ಯಶೋವರ್ಧನ ಕೋಟೆ ಅಮೇರಿಕದ ಸೆಲಿನಾಸ್ ಎಂಬ ಸಣ್ಣ ಊರಿನಲ್ಲಿ ಹಣಕಾಸು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲೆಮಾರಿ ಜೀವನವನ್ನು ಇಷ್ಟಪಡುವ ಅವರು, ಸಮಯ ಸಿಕ್ಕಿದಾಗ ಚಿಕ್ಕ ವಿಮಾನವನ್ನು ಹಾರಿಸಿಕೊಂಡು ಅಲ್ಲಿಯ ಹಳ್ಳಿಗಳನ್ನು ನೋಡಲು ಹೋಗುತ್ತಾರೆ. ಮೈಸೂರಿನಲ್ಲಿ ಇಂಜಿನೀಯರಿಂಗ್ ಮುಗಿಸಿದ ಯಶೋವರ್ಧನ್ ಅವರಿಗೆ ಅಮೇರಿಕಾದಲ್ಲಿ ವಿಮಾನ ಹಾರಿಸುವಾಗ ಚಾಮುಂಡಿಯ ತಪ್ಪಲಿನ ಹಳ್ಳಿಗಳ ನೆನಪಾಗುತ್ತದೆಯಂತೆ…
‘ಈಗ ತಾನೇ ಲ್ಯಾಂಡ್ ಆದೆ ಕಣೋ. ನಾಳೆ ಅರವಿಂದ ಸ್ಯಾನ್ ಡಿಯೆಗೊ ಇಂದ ಬರ್ತಾನಂತೆ. ನೀನು ಯಾವಾಗ ಸಿಕ್ತೀಯ? ಎಲ್ಲಾದರೂ ಟ್ರಿಪ್ ಹಾಕಣಾ?’ ಎಂದು ಮುಕುಂದನ ಪ್ರಶ್ನೆ ಲಾಸ್ ಏಂಜಲೀಸ್‌ನಿಂದ ಕೇಳಿಸಿತು. ಮುಕುಂದ ನನ್ನ ಕಾಲೇಜಿನ ಹಳೆಯ ಸ್ನೇಹಿತ. ಭಾರತದಿಂದ ಆನ್-ಸೈಟ್ ಬಂದಿದ್ದು ಒಂದೆರಡು ತಿಂಗಳು ಇರುವ ಯೋಚನೆ ಅವನಿಗೆ ಇತ್ತು. ಅರವಿಂದನೂ ನನ್ನ ಕಾಲೇಜಿನ ಗೆಳೆಯ. ಅವನು ಸ್ಯಾನ್ ಡಿಯೆಗೊ ನಗರದಲ್ಲಿ ಎಂ.ಎಸ್ ಮಾಡಿ ಅಲ್ಲೇ ಕೆಲಸ ಮಾಡುತ್ತಿದ್ದ. ನಾನು ಸಲೀನಾಸ್ ಎಂಬ ಚಿಕ್ಕ ಊರಿನಲ್ಲಿ ಕೆಲಸ ಮಾಡಿಕೊಂಡು ಇರುವವನು.
ಸ್ಯಾನ್ ಡಿಯೆಗೊ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ದಕ್ಷಿಣದ ತುದಿಯಲ್ಲಿ ಮೆಕ್ಸಿಕೋಗೆ ತಾಗಿ ಇರುವ ಸುಂದರ ನಗರ. ಅಲ್ಲಿಂದ ಸುಮಾರು ೧೦೦ ಮೈಲಿ ಉತ್ತರದಲ್ಲಿ ಲಾಸ್ ಏಂಜಲೀಸ್. ಹಾಗೆಯೇ ಉತ್ತರಕ್ಕೆ ೩೫೦ ಮೈಲಿ ಉತ್ತರಕ್ಕೆ ಹೋದರೆ ಸಲೀನಾಸ್. ನಾನಿದ್ದ ನಗರ ನೊಬೆಲ್ ಪುರಸ್ಕೃತ ಜಾನ್ ಸ್ಟೈನ್ಬೆಕ್‌ನ ತವರು.
ಫೋನ್ ಇಟ್ಟ ಮೇಲೆ ಯೋಚನೆ ಶುರುವಾಯಿತು. ಮೂವರೂ ಎಲ್ಲಿ ಭೇಟಿ ಮಾಡುವುದು? ಎಲ್ಲಿಗೆ ಹೋಗುವುದು? ನನಗೆ ಹೇಗಿದ್ದರೂ ಪ್ರಯಾಣದ ಹುಚ್ಚು, ಹಾಗಾಗಿ ಯಾರೂ ಹೋಗದ ಜಾಗಗಳೂ ನನಗೆ ಆಕರ್ಷಕವಾಗಿ ಕಾಣುತ್ತವೆ. ಆದರ ಮೇಲೆ ನನ್ನ ಪ್ರಯಾಣಗಳಲ್ಲಿ ನನಗೆ ಹೋಟೇಲಿನಲ್ಲಿ ಮಲಗುವುದಕ್ಕಿಂತ ಹೊರಗೆ ತಿರುಗಾಡುವ ಆಸೆ ಹೆಚ್ಚು. ಮುಕುಂದ, ಅರವಿಂದ ಹಾಗಲ್ಲ - ಇಬ್ಬರೂ ನಿದ್ರಾ ಪ್ರಿಯರು. ಅಂದ ಮೇಲೆ ಪ್ರಯಾಣವೇ ಸ್ವಾರಸ್ಯವಾಗಿರಬೇಕು.
ಥಟ್ಟೆಂದು ಹೊಳೆಯಿತು. ನಾವೆಲ್ಲರೂ ವಿಮಾನದಲ್ಲಿ ಎಲ್ಲಾದರೂ ಹೋಗಬಹುದು! ನಾನು ವಿಮಾನ ಚಾಲಕನಾಗಿ ಪರೀಕ್ಷೆ ಪಾಸ್ ಮಾಡಿ ಮೂರು ತಿಂಗಳು ಆಗಿತ್ತು. ಮಿತ್ರರೊಡನೆ ಹತ್ತಿರದಲ್ಲೇ ಒಂದೆರಡು ಜಾಗಗಳಿಗೆ ಹೋಗಿ ಬಂದಿದ್ದೆ. ಆದರೆ ಹತ್ತಿರದ ಸ್ನೇಹಿತರೊಡನೆ ಎಲ್ಲಿಗೂ ಹೋಗಿರಲಿಲ್ಲ. ಅವರನ್ನು ಕರೆದುಕೊಂಡು ಲೇಕ್ ಟಾಹೋಗೆ ಹಾರುವ ನಿರ್ಧಾರ ಮಾಡಿದೆ. ನನಗೆ ಹಾರುವ ಆಸೆ ಬಹಳ ಚಿಕ್ಕ ವಯಸ್ಸಿನಿಂದಲೇ ಇತ್ತು. ಭಾರತದಲ್ಲಿ ಅದಕ್ಕೆ ಅವಕಾಶಗಳು ಇರಲಿಲ್ಲ. ಇದ್ದರೂ ನಮಗೆ ಎಟುಕದಷ್ಟು ದುಬಾರಿ. ಹಾಗಾಗಿ ನಾನು ದುಡಿಯಲು ಶುರು ಮಾಡಿದ ಮೇಲೆ ವಿಮಾನಗಳ ರಿಮೋಟ್ ಕಂಟ್ರೋಲ್ ಮಾಡೆಲ್‌ಗಳನ್ನು ಮಾಡಿ ನನ್ನ ಆಸೆಗಳನ್ನು ಸ್ವಲ್ಪ ಮಟ್ಟಿಗೆ ತೀರಿಸಿಕೊಂಡೆ. ನಂತರ ಅಮೆರಿಕಕ್ಕೆ ಎಮ್.ಬಿ.ಎ ಮಾಡಲು ಬಂದಾಗ ಓದಿನಲ್ಲೇ ಮುಳುಗಿ ಹಾರಾಟದ ಮೇಲೆ ಹೆಚ್ಚು ಗಮನ ಕೊಡಲು ಆಗಲಿಲ್ಲ. ಮೊದಲ ಕೆಲಸ ಸಿಕ್ಕ ಮೇಲೂ ಆ ಸಂಬಳದಲ್ಲಿ ಹಾರಾಟ ಕಲಿಯಲು ಆಗದು ಎಂದು ಸುಮ್ಮನಿರಬೇಕಾಯಿತು.
೨೦೦೭ ಪ್ರಾರಂಭದಲ್ಲಿ ನನಗೆ ಸಲೀನಾಸ್ ಊರಿನಲ್ಲಿ ಹೊಸ ಕೆಲಸ ಸಿಕ್ಕಿತು. ಈ ಊರು ಸ್ಯಾನ್ ಹೋಸೆ ನಗರ ಮತ್ತು ಸಿಲಿಕಾನ್ ವ್ಯಾಲಿಗೆ ಒಂದು ಗಂಟೆ ದೂರ. ಪೆಸಿಫಿಕ್ ಸಾಗರದ ತೀರಕ್ಕೆ ಬಹಳ ಹತ್ತಿರ. ಹೊಸ ಕೆಲಸದೊಂದಿಗೆ ಬಂದ ಬೋನಸ್ ಅನ್ನು ‘ಸರಿಯಾಗಿ’ ಉಪಯೋಗಿಸಬೇಕೆಂದು ನಿರ್ಧಾರ ಮಾಡಿ ಇಲ್ಲಿಗೆ ಬಂದ ವಾರದೊಳಗೇ ಹೋಗಿ ಮನೆಗೆ, ಆಫೀಸಿಗೆ ಹತ್ತಿರದ ಸಲೀನಾಸ್ ವಿಮಾನ ನಿಲ್ದಾಣದಲ್ಲಿದ್ದ ಫ್ಲೈಟ್ ಸ್ಕೂಲ್‌ಗೆ ಹೋಗಿ ಸೇರಿಕೊಂಡೆ. ಬೇರೆ ದೇಶದವನಾದ್ದರಿಂದ ಇಲ್ಲಿನ ಟಿ.ಎಸ್.ಎ ಅವರಿಂದ ಅನುಮತಿ ಪಡೆಯಬೇಕಿತ್ತು. ಅದನ್ನು ಪಡೆದು, ಮೆಡಿಕಲ್ ಸರ್ಟಿಫಿಕೇಟ್ ಮಾಡಿಸಿ ನನ್ನ ಪಾಠಗಳನ್ನು ಶುರು ಮಾಡಿದೆ. ವಾರಕ್ಕೆ ಮೂರು ಬಾರಿ ಬೆಳಿಗ್ಗೆ ಏಳರಿಂದ ಒಂಭತ್ತರ ವರೆಗೆ ಹಾರಾಡಿ ಕೆಲಸಕ್ಕೆ ಹೋಗುತ್ತಿದ್ದೆ. ಒಂದು ತಿಂಗಳೊಳಗೇ ನನ್ನ ‘ಸೋಲೋ ಫ್ಲೈಟ್’ ಆಯಿತು. ಪ್ರತಿಯೊಬ್ಬ ಪೈಲಟ್‌ನ ಪ್ರಕಾರ ವಿಮಾನದಲ್ಲಿ ಮೊದಲ ಬಾರಿ ಒಬ್ಬನೇ ಹಾರುವ ದಿನ ಜೀವನ ಪೂರ್ತಿ ನೆನಪಿಟ್ಟುಕೊಳ್ಳುವಂತಹದ್ದು.ಇನ್ ಸ್ಟ್ರಕ್ಟರ್ ಪಕ್ಕದಲ್ಲಿ ಇರದೆ ವಿಮಾನ ಟೇಕ್ ಆಫ್ ಆಗಲು ತವಕಿಸುತ್ತದೆ. ನೆಲದಿಂದ ಜಿಗಿದ ತಕ್ಷಣ, ಚಕ್ರಗಳು ರನ್ ವೇ ಮೇಲೆ ಹೊರಳುವುದು ನಿಂತ ಕೂಡಲೆ ಆಗುವ ಪರಮಾನಂದಕ್ಕೆ ಬೇರೆ ಸಾಟಿಯಿಲ್ಲ. ವಿಮಾನವನ್ನು ಹಾಗೆಯೇ ಅನಾಹುತವಿಲ್ಲದೆ ಮರಳಿ ನೆಲಕ್ಕೆ ಇಳಿಸಿದಾಗ ಸಮಾಧಿಸ್ಥಿತಿಗೆ ಹೋಗುವುದೊಂದು ಬಾಕಿ.
ಇನ್ನೂ ಕೆಲವು ತಿಂಗಳುಗಳು ಪಾಠಗಳನ್ನು ತೆಗೆದುಕೊಂಡು, ಈ ಸುಂದರ ಪ್ರದೇಶವನ್ನು ಅತಿ ಕೆಲವರು ಮಾತ್ರ ಕಂಡ ಕಣ್ಣುಗಳಲ್ಲಿ ಕಂಡೆನು. ನನ್ನ ಪರೀಕ್ಷೆಯನ್ನು ಪಾಸ್ ಮಾಡಿ ಒಂದೆರಡು ಬಾರಿ ಚಿಕ್ಕ ಚಿಕ್ಕ ಊರುಗಳಿಗೆ ಹೋಗಿ ಬಂದೆ. ಲಿವರ್ಮೋರ್ ಊರಿನ ದೇವಸ್ಥಾನಕ್ಕೆ ಭೇಟಿ ಕೊಟ್ಟೆ. ಅಮೆರಿಕದ ಪ್ರತಿಯೊಂದು ಊರಿಗೂ ಹೆಚ್ಚಿನ ಪಕ್ಷ ೧೫ ನಿಮಿಷಗಳ ಒಳಗೆ ಒಂದು ವಿಮಾನ ನಿಲ್ದಾಣವಿದೆ. ಇಡೀ ಜಗತ್ತಿನಲ್ಲಿ ಹಾರಾಡಲು ಇಷ್ಟು ಸವಲತ್ತು-ಪ್ರೋತ್ಸಾಹ ಇನ್ನೆಲ್ಲೂ ಇಲ್ಲ.
ಈ ಸುಂದರವಾದ ರಾಜ್ಯವನ್ನು ಹೊಸ ದೃಷ್ಠಿಕೋನದಲ್ಲಿ ಗೆಳೆಯರೊಂದಿಗೆ ಹಂಚಿಕೊಳ್ಳಬೇಕೆಂಬ ಆಸೆ ಇತ್ತು. ಈಗ ಅವಕಾಶ ಸಿಕ್ಕಿತು. ಅರವಿಂದನಿಗೆ ಫೋನ್ ಮಾಡಿ ಯಾವುದಾದರೂ ಶುಕ್ರವಾರ ಸಂಜೆ ಮುಕುಂದನನ್ನು ಕರೆದುಕೊಂಡು ಬರಲು ಹೇಳಿದೆ. ಶನಿವಾರ ಬೆಳಿಗ್ಗೆ ಬೇಗ ಎದ್ದು ವಿಮಾನದಲ್ಲಿ ನಮ್ಮ ಪ್ರಯಾಣ ಶುರು ಮಾಡುವ ಉಮೇದು.ವಿಮಾನ ನಿಲ್ದಾಣದಲ್ಲಿ ಒಂದು ನಾಲ್ಕು ಸೀಟಿನ ವಿಮಾನವನ್ನು ಕಾದಿರಿಸಿದೆ. ಲೇಕ್ ಟಾಹೊ ಇರುವುದು ಕ್ಯಾಲಿಫೋರ್ನಿಯಾ ಮತ್ತು ನೆವಾಡಾ ರಾಜ್ಯಗಳ ಗಡಿಯಲ್ಲಿ. ಸಲೀನಾಸ್ ಸಮುದ್ರ ಮಟ್ಟದಿಂದ ೮೦ ಅಡಿ ಎತ್ತರದಲ್ಲಿ ಇದ್ದರೆ, ಲೇಕ್ ಟಾಹೊ ಸಿಯೆರ ನೆವಾಡ ಪರ್ವತ ಶ್ರೇಣಿಯ ನಡುವೆ ಸುಮಾರು ೬೫೦೦ ಅಡಿ ಎತ್ತರದಲ್ಲಿ ಇದೆ. ಛಳಿಗಾಲದಲ್ಲಿ ಎಲ್ಲರೂ ಅಲ್ಲಿಗೆ ಸ್ಕೀಇಂಗ್ ಮಾಡಲು ಹೋಗುತ್ತಾರೆ. ಬೇಸಿಗೆಯಲ್ಲಿ ತಂಪಾದ ಗಾಳಿ, ತಿಳಿಯಾದ ನೀರನ್ನು ಸವಿಯಲು ಹೋಗುತ್ತಾರೆ. ನಾವು ಹೊರಟದ್ದು ಸೆಪ್ಟೆಂಬರ್ ತಿಂಗಳಲ್ಲಿ.
ಅರವಿಂದ ಮತ್ತು ಮುಕುಂದ ಬರುವ ಕೆಲವು ದಿನಗಳ ಹಿಂದೆ ಸಲೀನಾಸ್ ಮತ್ತು ಸ್ಯಾನ್ ಹೋಸೆ ನಗರದ ಮಧ್ಯ ಇದ್ದ ಕಾಡಿನಲ್ಲಿ ದೊಡ್ಡ ಬೆಂಕಿಯೊಂದು ಹತ್ತಿಕೊಂಡಿತು. ಅದರ ಹೊಗೆ ನೂರಾರು ಚದರ ಮೈಲಿಗಳಲ್ಲಿ ಹರಡಿತು. ನನಗೆ ಆತಂಕ ಶುರುವಾಯಿತು - ನಮ್ಮ ಟ್ರಿಪ್ ಕ್ಯಾನ್ಸಲ್ ಮಾಡುವುದೇ? ಎಲ್ಲವೂ ಸರಿ ಇದ್ದಿದ್ದರೆ ಸಲೀನಾಸ್ ಇಂದ ಲೇಕ್ ಟಾಹೊಗೆ ಹೋಗಲು ಹೆಚ್ಚು ಕಡಿಮೆ ಉತ್ತರಕ್ಕೆ ಹೋಗಿ, ಪರ್ವತಗಳು ಸಿಕ್ಕಿದಾಗ ಕಣಿವೆಯಲ್ಲಿ ಒಂದು ರಸ್ತೆಯನ್ನೇ ಹಿಡಿದು ಹೋಗುವುದು ಸುಲಭ. ಈ ಬೆಂಕಿಯನ್ನು ತಪ್ಪಿಸಲು ನಾನು ಪೂರ್ವಕ್ಕೆ ಹೋಗಿ, ಉತ್ತರಕ್ಕೆ ತಿರುಗಿ, ಮತ್ತೆ ಪೂರ್ವಕ್ಕೆ ಹೋಗಬೇಕು. ಬೆಂಕಿಯ ಹೊಗೆ ಮತ್ತು ಮಸಿ ಗಾಳಿಯಲ್ಲಿ ಪಸರಿಸಿ ಬಹಳ ದೂರ ಬೇರೆ ಕಾಣುವುದಿಲ್ಲ.
ಹೊರಡುವ ಹಿಂದಿನ ದಿನ ಅಗ್ನಿಶಾಮಕ ದಳದವರು ಬೆಂಕಿಯನ್ನು ಬಹಳಷ್ಟು ಹಿಡಿತಕ್ಕೆ ತಂದರು. ನಾನು ಸ್ವಲ್ಪ ನಿಟ್ಟುಸಿರು ಬಿಟ್ಟೆ. ಆದರೂ ಬೆಂಕಿಯನ್ನು ವಿಮಾನಗಳಿಂದ ಶಮನಗೊಳಿಸುತ್ತಿದ್ದರಿಂದ ಅದನ್ನು ಸುತ್ತಿಕೊಂಡೇ ಹೋಗಬೇಕು. ಶುಕ್ರವಾರದ ಸಂಜೆ ಅರವಿಂದ ಹೊರಟು ಮುಕುಂದನನ್ನು ದಾರಿಯಲ್ಲಿ ಕರೆದುಕೊಂಡು ರಾತ್ರೋ ರಾತ್ರಿ ಸಲೀನಾಸ್ ತಲುಪಿದರು. ಶನಿವಾರದ ಬೆಳಿಗ್ಗೆ ಸುಮಾರು ೮ ಘಂಟೆಗೆ ವಿಮಾನ ನಿಲ್ದಾಣಕ್ಕೆ ಹೋಗಿ, ಹವಾಮಾನ ವರದಿಯನ್ನು ತೆಗೆದುಕೊಂಡು, ಫ್ಲೈಟ್ ಪ್ಲ್ಯಾನ್ ಅನ್ನು ಫೈಲ್ ಮಾಡಿದೆ. ಮುಕುಂದ ಮತ್ತು ಅರವಿಂದರಿಗೆ ಅದೇ ಮೊದಲ ಬಾರಿ ಒಂದು ವಿಮಾನ ನಿಲ್ದಾಣವನ್ನು ಏನೂ ಸೆಕ್ಯೂರಿಟಿ ಇಲ್ಲದೆ ಹೊಕ್ಕಿದ್ದು. ಜೊತೆಗೆ ಚಿಕ್ಕ ವಿಮಾನದಲ್ಲಿ ಅವರು ಎಂದೂ ಪ್ರಯಾಣ ಮಾಡಿರಲಿಲ್ಲ. ನಮಗೆ ಲೇಕ್ ಟಾಹೊ ಅಲ್ಲಿ ಇರಲು ಒಂದೇ ರಾತ್ರಿ ಇದ್ದರೂ ನಮ್ಮ ಪ್ರಯಾಣವೇ ಹೆಚ್ಚು ಆಕರ್ಷಕವಾಗಿ ಕಾಣುತ್ತಿತ್ತು!
ನಾವು ಹೊರಟದ್ದು ಒಂದು ಸೆಸ್ನ-೧೭೨ ಎಂಬ ವಿಮಾನದಲ್ಲಿ. ಜಗತ್ತಿನಲ್ಲಿ ಹೆಚ್ಚಿನ ಜನ ಹಾರಾಟ ಕಲಿಯುವುದು ಇದೇ (ಅಥವ ಇದರ ತಮ್ಮ ಸೆಸ್ನ-೧೫೨) ವಿಮಾನದಲ್ಲಿ. ಇರುವುದು ನಾಲ್ಕು ಸೀಟುಗಳಾದರೂ ತೂಕದ ಮಿತಿಯಿಂದ ಮೂರು ಜನ ಹೋಗಲು ಮಾತ್ರ ಸಾಧ್ಯ. ಅದು ಘಂಟೆಗೆ ಸರಿಸುಮಾರು ೧೨೦ ಮೈಲಿಗಳ ಪ್ರಕಾರ ಹಾರುತ್ತದೆ. ಹಾರುವ ಗಾಳಿ ನಮ್ಮನ್ನು ಹಿಂದಕ್ಕೆ ತಳ್ಳಿದರೆ ಇನ್ನೂ ನಿಧಾನ, ಹಿಂದಿನಿಂದ ನೂಕಿದರೆ ಇನ್ನೂ ವೇಗ.
ಹೋಗುವಾಗ ಮುಕುಂದನನ್ನು ನ್ಯಾವಿಗೇಟರ್ ಎಂದು ನೇಮಿಸಿದೆ. ನಿಜ ಹೇಳಬೇಕೆಂದರೆ ನನಗೆ ದಾರಿ ಗೊತ್ತಿತ್ತು. ಆದರೆ ಮುಕುಂದನಿಗೆ ಇಂತಹ ವಿಷಯಗಳಲ್ಲಿ ಉತ್ಸಾಹ. ಹಾಗಾಗಿ ಅವನ ಕೈಗೆ ನಕ್ಷೆಯನ್ನು ಕೊಟ್ಟು ನಾವು ಹೋಗುವ ದಾರಿ ಸರಿಯೆ ಎಂದು ಕಣ್ಣು ಇಡಲು ಹೇಳಿದೆ. ಅರವಿಂದ ಹಿಂದೆ ಕುಳಿತುಕೊಂಡು ನಮ್ಮ ಕ್ಯಾಮೆರ ಮ್ಯಾನ್ ಆಗಿದ್ದ.
ಸಲೀನಾಸಲ್ಲಿ ಅಂದು ರನ್ವೇ ೩೧ ಉಪಯೋಗದಲ್ಲಿ ಇತ್ತು. ಟೇಕ್ ಆಫ್ ಮುಂಚೆ ಕೊನೆಯ ಬಾರಿ ಎಲ್ಲವೂ ಸರಿ ಇದೆಯೆ ಎಂದು ಖಚಿತ ಮಾಡಿಕೊಂಡು ಸಲೀನಾಸ್ ಟವರ್ ಅನ್ನು ಟೇಕ್ ಆಫ್ ಆಗಲು ಅನುಮತಿ ಕೇಳಿದೆ. ಅವನು ಅನುಮತಿ ಕೊಟ್ಟ. ನಮ್ಮ ಪುಟ್ಟ ಸೆಸ್ನ ರನ್ವೆ ೩೧ ಮೇಲೆ ಓಡುತ್ತ ಆಕಾಶಕ್ಕೆ ಜಿಗಿಯಿತು.
ನಾನು ಮೊದಲು ಪೂರ್ವಕ್ಕೆ ಲಾಸ್ ಬಾನೊಸ್ ಕಡೆಗೆ ಹೋಗಿ ನಂತರ ಉತ್ತರಕ್ಕೆ ಪ್ಲ್ಯಾಸರ್ವಿಲ್ ಗೆ ಹೋಗಲು ಫ್ಲೈಟ್ ಪ್ಲ್ಯಾನ್ ಅಪ್ಲೈ ಮಾಡಿದ್ದೆ. ಸಮುದ್ರ ಮಟ್ಟದಿಂದ ಏರುತ್ತ ಸಲೀನಾಸ್ ಕಣಿವೆಯ ಸೌಂದರ್ಯ ಗೋಚರಿಸಿತು. ದೂರದಲ್ಲಿ ಹೊಗೆಯ ಚಿಲುಮೆ ಕಂಡುಬಂತು. ಸಲೀನಾಸ್ ಟವರ್ ನನಗೆ ನಾರ್ಕ್ಯಾಲ್ ಅಪ್ರೋಚ್ ಜೊತೆ ಮಾತಾಡಲು ಅನುಮತಿ ಕೊಟ್ಟ. ಹಾರುವಾಗ ನಾವು ಯಾವ ಏರ್ ಟ್ರಾಫಿಕ್ ಕಂಟ್ರೋಲ್ ಜೊತೆಯೂ ಸಂಪರ್ಕ ಇಟ್ಟುಕೊಳ್ಳಬೇಕಾಗಿಲ್ಲ. ಆದರೆ ದೂರ ಎಲ್ಲಾದರೂ ಹೋದಾಗ ಸಂಪರ್ಕ ಇಟ್ಟುಕೊಂಡರೆ ಅವರು ನಮಗೆ ಹತ್ತಿರದ ಬೇರೆ ವಿಮಾನಗಳ ಬಗ್ಗೆ ಎಚ್ಚರಿಕೆ ಹೇಳುತ್ತಾರೆ. ಹವಾಮಾನ ಹದಗೆಟ್ಟರೆ ಸಹಾಯ ಮಾಡುತ್ತರೆ. ದೇಶವನ್ನು ಹಲವಾರು ಭಾಗಗಳನ್ನು ಮಾಡಿ ಪ್ರತಿಯೊಂದು ಕ್ಶೇತ್ರಕ್ಕೂ ಒಂದು ಹೆಸರನ್ನು ಕೊಡುತ್ತಾರೆ. ಸಲೀನಾಸ್ ಬರುವುದು ನಾರ್ಕ್ಯಾಲ್ (ಅಂದರೆ ನಾರ್ತ್ ಕ್ಯಾಲಿಫೂರ್ನಿಯಾ) ಕ್ಶೇತ್ರದಲ್ಲಿ. ನಮ್ಮ ಪ್ರಯಾಣ ಮುಂದುವರೆದಂತೆ ಪಕ್ಕದ ಕ್ಶೇತ್ರಕ್ಕೆ ಅವರು ನಮ್ಮನ್ನು ಸಂಪರ್ಕಿಸಲು ಹೇಳುತ್ತಾರೆ.
ಹಾರಾಟದಲ್ಲಿ ಎರಡು ರೀತಿ. ಮೊದಲನೆಯದು ವಿಶುಯಲ್ ಫ್ಲೈಟ್ ರೂಲ್ಸ್ ಪ್ರಕಾರ. ಇದರಲ್ಲಿ ನಾವು ಮೋಡಗಳ ಹತ್ತಿರ ಅಥವ ಒಳಗೆ ಹೋಗಬಾರದು. ಜೊತೆಗೆ ಕನಿಷ್ಟ ಪಕ್ಷ ೩ ಮೈಲಿ ದೂರದವರೆಗೆ ಕಾಣುವಷ್ಟು ಗಾಳಿ ತಿಳಿಯಾಗಿರಬೇಕು. ಇಂಥ ಹಾರಾಟದಲ್ಲಿ ನಾವು ಯಾರನ್ನೂ ಅನುಮತಿ ಪಡೆಯುವಷ್ಟು ಇಲ್ಲ. ದೊಡ್ಡ ವಿಮಾನ ನಿಲ್ದಾಣಗಳಿಗೆ ಹೋದರೆ ಮಾತ್ರ ಅನುಮತಿ ಪಡೆಯಬೇಕು. ಹಾರಾಟದ ಮತ್ತೊಂದು ಪರಿ ಇನ್ಸ್ಟ್ರುಮೆಂಟ್ ಫ್ಲೈಟ್ ರೂಲ್ಸ್ ಪ್ರಕಾರ. ಇದರ ಮೇರೆಗೆ ಹಾರಲು ವಿಮಾನ ಚಾಲಕರು ಇನ್ಸ್ಟ್ರುಮೆಂಟ್ ರೇಟಿಂಗ್ ಹೊಂದಿರಬೇಕು. ಏರ್ ಟಾಫಿಕ್ ಕಂಟ್ರೋಲ್ ಹೇಳಿದ ಹಾಗೆಯೇ ಮಾಡಬೇಕು. ಮೋಡಗಳ ಹತ್ತಿರ, ಒಳಗೆ ಹೋಗಬಹುದು. ನನಗೆ ಇನ್ಸ್ಟ್ರುಮೆಂಟ್ ರೇಟಿಂಗ್ ಇಲ್ಲ. ನಮ್ಮ ಈ ಪ್ರಯಾಣ ವಿಶುಯಲ್ ಫ್ಲೈಟ್ ರೂಲ್ಸ್ ಗೆ ಒಳಪಟ್ಟಿದ್ದು.
ಸಲೀನಾಸ್ ಇಂದ ಪೂರ್ವಕ್ಕೆ ಇರುವ ಪರ್ವತ ಶ್ರೇಣಿಗಳನ್ನು ದಾಟಿ ೭೫೦೦ ಅಡಿಗಳತ್ತ ಏರುತ್ತಿದ್ದೆವು. ದಾರಿಯಲ್ಲಿ ಹಾಲಿಸ್ಟರ್ ಊರನ್ನು ಕಂಡು ಮುಕುಂದನಿಗೆ ನಕ್ಷೆಯನ್ನು ಓದಲು ಹೇಳಿಕೊಟ್ಟೆ. ಅವನು ಕಂಡ ಪ್ರತಿಯೊಂದು ಊರು, ಕೇರಿ, ಬೆಟ್ಟ, ಗುಡ್ಡ, ಕೆರೆ, ಕುಂಟೆಯನ್ನು ಗುರುತಿಸುತ್ತ ಅನಂದಿಸುತ್ತಿದ್ದ. ಲಾಸ್ ಬಾನೊಸ್ ತಲುಪುವ ಹೊತ್ತಿಗೆ ನಾನು ೭೫೦೦ ಅಡಿಗೆ ಏರಿದ್ದೆ. ಉತ್ತರಕ್ಕೆ ಪ್ಲ್ಯಾಸರ್ವಿಲ್ ಕಡೆಗೆ ತಿರುಗಿ ೮೫೦೦ ಅಡಿಗಳಿಗೆ ಏರಿದೆ. ಕ್ಯಾಲಿಫೂರ್ನಿಯಾ ರಾಜ್ಯದ ಮಧ್ಯದಲ್ಲಿ ದೊಡ್ಡದೊಂದು ಕಣಿವೆ. ಅದರ ಹೆಸರು ಸೆಂಟ್ರಲ್ ವ್ಯಾಲಿ. ಅದರ ಪೂರ್ವಕ್ಕೆ ಸಿಯೆರ ನೆವಾಡ ಪರ್ವತ ಶ್ರೇಣಿ ಮತ್ತು ಪಶ್ಚಿಮಕ್ಕೆ ಪುಟ್ಟ ಇನ್ನೊಂದು ಪರ್ವತ ಶ್ರೇಣಿ. ಅದನ್ನು ದಾಟಿ ಸಲೀನಾಸ್ ಕಣಿವೆ. ಅದರ ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಗರ. ಸೆಂಟ್ರಲ್ ವ್ಯಾಲಿಯಲ್ಲಿ (ಸಲೀನಾಸ್ ವ್ಯಾಲಿಯಲ್ಲಿ ಕೂಡ) ಬೇಸಾಯ ದೊಡ್ಡ ಉದ್ಯಮ. ಇಡೀ ದೇಶಕ್ಕೆ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡುವ ಜಾಗ. ಸುಮಾರು ಒಂದು ಘಂಟೆಯ ನಂತರ ಪ್ಲ್ಯಾಸರ್ವಿಲ್ ತಲುಪಿದೆವು. ಅಲ್ಲಿಂದ ಪೂರ್ವಕ್ಕೆ ತಿರುಗಿ ಹೈವೇ ೫೦ ಅನ್ನು ಹಿಡಿದು ಲೇಕ್ ಟಾಹೊ ಅತ್ತ ಹೊರಟೆವು. ಪ್ಲ್ಯಾಸರ್ವಿಲ್ ಇಂದ ಕೆಲವೇ ಮೈಲಿಗಳಲ್ಲಿ ಸಿಯೆರ ನೆವಾಡ ಪರ್ವತಗಳು ಶುರುವಾದವು. ಹೈವೇ ಎರಡೂ ಕಡೆ ದೊಡ್ಡ ಪರ್ವತಗಳು. ನಮ್ಮ ರೆಕ್ಕೆಯ ತುದಿಯಲ್ಲಿ ಆಚೆ-ಈಚೆ ಕಾಣುವ ಧೀರ ಗುಡ್ಡ ಬಂಡೆಗಳು ಬಿಸಿಲಿನಲ್ಲಿ ಹೊಳೆಯುತ್ತಿದ್ದವು. ಇಷ್ಟು ಹೊತ್ತಿಗೆ ನಾನು ೯೫೦೦ ಅಡಿಗಳನ್ನು ತಲುಪಿದ್ದೆ. ಶಿಖರಗಳನ್ನು ಚುಂಬಿಸುವ ಇರಾದೆ ನನಗಿರಲಿಲ್ಲ.
ಲೇಕ್ ಟಾಹೊ ವಿಮಾನ ನಿಲ್ದಾಣದಿಂದ ಸುಮಾರು ೩ ಮೈಲಿ ಇದ್ದಾಗ ೩೦೦೦ ಅಡಿ ಇಳಿಯಬೇಕು. ಏಕೆಂದರೆ ನಿಲ್ದಾಣದ ದಕ್ಷಿಣಕ್ಕೆ ಒಂದು ಶಿಖರವಿದೆ. ಅದನ್ನು ಜಿಗಿದು ಅವಸರದಲ್ಲಿ ಇಳಿಯಬೇಕು. ಗಾಳಿ ಕೆರೆಯ ಕಡೆಯಿಂದ ಬರುತ್ತಿದ್ದರಿಂದ ಇದ್ದ ಒಂದೇ ರನ್ವೇಯ ಮತ್ತೊಂದು ತುದಿಯಿಂದ ಲ್ಯಾಂಡ್ ಆಗಲು ಆಗದು. ಪರ್ವತದ ಗಾಳಿ ಬಹಳ ತೆಳುವಾದ್ದರಿಂದ ವಿಮಾನವನ್ನು ತಡೆಯಲು ಗಾಳಿ ಸಹಾಯ ಮಾಡುವುದಿಲ್ಲ. ತಪ್ಪು ಮಾಡಿದರೆ ಶಿಖರಕ್ಕೆ ಸೆಸ್ನ ಅಪ್ಪುಗೆ!
ರೋಮಾಂಚನಗೊಳಿಸುವ ಅಪ್ರೋಚ್ ನಂತರ ವಿಮಾನವನ್ನು ಇಳಿಸಿದೆ. ಪಾರ್ಕ್ ಮಾಡಿ ಒಂದು ಕಾರನ್ನು ತೆಗೆದುಕೊಂಡು ಊರಿನ ಕಡೆಗೆ ಹೋಗಿ ಊಟ ಮಾಡಿದೆವು. ನಂತರ ಹೋಟೆಲ್ ಹುಡುಕಿ, ನಮ್ಮ ಸಾಮಾನನ್ನು ಹಾಕಿ ಸುತ್ತಾಡಲು ಹೋದೆವು. ಲೇಕ್ ಟಾಹೊ ಅತ್ಯಂತ ಸುಂದರ ಜಾಗ. ಸುತ್ತಲೂ ಇರುವ ಪರ್ವತಗಳ ಮಧ್ಯೆ ಕೆರೆ ಸ್ಫಟಿಕದಂತೆ ಹೊಳೆಯುತ್ತದೆ. ಇರುವ ಒಂದು ಮಧ್ಯಾಹ್ನದಲ್ಲಿ ಎಷ್ಟು ನೋಡಲು ಸಾಧ್ಯ? ಕ್ಯಾಲಿಫೂರ್ನಿಯಾ-ನೆವಾಡ ರಾಜ್ಯದ ಗಡಿಯನ್ನು ದಾಟಿ ಅಲ್ಲಿನ ಕ್ಯಸೀನೊಗಳಿಗೆ ಹೋದೆವು. ಮುಕುಂದ ಜೂಜಿನಲ್ಲಿ ೨ ಡಾಲರ್ ಕಳೆದುಕೊಂಡ. ನಮ್ಮ ಯೋಗ್ಯತೆ ಅಷ್ಟೆ.
ರಾತ್ರಿ ಕಣ್ಣು ತುಂಬ ನಿದ್ದೆ ಮಾಡಿ ಮರುದಿನ ಬೆಳಿಗ್ಗೆ ಬೇಗ ಎದ್ದು ಮತ್ತೆ ಹೊರಟೆವು. ಈ ಬಾರಿ ಕೆರೆಯ ಮೇಲೆ ಹಾರುತ್ತ ೯೫೦೦ ಅಡಿಗಳಿಗೆ ಏರಿದೆ. ಶುಭ್ರ ಬೆಳಿಗ್ಗೆಯಲ್ಲಿ ಪರ್ವತಗಳ ಮಧ್ಯೆಯ ಸೂರ್ಯೋದಯ ವಿಮಾನದಿಂದ ಎಷ್ಟು ಚಂದ! ವಾಪಸ್ ಬರುವಾಗ ಅರವಿಂದ ನ್ಯಾವಿಗೇಟರ್. ಮೊಡೆಸ್ಟೊ ಎಂಬ ಊರಿನಲ್ಲಿ ತಿಂಡಿಗೆ ನಿಲ್ಲಿಸಿ ಸಲೀನಾಸ್ ಗೆ ಬಂದು ತಲುಪಿದೆವು. ವಿಮಾನದಿಂದ ಇಳಿದಾಗ ನಮ್ಮ ಮುಖಗಳು ಬೀಗುತ್ತಿದ್ದವು.
‘ಮೈಸೂರಲ್ಲಿ ಎನ್.ಐ.ಇ ಗೆ ಹೋದ ಮೂರು ಜನ ಕನ್ನಡ ಮಾತಾಡೋರು, ಅದರಲ್ಲೂ ಪಡ್ಡೆ ಹೊಡೆದುಕೊಂಡು ತಿರುಗಾಡ್ದೋರು ಇನ್ಯಾರೂ ಹೀಗೆ ಟ್ರಿಪ್ ಹಾಕಿರಲ್ಲ ಕಣೊ’ ಎಂದು ಮುಕುಂದ ಹೇಳಿದ. ಇರಬಹುದೇನೋ!






January 27th, 2008 at 6:11 pm
vAh! entha rOmaanchakaari anubhava!
barahada shaili kUDa chennagide.
- Chetana
January 27th, 2008 at 8:15 pm
EE Kendasampige NRIgalinda, NRIgaligagi, NRIgalu matra bareyuva Websitee ? Nodidare hage kanuttade.
Parinita
January 28th, 2008 at 12:10 am
baravanige chennagiddaroo NRI yennuva kaaranakke lekhanavannu thiraskarisabeke? NRI alladavara lekhanagalannoo ee kendasampigeyalli odida nenapide nanage.
January 28th, 2008 at 12:37 am
ಎಂತಹ ರೋಮಾಂಚನಕಾರಿ ಅನುಭವವನ್ನು ಮೈ ಮೇಲಿನ ಕೂದಲು ಏಳುವಂತೆ ನಿರೂಪಿಸಿದ್ದೀರಲ್ಲ, ಆಕಾಶದಲ್ಲಿ ಹಕ್ಕಿಯ ಹಾಗೆ ಹಾರುವ ಆಸಕ್ತಿ ಯಾರಿಗಿಲ್ಲ ಹೇಳಿ?
ಇದುವರೆಗೂ ನಾನು ಹೈಜಂಪ್ ಲಾಂಗ್ ಜಂಪಿನಲ್ಲಿ ಹಾರಿರುವುದು ಬಿಟ್ಟರೆ ಆಕಾಶದಲ್ಲಿ ಹಾರಿಲ್ಲ, ನಿಮ್ಮ ಅನುಭವ ನನ್ನಲ್ಲಿ ಅಸೂಯೆಯನ್ನೂ, ಕುತೂಹಲ, ಬೆರಗನ್ನೂ ಮೂಡಿಸುತ್ತಿದೆ.
http://uniquesupri.wordpress.com/
January 28th, 2008 at 12:38 am
ಬೈಕು ಹತ್ಕಂಡು ರಸ್ತೆಯ ಮೇಲಿಳಿದಂತೆ ಆಕಾಶದಲ್ಲಿ ಹಂಗೆ ಪ್ಲೇನು ಹಾರ್ಸಕೊಂಡು ಹೋಗಬಹುದಾ ಅಮೆರಿಕಾದಲ್ಲಿ? ನಾನಂತೂ ಅದನ್ನು ನೋಡೋದಿಲ್ಲಪ್ಪ, ಅಕಸ್ಮಾತ್ ಅದು ನನ್ನ ಕಣ್ಣಿಗೆ ಬಿದ್ದು , ರತನ್ ಟಾಟಾರ ತರಹ ನ್ಯಾನೋ ಕಾರಿನ ರೀತಿಯಲ್ಲಿ ಏರೋಪ್ಲೇನ್ ಮಾಡಬೇಕು ಅಂತ ಐಡಿಯಾ ಬಂದು ಬಿಟ್ಟರೆ ಏನು ಮಾಡೋದು?
ರಸ್ತೆಯ ಮೇಲಿನ ಟ್ರಾಫಿಕ್ ನೋಡ್ಕೊಳ್ಳೋದಕ್ಕೇ ನಮ್ಮ ಜನಕ್ಕೆ ಸಾಧ್ಯವಾಗ್ತಿಲ್ಲ ಇನ್ನು ಆಕಾಶದಲ್ಲಿ ಟ್ರಾಫಿಕ್ ಜಾಸ್ತಿಯಾದ್ರೆ ಎಲ್ಲಿದೆ ಉಳಿಗಾಲ?
http://nagenagaaridotcom.wordpress.com/
January 28th, 2008 at 12:44 am
ಅತ್ಯಂತ ರೋಮಾಂಚನಕಾರಿಯಾಗಿ ನಿರೂಪಿಸಿ, ನಮ್ಮನ್ನು ನಿಮ್ಮೊಡನೆ ಒಂದಷ್ಟು ಹೊತ್ತು ಸೆಳೆದುಕೊಂಡು ಹೋದ ನಿಮ್ಮ ಬರಹ ನಿಜಕ್ಕೂ ಚೇತೋಹಾರಿ …… ನಿಮ್ಮ ಬರಹ ಓದಿ ಒಂದು ಕ್ಷಣ ನಾನೇ ಆಗಸದಲ್ಲೊ ತೇಲಿ ಹೋಗುತ್ತಿದ್ದೇನೆ ಎಂಬ ಭಾವನೆ ….
ಗಿರೀಶ ಕೆ.ಎಸ್.
girikavya@gmail.com
January 28th, 2008 at 5:56 am
article is beautiful, as clear as the lake described
January 28th, 2008 at 6:44 am
“ಶುಭ್ರ ಬೆಳಿಗ್ಗೆಯಲ್ಲಿ ಪರ್ವತಗಳ ಮಧ್ಯೆಯ ಸೂರ್ಯೋದಯ ವಿಮಾನದಿಂದ ಎಷ್ಟು ಚಂದ”…
ಅಪರೂಪದ ಪ್ರವಾಸ ಕಥನ. ನೀವು ನೋಡಿದ್ದನ್ನ ಕಲ್ಪನೆ ಮಾಡಿಕೊಳ್ಳೊದು ಕಷ್ಟ. ಅವರೇ ವಿಮಾನ ಹಾರಿಸಿಕೊಂಡು ಹೊಗಿ ಅದರ ಅನುಭವ ಬರೆದಿರುವುದು, ಅದೂ ಕನ್ನಡಿಗರ ಅನುಭವ ಓದುತ್ತಾ ಇರುವುದು ಇದೇ ಮೊದಲು ಅನ್ನಿಸುತ್ತೆ.
ಚಿಕ್ಕ ವಯಸ್ಸಿನಲ್ಲೇ ಈ ಹುಡುಗುರು ಬಹಳ ಹಾರಾಡ್ತಾಯಿದಾರೆ ಅಂತ ಯಾರು ಹಂಗಿಸಲಿಲ್ಲವ?
ಮಹೇಂದ್ರ ಸಿಂಹ
http://flickr.com/photos/mahendraphotography/
January 28th, 2008 at 2:28 pm
ತುಂಬಾ ಚೆನ್ನಾಗಿದೆ ಪ್ರಯಾಣದ ವರ್ಣನೆ.. ನಾವೂ ಕೂಡಾ Pilot ಆಗಬಹುದು ಎಂದು ತಿಳಿಸಿ.. ಕೈಗೂಡದ ಕನಸು ಅಂದುಕೊಂಡಿದ್ದನ್ನ ಮತ್ತೆ ಚಿಗುರೊಡಿಸಿದ್ದೀರಿ
ಧನ್ಯವಾದಗಳು..
January 28th, 2008 at 4:09 pm
fantstic experience yasho. Out of the world feeling of taking-off and landing - solely depending on one’s own flying skills !!
January 28th, 2008 at 9:43 pm
ನನ್ನ ಕನಸುಗಳ೦ತೆ ನಿಮ್ಮ ಬರಹ. ಕೆ೦ಡಸ೦ಪಿಗೆ ಈ ಬರಹಗಳಿ೦ದ ಊರಿಗೆಲ್ಲಾ ಪರಿಮಳ ಬೀರುವುದರಲ್ಲಿ ಸ೦ಶಯವಿಲ್ಲ
January 29th, 2008 at 6:07 am
ಓದಿದವರಿಗೆಲ್ಲರಿಗೂ ಧನ್ಯವಾದಗಳು. ಒಳ್ಳೆಯ ಮಾತುಗಳನ್ನು ಆಡಿದವರಿಗೆ extra ಧನ್ಯವಾದಗಳು
January 30th, 2008 at 3:45 am
ಚಂದದ ನಿರೂಪಣೆ. ಉತ್ತಮ ಶೈಲಿ. ರೋಮಾಂಚಕಾರಿ ಅನುಭವ. ನಿಮ್ಮ ಸಾಹಸಗಳಿಗೆ ಯಾವಾಗಲೂ ಉತ್ಸಾಹ, ಜಯ ಇರಲಿ.
January 30th, 2008 at 6:43 am
ಬೆರಗುಗೊಳಿಸುವ ಪ್ರವಾಸ ಕಥನ, ನವಿರಾದ ನಿರೂಪಣೆ.
ಲೇಖನ ತುಂಬಾ ಚೆನ್ನಾಗಿದೆ.
January 30th, 2008 at 7:56 pm
Kendasampigeya Parimala Ghamenndu haraduttale ide.uttama barahagalu odugara daha tanisittuve.Smt.RajeshwariTejashwi avara ankana sogasagide.Nannde Tavaru Birur,chikkamagalaru.Americagalli kutu tavaru suttuva avakasha kalpiside.Vimanda harata yashovardahn,Mysore olle nirupane,kanasu nanasagi madikonda Hudugange Abhinande.Kannada endre mugu muriuya yuva janatege buddi heLiddira neevu.
Best of luck to Kendasampige.
January 31st, 2008 at 2:51 pm
Tumba chennagide..Oodi khushi aytu.
January 31st, 2008 at 5:51 pm
ಬೆರಗುಗೊಳಿಸುವ ಪ್ರವಾಸ ಕಥನ, ನವಿರಾದ ನಿರೂಪಣೆ.
ಲೇಖನ ತುಂಬಾ ಚೆನ್ನಾಗಿದೆ.
January 31st, 2008 at 5:51 pm
Kendasampigeya Parimala Ghamenndu haraduttale ide.uttama barahagalu odugara daha tanisittuve.Smt.RajeshwariTejashwi avara ankana sogasagide.Nannde Tavaru Birur,chikkamagalaru.Americagalli kutu tavaru suttuva avakasha kalpiside.Vimanda harata yashovardahn,Mysore olle nirupane,kanasu nanasagi madikonda Hudugange Abhinande.Kannada endre mugu muriuya yuva janatege buddi heLiddira neevu.
Best of luck to Kendasampige.
February 1st, 2008 at 1:22 pm
koteyavare nammanu aakashdlli haarisibitri kanri. nimma lekhana atyuttamareetiyalli moodibandide dhanyavadglu.
February 2nd, 2008 at 3:57 pm
ಕೆಂಡಸಂಪಿಗೆ ಉತ್ತಮ ಬರವಣಿಗೆಯ ಸುವಾಸನೆ ಬೀರುತ್ತಿದೆ. ಒಳ್ಳೆಯ ಲೇಖನ ಮೂದಿಬರುತ್ತಿವೇ, ದನ್ಯವಾದಗಳು.
February 3rd, 2008 at 11:26 am
Baravannige shyli tumba chennagide.
February 6th, 2008 at 9:14 pm
fantastic to read such a beautiful article,
February 14th, 2008 at 1:57 pm
Very interesting and happy narration. I am glad that you have been able to fulfill your dream of flying. Tell us more about your flying trips.
February 20th, 2008 at 8:02 am
Very good Yashoo. Keep it up.
March 29th, 2008 at 1:12 am
ಪ್ರವಾಸ ಕಥನ ತಾ೦ತ್ರಿಕ ವಿಷಯಗಳನ್ನು ಸರಳವಾಗಿ ವಿವರಿಸಿ ತಿಳಿಸಿದ್ದು ಹೆಗ್ಗಳಿಕೆ. ಹವ್ಯಾಸಿ ಹಾರಾಟಗಾರರಿಗೆ ಹಾರಲು ಎತ್ತರದ ಮಿತಿಗಳೇನಾದರೂ ಇವೆಯೇ ? ಬರಹ
ಬಲು ಸೊಗಸು. ಕೋಟೆಯವರೇ ನಿಮ್ಮ ಬರವಣಿಗೆ ಕನ್ನಡದ ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ.