ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನ ವರವರರಾವು (ತೆಲುಗು ಮೂಲ) ಬರೆದಿರುವ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದವರು ಎಮ್.ಎಸ್ ಶ್ರೀರಾಮ್ .
ಜಿಗಿತ
ಗಂಜ್ ಲಾಕಪ್ಪಿನಿಂದ
ಹುಣ್ಣಿಮೆಗೆ ಮೊದಲು ಕಾಣುವುದಿಲ್ಲ ಚಂದ್ರ
ಕಗ್ಗತ್ತಲ ದಿನಗಳಲಿ ಮಾತ್ರ
ಕಂಬಿ ಸರಳುಗಳೆದುರು
ಜೈಲು ಗೋಡೆಗಳ ದಾಟಿ, ಲೈವ್ ವಯರುಗಳ ಮೂಲಕ
ಆಕಾಶದತ್ತ ಆಸೆಯಿಂದ ನೋಡುತ್ತಾ ಕೂತರೆ
ಬೆಳುದಿಂಗಳ ಸುದ್ದಿಯಂತೆ ಉದಯಿಸುವನು ಚಂದ್ರ
ಲಾಕಪ್ಪಿನಲ್ಲಿ ಬೆಳುದಿಂಗಳು ಕಣ್ಣಿಗೆ ಕಟ್ಟಬೇಕೆಂದರೆ ಮಾತ್ರ
ಕರೆಂಟು ಹೋಗಲೇಬೇಕು
ಆಗ ಎಲೆಗಳ ಮೇಲಣ ಹಸುರೂ ಬೆಳುದಿಂಗಳೇ
ಹೂವಿನೊಳಗಣ ಪರಾಗವೂ ಬೆಳುದಿಂಗಳೇ
ನೆಲವೆಲ್ಲಾ ಬೆಳುದಿಂಗಳೇ
ಆಕಾಶವೊಂದು ಮೌನ ಸಂಗೀತದಂತೆ
ಕಡೆಗೆ ಗಲ್ಲುಗಂಭವೂ ಬೆಳುದಿಂಗಳ ಮೆಲುಕುಹಾಕುವಂತೆ!
ಚೆಲ್ಲಿದೆಯೇ ಬೀಸಿದೆಯೇ ಬೆಳುದಿಂಗಳು
ಜೋತಾಡುತ್ತಿದೆಯೇ ಗಲ್ಲುಗಂಭಕ್ಕೆ
ನನ್ನೂಹೆಯೊಳಗಣ ಸೌಂದರ್ಯವಾಗಿ
ಆವರಿಸಿದೆಯೇ ಭೂಮ್ಯಾಕಾಶಗಳನು
ಉಹುಂ.. ಅನುಭವ ಬಿಟ್ಟು ಬೇರೇನೂ ವಿಶ್ಲೇಷಣೆ ಹೊಂದದು ಬೆಳುದಿಂಗಳಿಗೆ
ಗಂಜ್ ಲಾಕಪ್ಪಿನಲ್ಲಿ
ಕರೆಂಟು ಹೋದ ಹೊರತು ಕಾಣುವುದಿಲ್ಲ ಬೆಳುದಿಂಗಳು
ಗಂಜ್ ಲಾಕಪ್ಪಿನಲ್ಲಿ
ಕಗ್ಗತ್ತಲ ದಿನದ ಹೊರತು ಕಾಣಿಸದು ಚಂದ್ರ
ಯಾವುದು ಮೊದಲು ಹೇಳಿ ಯಾವುದಾಮೇಲೆ ಹೇಳಿದರೂ
ಹೇಗೆ ತಲೆಕೆಳಗು ಮಾಡಿದರೂ
ಬಂಧನದಲ್ಲಿ ಸ್ವಾತಂತ್ರ ಅರಿವಾದಂತೆ
ಕಗ್ಗತ್ತಲೆಯ ಬಿಟ್ಟು ಬೆಳುದಿಂಗಳು
ನಿನ್ನ ಚೈತನ್ಯದಲ್ಲಿ ಹರಿಯದು
ಸಣ್ಣ ಮಿಂಚು: ತುಂಬು ಚಂದ್ರನಷ್ಟೇ ಅಲ್ಲ
ಹುಣ್ಣಿಮೆದಿನ ಲಾಕಪ್ಪಿನಲ್ಲಿ; ಚಂದ್ರ
ಕಣ್ಣು ತೆರೆದಷ್ಟೂ ಸಾಲದೆಂಬಂತೆ
ಕಾಣಿಸುವನು ಗಂಜ್‌ನಲ್ಲೂ
ಮೂಲ ತೆಲುಗು: ವರವರರಾವು
ಕನ್ನಡಕ್ಕೆ: ಎಂ.ಎಸ್. ಶ್ರೀರಾಮ್