ಸೆಪ್ಟೆಂಬರ್ ೩೦, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಬೆನ್ನಿ ಬೆನ್ಯಾಮಿನ್ ‘ಆಡುಜೀವನ’ ಮಲಯಾಳಂ ಕಾದಂಬರಿಯ ಹದಿನೆಂಟನೇ ಕಂತು, ಅನುವಾದ:ಅಶೋಕ್ ಕುಮಾರ್    
ಡಾ. ಅಶೋಕ್ ಕುಮಾರ್
ಶುಕ್ರವಾರ, 2 ಮಾರ್ಚ್ 2012 (02:34 IST)
ಚಿತ್ರಗಳು: ವಿಷ್ಣು

ಕುರಿಗಳನ್ನು ನಡೆಸಿಕೊಂಡು ಹೋಗುವುದು ಅಷ್ಟೇನೂ ಪ್ರಯಾಸದ ಕೆಲಸವಲ್ಲ. ನೀವು ಸಿನಿಮಾಗಳಲ್ಲೆಲ್ಲ ನೋಡಿರುತ್ತೀರಿ. ಅವು ಒಂದರ ಜೊತೆಗಿನ್ನೊಂದು ಒತ್ತಾಗಿ ಸೇರಿ ಹಾಗೆಯೇ ಗುಂಪಾಗಿ ಹೋಗುತ್ತಿರುವುದನ್ನು. ಅವುಗಳನ್ನು ಮುನ್ನಡೆಸಲು ಒಂದು ’ತಲೆಕುರಿ’ ಇರುತ್ತದೆ. ಅದು ನಡೆಯುವ ದಾರಿಯಲ್ಲೆ ಹಿಂದಿನದೂ, ಅದರ ದಾರಿಯಲ್ಲಿ ಅದರ ಹಿಂದಿನದೂ ಅದನ್ನು ಹಿಂಬಾಲಿಸಿ ಆಮೇಲಿನದೂ ಹೋಗಿಬಿಡುತ್ತವೆ. ನಾವು ಒಂದು ಬದಿಯಿಂದ ಮೆಲ್ಲಗೆ ಸುಮ್ಮನೆ ಮನ್ನಡೆಸಿದರೆ ಸಾಕು ಅಷ್ಟೆ. ನಮ್ಮೊಡನೆ ಹೆಚ್ಚು ಹೊಂದಿಕೊಂಡಿರುವ ಒಂದು ಕುರಿಯನ್ನು ನಾವು ತಲೆಕುರಿಯನ್ನಾಗಿ ನಿಯೋಗಿಸುತ್ತೇವೆ. ಹೊಸದಾಗಿ ಬಂದ ಕುರಿಗಳನ್ನೂ ಕುರಿಮಂದೆಯನ್ನೂ ನಡೆಸಿಕೊಂದು ಹೋಗುವುದು ಅದರ ಉತ್ತರದಾಯಿತ್ವ. ನನ್ನ ಮಸರದಲ್ಲಿರುವ ಮೂರು ತಲೆಕುರಿಗಳಿಗೆ ನಾನು ಲಲಿತ, ಪದ್ಮಿನಿ, ರಾಗಿಣಿ ಎಂದು ಹೆಸರು ಕೊಟ್ಟಿದ್ದೆ.

ಆದರೆ ಈ ಮೇಕೆ ಆಡುಗಳನ್ನು ನಿಯಂತ್ರಿಸುವುದು ಸಾಧ್ಯವೇ ಇಲ್ಲ. ಒಂದು ನಮೂನೆ ಹುಚ್ಚು ಕೆರಳಿದ ಹಾಗೆಯೆ ಅದರ ನಡಿಗೆ, ಓಟ, ಎಲ್ಲವೂ. ಒಂದು ಎಡಕ್ಕೆ ನಡೆದರೆ ಇನ್ನೊಂದು ಬಲಕ್ಕೆ ಹೋಗುವುದು. ಒಂದೇ ಸಮಯದಲ್ಲಿ ಐದರಿಂದ ನೂರರಷ್ಟು ಆಡುಗಳೊಂದಿಗೆ ನಾನು ಹೊರಕ್ಕೆ ಹೋಗಬೇಕಾಗಿಬರುತ್ತಿತ್ತು. ಅಲ್ಲಾಹ್, ಅವಷ್ಟೂ ಈ ಹುಚ್ಚು ಹಿಡಿದ ಮೇಕೆಜಾತಿಗಳೇ ಆಗಿರುವುದನ್ನು ಒಮ್ಮೆ ಯೋಚಿಸಿ ನೋಡಿ. ನಾನು ಮೊದಲೇ ಯಾವಾಗಲೋ ಹೇಳಿದ್ದೆ ಅಂತ ಕಾಣುತ್ತೆ, ಅವುಗಳ ರೀತಿಗಳ ಬಗ್ಗೆ. ಕುರಿಗಳ ಹಾಗೆಯೇ ಆಡುಗಳೂ  ಸುಮಾರು ಆರು ಸಾವಿರ ವರ್ಷಗಳಿಂದಲೂ ಮನುಷ್ಯನ ಜೊತೆ ಬದುಕುತ್ತಿವೆಯಾದರೂ ಸಂದರ್ಭ ಸಿಕ್ಕಿದರೆ ತನ್ನ ಕಾಡು ಸ್ವಭಾವವನ್ನು ತೋರಿಸಿಬಿಡುವಂಥ ಬೇರಾವ ಪ್ರಾಣಿಯನ್ನೂ ಮನುಷ್ಯ ಸಾಕಬೇಕಾಗಿಬಂದಿಲ್ಲ. ಅವುಗಳಲ್ಲೂ ಹೋತಗಳನ್ನಂತೂ ಒಂದಿಷ್ಟೂ ನಿಯಂತ್ರಿಸಲಾಗದು. ಬೆಳೆದು ಮೈತುಂಬಿದ ಒಂದು ಗಂಡಾಡು ನನ್ನಷ್ಟೇ ಗಾತ್ರವಿರುವುದು. ಮಿಲನಕ್ರೀಡೆಗಾಗಿ ಹೆಣ್ಣಾಡುಗಳ ಗುಂಪಿನಲ್ಲಿ ಬಿಟ್ಟಿರುವಂಥವಾದರಂತೂ ಕೇಳುವುದೇ ಬೇಡ. ತಿಂದು ಕೊಬ್ಬಿ ಮದದಿಂದ ರತಿಕ್ರೀಡಿಸಿ ನಡೆಯುವ ಅವುಗಳಿಗೇನಾದರೂ ಸಿಟ್ಟು ಬಂದು ಬಿಟ್ಟರೆ ಆದರ ಕೆಚ್ಚನ್ನು ಒಮ್ಮೆ ನೋಡಲೇ ಬೇಕು.

ಒಂದು ದಿನ ನಡೆದಾಡಿಸಲು ಕರೆದೊಯ್ಯುವಾಗ ಒಂದನ್ನು ನಾನು ಹಿಂದಿನಿಂದ ಹೊಡೆದೆ. ನಿಜವಾಗಿಯೂ ಆನೆ ಕೆರಳುವ ಹಾಗೆ ಅದು ಒಮ್ಮೆ ತಿರುಗಿ ನಿಂತಿತು. ಅನಂತರ ಸರ್ವ ಶಕ್ತಿಯನ್ನೂ ಶೇಖರಿಸಿ ಮೂಗು ಸಿಂಡರಿಸಿತು. ಮೂಗಿನಿಂದ ಹಬೆ ಹರಡುವುದನ್ನು ನಾನು ಕಂಡೆ. ಮರುಕ್ಷಣದಲ್ಲೇ, ನೆಗೆದು ನುಣುಚಿಕೊಳ್ಳಲು ನನಗೊಂದು ಅವಕಾಶವನ್ನೂ ಕೊಡದೆ, ಏದುತ್ತಾ ಬಂದು ನನ್ನ ಎದೆಗೆ ಸರಿಯಾಗಿ ಒಂದು ಬಾರಿ ಗುದ್ದಿತು. ಸಾವಿರ ಕಿಲೋ ಭಾರದ ಒಂದು ಕಬ್ಬಿಣದ ರಾಶಿ ಬಂದು ಎದೆಗೆ ತಾಗಿದ ಹಾಗೆ ನನಗೆನಿಸಿತು. ಹಿಂದಿ ಸಿನಿಮಾದ ನಾಯಕನ ಹೊಡೆತ ತಿಂದು ವಿಲನ್ ಎಗರಿ ಬೀಳುವ ಹಾಗೆ ಹತ್ತು ಮೀಟರ್ ದೂರಕ್ಕೆ ಹಾರಿಬಿದ್ದುದಷ್ಟೇ ನನಗೆ ನೆನಪಿರುವುದು. ಆ ಕ್ಷಣವೇ ನಾನು ನನ್ನ ಬೋಧೆ ಕಳೆದುಕೊಂಡೆ. ಬಳಿಕ ಎಷ್ಟು ಹೊತ್ತು ನಾನು ಅಲ್ಲಿ ಬಿದ್ದಿದ್ದೆ ಎಂದು ನನಗೆ ಜ್ಞಾಪಕವಿಲ್ಲ. ಆಮೇಲೆ ಕಣ್ಣು ತೆರೆದಾಗ ಅರ್‌ಬಾಬ್ ನನ್ನ ಎದುರಿಗೆ ಕುಳಿತಿದ್ದ. ನಾನು ಕಣ್ತೆರೆದೊಡನೆಯೆ ಅರ್‌ಬಾಬ್ ಒಂದಿಷ್ಟು ಬಿಸಿನೀರನ್ನು ನನ್ನ ಮುಖಕ್ಕೆ ಸುರಿದ ಮತ್ತು ’ಹಿಮಾರ್’ ಎಂದು ಕೂಗುತ್ತಾ ಏನೇನೋ ಕಿರುಚಾಡಿದ.

ನಾನು ನೋಡಿದಾಗ ಆಡುಗಳು ಹೆಚ್ಚು ಕಮ್ಮಿ ಐದು ಕಿಲೋಮೀಟರ್ ಸುತ್ತಳತೆಯಲ್ಲಿ ಚದುರಿ ಅಲೆದಾಡುತ್ತಿರುವುದನ್ನು ಕಂಡೆ. ಹೇಗೋ ಸಾವರಿಸಿಕೊಂಡು ನಾನು ಮೇಲೆದ್ದೆ. ನನ್ನ ಎಡಗೈಯಲ್ಲಿ ಬಹಳ ನೋವಿನ ಅನುಭವವಾಗುತ್ತಿತ್ತು. ತುಂಬಾ ನೋವು ಎಂದರೆ ಸಹಿಸಲಾಗದಷ್ಟು ನೋವು. ಬಹಳ ಊತವೂ ಇತ್ತು. ನನ್ನ ಕೈಮೂಳೆ ಮುರಿದಿದೆ ಅಂತ ಕಾಣುತ್ತೆ ಎಂದು ನಾನು ಅರ್‌ಬಾಬ್‌ಗೆ ಹೇಳಿದೆ. ಆತ ಬೆಲ್ಟ್ ಬಿಚ್ಚಿ ನನಗೆ ಹೊಡೆದ. ಬೇಗ ಹೋಗಿ ಆಡುಗಳನ್ನೆಲ್ಲ ಕರೆದುಕೊಂಡು ಬಾ ಎಂದು ಆರ್ಭಟಿಸಿದ. ಒಂದು ಆಡೇನಾದರೂ ಕಾಣೆಯಾದರೂ ಇವತ್ತು ನಿನಗೆ ಗತಿ ಕಾಣಿಸಿಬಿಡುತ್ತೇನೆ ಎಂದು ಅರ್‌ಬಾಬ್ ನನಗೆ ತಾಕೀತು ನೀಡಿದ.

ನೋವಿನಿಂದ ಸಿಡಿಯುವ ಕೈಯೊಂದಿಗೆ ನಾನು ಮರುಭೂಮಿಯುದ್ದಕ್ಕೂ ಓಡಿದೆ. ಅನಿರೀಕ್ಷಿತವಾಗಿ ಲಭಿಸಿದ ಸ್ವಾತಂತ್ರ್ಯವನ್ನು ಆಡುಗಳು ಆದಷ್ಟೂ ಆಸ್ವಾದಿಸುತ್ತಿದ್ದವು. ಆಡುಗಳು ತಮ್ಮ ವನ್ಯವಾದ ಎಲ್ಲಾ ಸ್ವಭಾವಗಳನ್ನೂ ಹೊರಕ್ಕೆ ತೆರೆದು ಬಿಟ್ಟಾಗಿತ್ತು. ಅಸ್ವಾತಂತ್ರ್ಯದಲ್ಲಿ ನರಳಿಬಿದ್ದಿರುವ ಒಂದು ಜನತೆ ದಿಢೀರನೆ ಕ್ರಾಂತಿಯಲ್ಲಿ ಎಚ್ಚರಗೊಳ್ಳುವ ಹಾಗೆಯೇ ಇದೂ ಸಹ. ಆಮೇಲೆ ಯಾವುದೇ ನಿಯಂತ್ರಣಕ್ಕೂ ಬಾರದು. ಒಂದು ಆಡನ್ನು ಒಂದು ಕಡೆಗೆ ಅಟ್ಟಿಸಿಕೊಂಡು ಹೋಗುವಷ್ಟರಲ್ಲಿ ಅಲ್ಲಿ ನಿಂತಿರುವ ಆಡು ಇನ್ನೊಂದು ಕಡೆಗೆ ಓಡಿಬಿಟ್ಟಿರುತ್ತದೆ. ಅದನ್ನು ಹಿಡಿಯಲೆಂದು ಅದರ ಹಿಂದೆಯೇ ಓಡುವಷ್ಟರಲ್ಲಿ ಮೊದಲನೆಯದು ತನ್ನ ಪಾಡಿಗೆ ಹೋಗಿಬಿಟ್ಟಿರುತ್ತದೆ. ಎಲ್ಲವನ್ನೂ ಒಟ್ಟಿಗೆ ಸೇರಿಸಿ ಮಸರಕ್ಕೆ ತಲುಪಿಸುವುದು ಸಾಧ್ಯವಿಲ್ಲವೆಂದು ಮೊದಲ ಕೆಲವು ಪ್ರಯತ್ನಗಳ ಬಳಿಕ ನನಗೆ ಮನವರಿಕೆಯಾಯಿತು. ಆಗ ಕೈಗೆ ಸಿಗುವ ಕೆಲವನ್ನು ಕರೆದುಕೊಂಡು ನಾನು ಮಸರಕ್ಕೆ ಓಡುತ್ತಿದ್ದೆ. ಅವುಗಳನ್ನು ಅಲ್ಲಿ ಕೂಡಿಹಾಕಿ ತಿರುಗಿ ಮರುಭೂಮಿಗೆ ಓಡುತ್ತಿದ್ದೆ. ಆಮೇಲೆ ಸಿಗುವ ಐದೋ ಹತ್ತೋ ಆಡುಗಳನ್ನು ಕರೆದುಕೊಂಡು ಪುನಃ ಮಸರಕ್ಕೆ ಬರುತ್ತಿದ್ದೆ. ತಿರುಗಿ ಓಡುವೆ. ಮಸರದಿಂದ ಸುಮಾರು ಎರಡು ಕಿಲೋಮೀಟರ್‌ನಷ್ಟಾದರೂ ದೂರದಲ್ಲಿ ನಿಂತಿರುತ್ತಿತ್ತು ಮೊದಲನೆ ಆಡು. ಅಲ್ಲಿಂದಾಚೆಗೆ ಐದು ಕಿ.ಮೀ. ವ್ಯಾಪ್ತಿಯಲ್ಲಿ ಅವು ಹಾಗೇ ಚದುರಿ ನಡೆದಿವೆ. ಈ ದೂರವಾದ ದೂರವನ್ನೆಲ್ಲಾ ನಾನು ಎಷ್ಟು ಸಲ ಓಡಿ ಕ್ರಮಿಸಬೇಕಾಯಿತೆಂದು ಖಚಿತವಿಲ್ಲ. ನಾನು ಸತ್ತು ಹೋಗುವಷ್ಟು ಸುಸ್ತಾಗಿದ್ದೆ ಎಂದು ಮಾತ್ರ ನನ್ನ ನೆನಪಿನಲ್ಲಿದೆ. ನಡುವೆ ಯಾವಾಗಲೋ ಸ್ವಲ್ಪ ನೀರು ಕುಡಿಯುವುದಕ್ಕಾಗಿ ನಾನು ನಿಂತಾಗ ಅರ್‌ಬಾಬ್ ನನ್ನನ್ನು ಸಾಕಷ್ಟು ಹೊಡೆದ. ನೀರಿನ ಕಪ್ಪನ್ನು ಕಿತ್ತುಕೊಂಡು ದೂರಕ್ಕೆಸೆದ. ದಾಹದಿಂದ ಸಿಡಿಯುತ್ತಿದ್ದ ಬರಡಾದ ನಾಲಿಗೆಯೊಂದಿಗೆ ನಾನು ಮತ್ತೂ ಏದುಸಿರಿಡುತ್ತಾ ಓಡಿದೆ.

ಆ ಓಟಗಳ ಮಧ್ಯದಲ್ಲೆಲ್ಲಾ ನಾನು ಆಕಾಶಗಳ ಕಡೆಗೆ ಸಂಕಟದಿಂದ ನೋಡಿದೆ. ಅಲ್ಲಾಹ್....ಅಲ್ಲಾಹ್....ಎಂದು ರೋದಿಸುತ್ತಿದ್ದೆ. ಅಲ್ಲಿ ದೂರದಲ್ಲಿ ಆಡುಗಳು ಚೆಲ್ಲಾಪಿಲ್ಲಿಯಾಗಿ ನಡೆಯುವುದು ನನಗೆ ಕಾಣುತ್ತಿದೆ. ಆದರೆ ಅಲ್ಲಿಯ ತನಕ ಹೋಗಿ ತಲುಪಲು ನನಗೆ ಸಾಧ್ಯವಾಗಬೇಡವೇ....ಗಂಟಲು ಬಿರಿಯುವಂಥ ದಾಹ, ಎದೆ ಉರಿಯುವಂಥ ಸೆಕೆ, ಬಳಲಿ ಆನೆಕಾಲು ರೋಗ ಬಡಿದಂತಾಗಿರುವ ಕಾಲ್ಗಳು, ನೋವು ಕೊರೆದು ನುಗ್ಗುತ್ತಿರುವ ಕೈ...ಬೊಬ್ಬೆ ಹೊಡೆಯುತ್ತ ಆಕ್ರಂದನ ಮಾಡುತ್ತ ನಾನು ಆಡುಗಳ ಹಿಂದೆ ಓಡಿದೆ. ಆದರೆ ಧಗಧಗಿಸುವ ಸೂರ್ಯನ ತೀಕ್ಷ್ಣತೆಯನ್ನುಳಿದು ಬೇರೆಲ್ಲವೂ ಆಕಾಶಗಳಲ್ಲಿ ನಿಶ್ಚಲವಾಗಿದ್ದವು.

ಸುಮಾರು ಮಧ್ಯಾಹ್ನ ಕಳೆಯುವಷ್ಟರ ವೇಳೆಗೆ ನಾನು ಎಲ್ಲಾ ಆಡುಗಳನ್ನೂ ಮಸರಕ್ಕೆ ತಲುಪಿಸಿದೆ. ಒಂದು ತೊಟ್ಟು ನೀರು ಕುಡಿಯದೆ, ಒಂದಿಷ್ಟು ವಿಶ್ರಮಿಸದೆ, ಆ ಉರಿಯುವ ಬಿಸಿಲಿನಲ್ಲಿ ಒಬ್ಬ ಮನುಷ್ಯನಿಗೆ ಹೇಗೆ ಅಷ್ಟು ಹೊತ್ತು ಸಹಿಸಿ ನಿಲ್ಲಲು ಸಾಧ್ಯವಾಯಿತೆಂದು ನನಗೇ ಆ ಬಳಿಕ ಹಲವು ಬಾರಿ ಆಶ್ಚರ್ಯ ಉಂಟಾಗಿದೆ. ಯಾವ ಕಷ್ಟತೆ ಬವಣೆಗಳಲ್ಲೂ ಬದುಕಲೇಬೇಕೆಂಬ ಅದಮ್ಯವಾದ ಬಯಕೆ, ಅಲ್ಲಾಹುನಲ್ಲಿರುವ ಅನಂತವಾದ ವಿಶ್ವಾಸ ಇವೆರಡೇನೆ ನನ್ನನ್ನು ಆಗ ಬದುಕಿಸಿಯುಳಿಸಿದ್ದು. ಕೊನೆಯ ಆಡನ್ನೂ ಮಸರಕ್ಕೆ ತಲುಪಿಸಿ ನಾನು ಮಂಚಕ್ಕೆ ಬಂದು ಬಸವಳಿದು ಬಿದ್ದುಬಿಟ್ಟೆ.

ಅರ್‌ಬಾಬ್ ಹತ್ತಿರ ಬಂದು ಕುಳಿತು ಸ್ವಲ್ಪ ನೀರನ್ನು ನನ್ನ ಬಾಯಿಗೆ ಹನಿಸಿದ. ನಾನು ಇನ್ನೂ ನೀರು ನೀರು ಎಂದು ಯಾಚಿಸಿ ಬಡಬಡಿಸಿದೆ. ನೀವೆಲ್ಲಾ ಮಹಾ ಧಾರಾಳಿಗಳು. ನೀರನ್ನು ಹೇಗೆ ಜತನದಿಂದ ಬಳಸಬೇಕೆಂದು ತಿಳಿಯದ ಧಾರಾಳಿಗಳು.... ಎಂದು ಅರ್‌ಬಾಬ್ ಹೇಳುವುದನ್ನು ನಾನು ಆ ಅರೆಮಂಪರಿನಲ್ಲೂ ಕೇಳಿದೆ. ಮತ್ತೆ ನನಗೆ ಪ್ರಜ್ಞೆ ಇಲ್ಲವಾಯಿತು. ರಾತ್ರಿ ಮತ್ತೆ ಯಾವಾಗಲೋ ನಾನು ಕಣ್ಣು ತೆರೆದೆ. ನನ್ನ ಕೈ ನೀರೂರಿ ಅತಿಯಾಗಿ ಊದಿಕೊಂಡಿತ್ತು. ವೇದನೆಯಾದರೋ ಅಸಹನೀಯವಾಗಿತ್ತು. ನನ್ನ ಕೈಮೂಳೆ ನಿಜವಾಗಿಯೂ ಮುರಿದಿದೆ ಎಂದು ನನಗೆ ಖಾತರಿಯಾಯಿತು. ಆಡಿನ ಗುದ್ದು ಬಿದ್ದು ನನ್ನ ಎದೆಗೂಡು ಕದಡಿ ಹೋದ ಹಾಗೆ ನೋಯುತ್ತಲಿತ್ತು.

ನೀರಡಿಕೆಯಿಂದ ಗಂಟಲು ಸಿಡಿಯುತ್ತಿತ್ತು. ನಾನು ತೆವಳುತ್ತ ಕುಂಟುತ್ತ ಮೇಲೆದ್ದು ಹೋಗಿ ತುಸು ನೀರನ್ನು ತೆಗೆದು ಕುಡಿದೆ. ನೋವನ್ನು ಸಹಿಸಲಾಗದೆ ನಾನು ಅರ್‌ಬಾಬ್‌ನ ಗುಡಾರದ ಸನಿಹಕ್ಕೆ ಹೋದೆ. ಇಷ್ಟು ಹೊತ್ತು ಸುಖದಲ್ಲಿ ಮಲಗಿ ನಿದ್ದೆ ಹೊಡೆದೆ ಎಂದು ಬಯ್ಯುತ್ತಾ ಅರ್‌ಬಾಬ್ ನನಗೆ ಎರಡು ಮೂರು ಖುಬೂಸ್ ಎಸೆದು ಕೊಟ್ಟ. ನನಗೆ ಹಸಿವೂ ತಾಳಲಾಗದಷ್ಟಿತ್ತು. ತಣ್ಣೀರಿನಲ್ಲಿ ಅದ್ದಿ ನಾನು ಖುಬೂಸನ್ನು ಪೂರಾ ಅತ್ಯಾಸೆಯಿಂದ ತಿಂದು ಮುಗಿಸಿದೆ. ಸಹಿಸಲಾಗದಂಥ ನೋವಿನಿಂದಾಗಿ ಆ ರಾತ್ರಿಯಿಡೀ ನನಗೆ ನಿದ್ರಿಸಲಾಗಲೇ ಇಲ್ಲ. ಅದರ ನಡುವೆಯೆ ನಾನು ಹಲವು ಬಾರಿ ಅರ್‌ಬಾಬ್‌ನ ಡೇರೆಯ ಮುಂದೆ ಹೋಗಿ ನಿಂತು ರೋದಿಸಿದೆ. ನನ್ನನ್ನು ಯಾವುದಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ನನ್ನ ಕೈ ಮುರಿದಿದೆ ಎಂದು ಅಂಗಲಾಚಿ ಕೇಳಿಕೊಂಡೆ. ಆದರೆ ಅರ್‌ಬಾಬ್ ಅದನ್ನು ಕಿವಿಗೆ ಬಿದ್ದ ಹಾಗೆಯೂ ತೋರ್ಪಡಿಸಲಿಲ್ಲ. ಹೊತ್ತು ಬೆಳ್ಳಗಾದಾಗ ಅರ್‌ಬಾಬ್ ಒಂದು ಹಾಲಿನ ಪಾತ್ರೆಯೊಂದಿಗೆ ನನ್ನ ಮಂಚದ ಪಕ್ಕ ಬಂದು ನನ್ನನ್ನು ತಟ್ಟಿ ಎಬ್ಬಿಸಿದ. ಬೇಗನೆ ಎದ್ದು ಹೋಗಿ ಆಡುಗಳ ಹಾಲು ಕರೆಯಲು ಹೇಳಿದ. ನಾನು ನನ್ನ ಕೈಯನ್ನು ತೋರಿಸಿದೆ. ಅದಕ್ಕೆ ಉತ್ತರವೆಂಬಂತೆ ನನ್ನ ತಲೆಯ ಮೇಲೆ ಒಮ್ಮೆ ಬಲವಾಗಿ ಮೊಟಕಿಬಿಟ್ಟ ಅರ್‌ಬಾಬ್.

ಎದೆಯಲ್ಲಿನ ಯಾತನೆ ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಕೈಯಂತೂ ಅಷ್ಟರಲ್ಲಾಗಲೇ ಆನೆಕಾಲು ರೋಗ ಬಂದಹಾಗೆ ಬೀಗಿತ್ತು. ಎದೆಯಲ್ಲೂ ಬಾವು ಬಂದಿತ್ತು. ಬೇನೆಯಂತೂ ಸಹಿಸಲಸಾಧ್ಯವಾಗಿತ್ತು. ಕೈಲಾಗದ ಕೈಯೊಂದಿಗೆ ನಾನು ನಾನು ಕುಂಟುತ್ತಾ ಮಸರಕ್ಕೆ ಸಾಗಿದೆ. ಒಂದು ಕೈಯಿಂದ ನಾನು ಹೇಗೆ ಆಡಿನ ಹಾಲು ಕರೆಯಲಿ....? ಅಷ್ಟು ಎಗರಾಟವಿಲ್ಲದ ಆಡುಗಳಾದರೆ ಪಾತ್ರೆಯನ್ನು ಕೆಳಗಿರಿಸಿ ಎರಡು ಕೈಗಳಿಂದಲೂ ವೇಗವಾಗಿ ಹಾಲು ಕರೆಯುವುದು ನನ್ನ ರೂಢಿ. ಭಾರಿ ಎಗರಾಡುವ ಆಡುಗಳಾದರೆ ಒಂದು ಕೈಯಿಂದ ಬೆನ್ನು ನೀವಿಕೊಡಬೇಕು. ಈ ಬೇನೆಯ ಕೈಯನ್ನಿಟ್ಟುಕೊಂಡು ನಾನು ಏನು ಮಾಡಲಿ....? ಆಡೇನಾದರೂ ಒಮ್ಮೆ ಎಗರಿತು ಅಂದರೆ ಅಲ್ಲಿಯತನಕ ಒಂಟಿ ಕೈಯಿಂದ ಕರೆದ ಹಾಲಷ್ಟೂ ಬಿದ್ದು ಉರುಳಿಹೋಗುವುದು ಖಚಿತ. ಬಂದದ್ದು ಬರಲಿ ಎಂದುಕೊಂಡು ಅಲ್ಲಾಹುವಿಗೆ ಪ್ರಾರ್ಥನೆ ಸಲ್ಲಿಸಿ ನಾನು ಮಸರಕ್ಕೆ ಹೋದೆ. ಮೊದಲಿಗೆ ನನ್ನ ಕಣ್ಣಿಗೆ ಬಿದ್ದುದು ಹಸಿರು ಹುಲ್ಲುಗಾತಿ ರಮಣಿ ಎಂದು ನಾನು ಹೆಸರಿಟ್ಟಿರುವ ಆಡು. ಆ ಆಡಿಗೆ ಆ ಹೆಸರು ಇಡಲು ಕಾರಣವೇನು ಎಂಬುದು ಒಂದು ಕತೆಯೇ. ಇನ್ನೊಮ್ಮೆ ಯಾವಾಗಾದರೂ ಆ ಕತೆಯನ್ನು ನಾನು ನಿಮಗೆ ಹೇಳುತ್ತೇನೆ.

ನಾನು ಹುಲ್ಲುಗಾತಿ ರಮಣಿಯ ಕಣ್ಣಲ್ಲಿ ನೋಡಿ ಹೇಳಿದೆ. ರಮಣಿ ನನಗೆ ಸ್ವಲ್ಪ ಕೂಡ ನನ್ನ ಕೈಯನ್ನು ಎತ್ತಲಾಗುತ್ತಿಲ್ಲ. ನಿನ್ನ ಒಬ್ಬ ಮಿಂಡ ಮಾಡಿದ ಕೆಲಸ ಇದು. ಆದರೆ ಅರ್‌ಬಾಬ್‌ಗೆ ಮುಂಜಾನೆ ಹಾಲು ಕುಡೀದೆ ಇರಲಾಗದಲ್ಲ. ನನ್ನ ಕೈ ಮೂಳೆ ಮುರಿದಿದೆಯೇ ನನ್ನ ತಲೆಯ ಮೇಲೆ ಆಕಾಶ ಜರಿದು ಬಿದ್ದಿದೆಯೇ ಎಂಬುದಾವುದೂ ಅರ್‌ಬಾಬ್‌ನನ್ನು ಕಾಡುವ ಸಮಸ್ಯೆಯಲ್ಲ. ಆತನಿಗೆ ಮುಂಜಾನೆ ಹಾಲು ಕುಡಿಯ ಬೇಕು, ಅದನ್ನು ನಾನು ಕರೆದು ಕೊಡಬೇಕು. ನೀನು ಸಹಕರಿಸಿದರೆ ಇವತ್ತು ನಾನು ಅರ್‌ಬಾಬ್‌ನ ಬಾಕಿಯಿರುವ ಹೊಡೆತದಿಂದ ಪಾರಾಗುತ್ತೇನೆ. ನನ್ನ ಇಂದಿನ ವಿಧಿ ನಿನ್ನ ಕೈಯಲ್ಲಿದೆ. 

ನಿಜ ಹೇಳಬೇಕೆಂದರೆ ಕೆಲವು ಸಂದರ್ಭಗಳಲ್ಲಿ ಆಡುಗಳಿಗೆ ಮನುಷ್ಯರಿಗಿಂತಲೂ ಚೆನ್ನಾಗಿ ವಿಷಯಗಳು ಅರ್ಥವಾಗುತ್ತವೆ ಎಂದು ನನಗೆ ಅನ್ನಿಸಿದ್ದಿದೆ. ಅದೇನೇ ಇರಲಿ ಅವತ್ತು ರಮಣಿ ನನಗೋಸ್ಕರ ಅಲುಗಾಡದೆ, ಎಗರಾಡದೆ ನಿಂತಿತು. ಹೇಗೋ ಒಟ್ಟಿನಲ್ಲಿ ನಾನಂದು ಅರ್‌ಬಾಬ್‌ಗೆ ಅಗತ್ಯವಿರುವಷ್ಟು ಹಾಲನ್ನು ಕರೆದು ಗುಡಾರದ ಮುಂದೆ ತೆಗೆದುಕೊಂಡು ಹೋಗಿ ಇರಿಸಿ ಕೊಟ್ಟೆ. ಕುಡಿಯೆಲೇ ಹಂದಿಯೇ, ಆಸೆ ತೀರುವಷ್ಟು ಕುಡಿ....ನಾನು ಮನಸ್ಸಿನಲ್ಲೇ ಗಟ್ಟಿಯಾಗಿ ಶಪಿಸಿದೆ.

ಹಾಲನ್ನು ಗುಳುಂಕರಿಸಿದ ಮೆಲೆ ಅರ್‌ಬಾಬ್ ಮತ್ತೆ ನನ್ನ ಬಳಿಗೆ ಬಂದ. ಬೇಗ ಹೋಗಿ ಮರಿಗಳಿಗಾಗಿ ಹಾಲನ್ನು ಕರೆದುತರುವಂತೆ ಹೇಳಿದ. ನನಗೆ ತ್ರಾಣವೇ ಇರಲಿಲ್ಲ. ಅದನ್ನು ನಾನು ಅರ್‌ಬಾಬ್‌ಗೆ ತೆರೆದು ಹೇಳಿದೆ. ನನಗೆ ಆಗೋಲ್ಲ. ಆಗೋಲ್ಲ. ಆಗೋಲ್ಲಾ!! ನಾನು ನಿಂತು ಕಿರುಚುತ್ತಿದ್ದೆ ಎಂದು ಈಗ ನನಗನ್ನಿಸುತ್ತಿದೆ. ನನ್ನ ಆ ಭಾವವ್ಯತ್ಯಾಸವನ್ನು ಅರ್‌ಬಾಬ್ ಮೊದಲ ಬಾರಿ ಕಾಣುತ್ತಿದ್ದನು. ಆತ ಖಂಡಿತವಾಗಿಯೂ ದಂಗಾಗಿ ಬಿಟ್ಟ. ಬೆನ್ನಿಗೆ ಬೀಳಲಿರುವ ಬೆಲ್ಟಿನ ಏಟನ್ನು ನಿರೀಕ್ಷಿಸುತ್ತ ನಾನು ಹೋಗಿ ಮಂಚದಲ್ಲಿ ಬೋರಲಾಗಿ ಮಲಗಿಕೊಂಡೆ. ಅರ್‌ಬಾಬ್ ನನ್ನನ್ನು ಕೊಂದಾನು. ಕೊಲ್ಲಲಿ. ಅಲ್ಲಿಗೆ ತೀರುತ್ತದಲ್ಲ ಈ ಕಷ್ಟ ಕೋಟಲೆಗಳು. ಮರಣವನ್ನು ಸ್ವೀಕರಿಸಲು ಸಿದ್ಧವಾಗಿರುವವನಿಗೆ ಮತ್ತೇನು ಭಯ. ಅಲ್ಲಾಹ್, ನಾನು ಎಂದಿಗೂ ಸ್ವಯಂ ಸಾಯುವುದಿಲ್ಲ ಎಂದು ನಿನ್ನೊಡನೆಯೂ ನಿನ್ನ ನಿಯಮದೊಡನೆಯೂ ಸತ್ಯ ಪ್ರಮಾಣ  ಮಾಡಿದ್ದೆ. ಆದರೆ ಅರ್‌ಬಾಬ್‌ಗೆ ನನ್ನನ್ನು ಕೊಲ್ಲಲು ನಾನೇ ಬಿಟ್ಟು ಕೊಡುವುದರಲ್ಲಿ ನಿನಗೆ ಆಕ್ಷೇಪಣೆಯಿಲ್ಲವಷ್ಟೇ. ನನ್ನ ಪುತ್ರನನ್ನು ಕಾಣುವ ಯೋಗ ನನಗಿಲ್ಲ. ಪರವಾಗಿಲ್ಲ. ನನಗೆ ಸಂಕಟವಿಲ್ಲ. ಅರ್‌ಬಾಬ್‌ನ ಕೈಯಿಂದ ಸಾಯಲು ನೀನು ನನ್ನನ್ನು ಅನುಮತಿಸು. ಇನ್ನು ಈ ವೇದನೆಯಲ್ಲಿ ಮುಂದುವರಿಯಲು ನನ್ನಿಂದಾಗದು.  

ಆದರೆ ನಾನು ಅಂದುಕೊಂಡಂತೆ ಮತ್ತೆ ಅರ್‌ಬಾಬ್ ನನ್ನ ಬಳಿಗೆ ಬರಲೇ ಇಲ್ಲ. ಮಸರದೊಳಗೆ ರೂಢಿಯ ಕ್ರಮ ತಪ್ಪಿದುದರ ಒಂದು ಕೋಲಾಹಲವನ್ನು ಆಡುಗಳು ಶುರು ಮಾಡಿಕೊಂಡಿದ್ದವು. ಅವು ಹಾಗೇನೆ. ಶಿಸ್ತಿನಲ್ಲಿ ಜೀವಿಸುವಂತಹವು. ಯಾವುದಾದರೊಂದು ಕ್ರಮ ತಪ್ಪಿದರೆ ಎಲ್ಲವೂ ಅಧ್ವಾನವಾಗುವುದು. ಎಲ್ಲವೂ ಹೋಗಿ ಸಾಯಲಿ. ನನಗೇನಾಗಬೇಕಾಗಿದೆ. ನಾನು ಮಿಸುಕಾಡಲೂ ಹೋಗಲಿಲ್ಲ.

ಸ್ವಲ್ಪ ಹೊತ್ತಾದಾಗ ದೊಡ್ಡ ಅರ್‌ಬಾಬ್ ಗಾಡಿಯಲ್ಲಿ ಬಂದದ್ದನ್ನು ನಾನು ಅರಿತೆ. ನಾನು ಗಮನ ಕೊಡಲೇ ಇಲ್ಲ. ಅವರು ತಂತಮ್ಮಲ್ಲಿ ಏನೇನೋ ಮಾತನಾಡಿದರು. ಆ ಬಳಿಕ ಅರ್‌ಬಾಬ್ ನನ್ನ ಬಳಿಗೆ ಬಂದ. ನನ್ನ ಕೈ ಎತ್ತಿ ಹಿಡಿದು ಪರೀಕ್ಷಿಸಿದ. ಊತದ ಮೇಲೆ ಸವರಿ ನೋಡಿದ. ಧಗಧಗಿಸುವ ನೋವಿನಿಂದ ನಾನು ಅರಚಿ ರೋದಿಸಿದೆ. ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ನಾನು ಅರ್‌ಬಾಬ್‌ನೊಡನೆ ಅಂಗಲಾಚಿದೆ. ಆದರೆ ಅರ್‌ಬಾಬ್ ಕೇಳಿಸಿದ ಹಾಗೆ ತೋರ್ಪಡಿಸಿಕೊಳ್ಳದೆ ಗಾಡಿಯನ್ನೇರಿ ಎಲ್ಲಿಗೋ ಹೋದ. ನಾನು ಮಂಚದಲ್ಲೇ ಮಲಗಿದೆ. ಸ್ವಲ್ಪ ಹೊತ್ತಾದ ಮೇಲೆ ಅರ್‌ಬಾಬ್ ಮರಳಿ ಬಂದ. ಕೈಯಲ್ಲಿ ಏನೋ ಕೆಲವು ಹಸಿರೆಲೆ ಮದ್ದುಗಳಿದ್ದವು. ಅವನ್ನು ಒಂದು ಪಾತ್ರೆಯಲ್ಲಿ ಹಾಕಿ ಜಜ್ಜಿ ನನ್ನ ಕೈಯಮೇಲೆ ಬಾವು ಬಂದಿದ್ದಲ್ಲೆಲ್ಲ ಉಜ್ಜಿ ಲೇಪಿಸಿದ. ಬಳಿಕ ಆದಿವಾಸಿಗಳೆಲ್ಲ ಮಾಡುವ ಹಾಗೆ ತುಂಬಾ ಬಟ್ಟೆ ಮತ್ತು ದಬ್ಬೆಗಳನ್ನು ತೆಗೆದು ಕೈಗೆ ಸೇರಿಸಿ ಬಿಗಿಯಾಗಿ ಸುತ್ತಿ ಕಟ್ಟಿದ. ನನ್ನ ಎದೆಯ ಮೇಲಿನ ಊತವನ್ನೂ ನಾನು ಅರ್‌ಬಾಬ್‌ಗೆ ತೋರಿಸಿದೆ. ಅರ್‌ಬಾಬ್ ಅಲ್ಲೂ ನನಗೆ ಔಷಧಿ ಹಚ್ಚಿ ಕೊಟ್ಟನು. ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀರಾ ಎಂದು ಆಗೆಲ್ಲವೂ ನಾನು ಅರ್‌ಬಾಬ್‌ನೊಡನೆ ಆರ್ತಶಬ್ದದಿಂದ ಕೇಳುತ್ತಲೇ ಇದ್ದೆ. ಏನೂ ಪರವಾಗಿಲ್ಲ. ಬೇಗ ಮಾಯುತ್ತದೆ ಎಂಬುದೇ ಆಗೆಲ್ಲ ಅರ್‌ಬಾಬ್‌ನ ಉತ್ತರವಾಗಿತ್ತು. ನನಗೆ ಅದರಲ್ಲಿ ಏನೇನೂ ನಂಬಿಕೆ ಬರಲಿಲ್ಲ. ನನ್ನ ಕೈ ಹೆಚ್ಚುಹೆಚ್ಚು ಬಾವು ಬಂದು ಬೀಗಿ ಕೊಳೆತು ಕೊನೆಗೆ ಅದನ್ನು ಕತ್ತರಿಸಿ ತೆಗೆಯಬೇಕಾಗುವುದೆಂದೆ ನಾನು ಭಯಪಟ್ಟೆ.

ಅರ್‌ಬಾಬ್ ನನಗೆ ಎರಡು ಮೂರು ಖುಬೂಸ್ ತಂದು ಕೊಟ್ಟ. ಅತಿ ಬಯಕೆಯಿಂದ ನಾನು ಅವನ್ನು ನೀರಿನಲ್ಲಿ ಅದ್ದಿ ತಿಂದು ಮುಗಿಸಿದೆ. ಈಗಲೇ ಬಹಳ ತಡವಾಯಿತು, ಆಡುಗಳನ್ನು ನಡೆದಾಡಿಸಲು ಕರೆದುಕೊಂಡು ಹೋಗು ಎಂದು ಅರ್‌ಬಾಬ್ ಆಣತಿಯಿತ್ತ. ಮತ್ತೆ ವಿರೋಧಿಸಿ ಏನನ್ನೂ ಹೇಳಬೇಕೆಂದು ನನಗೆ ಅನ್ನಿಸಲಿಲ್ಲ. ಒಂಟಿಕೈಯನ್ನು ಹೊತ್ತು ನಾನು ಮಸರಕ್ಕೆ ಓಡಿದೆ.

ಮಧ್ಯಾಹ್ನವಾಗುವಷ್ಟರಲ್ಲಿ ಕೈಯ ನೋವು ನಿಧಾನವಾಗಿ ಹಗುರಾಗಿ ಇಲ್ಲವಾಗುವುದನ್ನು ನಾನರಿತೆ. ರಾತ್ರಿಯಾದಾಗ ನೋವು ಹೆಚ್ಚು ಕಮ್ಮಿ ಪೂರ್ಣವಾಗಿಯೇ ಇಳಿದಿತ್ತು. ಮತ್ತೆ ಬರೀ ಎರಡು ದಿನದೊಳಗೆ ಎದೆ ಮತ್ತು ಕೈಗಳ ಊತ ಬತ್ತಿತು. ಆಮೇಲೆ ಹತ್ತು ದಿನ ಕಳೆದಾಗ ನನ್ನ ಕೈಯಲ್ಲಿನ ದಪ್ಪ ದಬ್ಬೆ ಬಟ್ಟೆಗಳ ಕಟ್ಟನ್ನು ಬಿಚ್ಚಿ ಹಾಕಲಾಯಿತು. ಅಷ್ಟು ದಿನಗಳೂ ನಾನು ಒಂಟಿ ಕೈಯನ್ನಿಟ್ಟುಕೊಂಡೆ ಆಡುಗಳ ಹಾಲು ಕರೆಯುವುದನ್ನೂ ನಡೆದಾಡಿಸಲು ಕರೆದೊಯ್ಯುವುದನ್ನೂ ಮಾಡಿದೆ. ಆ ಕಾಲಾವಧಿಯಲ್ಲಿ ಒಂದು ದಿನ ಕೂಡ ಆಡುಗಳು ನನಗೆ ಒದೆಯುವುದಾಗಲಿ ನನ್ನನ್ನು ತಿವಿಯಲು ಬರುವುದಾಗಲಿ ಹಾಲಿನ ಪಾತ್ರೆಯನ್ನು ಉರುಳಿಸುವುದಾಗಲಿ ಮಾಡಲಿಲ್ಲ ಎಂದು ನಾನು ಸೋಜಿಗದಿಂದಲೇ ನೆನೆಯುತ್ತೇನೆ.

ಅವೆಷ್ಟೋ ಸಲ ಅರ್‌ಬಾಬ್‌ಗಿಂತಲೂ ಚೆನ್ನಾಗಿ ಆಡುಗಳೇ ನನ್ನನ್ನು ಅರ್ಥಮಾಡಿಕೊಂಡಿದ್ದವು. ಅವು ನನಗೆ ಎಷ್ಟೇ ಉಪಟಳ ಕೊಟ್ಟರೂ ನಾನು ಅವಕ್ಕೆ ತಿರುಗಿ ಏನನ್ನೂ ಮಾಡುವುದಿಲ್ಲ ಎಂದು ಅವುಗಳಿಗೆ ವೇದ್ಯವಾಗಿರಬೇಕು. ಹಾಗಿದ್ದರೂ ಅದಾದ ಮೇಲೆ ಹೋತಗಳಿಂದ ಸ್ವಲ್ಪ ದೂರವನ್ನು ಪಾಲಿಸಿಯೇ ನಾನು ಯಾವಾಗಲೂ ನಡೆಯುತ್ತಿದ್ದೆ. ಎಗರಿ ಗುದ್ದಲು ಬಂದರೆ ನಾನು ನೆಗೆದು ನುಣುಚಿಕೊಳ್ಳುತ್ತಿದ್ದೆ. ಅಲ್ಲದಿದ್ದಲ್ಲಿ ನನ್ನ ಕೋಲಿನಿಂದ ಬಲವಾಗಿ ಪ್ರಹರಿಸುತ್ತಿದ್ದೆ. ಬಳಿಕ ಒಮ್ಮೆಯೂ ಆಡುಗಳ ತಿವಿತ ಪಡೆದು ಬೀಳಬೇಕಾಗಿಬರಲಿಲ್ಲ.

ಈ ಕತೆ ಹೇಳುತ್ತಿರುವಾಗ ಈ ವರೆಗೂ ಹೇಳದೇ ಇದ್ದ ಒಂದು ಸಂಗತಿಯನ್ನು ಈಗ ಹೇಳುತ್ತೇನೆ. ಚಿಕ್ಕವನಾಗಿದ್ದಾಗ ನನ್ನ ಜೀವನದ ಮಹತ್ವಾಕಾಂಕ್ಷೆ ಒಬ್ಬ ಆಡುಗಾಹಿ ಆಗಬೇಕೆಂಬುದಾಗಿತ್ತು ಎಂದು ಹೇಳಿದರೆ ನೀವು ನಂಬುವಿರಾ....? ಒಂದು ವೇಳೆ ನಮ್ಮ ’ರಮಣನ್’ ಹಾಡುಗಬ್ಬವನ್ನು ಕೇಳಿದ ಅನುಭವದಿಂದ ಉಂಟಾದ ಒಂದು ಮೋಹವಿದ್ದಿರಬಹುದು. ನನ್ನ ಉಮ್ಮಳಿಗೆ ರಮಣನ್ ಪ್ರೇಮಕವಿತೆ ಬಲು ಅಚ್ಚುಮೆಚ್ಚಿನದಾಗಿತ್ತು. ಹುಲ್ಲುಗಾವಲುಗಳಲ್ಲೂ ಗುಡ್ಡದ ಇಳುಕಲುಗಳಲ್ಲೂ ಆಡಿನ ಮಂದೆಗಳೊಂದಿಗೆ ಬರಿದೇ ನಡೆಯುತ್ತಾ ಸಾಗುವುದು. ಒಂದೂಂದು ದಿನವೂ ಒಂದೊಂದು ಜಾಗದಲ್ಲಿ ಬಿಡಾರ ಹೂಡುವುದು. ಮಂಜು ಕವಿದ ರಾತ್ರಿಗಳಲ್ಲಿ ಹೊರಗೆ ಬೆಂಕಿ ಪೇರಿಸಿ ಆಡುಗಳಿಗೆ ಕಾವಲು ಕೂರುವುದು. ಆಡು ಮೇಯಿಸುವುದು ಎಂಬುದು ಕತೆಗಳಲ್ಲಿ ಹೇಳಿ ಕೇಳಿದಂತಹ ಯಾವುದೋ ಒಂದು  ಸ್ವಪ್ನಸದೃಶ ಅನುಭವವೇ ಆಗಿತ್ತು ನನಗೆ.

ಆದರೆ ಆಡುಗಾಹಿ ಜೀವನವು ನನ್ನ ಬದುಕಿನಲ್ಲಿ ಒಂದು ಸತ್ಯವಾಗಿ ಭವಿಸಿದಾಗ ನನ್ನ ಕನಸುಗಳಿಗಿಂತಲೂ ಅದೆಷ್ಟು ಭಿನ್ನ ಎಂದು ನಾನು ನೋವಿನಿಂದ ನೆನೆದೆ. ಅರಿವಿಲ್ಲದ ವಿಷಯಗಳ ಕುರಿತೂ ವಿದೂರದಲ್ಲಿ ನಡೆವ ಕಾರ್ಯಗಳ ಕುರಿತೂ ಒಮ್ಮೆಯೂ ಸುಮ್ಮನೆ ಸಹ ಕನಸುಗಳನ್ನು ಕಾಣ ಕೂಡದು ಎಂದೇ ನಾನು ಹೇಳುತ್ತೇನೆ. ಅವು ಎಂದಾದರೊಮ್ಮೆ ನಿಮ್ಮ ಜೀವನದಲ್ಲಿ ಯಥಾರ್ಥವಾದರೆ ಅದು ನೆಟ್ಟಗೆ ನಿಂತು ನೋಡಲು ಕೂಡ ಆಗದಷ್ಟು ಭೀಕರವಾಗಿರುತ್ತದೆ ಎಂದು ನಾನು ನಿಮಗೆ ಮುನ್ನೆಚ್ಚರಿಕೆ ನೀಡುತ್ತಿದ್ದೇನೆ.

(ಮುಂದುವರೆಯುವುದು)

ಪುಟದ ಮೊದಲಿಗೆ
 
Votes:  5     Rating: 5    
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು