ಲ’ ಎಂದ. ಸಂಜಯ್ ಅಲ್ಲಿವರೆಗೆ ಶ್ರೀನಿ ಮತ್ತು ಪ್ರತಾಪ್ ಜೊತೆ ಮಾತುಕತೆಯಲ್ಲಿ ತೊಡಗಿದ್ದವನು, ಇವರ ಮಾತಿನ ಕಡೆ ತಿರುಗಿದ. ಕುನಾಲ್‌ನನ್ನು ಇದರಿಂದ ತಪ್ಪಿಸಲು ಶ್ಯಾಮ್, ‘ಈಗ ಇನ್ನೂ ಪ್ರಾಜೆಕ್ಟಿನ ಬಗ್ಗೆ ತಿಳಿದುಕೊಳ್ಳುತ್ತಿದ್ದೀಯ. ಹೊಸತು. ಮುಂದೆ ಕೆಲಸದಲ್ಲಿ ತೊಡಗಿದ ಮೇಲೆ ಹೆಚ್ಚು ಆಸಕ್ತಿ ಮೂಡುತ್ತೆ’ ಎಂದು ಆ ವಿಷಯವನ್ನು ಅಲ್ಲೆ ತುಂಡರಿಸಲು ನೋಡಿದ. ಈ ಯಾವುದರ ಸುಳಿವೂ ಇಲ್ಲದೆ, ‘ಏನೇ ಆದ್ರು ಈ ಕೆಲಸ ಇಷ್ಟೇ ಅಲ್ವಾ. ಇದರಲ್ಲಿ ಅಂಥ ಮಹತ್ವವಾದದ್ದೇನು ಇರೊಲ್ಲ ಬಿಡು’ ಎಂದುಬಿಟ್ಟ ಕುನಾಲ್. ಸಂಜಯ್ ಇದಕ್ಕಾಗೇ ಕಾಯುತ್ತಿದ್ದವನಂತೆ, ‘ಹೌದಾ. ಹಾಗಿದ್ರೆ ನಿನ್ನ ಪ್ರಕಾರ ಚಾಲೆಂಜಿಂಗ್ ಕೆಲಸ ಅಂದ್ರೆ ಏನು? ನಾವೆಲ್ಲ ಬೇರೆ ಕೆಲಸ ಇಲ್ದೆ ಇದನ್ನೆಲ್ಲ ಮಾಡ್ತಾ ಇದಿವಿ ಅಂತಾನಾ?’, ಚಾಟಿ ಬೀಸಿದಂತೆ ಕೇಳಿದ. ಕುನಾಲ್‌ಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ‘ಹಾಗಲ್ಲ. ಈಗ ನಾವು ಪ್ರತಾಪ್‌ಗೆ ಕೊಟ್ಟ ಆ ಗಂಧದ ಶ್ರೀನಿವಾಸನನ್ನೇ ನೋಡಿ. ಅದರಲ್ಲಿ ಎಷ್ಟು ಕೌಶಲ್ಯ ಅಡಗಿದೆ. ಅದು ಎದ್ದು ಕಾಣುತ್ತಿದೆ. ಒಬ್ಬಾತ ಒಂದೇ ಕಡೆ ಕೂತು ಅದನ್ನು ಕೆತ್ತುವುದು ಸುಮ್ಮನೆ ಮಾತಲ್ಲ. ಅಂದರೆ ನಮ್ಮ ಕೆಲಸ ಬಹಳ ಸುಲಭದ್ದು. ಅದರಲ್ಲಿ ಅಂಥ ಚಕ್ಯತೆ ಬೇಕಿಲ್ಲ. ಅಂಥ ರಿಸ್ಕ್ ಸಹ ಇಲ್ಲ. ಒಬ್ಬ ಎಲೆಕ್ಟ್ರಿಕ್ ಲೈನ್ ಮ್ಯಾನ್ ಇದ್ದಾನಲ್ಲ. ಅವನ ಕೆಲಸದಲ್ಲಿ ಬಹಳ ರಿಸ್ಕ್ ಇದೆ. ಒಂಚೂರು ಹೆಚ್ಚು ಕಮ್ಮಿ ಆದ್ರೆ ಗೋತಾ ಹೋಡೀತಾನೆ. ಈಗ ನಾವು ಮಾಡುತ್ತಿರೋ ಕೆಲಸದಲ್ಲಿ ಅಂಥ ರಿಸ್ಕ್ ಇಲ್ಲ’ ಎಂದ. ಅವನು ಹೇಳುತ್ತಿರುವುದರ ಅರ್ಥ ಉಳಿದವರಿಗೆ ಆದರೂ ಸಂಜಯ್ ಅದನ್ನು ಬಹಳ ಗಂಭೀರವಾಗಿ ತೆಗೆದುಕೊಂಡ. ಪ್ರತಿ ಉತ್ತರ ಇಲ್ಲದಿದ್ದರು ಸಂಜಯ್ ಒಳಗೇ ಕುದ್ದು ಹೋಗಿದ್ದು ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ‘ಮುಂದೆ ಕೆಲಸ ಶುರುವಾಗುತ್ತಲ್ಲ ಆಗ ಗೊತ್ತಾಗುತ್ತೆ. ಆಗ ನಿನಗೆ ಈ ಕೆಲಸ ಮಾಡಲಾಗದೆ ಲೈನ್ ಮ್ಯಾನ್ ಕೆಲಸಕ್ಕೆ ಹೋಗಬೇಕಾಗಿ ಬಂದರೊ ಬರಬಹುದು’ ಎಂದು ಮಾರ್ಮಿಕವಾಗಿ ಹೇಳಿದ. ಶ್ಯಾಮ್ ಕುನಾಲ್‌ಗೆ ಸುಮ್ಮನಿರಲು ಸೂಚಿಸಿದ. ಪ್ರತಾಪ್, ‘ಒದಂತು ಹೌದು. ಈ ಶ್ರೀನಿವಾಸನ ಕೆತ್ತನೆ ಬಹಳ ಸೊಗಸಾಗಿದೆ. ಥ್ಯಾಂಕ್ಯೂ ಫೋಕ್ಸ್!’ ಎಂದು ಎಲ್ಲಕ್ಕೂ ಅಲ್ಲೇ ಮುಕ್ತಾಯ ಹಾಕಿದ. ಶ್ಯಾಮ್‌ನ ಊಟ ಮುಗಿಯುತ್ತಿದ್ದಂತೆ ವೈಟರ್ ಬಿಲ್ ತಂದಿಟ್ಟ. ನಾಲ್ಕಂಕಿ ದಾಟಿದ ಬಿಲ್ಲಿಗೆ ಟಿಪ್ಸು ಮೂರಂಕಿಯಲ್ಲಿತ್ತು.

ಎಲ್ಲರೂ ಮತ್ತೊಮ್ಮೆ ಪ್ರತಾಪ್‌ನ ಕೈ ಕುಲುಕಿ, ಆಲ್ ದಿ ಬೆಸ್ಟ್ ಹೇಳಿ ಅಲ್ಲಿಂದ ಹೊರಟರು. ಹೊಸ ಕೆಲಸಕ್ಕೆ ನನ್ನ ಶುಭ ಹಾರೈಕೆ ಎಂದು ಶ್ಯಾಮ್ ಗ್ರೀಟಿಂಗ್ ಕಾರ್ಡು ಕೊಟ್ಟ. ‘ಥಾಂಕ್ಯೂ ಬಡ್ಡೀ...ಎಲ್ಲ ಕಡೆನೂ ಅದೇ ಸೇಮ್ ಶಿಟ್...ಆದ್ರೆ ಒಂದು ನೆಮ್ಮದಿ ಅಂದ್ರೆ ಟ್ರಾಫಿಕ್ಕಲ್ಲಿ ಒದ್ದಾಡೋದು ಬೇಡ’ ಕಾರ್ಡು ತಿರುವುತ್ತ ಹೇಳಿದ ಪ್ರತಾಪ್. ‘ಗುಡ್ ಫಾರ್ ಯು. ಆಲ್ ದಿ ಬೆಸ್ಟ್’ ಎಂದು ಹಗ್ ಮಾಡಿ ಹೊರಟ ಶ್ಯಾಮ್.

***

ಪ್ರತಾಪ್ ಕಂಪನಿ ಬಿಟ್ಟ ಎರಡೇ ದಿನಕ್ಕೆ ಅವನಲ್ಲಿ ಇರಲೇ ಇಲ್ಲವೇನೊ ಅನ್ನುವಷ್ಟು ಸಹಜವಾಗಿ ಕೆಲಸಗಳು ಮುಂದುವರಿದವು. ಇಲ್ಲಿ ಯಾರನ್ನು ಯಾರು ತಾನೆ ಹಚ್ಚಿಕೊಂಡಿರುತ್ತಾರೆ? ನೆಚ್ಚಿಕೊಂಡಿರುತ್ತಾರೆ? ಮೂರು ತಿಂಗಳೋ ಮೂರು ವರ್ಷವೋ? ಅತಿ ಸನಿಹ ಎನಿಸದವರೂ ಇದ್ದಕ್ಕಿದ್ದಂತೆ ಮರೆಯಾಗಿಬಿಡುತ್ತಾರೆ, ನಂತರ ಸಂಪರ್ಕವೇ ಇರುವುದಿಲ್ಲ, ನಮ್ಮ ನೆನಪುಗಳ ಮೇಲೆಯೇ ನಮಗೆ ಸಂಶಯ ಬರುವಷ್ಟು. ಕಳೆದ ನಾಲ್ಕು ಪ್ರಾಜೆಕ್ಟಿನಲ್ಲಿ ತನ್ನೊಂದಿಗೆ ದುಡಿದವರು, ಜೊತೆಯಾಗಿ ಉಂಡವರು, ಕುಡಿದವರು, ತಿರುಗಿದವರು, ನಕ್ಕವರು, ಎಲ್ಲ ಎಲ್ಲಿ ಹೋದರೋ?......ಎಲ್ಲರೂ ಇಲ್ಲೇ ಇದ್ದಾರೆ. ಇಲ್ಲೇ ಎಲ್ಲೋ ಸನಿಹದಲ್ಲೆ. ಇದೇ ಬಿಲ್ಡಿಂಗಿನಲ್ಲಿ, ಇದೇ ಫ್ಲೋರಿನಲ್ಲಿ, ಇಲ್ಲೇ ಪಕ್ಕದಲ್ಲಿ. ಆದರೂ ಎಲ್ಲರೂ ಎಷ್ಟು ದೂರ. ಸಂಪರ್ಕಕ್ಕೆ ಸಿಗದಷ್ಟು ಸನಿಹ!

ಮೂರು ವರ್ಷದ ಒಡನಾಡಿಯಾಗಿದ್ದ ಪ್ರತಾಪ್‌ನ ಅನುಪಸ್ಥಿತಿ ಶ್ಯಾಮ್‌ನನ್ನು ಒಂದೆರಡು ದಿನ ಕಾಡಿತು. ಆದರೆ, ಕೆಲಸದ ಒತ್ತಡ ಎಷ್ಟಿತ್ತೆಂದರೆ ಮೂರು ತಿಂಗಳ ಹಿಂದೆ ಪ್ರತಾಪ್‌ನಿಂದ ಪಡೆದಿದ್ದ ಪೋರ್ನ್ ನೋಡುವುದಕ್ಕೂ ಪುರುಸೊತ್ತಿರಲಿಲ್ಲ. ಮೇಲಾಗಿ ಸಂಜಯ್‌ನ ಕಿರಿಕಿರಿ. ಪ್ರತಿ ಐದು ನಿಮಿಷಕ್ಕೊಮ್ಮೆ ಶ್ಯಾಮ್ ಇರುವಲ್ಲಿ ಬಂದು ಅಥವ ಅವನನ್ನು ತನ್ನತ ಕರೆಯಿಸಿ ಒಂದೊಂದೇ ರಿಪೋರ್ಟುಗಳ ಪ್ರಗತಿ ಯಾವ ಹಂತದಲ್ಲಿದೆ ಎಂದು ವಿಚಾರಿಸುತ್ತಿದ್ದ. ಮೊದಮೊದಲು ತಾಳ್ಮೆಯಿಂದ ವಿವರ ನೀಡುತ್ತಿದ್ದ ಶ್ಯಾಮ್ ಅದು ಕೆವಲ ತನ್ನ ಅಧಿಕಾರ ಸಾಬೀತುಪಡಿಸುವ ಅಹಂಕಾರ ಮಾತ್ರ ಎನ್ನುವುದು ಗೊತ್ತಾಗುತ್ತಿದ್ದಂತೆ ಶ್ಯಾಮ್ ಏನಾದರು ಕೆಲಸದ ನೆಪ ಹೇಳಿ ಅವನನ್ನು ನಿರ್ಲಕ್ಷಿಸಲು ಶುರುಮಾಡಿದ.

ಮೊದಲಿಗೆ ಕಿರಿಕಿರಿ ಎನಿಸಿದ ಸಂಜಯ್‌ನ ವರ್ತನೆ ಟೀಮಿನಲ್ಲಿ ಎಲ್ಲರಿಗೂ ಕಿರುಕುಳವಾಗುತ್ತ ಹೋಯಿತು. ನಾಲ್ಕು ಬ್ಲಾಕಿನಲ್ಲಿ ಹಂಚಿಹೋಗಿದ್ದ ಟೀಮಿನವರಲ್ಲಿ ಯಾರ್ಯಾರು ಆನ್‌ಲೈನ್ ಇದ್ದಾರೆ. ಯಾರು ಆಫೀಸಿಗೆ ತಡವಾಗಿ ಬರುತ್ತಿದ್ದಾರೆ, ಯಾರು ಬೇಗ ಹೊರಡುತ್ತಿದ್ದರೆ ಎಂಬುದರ ನಿಗಾ ಇಡತೊಡಗಿದ. ಒಮ್ಮೆ ಅನನ್ಯ ಸಂಜೆ ನಾಲ್ಕು ಗಂಟೆಗೇ ಹೊರಟಿದ್ದನ್ನು ಕಂಡು ಶ್ಯಾಮ್‌ನಲ್ಲಿ ದೂರಿದ. ‘ಇಲ್ಲ ಸಂಜಯ್. ಆಕೆ ಮೊನ್ನೆ ರಾತ್ರಿ ಹನ್ನೊಂದರವರೆಗೆ ಕೆಲಸ ಮಾಡಿದ್ದಳು. ಇವತ್ತೇನೋ ಅವಳ ಮಗುವನ್ನ ಡಾಕ್ಟರ್ ಹತ್ತಿರ ಕರ್ಕೊಂಡು ಹೋಗ್ಬೇಕಂತೆ. ಅದಕ್ಕೇ ಬೇಗ ಹೊರಟಳು. ನನಗೆ ತಿಳಿಸಿದ್ದಳು.’ ಎಂದ.

‘ಅದೆಲ್ಲ ಪರ್ಸನಲ್ ಕೆಲಸಗಳನ್ನ ಅವರು ವೀಕೆಂಡಿನಲ್ಲಿ ಇಟ್ಟುಕೊಳ್ಳಬೇಕು. ನೀನು ಇನ್ನೂ ಬಿಗಿಯಾಗಿರಬೇಕು ಶ್ಯಾಮ್. ನಾನು ಕಂಡ ಹಾಗೆ ಪ್ರತಿ ದಿನ ಒಬ್ಬರಲ್ಲ ಒಬ್ಬರು ರಜೆಯಲ್ಲಿರುತ್ತಾರೆ. ರಜೆಗಳನ್ನ ಆದಷ್ಟು ಕಂಟ್ರೋಲ್ ಮಾಡಬೇಕು’ ಎಂದು ಉಪದೇಶ ನೀಡಿದ. ಮೂವತ್ತು ಜನ ಇರುವ ಟೀಮಿನಲ್ಲಿ ಒಬ್ಬೊಬ್ಬರು ತಿಂಗಳಿಗೆ ಒಂದೊಂದೇ ರಜೆ ಹಾಕಿದರೂ ಪ್ರತಿ ದಿನ ಒಬ್ಬರಲ್ಲ ಒಬ್ಬರು ರಜೆಯಲ್ಲಿ ಇರುವುದು ಸಹಜವೇ. ಅದನ್ನು ಸಂಜಯ್‌ಗೆ ಹೇಳಿ ಉಪಯೋಗವಿಲ್ಲವೆಂದು ಸುಮ್ಮನಿದ್ದ. ‘ಸಲೀಮ್ ಪ್ರತಿ ದಿನವೂ ಹನ್ನೊಂದು ಗಂಟೆಯ ಮೇಲೆಯೇ ಆಫೀಸಿಗೆ ಬರೋದು. ಗಮನಿಸಿದ್ದೀಯ?’ ಅಂತ ಕೇಳಿದ. ‘ಅವನು ರಾತ್ರಿ ಹನ್ನೊಂದು ಗಂಟೆಯ ತನಕ ಕೆಲ್ಸ ಮಾಡ್ತಿರ್ತಾನೆ ಸಂಜಯ್. ನಾನು ಹೇಳಿದರೆ ಅವನು ಶನಿವಾರವೂ ಬಂದು ದುಡಿಯಲು ಸಿದ್ಧವಿದ್ದಾನೆ. ಯಾರು ನಮ್ಮ ಅವಶ್ಯಕತೆಗೆ ಸಕಾಲಕ್ಕೆ ಒದಗುತ್ತಾರೋ ಅಂಥವರ ಜೊತೆ ನಾವು ಅಷ್ಟು ಬಿಗಿಯಾಗಿ ಇರಬಾರದು. ಒಂಭತ್ತು ಗಂಟೆಗೆ ಬಂದು ಹನ್ನೆರಡು ಗಂಟೆಗೆ ಹೋಗು ಅಂದ್ರೆ ಯಾರು ಕೇಳ್ತಾರೆ. ಯಾರ್ಯಾರು ಕೆಲ್ಸ ಮಾಡ್ತಾರೆ ಅಂತ ನಂಗೆ ಗೊತ್ತಿದೆ’ ಎಂದು ತುಸು ಬಿಗಿಯಾಗಿ ಹೇಳಿದ. ಏನನ್ನಿಸಿತೋ ಏನೋ ಸಂಜಯ್, ‘ಎಲ್ಲರ ಲೀವ್ ಪ್ಲ್ಯಾನ್ ಇದಿಯಾ ನಿನ್ನ ಹತ್ರ?’ ಅಂತ ಕೇಳಿದ. ಇದೆ ಅಂದ ಶ್ಯಾಮ್. ನನಗೆ ಅದನ್ನ ಮೇಲ್ ಮಾಡು. ನಾನೊಮ್ಮೆ ಟೀಮಿನವರ ಲೀವ್ ಪ್ಲ್ಯಾನ್ ನೋಡಬೇಕು ಎಂದ. ಇದ್ಯಾವ ಹೊಸ ರಗಳೆ ಎನಿಸಿತು.

ಸಂಜಯ್‌ನ ವರ್ತನೆ ಅತಿಯಾದ ಬಿಗುವಿನ ನಿಲುವುಗಳ ಬಗ್ಗೆ ಒಮ್ಮೆ ಶ್ರೀನಿಯಲ್ಲಿ ದೂರಿದ. ನೀನು ಪ್ರಾಜೆಕ್ಟಿನ ರಿಪೋರ್ಟುಗಳನ್ನು ನೋಡಿಕೋ. ಪೀಪಲ್ ಮ್ಯಾನೇಜ್‌ಮೆಂಟ್ ಸಂಜಯ್ ನೋಡಿಕೊಳ್ಳಲಿ. ಒಬ್ಬರ ಕೆಲಸದಲ್ಲಿ ಒಬ್ಬರು ತಲೆ ಹಾಕಬೇಡಿ ಎಂದು ಪರಿಹಾರ ಸೂಚಿಸಿದ ಶ್ರೀನಿ. ಶ್ಯಾಮ್ ತನ್ನ ರಿಲೀಸ್ ವಿಚಾರವನ್ನು ಮತ್ತೊಮ್ಮೆ ಕೇಳಿದಾಗ ಅರ್ಥ ಮಾಡ್ಕೋ ಶ್ಯಾಮ್ ಎಂದು ಶ್ರೀನಿ ಮೆದುವಾಗಿ ಹೇಳಿ ಅವನನ್ನು ಈ ಎಪ್ಪತ್ತೈದು ರಿಪೋರ್ಟು ಮುಗಿಯುವವರೆಗೆ ಮುಂದುವರೆಯುವಂತೆ ಒಪ್ಪಿಸಿದ.

ಶ್ಯಾಮ್ ಟೀಮಿನ ಲೀವ್ ಪ್ಲ್ಯಾನ್ ಇರುವ ಶೀಟನ್ನು ಸಂಜಯ್‌ಗೆ ಕಳಿಸಿ ತನ್ನ ಕೆಲಸದಲ್ಲಿ ಮಗ್ನನಾದ. ಪ್ರತಿ ದಿನವು ಎಲ್ಲರಿಂದ ವಿವರ ಪಡೆದು, ಎಲ್ಲಾ ಮೂವತ್ತು ರಿಪೋರ್ಟುಗಳ ಪಥ ಸರಿಯಾಗಿದೆಯೆಂದು ಖಾತ್ರಿ ಮಾಡಿಕೊಳ್ಳುತ್ತಿದ್ದ. ಸಿಂಗಪೂರಿನ ಮ್ಯಾನೇಜರ್ ಅರ್ಧರ್ಧ ಗಂಟೆಗೊಮ್ಮೆ ಫೋನು ಮಾಡಿ ಏನಾದರೊಂದು ಕೆಲಸ ಹಚ್ಚುತ್ತಿದ್ದ. ಊಟಕ್ಕೂ ಪುರುಸೊತ್ತಿಲ್ಲದ ಹಾಗಾಯಿತು ಶ್ಯಾಮ್‌ಗೆ. ರಾತ್ರಿ ತಡವಾದಗೆಲ್ಲ ಅಲ್ಲೇ ಹತ್ತಿರದಲ್ಲಿದ್ದ ಕುನಾಲ್‌ನ ಮನೆಯಲ್ಲಿ ಮಲಗುತ್ತಿದ್ದ. ಬೆಳಗ್ಗೆದ್ದು ಅಲ್ಲಿಂದಲೇ ಚಡ್ಡಿ ಕೂಡ ಬದಲಿಸದೆ ಅದೇ ಬಟ್ಟೆಯಲ್ಲಿ ಆಫೀಸಿಗೆ ಬರುತ್ತಿದ್ದ. ಪ್ರಾಜೆಕ್ಟಿನ ಮಿಕ್ಕವರು ಸಹ ದಿನಕ್ಕೆ ಕನಿಷ್ಠವೆಂದರು ಹತ್ತು ಗಂಟೆ ಕೆಲಸ ಮಾಡುತ್ತಿದ್ದರು. ಆದರೂ ಮೊದಲ ಹಂತದ ರಿಪೋರ್ಟುಗಳು ಮುಗಿಯುವ ಸೂಚನೆಯೇ ಇಲ್ಲ.

ನಾವು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಸಮಯ ಕೆಲವೊಂದು ರಿಪೋರ್ಟುಗಳಿಗೆ ತಗಲುತ್ತೆ. ಆದ್ದರಿಂದ ನಾಲ್ಕೈದು ರಿಪೋರ್ಟುಗಳನ್ನು ಮುಂದಿನ ತಿಂಗಳ ಕೊನೆಯ ಒಳಗೆ ಮುಗಿಸುವುದು ಸಾಧ್ಯವಿಲ್ಲ ಅಂತ ಶ್ಯಾಮ್ ಸೋನಿಗೆ ವಿವರ ನೀಡಿದ. ಆ ಮೀಟಿಂಗಿನಲ್ಲಿ ಸಂಜಯ್ ಕೂಡ ಇದ್ದ. ಸಿಂಗಪೂರಿನ ಐ.ಟಿ ಮ್ಯಾನೇಜರ್ ‘ಬೇರೆ ಏನಾದರು ಒಂದು ದಾರಿ ಹುಡುಕು. ಒಟ್ಟಿನಲ್ಲಿ ನಾವು ಈ ಸಲ ಮೂವತ್ತು ಮತ್ತು ಮುಂದಿನ ಸಲ ಇಪ್ಪತ್ತು ರಿಪೋರ್ಟುಗಳನ್ನು ಕೊಡಲೇ ಬೇಕು. ಒಟ್ಟು ಈ ವರ್ಷಕ್ಕೆ ಎಪ್ಪತ್ತೈದು ಆಗಲೇ ಬೇಕು’ ಎಂದ. ‘ನನಗ್ಯಾವ ದಾರಿಯೂ ಕಾಣಿಸುತ್ತಿಲ್ಲ’ ಎಂದ ಶ್ಯಾಮ್. ಸಂಜಯ್ ಕೂಡ ಅನುಮೋದಿಸಿದ. ಅದಕ್ಕೆ ಸೋನಿ, ‘ಏನಾದರು ದಾರಿ ಇರಲೇಬೇಕು ಶ್ಯಾಮ್. ಇದನ್ನ ನಾನು ನಿನಗೆ ಹೇಳಿಕೊಡಬೇಕೇ?’ ಅಂತ ಕೇಳಿದ. ಶ್ಯಾಮ್‌ಗೆ ಸೋನಿಯ ವಿಚಾರ ತಿಳಿಯಿತು. ಅದನ್ನು ಆದಷ್ಟು ತಳ್ಳಿ ಹಾಕಲು ಪ್ರಯತ್ನಿಸುತ್ತಿದ್ದ. ಈಗ ಸೋನಿ ಏನು ಹೇಳುತ್ತಾನೋ ಎಂದು ಸುಮ್ಮನಿದ್ದ. ಶ್ಯಾಮ್‌ನ ನಿರುತ್ತರವನ್ನು ಗ್ರಹಿಸಿದ ಸೋನಿ, ‘ಒಂದೆರಡು ವೀಕೆಂಡು ಕೆಲಸ ಮಾಡಿದರೆ ಮುಗಿಸಬಿಡಬಹುದು ಶ್ಯಾಮ್. ಮುಂದೆ ಆ ರಜೆಗಳನ್ನು ಪಡೆದುಕೊಳ್ಳಲಿ. ಏನಂತೀಯ?’ ಎಂದ. ‘ಗೊತ್ತಿಲ್ಲ ಸೋನಿ. ಯೋಚನೆ ಮಾಡಬೇಕು’ ಎಂದದ್ದಕ್ಕೆ, ‘ಯೋಚನೆ ಮಾಡೋಕೆ ಏನೂ ಇಲ್ಲ ಶ್ಯಾಮ್. ಎಪ್ಪತ್ತೈದು ರಿಪೋರ್ಟು ಮಾಡಿ ಮುಗಿಸಬೇಕಾದರೆ ನಮಗಿರೋದು ಇದೊಂದೇ ದಾರಿ. ಏನು ಸಂಜಯ್? ನಿನ್ನ ಅಭಿಪ್ರಾಯ ಏನು?’ ಅಂತ ಕೇಳಿದ.

‘ಹೌದು. ನನಗೂ ಹಾಗೇ ಅನಿಸುತ್ತೆ. ಒಂದೆರಡು ವೀಕೆಂಡು ಈಗಲೇ ಕೆಲಸ ಮಾಡಿ ಮುಗಿಸಿದರೆ ಆಮೇಲೆ ಯಾವುದೇ ಆತಂಕ ಇರೊಲ್ಲ’ ಎಂದುಬಿಟ್ಟ ಸಂಜಯ್. ಧಿಗ್ಗಂತ ಶ್ಯಾಮ್ ಸಿಟ್ಟಿನಲ್ಲಿ ತನ್ನ ಹಣೆ ಚಚ್ಚಿಕೊಂಡು ಫೋನಿನತ್ತ ಕೈ ಮಾಡಿದ. ಮನಸಿನಲ್ಲೆ ‘ಬ್ಲಡಿ ಬಗ್ಗರ್..’ ಎಂದು ಶಪಿಸಿದ. ಸೋನಿಗೆ ಕೇಳದಂತೆ ಜಾಗರೂಕನಾಗಿ ಮೌನವಾಗೇ ಸಂಜಯ್‌ನತ್ತ ನೋಡಿ ಮುಖ ಗಂಟಿಕ್ಕಿ ಕೈ ತಿರುಗಿಸಿದ. ಅದು ಸಂಜಯ್‌ಗೆ ‘ಏನಯ್ಯ ನೀನು ಹೀಗೆ ಮಾಡಿಬಿಟ್ಟೆ’ ಎಂದು, ಶ್ಯಾಮ್‌ನ ಅಸಮ್ಮತಿಯನ್ನು ತೀಕ್ಷ್ಣವಾಗಿ ಸೂಚಿಸುತ್ತಿತ್ತು. ಅದನ್ನು ಒಪ್ಪಿಕೊಳ್ಳದವನಂತೆ ಸಂಜಯ್, ‘ನಮಗೆ ಬೇರೆ ದಾರಿ ಇದೆಯಾ ಹೇಳು? ನೀನೇ ಸೋನಿಗೆ ಉತ್ತರಿಸು’ ಎಂದು ಫೋನನ್ನು ಮ್ಯೂಟ್ ಮಾಡಿ ಹೇಳಿದ. ಎಲ್ಲವೂ ಕ್ಷಣಾರ್ಧದಲ್ಲಿ ಜರುಗಿತು.

ಶ್ಯಾಮ್ ಫೋನನ್ನು ಅನ್ ಮ್ಯೂಟ್ ಮಾಡಿ, ‘ಸರಿ ಸೋನಿ. ನಾನು ಟೀಮಿನವರ ಪ್ಲ್ಯಾನ್ ಏನಿದೆ ಎಂದು ನೋಡಿ ಪ್ಲ್ಯಾನ್ ಮಾಡಿ ತಿಳಿಸುತ್ತೆನೆ’ ಎಂದ. ‘ನಾಳೆ ಸಂಜೆಯ ಒಳಗೆ ನನಗಿದರ ಮಾಹಿತಿ ಬೇಕು’ ಎಂದು ಫೋನಿಟ್ಟ ಸೋನಿ.

ಮೀಟಿಂಗು ಮುಗಿಸಿ ಹೋದ ಕೂಡಲೇ ಸಂಜಯ್ ಟೀಮಿನ ಎಲ್ಲರಿಗು ಮುಂದಿನ ತಿಂಗಳು ಕೊನೆಯವರೆಗೆ ಯಾರ್ಯಾರ ವೀಕೆಂಡು ಪ್ಲ್ಯಾನ್ ಏನೇನಿದೆ ಯಾರು ಯಾವ ವೀಕೆಂಡು ಫ್ರೀ ಇರುತ್ತಾರೆನ್ನುವುದನ್ನು ತಿಳಿಸುವಂತೆ ಮೇಲ್ ಹಾಕಿದ. ಎಲ್ಲರೂ ತಿಂಗಳಲ್ಲಿ ಒಂದೊಂದೇ ವೀಕೆಂಡು ತಮಗೆ ಪುರುಸೊತ್ತಿದೆಯೆಂದು ರಿಪ್ಲೈ ಮಾಡಿದರು. ಶ್ಯಾಮ್ ತಾನು ಹೇಗಿದ್ದರೂ ಶನಿವಾರದಂದು ಒಮ್ಮೊಮ್ಮೆ ಆಫೀಸಿಗೆ ಬರುತ್ತಿದ್ದೇನೆ ಏನೂ ತೊಂದರೆ ಇಲ್ಲ ಎಂದ. ಮಿಕ್ಕವರನ್ನೆಲ್ಲ ಒಪ್ಪಿಸುವ ಜವಾಬ್ದಾರಿ ನಿನ್ನದು ಎಂದಿದ್ದ. ಸಂಜಯ್ ಒಬ್ಬೊಬ್ಬರನ್ನೇ ಕರೆಸಿ ಮಾತನಾಡಿದ. ಅನನ್ಯಳ ಫ್ಯಾಮಿಲಿ ಟ್ರಿಪ್ಪು ಮುಂದೂಡಲಾಯಿತು. ಸುಹಾಸ್ ಎರಡು ವಾರಕ್ಕೊಮ್ಮೆ ಊರಿಗೆ ಹೋಗುವುದು ದೀಪಾವಳಿಯವರೆಗೆ ಕೈದಾಯಿತು. ಪ್ರವೀಣನ ಮದುವೆಯ ಜವಳಿ ಚಿನ್ನ ಖರೀದಿಗಳ ಜವಾಬ್ದಾರಿಗಳನ್ನೆಲ್ಲ ಸಂಪೂರ್ಣವಾಗಿ ಅವನ ತಂದೆ ತಾಯಿಗೇ ವಹಿಸಲಾಯಿತು. ಎಲ್ಲಾ ಚೌಕಾಶಿ ನಡೆಸಿ ಕೊನೆಗೆ ಒಬ್ಬೊಬ್ಬರೂ ತಿಂಗಳಲ್ಲಿ ಕನಿಷ್ಠ ಎರಡು ಶನಿವಾರಗಳಂದು ಕೆಲಸ ಮಾಡುವಂತೆ ವ್ಯವಸ್ಥೆ ಮಾಡಲಾಯಿತು. 

ಮಾಡಲಿರುವ ಕೆಲಸಕ್ಕೆ ಘನಂದಾರಿ ಪರಿಣತಿ ಏನೂ ಬೇಡವಾಗಿದ್ದರಿಂದ ಮತ್ತು ಹೆಚ್ಚು ಕಮ್ಮಿ ಪ್ರತಿಯೊಬ್ಬರೂ ಒಂದಲ್ಲ ಒಂದು ಶನಿವಾರ ಕೆಲಸ ಮಾಡಿದ್ದರಿಂದ. ಎಲ್ಲ ರಿಪೋರ್ಟುಗಳೂ ಒಂದು ಹಂತದವರೆಗೆ ಮುಗಿಯುತ್ತ ಬಂತು. ಅನನ್ಯಗೆ ಯಾರ ಬರ್ತ್ಡೇ ಆಚರಿಸಲೂ ಪುರುಸೊತ್ತಿರಲಿಲ್ಲ. ಕೆಲವರ ಬರ್ತ್ಡೇಗಳನ್ನು ಯಾರೂ ನೆನಪಿಟ್ಟುಕೊಳ್ಳದೆ ವಿಶ್ ಕೂಡ ಮಾಡಲಿಲ್ಲ.

ಶ್ಯಾಮ್ ತನ್ನ ಈಮೇಲ್ ಸಿಗ್ನೇಚರಿನಲ್ಲಿನ ಅಡಿನುಡಿಯನ್ನು 'Work to Live. Live to work' ಎಂದು ಬದಲಿಸಿದ.

***

ನಾನು ಮತ್ತೆ ಹಸಿರಾಗಿ ಮತ್ತೊಮ್ಮೆ ಕೆಂಪಾದೆ. ಒಂದಿಷ್ಟು ವಾಹನಗಳು ಮುಂದೆ ಸಾಗಿ ಶ್ಯಾಮ್ ಇನ್ನಷ್ಟು ಹತ್ತಿರ ಬಂದಿದ್ದಾನೆ.

ಕೆಲಸದ ಒತ್ತಡ ಹೆಚ್ಚುತ್ತ ಬಂದಂತೆ ಶ್ಯಾಮನಲ್ಲಿ ಧಾವಂತದ ಲಾವಾರಸ ತುಂಬುತ್ತ ಬಂದಿತು. ಆಗಿನಿಂದಲೇ ಅವನು ಕಾರನ್ನು ಗೋಲಿಯಂತೆ ಓಡಿಸತೊಡಗಿದ್ದು. ಆದರೂ ಅವನಲ್ಲಿ ಸಿಡಿಯುವಷ್ಟು ವ್ಯಗ್ರತೆಯಿನ್ನೂ ಬಂದಿರಲಿಲ್ಲ. ಈಗ ಎಲ್ಲವೂ ಸಿಡಿದು ಶಾಂತವಾಗಿದ್ದಾನೆ.

ಕಿಟಕಿ ಇಳಿಸಿದ. ಬೈಕ್ ಸವಾರರು ಕಾರುಗಳ ನಡುವಿನ ಸಂದುಗಳಲ್ಲಿ ನಾಜೂಕಾಗಿ ತಳ್ಳಿಕೊಳ್ಳುತ್ತ ಆದಷ್ಟು ಮುಂದೆ ಸಾಗಿ ನಿಲ್ಲಲು ಪ್ರಯತ್ನಿಸುತ್ತಿದ್ದಾರೆ. ಹಲವು ಬೈಕುಗಳ ಚಕ್ರಗಳು ಸಾಹಸದಿಂದ ಬುರ್ರಬುರ್ರೆನ್ನುತ್ತ ಫುಟ್‌ಪಾತಿನ ಮೇಲೆ ಹತ್ತಿಕೊಂಡು ಮುಂದಕ್ಕೆ ಸಾಗಿದವು. ಶ್ಯಾಮ್ ಸುಮ್ಮನೆ ಅವರತ್ತ ನೋಡಿದ. ಹುಡುಗನೊಬ್ಬ ಬುಟ್ಟಿಯಲ್ಲಿ ಸೀಬೇಕಾಯಿ ಮಾರುತ್ತ ಬಲಗೈಯಲ್ಲಿ ನಾಲ್ಕು ಕಾಯಿ ಹಿಡಿದು ಶ್ಯಾಮ್‌ಗೆ ತೋರಿಸಿದ. ಶ್ಯಾಮ್ ಬೇಡವೆಂದು ತಲೆ ಅಲ್ಲಾಡಿಸಿ ಮುಂದಕ್ಕೆ ಹೋಗುವಂತೆ ಸೂಚಿಸಿದ. ಅಲ್ಲೇ ಆ ಬದಿಯಲ್ಲಿ ಹುಡುಗಿಯೊಬ್ಬಳು ಸಣ್ಣ ರಿಂಗಿನೊಳಗೆ ತನ್ನ ದೇಹವನ್ನು ಬಳುಕಿಸುತ್ತ ತೂರಿ ಹೊರಬರುತ್ತಿದ್ದಳು. ಅದರೊಂದಿಗೆ ಮತ್ತೆ ಕುನಾಲ್‌ನ ನೆನಪು....

***

ವಾರಕ್ಕೆ ಎರಡು ದಿನವಾದರು ರಾತ್ರಿ ತಡವಾದಾಗೆಲ್ಲ ಶ್ಯಾಮ್ ಕುನಾಲ್‌ನ ಮನೆಯಲ್ಲಿ ಉಳಿಯುವುದಿತ್ತು. ಇಬ್ಬರೂ ಒಟ್ಟಿಗೆ ಬೆಳಗ್ಗೆ ಹತ್ತು ಗಂಟೆಗೆಲ್ಲ ಆಫೀಸಿಗೆ ಬರುತ್ತಿದ್ದರು. ಬರುವಾಗ ದಾರಿಯಲ್ಲಿ ಹತ್ತು ರೂಗೆ ನಾಲ್ಕು ಸೀಬೇಕಾಯಿ ಕೊಂಡು, ಅದೂ ಇದೂ ಮಾತಾಡುತ್ತ ಇಬ್ಬರೂ ಎರಡೆರಡು ಸೀಬೇಕಾಯಿ ತಿಂದು ಮುಗಿಸುತ್ತಿದ್ದರು. ಮೊದಲ ಸಲ ಆ ಸೀಬೇಕಾಯಿ ಮಾರುವ ಹುಡುಗನೊಂದಿಗೆ ಹತ್ತು ರೂಗೆ ಮೂರರ ಬದಲು ನಾಲ್ಕು ಕಾಯಿ ಕೊಡುವಂತೆ ಚೌಕಾಸಿ ಮಾಡಿದ್ದರು. ಅದಾದಮೇಲೆ ಅಲಿಖಿತ ಒಪ್ಪಂದದಂತೆ ಆ ಹುಡುಗ ಅವರು ಆ ದಾರಿಯಲ್ಲಿ ಬಂದಾಗೆಲ್ಲ ಹತ್ತು ರೂಗೆ ನಾಲ್ಕು ಕಾಯಿ ಕೊಟ್ಟು ಹೋಗುತ್ತಿದ್ದ.

ಮೂವತ್ತು ರಿಪೋರ್ಟುಗಳನ್ನು ಸಿದ್ಧಪಡಿಸಿ ಅದೇ ತಿಂಗಳ ಕೊನೆಯಲ್ಲಿ ಅವುಗಳನ್ನು ಬಳಕೆದಾರರ ಟೆಸ್ಟಿಂಗಿಗೆ ಸಾದರ ಪಡಿಸಿ, ಒಂದು ಹಂತದ ಕೆಲಸ ಮುಗಿಸಿದ ತೃಪ್ತಿಯಲ್ಲಿದ್ದ ಶ್ಯಾಮ್. ಅದೇ ಸಮಯಕ್ಕೆ ಮುಂಬರುವ ಬಹುದೊಡ್ಡ ಭಯಾನಕ ದಿನಗಳ ಪೂರ್ವಭಾವಿಯಾಗಿ ಅದಕ್ಕೆ ಸಂಬಂಧವೇ ಇರದ ಆದರೆ ಬಹಳ ಮಹತ್ವದ ಎರಡು ಸಂಗತಿಗಳು ನಡೆದವು.

ಕುನಾಲ್ ಮತ್ತು ಪ್ರೀತಿಗೆ ಪಾಳಿಯ ಪ್ರಕಾರವಾಗಿ, ಈಗಾಗಲೇ ಸಿದ್ಧವಿರುವ ರಿಪೋರ್ಟುಗಳು ನಿಯೋಜಿಸಿದ ಸಮಯಕ್ಕೆ ಸರಿಯಾಗಿ ಸಿದ್ಧಗೊಂಡು ಬಳಕೆಗೆ ಲಭ್ಯವಿದೆಯೇ ಎನ್ನುವುದನ್ನು ಗಮನಿಸುವ ಕೆಲಸ ವಹಿಸಲಾಯಿತು. ಪ್ರೀತಿ ಬೆಳಗ್ಗೆ ಆರರಿಂದ ಮಧ್ಯಾಹ್ನ ಎರಡು ಗಂಟೆಯವರೆಗಿನ ಹಾಗು ಕುನಾಲ್ ಮಧ್ಯಾಹ್ನ ಎರಡರಿಂದ ರಾತ್ರಿ ಹನ್ನೊಂದು ಗಂಟೆಯವರೆಗಿನ ಶಿಫ್ಟಿನಲ್ಲಿ ಕೆಲಸ ಮಾಡತೊಡಗಿದರು. ಕುನಾಲ್ ಇದರಿಂದ ಮತ್ತಷ್ಟು ಹತಾಶನಾದ. ತಾನು ಐಐಟಿ ಡೆಲ್ಲಿಯಿಂದ ಬಂದವನು. ಹೋಗಿ ಹೋಗಿ ಈ ರಿಪೋರ್ಟು ಕಾಯುವ ಕೆಲಸ ಕೊಟ್ಟಿದ್ದಾರಲ್ಲ ಅಂತ ಮಾತಿನ ಮಧ್ಯೆ ಇತರ ಟೀಮಿನವರೊಂದಿಗೆ ಗೊಣಗಿದ. ರಿಪೋರ್ಟನ್ನು ನಿರ್ಮಿಸುವ ಕೆಲಸವಾದರು ಕೊಡಿ ಎಂದು ಸಂಜಯ್‌ನಲ್ಲಿ ಒಮ್ಮೆ ಕೇಳಿದ. ‘ನಮಗೆ ಸದ್ಯಕ್ಕೆ ಈ ಕೆಲಸಕ್ಕೆ ಜನರ ಅಗತ್ಯವಿದೆ. ಪ್ರೀತಿ ಕೂಡ ಅದೇ ಕೆಲಸ ಮಾಡುತ್ತಿದ್ದಾಳಲ್ಲ. ಅದೂ ಅಲ್ಲದೆ ಈ ರಿಪೋರ್ಟು ನಿರ್ಮಿಸುವ ಕೆಲಸವೇನು ಅಂಥ ಸವಾಲಿನ ಕೆಲಸ ಅಲ್ಲ ಬಿಡು’ ಸಂಜಯ್ ಮಾತು ತೇಲಿಸಿದ. ಅವನ ಮಾತಿನಲ್ಲಿದ್ದ ವ್ಯಂಗ್ಯ ಸಹಿಸಲಾಗದೆ ಕುನಾಲ್, ‘ಹಾಗಿದ್ದರೆ ನನಗೆ ಪ್ರಾಜೆಕ್ಟಿನಿಂದ ರಿಲೀಸ್ ಕೊಡಿ’ ಎಂದು ಕಡ್ಡಿ ತುಂಡು ಮಾಡಿದಂತೆ ಕೇಳಿದ. ‘ರಿಲೀಸ್ ಇಲ್ಲ ಏನೂ ಇಲ್ಲ. ಎಲ್ರೂ ಶನಿವಾರ ಬಂದು ಕೆಲಸ ಮಾಡುತ್ತಿದ್ರೆ ನಿನಗೆ ರಿಲೀಸ್ ಬೇಕಾ? ಸದ್ಯಕ್ಕಂತು ಇಲ್ಲ. ಮುಂದಿನ ವರ್ಷ ನೋಡೋಣ’, ಆ ವಿಚಾರದಲ್ಲಿ ಇನ್ನು ಕುನಾಲ್‌ನೊಂದಿಗಿನ ಮಾತುಕತೆಯೆಲ್ಲ ಸ್ವಿಚ್ ಆಫ್ ಎನ್ನುವಂತೆ ಸಂಜಯ್ ತನ್ನ ಮಾನಿಟರ್‌ನತ್ತ ತಿರುಗಿ ಯಾವುದೋ ಮೇಲ್ ಚೆಕ್ ಮಾಡುವವನಂತೆ ನಟಿಸಿದ.

ಇದಾಗಿ ಎರಡು ವಾರದೊಳಗೆ ಪ್ರೀತಿ ಮತ್ತು ಕುನಾಲ್ ನಡುವೆ ಬ್ರೇಕ್ ಅಪ್ ಆದ ಸುಬ್ಬಿ ಹಬ್ಬಿತು. ಓಹ್ ಇಸ್ ಇಟ್ ಎಂದು ಕೆಲವರು ಕೇಳಿ ಮರೆತರೆ, ಕೆಲವರು ಹೌದಾ? ಯಾಕೆ? ಎಂದು ಕುತೂಹಲ ತೋರಿದರು. ಯಾಕಾದರು ಇರಲಿ ಎಂದು ಖುಷಿ ಪಟ್ಟವರು ಕೆಲವು ಹುಡುಗರು. ಕುನಾಲ್ ಆಫೀಸಿಗೆ ಬರುವ ಹೊತ್ತಿಗೆ ಪ್ರೀತಿ ಹೊರಡುತ್ತಿದ್ದಳು. ಈ ಸಂಧಿ ಕಾಲದಲ್ಲಿ ಒಬ್ಬರನ್ನೊಬ್ಬರು ನೋಡಿ ಹಾಯ್ ಅನ್ನುತ್ತಿದ್ದರೆ ವಿನಃ ಆಫೀಸಿನಲ್ಲಿ ಅವರಿಬ್ಬರು ಜೊತೆಯಾಗಿ ಊಟ ಮಾಡಲು, ಕಾಫಿ-ಸ್ನ್ಯಾಕ್ಸ್‌ಗೆ ಹೋಗಲು ಸಮಯ ಕಳೆಯಲು ಅವಕಾಶವೇ ಇರಲಿಲ್ಲ. ಆದರೆ, ಅವರ ಬ್ರೇಕ್ ಅಪ್‌ಗೆ ಅದು ಖಂಡಿತ ಕಾರಣವಲ್ಲ ಅನ್ನುವುದು ಶ್ಯಾಮ್‌ಗೆ ತಿಳಿದಿತ್ತು.

ಕುನಾಲ್ ತನ್ನ ಶಿಫ್ಟ್ ಮುಗಿದ ಮೇಲೂ ಶ್ಯಾಮ್‌ನ ಕೆಲಸ ಮುಗಿಯುವುದಕ್ಕೆ ಕಾದು ಇಬ್ಬರೂ ಒಟ್ಟಿಗೆ ಶ್ಯಾಮ್‌ನ ಕಾರಿನಲ್ಲಿ ಹೊರಡುತ್ತಿದ್ದರು. ಶ್ಯಾಮ್ ಜೊತೆಯಲ್ಲಿರುವಾಗ ಕುನಾಲ್ ಕೂಡ ಅವನೊಂದಿಗೆ ಆಫೀಸಿಗೆ ಕಾರಿನಲ್ಲಿ ಬೆಳಗ್ಗೆ ಬೇಗನೇ ಬರುತ್ತಿದ್ದ. ಅದೊಂದು ದಿನ ಬೆಳಗ್ಗೆ ಇಬ್ಬರೂ ಕಾರಿನಲ್ಲಿ ಒಟ್ಟಿಗೆ ಆಫೀಸಿಗೆ ಬರುತ್ತಿರುವಾಗ, ಒಂದು ಕೈಯಲ್ಲಿ ಡ್ರೈವಿಂಗ್ ಮಾಡುತ್ತ ಮತ್ತೊಂದು ಕೈಯಲ್ಲಿ ಸೀಬೇಕಾಯಿ ತಿನ್ನುತ್ತ, ‘ಡ್ಯೂಡ್...ಬ್ರೇಕ್ ಅಪ್ ಆಗಿರೋ ಲಕ್ಷಣನೇ ಇಲ್ವಲ್ಲ ನಿನ್ನಲ್ಲಿ. ಆಗಲೇ ಮತ್ತೊಬ್ಬಳನ್ನ ಹುಡುಕಿಕೊಂಡು ಬ್ರೇಕ್ ಅಪ್ ಮಾಡ್ಕೊಂಡ್ಯಾ....ಏನ್ ಕಥೆ?’ ಎಂದು ಪರಿಹಾಸ್ಯದಲ್ಲಿ ಶ್ಯಾಮ್ ಮಾತಿನ ಮಧ್ಯೆ ಕೇಳಿದ. `It is just that we are not seeing each other these days' ಕುನಾಲ್ ನೋವಿನ ಸುಳಿವೂ ಕಾಣದಂತೆ ನುಡಿದ.

‘ನಮಗೆ ಮಾತನಾಡುವುದಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಸಿಕ್ಕಾಗಲೂ ಬರೀ ನನ್ನ ರಿಲೀಸ್ ವಿಚಾರ. ಅವಳಿಗೆ ಇದೇ ಪ್ರಾಜೆಕ್ಟಿನಿಂದ ಸಿಂಗಪೂರಿಗೆ ಹಾರುವ ವಿಚಾರ. ಬರೀ ಅದೇ ಮಾತು. ದೇರ್ ಈಸ್ ಸಂತಿಂಗ್ ಮಿಸ್ಸಿಂಗ್ ಅಂತ ಇಬ್ಬರಿಗೂ ಅನಿಸೋಕೆ ಶುರುವಾಯ್ತು. ಸ್ವಲ್ಪ ದಿವ್ಸ ದೂರ ಇರೋಣ. ಲೆಟ್ಸ್ ಬ್ರೇಕ್ ಅಪ್ ಅಂದ್ಕೊಂಡ್ವಿ’ ಕುನಾಲ್ ತನ್ನ ಎಂದಿನ ಸೌಮ್ಯಸ್ಥಿತಿಯಲ್ಲೇ ಹೇಳಿದ.

‘ಹೌದಾ. ಅವಳನ್ನ ಯಾರಪ್ಪ ಸಿಂಗಪೂರಿಗೆ ಕಳಿಸೋರು?’ ಅಂತ ಶ್ಯಾಮ್ ವ್ಯಂಗ್ಯದಿಂದ ಕೇಳಿದ್ದಕ್ಕೆ, ‘ಮುಂದಿನ ವರ್ಷ ಇದೇ ಪ್ರಾಜೆಕ್ಟಿನಿಂದ ಸಿಂಗಪೂರಿನಲ್ಲು ಅವಕಾಶ ಇದೆಯಂತೆ. ಅದಕ್ಕೇ ಸುಹಾಸ್ ಪ್ರವೀಣ್ ಎಲ್ಲರೂ ಅಷ್ಟೊಂದು ಕಷ್ಟ ಪಡ್ತಿದ್ದಾರಂತೆ. ಏನೋ ಪ್ರೀತಿ ಹೇಳ್ತಿದ್ಳು. ಟೀಮಲ್ಲಿ ಇದರ ಬಗ್ಗೆ ಗುಸುಗುಸು ನಡೀತಾ ಇತ್ತಂತೆ. ನಂಗೆ ಸದ್ಯ ಇಲ್ಲಿಂದ ರಿಲೀಸ್ ಸಿಕ್ಕಿದ್ರೆ ಸಾಕು. ಒಂದೆರಡು ವರ್ಷ ಒಳ್ಳೆ ಕೆಲ್ಸ ಮಾಡಿ ಕೆಲ್ಸ ಕಲ್ತು ಆಮೇಲೆ ಮುಂದಿನ ಓದಿನ ಬಗ್ಗೆ ಯೋಚಿಸ್ತೀನಿ. M.S ಮಾಡಬೇಕು. ಸಿಂಗಪೂರ್ ಬೇಡ ಯಾವ್ದೂ ಬೇಡ’ ಎಂದ.

ಕುನಾಲ್ ಮುಂದೆ ಓದುವ ಯೋಜನೆಯ ಬಗ್ಗೆ ಶ್ಯಾಮ್ ಬಳಿ ಮೊದಲೇ ಸಾಕಷ್ಟು ಸಲ ಹೇಳಿದ್ದ. ಕುನಾಲ್ ಎರಡು ವರ್ಷದ ಅನುಭವದ ಸಲುವಾಗಿ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು, ಇಲ್ಲಿನ ಕೆಲಸ ಇಷ್ಟವಿಲ್ಲದಿದ್ದರೂ ಈ ಕಂಪನಿ ಸೇರಿ ಇನ್ನೂ ನಾಲ್ಕು ತಿಂಗಳಗಷ್ಟೇ ಆದ ಕಾರಣ, ಬೇರೆ ಕಂಪನಿಯಲ್ಲಿ ಕೆಲಸ ಸಿಗುವ ಸಾಧ್ಯತೆ ಕಡಿಮೆಯಾದ್ದರಿಂದ, ಇದೇ ಕಂಪನಿಯಲ್ಲಿ ತನ್ನನ್ನು ತಾಂತ್ರಿಕವಾಗಿ ಇನ್ನಷ್ಟು ಬಲಿಷ್ಠಗೊಳಿಸುವ ಯೋಗ್ಯವಾದ ಸಾಫ್ಟ್‌ವೇರ್ ನಿರ್ಮಿತಿಯ ಕೆಲಸದಲ್ಲಿ ತೊಡಗಿಕೊಳ್ಳಬೇಕೆಂದು ಕುನಾಲ್ ಹಾತೊರೆಯುತ್ತಿರುವ ವಿಚಾರ ಶ್ಯಾಮ್‌ಗೆ ಹೊಸದೇನಲ್ಲ. ಆದರೆ, ಈ ಸಿಂಗಪೂರಿನ ವಿಷಯ ಯಾವಾಗ ಹಬ್ಬಿತು ಎನ್ನುವುದು ಅರ್ಥವಾಗಲಿಲ್ಲ. ತನಗೆ ತಿಳಿಯದೆ ಏನಾದರು ನಡೆದಿದೆಯೋ ಏನೋ, ಶ್ರೀನಿಯನ್ನು ಒಮ್ಮೆ ಕೇಳಬೇಕು ಎಂದುಕೊಂಡ.

ಕುನಾಲ್ ಮಾತು ಮುಂದುವರೆಸುತ್ತ, ‘ಆಗಲೇ ಸಂಜಯ್ ಹತ್ರ ಕೇಳ್ದೆ. ನಿಂಗೊತ್ತಲ್ಲ. ಮುಂದಿನ ವರ್ಷದ ತನಕ ಆಗೊಲ್ಲ ಎಂದ. ಅದಕ್ಕೇ ನಮ್ಮ HR ಇದ್ದಾಳಲ್ಲ - ಸ್ವಪ್ನ - ಅವಳ ಹತ್ರನೇ ಕೇಳೋಣ ಅಂದ್ಕೊಂಡಿದೀನಿ. ಅಥವಾ ಅದಕ್ಕೂ ಮುಂಚೆ ಶ್ರೀನಿ ಹತ್ರ ಮಾತಾಡಬೇಕಾ?’ ಅಂತ ಶ್ಯಾಮ್‌ನ ಸಲಹೆ ಕೇಳಿದ.

‘ನೀನಿನ್ನೂ ಬಚ್ಚಾ ಕಣೋ. HR ಹತ್ರ ಹೋಗಿ ಕೇಳಿದ ಕೂಡ್ಲೆ ಅವಳು ದೇವಿ ಮಹಾತ್ಮೆ ನಡೆಸಿ ನಿನ್ನ ಇಲ್ಲಿಂದ ಪಾರು ಮಾಡ್ತಾಳೆ ಅಂದ್ಕೊಂಡಿದ್ದೀಯಾ? ದೀಪಾವಳಿಗೆ ಮನೆಗೆ ಹೋಗ್ಬೇಕು ಅಂತ ಎರಡು ವಾರ ರಜೆ ಬೇರೆ ಕೇಳಿದ್ಯಾ. ಸಂಜಯ್ ನನ್ನ ಹತ್ರ ಟೀಮಿನವರ ರಜೆಗಳ ವಿವರ ಕೇಳಿದ್ದಾನೆ. ನೀನು ಈಗ ಏನಾದ್ರು ಜಾಸ್ತಿ ಬಾಲ ಬಿಚ್ಚಿದ್ರೆ ಎಲ್ಲಕ್ಕೂ ಖೋತಾ. ನಾನು ಶ್ರೀನಿ ಹತ್ರ ಮಾತಿನ ಮಧ್ಯೆ ನಿನ್ನ ಬಗ್ಗೆ ಹೇಳಿದ್ದೇನೆ. ಇನ್ನೊಂದು ಮೂರೂವರೆ ತಿಂಗಳು. ಈಗಷ್ಟೆ ಮೊವತ್ತು ರಿಪೋರ್ಟುಗಳನ್ನು ಮುಗಿಸಿದ್ದೇವೆ. ಇನ್ನೊಂದು ಇಪ್ಪತ್ತು ರಿಪೋರ್ಟು. ಈ ವರ್ಷದ ಕೊನೆಯಲ್ಲಿ ಎಲ್ಲ ರಿಪೋರ್ಟುಗಳು ಮುಗಿದು ಬಿಡಲಿ. ಆಮೇಲೆ ಖಂಡಿತ ವಿಚಾರ ಮಾಡೋಣ ಅಂತ ಹೇಳಿದ್ದಾನೆ. ಸ್ವಲ್ಪ ತಾಳ್ಮೆ ಇರಲಿ. ಹಾಗೂ ಬೇಕು ಅನಿಸಿದ್ರೆ HR ಹತ್ರ ಮಾತಾಡು. ಅದರಿಂದ ಏನೂ ಉಪಯೊಗ ಇಲ್ಲ. ಬದಲಿಗೆ ತೊಂದರೆನೇ ಆಗಬಹುದು. ಹುಷಾರಾಗಿ ಮಾತಾಡಬೇಕು. ನಾನೂ ಸಹ ರಿಲೀಸ್ ಕೇಳಿದ್ದೇನೆ’ ಎಂದು ಕಣ್ಣುಹೊಡೆದು ಮೊದಲ ಸಲ ತನ್ನ ರಿಲೀಸ್ ವಿಚಾರ ಬಾಯಿಬಿಟ್ಟ.

ಕುನಾಲ್ ಹುಬ್ಬೇರಿಸಿ ಓಹೋಹೋ ಎನ್ನುವಂತೆ ತಲೆ ಆಡಿಸಿದ. ‘ಸಂಜಯ್ ಮಹಾ ಕಮೀನೆ ಇದ್ದಾನೆ. ಅವನೇ ಏನಾದ್ರು ಕಿತಾಪತಿ ಮಾಡೋದು. ಇದೇನೋ ಮಹಾ ಘನಂದಾರಿ ಕೆಲ್ಸ ಅನ್ನೋ ರೀತಿ ಮಾತಾಡ್ತಾನೆ. ಅವನು ಮಾಡೋ ಕೆಲಸ ಆದರು ಏನು? ಸುಮ್ಮನೆ ಎಲ್ಲರಿಗು ಪಿಂಗ್ ಮಾಡಿ ಕಾಟ ಕೊಡೋದು. ಒಂದಿಷ್ಟು ಶೀಟುಗಳನ್ನು ಹಿಡಿದುಕೊಂಡು ಓಡಾಡೋದು ಅಷ್ಟೆ’ ಎಂದು ಕುನಾಲ್ ಹಳಿದ. ಪ್ರಾಜೆಕ್ಟಿನಲ್ಲಿ ಎಲ್ಲರೂ ಸಂಜಯ್‌ನನ್ನು ಕಂಡರೆ ಅಷ್ಟಕ್ಕಷ್ಟೆ ಎನ್ನುವಂತಿದ್ದರು. ಅವನೊಂದಿಗೆ ಹೆಚ್ಚು ಮಾತಾಡುತ್ತಿರಲಿಲ್ಲ. ನಿಷ್ಠುರವೂ ಇರಲಿಲ್ಲ. ಅವರವರಲ್ಲೆ ಅವನಿಗೆ ತಣ್ಣಗೆ ಶಪಿಸುತ್ತಿದ್ದರು. ಕುನಾಲ್ ಅಗತ್ಯಕ್ಕಿಂತ ಹೆಚ್ಚೇ ಸಂಜಯ್‌ನನ್ನು ತಲೆಯಲ್ಲಿ ತುಂಬಿಕೊಂಡಿದ್ದಾನೆ ಅನ್ನಿಸಿತು.

‘ನೋಡು ಕುನಾಲ್. No work is a small work. ಮೊದ್ಲು ಅದನ್ನ ಅರ್ಥ ಮಾಡ್ಕೋ. ನೀನು ಮಹಾ ಬುದ್ಧಿವಂತನೇ ಇರಬಹುದು. ಎಲ್ಲೋ ಸಲ್ಲಬೇಕಿತ್ತು ಅನ್ನೋದಕ್ಕಿಂತ ನೀನಿರುವಲ್ಲಿ ಸಲ್ಲಿಸಬೇಕಾದ್ದನ್ನ ಮೊದಲು ಸಲ್ಲಿಸು. ಅವಕಾಶ ಸಿಕ್ಕಾಗ ಬೇರೆ ಕೆಲಸಕ್ಕೆ ಹೋಗು. ಸುಮ್ಮನೆ ಹಳಹಳಿಸಿ ಬೇಡ. I dont like people who crib. If you dont like it. Quit. ಯಾರೂ ನಿನ್ನ ಕಾಲು ಹಿಡಿದು ಕೆಲ್ಸಕ್ಕಿರು ಅಂತ ಕೇಳ್ತಿಲ್ಲ. ನೀನು ಹೋದ್ರೆ ಸಂಜಯ್‌ಗಾಗಲಿ ಯಾರಿಗೇ ಆಗಲಿ ಏನೂ ನಷ್ಟ ಇಲ್ಲ. ಇಲ್ಲಿಂದ ಹೋದ ಮೇಲೆ ಅವನಿಗಿಂತ ಕೆಟ್ಟ ಮ್ಯಾನೇಜರ್ ಸಿಕ್ಕರೆ ಏನ್ ಮಾಡ್ತೀಯ. ಸುಮ್ನೆ ನಿನ್ನ ಈ ಆವೇಶವನ್ನೆಲ್ಲ ಬಿಟ್ಟು ನಿನ್ನ ಕೆಲಸ ಮಾಡಿಕೊಳ್ಳೋದರ ಕಡೆ ಯೋಚ್ನೆ ಮಾಡು’ ಶ್ಯಾಮ್‌ಗೆ ಕುನಾಲ್‌ನ ಧೋರಣೆಯಿಂದ ಸಿಟ್ಟು ಬಂದಿತ್ತು. ಜೊತೆಗೆ ಅವನ ಹತಾಶೆಯೂ ಅರ್ಥವಾಯಿತು. ಪ್ರೀತಿಯ ವಿಚಾರದಲ್ಲಿ ಉಳಿದ ವಿಚಾರದಲ್ಲಿ ಇಷ್ಟು ಸೌಮ್ಯವಾಗಿರುವ ಹುಡುಗ ತನ್ನ ಕೆಲಸದ ವಿಚಾರ ಬಂದ ಕೂಡಲೇ ಯಾಕಿಷ್ಟು ತಾಳ್ಮೆ ಕಳೆದುಕೊಳ್ಳುತ್ತಾನೆ ಎನ್ನುವುದು ಅರ್ಥವಾಗಲಿಲ್ಲ.

‘ನೀನು ಸಂಜಯ್ ಬಗ್ಗೆ ಹೆದರಬೇಡ. ಅವನು ಕೀ ಪ್ಯಾಡ್ ಆದ್ರೆ ನಾನು ಟಚ್ ಪ್ಯಾಡ್. ಏನಾದರೊಂದು ಉಪಾಯ ಮಾಡೋಣ. ಸ್ವಲ್ಪ ತಾಳ್ಮೆ ಇರಲಿ. ಇಲ್ಲಿ ನಿನಗೆ ಬೇಕಾದ್ದು ಸಿಗುತ್ತೆ. ಆದರೆ ಸ್ವಲ್ಪ ತಾಳ್ಮೆ ಇರಬೇಕು ಅಷ್ಟೆ. ಇಲ್ಲೇ ಇದ್ದಲ್ಲೇ ನಾವು ನಮ್ಮ ದಾರಿಗಳನ್ನ ಹುಡುಕಿಕೊಳ್ಳಬೇಕು. ಇಲ್ಲದಿದ್ದರೆ ನಾವೇ ದಾರಿ ಕೊರೆಯಬೇಕು. ಹತಾಶೆಯಿಂದ ಸಿಟ್ಟಿನಿಂದ ಏನನ್ನೂ ಪಡೆಯೋಕ್ಕಾಗೊಲ್ಲ ಕುನಾಲ್. ನಿನ್ನ ರಿಲೀಸ್ ವಿಚಾರ ನನಗೆ ಬಿಡು. ಸಂಜಯ್ ಹತ್ರ ಮಾತಾಡ್ತೀನಿ. ಅವಶ್ಯವಾದರೆ ಶ್ರೀನಿ ಹತ್ರ ಇನ್ನೊಮ್ಮೆ ಮಾತಾಡ್ತೀನಿ. ನೀನು ಅಲ್ಲಿವರೆಗೆ ನಮ್ಮ ಪ್ರಾಜೆಕ್ಟಿನ ಆರ್ಕಿಟೆಕ್ಚರು, ಇಲ್ಲಿನ ರಿಪೋರ್ಟುಗಳನ್ನು ಅವಲೋಕಿಸುತ್ತಿರು. ನಮ್ಮ ಬಳಕೆಗೆ ಇರುವ ಕಂಪ್ಯೂಟರ್ ಸರ್ವರಿನಲ್ಲಿ ಏನಾದರು ಮಾರ್ಪಾಡು ಮಾಡುತ್ತ ಅರ್ಥೈಸಿಕೊ’ ಎಂದು ಭರವಸೆ ತುಂಬುವಂತೆ ತಿಳಿ ಹೇಳಿದ.

‘ಅದು ಸರಿ ಶ್ಯಾಮ್. ಈಗ ನೀನೇ ಹೇಳು. ಇವರೆಲ್ಲ ಇಷ್ಟು ಹಾರಾಡ್ತಾ ಇದ್ದಾರಲ್ಲ. ಆ ಸೋನಿ, ಸಂಜಯ್ ಎಲ್ಲ. ಎಪ್ಪತ್ತೈದು ರಿಪೋರ್ಟುಗಳು ಆಗಲೇ ಬೇಕಂತ. ಆಗದಿದ್ದರೆ ಏನು? ಅಂಥ ಸಾವಿರಾರು ರಿಪೋರ್ಟುಗಳು ನಮ್ಮ ರಿಸರ್ವ್ ಬ್ಯಾಂಕಿಗೂ ಬೇರೆ ಬೇರೆ ಬ್ಯಾಂಕಿನಿಂದ ಬರುತ್ತೆ. ಅದನ್ನೆಲ್ಲ ಯಾರು ನೋಡ್ತಾರೆ ಶ್ಯಾಮ್? ಈ ರಿಪೋರ್ಟುಗಳೆಲ್ಲ ಕೇವಲ ಒಪ್ಪಿಸಬೇಕು ಅನ್ನೋ ಕಾನೂನು ಇರೋದರಿಂದ ಎಲ್ರೂ ಒಪ್ಪಿಸುತ್ತಿರೋದು. ಅಲ್ನೋಡು ಆ ಚಿಕ್ಕ ಹುಡುಗಿ ಆ ಸಣ್ಣ ರಿಂಗಿನಲ್ಲಿ ತನ್ನ ದೇಹವನ್ನ ಹೇಗೆಲ್ಲ ಬಾಗಿ ಬಳುಕಿಸಿ ನುಸುಳಿಸಿ ಹೊರಬರುತ್ತಾಳೆ. ಏನೇನು ಥರೇವಾರಿ ಪಲ್ಟಿ ಹೊಡೆಯುತ್ತಿದ್ದಾನೆ ನೋಡು ಆ ಚಿಕ್ಕ ಹುಡುಗ. ಈಗಷ್ಟೆ ಇಪ್ಪತ್ತು ರೂಗೆ ಒಂದು ಅಂತ ಆ ಬೊಂಬೆಯನ್ನು ಮಾರಾಟ ಮಾಡುತ್ತ ಹೋದನಲ್ಲ, ಅದರ ಕುಸುರಿ ನೋಡಿದ್ಯಾ?...ಇವುಗಳ ಮುಂದೆ ನಾನೀಗ ಮಾಡುತ್ತಿರುವ ಕೆಲಸ ಯಾವ ಲೆಕ್ಕ ಶ್ಯಾಮ್. ಒಮ್ಮೊಮ್ಮೆ ಕಂಪನಿ ನನಗೆ ಯಾಕಿಷ್ಟು ಸಂಬಳ ಕೊಡುತ್ತೆ ಅನ್ನಿಸಿಬಿಡುತ್ತೆ’ ಎಂದ.

‘ಯಾಕೆಂದ್ರೆ ನಿನ್ನ ತಲೆ ಮೇಲೆ ಅವರು ಬ್ಯಾಂಕಿನವರಿಗೆ ತಿಂಗಳಿಷ್ಟು ಅಂತ ಬಿಲ್ ಮಾಡ್ತಿದರಲ್ಲ ಅದಕ್ಕೇ. ಇಲ್ಲಿ ತಲೆ ಲೆಕ್ಕಕ್ಕೆ ನೀನೊಂದು ಜನ ಅಷ್ಟೇ......just a headcont' ಎಂದು ಶ್ಯಾಮ್ ನಗುತ್ತ ಹೇಳಿದ. ಅಷ್ಟರಲ್ಲಿ ಶ್ಯಾಮ್‌ಗೆ ಸಂಜಯ್‌ನಿಂದ ಕಾಲ್ ಬಂತು.

‘ಎಲ್ಲಿದ್ದೀಯ ಶ್ಯಾಮ್ ಬರೋದು ಇನ್ನೂ ಎಷ್ಟು ಹೊತ್ತಾಗುತ್ತೆ?’ ಸಂಜಯ್ ಧ್ವನಿಯಲ್ಲಿದ್ದ ಆತಂಕ ಗಮನಿಸಿದ ಶ್ಯಾಮ್, ‘ಯಾಕೆ ಏನಾಯ್ತು? ಹೊರಟಿದ್ದಿನಿ. ಇನ್ನೊಂದು ಹದಿನೈದು ನಿಮಿಷದಲ್ಲಿ ಇರ್ತೀನಿ’ ಎಂದ. ‘ಸರಿ. ಬಾ. ಬಂದ ಮೇಲೆ ಮಾತಾಡೋಣ’ ಎಂದ.

ಫೋನಿನಲ್ಲಿ ಮಾತಾಡುತ್ತಿರುವಂತೆ ಸಿಗ್ನಲ್ ದಾಟಿ ಕಾರನ್ನು ಬಲಕ್ಕೆ ತಿರುವಿದ. ಪಕ್ಕದಲ್ಲೇ ಕಾಯುತ್ತ ನಿಂತಿದ್ದ ಟ್ರಾಫಿಕ್ ಪೋಲಿಸರು ಕಾರು ತಡೆದರು. ಶ್ಯಾಮ್ ಇದು ಮೂರನೇ ಸಲ ಕಾರು ಓದಿಸುವಾಗ ಫೋನಿನಲ್ಲಿ ಮಾತಾಡುತ್ತ ಸಿಕ್ಕಿ ಬೀಳುತ್ತಿರುವುದು. ಲೈಸನ್ಸ್ ಇನ್ಸುರೆನ್ಸು ಯಾವುದನ್ನೂ ಕೇಳದೆ ಐನೂರು ರೂಪಾಯಿ ಎಂದ ಪೋಲೀಸ್ ಮಾಮಾ. ಈಗಾಗಲೇ ಎರಡು ಸಲ ಸಿಕ್ಕಿ ಬಿದ್ದಿರುವದರಿಂದ ವಾದ ಮಾಡುವುದಕ್ಕೆ ಏನು ಇಲ್ಲವೆಂದು ಶ್ಯಾಮ್ ಪರ್ಸಿಗೆ ಕೈ ಹಾಕಿದ. ಗ್ರಹಚಾರವೇ ಎಂದುಕೊಂಡ. ರಾತ್ರಿ ಮಲಗುವಾಗ ಪರ್ಸು ತೆಗೆದಿಟ್ಟವನು ಕುನಾಲ್ ಮನೆಯಲ್ಲೇ ಮರೆತು ಬಂದಿದ್ದ. ಏನು ಹೇಳುವುದು ಅನ್ನುವುದು ತಿಳಿಯದೆ. ಕುನಾಲ್ ಹತ್ತಿರ ಕೇಳಿದ. ಅವನು ತನ್ನ ಇರುವುದೇ ಇಪ್ಪತ್ತು ರೂಪಾಯಿ ಚಿಲ್ಲರೆ ಈವತ್ತು ಡ್ರಾ ಮಾಡ್ಬೇಕು ಅಂತಿದ್ದೆ ಎಂದ. ಜೇಬಲ್ಲಿ ಒಂದು ನೂರು ರೂಪಾಯಿ ಇಟ್ಕೊಳಲ್ಲ ತಲೆ ಎಲ್ಲ ಮಾತಾಡ್ತ್ಯಾ ಎಂದು ನಕ್ಕು ಶ್ಯಾಮ್, ‘ಸರ್ ಪರ್ಸು ಮರ್ತು ಬಂದಿದೀನಿ. ನಾಳೆ ಬರ್ತಾ ಕೊಡ್ತೀನಿ. ಆಫೀಸಿಂದ ಫೋನು. ತುಂಬ ಅರ್ಜೆಂಟಿದೆ’ ಎಂದು ಕೇಳಿಕೊಂಡ.

‘ಎಲ್ರಿಗೂ ಅರ್ಜೆಂಟೇ ರೀ..ನಮಗೇನು ಮಾಡಕ್ ಬೇರೆ ಕೆಲ್ಸಿಲ್ವಾ? ನಾಳೆ ಕೊಡೋದಕ್ಕೆ ಇದೇನು ಕೈ ಸಾಲನ? ಮೊಬೈಲ್ ಕೊಟ್ಟು ಹೋಗಿ’ ಎಂದು ಗಡುಸಾದ. ಇದೆಲ್ಲಿ ಬಂತು ಎಂದುಕೊಂಡು ಶ್ಯಾಮ್ ಕುನಾಲ್‌ನತ್ತ ನೋಡುತ್ತ ತಲೆ ಕರೆದುಕೊಂಡ. ಇಬ್ಬರೂ ಕಾರಿನಿಂದ ಇಳಿದರು.

ಕುನಾಲ್ ನಾನು ಮಾತಾಡ್ತೀನಿ ಅಂತ ಹೋಗಿ, ಪೋಲಿಸನ ಹತ್ತಿರ ಏನೇನೋ ಅಭಿನಯಿಸುತ್ತ ಸಮಾಧಾನದಿಂದ ಒಪ್ಪಿಸುವ ಪ್ರಯತ್ನ ಪಟ್ಟ. ಕೆಲ ನಿಮಿಷಗಳ ನಂತರ ಬಂದು, ಚಲೋ ಚಲೋ ಎಂದು ಕಾರು ಹತ್ತಿದ. ಶ್ಯಾಮ್ ಕಾರು ಸ್ಟಾರ್ಟ್ ಮಾಡಿ ಹೊರಡುತ್ತ, ‘ಏನು ಮಾಡಿದ್ಯೋ?’ ಎಂದು ನಗುತ್ತ ಕೇಳಿದ.

‘ಏನಿಲ್ಲ. ನನ್ನ ಹತ್ರ ಇರೋ ಇಪ್ಪತ್ತು ರೂಪಾಯಿ ಜೊತೆ ಫುಡ್ ಕೂಪನ್ ಐವತ್ತು ರೂಪಾಯಿ ಸೇರಿಸಿ ಇಷ್ಟೇ ಇರೋದು ಸರ್. ಅಂತ ಗೋಗೆರದು ಒಪ್ಪಿಸಿದೆ’ ಎಂದು ನಕ್ಕ.

‘ನೀನೂ ಭಲೇ ಕಮೀನೆ ಇದ್ದೀ. ಅಲ್ಲ ಟ್ರಾಫಿಕ್ ಪೋಲಿಸಿಗೆ ಲಂಚದಲ್ಲಿ ಫುಡ್ ಕೂಪನ್ ಕೊಟ್ಟು ತಪ್ಪಿಸಿಕೊಂಡು ಬಂದಿದ್ದೀಯಲ್ಲ!’ ಅಂತ ಶ್ಯಾಮ್ ಹೇಳಿದ್ದಕ್ಕೆ, ‘ನಾನು ಬಿಡು ಆ ಪೋಲಿಸವನು ಫುಡ್ ಕೂಪನ್ ತಗೊಳ್ಳೋ ಹಂತಕ್ಕೆ ಬಂದಿದ್ದಾನಲ್ಲ ಅದು ಹೇಳು’ ಎಂದು ನಕ್ಕ. ‘ಇಂಥ ಚಾಲಾಕಿ ನೀನು. ಸಂಜಯ್ ಹತ್ರ ಮಾತ್ರ ಯಾಕೆ ಹಾಗ್ ಆಡ್ತೀಯ? ಅಲ್ಲೂ ಸ್ವಲ್ಪ ನಯವಾಗಿರು. ಅವನನ್ನ ಫ್ರೆಂಡ್ ಮಾಡ್ಕೊ’ ಶ್ಯಾಮ್ ಕುಶಾಲು ಮಾಡಿದ. ‘ಅವನ ತಲೆ ಕಂಡ್ರೆ ಆಗೊಲ್ಲ ನಂಗೆ. ಅವನ ಬಗ್ಗೆ ಮಾತಾಡಬೇಡ’ ಎಂದು ಕುನಾಲ್ ಚಿರಿಚಿರಿಯಾದಂತೆ ತನ್ನ ಗುಂಗುರು ತಲೆಗೂದಲನ್ನು ಕೆರೆದುಕೊಂಡು ಅಭಿನಯಿಸಿದ. ಶ್ಯಾಮ್‌ಗೆ ಸಂಪೂರ್ಣ ಮನವರಿಕೆಯಾಗಿತ್ತು. ಕುನಾಲ್‌ಗೆ ಪ್ರೀತಿಯೊಡನೆ ಬ್ರೇಕ್ ಅಪ್ ಆಗಿದ್ದರ ಬಗ್ಗೆ ಕಿಂಚಿತ್ತೂ ವಿಷಾದವಿಲ್ಲವೆಂದು.

***

‘ಹೋದ ವಾರವಷ್ಟೆ ನಾವು ಮೂವತ್ತು ರಿಪೋರ್ಟುಗಳನ್ನ ಸಿದ್ಧ ಮಾಡಿಕೊಟ್ಟಿದ್ದೇವೆ. ಎಲ್ಲರೂ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೀರ. ಸಂಜಯ್ ಶನಿವಾರವೂ ಸಹಿತ ಕೆಲಸ ಮಾಡಿದ್ದಾನೆ. ನಿಮ್ಮಲ್ಲೂ ಅನೇಕರು ಮಾಡಿರುತ್ತೀರ...ಥ್ಯಾಂಕ್ಯೂ ಎಲ್ಲರಿಗೂ...’ ಎಂದು ಶ್ರೀನಿಯ ಬಾಸ್ ವಾಸು ಮೂವತ್ತೂ ಜನರನ್ನು ಕಾನ್‌ಫರೆನ್ಸ್ ರೂಮಿಗೆ ಕರೆಸಿ ಪೀಠಿಕೆ ಹಾಕುತ್ತಿದ್ದ. ಅಲ್ಲಿ ಇದ್ದದ್ದೇ ಹದಿನೈದು ಚೇರುಗಳು. ಆ ಅಂಡಾಕಾರದ ಉದ್ದದ ಮೇಜಿನ ಸುತ್ತ ಕೆಲವರು ಕೂತಿದ್ದರು ಕೆಲವರು ಗೋಡೆಗೆ ಒರಗಿ ನಿಂತಿದ್ದರು. ಆ ಬ್ಯಾಂಕಿನ ಅಷ್ಟೂ ಪ್ರಾಜೆಕ್ಟುಗಳನ್ನು ನಿರ್ವಹಿಸುವ ಜಾವಾಬ್ದಾರಿ ಹೊತ್ತಿದ್ದ ಗ್ರೂಪ್ ಲೀಡರ್ ಆಗಿದ್ದ ವಾಸು ಮಧ್ಯದಲ್ಲಿ ಕುಳಿತಿದ್ದ. ಶ್ರೀನಿ, ಸಂಜಯ್, ಶ್ಯಾಮ್ ಅವನ ಅಕ್ಕಪಕ್ಕದಲ್ಲಿ ಆಸೀನರಾಗಿದ್ದರು. ಎಲ್ಲರೂ ಮೂವತ್ತು ರಿಪೋರ್ಟುಗಳನ್ನು ಮಾಡಿ ಮುಗಿಸಿದ್ದರ ಖುಷಿಯಲ್ಲಿ ಮುಂದೆ ಎಲ್ಲ ರಿಪೋರ್ಟುಗಳೂ ಮುಗಿದ ಮೇಲೆ ಟೀಮ್ ಔಟಿಂಗ್ ಬಗ್ಗೆ ಹೇಳಬಹುದು ಎಂದುಕೊಂಡರು. ಕೆಲವರು ಮತ್ತೇನಿಲ್ಲ ಇಲ್ಲಿವರೆಗೆ ಮಾಡಿದಂತೆ ಇನ್ನೊಂದು ಮೂರು ತಿಂಗಳು ಕೆಲಸ ಮಾಡಿ ಎಂದು ನಯವಾಗಿ ಒಪ್ಪಿಸಲು ಕರೆಸಿದ್ದಾನೆ ಎಂದು ಗುಟ್ಟಾಗಿ ಮಾತಾಡಿ ನಕ್ಕರು.

ವಾಸು ಮಾತು ಮುಂದುವರೆಸುತ್ತ, ‘ಇವತ್ತು ಬೆಳಗ್ಗೆಯಷ್ಟೇ ನಮಗೊಂದು ಈಮೇಲ್ ಬಂದಿದೆ. There is an escalation' ಎಂದು, ಮಧ್ಯೆ ಕೆಲಕ್ಷಣಗಳ ಭಾರವದ ನಿಶ್ಶಬ್ಧವಿರಿಸಿ ಮುಂದುವರೆಸಿದ, ‘ಮತ್ತೆ, ಅದು ನಮ್ಮ ಕಂಪನಿಯ ಮತ್ತು ಬ್ಯಾಂಕಿನ ಉನ್ನತ ಹುದ್ದೆಯಲ್ಲಿರುವ ಎಲ್ಲರಿಗೂ ತಲುಪಿದೆ. ಮೂವತ್ತು ರಿಪೋರ್ಟಿನಲ್ಲಿ ಐದು ರಿಪೋರ್ಟುಗಳು ಬ್ಯಾಂಕಿನವರ ಅವಶ್ಯಕತೆಗೆ ಏನೇನೂ ಸರಿಹೊಂದುತ್ತಿಲ್ಲವೆಂದು ತಿಳಿಸಿದ್ದಾರೆ’ ಎಂದು ಎಲ್ಲರತ್ತ ಕಣ್ಣುಹಾಯಿಸಿದ. ಸಂಜಯ್ ಕೂಡ ಬಹಳ ಗಂಭೀರವಾಗಿ ತಲೆ ಆಡಿಸಿದ. ‘ಹಾಗಂತ ಮಿಕ್ಕ ರಿಪೋರ್ಟುಗಳು ಪೂರ್ತಿ ಸರಿ ಇದೆ ಅಂತಲ್ಲ. ಅವುಗಳಲ್ಲು ಸಣ್ಣಪುಟ್ಟ ದೋಷಗಳಿವೆ. ಆದರೆ ಈ ಐದು ರಿಪೋರ್ಟುಗಳು ಮಾತ್ರ ಪೂರ್ತಾ ನಿಷ್ಪ್ರಯೋಜಕವೆಂದು, ನಾವು ಮಾಡಿದ ಕೆಲಸದ ಒಟ್ಟು ‘ಕ್ವಾಲಿಟಿ’ಯ ಬಗ್ಗೆ ಬೇಸರ ವ್ಯಕ್ತ ಪಡಿಸಿ ಈಮೇಲ್ ಕಳುಹಿಸಿದ್ದಾರೆ’, ವಾಸುವಿನ ಮುಖದಲ್ಲಿ ಚಿಂತೆ ಅಸಮಾಧಾನ ವಿಷಾದಗಳೆಲ್ಲ ಒಟ್ಟಾಗಿ ಮೂಡಿದವು.

ಆಗ ಮಧ್ಯೆ ಮಾತಿಗೆ ಬಂದ ಶ್ರೀನಿ, ‘ಅಂದರೆ ನೀವು ಕೆಲಸ ಸರಿಯಾಗಿ ಮಾಡಲಿಲ್ಲ ಅಂತಲ್ಲ. ನೀವೆಲ್ಲ ನಿಮ್ಮ ಮಿತಿ ಮೀರಿ ಶ್ರಮ ಪಟ್ಟಿದ್ದೀರ. ನಮಗೆಲ್ಲ ಗೊತ್ತೇ ಇದೆ. ಏನೋ ತಪ್ಪುಗಳಾಗಿವೆ. ಅವರಿಂದಲೋ ನಮ್ಮಿಂದಲೋ ಅದು ಬೇರೆಯದೇ ಚರ್ಚೆ. ಸೋನಿ ಮತ್ತು ಸಂಜಯ್ ಈ ಎಲ್ಲ ತಪ್ಪುಗಳ ಮೂಲ ಕಾರಣ ಅರಿಯುವ ಮತ್ತು ಅವನ್ನು ತಡೆಗಟ್ಟುವ ಬಗ್ಗೆ ಪರಿಶೀಲಿಸಿ ಒಂದು ರಿಪೋರ್ಟು ತಯಾರಿಸಲಿದ್ದಾರೆ. ಅದನ್ನು ಒತ್ತಟ್ಟಿಗಿಡೋಣ. ಏನೇ ಇರಬಹುದು. ಆದರೆ ನಮ್ಮ ಮುಂದಿರುವ ಗುರಿ ಈ ವರ್ಷದೊಳಗೆ ಎಪ್ಪತ್ತೈದು ರಿಪೋರ್ಟುಗಳನ್ನು ಮುಗಿಸುವುದು. ಈ ಐದು ರಿಪೋರ್ಟು, ಮಿಕ್ಕ ರಿಪೋರ್ಟುಗಳ ಸಣ್ಣ ಪುಟ್ಟ ದೋಷಗಳು. ಮತ್ತು, ಇನ್ನುಳಿದ ಇಪ್ಪತ್ತು ರಿಪೋರ್ಟು - ಇವಿಷ್ಟನ್ನು ಮುಂದಿನ ಎರಡೂವರೆ ತಿಂಗಳಲ್ಲಿ ಮುಗಿಸಿಕೊಡಬೇಕು’ ಎಂದು ವಾಸುವಿನ ಮಾತಿನಿಂದ ಟೀಮಿನರಿಗೆ ನೋವಾಗದಂತೆ ಎಚ್ಚರವಹಿಸಿ ಮಾತಾಡಿದ. ಕೂಡಲೇ ವಾಸು ತನ್ನ ಮಾತುಗಳನ್ನು ಸರಿಪಡಿಸಿಕೊಳ್ಳುವವನಂತೆ, ‘ನಿಜ ನಿಜ. ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ನಾನು ಮೊದಲೇ ಹೇಳಿದೆನಲ್ಲ. ಹುಡುಗರು ಬಹಳ ಶ್ರಮವಹಿಸಿದ್ದಾರೆ. ಈಗ ನಮ್ಮ ಗುರಿ ಏನಿದ್ದರು ವಹಿಸಿಕೊಂಡ ಕೆಲಸವನ್ನು ಪೂರ್ಣಗೊಳಿಸುವ ಕಡೆ ಇರಬೇಕು. ಆದ್ದರಿಂದ ಈ ಎರಡು ಮೂರು ತಿಂಗಳು ದಯಮಾಡಿ ಯಾರೂ ರಜೆ ತೆಗೆದುಕೊಳ್ಳಬೇಡಿ. ಅವಶ್ಯಕವೆನಿಸಿದರೆ ವೀಕೆಂಡುಗಳಲ್ಲಿ ಕೆಲಸ ಮಾಡುವ ಬಗ್ಗೆಯೂ ಯೋಚನೆ ಮಾಡಿ. ಆ ರಜೆಗಳನ್ನು ಮುಂದಕ್ಕೆ ತೆಗೆದುಕೊಳ್ಳುವಿರಂತೆ’ ಎಂದ. ಅವನಿಗೆ ವಿವರಿಸುವಂತೆ ‘ಆಗಲೇ ನಮ್ಮ ಹುಡುಗರು ವೀಕೆಂಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದ ಶ್ರೀನಿ. ವಾಸು, ‘ಹೌದು ಹೌದು. ಎಲ್ಲರೂ ಈಗಾಗಲೇ ವೀಕೆಂಡಿನಲ್ಲಿ ಕೆಲಸ ಮಾಡುತ್ತಿದ್ದೀರಿ. ಅಂದರೆ, ಈಗ ಇನ್ನಷ್ಟು ಫೋಕಸ್ ಇರಬೇಕು. ಇನ್ನಷ್ಟು ಮುತುವರ್ಜಿ ವಹಿಸಿ. ನಾವು ಈಗಾಗಲೇ ತೊಡಗಿಕೊಂಡಿದ್ದೇವೆ. ಹೆಚ್ಚಿಗೆ ಬೇಕಿರುವುದು ಇನ್ನೊಂಚೂರೇ ಚೂರು ಪರಿಶ್ರಮ ಅಷ್ಟೇ’ ಎಂದ. ಇವನೆಂಥ ಪೆಕ್ರ ಎನಿಸಿತು ಕುನಾಲ್‌ಗೆ. ವಾಸು ಮತ್ತು ಶ್ರೀನಿ ಇಬ್ಬರೂ ಒಬ್ಬರಿಗೊಬ್ಬರು ತಾಳ ಎತ್ತಿ ಕೊಡುವಂತೆ ಮಾತಾಡುತ್ತಿದ್ದರು. ಶ್ರೀನಿ ನಡುವೆ, ‘ಮತ್ತೆ ನಾವು ಇನ್ನೊಂದು ತಿಂಗಳಲ್ಲೇ ಹೊಸ ಬಿಲ್ಡಿಂಗಿಗೆ ಶಿಫ್ಟ್ ಆಗುತ್ತಿದ್ದೇವೆ’ ಎಂದು ಶ್ಯಾಮ್‌ನತ್ತ ನೋಡಿದ. ವಿಚಾರಿಸಿದಾಗೆಲ್ಲ ಇನ್ನೊಂದು ತಿಂಗಳಷ್ಟೇ ಅನ್ನುವುದನ್ನು ಕೇಳಿ ಕೇಳಿ ಶ್ಯಾಮ್‌ಗೆ ಆ ವಿಷಯದಲ್ಲಿ ಆಸಕ್ತಿಯೇ ಉಳಿದಿರಲಿಲ್ಲ. ಶ್ಯಾಮ್ ‘ಹೋ ಹೌದಾ’ ಅಂತಷ್ಟೇ ಹೇಳಿದ. ಯೆಸ್ ಯೆಸ್ ಎಂದು ಶ್ರೀನಿ ತಲೆ ಆಡಿಸಿದ. ಕೊನೆಯಲ್ಲಿ ವಾಸು, ‘ನಿಮ್ಮೆಲ್ಲರ ಸಂಪೂರ್ಣ ಸಹಕಾರ ಸಿಗುತ್ತೆ ಅಂತ ನಂಬಿದ್ದೇನೆ. ಈ ಎರಡು ತಿಂಗಳಲ್ಲಿ ನಾವು ನಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸೋಣ’ ಎನ್ನುವಲ್ಲಿಗೆ ಆ ಮೀಟಿಂಗು ಉಪಸಂಹಾರವಾಯಿತು. ಇನ್ನು ಪ್ರತಿ ಶನಿವಾರವೂ ಅಫೀಸಿಗೆ ಬರುವುದು ಅನಿವಾರ್ಯ ಅನ್ನುವುದು ಆ ಕ್ಷಣಕ್ಕೆ ಎಲ್ಲರಿಗೂ ತಿಳಿಯಿತು. ಎಲ್ಲರೂ ಪೆಚ್ಚು ಮೋರೆಯೊಂದಿಗೆ ಒಬ್ಬರ ಹಿಂದೆ ಒಬ್ಬರು ತೆರೆದ ಬಾಗಿಲು ಹಿಡಿಯುತ್ತ ಹೊರನಡೆದರು.

ಶ್ಯಾಮ್ ದಿಗ್ಭ್ರಾಂತನಾಗಿದ್ದ. ಸಣ್ಣಪುಟ್ಟ ದೋಷಗಳು ಸಾಮಾನ್ಯವೇ ಆದರೂ ಇಂಥದ್ದೊಂದು ತಗಾದೆ ತುಂಬಿದ ಈಮೇಲ್ ಕಳುಹಿಸುವಷ್ಟು ಕೆಟ್ಟ ಗತಿಯಲ್ಲಿ ಪ್ರಾಜೆಕ್ಟು ಇದೆಯೆಂದು ಅವನಿಗೆ ಅನ್ನಿಸಿರಲಿಲ್ಲ. ಅವನಿನ್ನೂ ಕೂಲಂಕುಷವಾಗಿ ಈಮೇಲ್ ಓದಿರಲಿಲ್ಲ. ಆಫೀಸು ತಲುಪಿದ ಐದು ನಿಮಿಷಕ್ಕೇ ಸಂಜಯ್ ವಿಷಯ ತಿಳಿಸಿ ವಾಸು ಟೀಮ್ ಮೀಟಿಂಗ್ ಕರೆದಿದ್ದಾನೆ ಎಂದು ಎಲ್ಲರನ್ನೂ ಹೊರಡಿಸಿದ್ದ.

ಶ್ಯಾಮ್ ಸೋನಿ ಕಳುಹಿಸಿದ್ದ ಈಮೇಲ್ ಓದಿದ. ಬಹಳ ಆತ್ಮೀಯವಾಗಿ ಮಾತಾಡುತ್ತಿದ್ದವನು ಹೀಗೆ ಇದ್ದಕ್ಕಿದ್ದಂತೆ ತಿರುಗಿಬಿದ್ದದ್ದು ಕಂಡು ‘ಕಮೀನೇ’ ಎಂದು ಶಪಿಸಿದ. ಆ ಐದು ರಿಪೋರ್ಟುಗಳ ಸಂಗತಿ ಏನು ಎಂದು ಪರಿಶೀಲಿಸತೊಡಗಿದ. ಅದರಲ್ಲಿ ಒಂದು ರಿಪೋರ್ಟನ್ನು ಜಾರ್ಜ್, ಎರಡು ರಿಪೋರ್ಟನ್ನು ಪ್ರವೀಣ್, ಉಳಿದೆರಡು ರಿಪೋರ್ಟನ್ನು ಸುಹಾಸ್ ನಿರ್ಮಿಸಿದ್ದರು. ಅದರ ಅವಶ್ಯಕತೆಗಳ ವಿವರಗಳನ್ನು ಕೊಡುವಲ್ಲಿ ಬ್ಯಾಂಕಿನವರೇ ಎಡವಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತೋರುತ್ತಿತ್ತು. ಅದನ್ನೇ ಸಂಜಯ್‌ನೊಟ್ಟಿಗೂ ಚರ್ಚಿಸಿದ. ನಾವಿದನ್ನು ಬಲವಾಗಿ ಬ್ಯಾಂಕಿನವರ ಎದುರು ಮೀಟಿಂಗಿನಲ್ಲಿ ಪ್ರತಿಪಾದಿಸಬೇಕು ಎಂದ. ಸಂಜಯ್ ಅದೆಲ್ಲ ಇರಲಿ ಮೊದಲು ಟೀಮಿನ ಲೀವ್ ಪ್ಲ್ಯಾನ್ ಬಗ್ಗೆ ಚರ್ಚಿಸೋಣ ಎಂದು ಮೀಟಿಂಗ್ ರೂಮಿಗೆ ಒಯ್ದ.

ಟೀಮಿನವರ ರಜಾ ವಿವರಗಳಿರುವ ಶೀಟಿನ ಪ್ರಿಂಟ್ ಔಟ್ ಹಿಡಿದು, ‘ಪ್ರವೀಣನ ಮದುವೆಗೆ ಮೂರು ವಾರ ರಜೆ ಕೇಳಿದ್ದಾನೆ. ಒಂದು ವಾರ ಮಾತ್ರ ಕೊಡೋದು ಅನ್ನು. Two weeks is the standard. ಆದರೆ ಈ ಪರಿಸ್ಥಿತಿಯಲ್ಲಿ ಒಂದೇ ವಾರ. ಮತ್ತೆ ಆ ವೇಳೆಯಲ್ಲಿ ಅವನ ರಿಪೋರ್ಟುಗಳ ಕೆಲಸವನ್ನು ಬೇರೆಯವರಿಗೆ ವರ್ಗಾಯಿಸಬೇಕು. ಅನನ್ಯ ಐದು ದಿನ ರಜೆ ಕೇಳಿದ್ದಾಳೆ. ಯಾಕೆ?. ಜಾರ್ಜ್‌ಗು ಐದು ದಿನ ರಜೆ....ಕುನಾಲ್ ಎರಡು ವಾರ ರಜೆ?!..ಯಾಕೆ?’ ಮೀಟಿಂಗ್ ರೂಮಿನಲ್ಲಿ ತೋಳು ಮಡಚಿದ ನೀಲಿ ಅಂಗಿ ತೊಟ್ಟ ಸಂಜಯ್ ಶ್ಯಾಮ್‌ನನ್ನು ಪ್ರಶ್ನಿಸುತ್ತಿದ್ದ.

‘ಜಾರ್ಜ್ ಹೆಂಡತಿಗೆ ಆ ವಾರದಲ್ಲಿ ಡೆಲಿವರಿ ಡೇಟ್ ಕೊಟ್ಟಿದ್ದಾರಂತೆ ಡಾಕ್ಟರು. ಅನನ್ಯಗೆ ಊರಿನಲ್ಲಿ ಅವಳ ಗಂಡನ ತಮ್ಮ ಮದುವೆ ಇದೆಯಂತೆ. ಕುನಾಲ್ ದೀಪಾವಳಿಗೆ ಅಂತ ಊರಿಗೆ ಹೊರಟಿದ್ದಾನೆ. ಇನ್ನು ಪ್ರವೀಣನ ರಿಪೋರ್ಟುಗಳನ್ನು ವಹಿಸಿಕೊಳ್ಳಲು ಯಾರಿಗೂ ಪುರುಸೊತ್ತಿಲ್ಲ ಸಂಜಯ್. ನಾನು ಎಲ್ಲರ ಕೆಲಸದ ಪಟ್ಟಿ ನೋಡಿದೆ. ಎಲ್ಲರಿಗೂ ಅವರವರ ಕೆಲಸವೇ ಇದೆ. ಇನ್ನು ನಾನೇ ಮಾಡಬೇಕು ಅನಿಸುತ್ತೆ’ ಎಂದ ಶ್ಯಾಮ್.

‘ಹಾಗಿದ್ದರೆ ಅದನ್ನು ನೀನೇ ವಹಿಸಿಕೋ. ಮಗು ಹುಟ್ಟಿದ ಸಮಯದಲ್ಲಿ ಜಾರ್ಜ್‌ಗೆ ಎರಡು ದಿನ ರಜೆ ತೆಗೆದುಕೊಳ್ಳೋದಕ್ಕೆ ಹೇಳಿದರಾಯಿತು. ಅದೂ ಏನಾದರು ವೀಕೆಂಡಿನಲ್ಲಾದರೆ ಅದೊಂದು ತಲೆನೋವು ತಪ್ಪಿತು. ಅನನ್ಯಗೆ ಮದುವೆಯ ದಿನ ಒಂದು ದಿನದ ಮಟ್ಟಿಗೆ ಹೋಗಿಬರುವಂತೆ ಪುಸಲಾಯಿಸಬೇಕು. ಕುನಾಲ್‌ಗೆ ಏನಯ್ಯ ಎರಡು ವಾರ ರಜೆ. ನಾವೆಲ್ಲ ಇಲ್ಲಿ ಕೆರಕೊಳ್ಳೋಕೂ ಪುರುಸೊತ್ತಿಲ್ಲದೆ ತಿಕ ಹರ್ಕೊಂಡು ಕೆಲಸ ಮಾಡ್ತಿದ್ರೆ ಅವನು ಅಲ್ಲಿ ಹೋಗಿ ಸುಸ್ಸರ್ ಬತ್ತಿ ಹಚ್ತಾನಂತ? ಅದೆಲ್ಲ ಆಗೊಲ್ಲ ಅನ್ನು. ನೋ ಲೀವ್ಸ್’ ಎಂದು ಗಡುಸಾಗಿ ಹೇಳಿದ ಸಂಜಯ್.

‘ಹಾಗೆ ಹೇಳೋದಕ್ಕೆ ಆಗೊಲ್ಲ ಸಂಜಯ್. ನಾವು ಅಪ್ರೂವ್ ಮಾಡಿ ಅವನು ಟಿಕೆಟ್ ಕೂಡ ಬುಕ್ ಮಾಡಿ ಆಗಿದೆ. ಅದೂ ಅಲ್ದೆ ಅವನಿಗೆ ಮೊದಲೇ ಈ ಪ್ರಾಜೆಕ್ಟಿನ ಬಗ್ಗೆ ಬೇಸರ ಬಂದು ರಿಲೀಸ್ ಕೇಳ್ತಿದಾನೆ. ನಾವು ಅಷ್ಟು ಹಾರ್ಶ್ ಆಗಲ್ಕಿಕ್ಕಾಗೊಲ್ಲ’ ಶ್ಯಾಮ್ ಕುನಾಲ್ ಪರವಹಿಸಿದ. ‘ಅಲ್ಲಯ ಪ್ರೀತಿ ನೋಡು. ಸುಹಾಸ್ ಮೊದಲಿನಿಂದಲೂ ವಿದೇಶಕ್ಕೆ ಹೋಗಬೇಕು ಅಂತ ಕಾಯ್ತಾ ಇರೋದು ನಿನಗೂ ತಿಳಿದೇ ಇದೆ. ಈಗ ಪ್ರೀತಿ ಕೂಡ ಸಿಂಗಪೂರಿಗೆ ಹೋಗಬೇಕು ಅಂತ ಕೇಳ್ತಿದ್ದಾಳೆ. ಆದರೂ ತಾನು ಮಾಡೋ ಕೆಲಸಾನಾ ಎಷ್ಟು ಶೃದ್ಧೆಯಿಂದ ಮಾಡ್ತಾಳೆ. ಕುನಾಲ್‌ನ ಹಾಗೆ ಗೊಣಗ್ತಾ ಇರ್ತಾಳಾ?’ ಎಂದು ಪ್ರತಿವಾದಿಸಿದ.

‘ಒಬ್ಬೊಬ್ಬರ ಆಯ್ಕೆ ಒಂದೊಂದು ಥರ ಇರುತ್ತೆ. ಅವನಿಗಿಷ್ಟ ಇಲ್ಲ ಅಂದಮೇಲೆ ನಾವು ಅವನನ್ನ ಈ ಪ್ರಾಜೆಕ್ಟಿನಲ್ಲಿ ಇಟ್ಟುಕೊಂಡು ಎನು ಮಾಡೋದು?’ ಅಂತ ಕೇಳಿದ ಶ್ಯಾಮ್. `Come on Shyam. There is no choice ಎಲ್ಲ ಗೊತ್ತಿದ್ದೂ ಕೇಳ್ತೀಯಲ್ಲ. ಎಲ್ಲರ ಹತ್ರನೂ ಮಾತಾಡು. ಮತ್ತೆ ಇನ್ನೊಂದು ವಿಷಯ. ಬರೀ ಶನಿವಾರ ಮಾತ್ರ ಅಲ್ಲ ಭಾನುವಾರವೂ ಸಹ ಅಫೀಸಿಗೆ ಬರಬೇಕಾಗುತ್ತೆ ಅಂತ ತಿಳಿಸು. ಯಾರಾದ್ರು ರಗಳೆ ಮಾಡಿದ್ರೆ ನನ್ ಹತ್ರ ಕಳಿಸು’ ಎಂದು ಎದ್ದುನಿಂತ ಆರಡಿಯ ಭೂಪ.

ಶ್ಯಾಮ್‌ಗೆ ಏನೂ ತೋಚಲಿಲ್ಲ. ಎಷ್ಟು ಕೆಲಸ ಮಾಡಿದರೂ ಹೀಗಾಯಿತಲ್ಲ ಅಂತ ಬೇಸರಿಸಿದ. ಆವತ್ತು ಮೀಟಿಂಗಿನಲ್ಲಿ ಮಾತಾಡುವಾಗಲೂ ಅನ್ಯಮನಸ್ಕನಾಗಿದ್ದನ್ನು ಊಹಿಸಿದ ಸೋನಿ, ‘ಇದೆಲ್ಲ ಪಾರ್ಟ್ ಆಫ್ ಜಾಬ್. ನನಗೂ ಈ ಪ್ರಾಜೆಕ್ಟು ಸಾಕಾಗಿ ಹೋಗಿದೆ. ಈ ಎಲ್ಲ ರಗಳೆಗಳ ಹಿಂದೆ ದೊಡ್ಡದೊಂದು ಇತಿಹಾಸವೇ ಇದೆ ಶ್ಯಾಮ್. ಹೇಗೋ ಎಪ್ಪತ್ತೈದು ರಿಪೋರ್ಟು ಮಾಡಿ ಮುಗಿಸಿ ಕೈ ತೊಳೆದುಕೊಂಡರೆ ಸಾಕು ಅಂತ ನನಗೂ ಅನ್ನಿಸಿದೆ’ ಎಂದು ಸಮಾಧಾನ ಪಡಿಸುವಂತೆ ಮತ್ತೆ ಎಲ್ಲವನ್ನೂ ಮಾಮೂಲಿನಂತೆ ತೊಡಗಿಸಲು ಹವಣಿಸಿದ. ಶ್ಯಾಮ್ ಮತ್ತೊಮ್ಮೆ ಟೀಮ್ ಮೀಟಿಂಗ್ ಕರೆದು ಭಾನುವಾರವೂ ಕೆಲಸಕ್ಕೆ ಬರಬೇಕಾದ ಸಂಗತಿ ತಿಳಿಸಿದ. ಸಂಜಯ್ ಇಲ್ಲದಿರುವುದರಿಂದ ಎಲ್ಲರೂ ತಮ್ಮ ಅಸಹನೆ ತೋರ್ಪಡಿಸಿದರು. ಪ್ರತಿ ಭಾನುವಾರ ಅಂದ್ರೆ ಕಷ್ಟ ಆಗುತ್ತೆ. ಒಮ್ಮೊಮ್ಮೆ ಬರಬಹುದು ಅಷ್ಟೆ ಅಂತ ಕೆಲವರಂದರು. ನಂತರ ಒಬ್ಬೊಬ್ಬರೊಂದಿಗೆ ರಜೆಯ ಕುರಿತು ಮಾತಾಡಿದ. ಒಪ್ಪದವರು ಸಂಜಯ್‌ನೊಂದಿಗೆ ಚರ್ಚಿಸಿದರು. `Already escalation ಇದೆ’ ಎನ್ನುವುದು ಸಂಜಯ್‌ಗೊಂದು ಪ್ರಬಲ ಅಸ್ತ್ರವಾಯಿತು. ಎಲ್ಲರೂ ಕೊಸಕೊಸ ಎಂದರೂ ಕೊನೆಯಲ್ಲಿ ವಿಧಿಯಿಲ್ಲದೆ ಸಂಜಯ್ ಸೂಚಿಸಿದ ಸೂತ್ರಕ್ಕೆ ಸ್ವಲ್ಪ ಆಚೆಈಚೆಯಾಗಿ ಒಪ್ಪಿಕೊಂಡರು.

ಕುನಾಲ್ ಸಂಜಯ್ ಹತ್ತಿರವೇ ಮಾತಾಡುತ್ತೇನೆ ಅಂತ ಹೊರಟು ಕನಿಷ್ಠ ಒಂದು ವಾರವಾದರು ರಜೆ ಬೇಕೇಬೇಕು ಅಂತ ವಿಜ್ಞಾಪಿಸಿಕೊಂಡ. ಸಂಜಯ್ ತನ್ನ ಎಂದಿನ ಜಿಗುಟುತನದಲ್ಲಿ ಸಾಧ್ಯವೇ ಇಲ್ಲ. ಬೇಕಿದ್ದರೆ ಮುಂದಿನ ವರ್ಷವೇ ಎರಡು ವಾರ ರಜೆ ತಗೋ ಅಂತ ಹೇಳಿ ಕಳುಹಿಸಿದ. ಕುನಾಲ್ ತನ್ನ ಟಿಕೆಟುಗಳನ್ನು ಕ್ಯಾನ್ಸಲ್ ಮಾಡಿದ. ಅದೇ ಸಿಟ್ಟಿನಲ್ಲಿ HR ಬಳಿ ಹೋಗಿ ತನಗೆ ಈ ಪ್ರಾಜೆಕ್ತಿನಲ್ಲಿ ಕಿರುಕುಳ ಆಗುತ್ತಿದೆಯೆಂದು. ತನಗೆ ತನ್ನ ಓದಿಗೆ ಯೋಗ್ಯವಾದ ಬೇರೊಂದು ಪ್ರಾಜೆಕ್ಟು ಬೇಕೆಂದು ಕೇಳಿದ. ಯಾವುದೋ ತಲೆಬಿಸಿಯಲ್ಲಿದ್ದ ಅವಳು ಅವನ ವಿವರಗಳನ್ನು ಪಡೆದುಕೊಂಡು, ಸಂಜಯ್‌ನ ಹತ್ತಿರ ಒಮ್ಮೆ ಮಾತಾಡಿ, ‘ಸದ್ಯಕ್ಕೆ ರಿಲೀಸ್ ಸಾಧ್ಯ ಇಲ್ಲ ಕುನಾಲ್. ನೀನಿನ್ನೂ ಸೇರಿದ್ದೀಯ. ಆಗಲೇ ರಿಲೀಸ್ ಬೇಕು ಅಂದ್ರೆ? ಒಂದು ವರ್ಷವಾದರು ಕೆಲಸ ಮಾಡಬೇಕಾಗುತ್ತೆ’ ಎಂದಳು. ‘ಹಾಗಿದ್ದರೆ ನಾನು ಕಂಪನಿ ತೊರೆಯುವ ಬಗ್ಗೆ ಯೋಚಿಸಬೇಕಾಗುತ್ತೆ’ ಎಂದು ತಿರುಗೇಟು ನೀಡಿದ. 'Well that is your choice. ನಾನು ಏನೂ ಹೇಳೊಕ್ಕಾಗೊಲ್ಲ. ಇನ್ನೂ ಒಂದು ವರ್ಷ ಅನುಭವನೂ ಇಲ್ಲ ಆಗ್ಲೇ ಬೇರೆ ಕಂಪನಿಯಲ್ಲಿ ಕೆಲಸ ಸಿಗುತ್ತಾ? ನೋಡು ಸಿಗುತ್ತಾ ಅಂತ’ ಎಂದು ವ್ಯಂಗ್ಯದಿಂದ ಮಾತಾಡಿ ನಿನ್ನ ಧಮಕಿಗೆಲ್ಲ ಹೆದರಬೇಕಾದ ದರ್ದು ನನಗೇನಿದೆ ಎನ್ನುವಂತೆ ಮಾತಾಡಿದಳು. ಅವಳ ಟೇಬಲ್ಲಿನ ಮೇಲಿದ್ದ ಯಾರೋ ಉಡುಗೊರೆಯಾಗಿ ನೀಡಿದ್ದ ಕಾರ್ಟೂನು ಬೊಂಬೆಯೂ ಅವನನ್ನು ಅಣಕಿಸಿದ ಹಾಗಾಯಿತು. ಕುನಾಲ್ ಒಳಗೊಳಗೇ ಕುದಿಯತೊಡಗಿದ.

ಕುನಾಲ್‌ನನ್ನು ಸಮಾಧಾನ ಪಡಿಸಲು ಸಮಯವಾಗಲಿ ವ್ಯವಧಾನವಾಗಲೀ ಶ್ಯಾಮ್‌ಗೂ ಇರಲಿಲ್ಲ. ಒಂದು ತಿಂಗಳಲ್ಲಿ ಒಂದರ ಹಿಂದೊಂದು  ಸಂಕಷ್ಟಗಳು ಹುಡುಕಿಕೊಂಡು ಬಂದವು. ಎಲ್ಲವೂ ನಾಟಕೀಯ ಎಂಬಂತೆ ಜರುಗಿದವು. ಒಂದೇ ತಿಂಗಳಲ್ಲಿ ಪರಿಸ್ಥಿತಿ ಎಷ್ಟು ಬದಲಾಯಿತು ಬಿಗಡಾಯಿಸಿತು ಎನ್ನುವುದನ್ನು ನೆನೆದು ಅಚ್ಚರಿಯಾಗುತ್ತಿತ್ತು. ಬನಶಂಕರಿಯಿಂದ ಈ ಐ.ಟಿ ಪಾರ್ಕಿಗೆ ಬೈಕಿನಲ್ಲೇ ಬರುತ್ತಿದ್ದ ಸುಹಾಸ್‌ಗೆ ಆಕ್ಸಿಡೆಂಟ್ ಆಯಿತು. ಸಿಗ್ನಲ್ಲಿನ ತಿರುವಿನಲ್ಲಿ ಸಿಗ್ನಲ್ಲು ಕೆಂಪಾಗುವ ಮುನ್ನ ಹಾದುಹೋಗಬೇಕೆನ್ನುವ ಧಾವಂತದಲ್ಲಿ ಕಂಪನಿಯ ಕ್ಯಾಬ್ ಒಂದು ಬಲಗಡೆಯಿಂದ ಓವರ್ ಟೇಕ್ ಮಾಡುವಾಗ ಸುಹಾಸ್‌ನ ಬೈಕಿಗೆ ಗುದ್ದಿ ಸಾಗಿದ. ಸುಹಾಸ್‌ನ ಎಡಗಾಲಿನ ಮೂಳೆ ಮುರಿಯಿತು. ಡಾಕ್ಟರು ಎರಡು ತಿಂಗಳು ರೆಸ್ಟ್ ಹೇಳಿದರು. ಅವನ ಕೆಲಸವೆಲ್ಲ ಸಲೀಂ ತಲೆ ಮೇಲೆ ಬಿತ್ತು. ಕೆಲಸದ ಒತ್ತಡದಲ್ಲಿ ಸಲೀಂ ಲೋ ಬಿ.ಪಿ ಇಂದಾಗಿ ಆಫೀಸಿನಲ್ಲೆ ಕುಸಿದ. ಜಾರ್ಜ್‌ಗೆ ತನ್ನ ಹೆಂಡತಿ ಹಡೆದ ಸಮಯದಲ್ಲೂ ಸಿಕ್ಕಿದ್ದು ಒಂದೇ ದಿನ ರಜೆ. ಪ್ರವೀಣ ಮದುವೆಯ ದಿನವೊಂದು ಬಿಟ್ಟು ಉಳಿದೆಲ್ಲ ದಿನಗಳಲ್ಲು ದಿನಕ್ಕೆ ಎರಡು-ಮೂರು ಗಂಟೆ ಆಫೀಸಿನವರ ಫೋನು ಉತ್ತರಿಸುವುದರಲ್ಲಿ ಕಳೆದ. ಎಲ್ಲರಿಗೂ ತಾವು ಏಸಿ ತುಂಬಿದ ಆಫೀಸಿನಲ್ಲಿರುವಾಗ ಸ್ವಿಚ್ಚೊತ್ತಿದ ಗ್ರೈಂಡರಲ್ಲಿ ಇದ್ದೇವೆ ಅನಿಸತೊಡಗಿತು. ಅಷ್ಟೊಂದು ರುಬ್ಬಿ ಹೋಗಿದ್ದರು. ಎಲ್ಲರ ಮುಖದಲ್ಲು ಪ್ರೇತಕಳೆ.

ಇಂಥದ್ದೊಂದು ಕೋಲಾಹಲದ ಮಧ್ಯೆ ಶ್ಯಾಮ್‌ನ ಆರೋಗ್ಯವೂ ಹದಗೆಡುತ್ತ ಬಂತು. ರಾತ್ರಿಯೆಲ್ಲ ನಿದ್ರೆ ಬರುತ್ತಿರಲಿಲ್ಲ. ಕೆಲಸಕ್ಕಿಂತ ಹೆಚ್ಚಾಗಿ ನಾಳೆ ಇನ್ಯಾವ ತೊಂದರೆ ಎದುರಾಗಲಿದಿಯೋ ಎಂದು ಅವನೆದೆ ಕಂಪಿಸುತಿತ್ತು. ರಾತ್ರಿಯೆಲ್ಲ ಕನವರಿಸ ತೊಡಗಿದ. ಊಟ ಮಾಡುವುದಕ್ಕೆ ಪುರುಸೊತ್ತಿರಲಿಲ್ಲ. ಇದ್ದರೂ ಸೇರುತ್ತಿರಲಿಲ್ಲ. ಒಮ್ಮೆ ಅಫೀಸಿನಲ್ಲಿರುವಾಗಲೇ ವಾಂತಿ ಮಾಡಿಕೊಂಡ. ಮಂಕಾಗತೊಡಗಿದ. ಏನೇ ಸಣ್ಣಪುಟ್ಟ ರಗಳೆಗಳಾದರೂ ಅವನಲ್ಲಿ ವಿಪರೀತ ಆತಂಕ ಉದ್ವೇಗ ಉಂಟಾಗುತ್ತಿತ್ತು. ಮಂಡಿ ನೋವು ಶುರುವಾಯಿತು. ಸ್ನಾಯುಗಳೆಲ್ಲ ಬಲಹೀನ ಎನಿಸ ತೊಡಗಿದವು. ಬರಬರುತ್ತ ಶ್ಯಾಮ್ ತಾಳ್ಮೆ ಕಳೆದುಕೊಳ್ಳತೊಡಗಿದ. ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕು ರೇಗುತ್ತಿದ್ದ. ವ್ಯಗ್ರನಾಗುತ್ತಿದ್ದ. ಅವನ ಮದುವೆಯ ವಿಚಾರ ಬಂದಾಗಲಂತು ‘ಆಫೀಸಲ್ಲೇ ಸಂಸಾರ ಮಾಡೋಕೆ ಒಪ್ಪಿಗೆ ಇರೋ ಹುಡುಗಿ ಇದ್ರೆ ಹೇಳಿ’ ಎಂದು ಮರುಮಾತಾಡುವುದಕ್ಕೆ ಅವಕಾಶವನ್ನೇ ಕೊಡದೆ ಹೊರಡುತ್ತಿದ್ದ. ಅವನ ತಂದೆ ತಾಯಿಗೆ ಆತಂಕವಾಯಿತು. ಕೆನ್ನೆ ತುಂಬಿಕೊಂಡು ದುಂಡಗಿದ್ದ ಹುಡುಗ ಈಗ ಸೊರಗತೊಡಗಿದ. ಹತ್ತು ಸಾರಿ ಹೇಳಿ ಹಠ ಮಾಡಿ ತಮಗೆ ಪರಿಚಯವಿರುವ ಒಬ್ಬ ಆಯುರ್ವೇದ ಡಾಕ್ಟರ್ ಬಳಿ ಕರೆದೊಯ್ದರು.

ಡಾಕ್ಟರ್ ಒಮ್ಮೆ ನಾಡಿ ಹಿಡಿದು ಪರೀಕ್ಷಿಸಿ, ಅವನು ಎಷ್ಟು ಹೊತ್ತಿಗೆ ಏಳುತ್ತಾನೆ? ಮಲಗುತ್ತಾನೆ? ಆಫೀಸಿಗೆ ಹೇಗೆ ಹೋಗುತ್ತಾನೆ? ಊಟ ಎಷ್ಟು ಹೊತ್ತಿಗೆ ಮಾಡುತ್ತಾನೆ? ನಡುವೆ ಏನಾದರು ಕುಡಿಯುತ್ತಾನಾ? ಮುಂತಾಗಿ ಅವನ ದಿನಚರಿಯನ್ನೆಲ್ಲ ಕೇಳಿ ತಿಳಿದುಕೊಂಡು, ‘ನಿಮ್ಮ ಸಮಸ್ಯೆ ಗೊತ್ತಾಯಿತು ಬಿಡಿ. ಇದೆಲ್ಲ ಸಾಫ್ಟ್‌ವೇರ್ ಇಂಜಿನಿಯರ್ಸಲ್ಲಿ ಕಾಮನ್ನು. ತೊಂದರೆ ಏನೂ ಇಲ್ಲ. ಸ್ಟ್ರೆಸ್ ಅಷ್ಟೇ. ಸಾಧ್ಯ ಆದ್ರೆ ಸಮಯ ಇದ್ರೆ ಬೆಳಗ್ಗೆ ಪ್ರಾಣಾಯಾಮ ಮಾಡಿ’ ಎಂದು ಉಪದೇಶ ಮಾಡಿದರು. ‘ಪ್ರಾಣಾ ಹೋಗೋ ಸ್ಥಿತಿ ಇದೆ ಆಫೀಸಲ್ಲಿ. ಪ್ರಾಣಾಯಾಮ ಮಾಡಿದಷ್ಟೇ ಎಫೆಕ್ಟ್ ಇರೋ ಯಾವುದಾದರು ಮಾತ್ರೆ ಇದ್ರೆ ಕೊಡಿ ಡಾಕ್ಟ್ರೆ’, ಶ್ಯಾಮ್ ತಮಾಷೆಯಾಗಿ ಕೇಳಿದ. ಡಾಕ್ಟರು ನಗುತ್ತ ಒಂದೆರೆಡು ಕರೀ ಮಾತ್ರೆಗಳನ್ನು ಬರೆದುಕೊಟ್ಟರು. ಊಟಕ್ಕೆ ಮುಂಚೆ ತೆಗೆದುಕೊಳ್ಳಲು ಹೇಳಿ ಎರಡು ವಾರಕ್ಕೊಮ್ಮೆ ಬಂದು ತೋರಿಸಲು ಹೇಳಿ ಕಳಿಸಿದರು.

ಈ ಎಲ್ಲದರ ಮಧ್ಯೆಯೂ ಹಗಲು-ರಾತ್ರಿ ಎನ್ನದೆ ಪ್ರಾಜೆಕ್ಟಿನ ಕೆಲಸವಂತು ಸಾಗುತ್ತಿತ್ತು. ಸಾಗುವಂತೆ ಸೋನಿ ಮತ್ತು ಸಂಜಯ್ ನೋಡಿಕೊಳ್ಳುತ್ತಿದ್ದರು.

ಶ್ಯಾಮ್ ತನ್ನ ಮೇಲಿನ ಅಡಿನುಡಿಯನ್ನು `Heavy work causes inertia' ಎಂದು ಬದಲಿಸಿದ.

***

ಆ ಭಾನುವಾರ ಡಾಕ್ಟರ್ ಬಳಿ ಹೋಗಲಿಕ್ಕಿದೆಯೆಂದು ಶ್ಯಾಮ್ ಆಫೀಸಿಗೆ ಹೋಗಿರಲಿಲ್ಲ. ಅರ್ಧ ದಿನ ರಜೆ ಹಾಕಿದರೂ ಮಾರನೆಯ ದಿನಕ್ಕೆ ಕೆಲಸದ ಮೊತ್ತ ದುಪ್ಪಟ್ಟಾಗುತ್ತಿತ್ತು. ಅದಕ್ಕೆಂದೇ ಆ ದಿನದ ಕೆಲಸವನ್ನೆಲ್ಲ ಎಷ್ಟು ಹೊತ್ತಾದರು ಆವತ್ತೇ ಮುಗಿಸಿ ಹೊರಡುತ್ತಿದ್ದ. ಭಾನುವಾರ ರಜೆ ಹಾಕಿದ್ದರಿಂದ ಸೋಮವಾರ ಬೆಳಗ್ಗೆ ಏಳು ಗಂಟೆಯ ಹೊತ್ತಿಗೆಲ್ಲ ಆಫೀಸು ತಲುಪಿದ. ಕಾರು ಪಾರ್ಕ್ ಮಾಡಿ, ಲಿಫ್ಟ್ ಹಿಡಿದು ಐದನೆಯ ಫ್ಲೋರಿನಲ್ಲಿದ್ದ ತಾನು ಕೂರುವ ಬ್ಲಾಕಿನತ್ತ ನಡೆಯತೊಡಗಿದ.

ಕಾರಿಡಾರು ಉದ್ದಕ್ಕೂ ತನ್ನೊಳಗೆ ನಿರ್ವಾತವನ್ನೇ ತುಂಬಿಕೊಂಡಂತಿತ್ತು. ಅಕ್ಕಪಕ್ಕದ ಬ್ಲಾಕುಗಳೆಲ್ಲ ಖಾಲಿ ಖಾಲಿ. ಯಾರೊಬ್ಬರೂ ಸ್ವೈಪ್ ಮಾಡಿದ ಕುಂಯ್ ಸದ್ದಿಲ್ಲ. ಯಾರೊಬ್ಬರೂ ಬಾಗಿಲು ತೆರೆದ ಸದ್ದೂ ಇಲ್ಲ. ಯಾರೂ ಕ್ಯಾನಿನಿಂದ ನೀರು ತುಂಬಿಸಿಕೊಳ್ಳುವ ಕೀರೆನ್ನುವ ಸದ್ದಿಲ್ಲ. ಬಾಹ್ಯಾಕಾಶದ ಕೊನೆಯಿಲ್ಲದ ಕೊಳವೆಯಲ್ಲಿ ತಾನು ಗುರಿಯಿಲ್ಲದೆ ನಡೆಯುತ್ತಿದ್ದೇನೆ ಎನಿಸಿತು ಶ್ಯಾಮ್‌ಗೆ. ರಿಲೀಸ್ ಸಿಗೊಲ್ಲ ಅಂದ್ರೆ ಆ ಹಾಳಾದ ಕಂಪನಿ ಬಿಟ್ಟು ಬೇರೆ ಕಂಪನಿ ಸೇರಬಾರದ ಅಂತ ಹಲವು ಸಲ ಹೇಳಿದ ಅಮ್ಮನ ಮಾತು ನೆನಪಾಯಿತು. ನಾಲ್ಕು ಹೆಜ್ಜೆ ಇಡುತ್ತಿರುವಂತೆ ವಾಪಸ್ಸು ಹೋಗಿಬಿಡಲೇ ಎಂದು ಯೋಚಿಸಿದ. ಡಾಕ್ಟರ್ ಒಂದು ವಾರ ರೆಸ್ಟ್ ಹೇಳಿದ್ದಾರೆ. ಫುಡ್ ಪಾಯ್ಸನ್, ಅಲರ್ಜಿ, ಲೋ ಬಿ.ಪಿ, ಏನೋ ಒಂದು ಕಾರಣ ಹೇಳಿಬಿಡಬಹುದು. ಹೊರಟು ಬಿಡಲೇ ಎಂದುಕೊಂಡ......ತಾನಿಲ್ಲೇ ಮಧ್ಯದಲ್ಲೇ ಕುಸಿಯಬಾರದೆ? ಯಾರಾದರು ತನ್ನನ್ನು ಗಮನಿಸಿ ಆಸ್ಪತ್ರೆಗೆ ಸೇರಿಸಬಾರದೆ? ಒಂದು ವಾರ ಒಂದೇ ಒಂದು ವಾರ ಸರಿಯಾದ ನಿದ್ರೆ ಬಿಸಿಯಾದ ಊಟ ಒಂದೇ ಒಂದು ಕ್ಲಿಕ್ಕಿನಷ್ಟು ನಿರಾತಂಕ ಅನುಭವಿಸಿ ಬರಬಾರದೆ? ಎನಿಸಿತು. ಮನಸಿನಲ್ಲಿ ಏನೆಲ್ಲ ಆಲೋಚನೆಗಳು ಮೂಡುತ್ತಿದ್ದರು ಪಾದಗಳು ಯಾಂತ್ರಿಕವಾಗಿ ಮುಂದಕ್ಕೆ ಎಳೆದೊಯ್ಯುತ್ತಿತ್ತು. ಅವನ ಪ್ಯಾಂಟು ಸೊಂಟದಿಂದ ಕೊಂಚ ಕೆಳಗೆ ಇಳಿದಿತ್ತು. ಪ್ಯಾಂಟಿನ ಸೊಂಟ ಮಡಿಕೆಗಳಲ್ಲಿ ಬೆಲ್ಟಿನ ಬಿಗಿಗೆ ಒಳಪಟ್ಟಿತ್ತು. ಒಂದು ನಿರ್ವಾತ ಭಾವದಲ್ಲೇ ಶ್ಯಾಮ್ ತನ್ನ ಕಾರ್ಡನ್ನು ಬಾಗಿಲಿನ ಪಕ್ಕದ ಚೌಕಕ್ಕೆ ತಗುಲಿಸಿ ಅದು ಕುಂಯ್ ಎನ್ನುತ್ತಲೇ ಬಾಗಿಲು ತಳ್ಳಿದ.

ಅವನಿಗೆ ಒಂದು ಕ್ಷಣ ತಾನು ಏನನ್ನು ನೋಡಿದೆ ಎನ್ನುವುದನ್ನು ನಂಬಲಿಕ್ಕೇ ಆಗಲಿಲ್ಲ. ಹೈಬರ್‌ನೇಟ್ ಆಗಿದ್ದ ಅವನ ಮನಸ್ಸು ಚಂಗನೆ ಚುರುಕಾಯಿತು. ಆ ದೃಶ್ಯ ಒಂದು ಕ್ಷಣಕ್ಕಷ್ಟೆ ದಕ್ಕಿತ್ತು. ಅದನ್ನು ನೋಡುತ್ತಲೇ ಅವನಿಗೆ ಕುನಾಲ್ ಕಣ್ಮುಂದೆ ಸುಳಿದ. ಬ್ಲಾಕಿನ ಒಳಗೇ ಇದ್ದ ಮೀಟಿಂಗ್ ರೂಮಿನಲ್ಲಿ ಸಂಜಯ್ ಮತ್ತು ಪ್ರೀತಿ!. ಆ ಮೀಟಿಂಗ್ ರೂಮಿನ ಗಾಜಿನ ಗೋಡೆಯ ನಡು ಭಾಗದಲ್ಲಿ ಅಡ್ಡಕ್ಕೂ ಪಟ್ಟೆಯಂತೆ ಒಳಗಿನದ್ದು ಕಾಣದಂತೆ ಮಸುಕಾಗಿಸಿದ್ದರು. ಆದರೆ, ಅವನ ಎಡಗೈ ಅವಳ ಸೊಂಟ ಬಳಸಿದ್ದು ಸ್ಪಷ್ಟವಾಗಿ ಕಂಡಿತ್ತು. ಬಲಗೈ ಕಾಣುತ್ತಿರಲಿಲ್ಲ. ಮುಖವೆರಡು ಹತ್ತಿರ ಒಂದಕ್ಕೊಂದು ಅಂಟಿಕೊಂಡಂತ್ತಿತ್ತು. ಅವನು ಕಾರ್ಡು ಸವರಿ ಕುಂಯ್ಞೆನಿಸುವುದಕ್ಕು, ಒಳಗಡಿಯಿರಿಸಿ ಈ ದೃಶ್ಯ ಕಾಣುವುದಕ್ಕು, ಅವರುಗಳು ದೂರ ಸರಿಯುವುದಕ್ಕು ಕ್ಷಣಾರ್ಧ ಕಾಲ!.

ಶ್ಯಾಮ್ ಒಳನಡೆಯುತ್ತಿರುವಂತೆ ಸಂಜಯ್ ಮತ್ತು ಪ್ರೀತಿ ಕೂಡ ರೂಮಿನಿಂದ ಹೊರಬಂದರು. ಪ್ರೀತಿ ಸುಮ್ಮನೆ ನಕ್ಕು ಹಾಯ್ ಎಂದು ತಲೆ ತಗ್ಗಿಸಿ ತನ್ನ ಸೀಟಿನತ್ತ ಹೋದಳು. ಸಂಜಯ್, ‘ಅದೇ ಸಿಂಗಪೂರ್ ವಿಚಾರ. ಸದ್ಯಕ್ಕೆ ಆಗೊಲ್ಲ ಅಂದಿದೀನಿ’ ಎಂದು ಮೆಲುವಾಗಿ ಹೇಳಿ ತನ್ನ ಸೀಟಿನಲ್ಲಿ ಕುಳಿತ. ಶ್ಯಾಮನಲ್ಲಿ ಯಾವುದೇ ಪ್ರತಿಕ್ರಿಯೆಗಳಿರಲಿಲ್ಲ. ಮತ್ತೆ ಅವನ ಮನಸ್ಸು ಹೈಬರ್‌ನೇಟ್ ಆಯಿತು. ತಾನು ಈಗ ಕಂಡಿದ್ದು ನಿಜವೋ ಭ್ರಮೆಯೋ ಎನ್ನುವ ಅನುಮಾನ ಬಂತು. ಕೆಲಸದಲ್ಲಿ ತೊಡಗಿಕೊಳ್ಳುವ ಮನಸ್ಸಿರಲಿಲ್ಲ. ಸುಮ್ಮನೆ ಮೇಲ್ ಚೆಕ್ ಮಾಡುತ್ತಿರುವಂತೆ ನಟಿಸಿದ.

ಎಂಟು ಗಂಟೆಯ ಸುಮಾರಿಗೆ ಒಬ್ಬೊಬ್ಬರೇ ಆಫೀಸಿಗೆ ಬರತೊಡಗಿದರು. ಕುನಾಲ್ ಬರುವುದಕ್ಕೆ ಇನ್ನೂ ತಡವಿತ್ತು. ಒಂದು ಗಂಟೆಯಿಂದ ಶುರುವಾಗುತ್ತದೆ ಪಾಳಿ. ಈಗಿನ್ನೂ ಎದ್ದಿರಲಾರ. ಕನಸೂ ಕಾಣುತ್ತಿರಲಾರ. ಹಗಲು ಕನಸಿನಲ್ಲಿ ಬೆಚ್ಚಿ, ಮಲಗಿದಲ್ಲೇ ಪರಿತಪಿಸುತ್ತಿರಬಹುದು. ತಾನೀಗ ಕಂಡಿದ್ದನ್ನು ಅವನೂ ಕಂಡಿದ್ದಾನಾ? ಪ್ರೀತಿಗು ಸಂಜಯ್‌ಗು ಅಫೇರ್ ಹುಟ್ಟಿಕೊಂಡಿದೆಯೇ? ಅಂಥದ್ದೊಂದು ಗುಮಾನಿಯೂ ಸಹ ಯಾರಲ್ಲೂ ಮೂಡಿರಲು ಸಾಧ್ಯವಿಲ್ಲ. ತಾನೀಗ ಕಂಡಿದ್ದು ನಿಜವೇ ಎನ್ನುವುದನ್ನು ಸಾಬೀತುಪಡಿಸಿಕೊಳ್ಳಲು ಪ್ರೀತಿಯನ್ನೇ ಮತ್ತೆ ಮತ್ತೆ ಗಮನಿಸಿದ. ಅವಳ ಕಣ್ಣಿನಲ್ಲಿ ತಪ್ಪಿತಸ್ಥ ಛಾಯೆಗಾಗಿ ಹುಡುಕಿದ. ಸಿಗಲಿಲ್ಲ. ಅವಳ ಕಣ್ಣುಗಳು ಮುಂಚಿನಷ್ಟೇ ಪ್ರಖರವಾಗಿದ್ದವು. ಅದೇ ತುಂಟತನದ ಲಾಸ್ಯ ಜಿನುಗುತ್ತಿತ್ತು. ಕೆಂಪು ಕೆನ್ನೆಗಳು, ತೀಡಿದ ಮೃದುವಾದ ತಿಳಿ ಗುಲಾಬಿ ಬಣ್ಣದ ತುಟಿಗಳು, ಮೈಗಂಟಿದ ತೆಳುವಾದ ಟೀ-ಶರ್ಟು, ತೊಡೆ ನಿತಂಬಗಳುಬ್ಬು ಕಡೆದಿಟ್ಟ ಜೀನ್ಸು ತೊಡುಗೆಯ ಮೈಮಾಟ, ತುಂಡುಗೂದಲು, ತಿಳಿಯಾದ ಧ್ವನಿ, ತುಂಟ ಪ್ರಖರ ಕಣ್ಣುಗಳು, ಎಂಥವರನ್ನೂ ಮೋಹಗೊಳಿಸುವ ಸೂಜಿಗಲ್ಲಿನಂಥ ಹೆಣ್ಣು, ಇವಳಲ್ಲಿ ಯಾರಿಗೆ ಬೇಡವಾಗಿದೆ ಅಫೇರು? ನಡೆದಷ್ಟು ನಡೆಯಲಿ ಎಂದು ಎಲ್ಲರೂ ಇವಳೊಂದಿಗೆ ಫ್ಲರ್ಟಿಗೆ ಇಳಿಯುವವರೇ ಅಲ್ಲವೇ?

ಆದರೂ ಏನೋ ತಳಮಳ. ಬ್ರೇಕ್ ಅಪ್ ಆದಮೇಲೆ ಅವಳು ಮತ್ತೊಬ್ಬನೊಂದಿಗೆ ತಿರುಗಿದರೆ ಕುನಾಲ್ ಖಂಡಿತ ಕುಂದಲಾರ. ಆದರೆ ಇದು ಸಂಜಯ್. ಸಂಜಯ್‌ನೊಂದಿಗೆ ಪ್ರೀತಿಗೆ ಅಫೇರ್ ಇರುವ ವಿಚಾರ ಕುನಾಲ್‌ಗೆ ಆಗಲೇ ತಿಳಿದಿದೆಯೇ? ಅವನ ರಿಲೀಸ್ ವಿಚಾರ, ಪ್ರತಾಪ್ ಬೀಳ್ಕೊಡುಗೆ ಪಾರ್ಟಿಯಲ್ಲಿ ಸಂಜಯ್ ಮತ್ತು ಪ್ರೀತಿಯ ನಡುವೆ ನಡೆದ ಮಾತುಕತೆ, ಕುನಾಲ್‌ನ ಸಂಜಯ್‌ನೊಂದಿಗಿನ ಗುದ್ದಾಟ, ಪ್ರೀತಿಯೊಂದಿಗಿನ ಬ್ರೇಕ್ ಅಪ್, ಮತ್ತೆ ಅವಳು ಸಿಂಗಪೂರಿಗೆ ಹೋಗುವ ವಿಚಾರ, ಶ್ಯಾಮ್ ಹಳೆಯ ಸಂಗತಿಗಳನ್ನೆಲ್ಲ ಮೆಲುಕು ಹಾಕುತ್ತಿದ್ದ. ಎಲ್ಲವನ್ನೂ ಒಂದಕ್ಕೊಂದು ಕೊಂಡಿ ಹಾಕುವುದಕ್ಕೆ ಪ್ರಯತ್ನಿಸಿದ. ಆದರೂ ಸಂಜಯ್ ಮತ್ತು ಪ್ರೀತಿ ನಡುವಿನ ಅಫೇರು ಯಾವಾಗ ಹುಟ್ಟಿಕೊಂಡಿರಬಹುದು ಎನ್ನುವುದನ್ನು ನಿರ್ಣಯಿಸಲು ಸಾಧ್ಯವಾಗಲಿಲ್ಲ. ಹಾಗೆಯೇ ಅದು ಕುನಾಲ್‌ಗೆ ತಿಳಿದಿದೆಯೋ ಇಲ್ಲವೋ ಎನ್ನುವ ಸಂಗತಿ ಕೂಡ.

ಕುನಾಲ್ ಒಂದು ಗಂಟೆಯ ಸುಮಾರಿಗೆ ಆಫೀಸಿಗೆ ಬಂದ. ಏನೂ ಬದಲಾದಂತೆ ಕಾಣಲಿಲ್ಲ ಶ್ಯಾಮ್‌ಗೆ. ಎಲ್ಲವೂ ಮೊನ್ನೆಯಂತೆಯೇ ಇತ್ತು. ಕೆಲ ಹೊತ್ತಿನ ನಂತರ ಅವನೂ ಆ ಸಂಗತಿಯ ಕುರಿತು ಯೋಚಿಸುವುದನ್ನು ಬಿಟ್ಟ. ಆದರೂ ಆ ದಿನವಿಡೀ ಕೆಲಸದಲ್ಲಿ ಮನಸ್ಸಿರಲಿಲ್ಲ.

ಅದಾದಮೇಲೆ ಶ್ಯಾಮ್ ಪ್ರೀತಿಯೊಡನೆ ಹೆಚ್ಚು ಮಾತನಾಡಲಿಲ್ಲ. ಕೆಲಸದ ವಿಚಾರದಲ್ಲೂ ಅಷ್ಟಕ್ಕೇ ಸೀಮಿತಗೊಳಿಸಿ ಅನಗತ್ಯದ ಲೋಕಾಭಿರಾಮದ ಮಾತುಗಳಿಲ್ಲದೆ ಮುಗಿಸುತ್ತಿದ್ದ. ಅವಳಂತು ಅದೇ ತುಂಟ ಕಣ್ಣಿನಿಂದ ಉತ್ಸಾಹ ತುಂಬಿಕೊಂಡು ಶ್ಯಾಮ್‌ನಲ್ಲಿ ಮುಂಚಿನಂತೆಯೇ ನಡೆದುಕೊಳ್ಳುತ್ತಿದ್ದಳು. ಕುನಾಲ್ ಸಹ ಯಾವಾಗಲಾದರು ಎದುರಾದಾಗ ಪ್ರೀತಿಯೊಡನೆ ಅರಳುಗಣ್ಣಿನಿಂದಲೇ ಹಾಯ್ ವಿನಿಮಯಿಸಿಕೊಳ್ಳುತ್ತಿದ್ದ.

ಶ್ಯಾಮ್‌ಗೆ ಇದನ್ನು ನೇರವಾಗಿ ಕೇಳುವುದಕ್ಕೂ ಆಗಲಿಲ್ಲ ಸಹಿಸುವುದಕ್ಕೂ ಆಗಲಿಲ್ಲ. ಕೆಲಸದಲ್ಲಿ ಪುನಃ ಮೈಮರೆಯುವುದೇ ಇದಕ್ಕೆ ಪರಿಹಾರ ಯಾವಾಗ ಯಾರಿಗೆ ತಿಳಿದು ಏನಾಗಬೇಕೋ ಅದಾಗಲಿ ಎಂದು ಕೆಲಸದಲ್ಲಿ ತೊಡಗಿಕೊಂಡ.

***

‘ಎಷ್ಟೇ ಲೆಕ್ಕ ಹಾಕಿದರೂ ಎರಡು ರಿಪೋರ್ಟುಗಳನ್ನು ಮಾತ್ರ ಮುಗಿಸುವ ಯಾವ ಸಾಧ್ಯತೆಯೂ ಕಾಣಿಸುತ್ತಿಲ್ಲ ಸೋನಿ. ಒಟ್ಟು ಎಪ್ಪತ್ಮೂರು ಈ ವರ್ಷಕ್ಕೆ. ಇನ್ನೆರಡು ರಿಪೋರ್ಟನ್ನು ಮುಂದಿನ ವರ್ಷ ಕೊಡುತ್ತೇವೆ ಅಂತ ಬಳಕೆದಾರರಲ್ಲಿ ಮನವಿ ಸಲ್ಲಿಸಿದಾರಾಯಿತು’ ಶ್ಯಾಮ್ ಸೋನಿಗೆ ಆ ದಿನದ ಮೀಟಿಂಗಿನಲ್ಲಿ ಎಲ್ಲ ರಿಪೋರ್ಟುಗಳು ಯಾವ ಹಂತದಲ್ಲಿವೆ ಎನ್ನುವ ವಿವರ ನೀಡುತ್ತ ಕೊನೆಯಲ್ಲಿ ಹೇಳಿದ. ಆ ದಿನ ಶ್ರೀನಿ ಮತ್ತು ಸಂಜಯ್ ಕೂಡ ಉಪಸ್ಥಿತರಿದ್ದರು. ಸೋನಿ ಏನು ಹೇಳುತ್ತಾನೋ ನೋಡೋಣ ಎಂದು ಕಾದರು.

ಮಣಭಾರದ ಕಾಷ್ಠ ಮೌನ...

‘ಈ ವರ್ಷ ಎಪ್ಪತ್ತೈದು ರಿಪೋರ್ಟು ಆಗಲೇಬೇಕು. Thats it! ಶ್ರೀನಿ, ಆಗೊಲ್ಲ ಅಂದ್ರೆ ಹೇಳು. ನಾನು ರಾಜ್ ಹತ್ತಿರ ಮಾತಾಡಿ ಬಿಲ್ಲಿಂಗ್ ನಿಲ್ಲುಸುವಂತೆ ಹೇಳುತ್ತೇನೆ’ ಎಂದು ತಣ್ಣಗೆ ಧಮಕಿ ಹಾಕಿದ. ನೂರಾರು ಪಾಪಪ್ಪುಗಳಲ್ಲಿ ಕಂಗಾಲಾಗಿ ದಿಕ್ಕೆಟ್ಟವನಂತೆ ಶ್ರೀನಿ, ‘ಇಲ್ಲ ಸೋನಿ. ಅದರ ಅವಶ್ಯಕತೆ ಇಲ್ಲ. ಈ ಎರಡು ರಿಪೋರ್ಟುಗಳು ಸ್ವಲ್ಪ ಕಷ್ಟ. ಬಳಕೆದಾರಲ್ಲಿ ವಿನಂತಿಸಿದರೆ ರಿಯಾಯಿತಿ ಸಿಗಬಹುದೋ ಏನೋ ಎಂದು ವಿಚಾರಿಸಿದೆವು ಅಷ್ಟೆ. ಏನೂ ಪರವಾಗಿಲ್ಲ. ನಾವು ಮಾಡಿ ಮುಗಿಸುತ್ತೇವೆ’ ಎಂದ. ‘ಗುಡ್. ನಿನಗೆ ಗೊತ್ತೇ ಇದೆ ಶ್ರೀನಿ. ಇಲ್ಲಿ ಪರಿಸ್ಥಿತಿ ಹೇಗಿದೆ ಅಂತ’, ರಾಗ ಬದಲಿಸಿದ. 'Yes Yes...I understand...we wil do it' ಎನ್ನುತ್ತ ಶ್ರೀನಿ ಮಾತು ಮುಗಿಸಿಬಿಟ್ಟ. ಮೀಟಿಂಗು ಅಲ್ಲಿಗೆ ಸಂಪನ್ನವಾಯಿತು.

‘ಇದು ಹೇಗೆ ಸಾಧ್ಯ ಶ್ರೀನಿ? ಯಾವ ಧೈರ್ಯದ ಮೇಲೆ ಒಪ್ಪಿಕೊಂಡೆ?’ ಶ್ಯಾಮ್ ತಲೆ ಮೇಲೆ ಕೈ ಹೊತ್ತು ಕೇಳಿದ. ‘ಎರಡು ರಿಪೋರ್ಟು ತಾನೆ? ಅಂದಾಜು ಎಷ್ಟು ಹೊತ್ತಿನ ಕೆಲಸ? ನಾಲ್ಕು ಜನ ಕೆಲಸ ಮಾಡಿದರೆ ಎರಡು ದಿನದಲ್ಲಿ ಮುಗಿಸಬಹುದಾ?’ ಅಂತ ಶ್ರೀನಿ ಕೇಳುವಾಗಲೇ ಇವನೇನೋ ಉಪಾಯ ಮಾಡಿದ್ದಾನೆ ಎನಿಸಿತು ಶ್ಯಾಮನಿಗೆ. ಆಗಬಹುದು ಎಂದ. ‘ಹಾಗಿದ್ದರೆ....’ ಅನ್ನುವಾಗಲೇ ಶ್ಯಾಮ್‌ಗೆ ಹೊಳೆದುಬಿಟ್ಟಿತು ‘ಓಹ್ ನೋ..’ ಎಂದುಕೊಂಡ. ‘ಈ ಶನಿವಾರ ಭಾನುವಾರ ದೀಪಾವಳಿ ದಿನ ಯಾರೂ ಬರೋದು ಬೇಡ ಅಂದಿದ್ದೆವಲ್ಲ. ನಾಲ್ಕೈದು ಜನರಿಗೆ ಬಂದು ಕೆಲಸ ಮಾಡುವುದಕ್ಕೆ ಒಪ್ಪಿಸು. ಅನನ್ಯ, ಪ್ರವೀಣ್, ಸಲೀಮ್, ನೀನು, ಮತ್ತೆ ಯಾರಾದರು ಸಮರ್ಥರಿದ್ದಾರೆ ನೋಡಿ ಬರ ಹೇಳು. ಬೇಕಿದ್ದರೆ ನಾನೇ ಖುದ್ದಾಗಿ ಕೇಳಿಕೊಳ್ಳುತ್ತೇನೆ’ ಎಂದ.

‘ಎಲ್ಲಕ್ಕೂ ಒಂದು ಮಿತಿ ಇದೆ ಶ್ರೀನಿ. ಸೋನಿ ಹೇಳಿದ ಅಂತ ನೀನೂ ಕುಣೀತೀಯಲ್ಲ. ಆ ಐದೂ ರಿಪೋರ್ಟುಗಳು ಅವರ ತಪ್ಪಾಗಿ ವಿವರ ನೀಡಿದ ಕಾರಣದಿಂದ ಸಮಸ್ಯೆಯಾಗಿದೆ. ಅದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಿತ್ತು’ ಎಂದು ಮೊದಲ ಸಲ ತನ್ನ ಅಸಹನೆ ಹೊರಹಾಕಿದ ಶ್ಯಾಮ್.

‘ನಾವು ಹೇಳಿಲ್ಲ ಅಂತ ಮಾಡಿದ್ಯಾ. ಹೇಳಿದೆವು. ಅವರು ನಾವು ಸರಿಯಾಗಿ ಹೇಳಿದ್ದೇವೆ. ನೀವೇ ಸರಿಯಗಿ ಅರ್ಥ ಮಾಡಿಕೊಳ್ಳಲಿಲ್ಲ ಅಂತ ಪ್ರತಿವಾದಿಸಿದರು. ಹಾಗೆ ವಾದ ಮಾಡುತ್ತ ಕೂತರೆ ಕೊನೆಯೇ ಇರೊಲ್ಲ.

ಸೋನಿಗೇನು ನಮ್ಮನ್ನು ಹೀಗೆ ಸಾಯಿಸಬೇಕಂತ ಚಟವಾ? ನಿನಗೆ ಈ ಪ್ರಾಜೆಕ್ಟಿನ ಇತಿಹಾಸ ಗೊತ್ತಿಲ್ಲ. ಈ ರಿಪೋರ್ಟುಗಳ ಬಳಕೆದಾರರ ಗ್ರೂಪಿಗೆ ಲೀಡ್ ಆಗಿದ್ದ ಕಾರ್ಲೋಸ್‌ನನ್ನ ಕಂಪನಿಯಿಂದ ಕಿತ್ತೊಗೆದರು. ಅದಕ್ಕೂ ಮುಂಚಿನಿಂದಲೂ ಆ ಗುಂಪಿಗೂ ಈ ಸೋನಿ ಇರುವ ಐ.ಟಿ ಗುಂಪಿಗೂ ಜಟಾಪಟಿ ಇದ್ದೇ ಇತ್ತು. ಈಗ ಅವರ ಸಿಟ್ಟು ಹೆಚ್ಚಾಗಿದೆ. ಎಲ್ಲಕ್ಕೂ ಕ್ಯಾತೆ ತೆಗೆಯುತ್ತಿದ್ದಾರೆ. ಅದಕ್ಕೆ ಕಾರ್ಲೋಸಿನ ಕುಮ್ಮಕ್ಕೂ ಇದೆ ಅನ್ನುತ್ತಾರೆ. ಅಲ್ಲಿನ ಪಾಲಿಟಿಕ್ಸು ನಿನಗೆ ಅರ್ಥವಾಗೊಲ್ಲ. ಒಂದು ಅರ್ಥ ಮಾಡಿಕೊ. ಸೋನಿಗೂ ಸಹ ಬೇರೆ ದಾರಿ ಇಲ್ಲ. ಈ ವರ್ಷ ಎಪ್ಪತ್ತೈದು ಅಂತ ಸಾರಿ ಸಾರಿ ಹೇಳಿದ್ದಾನೆ. ಈಗ ಒಂದು ಕಡಿಮೆ ಆದರೂ ಅವರ ಇಡೀ ಐ.ಟಿ ಟೀಮಿನ  ಮರ್ಯಾದೆ ಹರಾಜು ಹಾಕುತ್ತಾರೆ. ಸೋನಿಯ ಕೆಲಸ ಹೋದರೂ ಹೋಗಬಹುದು. ನಮಗೆ ಬೇರೆ ದಾರಿ ಇಲ್ಲ ಶ್ಯಾಮ್’ ಎಂದು ವಿವರಿಸಿದ.

ಮನೆಯಲ್ಲಿದ್ದು ಉಪದ್ರ ಕೊಡುತ್ತಿರುವ ಯಾವುದೋ ಪುರಾತನ ಕಲ್ಲಿಗೆ ಕಾರಣವಾಗಿ ಸಾವಿರಾರು ವರ್ಷಗಳ ಹಿಂದೆ ನಡೆದ ರಕ್ತಸಿಕ್ತ ಘಟನೆಗಳ ಸಾಕ್ಷಿ ಕೊಡುವಂತೆ ಕಂಡಿತು ಶ್ರೀನಿಯ ವಿವರಣೆ. ಅಲ್ಲಿ ಸಿಂಗಪೂರಿನಲ್ಲಿ ಯಾರನ್ನೋ ಕೆಲಸದಿಂದ ತೆಗೆದ ಕಾರಣ ಅವನ ಗುರುತು ಪರಿಚಯವೇ ಇಲ್ಲದ ಈ ಪ್ರವೀಣನ ಮದುವೆಯ ನಂತರ ದಿನಗಳು ನರಳುತ್ತಿವೆ, ಆ ಸಲುವಾಗಿ ಜಾರ್ಜ್ ಹಡೆದ ತನ್ನ ಹೆಂಡತಿಯೊಂದಿಗೆ ಎರಡು ದಿನವಿದ್ದು ಅಕ್ಕರೆ ತೋರಲಾರ, ತನ್ನ ಮಗುವಿನ ಕಣ್ಣರಳುವುದನ್ನು ನಗುವುದನ್ನು ಸವಿಯಲಾರ, ಅದರಿಂದಾಗಿ ಸುಹಾಸ್‌ಗೆ ಆಕ್ಸಿಡೆಂಟ್ ಆಯಿತು, ಸಲೀಂ ಲೋ ಬಿ.ಪಿ ತಗುಲಿಸಿಕೊಂಡ, ಕುನಾಲ್ ಈ ನಿರುಪಯುಕ್ತತೆಯಲ್ಲಿ ಅನಾವಶ್ಯಕವಾಗಿ ಕುದಿಯುತ್ತ ಪರಿತಪಿಸುತ್ತಿದ್ದಾನೆ, ಎಷ್ಟೆಲ್ಲ ಬದುಕುಗಳು ಆ ಒಂದು ಅಗೋಚರ ಸೂತ್ರದಿಂದ ಕಂಗಾಲಾಗಿವೆ, ಇಲ್ಲಿನ ನಮ್ಮೆಲ್ಲರ ಬದುಕು ಮತ್ತೆಲ್ಲಿಯದೋ ಅಸ್ತಿತ್ವವೇ ತಿಳಿಯದಿರುವ ವ್ಯಕ್ತಿಯೊಬ್ಬನ ಬದುಕಿನಲ್ಲಾದ ತಲ್ಲಣದ ಮೇಲೆ ಹೇಗೆ ಅವಲಂಬಿತವಾಗಿದೆ ಎನ್ನುವುದನ್ನು ನೆನೆದು ಚಕಿತನಾದ. ಇಲ್ಲಿ ಯಾರ ಬದುಕು ಯಾರ ಬದುಕಿನೊಂದಿಗೆ ಕೊಂಡಿ ಬೆಸೆದುಕೊಂಡಿದೆಯೋ? ಇಲ್ಲಿ ಎಲ್ಲರ ಬದುಕಿನ ದೈನಂದಿನವೂ ಮತ್ತೆಲ್ಲೋ ನಿರ್ಣಯಿಸಲಾಗುತ್ತದೆ ಎನಿಸಿತು. ತನ್ನ ಪಾಡಿಗೆ ತಾನು ಇರುವುದರಲ್ಲೇ ಸುಖವಾಗಿರುವವಳು ಪ್ರೀತಿಯೊಬ್ಬಳೇ ಎಂದುಕೊಂಡ.

‘ನಂಗೊತ್ತಿಲ್ಲ ಶ್ರೀನಿ. ನಾನು ಬರ್ತೀನಿ. ಅಷ್ಟು ಮಾತ್ರ ಹೇಳಬಲ್ಲೆ. ಮಿಕ್ಕವರಲ್ಲಿ ನೀವುಗಳೇ ಮಾತಾಡಿ’ ಶ್ಯಾಮ್‌ಗು ಬೇರೆ ದಾರಿ ಕಾಣಲಿಲ್ಲ.

‘ಸರಿ ಬಿಡು ನಾವು ಮಾತಾಡ್ತೀವಿ. ಅಂದ ಹಾಗೆ ಮುಂದಿನ ಶುಕ್ರವಾರ ಹೊಸ ಬಿಲ್ಡಿಂಗಿನ ಉದ್ಘಾಟನೆ ಇದೆ. C.E.O ಬರ್ತಿದ್ದಾರೆ. ಬೆಳಗ್ಗೆ ಹನ್ನೊಂದರಿಂದ ಹನ್ನೊಂದೂವರೆ ಬಿಡುವು ಮಾಡಿಕೊಂಡು ಬಾ. ನಿನಗೆ ಪುರುಸೊತ್ತಿಲ್ಲವೆಂದರೆ ಟೀಮಿನಿಂದ ಒಂದಿಬ್ಬರನ್ನು ಕಳಿಸು. ತಲೆ ಲೆಕ್ಕಕ್ಕೆ ಅಲ್ಲಿ ಜನ ಬೇಕು. ಅದರ ಮುಂದಿನ ಸೋಮವಾರದಿಂದಲೇ ನೀವೆಲ್ಲರು ಆ ಬಿಲ್ಡಿಂಗಿನ ಹನ್ನೆರಡನೇ ಫ್ಲೋರಿಗೆ ಮೂವ್ ಆಗಬೇಕು’ ಶ್ರೀನಿ ಹೊರಬರುತ್ತ ಶ್ಯಾಮ್‌ಗೆ ತಿಳಿಸಿದ. ಈ ಸುದ್ದಿಗಳೆಲ್ಲ ಸಂಜಯ್‌ಗೆ ಮೊದಲೇ ತಿಳಿದಿರುವಂತೆ ತೋರಿತು. ಅಲ್ಲಿಂದ ಮುಂದಕ್ಕೆ ತನಗೆ ಕೆಲವೊಂದು ಸುದ್ದಿಗಳನ್ನು ಮಾತ್ರ ತಡವಾಗಿ  ತಿಳಿಸಲಾಗುತ್ತದೆ ಎನ್ನುವುದು ತಿಳಿಯಿತು. ಇನ್ನೆಷ್ಟು ಗುಪ್ತವಿಚಾರಗಳಿವೆಯೋ ಎಂದುಕೊಂಡು ಅಲ್ಲಿಂದ ಹೊರಟ.

***

ಬಾಗಿಲ ಮುಂದೆ ಬಣ್ಣಬಣ್ಣದ ಹೂವಿನ ರಂಗೋಲಿ. ದೀಪದ ಕಂಬದ ಸುತ್ತ ಮಲ್ಲಿಗೆಯ ಹಾರ, ಹೊರಗಿನ ಕಂಪನಿಯ ಬೋರ್ಡಿಗು ಸೇವಂತಿಗೆಯ ಹಾರ. ದೇಶ ವಿದೇಶದಲ್ಲಿ ವಿಖ್ಯಾತನಾಗಿದ್ದ ಕಂಪನಿಯ C.E.O, K.N.Murthy ಟೇಪು ಕತ್ತರಿಸಿ ಒಳನಡೆದ.

ನೂರಾರು ಮಂದಿ ನೆರೆದಿದ್ದ ಭವ್ಯವಾದ ಸೆಮಿನಾರ್ ಹಾಲ್‌ನಲ್ಲಿ ದೀಪ ಬೆಳಗಿ ಮಾತಿಗೆ ನಿಂತ ಮೂರ್ತಿ.

‘ನಮಗೆಲ್ಲ ಇದು ಬಹಳ ಹೆಮ್ಮೆಯ ಸಂಗತಿ. ನನಗಂತು ವೈಯಕ್ತಿಕವಾಗಿ ಸಂತೋಷವೂ ಹೆಮ್ಮೆಯೂ ಆಗುತ್ತಿದೆ. ಈ ಐ.ಟಿ ಪಾರ್ಕಿನಲ್ಲಿ ನಮ್ಮ ಕಂಪನಿಗೆಂದೇ ಪ್ರತ್ಯೇಕವಾಗಿ ಹದಿಮೂರು ಅಂತಸ್ತಿನ ಒಂದು ಆಫೀಸು ಈವತ್ತು ಉದ್ಘಾಟನೆಗೊಂಡಿದೆ. ನಾನು ಉದ್ಘಾಟನೆ ಮಾಡಿದ್ದು ಔಪಚಾರಿಕವಾಗಿ ಮಾತ್ರ. ಇದು ನಿಮ್ಮೆಲ್ಲರ ಪರಿಶ್ರಮದ ಪ್ರತಿಫಲ. ನಾವು ಇಲ್ಲಿವರೆಗೆ ನಂಬಿಕೊಂಡು ಬಂದಿರುವ ಧ್ಯೇಯಗಳ, ಮೌಲ್ಯಗಳ ಪ್ರತಿಫಲ. ನಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ. ನಮ್ಮಲ್ಲಿ ಏನನ್ನಾದರು ಮಾಡಬಲ್ಲ ಚೈತನ್ಯವಿದೆ. ನಾವು ಹೀಗೇ ಮುಂದುವರೆಯುತ್ತೇವೆ. ನಮ್ಮ ಮುಂದೆ ಎಂಥದ್ದೇ ಸವಾಲುಗಳು ಎದುರಾದಾಗಲೂ ಧೃತಿಗೆಡದೆ ಅವನ್ನೆಲ್ಲ ನಿವಾರಿಸಿಕೊಂಡು, ಇನ್ನಷ್ಟು ಪ್ರಗತಿಶೀಲರಾಗುತ್ತೇವೆ ಅನ್ನುವ ಭರವಸೆ ನನಗಿದೆ....’

ಮುಕ್ಕಾಲು ಗಂಟೆ ಭಾಷಣ ಕೊರೆದ ಪುಣ್ಯಾತ್ಮ. ಶ್ಯಾಮ್ ಕುಳಿತಲ್ಲೆ ಚಡಪಡಿಸಿದ. ಪ್ರಾಜೆಕ್ಟಿನ ಕೊನೆಯ ಹಂತವಾಗಿ ಮಾಡುವುದಕ್ಕೆ ಬೆಟ್ಟದಷ್ಟು ಕೆಲಸವಿತ್ತು. ಮಿಕ್ಕವರಿಗೆಲ್ಲ ಕೆಲಸವಿದ್ದುದರಿಂದ ಕುನಾಲ್‌ನನ್ನು ಬೆಳಗ್ಗೆ ಬೇಗ ಬರಹೇಳಿ ಜೊತೆಯಲ್ಲಿ ಕರೆತಂದಿದ್ದ. ಮೂರ್ತಿಯ ಮಾತುಗಳಿಗೆ ಕುನಾಲ್ ಒಳಗೊಳಗೇ ನಗುತ್ತ ಬರೀ ಬೊಗಳೆ ಎಂದ. ಮಾತು ಮುಗಿಯುತ್ತಿದ್ದಂತೆ ಇಬ್ಬರೂ ಅಲ್ಲಿಂದ ಹೊರಟರು.

ಹೊಸ ಬಿಲ್ಡಿಂಗಿನಿಂದ ತಾವಿರುವ ಬಿಲ್ಡಿಂಗಿಗೆ ನಡೆಯುತ್ತ ಬರುವಾಗ ಶ್ಯಾಮ್ ಇದೇ ಸರಿಯಾದ ಸಮಯವೆಂದು ಕುನಾಲ್‌ನನ್ನು ಪ್ರೀತಿಯ ಕುರಿತು ವಿಚಾರಿಸಬೇಕು ಎಂದುಕೊಂಡ. ಹೇಗೆ ಕೇಳಬೇಕೋ ತಿಳಿಯಲಿಲ್ಲ. ಅವರಿಬ್ಬರ ನಡುವೆ ಏನೇನು ನಡೆದು ಬ್ರೇಕ್ ಅಪ್ ಆಗಿದೆಯೋ ಗೊತ್ತಿಲ್ಲ. ಒಂದು ವೇಳೆ ಇವನಿಗೆ ಸಂಜಯ್-ಪ್ರೀತಿ ವಿಚಾರ ತಿಳಿಯದಿದ್ದರೆ ಹಾಗೇ ಇದ್ದು ಬಿಡಲಿ ನೆಮ್ಮದಿಯಾಗಿ ಎಂದುಕೊಂಡ.

ಇತ್ತೀಚೆಗೆ ಕುನಾಲ್ ಸಾಕಷ್ಟು ಇಳಿದು ಹೋಗಿರುವುದನ್ನು ಗಮನಿಸಿದ ಶ್ಯಾಮ್. ಮುಂಚಿನಷ್ಟು ಮಾತಿಲ್ಲ. ಸರಿಯಾಗಿ ಶೇವ್ ಕೂಡ ಮಾಡದೆ ಅವನ ಉದ್ದ ಮುಖದ ಅಲ್ಲಲ್ಲಿ ಕುರುಚಲು ಕುರುಚಲಾಗಿ ಗಡ್ಡ ಬೆಳೆದಿತ್ತು. ಗರಿಹಗುರ ಕನ್ನಡಕದ ಹಿಂದಿನ ನೀಲಿ ಕಣ್ಣುಗಳ ಅಡಿ ಹೋಗಿದ್ದರೂ, ಏನೇ ಸಪ್ಪಗಿದ್ದಾನೆ ಎನಿಸಿದರೂ ಅದೇ ಅವನಿಗೊಂದು ಹೊಸ ನಮೂನೆಯ ಆಕರ್ಷಣೆಯ ಲೇಪ ಹಚ್ಚಿತ್ತು. ಆ ಕಳೆಗುಂದುವಿಕೆಯೂ ಅವನ ಸೌಮ್ಯವನ್ನು ಇನ್ನಷ್ಟು ಹೆಚ್ಚಿಸಿ ಪ್ರೀತಿ ಉಕ್ಕುವಂತೆ ಮಾಡಿತ್ತು.

‘ಎಲ್ಲಿವರೆಗೆ ಬಂತು ನಿನ್ನ ರಿಲೀಸ್ ವಿಚಾರ?’ ಅಂತ ಮಾತು ಶುರು ಹಚ್ಚಿದ ಶ್ಯಾಮ್.

‘ಏನು ಕಥೆಯೋ ಗೊತ್ತಿಲ್ಲ. ಹೋದವಾರ ಪುನಃ ಕೇಳ್ದೆ ಸಂಜಯ್ ಹತ್ತಿರ. ಬಹಳ ಉಡಾಫೆಯಲ್ಲಿ ಮಾತಾಡಿದ Asshole. ದೀಪಾವಳಿ ಅಂತಲೂ ನೋಡದೆ ಎಲ್ಲರೂ ಬಂದು ಕೆಲ್ಸ ಮಾಡಿದ್ದಾರೆ. ಇವನು ಏನು ಕೆಲಸ ಮಾಡುತ್ತಾನೆ ಶ್ಯಾಮ್. ನಿನಗಾದರು ಯಾರ ರಿಪೋರ್ಟನ್ನಾದರು ವಹಿಸಿಕೊಂಡು ಮಾಡಿಮುಗಿಸುವ ತಾಕ್ಕತ್ತಿದೆ. ಇವನು ಅಂಥ ಘನಂಧಾರಿ ಕೆಲಸ ಏನು ಮಾಡುತ್ತಾನೆ ಶ್ಯಾಮ್?. ಇಂಥವರು ತಲೆಯೆಲ್ಲ ಮಾತಾಡಿದರೆ ಮೈ ಉರಿಯುತ್ತೆ. ಈಗ ಪ್ರಾಜೆಕ್ಟು ಮುಗಿಯುತ್ತ ಬಂತಲ್ಲ. ರಿಲೀಸ್ ಕೊಡು ಅಂದೆ. ನಿಂಗೆ ಎಷ್ಟು ಸಲ ಹೇಳೋದು. ಡೋಂಟ್ ವೇಶ್ಟ್ ಮೈ ಟೈಮ್ ಅಂತ ಎಲ್ಲರೆದುರೇ ಹೇಳಿದ. ಅಲ್ಲಿ ಹೋಗಿ H.R ಹತ್ರ ಮಾತಾಡಿದ್ರೆ ಅವಳು ಇನ್ನೊಂಥರ ಆಡ್ತಾಳೆ. ನನ್ನ ಮಾತಿಗೆ ಗಮನನೇ ಕೊಡೊಲ್ಲ. ಯಾರೊಂದಿಗೋ ಚ್ಯಾಟ್ ಮಾಡುತ್ತ ಕಿಸಿಕಿಸಿ ಅನ್ನುತ್ತಾಳೆ. ನಾನು ಹೇಳಿದ್ದನ್ನು ಹತ್ತು ಸಲ ಹೇಳಿದ ಮೇಲೆ, ಅದು ಈಗ ಸಾಧ್ಯ ಇಲ್ಲ. ಸಂಜಯ್ ಹತ್ರ ಮಾತಾಡ್ತೀನಿ ಅಂತಾಳೆ. ನನಗಂತು ಸಾಕಾಗಿ ಹೋಗಿದೆ. ನನ್ನ ಒಂದು ವರ್ಷ ಹೀಗೇ ಇದೇ ಕೊಂಪೆಯಲ್ಲೇ ಕಳೆದುಹೋಗುತ್ತೆ ಅಂತ ಭಯವಾಗ್ತಿದೆ’, ಕುನಾಲ್ ತನ್ನ ಆತಂಕ ವ್ಯಕ್ತಪಡಿಸಿದ.

‘ನೀನು ತುಂಬಾ ಆತುರ ಪಡ್ತಾ ಇದ್ಯಾ ಕುನಾಲ್. ನಿನ್ಯಾಕೆ ಸಂಜಯ್ ಹತ್ರ ಮತ್ತೆ ಮತ್ತೆ ಹೋಗಿ ಕೇಳ್ತಿದ್ಯಾ? ಅದರಿಂದ ಯಾವ ಪ್ರಯೋಜನವೂ ಇಲ್ಲ. ನನಗೂ ಮತ್ತೆ ಶ್ರೀನಿಯೊಂದಿಗೆ ಈ ವಿಚಾರ ಮಾತಾಡೋಕೆ ಆಗ್ಲಿಲ್ಲ. ಇನ್ನೊಂದೆರಡು ವಾರದಲ್ಲಿ ಇದೆಲ್ಲ ಜಂಜಾಟ ಮುಗಿದುಬಿಡುತ್ತೆ. ಯೊಚ್ನೆ ಮಾಡಬೇಡ’ ಎಂದು ಸಮಾಧಾನ ಹೇಳಿದ.

‘ಇಲ್ಲ ಶ್ಯಾಮ್. ಈ ಸಲ ದೀವಾಳಿಗೆ ಮನೆಗೆ ಹೋಗಬೇಕು ಅಂತ ಬಹಳ ಆಸೆ ಇಟ್ಟುಕೊಂಡಿದ್ದೆ. ಅದಕ್ಕೆಂದೇ ಈ ಎಂಟು ತಿಂಗಳಲ್ಲಿ ಒಂದೂ ರಜೆ ಹಾಕಿರಲಿಲ್ಲ. ಕಲ್ಕತ್ತಾದಿಂದ ಅಕ್ಕ ಕೂಡ ಬಂದಿದ್ದಳು. ಎಲ್ಲರೂ ಒಟ್ಟಿಗೆ ಕಾಲ ಕಳೆಯಬೇಕು ಹೊರಹೋಗಬೇಕು ಅಂತ ಅಪ್ಪ-ಅಮ್ಮ ಬಹಳ ಆಸೆಪಟ್ಟಿದ್ದರು. ನಾನು ಹೋಗದ್ದಿದ್ದಕ್ಕೆ ಅವರುಗಳೂ ಎಲ್ಲೂ ಹೋಗಲಿಲ್ಲ. ನನ್ನಿಂದಾಗಿ ಎಲ್ಲವೂ ಹಾಳಾಯಿತು. ನನಗೆ ನಾನೇ ನಿಷ್ಪ್ರಯೋಜಕ ಅನಿಸೋಕೆ ಶುರುವಾಗಿದೆ....’ ಮಾತಾಡುತ್ತ ಕುನಾಲ್ ಗದ್ಗದಿತನಾದ. ಡೆಲ್ಲಿಯ ಹುಡುಗರೂ ಇಷ್ಟೊಂದು ಭಾವುಕರಾಗುತ್ತಾರೆ ಅಂತ ಶ್ಯಾಮ್ ಅಂದುಕೊಂಡಿರಲಿಲ್ಲ. ಕುನಾಲ್ ಮಿಕ್ಕ ಹುಡುಗರಂತೆ ಇರದಿದ್ದರೂ ಪ್ರೀತಿಯ ವಿಚಾರದಲ್ಲಿ ಡೆಲ್ಲಿತನವೇ ಇದ್ದಿತ್ತು. ಉಳಿದ ವಿಚಾರದಲ್ಲಿ ಬಹಳ ಸೌಮ್ಯ. ಈಗ ಮನೆಯವರ ಬಗ್ಗೆ ಮಾತಾಡುವಾಗ ಹೀಗೇಕೆ ಭಾವುಕನಾದ? ರಿಲೀಸ್ ಸಿಗುತ್ತಿಲ್ಲ, ಪ್ರೀತಿ ದೂರವಾದಳು, ತಾನು ಅಂದುಕೊಂಡಿದ್ದು ಯಾವುದೂ ನಡೆಯುತ್ತಿಲ್ಲ ಅಂತ ಹತಾಶನಾಗಿರಬೇಕು ಅನ್ನಿಸಿತು ಶ್ಯಾಮ್‌ಗೆ.

‘ಕಮಾನ್ ಕುನಾಲ್. ನಂಗೊತ್ತಾಗುತ್ತೆ. ಆದ್ರೆ ನೋಡು ಆವತ್ತು ಪ್ರವೀಣ್ ಕೂಡ ಬಂದಿದ್ದ. ಅವನ ಮದುವೆ ಆದಮೇಲಿನ ಮೊದಲ ದೀಪಾವಳಿ ಇದು. ಅವನಿಗೆ ಹೇಗಿರಬೇಡ. ಕಮಾನ್ ಚಿಯರ್ ಅಪ್. ಅಂದ ಹಾಗೆ ಪ್ರೀತಿ ಸಿಂಗಪೂರ್ ಹೋಗೋ ವಿಷಯ ಏನಾಯ್ತು?’ ಅಂತ ಮಾತು ತಿರುಗಿಸಿದ.

‘ನೀನು ಪ್ರಾಜೆಕ್ಟ್ ಲೀಡ್. ನಿನಗೇ ಗೊತ್ತಿರಬೇಕು’, ಕುನಾಲ್ ನಿರ್ವಿಕಾರತೆಯಲ್ಲಿ ಉತ್ತರಿಸಿದ.

‘ನಿಂಗೊತ್ತೇ ಇದೆ. ಇಲ್ಲಿ ನಾನು ಪ್ರಾಜೆಕ್ಟ್ ಲೀಡ್ ಆಗಿರೋದು ನಾಮ್ಕಾವಾಸ್ತೆ ಅಷ್ಟೆ. ಪ್ರತಾಪ್ ಹೋದಮೇಲೆ ಯಾರದರು ಒಬ್ಬ ಬಕ್ರಾ ಬೇಕಿತ್ತು. ನನ್ನ ಮಾಡಿದ್ರು. ನಾನಂತು ಬರೀ ರಿಪೋರ್ಟುಗಳ ಉಸ್ತುವರಿಯಲ್ಲೆ ಮುಳುಗಿದ್ದೇನೆ. ಇಂಥ ಸಮಸ್ಯೆಗಳನ್ನೆಲ್ಲ ಸಂಜಯ್ ವಹಿಸಿಕೊಂಡಿದ್ದಾನೆ. ನಮ್ಮಿಬ್ಬರ ಮಧ್ಯೆ ನಡೆದ ಶೀತಲ ಸಮರ ನಿನಗೆ ಗೊತ್ತೇ ಇದೆ. ಅದಕ್ಕೇ ನಾನು ಯಾವುದರಲ್ಲೂ ತಲೆ ಹಾಕೊಲ್ಲ, ನಿನ್ನ ರಿಲೀಸ್ ವಿಷಯ ಒಂದನ್ನು ಬಿಟ್ಟು. ನೀನೇ ಆವತ್ತು ಪ್ರೀತಿ ಸಿಂಗಪೂರಿಗೆ ಹೋಗುವ ವಿಚಾರ ಹೇಳಿದ್ಯಲ್ಲ ಅದಕ್ಕೆ ಕೇಳ್ದೆ’ ಎಂದ. ಕುನಾಲ್ ಹೇಗೆ ಪ್ರತಿಕ್ರಿಯಸಬಹುದು ಅವನಿಗೇನಾದರು ಸುಳಿವು ಸಿಕ್ಕರಬಹುದೇ ಎನ್ನುವುದನ್ನು ಪರೀಕ್ಷಿಸಲು ಅವನ ಉತ್ತರಕ್ಕಾಗಿ ಕಾದ.

‘ಪ್ರೀತಿ ವಿಷಯ ಯಾರಿಗ್ಗೊತ್ತು...ಸುಹಾಸ್ ಕೂಡ ಸಿಂಗಪೂರ್ ಹೋಗ್ಬೇಕು ಅಂತಿದ್ನಲ್ಲ. ಕಳಿಸ್ತೀವಿ ಕಳಿಸ್ತೀವಿ ಅಂತ ತುಪ್ಪ ಸವರಿದ್ದೇ ಬಂತು. ಪಾಪ ಕಾಲು ಮುರ್ಕೊಂಡು ಕೂತಿದ್ದಾನೆ. ಅವಳು ಏನು ಮಾಡ್ತಾಳೋ ಏನೋ ಗೊತ್ತಿಲ್ಲ. ನನಗಂತು ಇಲ್ಲಿಂದ ಪಾರಾದ್ರೆ ಸಾಕಾಗಿದೆ’ ಎಂದು ನಿಟ್ಟುಸಿರು ಬಿಟ್ಟ.

‘ಅಷ್ಟು ಬೇಜಾರ್ ಆಗಿದ್ರೆ ಬೇರೆ ಕಂಪನಿಗೆ ಟ್ರೈ ಮಾಡು’ ಶ್ಯಾಮ್ ಸಲಹೆ ನೀಡಿದೆ.

‘ಇದನ್ನ ನಾವು ಮೊದಲೂ ಡಿಸ್ಕಸ್ ಮಾಡಿದ್ದೇವೆ ಶ್ಯಾಮ್. ಟ್ರೈ ಮಾಡ್ತೀನಿ. ಈಗ ಎಂಟು ತಿಂಗಳು ಆಗಿದ್ಯಲ್ಲ. ಕೆಲಸ ನೋಡೋಕೆ ಶುರು ಮಾಡಿದ್ರೆ ಒಂದು ವರ್ಷ ಆಗುತ್ತೆ. ನೋಡೋಣ. ಹಾಗೊಮ್ಮೆ ನಾನು ಓದೋದಕ್ಕೆ ಹೋದರೆ ಕಂಪನಿಯ ಪ್ರಾಜೆಕ್ಟಿನ ಮ್ಯಾನೇಜರ್‌ಗಳಿಂದ ಒಂದು ರೆಫ಼ೆರನ್ಸ್ ಲೆಟರ್ ಬೇಕಾಗುತ್ತೆ. ಆಗ ನಾನು ಸಂಜಯ್ ಶ್ರೀನಿ ಹತ್ರನೇ ಹೋಗಬೇಕಾಗುತ್ತೆ. ಗೊತ್ತಿಲ್ಲ, ನೀನೂ ಕೊಡಬಹುದಾ?’ ಅಂತ ಕೇಳಿದ್ದಕ್ಕೆ, ‘ಏನು ಹೆದರಬೇಡ ನಾನು ಒಂದು ಲೆಟರ್ ಕೊಡ್ತೀನಿ. ಇನ್ನೊಂದು ಲೆಟರ್ ಬೇಕಿದ್ದರೆ ಶ್ರೀನಿಯಿಂದ ಕೊಡಿಸ್ತೀನಿ’ ಎಂದು ಭರವಸೆ ನೀಡಿದ. ಆದರೂ ಕುನಾಲ್‌ನ ಭೀತಿ ದೂರಾದಂತೆ ಕಾಣಲಿಲ್ಲ. ಶ್ಯಾಮ್‌ಗೆ ಕುನಾಲ್‌ಗೆ ಪ್ರೀತಿಯ ಬಗ್ಗೆ ಇದ್ದ ಭಾವನೆಯೂ ತಿಳಿಯಲಿಲ್ಲ.

***

ಆ ಸೋಮವಾರದಿಂದಲೇ ಬ್ರೀಝ್ ಪ್ರಾಜೆಕ್ಟಿನ ಎಲ್ಲರೂ ಹೊಸ ಬಿಲ್ಡಿಂಗಿನಲ್ಲಿ ಒಂದೇ ಬ್ಲಾಕಿನಲ್ಲಿ ಕುಳಿತು ಕೆಲಸ ಮಾಡತೊಡಗಿದರು. ಕೆಲವರು ಚೇರು ಸರಿಯಿಲ್ಲ ಎಂದರು. ಕೆಲವರು ಮಾನಿಟರ್ ಸಣ್ಣದಾಯಿತೆಂದರು. ಕೆಲವರಿಗೆ ಪ್ರೈವಸಿ ಕಡಿಮೆಯಾಯಿತು ಎನಿಸಿದರೆ ಮತ್ತೆ ಕೆಲವರಿಗೆ ಜಾಗ ಇಕ್ಕಟ್ಟು ಎನಿಸಿತು. ಒಂದೆರಡು ದಿನದಲ್ಲಿ ಕ್ರಮೇಣ ಎಲ್ಲರೂ ಹೊಸ ಜಾಗಕ್ಕೆ ಹೊಂದಿಕೊಂಡರು.

ಅದಾಗಲೇ ಎಲ್ಲಾ ರಿಪೋರ್ಟುಗಳನ್ನು ಸರಿಪಡಿಸಿ ಬಳಕೆದಾರರ ಟೆಸ್ಟಿಂಗಿಗೆ ಸಾದರ ಪಡಿಸಿದ್ದರಿಂದ ಹೋದ ವಾರಕ್ಕಿಂತ ಕೆಲಸ ಸ್ವಲ್ಪ ಕಡಿಮೆ ಇತ್ತು. ಆದರೂ ಎಚ್ಚರ ತಪ್ಪುವಂತಿರಲಿಲ್ಲ. ಮತ್ತೇನಾದರು ಹೆಚ್ಚು ಕಮ್ಮಿಯದರೆ ಮತ್ತೆ ಕುತ್ತಿಗೆಗೆ ಬರುತ್ತಿತ್ತು. ಇಷ್ಟು ದಿವಸ ಪಟ್ಟ ಕಷ್ಟವೆಲ್ಲ ಬ್ಯಾಂಕಿನವರಿಂದ ಇನ್ನೊಂದೇ ಒಂದೇ esಛಿಚಿಟಚಿಣioಟಿ ಮೇಲ್ ಬಂತೆಂದರೆ ವ್ಯರ್ಥವಾಗುತ್ತಿತ್ತು. ಬ್ಯಾಂಕಿನವರಿಗೆ ಇಪ್ಪತ್ತು ರಿಪೋರ್ಟುಗಳನ್ನು ಟೆಸ್ಟ್ ಮಾಡಲು ಮೂರು ವಾರ ಕಾಲಾವಕಾಶವಿದ್ದರಿಂದ, ಮೂರು ವಾರ ಹೇಗಾದರು ತಳ್ಳಿದರೆ ಸಾಕು ಎನಿಸಿತ್ತು ಎಲ್ಲರಿಗೂ. ಆಗಲೇ ಕುನಾಲ್‌ನಿಂದ ಒಂದು ಅಚಾತುರ್ಯ ನಡೆಯಿತು.

ಆವತ್ತು ಕುನಾಲ್ ಬೆಳಗ್ಗೆ ಒಂಭತ್ತಕ್ಕೆಲ್ಲ ಆಫೀಸಿಗೆ ಬಂದಿದ್ದ. ಪ್ರಾಜೆಕ್ಟಿನ ಕೆಲವು ರಿಪೋರ್ಟುಗಳನ್ನು ವಿಶ್ಲೇಷಿಸುತ್ತ ಏನೇನೋ ಮಾರ್ಪಡು ಮಾಡುತ್ತ ತಲ್ಲೀನನಾಗಿದ್ದ. ಅವನಿಗೆ ಗೊತ್ತಿಲ್ಲದೇ ಬ್ಯಾಂಕಿನವರು ಟೆಸ್ಟ್ ಮಾಡುತ್ತಿದ್ದ ಕಂಪ್ಯೂಟರ್ ಸರ್ವರ್‌ನಿಂದ ಒಂದು ರಿಪೋರ್ಟಿಗೆ ಬೇಕಾದ ಮಾಹಿತಿಯನ್ನು ಅಳಿಸಿ ಹಾಕಿಬಿಟ್ಟ! ಒಮ್ಮೆಗೇ ಅವನ ಕಾಲುಗಳು ತಣ್ಣಗಾದವು. ಆ ಏ.ಸಿ.ಯಲ್ಲೂ ಬೆವರತೊಡಗಿದ. ಕುಳಿತಲ್ಲೇ ಕಂಪಿಸತೊಡಗಿದ. ಮೆಲ್ಲಗೆ ಎದ್ದು ಅನನ್ಯ ಹತ್ತಿರ ಹೋಗಿ ಮೆಲ್ಲಗೆ ಈ ವಿಚಾರ ತಿಳಿಸಿದ.

‘ಓಹ್ ಶಿಟ್!’ ಅನನ್ಯ ಬಾಯಿಂದ ತಾನಾಗಿಯೇ ಈ ಉದ್ಗಾರ ಏರುದನಿಯಲ್ಲಿ ಹೊರಬಂತು. ಸಂಜಯ್ ಕುಳಿತಲ್ಲೇ ಏನಾಯಿತೆಂದು ಕೇಳಿದ. ನತಿಂಗ್ ಎಂದು ಸುಮ್ಮನಾದಳು. ಶ್ಯಾಮ್ ಸಹ ಇದನ್ನು ಗಮನಿಸುತ್ತಿದ್ದ. ಏನೋ ಎಡವಟ್ಟಾಗಿದೆ ಅನ್ನುವುದು ತಿಳಿಯಿತು.

ಕುನಾಲ್ ಅನನ್ಯ ಪಕ್ಕದಲ್ಲೇ ಒಂದು ಚೇರ್ ಎಳೆದುಕೊಂಡು ಕುಳಿತ. ಯಾವ ರಿಪೋರ್ಟು, ಯಾವ ಮಾಹಿತಿ ಅಳಿಸಿ ಹೋಯಿತು ಎನ್ನುವುದನ್ನು ವಿವರಿಸತೊಡಗಿದ. ಶ್ಯಾಮ್ ಎದ್ದು ಹೋಗುವ ಮುಂಚೆಯೇ ಸಂಜಯ್ ಅವರತ್ತ ಹೋಗಿ ಏನಾಗಿದೆ ಎಂದು ಮೂರ್ನಾಲ್ಕು ಸಲ ಕೇಳಿದ. ಅನನ್ಯ ಏನೂ ಇಲ್ಲ ಸಂಜಯ್ ನತಿಂಗ್ ಮೇಜರ್ ಎಂದು ವಿಷಯ ಮುಚ್ಚಿಡಲು ಕುನಾಲ್‌ನನ್ನು ರಕ್ಷಿಸಲು ನೋಡಿದಳು. ಅದರಲ್ಲಿ ಮುಚ್ಚಿಡುವಂಥದ್ದು ಏನಿದೆಯೆಂದು ಕುನಾಲ್ ನಡೆದ ಸಂಗತಿಯನ್ನೆಲ್ಲ ಚಾಚೂ ತಪ್ಪದೆ ಹೇಳಿದ.

ಸಂಜಯ್‌ಗೆ ಪಿತ್ತ ನೆತ್ತಿಗೇರಿತು. ಇಡೀ ಟೀಮಿನ ಎದುರು ಮಧ್ಯೆ ನಿಲ್ಲಿಸಿಕೊಂಡು ಕುನಾಲ್‌ಗೆ ಹಿಂದುಮುಂದಿಲ್ಲದೆ ಜರಿಯತೊಡಗಿದ...

‘ಐಐಟಿ ಡೆಲ್ಲಿಯಿಂದ ಬಂದವನೋ ನೀನು? ಅದು ಯಾವ ಪುಣ್ಯಾತ್ಮ ನಿನ್ನ ಪಾಸು ಮಾಡಿ ನಮ್ಮ ಪ್ರಾಣ ತಿನ್ನುವುದಕ್ಕೆ ಇಲ್ಲಿ ಕಳಿಸಿದನೋ. ಸ್ವಲ್ಪನೂ ಜವಾಬ್ದಾರಿ ಅನ್ನೋದೇ ಇಲ್ವಲ್ಲ. ಇನ್ನು ನಿನ್ನಂಥೋರು ಲೈನ್ ಮ್ಯಾನ್ ಆದ್ರೆ ಏನು ಗತಿ. ಇಡೀ ಏರಿಯಾ ಜನರನ್ನೇ ಗೋತಾ ಹೊಡೆಸಿಬಿಡ್ತೀಯ. ಕೆಲಸ ಮಾಡೋಕೆ ಇಷ್ಟ ಇಲ್ಲ ಅಂದ್ರೆ ತೆಪ್ಪಗಿರಬೇಕು. ಹೀಗೆ ಮತ್ತೊಬ್ರು ಕಷ್ಟಪಟ್ಟು ಮಾಡಿದ್ದನ್ನೂ ಹಾಳು ಮಾಡಬಾರದು. ನೀನೂ ಉದ್ಧಾರ ಆಗೊಲ್ಲ ಇನ್ನೊಬ್ಬರನ್ನೂ ಆಗೋಕೆ ಬಿಡೊಲ್ಲ.....’ ಅಂತೆಲ್ಲ ಹಿಗ್ಗಾಮುಗ್ಗಾ ಕೂಗಾಡಿದ.

ಪರಿಸ್ಥಿತಿಯನ್ನು ಸಂಭಾಳಿಸಲೆಂದು ಶ್ಯಾಮ್ ಎದ್ದುಬರುವುದಕ್ಕು, ಅತ್ತ ಪ್ರೀತಿ ಮುಸಿನಗುವುದಕ್ಕೂ, ಸಂಜಯ್, ‘ನಿನಗೆ ರಿಮಾರ್ಕ್ಸ್‌ನಲ್ಲಿ ಕೆಲಸ್ ಮಾಡೋಕೆ ಇಷ್ಟವಿಲ್ಲದೆ ಹೋದ ಅಂತ ಬರೆದರೆ ಆಗ ಬುದ್ಧಿ ಬರುತ್ತೆ. ಎಲ್ಲೂ ಕೆಲಸವೂ ಸಿಗೊಲ್ಲ, ಎಲ್ಲೂ ಓದೋದಕ್ಕೆ ಸೀಟೂ ಸಿಗೋದಿಲ್ಲ’ ಅಂತ ಧಮಕಿ ಹಾಕುವುದಕ್ಕೂ, ಕುನಾಲ್ ಕಣ್ಣಂಚಿನಿಂದ ನೀರು ಕನ್ನಡಕ ದಾಟಿ ಕೆನ್ನೆಗಿಳಿಯುವುದಕ್ಕೂ ಅವನು ಅಲ್ಲಿಂದ ಗಕ್ಕನೆ ಮುಖ ತಿರುಗಿಸಿ ಅವಸರದಲ್ಲಿ ಹೊರನಡೆದುಬಿಟ್ಟ. ಶ್ಯಾಮ್ ಏನು ಮಾಡಬೇಕೋ ತಿಳಿಯದೆ ತನ್ನ ಸೀಟಿಗೆ ಮರಳಿದ. ಎರಡೇ ನಿಮಿಷದಲ್ಲಿ ಏನೋ ಸದ್ದು ಕೇಳಿಸಿತು. ಯಾರೋ ಚೀರಿದ್ದು ಕ್ಷೀಣವಾಗಿ ಕೇಳಿತು. ಒಂದಿಬ್ಬರು ದೌಡಾಯಿಸಿ ಬಂದು ಸಂಜಯ್‌ಗೆ ಬೇಗ ಹೊರಬರಲು ಹೇಳಿದರು. ಇಬ್ಬರ ಮುಖದಲ್ಲೂ ವಿಪರೀತ ಉದ್ವೇಗವಿತ್ತು. ಏನೋ ಅನಾಹುತವಾಗಿದೆಯೆಂದು ಶ್ಯಾಮ್ ಕೂಡ ಹೊರನಡೆದ. ಅನನ್ಯ, ಪ್ರವೀಣ್ ಮಿಕ್ಕವರೆಲ್ಲ ಹಿಂಬಾಲಿಸಿದರು.....

***

ಅಲ್ಲಿಂದ ತಲೆ ತಗ್ಗಿಸಿ ಹೊರಟವನೇ ಕುನಾಲ್ ನೇರವಾಗಿ ಹದಿಮೂರನೆಯ ಅಂತಸ್ತಿನ ಟೆರೇಸಿಗೆ ಹೋದ. ತೆರೆದ ಬಾನಿನ ತುಂಬ ಹೆಪ್ಪುಗಟ್ಟಿದ ಮೋಡ. ಜೋರು ಗಾಳಿ. ಆ ಗಾಳಿಗೆ ಅವನ ಉದ್ದುದ್ದ ಕೂದಲು ಹಾರುತ್ತಿದ್ದವು. ತೀಕ್ಷ್ಣವಾದ ಮೌನದಲ್ಲಿ ತಲೆ ತಗ್ಗಿಸಿ ಕೆಳನೋಡುತ್ತಿದ್ದ, ಮುಚ್ಚಿಟ್ಟ ಲ್ಯಾಪ್‌ಟಾಪಿನಂತೆ ತಟಸ್ಥವಾಗಿ. ಕಣ್ಣಲ್ಲಿ ತುಂಬಿ ತುಂಬಿ ಹರಿಯುವ ನೀರು. ಕಣ್ಮುಚ್ಚಿ ತಲೆ ಎತ್ತಿ ಯಾವುದೋ ಪರವಶತೆಯಲ್ಲಿ ಒಂದು ಸುತ್ತು ತಿರುಗಿದ್ದಂತೆಯೇ ಕುನಾಲ್ ಅಲ್ಲಿಂದ ಜಿಗಿದುಬಿಟ್ಟ!

ಕೆಳಗೆ ಧೊಪ್ಪನೆ ಬಿದ್ದವನ ತಲೆ ಜಜ್ಜಿಹೋಗಿ ಕಣ್ಣಗುಡ್ಡೆಗಳು ಹೊರಬಂದಿದ್ದವು. ಕೈ ಜಂಗು ಮುರಿದಿತ್ತು. ಅಲ್ಲೇ ಹಾದು ಹೋಗುತ್ತಿದ್ದ ಸ್ಕರ್ಟ್ ತೊಟ್ಟ ಹುಡುಗಿಯ ಮುಖಕ್ಕೆ ರಕ್ತ ಸೀರಿತು. ಆಗಷ್ಟೇ ಸ್ಮೋಕಿಂಗ್ ಝೋನಿನಿಂದ ಸಿಗರೇಟು ಸುಟ್ಟು ಬರುತ್ತಿದ್ದ ಯಾವುದೋ ಕಾಲ್‌ಸೆಂಟರ್ ಬೆಡಗಿ ಬೆಚ್ಚಿ ಚೀರುತ್ತ ಅಲ್ಲಿಂದ ಓಡಿದಳು. ಒಂದಿಷ್ಟು ಹುಡುಗ-ಹುಡುಗಿಯರ ಗುಂಪಿನಿಂದ ಒಂದೆರಡು ‘ಶಿಟ್!’ ಎನ್ನುವ ಉದ್ಗಾರ ಹೊಮ್ಮಿತು. ಎಲ್ಲರೂ ಅಲ್ಲಲ್ಲೇ ಚೆದುರಿ ನಿಂತರು. ಕೆಲವರು ನೋಡಲಾಗದೆ ದೂರ ಸರಿದರು. ಕಂಪನಿಯ H.R ಸ್ವಪ್ನ ಮರುಕ್ಷಣವೇ ಅಲ್ಲಿದ್ದಳು. ಕೈಕಾಲು ಆಡದೆ ತಿಳಿದವರಿಗೆಲ್ಲ ಫೋನು ಮಾಡುತ್ತ ಅತ್ತಿಂದಿತ್ತ ಸುತ್ತಾಡಿದಳು. ಹೊಸದಾಗಿ ಕಟ್ಟಿಸಿದ ಹೆಮ್ಮೆಯ ಪ್ರತೀಕವಾದ ಬಿಲ್ಡಿಂಗಿನ ಎದುರು ಕುನಾಲ್ ಎಲ್ಲರ ‘ಇಶ್ಶೀ..’ಗೆ ಗುರಿಯಾದ ಹೆಣವಾಗಿ ಬಿದ್ದಿದ್ದ.....

***

ಹನ್ನೆರಡನೆಯ ಮಹಡಿಯಲ್ಲಿರುವ ಕಾರಿಡಾರಿನಲ್ಲಿ ಭಾರವಾದ ಹೆಜ್ಜೆಗಳನ್ನಿಡುತ್ತ ಶ್ಯಾಮ್ ನಡೆಯುತ್ತಿದ್ದರೆ, ಹೃದಯದ ಸುತ್ತ ಹೊಗೆ ಮುಚ್ಚಿಗೆ; ತನ್ನ ಹೃದಯವೇ ತೋರುತ್ತಿರಲಿಲ್ಲ. ಅಕ್ಕಪಕ್ಕದ ಬ್ಲಾಕಿನಲ್ಲಿ ಸಾಲಾಗಿ ನೆಟ್ಟಿರುವ ಒಂದೊಂದು ಕಂಪ್ಯೂಟರ್ರೂ ಒಂದೊಂದು ಗೋರಿಯಂತೆ ಕಂಡಿತು. ಸ್ಮಶಾನದ ಮಧ್ಯೆದಲ್ಲಿನ ಕಾಲು ದಾರಿಯಲ್ಲಿ ತನ್ನ ಗೋರಿ ಹುಡುಕಿಕೊಂಡು ಹೊರಟಂತೆ ಶ್ಯಾಮ್ ನಡೆಯುತ್ತಿದ್ದ, ಜೀವಂತ ಹೆಣವಾಗಿ.

ಕುನಾಲ್ ಸತ್ತ ನಂತರ ಶ್ಯಾಮ್ ಎಂಥ ಆಳವಾದ ಖಿನ್ನತೆಯಲ್ಲಿ ಮುಳುಗಿದ್ದನೆಂದರೆ ಒಂದು ವಾರ ಯಾರೊಂದಿಗೂ ಮಾತಾಡಲಿಲ್ಲ. ಯಾರ ಮುಖ ಸಹಿತ ನೋಡಲಿಲ್ಲ. ತನ್ನ ಪಾಡಿಗೆ ಬಂದು ಮಂಕು ಹಿಡಿದವರಂತೆ ಇಡೀ ದಿನ ಕುಳಿತಿದ್ದು ಹೊರಡುತ್ತಿದ್ದ. ಪ್ರಾಜೆಕ್ಟಿನ ಉಳಿದ ಮಂದಿಯೆಲ್ಲ ಒಂದೆರಡು ದಿನಗಳ ನಂತರ ಏನೂ ನಡೆದೇ ಇಲ್ಲವೆನ್ನುವಂತೆ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಕೊಂಡರು. ಅನನ್ಯಗೆ ರೋಷ ಉಕ್ಕುತ್ತಿದ್ದರೂ ಮೌನವಾಗಿದ್ದಳು.

ಕುನಾಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ ಇತ್ತು. ಅದನ್ನು ಮುಚ್ಚಿಡುವುದು ಸಾಧ್ಯವಿರಲಿಲ್ಲ. ಅವನ ಹೆಣ ತೆಗೆದ ಒಂದು ಗಂಟೆಯ ಒಳಗೆ ಕಂಪನಿಯ ಮುಖ್ಯಸ್ಥರೆಲ್ಲರೂ ಸೇರಿ ಒಂದು ಮೀಟಿಂಗ್ ಹಚ್ಚಿದರು. ಸಂಜಯ್ ಮತ್ತು ಶ್ರೀನಿ ಕೂಡ ಪಾಲ್ಗೊಂಡಿದ್ದರು. ಇಂಥ ವಿಷಯಗಳನ್ನೆಲ್ಲ H.R ಗಳೇ ಮುಖ್ಯವಾಗಿ ನಿರ್ವಹಿಸಬೆಕಾದ್ದರಿಂದ, ಸ್ವಪ್ನಳ ಬಾಸ್ ಆದ ರಘುರಾಮ್ ಎಲ್ಲರಿಂದ ಎಲ್ಲ ವಿವರಗಳನ್ನೂ ಪಡೆದುಕೊಂಡ.

‘ಅವನಿಗೆ ಪ್ರಾಜೆಕ್ಟಿನಿಂದ ರಿಲೀಸ್ ಬೇಕಿತ್ತು. ಪ್ರಾಜೆಕ್ಟಿನಲ್ಲೆ ಕೆಲ್ಸ ಮಾಡುವ ಪ್ರೀತಿ ಎನ್ನುವ ಹುಡುಗಿಯೊಂದಿಗೆ ಇತ್ತೀಚೆಗೆ ಬ್ರೇಕ್ ಅಪ್ ಆಗಿತ್ತು. ಕೆಲಸದ ಒತ್ತಡವೂ ಇತ್ತು’, ಸಂಜಯ್ ತನ್ನ ವಿವರ ಸಲ್ಲಿಸಿದ. ಕೊನೆಗೆ, ಕುನಾಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಭಗ್ನಪ್ರೇಮದಿಂದಾಗಿ ಎನ್ನುವುದನ್ನು ಎಲ್ಲರೂ ಅನುಮೋದಿಸಿದರು. ಮೂರ್ತಿ ತನ್ನ ಪ್ರಭಾವ ಬಳಸಿ ಈ ವಿಚಾರ ಪೇಪರುಗಳ ಒಳಪುಟದಲ್ಲೆಲ್ಲೋ ಸಣ್ಣ ತುಣುಕಾಗಿ ಕಾಣುವಂತೆ ನೋಡಿಕೊಂಡ. ಪ್ರೀತಿಯನ್ನು ಎರಡೇ ದಿನದಲ್ಲಿ ಡೆಲ್ಲಿಯ ಶಾಖೆಗೆ ವರ್ಗಾವಣೆ ಮಾಡಿದರು. ಈ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಸ್ವಪ್ನಳನ್ನು ಆ ಬಿಲ್ಡಿಂಗಿನಿಂದ ಮತ್ತೊಂದು ಬಿಲ್ಡಿಂಗಿಗೆ, ಅಮೇರಿಕದ ಬ್ಯಾಂಕೊಂದರ ಪ್ರಾಜೆಕ್ಟುಗಳ H.R ಆಗಿ ವರ್ಗಾಯಿಸಿದರು. ಕಂಪನಿಯ ವೆಬ್‌ಸೈಟಿನಲ್ಲಿ ಕುನಾಲ್‌ಗೆ ಶೃದ್ಧಾಂಜಲಿ ಸಲ್ಲಿಸುವ ಪುಟವೊಂದನ್ನು ಪ್ರಕಟಿಸಲಾಯಿತು.

ಶ್ಯಾಮ್ ಇವೆಲ್ಲವನ್ನೂ ಮೌನವಾಗೇ ಸಹಿಸಿದ. ಕೆಲಸದ ಒತ್ತಡ ಕಮ್ಮಿಯಾಗಿತ್ತು. ಆದರೆ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಯಾವುದನ್ನೂ ಲೆಕ್ಕಿಸದೆ ಆಫೀಸಿಗೆ ಬಂದು ಹೋಗುತ್ತಿದ್ದ.

ಬಾಗಿಲ ಹತ್ತಿರ ಬಂದವನೇ ಸ್ವೈಪ್ ಮಾಡಲೆಂದು ತನ್ನ ಐ.ಡಿ ಕಾರ್ಡ್ ಹಿಡಿದು ನೋಡಿಕೊಂಡ. ಕಾಲೇಜಿನಲ್ಲಿರುವಾಗೊಮ್ಮೆ ಇದೇ ಐ.ಟಿ ಪಾರ್ಕನ್ನು ನೋಡಲು ಬಂದಿದ್ದು, ಇಲ್ಲಿನ ಹುಡುಗ-ಹುಡುಗಿಯರು ಕೊರಳಲ್ಲಿ ತಮ್ಮ ಕಂಪನಿಯ ಗುರುತಿನ ಕಾರ್ಡು ಹಾಕಿಕೊಂಡು ಗತ್ತಿನಿಂದ ಓಡಾಡುತ್ತಿರುವುದನ್ನು ಕಂಡು ಅಸೂಯೆಗೊಂಡಿದ್ದು, ಒಂದು ದಿನ ತನ್ನ ಕೊರಳಲ್ಲು ಒಂದು ಕಂಪನಿಯ ಮೊಹರು ಒತ್ತಿದ ಕಾರ್ಡು ತೂಗುತ್ತಿರುತ್ತದೆಂದು ಕನಸು ಕಂಡಿದ್ದು, ಎಲ್ಲವೂ ನೆನಪಾಯಿತು. ಕುನಲ್ ಸತ್ತ ನಂತರ ಮೊದಲ ಬಾರಿಗೆ ನಕ್ಕ. ಅಸಹ್ಯವೆನಿಸಿತು. ಈ ಕಂಪನಿಯ ಟ್ಯಾಗು ಹಟ್ಟಿ ದನಗಳ ಕೊರಳಿಗೆ ಕಟ್ಟಿದ ಹಗ್ಗದಂತೆ ಕಾಣುತ್ತಿದೆ ಈಗ. ತಾವೆಲ್ಲ ಗೂಟಕ್ಕೆ ಹಗ್ಗ ಕಟ್ಟಿ ಮೇಯಲು ಬಿಟ್ಟ ಹಸುಗಳಷ್ಟೆ ಎನಿಸಿತು. ಇನ್ನೆಷ್ಟು ಸಹಿಸಿಕೊಳ್ಳಬಲ್ಲೆ? ಇನ್ನೆಷ್ಟು ಮೂಕವಾಗಬಲ್ಲೆ? ಇನ್ನೆಷ್ಟು ಮೇಯಬೇಕಿದೆ? ಇನ್ನೆಷ್ಟು ಮೇಯಿಸಿಕೊಳ್ಳಬಲ್ಲೆ? ಇನ್ನೆಷ್ಟು ಭಂಡತನವಿದೆ ನನ್ನಲ್ಲಿ?....ಶ್ಯಾಮ್ ಬಾಗಿಲ ಹತ್ತಿರವೇ ನಿಂತಿದ್ದ. ಒಳಗಿನಿಂದ ಪ್ರವೀಣ್ ಎದುರಾಗಿ ಬಂದು ಹೊರನಡೆದ. ಶ್ಯಾಮ್ ಸ್ವೈಪ್ ಮಾಡಿ ಒಳಹೋದ.

ಈ ಮೇಲ್ ಚೆಕ್ ಮಾಡಿದ. ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಬಂದ. ಯಾರ ಮುಖವನ್ನೂ ನೋಡುತ್ತಿರಲಿಲ್ಲ. ಕೆಲ ಹೊತ್ತಿನ ನಂತರ ಸಂಜಯ್ ಇದ್ದಕ್ಕಿದ್ದಂತೆ, ‘ಹೇ...ವಿ ಡಿಡ್ ಇಟ್ ಮ್ಯಾನ್!!!....ಯೆಸ್!...’ ಎನ್ನುತ್ತ ಖುಷಿಯಲ್ಲಿ ಎದ್ದು ನಿಂತು ಮೈಮುರಿದು ಎಲ್ಲರನ್ನೂ ಉದ್ದೇಶಿಸುತ್ತ, ‘ಗಯ್ಸ್...ಸೋನಿ ಮೇಲ್ ಕಳುಹಿಸಿದ್ದಾನೆ. ನಾವು ನೀಡಿದ ಅಷ್ಟೂ ರಿಪೋರ್ಟುಗಳನ್ನು ಬ್ಯಾಂಕಿನವರು ಟೆಸ್ಟ್ ಮಾಡಿ ಪಾಸ್ ಮಾಡಿದ್ದಾರೆ. ಈ ವರ್ಷದಲ್ಲಿ ಎಪ್ಪತ್ತೈದು ರಿಪೋರ್ಟುಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಕಂಪನಿಯ ಉನ್ನತ ಅಧಿಕಾರಿಗಳನ್ನೂ ಕಾಪಿಯಲ್ಲಿಟ್ಟು ಸೋನಿ ಮೇಲ್ ಕಳುಹಿಸಿದ್ದಾನೆ...ಥ್ಯಾಂಕ್ಯೂ ಫೋಕ್ಸ್!!....ಶ್ರೀನಿ ಇದೇ ಖುಷಿಯಲ್ಲಿ ಯಾವುದಾದರು ರೆಸಾರ್ಟಿನಲ್ಲಿ ಒಂದು ದಿನ ಟಿಮ್ ಔಟಿಂಗ್ ಮಾಡೋಣವೆಂದು ಹೇಳಿದ್ದಾನೆ. It calls for a party' ಎಂದ.

ಅವನ ಮಾತುಗಳನ್ನು ಕುಳಿತಲ್ಲಿಂದಲೇ ತಿರುಗಿ ಕೇಳುತಿದ್ದವರು ಕೆಲವರು ತಲೆ ಆಡಿಸಿ ಓಕೆ ಎಂದರು. ಕೆಲವರು ‘ಊಹ್...ಕೂಲ್’ ಎಂದರು. ಕೆಲವರು ಏನನ್ನೂ ಹೇಳದೆ ತಮ್ಮ ಮಾನಿಟರಿನತ್ತ ತಿರುಗಿದರು.

ಸುಮ್ಮನೆ ಮಂಕಾಗಿ ಕುಳಿತಿದ್ದ ಶ್ಯಾಮನಿಗೆ ಹೊಟ್ಟೆಯೊಳಗೆ ಯಾರೋ ಕಿವುಚಿದಂತಾಯಿತು. ವಾಂತಿ ಬರುವ ಹಾಗಾಗಿ ಕಣ್ಣು ತುಂಬಿಕೊಂಡಿತು. ಬಾಯಿಗೆ ಕೈ ಅಡ್ಡವಿಟ್ಟುಕೊಂಡು ಎದ್ದು ರೆಸ್ಟ್‌ರೂಮಿನತ್ತ ನಡೆದ. ಏನಾಯ್ತು ಶ್ಯಾಮ್ ಅಂತ ಕೇಳಲು ಹೊರಟ ಅನನ್ಯಳ ತುಟಿಗಳು ಕಂಪಿಸಿ ಕಣ್ಣಂಚು ಒದ್ದೆಯಾಯಿತು.

ರೆಸ್ಟ್ ರೂಮಿಗೆ ಹೋದವನೇ ಶ್ಯಾಮ್ ಹೊಟ್ಟೆಯಿಂದ ಯಾರೋ ಒದೆಯುತ್ತಿರುವಂತೆ ವಾಂತಿ ಮಾಡಿಕೊಂಡ. ಬಗ್ಗಿಕೊಂಡೇ ಬಾಯಿ ಮುಕ್ಕಳಿಸಿದ. ಮುಖಕ್ಕೆ ನೀರೆರಿಚಿಕೊಂಡ. ಮತ್ತೆ ಮತ್ತೆ ನೀರೆರಿಚಿಕೊಳ್ಳುತ್ತ, ‘ಬಾ..ಸ್ಟರ್ಡ್ಸ್!!!....ಫಕ್ ಯೂ ಬಾಸ್ಟರ್ಡ್ಸ್ ಫಕ್ ಯು......ಫಕ್ ಮೀ ಮ್ಯಾನ್! ಫಕ್ ಮೀ!! ಫಕ್ ಮೀ!!!...’ ಎಂದು ಗಳಗಳನೆ ಅಳತೊಡಗಿದ.

***

ಇಗೋ ಇಲ್ಲೇ ಎದುರಿನಲ್ಲೇ ಬಂದು ನಿಂತಿದ್ದಾನೆ ಈಗ. ದುಂಡುದುಂಡಾದ ಮುದ್ದು ಮುಖ, ಸೋತ ಕಂಗಳು, ತುಂಬಿಕೊಂಡ ಕುತ್ತಿಗೆ, ಅಗಲವಾದ ಬಿಸುಪಿನ ಮೈ, ತಿಳಿಯಾದ ಕಪ್ಪುಬಣ್ಣ, ಲಕ್ಷಣವಾದ ಮುಖ.

ಮತ್ತೊಮ್ಮೆ ಅದೇ ಹಿಜಡಾ ಬಂದು ಅವೆನೆದುರು ಕೈ ತಟ್ಟಿದ. ಇವನು ಆಗಲೇ ಕೊಟ್ಟಾಗಿದೆಯೆಂದು ಮುನ್ನಡೆಯ ಹೋದ. ಶ್ಯಾಮ್ ಪುನಃ ಪರ್ಸಿನಿಂದ ಹತ್ತು ರೂ ತೆಗೆದುಕೊಟ್ಟ. ಆಶ್ಚರ್ಯದಲ್ಲಿ ಅದನ್ನಿಸಿದುಕೊಂಡು ಅವನಿಗೆ ಹರಿಸಿ ಹೋದ ಹಿಜಡಾ.

ಹಿಂದಿನಿಂದ ಯಾರೋ ಜೋರಾಗಿ ಹಾರನ್ ಮಾಡುತ್ತಿದ್ದಾನೆ. ಮಧ್ಯದಲ್ಲಿ ಸ್ವಲ್ಪ ಜಾಗ ಬಿಟ್ಟು ಒಬ್ಬ ಕಾರು ನಿಲ್ಲಿಸಿಕೊಂಡಿದ್ದಾನೆ. ಅವನ ಹಿಂದಿನವನು ಇವನಿಗೆ ಮುಂದೆ ಹೋಗುವಂತೆ ಹಾರನ್ ಮೂಲಕ ಕಿರುಚಿ ಹೇಳುತ್ತಿದ್ದಾನೆ.....

ಶ್ಯಾಮ್‌ಗೆ ಅದರ ಬಗ್ಗೆ ಗಮನವೇ ಇಲ್ಲ. ಅವನ ಮನಸ್ಸು ಮತ್ತೇನನ್ನೋ ಅವಲೋಕಿಸುತ್ತಿದೆ.....ಇದಕ್ಕೆಲ್ಲ ಏನು ಕಾರಣ? ಎಪ್ಪತ್ತೈದಕ್ಕೆ ಗೊತ್ತಾದ ರಿಪೋರ್ಟುಗಳ ಲೆಕ್ಕವೇ? ತಮ್ಮನ್ನು ತಾವು ಸಮರ್ಥಿಸಲಾಗದೆ ಟೀಮಿನವರ ಬೆಂಬಲಕ್ಕೆ ನಿಲ್ಲಲಾಗದ ಶ್ರೀನಿಯ ಅಸಹಾಯಕತೆಯೇ? ಅವನಿಗೆ ಬೆದರಿಕೆ ಒಡ್ಡುತ್ತಿದ್ದ ಸೋನಿಯ ಪ್ರತಿಷ್ಠೆಯೇ? ಸೋನಿಗೆ ದುಃಸ್ವಪ್ನವಾಗಿದ್ದ ಬ್ಯಾಂಕಿನ ಬಳಕೆದಾರರ ಮೊಂಡುತನವೇ? ಅವರನ್ನು ಹಾಗೆ ಮೊಂಡುಗೊಳಿಸಿದ ಕಾರ್ಲೋಸ್ ಎಂಬ ಅಪರಿಚಿತನ ಆಕ್ರೋಶವೇ? ಇವೆಲ್ಲದರ ನಡುವೆ ತನ್ನ ಬೇಳೆ ಬೇಯಿಸಿಕೊಂಡ ಸಂಜಯ್‌ನ ಜಿಗುಟುತನವೇ? ಸಂಜಯ್ ಇಲ್ಲಿಗೆ ಬರುವುದಕ್ಕೆ ಕಾರಣನಾದ ಪ್ರತಾಪನ ಪಲಾಯನವೇ? ಅವನ ಪಲಾಯನಕ್ಕೆ ಸಕಾರಣವಾಗಿ ಒದಗಿಬಂದ ಈ ದರಿದ್ರ ಟ್ರಾಫಿಕ್ಕು ತಂದೊಡ್ಡುವ ಸಿಡಿಮಿಡಿಯೇ?...ಯಾವುದು?.....

ಶ್ಯಾಮ್ ತನ್ನಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದಾನೆ....

....ಇಲ್ಲ ಇನ್ನು ಸಾಧ್ಯವಿಲ್ಲ....ಇನ್ನು ಹೇಳಲಾರೆ.......ಅವನನ್ನು ಯಾರಾದರು ತಡೆಯಿರಿ...ದಯವಿಟ್ಟು....ನಾನು ಕೇವಲ ಕಥೆ ಹೇಳುತ್ತಿದ್ದೇನೆ........ನನ್ನನ್ನು ಇಲ್ಲಿ ತಂದು ನಿಲ್ಲಿಸಿದವರು ನೀವೇ ಅಲ್ಲವೇ....ಯಾರದರೂ ಅವನನ್ನು ತಡೆಯಿರಿ...ಅವನೊಳಗೆ ಹುಟ್ಟಿದ ಈ ಯೋಚನೆ ಎಷ್ಟು ಭೀಕರವಾಗಿದೆ....ತಡೆಯಿರಿ ಅವನನ್ನು....

ಹಾ!!...ಮುನ್ನುಗ್ಗಿ ಬರುತ್ತಿದ್ದಾನೆ..........ಇನ್ನಷ್ಟು ಆವೇಗದಿಂದ.....ನನ್ನನ್ನು ಹಸಿರು ಮಾಡಿ....ಯಾರಾದರು ನನ್ನನ್ನು ಹಸಿರು ಮಾಡಿ....ದಯವಿಟ್ಟು ಹಸಿರು ಮಾಡಿ ನನ್ನನ್ನು....

ಅಗೋ ಪಕ್ಕದಿಂದ ಲಾರಿಯೊಂದು ಇತ್ತ ತಿರುಗುತ್ತಿದೆ.....ಇಲ್ಲ.....ಇಲ್ಲ....ನಾನು ಈ ಕಥೆಯನ್ನು ನಿಮಗೆ ಹೇಳುತ್ತಿಲ್ಲ....

ಈ ಕಥೆಯನ್ನು ನಿಮಗೆ ನಾನು ಹೇಳುತ್ತಿಲ್ಲ....

ಪುಟದ ಮೊದಲಿಗೆ
 
Votes:  11     Rating: 2.64    
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು