ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಲಾವಂಚ-ಯಾರಿಗೂ ಹೇಳದೇ ಬರೇ ನಾವಿಬ್ಬರೇ    
ಸಿಂಧು
ಗುರುವಾರ, 10 ಏಪ್ರಿಲ್ 2008 (09:55 IST)

ಯಾರೋ ಹೇಳಿದರು ವಸಂತ ಬಂದಿದಾನೆ ಅಂತ. ಬೆಂಗಳೂರಿನ ಮರ ಗಿಡ ಹೂಬಳ್ಳಿಗಳ ಚಿಗುರು ಅದನ್ನೇ ಸಾರಿ ಸಾರಿ ಹೇಳಿದವು. ಹಕ್ಕಿಗಳೂ ಸುಮ್ಮನಿರದೆ ಅದನ್ನೇ ಚಿಲಿಪಿಲಿಗುಟ್ಟಿದವು. ಆದರೇನು ಮಾಡ್ತೀರಾ ಎಲ್ಲ ಬೆಳಗಿನ ಮಲ್ಲಿಗೆಗಳಂತೆ - ಒಂದು ಬೆಳಿಗ್ಗೆ ೮ ಗಂಟೆ ಆಗ್ತಿದ್ದಂಗೆ ಬಸ್ಸು ಕಾರು, ಸ್ಕೂಟರ್ರುಗಳ ಶಬ್ಧ, ನಾವು ಜನರ ಗಡಿಬಿಡಿಯ ಓಡಾಟ, ಪುರುಸೊತ್ತಿಲ್ಲದ ದಿನ ಎಲ್ಲ ಸೇರಿ ಮಲ್ಲಿಗೆಯನ್ನ ಬಾಡಿಸಿಬಿಟ್ಟವು. ಹೂವುದುರಿದ ಕಾಲುಹಾದಿಯ ತುಂಬ ಧೂಳು, ಪ್ಲಾಸ್ಟಿಕ್ ಚೂರು - ನಾಳೆ ಬೆಳಿಗ್ಗೆ ಕಸ ಗುಡಿಸುವವಳು ಬಂದ ಮೇಲೇ ಹೊಸ ಹೂಗಳು ಬೀಳುವುದು..

ಹಕ್ಕಿಗಳ ಚಿಲಿಪಿಲಿ ಹಾರ್ನ್ ಸದ್ದಿನಲ್ಲಿ ಅಡಗಿಹೋಯಿತು. ಅಲ್ದೇ ಅವರೂ ಹೋಗಬೇಕಲ್ಲ ದೂರ ದೂರಕ್ಕೆ ಊಟ ಹುಡುಕಿಕೊಂಡು. ಸಂಜೆ ಗೂಡಿಗೆ ವಾಪಸಾದಾಗಲೊಮ್ಮೆ ಒಂದೆರಡು ಉಲಿ ಕೇಳುತ್ತೇನೋ..ಆದ್ರೆ ನಮ್ಮ ಟೀವಿ ಸದ್ದಲ್ಲಿ ಅದೆಲ್ಲ ಕೇಳೋದಿಲ್ಲ. ಹಬ್ಬ ಬೇರೆ ಬಂತಲ್ಲಾ ಮಾವು ಬೇವಿನ ಚಿಗುರು ಬಿಟ್ಟ ಮರಗಳೆಲ್ಲ ಬರಿದಾಗಿ ರಸ್ತೆಯ ಬದಿ ರಾಶಿ ಕೂತಿರುತ್ತವೆ. ಇವಳು ಆಫೀಸಿಗೆ ಬೆಳಿಗ್ಗೆ ೭ ಗಂಟೆಗೇ ಹೋಗಿಬಿಡುತ್ತಾಳೆ. ಅವನಿಗೆ ಸಕ್ಕರೆ ನಿದ್ದೆ. ಸಂಜೆ ಏಳಕ್ಕೆ ಅವಳು ಬಂದುಬಿಡುತ್ತಾಳೆ. ಅವನು ಬರುವಾಗ ಇವಳಿಗೊಂದು ಸಣ್ಣ ನಿದ್ದೆಯಾಗಿ ಇನ್ನೇನು ಕನಸು ಬೀಳಲು ಶುರುವಾಗಿರುತ್ತದೆ. ವಾರಾಂತ್ಯದಲ್ಲಿ ಬೆಳಿಗ್ಗೆಗೊಂದು ಬ್ಯಾಡ್ ಮಿಂಟನ್ನು ಆಮೇಲೆ, ಮನೆ ಕ್ಲೀನ್ ಮಾಡು, ಬಟ್ಟೆ ಒಗಿ, ಇಸ್ತ್ರಿ ಮಾಡು..., ಮಧ್ಯಾಹ್ನಕ್ಕೆ ಸ್ನಾನ ಮುಗಿಸಿ ವಿದ್ಯಾರ್ಥಿ ಭವನದಲ್ಲೊಂದು ಮಸಾಲೆ ದೋಸೆ ತಿಂದು, ಎಸ್.ಎಲ್.ವಿಯಲ್ಲ್ಲೊಂದು ಕಾಫಿ ಕುಡಿದು, ಹಾಗೇ ಅಂಕಿತದಲ್ಲಿ ಕಣ್ಣಾಡಿಸಿ, ಬಸವನಗುಡಿಯ ಹಳೆ ದಾರಿಗಳಲ್ಲಿ ಸುತ್ತಾಡುವಷ್ಟರಲ್ಲಿ ರಾತ್ರಿ ಮನೆಗೆ ವಾಪಸಾಗುವ ಹೊತ್ತು.

ಕಣ್ಮುಚ್ಚಿ ಮಲಗಿದರೆ ಮತ್ತೆ ನಾಳೆಯಿಂದ ಗಡಿಬಿಡಿಯ ಹಾದಿಯ ದಿನದಿನದ ಪಯಣ. ಇದ್ರಲ್ಲೂ ಅವಳು ಅಲ್ಲೊಂದು ಇಲ್ಲೊಂದು ಕದ್ದು ಗೆಳೆಯರ ಜೊತೆಗೆ ಪುಟ್ಟ ಪುಟ್ಟ ಚಾರಣಕ್ಕೆ ಹೋಗಿಬಿಡುತ್ತಾಳೆ. ಅವನೋ ಸಿಕ್ಕಾಪಟ್ಟೆ ಕೆಲಸದಲ್ಲೆ ಕಾಡುಹಾದಿಯ ದಣಿವನ್ನ ಅನುಭವಿಸುತ್ತಿರುತ್ತಾನೆ. ಗುರಿ ಮುಟ್ಟಿದ ಮೇಲಿನ ಆಪ್ತ ತನ್ಮಯತೆ ಇರುವುದಿಲ್ಲ ಅಷ್ಟೆ. ಫಾಲ್ಗುಣದ ಬಿಸಿಲಲ್ಲಿ ಮಳೆ ತೆರೆತೆರೆಯಾಗಿ ಬಂದಾಗಲೇ ಇಬ್ಬರಿಗೂ ಸುಮ್ಮನಿರಲಾಗುತ್ತಿಲ್ಲ. ಎಲ್ಲಾದರೂ ಓಡುವ ಪ್ಲಾನ್ ಹಾಕಿದರೂ ಕೆಲಸ ಕೈ ಜಗ್ಗುತ್ತಿತ್ತು. ಎಲ್ಲ ಮುಗಿಸಿ ಕಟ್ಟಿಡುವಾಗ ಚೈತ್ರದ ಬೆಳಗು ಇಣುಕುತ್ತಿತ್ತು. ದೂರ ಕಾಡಿನ ನಡುವೆ ಸುಮ್ಮನೆ ಇರುವ ಅತ್ತೆಯ ಮನೆಗೆ ಹೋಗೋಣ ಅಂತ ಅವನಿಗಿಷ್ಟ. ಅಲ್ಲಿ ಬನದ ಮಧ್ಯೆ ಇರುವ ಅವರ ಮನೆಯ ಜಗುಲಿಯಲ್ಲಿ ಕೂತರೆ ಮುಂದೆ ವಿಶಾಲವಾಗಿ ಹರಡಿದ ಗದ್ದೆ ಬಯಲು, ಅಂಚಿಗೊಂದು ಹಳ್ಳ, ಆಮೇಲೆ ಎದ್ದು ನಿಂತ ಬೆಟ್ಟಸಾಲು..ನೋಡು ನೋಡುತ್ತಾ ಕೂತ ಹಾಗೆ ಬೆಟ್ಟದ ಆಚೆಯಿಂದ ಮಳೆ ಮೋಡ ಹನಿಯಾಗುತ್ತ ಬರುತ್ತದೆ. ಬಿಸಿಲು ಚೆಲ್ಲಿದರೆ ನವಿಲಾಡುತ್ತವೆ. ಮನೆಯಲ್ಲಿ ಮಾವ ಅತ್ತೆ ಇಬ್ಬರೆ. ಕರೆಂಟು ಕೈ ಕೊಡುತ್ತಿರುತ್ತದೆ. ಟೀವಿಯಲ್ಲಿ ಬರುವುದು ಒಂದೇ ಚಾನಲ್ಲು.

ಆದರೆ ಅಲ್ಲಿ ಹೋದರೆ ನೆಂಟರೆಲ್ಲರ ಮನೆಗೂ ಹೋಗಿ ಬರಬೇಕು. ಹಬ್ಬದ ಸಮಯ ಬೇರೆ, ಬರೀ ಹೋಗಿ ಬಂದರೆ ಆಗುವುದಿಲ್ಲ. ಎಲ್ಲರ ಮನೆಯಲ್ಲೂ ಹೋಳಿಗೆ ತಿನ್ನಲೇಬೇಕು. ಇರುವ ಮೂರು ದಿನ ರಜೆಯಲ್ಲಿ ಇದು ಯಾಕೋ ಬೇಡವೆನಿಸಿತು. ಇದ್ದಕ್ಕಿದ್ದ ಹಾಗೆ ನೆನಪಾಗಿದ್ದು ಪಶ್ಚಿಮಘಟ್ಟದ ಕಾಡು. ಪ್ರಪಂಚ ಒಂಬತ್ತು ಜೀವವೈವಿಧ್ಯ ಸಮೃದ್ಧಿಯ ಕಾಡಲ್ಲಿ ಒಂದದು. ಅಲ್ಲಿನ ಗೆಸ್ಟ್ ಹೌಸ್ ವಿಚಾರಿಸಿದರೆ ಶನಿವಾರ ಭಾನುವಾರ ಬಿಟ್ಟು ಯಾವತ್ತು ಬಂದರೂ ಜಾಗವುಂಟು ಅಂದರು. ಸರಿ ಬೇರೆ ಯೋಚನೆ ಮಾಡದೆ ಅವಳು ಗೆಸ್ಟ್ ಹೌಸ್ ಬುಕ್ ಮಾಡಿದಳು. ಅವನು ಬಸ್ ಟಿಕೆಟ್ ಮಾಡಿಸಿದ. ಯಾವಾಗಲೂ ಜೊತೆಗಿರುವ ಇಬ್ಬರು ಗೆಳೆಯರಿಗೆ ಏನೇನೋ ಕಾರಣಗಳಿಂದ ಆಗ ಬರಲು ಆಗಲಿಲ್ಲ. ಇಲ್ಲ ಜಗಳ ಮಾಡುವುದಿಲ್ಲ, ಜಾಸ್ತಿ ಮಾತಾಡುವುದಿಲ್ಲ ಇಬ್ಬರೇ ಆದರೂ ಸರಿ ಹೋಗೋಣ ಅಂತ ಇವಳು ಅವನನ್ನ ಒಪ್ಪಿಸಿದಳು.

ಒಂದು ಬ್ಯುಸೀ ಬುಧವಾರದ ಕೊನೆಗೆ ಹೇಗೆ ಹೇಗೋ ಮಾಡಿ ಸಮಯಕ್ಕೆ ಸರಿಯಾಗಿ ಬಸ್ ನಿಲ್ದಾಣ ಸೇರಿದರು. ಬಸ್ಸು ಕಷ್ಟಪಟ್ಟು ಜನಸಾಗರದ ಮಧ್ಯದಿಂದ ತೇಲಿತು. ಅಷ್ಟಾದರೆ ಆಯಿತಾ.. ಊರ ಹೊರಗಿನವರೆಗೂ ಅಂಟಿಕೊಂಡಂತಿದ್ದ ಟ್ರಾಫಿಕ್ ಮಧ್ಯ ಮೆಲ್ಲ ತೆವಳುತ್ತಾ ಹೇಗೆ ಹೇಗೋ ಒಂದು ತಿರುವು ಸಿಕ್ಕಿದ್ದೆ ರಭಸದಿಂದ ಓಡತೊಡಗಿತು. ಇವರಿಬ್ಬರಿಗೂ ಬರೋಬ್ಬರಿ ನಿದ್ದೆ. ಅಲ್ಲೆಲ್ಲೋ ಟೀ ಗೆ ನಿಲ್ಲಿಸಿದರೆ ಎಚ್ಚರಾಗಲೆ ಇಲ್ಲ. ಮತ್ತೆ ಎಚ್ಚರಾದಾಗ ಚುಮು ಚುಮು ಬೆಳಗು. ನಮ್ಮ ಸಮೃದ್ದ ಹಸಿರನ್ನ ಕಡಿದು ಕಪ್ಪಗೆ ಟಾರು ಬಳಿದ ಓರೆ ಕೋರೆ ರಸ್ತೆಯಲ್ಲಿ ಹೋಗುತ್ತಿದೆ ಬಸ್ಸು. ಅಲ್ಲಲ್ಲಿ ಅರಳಿದ್ದ ಕಾಫಿ ಹೂಗಳ ಪರಿಮಳ ದಾರಿಯುದ್ದಕ್ಕೂ. ಚಿಲಿಪಿಲಿ ಬಸ್ಸಿನ ಭರ್ರೋ ಸದ್ದನ್ನೂ ಮೀರಿ ಉಲಿಯುತ್ತಿತ್ತು. ದೂರದೂರಕ್ಕೆ ಹರಡಿದ ಕಾಡಿನಂಚಲ್ಲಿ ಎತ್ತರೆತ್ತರದ ಬೆಟ್ಟಸಾಲು. ಇಲ್ಲಿ ತಿರುವಲ್ಲಿ ಒಂದು ಹೊಳೆ.. ಅಲ್ಲಿ ಶಿಖರವನ್ನ ಮುತ್ತಿಡುವ ಮಂಜು. ಅಲ್ಲೊಂದು ಇಲ್ಲೊಂದು ಕಾಣುವ ಮನೆಗಳಲ್ಲಿ ಆಗಷ್ಟೇ ಎದ್ದು ನಿಧಾನಕ್ಕೆ ತಮ್ಮತಮ್ಮ ಕೆಲಸದಲ್ಲಿ ತಲ್ಲೀನರಾಗಿರುವ ಜನ.

ಅವರ ಪಯಣ ಮುಗಿಯುತ್ತ ಬಂದಾಗ ಹಚ್ಚ ಹಸಿರಿನ ನಡುವೆ ಇದ್ದರು. ಮಧ್ಯ ರಸ್ತೆಯೊಂದು ಬೈತಲೆಯ ಹಾಗೆ ಹರಿದು ಹೋಗಿತ್ತಷ್ಟೆ. ಸಣ್ಣಗೆ ಬೀಸುವ ಗಾಳಿಯೂ ಸ್ಪಷ್ಟವಾಗಿ ಕೇಳಿಸಬಹುದಾದ ಸ್ವಚ್ಛ ಮೌನ. ಅಲ್ಲಿ ಅರಣ್ಯ ಇಲಾಖೆಯವರಿಗೆ ಚೀಟಿ ತೋರಿಸಿ, ಕಾಡೊಳಗೆ ಇನ್ನೂ ಒಳಗೆ ಇದ್ದ ಗೆಸ್ಟ್ ಹೌಸಿಗೆ ನಡೆದು ಹೋದರು. ಬೆನ್ನಿಗೆ ಚೀಲವಿತ್ತು. ಹೋಗಿ ನೋಡಿದರೆ ಅಲ್ಲಿನ ಅಡಿಗೆಯವರು ಮತ್ತು ಗಾರ್ಡ್ ಒಬ್ಬನನ್ನ ಬಿಟ್ಟರೆ ಯಾರೂ ಇಲ್ಲ. ಇನ್ನೇನು ಅವಳು ಖುಶಿಯಿಂದ ಕೂಗು ಹಾಕಬೇಕು. ಅವನ ನೋಟ ತಡೆಯಿತು. ಸುಮ್ಮನೆ ಕೂಗಿ ಹಕ್ಕಿಗಳನ್ನೆಲ್ಲ ಓಡಿಸಬೇಡವೆಂಬಂತೆ. ಟೆಂಟಿನಲ್ಲಿ ಚೀಲ ಬಿಸಾಕಿ, ತಣ್ಣಗೊಂದು ಸ್ನಾನ ಮಾಡಿ, ಇಬ್ಬರೂ ಓಡಿದರು ಹೊಳೆಯ ದಡಕೆ. ತಣ್ಣಗೆ ಹರಿಯುತಿದ್ದಳು ಭದ್ರೆ. ಸುತ್ತ ಕವಿದ ಹಸಿರು, ಹಕ್ಕಿಗೊರಳು, ಜುಳುಜುಳು.. ಒಂದಷ್ಟು ಹೊತ್ತು ನೀರಲ್ಲಿ ತಿರುಗಾಡಿ ದಂಡೆಯ ನೆರಳಲ್ಲಿ ಪುಸ್ತಕ ಹಿಡಿದು ಮಲಗಿಬಿಟ್ಟರು. ಎರಡು ಪುಟ ಓದುವುದಕ್ಕಿಲ್ಲ ಸೊಂಪು ನಿದ್ದೆ. ನಿದ್ದೆಯಲ್ಲೆಲ್ಲೋ ಗೋಪಿ ಹಕ್ಕಿಯ ಉಲಿ, ಅಳಿಲುಗಳ ಕೀಚು... ಅಭಯದಾಯೀ ಜುಳು ಜುಳು.. ಮಧ್ಯಾಹ್ನ ಹೊಟ್ಟೆಗೇನೋ ಹಾಕಿಸಿಕೊಂಡು ಮತ್ತೆ ಹೊಳೆದಂಡೆ ಸೇರಿಬಿಡುವುದೇ..! ಮಾತಿಲ್ಲ. ಕತೆ ಮೊದಲೇ ಇಲ್ಲ. ಕಣ್ಣಿಗೆ ಕೆಲಸವಿತ್ತು. ಅವನು ಫೋಟೋ ತೆಗೆದರೆ ಇವಳು ಬೈನೋದಲ್ಲಿ ದೂರನೋಟ. ಸಂಜೆಗೊಂದು ಕಾಡಲ್ಲಿ ದೊಡ್ಡ ತಿರುಗಾಟ. ಏನು ನೋಡಿದರೂ ಚಂದವೇ. ಎಲ್ಲೆಲ್ಲೂ ಚಿಗುರೆ. ಅಲ್ಲಲ್ಲಿ ಚಿಗರೆಗಳೂ ಕಾಣಸಿಕ್ಕಿದವು. ಕಾಡೆಮ್ಮೆಗಳು ಊರಿನ ಎಮ್ಮೆಗಳ ವಾಸನೆ ಹಿಡಿದು ಕಾಣಿಸಿಕೊಳ್ಳದಂತೆ ತಿರುಗಾಡಿದವು. ಗೋಪಿ ಹಕ್ಕಿ ಮಾತ್ರ ಎಲ್ಲೆಲ್ಲೂ ಹಿನ್ನೆಲೆಗೆ ಹಾಡುತ್ತಿತ್ತು. ಪ್ರತೀ ಸಲವೂ ಒಂದು ಹೊಸ ರಾಗ, ಒಂದೊಂದ್ಸಲ ಅಣಕ.. ಕತ್ತಲಾಗಿ ಮಿಣುಕುಹುಳಗಳು ಮಿನುಗತೊಡಗಿದ ಮೇಲೆ ವಾಪಸಾಗಿ ಟೆಂಟಲ್ಲಿನ ಸೋಲಾರ್‍ ಲೈಟಲ್ಲಿ ಮಧ್ಯಾಹ್ನ ಹಿಡಿದ ಪುಸ್ತಕವನ್ನ ಓದಿ ಮುಗಿಸಿ ಮಲಗುವಾಗ ಒಂದ್ಸಲ ಹೊರಗೆ ಬಂದು ನೋಡಿದರೆ ಮೇಲೆ ಕಪ್ಪು ಆಕಾಶದ ತುಂಬ ಬೆಳ್ಳಿ ಚಿಕ್ಕೆಯ ಮಿನುಗು. ಕೆಳಗೆ ಮರಮರದಲ್ಲೂ ಮಿಂಚುವ ಮಿಣುಕು ಹುಳಗಳ ಹೊಳಪು. ಮತ್ತೆ ಒಳಗೆ ಬಂದು ಬೆಚ್ಚಗೆ ಹೊದ್ದು ಮಲಗಿದರೆ ಬೆಳಗ್ಗೆ ಮುಂಚೆಯೇ ಎಬ್ಬಿಸಿತು ಸಂಜೆ ಹಾಡು ಹೇಳಿದ್ದ ಗೋಪಿ ಹಕ್ಕಿಯ ಬೆಳಗಿನ ಹಾಡು. ಬೆಟ್ಟದ ಹಿಂದೆ ಇನ್ನೂ ಹುಟ್ಟಿರದ ಸೂರ್ಯನ ಬೆಳಕಿನ ಹಾಡು.

ಬೇಗ ಬೇಗ ಎದ್ದು ರೆಡಿಯಾಗಿ ಹೊರಬಂದರೆ ನಮ್ಮನ್ನು ಆ ಕಾಡಿನ ಚೆಲುವಾದ ಶಿಖರವೊಂದಕ್ಕೆ ಕರೆದುಕೊಂಡು ಹೋಗಲು ಗೈಡು ಕಾಯುತ್ತಿದ್ದರು. ಅಭಯಾರಣ್ಯವಾಗಿರುವುದರಿಂದ ಇಲ್ಲಿ ತಿರುಗಾಡಲು ಅನುಮತಿ ಬೇಕು. ಕಾಡಿನೊಳಕ್ಕೆ ಬೆಟ್ಟಕ್ಕೆ ಚಾರಣ ಹೋಗುವುದಾದರೆ ಅರಣ್ಯ ಇಲಾಖೆಯ ಮಾರ್ಗದರ್ಶಿ ಒಬ್ಬರು ಜೊತೆಗಿರಲೇ ಬೇಕು. ಅಡಿಗೆಯವರು ಕೊಟ್ಟ ಚಿತ್ರಾನ್ನ ತಿನ್ನುತ್ತಾ ಬಿಸಿ ಬಿಸಿ ಟೀ ಕುಡಿದರು. ಎರಡು ದಾರಿಯಿದೆ - ಒಂದು ಜೀಪು ಹೋಗಬಹುದಾದ ರಸ್ತೆ, ಇನ್ನೊಂದು ಸ್ವಲ್ಪ ಹತ್ತಿರದ ಕಾಡು ಹಾಡಿ. ಹೇಗೆ ಹೋಗೋಣ. ಅವಳಿಗೆ ಉತ್ಸಾಹ ಕಾಡಲ್ಲೇ, ‘ಕಾಡಲ್ಲೇ ಹೋಗೋಣ..ದಾರಿ ಬೇಡ..' ಗೈಡ್ ನಕ್ಕರು. ಒಳ್ಳೆಯದು ಆದ್ರೆ ಸಿಕ್ಕಾಪಟ್ಟೆ ಇಂಬಳ(ಜಿಗಣೆ)ಗಳಿರುತ್ತವೆ ಹುಶಾರು ಅಂತ. ಈ ಬೇಸಿಗೆಯಲ್ಲಿ ಎಂತಹ ಜಿಗಣೆ. ಅಕಸ್ಮಾತ್ ಇದ್ರೂ ಪರವಾಗಿಲ್ಲ ಭಯವೇನಿಲ್ಲ ಅಂತ ಹೊರಟರು.

ಅಲ್ಲೇ ಇದ್ದ ಪುಟ್ಟ ಹೊಳೆ ದಾಟಿ, ಇನ್ನೊಂದು ಚಿಟ್ಟು ಹೊಳೆಯ ಒಣದಾರಿಯಲ್ಲಿ ನಡೆಯುತ್ತಾ ಒಂದೆರಡು ಮಾರು ನಡೆಯುವಷ್ಟರಲ್ಲಿ ಕಾಡು ಆವರಿಸಿಕೊಂಡಿತು. ಬೆಳಕು ಕೋಲು ಕೋಲಾಗಿ ಅಲ್ಲಲ್ಲಿ ತೂರಿಬರುತ್ತಿತ್ತಷ್ಟೆ. ಮುಂದೆ ಗೈಡು. ಹಿಂದೆ ಇವಳು ಎಲ್ಲರಿಗಿಂತ ಹಿಂದೆ ಅವನು. ಸ್ವಲ್ಪ ದೂರ ಹೋದ ಮೇಲ ಕಾಲಿಗೆ ಮೆತ್ತಗೇನೋ ತಾಗಿದಂತೆನಿಸಿತು. ಮುಂದೆ ಚೂರು ಬೆಳಕಿರುವಲ್ಲಿ ನೋಡಿದರೆ ಕಾಲ ತುಂಬ ಜಿಗಣೆಗಳು. ಒಂದೆರಡಲ್ಲ. ಜೇನುಗೂಡಿನಂತೆ ಕಾಣುತ್ತಿತ್ತು ಕಾಲು. ಎಂದೂ ಅಷ್ಟೊಂದನ್ನ ಒಟ್ಟಿಗೆ ನೋಡಿರದ ಅವಳಿಗೆ ಗಾಬರಿಯಾದರೂ ಹೆದರಿಕೆಯಿರಲಿಲ್ಲವಾದ್ದರಿಂದ ಅಡಿಗೆ ಭಟ್ಟರು ಕೊಟ್ಟಿದ್ದ ಉಪ್ಪಿನ ಗಂಟನ್ನ ಸವರಿ ಕೆಲವನ್ನ ಎಸೆದಳು. ಅಷ್ಟರಲ್ಲಿ ಅವನೂ ನಿಂತು ಅವನ ಕಾಲಿಗಂಟಿದ್ದನ್ನ ಎಸೆಯುತ್ತಿದ್ದ. ಒಂದು ಒಂದೂವರೆ ಮೈಲು ಬಂದಿದ್ದರೇನೋ ಅಷ್ಟರಲ್ಲಿ ಇನ್ನೊಂದು ಚೆಲುವಾದ ಹೊಳೆ ಸಿಕ್ಕಿತು. ಸ್ವಲ್ಪ ಬೆಳಕು ಚೆನ್ನಾಗಿತ್ತು. ನಿಂತು ಎಲ್ಲ ಜಿಗಣೆಗಳನ್ನೂ ಕಿತ್ತೆಸೆದು ಕಾಲು ತೊಳೆಯುವಾಗ ಕೇಳಿದ ಅವನು. ಇನ್ನೂ ಎಷ್ಟು ದೂರ ಕಾಡು ಹಾದಿ? ಗೈಡ್ ನಸುನಗುತ್ತ ಹೇಳಿದರು. ಇನ್ನೊಂದೆರಡು ಕಿಲೋಮೀಟರ್ ಅಷ್ಟೆ. ಆಗುವುದಿಲ್ಲ ಅಂದರೆ ಇಲ್ಲೇ ಒಂದೆರಡು ಫರ್ಲಾಂಗ್ ಹೋದ ಮೇಲೆ ಬಲಕ್ಕೆ ತಿರುಗಿದರೆ ಜೀಪು ಹಾದಿ ಸಿಗುತ್ತದೆ. ಅಲ್ಲಿ ಜಿಗಣೆಯಿಲ್ಲ. ಅವಳಿಗೆ ಜೀವಬಂತು. ಸ್ವಲ್ಪ ಸುತ್ತಿದರೂ ಪರವಾಗಿಲ್ಲ. ಹಾಗೇ ಹೋಗೋಣ. ಇನ್ನೂ ಕಚ್ಚಿಸಿಕೊಂಡರೆ ಕಷ್ಟವಾಗುತ್ತೆ ಅಂತ. ಸರಿ ಹಾಗೇ ಹೋದರು. ಅದೂ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಆ ಹಾದಿ ಕಾಡಿನ ಪಕ್ಕದಲ್ಲೇ ಬೆಟ್ಟ ಸುತ್ತಿ ಸುತ್ತಿ ಹೋಗುತ್ತದೆ. ಹಾಗಾಗಿ ದೂರ ದೂರದ ನೋಟಗಳು ತುಂಬ ಚಂದಿದ್ದವು. ಆ ಇಡೀ ಪರ್ವತ ಶ್ರೇಣಿ, ಅಲ್ಲೊಂದು ಇಲ್ಲೊಂದು ಊರು, ಆಗೀಗ ಕಾಣಿಸುವ ಬಸ್ಸಿನ ರಸ್ತೆ ಎಲ್ಲ ಕಾಣಿಸುತ್ತಿದ್ದವು. ಅಲ್ಲಲ್ಲಿ ನೆರಳಿನ ಕಾಡು ಹಾದಿ ಇತ್ತು. ಕೊನೆಕೊನೆಗೆ ಏರುಮುಖವಾದ ಹಾದಿಯ ತಿರುವೊಂದರಲ್ಲಿ ಕಾಣಿಸಿತು ಆ ಚೆಲುವಾದ ಶಿಖರ. ಪ್ರಕೃತಿಯ ರಮ್ಯತೆ, ಕಷ್ಟಸಾಧ್ಯವಾದ ಗಹನತೆ, ಶಕ್ತಿ ಮತ್ತು ವಿಸ್ಮಯಗಳ ಒಟ್ಟಂದದಂತಹ ಕಪ್ಪು ಕಲ್ಲಿನ ಶಿಖರ ಹಸಿರ ಹಿನ್ನೆಲೆಯಲ್ಲಿ ಸ್ವಾಗತಿಸಿತು. ಉಸ್ಸೆನ್ನುತ್ತಾ ಇಬ್ಬರೂ ಗೈಡನ್ನ ಹಿಂಬಾಲಿಸಿದರು. ತುದಿ ಮುಟ್ಟುವಾಗ ಬಿಸಿಲು ಚುರುಗುಡುತ್ತಿತ್ತು. ಸ್ವಲ್ಪ ಹಣ್ಣು ನೀರಿನೊಂದಿಗೆ ಸುಧಾರಿಸಿಕೊಂಡು ಸುತ್ತನೋಡಿದರೆ ಮನಸು ಹಗುರವಾಗಿ ತೇಲತೊಡಗಿತು. ಒಂದು ಬದಿಯಲ್ಲಿ ಆಕಾಶವೆ ಕೊನೆಗೊಂಡಂತೆ ಬೆಳ್ಳಿರೇಖೆಯಹಾಗೆ ಕಾಣುವ ಪಶ್ಚಿಮದ ಕಡಲು, ಇನ್ನೊಂದು ಬದಿಯಲ್ಲಿ ಹಸಿರ ಹಬ್ಬದ ಹಾಗೆ ಹರಡಿ ನಿಂತ ಬೆಟ್ಟಸಾಲು, ಹೊಳೆ, ಕಾಡು. ಆ ಬಿಸಿಲನ್ನೂ ತಂಪುಗೊಳಿಸುವ ಬೀಸುಗಾಳಿ. ಒಂದು ಗಂಟೆ ನೋಡುತ್ತ ಕೂತರು ಹಾಗೆಯೇ.

ಗೈಡು ಗಂಟೆ ಹನ್ನೆರಡಾಯಿತು ಹೋಗುವ ಬನ್ನಿ ಅಂತ ಅವಸರಿಸಿದ ಮೇಲೂ ಇನ್ನೊಂದು ಅರ್ಧ ಗಂಟೆ ಅಲ್ಲೇ ಕೂತು ಕೆಳಗಿಳಿಯತೊಡಗಿದರು. ಏರಿದ ಹಾದಿಯನ್ನೆಲ್ಲ ಇಳುಕಲಲ್ಲಿ ಇಳಿವಾಗ ಮೈಭಾರ ಜಾಸ್ತಿಯಾಗಿ ಕಾಲು ನೋಯುತ್ತಿದ್ದವು. ಹಾಗೂ ಹೀಗು ಬೆಟ್ಟ ಹೊಳೆಗಳ ಹಾದು ಗೆಸ್ಟ್ ಹೌಸ್ ಸೇರುವಾಗ ಎರಡುಗಂಟೆ. ಸ್ನಾನ ಮುಗಿಸಿ ಬಂದಾಗ ಅಡಿಗೆಭಟ್ಟರು ಏನು ಬಡಿಸಿದರು ಅಂತ ನೋಡದೆ ಮುಕ್ಕಿ ಇಬ್ಬರೂ ಹೋಗಿ ಹೊಳೆದಂಡೆಯ ಮೇಲೆ ಮಲಗಿದರೆ ಎಚ್ಚರಾದಾಗ ಬಿಸಿಲು ತಣ್ಣಗಾಗುತ್ತಿತ್ತು. ಹೊಳೆ ನೀರು ಬೆಚ್ಚಗಾಗಿತ್ತು.

ಸಂಜೆ ಮತ್ತೆ ಅಲ್ಲೇ ಸುತ್ತಮುತ್ತ ಓಡಾಡಿ ಗೋಪಿ ಹಕ್ಕಿಯ ಜೊತೆಗೂ ಶಿಳ್ಳೆ ಹಾಕಿ, ಬುಲ್ ಬುಲ್, ಪಿಕಳಾರ, ಭಾರದ್ವಾಜ ಎಲ್ಲರನ್ನೂ ಮನದಣಿಯೆ ನೋಡಿ ಕತ್ತಲಾಗುವಾಗ ಟೆಂಟಿಗೆ ಬಂದರು. ಅವತ್ತು ರಾತ್ರಿ ಪುಸ್ತಕ ಹಿಡಿಯಲೂ ತ್ರಾಣವಿರಲಿಲ್ಲ. ಹದಿನಾಲ್ಕು ಕಿಲೋಮೀಟರುಗಳ ಏರು ಚಾರಣ, ಬೆಂಗಳೂರಿನಲ್ಲಿ ಸುಖವಾಗಿದ್ದ ಮೈಗಳನ್ನ ದಂಡಿಸಿತ್ತು. ಬೆಳಗಾದ ಮೇಲೂ ಅಲ್ಲೆ ಮಲಗಿ ಹಕ್ಕಿಗೊರಳ ಕೇಳುತ್ತಿದ್ದವರ ಸಕ್ಕರೆಯ ಕ್ಷಣಗಳನ್ನ ಕರಗಿಸಿದ್ದು ಬಸ್ಸಿನ ಹಾರನ್ನು. ಇಡೀ ಎರಡು ದಿನ ಅಲ್ಲಿ ಯಾವ ಶಬ್ಧವೂ ಇರಲಿಲ್ಲ. ಕರೆಂಟು, ಮೊಬೈಲ್ ಸಿಗ್ನಲ್, ಟೀವಿ, ವಾಹನಗಳು, ಜನರು ಯಾರೂ ಇಲ್ಲದ ಆ ಸ್ವಚ್ಛ ಹಸಿರು ಮೌನವನ್ನ ಹಕ್ಕಿಯುಲಿಗಳೂ, ಗಾಳಿಯ ಬೀಸು, ಆಗೊಂದು ಈಗೊಂದು ಕೋತಿ ಕೊರಳು, ಅಳಿಲಿನ ಕೀಚು ಎಲ್ಲ ಸಮೃದ್ಧಗೊಳಿಸಿದ್ದವು. ಇವಳು ಬೇರೆ ಅವನಿಗೆ ಹೊರಡುವಾಗ ಕೊಟ್ಟ ಮಾತಿಗೆ ತಪ್ಪದ ಹಾಗೆ, ಮಾತು ಕಡಿಮೆ ಮಾಡಿದ್ದಳು.

ಎದ್ದು ಬಂದು ನೋಡಿದರೆ ಎರಡು ಬಸ್ಸು ನಾಗರಿಕ ಸಮುದಾಯವಿತ್ತು. ಇಬ್ಬರೂ ಬೇಗ ಬೇಗ ರೆಡಿಯಾಗಿ, ಚೀಲಗಳನ್ನ ತುಂಬಿಕೊಂಡು ಬಂದು ಭಟ್ಟರ ಬೆಳಗಿನ ತಿಂಡಿತಿಂದು ಬಿಸಿ ಟೀ ಕುಡಿದು ಹೊರಟರು. ಗಾರ್ಡ್ ನಗುತ್ತಿದ್ದ. ಹೇಳಲಿಲ್ಲವಾ ಸಾರ್ ನಾವು ಶನಿವಾರ ಭಾನುವಾರ ಇಲ್ಲಿ ಸಂತೆ! - ಅಂತ. ಕಾಡಿನಂಚಲ್ಲಿದ್ದ ದಾರಿಗೆ ಬಂದವರಿಗೆ ಅಲ್ಲಿನ ಲೋಕಲ್ ಬಸ್ಸು ಸಿಕ್ಕಿತು. ಹತ್ತಿ ಕೂತರೆ ಡ್ರೈವರ್ ತಾನೇ ಡೀಸೆಲ್ ಕುಡಿದ ಸ್ಪೀಡಿನಲ್ಲಿದ್ದ. ಘಟ್ಟ ಸುತ್ತಿ ಹರಿದ ರಸ್ತೆಯಲ್ಲಿ ಸುಂಯ್ಯನೆ ಸಾಗಿತ್ತು ಬಸ್ಸು. ಕಣ್ಣು ಹರಿದೆಡೆಯೆಲ್ಲ ಹಸಿರು.

ಒಂದೆರಡು ಗಂಟೆ ಪಯಣಿಸಿದ ಮೇಲೆ ಊರನಡುವೆ ಬಂದರು. ಅಲ್ಲಿಯ ಗೆಳೆಯರನ್ನು ಕಂಡು ಮಾತಾಡಿ ಅವರ ಗೆಳೆತನದ ಬೆಲ್ಲ ಸವಿದು, ನಗರದ ಗಡಿಬಿಡಿಯ ಬೇವು ತಿನ್ನುತ್ತಾ ಮತ್ತೆ ಅವರ ಊರಿಗೆ, ಮನೆಗೆ ವಾಪಸ್ಸಾಗುವಾಗ ಅವಳ ಕಾಲಿಗೆ ಚಪ್ಪಲಿ ಹಾಕಲು ಬರುತ್ತಿರಲಿಲ್ಲ. ಜಿಗಣೆ ಕಚ್ಚಿ ಕಚ್ಚೀ ಊದಿಕೊಂಡಿತ್ತು. ಡಾಕ್ಟರು ಸೂಜಿ ಚುಚ್ಚಿ, ಮಾತ್ರೆಯೆಲ್ಲ ಕೊಡಬೇಕಾಯಿತು. ವಿಷಯ ತಿಳಿದು ಬಂದ ಅವಳಮ್ಮ ನಕ್ಕರು. ಸುಮ್ಮನೆ ಕಾಡು ತಿರುಗುವುದು ಏತಕ್ಕೆ. ಅದು ಹೋಗಲಿ ತಿರುಗಿ ಬಂದ ಮೇಲೆ ಡಾಕ್ಟರ್ಯಾಕೆ ಬೇಕು. ಈ ನಂಜಿನ ಕಾಯಿ ತೇಯ್ದು ಕುಡಿದರಾಯಿತು. ಮತ್ತೊಂದು ಸ್ವಲ್ಪ ತೇದು ಕಾಲಿಗೆ ಹಚ್ಚಿದರಾಯಿತು. ಅಷ್ಟೇ.

ಅವಳಿಗೆ ಕಾಲು ತುರಿಸುತ್ತಿತ್ತು. ಆದರೂ ನಕ್ಕಳು. ಕಾಡಿನ ಸ್ವಚ್ಛ ಮೌನ ಮನಸ್ಸಿನಲ್ಲಿ ಇಡಿಇಡಿಯಾಗಿ ತುಂಬಿಕೊಂಡೇ ಇದ್ದುದರಿಂದ ಅಮ್ಮನ ಹತ್ತಿರ ಸಿಟ್ಟು ಮಾಡದೆ, ಅವನ ಹತ್ತಿರ ಸೆಡವು ತೋರದೆ ಇನ್ನಷ್ಟು ನಗೆಮುಗುಳು ಬಿರಿಯಿತು.

ಯುಗಾದಿಯ ಬೆಳಿಗ್ಗೆ ನೆನಪಿನ ದೀಪ ಹಚ್ಚಿ ಕೂತಿದ್ದಾಳೆ ಅವಳು.. ನೀಲಿ ಹಸಿರು ಬೆಳಕು.

ಅಡಿಟಿಪ್ಪಣಿ...
 
ಮೊನ್ನೆ ನಾವು ಗೆಳೆಯರು ಕೂತು ಮಾತನಾಡುವಾಗ ಒಬ್ಬ ಹಿರಿಯ ಅನುಭವೀ ಗೆಳೆಯರು ಹೀಗೆ ಹೇಳಿದರು. ನಾವು ಚಾರಣಾನುಭವಗಳನ್ನು ಬ್ಲಾಗಲ್ಲಿ , ವೆಬ್ಬಲ್ಲಿ ಮಾಧ್ಯಮದಲ್ಲಿ ಪೂರ್ಣ ವಿವರಗಳೊಂದಿಗೆ ಹಾಕುವುದರಿಂದ ಎಷ್ಟೋ ಸಲ ಸಾಮಾಜಿಕ ಬದ್ಧತೆಯಿಲ್ಲದವರು ಪರಿಸರದ ಬಗ್ಗೆ ಪ್ರೀತಿ ಇಲ್ಲದವರು ಅಲ್ಲಿ ಹೋಗಿ ಧಾಂಧಲೆ ಮಾಡಿ ಗಬ್ಬೆಬ್ಬೆಸಿ ಬರುತ್ತಾರೆ. ಹಾಗಾಗಿ ಜಾಗದ ವಿವರಗಳನ್ನ ಕೊಡದೆ ಇರುವುದು ಒಳಿತು. ಬೇಕಿದ್ದರೆ ಆಸಕ್ತಿಯಿರುವವರು ಬರೆದವರನ್ನ ನೇರವಾಗಿ(ಮೈಲ್) ಮೂಲಕ ವಿಚಾರಿಸಿಕೊಳ್ಳಬಹುದು. ಆಗ ಅವರ ವಿವರ ತಿಳಿದುಕೊಂಡು ನಾವು ತಿಳಿಸಬಹುದು. ನಮಗೆ ಪರಿಸರವನ್ನ ಅಂಗೈಯಲ್ಲಿಟ್ಟು ಜೋಪಾನ ಮಾಡುವುದಕ್ಕೇನೂ ಆಗುವುದಿಲ್ಲ ಆದರೂ ಹಾಳು ಮಾಡುವ ಕೆಲಸದಲ್ಲಿ ಭಾಗವಹಿಸದೆ ಇರೋದು ಒಳ್ಳೆಯದು ಅಂತ. ನನಗೆ ಅದು ನಿಜವೆನ್ನಿಸಿ ಈ ಬರಹ ಬರೆದಿದ್ದೇನೆ. ಅವರಿಗೆ ಕೃತಜ್ಞಳು.

(ಚಿತ್ರಗಳು-ಲೇಖಕಿಯದು)

ಪುಟದ ಮೊದಲಿಗೆ
 
Votes:  6     Rating: 4.5    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು