ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಆಸ್ಟ್ರೇಲಿಯಾ ಪತ್ರ - ಕಾಗೆಯ ಕಂಡೀರ ನೀವು, ಕಪ್ಪನೆ...    
ಸುದರ್ಶನ್
ಗುರುವಾರ, 26 ಜೂನ್ 2008 (05:03 IST)
ನಿಮಲ್ಲೀಗ ಉತ್ತರ ಭೂಖಂಡದ ಬಿರುಬಿಸಿಲು ಹಿಂದಾಗಿ ಮುಂಗಾರಿನ ಮೋಡಗಳು ಮುಚ್ಚಿಕೊಳ್ಳುತ್ತಿದೆ ಎಂದು ಗೊತ್ತು. ಅದಕ್ಕೆ ನನ್ನ ಎಷ್ಟೋ ವಿಚಾರಗಳು ನಿಮಗೆ ದೂರ ಅನಿಬಹುದು. ಇಲ್ಲಿ ನನ್ನ ಯೋಚನೆಯನ್ನು ರೂಪಿಸುತ್ತಿರುವುದು ಚಳಿಗಾಲದ ಥಂಡಿ ಮತ್ತು ಮುಂಜಾನೆಯ ಮಂಜು. ಬಿಸಿಲೇರಿದರೂ ಹಿತವಾಗುವಷ್ಟೇ ಬೆಚ್ಚಗಾಗುವ ಹಗಲುಗಳು. ಕಂಬಳಿ ಹೊದ್ದು ತಣ್ಣೀರಲ್ಲಿ ನಿಂತ ಹಾಗೆ. ಯಾಕೋ ಬಿಸಿಲಿಗೆ ಹಾತೊರೆಯಲು ಮನಸ್ಸು ಒಪ್ಪುತ್ತಿಲ್ಲ. ಇನ್ನೊಂದಷ್ಟು ಚಳಿಯಿರಲಿ ಅನಿಸುತ್ತಿದೆ. ಇದೆಲ್ಲಾ ಹೀಗೇಕೆ ಎಂದು ತಿಳಿಯುತ್ತಿಲ್ಲ.

ಆಸ್ಟ್ರೇಲಿಯಾದ ಕ್ರಿಕೆಟ್‌ ಆಟಗಳಲ್ಲಿ ಮೈದಾನದಲ್ಲೆಲ್ಲಾ ಬಿಳಿಯ ಹಕ್ಕಿಗಳನ್ನು ನೋಡುತ್ತಿದ್ದೆವು. ಅಲ್ಲಿ ಬಿಳಿಯ ಕಾಗೆಗಳಿವೆ ಎಂದು ನನ್ನ ಗೆಳೆಯರು ನಗುತ್ತಿದ್ದುದು ನೆನಪಿದೆ. ಅವು ಬಿಳಿಯ ಕಾಗೆಗಳೇ ಅಗಿದ್ದರೆ, ನಮ್ಮ ಯಾವ ನುಡಿಗಟ್ಟಿಗೂ ಸಿಕ್ಕದ ಹಾಗೆ ಇವೆಯಲ್ಲ ಅನಿಸಿತ್ತು. ಕನ್ನಡದಲ್ಲಿ ವಿವರಿಸುವಾಗ ಅದಕ್ಕಾಗಿಯೇ ಹೊಸ ನುಡಿಗಟ್ಟಿನ ಅಗತ್ಯವಿದೆಯಲ್ಲಾ ಅನಿಸಿತ್ತು. ಆ ಹೊಸ ನುಡಿಗಟ್ಟನ್ನು ಬಿಳಿ ಮತ್ತು ಕಾಗೆ ಎಂಬ ಎರಡು ಬಿಡಿ ನುಡಿಗಳಿಗಿರುವ ಚರಿತ್ರೆಗಳ ಆಚೆಗೆ ಕಾಣಬೇಕನಿಸುತ್ತಿತ್ತು. ಇಲ್ಲಿಗೆ ಬಂದ ಮೇಲೆ ಅವು ಕಾಗೆಗಳೇ ಅಲ್ಲ. ಸೀಗಲ್ಸ್, ಕಡಲುಕಾಗೆಗಳು ಅಂತ ಗೊತ್ತಾಯಿತು. ಅಬಾರಿಜಿನಿಗಳು ಈ ಕಾಗೆಯನ್ನು ಹೇಗೆ ನೋಡಿದ್ದಾರೆ, ಹೇಗೆ ವಿವರಿಸಿದ್ದಾರೆ ಅಂತ ನನಗೆ ಗೊತ್ತಿಲ್ಲ. ಅವರು ಅದನ್ನು ಹೇಗೆ ಒಳಗೆಳೆದುಕೊಂಡಿದ್ದಾರೆ ಎಂದು ಇಷ್ಟು ದಿನ ಯಾಕೆ ನನಗೆ ಕುತೂಹಲವಾಗಲಿಲ್ಲ ಎಂದು ಸಣ್ಣಗೆ ಸಿಟ್ಟು ಬರುತ್ತದೆ. ಇರಲಿ, ಏನೋ ಹೇಳಲು ಹೋಗಿ ಏನೋ ಹೇಳುತ್ತಿದ್ದೇನೆ. ಚಳಿಗಾಲದ ಕತೆಗಳ ಮತ್ತೊಂದು ಲಕ್ಷಣವೇ ದಾರಿ ತಪ್ಪುವುದಲ್ಲವೆ?
 
ಆದರೆ ಇಲ್ಲಿಯ ಕಾಗೆಗಳೂ ಕಪ್ಪಾಗಿಯೇ ಇವೆ. ಇಂಡಿಯಾದ ಕಾಗೆಗಳಿಗಿಂತ ಸ್ವಲ್ಪ ಗಾತ್ರದಲ್ಲಿ ದೊಡ್ಡದು. ಹದ್ದೇನೋ ಎಂಬ ಅನುಮಾನ ಬರುವ ಹಾಗೆ ಅವು ಹಾರಿದಾಗ ದೊಡ್ಡದಾಗಿ ಕಾಣುತ್ತವೆ. ಆದರೆ, ಅವುಗಳ ಬಣ್ಣ ಹದ್ದಿನ ಬಣ್ಣಕ್ಕಿಂತ ಬೇರೆಯಾದ್ದರಿಂದ ತಟ್ಟನೆ ಕಾಗೆಗಳೆಂದು ಹೇಳಿಬಿಡಬಹುದು. ದೊಡ್ಡದಾದರೂ ಹದ್ದಿಗಿರಬೇಕಾದ ಗಾಂಭೀರ್ಯ ಇವುಗಳಿಗಿಲ್ಲ. ಹದ್ದುಗಳು ತಮ್ಮ ಮೈಗಾತ್ರಕ್ಕೆ ಮೀರಿದ ಭಾರವನ್ನು ಹೊರುವಂತೆ ಕಾಣುತ್ತವೆ. ಅದು ಈ ಕಾಗೆಗಳನ್ನು ನೋಡಿದಾಗ ನನ್ನ ಅರಿವಿಗೆ ಬಂದಿದ್ದು. ಸಾವಿರಾರು ವರ್ಷಗಳ ಹಿಂದಿನ ನಮ್ಮ ಪೂರ್ವಿಕರಿಗೂ ಹಾಗೇ ಅನಿಸಿರಬೇಕು. ಅದಕ್ಕಾಗಿಯೇ ಅವುಗಳು ದೇವತೆಗಳನ್ನು ಹೊರುವಂತಿದೆ ಎಂದು ಚಿತ್ರಿಸಿಕೊಂಡಿರಬೇಕು. ನೋಡಿ ಮತ್ತೆ ಕಾಗೆ ಬಿ‌ಟ್ಟು ಹದ್ದಿನ ಬೆನ್ನು ಹತ್ತಿದೆನಲ್ಲ!

ನಾನು ಚಿಕ್ಕವನಿದ್ದಾಗ ಬೆಂಗಳೂರಿನಲ್ಲಿ ನೋಡುತ್ತಿದ್ದ ಪೀಚು ಕಾಗೆಗಳಿಗಿಂತ ಇವು ದೊಡ್ಡವು ಎಂಬುದಲ್ಲದೆ ಇನ್ನೊಂದು ಭಿನ್ನತೆಯೂ ಇದೆ. ಬೆಂಗಳೂರಿನ ಕಾಗೆಯ ಕಣ್ಣುಗಳಲ್ಲಿ ನಾವು ಪುಟ್ಟವರಿದ್ದಾಗ ಕಾಣುತ್ತಿದ ದಿಗಿಲು ಮತ್ತು ಎಚ್ಚರಕ್ಕೆ ಸಂಬಂಧಪಟ್ಟಿದ್ದು. ಬೆಂಗಳೂರಂತ ನಗರದಲ್ಲಿ, ಸಾವಿರಾರು ವರ್ಷಗಳಿಂದ ಎದುರಾಗದೇ ಇರದ ಹೊಸ ಒತ್ತಡಗಳಿಗೆ ಒಗ್ಗಿಕೊಳ್ಳಬೇಕಾದ ಕಾಗೆಗಳ ಕಣ್ಣಲ್ಲಿ ಬೇರೇನು ಇರಲು ಸಾಧ್ಯ ಎಂದು ಈಗ ಅನಿಸುತ್ತಿದೆ. ನಿಧಾನಕ್ಕೆ ಹೋಗುವ ಎತ್ತಿನಗಾಡಿಯ ಮೇಲೋ, ಜಟಕಾದ ಮೇಲೋ ತಾನೂ ಕೂತು ಮಜಮಾಡಲು ಕಲಿತಿದ್ದ ಕಾಗೆಗಳಿಗೆ ಧಿಡೀರನೆ ಹೊಗೆ ಕಾರುತ್ತ ಭರೋ ಎಂದು ಹೋಗುವ ಬಸ್ಸು, ಕಾರು, ಬೈಕು ಎಷ್ಟೊಂದು ದಿಗಿಲು ಹುಟ್ಟಿಸಿರಬಹುದು ಎಂದು ಕನಿಕರವಾಗುತ್ತದೆ. ಅವುಗಳ ಕಣ್ಣಲ್ಲಿ ಕಂಡದ್ದಕ್ಕೆ ಹೊಸ ಅರ್ಥ ಹೊಳೆಯುತ್ತದೆ. ಅರೆ, ನಾನು ಹೇಳ ಹೊರಟ್ಟಿದ್ದು ಮತ್ತೆ ಮರೆತುಬಿಟ್ಟೆ!

ಇರಲಿ, ಇಲ್ಲಿಯ ಕಾಗೆಗಳ ಕಣ್ಣಲ್ಲಿ ಅಲ್ಲಿರುವಷ್ಟು ದಿಗಿಲು,ಎಚ್ಚರ ನನಗೆ ಕಂಡಿಲ್ಲ. ಸಾಯದೇ ಉಳಿಯಲು ಎಲ್ಲ ಪ್ರಾಣಿಗೂ ಇರಬೇಕಾದಷ್ಟು ಎಚ್ಚರ ಇದ್ದೇ ಇದೆ. ಅಲ್ಲಿಯ ಕಾಗೆಗಳಂತೆ ಇವೂ ಕತ್ತನ್ನು ಆಚೀಚೆ ತಟ್ಟನೆ ತಿರುಗಿ ನೋಡುತ್ತವೆ. ಆದರೂ ಆ ಕಾಗೆಗಳ ಕಣ್ಣಿನ ದಿಗಿಲು ಇಲ್ಲಿದ್ದ ಹಾಗಿಲ್ಲ. ಹಾಗಾಗಿಯೇ ಇವುಗಳು ಏರುವುದರಲ್ಲಿ ಇಳಿಯುವುದರಲ್ಲಿ ಅಲ್ಲಿಯ ಕಾಗೆಗಳಿಗಿಂತ ಹೆಚ್ಚು ನಿಧಾನ ಮತ್ತು ಸಾವಕಾಶ.  ಈ ಕಾಗೆಗಳನ್ನು ನೋಡಿದ ಮೇಲೆ ಬೆಂಗಳೂರಿನ ಕಾಗೆಗಳು ಚೋಟುದ್ದದ ಏರ್‍-ಸ್ಟ್ರಿಪ್ಪಿನಲ್ಲೇ ಇಳಿಯಬೇಕಾದ ಪುಟ್ಟ ವಿಮಾನಗಳ ಹಾಗೆ ನೆಲಕ್ಕೆ ಧುಮುಕುತ್ತವೆ ಅನಿಸುತ್ತದೆ. ಛೆ ನೋಡಿ, ಮತ್ತೆ ಯಾವುದಕ್ಕೋ ತಿರುಗಿಬಿಟ್ಟೆ! ನಾನು ಹೇಳ ಹೊರಟಿದ್ದು ಇಲ್ಲಿಯ ಕಾಗೆಗಳ ಬಗ್ಗೆ ಅಲ್ಲವೆ?

ಈವತ್ತು ಮುಂಜಾನೆ ಇಳಿದಿದ್ದ ದಟ್ಟ ಮಂಜಿನ ಪರದೆಯಾಚೆ ಕೂತು ಕಾಗೆಯೊಂದು ಕೂಗುತ್ತಿತ್ತು. ಇಲ್ಲಿನ ಕಾಗೆಗಳು ಕಾವ್-ಕಾವ್ ಅನ್ನಲ್ಲ ಅಂತ ಮೊದಲೇ ನಿಮಗೆ ಹೇಳಬೇಕೆಂದುಕೊಂಡಿದ್ದೆ. ಆಗಿರಲಿಲ್ಲ. ಇರಲಿ, ಅವುಗಳ ಕೂಗು ನಿಜವಾಗಿಯೂ ಯಾವುದೋ ಮಗುವಿನ ಅಳುವನಿಂತೆ, ಕೂಗಿನಂತೆ ಕೇಳುತ್ತದೆ. ಕೂಗುತ್ತಲೇ ಇದ್ದರೆ, ಪಕ್ಕದ ಮನೆಯ ಮಗುವೋ, ಹಿಂದಿನ ಬೀದಿಯ ಮಗುವೋ ಅಳುತ್ತಿದೆ ಅನಿಸದೇ ಇರುವುದಿಲ್ಲ. ಈವತ್ತು ಕಾಗೆಯ ಕೂಗು ಕೇಳಿದೊಡನೆ, ಸಣ್ಣ ಮಗು ಅಳುವುದನ್ನು ಕೇಳಿ ತುಂಬಾ ದಿನವಾಯಿತಲ್ಲ ಅಂತ ಅನಿಸಿತು. ದಟ್ಟ ಮಂಜಿನಾಚೆ ಮಗುವಿನ ಅಳುವಂತೆ ಕೇಳುವ ಕಾಗೆಯ ಕೂಗು. ನನಗೆ ತಿಳಿದ ಯಾವ ನುಡಿಗಟ್ಟಿಗೂ ಒಳಗೊಳ್ಳದೇ ಉಳಿದು ಬಿಡುತ್ತದಲ್ಲ. ಏನೆಂದು ತಿಳಿಯಬೇಕು ಅನಿಸುವಾಗಲೇ ಆಗುವ ಕಳವಳ. ಕೂಗು ನಿಲ್ಲದೇ ಕೇಳುತ್ತಲೇ ಇದುದ್ದರಿಂದ ಯಾವುದೋ ಮಗುವಿರಬಹುದೇ ಎಂಬ ಅನುಮಾನ ದಟ್ಟವಾಗುವುದು. ಇಂತ ಚಳಿಯಲ್ಲಿ ಅಳುವ ಮಗುವನ್ನು ಯಾರು ಬಿಡುತ್ತಾರೆ ಎಂದು ಎಷ್ಟು ಸಮಾಧಾನ ಹೇಳಿಕೊಂಡರೂ ಸಾಲದೇ ಹೋಗುವುದು.

ಆ ಮಂಜಿನ ಗೋಡೆಯ ಮೇಲೆ ಉಗುರನ್ನು ಗೀಚಿ ಹರಿದು ಇಣಕಿ ನೋಡಬೇಕನಿಸಿತು. ಆದರೆ ಅಷ್ಟರಲ್ಲಿ ಕೂಗಿನಂತ ಅಳುವೋ, ಅಳುವಿನಂತ ಕೂಗೋ ಆದ ಅದು ನಿಂತಿತು. ಯಾರೋ ಮಗುವನ್ನು ಎತ್ತಿಕೊಂಡು ಅದಕ್ಕೆ ಬೆಚ್ಚಗೆ ವಸ್ತ್ರ ಹೊಚ್ಚಿರಬಹುದು. ಬೆಚ್ಚಗಾದ ಸುಖದಲ್ಲಿ ಅದು ಸುಮ್ಮನಾಗಿರಬಹುದು. ಅಥವಾ ಕೂಗಿ ಕೂಗಿ ಗಂಟಲೊಣಗಿ, ಏನೂ ಕಾಣದ ಮಂಜಲ್ಲಿ ಸುಮ್ಮನೆ ಕೂತು ಕಾಗೆಯೊಂದು ಧ್ಯಾನಸ್ತವಾಗಿರಬಹುದು.
ಪುಟದ ಮೊದಲಿಗೆ
 
Votes:  2     Rating: 3    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು