ಕನ್ನಡದ ಬ್ಲಾಗ್ ಬಾನಿನ ಈ ದಿನದ ಚುಕ್ಕಿ, ತೋರಿಸುತ್ತಾರೆ ಬ್ಲಾಗಿನಿ.
ಇಂದಿನ ಬ್ಲಾಗ್ ಜಗುಲಿಯಲ್ಲಿ ತಾವು ನಿವೃತ್ತ, ನಿಷ್ಕ್ರಿಯ ಅಂತ ಹೇಳಿಕೊಳ್ಳುತ್ತಲೇ ನವರತ್ನ ಸುಧೀರರು ಓದಲು ಖುಶಿ ಕೊಡುವ “ಹಾಳು ಮೂಳು ಅಂತೆ ಕಂತೆ“ಗಳನ್ನು ತಂದು ಕೆಡವಿದ್ದಾರೆ. ಹೇಗಿದ್ದರೂ ನಾವು ಜಂಕ್ ಫುಡ್ ತಿನ್ನುವುದರಲ್ಲಿ ನಿಷ್ಣಾತರು ಈ ಹಾಳು ಮೂಳೇನ್ಮಹಾ ಅಂತೀರಾ.. ಇಲ್ಲ ಇವು ಬುದ್ದಿಗೆ ಕಸರತ್ತು ಕೊಡುವ ಕಂತೆಗಳು. ಹಲವಾರು ಪ್ರಬುದ್ದ ಲೇಖನಗಳ ಅನುವಾದಗಳು, ಜಾಗತಿಕ ಸಾಮಾಜಿಕ ಚಿಂತನೆಗಳು, ವಿಸ್ಮಯದ ವಿಜ್ಞಾನ ವಿಶೇಷಗಳು, ಹೊಸ ಪುಸ್ತಕಗಳ ಓದು ಮತ್ತು ಪರಿಚಯ, ಪರಿಸರ, ನಮಗಿರಬೇಕಾದ ಸಾಮುದಾಯಿಕ ಜವಾಬ್ದಾರಿ ಮತ್ತು ಹೊಣೆಗಳು, ಸಾಹಿತ್ಯ, ರಂಗಭೂಮಿ, ಶಿಲ್ಪಕಲೆ ಮೊದಲಾದ ಆಸಕ್ತಿಕರ ವಿಷಯ ಪ್ರಬೇಧಗಳಿಲ್ಲಿವೆ.
ಸಕ್ಕರೆ ಕನ್ನಡದ ಸವಿ ಬರಹಗಳು ಓದಲು ಖುಶಿ ಕೊಡುತ್ತವೆ. ಇತ್ತೀಚಿನ ಬರಹ ವಲಸಿಗರ ಬಗ್ಗೆ ದ್ವೇಷವೇಕೆ - ಗುರುಚರಣ್ ದಾಸ್‌ರವರ ಇಂಗ್ಲಿಷ್ ಬರಹದ ಅನುವಾದ - ಒಂದು ಮುಕ್ತ ಮಾರುಕಟ್ಟೆಯಲ್ಲಿ ಬಂಡವಾಳದ ಹೊಳೆ ಆಕರ್ಷಕ ಪ್ರದೇಶಗಳಿಗೆ ಮಾತ್ರ ಹರಿಯುತ್ತದೆ. ಒಂದು ನಗರ ಅಥವಾ ರಾಜ್ಯ ಈ ಪರಿ ಆಕರ್ಷಕವೆನಿಸುವುದರಲ್ಲಿ ಒಂದು ಮುಖ್ಯ ಕಾರಣ ಉತ್ತಮ ಉತ್ಪಾದನಾ ಸಾಮರ್ಥ್ಯವುಳ್ಳ ಕೆಲಸಗಾರರ ಸುಲಭವಾಗಿ ದೊರಕುವಿಕೆ. ಹೊರಗಿನಿಂದ ವಲಸೆಬಂದ ಕಾರ್ಮಿಕರು ಸ್ಥಳೀಯ ಕಾರ್ಮಿಕರಿಗಿಂತ ಹೆಚ್ಚು ಆಸಕ್ತಿ ಮತ್ತು ಶ್ರಮವಹಿಸಿ ದುಡಿಯುತ್ತಾರೆಂಬುದು ನಮಗೆ ಎಷ್ಟೇ ಅಪ್ರಿಯವೆನಿಸಿದರೂ ಅಲ್ಲಗೆಳೆಯಲಾಗದ ಸತ್ಯ. ರಿಚರ್ಡ್ ಫ್ರೀಮನ್‍ನಂತಹ ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಿಗಳು ಹಾಗೂ ಮತ್ತಿತರರ ಸಂಶೋಧನೆಯ ಪ್ರಕಾರ ಯಾವ ಸಮಾಜ ಮತ್ತು ಸಂಸ್ಕೃತಿಗಳು ವಲಸಿಗರನ್ನು ಪ್ರೋತ್ಸಾಹಿಸಿ ತಮ್ಮದಾಗಿಸಿಕೊಳ್ಳುತ್ತವೆಯೋ ಅಂಥವು ಬೇರೆಲ್ಲ ಸಮಾಜಗಳಿಗಿಂತ ಬಹಳ ಮುಂದುವರೆದು ಏಳಿಗೆ ಸಾಧಿಸುತ್ತವೆ ಎಂದು ಪ್ರತಿಪಾದಿಸಲಾಗಿದೆ.
ರಾನ್ ಮುಯೆಕ್‌ನ ಅದ್ಭುತ ಶಿಲ್ಪ ಕಲೆ, ಯಾದ್‌ವ ಶೇಮ್ ನೇಮಿಚಂದ್ರರ ನೂತನ ಕಾದಂಬರಿಯ ಪರಿಚಯ, ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೆ?, ಮೈಸೂರು ಸ್ಮೆಲ್ಲಿಗೆ ಗಟ್ಟಿ ಹಿಡಿಯಿರಿ ಮೂಗನು, ನಮ್ ನಾಟ್ಕದ್ ಮೇಷ್ಟ್ರು ನಾರಾಯಣ ರಾವ್, ರಾಮೇಶ್ವರದಲ್ಲಿ ರಾಮಾಂಜನೇಯ ಸಂವಾದ, ತೂತಿನ ತುತ್ತೂರಿ, ಬಡವಾ ನೀ ಮಡಗಿದ ಹಾಂಗಿರು -ಒಂದು ತರಲೆ ಗುಬ್ಬಚ್ಚಿಯ ನೀತಿಕತೆ(ಅನುವಾದ) - ಮೊದಲಾದ ಆಸಕ್ತಿ ಹುಟ್ಟಿಸುವ ಕಂತೆಗಳು ಇಲ್ಲಿವೆ.
ತುಳಸೀವನ (೨೯-೩-೦೮)
ದಿನದ ಬ್ಲಾಗಿನ ಬೊಗಸೆಯಲ್ಲಿ ಶ್ರೀಮತಿ ತ್ರಿವೇಣಿ ಶ್ರೀನಿವಾಸರಾವ್ ಅವರ ತುಳಸೀವನ. ಸಾಹಿತ್ಯ ಬರಹಗಳಿಂದ ಸಮೃದ್ಧವಾಗಿರುವ ಈ ಸಾಂಸ್ಕೃತಿಕ ಅಂಗಳದಲ್ಲಿ ತ್ರಿವೇಣಿ ಅವರ ಕಥೆ, ಬರಹ ಹಾಗೂ ನೆನಪಿನ ಗುಚ್ಛಗಳಿವೆ. ಆನಂದಕಂದ, ಎಚ್.ಎಸ್.ವಿ, ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ, ಚೆನ್ನವೀರ ಕಣವಿ ಎಲ್ಲರೂ ತುಳಸೀವನದ ಕವಿ-ಕಾವ್ಯ ಕಟ್ಟೆಯಲ್ಲಿ ನವಿರಾಗಿ ಹಾಡಿ ಹೋಗಿದ್ದಾರೆ. ಇತ್ತೀಚೆಗೆ ರಸಖುಷಿ ಕುವೆಂಪು ನೆನಪಿಗೆ ಸುಂದರವಾದ ಕವಿತೆ ಇದೆ. ಸರಳ ಹಾಗೂ ಸುಂದರ ಅಭಿವ್ಯಕ್ತಿಯ ತುಳಸಿ ದಳಗಳು ಸಾಂಸ್ಕೃತಿಕ ಸಾರವನ್ನೆಲ್ಲಾ ಹೀರಿಕೊಂಡು ಹಸಿರಾಗಿ ನಳನಳಿಸುತ್ತಿದೆ.
ಇತ್ತೀಚಿನ ಬರಹದಲ್ಲಿ ಸಾಲ ಎಂಬ ಸಣ್ಣ ಕಥೆ ಇದೆ. ಅಂತರ್ಜಾಲದ ವಿವಿಧ ಸಮುದಾಯಗಳಲ್ಲಿ ನಡೆಯುವ ಚರ್ಚೆ, ವಾದಗಳನ್ನು ಗಮನಿಸಿ ಚರ್ಚೆಗಳಿಂದೇನಾದೀತು? ಎಂಬ ಬರಹ ಚಿಂತನೆ ಹಚ್ಚುತ್ತದೆ. ನಾನಂತು ಚರ್ಚೆಗಳಿಂದ ದೂರವೇ ಇರಲು ಬಯಸುತ್ತೇನೆ. ನಿಮಗೆ ಚರ್ಚೆಗಳಿಂದ ನಿಜವಾಗಿ ಉಪಯೋಗವಿದೆ ಅನ್ನಿಸಿದರೆ ಆ ಬಗ್ಗೆಯೇ ಚರ್ಚಿಸಿ. ಆದರೆ ನನ್ನನ್ನು ಮಾತ್ರ ಚರ್ಚೆಗೆಳೆಯಬೇಡಿ. ಚರ್ಚೆಗೆ ನಾನಂತೂ ಸಿದ್ಧಳಿಲ್ಲ! ಎನ್ನುವ ಮನವಿಯೊಂದಿಗೆ ಲೇಖಕಿ ಈ ಬರಹವನ್ನು ಬ್ಲಾಗಿಸಿದ್ದಾರೆ.
ದೂರ…. ಬಹುದೂರ… ಉಡುಪಿಯ ಕಂಡಿರಾ? ಎಂಬ ಬನ್ನಂಜೆ ಗೋವಿಂದಾಚಾರ್ಯ ಅವರ ರಚನೆ,
ಸೋನು, ಫೋನು ಮತ್ತು ನಾನು, ನಿರಂತರ - ಬಿ. ಆರ್. ಲಕ್ಷ್ಮಣರಾವ್, ಬೆಳ್ಳಿ ಮೋಡಗಳು - ಹೃದಯವೆ ನಿನ್ನ ಹೆಸರಿಗೆ, ಎದೆಯು ಮರಳಿ ತೊಳಲುತಿದೆ - ಎಂ. ಗೋಪಾಲಕೃಷ್ಣ ಅಡಿಗ, ಮಾತಾಡ್ ಮಾತಾಡ್ ಮಲ್ಲಿಗೆ ಈ ಎಲ್ಲ ಬರಹಗಳು ಕನ್ನಡ ಕಂಪಿನಿಂದ ಬೀಗುತ್ತಿರುವ ತುಳಸೀವನದ ಚಿಗುರೆಲೆಗಳು.
ಬೆಟ್ಟದಡಿ (೨೮-೩-೦೮)
ದಿನದ ಬ್ಲಾಗಿನಂಗಳದಲ್ಲಿ ಬೆಟ್ಟದಡಿಯಿಂದ ಬಂದಿರುವ ಹರೀಶ್ ಕೇರ. ಕುಮಾರ ಪರ್ವತ, ಬಂಟಮಲೆ, ಪೂಮಲೆಗಳ ನಡುವಿನ ದಟ್ಟ ಕಣಿವೆಯಿಂದ ಹೊರಬಿದ್ದು ಇದೀಗ ಬರಹ ಮತ್ತು ಬದುಕಿನ ಉಲ್ಲಾಸ ವಿಷಾದಗಳ ಬೆಟ್ಟದಡಿಯಲ್ಲಿ - ಎಂಬುದು ಇವರ ಪರಿಚಯದ ಸಾಲು. ಹೆಸರು ಮತ್ತು ಪರಿಚಯದ ಸಾಲುಗಳೇ ಸೂಚಿಸುವಂತೆ ಇವರ ಹೆಚ್ಚಿನ ಬರಹಗಳು, ಕಾಡು,ಬೆಟ್ಟ, ಹಳ್ಳಿ ಮತ್ತು ಪರಿಸರದ ಹಲವು ನೋಟಗಳನ್ನೊಳಗೊಂಡಿವೆ. ಹಳ್ಳಿ ಮತ್ತು ನಗರದ ಬದುಕಿನ ನಲಿವು ನೋವುಗಳ ಅಭಿವ್ಯಕ್ತಿಯಿದೆ. ಓದಿದ ಪುಸ್ತಕ ಲೇಖನಗಳ ಬಗೆಗಿನ ವಿಶ್ಲೇಷಣೆ ಇಲ್ಲಿದೆ. ನೇರ ಮತ್ತು ಸರಳ ಅಭಿವ್ಯಕ್ತಿ ಎಲ್ಲ ಬರಹಗಳ ಗುಣವಿಶೇಷ. ಚಿಂತನೆಯ ಓದಿಗೆ ಗ್ರಾಸವಾಗುವ ಬರಹಗಳ ಕಣಿವೆಯ ದಾರಿಯಿದು.
ಇತ್ತೀಚಿನ ಬರಹದಿಂದ ಆಯ್ದ ಕೆಲಸಾಲುಗಳು - ಬದುಕು ಹಾಗೂ ಸಾವಿನ ನಡುವಿನ ಒಂದು ಅಲ್ಪವಿರಾಮದಂತಿದ್ದ ಈ ಮನೆ, ರೋಗಿಗಳ ಸುಖ ಹಾಗೂ ಸಂಕಟಗಳು ಜತೆಯಾಗುವ ಒಂದು ಸ್ಥಳವಾಗಿತ್ತು. “ನಮ್ಮ ತಂದೆಗೆ ಕ್ಯಾನ್ಸರ್. ಮನೆಗೆ ಕೊಂಡೋಗಿ ಅಂತ ಡಾಕ್ಟರ್ ಹೇಳಿದ್ದರು. ಇವರ ಮದ್ದಿನಲ್ಲಿ ಒಂದು ವರ್ಷದಿಂದ ಸುಖವಾಗಿದ್ದಾರೆ” ಎಂದು ಒಬ್ಬ ಹೇಳುತ್ತಾನೆ. ಪಕ್ಕದಲ್ಲಿ ನಿಂತ ಪೇಷೆಂಟ್‌ಗೆ ಅದು ಬರೀ ಮಾತಲ್ಲ, ಕಾರ್ಗತ್ತಲಲ್ಲಿ ಹೊಳೆಯುವ ಬೆಳ್ಳಿ ರೇಖೆ. ಹಾಗೇ, ಬರಿಯ ಬ್ಲಡ್‌ಪ್ರೆಶರ್ ಹೊಂದಿರುವಾತನಿಗೆ ಕ್ಯಾನ್ಸರ್ ರೋಗಿಯ ವೇದನೆಯ ಮುಂದೆ ತನ್ನದು ಏನೂ ಅಲ್ಲ ಎಂಬ ಅರಿವು. ಹಾಗೇ ಅದು ಎಲ್ಲರ ಒಡಲಲ್ಲೂ ಇದ್ದುಕೊಂಡು ಹೊಂಚು ಹಾಕುವ ಸಾವಿನ, ವೇದನೆಯ ಕಿಂಚಿತ್ ದರ್ಶನ. ನಗರಸಾಗರದಲ್ಲಿ ಹಳ್ಳಿಯ ನಡುಗಡ್ಡೆ, ಗುರುಪ್ರಸಾದ್ ಕಾಗಿನೆಲೆಯವರಿಗೊಂದು ಪತ್ರ, ರೊಟ್ಟಿ ಮದಿರೆ ಮಾನಿನಿ ಮತ್ತು ಕಾವ್ಯ, ಪುಟ್ಟ ಸ್ತನಗಳೂ-ದೊಡ್ಡ ದೇಶವೂ., ನ್ಯಾಯ, ಚಿರತೆ ಊರಿಗೆ ಯಾಕೆ ಬರುತ್ತೆ ಮೊದಲಾದ ಬರಹಗಳಿಂದ ಕೂಡಿದ ಅಕ್ಷರಕಣಿವೆ ಇದು ಎಂದು ಹೇಳಬಹುದು.
ಶ್ರೀನಿವಾಸ (೨೭-೩-೦೮)
ಇಂದಿನ ಬ್ಲಾಗ್ ಜಗುಲಿಗೆ ಬಂದಿರುವವರು ಶ್ರೀನಿವಾಸ ಬ್ಲಾಗಿನ ತ.ವಿ.ಶ್ರೀಯವರು. ಚಿತ್ರದುರ್ಗದಲ್ಲಿರುವ ತಳುಕು ಎಂಬ ಊರಿನವರಾದ ಲೇಖಕರು ಈಗ ಮುಂಬೈನ ರಿಸರ್ವ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದಾರೆ. ಮಹಾನಗರದ ಅನುಕೂಲಗಳು, ತಲ್ಲಣಗಳು, ಮನುಷ್ಯ ಸಂಬಂಧಗಳು, ಸಾಹಿತ್ಯ, ನೆನಪು, ಸಾಮಾಜಿಕ ಜವಾಬ್ದಾರಿ, ಪ್ರಗತಿಶೀಲತೆ, ಸಂಸ್ಕೃತಿ ಈ ಎಲ್ಲ ವಿಷಯಗಳ ಬಗ್ಗೆ ಸರಳವಾಗಿ ಬರೆದಿದ್ದಾರೆ. ಕನ್ನಡದ ಮೊದಲ ಕೆಲವು ಬ್ಲಾಗರ್‌ಗಳಲ್ಲಿ ಒಬ್ಬರಾದ ತವಿಶ್ರೀಯವರು ತೊದಲ್ನುಡಿಯ ಯುವಬ್ಲಾಗರ್‌ಗಳಿಗೆ ಹಿರಿಯಣ್ಣನಂತೆ ಸ್ಪಂದಿಸಿ, ವಯಸ್ಸಿನ ಅಂತರವಿಲ್ಲದೆ ಬೆರೆತು, ರಚನಾತ್ಮಕ ಬ್ಲಾಗ್ ಸಂವಾದಗಳಿಗೆ ಕಾರಣರಾಗಿದ್ದಾರೆ.
ಮರುಗಳಿಕೆ, ನಾವು ನಮ್ಮವರು, ಬ್ಲಾಗ್ ಆಕ್ಷನ್ ಡೇ, ಗಣಪತಿ ಪೂಜೆ, ಕನಕದಾಸರ ಒಂದು ಕೃತಿ, ರಜತೋತ್ಸವ, ಗೆಳೆಯರನೇಕರಿಗೆ ಕೋರಿದ ಅಕ್ಕರೆಯ ಶುಭಾಶಯಗಳು, ಬ್ಯಾಂಕಿನಲ್ಲಿ ರಜತೋತ್ಸವ, ರಥ ಸಪ್ತಮಿ, ಗೋಕುಲಧಾಮದಲ್ಲಿ ರಾತ್ರಿಯ ಶಿಬಿರ, ಮುಂಬಯಿ ಲೋಕಲ್ ಪ್ರಯಾಣ, ಅಂತರ್ಜಾಲದಲ್ಲಿ ಹರಿದಾಡುವ ವಿಕೃತ ಮನಸ್ಸು, ನೆಂಟಸ್ತಿಕೆ ಇತ್ಯಾದಿ ಎಲ್ಲ ಬರಹಗಳಲ್ಲೂ ಸಮನ್ವಯದ ಅಭಿಪ್ರಾಯಗಳು ಹಿತವೆನಿಸುವಂತೆ ಮೂಡಿವೆ.
ಇತ್ತೀಚಿನ ಬರಹ ಸಂತೃಪ್ತಿಯಲ್ಲಿ ಸರ್ಕಾರಿ ಕಚೇರಿಯ ಕಾರ್ಯವೈಖರಿ ಬಗ್ಗೆ ಬರೆದಿದ್ದಾರೆ.
ಸ್ವರಚಿತ (೨೬-೩-೦೮)
ಇಂದಿನ ಬ್ಲಾಗ್ ಬೊಗಸೆಯಲ್ಲಿ ಉಡುಪಿಯ ಷಣ್ಮುಖರಾಜ ಅವರ ಸ್ವರಚಿತ ಎಂಬ ಹೂಗುಚ್ಛ. ತಂತ್ರಜ್ಞಾನ ಕ್ಷೇತ್ರದಲ್ಲಿದ್ದುಕೊಂಡು ಕನ್ನಡದ ದೋಣಿಯಲ್ಲಿ ಹೊರಟ ಇನ್ನೊಂದು ಭಾವಯಾನವಿಲ್ಲಿದೆ. ನಾನು ಬೇರೇವ್ರ ತರಾ ಅಲ್ಲ, ಬನ್ನಿ ಹರಟೆಹೊಡೆಯೋಣ, ಓದಿ, ಓದಿಸಿ ಲೈಫ್ ನಿಮ್ಮದಾಗಿಸಿಕೊಳ್ಳಿ ಅಂತ ಟಿಪಿಕಲ್ ಮ್ಯಾನೇಜ್‌ಮೆಂಟ್ ಗುರು ತರಹ ಪರಿಚಯ ಹೇಳಿಕೊಂಡಿರುವ ಈ ಲೇಖಕರ ಬರಹಗಳು ಸುಲಭ ಕನ್ನಡದ ಲಘು ಓದಿಗೆ ಒದಗುತ್ತವೆ.
ಇತ್ತೀಚಿನ ಕವನ ಉಪದೇಶದಲ್ಲಿ ಓರಗೆಯವರಿಗೆ [?] ಉಪದೇಶ ಹೇಳಿದ್ದಾರೆ. ಪಾಡ್ ಕ್ಯಾಸ್ಟ್ಗಳು, ಹನಿಗವನಗಳು, ಹನಿಗತೆಗಳು, ಹರಟೆ. ಈ ಎಲ್ಲವನ್ನೂ ಬಳಸಿ ತಮ್ಮ ಮನದ ಲವಲವಿಕೆಯನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ. ಹಕ್ಕಿಹಾಡು, ಹಳ್ಳಿಗೀತ, ಅವಳ ಕತೆ, ಹೋಳಿ ಶುಭಾಶಯ, ಆಲಮಟ್ಟಿ, ಉಪದೇಶ, ಹೀಗೆ ಸುಮ್ಮನೆ, ಗುಬ್ಬಚ್ಚಿ ಗೂಡಿನಲ್ಲಿ, ಮಾಯದ ಕಂಗಳ ಚೆಲುವೆ ಕೇಳು, ಬೆಟ್ಟದಾ ಮ್ಯಾಲೊಂದು ಟೆಂಟು ಹಾಕಿ, ಕೇಕು ಪುರಾಣ, ನನ್ ಮೇಸ್ಟ್ರು, ದೇವರೊಬ್ಬ ನಾಮ ಹಲವು, ತಾರೆ ಭುವಿಯ ಮ್ಯಾಲೆ, ಮೊದಲಾದ ಬರಹಗಳು ಓದಲು ಖುಶಿ ಕೊಡುತ್ತವೆ.
ಶಟರ್ ಬಗ್ (೨೫-೩-೦೮)
ಇಂದಿನ ಬ್ಲಾಗ್ ಬೊಗಸೆಯಲ್ಲಿ ಮೂಡಿರುವುದು ಚಲನಚಿತ್ರದ ಚಲನೆಯ ವೇಗದಲ್ಲಿ ಬದುಕುತ್ತಿರುವ ಯುವ ಪ್ರತಿಭೆ ಅಭಯಸಿಂಹ ಅವರ ಶಟರ್ ಬಗ್. ಹಲವು ಇಂಗ್ಲಿಷ ಬರಹಗಳಿವೆ. ಹೆಚ್ಚಿನವು ಮಾಹಿತಿಪೂರ್ಣ ವಿಶ್ಲೇಷಣಾತ್ಮಕ ಕನ್ನಡ ಬರಹಗಳು. ತಮಗೆ ಪರಿಚಯವಿರುವ ಮಾಧ್ಯಮ ಕ್ಷೇತ್ರದ ಬಗೆಗಿನ ಎಲ್ಲ ಬರಹಗಳೂ ಸ್ಪಷ್ಟತೆ ಮತ್ತು ಸೂಕ್ಷ್ಮತೆಯಿಂದ ಮಿಂಚುತ್ತವೆ. ವಿಚಾರಗಳನ್ನು ಕ್ಲಿಕ್ಕಿಸಿದಂತಿರುವ ಈ ಬರಹಗಳ ಫ್ರೇಮಿಂಗ್ ವಿಶಿಷ್ಟವಾಗಿದೆ. ಛಾಯಾಚಿತ್ರ ಮತ್ತು ಚಲನಚಿತ್ರಗಳ ತಾಂತ್ರಿಕತೆ ಮತ್ತು ಅಭಿವ್ಯಕ್ತಿಯ ಬಗ್ಗೆ ವಿವರವಾದ ಬರಹಗಳಿಲ್ಲಿವೆ.
ಚಿತ್ರ ಹಾಗೂ ಧ್ವನಿ ಸರಣಿಗಳು - ಒಂದು ವಿಡಿಯೋದ ಚಿತ್ರ ಹಾಗೂ ಧ್ವನಿ ಸಂಯೋಜನೆಯ ತಾಂತ್ರಿಕತೆಗಳನ್ನು, ಈ ಬಗ್ಗೆ ಲಭ್ಯವಿರುವ ಹಲವಾರು ಮಾಹಿತಿಗಳನ್ನು ಒದಗಿಸುತ್ತವೆ. ಮೊದಲ ಭಾಗದಿಂದ ಕೆಲಸಾಲುಗಳು ನಿಮ್ಮ ಓದಿಗಾಗಿ: ನಮ್ಮೆಲ್ಲಾ ಅನುಭವಗಳು ಪಂಚೇಂದ್ರಿಯಗಳಿಂದಾಗುತ್ತವೆ ಎನ್ನುವುದು ಸರಿಯಷ್ಟೇ. ಸಿನೆಮಾವೊಂದಕ್ಕೆ ಕಣ್ಣು ಹಾಗೂ ಕಿವಿ ಈ ಎರಡು ಇಂದ್ರಿಯಗಳ ಮೂಲಕ ನಮ್ಮನ್ನು ತಟ್ಟಲು ಸಾಧ್ಯವಿದೆ. (ಸಧ್ಯಕ್ಕೆ) ಇವೆರಡೂ ನಮ್ಮಲ್ಲಿ ಉಂಟುಮಾಡುವ ತಾತ್ಕಾಲಿಕ ಅನುಭವಗಳ ಸರಣಿಯೆ ಒಂದು ಸಿನೆಮಾ ಆಗಿದೆ.
ಕೆಲವು ಚಿತ್ರಗಳು ಕೇವಲ ಕಣ್ಣುಗಳ ಮೂಲಕ ನಮ್ಮನ್ನು ತಟ್ಟಿದರೆ, ಇನ್ನು ಕೆಲವು ಕೇವಲ ಧ್ವನಿಯ ಮೂಲಕ. ಒಬ್ಬ ಸಮರ್ಥ ನಿರ್ದೇಶಕ ಇವುಗಳ ಸಂಯೊಜನೆಯನ್ನು ಜಾಣ್ಮೆಯಿಂದ ಮಾಡಿಕೊಂಡಾಗ, ಇವೆರಡೂ ನಿರ್ದಿಷ್ಟ ಅನುಭವಗಳನ್ನು ಕೊಡುವುದರಿಂದಾಗಿ ಚಿತ್ರವು ಕೆಲವೆಡೆ ಕಿವಿಗಳ ಮೂಲಕವೂ ಇನ್ನು ಇತರೆಡೆ ದೃಶ್ಯದ ಮೂಲಕವೂ ನಮ್ಮನ್ನು ತಟ್ಟುತ್ತದೆ. ಇವೆರಡರ ಪ್ರಯೋಗದಿಂದಲೂ ಉತ್ಪನ್ನವಾಗುವ ಭಾವನೆಗಳು, ಅದರ ತೀವ್ರತೆ ಭಿನ್ನವಾದದ್ದರಿಂದ ನಿರ್ದೇಶಕ ತಾನು ಹೇಳಬಯಸುವ ಭಾವನೆಯನ್ನು ಸಮರ್ಥವಾಗಿ ಹೇಳುವ ಮಾಧ್ಯಮವನ್ನು ಆಯಾ ಸಂದರ್ಭದಲ್ಲಿ ಪ್ರಮಾಣಾನುಸಾರ ಬಳಸಿಕೊಳ್ಳುತ್ತಾನೆ ಎನ್ನುವ ಅಭಯಸಿಂಹ ಈಗ ತಾವೇ ಹೊಸದಾಗಿ ತಯಾರಿಸುತ್ತಿರುವ ಗುಬ್ಬಚ್ಚಿಗಳು ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ.
ವಕ್ರದಂತ (೨೪-೩-೦೮)
ಇಂದಿನ ಬ್ಲಾಗಿನಂಗಳದ ತೇರು ವಕ್ರವಾಗಿ ಯೋಚಿಸದಿರುವುದು ಅಪರಾಧ ಎಂದು ನಂಬಿರುವ, ಸುತ್ತಲ ಓರೆಕೋರೆಗಳ ಬಗ್ಗೆ ಬರೆಯುವ ವಿನಾಯಕಭಟ್ಟರ “ವಕ್ರದಂತ“. ವೃತ್ತಿಯಿಂದ ಪತ್ರಕರ್ತರಾದ ಲೇಖಕರು ಮಂಗಳೂರಿನಲ್ಲಿ ಕುಳಿತು ಕರಾವಳಿಯ ಚುರುಕು ಮುಟ್ಟಿಸುವ ಬರಹಗಳನ್ನು ಲಘು ಹಾಸ್ಯ ಮತ್ತು ಅಭಿಪ್ರಾಯಗಳನ್ನು ಹದವಾಗಿ ಕಲಸಿ ಕೊಟ್ಟಿದ್ದಾರೆ.
ಇತ್ತೀಚಿನ ಬರಹ ‘ಅಂಚಿ ಇಂಚಿ ಎಲ್ಲಿಹೋದರೂ ಬೇಕು ಸಂಚಿಯಲ್ಲಿ’ ಕರಾವಳಿ ಮತ್ತು ಮಲೆನಾಡಿನ ಜನಜೀವನದ ಕುರುಹಾದ ಎಲೆ ಅಡಿಕೆಯ ಸಂಚಿಯ ಬಗ್ಗೆ ಬರೆದಿದ್ದಾರೆ. ಮಂಜು ಮುಸುಕಿದ ದಾರಿಯಲ್ಲಿ, ಹೆಂಡತಿಗೂ ನದಿಯ ಗುಂಗು, ಹಿಡಿವ ಬಸ್ಸು ಬಿಟ್ಟು-ಬಿಡುವ ಬಸ್ಸು ಹಿಡಿದು, ಮನಸು ಮರೆಯದ ಮುನಾರ್, ಮೂರೂರು ಎಂಬ ಸದಾ ಚಟುವಟಿಕೆಯ ಊರು, ಚುಕು ಬುಕು ಚುಕು ಬುಕು ರೈಲೇ,ಹೊಂಗನಸು ಅಲ್ಲವಿದು ಕೆಟ್ಟ ಕನಸು, ಕಾವಲು ನಾಯಿ ಕಳವು, ಬಲ್ಲಾಳ್ ಭಾಗ್ ನಲ್ಲೊಂದು ಭೂತ ಬಾಧೆ, ಟಿಕ್ಲಿ ಕುಂಕುಮ ನುಂಗಿತ್ತ, ಲೌ ಅಟ್ ಲಾಸ್ಟ್ ನೈಟ್, ರಾಷ್ಟ್ರಪತ್ನಿ?!, ಅವ್ವ-ಯವ್ವಾ ಯವ್ವಾ ಎಷ್ಟು ಚೆನ್ನಾಗೈತವ್ವ.. ಇತ್ಯಾದಿ ತಲೆಬರಹಗಳೇ ಕುತೂಹಲ ಹುಟ್ಟಿಸಿ ಓದಿನ ಜಗುಲಿಗೆ ಎಳೆದೊಯ್ಯುತ್ತವೆ.
ಆಗಸೆಯ ಅಂಗಳ (೨೨-೩-೦೮)
ದಿನದ ಬ್ಲಾಗಿನ ಬೊಗಸೆಯಲ್ಲಿ ಆಗಸೆಯ ಅಂಗಳ. ಮೂಲತಃ ಕಾರವಾರ ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ ಗ್ರಾಮದವರಾದ ವಿನಾಯಕ ಪಂಡಿತ್ ಈಗ ದಿಲ್ಲಿಯಲ್ಲಿ ಮಾಹಿತಿ ತಂತ್ರಜ್ಞಾನದ ಪ್ರಯೋಗಾಲಯದಲ್ಲಿ ಸಂಶೋಧಕರಾಗಿದ್ದಾರೆ. ತಮ್ಮೂರಲ್ಲೇ ಸಮುದ್ರವಿರುವುದರಿಂದ ಅದೇ ಜಗತ್ತಿನ ಕೊನೆಯೇನೋ ಅನಿಸುತ್ತದೆ ಎನ್ನುವ ಇವರು, ಕಾವ್ಯಾತ್ಮಕವಾಗಿ ಕುಮಟೆಯ ಮುಂದಿರುವುದೆಲ್ಲಾ ನಮ್ಮನೆಯ ಅಂಗಳ ಎನ್ನಬಹುದು ಎಂದು ತಮ್ಮ ಮೊದಲ ಮಾತಿನಲ್ಲಿ ಹೇಳಿದ್ದಾರೆ. ಹೀಗೆ ಬೆಳೆದಿರುವ ತಮ್ಮ ದೃಷ್ಟಿಕೋನದ ಅನಿಸಿಕೆಗಳನ್ನು ಇಲ್ಲಿಡಬಹುದು. ಅದಕ್ಕೇ ಈ ತಾಣಕ್ಕೆ ಅಗಸೆಯ ಅಂಗಳ ಎಂದು ಹೆಸರಿಟ್ಟಿದ್ದೇನೆ ಎನ್ನುತ್ತಾರೆ.
ಜಗತ್ತನ್ನು ಅಘನಾಶಿನಿಯ ತುಲನೆಯಲ್ಲಿ ನೋಡುತ್ತಿದ್ದ ಬಾಲ್ಯ ಸಹಜ ಕುತೂಹಲ ಹಾಗೂ ಬೆರಗು ಇಲ್ಲಿನ ಕೆಲವು ಲೇಖನಗಳಲ್ಲೂ ಕಾಣಬಹುದು. ಇತ್ತೀಚಿನ ಲೇಖನವಾದ ಕೋಡಗನ ಕೋಳಿ ನುಂಗಿತ್ತ!- ಶರೀಫರ ಪದ್ಯದ ಅದ್ಭುತ ಕಾವ್ಯಶಕ್ತಿಯ ಬಗ್ಗೆ ಬರೆದಿದ್ದಾರೆ. ಒಣಗಿದ ಅಂಗಳ ಎಂಬ ಲೇಖನದಲ್ಲಿ ಉತ್ತರ ಭಾರತದ ಬಿಸಿಲ ಧಗೆಯ ಬಗ್ಗೆ ವಿವರವಿದೆ. ಪ್ರಾಚಾರ್ಯ ಕಟ್ಟಾ ಮೂರ್ತಿಗಳು, ಕುರೋಸಾವಾರ ಚಿತ್ರಗಳು, ರಾಬರ್ಟ್ ಮುಸಿಲ್-ರ ಒಂದು ಪ್ರಬಂಧ, ಬೆನೆಗಲ್-ರ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು ಬರೆದ ಲೇಖನಗಳು ಮಾಹಿತಿಪೂರ್ಣವಾಗಿದೆ.
ಬಹುಮುಖಿ (೨೧-೩-೦೮)
ಇಂದಿನ ಬ್ಲಾಗಿನಂಗಳದಲ್ಲಿ ಪತ್ರಕರ್ತ ನಾಗೇಂದ್ರ ತ್ರಾಸಿ ಅವರ ಬಹುಮುಖಿ ಪ್ರತಿಭೆ. ವೆಬ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿರುವ ಲೇಖಕರಿಗೆ ಬರಹ ಮತ್ತು ಪತ್ರಿಕೋದ್ಯಮವೆಂದರೆ ತುಂಬ ಪ್ರೀತಿ. ಯಾವುದೇ ತತ್ವ, ಸಿದ್ದಾಂತಗಳಿಗೆ ಕಟ್ಟು ಬೀಳದ ವಾಸ್ತವವಾದಿ ಪತ್ರಕರ್ತನೆಂದು ಹೇಳಿರುವ ಅವರು ತಮ್ಮ ಬರಹಗಳಲ್ಲೂ ಇದನ್ನೇ ಮರುದ್ವನಿಸಿದ್ದಾರೆ. ಕಲೆ, ಸಂಸ್ಕೃತಿ, ಸುತ್ತಲ ವಿದ್ಯಮಾನ, ಸಾಮಾಜಿಕ ಕಳಕಳಿ, ವ್ಯಕ್ತಿ ವಿಶೇಷ, ಸೌಹಾರ್ದತೆ, ಚಾರಣ ಕಥನ, ಪರಿಸರ, ಇತಿಹಾಸ, ಹೀಗೆ ವಿಷಯ ವೈವಿಧ್ಯ ಹೊಂದಿರುವ ಅವರ ಬ್ಲಾಗ್ ಮಾಹಿತಿಪೂರ್ಣ ಬರಹಗಳಿಂದ ಶೋಭಿಸುವ ಬಹುಮುಖೀ ಸಾಹಿತ್ಯ.
ಇತ್ತೀಚೆಗೆ ಬರೆದಿರುವ ಬರಹ ಚಂಡೆಮದ್ದಳೆ ಗುಂಗಿನಲ್ಲಿ ಎಂಬ ಲೇಖನದಲ್ಲಿ ಯಕ್ಷಗಾನವೆಂಬ ಜನಪದ ಮಾಯಾಲೋಕದ ಬಾಲ್ಯದ ನೆನಪು ಮತ್ತು ಇಂದಿನ ಪರಿಸ್ಥಿತಿಗಳಿಗೆ ಕನ್ನಡಿ ಹಿಡಿದಿದ್ದಾರೆ. ಹೇಗೆ ನಮ್ಮೆಲ್ಲ ಆವಿಷ್ಕಾರಗಳೂ ಮತ್ತು ಓಟದ ಬದುಕು ಒಂದು ಸಮೃದ್ಧ ಕಲಾಪ್ರಕಾರವನ್ನೂ ಮೂಲೆಗೊತ್ತಿಬಿಡುತ್ತವೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ಬರಹ. ರಾಜ್ಯ ರಾಜಕೀಯದ ತ್ರಿಶಂಕು ಸ್ಥಿತಿ, ಮಹಿಳೆಯರು ಎಷ್ಟು ಸುರಕ್ಷಿತ, ಮುನಿಯಾಲ್ ಎಂಬ ಅಲೆಮಾರಿ, ಧರ್ಮ ಬೆಳಕು ನೀಡಬೇಕು-ಹಿಂಸೆಯನ್ನಲ್ಲ, ಆದರ್ಶ ಸಮಾಜದ ಬೆನ್ನೇರಿ ಹೊರಟವರು, ಬನ್ನಿ ಅಭಯಾರಣ್ಯಕ್ಕೆ, ಶಾಸಕರೊಬ್ಬರ ಅಜ್ಞಾತವಾಸ ಕಥನ, ತೆಹೆಲ್ಕಾ ಸೃಷ್ಟಿಸಿದ ಕೋಲಾಹಲ ಇತ್ಯಾದಿ ಲೇಖನಗಳು ಚಿಂತನೆಗೆ ಹಚ್ಚುತ್ತವೆ.
ಅಂತರಗಂಗೆ (೨೦ -೩-೦೮)
ಇಂದಿನ ಬ್ಲಾಗಿನಂಗಳದಲ್ಲಿ ಕೋಲಾರದ ಡಾ. ಜೆ.ಬಾಲಕೃಷ್ಣ ಅವರ ಅಂತರಗಂಗೆ. “ಬರದ ಬೇಗೆಯ ನನ್ನೂರಿನಲ್ಲಿ ಸದಾ ಜುಳುಜುಳುಗುಟ್ಟುವ ಗುಪ್ತಗಾಮಿನಿ ಅಂತರಗಂಗೆ. ವಿಜ್ಞಾನದ ವಿಶ್ಲೇಷಣೆಗಳೇನೇ ಇರಲಿ ಬಾಲ್ಯದಲ್ಲಿ ನಿಗೂಢತೆಯನ್ನು ಸೃಷ್ಟಿಸಿದ್ದ ಆ ನಿಸರ್ಗದ ಮಡಿಲ ಹೆಸರನ್ನು ತಮ್ಮ ಬ್ಲಾಗಿಗೆ ಇಟ್ಟುಕೊಂಡಿರುವ ಈ ಲೇಖಕರ ಕೆಲವು ಕತೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸರಳ ಮತ್ತು ಸುಲಭ ಕನ್ನಡ, ಮಾಹಿತಿ, ಪರಿಸರ ಪ್ರೀತಿ, ಅನುಭವ ವಿಶೇಷಗಳು ಇವರ ಎಲ್ಲ ಬರಹಗಳಲ್ಲೂ ಸಮೃದ್ಧವಾಗಿ ವ್ಯಕ್ತವಾಗಿವೆ. ಪ್ರವಾಸದ ಅನುಭವಗಳು, ಓದಿದ ಪುಸ್ತಕಗಳ ವಿಮರ್ಶೆ, ಸುತ್ತಲ ಗ್ಲೋಬಲ್ ವಿದ್ಯಮಾನ, ಕವಿತೆ, ಕತೆಗಳು, ವ್ಯಕ್ತಿ ಪರಿಚಯ, ಸಾಹಿತ್ಯ ಸಂವಾದ, ಛಾಯಾಚಿತ್ರ ಹೀಗೆ ಎಲ್ಲ ಬಗೆಯ ಬರಹಗಳಿಲ್ಲಿವೆ. ಇತ್ತೀಚಿನ ಬರಹದಲ್ಲಿ ಮಯೂರದಲ್ಲಿ ಪ್ರಕಟವಾಗಿರುವ ಅವರ ಕಥೆ “ಡೆತ್ ಸರ್ಟಿಫಿಕೇಟ್” ಇದೆ. ಅಮೆರಿಕ ಭಾರತ ಪರಮಾಣು ಒಪ್ಪಂದ-ಚೋಮ್ ಸ್ಕಿ ನಿಲುವು,ನಿಸರ್ಗ ಪ್ರೇಮಿ ಕಲಾವಿದ ಡಾ. ಎಸ್.ವಿ.ನರಸಿಂಹನ್, ಹಾರುವ ಮನಸ್ಸುಗಳೂ ಮತ್ತು ಲೋಹದ ಪಕ್ಷಿಗಳು, ಸರ್ಕಸ್ಸಿನ ಹುಡುಗಿ, ಹಿಂದೂ ದೇವರು ಮುಸಲ್ಮಾನ ದೇವರು, ಶಾಲಭಂಜಿಕೆ -ಲೇಖಕ ಓದುಗ ಸಂವಾದ, ಮೊದಲಾದ ಉತ್ತಮ ಬರಹಗಳ ಒಟ್ಟು ಹರಿವು ಇಲ್ಲಿದೆ.
ಮನದನಿ (೧೯-೩-೦೮)
ಇಂದಿನ ಬ್ಲಾಗಿನಂಗಳದಲ್ಲಿ ಸಿದ್ದಾರ್ಥ ಅವರ ಮನದನಿ. ಮೂರು ಸಾಗರ ನೂರು ಮಂದಿರ ದೈವ ಸಾಸಿರವಿದ್ದರೆ; ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ; ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ; ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತಿದ್ದರೆ… ಎಂದು ತನ್ನ ಪರಿಚಯದ ಜೊತೆಗೆ ಹಾಕಿರುವ ಸ್ತುತಿನಿಂದೆಯನ್ನು (ಸ್ತುತಿ ವಿಡಂಬನೆ.. :) ಓದಿದರೆ, ಲೇಖಕರ ದನಿಯ ಶೃತಿ ಏನಿರಬಹುದು ಎಂಬ ಸುಳಿವು ಚೂರು ಸಿಗುತ್ತದೆ. ದನಿಯ ಹಲವು ಉಲಿಗಳನ್ನು, ರಾಗದೆಳೆಗಳನ್ನು ಕೇಳಲು ಇಲ್ಲಿರುವ ಎಲ್ಲ ಆಸಕ್ತಿಕರ ಬರಹಗಳನ್ನು ಓದಲೇಬೇಕು. ಹೇಳಲೇಬೇಕಾದ ಬಹಳಷ್ಟು ಸಂಗತಿಗಳು ಮನಸಿನಲ್ಲೇ ಉಳಿದುಕೊಂಡಾಗ ಇಲ್ಲಿ ಗೀಚಿ, ಆ ಗೀಚುವಿಕೆಯಿಂದ ಚಿತ್ತಾರ ಮೂಡಿಬರಲು ಕಾಯುತ್ತಿದ್ದಾರೆ.
ಹಾಸ್ಯ ಮತ್ತು ವಿಡಂಬನೆಯನ್ನ ಸೀರಿಯಸ್ಸಾಗಿ ?! ಬರೆದವರು ಕಡಿಮೆ. ಇವರು ಆ ಖಾಲಿ ಜಾಗವನ್ನು ಸಮರ್ಥವಾಗಿ ತುಂಬುವ ಎಲ್ಲ ಲಕ್ಷಣಗಳೂ ಇವೆ. ಇನ್ನೊಂದಿಷ್ಟು ಓದು, ಸುತ್ತಲ ಜಗತ್ತಿನ ಆಳ ತಿಳುವಳಿಕೆಯನ್ನ ಗಳಿಸಿಕೊಳ್ಳುತ್ತಾ ಇದೇ ಶೈಲಿಯನ್ನ ಉತ್ತಮಪಡಿಸಿಕೊಂಡರೆ ಇನ್ನೂ ಉತ್ತಮ ಬರಹಗಳ ಭರವನೆಸೆಯಿಡಬಹುದು. ಇತ್ತೀಚಿನ ಬರಹ ಬಿಡಿಸೋ ಸಿಗ್ನಲನು ಮಾಮ.. ಬೆಂಗಳೂರಿನ ಟ್ರೇಡ್ ಮಾರ್ಕ್ ಆಗಿರುವ ಟ್ರಾಫಿಕ್ ಬಗ್ಗೆ ಇದೆ. ಜನಪ್ರಿಯ ಚಿತ್ರಗೀತೆ ಪೂಜಿಸಲೆಂದೆ ಹೂಗಳ ತಂದೆ ಧಾಟಿಯಲ್ಲಿ ಬರೆದ ಕವಿತೆ ಟ್ರಾಫಿಕ್ ಗೋಜಲನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದೆ.
ಆಪರೇಶನ್ ಮಾವಿನ್ ಕಾಯಿ, ಶ್..ಅಣ್ಣಾವ್ರು ಮಲಗವ್ರೆ, ಅಮ್ಮಳಲ್ಲಿಲ್ಲದ ವಿಶೇಷತೆ ಮಮ್ಮಿಯಲ್ಲೇನಿದೆ, ಬಸ್ಸು ಸಾಗಲಿ ಮುಂದೆ ಹೋಗಲಿ, ಬದುಕೆಂಬ ಗಣಿತವನ್ನು ಬಿಡಿಸಿದವರು, ನಾನಿರುವುದೆ ನಿಮಗಾಗಿ ಮೊದಲಾದ ಲಘು ಬರಹಗಳಿಂದ ಸಂಪನ್ನವಾದ ಈ ಬ್ಲಾಗ್ ಓದಿದವರ ಮನದ ಬಿಗುವನ್ನು ಕಳೆಯುತ್ತದೆ.
ಅಮೆರಿಕೆಯಿಂದ ಅವಲೋಕಿಸುವ (೧೮-೩-೦೮)
ಇಂದಿನ ಬ್ಲಾಗ್ ಜಗುಲಿಗೆ ಅಮೆರಿಕೆಯಿಂದ ಅವಲೋಕಿಸುವ ರವಿ ಹಂಜಗಿಮಠ್ ಬಂದಿದ್ದಾರೆ. ಚುರುಕು ದೃಷ್ಟಿ, ಮೊನುಚು ಭಾಷೆಯಿಂದ ಕೂಡಿದ ಇವರ ಬರಹಗಳು ಪೂರ್ವಾಗ್ರಹ ಎನಿಸದೆ ಇಷ್ಟವಾಗುತ್ತದೆ. ಹೆಚ್ಚಿನವು ನಮ್ಮ ಸುತ್ತಲಿನ ಆಗುಹೋಗುಗಳ ಸೂಕ್ಷ್ಮ ಅವಲೋಕನವೇ ಆಗಿದೆ. ಲಿಂಕನ್ನಿನ ನಾಡಿನಲ್ಲಿ ಕೂತು ಕನ್ನಡಿಗನ ಅಭಿಪ್ರಾಯಗಳನ್ನ ನೀಡುವುದು ಇವರ ಉದ್ದೇಶ.
ಕನ್ನಡದ ದಡ್ಡ-ದಡ್ದಿಯರಿಗೆ ಅಂತ ಬಹು ಬಳಕೆಯ ಕ್ಲೀಷೆಯನ್ನು ಅಡಿಬರಹಕ್ಕೆ ಕೊಟ್ಟಿದ್ದಾರಾದರೂ, ಎಲ್ಲರೂ ಓದಬಹುದಾದ ಬರಹಗಳಿವೆ ಇಲ್ಲಿ. ಇತ್ತೀಚಿನ ಬರಹ “ಹರೇ ಹರೇ ಕೃಷ್ಣ ಕೃಷ್ಣ! ಅಲ್ ಲಾಹ್ ಹು ಅಕ್ಬರ್!” ನಲ್ಲಿ ಧರ್ಮವೆಂಬ ಅಫೀಮನ್ನು ಹೇಗೆ ಯುವಜನತೆಗೆ ಮತೀಯ ಅಥವಾ ಸೈದ್ಧಾಂತಿಕ ಸಂಸ್ಥೆಗಳು ಭೋಧಿಸುತ್ತಿವೆ ಎಂಬುದನ್ನ ಸರಳವಾಗಿ, ವಿಷದವಾಗಿ, ಸ್ವಂತ ಅನುಭವಗಳ ಮೂಲಕ ಬರೆದಿದ್ದಾರೆ.
ಭಾರತದ ರಿಯಲ್ ಎಸ್ಟೇಟೂ ಅಮೆರಿಕಾದ ರಿಸೆಷನ್ನೂ, ಗೆಂಡೆತಿಮ್ಮನ ಪ್ರಸಂಗವೂ-ಪಡುವಾರಹಳ್ಳಿಯ ಹುಚ್ಚಿಯೂ, ಯೇ ಕಚ್ಚರಾ ಲೋಗ್ ಹೈ, ಪರಿಸರ ಪ್ರಜ್ಞ್ನೆ ಮತ್ತು ನಮ್ಮ ಮೌಢ್ಯ, ಜಾತ್ಯತೀತತೆಯಲ್ಲಿ ಜಾತಿಪೀಠಗಳು, ದಾವಣಗೆರೆಯ ಹಂದಿಗಳೂ ಮತ್ತದರ ಆಕಾಶದಲ್ಲಿನ ಗಿಳಿಗಳೂ, ದಿಕ್ಕೆಟ್ಟ ರೈತರೂ ಔಷಧೀಯ ಬೆಳೆಗಳೂ, ಗ್ರಾಮವಾಸ್ತವ್ಯದ ಗ್ರಾಮಸಿಂಹ, ಮೊದಲಾದ ತೀಕ್ಷ್ಣವಾದ ಬರಹಗಳಿವೆ. ಓದಿನ ಖುಷಿಯೊಂದಿಗೆ ವಿಚಾರದ ಪರಿಧಿಯೊಳಕ್ಕೂ ಇವು ನಮ್ಮನ್ನು ಕರೆದೊಯ್ಯುತ್ತವೆ.
ನೀರದಾರಿಯ ಹೆಜ್ಜೆ (೧೭-೩-೦೮)
ಇಂದಿನ ಬ್ಲಾಗಿನಂಗಳದಲ್ಲಿ ಮೂಡಿರುವುದು ಅರುಣ್ ಮಣಿಪಾಲ್ ಅವರ ನೀರದಾರಿಯ ಹೆಜ್ಜೆ. ಖಾಲಿ ಕಾಗದದಂತಿರುವೆ ಎನ್ನುತ್ತಿರುವ ಈ ಯುವ ಕವಿ ಕಾಗದದ ತುಂಬ ಭಾವನೆಗಳ ಚಿತ್ತಾರ ಮೂಡಿಸುತ್ತಿದ್ದಾರೆ. ಒದ್ದೆ ಹೆಜ್ಜೆಗಳ ಆರ್ದ್ರತೆಯನ್ನ ಅಕ್ಷರಕ್ಕಿಳಿಸಿದ್ದಾರೆ.
ಇತ್ತೀಚಿನ ಕತೆ ‘ಹಲ್ಲಿ ಕತೆಯೊಂದು..’ ಊರ ಹೊರಗಿನ ಗುಡಿಸಲ ಜೀವವೊಂದರ ಪಾಡನ್ನು ಸೂಕ್ಷ್ಮವಾಗಿ ಚಿತ್ರಿಸಿದ ಬರಹ. ಮಳೆಯ ಹುಡುಗಿಗೆ ಎಂಬ ಆಪ್ತ ಕವಿತೆಯಲ್ಲಿ ಹೀಗೆ ಹೇಳುತ್ತಾರೆ:
ಮಲೆನಾಡ ಹಾದೀಲಿ ಮಳೆ ಬಂತು ಚೆನ್ನಿಗೆ
ನೆನೆದು ಕುಣಿಯೋಣ ಬಾರೆ..
ಗುಡುಗಂತೆ ಮಿಂಚಂತೆ ತಂಪಿನ ಹನಿಯಂತೆ
ಮಳೆಯಲ್ಲಿ ಮಳೆಯಾಗು ಬಾರೆ..
ಪುಟ್ಟ ಕತೆ, ಕವಿತೆ, ಕಾಗದ ದೋಣಿ..ಎಲ್ಲ ಇಟ್ಟುಕೊಂಡು ನೀರದಾರಿಯಲ್ಲಿ ಹೆಜ್ಜೆ ಮೂಡಿಸುತ್ತ ಸಾಗುತ್ತಿರುವ ಈ ಪ್ರತಿಭೆ ಭರವಸೆ ಮೂಡಿಸುತ್ತಾರೆ. ಇತ್ತೀಚೆಗಷ್ಟೇ ಪ್ರಾರಂಭಗೊಂಡಿರುವ ಇವರ ಬ್ಲಾಗ್ ಇನ್ನು ಬಹುದೂರ ಸಾಗಲಿ.
ನಮ್ ಟೀಮ್ ಶಿವಮೊಗ್ಗ (೧೫ -೩-೦೮)
ಇಂದಿನ ನಮ್ಮ ಬ್ಲಾಗಿನಂಗಳದಲ್ಲಿ ರಂಗಸ್ಥಳ ಮತ್ತು ನಾಟಕಕ್ಕೆ ಮೀಸಲಾದ ಶಿವಮೊಗ್ಗೆಯ ಹವ್ಯಾಸಿ ಸಮುದಾಯದ ಬ್ಲಾಗ್- ನಮ್ ಟೀಮ್ ಶಿವಮೊಗ್ಗ. ಶಿವಮೊಗ್ಗದ ರಂಗಚಟುವಟಿಕೆಗಳ ಕೇಂದ್ರಬಿಂದುವಾಗಿ ರೂಪುಗೊಂಡಿದೆ ಈ ಹವ್ಯಾಸಿ ತಂಡ. ಕಳೆದ ಎಂಟು ವರ್ಷಗಳಿಂದ ಇಲ್ಲಿಯವರೆಗೆ ೪೩ ನಾಟಕಗಳನ್ನ ಕನ್ನಡ ಜನಮನಕ್ಕೆ ಹತ್ತಿರವಾಗಿಸಿದ ಸಾಧನೆ ಈ ತಂಡದ್ದು.
ನಾಡಿನ ವಿವಿಧ ನಾಟಕ ತಂಡಗಳನ್ನು ಆಹ್ವಾನಿಸಿ ನಾಟಕೋತ್ಸವ ನಡೆಸುವುದಲ್ಲದೆ, ತನ್ನದೇ ಹಲವು ನಾಟಕಗಳ ಪ್ರದರ್ಶನ, ಸಾಮಾಜಿಕ ಬದ್ಧತೆಯ ವಿಷಯಗಳ ಆಯ್ಕೆ, ರಂಗೋತ್ಸವಗಳು, ಮಕ್ಕಳ ನಾಟಕ ಶಿಬಿರ, ಇತರ ಸೃಜನಶೀಲ ಅಭಿವ್ಯಕ್ತಿಗಳಾದ ಛಾಯಾಚಿತ್ರ, ಚಿತ್ರಕಲೆ, ಕಲಾಕೃತಿ ಇತ್ಯಾದಿಗಳ ಪ್ರದರ್ಶನ ಇವು ಈ ತಂಡದ ಅನೇಕ ಚಟುವಟಿಕೆಗಳ ಕೆಲ ಮುಖಗಳು.
ತಮ್ಮೆಲ್ಲ ಚಟುವಟಿಕೆ, ನಾಟಕ ರಂಗದಲ್ಲಿನ ಹೊಸ ಪ್ರಯೋಗ, ರಂಗಪ್ರತಿಭೆಗಳ ಪರಿಚಯ, ನಾಟಕ ಸಾಹಿತ್ಯದ ಮಾಹಿತಿ, ಪ್ರದರ್ಶಿಸಿದ ಮತ್ತು ಮುಂದೆ ಪ್ರದರ್ಶಿಸಲಿಕ್ಕಿರುವ ಹಲವು ಹೊಸ ಪ್ರಯೋಗಗಳ ವಿವರವನ್ನು ಪ್ರಕಟಿಸಲು ಜನಕ್ಕೆ ತಲುಪಿಸಲು ಇವರು ಕಂಡುಕೊಂಡ ಇನ್ನೊಂದು ಮಾಧ್ಯಮವೇ ಈ ಬ್ಲಾಗ್. ಇತ್ತೀಚಿನ ಬರಹದಲ್ಲಿ ತಮ್ಮ ಹೊಸ ಪ್ರಯೋಗ “ಕಡಿದಾಳ್ ಶಾಮಣ್ಣ” ನಾಟಕ ಪ್ರಸ್ತುತಿಯ ಬಗ್ಗೆ ಬರೆದಿದ್ದಾರೆ. ನಾಟಕದ ಆಶಯ, ನಿರ್ವಹಣೆಗೆ ಹೆಗಲು ಕೊಟ್ಟಿರುವ ಪ್ರತಿಭೆಗಳು, ರಂಗದಲ್ಲಿ ಪ್ರಸ್ತುತ ಪಡಿಸಲಿರುವ ಕಲಾವಿದರು, ಮತ್ತು ನಾಟಕದ ಬರಲಿರುವ ಪ್ರದರ್ಶನಗಳ ವಿವರ ಇಲ್ಲಿದೆ.
ಈ ಕೆಲ ಸಾಲುಗಳು ಇವರ ಹೊಸ ಪ್ರಯೋಗದ ಮೌಲ್ಯವನ್ನೂ, ಸೃಜನಶೀಲತೆಯನ್ನು ಕಟ್ಟಿಕೊಡುತ್ತವೆ. “ಮಲೆನಾಡಿನ ಮೂಲೆಯ ಕಡಿದಾಳಿನಲ್ಲಿ ಜನ್ಮ ತಾಳಿದ ಶಾಮಣ್ಣ ವಿದ್ಯಾರ್ಥಿ ದೆಸೆಯಿಂದಲೇ ದೇಸೀ ಚಿಂತಕರಾಗಿ ಮೂಢನಂಬಿಕೆ ವಿರೋಧ, ಸರಳ ಮದುವೆ, ಬೇಸಾಯ ಹಾಗೂ ತನ್ನ ಸುತ್ತಮುತ್ತಲ ಜನರನ್ನು ತಮ್ಮ ಅಭಿರುಚಿಯತ್ತ ಸೆಳೆಯುವಲ್ಲಿ ಪಟ್ಟಪಾಡು ಈ ನಾಟಕದ ತಿರುಳು….ಬಹುಶಃ ನಮ್ಮ ನಡುವೆಯೇ ಇರುವ ವ್ಯಕ್ತಿಯೊಬ್ಬರ ಕುರಿತು ನಾಟಕವೊಂದು ಸಿದ್ಧವಾಗಿರುವುದು ಇದೇ ಮೊದಲು”.
ಹೊಸಸುಳ್ಯ - ಪುಚ್ಚಪ್ಪಾಡಿ (೧೪-೩-೦೮)
ದಿನದ ಬ್ಲಾಗಿನಂಗಳದಲ್ಲಿ ಸುಳ್ಯದ ಯುವ ಕೃಷಿಕ, ಹವ್ಯಾಸಿ ಪತ್ರಕರ್ತ ಮಹೇಶ್ ಅವರ ಹೊಸಸುಳ್ಯ - ಪುಚ್ಚಪ್ಪಾಡಿ ಎಂಬ ಭಾವದಲೆಗಳ ನೋಟ. ಪುಟ್ಟ ಊರಿನಲ್ಲಿ ಕುಳಿತು ಪ್ರಪಂಚದಗಲಕ್ಕೂ ಹರಡಿರುವ ವಿಷಯ ಭಂಡಾರಕ್ಕೆ ನೆಟ್ ಕಿಂಡಿ ಕೊರೆದಿದ್ದಾರೆ. ಕೃಷಿ ಜಗತ್ತಿನ ಹಲವು ನೋಟ, ಹೊರಜಗತ್ತಿನ ಹುಚ್ಚಾಟ ಮೊದಲಾದ ವಿಷಯಗಳ ಬಗ್ಗೆ ಆಸಕ್ತಿ ಹುಟ್ಟಿಸುವ ಬರಹಗಳಿಲ್ಲಿವೆ. ನಿಮ್ಮ ಹಾಗೇ ನಾನು, ಆದ್ರೂ ಸ್ವಲ್ಪ ಜಾಸ್ತಿನೇ ಒಳ್ಳೆಯವನು ಎನ್ನುತ್ತಿರುವ ಮಹೇಶ್ ಅವರ ನೆಲದಲ್ಲಿ, ನೆಟ್ಟಲ್ಲಿ ಎರಡೂ ಕಡೆ ಬೆಳೆ ಬೆಳೆಯುವ ಉತ್ಸಾಹವಿದೆ.
ಇತ್ತೀಚಿನ ಬರಹ ನಿನ್ನೆಯ ಮತ್ತು ಇಂದಿನ ಮಹಿಳೆ, ಮೊನ್ನೆ ಆಚರಿಸಿದ ಮಹಿಳಾ ದಿನಾಚರಣೆಯ ಬಗೆಗಿನ ಒಂದು ಮೆಲುಕು. ರೈತರನ್ನು ಮಂಗ ಮಾಡುವ ಸಚಿವರು ಸ್ವಾಮಿ ಲೇಖನದಲ್ಲಿ ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್ಟಿನ “೬೪ ಕೋಟಿ ರೈತರ ಸಾಲ ಮನ್ನಾ” ಎಂಬ ಮೂಗಿಗೆ ತುಪ್ಪ ಹಚ್ಚುವ ಸರಕಾರದ ಬಗ್ಗೆ ಚುರುಕಾಗಿ ವಿಶ್ಲೇಷಿಸಿದ್ದಾರೆ. ತುತ್ತು ಅನ್ನಕ್ಕೆ ಕುತ್ತು ಬರಲಿದೆ ನೋಡಿ, ೪೨ ವರ್ಷದ ಬಳಿಕ ಡಾಮರೀಕರಣ, ಭವಿಷ್ಯದ ವಿಷ್ಯ ಏನು, ಚಿಲ್ಲರೆ ಇಲ್ಲಾರೀ, ಲೋವೋಲ್ಟೇಜ್ -ಇದು ರೈತರ ಬವಣೆ, ನಮ್ಮ ರೈತರು ಈಗಲೂ ಸ್ವಾಭಿಮಾನಿಗಳು,ಸುಳ್ಯ ತಾಲೂಕು ಯುವಜನ ಮೇಳ, ಗುರುವಿನ ಗುಲಾಮರು ಪ್ರತಿಭಟನೆಯ ಸುಲ್ತಾನರು, ಕೊರಗರಿಂದ ಯಕ್ಷಗಾನ ಮೊದಲಾದ ವಿಚಾರಪೂರ್ಣ ಲೇಖನಗಳ ಸರಮಾಲೆ ಇಲ್ಲಿದೆ. ಇದಲ್ಲದೆ ಉದಯರಾಗವೆಂಬ ಚಂದದ ಛಾಯಾಚಿತ್ರಗಳ ಇನ್ನೊಂದು ಬ್ಲಾಗ್ ಕೂಡ ಇವರ ಹೆಸರಲ್ಲಿದೆ.
ಇರುವೆದೆಲ್ಲವ ಬಿಟ್ಟು (೧೩-೩-೦೮)
ಇಂದಿನ ಬ್ಲಾಗ್ ಜಗುಲಿಗೆ ಬಂದವರು ಇರುವೆದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಶ್ರೀ. ಪ್ರಪಂಚದ ಅಚ್ಚರಿಗಳನ್ನು ದೊಡ್ಡ ಕಣ್ಣು ಬಿಟ್ಟುಕೊಂಡು ನೋಡುತ್ತಾ, ಬುದ್ಧಿ ಮತ್ತು ಮನಸ್ಸುಗಳ ನಡುವೆ ಒಂದು ಬ್ಯಾಲನ್ಸ್ ಮಾಡುತ್ತಾ, ಕಂಡ ಅಚ್ಚರಿಯ ನೋಟಗಳನ್ನ ಅಕ್ಷರಕ್ಕಿಳಿಸುತ್ತಾ ಒಳ್ಳೆಯ ವಿಚಾರ ಪೂರ್ಣ ಲೇಖನಗಳು, ಕವಿತೆ, ಹರಟೆ ಎಲ್ಲವನ್ನು ಹಾಗೆ ಸುಮ್ಮನೆ ಎನ್ನುತ್ತಾ ಬರೆದಿದ್ದಾರೆ.
ಮತ್ತೆ ಸುತ್ತುತ್ತಾ, ದೇಶಕಾಲದ ನಂಟು, ಮಿಡಿದೊಂದು ತಂತಿಗೆ, ಹೀಗೆ ಸುಮ್ಮನೆ ಎದ್ದಿದ್ದಲ್ಲ, ಚಿನಕುರುಳಿ ಪಟಾಕಿ, ಕುಲ್ಗೆಟ್ ಭಾಷೆ, ಇಷ್ಟುಕಾಲ ಒಟ್ಟಿಗಿತ್ತು..,ಮಿಡಿದೊಂದು ತಂತಿಗೆ, ಮೊದಲಾದ ಆಪ್ತ ಬರಹಗಳ ಗುಚ್ಛವಿಲ್ಲಿದೆ. ಓದಿ ಏನನ್ನಿಸಿತು ಅಂತ ನೀವೊಂದೆರಡು ಸಾಲು ಬರೆದರೆ ಖುಷಿ ಪಡುವ ಈ ಹುಡುಗಿಯ ಒಂದೆರಡು ಸಾಲುಗಳು ನಿಮ್ಮ ಮೊದಲ ಓದಿಗೆ..
ಒಂದು ಮುದ್ದಾದ ಹೂವು ಕಣ್ಣಿಗೆ ಬಿದ್ದಾಗ ಅದನ್ನ ಕಿತ್ತು ಕೈಯಲ್ಲಿ ಹಿಡಿಯೋ ಆಸೆಗೆ ಯಾಕೆ ಬೀಳ್ತೀವಿ? ಕಿತ್ತ ಕೆಲ ಘಳಿಗೆಯಲ್ಲಿ ಮುರುಟಿಹೋಗುತ್ತೆ ಅನ್ನೋದು ಆ ಕ್ಷಣದಲ್ಲಿ ಮರೆತುಬಿಡ್ತೀವಾ…ಅಲ್ಲೇ ನೋಡಿ ಖುಷಿ ಪಟ್ಟಿದ್ದ್ರೆ ಆ ಸಂತೋಷದ ಅನುಭವ ಸದಾ ನಮ್ಮ ಜೊತೆ ಇರುತ್ತೆ ಅನ್ನೋದು ಮನಸ್ಸಿಗೆ ಯಾಕೆ ಹೊಳೆಯಲ್ಲ…ಎಲ್ಲವನ್ನ ಹಿಡಿದು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಳ್ಳೋ ಅತಿ ಭಾವುಕತೆ ನಮ್ಮ ವಿಷಾದಗಳಿಗೆ ಕಾರಣ ಅನ್ನಿಸುತ್ತೆ! ಕೈಗೆ ಸಿಗಲಿಲ್ಲಾ ಅನ್ನೋ ಕಾರಣಕ್ಕೆ ಆ ಕ್ಷಣದ ಕಿರುನಗೆಯನ್ನೂ ಕಣ್ಣೀರಾಗಿಸಿಬಿಡೋದು ಹುಚ್ಚುತನ ಅಲ್ಲ್ವಾ!
ಸುನಿಲ ಜಯಪ್ರಕಾಶ (೧೨-೩-೦೮)
ಇಂದಿನ ಬ್ಲಾಗ್ ಜಗುಲಿಯಲ್ಲಿ ಸಂಪದದಲ್ಲಿರುವ ಸುನಿಲ ಜಯಪ್ರಕಾಶ ಅವರ ವಿಶೇಷ ಹೆಸರಿಲ್ಲದ ಬ್ಲಾಗು. ಹೆಸರಿನಲ್ಲೇನಿದೆ ವಿಷಯಕ್ಕೆ ಬನ್ನಿ ಎಂಬಂತೆ ಸರಳ ಆಡುಕನ್ನಡದಲ್ಲಿ ಬರೆಯುತ್ತಾ ಹೋಗಿರುವ ಸುನಿಲ್ ವೃತ್ತಿಯಿಂದ ಇಂಜಿನಿಯರ್ ಇದ್ದಾರೆ. ಸಾಹಿತ್ಯ ಸಂಗೀತ ಮತ್ತು ಕನ್ನಡ ಇವರ ಮುಖ್ಯ ಆಸಕ್ತಿ. ಬರಹಗಳಲ್ಲಿ ಹೆಚ್ಚಿನವು ಆಡುಗನ್ನಡವನ್ನು ಬಳಸಿ ಬರೆದವು. ವಿಷಯ ವೈವಿಧ್ಯದಂತೆ ಕನ್ನಡವೂ ಇವರ ಬರಹದೊಳಗಿನ ಆಕರ್ಷಣಾ ಶಕ್ತಿ.
ಇತ್ತೀಚಿನ ಬರಹದಲ್ಲಿ ‘ಇಂತಿ ನಿನ್ನ ಪ್ರೀತಿಯ’ ಸಿನೆಮಾ ನೋಡಿದ ತಮ್ಮ ಅನಿಸಿಕೆಗಳನ್ನು ಪಟ್ಟಿಮಾಡಿದ್ದಾರೆ. ತುಂಗೆ ಮತ್ತು ಕನ್ನಡ ಸಾಹಿತ್ಯ, ಬಾಲ್ಯದ ನಂಟಿನ ನೆನಪು, ಕರ್ಮಯೋಗದಲ್ಲಿ ಒಂದು ಸಂಜೆ, ಕನ್ನಡ-ಸಕ್ಕದ-ಸಂಸ್ಕೃತ-ಇಂಗ್ಲಿಷ್, ಪೈಪೋಟಿ ಎಂದರೆ ಹೀಗಿರಬೇಕು, ಶಂಕರ ಸ್ತುತಿ, ಕನ್ನಡ ಗಾದೆಗಳು, ರತ್ನಾಕರವರ್ಣಿಯವರ ಭರತೇಶ ವೈಭವ ಕೃತಿಯ ವಿಶ್ಲೇಷಣಾ ಸರಣಿಗಳೂ, ಎಲ್ಲವೂ ಒಳ್ಳೆಯ ಓದಿಗೆ ಪೂರಕವಾಗಿವೆ. ಕೆಲವೆಡೆ ನವಿರಾಗಿ ತಮಾಷೆಯಾಗಿ ಬರೆದಿರುವ ಸಾಲುಗಳು ಸೊಗಸಾಗಿದೆ.
ತುಂಗೆ ಮತ್ತು ಕನ್ನಡ ಸಾಹಿತ್ಯ ಲೇಖನದ ಈ ಕೆಲಸಾಲುಗಳು ನಿಮ್ಮ ಮೊದಲ ಓದಿಗೆ. “..ನಾವು ಕನ್ನಡಿಗರು ಒಂದು ವಿಷಯದಲ್ಲಿ ನಿಜಕ್ಕೂ ಸ್ವಲ್ಪ ಹೆಚ್ಚಾಗಿಯೇ ಪುಣ್ಯ ಮಾಡಿದ್ದೇವೆ. ಅದು ನಮ್ಮಲ್ಲಿನ ನದಿಗಳು. ಎಲ್ಲ ಕನ್ನಡಿಗರೂ ಹೆಮ್ಮೆ ಪಡಬೇಕಾದ ಪುಸ್ತಕ “ಕವಿರಾಜಮಾರ್ಗಂ”ದ “ಕಾವೇರಿಯಿಂದಮ್ ಆ ಗೋದಾವರಂ ಇರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಳಯ ವಿಲೀನ ವಿಷಯ ವಿಶದ ವಿಶೇಷಂ” ಪದ್ಯ ನಿಜಕ್ಕೂ ರೋಮಾಂಚನ ಉಂಟುಮಾಡುತ್ತಾ, ನಮ್ಮನ್ನು ಹಿನ್ನೆಪ್ಪಾಗಿಸದೆ ಎಂದೆಂದಿಗೂ ನಮ್ಮ ಗಟ್ಟಿತನವನ್ನು ಸಾಬೀತು ಪಡಿಸುತ್ತಲೇ ಇರುತ್ತದೆ…
ಅಮೃತ ಸಿಂಚನ (೧೧-೩-೦೮)
ದಿನದ ಬ್ಲಾಗಿನ ಬೊಗಸೆಯಲ್ಲಿ ಸಂತೋಷಕುಮಾರ ಪಾಟೀಲ ಅವರ ಅಮೃತ ಸಿಂಚನ. ತನ್ನೂರು ಗದಗಿನ ಅಬ್ಬಿಗೇರಿಯ ಮಾಗಿಯ ಚಳಿಯನ್ನೂ ಅಲ್ಲಿ ನಡೆಯುವ ಉಳ್ಳಾಗಡ್ಡಿ ಮಾರಾಟವನ್ನೂ ಶೇರು ಮಾರುಕಟ್ಟೆಯ ತಲ್ಲಣದಷ್ಟೇ ಸೊಗಸಾಗಿ ವಿವರಿಸುವ ಪಾಟೀಲರು, ಒಂಚೂರು ತಮ್ಮ ಬಗ್ಗೆ ಎನ್ನುತ್ತಾ ಸ್ವಲ್ಪ ಜಾಸ್ತೀನೇ ಹೇಳಿದ್ದಾರೆ. ಹಾಗೆ ಹೇಳುತ್ತಲೇ ತಮ್ಮ ಬಗ್ಗೆ ಇರುವ ಕಂಪ್ಲೇಟು ಮತ್ತು ಕಾಂಪ್ಲಿಮೆಂಟುಗಳನ್ನೂ ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ತಮ್ಮ ಸುತ್ತಲ ಜಗತ್ತಿನ ಸೋಜಿಗಗಳು, ಕಂಡಿದ್ದು, ಕೇಳಿದ್ದು, ಅನಿಸಿದ ವಿಷಯಗಳ ಸರಳ ಅಭಿವ್ಯಕ್ತಿಗಳು ಸರಾಗವಾಗಿ ಓದಿಸಿಕೊಳ್ಳುತ್ತದೆ.
ಚಡ್ಡಿಯ ಗುಂಡಿ ಕಿತ್ತರೂ ಪಿನ್ನು ಹಾಕಿಕೊಂಡು ಓಡಾಡುತ್ತಿದ್ದ ಪ್ರೈಮರಿ ದಿನಗಳಲ್ಲಿ ಬಿಸಿ ಬಿಸಿ ಚರ್ಚೆಯಲ್ಲಿದ್ದ ಮಹಾ ಪ್ರಳಯದ ಕುರಿತು ಇತ್ತೀಚೆಗೆ ಸೊಗಸಗಾಗಿ ಬರೆದಿದ್ದಾರೆ. ಬಿಗ್ ಎಫ್‌ಎಂ ರೇಡಿಯೋ ಚಾನೆಲ್‌ಗಳು ತಮ್ಮ ಚರ್ಚಾವಿಷಯಕ್ಕೆ ಆರಿಸಿಕೊಳ್ಳುವ ವಿಷಯದ ಕುರಿತು ಬಿಗ್” ಎಫ್.ಎಮ್ಮು ಮತ್ತು ಅವರ “ಬಿಗ್(?)” ಐಡಿರಿಯಾಗಳೂ ಎಂಬ ಶೀರ್ಷೆಕೆ ಬಳಸಿ ಬರೆದಿದ್ದಾರೆ. ರೇಡಿಯೋ ಜಾಕಿಗಳು ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಂಡರೆ ಅದರಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬ ಎಚ್ಚರಿಕೆ ಈ ಲೇಖನದಲ್ಲಿದೆ.
ಹೀಗೊಂದು ಹುಚ್ಚು ಬರಹ, ನಾವು ಶಾಪಗ್ರಸ್ಥರೇ?, ಬೆಂಗಳೂರು ಗಣೇಶನೂ, ನಗೆಹಬ್ಬವೂ ಮತ್ತು ಆರ್ಕೆಸ್ಟ್ರಾ, ಅಬ್ಬಿಗೇರಿ ಎಕನಾಮಿಕ್ಸು ಮತ್ತು ಉಳ್ಳಾಗಡ್ಡಿ ಇತ್ಯಾದಿ ಲೇಖನದಲ್ಲಿ ಮೂಡಿರುವ ಸಹಜ ಸೊಗಸು, ಮತ್ತು ದೇಸಿ ಬಾಷೆಯ ಸೊಗಡು ಅಮೃತ ಸಿಂಚನವನ್ನು ಇನ್ನಷ್ಟು ಸಮೃದ್ಧಗೊಳಿಸಿವೆ.
ಸೊಬಗಿನ ಬಳ್ಳಿ (೧೦-೩-೦೮)
ಇಂದಿನ ಬ್ಲಾಗಿನಂಗಳದಲ್ಲಿ ವೈಭವ ಎಂಬ ಕಾವ್ಯನಾಮದಿಂದ ಬರೆಯುವ ಭರತ್ ಕುಮಾರ್ ಅವರ ಸೊಬಗಿನ ಬಳ್ಳಿ. ದಿನದಿನಕ್ಕೂ ಬ್ಲಾಗ್ ಬರಹಗಳು ಬಳ್ಳಿಯ ಸೊಬಗಿನಂತೆ ಹಬ್ಬಿ ಓದುಗರಿಗೆ ಖುಷಿ ಕೊಡುತ್ತಿದೆ. ಕನ್ನಡ ಕಾವ್ಯ, ಜನಪದ, ಸಂಸ್ಕೃತಿ, ಹಳೆಗನ್ನಡ, ನವ್ಯ, ಹಲವು ಹತ್ತು ತಂತ್ರಜ್ಞಾನಗಳು, ಇಂದಿನ ನೆಟ್ ಯುಗದ ಬಲೆಯಲ್ಲಿ ಸಿಕ್ಕಿಬಿದ್ದ ಕನ್ನಡಿಗರು ಈ ಎಲ್ಲ ವಿಷಯಗಳನ್ನು ಅಧ್ಯಯನ ಮಾಡಿ ಬರೆದ ಬರಹಗಳು ಇಲ್ಲಿವೆ. ಹಲವು ತಾಂತ್ರಿಕ ವಿಷಯಗಳನ್ನು ಸರಳ ಕನ್ನಡದಲ್ಲಿ ಬರೆದಿದ್ದಾರೆ.
ಇತ್ತೀಚಿನ ಬರಹ ನಯಸೇನನ ಸಾಲುಗಳು - ೧೧ನೇ ಶತಮಾನದ ಜೈನಕವಿ ನಯಸೇನನ ಕಾವ್ಯವಿಶೇಷಗಳನ್ನು ಹಿರಿಗನ್ನಡದಿಂದ ತಿಳಿಗನ್ನಡಕ್ಕೆ ತಂದಿದ್ದಾರೆ. ನಯಸೇನ ಕಬ್ಬಕ್ಕೆ ಸಹಜತನ ಯಾಕಿರಬೇಕು ಎಂಬುದನ್ನ ಒತ್ತಿ ಹೇಳಲು ಮಳೆ ನೀರು ಮತ್ತು ಪನ್ನೀರು (ಪೊಯ್ನೀರ್) ಎಂಬ ಉಪಮೆಗಳನ್ನು ಬಳಸಿಕೊಂಡು ಚೆನ್ನಾಗಿ ಬಣ್ಣಿಸಿದ್ದಾನೆ.” ಹೇಗೆ ಮಳೆಯಿಲ್ಲದೆ ಉರಿದು/ಬಿಸಿಯಾಗಿರುವ ದರೆ(ಬುವಿ)ಬರೀ ಎರಚಿದ ನೀರಿನಿಂದ ತಣ್ಣಗಾಗುವುದಿಲ್ಲವೊ ಹಾಗೆ ಕೇವಲ ಶಾಸ್ತ್ರಬಲದ ಚಟಕ್ಕೆ ಬಿದ್ದು(ಎರಚಿದ ನೀರಿನಂತೆ) ಸಹಜತನವನ್ನು (ಮಳೆ) ಕಳೆದುಕೊಂಡ ಕಬ್ಬಿಗನ ಕಬ್ಬ ಕೋಮಳವಾಗುವುದಿಲ್ಲ. ಒಟ್ಟಿನಲ್ಲಿ ಕಬ್ಬಕ್ಕೆ ಸಹಜತನ ಬಲು ಮುಖ್ಯ.”
ನಯಸೇನನ ಧರ್ಮಾಮೃತ, ಕನ್ನಡದಲ್ಲಿ ವೆರಿಲಾಗ್, ಕನ್ನಡದ ಬಳಕೆ ಹೇಗಿರಬೇಕು, ನಾನಾಗಿರದನ್ನಕ್ಕ, ಕನ್ನಡದ ಅಂಕಿಗಳು ಹೇಗೆ ಬಂತು, ಕಪ್ಪೆ ಅರಭಟ್ಟನ ಕನ್ನಡ ಶಾಸನ, ಬೀಸು ಕಂಸಾಳೆ, ಅರವಟ್ಟಿಗೆ ಅಂದರೆ ಏನು, ರಾಷ್ಟ್ರಕೂಟರ ಹೊತ್ತಿನಲ್ಲಿದ್ದ ತೆಂಕು ಮತ್ತು ಬಡಗು ಬಗೆಗಳು, ನುಡಿಗಬ್ಬ, ಜನಪದ ತೆರೆನಾದ ಹಾಡುಗಳು, ಮೊದಲಾದ ಎಲ್ಲ ಬರಹಗಳು ಕನ್ನಡದ ಕಂಪಿನಿಂದ ಬೀಗುತ್ತಿರುವ ಹೂಗಳಂತೆ ಇವರ ಬ್ಲಾಗ್ ಬಳ್ಳಿಯಲ್ಲಿ ಮನೋಹರವಾಗಿವೆ.
ಮೃಗನಯನಿ (೮-೩-೦೮)
ಇಂದಿನ ಬ್ಲಾಗಿನಂಗಳದಲ್ಲಿ ಇಣುಕುತ್ತಿರುವುದು “ಮೃಗನಯನಿ” ಯವರ ಮನದೊಳಗಿನ ಕಣ್ಣು. ತನ್ನ ಪರಿಚಯಕ್ಕಿಂತ ಹೆಚ್ಚಾಗಿ ಬರಹಗಳ ಮೂಲಕ ಓದುಗರ ಮನದೊಳಕ್ಕೆ ಎಂಟ್ರಿ ಪಡೆಯಬಯಸುವ ಈ ಯುವ ಲೇಖಕಿ ಭರವಸೆ ಮೂಡಿಸುವ ಪ್ರತಿಭೆ. ಇನ್ನೂ ಓದುತ್ತಿರುವ ಅರಳುಮೊಗ್ಗು ಲೇಖಕಿ ತಾನು ಬ್ಲಾಗಿಸುವುದಕ್ಕೆ ತೊಡಗಿಸಿಕೊಂಡಿದ್ದು ಹೇಗೆ ಅಂತ ಹೇಳಿಕೊಂಡಿರುವುದು ಹೀಗೆ.. ಒಂದು ಘಮ್ಮನೆಯ, ಬಿಸಿನೀರಿನ, ಅದ್ಭುತ ಸ್ನಾನ ಮಾಡ್ಕೊಂಡು ರೂಮಿಗ್ ಬಂದೆ.. ಏನಾದ್ರೂ ಬರೆಯೊಕ್ಕೆ ಕೈ ಚಡಪಡಿಸುತ್ತಿತ್ತು. ದೀಪ ಹಚ್ಚಿ, ಪೂಜೆ ಮಾಡಿದ್ ನೆಪ ಮಾಡಿ, ವಿಷ್ಣುಸಹಸ್ರನಾಮನ ಸಹಸ್ರಾರು ಮೈಲಿ ವೇಗದಲ್ಲಿ ಬಡಬಡಿಸಿ, ಯಾವುದೋ ರೆಕಾರ್ಡ್ ಬರಿತಿದ್ದ ಗೆಳತಿಯ ಪೆನ್ ಕಿತ್ತುಕೊಂಡು ಬರೆಯೋಕ್ ಶುರು ಮಾಡಿದೆ. ಲಹರಿಯಲ್ಲಿದ್ದರೆ ಬರೀತೀನಿ.. -ಈ ಮಾತುಗಳು ಇಂದಿನ ಭಾವುಕ ಮತ್ತು ಶಕ್ತ ಯುವಮನಸ್ಸುಗಳ ಸೃಜನಶೀಲತೆಯೆಡೆಗೆ ನಮ್ಮ ಗಮನ ಸೆಳೆಯುತ್ತದೆ.
ಮಲೆನಾಡಿನ ಹಿನ್ನೆಲೆ, ಹೊಸತಲೆಮಾರಿನ ಪುಳಕಗಳು, ಬದುಕಿನ ಬನದ ಅರೆಬಿರಿದ ಭಾವ ಕುಸುಮಗಳು, ಅಕ್ಕರೆಯುಕ್ಕಿಸುವ ನೆನಪುಗಳು ಇವರ ಬರಹದಲ್ಲಿ ಪಡಿಮೂಡಿವೆ. ಓದುವವರ ಮನಸ್ಸಿಗೆ ಹಿತವಾಗಿವೆ.ನೀಲಿ ನಕ್ಷತ್ರದಿಂದ ಬಂದ ಪತ್ರ, ಬೆಳ್ಳಿಯ ಭಾವನೆ, ಮುಟ್ಟಾದ ಹುಡುಗಿ, ವನಸಿರಿಯ ಮಗಳು, ಕಾಣದ ಕಡಲಿಗೇ ಹಂಬಲಿಸುತಾ ಮನ, ಗೋಡೆ, ಮನಸು ಹಗುರ-ನೆನಪು ಬಚ್ಚಲಲ್ಲಿ ಭದ್ರ,ಮಳೆ-ನೆನೆಯುವ ಖುಷಿ, ಮನಶ್ಯಾಸ್ತ್ರ, ಮೊದ್ದಲಾದ ಚೆಲುಬರಹಗಳ ಗುಚ್ಚವಿದು. ಇತ್ತೀಚಿನ ಕತೆ ನಾಣಿ. ವಿಷಯದಷ್ಟೇ ಅಭಿವ್ಯಕ್ತಿಯೂ ಹೊಸದಾಗಿದೆ.
ಅಮೆರಿಕದಿಂದ ರವಿ (೬-೩-೦೮)
ಇಂದಿನ ಬ್ಲಾಗ್ ಬಾನಿನ ಚುಕ್ಕಿ ರವಿಕೃಷ್ಣಾರೆಡ್ಡಿಯವರ ಅಮೆರಿಕದಿಂದ ರವಿ. ವಿಕ್ರಾಂತ ಕರ್ನಾಟಕ ಪತ್ರಿಕೆಯ ಅಂಕಣಕಾರರೂ ಆಗಿರುವ ಇವರು, ತಮ್ಮ ಹಲವಾರು ಪ್ರಕಟಿತ ಅಂಕಣಗಳನ್ನೂ ಇಲ್ಲಿ ಹಂಚಿಕೊಂಡಿದ್ದಾರೆ. ವಿಚಾರಭರಿತ ವಿಷಯಗಳನ್ನು ನಿಖರ ಮಾಹಿತಿಗಳೊಂದಿಗೆ, ಚಿಂತನೆಗೆ ತೊಡಗಿಸುವ ರೀತಿಯಲ್ಲಿ ಬರೆದಿದ್ದಾರೆ. ಕೆಲವು ಲೇಖನಗಳ ವಿಡಿಯೋ ಪ್ರಸ್ತುತಿ ಕೂಡ ಇವೆ.
ಇತ್ತೀಚಿನ ಲೇಖನ -ವಿಶ್ವಕ್ಕೇ ನಾಯಕತ್ವ ಕೊಡಬಲ್ಲವನಿಗೆ ಕೊನೆಯ ಸ್ಥಾನ!!! ಇದರಲ್ಲಿ ಅಮೆರಿಕಾದ ಚುನಾವಣೆ ಮತ್ತು ನಾಯಕರ ಬಗೆಗಿನ ಮಾಹಿತಿಗಳನ್ನು ಸುಲಭ ಓದಿಗೆ ದಕ್ಕುವಂತೆ ವಿಮರ್ಶಿಸಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷನಾಗುವ ಯೋಗ್ಯತೆ ಇರುವವರಲ್ಲಿ ಮೊದಲ ಸ್ಥಾನ ನಿಸ್ಸಂಶಯವಾಗಿ ರಾಲ್ಫ್ ನೇಡರ್‌ದೆ. ಆದರೆ ಅದು ಏಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಹಿಂದಿನ ಬರಹಗಳಾದ ಸ್ವತ್ರಂತ್ರ ನಿರಂಕುಶಮತಿಗಳು, ಗಂಡನ ಗೋರಿಯಿಂದ ಗದ್ದುಗೆಯತ್ತ, ಪ್ರಪಾತದ ಅಂಚಿನಲ್ಲಿ ಪರಿವರ್ತನೆಯ ಸಂಕಲ್ಪ, ನ್ಯಾಗಟಿ ಸಿಟಿ ಚಂದರ್ ಮತ್ತೆ ಹಳ್ಳಿಯತ್ತ, ಸ್ಟೀರಿಯೋಟೈಪಗಳನ್ನು ನಂಬಿದರೆ ಜೀವನಪ್ರೀತಿ ಸಾಧ್ಯವೆ, ತಿಮ್ಮಕ್ಕನಿಂದ ಕಲಿತದ್ದೇನು, ಅಯೋಗ್ಯರನ್ನು ಕೈಯಾರೆ ಆರಿಸಿಕೊಂಡು ಅಭಿವೃದ್ಧಿಯಾಗಲಿಲ್ಲ ಅಂದರೆ, ಅಮೆರಿಕ ಎಂದರೆ ಭುವಿಯ ಮೇಲಿನ ಸ್ವರ್ಗವೇನಲ್ಲ, ಇಂಟರ್ ನೆಟ್ನಲ್ಲಿ ನವಗ್ರಹ ಕಾಟ,.. ಎಲ್ಲವೂ ಒಂದಕ್ಕಿಂತ ಇನ್ನೊಂದು ಸೊಗಸಾಗಿದೆ.
ಚುರುಕು ಒಳನೋಟ, ಪೂರ್ವಾಗ್ರಹವಿಲ್ಲದ ವಿಷಯ ಮಂಡನೆ, ನವಿರು ನಿರೂಪಣೆ, ಪೂರ್ಣ ಮಾಹಿತಿ, ಮತ್ತು ಸರಳ ಬರವಣಿಗೆ ಇಲ್ಲಿನ ಬರಹಗಳ ವಿಶೇಷಗಳು.
ಕನ್ನಡ ಕಾರ್ಟೂನ್ (೫-೩-೦೮)
ಇಂದಿನ ಬ್ಲಾಗಿನಂಗಳದಲ್ಲಿ ಅರುಣ ಪ್ರಕಾಶ್, ಸುಸಂಸ್ಕೃತ, ಮತ್ತು ಪ್ರಶಾಂತ್.ಎಂ ಅವರ ಬಳಗದ ಕನ್ನಡ ಕಾರ್ಟೂನಿನ ನಗೆಮೊಗ್ಗು ಬಿರಿದಿದೆ. ಪ್ರಪಂಚದಾದ್ಯಂತ ಅಚ್ಚುಮೆಚ್ಚಾಗಿರುವ ಇಂಗ್ಲಿಷಿನ ಕ್ಯಾಲ್ವಿನ್ ಮತ್ತು ಹಾಬ್ಸ್, ದಿಲ್ ಬರ್ಟ್, ಮತ್ತು ಗಾರ್ ಫೀಲ್ಡ್, ಈ ಮೂರೂ ಹಾಸ್ಯಮಯ ಅಣಕುಚಿತ್ರಸರಣಿಗಳನ್ನು ಕನ್ನಡಕ್ಕೆ ತಂದಿರುವ ವಿಶೇಷ ಪ್ರಯತ್ನ ಇಲ್ಲಿದೆ.
ಬಿಲ್ ವಾಟರ್ಸನ್‌ನ ಅನನ್ಯ ಚಿತ್ರಸರಣಿಯ ಪುಟ್ಟ ಹುಡುಗ ಕ್ಯಾಲ್ವಿನ್ ಮತ್ತು ಅವನ ಕಲ್ಪಕ ಜೊತೆಗಾರ ಹಾಬ್ಸ್ ಎಂಬ ಸ್ಟಫ್ ಮಾಡಿದ ಹುಲಿಗೊಂಬೆ, ಆಧುನಿಕ ನಾಗರಿಕ ಜಗತ್ತಿನ ಗೋಜಲುಗಳನ್ನು ಹಾಸ್ಯದ ಎಳೆಗಳಲ್ಲಿ ಅಣಕವಾಡುತ್ತಾರೆ. ಈ ಜನಪ್ರಿಯ ಸರಣಿಯನ್ನು ಕನ್ನಡದಲ್ಲಿ ಕೇಶು-ನಾಣಿಯರಾಗಿ ಒಳ್ಳೆಯ ಅನುವಾದ ಮಾಡಿದ್ದಾರೆ ಅರುಣ ಪ್ರಕಾಶ್.
ಸ್ಕಾಟ್ ಆಡಮ್ಸ್ ಅವರ ದಿಲ್ ಬರ್ಟ್ ಸರಣಿ, ಆಫೀಸ್ ಜಗತ್ತಿನ ಸಭ್ಯ ಸೋಗಿನ ನಡವಳಿಕೆ, ಕೆಲಸ ಕದಿಯುವಿಕೆ, ಮತ್ತು ಪದವಿಯ ಅಮಲು ಅವಾಂತರಗಳನ್ನು ನಗೆಯ ಅಲೆಯ ಮೇಲಿ ಅಣಕು ದೋಣಿಗಳಾಗಿಸಿ ತೇಲಿಬಿಡುತ್ತದೆ.ಇಂಗ್ಲಿಷಿನ ದಿಲ್ ಬರ್ಟ್‌ನನ್ನು ಕನ್ನಡದ ಸಾಂಬಶಿವನಾಗಿಸಿ ಸಮರ್ಥ ಅನುವಾದ ಮಾಡಿ ಮುದ ನೀಡಿದ್ದಾರೆ ಸುಸಂಸ್ಕೃತ.
ಕರ್ನಾಟಕ ಪೊಲೀಸ್ (೪-೩-೦೮)
ದಿನದ ಬ್ಲಾಗ್ ಬೊಗಸೆಯಲ್ಲಿ ಈ ಸಲ ಬಂಧಿಯಾಗಿರುವವರು ಕರ್ನಾಟಕದ ನಾಲ್ಕು ಪೊಲೀಸ್ ಠಾಣೆಗಳು. ಕೆ.ಜಿ.ಎಫ್, ಉಡುಪಿ, ಕೋಲಾರ, ಹಾಗೂ ದಕ್ಷಿಣ ಕನ್ನಡ ಪೊಲೀಸರ ಬ್ಲಾಗ್‌ಗಳು. ತೋಚಿದ್ದನ್ನು ಗೀಚುವ, ಭಾವನೆಗಳನ್ನು ಹಂಚಿಕೊಳ್ಳುವ, ಖಾಸಗಿ ಗುಟ್ಟನ್ನು ಬಿಚ್ಚಿಡುವ, ಜಾಲಿಗರ ಪರ್ಸನಲ್ ಡೈರಿಯಾಗಿರುವ ಬ್ಲಾಗಿನಲ್ಲಿ ಆರಕ್ಷಕ ಪಡೆಗಳಿಗೇನು ಕೆಲಸ ಎಂದು ನೀವು ಈ ಬ್ಲಾಗನ್ನೊಮ್ಮೆ ಪ್ರವೇಶಿಸಿದರೆ, ಹತ್ತು ಹಲವು ಅಚ್ಚರಿಯ ಸಂಗತಿಗಳನ್ನು ಕಾಣಬಹುದು. ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಿನಂಪ್ರತಿ ನಡೆಯುವ ಪ್ರಕರಣಗಳ ಸಂಪೂರ್ಣ ವಿವರ ಬ್ಲಾಗಿನಲ್ಲಿದೆ.
`ಅಪರಾಧಿಕ ವಿಷಯಗಳಲ್ಲದೇ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪ್ರಜ್ಞಾವಂತ ನಾಗರೀಕರೊಂದಿಗೆ ಹಂಚಿಕೊಳ್ಳುವುದು ಈ ಬ್ಲಾಗ್‌ನ ಆಶಯವಾಗಿರುತ್ತದೆ, ಇದರಿಂದ ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಬದ್ದತೆ ಹೆಚ್ಚುತ್ತದೆ` ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಸಹಜವಾದ, ಕುತೂಹಲವಾದ ವಿಷಯವಾಗಿ ಕಂಡರೂ, ನಂತರ ಹಲವು ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಈ ಎಲ್ಲ ಠಾಣೆಗಳ ಬ್ಲಾಗುಗಳಲ್ಲಿ ಅಫ್‌ಡೇಟ್ ಆಗುವ ಸುದ್ದಿ ಒಂದೇ ರೀತಿಯಲ್ಲಿದೆ. ಆದರೆ ಪ್ರಕರಣಗಳ ಸಂಖ್ಯೆಯಲ್ಲಿ ಮಾತ್ರ ವ್ಯತ್ಯಾಸವಿದೆ. ಕೆ.ಜಿ.ಎಫ್ ಪೊಲೀಸರ ಬ್ಲಾಗಿನಲ್ಲಿ ಇಂದು ಅಫ್‌ಡೇಟ್ ಆಗಿರುವ ಸುದ್ದಿಯನ್ನೊಮ್ಮೆ ಗಮನಿಸಿ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೩-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ. ಕೊಲೆ: ಇಲ್ಲ. ಡಕಾಯತಿ: ಇಲ್ಲ, ಸುಲಿಗೆ: ಇಲ್ಲ, ಮನೆಗಳ್ಳತನ: ಇಲ್ಲ, ಸಾಧಾರಣ ಕಳ್ಳತನ: ಇಲ್ಲ,ವಾಹನ ಕಳ್ಳತನ : ಇಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ, ರಸ್ತೆ ಅಪಘಾತಗಳು: ೦೨, -ಮಾರಣಾಂತಿಕ: ಇಲ್ಲ, -ಸಾಧಾರಣ: ೦೧. ಈ ವಿವರದ ಜೊತೆಗೆ ಪ್ರಕರಣದ ಮಾಹಿತಿಯೂ ಇದೆ. ಎಫ್.ಐ.ಆರ್ ಪ್ರತಿಯನ್ನು ಲಗತ್ತಿಸದೇ ಇದ್ದರೂ, ಹೆಚ್ಚು ಕಡಿಮೆ ಅದರಂತೆಯೇ ವಿವರಗಳಿವೆ.
ಪೊಲೀಸ್ ಠಾಣೆಗಳಲ್ಲಿ ದಾಖಲುಗೊಳ್ಳುವ ಎಲ್ಲ ಪ್ರಕರಣಗಳನ್ನು ಈ ರೀತಿ ಬ್ಲಾಗಿನಲ್ಲಿ ತಕ್ಷಣವೇ ಪ್ರಕಟಿಸಿ ಬಿಡುವುದು ಎಷ್ಟು ಸರಿ ಮತ್ತು ಎಷ್ಟು ತಪ್ಪು ಎನ್ನುವುದು ಒಂದು ಪ್ರಶ್ನೆಯಾದರೆ, ಇಂತಹ ಮಾಹಿತಿಗಳನ್ನು ಈ ರೀತಿ ಸರಳವಾಗಿ ನೀಡಬಹುದೇ ಎನ್ನುವುದು ಮತ್ತೊಂದು ಪ್ರಶ್ನೆ? ಸಾಬೀತಾಗದ ಮಾಹಿತಿಗಳನ್ನು ಸಾರ್ವಜನಿಕ ಅವಗಾಹನೆಗೆ ತರುವುದರಿಂದ ಏನೆಲ್ಲಾ ಅನಾಹುತಗಳು ಸೃಷ್ಠಿಯಾಗಬಹುದು ಎನ್ನುವುದರ ಕುರಿತೂ ವಿಚಾರ ಮಾಡಬೇಕಾಗುತ್ತದೆ. ಅಷ್ಟಕ್ಕೂ ವೈಯಕ್ತಿಕ ಪ್ರಕಟಣೆಗಳಿಗಾಗಿ ಬಳಸಿಕೊಳ್ಳಬೇಕಾದ ಬ್ಲಾಗ್‌ನ್ನು ಪೊಲೀಸ್ ಠಾಣೆಯೊಂದು ತನ್ನ ವ್ಯಾಪ್ತಿಯಲ್ಲಿ ದಾಖಲಾಗುವ ಪ್ರಕರಣಗಳ ವಿವರ ನೀಡಲು ಬಳಸಿಕೊಳ್ಳಬಹುದೇ ಎನ್ನುವುದು ಹಲವು ಜಾಲಿಗರ ಪ್ರಶ್ನೆಯಾಗಿದೆ.
ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಈ ಮಾಹಿತಿಗಳನ್ನು ಪ್ರಕಟಿಸಿದ್ದರೆ ಅದರಲ್ಲೇನೂ ವಿಶೇಷತೆ ಕಾಣಿಸುತ್ತಿರಲಿಲ್ಲ. ಆದರೆ ಬ್ಲಾಗ್ ಎನ್ನುವುದು ತುಂಬಾ ಖಾಸಗಿ ವಿಷಯಗಳನ್ನು ಪ್ರಕಟಿಸುವ, ಚರ್ಚಿಸುವ ಅಂಗಳ.
ಪೊಲೀಸರು ಬ್ಲಾಗಿನ ಮೂಲಕ ಹೊಸತೊಂದು ಪ್ರಯತ್ನ ಪ್ರಾರಂಭಿಸಿದ್ದಾರೆ. ಉಳಿದ ಬ್ಲಾಗಿಗರ ಪ್ರತಿಕ್ರಿಯೆ ಏನಿರಬಹುದು?
ಹಂಸನಾದ (೩ -೩-೦೮)
ಇಂದಿನ ಬ್ಲಾಗ್ ಲೋಕದಲ್ಲಿ ಸಂಗೀತಪ್ರಿಯ ಹಂಸಾನಂದಿಯವರ ಹಂಸನಾದ. ಈ ಬ್ಲಾಗಿನ ತಾಣ ಕನ್ನಡ ಬ್ಲಾಗ್ ಲೇಖಕರನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟುವ ಸಂಪದದಲ್ಲಿ. ‘ಒಳಿತಾದದ್ದೆಲ್ಲ ಎಲ್ಲೆಡೆಯಿಂದಲೂ ಬರಲಿ’ ಎಂಬ ವೇದಭಾವವನ್ನು ಆವಾಹಿಸಿಕೊಂಡಿರುವ ಲೇಖಕರ ಮುಕ್ತ ತಿಳುವಳಿಕೆಯಿಂದ ಹೊಮ್ಮುವ ಕರ್ನಾಟಕ ಸಂಗೀತದ ವಿವಿಧ ರಾಗಧಾರೆಗಳು ಇಂಪಾಗಿ ಅನುರಣಿಸುತ್ತವೆ.
ರಾಗವಿಸ್ತಾರ, ದಾಸರ ಪದಗಳು, ಪ್ರಾಸ, ತಾಳ, ರಾಗಸಮೃದ್ಧಿಯ ಕರ್ನಾಟಕ ಸಂಗೀತ, ಸಂಸ್ಕೃತ ಶ್ಲೋಕಗಳ ಕನ್ನಡ ಭಾವಾರ್ಥ, ವಚನಗಳ ವೈವಿಧ್ಯ, ತ್ಯಾಗರಾಜರ ಸಂಗೀತ ಪ್ರತಿಭೆ, ರಾಗಗಳಿಂದ ಹೊಮ್ಮುವ ರಸಗಳು ಮತ್ತು ಕೇಳುಗರ ಮನದಲ್ಲೇಳುವ ಭಾವಸ್ಫುರಣ, ಇತ್ಯಾದಿ ವಿಷಯಗಳ ಪ್ರೌಢ ಬರಹಗಳಿಂದ ತುಂಬಿರುವ ಈ ಬ್ಲಾಗಿನಲ್ಲಿ, ಪ್ರಸ್ತುತ ಸಮಾಜದ ಬಗೆಗಿನ ಕೆಲವು ಹರಟೆ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗೆಗಿನ ಕೆಲ ಸಂವಾದೀ ಬರಹಗಳು, ನೆನಪಿನಿಂದ ಹೆಕ್ಕಿ ತೆಗೆದ ಒಂದಷ್ಟು ಕಥೆ, ಕವಿತೆ, ಪದ್ಯಗಳು ಇವೆ.
ನೀಲಾಂಜನರೆಂಬ ಕಾವ್ಯನಾಮದಲ್ಲಿ ಇವರು ನಡೆಸುವ ‘ಅಲ್ಲಿದೆ ನಮ್ಮ ಮನೆ’ ಎಂಬ ವಿಚಾರವೈವಿಧ್ಯಗಳಿಗೆ ಮುಡಿಪಾದ, ಛಾಯಾಚಿತ್ರಗಳಿಂದ ಕಳೆಕಟ್ಟಿರುವ ಇನ್ನೊಂದು ಬ್ಲಾಗಿದೆ. ಇಲ್ಲಿಯ ಹೆಚ್ಚಿನ ಬರಹಗಳು ಇಂಗ್ಲಿಷಿನಲ್ಲಿವೆ. ಇತ್ತೀಚಿನ ಬರಹದಲ್ಲಿ ತಮ್ಮ ಬ್ಲಾಗಿಗೆ ವರ್ಷ ತುಂಬಿರುವ ಬಗ್ಗೆ ನಮ್ರತೆಯಿಂದ ಬರೆದಿದ್ದಾರೆ.
ನವಿಲಗರಿ (೨-೩-೦೮)
ದಿನದ ಬ್ಲಾಗಿನ ಅತಿಥಿ ಸಾಗರದ ಹುಡುಗ ಸೋಮು ಅವರ ಭಾವನೆಗಳ ನವಿಲಗರಿ. ಕನ್ನಡ ಓದು ಮತ್ತು ಬರೆಯುವುದರ ಬಗ್ಗೆ ತುಂಬ ಪ್ರೀತಿಯಿರುವ ಈ ಯುವಪ್ರತಿಭೆ “ಅಮ್ಮ ನೀನು ಸುಳ್ಳಿಯಲ್ಲವೇ” ಎಂಬ ಅಪ್ಯಾಯಮಾನ ಕವಿತೆಯಿಂದ ಕನ್ನಡದ ಜಾಲಿಗರ ಮನ ಗೆದ್ದವರು. ಹಳ್ಳಿಯ ಹಿನ್ನೆಲೆಯ ಈ ಕವಿ ಹೃದಯಕ್ಕೆ ಸಾಹಿತ್ಯವೆಂದರೆ ವಿಶೇಷ ಅಭಿಮಾನ. ಓದಲು ಮುದ ಕೊಡುವ ಭಾವನೆಗಳ ಅಲೆಯೇರಿದ ಸಾವಿರ ಕಣ್ಣುಗಳ ಗರಿಗೆದರಿದ ಕವಿತೆಗಳಿಲ್ಲಿವೆ.
ಇತ್ತೀಚಿನ “ಕೆಲವು ಬಯಕೆಗಳು “- ಮಣ್ಣುಗೂಡಿದ ಆಸೆಗಳನ್ನ ನವಿರಾಗಿ ಎದೆಯ ಪಲ್ಲಕ್ಕಿಯಲ್ಲಿ ಹೊತ್ತು ತಂದು ಓದುಗರ ಮನದಂಗಳಕ್ಕೆ ಅಕ್ಷರದ ಮೆಟ್ಟಿಲಿಟ್ಟು ಇಳಿಸುವ ಕವನ. ನೆನಪಿಗೆ ಬರಬಾರದು ನೀನು, ನಿನ್ನ ನೆನೆಯುತ್ತಾ, ಗೆಳತಿಯ ಗುಟ್ಟು, ಕಣ್ಣುಗಳು, ಚುಟುಕುಗಳು, ಇತ್ಯಾದಿ ಎಲ್ಲ ಕವನಗಳು ಮೊದಲ ಓದಿಗೇ ಹತ್ತಿರಾಗುತ್ತವೆ.
ಅಮ್ಮ ನೀನು ಸುಳ್ಳಿಯಲ್ಲವೇ ಕವಿತೆಯ ನಾಲ್ಕು ಸಾಲು ನಿಮ್ಮ ಮೊದಲ ಓದಿಗೆ.
ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು
ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿದ್ದ
ಭೂಮಿ ತೂಕದ ಅಮ್ಮಾ.. ನೀನು ಸುಳ್ಳಿಯಲ್ಲವೆ?
ಪಾಸಿಂಗ್ ಥಾಟ್ಸ್ (೧-೩-೦೮)
ಇಂದಿನ ಬ್ಲಾಗಿನಂಗಳದಲ್ಲಿ ತಮ್ಮನ್ನು ತಾವು ಸಸ್ನೇಹೀ ಯಾತ್ರಿಕ ಎಂದು ಕರೆದುಕೊಂಡಿರುವ ಎಂ.ಡಿ, ಯವರು ಬರೆಯುವ “ಪಾಸಿಂಗ್ ಥಾಟ್ಸ್” ನ ಹೂಮೊಗ್ಗು ಬಿರಿದಿದೆ. ಕವಿತೆ, ಗಝಲ್, ಪುಟ್ಟ ಪುಟ್ಟ ಕತೆ, ಮಾತು ಕತೆ ಎಲ್ಲ ಬರೆದಿರುವ ಇವರ ಬ್ಲಾಗಿಗೆ ಕನ್ನಡದ ಹೆಸರೇ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ಓದುಗರಿಗೆ ಅನಿಸಿದರೂ, ಬರಹಗಳೆಲ್ಲ ಅಪ್ಪಟ ಕನ್ನಡದಲ್ಲೇ ಇದೆ.
ಗಹನ ವಿಚಾರಗಳನ್ನ ಸರಳವಾಗಿ, ನವಿರಾಗಿ ಹೇಳುವ ಕಲೆಯರಿತಿರುವ ಇವರ ಮಂತ್ರೋಪಚಾರ, ನಾನಾಗಲೇ ಕವಿಯಾಗಿದ್ದೆ, ಮಷ್ಕಿರಿ ೧, ಪೌಂಕ್ ರಾಯಾ ಉಧೋ ಉಧೋ, ಏಟು, ಬಸವನಗುಡಿ ಪರಿಷೆ, ಆಟೋ ಸಂದೇಶಗಳು ಅವ್ವಾ ನೀ ಮತ್ಯಾವ ಹೆಣ್ಣಲ್ಲಿ ಸಿಗುತ್ತೀ, ಗುಬ್ಬಿ ಜೀವನ, ವಾಹ್ ತಾಜ್, ಆಟೋ ಸಂದೇಶಗಳು ಮೊದಲಾದ ಎಲ್ಲ ಬರಹಗಳು ಮುದ ನೀಡುತ್ತವೆ.
ಮೊದ ಮೊದಲ ಕೆಲವು ಪೋಸ್ಟ್‌ಗಳಲ್ಲಿ ಒಂದೆರಡು ಹಿಂದಿ ಮತ್ತು ಇಂಗ್ಲಿಷ್ ಭಾವಾಭಿವ್ಯಕ್ತಿಗಳಿವೆಯಾದರೂ, ಇತ್ತೀಚಿನ ಎಲ್ಲ ಬರಹಗಳೂ ಕನ್ನಡದಲ್ಲಿವೆ. ಲೇಖಕರ ಗಝಲ್ ಪ್ರೀತಿ ಎಲ್ಲ ಬರಹಗಳಲ್ಲೂ ವ್ಯಕ್ತವಾಗಿವೆ. ದಿನದಿನದ ಘಟನೆಗಳಲ್ಲಿ ಮನಸ್ಸನ್ನು ತಾಕಿ ಹೋದ ಭಾವುಕ ಕ್ಷಣಗಳನ್ನು ಅಕ್ಷರವಾಗಿಸುವ ಪ್ರಯತ್ನ ಲೇಖಕರದು. ಕತೆಯಲ್ಲಿ ಬರುವ ಸಣ್ಣ ಊರಿನ ಟೇಲರ್ ಲೋಕದ ಅನಾವರಣ, ಆಸಕ್ತಿಯುತವಾಗಿದೆ. ವಿರಾಮದ ಓದಿಗೆ ಖುಶಿ ಕೊಡುವ ಬ್ಲಾಗಿದು.
ಇ-ಜ್ಞಾನ (೨೯-೨-೦೮)
ಇಂದಿನ ಬ್ಲಾಗ್ ಬೊಗಸೆಯಲ್ಲಿ ಸಹೃದಯೀ ಲೇಖಕರ ಸಮೂಹವೊಂದು ವಿಜ್ಞಾನ ವಿಷಯಗಳನ್ನು ಕನ್ನಡಲ್ಲಿ ಹಂಚಿಕೊಳ್ಳುತ್ತಿರುವ ಒಂದು ಶ್ಲಾಘನೀಯ ಪ್ರಯತ್ನ - ಇ-ಜ್ಞಾನ. ಕೊಳ್ಳೇಗಾಲ ಶರ್ಮ, ಟಿ.ಆರ್.ಅನಂತರಾಮು, ಟಿ.ಜಿ.ಶ್ರೀನಿಧಿ,ಡಾ.ವಿ.ಎನ್.ನಾಯಕ ಅವರ ಹಲವಾರು ವಿಚಾರಭರಿತ ಲೇಖನಗಳು, ಸರಳ ಕನ್ನಡದಲ್ಲಿ, ಸುಲಭವಾಗಿ ಅರ್ಥವಾಗುವಂತೆ, ವಿಷಯದ ಮೌಲ್ಯ ಕಳೆಯದಂತೆ, ಇಲ್ಲಿ ಅಚ್ಚುಕಟ್ಟಾಗಿ ಪ್ರಕಟಿಸಲ್ಪಟ್ಟಿವೆ. ಇಲ್ಲಿನ ಕೆಲ ಲೇಖನಗಳು ಕನ್ನಡ ಪತ್ರಿಕೆಗಳ ಪುರವಣಿಗಳಲ್ಲಿ ಈಗಾಗಲೇ ಪ್ರಕಟಗೊಂಡಿವೆ. “ವಿಜ್ಞಾನ ವಿಷಯಗಳನ್ನು ಸುಲಭ ಭಾಷೆಯಲ್ಲಿ ಎಲ್ಲರಿಗೂ ತಲುಪಿಸುವ ಮಹತ್ವಾಕಾಂಕ್ಷೆ ಈ ಬ್ಲಾಗಿನದ್ದು” ಅಂತ ಬ್ಲಾಗಿನ ಪರಿಚಯದಲ್ಲಿದೆ.
ಇತ್ತೀಚಿನ ಬರಹ - ಮೊಬೈಲ್ ಫೋನು ಮತ್ತು ಮಿದುಳಿನ ಕ್ಯಾನ್ಸರ್ - ಎಂಬ ಲೇಖನದಲ್ಲಿ ಶರ್ಮರವರು ಮೊಬೈಲ್ ಫೋನಿನ ಅತಿಬಳಕೆಯ ಬಗ್ಗೆ ಇರುವ ಮಿಥ್ಯಾರೋಪದ ಬಗ್ಗೆ ಜಗತ್ತಿನ ವಿಜ್ಞಾನಿಗಳ ಸಮುದಾಯ ಏನೆಂದಿದೆ ಎಂಬುದನ್ನು ಚರ್ಚಿಸಿದ್ದಾರೆ. ಟಿ.ಆರ್.ಅನಂತರಾಮು ಅವರು ಬರೆದಿರುವ “ನಿಷೇಧಿತ ಪುರಾತತ್ವ - ಏನಿದರ ಮಹತ್ವ” ಲೇಖನದಲ್ಲಿ ರಿಚರ್ಡ್ ಥಾಮ್ಸನ್ ಮತ್ತು ಮೈಕಲ್ ಕ್ರೆಮೋ ಎಂಬ ಲೇಖಕರು ಬರೆದಿರುವ ವಿವಾದಿತ ಫರ್ ಭಿಡನ್ ಆರ್ಕಿಯೋಲಜಿ ಮತ್ತು ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್ ಎಂಬ ಎರಡು ಪುಸ್ತಕಗಳ ಸಾರಸಂಗ್ರಹವನ್ನು ಸೊಗಸಾಗಿ ಬರೆದಿದ್ದಾರೆ. ಬರಹದ ಕೊನೆಗೆ ನಾವು ಓದುವ ವಿಷಯಗಳ ಸತ್ಯಾಸತ್ಯತೆ ಮತ್ತು ಅವುಗಳ ರೀಚ್ ಬಗ್ಗೆ ಒಂದು ಪ್ರಬುದ್ಧ ವಿಚಾರವಿದೆ - “ಒಬ್ಬ ಸಾಮಾನ್ಯ ಓದುಗನಿಗೆ ಏನಿದೆ ಆಯ್ಕೆ? ಭಗವದ್ಗೀತೆಯನ್ನು ಓದಬಹುದು, ಬೈಬಲ್ಲನ್ನು ಓದಬಹುದು, ಕುರ್ ಆನ್ ಅನ್ನೂ ಓದಬಹುದು. ಡಾರ್ವಿನ್ನನ ವಿಕಾಸವಾದವನ್ನು ಓದಿ ತಲೆದೂಗಬಹುದು, ಸೃಷ್ಟಿವಾದಿಗಳ ವಾದಸರಣಿಯನ್ನು ಮೆಚ್ಚಬಹುದು. ಯಾವ ವಿಚಾರವನ್ನು ತರ್ಕಬದ್ಧವಾಗಿ ಮನಸ್ಸಿಗೊಪ್ಪುವಂತೆ ಪ್ರತಿಪಾದಿಸಲಾಗುತ್ತದೆಯೋ ಅಂಥವು ಬೇಗ ಮನದಾಳದಲ್ಲಿ ನೆಲೆಯಾಗಿಬಿಡುತ್ತವೆ. ಈ ಹಿನ್ನೆಲೆಯಲ್ಲಿ ‘ದಿ ಹಿಡನ್ ಹಿಸ್ಟರಿ ಆಫ್ ದಿ ಹ್ಯೂಮನ್ ರೇಸ್’ ಓದಬಹುದು..” ಡಾ. ನಾಯಕರ “ನಮ್ಮ ನದಿಗಳು ಮತ್ತು ಜೀವವೈವಿಧ್ಯ” ನಾವೆಲ್ಲರೂ ಓದಲೇಬೇಕಾದ ಬರಹ.
ಶರಧಿಯ ಹನಿಹನಿಯನ್ನೂ ಹೇಗೆ ಪರಿಚಯ ಮಾಡಿಸುವುದು. ಓದಿನ ಹರಿವಿಗೆ ನಾವೇ ಮೈಯೊಡ್ಡಿಕೊಳ್ಳುವುದೊಂದೇ ದಾರಿ.
ಮಧುವನ (೨೮-೨-೦೮)
ಇಂದಿನ ಬ್ಲಾಗಿನಂಗಳದಲ್ಲಿ ಅರಳಿ ನಿಂತಿರುವುದು ಮಲೆನಾಡಿಗ ಮಧು ಅವರ ನೆನಪಿನ ಮಧುವನ. ನೆನಪಿನ ತೋಟದಲ್ಲಿ ಕಂಡ ಸುಂದರ ದೃಶ್ಯಕಾವ್ಯಗಳನ್ನು ದಾಖಲಿಸುವ ಪ್ರಯತ್ನವೆಂಬ ನಮ್ರ ಅಡಿಬರಹವಿದೆ. ನವಿರು ಹಾಸ್ಯದ ಕತೆ ಮತ್ತು ಬರಹಗಳಿಂದ ರಂಜಿಸುವ ಈ ವನ ಇತ್ತೀಚೆಗಷ್ಟೇ ಚಿಗುರಿ ಹೂಬಿಡುತ್ತಿದೆ. ಅಲ್ಲಲಿ ಇಂಪಾದ ಗಾನದುಲಿ ಕೂಡಾ. ಇನ್ನೇನು ಚೈತ್ರ ಹತ್ತಿರಾಗುತ್ತಿದೆ. ಮಧುರ ಕಲ್ಪನೆಗಳ ಹೂಗಿಡಗಳಲ್ಲಿ ಅಕ್ಷರ ಭ್ರಮರದ ನಾದ ಸದಾ ಅನುರಣಿಸಲಿ ಎಂಬ ಆಶಯ ಜಾಲಿಗರದು.
ಇತ್ತೀಚೆಗಷ್ಟೇ ಬರೆದ ನಾದಮಯ ಈ ಲೋಕವೆಲ್ಲ.. ಬರಹದಲ್ಲಿ ಸಂಗೀತ ಕಲಿಯುವ ಉತ್ಸಾಹದ ಯುವಕನ ಆಸೆ ನಿರಾಸೆ ಮತ್ತು ಸುತ್ತಲ ಜಗದ ವಿವಿಧ ನಾದಗಳನ್ನ ಕೇಳಿಸುವ ಒಳಗಿವಿ, ಅದನ್ನೇ ಮರುದನಿಸುವ ಮನದ ವೀಣೆಯ ಅನೂಹ್ಯ ರಾಗ ಎಲ್ಲ ಇವೆ. ದಿನದ ಕೆಲಸಗಳು, ಬ್ಯಾಚುಲರ್ ಒಬ್ಬನ ಮಿತಿ ಮತ್ತು ಉತ್ಸಾಹಗಳ ಪ್ರಾಮಾಣಿಕ ಅಭಿವ್ಯಕ್ತಿಯಾಗಿ ಹೊಮ್ಮಿರುವ ಈ ಬರಹ ಓದಿದವರ ಮನದಲ್ಲಿ ವಿಷಾದದ ರಾಗದೆಳೆಗಳನ್ನು ಹೊಮ್ಮಿಸುತ್ತದೆ. ಅಬ್ಬಲಿಗೆ ದಂಡೆ, ಗಣೇಶನ ಮದುವೆ,ಮೆಜೆಸ್ಟಿಕ್ ಮಾಲಕಂಸ್,ನೀನಿಲ್ಲದೆ ಬಾಳೊಂದು ಬಾಳೇ,ಶ್ವಾನ ಪುರಾಣ, ಹಾವೇ ಹಾವೇ ಹಾವೊಳು ಹೂವೆ, ಇತ್ಯಾದಿ ಬರಹಗಳ ವಿಷಯ ವೈವಿಧ್ಯ, ಸಂಗೀತದ ಸಾಥ್, ಅಕ್ಷರಗಳ ಚಿನ್ನಾಟ, ನವಿರು ನಿರೂಪಣೆ, ಎಲ್ಲವೂ ತುಂಬ ಭರವಸೆ ಮೂಡಿಸುತ್ತವೆ.
ಒಳಗೂ ಹೊರಗೂ (೨೬-೨-೦೮)
ಇಂದಿನ ಬ್ಲಾಗ್ ಬಾನಿನ ಅತಿಥಿ, ಅಲೆಮಾರಿ ಎಂಬ ಅನಾಮಧೇಯ ಹೆಸರಿನಲ್ಲಿ ಯುವ ಪತ್ರಕರ್ತರೊಬ್ಬರು ನಡೆಸುತ್ತಿರುವ “ಒಳಗೂ ಹೊರಗೂ“. ಅಕ್ಷರ ಪಯಣದ ಈ ಬಾಗಿಲಲ್ಲಿ ಹೊರಗಿನಿಂದಕ್ಕೆ ಸ್ಪಂದಿಸುವ ಒಳಗನ್ನೂ.. ಒಳಗಿನ ಮಾತನ್ನು ಕೇಳುತ್ತಾ ಹೊರಗಿನ ಜೊತೆ ನಡೆಯುವುದನ್ನೂ ಹತ್ತಿರದಿಂದ ನೋಡುವ ಪ್ರಯತ್ನವಿದೆ. ಬರೆಯುವ ಮತ್ತು ಓದುವ ಕಾಲದಲ್ಲೇ ಹೊಳೆದು ಬಿಡಬಹುದಾದ ಅನೇಕ ಸಂಗತಿಗಳನ್ನು ಹೇಳಿಕೊಳ್ಳುವ ತವಕವೂ ಇದೆ. ಥೇಟ್ ಕೆರೆ-ದಡದ ಆಟ, ನೆಟ್ಟಿರಲಿ ಇಲ್ಲಿ ನಿಮ್ಮ ನೋಟ….ಎನ್ನುತ್ತಾ, ಅಡ್ಡಬರುವವರನ್ನು ಒಳಗೂ ಹೊರಗೂ? ಎಂದು ಪ್ರಶ್ನಿಸುವ ಖುಷಿಯೂ ಕುಶಲತೆಯೂ ಲೇಖಕರಿಗಿದೆ.
ಇತ್ತೀಚಿನ ಬರಹ - ಆಕ್ಸಿಡೆಂಟ್ ಆಗ್ಲಿಲ್ಲ..ಅವರು ಉಳೀಲಿಲ್ಲ… - ನಗರದ ಬದುಕಿನಲ್ಲಿ ಹಿರಿಯ ಜೀವವೊಂದರ ತಳಮಳದ ಕ್ಷಣಗಳನ್ನು ಮನಃಸ್ಪರ್ಶಿಯಾಗಿ ಕಟ್ಟಿಕೊಡುತ್ತದೆ. ನೋಡಿದ ಚಲನಚಿತ್ರಗಳ ಸಂಗ್ರಹಾನುವಾದ ಮತ್ತು ವಿಶ್ಲೇಷಣೆ, ಓದಿದ ಕವಿತೆಗಳ ಬಗ್ಗೆ ಚರ್ಚೆ, ಕಾಡಿದ ಸಾಲುಗಳ ಮನನ ಇವೆಲ್ಲ ಇವರ ಸರಳ ಅಭಿವ್ಯಕ್ತಿಗಳು. ಯಾರೋ ಬಿಟ್ಟು ಹೋದ ಹೆಜ್ಜೆ ನಮಗೆ ಸಿಕ್ಕುವುದಿಲ್ಲ, ಅಲೆ ಅಲೆ ಧೂಮಲೀಲೆ, ಮುಂದುವರಿದ ನಂಬಿಕೆಯ ಪಯಣ, ಇವತ್ತಿನ ಮಾಧ್ಯಮ ಕವಿತೆಯೇ, ಹೋದುದಕ್ಕಿಂತ ಒಂದು ಬಾರಿ ಹೆಚ್ಚು ಮರಳಿ ಬಾ.. ಎಲ್ಲವೂ ಒಳಗೆ ಹೊರಗೆ ಸುಳಿಯುತ್ತಾ, ನೆನಪಿನ ಗುಂಗಿನಲ್ಲಿ ಉಳಿಯುವಂತದ್ದು.
ಪಿಚ್ಚರ್ (೨೫-೨-೦೮)
ಹೆಸರಿನ ಮುಂದೆ ಗುಂಡ್ಕಲ್ ಎಂಬ ಪುಟ್ಟ ಊರನ್ನೂ ಹೊಂದಿರುವ ಪರಮೇಶ್ವರ್ ಅವರ ಪಿಚ್ಚರ್ ಈ ದಿನದ ಬ್ಲಾಗ್ ಬೊಗಸೆಯ ಅತಿಥಿ. ವೃತ್ತಿಯಲ್ಲಿ ಸಿನೆಮಾ ಪತ್ರಕರ್ತರಾಗಿರುವ ಗುಂಡ್ಕಲ್, ತೆರೆಯ ಮೇಲಿನ ಹಾಗೂ ತೆರೆಯ ಹಿಂದಿನ ಕಥೆಯನ್ನು ಸೊಗಸಾಗಿ ಹೇಳಬಲ್ಲರು. ಬಣ್ಣದ ಲೋಕದ ಬೆರಗನ್ನು ಹತ್ತಿರದಿಂದ ಪರಿಚಯಿಸುತ್ತಾ, ಚೆಂದದ ಕವಿತೆಯನ್ನೂ ಗುನುಗುನಿಸಬಲ್ಲರು. ಆರಾಮವಾಗಿ ಕುಳಿತು ನೋಡಬಹುದಾದ ಸಿನೆಮಾವನ್ನು ಅಷ್ಟೇ ತನ್ಮಯರಾಗಿ ಓದುವಂತೆಯೂ ಬರೆಯಬಲ್ಲರು. ಕವಿತೆ, ಲೇಖನ, ತಮಾಷೆ, ಕಾರ್ಟೂನು ಇತ್ಯಾದಿಗಳ ರಸಾಯನಗಳನ್ನು ಹೊಂದಿರುವ ಅವರ ಬ್ಲಾಗ್, ಹೊಸ ಚಿತ್ರಗಳಿಗೊಂದು ಪ್ರೀಮಿಯರ್.
ಪಿಚ್ಚರ್! ಎಂಬ ಹೆಸರಿದ್ದ ಕೂಡಲೇ ಇದು ಕೇವಲ ಸಿನಿಮಾ ಬರಹಗಳ ಬ್ಲಾಗ್ ಅಲ್ಲ ಎಂದು ಹೇಳಿಕೊಂಡಿರುವ ಪರಮೇಶ್ವರ್, ಬೆಳ್ಳಿಪರದೆಯ ಬಳುಕಿನ ಬೆಳಕಿನಲ್ಲಿ ಹೊಟ್ಟೆಪಾಡಿನ ಅಸಹಾಯಕತೆಯನ್ನೂ, ಅದರಾಚೆಗಿನ ಬದುಕನ್ನೂ ನವಿರಾಗಿ ತೆರೆದಿಟ್ಟಿದ್ದಾರೆ. ತಮ್ಮ ನೇತ್ರ ಛಾಯಾಗ್ರಹಣಕ್ಕೆ ಸಿಕ್ಕ ಹಲವು ವಿಷಯಗಳನ್ನು ಸಹಜವಾಗಿ ಬರೆದಿದ್ದಾರೆ. ಬಣ್ಣದ ಬದುಕಿನ ಮೋಹವನ್ನು ಬೆನ್ನಿಗೆ ಕಟ್ಟಿಕೊಂಡು ಗಾಂಧೀನಗರಕ್ಕೆ ಬಂದವರ ಕಥೆಗೆ, ಏನ್ ಹುಡುಗರೋ ಯಾಕಿಂಗಾಡ್ತಾರೋ? ಎಂಬ ಸಿನೆಮಾ ಶೈಲಿಯ ಶೀರ್ಷಿಕೆ ಆಕರ್ಷಕವಾಗಿದೆ. ಕಿಟಕಿ, ಬಾಲ್ಕಿನಿ, ಸಿನೆಮಾ ಇತ್ಯಾದಿ ವಿಭಾಗಗಳಲ್ಲಿ ನಡೆಯುವ ಅವರ ಹೌಸ್ ಪುಲ್ ಪ್ರದರ್ಶನಗಳು ಒಟ್ಟು ಪಿಚ್ಚರ್‌ನ ಅಂದವನ್ನು ಇನ್ನಷ್ಟು ಹೆಚ್ಚಿಸಿವೆ.
ಗಣೇಶ್ ಮನೆ ಅರಮನೆ, ಗಾಳಿಪಟ: ಮಾತಿನ ಪಟ ಪ್ರೀತಿಯ ಪುಟ, ಸಿನಿಮಾ:ಗಜ ರಾಜ್ಯೋತ್ಸವ!, ಮತ್ತದೇ ಪ್ರೀತಿ, ಅದೇ ಬೆಳದಿಂಗಳು, ದಾದಾಗಿರಿಯ ದಿನಚರಿ ಹೀಗೆ ಇತ್ತೀಚೆಗೆ ಬಿಡುಗಡೆಗೊಂಡಿರುವ ಕನ್ನಡ ಚಿತ್ರಗಳ ಒಂದು ಸುತ್ತು ಹಾಕಿರುವ ಪರಮೇಶ್ವರ್ ಅದನ್ನು ಪ್ರೇಕ್ಷಕನ ಕಣ್ಣಲ್ಲಿ ನೋಡಿದ್ದಾರೆ. ಈ ಥಿಯೇಟರಿನಲ್ಲಿ ಪಿಚ್ಚರ್ ನೋಡಲು ಟಿಕೆಟ್ ಬೇಕಾಗಿಲ್ಲ.!
ಓದುವ ಹವ್ಯಾಸ (೨೪-೨-೦೮)
ಇಂದಿನ ಬ್ಲಾಗ್ ಬೊಗಸೆಯಲ್ಲಿ ಕಥೆಗಾರ ನರೇಂದ್ರ ಪೈ ಅವರ “ಓದುವ ಹವ್ಯಾಸ“. ಇಲ್ಲಿ ಪುಸ್ತಕಗಳ ಬಗೆಗಿನ ಮಾತುಗಳಿವೆ. ಹೊಸ, ಹಳೆಯ ಪುಸ್ತಕಗಳ ಪರಿಚಯ, ಜಿಜ್ಞಾಸೆ, ಪ್ರಶ್ನೆ, ಚರ್ಚೆ, ಸಂವಾದ ಮತ್ತು ಓದುವ ಹವ್ಯಾಸವನ್ನು ಉತ್ತೇಜಿಸುವ ಎಲ್ಲ ಪ್ರಕ್ರಿಯೆಗಳಿಗೂ ಇಲ್ಲಿ ಅವಕಾಶವಾಗಬೇಕೆನ್ನುವುದು ಲೇಖಕರ ಆಶಯ. ಪುಸ್ತಕ ಪರಿಚಯ ಮತ್ತು ಅನುಭವ ಕಥನ, ಚಾರಣಾನುಭವಗಳ ಸರಳ ಅಭಿವ್ಯಕ್ತಿಗಳು ಓದಲು ಇಷ್ಟವಾಗುತ್ತವೆ.
ಇತ್ತೀಚೆಗೆ ಬರೆದ “ಕಾಡು ಅಲೆಯಲು ಹೊರಟು” ಬರಹದಲ್ಲಿ ಬಿಸಿಲೆಯ ಕನ್ನಡಿ ಕಲ್ಲಿನ ಚಾರಣದ ಹುಳಿಸಿಹಿ ಅನುಭವಗಳ ಕಥನವಿದೆ. ಮಕರಂದ ಸಾಠೆಯವರು ಬರೆದಿರುವ ‘ಸೂರ್ಯನನ್ನು ಕಂಡ ಮನುಷ್ಯ ‘ ಪರಿಚಯ, ಭಾಸ್ಕರ ಹೆಗಡೆಯವರ ‘ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ’ ದ ಸೊಗಡಿನ ವರ್ಣನೆ, ಜಿ.ಪಿ. ಬಸವರಾಜು ಅವರ ‘ಕುಲುಕಣಿವೆಯಲ್ಲಿ’ ಪ್ರವಾಸ ಕಥನದ ವಿಶ್ಲೇಷಣಾ ಪರಿಚಯ, ಮೊದಲಾದ ಪರಿಚಯ ವಿಮರ್ಶೆಗಳನ್ನು ಬರೆದಿರುವ ಇವರು ಸ್ವತಃ ಕಥೆಗಾರರು. ಇವರ ಕಥೆ ‘ಕನಸುಗಳು ಖಾಸಗಿ’ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ.
ಪರಿಚಯ ಮತ್ತು ವಿಮರ್ಶೆಯಲ್ಲಿನ ಪ್ರಾಮಾಣಿಕತೆ ಮತ್ತು ಓದಿನೆಡೆಗಿನ ಪ್ರೀತಿ ಈ ಬ್ಲಾಗಿನ ಎಲ್ಲಾ ಲೇಖನಗಳ ಗುಣವಿಶೇಷ.
ಮನದಾಳದ ಮಾತು (೨೩-೨-೦೮)
ಇಂದಿನ ಬ್ಲಾಗಿನಂಗಳದಲ್ಲಿ ಸಂದೀಪ ನಡಹಳ್ಳಿಯವರ ಮನದಾಳದ ಮಾತು. ಹವ್ಯಕ ಭಾಷೆಯ ಸೊಗಡು ಮತ್ತು ಮಲೆನಾಡಿನ ಹಿನ್ನೆಲೆ ಎಲ್ಲ ಬರಹಗಳಲ್ಲೂ ಎದ್ದು ತೋರುವ ಗುಣವಿಶೇಷ. ಕೆಲವು ಹಳೆಯ ನೆನಪು, ತಂತ್ರಜ್ಞಾನದ ವೃತ್ತಿಯ, ನೆಟ್ ಯುಗದ ಅನುಭವಗಳ ನೇರನೋಟ, ಸುತ್ತಲ ಸಮಾಜದ ಗತಿ ಮತ್ತು ಪ್ರಗತಿ ಇತ್ಯಾದಿ ವಿಷಯಗಳು ಇಲ್ಲಿ ತೆಳು ಹಾಸ್ಯದ ಲೇಪದೊಂದಿಗೆ ಅನಾವರಣಗೊಂಡಿವೆ. “ದುಃಖಕ್ಕಿಂತ ದುಗುಡ ಹೆಚ್ಚಾದಾಗ, ಅಳುವಿಗಿಂತ ಅಳುಕೇ ಮೇಲಾದಾಗ, ಮೌನವೇ ಮಾತಾಗುತ್ತದೆ!!!” ಎಂಬ ಅಡಿಬರಹವಿದೆ. ಅಲ್ಲಲ್ಲಿ ಇಣುಕುವ ಪನ್‌ಗಳು, ಪದ ಪ್ರಯೋಗಗಳು, ಅಕ್ಷರದೊಡನೆಯೇ ಆಡುವ ಆಟ ಓದುಗರಿಗೆ ಖುಷಿ ಕೊಡುತ್ತವೆ.
ಇತ್ತೀಚಿನ ಬರಹ - ಏನಿದೇನಿದು’ವಿನಲ್ಲಿ ತಾವು ಓದಿದ ಲೇಖನವೊಂದರ ಬಗ್ಗೆ ಸೂಚ್ಯಾರ್ಥದ ವಿಮರ್ಶೆ ಬರೆದಿದ್ದಾರೆ. ಗ್ರಹಣದ ಚಂದಿರನ ಚೆಲುವಾದ ಚಿತ್ರ ಮತ್ತು ಅಡಿಬರಹ, ಅವನ ನೆನಪೆಂಬ ಹವ್ಯಕ ಭಾಷೆಯ ಬನಿಯಿಳಿಯುವ ಬರಹ, ಮದುವೆಯೊಂದಕ್ಕೆ ಹೊನ್ನಾವರಕ್ಕೆ ಹೋದ ಅನುಭವ ಕಥನ, ದಾರಿಯಲ್ಲಿ ಸಿಗುವ ಬೋರ್ಡುಗಳಲ್ಲಿನ ತಮಾಷಿಗಳನ್ನು ಕೆಮೆರಾದಲ್ಲಿ ಹಿಡಿದು ಹಂಚಿಕೊಂಡಿರುವ ಕೆಲ ಚಿತ್ರಬರಹಗಳು, ಚಾರಣ ಮತ್ತು ಪ್ರವಾಸಾನುಭವ ಕಥನಗಳು, ನೋಡಿದ ನಾಟಕದ ಸಪ್ಪೆತನದ ಬಗ್ಗೆ ಬರೆದ ಉಪೇಕ್ಷೆಯ ಕಥನವಾದ ಹೀಗೊಂದು ತಂಪು ಸಂಜೆ, ಸಾಯ್ಲಿಬಿಡು, ಗಪ್ಪತಿ ಸತ್ತ, ಹೊಗೆಯಾದಳು ಹುಡುಗಿ ಇತ್ಯಾದಿ ಎಲ್ಲ ಬರಹಗಳೂ ಓದಿದ ಕೂಡಲೇ ಕಾಡತೊಡಗುತ್ತವೆ.
ನಮ್ಮೂರಿಗೆ ಮೊದಲ ಬಾರಿಗೆ ಟಿ.ವಿ. ಬಂದಾಗ, ಶಿವಜ್ಜನ ಬಾಯಿಂದ ಹೊರಟ ಮಾತುಗಳವು. ಮನೆಯಮೇಲೆ ಕಬ್ಬಿಣದ ಗೂಟಕ್ಕೆ ಅಡ್ಡಡ್ಡ ಕಟ್ಟಿದ್ದ ಆಂಟೆನಾವನ್ನು ಅವರು ಹೋಲಿಸಿದ್ದು ಏಣಿಗೆ!! ಹೌದು, ಆಂಟೆನಾ ಏಣಿಯಂತೆ ಕಾಣುವುದು ಸುಳ್ಳಲ್ಲ. ಹಾಗು ಕೆಳಗೆ ಚೌಕಿಯಲ್ಲಿ, ಏಣಿ ಮೆಟ್ಟಿಲ ಕೆಳಗೆ ಹೊಸದಾಗಿ ಬಂದು ಕುಳಿತ ಡಬ್ಬದಲ್ಲಿ ಕುಣಿಯುವ ಗೊಂಬೆಗಳು… ಮೇಲಿನ ಏಣಿಗೂ, ಕೆಳಗಿರುವ ಏಣಿಯಡಿಯ ಡಬ್ಬಕ್ಕೂ ಅವರು ಕೊಂಡಿಯನ್ನು ಹುಡುಕಿದ್ದು… ಯೋಚಿಸಿದರೆ ಕಳೆದುಹೋಗುತ್ತೇನೆ, ನೆನಪಿನ ಹೊಳೆಯಲ್ಲಿ ಎನ್ನುತ್ತಾ, ..ಮೇಲ್ಮೆತ್ತಿನ ಮನೆ ಮೇಲೆ ಏಣಿ ಅಡ್ಡಾಕಿದ್ದ; ಏಣಿ ಮೆಟ್ಲ್ ಕೆಳಗೆ , ಗೊಂಬೆ ಕುಣಿತು ಎಂದು ಸೊಗಸಾಗಿ ಬರೆದಿದ್ದಾರೆ.
ಬ್ಲಾಗಾಯಣ (೨೧-೨-೦೮)
ಇಂದಿನ ಬ್ಲಾಗಿನಂಗಳದಲ್ಲಿ ಯುವ ಕವಿ ಶ್ರೀಕಾಂತ್ ವೆಂಕಟೇಶ್ ಅವರ ಬ್ಲಾಗಾಯಣ. ಶ್ರೀ ಸಾಮಾನ್ಯನ ಕಣ್ಗಳಲ್ಲಿ ನೋಡಿದ ಆಸಕ್ತಿಯುತ ವಿಷಯಗಳನ್ನು ಕವಿತೆಯ ಹದಕ್ಕೆ ಇಳಿಸಿ ಸವಿಯಲು ಇಟ್ಟಿದ್ದಾರೆ. ಅಲ್ಲಲ್ಲಿ ಮೆಚ್ಚಿನ ಕವಿಗಳ ಕೆಲವು ಅಪರೂಪದ ಕವಿತೆಗಳನ್ನು ಸಂದರ್ಭೋಚಿತವಾಗಿ ವಿವರಗಳೊಂದಿಗೆ ನೀಡಿದ್ದಾರೆ. ಸಣ್ಣಕಥೆ, ಕವಿತೆಗಳು, ಹರಟೆ, ಪ್ರಬಂಧಗಳು ಎಲ್ಲ ಪ್ರಕಾರಗಳನ್ನೂ ಸಮರ್ಥವಾಗಿ ಬಳಸಿಕೊಂಡಿರುವ ಈ ಯುವಪ್ರತಿಭೆ ಆರಿಸಿಕೊಂಡಿರುವ ವಿಷಯಗಳು ಆಸಕ್ತಿಯುತವಾಗಿವೆ.
ಕೆಲವು ಲೇಖನಗಳು ಉತ್ತಮ ಸಂಗೀತ ಮತ್ತು ಕಾವ್ಯಗಳ ಚಿಂತನೆ, ವಿವರಣೆಯೊಂದಿಗೆ ಮತ್ತೆ ಕೆಲವು ನವಿರಾದ ರೇಖಾಚಿತ್ರದೊಂದಿಗೆ ಸೊಗಸಾಗಿವೆ. ಗಾಳಿಯಲ್ಲಿ ಧಾಳಿ, ನಕ್ಷೆ ನಿಲುವು, ಗಹನ ಗಾಂಧಾರ, ಕ್ಷಣಗಣನೆ, ವ್ಯಾಪ್ತಿ, ಬಣ್ಣಿಸಲಾರದ ಭವ, ಹಯವದನರಾಯರ ಕುದುರೆ, ಚಿತ್ಸುಖ, ಮರಳು ಮತ್ತು ನೊರೆ, ಪೂರ್ವಾಗ್ರಹ, ಪ್ರಿಯಂವದೆ..ಇತ್ಯಾದಿ ಎಲ್ಲ ಕವಿತೆಗಳು ಚೆಲುವಾದ ಸಾಲುಗಳಲ್ಲಿ, ವಿಷಯ ವೈವಿಧ್ಯದಲ್ಲಿ ಕಂಗೊಳಿಸುತ್ತಾ ಓದಲು ಕೈಬೀಸಿ ಕರೆಯುತ್ತವೆ. ಇತ್ತೀಚಿನ ಬರಹ ಹೃದಯ ಹೃದಯ ಮಿಲನದೊಳು - ಪ್ರೇಮಿಗಳ ದಿನಕ್ಕೆ ಅರ್ಪಿತವಾಗಿದ್ದು, ಪುತಿನ ಅವರ ಕವಿತೆಯನ್ನು ಉದ್ಧರಿಸಿದೆ. ಬಣ್ಣಿಸಲಾಗದ ಭವ ಕವಿತೆಯ ಕೆಲ ಸಾಲುಗಳು ನಿಮಗಾಗಿ -
ಸುತ್ತ ಸಮೃದ್ಧಿಯ ನಡುವೆಯೂ
ಮನ ಹೆತ್ತ ಅಗೋಚರ
ಕೊರತೆ.. ನೋವು .. ಬೇಗೆ…
ದಿನವೆಲ್ಲ ಹಾಡಿ-ಪಾಡಿ, ಕುಣಿದು ದಣಿದು
ಮೂರ್ತಾಸು ನಕ್ಕು ನಲಿದು
ಉಲ್ಲಾಸದೆ, ಅಬ್ಬಾ! ಉಸ್ಸೇಂದು
ಕೂರುವಷ್ಟರಲ್ಲಿ……..
ಕೂಗು (೨೦-೨-೦೮)
ಇಂದಿನ ಬ್ಲಾಗ್ ಬಾನಿನಲ್ಲಿ ಚಂದಿನ ಅವರ ಕೂಗು ಲೇಖಕರು ಸೊಗಸಾದ ಕವಿತೆಗಳನ್ನ ಲಯಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ವಿಷಯ ವೈವಿಧ್ಯ, ಪ್ರಾಸ, ಮತ್ತು ಸರಳ ಅನುಭಾವ ಈ ಕವಿತೆಗಳ ವೈಶಿಷ್ಟ್ಯ. ಅಂತರ್ಜಾಲ, ಒಲವು, ಅಣುಒಪ್ಪಂದ,ಅಹಿಂದ ಚಳುವಳಿ, ಕೋಳಿಜ್ವರ, ರಾಜ್ ಠಾಕ್ರೆ ವಿವಾದ, ಕರುನಾಡು, ಬದುಕಿನ ಪಯಣ, ಸುತ್ತಲ ಚೆಲುವು, ಸೋತು ಗೆಲ್ಲುವ ಪರಿ ಮೊದಲಾದ ವಿಷಯಗಳು ಮನಮುಟ್ಟುವ ಸಾಲುಗಳಲ್ಲಿ ಹಿತವಾದ ಓದನ್ನು ತೆರೆದಿಡುತ್ತವೆ.
ಒಲವಿನಾ ರಥವೇರಿ, ಎಲ್ಲಿಂದಲೋ ಬಂದವನು, ಆಹಾ ಭುವಿಯೇ ನಾಕವು, ಎಂದು ಬರುವಳು, ಆಸೆಗಳಿದ್ದರೆ ಸಾಕೆ, ಕೈಯ ಮುಗಿದು, ನಡೆಸು ಪಯಣವನು, ನಾ ಕಂಡ ಕನಸುಗಳು, ಮಾಯವಾದರು ಎಲ್ಲಿಗೆ, ಜಾಗತೀಕರಣದ ಮಳೆ, ಆತ್ಮಸಂತುಷ್ಟಿ, ಮರೆತ ದಾರಿ, ಕಡಲ ಕಿನಾರೆಗೆ, ಧರ್ಮ ಕಾರಣ, ಕಳಚಿದ ಕೊಂಡಿ.. ಇತ್ಯಾದಿ ಎಲ್ಲ ಕವಿತೆಗಳೂ ಆಸಕ್ತಿಕರವಾಗಿದ್ದು, ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಕವಿಯ ಮನದ ಕೂಗು ಓದುಗರ ಮನಸಿನಲ್ಲಿ ಮರುದನಿಗೊಳ್ಳುತ್ತದೆ.
ನಿಮ್ಮ ಕಿರು ಓದಿಗೆ ಕೆಲ ಸಾಲುಗಳು
ಎಂದು ಬರುವಳು ಕವಿತೆಯಿಂದ -
ಕಣ್ಸನ್ನೆಯಲೇ ಕುಶಲವ ಕೇಳಿ
ತುಟಿಯಂಚಿನಲಿ ಪ್ರಶ್ನೆಗಳೆಲ್ಲವ
ಸೆರೆಹಿಡಿದು, ಬಿರುಗಾಳಿಯನೆಬ್ಬಿಸಿ
ಮಿಂಚಂತೆ ಮಾಯವಾದಳೆಲ್ಲಿಗೆ.
ಶ್ರೀ..ಮನೆ (೧೯-೨-೦೮)
ದಿನದ ಬ್ಲಾಗಿನಂಗಳದ ಅತಿಥಿ ಶ್ರೀಧರ್ ಅವರ ಶ್ರೀ..ಮನೆ. ಪೂರ್ವ ಆಫ್ರಿಕಾದ ತಾಂಜಾನಿಯ ಎಂಬ ದೇಶದ ಮೂವಂಜ ಎಂಬ ನಗರದಲ್ಲಿ ವೃತ್ತಿನಿರತರಾಗಿರವ ಶ್ರೀಧರ್ ಅಲ್ಲಿನ ಬದುಕು, ಬವಣೆಗಳ ಕುರಿತು ನವಿರಾಗಿ ಬರೆಯುತ್ತಾರೆ. ಮೂಲತಃ ತುಮಕೂರು ಜಿಲ್ಲೆಯ ಸಿರಾ ತಾಲೂಕಿನವರಾದ ಇವರು ಮೀನುಗಾರಿಕೆಯಲ್ಲಿ ಪದವಿ ಮುಗಿಸಿ, ಹತ್ತು ವರ್ಷಗಳು ಸ್ವದೇಶ ಸುತ್ತಿ ನಂತರ ವಿದೇಶಕ್ಕೆ ಹಾರಿದವರು. ರಂಗುರಂಗಿನ ಕಾಮನ ಬಿಲ್ಲು, ಅದರ ನಡುವೆ ಕಷ್ಟಗಳ ಆರ್ಭಟ, ನಡುವೆ ಶಾಂತಿಯ ಗಾಳಿಪಟ ಇವೆಲ್ಲವುಗಳಿಂದ ಕೂಡಿದ ಶ್ರೀಸಾಮಾನ್ಯನ ಬದುಕು ಎಷ್ಟು ಸೊಗಸಲ್ಲವೇ ಎನ್ನುತ್ತಲೇ ಅದೆಲ್ಲವನ್ನೂ ಬ್ಲಾಗಿಸಿದ್ದಾರೆ.
ಇತ್ತೀಚೆಗೆ ತಮ್ಮ ಹುಟ್ಟು ಹಬ್ಬಕ್ಕೆ ಮುದ್ದು ಮಗ ಕಳುಹಿಸಿದ ಅಪರೂಪದ ಶುಭಾಶಯ ಪತ್ರವನ್ನು ಬ್ಲಾಗಿಗೆ ಸೇರಿಸಿರುವ ಇವರು, ರೈತನಾಗಿ ತಮ್ಮ ತಂದೆ ಕಂಡ ಕನಸು, ತಮ್ಮ ಮಗನ ಮೊದಲ ಸ್ನೇಹಿತನಾಗಿ ತಾವು ಅನುಭವಿಸುತ್ತಿರುವ ಖುಷಿಯನ್ನು ಭಾವುಕರಾಗಿ ಹೇಳಿದ್ದಾರೆ. ಆಫ್ರಿಕಾದಲ್ಲಿದ್ದುಕೊಂಡೇ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರ ಬಗ್ಗೆ ಬರೆದಿದ್ದಾರೆ. ತಾಂಜಾನಿಯ ಎಂಬ ಪುಟ್ಟ ದೇಶದ ಅಚ್ಚರಿಗಳನ್ನು, ಅಲ್ಲಿ ಮಕ್ಕಳಾದ ನಂತರ ಮದುವೆಯಾಗುವ ಅಪ್ಪ ಅಮ್ಮಂದಿರನ್ನೂ, ಇವೆಲ್ಲಾ ಸಾಮಾನ್ಯ ಎಂಬಂತಿರುವ ಅಲ್ಲಿನ ಹಕೂನ ಹರಾಖ ಎಂಬ ಸ್ಥಳೀಯ ಭಾಷೆಯ ಸೊಗಡನ್ನೂ ಹತ್ತಿರದಿಂದ ನೋಡಿ ವಿವರಿಸಿದ್ದಾರೆ.
ಕೀನ್ಯಾದಲ್ಲಿ ವಿಕೋಪಕ್ಕೆ ತಿರುಗಿರುವ ದ೦ಗೆಯ ಬಗ್ಗೆ ಬರೆಯುತ್ತಲೇ ಆಫ್ರಿಕಾ ಖಂಡಗಳ ಇತರ ಭಾಗಗಳಲ್ಲಿ ಬದುಕುತ್ತಿರುವ ಪರದೇಸಿಗಳ ತಲ್ಲಣವನ್ನು ತೆರೆದಿಟ್ಟಿದ್ದಾರೆ. ತಮ್ಮ ನೆಚ್ಚಿನ ನಟ ವಿಷ್ಣುವಿಗೆ ಬಹಿರಂಗ ಪತ್ರವನ್ನೂ ಬರೆದಿರುವ ಅಹರ್ನಿಶಿ ಎಂಬ ಈ ಶ್ರೀಧರ್, ತಮ್ಮ ಬ್ಲಾಗ್ ಬರಹಗಳನ್ನು ಪುಟ್ಟ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಜಗತ್ತಿನ ಸಾಮಾನ್ಯ ಘಟನೆಗಳನ್ನು ಕುತೂಹಲದ ಕಣ್ಣಲ್ಲಿ ನೋಡುವ, ಕಾಳಜಿಯಿಂದ ಸ್ಪಂದಿಸುವ ಅವರ ಬರಹಗಳಿಂದ ಶ್ರೀ..ಮನೆ ಶ್ರೀಮಂತವಾಗಿದೆ.
ಮನಸಿನ ಪುಟಗಳ ನಡುವೆ (೧೮-೨-೦೮)
ಇಂದಿನ ಬ್ಲಾಗ್ ಬೊಗಸೆಯಲ್ಲಿ ಚಾರಣಪ್ರಿಯ ಶ್ರೀಕಾಂತರ ಮನಸಿನ ಪುಟಗಳ ನಡುವೆ ಅರಳಿನಿಂತ ಬರಹಗುಚ್ಛ. ಅಲೆಮಾರಿಯಾದ ಇವರ ಮನಸ್ಸಿನಲ್ಲಿ ಅಲೆದಾಡುತ್ತಿರುವ ವಿಷಯಗಳನ್ನು ಇಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮೊನ್ನೆ ಪ್ರೇಮಿಗಳ ದಿನದಂದು ತಮ್ಮ ಮನ ಗೆದ್ದಾಕೆಗೆ ಸುಂದರ ಕವಿತೆಯನ್ನರ್ಪಿಸಿರುವ ಈ ಭಾವಜೀವಿಯ ಸಾಲುಗಳು ಆಕರ್ಷಣೀಯವಾಗಿವೆ.
ಹಲವು ಮಧುರ ಕನಸ ಕಂಡು, ಅವಳಿಗೂ ಮನಸು ಕೊಟ್ಟು
ಚೆಲುವೆಯಾದ ನನ್ನವಳಿಗೆ ಸೋತುಹೋದೆನಲ್ಲ ನಾನು!.. ಎಂದು ಅಚ್ಚರಿ ಪಡುತ್ತಲೇ …
ನನ್ನ ಜೀವನದಿಯಾದ ಅವಳು ಹೀಗೆ ಎಂದೆಂದೂ
ನನ್ನ ಜೀವನದಿ ಸುಖದ ನಾಳೆಗಳನು ನೀಡಲೆಂದು.. ಪದಗಳೊಡನೆ ಆಟವಾಡುತ್ತಾ ವಿನಂತಿಸುತ್ತಾರೆ.
ಕುದುರೆಮುಖ ಶಿಖರಕ್ಕೆ ಚಾರಣ, ಕೊಡಚಾದ್ರಿಯಂತಹ ಪ್ರಕೃತಿರಮ್ಯ ತಾಣವನ್ನ ವಾಣಿಜ್ಯೋದ್ದೇಶಗಳು ಅಂದಗೆಡಿಸುತ್ತಿರುವ ಬಗ್ಗೆ ಬರೆದ ಬರಹ, ಪೂರ್ಣಚಂದಿರ ಬರೆಸಿದ ಪದ್ಯ, ಬೆಣ್ಣೆಹೊಳೆ ಜಲಪಾತದ ಚಾರಣ, ಹಲವು ಹಳೆಯ ಹಾಡುಗಳ ಮಧುರ ಮೆಲುಕು, ಮಳೆಗೆ ಆಹ್ವಾನವೀಯುವ ಕವಿತೆ, ಬಾಲ್ಯದ ದಿನಗಳ ನೆನಪಿನ ಮಾಲೆ, ಶೂನ್ಯದಿಂದ ಕೋಪ-ಕೋಪದಿಂದ ಬೇಸರ ತರಹದ ಸರಳ ವಿಚಾರಪೂರ್ಣ ಬರಹಗಳು..ಎಲ್ಲ ಆಸಕ್ತಿಕರವಾಗಿದೆ. ಆಹ್ಲಾದ ಮತ್ತು ಪ್ರಕೃತಿಯೆಡೆಗಿನ ಪ್ರೀತಿ ಪುಟಪುಟದಲ್ಲೂ ತುಂಬಿಕೊಂಡಿವೆ.
ಬಾನಾಡಿ (೧೭-೨-೦೮)
ಇಂದಿನ ಬ್ಲಾಗ್ ಬಾನಿನ ಮಡಿಲಲ್ಲಿ ಸ್ಕೈಲಾರ್ಕ್ ಕಾವ್ಯನಾಮದ ಲೇಖಕರ ಬಾನಾಡಿ. ಭುವಿಯೆಲ್ಲಾ ಓಡಾಡಿ, ಬಾನೆತ್ತರಕ್ಕೆ ಬಂದಿದ್ದೇನೆ…ಬಾನಾಡಿಯಾಗಲು. ರೆಕ್ಕೆ ಬಂದಿದೆ. ಹಕ್ಕಿಯಾಗಿದ್ದೇನೆ. ಬಾನೆತ್ತರದಿಂದ ನೋಡುತ್ತೇನೆ… ಹಾರುತ್ತೇನೆ. ನಕ್ಷತ್ರಗಳನ್ನು ಹಿಡಿಯಲು. ನನ್ನ ರೆಕ್ಕೆ ಪುಟಗಳು ನಿಮಗೆ ಪುಳಕಿತವಾದರೆ …ಹಾರಲು ಬಿಡಿ … ಇನ್ನೂ ಎತ್ತರ. ಅಂತ ಕೇಳುತ್ತಾ ನಮ್ಮ ಮನಸ್ಸಿನ ಒಳಬಾಗಿಲು ತಟ್ಟುವ ಈ ಬ್ಲಾಗ್ ನ ಇತ್ತೀಚಿನ ಹಕ್ಕಿನೋಟ ದಾಸನ ಮಾಡಿಕೊ ಎನ್ನ ದಲ್ಲಿ..
ಬಾಲ್ಯದಲ್ಲಿ ಸಾಕಿ ಸಲಹಿದ ನಾಯಿಮರಿಯ ನೆನಪು, ಮನುಷ್ಯ ಸಮಾಜ ನಾಯಿಯೊಡನೆ ಹೊಂದಿರುವ ಬಾಂಧವ್ಯದ ಬಗ್ಗೆ ಆಪ್ತವಾಗಿ ಬರೆದಿದ್ದಾರೆ. ಮುಂಜಾನೆಯ ದಿನಚರಿಯಲ್ಲಿ ಮತ್ತೆ ಬಾಲ್ಯಕಾಲದ ಬೆಳಗುಗಳನ್ನು, ಹಳ್ಳಿಯಲ್ಲಿ ಬೆಳಕು ಕರೆಯುತ್ತಿದ್ದ ಕುಕ್ಕುಟ ಸಾಮ್ರಾಜ್ಯವನ್ನ..ನುಡಿಚಿತ್ರವಾಗಿಸಿದ್ದಾರೆ. ಸುಮಧುರ ನೆನಪುಗಳ ವಾಸನೆಯ - ಸುಮರಾಜಿ, ನೇರದಾರಿಯವರು ಬರಹದ ಬೇಡಿಕೆ, ಹೊಸವರ್ಷದ ಪಯಣದ ಕಾಲ್ದಾರಿ, ನಂಬಿಗಸ್ತ- ಬರಹದ ವ್ಯಕ್ತಿಚಿತ್ರ.. ಎಲ್ಲವೂ ಆಸಕ್ತಿ ಹುಟ್ಟಿಸುವ ಬರಹಗಳು. ಯುವ ಸಂವೇದನೆಗಳ ಹಕ್ಕಿನೋಟದಂತಹ ಬರಹಗಳ ಗುಚ್ಛವಿಲ್ಲಿದೆ.
ನೆಟ್ ನೋಟ (೧೬-೨-೦೮)
ಕನ್ನಡದಲ್ಲಿ ವೈಜ್ಞಾನಿಕ ಬರಹಗಳ ಬ್ಲಾಗ್‌ಗಳು ಕಡಿಮೆ. ಆದರೆ ಈ ಆರೋಪವನ್ನು ಅಲ್ಲಗಳೆಯುವಂತಿದೆ ಸುದೀಂಧ್ರ ಹಾಲ್ದೊಡ್ಡೇರಿಯವರ ನೆಟ್ ನೋಟ. ಸರಳ ಕನ್ನಡದಲ್ಲೇ ಕ್ಲಿಷ್ಟವೆನಿಸುವ ವೃಜ್ಞಾನಿಕ ವಿಷಯವನ್ನು ಸರಳೀಕರಿಸಿ ಹೇಳುವ ಕಲೆ ಸುದೀಂದ್ರ ಅವರದ್ದು. ಲೇಖನದ ಶೀರ್ಷಿಕೆಯಲ್ಲೇ ಪನ್ ಬಳಸಿ, ಅದರ ಅಂತಸ್ವತಃ ತೆರೆದಿಡುತ್ತಾ ಸೊಗಸಾಗಿ ಬರೆಯುವ ಜಾಣ್ಮೆಯೂ ಅವರಿಗೆ ಸಿದ್ಧಿಸಿದೆ.
ನೆಟ್ ನೋಟಕ್ಕೆ ಸಿಲುಕಿದ ಎಲ್ಲ ಲೇಖನಗಳು ಈಗಾಗಲೇ ಪತ್ರಿಕೆಯಲ್ಲಿ ಪ್ರಕಟಗೊಂಡವು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನೆಟ್ ನೋಟ ಎಂಬ ಕಾಲಂ ಬರೆಯುವ ಲೇಖಕರು ವಿಜ್ಞಾನ ಓದುಗರಿಗೆ ಪರಿಚಿತರೂ ಹೌದು. ಕದಡಿದ ನೀರಲಿ ಮೀನಿನ ಹೆಜ್ಜೆಯ ಹುಡುಕುತ ….. ಈ ಫೋನ್ ಮುಂದೆ ಬಾಯಿಬಿಟ್ಟರೆ ಬಣ್ಣಗೇಡು! ನೀರಿಗೂ ಅಂಟು - ಚ್ಯೂಯಿಂಗ್ ಗಮ್‍ನ ಹೊಸ ನೆಂಟು ಇತ್ಯಾದಿ ಲೇಖನಗಳಲ್ಲಿ ತೆಳು ಹಾಸ್ಯದ ಹಿನ್ನಲೆಯಲ್ಲಿ ವೈಜ್ಞಾನಿಕ ವಿವರಣೆಯಿದೆ. ನಮಗೆ ಅಗತ್ಯವಿರುವುದು ಉತ್ತಮ ಸಮಾಜ ನಿರ್ಮಿಸುವ ಎಂಜಿನೀಯರ್‌ಗಳು, ಭೀತಿ ಹೊಡೆದಟ್ಟುವ ತಂತ್ರ - ವಿಕಿರಣ ಪತ್ತೆ ಯಂತ್ರ ಮುಂತಾದ ಲೇಖನಗಳಲ್ಲಿರುವ ಗಂಭೀರತೆ ವಾಸ್ತವಕ್ಕೂ ಹತ್ತಿರವಿದೆ.
ತೋಚಿದ್ದನ್ನು ಗೀಚುವ ಅಂಕಣವಾಗದೆ, ನಿತ್ಯ ನೂತನ ವೈಜ್ಞಾನಿಕ ಬೆಳವಣಿಗೆಗಳನ್ನು ಚರ್ಚಿಸುವ ಅವರ ನೆಟ್ ನೋಟ ಕನ್ನಡ ಓದುಗರಿಗೆ ಅಪರೂಪದ ಮಾಹಿತಿ ಕಣಜ. ಪ್ರತಿವಾರ ಪತ್ರಿಕೆಯಲ್ಲಿ ಪ್ರಕಟವಾಗುವ ಅಂಕಣಗಳನ್ನು ಬ್ಲಾಗಿನಲ್ಲಿ ಸೇರಿಸುವ ಹಾಲ್ದೊಡ್ಡೇರಿ, ವಿಜ್ಞಾನ ಪ್ರಪಂಚದ ವಿಸ್ಮಯಗಳೊಂದಿಗೆ ಜಾಲ ಓದುಗರನ್ನು ಸ್ವಾಗತಿಸುತ್ತಾರೆ. ಚಿತ್ರಗಳಿಲ್ಲದ ಈ ಲೇಖನಗಳು ತುಸು ಗಂಭೀರ ಎನಿಸಿದರೂ, ಓದಿಕೊಂಡಂತೆ ಆಪ್ತವಾಗುತ್ತದೆ. ಜೋಕೆ … ಜಾಲದ ಬಲೆಗೆ ಬಿದ್ದಾಗಲೇ ಅರಿವೆ ನೀ ಸಂಚು ಎನ್ನುತ್ತಾ, ಜಾಲಿಗರನ್ನು ಸ್ವಾಗತಿಸುವ ಅವರ ಬರಹಗಳ ಅಂಗಳ ವೈಜ್ಞಾನಿಕ ವಿವರಗಳ ಮಿಣುಕು ದೀಪ.
ಬರೆವ ಬದುಕಿನ ತಲ್ಲಣ (೧೫-೨-೦೮)
ಇಂದಿನ ಬ್ಲಾಗ್ ಬೊಗಸೆಯಲ್ಲಿ ಇಸ್ಮಾಯಿಲ್ ಅವರ “ಬರೆವ ಬದುಕಿನ ತಲ್ಲಣ”. ಇದು ಭಾವ ಚಿತ್ತಾರವಲ್ಲ. ವಿಚಾರ ವಿಸ್ತಾರ. ಹೆಸರೇ ಸೂಚಿಸುವಂತೆ ನಮ್ಮ ಸುತ್ತಮುತ್ತಲಿನ ದೈನಿಕ ನಡಾವಳಿಗಳಲ್ಲಿ ಎಷ್ಟೊಂದು ತಲ್ಲಣಗೊಳಿಸುವ ವಿಷಯಗಳಿವೆ ಮತ್ತು ನಾವೆಲ್ಲ ಅದು ಗೊತ್ತಿದ್ದೂ ಗೊತ್ತಿಲ್ಲದ ಹಾಗೆ ಹೇಗೆ ಸುಮ್ಮನಿದ್ದೀವಿ ಎಂಬುದಕ್ಕೆ ಕನ್ನಡಿಯಂತಿರುವ ಇವರ ಲೇಖನಗಳಲ್ಲಿ ಹಲವಾರು ಉದಯವಾಣಿಯಲ್ಲಿ ಪ್ರಕಟಗೊಂಡಿವೆ. ಇಲ್ಲಿನ ಲೇಖನದಷ್ಟೇ ಆಸಕ್ತಿಯುತವಾಗಿರುವ ಮತ್ತು ವಿಚಾರಶೀಲವಾಗಿರುವ ಪ್ರತಿಸ್ಪಂದನಗಳು ಸಮಾಜದ ಜೀವಂತಿಕೆಯ ಭರವಸೆಯ ಬೀಜಗಳಾಗಿ ಭಾಸವಾಗುತ್ತವೆ. ಮೊದಲೇ ಹೇಳಿದಂತೆ ಭಾವುಕ ಸಂವೇದನೆಗಳಿಗಿಂತ ಹೆಚ್ಚಾಗಿ, ವಿಷಯವನ್ನ ಕೂಲಂಕಷವಾಗಿ, ಮಾಹಿತಿಪೂರ್ಣವಾಗಿ ಮತ್ತು ಪ್ರಗತಿಶೀಲವಾಗಿ ಮಂಡಿಸಿರುವ ರೀತಿ ಎಲ್ಲ ಬರಹಗಳ ವೈಶಿಷ್ಟ್ಯ.
ಯಾವುದೇ ರಾಜಕೀಯ ಪಕ್ಷಕ್ಕೆ ಸಲ್ಲದ, ಇಸಮುಗಳ ಹಂಗಿಲ್ಲದ ಪ್ರಖರ ಬರಹಗಳ ಗುಚ್ಛವಿಲ್ಲಿದೆ. ಇತ್ತೀಚಿನ ಲೇಖನವಾದ, ಸಂಖ್ಯೆಯಷ್ಟೇ ಆಗಿಬಿಟ್ಟ ರೈತನ ಸಾವು - ಓದುವವರ ಮನಸ್ಸಿನಲ್ಲೂ ವಿಚಿತ್ರ ತಲ್ಲಣ ಹುಟ್ಟಿಸುತ್ತಾ ನಮ್ಮ ಹೊಣೆಗಾರಿಕೆಯನ್ನು ನೆನಪು ಮಾಡುತ್ತವೆ. - ಎಲ್ಲಾ ಬಗೆಯ ಆತ್ಮಹತ್ಯೆಗಳ ಹಿಂದಿನ ಮುಖ್ಯ ಕಾರಣ ಹತಾಶೆ. ರೈತ ಯಾಕೆ ಹತಾಶನಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಯಾವ ಪ್ಯಾಕೇಜ್ ಘೋಷಿಸಿದರೂ ಆತ್ಮಹತ್ಯೆಗಳು ಕಡಿಮೆಯಾಗುವ ಸಾಧ್ಯತೆಗಳಿಲ್ಲ. ರೈತನ ಹತಾಶೆಯ ಕಾರಣಗಳನ್ನು ಹುಡುಕುವುದಕ್ಕೆ ‘ಹೌದು’ ಅಥವಾ ‘ಇಲ್ಲ’ಗಳಲ್ಲಿ ಉತ್ತರ ಬಯಸುವ ಸಮೀಕ್ಷೆಗಳಿಗೆ ಸಾಧ್ಯವಿಲ್ಲ.- ಈ ಸಾಲುಗಳು ಇಡೀ ಲೇಖನದ ಕಿರುಗನ್ನಡಿ.
ಸುಮ್ಮಸುಮ್ಮನೆ ಪ್ರಶ್ನೆಗಳನ್ನು ಮಾತ್ರ ಓದುಗರ ಮುಂದಿಟ್ಟು ಗೋಜಲು ಮಾಡದೆ, ಆ ಪ್ರಶ್ನೆಗಳಿಗೆ ಇರಬಹುದಾದ ಸಂಭಾವ್ಯ ಪರಿಹಾರಗಳ ಸೂಚನೆಯೂ ಇರುವುದು ಈ ಬರಹಗಳ ಹಿರಿಮೆ. ಲೈಂಗಿಕ ವೃತ್ತಿನಿರತಳ ಎರಡು ರಾತ್ರಿಗಳು, ಅಮೆರಿಕದ ಆರೋಗ್ಯಕ್ಕೆ ಭಾರತದ ಸಬ್ಸಿಡಿ, ಸಾವಿರ ವರ್ಷ ಬದುಕಬೇಕಿದ್ದ ಜೀವ, ಟಾಟಾ ಉತ್ಪಾದಿಸಿದ ಅಭಿವೃದ್ಧಿಯ ಸಂಕೇತ.. ಇತ್ಯಾದಿ ಲೇಖನಗಳು ಒಂದೊಂದೂ ಸಾವಧಾನವಾಗಿ ಆದರೆ ಓದಲೇಬೇಕಾಗಿರುವ ವಿಚಾರ ಕುಸುಮಗಳು. ಬರೆದವರ ತಲ್ಲಣದ ಪ್ರಾಮಾಣಿಕತೆ ಮತ್ತು ನಿಸ್ಪ್ರಹತೆ ಓದುವವರ ಮನಸ್ಸಿನಲ್ಲೂ ವಿಚಾರ ತರಂಗಗಳನ್ನೆಬ್ಬಿಸದೆ ಹೋಗುವುದಿಲ್ಲ.
ಮಜಾವಾಣಿ (೧೪-೨-೦೮)
ರಾಜ್ಯದೆಲ್ಲಡೆ ಬಾತ್ಮೀದಾರರನ್ನು ಹೊಂದಿರುವ ಮಜಾವಾಣಿ ಈ ದಿನದ ಬ್ಲಾಗಿನಂಗಳದ ಚಿನಕುರಳಿ. ತೆಳುಹಾಸ್ಯದ ಬರಹಗಳನ್ನು, ಚಿಂತನೆಯ ಗುಟುಕಿನಲ್ಲಿ ನೀಡುವ ಈ ಬಳಗದ ಅಂಗಳದಲ್ಲಿ ಸುದ್ದಿ ವೈವಿಧ್ಯ. ತರಹೇವಾರಿ ತನಿಖಾವರದಿಗಳನ್ನು ಪ್ರಕಟಿಸುತ್ತಿದ್ದ ಮಜಾವಾಣಿ ಈಗ ಸುದ್ದಿಯಿಲ್ಲದೆ ಸ್ವಲ್ಪ ಸೊರಗಿದಂತಿದೆ. ಮಜಾವಾಣಿಯ ರಸಗುಳಿಗೆಗಳನ್ನು ಮನದಣಿಯೇ ಓದಿ ನಕ್ಕು ಹಗುರಾಗುತ್ತಿದ್ದ ಓದುಗನಿಗೆ ಇದು ಸ್ವಲ್ಪ ನಿರಾಶೆ ಮೂಡಿಸಿದೆ.
“ರಾಜ್ಯದ ಹಿತ ರಕ್ಷಣೆಗಾಗಿ ಮತ್ತೆ ಮತ್ತೆ ಮೋಸ ಹೋಗಲು ಸಿದ್ಧ” ಯಡಿಯೂರಪ್ಪನವರು ನೀಡಿದ ಈ ಗುಪ್ತ ಹೇಳಿಕೆಯನ್ನು ಶಿರಾಳಕೊಪ್ಪದ ಮಜಾವಾಣಿಯ ರಾಜಕೀಯ ವರದಿಗಾರ ಸ್ಫೋಟಗೊಳಿಸಿದ್ದು ಈಗ ಹಳೆಯ ಸುದ್ದಿ. ನನ್ನ ಬಲಗೈ ಬಗ್ಗೆ ನನಗೆ ಬೇಸರವಿಲ್ಲ” - ಎಂದು ಎಡಗೈ ಆಟಗಾರ ಯುವರಾಜ್ ಸಿಂಗ್ ನಡೆಸಿದ ಪತ್ರಿಕಾಗೋಷ್ಠಿ, ಮಾಟ-ಮಂತ್ರದ ಮೂಲಕ ಸಾಬೀತಾದ ಯಡ್ಡಿ ಆರೋಪ ಇವೆಲ್ಲಾ ಮಜಾವಾಣಿ ಮುಖಪುಟ ವರದಿಯ ಫಲಶೃತಿ ಎಂದೇ ಹೇಳಲಾಗುತ್ತದೆ. ಅಂತರ್ಜಾಲದ ಇನ್ನುಳಿದ ಪತ್ರಿಕೆಗಳಿಗೆ ಸಿಗದಂತೆ ಇಂತಹ ಸುದ್ದಿಗಳನ್ನು ಅದೆಲ್ಲಿಂದಲೋ ಹುಡುಕಿ ತರುತ್ತಿದ್ದ ಮಜಾವಾಣಿಯ ಸೊಗಸಿಗಾಗಿ ಜಾಲಿಗರು ಮತ್ತೆ ಕಾಯುತ್ತಿದ್ದಾರೆ.
ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು…ಎಂಬ ದ್ಯೇಯವಾಕ್ಯ ಹೊಂದಿರುವ ಮಜಾವಾಣಿ ನಗುವಿನ ಅಲೆ ಅರಳಿಸುವ ಕೆಲಸಕ್ಕೆ ಶೀಘ್ರವೇ ಚಾಲನೆ ನೀಡಲಿ. ಮುಕ್ತವಾಗಿ ನಗಲು, ನಕ್ಕು ಹಗುರಾಗಲು, ಬಾಗಿಲಲ್ಲೇ ಕಾಯುತ್ತಿರುವ ಬ್ಲಾಗಿನ ನಿವಾಸಿಗಳಿಗೆ ಸಂತಸ ತರಲು.
ಒಂಟಿ ಹಕ್ಕಿಯ ಹಾಡು (೧೨-೨-೦೮)
ಇಂದಿನ ಬ್ಲಾಗ್ ಬಾನಿನಲ್ಲಿ ಯುನಿಕ್ ಸುಪ್ರಿ ಅವರ ಒಂಟಿ ಹಕ್ಕಿಯ ಹಾಡಿನ ಹಲವು ರಾಗದೆಳೆಗಳ ವಿಶೇಷ ನೋಟ. ವಿಶಿಷ್ಟ ವಿಚಾರಗಳನ್ನು ವೈಜ್ಞಾನಿಕ ವಿವರಣೆಗಳ, ಉದಾಹರಣೆಗಳ ಮೂಲಕ ಮೊಗ್ಗರಳಿದ ಹದದಲ್ಲಿ ಬಿಡಿಸಿಡುತ್ತ ಹೋಗುವ ಇವರ ಬರಹಗಳು ಮನಸ್ಸಿಗೆ ಖುಶಿ ನೀಡುವುದೊಂದೇ ಅಲ್ಲ, ಸ್ವತಃ ನಮ್ಮನ್ನು ವಿಚಾರ ಮಾಡಲು ಪ್ರೇರೇಪಿಸುತ್ತವೆ. ಇತ್ತೀಚಿನ “ಜೀವಂತವಾಗಿರುವ ಭಾಷೆಯೊಂದೆ ನಮ್ಮ ಆಸರೆ” ಲೇಖನದಲ್ಲಿ - ನಾಗರೀಕತೆಗಳ ಉಗಮದ ಹಾದಿಯಲ್ಲಿ ಚಮತ್ಕಾರಿ ಬೆಳವಣಿಗೆಯನ್ನು ದಾಖಲಿಸಿದ್ದು ಭಾರತದ ಪುರಾತನ ಸಂಸ್ಕೃತಿ. ಇದು ಹೇಗೆ ಸಾಧ್ಯವಾದೀತು? - ಎಂಬ ಪ್ರಶ್ನೆಯನ್ನು ಮುಂದಿಡುತ್ತಾ ಅವರು ಓದಿದ ಮನು ಎಂಬ ಲೇಖಕರ ಮಹಾಸಂಪರ್ಕ ಸಿದ್ಧಾಂತವನ್ನು ಸರಳವಾಗಿ ಮೊದಲ ಓದಿಗೇ ಅರ್ಥವಾಗುವಂತೆ ಬರೆದಿದ್ದಾರೆ.
ಭಾರತೀಯ ಸಂಸ್ಕೃತಿ ಮತ್ತು ಪುರಾತನ ಆಗುಹೋಗುಗಳು ಇವರ ವಿಜ್ಞಾನದ ನೆಲೆಗಟ್ಟಿನ ಬರಹಗಳಿಂದಾಗಿ ಇಂದಿನ ಜೆಟ್-ನೆಟ್ ಯುಗದಲ್ಲೂ ಪ್ರಸ್ತುತವೆಂದರಿವಾಗುತ್ತದೆ. ಹೀಗೇ ಪ್ರಶ್ನೆಗಳು ಮತ್ತು ಹತ್ತು ಹಲವು ಗ್ರಂಥ, ವಿಚಾರಗಳ ಪರಿಚಯಗಳ ಮೂಲಕ ಸಂವಾದಿಸುವ ಈ ಬರಹಗಳೆಲ್ಲವೂ ಯಾವಾಗಲೂ ಓದುಗರ ಅಭಿಪ್ರಾಯ ಕೇಳುತ್ತ ಕೊನೆಯಾಗುತ್ತವೆ.
ದೇವರಿಲ್ಲ ಎಂದ ಬುದ್ಧನೂ ಅವತಾರವಾದ, ಬುದ್ಧಿವಂತನಿಗೆ ಕನಸು ಬಿದ್ದಾಗ, ಓಶೋ ಎಂಬ ಹಕ್ಕಿ, ಮಗು ಹುಟ್ಟಿದ ಕ್ಷಣದಲ್ಲೇ ತಾಯಿಯೂ ಹುಟ್ಟುತ್ತಾಳೆ, ಜೋಗಿಯ ಅರಮನೆಯಲ್ಲೂ ಕವಿತೆಯದೇ ಗುಂಗು.. ಇತ್ಯಾದಿ ಲೇಖನಗಳ ಸಾರಸರ್ವಸ್ವ ವಿಷಯ ವೈವಿಧ್ಯ ಮತ್ತು ವಿಸ್ತಾರ. ಹಾಡು ಒಂಟಿ ಹಕ್ಕಿಯದೇ ಆದರೂ, ಉಲಿಯ ತರಂಗಾಂತರ ಸುದೂರಕ್ಕೆ ಹಬ್ಬುತ್ತಾ ರಾಗ ವಿಸ್ತಾರವಾದಂತಿದೆ.
ಎಲ್ಲ ಬರಹಗಳ ಕೊನೆಯಲ್ಲಿ ಬರುವ ಶೇಷವಿಶೇಷ ಎಂಬ ಅಡಿಟಿಪ್ಪಣಿ ಮುಖ್ಯಬರಹಕ್ಕೆ ಸೇರಿಲ್ಲದ, ಆದರೆ ತುಂಬ ಪ್ರಸ್ತುತವೆನಿಸುವ, ಓದಲೇಬೇಕೆಂದು ಪ್ರೇರೇಪಿಸುವ ಚುಟುಕು ವೈಶಿಷ್ಟ್ಯದಿಂದ ಕೂಡಿರುತ್ತದೆ. ಮುಖ್ಯಬರಹಕ್ಕೆ ಪೂರಕವಾಗಿಯೂ, ಹೆಚ್ಚಿನ ಆಲೋಚನೆಗೆ ಪ್ರೇಷಕವಾಗಿಯೂ ಇರುವ ಈ ಬ್ಲಾಗಿನ ಸೊಗಸನ್ನ ಓದಿಯೇ ಸವಿಯಬೇಕು.
ಪಾತರಗಿತ್ತಿ ಪಕ್ಕ (೧೧-೨-೦೮)
ದಿನದ ಬ್ಲಾಗಿನ ಬೊಗಸೆಯಲ್ಲಿ ಶಿವ ಶಂಕರ್ ಅವರ ಪಾತರಗಿತ್ತಿ ಪಕ್ಕ. ಪಾತರಗಿತ್ತಿಯ ರೆಕ್ಕೆಗಳಷ್ಟೇ ಕೋಮಲವಾಗಿ, ಹೂವಿನ ವರ್ಣ ಶಲಾಕೆಗಳಂತೆ ಸೊಗಸಾಗಿ ಕಥೆಯನ್ನೂ, ಕವಿತೆಯನ್ನೂ ಚಿತ್ರಿಸಬಲ್ಲ ಶಂಕರ್, ಬ್ಲಾಗಿನಲ್ಲಿ ಅದನ್ನು ಹಾರಿಬಿಡುವ ಪರಿಯೇ ಸೋಜಿಗ. ಮೊದಲ ಮಳೆಗೆ ಮಣ್ಣಿನಿಂದೇಳುವ ನವಿರು ವಾಸನೆಯಂತೆ, ಬೇಲಿಯ ಬಳ್ಳಿಯಲ್ಲಿ ಅರಳಿ ನಿಂತ ಕಾಡು ಹೂವಿನ ಘಮದಂತೆ ಅವರ ಕಾವ್ಯಕೃಷಿ ಭಾವುಕ ಮನಸ್ಸುಗಳಿಗೆ ಮೆಲ್ಲುಸಿರ ಸವಿಗಾನ.
ಕನಸು ಕನವರಿಕೆಗಳನ್ನು ಅಕ್ಷರದಲ್ಲಿ ಬಂಧಿಸಿಟ್ಟಿರುವ ಅವರ ವಿರಹದ ಚಿತ್ತಾರಿಕೆ ಸ್ವೀಟ್ ಡ್ರೀಮ್ಸ್ ಅಂದ್ರೇನು ಎಂಬ ಚೊಚ್ಚಲ ಪುಸ್ತಕ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ತಮ್ಮ ಒಳನೋಟಕ್ಕೆ ಸಿಕ್ಕಿದ ಪುಟ್ಟ ಪುಟ್ಟ ಘಟನೆಗಳನ್ನೇ ಕಾವ್ಯವಾಗಿ, ಅಲ್ಲಲ್ಲಿ ಕಥೆಯಾಗಿ ಹೇಳಿದ್ದಾರೆ ಶಂಕರ್. ಅವರ ಕುಸುರಿಗೆ ಸಿಲುಕಿದ ರೂಪಕವೊಂದು ಹೀಗಿವೆ.
ಸ್ಪಲ್ಪ ಹೊತ್ತಿನಲ್ಲಿ ಸೂರ್ಯ ಎದ್ದಾಗ
ಮದವೇರಿದ ಬೀದಿಗಳಿಗೆ ನಿದ್ದೆಯ ಮಂಪು
ಮಗ್ಗಲು ಬದಲಾಯಿಸಿ ಮಲಗುತ್ತದೆ
ಲಾಸ್ ವೇಗಾಸ್ ಎನ್ನುವ ಆ ಮಾಯಾನಗರಿ !…
ಮೊದಲ ದೀಪಾವಳಿ, ರಾಂಡಿ ಪೌಸ್ಚ್ ಎನ್ನುವ ಸಾವಿನ ಹೊಸ್ತಿಲಲ್ಲಿ ನಿಂತವನ ಮಾತುಗಳು… ನಟ ಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ ನೆನಪುಗಳು ಕವಿತೆಗಳಷ್ಟೇ ಆಪ್ತವಾಗಿ ಓದಿಸಿಕೊಳ್ಳುತ್ತದೆ. ಅರಳುವ ಹೂವಿನ ಕಂಪವನ್ನು ಬ್ಲಾಗಿನಂಗಳದ ತುಂಬಾ ಹರಡುವ ಪಾತರಗಿತ್ತಿ ಹಾರುತ್ತಲಿರಲಿ.
ಅಪಾರ (೯-೨-೦೮)
ಮಧ್ಯಸಾರ ಎಂಬ ನಾಮಬಲದಲ್ಲಿ ಕುಡುಕುತನದ ಆನಂದವನ್ನು ದಾಖಲಿಸುವ ರಘು ಅಪಾರ ಅವರ ಬ್ಲಾಗ್ ಈ ದಿನದ ಚುಕ್ಕಿ. ನೀಲುವಿನಷ್ಟು ಗಾತ್ರವಿರುವ ಅವರ ಪುಟ್ಟ ಪುಟ್ಟ ಕವಿತೆಗಳು ಪೆಗ್ಗು, ಮಗ್ಗು, ಪಿಂಟು, ಲಾರ್ಜ್ ಎಂಬ ಅವರದೇ ಉಲಿಗಳಲ್ಲಿ ಹುಟ್ಟು ಹಾಕುವ ಸಂತೋಷ, ತೆಳು ಹಾಸ್ಯ, ವ್ಯಂಗ್ಯ, ವಿನೋದಗಳನ್ನು ಮನದಣಿಯೆ ಓದುವುದೇ ಒಂದು ಸೊಗಸು.
ವೃತ್ತಿಯಲ್ಲಿ ಪತ್ರಕರ್ತರಾಗಿರುವ ರಘು ಉತ್ತಮ ಮುಖಪುಟ ವಿನ್ಯಾಸಕಾರರೂ ಹೌದು. ಕಥೆಗಳನ್ನು ಬರೆಯುತ್ತಾ, ಛಾಯಾಗ್ರಹಣ ಮಾಡುತ್ತಾ, ಚಿತ್ರ ನಿರ್ಮಾಣದತ್ತಲೂ ಇವರ ಒಲವು ಅಪಾರ. ಮಧ್ಯದ ಖುಷಿಯನ್ನು ಅದರ ಎಲ್ಲ ಸಂತೋಷ, ವಿಷಾದಗಳ ಜೊತೆ ಬಿಚ್ಚಿಡುವ ರಘು, ಇತ್ತೀಚೆಗೆ ಬರೆದ ಕವಿತೆಯ ತುಣುಕು ಇಲ್ಲಿದೆ…
ಕುಡಿದವನ ಹೃದಯ ಭಯಂಕರ ಮೆದು
ಶಾಸನ ವಿಧಿಸದ ಎಚ್ಚರಿಕೆ ಇದು
ತೀರ್ಥ ತಗೊಂಡಾಗ ಮನಸೊಂದು ಗುಡಿ
ಮತ್ತೊಂದು ದ್ರೋಹಕೂ ಅದು ಈಗ ರೆಡಿ..
ಕವಿತೆಯೊಳಗೂ ನಗು ತೂರಿಸಬಲ್ಲ, ಬ್ಲಾಗಿನಲ್ಲೂ ಕಾಮೆಂಟರಿ ಕೊಡಬಲ್ಲ, ಬಂಗಾಳದಲ್ಲಿ ಹಕ್ಕಿ ಜ್ವರದಿಂದ ಸತ್ತ ಕೋಳಿಗಳಿಗೆ ಕಂಬನಿ ಮಿಡಿಯಬಲ್ಲ ರಘು, ತಮ್ಮ ಬ್ಲಾಗಿನಲ್ಲಿ ಅಪಾರ ಸಾಧ್ಯತೆಗಳಿಗೆ ತೋರಣ ಕಟ್ಟಿದ್ದಾರೆ. ಕುಡಿಯುವದನ್ನು ಬಿಡಬಹುದಿತ್ತು, ಆದರೆ ಕೆಲಸವಾದೊಡನೆ ಕೈ ಬಿಟ್ಟರೆ, ಆಗೋದಿಲ್ಲವೆ ಅದು ರಾಜಕಾರಣ? ಎನ್ನುವ ಕುಡಕರ ವಚನಕ್ಕೆ ಎಂದಿನಂತೆ ತಲೆದೂಗುತ್ತಾ, ಮತ್ತೊಂದು ಮಧ್ಯಸಾರಿ ಬರೆಯಲು ಅವರು ಅಣಿಯಾಗುತ್ತಿದ್ದಾರೆ.
ಚಂದನ (೮-೨-೦೮)
ಇಂದಿನ ಬ್ಲಾಗ್ ಬಾನಿನ ಚುಕ್ಕಿ ಬಾಲ ಅವರ ಚಂದನ. ಇದುವರೆಗಿನ ತಮ್ಮ ಬದುಕಿನಲ್ಲಿ ಅನುಭವಿಸಿದ ಘಟನೆ ಮತ್ತು ಸ್ಪಂದಿಸಿದ ವಿಚಾರಗಳನ್ನ ಆಸಕ್ತಿಯುತವಾಗಿ ಪುಟ್ಟದಾಗಿ ಹಂಚಿಕೊಳ್ಳುವ ಇವರ ಬರಹಗಳು ಓದುವವರಿಗೆ ಇಷ್ಟವಾಗುತ್ತವೆ. ಈ ಎಲ್ಲ ಬರಹಗಳಿಗೂ ಅನ್ವರ್ಥವಾಗಿರುವ ತಲೆಬರಹಗಳು ನಮ್ಮ ಜನಪದ ಗಾದೆಗಳು, ನಾಣ್ಣುಡಿಗಳು, ವಚನ, ಗೀತೆಗಳು, ಝೆನ್ ಕತೆಗಳಿಂದ ಆಯ್ದಂತವು.
ದೃಷ್ಟಾಂತವೊಂದನ್ನು ಹೇಳುತ್ತಾ ವಿಚಾರವನ್ನು ಅರಳಿಸುವ ಕಲೆ ಇವರಿಗೆ ಸಿದ್ಧಿಸಿದೆ. ಎಲ್ಲೂ ಬೇಸರವಾಗದಂತೆ, ಸುಲಭವಾಗಿ ಓದಲು ಕರೆಯುವ ಈ ಬರಹಗಳು ಅವುಗಳ ಪ್ರಗತಿಶೀಲ ಸಂವೇದನೆಯಿಂದ ವಿಶಿಷ್ಟವಾಗಿವೆ. ಇತ್ತೀಚಿನ ಮಣ್ಣಿನಲಿ ನೀರಿನಲಿ ಬದುಕನೇ ಇಟ್ಟಿರುವ ಸೂರ್ಯ ಚಂದ್ರರ… ಎಂಬ ಸು.ರಂ ಎಕ್ಕುಂಡಿಯವರ ಕವಿತೆಯ ಸಾಲಿನಿಂದ ಶುರುವಾಗುವ ಲೇಖನದಲ್ಲಿ ಜೀವರಾಶಿಗಳ ಮೂಲವಾದ ಸೂರ್ಯ ಮತ್ತವನ ಬೆಳಕಿನ ಬಗೆಗಿನ ವೈಜ್ಞಾನಿಕ ವಿವರಣೆಯಿದೆ.
ನನ್ನ ಹೆಂಡತಿ ಕಿವುಡಿ ಎಂಬ ಬರಹದಲ್ಲಿ ವಿಡಂಬನೆಯ ಮೂಲಕ ನಮ್ಮ ತೊಂದರೆ/ತಪ್ಪುಗಳು ಹೇಗೆ ನಮ್ಮ ಬೆನ್ನಲ್ಲಿರುತ್ತವೆ, ಮತ್ತು ನಾವು ಹೇಗೆ ಯಾವಾಗಲೂ ಬೇರೆಯವರ ತಪ್ಪುಗಳ ಬಗ್ಗೆ ಆಲೋಚಿಸುತ್ತಿರುತ್ತೇವೆ ಎಂಬುದನ್ನು ಬರೆದಿದ್ದಾರೆ. ಹೀಗೇ ಬರೆದಿರುವ ಪೂರ್ಣವ ಕೊಡದೆ ಪೂರ್ಣವ ಪಡೆವುದೆಂತು, ಆತ್ಮೀಯರೊಳಗನ್ನು ಮೊದಲಾರು ಕಂಡವರು, ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು, ಮೌಲ್ಯಗಳ ಅವನತಿ, ಲೈಟ್ ಹೌಸ್, ಮತ್ತು ಕೆಲ ಸಣ್ಣಕತೆಗಳಿಂದ ಮಿನುಗುವ ಈ ಬ್ಲಾಗ್ ವಿಚಾರದ ತಿಳಿಬೆಳಕನ್ನು ಹಾಯಿಸುತ್ತದೆ.
ನನ್ನ ಹಾಡು (೭-೨-೦೮)
ಈ ದಿನದ ಬ್ಲಾಗ್ ಬೊಗಸೆಯಲ್ಲಿ ಮಲ್ಲಿಕಾರ್ಜುನ ತಿಪ್ಪಾರರ ನನ್ನ ಹಾಡು. ಸಾಹಿತ್ಯವನ್ನು ಪ್ರೀತಿಸುವ ತಿಪ್ಪಾರರು ಒಲಿದಾಗ ನವಿರಾಗಿ ಹಾಡುತ್ತಾರೆ. ನಿತ್ಯ ಜೀವನದ ಸಾಮಾನ್ಯ ಘಟನೆಗಳಿಗೆ ಅಕ್ಷರದಲ್ಲಿ ರಂಗು ತುಂಬುವ ಅವರ ಕುಸುರಿ ಕಲೆಗಾರಿಕೆ ಆಪ್ತವೆನಿಸುತ್ತದೆ. ಹೆಚ್ಚಾಗಿ ಬರೆಯದ, ಬರೆಯುವ ನಾಲ್ಕು ಸಾಲುಗಳಲ್ಲೇ ಎಲ್ಲವನ್ನೂ ಹೇಳುವ ಅವರ ಭಾವಪೂರ್ಣ ಕವಿತೆಗಳು ಬ್ಲಾಗಿನ ತುಂಬಾ ಕಾಡು ಬೆಳದಿಂಗಳಂತೆ ಹರಡಿಕೊಂಡಿದೆ.
ಈ ಬಾಲ್ಯವೇ ಹಾಗೇ
ಭಾವನೆಗಳ ಬರಹಕ್ಕೆ ನಿಲುಕದ
ನೀಲಾಕಾಶ… ಎತ್ತ ನೋಡಿದತ್ತ
ಆದಿ-ಅಂತ್ಯವಿಲ್ಲದ ಸ್ತಬ್ದಚಿತ್ರ.
ಇಂತಹ ಸಾಮಾನ್ಯ ಸಾಲುಗಳಲ್ಲೇ ಬಾಲ್ಯದತ್ತ ನಮ್ಮ ನೆನಪುಗಳನ್ನು ಕೊಂಡೊಯ್ಯಬಲ್ಲ ತಿಪ್ಪಾರರು, ಯಾವುದೇ ಭಾವೋದ್ವೇಗವಿಲ್ಲದೆ ಭಾವನೆಗಳನ್ನು ಬೆಚ್ಚಗೆ ಅರಳಿಸುತ್ತಾರೆ. ಹಲವು ಅಪರೂಪದ ಕಲ್ಪನೆಗಳು, ಹಾಗೂ ಸೌಂದರ್ಯ ಪ್ರಜ್ಞೆಯೊಂದಿಗೆ ಬಂಧಿಸಿರುವ ಇಲ್ಲಿನ ಕವಿತೆಗಳು ಓದುಗರಿಗೆ ತಮ್ಮದೇ ಎನಿಸುವಷ್ಟು ಆತ್ಮೀಯತೆ ಮೂಡಿಸುತ್ತದೆ. ಕೊನೆಗೊಂದು ದಿನ ನಾವೇ ಇಲ್ಲವಾಗುವುದು, ಅತ್ತು ಬಿಡು ಹಾಗೆ ಸುಮ್ಮನೆ, ಅವ್ವ, ಮಾತಾಡು, ಎಲ್ಲಿರುವೆ, ಸಾವಿನ ಮನೆ, ಇತ್ಯಾದಿ ಕವಿತೆಗಳಲ್ಲಿ ಮೌನ ಮಾತಾಗಿದೆ. ಅಪರೂದ ರೂಪಕಗಳನ್ನು ಸೃಷ್ಟಿಸುವ ಈ ಕಲೆಗಾರ ಒಂದೇ ಪ್ಯಾರಾದಲ್ಲಿ ಕಥೆ ಬರೆದಿದ್ದಾರೆ. 35 ಸಾವಿರ ರೂಪಾಯಿಯ ಬೆಕ್ಕಿನ ಮರಿಯ ಕೊರಳಿಗೆ ಗಂಟೆ ಕಟ್ಟಿದ್ದಾರೆ!
ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ..
ಇದು ಇವರ ಮತ್ತೊಂದು ಕವಿತೆಯ ಸ್ಯಾಂಪಲ್. ಭಾವನೆಗಳ ಭರಪೂರ ಸಂಗಮದಲ್ಲಿ ನನ್ನ ಹಾಡಿನ ಪಲ್ಲವಿ ದ್ವನಿಸುತ್ತಿದೆ.
ಮಾಗಿ ಕೋಗಿಲೆಯ ಹಾಡು (೬-೨-೦೮)
ಇಂದಿನ ಬ್ಲಾಗ್ ಅಂಗಳದಲ್ಲಿ ಆಟಂ ನೈಟಿಂಗೇಲ್ ಕಾವ್ಯನಾಮದ ಲೇಖಕ/ಕಿಯ ಮಾಗಿ ಮಾಗಿ ಕೋಗಿಲೆಯ ಹಾಡು. ಓದಿ ವಾಹ್ ಎಂದು ಉದ್ಗರಿಸದೆ ಇರಲಾಗುವುದಿಲ್ಲ. ಮಾಗಿ ಮಲ್ಲಿಗೆಯ ಚಂದದ ಹೂಗಳು ಬಿರಿದಂತಹ ಕವಿತೆಗಳು. ಈ ಬ್ಲಾಗ್ ಹೊಸದಾಗಿ ಈ ವರ್ಷದಿಂದ ಶುರುವಾಗಿದೆ. ಇದಕ್ಕೂ ಮುಂಚೆ ನೈಟಿಂಗೇಲ್ ಹಾಡುತ್ತಿದ್ದಿದ್ದು ಡಿವೈನ್ ಮೆಲಡಿ ಎಂಬ ಕಾವ್ಯಕಾನನದಲ್ಲಿ.
ಚಂದಿರನೇ ಅಷ್ಟು ಬೆಳಕು ಸೂಸುತ್ತಿರುವಾಗ
ಭೂತಾಯಿಯೆಷ್ಟು ಬೆಳಗುತ್ತಿರಬಾರದು
ಎನ್ನಿಸಿ ಚಂದಿರನೂರಿನ
ಹುಣ್ಣಿಮೆಯ ಕನಸು ಕಾಣುತ್ತೇನೆ.
ಇಂತಹ ಅಪರೂಪದ ರಮ್ಯ ಕಲ್ಪನೆಗಳನ್ನು ಹೊಸ ಹೊಸ ಸೌಂದರ್ಯ ಪರಿಭಾಷೆಯನ್ನ ಕಟ್ಟಿ ಕೊಡುವ ಈ ಕವಿತೆಗಳು ಚೆಂದವಾಗಿವೆ. ಛಂದವಿದೆ. ಹಂಚಿಕೊಂಡ ಗುಟ್ಟು, ಸುತ್ತಿ ಸುಳಿದಾಡಿದ ಗುರುತು, ಈ ಬೆಳದಿಂಗಳ ರಾತ್ರಿ, ಬಿಂದು ಬೆಳಕ ನೋಡುತ್ತಾ, ಅವಕ್ಕೆ ತೊಂದರೆ ಕೊಡಬೇಡ, ನೀಲಾಕಾಶ ಬಿಟ್ಟು ಎಲ್ಲವೂ ಭಾವಸರಸ್ಸಿನಲ್ಲಿ ತೇಲಿಬಿಟ್ಟ ಹಾಯಿದೋಣಿಗಳೆ.
ಸೂಕ್ಷ್ಮ ಸಂವೇದನೆಯನ್ನ ನವಿರಾಗಿ, ಹೂವು ಅರಳಿದಂತೆ ಸಹಜ ಸೊಗದಿಂದ ಹಿಡಿದಿಟ್ಟಿರುವ ಈ ಕವಿತೆಗಳು ಕವಿಮನಸ್ಸುಗಳಿಗೆ, ಭಾವುಕ ಹೃದಯಕ್ಕೆ ತಂಪೆರೆಯುತ್ತವೆ. ಮಾಗಿ ಕೋಗಿಲೆಯ ಹಾಡನ್ನ ಸವಿಯಿರೆಲ್ಲ.
ಎಲ್ಲಾ ನೋಟಗಳಾಚೆಗಿನ್ನೊಂದು ಚಿತ್ರವಿದೆ..! (೫-೨-೦೮)
ದಿನದ ಬ್ಲಾಗಿನ ಈ ದಿನದ ಚುಕ್ಕಿ ಸಿಂಧು ಅವರ ಎಲ್ಲಾ ನೋಟಗಳಾಚೆಗಿನ್ನೊಂದು ಚಿತ್ರವಿದೆ..! ಕನ್ನಡದಲ್ಲಿ ತುಂಬಾ ಆಪ್ಯಾಯಮಾನವಾಗಿ ಬರೆಯುವ ಸಿಂಧು ಸುತ್ತಲಿನ ಪ್ರಪಂಚದ ಕುರಿತ ತಮ್ಮ ಬೆರಗನ್ನು ಅಕ್ಷರಕ್ಕಿಳಿಸುವ ಬಗೆಯೇ ಸೋಜಿಗ. ಎಲ್ಲವೂ ಭಾವೋದ್ಧೀಪ್ತ ಬರಹಗಳೇ. ಭಾಷೆಯನ್ನು ಕುಸುರಿ ಕಲೆಗಾರನಂತೆ ನೇವರಿಸಿ, ಜತನದಿಂದ ಪೋಣಿಸಿರುವ ಇವರ ಬ್ಲಾಗ್ ಬಾಗೀನಗಳು ಗುಬ್ಬಿಯ ಗೂಡಿನಂತೆ ಬೆಚ್ಚನೆಯ ಸ್ಪರ್ಶ ನೀಡುತ್ತದೆ.
ನಗರ ಬದುಕಿನ ವೇಗ, ತಲ್ಲಣಗಳೊಂದಿಗೆ ಎದುರಾಗುವ ಮಾನವೀಯ ಮುಖಗಳನ್ನು, ಅದರೊಳಗಿನ ಭಾವನಾತ್ಮಕ ಸಂಬಂಧವನ್ನು ಸಿಂಧು ಪರಿಚಯಿಸುವ ರೀತಿಯೇ ಅನನ್ಯ. ಒಂದು ಚೆಂದದ ಕವಿತೆಯಿರಬಹುದು, ಚುಮುಚುಮು ಬೆಳಗಿರಬಹುದು, ಹಸಿರು ಹುಲ್ಲಿನ ಮೇಲೆ ಬಿದ್ದಿರುವ ಮುತ್ತಿನಂತ ಇಬ್ಬನಿಯಿರಬಹುದು, ಟ್ರಾಫಿಕ್ ಜಾಮ್‌ನಲ್ಲಿ, ಕಾಫಿಡೇಯಲ್ಲಿ ಕೈಯೊಡ್ಡುವ ಬಿಕ್ಷುಕ ಮಕ್ಕಳ ದೈನ್ಯತೆ ಇರಬಹದು, ಹೀಗೆ ನಮ್ಮ ಕಣ್ಣಿಗೆ ಕಂಡೂ ಕಾಣದಂತಿರುವ ಈ ಎಲ್ಲಾ ಚಿತ್ರಗಳು ಅವರ ಒಳನೋಟಕ್ಕೆ ಸಿಗುವ ರೀತಿಯೇ ಬೇರೆ. ಪ್ರತಿ ಜೀವವನ್ನೂ ಅದರೊಳಗಿನ ಜೀವನಪ್ರೀತಿಯನ್ನೂ ಅಷ್ಟೇ ಅಕ್ಕರೆಯಿಂದ, ಶ್ರದ್ಧೆಯಿಂದ, ನವಿರಾಗಿ ಹೆಣೆಯುವ ಕಾಳಜಿ ಇಲ್ಲಿನ ಬರಹದೊಗಳಗಿನ ಜೀವದ್ರವ್ಯ.
ಮೊದಲ ದಿನ ಮೌನ, ಚಾಂದ್ ಸೀ ಮೆಹಬೂಬಾ, ವೈಶಾಲಿ ಎಂಬ ಊರಿನಲ್ಲಿ ನೇಗಿಲಿಗೆ ಕಟ್ಟಿ ಗದ್ದೆ ಉಳಲು ಹಚ್ಚಿದ್ದ ಮಕ್ಕಳ ಕಥೆಗಳು, ಹೂವಿನಷ್ಟೇ ಚೆಂದದ ಕವಿತೆ ಎಲ್ಲವೂ ಬೆಳದಿಂಗಳಂತೆ. ಧರ್ಮಾಂಧತೆಯಲ್ಲಿ ಉಸಿರುಕಟ್ಟಿ ನೇತಾಡುತ್ತಿರುವ ಆಫ್ಘಾನಿಸ್ತಾನದ ಒಂದು ಅಪರೂಪದ ಚಿತ್ರಣ, ಗಡಿಪಾರು ಗವಾಕ್ಷಿ, ಕೆಂಪಿ ಕಣ್ಣು, ಅಜ್ಜ, ಅಜ್ಜಿ ಮತ್ತು ಮಳೆಯ ಕಥೆ ಇವೆಲ್ಲವೂ ಹಳೆಯ ಪೋಸ್ಟ್‌ಗಳಾದರೂ, ಬಾಲ್ಯಕಾಲದ ಸಖಿಯಂತೆ ಒಲುಮೆ ಹುಟ್ಟಿಸುವ ಆಪ್ತ ಬರಹಗಳು.
ಮಾಗಿಯ ಬೆಳಗಿನ ಕನಸು, ಮಾಧು ಮಾಮ ಎಂಬ ಭಾವಜೀವಿಯ ಕವಿತೆ ಈ ಬ್ಲಾಗಿನ ಇತ್ತೀಚಿನ ಸೇರ್ಪಡೆಗಳು. ಬರೆವ ಬದುಕಿನ ತಲ್ಲಣದಲ್ಲಿ, ಮಧುರ ನೋವಿನ ಮಿಂಚುಗಳಲ್ಲಿ ಸಿಂಧು ಅರಳಿಸುವ ದೃಶ್ಯಕಾವ್ಯ ಅಪರೂಪ. ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಅದಕೆ ಕಂಡ ನೋಟ ಸಮುದ್ರದಂಥ ಪ್ರಾಣಿ.. ಎಂಬ ಕೆ.ಎಸ್.ಎನ್ ಅವರ ಸಾಲು ಅವರ ಬ್ಲಾಗಿನ ಕುರಿತು ಎಲ್ಲವನ್ನೂ ಹೇಳುತ್ತದೆ.
ಕ್ಷಿತಿಜದೆಡೆಗೆ (೪-೨-೦೮)
ಇಂದಿನ ಬ್ಲಾಗ್ ಪಯಣ ಪರಿಸರ ಪ್ರೇಮಿ ಅರುಣರ ಕ್ಷಿತಿಜದೆಡೆಗೆ. ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯ ಸರಾಗ ವ್ಯಕ್ತಿತ್ವದ ಇವರ ಲೇಖನಗಳೆಲ್ಲಾ ಪ್ರಕೃತಿ ವೈಭವದಿಂದಲೇ ತುಂಬಿರುವುದನ್ನು ನೀವು ಕಾಣಬಹುದು. ಇವರದ್ದೇ ಆದ ವೃತ್ತಿಪರ ಪ್ರವಾಸೀ ಗುಂಪು, ಇಲ್ಲಿನ ಸಾಕಷ್ಟು ಬರಹಗಳ ಪ್ರೇರಣೆಯಾಗಿದ್ದರೆ, ಇವರ ನಿಸರ್ಗ ಪ್ರೀತಿ ಎಲ್ಲ ಬರಹಗಳ ಬೆನ್ನೆಲುಬು. ಇಂದಿನ ಭಾರೀ ಚಟುವಟಿಕೆ ಹಾಗೂ ವೇಗದ ಜಗತ್ತಿನಲ್ಲಿ, ಹಾದಿಬದಿಯಲ್ಲಿ ನಿಂತು ಹಕ್ಕಿಗೊರಳನ್ನು ಕೇಳಲೂ ಪುರುಸೊತ್ತಿರದ ಹಲವಾರು ಜೀವಗಳನ್ನ, ಪ್ರಕೃತಿಯ ಮಡಿಲಿಗೆ ಕರೆದೊಯ್ದು ಹೊಸಬೆಳಕು ತೋರಿಸುವುದಲ್ಲದೆ, ಚಿಂತನೆಗೆ ಪ್ರೇರೇಪಿಸುವ ಹಲವು ಬರಹಗಳಿವೆ.
ಕನ್ನಡಕ್ಕೆ ಅಪರೂಪವೇ ಅನ್ನಿಸುವಂತಹ ವನಸಂಪತ್ತನ್ನ ಪರಿಚಯಿಸುವ ಅಪರೂಪದ ಲೇಖನಗಳ ಸರಮಾಲೆಯಿಲ್ಲಿದೆ. ಇತ್ತೀಚೆಗೆ ಬರೆದಿರುವ ವಿಶ್ವ ಸೌಂದರ್ಯ ಸ್ಪರ್ಧೆಯ ಭಾಗೀದಾರರು ನೋಡುಗರ ಮನಸ್ಸಿಗೆ ಹಿತ ಕೊಡುತ್ತಾರೆ. ಜೊತೆಗೇ ತಮ್ಮ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನೂ. ಇದನ್ನು ವಿವರಿಸುವ ಮಾತೇ ಇಲ್ಲ. ನೋಡಿಯೇ ನಲಿಯಬೇಕು. ರಾಷ್ಟ್ರೀಯ ಉದ್ಯಾನದಲ್ಲಿ ಪ್ಲಾಸ್ಟಿಕ್ ತಿಂದು ಜೀವಬಿಟ್ಟ ಜಿಂಕೆ, ಅಗಲಿದ ವನ್ಯಪ್ರಾಣಿ ವೈದ್ಯ ವಿಶ್ವನಾಥ್, ಕೊಳೆತು ಕುಲಗೆಟ್ಟಿರುವ ಬೆಂಗಳೂರನ್ನು ಶುಚಿಮಾಡುವ ಬಗೆ, ದೀಪಾವಳಿಯ ದುಃಖದ ನೆನಪು, ನಗು, ಮಳೆಗಾಲ, ವನ್ಯಜೀವಿ ಸಪ್ತಾಹ, ಬತ್ತಿಹೋದ ಗಂಗೆಗಳು, ಸ್ಟೀವ್ ಇರ್ವಿನ್ನನ ನೆನಪಿಗೆ ಬರೆದ ಲೇಖನ, ಉರಗೋಪಚಾರ, ಸೊಬಗಿನ ಕನ್ನಡ ನಾಡು, ಹಿಮಾಲಯದ ಚಾರಣ, ಆಹಾರ ಸಂಕಲೆಯ ಸಮೀಪ ದರ್ಶನ..
ಎಲ್ಲ ಲೇಖನಗಳ ತಿರುಳಾಗಿ ಪ್ರಕೃತಿ, ಹೊಳಪಾಗಿ ಪ್ರಕೃತಿಯೆಡೆಗಿನ ಕಾಳಜಿ ತುಂಬಿಕೊಂಡು ಓದುವವರಿಗೆ ಹಿತವಾದ ಅನುಭವ ಕೊಡುತ್ತವೆ. ಬನ್ನಿ ಕ್ಷಿತಿಜದೆಡೆಗೆ ಸಾಗಲು..
ಚೆಂಡೆಮದ್ದಳೆ (೩-೨-೦೮)
ಇವತ್ತಿನ ಬ್ಲಾಗ್ ರಂಗದಲ್ಲಿ ಅರವಿಂದ ನಾವಡರ “ಚೆಂಡೆಮದ್ದಳೆ”ಯಾಟ.. ನಾನು ಸುದ್ದಿ ಜೀವಿ. ನಿತ್ಯವೂ ಸುದ್ದಿ ಬರೆಯುವುದು ನನ್ನ ಕಾಯಕ. ಅದರ ಮಧ್ಯೆ ಆಗಾಗ್ಗೆ ಹೊರಡುವ ಭಾವನೆಗಳ ಮೆರವಣಿಗೆಯ ಸೊಗಸನ್ನು ತುಂಬಿಕೊಳ್ಳಲು ಈ ಬ್ಲಾಗ್ ಅಂತ ಬ್ಲಾಗ್ ರಂಗ ಪ್ರವೇಶಿಸಿರುವ ನಾವಡರ ಚಾಲ್ ಗಳು ವಿಭಿನ್ನ ಮತ್ತು ಸಂವೇದನಾ ಶೀಲ ಲಾಸ್ಯಗಳು.
ಸುತ್ತಲಿನ ಪರಿಸರ ಬದುಕುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಪದಗಳಲ್ಲಿ ಅನುರಣಿಸುವ ರೀತಿಯೇ ವಿಶಿಷ್ಟವಾಗಿರುತ್ತದೆ. ಇತ್ತೀಚಿನ “ಬೆಳಗ್ಗೆಗಿಂತ ಸಂಜೆಯೇ ವೇಗ” ಕತೆಯಲ್ಲಿ ಟ್ರಾಫಿಕ್, ಬ್ಯುಸಿಯ ನಡುವೆ ಕಳೆದುಕೊಳ್ಳುತ್ತಿರುವ ನಮ್ಮ ಬದುಕಿನ ಬಗ್ಗೆಯೇ ಇತ್ತೀಚೆಗೆ ಅನಿಸಿದ್ದನ್ನ ಪಕ್ಕದ ಮನೆಯ ಪುಟ್ಟಿಯ ಕಣ್ಣಲ್ಲಿ ಕಟ್ಟಿಕೊಟ್ಟಿದ್ದಾರೆ. ಕನಸು ಕರಗಿದ ಬದುಕು ಬರಹದ ಬಾಲಕಾರ್ಮಿಕರು, ಸೂಜಿಗಳದ್ದೇ ಬದುಕು ಬರಹದ ಪುಟ್ಟ ಡಯಾಬಿಟಿಸ್ ಪೀಡಿತರು,ಅವನಿಗೆ ಇವನು ಆಳು ಕತೆಯ ಮಾಲಿಕ, ಕೆಲಸಗಾರ, ಕೆಲಸಗಾರನ ಮಗ ಮತ್ತು ಬಡತನದ ವಿಷವರ್ತುಲದ ಅಪರೂಪದ ನೋಟ, ಕತ್ತಲೆಯ ಗುರುತು ಹೇಳಿ ಲೇಖನದ ಕಳೆದುಹೋದ ಬಾಲ್ಯದ ಮುಗ್ಧ ನೆನಪು… ಎಲ್ಲವೂ ಕಟ್ಟಿಕೊಡುವ ಅನುಭವ ವಿಭಿನ್ನ ರೀತಿಯದು. ನಾವು ದಿನದಿನ ಸಾಗಿದ ದಾರಿಯ ನೂರೆಂಟು ಮಗ್ಗುಲುಗಳನ್ನು ಮನಃಸ್ಪರ್ಶಿಯಾಗಿ ಚಿತ್ರಿಸುವ ಇವರ ಶೈಲಿ ಎಲ್ಲರಿಗೂ ಇಷ್ಟವಾಗುತ್ತದೆ.
ನಾವು ಮತ್ತು ನಮ್ಮವರು, ಬದುಕಿನ ಕೌದಿಗೆ ಬಂಧದ ಚಿತ್ರ, ಸುಕ್ಕಿನ ಮೊಹರು, ಬೊಗಸೆಲೆಕ್ಕದ ಅಪ್ಪ.. ಇತ್ಯಾದಿ ಎಲ್ಲ ಬರಹಗಳೂ ಹೊಸರೀತಿಯ ಸಂವೇದನಗಳ ಹೊಸ ಶಬ್ಧತಾನಗಳಾಗಿ ಇವರ ಚೆಂಡೆಮದ್ದಳೆಯಿಂದ ಹೊಮ್ಮುತ್ತಿವೆ.. ನೋಡಿ
ಶರಧಿ (೨-೨-೦೮)
ಈ ಬಾರಿಯ ಬ್ಲಾಗ್ ಬೊಗಸೆಯಲ್ಲಿ ಚಿತ್ರಾ ಕರ್ಕೇರಾ ಅವರ ಶರಧಿಯ ಸರದಿ. ನಿತ್ಯ ಜೀವನದ ಸಹಜ, ಸರಳ ಸಂಗತಿಗಳನ್ನು ನವಿರಾಗಿ ಹೆಣೆಯುವ ಚಿತ್ರ ಪುತ್ತೂರಿನಿಂದ ಬಂದಿರುವ ಯುವ ಪ್ರತಿಭೆ. ಅವರು ವಾಸ್ತವಕ್ಕೆ ಹತ್ತಿರವಾಗಿ ಬರೆಯುತ್ತಾರೆ. ಸುತ್ತಮುತ್ತ ನಡೆಯುವ ಸಣ್ಣಪುಟ್ಟ ಘಟನೆಗಳನ್ನು ಇದ್ದದ್ದು ಇದ್ದ ಹಾಗೆ ಬ್ಲಾಗಿಸುತ್ತಾರೆ. ಅಲ್ಲಿ ನೋಡಿ, ಇಲ್ಲಿ ಬಂದು ಕತೆ ಹೇಳಿದ ಹಾಗೆ ಇರುವ ಈ ಪ್ರಾಮಾಣಿಕ ಬರಹಗಳಿಗೆ ಚಿಂತನೆಯ ನವಿರಾದ ಸ್ಪರ್ಶವಿದೆ.
ಬಸ್ಸಿನಲ್ಲಿ ಭೇಟಿಯಾದ ಮಣಿಪುರಿ ಹುಡುಗ, ರಾತ್ರಿ ಕಾಣುವ ಎಂ.ಜಿ ರೋಡು, ಪುಸ್ತಕ ಪ್ರೀತಿಸುವ ಫ್ರಾನ್ಸಿನ ಅಧ್ಯಕ್ಷ, ರಾಖಿ ಕಟ್ಟಿ ಗಿಪ್ಟ್ ಕೊಡಲು ಬರುವ ಅಣ್ಣ ಈ ಎಲ್ಲಾ ಕತೆಗಳ ಹಿಂದಿರುವ ಮಾನವೀಯ ಆಯಾಮಗಳು ಗಮನ ಸಳೆಯುತ್ತದೆ. ಪಕ್ಕಾ ವ್ಯವಹಾರಿಯಂತಿರುವ ಬೆಂದಕಾಳೂರು, ಅದರೊಳಗಿನ ಕೃತಕ ನಗು, ಕಂಡು ಕಾಣದಂತಿರುವ ನೋವು ನರಳಾಟ, ಜನರ ಅವಸರ, ಉತ್ಸಾಹ ತಲ್ಲಣ ಎಲ್ಲವೂ ಶರಧಿಯ ಒಳನೋಟಕ್ಕೆ ಸಿಕ್ಕಿವೆ.
ರಜೆಯ ಮಜ ಅನುಭವಿಸಿದ ಕತೆ ಈ ಬಾರಿಯ ಪೋಸ್ಟಿನಲ್ಲಿದೆ. ವೃತ್ತಿ ಬದುಕಿನ ಒತ್ತಡದ ನಡುವೆ ಕಳೆದು ಹೋಗುವ ಒಂದು ವಾರ, ಅದರ ನಡುವೆ ಕೈಗೆ ಸಿಕ್ಕೂ ಸಿಗದಂತಿರುವ ಒಂದು ಭಾನುವಾರ, ಅದನ್ನು ಬೆಂಗಳೂರಿಗರು ಅನುಭವಿಸುವ ಸಂಭ್ರಮದ ವರ್ಣನೆ. ಮುಂದಿನ ಭಾನುವಾರಕ್ಕಾಗಿ ಕಾಯುತ್ತಾ, ಜುಗಾರಿ ಕ್ರಾಸ್‌ನ ಟಿಕೇಟ್ ಹಿಡಿದು ಎಲ್ಲರನ್ನೂ ಸ್ವಾಗತಿಸುವ ಶರಧಿಗೆ ಆರಾಮವಾಗಿ ಹೋಗಿ ಬರಬಹದು.
ಮನಸ್ವಿನಿ (೧-೨-೦೮)
ಕೆಂಡಸಂಪಿಗೆಯ ಇಂದಿನ ಬ್ಲಾಗ್ ಬೊಗಸೆಯಲ್ಲಿ ಸುರೇಖಾ ಅವರ ಮನಸ್ವಿನಿ. ಕಾನನದ ಸುಮವೊಂದು ಸೌರಭವ ತಾಸೂಸಿ ಸಫಲತೆಯ ಪಡೆವಂತೆ ಮಾಡೆನ್ನ ತಂದೆ ಎಂಬ ಕವಿನುಡಿಯ ಅಡಿಬರಹ. ಉತ್ತರಕನ್ನಡದ ಹಿನ್ನೆಲೆಯಿಂದ ಬಂದಿರುವ ಕವಯಿತ್ರಿಯ ಗೀತಗಳು ನವಿರಾದ ಭಾವಗಳನ್ನು ಸೂಕ್ಷ್ಮವಾಗಿ ಹೆಣೆದ ಕುಶಲ ಕುಸುರಿಯಂತೆ ಭಾಸವಾಗುತ್ತದೆ. ಎಲ್ಲೂ ಅಬ್ಬರವಿಲ್ಲದ ತಂಪುಹೊಳೆಯಂತೆ ಅಪ್ಯಾಯಮಾನ. ಈಗಾಗಲೇ ಕವನಸಂಕಲನವೊಂದನ್ನು ಪ್ರಕಾಶಿಸಿರುವ ಈ ಯುವಪ್ರತಿಭೆಯ ದೃಷ್ಟಿಕೋನವೇ ವಿಶಿಷ್ಠ, ವಿಭಿನ್ನ.
ಈಗೀಗ ರಾತ್ರಿಗಳಲ್ಲಿ, ಹಳೆಯ ಹನಿಗಳು, ಕಲ್ಲು-ಕಲೆ-ಅವಳು, ತಿಳಿದಿರಲಿಲ್ಲ, ಹಾದಿಬದಿಯ ಹೂವು, ಚುಕ್ಕಿಗಳ ನಡುವೆ, ದಡದಿಂದ ದಡಕೆ ಮೊದಲಾದ ಇನಿದನಿಯ ಕವಿತೆಗಳು ರಾಗ ಸಂಯೋಜನೆಗಾಗಿ ಕಾದು ಕೂತಷ್ಟು ಮಧುರವಾಗಿ ಮೂಡಿವೆ. ಸೂಕ್ಷ್ಮ ಸಂವೇದನೆಯನ್ನ ಸಮರ್ಥವಾಗಿ ಪದಗಳಲ್ಲಿ ಅಭಿವ್ಯಕ್ತಿಸುವ ಕೆಲವು ಹನಿಗಳು ನಿಮ್ಮ ಮೊದಲ ಓದಿಗೆ…
ಅವಳು ಒಂದೇ ಸಮನೆ
ಬಿಕ್ಕುತ್ತಿದ್ದಳು; ಕಾರಣರ್ಯಾರೋ?
ಜಾರುವ ಆ ಕಣ್ಣ ಹನಿಗಳಲ್ಲಿ
ನನ್ನದೇ ಮುಖವಿತ್ತು..
ಇಂದಿಲ್ಲಿ ಹಗಲಾಗಿದೆ,ಕಣ್ಣು ತೆರೆದಿದೆ
ಮನದಲ್ಲಿ ಹೊಸತು ಕನಸು
ಹೂವಿನ ಹಾದಿಯೇನಿಲ್ಲ
ಹುರುಪು ತುಂಬಿ,ಛಲವ ಬಿತ್ತಿ
ಮುಂದೆನ್ನ ಕಥೆ ಬರೆಯುವ
ಸರಳ ಕನಸಷ್ಟೆ!…
ನೆನಪಿನಂಗಳದಿಂದ ಒಂದಿಷ್ಟು (೨೯ -೧-೦೮)
ಈ ದಿನದ ಬ್ಲಾಗ್ ಬೊಗಸೆಯಲ್ಲಿ ಪಡಿಮೂಡಿದ ಭಾವಚಿತ್ತಾರ ಶ್ಯಾಮಾ ಅವರ ನೆನಪಿನಂಗಳದಿಂದ ಒಂದಿಷ್ಟು. ಕೆಲವು ಮಧುರ ನೆನಪುಗಳು, ಕೆಲವು ಕಹಿ ನೆನಪುಗಳು, ನನಸಾದ ಕನಸುಗಳು, ಕಳೆದುಹೋದ ಅದೆಷ್ಟೋ ಕನಸುಗಳು… ನಾನು ಪಡೆದಿದ್ದು, ಕಳೆದುಕೊಂಡಿದ್ದು, ನಾನು ಕಲಿತಿದ್ದು…ನಂಗೆ ಅನಿಸಿದ್ದು…. ಇವೆಲ್ಲವನ್ನು ಕಟ್ಟಿಡುವ ಬುಟ್ಟಿ ಈ “ನೆನಪಿನಂಗಳದಿಂದ ಒಂದಿಷ್ಟು” ಅಂತನ್ನುತ್ತಾ ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟ ಈ ಬರಹಗಾರ್ತಿ ಬರೆದಿದ್ದೆಲ್ಲ ಭಾವೋದ್ದಿಪ್ತ ಬರಹಗಳೆ.
ಹೊಸಪೀಳಿಗೆಯ ನವೋಲ್ಲಾಸ, ಭಾವುಕ ಅಚ್ಚರಿ, ವಿನಾಕಾರಣ ಪ್ರೀತಿ, ಮತ್ತು ಒಳ್ಳೆಯ ಕನ್ನಡ ಪದಕೋಶಗಳಿಂದ ಇವರು ನೇಯ್ದಿರುವ ಹೆಣಿಗೆಗಳು ವಿಶಿಷ್ಠವಾಗಿವೆ. ಚಂದ್ರನು ಬಾವಿಗೆ ಬಿದ್ದನು, ಮೊದಲಮಳೆ-ನಾನು-ಅವನು-ಒಂದು ಸುಂದರ ಕಲ್ಪನೆ, ಕಾನನ ಕುಸುಮ, ಶಿಳ್ಳೇಖ್ಯಾತರು, ಮರಳುವುದಾದರೂ ಹೇಗೆ, ಈ ಕಥೆ ಅಂದ್ರೆ ನಂಗೆ ಸಿಟ್ಟು, ನನ್ನ ಹೆಸರಿಗೊಂದು ಸಂಜೆ, ನಾಳೆಗಳು ನಮಗಿಹವು, ಕೈಜಾರಿ ಹೋಗುತ್ತಾವ ಕನಸುಗಳು.. ಮುಂತಾದ ಎಲ್ಲ ಬರವಣಿಗೆಗಳೂ ಹೆಚ್ಚು ಸದ್ದು ಗದ್ದಲವಿಲ್ಲದೆ ಸುಮ್ಮನೆ ಮನಸ್ಸಿನೊಳ ಹೋಗಿ ಮನೆ ಮಾಡುತ್ತವೆ.
ಇತ್ತೀಚಿನ ಬರಹ ಕಡಲಾಚೆಯ ಗೆಳತಿಗೊಂದು ಪ್ರೀತಿಯ ಪತ್ರದಲ್ಲಿ, ಆಪ್ತ ಗೆಳತಿಯೊಡನೆ ಕಳೆದ ಮಧುರ ಕ್ಷಣಗಳ ನೆನಪು, ಮತ್ತು ಅವಳಿಲ್ಲದಾಗಿನ ಖಾಲಿತನದ ಹಳಹಳಿಕೆ ಎರಡೂ ಅನನ್ಯವಾಗಿ ಸೇರಿಕೊಂಡು ಹೊಸದೇ ಚಿತ್ತಾರ. ಇವರ ಕಲ್ಪನೆಗಳ ವೈವಿಧ್ಯವೇ ಒಂದು ಸೊಗಸು. ಹೊಸಪೀಳಿಗೆಯ ಈ ಚಿಗುರಿನ ಸವಿಯನ್ನೊಂದಿಷ್ಟು ಸವಿಯುವ ಬನ್ನಿ..
ಈ ಪಲ್ಲವ ಹೇಗಿದೆ ನೋಡಿ..
ಕಣ್ಣುಗಳೂ ಮಾತಾಡುತ್ತವಂತೆ
ಹೌದಾ ?ನಾನು ಕೇಳಿದ್ದೆ ನಿನ್ನ,
ನಿನ್ನ ಕಣ್ಣಲ್ಲಿ ಕಣ್ಣಿಟ್ಟು
ನೋಡಿದಾಗ ಗೊತ್ತಾಯ್ತು
ಕಣ್ಣುಗಳು ಕವಿತೆಯನ್ನೂ
ಹೇಳುತ್ತವೆ….
ತುಂತುರು ಹನಿಗಳು (೨೮ -೧-೦೮)
ದಿನದ ಬ್ಲಾಗ್ ಬೊಗಸೆಯಲ್ಲಿ ತುಂತುರು ಹನಿಗಳು. ಕನ್ನಡವನ್ನು ತುಂಬ ಪ್ರೀತಿಯಿಂದ ನೇವರಿಸಿ ನೇಯುವ ಕುಶಲ ಹೂವಾಡಿಗ ಶ್ರೀನಿಧಿಯವರ ಭಾವಲಹರಿ. ಪುಟ್ಟ ಪುಟ್ಟ ಸಂತಸಗಳನ್ನು ಹೆಕ್ಕಿ ಮುದ್ದಿಸಿ ತುಂತುರು ಹನಿಗಳಾಗಿ ಸಿಂಪಡಿಸುವ ಇವರ ಸಾಲುಗಳು ಕ್ರಿಯಾಶೀಲ ಅಭಿವ್ಯಕ್ತಿಗಳು. ಸಂವೇದನಾಶೀಲ ಯುವಪ್ರತಿಭೆ ಶ್ರೀನಿಧಿಯವರ ಎಲ್ಲ ಬರಹಗಳೂ ಆತ್ಮೀಯವೆನ್ನಿಸುವಷ್ಟು ಅಪ್ಯಾಯಮಾನ.
ಖುಷಿಗೊಂದು ಪದ್ಯ ಬರೆಯುವ ಇವರ ಹೂವು ಮಾರುವ ಹುಡುಗಿ, ನಾನು ನಾನಾಗಿರುವುದು, ಮೇಪ್ಲವರಿನ ಮರ, ಹಕ್ಕಿ ಕಥೆ, ಸಾಗರ ಸಮ್ಮುಖದಲ್ಲಿ, ಬೇಸಿಗೆಯ ಮದುವೆಯೆಂದರೆ, ನಗುವ ಮುದುಕ ಎಲ್ಲವೂ ಜೀವಂತ ಬಿಂಬಗಳಾಗಿ ಹೊಳೆಯುತ್ತವೆ. ಇವರು ಇತ್ತೀಚೆಗೆ ನೂರನೆಯದಾಗಿ ಬ್ಲಾಗಿಸಿದ ಕವಿತೆ ಜಂಗಮ ಬಿಂಬಗಳು. ಶ್ರೀನಿಧಿಯ ಚಳಿಯ ಬೆಳಗು ಕವಿತೆಯ ಕೆಲಸಾಲುಗಳು ನಿಮ್ಮ ಮೊದಲ ಓದಿಗಾಗಿ..
ಒಂದೊಂದೆ ಹೂ ಹೆಕ್ಕಿ, ಬಿದಿರ ಬುಟ್ಟಿಗೆ ಹಾಕಿ
ಮತ್ತೆ ನೋಡಿದನವನು ಮಂಜದಾರಿ.
ಮೆಲು ಗೆಜ್ಜೆಯಾದನಿಯು, ಬೇಲಿದಾಟುತಲಿರಲು
ಬುಟ್ಟಿಯಾ ಹೂ ಮತ್ತೆ, ಭೂಮಿಪಾಲು….
ಬನ್ನಿ ಈ ಭಾವಜೀವಿಯ ಅಕ್ಷರಧಾರೆಯಲ್ಲಿ ತೋಯಲಿಕ್ಕೆ.
ದಿಗಂತ (೨೫ -೧-೦೮)
ಇವತ್ತಿನ ಬ್ಲಾಗ್ ಬೊಗಸೆಗೆ ದಕ್ಕಿರುವುದು ದಿನೇಶರ ದಿಗಂತ. ಸರಳ ಭಾವಪೂರ್ಣ ಕವಿತೆಗಳು ಮುಗಿಲು ತುಂಬಿ ನಿಂತಿವೆ. ನೀಲ ದಿಗಂತವಿಡೀ ಹಬ್ಬಿರುವ ಬಗೆಬಗೆಯ ಭಾವಮುಗಿಲುಗಳ ಚಿತ್ತಾರ ಓದುವವರ ಮನಸ್ಸನ್ನು ಭಾವೋತ್ಕರ್ಷತೆಯಲ್ಲಿ ತೋಯಿಸುತ್ತದೆ. ಬೆಳಗಿನ ಬೆಳಕು, ರಾತ್ರಿಯ ಕತ್ತಲೆ ಒಂದಿನ್ನೊಂದಡನೆ ಅನುಸಂಧಾನ ಮಾಡಿಕೊಂಡಂತೆ ಬರೆದಿರುವ ಈ ಸಾಲುಗಳು ಹೂಬನದಲ್ಲಿ ಬಿರಿದ ಬಗೆಬಗೆಯ ಹೂಗಳಂತಿವೆ.
ಛಾಯಾಗ್ರಹಣವನ್ನು ಇಷ್ಟಪಡುವ ಲೇಖಕರ ಕವಿತೆಗಳಲ್ಲಿ ಹಲವು ಭಾವಾನುವಾದಗಳಿವೆ. ಇನ್ನು ಕೆಲವು ಜೀವನಾನುಭವಗಳ ಸಿರಿಮೊಗ್ಗೆ. ಆಕಾರವಿಲ್ಲದ್ದು ಕವಿತೆಯಲ್ಲಿ ಅನುಭವಿಸಿದ ಮತ್ತು ಕಳೆದುಹೋದ ಪ್ರೀತಿಯ ನೆನವರಿಕೆಯಿದ್ದರೆ, ಉಳಿದ ಕವಿತೆಗಳು ಪ್ರೇಮಪೂರ್ಣ ಮಂದಾರಗಳೇ. ಕಳೆದ ಕಾಲ, ನೆನಪು, ಪ್ರಕೃತಿ, ಚೆಲುವುಗಳ ಹಲ ನೋಟಗಳ ಹೊಸದಿಗಂತ. ವಿಧವೆ ಹಕ್ಕಿಯ ಹಾಡು, ಸಿಗರೇಟು, ನಿರೀಕ್ಷೆ, ಹುಡುಕಾಟ.. ಎಲ್ಲ ಕವಿತೆಗಳಲ್ಲೂ ಹೊಸನಿಲುವು ನೋಟ. ಅಪ್ಯಾಯಮಾನವಾಗಿದೆ.
ಒಂದು ಕವಿತೆಯ ಕೆಲ ಸಾಲು ಇಲ್ಲಿವೆ..
ಸಿಗರೇಟು
ತುದಿಯಲ್ಲಿ ತೂಗಾಡುವ ಬೂದಿ
ಉದುರಿಬಿಳಲಿರುವ ಜೀವದ ಪ್ರತೀಕ
ಬೂದಿಯಡಿಯ ಬೆಂಕಿ
ಮನಸು ಹೊತ್ತ ಕನಸು…
ಬನ್ನಿ ದಿಗಂತ ವೀಕ್ಷಣೆಗೆ..
ಅಂತರಂಗ (೨೪ -೧-೦೮)
ಇವತ್ತಿನ ಬ್ಲಾಗ್ ಬೊಗಸೆಯ ಹೂವು ಸತೀಶರ ಅಂತರಂಗ. ಮುನ್ನೂರು ಬ್ಲಾಗ್ ಲೇಖನಗಳನ್ನೊಳಗೊಂಡ ಸಮೃದ್ಧ ಬ್ಲಾಗಿನಲ್ಲಿ ಇವರು ಬದುಕಿನಲ್ಲಿ ಆದ, ಆಗಬಹುದಾದ ಹಲವಾರು ವಿಷಯಗಳ ಮೇಲೆ ಇಲ್ಲಿ ಸತ್ಯಕ್ಕೆ ಎಷ್ಟು ಸಾಧ್ಯವೋ ಅಷ್ಟು ಹತ್ತಿರದಲ್ಲಿ ನಿಂತು ಬರೆದಿದ್ದಾರೆ.
ಅಮೆರಿಕದ ನೆಲದಲ್ಲಿ ದುಡಿಯುತ್ತಿರುವ ಲೇಖಕರ ಅಪ್ಪಟ ಭಾರತೀಯ ಮನಸ್ಸು ಅಲ್ಲಿಯ ಮತ್ತು ಇಲ್ಲಿಯ ವಿಷಯ ವಿಶೇಷಗಳನ್ನು ಸಮನ್ವಯಗೊಳಿಸಿ ಬರೆದಿಡುತ್ತದೆ. ರಸ್ತೆಯ ಮಟ್ಟಗಾರರಿಂದ ಸ್ಫೂರ್ತಗೊಂಡ ಬರಹ ಬದುಕು ಮತ್ತು ವೇಗದ ಚಿಂತನಾರ್ಹ ಲೇಖನವಾಗಿ ಪಡಿಮೂಡುತ್ತದೆ. ತಂತ್ರಜ್ಞಾನ, ಹಳೆಯ ಸಿನಿಮಾಗಳು, ಮಧುರಗೀತೆಗಳು, ಬೆಂಗಳೂರು, ಅವರಿರುವ ದೇಶದ ಮಾಗಿ ಮತ್ತು ವಸಂತ, ಪರಿಸರ, ಸಾಮಾಜಿಕ ಕಳಕಳಿ, ರಾಜಕೀಯ ವಿಡಂಬನೆ, ಸದ್ಯದ ಗ್ಲೋಬಲ್ ಕನ್ ಸ್ಯೂಮರಿಸಮ್ಮು ಹೀಗೆ ಎಲ್ಲ ವಿಷಯಗಳನ್ನೂ ಕೂಲಂಕಷವಾಗಿ ವಸ್ತುನಿಷ್ಠವಾಗಿ ಬರೆದಿಡುವ ಅಂತರಂಗಕ್ಕೊಮ್ಮೆ ಭೇಟಿ ನೀಡಿ.
ಇಲ್ಲಿ ಬರೆದ ತುಣುಕುಗಳು ನಿಮ್ಮ ಮನಸ್ಸನ್ನು ತಟ್ಟಬಹುದು ಎಂಬುದು ಲೇಖಕರ ನಮ್ರ ಆಶಯ. ನಿಮ್ಮ ಸಮಯವನ್ನು ಇಲ್ಲಿಯ ವಸ್ತುಗಳು ಹಾಳುಮಾಡಲಾರವು ಎಂಬ ನಂಬಿಕೆಯೊಂದಿಗೆ ನಿಮ್ಮ ಪ್ರತಿಕ್ರಿಯೆಗಳಿಗೆ ಕಾಯುತ್ತಾ ಅಂತರಂಗದ ಬ್ಲಾಗಿಲು ತೆರೆದಿಟ್ಟಿದ್ದಾರೆ.
ವಿಕಾಸವಾದ (೨೩-೧-೦೮)
ವಾದ ವಿವಾದಗಳ ನಡುವೆ ಯಾವುದೇ ಗೊಂದಲ ಹುಟ್ಟಿಸದೆ ವಾದಿಸಲು ಮುಕ್ತ ಅವಕಾಶ ಕಲ್ಪಿಸಿರುವ ವಿಕಾಸವಾದ ದಿನದ ಬ್ಲಾಗುಚ್ಚದಲ್ಲಿದೆ. ವಿಕಾಸ ಎನ್ನುವ ಹೆಸರಿನ ಮುಂದೆ ವಾದವನ್ನು ಜೋಡಿಸಿ ಹೆಗಡೆಯವರು ಮಂಡಿಸುವ ಚರ್ಚೆಗಳು ಬಲು ಸೊಗಸು. ವಿಷಯಗಳು ಒಂದನ್ನೊಂದು ಮೀರಿಸುವಂತಿದ್ದರೆ, ಕೆಲವೊಮ್ಮೆ, ನವಿರು, ಕೆಲವೊಮ್ಮೆ ಗಂಭೀರ ಎನಿಸುವ ವಾದಗಳು ಒಗರು ಸಿಹಿಯ ಸಮ್ಮಿಶ್ರಣದಲ್ಲಿ ವಾಚಕನ ಚರ್ಚೆಗೆ ಬಿಸಿಯೇರಿಸುತ್ತದೆ.
ವಿಕಾಸವಾದದೊಳಗಿನ ‘ವಾದ’ಗಳ ರಸಸ್ವಾದ ಅನುಭವಿಸುವುದೇ ಒಂದು ಬಗೆಯಾದರೆ, ವಾದದ ನಂತರ ಮೂಡುವ ಒಮ್ಮತವಲ್ಲದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಹೊಸದೊಂದು ಚರ್ಚೆಗೆ ಪಂಕ್ತಿ ಹಾಕುವುದು ಬ್ಲಾಗಿನ ವಿಶೇಷ. ಚಹಾದ ಜೊತೆ ಚುಡಾದ ಸವಿಯಂತೆ ಕಮೆಂಟುಗಳಿವೆ. ಅಮೀರ್ ಖಾನ್ ನಿರ್ದೇಶನ ತಾರೆ ಜಮೀನ್ ಪರ್ ಎನ್ನುವ ಸಿನೆಮಾ ಇತರ ಸಿನೆಮಾಗಳಿಗಿಂತ ಹೇಗೆ ಭಿನ್ನಾಗಿದೆ ಎನ್ನುವುದು ವಿಕಾಸದ ಹೊಸ ವಾದ. ಭುವಿಯಲ್ಲಿನ ನಕ್ಷತ್ರಗಳು ಎನ್ನುವ ಈ ಚಿತ್ರದ ಕನ್ನಡ ಶೀರ್ಷಿಕೆಯನ್ನು ಯಾರು ಬೇಕಾದರೂ ಯಾವುದೇ ವಾದವಿಲ್ಲದೆ ಒಪ್ಪಿಕೊಳ್ಳಬಹುದು ಎನ್ನುವಷ್ಟು ಚೆನ್ನಾಗಿದೆ. ಪಾಪಿಯಾದವನನ್ನು ಯೇಸು ಸ್ವಾಮಿ ಕಾಪಾಡುತ್ತಾನೆ ಎನ್ನುವ ವಾದ ಆಸ್ತಿಕರಿಗೆ ಸ್ವಲ್ಪ ಗೊಂದಲ ಮೂಡಿಸಿದರೆ, ನಾಸ್ತಿಕರಿಗೆ ನಗು ತರಿಸುತ್ತದೆ. ಇವೆರಡರ ನಡುವಿನ ಆನಾಸ್ತಿಕರು ಮುಕ್ತವಾಗಿ ವಾದ ಮಂಡಿಸಿದ್ದಾರೆ.
ಚಿರಂಜೀವಿ ಮಗಳು ಓಡಿ ಹೋದ್ರೆ ನಮಗೇನು? ಯಾರನ್ನೂ ಜೀವನಪೂರ್ತಿ ಪ್ರೀತಿ ಮಾಡೋಕ್ಕಾಗಲ್ವಾ? ಭಾರತ ಆರ್ಥಿಕವಾಗಿ ಬಲಾಢ್ಯವಾಗುವುದು ಇವರಿಗೇಕೆ ಬೇಡ? ಎನ್ನುವುದೆಲ್ಲಾ ಹಳೆಯ ವಾದಗಳಾದರೂ, ಹೊಸ ವಿಷಯಗಳ ಕುರಿತು ವಾದ ಮಂಡಿಸಲು ವಿಕಾಸವಾದ ನಿಮ್ಮನ್ನು ಆಹ್ವಾನಿಸುತ್ತದೆ. ಇದನ್ನು ಓದಿದ ನಂತರ ನಿಮಗೆ ವಾದ ಮಾಡಬೇಕೆನಿಸಿದರೆ ವಿಕಾಸವಾದದ ಬಾ(ಬ್ಲಾ)ಗಿಲು ತೆರೆದಿದೆ ಎನ್ನುತ್ತಾರೆ ಹೆಗಡೆ.
ಬೊಗಳೆ-ರಗಳೆ (೨೨-೧-೦೮)
ಈ ದಿನದ ಬ್ಲಾಗ್ ಬೊಗಸೆಯ ಧಾರೆ ಬೊಗಳೆ-ರಗಳೆ. ಅಸತ್ಯಾನ್ವೇಷೀ ಲೇಖಕರ ವಿಡಂಬನ ಸಮಾರಾಧನೆ. ಇಲ್ಲಿಯ ಅರಾಜಕೀಯ ಬ್ಯೂರೋದಿಂದ ದಿನದಿನದ ಸುದ್ದಿಗಳು ಯಾವುದೇ ಪಕ್ಷಪಾತವಿಲ್ಲದೆ ಓದುಗರ ಮುಂದೆ ನಿಲ್ಲುತ್ತವೆ. ನಿತ್ಯದ ರಾಜಕಾರಣ, ಒಂದು ನಾಗರಿಕ ಸಮಾಜದ ತಲ್ಲಣ, ಬಹುಮುಖೀ ಸಂಸ್ಕೃತಿಯ ಕನ್ನಡ ಜನಮನ ಇವನ್ನು ನವಿರು ಹಾಸ್ಯದೊಂದಿಗೆ ವಿಶ್ಲೇಷಿಸುವ ಇವರ ಚಾಕಚಕ್ಯತೆಯೇ ಒಂದು ಸೊಗಸು. ಹಾಸ್ಯದ ತಿರುಳಿಟ್ಟು ಹುಳಿಹುಳಿಯಾಗಿ ಬಡಿಸುವ ಈ ರಗಳೆ ಓದಲು ಸ್ವಲ್ಪ ಕೂಡಾ ರಗಳೆಯಿಲ್ಲ. ಮೊದಲ ಸಾಲಿಗೆ ತುಟಿಯಂಚಲ್ಲಿ ಅರಳುವ ಕಿರುನಗು ಕೊನೆಯ ಸಾಲಿಗೆ ಬರುವಾಗ ಮುಖಮಂಡಲವಿಡೀ ಹೊಮ್ಮಿರುತ್ತದೆ. ಮೊನಚು, ಸೂಕ್ಷ್ಮತ್ವ ಮತ್ತು ಯಾವುದೇ ಪೂರ್ವಾಗ್ರಹಗಳಿಲ್ಲದ ಇವರ ಚಿನಕುರುಳಿಗಳು ಮುದ ನೀಡುತ್ತವೆ. ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತವೆ.
ಬೊಗಳೆಗೂ ಭಾರ-ತಾ ರತ್ನ ಆದೇಶ ಅನ್ನುವುದು ಇವರ ಹೊಸ ಸುದ್ದಿ. - ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಹಾದಿ ಬೀದಿಯಲ್ಲಿರುವವರೆಲ್ಲರ ಹೆಸರು ಕೇಳಿಬರುತ್ತಿರುವುದರಿಂದ ತೀವ್ರ ಕಂಗೆಟ್ಟ ಬೊಗಳೆ ರಗಳೆ ಬ್ಯುರೋ, ತಲೆ ತಪ್ಪಿಸಿಕೊಂಡಿತ್ತು. ಆದರೂ “ಭಾರ-ತಾ ರತ್ನ” ಎಂದು ಆದೇಶಿಸುವ ಹಯಗ್ರೀವಾಜ್ಞೆ ಈಗಾಗಲೇ ಹೊರಬಿದ್ದಿರುವುದಾಗಿ ತಿಳಿದುಬಂದಿದೆ. ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಅಡ್ಡದಂಧೆಕೋರರಿಗೆ, ದುಡ್ಡಿನಲ್ಲೇ ತೇಲಾಡುತ್ತಿರುವವರಿಗೆಲ್ಲರಿಗೂ ಭಾರ-ತಾ ರತ್ನ ಪ್ರಶಸ್ತಿ ಹೊರಬೀಳುವುದು ಖಚಿತವಾಗಿದೆ.- ಇಷ್ಟು ಸಾಕಲ್ಲ ರುಚಿ ನೋಡಲು.. ಮತ್ತಿನ್ನೇನು ನೋಡ್ತಾ ಇದ್ದೀರಿ ಕ್ಲಿಕ್ ಮಾಡಿ ಅನ್ವೇಷಣೆ ನಡೆಯಲಿ..
ಚಿತ್ರದುರ್ಗ (೨೧-೧-೦೮)
ಅಮೆರಿಕನ್ನಡತಿ ಮಾಲಾರಾವ್ ಅವರ ಚಿತ್ರದುರ್ಗ ಇಂದು ನಮ್ಮ ಬ್ಲಾಗಿನ ಬೊಗಸೆಯಲ್ಲಿ. ಇಂಗ್ಲಿಷ್ ಸಾಹಿತ್ಯದ ಪ್ರೌಢ ಅಧ್ಯಯನ ಮತ್ತು ಅಧ್ಯಾಪನದ ಹಿನ್ನೆಲೆ, ಕಂಡ ಪುಟ್ಟ ನೋಟವನ್ನು ಖುಷಿಯನ್ನು ಕ್ಯಾಮೆರಾದಲ್ಲಿ ಕಂಡರಿಸುವ ಕಣ್ಣು, ಕ್ಯಾಮೆರಾಕ್ಕೆ ಸಾಥ್ ನೀಡುವ ಸರಳ ಲಲಿತ ಹನಿಗಳು, ಚೆಲುವಾದ ಇಂಗ್ಲಿಷ್ ಕವಿತೆಗಳ ಉಲ್ಲೇಖ ಮತ್ತು ಕನ್ನಡದ ಒಂದು ಪುಟ್ಟ ವ್ಯಾಖ್ಯಾನ ಫೋಟೋಕ್ಕೆ ಫ್ರೇಮಿನಂತೆ ಕಂಗೊಳಿಸುತ್ತದೆ. ಇಷ್ಟೇ ಅಲ್ಲದೆ ತಮ್ಮ ಮುದ್ದು ಮಗ ಅಮರ್ತ್ಯನಿಗೇಂತ ಒಂದು ಸ್ಪೆಷಲ್ ಬ್ಲಾಗು, ಅದರಲ್ಲಿ ಮುದ್ದು ಸೂಸುವ ಕಂದಮ್ಮಗಳ ಚಿತ್ರ, ಒಂದೊಂದು ಮುದ್ದಿಗೂ ಒಂದೊಂದು ಹಾಡು. ಪುಟ್ಟ ನಂದಗೋಕುಲವೇ ಅದು. ಇಷ್ಟೆಲ್ಲ ಬರೆದವರು ಕತೆ ಬರೆಯೋಲ್ಲವಾ ಅಂತ ಕೇಳ್ಬೇಡಿ.. ಅದಕ್ಕೆ ಮತ್ತೊಂದು ಕೊಂಡಿ ಕಥಾಕಾನನ - ಸರಳ ನೇರ ಚಿತ್ರಕ ನಿರೂಪಣೆಗಳ ಪುಟ್ಟ ಪುಟ್ಟ ಹನಿಗತೆಗಳು ದಟ್ಟ ಕಾನನದ ಹಸಿರು ತಂಪಿನ ಅನುಭವ ನೀಡುತ್ತವೆ.
ಕಾಡಿನ ಸಿಹಿ ಜೇನಿನ ಹನಿಯಂತಹ ಮಿನಿ ಕಥೆ ಜೊತೆಗೆ ಕಚಗುಳಿ ಇಡುವ ಹಾಸ್ಯವಿರುತ್ತೆ ಇಲ್ಲಿ ಅಂತ ಹೇಳಿಕೊಳ್ಳುವ ಕತೆಗಾರ್ತಿ, ಗೆಳೆಯರ ಮತ್ತು ಒದುಗರ ಪ್ರೋತ್ಸಾಹವನ್ನು ಅಕ್ಷರಕ್ಕಿಳಿಸಿರುವುದು ಹೀಗೆ..”ನಿನ್ನೆರಡು ಬ್ಲಾಗುಗಳು ಮಕಾಡೆ ಮಲಗಿರುವಾಗ ಇನ್ನೊಂದು ಹೊಸದು ಶುರು ಮಾಡುತ್ತೀಯಾ ಮಾಡು ಮಾಡು ನಾವೆಲ್ಲಾ ಬರುತ್ತೇವೆ ಎಂದು ಹುರಿದುಂಬಿಸುತ್ತಿರುವ ಮಿತ್ರರೆಲ್ಲರಿಗೂ, ಸದ್ದಿಲ್ಲದೇ ಬಂದು ಓದಿ ಆನಂದಿಸುವ ಕನ್ನಡ ಪ್ರೇಮಿಗಳಿಗೂ ಸ್ವಾಗತ” ಇನ್ವಿಟೇಷನ್ ಸಿಕ್ತಲ್ಲಾ ಇನ್ಯಾಕೆ ತಡ ಬನ್ನಿ. ಹೊಸ ಪೋಸ್ಟಿನಲ್ಲಿ ಶುಭ್ರ ಸ್ನಿಗ್ಧ ಲಿಲಿಯ ಫೋಟೋದೊಂದಿಗೆ ಬ್ಲೇಕ್‌ನ ಮಧುರ ಕವಿತೆಯ ಕಂಪು.
ಬುಕ್‌ಬಝಾರ್ (೧೯-೧-೦೮)
ಬುಕ್ ಬಝಾರ್ ಪುಸ್ತಕಗಳ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ನೀಡುವ ಆಕರ್ಷಕ ಬ್ಲಾಗ್. ಅಕ್ಷರ ಲೋಕದಲ್ಲಿ ನಡೆಯುವ ನೂತನ ವಿದ್ಯಮಾನಗ೯ಳ ಕಲರವ ಇಲ್ಲಿವೆ. ಬಿಡುಗಡೆಗೊಂಡ ಹೊಸ ಪುಸ್ತಕ, ಲೇಖಕರ ಪರಿಚಯ, ಕಥಾವಸ್ತು, ಮುಖಪುಟ ವಿನ್ಯಾಸ ಮತ್ತಿತರ ವಿಷಯಗಳ ಕುರಿತು ಚೊಕ್ಕ ಚಿಕ್ಕ ಮಾಹಿತಿ. ಅಂತರ್ಜಾಲಿಗಳು ಮತ್ತು ಲೇಖಕರ ನಡುವೆ ಪುಟ್ಟ ಸಾಹಿತ್ಯ ಸೇತುವೆ.
ಷೇಕ್ಸ್ ಪಿಯರನಿಗೆ ಪ್ರಶ್ನೆ ಕೇಳಿದ ಜಿ.ಎನ್ ಮೋಹನ್, ಉಫೀಟ್ ಬಡಿಸಿದ ಚೇತನಾ, ದೇಸಿನಗುವಿನ ಎಂ.ಎಸ್ ಮೂರ್ತಿ ಇವರೆಲ್ಲಾ ಬುಕ್‌ಬಝಾರಿನ ಪ್ರೆಷ್ ಪೇಜಸ್‌ನಲ್ಲಿದ್ದಾರೆ. ಸಂತೆಯ ಬಯಲಿನಲ್ಲಿ ಅಮೃತ ಗರುಡ, ಕಲವರ, ಕವಿಗೆ ಕನ್ನಡಿ, ಯಾರಿಟ್ಟರೀ ಚುಕ್ಕಿ, ರೈಟರ್ಸ್ ಚಾಯ್ಸ್ ಇವೆ. ಸೋಪಿನ ಗುಳ್ಳೆಯೊಂದು ಒಡೆಯದೆ ತೇಲುತ್ತಿದೆ. ಅಪಾರ ಅವರ ಮುಖಪುಟ ವಿನ್ಯಾಸಗಳು ಹಾಗೂ ಕೆಲವು ಅಪರೂಪದ ಪುಸ್ತಕಗಳ ಮುನ್ನಡಿಗಳು ಬಝಾರಿನ ಈ ಬಾರಿಯ ಸ್ಫೆಶಲ್.
ಹೊಸ ಹೊಸ ಪುಸ್ತಕಗಳ ಸೇರ್ಪಡೆಯಿಂದ ಸಂತೆಯಲ್ಲಿ ಸಡಗರ ಹೆಚ್ಚುತ್ತಿದೆ. ಕಂಪ್ಯೂಟರ್ ಪರದೆಗೆ ಕಣ್ಣುನೆಟ್ಟು ಕೂತರೆ ಒಂದಿಷ್ಟು ಪುಸ್ತಕಗಳ ಒಳಹೊಕ್ಕು ಬರಬಹದು. ಪುಸ್ತಕ ಕೊಳ್ಳುವ ಚಿಂತೆಯಲ್ಲ. ಪುಸ್ತಕದ ಈ ಸಂತೆಯಲ್ಲಿ ಯಾರೂ ಮುನಿಸಿಕೊಳ್ಳುವುದೂ ಇಲ್ಲ.
ಕುಂಚಪ್ರಪಂಚ (೧೮-೧-೦೮)
ಕುಂಚದಿಂದ ತಮ್ಮ ಕಲಾ ಪ್ರಪಂಚವನ್ನು ತೆರೆದಿಡುತ್ತಿರುವ ಪ್ರಮೋದರ ಕುಂಚಳಕ ಈ ದಿನ ಬ್ಲಾಗುಚ್ಛದ ಅರಳುಮೊಗ್ಗು. ಜಲವರ್ಣ, ತೈಲವರ್ಣ, ಸ್ಕೆಚಸ್ ಮತ್ತು ಯಾವುದೂ ಅಲ್ಲದ ಯಾವುದೂ ಆಗಬಹುದಾದ ಡಿಜಿಟಲ್ ಬಣ್ಣ ಎಲ್ಲ ಕಲಸಿ ಹಿತವಾಗಿ ತಿದ್ದಿ ತೀಡಿದ ಕುಸುರಿ ಕೆಲಸ.
ಇತ್ತೀಚೆಗಷ್ಟೆ ನಡೆದ ರೈನ್ ಬೋ - ೧೦ ಕಲಾಪ್ರದರ್ಶನದಲ್ಲಿ ಅನಾವರಣಗೊಂಡ ಇವರ ಚಿತ್ರಗಳು ನೆಟ್ಟ ಕಣ್ಣು ನೆಟ್ಟಂತೆಯೇ ಇರುವಂತೆ, ಮುಂದೆ ಕಾಣುತ್ತಿರುವ ಇದು ಇದಲ್ಲ ಇನ್ನೇನೋ ಎಂಬಂತೆ, ಎಲ್ಲೋ ಮರೆತುಹೋಗಿದ್ದ ಹಳೆಯ ರಾಗದುಲಿ ಮತ್ತೆ ಇಂಪಾಗಿ ನೆನಪಾದಂತೆ, ಕಣ್ಣ ಹನಿಯ ಮುತ್ತುದುರುವ ದುಗುಡದಂತೆ, ಅಲ್ಲಿ ಹಿಂದಕ್ಕೆಲ್ಲೋ ಮಡಚಿಟ್ಟ ನೋವಿನ ಚಾಪೆ ಅಚಾನಕ್ಕಾಗಿ ಬಿಚ್ಚಿಕೊಂಡಂತೆ.. ಇಲ್ಲ ಈ ಮಾತೆಲ್ಲ ಏಕೆ. ನೋಟವೊಂದೆ ಸಾಕು.
ಇವರ ಚಿತ್ರಗಳು ಒಂದೊಂದೂ ಆಪ್ತವಾಗುತ್ತವೆ. ನೋಟವೊಂದೇ ಸಾಕು - ಕಣ್ಣ ಮುಂದಿರುವ ಭಾವಕ್ಕೂ ಮನದ ಒಳಗಿರುವ ಭಾವಕ್ಕೂ ಸೇತುವೆಯಾಗಲಿಕ್ಕೆ. ಒಲವಿನ ಒಡವೆ, ಭಾವ ಬಣ್ಣ, ಸೂತ್ರವಿರದ ಪಾತ್ರ, ಮುಗ್ಧ ಹುಡುಗಿ.. ಎಲ್ಲ ಸೇರಿ ಸಂಜೆ ಆಕಾಶದ ಕೆಂಪು ನೀಲಿ.. ಕನ್ನಡದ ಶಕ್ತ ಯುವ ಲೇಖಕರ ಬರಹಗಳಿಗೆ ಇವರು ಬರೆದಿರುವ ಭಾವಪೂರ್ಣ ಚಿತ್ರಗಳು ನಮ್ಮನ್ನ ಬೇರೆಯದೇ ಜಗತ್ತಿಗೊಯ್ಯುತ್ತವೀ. ಬನ್ನಿ ಕುಂಚಪ್ರಪಂಚದ ಚಿತ್ರಯಾನಕ್ಕೆ.
ನೆನಪು ಕನಸುಗಳ ನಡುವೆ (೧೭-೧-೦೮)
ನೆನಪನ್ನೆಲ್ಲಾ ಉಳಿಸಿಕೊಳ್ಳುತ್ತಾ, ಕನಸಿನಲ್ಲಿಯೂ ನೆನಪನ್ನೇ ಗಳಿಸುತ್ತಲಿರುವ ಅಂತರಕ್ಕೆ “ನೆನಪು ಕನಸುಗಳ ನಡುವೆ” ಭಾವಸೇತುವೆ ನೇಯ್ದ ಶಾಂತಲಾ ಭಂಡಿಯವರ ಬ್ಲಾಗಿನಲ್ಲಿ ಕಣ್ ನೆಟ್ಟರೆ ಸೀದಾ ಭಾವಯಾನದಲ್ಲೇ ತೇಲುತ್ತೇವೆ.
ಮೂಡಲ ಮನೆಯ ಮುತ್ತಿನ ನೀರಿನೊಂದಿಗೆ ಎಂದಿನಂತೆ ಬೆಳಕಾಗುತ್ತದೆ, ಆದರೂ ಹೊಸ ದಿನಕೊಂದು ಹೊಸ ರೀತಿ, ಹೊಸ ವೈಶಿಷ್ಟ್ಯ ಇರುವಂತೆ…ಒಂದು ಬೆಳಗಿಗೆ ಮಳೆ ಮುತ್ತಾದರೆ ಇನ್ನೊಂದು ಬೆಳಗು ಇಬ್ಬನಿಯ ಮತ್ತೇ ಇದು ಎನುವಂತೆ. ಮಗದೊಂದು ಕತ್ತಲು ಕಳೆವ ಬಿಸಿಲ ಹೊಳಪಿನ ವಜ್ರದ ಹಾಗೆ. ಹೀಗೆ ಅವರವರ ಭಾವಕ್ಕೆ ಬದುಕಿಗೆ ತಕ್ಕ ಬೆಳಗು ಬೆಳಕ ಮೂಡಿಸುವ ಕಾಯಕ ಮರೆಯದು. ಭಾವಗಳು ಬೇರೆಯಾದರೂ ಬೆಳಗು ಮಾತ್ರ ಅದೇ ಆಗಿರುತ್ತದೆ..ಅಂತ ಮನಸಿನ ಸಂಪುಟದ ಒಳಜಗಲಿಗೇ ಕರೆದೊಯ್ಯುವ ಕನಸಿನ ಒಡತಿ ಬೆಳಕಿನ ಹಬ್ಬದಲ್ಲಿ ಬೆಳದಿಂಗಳು ಚೆಲ್ಲುತ್ತಾರೆ.
ನಕ್ಕುಬಿಡು ಒಮ್ಮೆ ಕತೆಯೋ, ಸಿಂಡರೆಲಾಳ ನೆನಪಿಸಿ ಬರೆದ ಕವನದ ಹೂಮೊಗ್ಗುಗಳೋ, ಪ್ರೀತಿ ಹೊತ್ತು ಬರುವವನ ಕನವರಿಕೆಗಳೋ, ಮಿಂದು ಬಂದಾಗ ಕಣ್ಣ ಕೊಳದಲ್ಲಿ.. ತಲೆಬರಹಗಳನ್ನೇ ಸಾಲಾಗಿ ಬರೆದರೆ ಅವೇ ಕವಿತೆಗಳಾಗಿ ಹೂಚೆಲ್ಲಿ ನಗುತ್ತವೆ. ಮಲೆನಾಡಿನ ಹಿನ್ನೆಲೆ, ನಮ್ರತೆ, ಅಚ್ಚರಿ, ಬದುಕಿನ ಸಿಹಿ ಕಹಿ ಒಗರುಗಳೆಲ್ಲದರ ರಸಪಾಕ ಇಲ್ಲಿದೆ. ‘ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ’ ಎಂದು ಕೆ.ಎಸ್.ನ ಅವರನ್ನು ನೆನಪಿಸಿಕೊಂಡು ಉಲಿಯುವ ಭಾವೋದ್ದಿಪ್ತ ಬರಹಗಳನ್ನ ಅವುಗಳೊಳಗಿನ ಜೀವನಪ್ರೀತಿಯನ್ನ ಸವಿಯಿರೆಲ್ಲ.
ಮಲೆಯ ಮಾತು (೧೬-೧-೦೮)
ಇಂದಿನ ಮಲೆಯ ಮಾತಿನಲ್ಲಿ ಶಶಿ ಸಂಪಳ್ಳಿ ಅನಾಮಿಕ ಚೆಲುವೆಗೆ ಕಾವ್ಯದ ಕುಂಚಿಗೆ ಕಟ್ಟಿದ್ದಾರೆ. ಸವೆಯದ ಹಾದಿಯಲ್ಲಿ ಆಕೆಯ ಒಡನಾಟ ಜುಳು ಜುಳು ಝರಿಯನ್ನು ನೆನಪಿಸುವಂತದ್ದು, ಕಗ್ಗತ್ತಲ ರಾತ್ರಿಯಲ್ಲಿ ಮಿಂಚುವ ಒಂಟಿ ನಕ್ಷತ್ರದ ಹೊಳಪು ಅವಳದು ಎಂದಿದ್ದಾರೆ. ನವಿರಾಗಿ ಸಾಗಿರುವ ಕವಿತೆಯ ಕೊನೆಯ ಸಾಲುಗಳಲ್ಲಿ ವಿಷಾದವಿದೆ. ಲೂಸಿಯಾನ ಎಂಬ ಈ ಅನಾಮಿಕ ಚೆಲುವೆ ಈಗಾಗಲೇ ಸಮಾಧಿಯಲ್ಲಿ ಚಿರ ನಿದ್ರೆಯಲ್ಲಿದ್ದಾಳೆ. ಆಕೆಯ ಹಂಬಲದಲ್ಲಿ ಈ ಕವಿತೆ ಮೂಡಿದೆ. ವರ್ಡ್ಸ್ ವರ್ತ್ ಕವಿಯ ಈ ಕವಿತೆಯನ್ನು ಶಶಿ ಕನ್ನಡಕ್ಕೆ ತಮ್ಮದೇ ಅನ್ನುವಷ್ಟು ಆತ್ಮೀಯವಾಗಿ ಅನುವಾದಿಸಿದ್ದಾರೆ.
ಸಂಪಳ್ಳಿಯವರ ಮುತ್ತುಗದ ಮರದಲ್ಲಿ ಈ ಬಾರಿ ತುಂಬಾ ಹೂವುಗಳು ಅರಳಿವೆ. ಅದರ ಪಕಳೆಗಳೆಲ್ಲಾ, ಜಗದ ಜಗುಲಿಯ ಮೇಲೆ ನವಿರಾಗಿ ಹರಡಿ ಕಂಪು ಬೀರಿವೆ. ತಪ್ಪುಗಳ ಪಹರೆಯಲ್ಲಿ ನಾನು ಭ್ರಮೆಯ ಕೂಸು ಎಂದಿದ್ದಾರೆ. ಸಖತ್ ಹಾಟ್ ಮಗಾ ಗಂಭೀರವಾಗಿದೆ. ಏರಿ ಬಂದ ಕಾಡು ಕೋಣ ಬ್ಲಾಗಿನಲ್ಲಿ ಬೆದರಿ ನಿಂತಿದೆ. ಕಾಡು ಕೋಣವನ್ನು ಊರು ಕೋಣವೆಂದು ತಿಳಿಯುವ ಹೊತ್ತಿಗೆ ಎಲ್ಲರೂ ಮರವೇರಿದ ಘಟನೆ ಸ್ವಾರಸ್ಯಕರವಾಗಿದೆ. ಬಸವನ ಹುಳು ಮತ್ತು ಕವಡೆಯಲ್ಲಿ ಕವಿಯ ಜಾಣ್ಮೆ ಅಡಗಿದೆ. ನೋಟಕ್ಕೆ ದಕ್ಕಿದ ಮಳೆ ಎದೆಯೊಳಗೆ ಬೆಚ್ಚಗೆ ಅಡಗಿದೆ.
ಮಲೆಯ ಮಾತಿನಲ್ಲಿ ನವಿರು ಭಾವುಕತೆಯಿದೆ. ಅಪರೂಪದ ಭಾವಾನುವಾದವಿದೆ. ಹೀಗೂ ಇರಬಹುದು ಎನ್ನುವ ಸಂಗತಿಗಳನ್ನು ಹೌದಲ್ಲವಾ ಎನ್ನುತ್ತಾ ಓದಿಕೊಳ್ಳಬಹುದು. ವರ್ಡ್ ವರ್ತ್‌ನ ಅನಾಮಿಕ ಚೆಲುವೆಯ ಸ್ನಿಗ್ಧ ಸೌಂದರ್ಯ ದಿನದ ಬ್ಲಾಗಿನ ಬೊಗಸೆಯಲ್ಲಿದೆ.
ಟೀನಾ ಝೋನ್ (೧೫-೧-೦೮)
ಕಥೆಯೊಂದರ ಮೂಲವನ್ನು ಅರಸುತ್ತಾ ಹೋಗುವುದು, ಹಾಗೆ ಅರಸುತ್ತಾ ಹೋಗುವಾಗ ದಾರಿಗುಂಟ ಒಂದಿಷ್ಟು ಉಪಕಥೆಗಳು ಸೇರಿಕೊಳ್ಳುವುದು, ಈ ಉಪ ಕಥೆಗಳ ಚಳ್ಳೆ ಪಿಳ್ಳೆ ಪಾತ್ರಗಳೆಲ್ಲಾ ಸೇರಿಕೊಂಡು ಮತ್ತೊಂದು ಬೃಹತ್ ಕಥೆ ಸೃಷ್ಠಿಯಾಗುವುದು ಇವೆಲ್ಲಾ ಕಥೆಯ ಮೂಲವನ್ನು ಹುಡುಕುವಾಗ ಎದುರಾಗುವ ಸಹಜ ಸಂಗತಿಗಳು. ನಮ್ಮ ರಾಮಾಯಣ, ಮಹಾಭಾರತ, ಅಡಗೂಲಜ್ಜಿ, ಯೂಸೋಪನ ನೀತಿ ಕಥೆಗಳಂತೆ, ಅಮೇರಿಕ, ಜಪಾನ್, ಜರ್ಮನಿಗಳ ಕಥೆಗಳು ಹೀಗಿರಬಹುದು? ಅವುಗಳಲ್ಲಿನ ಪಾತ್ರ ಹೀಗರಬಹುದು? ಕೌತಕವಲ್ಲವೇ?
ಕಂಪ್ಯೂಟರ್ ಕೋಣೆಯ ವಿಂಡೋದೊಳಗೆ ಕುಳಿತು ಟೀನಾ, ಕೆಲವು ವಿದೇಶಿ ಕಥೆಗಳ ಮೂಲವನ್ನು ಹುಡುಕಿದ್ದಾರೆ. ಆಂಗ್ಲ ಶಿಕ್ಷಣ ಪದ್ದತಿಯ ಮೂಲಕ ಭಾರತದ ಪಠ್ಯಪುಸ್ತಕಕ್ಕೆ ಸೇರ್ಪಡೆಗೊಂಡ ಒಂದಿಷ್ಟು ವಿದೇಶಿ ಕಥೆಗಳು ನಮ್ಮವು ಎನ್ನುವಷ್ಟು ಸೊಗಸಾಗಿವೆ. ‘ಸ್ನೋ ವ್ಹೈಟ್ ಮತ್ತು ಏಳು ಕುಳ್ಳರು’, ‘ಸಿಂಡರೆಲ್ಲಾ’, ‘ಕಪ್ಪೆ ರಾಜಕುಮಾರ’ ಮುಂತಾದ ಕಥೆಗಳನ್ನು ನೀವೂ ಕೇಳಿರಬಹುದು. ಆದರೆ ಇವುಗಳ ಮೂಲ ನಿಮಗೆ ಗೊತ್ತಾ ಎನ್ನುತ್ತಾ, ಜರ್ಮನಿ, ಇಂಗ್ಲೆಂಡಿನಲ್ಲೆಲ್ಲಾ ಸುತ್ತಿಸಿದ್ದಾರೆ.
ಪ್ರಪಂಚದಾದ್ಯಂತ ಸುಪ್ರಸಿದ್ಧವಾಗಿರುವ ‘ಫೇರಿ ಟೇಲ್’ಗಳ ಕಥೆಗಳ ಮೂಲವಿರುವುದು ಜರ್ಮನಿಯಲ್ಲಿ. ಜರ್ಮನಿಯ ಪ್ರಮುಖ ಕಥೆಗಾರರಾದ ಗ್ರಿಮ್ ಸಹೋದರರ ಕಥೆಯೇ ರೋಚಕ. ಜರ್ಮನಿಯ ಮಕ್ಕಳ ಜಾನಪದ ಕಥೆಗಳನ್ನು ಕಲೆಹಾಕಿದ್ದು ಈ ಜೋಡಿ. ಇವರು 1812ರಲ್ಲಿ ಸಂಪಾದಿಸಿದ ಎಂಭತ್ತಾರು ಕಥೆಗಳ ಪುಸ್ತಕ ‘ಕಿಂಡರ್ ಉಂಡ್-ಹಾಸ್ಮಾರ್ಶೆನ್’ ಬೈಬಲ್ಲಿನ ನಂತರ ಜರ್ಮನಿಯಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕ. ಟೀನಾ ಎಷ್ಟೊಂದು ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎನ್ನುತ್ತೀರಾ? ಹೇಳುತ್ತಾ ಹೋದರೆ ಅದೇ ಒಂದು ದೊಡ್ಡ ಕಥೆಯಾದೀತು. ಕಥೆ ಮುಗಿಯುವ ಮುನ್ನ ಬೊಗಸೆಯಲ್ಲಿರುವ ಅವರ ಬ್ಲಾಗ್ ಪ್ರವೇಶಿಸಿ.
ಹರಿವ ಲಹರಿ (೧೪-೧-೦೮)
ಇಂದಿನ ಹರಿವ ಲಹರಿಯಲ್ಲಿ ಜ್ಯೋತಿ ಸಂಕ್ರಾಂತಿಗೆ ಶುಭಕೋರಿದ್ದಾರೆ. ಸಂಕ್ರಾಂತಿಯ ಸಮಯದಲ್ಲಿ ಸಹಭಾಳ್ವೆಗೆ ಸಹನೆಯಿರಲಿ ಎನ್ನುವ ಸಾಲುಗಳ ಮೂಲಕ ಬ್ಲಾಗಿನಲ್ಲಿ ಎಳ್ಳು ಬೀರಿ, ಎಲ್ಲರಿಗೂ ಬೆಲ್ಲ ಹಂಚಿದ್ದಾರೆ. ಬೇವು ಬೆಲ್ಲವನ್ನು ಮೆಲ್ಲುತ್ತಾ, ಭಾವಲಹರಿಯ ಗೂಡು ಪ್ರವೇಶಿಸಿದರೆ, ಹೀಗೇ ಸಾಗಲಿ ಎನ್ನವ ಕವಿತೆ ಸೊಗಸಾಗಿದೆ.
ಸುಪ್ತದೀಪ್ತಿ ಎನ್ನುವ ಗುಪ್ತ ನಾಮದಿಂದ ತೊರೆ ಹರಿಯುವ ತೀರದಲ್ಲಿ ಕಾವ್ಯ ಕೃಷಿ ಕೈಗೊಂಡಿರುವ ಜಾಲಿಗರು, ಕಳೆದ ವರ್ಷ 57 ಪೋಸ್ಟಿಂಗ್‌ಗಳನ್ನು ಹಾಕಿ ಭರ್ಜರಿ ಬೆಳೆ ತೆಗೆದಿದ್ದಾರೆ. ಹಳೆಯ ಕವಿತೆಗಳಿಗೆ ಕಿಚ್ಚು ಹಾಯಿಸಿ, ಹೊಸ ಸಾಲುಗಳ ಕಿಚ್ಚು ಹಚ್ಚಿದ್ದಾರೆ. ಹೊಚ್ಚ ಹೊಸದು, ಆತ್ಮಚಿಂತನ, ಭಾವಗಾನ, ಭಾವಬಿಂದುಗಳು, ಕಥನ ಕಾರಣ ಮತ್ತಿತರ ಗೂಡುಗಳಲ್ಲಿ ಈ ಕವಿತೆಗಳು ಬೆಚ್ಚಗೆ ಮುದುಡಿ, ಸಂಕ್ರಾತಿಯ ಚಳಿಯಲ್ಲಿಯೂ ಪಲ್ಲವಿ ಹಾಡುತ್ತಿವೆ.
ಸಂಕ್ರಾತಿ ಬದಲಾವಣೆಯ ಸಂಕೇತ. ಬದಲಾವಣೆ ಒಳ್ಳೆಯದನ್ನೇ ತರುತ್ತದೆ. ಎನ್ನುವ ಅವರ ಬ್ಲಾಗಿನ ಬೊಗಸೆಯಲ್ಲಿ ಬೇವು ಬೆಲ್ಲದ ಸಿಹಿಯಿದೆ.
ತೊದಲು ಮಾತು ( ೧೨-೧-೦೮)
ತಮ್ಮ ಹದಿನೇಳನೆ ವಯಸ್ಸಿನಲ್ಲಿ ಯಶವಂತ ಚಿತ್ತಾಲರ ಕತೆಯಾದಳು ಹುಡುಗಿ ಕಥೆಯನ್ನು ಒಂದೇ ಉಸುರಿಗೆ ಓದಿ, ನಿನ್ನೆ ಮೊನ್ನೆ ಅದನ್ನು ತಮ್ಮ ಬ್ಲಾಗಿನಲ್ಲಿ ಹೇಳಿಕೊಂಡು ನಿಟ್ಟುಸಿರುಬಿಟ್ಟ ಕೇಶವ ಕುಲಕರ್ಣಿ ಇಂಗ್ಲೆಂಡಿನಲ್ಲಿರುವ ಕನ್ನಡ ಬ್ಲಾಗಿಸ್ಟ್. ತೊದಲು ಮಾತು ಅವರ ಬ್ಲಾಗಿನ ಹೆಸರು. ತೊದಲು ಮಾತಲ್ಲೇ ಹಲವು ಗಂಭೀರ ವಿಷಯಗಳ ಬಗ್ಗೆ ಸುಂಸುಮ್ನೆ ಬರೆಯುವುದು ವಿಶೇಷ.
“ನೀಲು” ಕವಿತೆಗಳಿಗೆ ತೊಡಿಸಿರುವ ಛಾಯಾಚಿತ್ರಗಳು ಸೊಗಸಾಗಿವೆ. ಚಿತ್ರ ಪ್ರಿಯರಿಗೆ ನಾಲ್ಕು ವಿಮರ್ಶೆಗಳಿವೆ. ಕವನದ ಅವಲೋಕನದಲ್ಲಿ ಬೇಂದ್ರೆ ಅಡಿಗರಿದ್ದಾರೆ. ಸೌದಿ ಅರೇಬಿಯಾದ ಚಿತ್ರಗಳು ಕ್ಯಾಮರಾ ಕಣ್ಣಿನಲ್ಲಿ ಉಳಿದಿವೆ. ಉತ್ತರ ಕರ್ನಾಟಕ ಭಾಷಾ ವೈವಿಧ್ಯದ ಶಬ್ದಕೋಶವಿದೆ. ಇನ್ನೇನಿದೆ ಎನ್ನುವವರಿಗೆ ಕನ್ನಡ ಬ್ಲಾಗಿಸ್ಟ್‌ಗಳ ಕೊಂಡಿಗಳಿವೆ.
ಕ್ರಿಸ್‌ಮಸ್ ಮತ್ತು ರಂಜಾನ್, ವಯಸ್ಸು ಮತ್ತು ಮನಸ್ಸಿನ ಕುರಿತು ಅವರು ಹೊಸ ವರ್ಷದಲ್ಲಿ ಮಾತಾಡಿದ್ದಾರೆ. ಮಾತಾಡ್ ಮಾತಾಡ್ ಮಲ್ಲಿಗೆ, ಹೀಗೊಂದು ಪತ್ರ, ಶಕುಂತಲಾ, ಎಸ್‌ಮ್ಮೆಸ್ ಕವಿತೆ, ಬ್ಲಾಗಿಗೊಂದು ತ್ರಿಪದಿ ಎಲ್ಲವೂ ಹಳೆಯ ಅಪ್ಪಟ ಚಿನ್ನಗಳು. ಬ್ಲಾಗಿಸದೇ ಬರೆಯುವವನು ರೂಢಿಯೊಳಗುತ್ತಮನು, ಬ್ಲಾಗಿಸಿ ಬರೆಯುವವನು ಮಧ್ಯಮನು, ಬ್ಲಾಗಿಸಿಯೂ ಬರೆಯದವನು ಅಧಮನು ಎನ್ನುವುದು ಕುಲಕರ್ಣಿಯವರ ಅಭಿಮತ.
ಓ ನನ್ನ ಚೇತನಾ ( ೧೧-೧-೦೮)
ಬರೆಯೋದಕ್ಕೆ ಯಾಕೆ ಅಷ್ಟೆಲ್ಲಾ ನಖರಾ ಎಂದು ಕೇಳಿದ ಗೆಳೆಯನ ಮಾತನ್ನು ಸ್ಪಲ್ಪ ಗಂಭೀರವಾಗೇ ತೆಗೆದುಕೊಂಡಿದ್ದ ಚೇತನಾ ಅಲ್ಪ ವಿರಾಮದ ನಂತರ ಮತ್ತೆ ಬ್ಲಾಗಿನ ಬಾಗಿಲು ತೆರೆದಿದ್ದಾರೆ. ಸುಮ್ಮನೆ ಮುನಿಸಿಗೆ ಬರಿಯೋಲ್ಲ ಅಂತ ಪ್ರತಿಜ್ಞೆ ಮಾಡಿದ್ದರೂ, ಬ್ಲಾಗ್ ಅಡಿಕ್ಷನ್ ಎನ್ನುವುದು ಬೆನ್ನು ಬಿಡಬೇಕಲ್ಲಾ ಎಂದು ಅವರು ಸಬೂಬು ಹೇಳಿದ್ದಾರೆ.
ವರ್ತುಲ ರಸ್ತೆಯಲ್ಲಿ, ಪ್ರವಾಹದಂತೆ ನುಗ್ಗಿ ಬರುವ ಟ್ರಾಫಿಕ್‌ನಲ್ಲಿ ಆಟೋ ಹಿಡಿಯಲು ಪರದಾಡುತ್ತಾ, ಒಬ್ಬಳೇ ಇದ್ದುಬಿಡುವ ನಿರ್ಧಾರದ ಕುರಿತು ಚಿಂತಿಸುತ್ತಾ, ಆ ಚಿಂತನೆ ಹುಟ್ಟಿಸಿದ ದಾರಿಯಲ್ಲಿ ತಾನು ಹಿಂದೊಮ್ಮೆ ಪಿಯುಸಿ ಹುಡುಗಿಯಾಗಿದ್ದಾಗ ಆಟೋಗ್ರಾಫ್ ಹಾಳೆಯಲ್ಲಿ “ಒಳ್ಳೆಯ ಮಗಳು, ಹೆಂಡತಿ, ತಾಯಿ ಮತ್ತು ಗೃಹಿಣಿಯಾಗೋದು!”ಎಂದು ತನ್ನ ಜೀವನದ ಗುರಿಯನ್ನ ದಾಖಲಿಸಿದ್ದನ್ನು ನೆನೆಯುತ್ತಾ, ರಸ್ತೆ ದಾಟಿ, ದಂಡ ಕಟ್ಟಿ, ನಿಟ್ಟುಸಿರು ಬಿಡುವ ಕಥಾಪಾತ್ರಕ್ಕೆ ಡಿವೈಡರಿನ ಮೇಲೆ ಎಂಬ ತಲೆಬರಹ ಸ್ಪೆಶಲ್ಲಾಗಿದೆ.
ಇದೊಂದು ದಿನ ಬ್ಲಾಗಿನ ಬಾಗಿಲು ಮುಚ್ಚುತ್ತೇನೆ ಎಂದರೂ, ಮತ್ತೆ ಮರುಗಳಿಗೆಯಲ್ಲೇ ಹಣಕಿ ಹಾಕಿ, ಪೋಸ್ಟೊಂದನ್ನು ಕೈಯಲ್ಲಿಡಿದು, ನನ್ನನ್ನೂ ಒಳಕ್ಕೆ ಕರೆಯಿರಿ ಎಂದ ಅವರ ಬ್ಲಾಗನ್ನು ಬೊಗಸೆಯೊಳಗೆ ಹಿಡಿಯಲಾಗಿದೆ.
ಮೌನಗಾಳ ( ೧೦-೧-೦೮)
ಬೆಂಗಳೂರಿನಿಂದ ಸೋಮವಾರ ಪೇಟೆಯ ಮೂಲಕ ಕುಮಾರ ಪರ್ವತಕ್ಕೆ ಚಾರಣ ಹೊರಟವರು ಆರು ಜನ. ಪರ್ವತದ ನೆತ್ತಿಯನ್ನು ಹತ್ತಿ ಕೆಳಗಿಳಿಯುವುದರೊಳಗೆ ಗುಂಪಿನೊಳಗಿದ್ದ ಸುಶ್ರುತ ದೊಡ್ಡೇರಿಗೆ ಸುಸ್ತೋ ಸುಸ್ತು. ಸರಿ, ತಮ್ಮೂರಿನ ನೆಂಟಸ್ತಿಕೆ ಹೇಳಿಕೊಂಡು ಸ್ಥಳೀಯ ಭಟ್ಟರೊಬ್ಬರ ಮನೆಯಲ್ಲಿ ತಂಗಿ, ಬೆಳಗ್ಗೆ ಅವರೋಹಣ ಮಾಡುವುದೆಂದು ಲೆಕ್ಕಚಾರ ಹಾಕಿದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅವರು ಬೆಳಿಗ್ಗೆ ಎದ್ದು, ಭಟ್ಟರ ಹೆಂಡತಿ ಮಾಡಿಕೊಟ್ಟ ದೋಸೆ ತಿಂದು, ಕಾಫಿ ಹೀರಿ ಸಹಜವಾಗಿ ಬೆಂಗಳೂರಿಗೆ ಹೊರಡುತ್ತಿದ್ದರು. ಆದರೆ ಭಟ್ಟರ ಮನೆಯ ಚಿಟ್ಟೆಯನ್ನು ಆಕಸ್ಮಿಕವಾಗಿ ನೋಡಿದಾಯ್ತು, ಮಾತಾಡಿದ್ದಾಯ್ತು.. ಈಗ ಏನೋ ಕನವರಿಸುತ್ತಿದ್ದಾರೆ.
ಕಥೆ ಚೆನ್ನಾಗಿದೆ ಅಂತೀರಾ? ಮುಂದೆ ಓದಲು ಮೌನಗಾಳ ಪ್ರವೇಶಿಸಿ. ಬ್ಲಾಗಿನ ಕೊಳದಲ್ಲಿ ಗಾಳ ಹಾಕಿ ಮೀನು ಹಿಡಿಯುವುದಲ್ಲಿ ಚತುರ ಎನಿಸಿಕೊಂಡಿರುವ ದೊಡ್ಡೇರಿ ಈ ಬಾರಿ ತಮ್ಮ ವಿಶಿಷ್ಠ ಅನುಭವೊಂದನ್ನು ಬರೆದಿದ್ದಾರೆ. ಕುಮಾರ ಪರ್ವತ, ಭಟ್ಟರ ಮನೆ, ಅವರ ಹೆಂಡತಿ, ಅಲ್ಲಿನ ಚಿಟ್ಟೆ, ಚಿಟ್ಟೆಯ ಸ್ಪರ್ಶ ಎಲ್ಲವೂ ಅವರ ಬರಹಕ್ಕೆ ಸಿಲುಕಿದೆ. ಲೇಖನ ನವಿರಾಗಿ,ಸರಳವಾಗಿದೆ. ದಿನದ ಬ್ಲಾಗಿನ ಬೊಗಸೆಯಲ್ಲಿ ಸಿಕ್ಕಿಕೊಂಡಿರುವ ಮೌನಗಾಳವನ್ನು ಬಿಡಿಸುವ ಸರದಿ ಈಗ ಬ್ಲಾಗೇಶನದು.
ಮಂಜು ಮುಸುಕಿದ ದಾರಿಯಲ್ಲಿ ( ೯-೧-೦೮)
ಮಂಜು ಮುಸುಕಿದ ದಾರಿಯಲ್ಲಿ ಇಂದು ಮಲ್ಲಿಗೆ ಅರಳಿದೆ. ನೆಗೆಮಲ್ಲಿಗೆ ನೋಡುತ್ತಲೇ ವಿಗ್ರಹವಾಗಿ ಹೂರಾಶಿಯೊಳಗೆ ಹೂತು ಹೋಗಿರುವ ಬ್ಲಾಗಿಗರ ಹೆಸರು ವೇಣು ವಿನೋದ್. ಹೇಳೋಕೆ ಅಂಥಾದ್ದೇನಿಲ್ಲ ಎನ್ನುತ್ತಲೇ, ನಾನು ನಾನೇ ಏನು! ಎಂದು ಪ್ರಶ್ನಿಸುತ್ತಾರೆ. ಹಿಮಹೊದ್ದ ಬೆಟ್ಟ ಸಾಲು, ನದಿ ಕಣಿವೆಗಳು ಅವರ ಸಂಗಾತಿಗಳು. ಸಮಯ ಸಿಕ್ಕಿದಾಗ ಅಲ್ಲಿಗೆಲ್ಲ ಹೋಗಿ ಬಂದು ಸೊಗಸಾದ ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಸುತ್ತಣ ಜಗತ್ತಿನ ಸಾಮಾನ್ಯ ಘಟನೆಗಳಿಗೆ ಕಾವ್ಯದ ಮೆರಗು ನೀಡಿದ್ದಾರೆ.
ವರುಷ ಸಾಗುತ್ತಲಿದೆ ಪ್ರತಿ ನಿಮಿಷ ಎನ್ನುವ ಎಚ್ಚರಿಕೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತವಿದೆ. ಮೂರು ಬಿಂದುಗಳಲ್ಲಿ ಜೇಡವೊಂದನ್ನು ಬಂಧಿಸಿಟ್ಟಿರುವ ರೀತಿ ಅಪರೂಪ. ಮಂಗಳೂರಿಗೆ ಎಫ್‌ಎಂ ರೇಡಿಯೋ ಬಂದ ಕಥೆಯೂ ಇಲ್ಲಿದೆ. ತುಸು ಕೆಳಗೆ ಇಣುಕಿದರೆ ರಾಜಸ್ತಾನದ ಮರಳುಗಾಡಿನ ಸುಂದರ ಚಿತ್ರಗಳಿವೆ. ಮಲ್ಲಿಗೆಯ ಕಂಪು ಅಘ್ರಾಣಿಸಲು ವಿನೋದರ ಬ್ಲಾಗ್ ಪ್ರವೇಶಿಸಬಹುದು.
ಚಿತ್ರ ಕವನ ( ೭-೧-೦೮)
ನೋಟ ಹಲವು ಚಿತ್ರ ಒಂದು ಎನ್ನುವ ಬ್ಲಾಗಿಗಿರುವ ಹೆಸರು ಚಿತ್ರ ಕವನ. ಹೆಸರೇ ಸೂಚಿಸುವಂತೆ ಇಲ್ಲಿ ನೀವು ಚಿತ್ರವನ್ನೂ ನೋಡಬಹುದು. ಕವನವನ್ನೂ ಬರೆಯಬಹುದು. ಕವಿತೆ ಹೊಸೆಯಲು ಯಾವುದೇ ನಿರ್ಬಂಧವಿಲ್ಲ. ಚಿತ್ರ ನೋಡಿದ ಕೂಡಲೇ ನಿಮ್ಮ ಮನಸ್ಸಿನಲ್ಲಿ ಉದಿಸುವ ಭಾವನೆಗಳಿಗೆ ಕಾವ್ಯದ ಮೆರಗು ನೀಡಿದರೆ ಸಾಕು. ಒಂದು ಸೊಗಸಾದ ಚಿತ್ರಕವನ ರೆಡಿ. ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಹಲವು ಅಪೂರ್ವ ಚಿತ್ರಗಳಿಗೆ ಈಗಾಗಲೇ ಕೆಲವು ಉತ್ಸಾಹಿ ನೆಟ್ ಕವಿಗಳು ಬಣ್ಣ ಹಚ್ಚಿದ್ದಾರೆ. ಒಂದೇ ಚಿತ್ರಕ್ಕೆ ಹಲವು ನೋಟಗಳು ಬೆರತು ಸುಂದರ ದೃಶ್ಯಕಾವ್ಯಗಳಾಗಿವೆ.
ವಾರಕ್ಕೊಮ್ಮೆ ಹೊಸ ಚಿತ್ರಗಳನ್ನು ಸೇರಿಸಲಾಗುವ ಚಿತ್ರ ಕವನದಲ್ಲಿ ಈ ಬಾರಿ ಪುಟ್ಟ ಮಕ್ಕಳಿಬ್ಬರು ಕೈ ಹಿಡಿದು, ಬೆನ್ನು ತೋರಿಸಿ ನಡೆದು ಹೋಗುತ್ತಿರುವ ಚಿತ್ರವಿದೆ. ಈ ಚಿತ್ರ ನೋಡಿದ ಕೂಡಲೇ ನಿಮ್ಮಲ್ಲೂಂದು ಭಾವ ಹುಟ್ಟುವುದು ಖಂಡಿತ. ತಡಮಾಡದೆ ನೀವೂ ಬ್ಲಾಗ್ ಪ್ರವೇಶಿಸಿ. ಕವನ ಬರೆಯಲು ನೀವು ಕವಿಯೇ ಆಗಿರಬೇಕೆಂದೇನಿಲ್ಲ. ಆದರೂ ಹೇಗೆ, ಎಂದು ಹಿಂಜರಿಕೆ ಇದ್ದರೆ ಸಲಹೆ-ಚರ್ಚೆ-ಅಭಿಪ್ರಾಯಕ್ಕಾಗಿ ವಿಶೇಷ ಕೌಂಟರ್ ತೆರೆಯಲಾಗಿದೆ. ನೊಂದಾಯಿಸಿಕೊಂಡು ಈಗಾಗಲೇ ಸದಸ್ಯರಾಗಿರುವ ಜಾಲ ಕವಿಗಳ ಸಲಹೆ ಪಡೆಯಬಹುದು. ನಿಮ್ಮೊಳಗಿನ ಸೃಜನಶೀಲತೆಗೆ ಕನ್ನಡಿ ಹಿಡಿದು, ಚಿತ್ರವೊಂದರ ಹಲವು ನೋಟಗಳ ಆಯಾಮಗಳನ್ನರಸುವುದಕ್ಕೆ ಇಷ್ಟು ಪ್ರಯತ್ನ ಮಾಡದಿದ್ದರೆ ಹೇಗೆ ಎಂದು ಚಿತ್ರಕವನ ತಂಡ ನಿಮ್ಮನ್ನು ಕರೆಯುತ್ತಿದೆ.
ಕುಂಟಿನಿ (೫-೧-೦೮)
ಕುಂಟಿನಿ ಎನ್ನುವ ಒಳ್ಳೆಯ ಹುಡುಗ ಇಂದು ತಮ್ಮ ಬ್ಲಾಗಿನಲ್ಲಿ ನಾಲ್ಕು ಸಾಲು ಬರೆದಿದ್ದಾರೆ. ಇದು ಅವರ ಸೀರಿಯಲ್ ಕವಿತೆಯ 29ನೇ ಪ್ರಯೋಗ. ನಾನು ತುಂಬಾ ಸಿಂಪಲ್ಲು ಅಷ್ಟೇ ಕೇರಿಂಗು, ಅಷ್ಟು ಪ್ರೀತಿ, ಇಷ್ಟು ಭಾವನೆ ಅಂತ ಅವರ ಪ್ರೊಪೈಲ್‌ನಲ್ಲಿದೆ. ಪೋಸ್ಟ್‌ನ ತುದಿಗೊಂದು ಆನೆಯ ಚಿತ್ರವಿದೆ. ಆನೆ ಚಿತ್ರವೆಂದರೆ ಕೆಳಗೆ ರಾಜನ ಕಥೆ ಇರಬೇಕು. ಇದೆ. ಅವರ ಬ್ಲಾಗ್ ಪ್ರವೇಶಿಸಿ ಕವಿತೆ ಓದಿ. ನವಿರಾಗಿದೆ.
ಹೊಸ ವರ್ಷದಲ್ಲಿ ಎಲ್ಲವನ್ನೂ ಮರೆಯುವ ಸಂಕಲ್ಪ ಮಾಡಿದ್ದೇನೆ ಎಂದಿರುವ ಕುಂಟಿನಿ ಬ್ಲಾಗ್ ಆಫ್‌ಡೇಟ್ ಮಾಡಲು ಮಾತ್ರ ಮರೆತಿಲ್ಲ. ಮರತೇನೆಂದರೂ ಮರೆಯಲಿ ಹೇಗೆ ಎನ್ನುವಂತೆ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮರೆಯುವುದು ನೆನಪಿಗಿಂತ ಕಷ್ಟ ಎಂದು ಅವರಿಗೆ ಹೀಗೆ ಬರೆದ ನಂತರ ಅನಿಸಿದಂತಿದೆ. ಕನಸುಗಳ ಲೋಕಕ್ಕೆ ಕದವಿಕ್ಕುತ್ತೇನೆ ಹಾಗಾಗಿ ಈ ವರ್ಷ ಯಾವ ಪುಸ್ತಕವನ್ನೂ ಓದುವುದಿಲ್ಲ ಎನ್ನುವುದು ಕುಂಟಿನಿಯವರ ವರ್ಷದ ಹೊಸ ಪ್ರತಿಜ್ಞೆ.
ಚಂಪಕಾವತಿ (೪-೧-೦೮)
ಒಂದು ಕಡು ಕಪ್ಪು ಫಲಕದ ಮೇಲೆ ಕೆಂಪನೆಯ ಬಾರ್ಡರ್. ಭಯ ಹುಟ್ಟಿಸುವಂತೆ. ಒಳಗೆ ಚಂಪಕಾವತಿ ಎನ್ನುವ ಬಿಳಿಯ ಟೈಟಲ್. ಕೆಳಗೆ ಇಣುಕಿದರೆ ಪಂಚವ್ಯಸನಗಳು. ಸಾಹಿತ್ಯ, ನಾಟಕ, ಸಿನಿಮಾ, ಯಕ್ಷಗಾನ, ಕ್ರಿಕೆಟ್. ಬ್ಲಾಗಿಂಗ್ ಅಂದ್ರೆ ಬರೀ ಹುಚ್ಚು, ಬ್ಲಾಗರ್ ಅಂದ್ರೆ ಕೋಡು, ಕೇಳೋರಿಲ್ಲ, ಹೇಳೋರಿಲ್ಲ ಓದೋರಿಲ್ಲ ಪಾಡು! ಎನ್ನುತ್ತಾ ತಮ್ಮ ಅಕ್ಷರ ಲೋಕಕ್ಕೆ ಅಕ್ಕರೆಯ ಸ್ವಾಗತ ಕೋರುತ್ತಾರೆ ಸುಧನ್ವಾ ದೇರಾಜೆ. ನಾನು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ, ಬದುಕು ಬೆಂಗಳೂರಿನ ಸುದ್ದಿಮನೆಯೊಂದರಲ್ಲಿ ಎಂದು ಪರಿಚಯಿಸಿಕೊಂಡಿದ್ದಾರೆ.
ದೇರಾಜೆ ಒಡ್ಡೋಲಗದಲ್ಲಿ ಚಂಡೆಮದ್ದಳೆಗಳ ಸದ್ದು ಸಾಮಾನ್ಯ. ಅವರು ಒಂದು ರೀತಿ ಭಾಗವತರು. ವಿಷಯ ವೈವಿಧ್ಯ. ಲೇಖನ ಗಂಭೀರ. ಈ ಬಾರಿ ‘ಕುರುಕ್ಷೇತ್ರಕ್ಕೊಂದು ಆಯೋಗ’ ಎನ್ನುವ ದೇರಾಜೆ ಸೀತಾರಾಮಯ್ಯನವರ ಅಪೂರ್ವ ಪುಸ್ತಕವೊಂದನ್ನು ಪರಿಚಯಿಸಿದ್ದಾರೆ. ಮಹಾಭಾರತದ ಮುಖ್ಯ ಪಾತ್ರಗಳ ಪರಿಚಯವಿದೆ. ದುರ್ಯೋಧನ, ಭೀಷ್ಮ, ಕರ್ಣ ಎಲ್ಲರೂ ಬ್ಲಾಗಿನಲ್ಲಿ ಬಂದು ಅಚ್ಚರಿ ಮೂಡಿಸಿದ್ದಾರೆ. ಅಪರೂಪದ ಪುಸ್ತಕ. ಕೊಳ್ಳಲು ಆಸಕ್ತಿ ಇದ್ದವರಿಗೆ ಪ್ರಕಾಶಕರ ಸಂಚಾರಿ ಸಂಖ್ಯೆಯಿದೆ. ಬಲ್ಲಿರೇನಯ್ಯಾ…. ಬ್ಲಾಗಿನ ಬೊಗಸಯಲ್ಲಿ ಇಂದು ಚಂಪಕಾವತಿ ಇದೆ. ಪ್ರವೇಶ ಉಚಿತವಿದೆ.
ಅವಧಿ (೩-೧-೦೮)
ಯಾರದೋ ಮಗುವಿನ ಬಸಿರನ್ನು ಹೊತ್ತಿರುವ ಹೆಂಡತಿನ್ನುದ್ದೇಶಿಸಿ, ಗಂಡ ಹೇಳುತ್ತಾನೆ. “ಹೆಂಗಸರಿಗೇನು? ಮೈ ಮಾರಿಯಾದರೂ ಜೀವನ ಮಾಡ್ತೀರಿ. ಈ ಪ್ರಶ್ನೆಗೆ ಉತ್ತರಿಸಲೂ ಆಗದ, ಗಂಡನನ್ನು ಶಫಿಸಲೂ ಆಗದೆ, ಹೆಂಡತಿ ಮೌನವಾಗಿ ಕಂಬನಿ ಮಿಡಿಯುತ್ತಾಳೆ. ಬಾಡಿಗೆ ತಾಯ್ತನ ಹೊರಬೇಕಾಗಿ ಬಂದ ಹೆಣ್ಣೊಬ್ಬಳ ಅಂತರಂಗವನ್ನೂ, ಆಕೆಯ ಗಂಡನ ಹಣದ ವ್ಯಾಮೋಹವನ್ನು ತೆರೆದಿಡುತ್ತದೆ ಇಂದು ಅವಧಿಯಲ್ಲಿ ಚೇತನಾ ತೀರ್ಥಹಳ್ಳಿ ಬರೆದಿರುವ ಕೈಲಾಗದವನಿಗೆ ಮೈಯೆಲ್ಲಾ ಪೌರುಷ ಎನ್ನುವ ಲೇಖನ.
ಭಾಮಿನಿ ಷಟ್ಪದಿ ಎನ್ನುವ ಕಾಲಂ ಮೂಲಕ ಓದುಗ ಜಾಲಕ್ಕೆಲ್ಲಾ ಪರಿಚಯವಾಗಿರುವ ಚೇತನಾರ ಬರಹಗಳು ಸರಳ ಸುಂದರ. ಅವಧಿಯಲ್ಲಿ ಹದಿನೆಂಟು ವಿಭಾಗಳಿವೆ. ವಿ.ಎಂ ಮಂಜುನಾಥ್ ಅವರ ಕಥೆ, ಬಹುರೂಪಿಯವರ ಡೋರ್ ನಂ 142, ನಟರಾಜ್ ಹುಳಿಯಾರ್ ಅವರ ಗಾಳಿ ಬೆಳಕು, ಶ್ರೀನಿವಾಸ ರಾಜು ಕುರಿತು ರಘುನಾಥ ಚಹ ಅವರ ಲೇಖನ ಎಲ್ಲವೂ ಬರವಣಿಗೆಯ ರಸಗವಳ. ದಿನದ ಬ್ಲಾಗ್ ಬೊಗಸೆಯಲ್ಲಿ ಇಂದು ಭೂಮಿಯ ಹಂಬಲದ ತೇರಿದೆ.
ಜೋಗಿಮನೆ (೨-೧-೦೮)
ಬ್ಲಾಗಮಂಡದಲ್ಲಿ ಜೋಗಿಮನೆ ಎಲ್ಲರಿಗೂ ಪರಿಚಿತ. ಈ ದಿನ ಗೆಳೆಯನ ಹೊಸ ಸಂಕಲನವನ್ನು ಪ್ರೀತಿಸುತ್ತಾ.. ಎನ್ನುವ ತಲೆಬರಹದಲ್ಲಿ ಅವರು ತಮ್ಮ ಸ್ನೇಹಿತ ಗೋಪಾಲಕೃಷ್ಣ ಕುಂಟಿನಿ ಅವರ ಹೊಸ ಕವನ ಸಂಕಲನದ ಕುರಿತು ಬರೆದಿದ್ದಾರೆ.
ಗೆಳೆತನದ ನೆನಪು ಹಾಗೂ ಕವನದ ಸಾಲುಗಳು ನವಿರಾಗಿದೆ. ಕುಂಟಿನಿ ಬೆಳೆಯುತ್ತಾ ಹೋಗುವುದನನ್ನು ನಾನು ಪ್ರೀತಿಯಿಂದ ನೋಡುತ್ತೇನೆ ಎನ್ನುವ ಜೋಗಿ ತುಂಬಾ ಮಾತಾಡುವವನ ಒಳಗೆ ಕವಿತೆ ಇರುವುದಕ್ಕೆ ಸಾಧ್ಯವಿಲ್ಲ ಎನ್ನುವ ನನ್ನ ನಂಬಿಕೆಯನ್ನು ಸುಳ್ಳಾಗಿಸಿದವರು ಇಬ್ಬರು; ಕುಂಟಿನಿ ಮತ್ತು ಕಾಯ್ಕಿಣಿ ಎನ್ನುತ್ತಾರೆ. ಇಂದಿನ ಬೊಗಸೆಯಲ್ಲಿ ಅವರ ಬ್ಲಾಗ್ ಇದೆ.
ಅನಿವಾಸಿ (೧-೧-0೮)
ದಿನದ ಬ್ಲಾಗ್ ಬುಟ್ಟಿಗೆ ಯಾರನ್ನು ಬಲೆಹಾಕಬೇಕೆಂದು ದಿನಪೂರ್ತಿ ಬ್ಲಾಗಮಂಡಲ ಸುತ್ತಿ ಸುಸ್ತಾದ ಬ್ಲಾಗೇಶನಿಗೆ ಕೊನೆಗೆ ಕಣ್ಣಿಗೆ ಬಿದ್ದದ್ದು ಅನಿವಾಸಿಯೊಬ್ಬರ ಮುಗಿದರೂ ಮುಗಿಯದ್ದು ಎನ್ನುವ ತಲೆಬರಹ. ಮುಗಿದರೂ ಮುಗಿಯದ್ದು ಏನಿರಬಹುದು ಎನ್ನುವ ಕುತೂಹಲದೊಂದಿಗೆ ಬ್ಲಾಗಿಗೆ ಧುಮಿಕಿದರೆ, ಅಲ್ಲಿ ಈ ವರ್ಷ ಏನೆಲ್ಲಾ ಬರೆಯಬೇಕೆಂದುಕೊಂಡಿದ್ದೆ ಎನ್ನುವ ಉದ್ದನೆಯ ಅನಿವಾಸಿ ಪಟ್ಟಿ.
ಸುರುಳಿ ಬಿಚ್ಚಿದೆ. ಹಿಂದೂ ಮೂಲಭೂತವಾದಿತ್ವ, ಲೈಂಗಿಕತೆ ಮತ್ತು ಸಮಾನತೆಯ ನಡುವಿನ ಕೊಂಡಿ, ನಾಲ್ಕಾರು ಕಥೆಗಳು, ಕಾದಂಬರಿ, ಅಬ್ಬಾ! ಎಷ್ಟೊಂದು ವಿಷಯಗಳು ಅನಿವಾಸಿ ತಲೆಯಲ್ಲಿ. ಆನಿವಾಸಿ ಸೊಗಸಾಗಿದೆ. ವಿಷಯ ವೈವಿಧ್ಯ. ಹೊಸ ವರ್ಷದಲ್ಲಿ ಅವರು ಕಳೆದ ವರ್ಷ ಮರೆತಿದ್ದ ಲೇಖನಗಳು ಮೂಡಿಬರಲಿ. ಜಾಲ ಕಿಟಕಿಗೆ ಪರದೆ ಬೀಳುವ ಮುನ್ನ ದಿನದ ಬ್ಲಾಗ್ ಬುಟ್ಟಿಗೆ ಅವರಿಗೆ ಸ್ವಾಗತ.
ಅಲೆಮಾರಿಯ ದಿನಚರಿ (೩೧-೧೨-0೭)
ಹೊಸ ವರ್ಷಕ್ಕೆ ಇನ್ನು ಕಲವೇ ಕ್ಷಣಗಳು ಬಾಕಿ ಉಳಿದಿರುವಾಗ ಬ್ಲಾಗೇಶ ನಡೆಸಿದ ತುರುಸಿನ ಬ್ಲಾಕಾಯ ಪ್ರವೇಶದಲ್ಲಿ ಮೌಸಿಗೆ ಸಿಕ್ಕಿದ ತುಣುಕು ಟೀಮ್ ಮಂಗಳೂರಿನ ಗಾಳಿಪಟ ಗಾಥೆ. ಈ ಗಾಳಿಪಟದ ಮೂಲವನ್ನು ಹುಡುಕುತ್ತಾ ಬ್ಲಾಗಮಂಡಲದಲ್ಲಿ ನಿಟ್ಟಿಸಿರು ಬಿಟ್ಟು ಕೊಂಡಿಗಾಗಿ ಕಾದು ಕುಳಿತಾಗ ಕಿಟಿಕಿಯಲ್ಲಿ ಕೈಚಾಚಿ ಒಳಗೆ ಎಳೆದುಕೊಂಡದ್ದು ಅಲೆಮಾರಿಯ ದಿನಚರಿ. ಫಾಲೋ ಮಿ ಎಂದು ಕರೆದುಕೊಂಡ ಕನ್ನಡ ಕೊಂಡಿಯ ಬಾಲವನ್ನು ಹಿಡಿದು ಬ್ಲಾಗ್ ಪ್ರವೇಶಿಸಿದರೆ, ಬ್ಲಾಗಮಂಡಲದ ತುಂಬಾ ಹಾರುತ್ತಿರುವ ಬಣ್ಣ ಬಣ್ಣದ ಗಾಳಿಪಟ.
ಯೋಗರಾಜ ಭಟ್ಟರ ಗಾಳಿಪಟ ಇನ್ನೂ ಹಾರಿಲ್ಲವಲ್ಲ ಎಂದು ಕಣ್ಣು ಕಿರಿದಾಗಿಸಿದರೆ, ಇವು ಪಣಂಬೂರಿನ ಕಡಲ ಕಿನಾರೆಯಲ್ಲಿ ಕಳೆದ ವರ್ಷ ನಡೆದ ಗಾಳಿಪಟ ಉತ್ಸವದಲ್ಲಿ ಹಾರಿದ ಪತಂಗಗಳು. ಅಬ್ಬಾ! ಅಪರೂಪದ ಗಾಳಿಪಟ ಹಾರಿಸಿದ ಕನ್ನಡದ ಬ್ಲಾಗಿಗ ಯಾರು ಎಂದು ಹುಡುಕುತ್ತಾ, ಬ್ಲಾಗಮಂಡಲದ ಮಧ್ಯಭಾಗಕ್ಕ ಬಂದೆ.
ಅಚ್ಚರಿ ಕಾದಿತ್ತು. ಪಟದ ದಾರ ಹಿಡಿದು ನಿಂತ ಬ್ಲಾಗ್ ಮಾಲೀಕ ರಾಜೇಶ ನಾಯ್ಕರಿಂದ ಪಣಂಬೂರಿನ ಕಡಲ ಕಿನಾರೆಯಲ್ಲಿ ಇದೇ ಬರುವ ಜನವರಿ ೧೯ ಮತ್ತು ೨೦ ರಂದು ಗಾಳಿಪಟ ಉತ್ಸವ? ಆ ಹಿನ್ನೆಲೆಯಲ್ಲಿ ಬ್ಲಾಗಮಂಡಲದಲ್ಲಿ ಇಂದು ಗಾಳಿಪಟ ಹಾರಿಸಿರುವುದಾಗಿ ಕಾಮೆಂಟರಿ. ಗಾಳಿಪಟ ಹಾರಿಬಿಡುವ ಕನಸಿನ ಹಿಂದಿರುವ ಟೀಮ್ ಮಂಗಳೂರಿನ ಸಾಹಸ ಗಾಥೆ ಕುತೂಹಲ ಕೆರಳಿಸಿತು. ಅಲ್ಲಿಂದ ಪಣಂಬೂರಿನ ಕಡಲ ತಡಿಗೆ ದೌಡಾಯಿಸಿದೆ. ಉಸುಕು ನೆಲದಲ್ಲಿ ಕಾಲೂರಿ, ಆಕಾಶದತ್ತ ಮುಖನೆಟ್ಟು ಅಲ್ಲಿ ಹಾರಾಡುವ ಸಾವಿರಾರು ಗಾಳಿಪಟಗಳನ್ನು ಕಣ್ಣಲ್ಲಿ ತುಂಬಿಸಿಕೊಂಡೆ. ಬ್ಲಾಗಮಂಡಲದಲ್ಲಿ ದಾರ ಸುತ್ತಿ ಪಟ ಹಾರಿಸಿದ ನಾಯ್ಕರಿಗೆ ಬಾಗೀನ ಅರ್ಪಿಸಿದೆ.






January 23rd, 2008 at 12:29 pm
ಓಹ್… ಸಿಕ್ಕಾಪಟ್ಟೆ ಒದೆಗಳು ಬೀಳ್ತಾ ಇವೆ ಬ್ಲಾಗಿನಿ… ಏನೂಂತ ಶೋಧನೆಗೆ ಹೊರಟಾಗ ಮೊದಲು ಮೂಗಿಗೆ ಬಡಿದದ್ದು ನಿಂಬೆ ಹಣ್ಣಿನ ಮರದಲ್ಲಿ ಕೆಂಡ ಸಂಪಿಗೆಯೆಂಬ ಸುಮದ ಘಮ ಘಮ. ಆಘ್ರಾಣಿಸದೇ ಇರಲಾಗಲಿಲ್ಲ.
ಕೆಂಡಸಂಪಿಗೆಯು ಪರಿಪೂರ್ಣವಾಗಿ ಸುವಾಸನೆ ಬೀರುವ ದಿನಗಳಿಗಾಗಿ ಎದುರು ನೋಡುತ್ತಿದ್ದೇವೆ.
ಧನ್ಯವಾದ ಮತ್ತು ಶುಭಾಶಯ.
January 24th, 2008 at 3:34 am
kendasampigeyalli nanna blog parichayisiddakke thanks.
portal cennaagi bartide.lEkhana mattu ankaNagalondige kathe kavanagaLannU prakaTisi.
dhanyavaada.
January 24th, 2008 at 4:46 pm
ದಿನ ಬ್ಲಾಗ್ ಓದೋಕೆ ಖುಷಿಯಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈಗ ತಾನೇ ಬ್ಲಾಗ್ ಬುಟ್ಟಿ ಇಣುಕಿ ನೋಡುತ್ತಾ ಅಚ್ಚರಿ ಕಣ್ಣುಗಳಿಂದ ದಿಟ್ಟಿಸುವ ಬ್ಲಾಗ್ ಲೋಕದ ಹೊಸ ಮುಖಗಳಿಗೆ ಬ್ಲಾಗ್ ಗಳನ್ನು ಪರಿಚಯಿಸಿದಂತಾಗುತ್ತದೆ.ಥ್ಯಾಂಕ್ಯೂ ಸರ್
January 24th, 2008 at 4:50 pm
Kenda Sampigege nanna hardika shubha haraikegalu.
kannadallu e taraha vandu site moodibandaddu nijavaglu santasad vishaya. Tunbha acchukattagide.
Namma hage iruva horanadu kannadigarige idondu tarahad habba.
andahage idaralli kannada hege baribeku anth tilisidra bhaal upakar agatade.
Sudhir
Pune
January 25th, 2008 at 1:17 pm
ಬ್ಲಾಗ್ ಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತಿರುವುದು ಸಂತೋಷದ ಸುದ್ದಿ.ಮೊದಲೆಲ್ಲ ಕೇವಲ ಅಂತರ್ಜಾಲಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಓದುಗರು ಇದೀಗ ಬ್ಲಾಗ್ ಗಳ ಮೂಲಕ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ..
ಕೆಂಡ ಸಂಪಿಗೆಯ ಕಂಪು ದಿನದಿಂದ ದಿನಕ್ಕೆ ಹೊಸ ಹೊಸ ವಿಷಯಗಳೊಂದಿಗೆ ಆಕರ್ಷಕವಾಗಿ ಮೂಡಿ ಬರುತ್ತಿದೆ.
ಧನ್ಯವಾದಗಳು..
January 26th, 2008 at 9:52 am
ಮೊನ್ನೆ ಕಿತ್ತಳೆ, ಕಾಫಿ, ಕರಿಮೆಣಸು, ಕಾಡು ಹಂದಿಗಳನ್ನು ಆಘ್ರಾಣಿಸುತ್ತಾ ಕೊಡಗಿನ ಕಾಡಿನಲ್ಲಿ ಅಲೆಯುತ್ತಿರಬೇಕಾದರೆ ಅನಾಮತ್ತಾಗಿ ಕೆಂಡಸಂಪಿಗೆ ನೆನಪಾಗಿ ತಾಣಕ್ಕೆ ಬಂದರೆ ಇದು ದಿನ ಅರಳುವ ಹೂವು ಎಂದು ಸಂಭ್ರಮವಾಯಿತು. ದಿನಕ್ಕೊಂದು ಹೂವು, ಪ್ರತಿ ಗೆಲ್ಲುಗಳಲ್ಲೂ ಅರಳುತ್ತಿರುವಾಗ ಮರ ಸುಂದರ. ಅಂದ ಹಾಗೆ ಕೆಂಡ ಸಂಪಿಗೆ ಅರಳಲು ನಿಂಬೆ ಗಿಡಕ್ಕೆ ಗೊಬ್ಬರ ನೀರು ಸಾಕಾಷ್ಟು ಬೇಕಾಗಬಹುದು. ಹಾರೈಕೆಗಳು. ನೆನಕೆಗಳು.
ಒಲವಿನಿಂದ
ಬಾನಾಡಿ
January 26th, 2008 at 3:18 pm
e dinavashte naanu ariyada blog bagilannu thattiddu! blogini kavite nanna atyanta preetiya kavi amrita pritamla kavite saalu nenapisitu..aa saalugalu heegive- ondu novittu adannu cigarattu sedida haage sedidene/kelavu haadugalive avannu cigarattininda boodi kodavida haage kodavidene/.. the effort of kenda sampige is simply remarkable in the garden of kannada.. no doubt its freshness blossoms the creative kannada mind..hats off
January 27th, 2008 at 12:12 pm
ಕೆಂಡಸಂಪಿಗೆಗೆ ಅಭಿನಂದನೆಗಳು, ಇದರ ಪರಿಮಳ ಹೀಗೇ ಬೆಳೆಯಲಿ!
January 28th, 2008 at 12:04 am
ಇದೊಂದು ಒಳ್ಳೆಯ ಸಂಸ್ಕೃತಿ.
ನಮ್ಮದೊಂದು ಹಾಸ್ಯಕ್ಕೆ ಮೀಸಲಾದ ಬ್ಲಾಗಿದೆ. ಸ್ವಲ್ಪ ನೋಡಿ. ನಮ್ಮ ಸರದಿಗಾಗಿ ಕಾಯುತ್ತಿರುತ್ತೇವೆ.
http://nagenagaaridotcom.wordpress.com/
February 5th, 2008 at 9:00 pm
ಕೆಂಡಸಂಪಿಗೆಯ ಗೆಳೆಯರಿಗೆ
ಧನ್ಯವಾದಗಳು. ನನ್ನ ಬ್ಲಾಗ್ ಗೆ ಬಂದು ಓದಿ ವಿಮರ್ಶಿಸಿದ್ದಕ್ಕೆ ಧನ್ಯವಾದ. ಇಂಥ ಪ್ರಯತ್ನ ನಮ್ಮ ಹುಮ್ಮಸ್ಸನ್ನು ಹೆಚ್ಚಿಸಿದೆ.
ಚೆಂಡೆಮದ್ದಳೆಯ ನಾವಡ
February 9th, 2008 at 6:54 pm
Tmuba dhanyvadagulu.. Nan blogna odi nim websitin dinag gourava nididdake.. Nim e protshadind bariyuv nannasege imbu nidide..
Kendasampige tandakke
Dhanyavadaglu.
Nimmav
Mallikarjun
February 10th, 2008 at 5:12 am
ಕೆಂಡಸಂಪಿಗೆ ಇಂದು, ನನ್ನ ಮುದ್ದಿನ ಚಂದನಳನ್ನು ದಿನದ ಬ್ಲಾಗನ್ನಾಗಿಸಿದ್ದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ವಿಶಯ. ಕೆಂಡಸಂಪಿಗೆಗೆ ನನ್ನ ಧನ್ಯವಾದಗಳು - ಬಾಲ
February 14th, 2008 at 3:02 pm
‘ಒಂಟಿ ಹಕ್ಕಿಯ ಹಾಡು’ ಬ್ಲಾಗಿನ ಓನರ್ರಿನ ಸರಿಯಾದ ಹೆಸರು ಸುಪ್ರೀತ್ ಕೆ.ಎಸ್.
February 15th, 2008 at 9:03 am
ಹಕ್ಕಿ ಗೂಡಿಗೆ ಬಂದು ಒಂಟಿಯಾಗಿದ್ದ ಹಕ್ಕಿಯ ದನಿಗೆ ಕೊರಲು ಸೇರಿಸಿದ ಬ್ಲಾಗಿನಿಯವರಿಗೆ ಧನ್ಯವಾದಗಳು.
ಸುಪ್ರೀತ್.ಕೆ.ಎಸ್
February 16th, 2008 at 5:31 pm
ನಮ್ಮ ಬ್ಲಾಗ್ ನಿಜಕ್ಕೂ ಅಷ್ಟು ಚೆನ್ನಾಗಿದೆಯೇ? ಕೆಂಡಸಂಪಿಗೆಗೆ ಮತ್ತು ಬ್ಲಾಗಿನಿಗೆ ನನ್ನ ಥ್ಯಾಂಕ್ಸ್
February 21st, 2008 at 1:48 pm
kannadada atyuttama blog gala parichayisiddakke tumba tumba danyavaadagalu:)
February 22nd, 2008 at 10:16 am
ಆಹಾ! ಬಂದಿದೆ ಕೆಂಡಸಂಪಿಗೆ
ಸರಳ ಸೌಂದರ್ಯದೊಂದಿಗೆ
ಗುಣಾತ್ಮಕ ಬರಹಗಳೊಂದಿಗೆ
ಇಟ್ಟು ಜಾಣರ ಜಗಲಿಗೆ ಲಗ್ಗೆ.
ನನ್ನ ಕೂಗನು ಕೇಳಿದ ಸಂಪಿಗೆ
ಕರೆಯಿತು ನನ್ನನೂ ಜೊತೆಗೆ
ಮನವ ತಣಿಸಿದ ಈ ಬೆಸುಗೆ
ಇರಲಿ ಎಂದಿಗೂ ನಮ್ಮೊಂದಿಗೆ
ಧನ್ಯವಾದಗಳು ಕೆಂಡಸಂಪಿಗೆಗೆ
- ಚಂದಿನ
February 22nd, 2008 at 10:26 am
‘kaviya manada koogu odugarallu marudanigolluttade’emba maathu sathya!
February 23rd, 2008 at 3:09 pm
Mr.Tippar - Nanna Hadu
Manasige hidisida kavite.Manadalad matu kaviteyagi moodibandag …
Dhanyavadagalu -
February 25th, 2008 at 5:00 pm
kenda sampige upayukta maahitigalannu parichayisuttide. nammantaha students galigu halavu mahiti doreyittide. barahgalannu bareyalu nammannu prerepisuttide.
March 1st, 2008 at 1:21 am
nenne nimma ‘dinada blog’nalli www.madhu-vana.blogspot.com bagge barediddiri. adannu nODi aa blogge bhETi neeDi, onderaDu postgaLanna Odide. adaralli ‘neenilladE baaLondu baaLe’ ennuva katheyannu Odidaaga idannu modalu elliyO Odida haagideyalla annisitu. idE blog munche nODiddirabahudu endare bere postgaLu yaavudU parichita enisalilla.
samshaya nivaaraNege idu hinde innellaadarU prakaTavaagittE endu comment haakide. ivattu adakkEnaadarU uttara ideyaa anta nODidare aa post’E maaya! google searchnalli ee blogina cached konDige hOdare aa post nODabahudu. aadare eega online iruva blognalli aa kathe delete maaDalaagide. plagiarism annOdakke innEnU puraave bEkilla annisuttade!
illi ee maathannu hELiruva uddEsha ishTE: kannada bloggaLa sankhye beLeyuttiddante illU plagiarismna bhootha hokkide. ee kathe yaava blogninda kaddiddaarO, nanage elli modalu Odiddu nenapaaguttilla. aa moola lEkhakarEnaadarU kendasampige Odidare avarige tiLiyali endU, ella kannada blog barahagaararu thamma online saahityada surakshatege bEkaada kramagaLannu tegedukoLLali enDu uddEsha. online prakaTaNegaLige copyright maaDikoLLuva soulabhyagaLiddU kannada bloggaLalli idara upayOga ashTara maTTige kaaNuttilla…
March 2nd, 2008 at 9:29 am
ಶುಭಾರವರೇ,
ನಾನು ಹಿಂದೆ ಆ ಲೇಖನ ಹಾಕಿದ್ದು ನಿಜ.ಅದರ ಮೂಲ ಆಂಗ್ಲ ಲೇಖನ ನನ್ನ ಮೇಲ್ ಬಾಕ್ಸಿಗೆ ಯಾರೋ ಫಾರ್ವರ್ಡ್ ಮಾಡಿದ್ದರು.ಅದರ ಮೂಲ ಲೇಖಕರು ಯಾರೆಂಬುದೂ ನನಗೂ ಗೊತ್ತಿಲ್ಲ. ನಾನು ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದು ನಿಜ. ಆದರೆ ನನ್ನ ಉದ್ದೇಶ ಕ್ರತಿಚೌರ್ಯ ಮಾಡಿ ಅದರ ಕ್ರೆಡಿಟನ್ನು ನಾನು ಪಡೆಯುವುದಾಗಿರಲಿಲ್ಲ. ನಾನು ಮೂಲ ಲೇಖನದ ಉಲ್ಲೇಖವನ್ನು ಮಾಡಬೇಕಿತ್ತು. ಬ್ಲಾಗ್ ಲೋಕಕ್ಕೆ ನಾನು ಇನ್ನೂ ಹೊಸಬ. ತಿಳಿಯದೇ ತಪ್ಪಾಗಿದೆ. ಅದನ್ನು ತಿದ್ದಿಕೊಂಡು, ನನ್ನ್ ಬ್ಲಾಗಿನಲ್ಲಿ ಮೂಲ ಲೇಖನದ ಉಲ್ಲೇಖ ಮಾಡಿದ್ದೇನೆ.
ಧನ್ಯವಾದಗಳು
ಮಧು
March 5th, 2008 at 8:31 pm
blagini,
you forgot to mention the spirit behind all karnataka police blogs. He is an IPS officer. His name is Dayananda Bannikal. He started the spdk.blogspot.com blog first, and got an award for the same from central government. He is Kolar SP now.
ದಯಾನಂದ ನನ್ನ ಸ್ಣೇಹಿತ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಪಡುತ್ತೇನೆ.
Thanks,
Balakrishna
Virignia, USA.
March 5th, 2008 at 11:15 pm
ಬ್ಲಾಗಿನಿ ಅವರೆ,
ಹಂಸನಾದ ವನ್ನು ಗಮನಿಸಿ ಹೆಸರಿಸಿದ್ದಕ್ಕೆ,
ಧನ್ಯವಾದಗಳು
-ಹಂಸಾನಂದಿ
March 10th, 2008 at 9:07 pm
olleya blog galannu parichayisiddakee danyavada,
vachakara vani thara athava nimma puta thara enadru tharuva yochane ideya ?
Raju.
March 14th, 2008 at 2:06 am
ನನ್ನ ಬ್ಲಾಗ್(’ಇರುವುದೆಲ್ಲವ ಬಿಟ್ಟು’)ನ ಆತ್ಮೀಯ ಪರಿಚಯಕ್ಕೆ ಕೆಂಡಸಂಪಿಗೆಗೆ ಪ್ರೀತಿಯ ಧನ್ಯವಾದಗಳು:)
March 14th, 2008 at 11:09 pm
tumba danyavaada..nanna putaani blogna illi parichayisiddakkke
thanks blagini an thanks.namma preethiya kendasampige ge:)
March 29th, 2008 at 10:36 pm
ಮೊದಲಿಗೆ ನನ್ನ ಅಂತರ್ಜಾಲ ತಾಣದ ಬಗ್ಗೆ ಮಾಹಿತಿ ನೀಡಿದುದಕ್ಕೆ ಅನಂತಾನಂತ ವಂದನೆಗಳು
ಇಂದು ಬ್ಲಾಗಿನ ಬಗ್ಗೆ ಹೆಸರಿಸಿರುವ ’ತುಳಸೀವನ’ದ ಬಗ್ಗೆ ನನ್ನದೊಂದು ಮಾತು - ಕೆಂಡಸಂಪಿಗೆಯಲ್ಲಿ ವರದಿಯಾಗಿರುವುದು ಸರಿಯಿಲ್ಲವೆಂದು ನನ್ನ ಅನಿಸಿಕೆ. ತುಳಸೀವನಗಳನ್ನು ತರುಲತೆಗಳನ್ನು ಸಾಕಿ ಸಲಹುತ್ತಿರುವವರು ಶ್ರೀಮತಿ ತ್ರಿವೇಣಿ ಶ್ರೀನಿವಾಸರಾವ್ ಅವರು. ಚಿಕಾಗೋ ವಾಸಿಯಾಗಿರುವ ಈಕೆಯ ತುಳಸೀವನ ಎಂಬ ಅಂಕಣ ಅದುವೇಕನ್ನಡ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು ಮತ್ತು ಮನೆ ಮನೆಗಳ ಮಾತಾಗಿತ್ತು.
ಒಮ್ಮೆ ಅವಲೋಕಿಸಿ ನೋಡಬೇಕೆಂದು ಕೇಳಿಕೊಳ್ಳುವೆ.
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
March 30th, 2008 at 1:35 am
ನನ್ನ ಪುಟ್ಟ ತೋಟ “ತುಳಸೀವನ”ದತ್ತ ಕೆಂಡಸಂಪಿಗೆ ನೋಟ ಹರಿಸಿದ್ದಕ್ಕೆ ಧನ್ಯವಾದಗಳು. ಒಂದು ತಿದ್ದುಪಡಿಯನ್ನು ಬಯಸುತ್ತಿದ್ದೇನೆ. “ದಿನದ ಬ್ಲಾಗಿನ ಬೊಗಸೆಯಲ್ಲಿ ಶೃತಿ ಅವರ ತುಳಸೀವನ” ಎಂದು ಬರೆದಿದ್ದೀರಿ. ನನ್ನ ಹೆಸರು ಶೃತಿ ಅಲ್ಲ. “ಶ್ರೀತ್ರಿ” (sritri)ನನ್ನ user ID.
ಮೆಚ್ಚುಗೆಯ ನುಡಿಗಳಿಗಾಗಿ ಮತ್ತೊಮ್ಮೆ ವಂದಿಸುತ್ತಾ,
ತ್ರಿವೇಣಿ ಶ್ರೀನಿವಾಸರಾವ್
ಇಲಿನಾಯ್