ಸೆಪ್ಟೆಂಬರ್ ೧೬, ೨೦೧೪
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಭಾನುವಾರದ ವಿಶೇಷ: ವಿಕಾಸ್ ನೇಗಿಲೋಣಿ ಕತೆ `ಮಳೆಗಾಲ ಬಂದು ಬಾಗಿಲು ತಟ್ಟಿತು'    
ವಿಕಾಸ್ ನೇಗಿಲೋಣಿ
ಶನಿವಾರ, 17 ಮಾರ್ಚ್ 2012 (08:51 IST)
ಚಿತ್ರಗಳು: ವಿಷ್ಣು

ಮಳೆ ನಿಲ್ಲಲಿಲ್ಲ, ಬಸ್ ನಿಂತಿತು. ಕೊಡೆ ತಂದಿರಲಿಲ್ಲ, ಗ್ರಹಚಾರ ಕೆಟ್ಟಿತು. ಅಪ್ಪ ಹೇಳಿದ್ದರು, ಮಗ ಕೇಳಿರಲಿಲ್ಲ. ಅಮ್ಮ ಹೊರಡ್ಬೇಕು ಅಂತ ಹೊರ್ಟಿದ್ದೀಯಾ, ಹೋಗು ಅಂದಳು, ಅಪ್ಪ ಯಾವಾಗ್ಲೂ ನಿಂದು ಇದೇ ಹಣೆಬರಹ, ಹೇಳಿದ್ದು ಕೇಳಲ್ಲ, ನಿಂಗೇ ಸ್ವಂತ ಬುದ್ಧಿ ಇಲ್ಲ. ಎಲ್ಲಕ್ಕಿಂತ ಹೆಚ್ಚಿಗೆ ಅಮ್ಮನ ಮಾತೇ ಕೇಳೋನು ನೀನು ಅಂದ. ಅಮ್ಮ ಕಣ್ಬಿಟ್ಟಳು, ಅಪ್ಪ ಜಾಗ ಬಿಟ್ಟ.

ಹೊರಡುವಾಗ ಅಪ್ಪ ಸ್ವೆಟರ್ ಆದ್ರೂ ತಗೊಂಡು ಹೋಗೋ ಅಂದ, ಅಮ್ಮ ಸ್ವೆಟರ್ ಗಿಟರ್ ಏನು, ಇದೇನು ಚಳಿಗಾಲಾನಾ ಅಂತ ಮೊಂಡು ಪ್ರಶ್ನೆ ಕೇಳಿದಳು. ಇಷ್ಟು ಕಷ್ಟಪಟ್ಕೊಂಡು ಹೋಗ್ತೀಯ, ಚಿಕ್ಕಮ್ಮ ಇರ್ತಾಳೆ ಅಂತೀಯಾ, ಎದ್ರೂ ಅಡುಗೆ ಗಿಡುಗೆ, ಬಸುರು ಬಾಣಂತನ ಅಂತ ಹತ್ಕೊಂಡು ಹೋಗಿದ್ರೆ ಏನ ಮಾಡ್ತೀ ಅಂತ ಅಪ್ಪ ಕೇಳಿದ. ಮೊನ್ನೆ ಫೋನ್ ಮಾಡಿರ್ಲಿಲ್ವಾ, ಎಲ್ಲೂ ಅಡ್ಗೆ ಇಲ್ಲ ಮಾರಾಯ್ತೀ ಅಂತ ಹೇಳಿದ್ಳು. ನೀವ್ ಸುಮ್ನಿರಿ ಅಂತ ಅಮ್ಮ ಅಪ್ಪನ ಬಾಯ್ಮುಚ್ಚಿದಳು.

ಅದೆಲ್ಲದರ ಪರಿಣಾಮವಾಗಿ ಇವತ್ತು ಇಲ್ಲಿ ಹೀಗೆ ಹೊರಟು ಬಂದ ಬಸ್ಸು ಈ ಸಂಜೆ ಜಾಗವಲ್ಲದ ಜಾಗದಲ್ಲಿ ಕೆಟ್ಟು ನಿಂತಿದೆ, ತಾನೊಬ್ಬ ಬಿಟ್ಟರೆ ಬಸ್ ನಲ್ಲಿ ಕಂಡಕ್ಟರ್ ಮತ್ತು ಡ್ರೈವರ್ ಮಾತ್ರ. ಕ್ಲೀನರ್ ಕೂಡ ಗ್ರಹಚಾರಕ್ಕೆ ಇವತ್ತೇ ರಜೆ ಹಾಕಿದ್ದಾನಂತೆ.

ಗವ್ವೆನ್ನುವ ಕಾಡು, ಇಲ್ಲಿಂದ ಏಳೆಂಟು ಕಿಲೋಮೀಟರ ಆದರೂ ಆಗಬಹುದು ಹತ್ತಿರದ ಸಣ್ಣ ನಗರವನ್ನಾದರೂ ಸೇರಿಕೊಳ್ಳುವುದಕ್ಕೆ. ಸುರಿಯುವ ಇಂಥ ಮಳೆಯಲ್ಲಿ ನಡುಗುತ್ತಾ ಮಲಗಲಿಕ್ಕಾದರೂ ಸಾಧ್ಯವಾ? ಬಸ್ ನ ಓಡಾಡುವ ಡ್ರೈವರ್ ಗಳಿಗೇನೋ ಅನಿವಾರ್ಯ, ಅಭ್ಯಾಸ, ನಂದು ಹಾಗಾ?

ರಂಗನಾಥ ಚಳಿಗೆ ನಡುಗಿದ, ಮರುಕ್ಷಣ ವಿಚಿತ್ರ ಭಯವೂ ಆವರಿಸಿ ಎದೆ ಅದುರಿತು. ಸದ್ಯ ಬಚಾವ್, ಮೊಬೈಲ್ ಇದೆ. ಈ ಕಾಡಿನಲ್ಲಿ ನೆಟ್ ವರ್ಕ್ ಸಿಗದೇ ಹೋದರೂ ಕನಿಷ್ಠ ಅದರಲ್ಲಿರುವ ಬ್ಯಾಟರಿಯಾದರೂ ಇವತ್ತು ಉಪಯೋಗಕ್ಕೆ ಬರುತ್ತಿದೆ ಎನ್ನುವುದನ್ನು ನೆನೆದು ಸಂತೋಷವಾಯಿತು. ಆಗಲೇ ಒಂದು ಸುತ್ತು ಕಂಡಕ್ಟರ್, ಡ್ರೈವರ್ ಬಂದು ತಮ್ಮ ಪರಿಸ್ಥಿತಿ, ಇಂಥ ಸ್ಥಿತಿಯ ಬಸ್ ಕಂಪನಿಗಳ ನಿರ್ಲಕ್ಷ್ಯಗಳನ್ನೆ ಹೇಳಿ ಇದ್ದೊಬ್ಬ ಪ್ರಯಾಣಿಕನಿಂದ ಆಗಲೇ ನಿರೀಕ್ಷಣಾ ಜಾಮೀನು ತೆಗೆದುಕೊಂಡಿದ್ದರಿಂದ ಇದೀಗ ಇವನೊಬ್ಬ ಇವನ ಪಾಡಿಗೆ, ಮತ್ತೊಂದೆಡೆ ಡ್ರೈವರ್ ಕಂಡಕ್ಟರ್ ತಮ್ಮ ಪಾಡಿಗೆ ತಾವು ಆ ಬಸ್ ನ ಕಾಡಿನ ರಾತ್ರಿಯನ್ನು ಹಂಚಿಕೊಳ್ಳುತ್ತಿದ್ದರು. ಬ್ಯಾಗ್ ಎದೆಗವಚಿಕೊಂಡು ಎದ್ದ ರಂಗನಾಥ ನಿಧಾನವಾಗಿ ತನ್ನ ಮೊಬೈಲ್ ಬ್ಯಾಟರಿ ಸಜ್ಜುಗೊಳಿಸಿಕೊಳ್ಳುತ್ತಾ, ಅದರಿಂದ ಹೊಮ್ಮಿದ ತೆಳು ಬೆಳಕಲ್ಲಿ ಸುರಿಯುವ ನೀರಿನ ಹಿನ್ನೆಲೆ ಗಾಯನದಲ್ಲಿ ಬಸ್ ಇಳಿದ.

ಸಣ್ಣಗೆ ಸುರಿವ ಮಳೆ, ಆಕಾಶದಲ್ಲಿ ಸುಳಿವೂ ಇಲ್ಲದ ಚಂದ್ರ, ನಕ್ಷತ್ರಗಳು ಹಾಗೂ ಕಾಡಲ್ಲಿ ಆಗಾಗ ಮಿಣುಕಿ ಮಾಯವಾಗುವ ಮಿಂಚುಳ್ಳಿಗಳ ಮಧ್ಯೆ ನಿರಂತರ ಬೆಳಕು ಜಾರಿಯಲ್ಲಿಟ್ಟಿದೆಂದರೆ ಅವನ ಮೊಬೈಲ್ ಬ್ಯಾಟರಿ ಒಂದೇ. ಕತ್ತಲನ್ನು ಕಂಡರೆ ಸ್ವಲ್ಪ ಭಯ ಮತ್ತು ಸ್ವಲ್ಪ ಅಂಜಿಕೆಯ ಹೊರಹೊರಡುತ್ತಿದ್ದ ರಂಗನಾಥನಿಗೆ ಇವತ್ತು ಅದೆಲ್ಲಿಂದಲೋ ವಿಚಿತ್ರ ಧೈರ್ಯ ಬಂದಂತಿತ್ತು. ಸಣ್ಣವನಾಗಿದ್ದಾಗ ತನ್ನೂರಿನಿಂದ ಎರಡು ಕಿಲೋಮೀಟರ್ ಹಳ್ಳಿಗೆ ನವರಾತ್ರಿ ಪೂಜೆಗೆ ಇಂಥ ಕತ್ತಲಲ್ಲಿ ಹೋಗಿ ಬಂದು ಮಾಡುತ್ತಿದ್ದುದೂ ನೆನಪಾಗಿ ಇನ್ನಷ್ಟು ರೋಮಾಂಚಕತೆ ಪ್ರಾಪ್ತವಾಯಿತು. ಆಗೆ ಏಕಾಂಗಿಯಾಗಿ ಹೋಗಿ ಬರುವುದು ಅವನಿಗೆ ಸಾಧ್ಯವೇ ಇರಲಿಲ್ಲವಾದರೂ ಇವತ್ತು ಅಂಥ ಓಡಾಟದ ಕ್ಷಣಗಳೆ ಯಾಕೋ ನೆನಪಾಗಿ ರಾತ್ರಿ ಒಬ್ಬನೇ ನಡೆದು ಹೋಗುತ್ತಿರುವಾಗ ತನ್ನದೇ ನೆರಳು ಬಿದ್ದು ತನ್ನ ಪಕ್ಕ ಇನ್ನೊಬ್ಬರಾರೋ ಜೊತೆಗೇ ನಡೆದುಕೊಂಡು ಬರುತ್ತಿದ್ದಾರೇನೋ ಅಂತ ಅಳ್ಳೆದೆಯಲ್ಲಿ ನಡುಕ ಹುಟ್ಟಿ, ಎದುರು ಬೆಳಕಲ್ಲಿ ಯಾರೂ ಇಲ್ಲದೇ ಹೋದರೂ ಹಿಂದೆ ಕತ್ತಲಲ್ಲಿ ಯಾರೋ ತನ್ನನ್ನೇ ಹಿಂಬಾಲಿಸಿಕೊಂಡು ನಡೆದು ಬರುತ್ತಿದ್ದಾರೋ ಎಂಬ ಕಲ್ಪನೆ ಮೊಳೆತು, ಮೈಯೆ ಮುಳ್ಳೆದ್ದು ನಡುಗೆಯನ್ನು ಜಾಸ್ತಿ ಜಾಸ್ತಿ ವೇಗಗೊಳಿಸುತ್ತಿದ್ದ ಕ್ಷಣಗಳೆ ನೆನಪಾಗಿ ಅವನ ರೋಮ ರೋಮಗಳು ಎದ್ದು ನಿಂತವು. ಕುಳಿರ್ಗಾಳಿ, ಸಣ್ಣಗೆ ಮಳೆ, ಮೇಲೆ ಮರದಿಂದ ಬೀಳುವ ದಪ್ಪದಪ್ಪ ಹನಿ, ತಲೆಗೊಂದು ಕರ್ಚೀಫು, ಜೀರುಂಡೆಗಳ ನಿರಂತರ ಜೀ ಸದ್ದು, ಕಾಲ ಕೆಳಗೆ ಏನಾದರೂ ಹರಿಯುತ್ತಿರಬಹುದೆಂಬ ಹುಳಹುಪ್ಪಟೆಗಳ ಭಯಗಳ ಮಧ್ಯೆ ಅವನು ಆ ರಾತ್ರಿಯ ಸ್ನೇಹವನ್ನು ಅನಿವಾರ್ಯವಾಗಿ ಮಾಡಿಕೊಂಡುಬಿಟ್ಟ. ಹಾಗಾಗಿ ಮೊದಲ ಬಾರಿಗೆ ಅವನ ಭಯ ಹೋಗಿ, ಮಳೆಗಾಲದ ಒಂದು ರಾತ್ರಿಯನ್ನು ಒಂಟಿಯಾಗಿ ಹೋಗುವ ಸಂಭ್ರಮ ಮೈತಾಳಿಕೊಂಡಿತು.

ಎಲ್ಲಾ ಮಲೆನಾಡಿನ ಸಂಜೆ ಏಳರ ಮಳೆಯ ವಿಚಿತ್ರ ಲೆಕ್ಕಾಚಾರದ ಹಾಗೆ ಅವತ್ತೂ ಸಣ್ಣ ಹನಿಗಳಿಂದ, ದೊಡ್ಡ ಎರಚಾಟದ ಕಡೆಗೆ ಮಳೆ ನಿಧಾನವಾಗಿ ಸ್ಥಿತಿ ಬದಲಿಸುತ್ತಿತ್ತು. ಅವನೂ ಅದರೊಂದಿಗೆ ಈ ರಾತ್ರಿ ತನಗೊಂದು ಸಿಗಬಹುದಾದ ಆಶ್ರಯಕ್ಕೆ ಹುಡುಕಾಟ ನಡೆಸುತ್ತಾ ಹೊರಟ.

**

ಕತ್ತಲಿಗೆ ತನ್ನದೊಂದೇ ಬೆಳಕಿನ ಕೋಲೆಂಬಂತೆ ಹೆಮ್ಮೆಯಿಂದ ನಿಂತಿತ್ತು ಆ ಮನೆ. ಸೂರಿನಲ್ಲಿ ಹನಿ ಹನಿಗಳ ಸಾಲುದೀಪ, ಕಿಟಕಿಯಿಂದ ಸಣ್ಣ ಬೆಳಕೊಂದನ್ನು ಹೊರಬಿಡುತ್ತಿರುವ ಆ ಮನೆ. ನಡುಮನೆಯಲ್ಲಿ ಮಿಣುಕು ದೀಪದೆದುರು ರಾಜೇಶ್ವರಿ ಮತ್ತು ದಮಯಂತಿ. ಅವರ ನಡುವೆ ಒಂದೊಂದೇ ಸಣ್ಣ ಬೆಳಕಿನ ಕಾಳುಗಳು ಮನೆಯಿಂದ ಮನೆಗೆ ಸಶಬ್ದವಾಗಿ ಸಾಗುವಂತೆ ಚೆನ್ನೆಮಣೆ.

ಇಬ್ಬರೂ ನಿರಾಸಕ್ತಿಯಿಂದ ಆಟದ ಕಾಳುಗಳನ್ನು ನಡೆಸುತ್ತಿರುವಾಗ ಬಾಗಿಲು ಬಡಿಯುವ ಸದ್ದು.

ದಮಯಂತಿ ಕಿವಿ ಚುರುಕು. ಅಮ್ಮ ಯಾರೋ ಬಾಗಿಲು ಬಡೀತಾರೆ ಹದಿನೆಂಟರ ಹರಯದ ಸಹಜ ಕೌತುಕದಿಂದ ಹೇಳಿದಳು!

ರಾಜೇಶ್ವರಿ ಅವಳ ಕಡೆ ಥಟ್ಟನೆ ನೋಡಿ ಹೇಳಿದಳು, ಹೇಳ್ಳಿಲ್ವಾ ನಿಂಗೆ ಪ್ರತಿಸಲ..? ದಮಯಂತಿ ಮುಖ ಸಣ್ಣದು ಮಾಡಿದಳು, ಏನಂತ? ರಾಜೇಶ್ವರಿ ಕಾಳು ನಡೆಸುತ್ತಲೇ ಹೇಳಿದಳು. ನನ್ನಮ್ಮ ಹೇಳ್ತಿದ್ದ ಕತೆ.. ಅದೇ, ಮಳೆಗಾಲದಲ್ಲಿ ಯಾರೋ ಮನೆ ಬಾಗಿಲು ತಟ್ಟಿದ ಹಾಗೆ ಆಗತ್ತೆ ಅನ್ನೋ ಕತೆ.. ತಾಯಿ ತಾಯಿ, ನಂಗೆ ಊಟ ಇಲ್ಲ.. ನೀನು ಕಾಳುಕಡಿ ಎಲ್ಲಿ ಪಣತ ಕಟ್ಟಿ ಇಟ್ಟಿದ್ದೀಯ, ಅದನ್ನ ನಂಗೂ ಒಂದು ಸ್ವಲ್ಪ ಕೊಡು ಅಂತ ಮಳೆರಾಯ ಒಂದೊಂದೇ ಮನೇನ ಕೇಳ್ಕೊಂಡ ಬರ್ತಾನಂತೆ. ಹಂಚಿಲ್ದೇ ಇರೋರು, ಮಳೆಗಾಲಕ್ಕೆ ಸೋಗೆ ಸರಿ ಹೊದ್ದಿಸ್ದೇ ಇರೋರ ಮನೆ ಬೆಳೇನ ಈ ಮಳೆರಾಯ ತಗೊಂಡು ಹೋಗ್ತಾನೆ. ಮುಂದೆ ಅವ್ರ ಮನೇವ್ರು ಕಣ್ಣೀರಲ್ಲಿ ಕೈ ತೊಳೀತಾರಂತೆ. ಅದ್ಕೇ ಮಳೆ ಏನಾದ್ರೂ ಬಂದು ಬಾಗಿಲ ಬಡಿದ್ರೆ ನೀನು ಮಾತ್ರ ಬಾಗಿಲು ತೆಗೀಬೇಡ ಅಂತ ಅಮ್ಮ ಹೇಳ್ತಿದ್ಳು.. ಸುಮ್ನಿರು. ಈಗ ನಿನ್ನ ಆಟ, ಆಡು ಆಡು.

ಅಮ್ಮ ಮಣೆ ನೋಡಿದಳು, ಮಗಳು ಬಾಗಿಲು ನೋಡಿದಳು.

ಚೆನ್ನೆಮಣೆ ಆಟ ಮುಂದುವರಿಯಿತು. ಈ ಸಲ ಬಾಗಿಲು ಬಡಿದ ಸದ್ದು ಅಮ್ಮನಿಗೂ ಕೇಳಿತು.

ರಾಜೇಶ್ವರಿ ಈ ಸಲ ತಾನೇ ಕೇಳಿದಳು, ನಿಂಗೂ ಕೇಳ್ತೇನೇ, ದಮಯಂತಿ? ಮಗಳಿಗೆ ಗೊತ್ತಿದ್ದರೂ ಗೊತ್ತಿಲ್ಲದಂತೆ ನಾಟಕ, ಅಮ್ಮ ಯಾವಾಗಲೂ ಹೀಗೇ, ತಾನು ಮಾಡಿದರೆ ಸರಿ, ಮಗಳು ಮಾಡಿದರೆ ತಪ್ಪು. ಏನು ಬಾಗಿಲು ತಟ್ಟಿದ್ದು, ಅದೇ ಮಳೆ ಬಂದು ಬಾಗಿಲು ತಟ್ತಿರೋದಾ? ರಾಜೇಶ್ವರಿಗೆ ಕಿರಿಕಿರಿಯಾಯ್ತು. ಏಯ ಸುಮ್ನಿರೇ, ಮಳೆ ತಟ್ಟಿದ್ರೆ ಒಂದೇ ಒಂದ ಸಲ ಬಾಗಿಲು ತಟ್ಟೋದು, ಗ್ರಹಚಾರ ಕೆಟ್ಟೋರಾದ್ರೆ ಒಂದೇ ಸಲಕ್ಕೆ ಬಾಗಿಲು ತೆರೀತಾರೆ, ಕಷ್ಟಕ್ಕೆ ಸಿಕ್ಕಿ ಹಾಕ್ಕೊಳ್ತಾರೆ ಅಂತಾನೂ ಹೇಳಿದ್ಳು ಅಮ್ಮ.. ಇದ್ಯಾರೋ ಇಷ್ಟೊಂದ ಸಲ ಬಾಗಿಲು ಬಡೀತಾ ಇದಾರೆ!

ದಮಯಂತಿ ಗೆಜ್ಜೆ ಗಲಗಲ ಮಾಡುತ್ತಾ, ಮಡಿಲ ಮೇಲಿದ್ದ ಹತ್ತಾರು ಚೆನ್ನೆಕಾಳುಗಳನ್ನು ಪಟಪಟನೆ ಉದುರಿಸಿಕೊಂಡು ಎದ್ದು ನಿಂತಳು. ಅಮ್ಮ, ನಾನು ಹೋಗಿ ಬಾಗಿಲು ತೆಗೀಲಾ? ಅಮ್ಮ ಗಂಭೀರವಾದಳು, ದಮಯಂತಿ! ಅಮ್ಮ, ಈ ಕಡೆ ನಿಂತ್ಕೊಂಡೇ ಏನು ಎತ್ತ ಯಾರು ಬೇಕು ಅಂತ ಕೇಳ್ತೀನಿ ಮಗಳದ್ದು ಯಾವಾಗಲೂ ಹಠ ಎಂದರೆ ಹಠ.

ರಾಜೇಶ್ವರಿ- ಮಗಳೇ!

ದಮಯಂತಿ- ನೀವ್ಯಾರು ಅಂತಾನೂ ಕೇಳ್ತೀನಿ. ಅದನ್ನೂ ಈ ಕಡೆನೇ ನಿಂತ್ಕೊಂಡು.

ರಾಜೇಶ್ವರಿ- ಬೇಡ!

ದಮಯಂತಿ- ಗೊತ್ತಮ್ಮಾ, ಗಂಡಸರಾಗಿದ್ರೆ ಬಾಗಿಲು ತೆಗೆಯೋದೇ ಇಲ್ಲ.

ಇದೀಗ ರಾಜೇಶ್ವರಿ ಹೇಳುವುದನ್ನು ಕೇಳಿಸಿಕೊಳ್ಳದೇ ದಮಯಂತಿ ಓಡಿ ಹೋಗಿ ಬಾಗಿಲಲ್ಲಿ ನಿಲ್ಲುತ್ತಾಳೆ.

ದಮಯಂತಿ ಕಂಪಿಸುತ್ತಾ ಬಾಗಿಲ ಚಿಲಕದ ಹತ್ತಿರ ಕೈ ಎತ್ತಿ ಹಿಡಿದುಕೊಂಡು, ಇನ್ನೇನು ಬಾಗಿಲು ತೆಗೆದೇಬಿಡುತ್ತಾಳೆಂಬಂತೆ ನಿಂತಿದಾಳೆ.

ದಮಯಂತಿ- ಏನು ಬೇಕು?

ಅದನ್ನ ಕೇಳಿದಷ್ಟೇ ಅವಸರದಲ್ಲಿ ಇನ್ನೊಂದು ಪ್ರಶ್ನೆಯನ್ನೂ ಕೇಳುತ್ತಾಳೆ.

ದಮಯಂತಿ- ಯಾರು ಬೇಕು? ನೀವ್ಯಾರು?

ಅಷ್ಟೇ ಅವಸರದಲ್ಲಿ ಇನ್ನೊಂದು ಪ್ರಶ್ನೆಯನ್ನೂ ಕೇಳುತ್ತಾಳೆ.

ದಮಯಂತಿ- ಹೆಂಗಸಾಗಿದ್ದರೆ ಮಾತ್ರ ನಾನು ಬಾಗಿಲು ತೆಗೀಬೇಕು ಅಂತ ಅಮ್ಮ ಹೇಳಿಬಿಟ್ಟಿದಾಳೆ!

ಅಷ್ಟು ಹೇಳಿ ನಾಲಗೆ ಕಚ್ಚಿಕೊಳ್ಳುತ್ತಾಳೆ.

ರಾಜೇಶ್ವರಿ ಅವಳನ್ನೇ ನೋಡುತ್ತಾಳೆ.

ತಪ್ಪಿದ್ದನ್ನು ಸರಿ ಹೇಳಲು ಹೋಗುತ್ತಾಳೆ.

ದಮಯಂತಿ- ಗಂಡಸರಾಗಿದ್ದರೆ ಅಮ್ಮನ್ನ ತೆಗೆಯೋದಿಲ್ಲ ಅಂತ ಬಾಗಿಲು ಹೇಳಿದಾಳೆ.

ಮತ್ತೆ ನಾಲಗೆ ಕಚ್ಚಿಕೊಳ್ಳುತ್ತಾಳೆ.

ಅಷ್ಟಕ್ಕೆ ಸರಿಯಾಗಿ ಹೊರಗಿನಿಂದ ಧ್ವನಿ ಕೇಳುತ್ತದೆ.

ಅವನೆನ್ನುತ್ತಾನೆ- ಇಲ್ಲಿ ನೋಡಿ, ನಾನು ರಂಗನಾಥ ಅಂತ. ಘಟ್ಟದ ಕೆಳಗಿನೋನು ನಾನು.

ದಮಯಂತಿಗೆ ಅದು ಗಂಡಸು ಅಂತ ಗೊತ್ತಾಗುತ್ತದೆ.

ಅವನ ದನಿ ಕೇಳಿ ಮತ್ತಷ್ಟು ಸಂತೋಷ, ತವಕ ಮತ್ತು ಕುತೂಹಲ.

ಆದರೆ ಗಂಡಸಾಗಿದ್ದರೆ ತೆರೆಯಬಾರದೆಂಬ ಅಮ್ಮನ ಕಟ್ಟಳೆಯ ಬಗ್ಗೆ ಕಳವಳ.

ತಗ್ಗಿದ ಧ್ವನಿಯಲ್ಲಿ, ಆದರೆ ಈ ಸಲ ಮಾತ್ರ ಸರಿಯಾಗಿ ಮನಸ್ಸಿಲ್ಲದೇ ಇಲ್ಲದೇ ಅಮ್ಮ ಹೇಳಿ ಕೊಟ್ಟಿದ್ದನ್ನು ಹೇಳುತ್ತಾಳೆ.

ದಮಯಂತಿ- ಗಂಡಸಾಗಿದ್ದರೆ ನಾನು ಯಾವುದೇ ಕಾರಣಕ್ಕೂ ಬಾಗಿಲು ತೆಗೀಬಾರ್ದು ಅಂತ ಅಮ್ಮ ಹೇಳಿದಾಳೆ!

ರಾಜೇಶ್ವರಿ ಎದ್ದು ಬರುತ್ತಾಳೆ.

ಧ್ವನಿ ಮುಂದುವರಿಯುತ್ತದೆ.

ಅವನನ್ನುತ್ತಾನೆ- ನೋಡಿ, ನಾನು ಈ ಹೊಸಂಗಡಿ ಹತ್ತಿರ ಸಿದ್ದಾಪುರ ಉಂಟಲ್ವಾ, ಅಲ್ಲಿಂದ ಬಂದೆ, ಶೃಂಗೇರಿಗೆ ಹೋಗುವ ಅಂತ ಹೊರಟಿದ್ದು. ದಾರಿ ಮಧ್ಯೆ ಬಸ ಕೆಟ್ಟು ಹೋಯ್ತು. ಗ್ರಹಚಾರ ಅಂದ್ರೆ ಇದೇ ನೋಡಿ. ಇದು ಬೇರೆ ಲಾಸ್ಟ್ ಬಸ್. ಈ ಮಳೆಗಾಲದಲ್ಲಿ ಲಾಸ್ಟ್ ಬಸ್ ನ ಯಾರ್ತಾನೇ ಧೈರ್ಯ ಮಾಡಿ ಹತ್ತಾರೆ?

ದಮಯಂತಿ ಬಾಯಿಗೆ ಕೈ ಅಡ್ಡ ಹಿಡಿದು ಸದ್ದಾಗದಂತೆ ನಗುತ್ತಾಳೆ, ರಾಜೇಶ್ವರಿ ಕಣ್ಣು ಉರಿಯುತ್ತದೆ.

ರಂಗನಾಥನ ದನಿಯಲ್ಲಿ ಅಂಗಲಾಚುವಿಕೆ ಇದೆ- ಅದೂ ಈ ಸಂಜೆ ಹೊತ್ಗೆ ಘಟ್ಟದ ಮೇಲೆ ಪ್ರಯಾಣ ಹೊರಡೋದು. ನಾನು ಮಂಗ, ಹತ್ತಿದೆ.. ಈಗ ಅದು ನೋಡಿ ಕೆಟ್ಟು ನಿಂತಿದೆ. ಈಗ ಈ ಬಸ್ ನಲ್ಲಿರೋದು ಡ್ರೈವರ್, ಕಂಡಕ್ಟರ್ ಬಿಟ್ರೆ ಮತ್ತೊಬ್ಬ ಜನ ಅಂದ್ರೆ ನಾನೇ.

ಒಳಗಡೆಯಿಂದ ಮಾತು ಬರುವುದಿಲ್ಲ.

ಬೇಸರದಲ್ಲಿ ದಮಯಂತಿ ಅಮ್ಮನ ಮಾತನ್ನು ರಿಪೀಟ್ ಮಾಡುತ್ತಾಳೆ.

ದಮಯಂತಿ- ಗಂಡಸಾಗಿದ್ದರೆ ನಾನು ಯಾವುದೇ ಕಾರಣಕ್ಕೂ ಬಾಗಿಲು ತೆಗೀಬಾರ್ದು ಅಂತ ಅಮ್ಮ ಹೇಳಿದಾಳೆ!

ಕೈಯಲ್ಲಿರುವ ಮೊಬೈಲ್ ಚಾರ್ಜ್ ಮುಗಿದು ಹೋಗುತ್ತಿರುವ ಆತಂಕ, ಆಶ್ರಯ ಸಿಗುತ್ತಿಲ್ಲವೆಂಬ ನಿರಾಶೆ, ಕತ್ತಲಿನ ಭಯಗಳೆ ಸೇರಿ ಅವನು ಮಾತು ಮುಂದುವರಿಸುತ್ತಾನೆ.

ರಂಗನಾಥ- ಡ್ರೈವರ್, ಕಂಡಕ್ಟರ್ ಗೆ ಇದೆ ಅಭ್ಯಾಸ..ಹವ್ಯಾಸಿ ನಿರ್ಗತಿಕರು ಅಂತ ನಮ್ಮಪ್ಪ ತಮಾಷೆ ಮಾಡ್ತಿದ್ರು ಅವ್ರನ್ನ. ಆದ್ರೆ ನಾನ ಒಬ್ಬ ಈ ಮಳೇಲಿ, ಆ ಬಸ್ ಯಾವಾಗ ಸರಿ ಹೋಗ್ತದೋ, ಈ ಕಾಡಿಗೆ ಆ ಮೆಕ್ಯಾನಿಕ್ ನ ಎಲ್ಲಿಂದ ಹುಡ್ಕೊಂಡು ಬರ್ತಾರೋ, ಬಂದಿರೋ ಮೆಕ್ಯಾನಿಕ್ ಈ ಕಾಡ್ ಗೀಡಲ್ಲಿ ಸಿಕ್ಕಿರೋ ಭೂತ ಬೊಬ್ಬರ್ಯ ಆಗಿದ್ರೆ ಏನು ಗತಿ ಮಾರಾಯ್ರೇ ಅಂತೆ ಭಯ ಆಗ್ತಾ ಇದೆ.. ಈಗ ವಾಪಾಸ್ ಹೋಗೋಣ ಅಂದ್ರೆ ರಸ್ತೆ ಯಾವ್ದು ಅಂತಾನೂ ಗೊತ್ತಾಗ್ತಾ ಇಲ್ಲ.. ಬಸ ಬಿಟ್ಟು ಮನೆ ಹುಡ್ಕೊಂಡು ಬಂದೆ, ಮನೆ ಬಿಟ್ಟು ಬಸ್ಸು ಹುಡ್ಕೊಂಡು ಹೋದ್ರೆ ಮನೇನೂ ಇಲ್ದೇ, ಬಸ್ಸೂ ಸಿಗ್ದೇ ಕಾಡು ಪಾಲು ಆಗ್ಬೇಕಾಗತ್ತೆ.. ದಮಯಂತಿಗೆ ನಗುವೂ ಬರುತ್ತದೆ, ಭೂತ ಬೊಬ್ಬರ್ಯಗಳ ನೆನಪಾಗಿ ಮೈಯೂ ಅದುರುತ್ತದೆ.

ಆದರೂ ಅಮ್ಮ ಹೇಳಿದ್ದನ್ನು ಅವಳು ಪುನರಾವರ್ತಿಸುತ್ತಾಳೆ.

ದಮಯಂತಿ- ಗಂಡಸಾಗಿದ್ದರೆ ಯಾವುದೇ ಕಾರಣಕ್ಕೂ ನಾನು ಬಾಗಿಲು ತೆಗೀಬಾರ್ದು ಅಂತ ಅಮ್ಮ ಹೇಳಿದಾಳೆ!

ಇದೀಗ ರಾಜೇಶ್ವರಿ ಮಗಳ ಬಾಯಿ ಕಟ್ಟಿ ಹೊರಗೆ ನಿಂತ ವ್ಯಕ್ತಿಯನ್ನು ಪ್ರಶ್ನಿಸುತ್ತಾಳೆ.

ರಾಜೇಶ್ವರಿ: ಅದ್ಸರೀನಪ್ಪಾ, ನಿನ್ನ ಧ್ವನಿಗೆ ಏನಾಗಿದೆ, ಹಾಗೆ ಹಿಡಿದು ಹಿಡಿದು ಮಾತಾಡ್ತೀಯಾ?

ಧ್ವನಿ- ಅಯ್ಯೋ ಏನ್ ಕೇಳ್ತೀರಿ, ನಾಲ್ಕು ದಿನ ಆಯ್ತು, ಕಂಡಾಬಟ್ಟೆ ಜ್ವರ. ಇವತ್ತು ಸ್ವಲ್ಪ ಬಿಟ್ಟಿತ್ತು. ಈ ಮಳೆ, ಗಾಳಿ, ಚಳಿಗೆ ಮತ್ತೆ ಥಂಡಿ ಜಾಸ್ತಿ ಆಯ್ತು. ಜ್ವರಾನೂ ಬರೋ ಹಾಗಿದೆ. ಅಪ್ಪ ಹೇಳಿದ್ರು, ಮಾತು ಕೇಳ್ಳಿಲ್ಲ, ಅಮ್ಮನ್ನ ಮಾತು ಕೇಳ್ತಿದ್ದು, ಅವ್ರು ಹೋಗ್ಬೇಡ ಅನ್ಲಿಲ್ಲ..

ಅಮ್ಮನ ಮನಸ್ಸು ಕರಗುತ್ತಿದೆ, ಮಗಳ ಮಳೆಗೆ ನೆನೆಯದೇ ಮನಸ್ಸು ಮೆದುವಾಗುತ್ತಿದೆ, ಚಳಿಗೆ ಒಡ್ಡದೇ ಮೈ ನಡುಗುತ್ತಿದೆ.

ತನ್ನ ಬಾಯಿ ಮುಚ್ಚಿರುವ ಅಮ್ಮನನ್ನು ಬಿಡಿಸಿಕೊಳ್ಳುತ್ತಾ ಕೂಗಿಕೊಳ್ಳುತ್ತಾಳೆ.

ದಮಯಂತಿ- ಬೆಳೆ ಕೇಳ್ಕೊಂಡ್ ಬಂದಿರೋ ಮಳೆರಾಯ ಆದ್ರೂ ಪರವಾಗಿಲ್ಲ, ಚಳಿ ಅಂತ ಬಂದ ಗಂಡಸಾದ್ರೂ ಪರವಾಗಿಲ್ಲ, ಬಾಗಿಲು ತೆಗೀಬಹುದು ಅಂತ ಅಮ್ಮ ಹೇಳ್ತಿದಾಳೆ.

ಗಲಗಲನೆ ಬಳೆ ಸದ್ದಾಗುತ್ತಾ, ಕಿರ್ರನೆ ಬಾಗಿಲು ಸದ್ದು ಮಾಡುತ್ತಾ, ಬರ್ರನೆ ಚಳಿಗಾಳಿ ಒಮ್ಮೆಗೆ ಒಳನುಗ್ಗುತ್ತಾ ಆ ಮನೆಯ ಬಾಗಿಲು ತೆರೆದುಕೊಂಡಿತು.

**

ಹಿಂದಿನ ಎರಡೂ ಟಯರ್ ಗಳು ಪಂಚರ ಆಗಿವೆ, ಕಷ್ಟಪಟ್ಟು ಈ ರಾತ್ರಿಯಲ್ಲಿ ಒಂದು ಟೈರ್ ಚೇಂಜ್ ಮಾಡಬಹುದಾದರೂ ಇನ್ನೊಂದು ಕಾರಿನ ಸ್ಟೆಪ್ನಿಗೆ ಎಲ್ಲಿ ಹುಡುಕಿ ಹೋಗುವುದು?

ಕಾರು ಕೆಟ್ಟು ನಿಂತಿತ್ತು. ರಾತ್ರಿಯನ್ನು ಸೀಳಿಕೊಂಡು ಹೋಗುವ ಕಾರಿನಲ್ಲಿ ಅಷ್ಟು ಹೊತ್ತು ನಿದ್ದೆ ಹೋಗಿದ್ದವಳು ಈಗ ಕಾರು ಹಾಳಾದ ಕತೆ ಕೇಳಿ ಮೂಡ್ ಆಫ್ ಆಗಿದ್ದಳು ಅವಳು.

ನಿಮಗೆ ಆಗಲೇ ಬಡ್ಕೊಂಡೆ, ಇಷ್ಟು ಹೊತ್ತಿಗೆ ಹೊರಡೋದು ಬೇಡ ಅಂತ. ಕೇಳಿದ್ರಾ? ಹೊರಗೆ ಹೆಜ್ಜೆ ಇಡುವುದಕ್ಕೂ ಸಾಧ್ಯವಿಲ್ಲದಂಥ ಮಳೆಯಲ್ಲಿ ಅವಳು ಕಿಟಕಿಯಿಂದ ತನ್ನೊಂದು ಮುಂಗುರುಳನ್ನೂ ಹರಿಯಬಿಡಲಾರಳು.

ಅವನು ಒಳಗೇ ಕೂತುಕೊಂಡು ಏನೇನು ಮಾಡುವುದಕ್ಕೆ ಸಾಧ್ಯವಿದೆ ಎಂಬುದರ ಲೆಕ್ಕ ಹಾಕುತ್ತಿದ್ದ. ಅವನು ಹಾಗೇ, ಹೆಂಡತಿಯ ಬೈಗುಳವನ್ನು ತನ್ನ ಮೌನದ ಗುರಾಣಿ ಹಿಡಿದೇ ಯಾವಾಗಲೂ ತಪ್ಪಿಸಿಕೊಳ್ಳುತ್ತಿರುತ್ತಾನೆ.

ಮಳೆ ಮತ್ತು ಜೀರುಂಡೆ ಸದ್ದು ಬಿಟ್ಟರೆ ಮತ್ತೆ ಕಾಡಿನ ಗವ್ವೆನುವ ಮೌನ.

ಸಣ್ಣ ಮೌನದ ವಿರಾಮದ ಕೊನೆಗೆ ಅವನೆಂದ- ಅಲ್ಲ ಈ ಕೆಸರಲ್ಲಿ ರಾತ್ರಿ ಇಡೀ ಏಗೋದಕ್ಕಾಗತ್ತಾ? ಏಸಿನೂ ಏನೋ ಪ್ರಾಬ್ಲಂ ಆಗಿ ನಿನ್ನಿಂದ ವರ್ಕ್ ಆಗ್ತಿಲ್ಲ. ಮಳೆಗಾಲ ಅಲ್ವಾ, ಏಸಿ ಬೇಕಾಗಲ್ಲ ಅಂತ ನಾನು ರಿಪೇರಿ ಮಾಡ್ಸೋಕೆ ನಿಧಾನ ಮಾಡ್ದೆ.. ಈಗ ಅನುಭವಿಸ್ಬೇಕು ನೋಡು. ರಾತ್ರಿ ಗ್ಲಾಸ್ ತೆಗೆದು ಮಲ್ಕೊಂಡ್ರೆ ಈ ಮಳೆ ಮತ್ತು ಸೊಳ್ಳೆ ನಮ್ಮನ್ನ ಸಾಯಿಸ್ತಾವೆ. ಗ್ಲಾಸ್ ಹಾಕ್ಕೊಂಡು ಮಲ್ಕೊಂಡ್ರೆ ಉಸಿರು ಕಟ್ಟಿ ಸಾಯ್ತೀವಿ.

ಅವಳು- ಸಾಯೋ ಮಾತು ಬಿಟ್ರೆ ಬೇರೇನೂ ನಿಮ್ಗೆ ಬರೋದಿಲ್ವಾ?

ಅವನು- ಅಯ್ಯೋ ಸುಮ್ನೇ ಹೇಳಿದೆ ಮಾರಾಯ್ತೀ, ನಮ್ಮ ಸಮಸ್ಯೆ ಸಾಲ್ವ್ ಆಗ್ಬೇಕು ಅಂದ್ರೆ ಈ ರಾತ್ರಿ ಒಂದು ಕಳೀಬೇಕು. ಈ ಮಳೇಲಿ ನಾವು ಭಜನೆ ಹೇಳ್ಕೊಂಡು ಕಳೆಯೋದಾ, ಯಕ್ಷಗಾನ ನೋಡ್ಕೊಂಡು ಕಳೆಯೋದಾ? ಏನು ಮಾಡೋದು ಅಂತ ಅನ್ಸಿ ಹೇಳಿದೆ ಅಷ್ಟೇ.

ಅವಳು ಮಾತಾಡಲಿಲ್ಲ.

ಅವನೆಂದ- ಸರಿ ಈಗ ಇರೋದೊಂದೇ ದಾರಿ.

ಅವಳು-ಏನು?

ಅವನು- ಹೋಗಿ ಹತ್ತಿರದಲ್ಲಾದ್ರೂ ಮನೆ ಇದ್ಯಾ ಅಂತ ನೋಡ್ಕೊಂಡು ಬರೋದು. ಅವಳು- ಮನೇನಾ, ಈ ರಾತ್ರಿ, ಕಾಡು, ಇಷ್ಟೊಂದು ಕತ್ಲು. ಮನೆ ಹುಡ್ಕೋದಲ್ಲ, ದಾರಿ ಹುಡ್ಕೋದಕ್ಕೂ ಆಗೋದಿಲ್ಲ.

ಅವನು-ದೇವರು ನಮ್ಗೂ ಒಂಚೂರು ಅವಕಾಶ ಅಂತ ಕೊಟ್ಟಿರ್ತಾನೆ. ಆದ್ರೆ ನಾವು ದಾರೀನೇ ಇಲ್ಲ ಅಂತ ಹೀಗೆ ಕೂತ್ಕೊಂಡು ಏನಾದ್ರೂ ದಾರಿ ಹುಡ್ಕೋ ಪ್ರಯತ್ನ ಮಾಡ್ಲಿಲ್ಲ ಅಂದ್ರೆ ಬಿದ್ದಿರು ಅಂತಾನೆ, ಬೆಳಗ್ಗೆವರೆಗೂ ಸೊಳ್ಳೆಗೆ ನಮ್ಮ ಬಲಿ ಕೊಟ್ಕೊಂಡು ಇ ಬಿದ್ದಿರ್ಬೇಕು ಅಷ್ಟೇ.

ಅವನು ಹೊರಡುವುದಕ್ಕೆ ಅನುವಾದ.

ಎಲ್ಲಿ ಹೊರಡೋದು ಅಂತ ಡಿಸೈಡ್ ಮಾಡಿದ್ರಾ, ನಿಮ್ಗೇನು ಹುಚ್ಚಾ? ಆವಾಗ ಹೊರಡೋದಕ್ಕೂ ಗಡಿಬಿಡಿ, ಈವಾಗ ಮೂರ್ಖರ ಥರ ಮನೆ ಹುಡ್ಕೋದಕ್ಕೂ ಗಡಿಬಿಡಿ. ನಿಮ್ಮಂಥ ಗಡಿಬಿಡಿ ಗಂಡನ್ನ ಕಟ್ಕೊಂಡು ನನ್ನಂಥ ಹೆಂಡ್ತಿ ಕಷ್ಟ ಏನ ಕೇಳ್ತೀರಿ? ಅವಳು ಒಂದೇ ಸಮನೆ ಬೈಯತೊಡಗಿದಳು.

ನೋಡು ಸ್ವಲ್ಪ ದೂರ ಹುಡ್ಕೊಂಡು ಹೋಗೋಣ, ಊರಿನ ದಾರಿನಾದ್ರೂ ಸಿಗ್ಬಹುದಾ, ಈ ಕಾಡಲ್ಲಿ ಮನೆ ಗಿನೆ ಏನಾದ್ರೂ ಇರೋ ಲಕ್ಷಣ ಇದ್ಯಾ ಅಂತ ನೋಡೋಣ. ಸಿಗ್ದೇ ಹೋದ್ರೆ ಇದ್ದೆ ಇದೆ ನಿಮ್ಮ ನೆಂಟರ ಮನೆ. ಅದೇ ಕಣೇ ನಿಮ್ಮ ಈ ಸೊಳ್ಳೆ ಮಾವನ ಮನೆ!

ಜೋರಾಗಿ ನಕ್ಕು ಇಳಿದ. ಹನಿ ಹಣೆಗಿಳಿದಿತ್ತು.

ಸರಿ ನೀವ ಏನಾದ್ರೂ ಮಾಡ್ಕೊಂಡು ಹಾಳಾಗಿ ಹೋಗಿ. ನಾನಂತೂ ಬರೋದಿಲ್ಲ.

ಹೌದಾ, ಒಬ್ಬಳೇ ಇರ್ತೀಯಾ. ಸರಿ, ಹಾಗಿದ್ರೇ ನಾನು ಈಗ ಹೋಗಿ ಯಾರ್ದಾದ್ರೂ ಮನೆ ಇದ್ಯಾ ಅಂತ ಹುಡ್ಕೊಂಡು ಬರ್ತೀನಿ. ಬೇಗ ಬಂದ್ಬಿಡ್ತೀನಿ, ಸರೀನಾ? ಹುಷಾರು.

ಅವನು ಎದ್ದು ತಲೆ ಮೇಲೆ ಒಂದು ಕರವಸ್ತ್ರ ಏರಿಸಿಕೊಂಡು ಹೊರಟ.

ಸಂಜೆ ಏಳರ ಮಳೆ ಹನಿಹನಿಯ ರೂಪದಿಂದ ತೀವ್ರಸ್ತರಕ್ಕೆ ತಿರುಗಿಕೊಳ್ಳುತ್ತಿತ್ತು.

**

ಇಂಥ ಮಳೇನ ನಾನು ನನ್ನ ಸರ್ವೀಸ್ ನಲ್ಲಿ ನೋಡ್ಲಿಲ್ಲ ಮಾರಾಯಾ. ಅಲ್ಲ, ಬೆಳಿಗ್ಗೆವರೆಗೆ ಹೀಗೇ ಸುರೀತಾ ಇರತ್ತಾ ಅಂತ- ಹೆಡ್ ಲೈಟ್ ಒಂದೇ ಉರಿಯುತ್ತಿತ್ತು. ಡ್ರೈವರ್ ತನ್ನ ಸೀಟು ಬಿಟ್ಟು ಎಡಗಡೆಯ ಮೂರನೇ ಸಾಲಿನ ವಿಂಡೋ ಸೀಟ್ ನಲ್ಲಿ ಮುದುಡಿ ಕುಳಿತಿದ್ದ. ಕಂಡಕ್ಟರ್ ತನ್ನಲ್ಲಿರುವ ಒಂದೇಒಂದು ಟವೆಲ್ ಅನ್ನು ಮೈಗೆ ಹಂಚುವ ಹರಸಾಹಸದಲ್ಲಿ ಸೀಟು ಸಾಲುಗಳ ಮಧ್ಯೆ ಪ್ಯಾಸೇಜ್ ನಲ್ಲಿ ಕುಳಿತುಬಿಟ್ಟಿದ್ದ.

ನಾಳೆ ಬೆಳಿಗ್ಗೆ ಎದ್ದ ಮೇಲೆ ಹುಡ್ಕೊಂಡು ಹೋಗಿ ಮೆಕಾನಿಕ್ ಕರ್ಕೊಂಡು ಬರಬೇಕು. ಎಷ್ಟೆಂದರೂ ನಾಳೆ ಇಡೀ ಇದನ್ನು ಸರಿ ಮಾಡ್ಕೊಂಡು ಶೃಂಗೇರಿಗೆ ಹೋಗೋಕಾದ್ರೆ ಹೆಚ್ಚು. ಆ ರಾಮಯ್ಯ ನಮ್ದೇ ತಪ್ಪು ಅಂತ ಸಾಧಿಸ್ತಾನೆ, ನಾವು ಈ ದರಿದ್ರ ರಾತ್ರೀಲಿ ಒದ್ದಾಡೋದಲ್ದೇ ನಮ್ಮ ಸ್ಯಾಲರೀಲೂ ಹಣ ಕಟ ಮಾಡಿಸ್ಕೊಂಡು ಡ್ಯೂಟಿ ಮಾಡ್ಬೇಕು.- ಡ್ರೈವರ್ ತಮ್ಮ ಕಷ್ಟವನ್ನು ಹಳಿದುಕೊಳ್ಳುತ್ತಿದ್ದ.

ಹಿಂದಿನ ಸಲ ಕಾಣ್ಲಿಲ್ವಾ? ಆ ರಾಜೇಶ ತಗೊಂಡ ಹೋಗಿದ್ದ ಬಸ್ಸಿಗೆ ಬ್ರೇಕ್ ಸರಿ ಇರ್ಲಿಲ್ಲ. ಹೋಗೋವಾಗ್ಲೇ ಆ ರಾಮಯ್ಯನ ಹತ್ರ ಸಾರಿ ಸಾರಿ ಹೇಳಿದ್ದ, ಸರಿ ಮಾಡಿಸ್ಕೊಡ್ರೀ ಸರ ಅಂತ. ಆದ್ರೇ ಕಿವಿಮೇಲೂ ಹಾಕ್ಕೊಳ್ಳಿಲ್ಲ. ಏನಾಯ್ತು, ಆ ಬಾಳೆಬರೆ ಘಾಟಿ ಹತ್ರ ಆಕ್ಸಿಡೆಂಟ್ ಆಯ್ತು. ಸದ್ಯ ಅವ್ನು ಸಾಯ್ಲಿಲ್ಲ ಅನ್ನೋದು ದೊಡ್ಡ ವಿಷಯ. ಆದ್ರೆ ಅದಕ್ಕಾಗಿರೋ ಖರ್ಚನ್ನೆ ಇವ್ನ ಹತ್ರಾನೇ ಕಕ್ಕಿಸಿ, ಸಾಯ್ಸಿದ್ನಲ್ಲ ಆ ರಾಜೇಶ್ ನ? ನಾಳೆ ನಮ್ಮ ಕತೇನೂ ಹಾಗೇ- ಕಂಡಕ್ಟರ್ ಸಿಟ್ಟು ಮತ್ತು ಚಳಿಯಿಂದ ಹಲ್ಲಲ್ಲು ಕಡಿದ.

ಈ ಮಳೆಯ ಆರ್ಭಟ ಹೆಚ್ಚುತ್ತಿದ್ದಂತೇ ಏನೋ ಬೇರೆ ಥರದ ಸದ್ದು ಮೊದಲು ಕಿವಿಗೆ ಬಿದ್ದಿದ್ದು ಕಂಡಕ್ಟರ್ ಗೆ.

ಏನೋ ಸೌಂಡು ಕೇಳ್ತಿದೆ ನೋಡು, ಹಾಗಂದ ಡ್ರೈವರ್ ಗೆ.

ಈ ಥರ ಮಳೆ ಹೊಡೀತಿದೆ, ಏನೋ ಸೌಂಡು ಅಂತೀಯ?- ಡ್ರೈವರ್ ಅವನ ಮಾತನ್ನು ಕ್ಷುಲ್ಲಕವೆಂಬಂತೆ ನೋಡಿದ.

ಅಯ್ಯೋ ಅದು ನಂಗೂ ಗೊತ್ತಿಲ್ವಾ? ಇದು ಮಳೆ ಸೌಂಡು ಅಲ್ಲ.

ಮತ್ತೇನು?

ಏನೋ ಹೊಡ್ದ ಹಾಗೆ ಆಯ್ತು.

ಹೊಡ್ದ ಹಾಗಾ, ಗುಡುಗೋ ಸಿಡ್ಲೋ ಹೊಡೆದಿರ್ಬೇಕು. ಆಗ್ಲೂ ಒಂದು ಸಿಡ್ಲು ಬಿತ್ತು ಕೇಳಿಸ್ಕೊಂಡು ನಾವು ಕುಮೀಟ ಬೀಳ್ಳಿಲ್ವಾ?

ಏಯ ಗುಡುಗೂ ಅಲ್ಲ ಸಿಡ್ಲೂ ಅಲ್ಲಪ್ಪಾ ಇದು.. ಯಾರೋ ನಮ್ಮ ಬಸ್ಸು ಬಡ್ದ ಹಾಗೆ ಸೌಂಡು.. ನಂಗೆ ಸರೀ ಕೇಳಿಸ್ತು.

ಹೌದಾ? ಏಯ ಏನೋ ಕೇಳಿಸ್ಕೊಂಡು ಏನೋ ಅಂತೀಯಾ ನೀನು.. ಸರಿ ಕೇಳಿಸ್ಕೊಂಡ್ಯಾ?

ಹೂಂ, ನಾನು ಹೇಳಿಕೇಳಿ ಕಂಡಕ್ಟರ್. ಡೋರ್ ಗೆ ಯಾರೇ ಸಣ್ಣದಾಗಿ ಹೊಡೆದ್ರೂ ನಂಗೆ ಗೊತ್ತಾಗತ್ತೆ. ನನ್ನ ಕಿವಿ ಸಿಕ್ಕಾಪಟ್ಟೆ ಸೂಕ್ಷ.

ಸರಿ, ಮಳೆ, ಏನ ಕತಿಯೋ? ಹೋಗು ಬಾಗಿಲು ತೆಗೀ.

ಕಂಡಕ್ಟರ ಎದ್ದ. ತನ್ನ ಊಹೆ ನಿಜವಾಗಿರುವ ಹೆಮ್ಮೆಯನ್ನು ಡ್ರೈವರ್ ಎದುರು ಪ್ರದರ್ಶಿಸುತ್ತಲೇ ಹೋಗಿ ಕಿರ್ರ್ ಗುಡುವ ಬಾಗಿಲು ತೆರೆದ.

ಎದುರಿಗೆ ಮಳೆ ಮತ್ತು ಒಬ್ಬ ಹೆಣ್ಮಗಳು ನಿಂತಿದ್ದಳು.

ಕಂಡಕ್ಟರ್ ಹಿಂದೆ ಡ್ರೈವರ್ರ‍ೂ ನಿಂತಿದ್ದ.

ಇಬ್ಬರೂ ಹೆದರಿ ಅದುರಿದರು. ಧಾರಾಕಾರ ಮಳೆ ಮತ್ತು ಹೆಣ್ಣು. ಅಮಾವಾಸ್ಯೆಯ ಕಾರ್ಗತ್ತಲ ರಾತ್ರಿ ಮತ್ತು ಹೆಣ್ಣು. ಇಬ್ಬರು ಗಂಡಸರು ಮತ್ತು ಒಬ್ಬ ಹೆಣ್ಣು.

ನೋಡ್ರಣ್ಣಾ, ಇಲ್ಯಾರಾದ್ರೂ ನನ್ನ ಗಂಡನ ನೋಡಿದ್ರಾ, ಈ ಕಡೆ ಏನಾದ್ರೂ ಬಂದಿದ್ರಾ?

ನಿಮ್ಮ ಗಂಡನಾ, ಯಾರಮ್ಮಾ ಅದು? ಅದೂ ಇಷ್ಟು ರಾತ್ರೀಲಿ

ಡ್ರೈವರ ಹೆದರುತ್ತೆದರುತ್ತಲೇ ಕೇಳಿದ. ಕಂಡಕ್ಟರ್ ಒಮ್ಮೆ ಡ್ರೈವರ್ ಮುಖವನ್ನೂ ಇನ್ನೊಮ್ಮೆ ಹೆಂಗಸಿನ ಮುಖವನ್ನೂ ನೋಡಿದ.

ನಾವು ಕಾರ ನಲ್ಲಿ ಬಂದ್ವಿ, ಕಾರು ಕೆಟ್ಟೋಯ್ತು.. ಇಲ್ಲಿ ಹತ್ತಿರ ಎದ್ರೂ ಮನೆ ಇದ್ಯಾ ಅಂತ ನೋಡ್ಕೊಂಡು ಬರ್ತೀನಿ ಅಂತ ಹೋದ್ರು ಇನ್ನೂ ಬಂದಿಲ್ಲ. ಇದ್ರೂ ಬಂದ್ರಾ?

ಇಬ್ಬರೂ ಇನ್ನೊಮ್ಮೆ ಹೆದರಿದರು. ಮುಖ ಮುಖ ನೋಡಿಕೊಂಡರು.

ಗಂಟಲಿನಿಂದ ಮಾತೂ ಹೊರಡದೇ ಇಲ್ಲವೆಂಬಂತೆ ತಲೆಯಾಡಿಸಿದರು.

ಅವಳು ನಿರಾಶೆ ಮತ್ತು ಹತಾಶೆಗಳಿಂದ ನಿಧಾನವಾಗಿ ತಿರುಗಿ ಮಳೆಯಿಂದ ತೊಯ್ದು ತೊಪ್ಪೆಯಾದ ಸೀರೆಯ ಪರಿವೆಯೂ ಇಲ್ಲದೇ ಚಲಿಸತೊಡಗಿದಳು.

ಡ್ರೈವರ್ ಮತ್ತು ಕಂಡಕ್ಟರ್ ಒಬ್ಬರಿಗೊಬ್ಬರು ಮುಖಮುಖ ನೋಡಿಕೊಳ್ಳುತ್ತಾ ಸನ್ನೆ ಮಾಡಿಕೊಂಡರು.

ಡ್ರೈವರ್ ಕೇಳಿದ- ಏನಮ್ಮಾ ಅವ್ರ ಹೆಸ್ರು?

ಅವಳು ತಿರುಗಿ ಏನೋ ಸುಳಿವು ಸಿಗಬಹುದೆಂಬ ಕಾತರದಿಂದ ಅವಸರವಸರದಲ್ಲಿ ಹೇಳಿದಳು- ರಂಗನಾಥ.

ಕಂಡಕ್ಟರ್ ಕೇಳಿದ- ನಿನ್ನ ಹೆಸ್ರೇನಮ್ಮಾ?

ಅವಳು ಏನೋ ಸುಳಿವು ಸಿಕ್ಕೇಬಿಡಬಹುದೆಂಬ ಆಸೆಯಿಂದ ಹೇಳಿದಳು- ದಮಯಂತಿ.

ಅವಳು ಮತ್ತು ಅವರಿಬ್ಬರೂ ನಿಶ್ಚಲವಾಗಿ ನಿಂತೇ ಇದ್ದರು.

ಮಳೆ ನಿಶ್ಚಿಂತೆಯಿಂದ ರಾಚುತ್ತಿತ್ತು.

ಪುಟದ ಮೊದಲಿಗೆ
 
Votes:  11     Rating: 3.55    
 
 
ಸಂಬಂಧಿಸಿದ ಲೇಖನಗಳು
  ವಿಕಾಸ್ ನೇಗಿಲೋಣಿ ಮಾಡಿರುವ ಜಪಾನಿ ಕವಿ ಪರಿಚಯ
  ತಿರುಮಲೇಶರು ಅನುವಾದಿಸಿದ ಹರ್ಮನ್ ಮೆಲ್ವಿಲ್ ನೀಳ್ಗತೆ
  ಭಾನುವಾರದ ವಿಶೇಷ: ಮನೋಜ್ ಪಿ. ಎಂ. ಬರೆದ ಕತೆ ‘ಕನಸು’
  ಎಂಬತ್ತೈದರ ಚಿತ್ತಾಲರ ಹನೇಹಳ್ಳಿ ಮತ್ತು ದೇವರು
  ಭಾನುವಾರದ ವಿಶೇಷ:ಕಾಮರೂಪಿ ಬರೆದ ಕಥೆ ‘ಉಪಪತ್ತಿಯೋಗ’
  ಬೆಳಗನುಟ್ಟವಳು:ನಟಿ ಭವಾನಿ ಪ್ರಕಾಶ್ ಬರೆದ ಹೊಸ ಕವಿತೆ
  ಮಿತ್ರಾ ವೆಂಕಟ್ರಾಜ ಬರೆದ ಸಣ್ಣಕಥೆ ‘ಬಾಬಿಯಕ್ಕ’
  ಜ. ನಾ. ತೇಜಶ್ರೀ ಅನುವಾದಿಸಿದ ಟಾಗೋರ್ ಕವಿತೆಗಳು
  ವಾರದ ವಿಶೇಷ: ರೇಣುಕಾ ಕತೆ ‘ಎರಡು ದಡಗಳ ಒಳದನಿಗಳು’
  ಭಾನುವಾರದ ವಿಶೇಷ: ಕೆ.ವಿ.ತಿರುಮಲೇಶ್ ಬರೆದ ಕತೆ ‘ಐತ’
  ಭಾನುವಾರದ ವಿಶೇಷ: ಗಣೇಶ್ ನೆಂಪೆ ಕತೆ ‘ಗಿರಿಯಮ್ಮನ ಚೌಡಿ’
  ತಿರುಮಲೇಶ್ ಅನುವಾದಿಸಿದ ವಾಲೆಸ್ ಸ್ಟೀವನ್ಸ್ ಕವಿತೆಗಳು
  ರಶೀದ್ ಅನುವಾದಿಸಿದ ರಿಲ್ಕ್ ಕವಿತೆ
  ಶಾಂತಿ ಅಪ್ಪಣ್ಣ ಬರೆದ ಕತೆ ‘ನನ್ನ ಹಾಡು ನನ್ನದು’
  ತೇಜಶ್ರೀ ಅನುವಾದಿಸಿದ ಒತೈನೊ ಅಮಿಸಿ ಕವಿತೆ
  ರಶೀದ್ ಅನುವಾದಿಸಿದ ಹಾಫಿಝನ ಕವಿತೆ
  ಶ್ರೀಕಾಂತ್ ಪ್ರಭು ಅನುವಾದಿಸಿದ ಕಾಫ್ಕಾ ಕತೆ
  ಮದರಿಯವರ ಗೊಂದಲಿಗ್ಯಾ:ಸಿದ್ಧರಾಮ ಪುಸ್ತಕ ಪರಿಚಯ
  ರಶೀದ್ ಅನುವಾದಿಸಿದ ಒಂದು ಪುಷ್ಕಿನ್ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಬೆಳಗು’
  ವೈಶಾಲಿ ಹೆಗಡೆ ಅನುವಾದಿಸಿದ ಡರೋತಿ ಪಾರ್ಕರ್ ಕವಿತೆಗಳು
  ತೇಜಶ್ರೀ ಅನುವಾದಿಸಿದ ಮೂರು ಯೇಟ್ಸ್ ಕವಿತೆಗಳು
  ಅಬ್ದುಲ್ ರಶೀದ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆ
  ವೇಂಪಲ್ಲಿ ಶರೀಫ್ ತೆಲುಗು ಕತೆ ‘ಪಚ್ಚೆ ರಂಗೋಲಿ’
  ಅನಸೂಯಾದೇವಿ ಬರೆದ ದಿನದ ಕವಿತೆ
  ಸುಧಾ ಚಿದಾನಂದ ಗೌಡ ಬರೆದ ದಿನದ ಕವಿತೆ
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು