ಬರೆದವರು ಅಬ್ದುಲ್ ರಶೀದ್

sammpige.jpgನಾವು ನಾಳೆ ನಿಮ್ಮನ್ನು ಖಂಡಿತ  ಮೂರ್ಖರನ್ನಾಗಿ ಮಾಡುವುದಿಲ್ಲ. ಬದಲಿಗೆ ನಿಮ್ಮ ಮುಖದಲ್ಲೊಂದು ಮಂದಹಾಸ ಮೂಡಿಸಲಿದ್ದೇವೆ. ನಮಗೆ ಗೊತ್ತು, ಯಾರು ಏನೇ ಹೇಳಿದರೂ ನಾಳೆ ಮಾತ್ರ ಯಾರೂ ಸತ್ಯವನ್ನು ನಂಬುವುದಿಲ್ಲ, ಯಾರೂ ಸತ್ಯವನ್ನು ನುಡಿಯುವುದಿಲ್ಲ ಮತ್ತು ಎಲ್ಲರೂ ಸುಳ್ಳುಗಳನ್ನು ನುಡಿಯುತ್ತೇವೆ ಮತ್ತು ಸುಳ್ಳುಗಳನ್ನು ನಂಬುತ್ತೇವೆ.

ನಾಳೆಯ ದಿನ ಸುಳ್ಳುಗಳ ಮುಕ್ತ ಮಾರುಕಟ್ಟೆ ಮತ್ತು ಅಸತ್ಯಗಳ ಜಾಗತೀಕರಣ. ಆದರೆ ನಾವು ಮಾತ್ರ ಪ್ರಮಾಣ ಮಾಡಿ ಹೇಳುತ್ತಿದ್ದೇವೆ. ಖಂಡಿತ ನಾವು ನಿಮ್ಮನ್ನು ನಾಳೆ ಮೂರ್ಖರನ್ನಾಗಿ ಮಾಡುವುದಿಲ್ಲ. ಬದಲು ನಿಮ್ಮ ಮುಖದಲ್ಲೊಂದು ಮಂದಹಾಸ ಮೂಡಿಸಲಿದ್ದೇವೆ.
 
ಮೊದಲೆಲ್ಲ ಬರೀ ಶಾಲಾ ಮಕ್ಕಳು, ಬೀದಿಯಲ್ಲಿ ಆಡುವ ಮಕ್ಕಳು ಮಾತ್ರ ಮೂರ್ಖರ ದಿನವನ್ನು ಗಂಭೀರವಾಗಿ ಆಚರಿಸುತ್ತಿದ್ದರು. ಆದರೆ ಜಗತ್ತು ಬೆಳೆಯುತ್ತಾ ಬಂದಂತೆ ಸತ್ಯದ ಪ್ರತಿಪಾದಕರಾದ ಮಾಧ್ಯಮಗಳು ವರ್ಷದಲ್ಲಿ ಒಂದು ದಿನವಾದರೂ ನಾವು ಸುಳ್ಳು ಹೇಳುತ್ತೇವೆ ಎಂಬ ಸುಳ್ಳನ್ನು ಹೇಳಿ, ಬುದ್ದಿವಂತರಾದ ನಾಗರಿಕರನ್ನು ಹಳ್ಳಕ್ಕೆ ಬೀಳಿಸುವ ಆನಂದವನ್ನು ಆಚರಿಸುತ್ತಿದ್ದಾರೆ. ಈ ಮೂಲಕ ಓದುಗರು, ಅಮಾಯಕರೂ, ಹಾಗೂ ಮೂಲತಹಃ ಸಜ್ಜನರೂ ಆದ ನಮ್ಮನ್ನು ದುಃಖಕ್ಕೀಡುಮಾಡುತ್ತಿದ್ದಾರೆ.
 
ಆದರೆ ನಾವು ಆಣೆಯಿಟ್ಟು ಹೇಳುತ್ತಿದ್ದೇವೆ.  ನಮ್ಮ ಮಾತನ್ನು ನಂಬಿ. ನೀವು ಯಾರೂ ಮೂರ್ಖರಾಗುವುದಿಲ್ಲ. ಬದಲು ನಾವು ಅಂದುಕೊಂಡಿರುವುದು ಸರಿಯೇ ಆದರೆ, ನೀವು ನಾಳೆ ಸಂತುಷ್ಟಗೊಳ್ಳಲಿದ್ದೀರಿ. ಹಾಗಾಗಿ ನಿಮ್ಮಲ್ಲಿ ಒಂದು ಪ್ರಾರ್ಥನೆ. ನೀವು ನಮ್ಮನ್ನು ನಂಬಿ. ನಾವು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ.

ಆಪಲ್, ಚೀನಾ ಮತ್ತು ದಲಾಯಿಲಾಮಾ- ಹತ್ತು ವರ್ಷಗಳ ಹಿಂದೆ

dalailama.jpg

ಚೀನಾ, ಟಿಬೆಟನ್ ಧರ್ಮಗುರು ದಲಾಯಿಲಾಮಾರನ್ನು ಮತ್ತೆ ಹೊಸದಾಗಿ ಇನ್ನಷ್ಟು ಹೆಚ್ಚು ದ್ವೇಷಿಸಲು ತೊಡಗಿರುವುದು ಇತ್ತೀಚಿನ ಸುದ್ದಿ. ಆದರೆ ಇದಕ್ಕಿಂತಲೂ ಹೊಸ ಸುದ್ದಿ ಹತ್ತು ವರ್ಷಗಳ ಹಿಂದೆ ಕಂಪ್ಯೂಟರ್ ಕ್ಷೇತ್ರದ ಕ್ರಾಂತಿಕಾರಿ ಆಪಲ್ ಸಂಸ್ಥೆ ಚೀನಾವನ್ನು ಸಂತುಷ್ಟಗೊಳಿಸಲು ತನ್ನ ಜಾಹೀರಾತಿನಿಂದ ದಲಾಯಿಲಾಮಾರನ್ನು ಹೊರಹಾಕಿತ್ತು ಎಂಬುದು.

ಆಪಲ್ ಸಂಸ್ಥೆ ಹತ್ತು ವರ್ಷಗಳ ಕೆಳಗೆ ಮಹಾತ್ಮಗಾಂಧಿ, ಮೊಹಮ್ಮದ್ ಆಲಿ, ಪಾಬ್ಲೊ ಪಿಕಾಸೊ ಮತ್ತು ದಲಾಯಿಲಾಮಾರ ಮುಖಚಿತ್ರಗಳನ್ನು ತನ್ನ ಜಾಹೀರಾತಿಗೆ ಬಳಸಿಕೊಂಡಿತ್ತು. ಇತರರಿಗಿಂತ ತಾನು ಹೇಗೆ ಬಿನ್ನ ಹಾಗೂ ಬುದ್ದಿವಂತ ಎಂಬುದನ್ನು ಜಗತ್ತಿಗೆ ತೋರಿಸಲು ಈ ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ತನ್ನ ಜಾಹೀರಾತುಗಳಲ್ಲಿ ಎದ್ದು ಕಾಣಿಸುವಂತೆ ಬಳಸಿಕೊಂಡಿತ್ತು. ಆದರೆ ಸ್ವಲ್ಪವೇ ದಿನಗಳಲ್ಲಿ ಇದ್ದಕ್ಕಿದ್ದಂತೆ ಹಾಂಕಾಂಗ್ ಹಾಗೂ ಚೀನಾಗಳಲ್ಲಿ ದಲಾಯಿಲಾಮಾರ ಚಿತ್ರ ಜಾಹೀರಾತುಗಳಿಂದ ಇದ್ದಕ್ಕಿದ್ದಂತೆ ಮಾಯವಾಯಿತು.

ಚೀನಾವನ್ನು ಸಂಪ್ರೀತಗೊಳಿಸುವುದೇ ದಲಾಯಿಲಾಮಾರನ್ನು ಹೊರಹಾಕಿದ್ದರ ಹಿಂದಿನ ಕಾರಣವಾಗಿತ್ತು.

ಚೀನಾ ದಲಾಯಿಲಾಮಾರನ್ನು ಹೊರಹಾಕಬೇಕೆಂದು ಹೇಳಿರಲಿಲ್ಲ. ಆದರೆ ಈ ವಿಷಯ ರಾಜಕೀಯವಾಗಿ ಸೂಕ್ಷ್ಮವಾಗಿರುವುದರಿಂದ ನಾವೇ ಸ್ವಯಂಪ್ರೇರಿತರಾಗಿ ಹೀಗೆ ಮಾಡಬೇಕಾಯಿತು ಎಂದು ಆಪಲ್ ಹೇಳಿತ್ತು.
 
ಆಪಲ್‌ನ ಈ ಕ್ರಮದಿಂದ ಸಿಟ್ಟಿಗೆದ್ದ ದಲಾಯಿಲಾಮಾರ ವಕ್ತಾರರೊಬ್ಬರು ಆಪಲ್ ದಲಾಯಿಲಾಮಾರನ್ನು ಹೀಗೆ ಬೇಕಾಬಿಟ್ಟಿಯಾಗಿ ಹೊರಹಾಕುತ್ತದೆ ಎಂದು ಗೊತ್ತಿದ್ದರೆ ಅವರು ಈ ಚಿತ್ರಕ್ಕೆ ಪೋಸ್ ಕೊಡುತ್ತಲೇ ಇರಲಿಲ್ಲ, ದಲಾಯಿಲಾಮಾರಿಗಿಂತ ಬೆಳೆಯುತ್ತಿರುವ ಚೀನಾದ ಮಾರುಕಟ್ಟೆ ಆಪಲ್‌ಗೆ ಮುಖ್ಯವಾಗಿಬಿಟ್ಟಿತು ಎಂದು ನೊಂದುಕೊಂಡಿದ್ದರು.
 
ಇದಕ್ಕೆ ಉತ್ತರಿಸಿದ್ದ ಆಪಲ್ ಸಂಸ್ಥೆ ದಲಾಯಿಲಾಮಾರ ಮಹಾತ್ಮೆಯ ಬಗ್ಗೆ ನಮ್ಮ ಎರಡು ಮಾತಿಲ್ಲ, ನಾವು ಜಗತ್ತಿನ ಇತರ ಕಡೆಗಳಲ್ಲಿ ಎಲ್ಲೂ ದಲಾಯಿಲಾಮಾರನ್ನು ನಮ್ಮ ಜಾಹೀರಾತಿನಿಂದ ಹೊರಗೆ ಹಾಕಿಲ್ಲ, ಹೊರಹಾಕಿರುವುದು ಕೇವಲ ಚೀನಾದಲ್ಲಿ ಮಾತ್ರ. ಹಾಗಾಗಿ ಯಾರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಹೇಳಿತ್ತು.
 
ಚೀನಾ ಸುಮಾರು ೫೦ವರ್ಷಗಳ ಹಿಂದೆ ದಲಾಯಿಲಾಮಾರನ್ನು ಹೊರಹಾಕಿದ್ದು ಬಹಳ ಹಳೆಯ ಸುದ್ದಿ. ಈಗ ಟಿಬೆಟನ್ನರು ನಮಗೆ ಸ್ವಾಯತ್ತತೆ ಕೊಡಿ ಎಂದು ಟಿಬೆಟಿನಲ್ಲೇ ಚೀನಾದ ವಿರುದ್ದ ಮುಗಿಬಿದ್ದಿರುವುದು ತೀರಾ ಇತ್ತೀಚಿನ ಸುದ್ದಿ. ಆದರೆ ಈ ದಿನದ ಸುದ್ದಿ ಆಪಲ್ ಸಂಸ್ಥೆ ೧೦ವರ್ಷಗಳ ಹಿಂದೆಯೇ ಚೀನಾದಿಂದ ದಲಾಯಿಲಾಮಾರನ್ನು ಇನ್ನೊಮ್ಮೆ ಹೊರಹಾಕಿತ್ತು ಎಂಬುದು.

ಚೀನಾದಲ್ಲಿ ಆಗುತ್ತಿರುವುದು ನಮಗೂ ಆಗಲಿದೆಯೇ?

(ಬರೆದವರು-ಜೋಮನ್ ವರ್ಗಿಸ್)

ಗುಂಡುಸೂಜಿಯಿಂದ ಹಿಡಿದು ಹಲ್ಲು ಕೀಳುವ ಇಕ್ಕಳದ ತನಕ ಪ್ರತಿಯೊಂದನ್ನೂ ತಯಾರಿಸಿ ರಫ್ತು ಮಾಡುತ್ತಿದ್ದ ಚೀನಾ ಜಾಗತೀಕರಣದಿಂದ ಎಷ್ಟು ಲಾಭ ಪಡೆದುಕೊಂಡಿತ್ತೋ ಅಷ್ಟೇ ಪ್ರಮಾಣದ ನಷ್ಟವನ್ನೂ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚೈನಾ ಆಟಿಕೆ, ಚೈನಾ ಬೈಸಿಕಲ್, ಚೈನಾ ಸೋಪ್, ಚೈನಾ ಮಾರ್ಬಲ್ಸ್, ಚೈನಾ ಪಿಠೋಪಕರಣ ಎಂದೆಲ್ಲಾ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ತುಂಬಿಕೊಂಡಿದ್ದ ಚೈನಾ ಮೇಡ್ ಉತ್ಪನ್ನಗಳು ಈಗ ಮೊದಲಿಷ್ಟು ಏಕಸ್ವಾಮ್ಯತೆಯನ್ನು ಉಳಿಸಿಕೊಂಡಿಲ್ಲ. ಏಷ್ಯಾದ ಇತರ ದೇಶಗಳೂ ಇಂತಹ ಸಣ್ಣ ಕೈಗಾರಿಕೆಗಳತ್ತ ಒಲವು ತೋರಿಸಿದ ನಂತರ, ಅಲ್ಲಿ ಮಾನವ ಸಂಪನ್ಮೂಲಗಳು ಇಲ್ಲಿಗಿಂತಲೂ ಕಡಿಮೆ ದರದಲ್ಲಿ ಲಭ್ಯವಾಗಲು ತೊಡಗಿದ ನಂತರ, ಚೀನಾದ ಲಕ್ಷಾಂತರ ಕೈಗಾರಿಕೆಗಳು ಆರ್ಥಿಕ ನಷ್ಟದಿಂದ ನೆಲಕಚ್ಚಿವೆ ಎನ್ನುತ್ತದೆ ಬಿಸಿನೆಸ್ ವೀಕ್ ನಿಯತಕಾಲಿಕದ ವರದಿ.

ಮೊದ ಮೊದಲು ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಚೀನಾ ಉತ್ಪನ್ನಗಳೇ ಹೆಚ್ಚು ರಫ್ತಾಗುತ್ತಿದ್ದವು. ಅಮೆರಿಕದ ಗೃಹ ನಿರ್ಮಾಣ ಮಾರುಕಟ್ಟೆ ಚೀನಾದ ಮಾನವ ಸಂಪನ್ಮೂಲವವನ್ನೇ ಸಂಪೂರ್ಣವಾಗಿ ಅವಲಂಬಿಸಿತ್ತು. ಅಮೆರಿಕದಲ್ಲಿ ಹೊಸದಾಗಿ ಕಟ್ಟಿಸುತ್ತಿದ್ದ ಮನೆಗಳಿಗೆ ಚೀನಾದಿಂದಲೇ ಪೀಠೋಪಕರಣಗಳು ರಫ್ತಾಗುತ್ತಿದ್ದವು. ಹೀಗೆ ಜಾಗತೀಕರಣದ ಟ್ರೆಂಡ್ ಪ್ರಾರಂಭವಾದ ಹೊಸತರಲ್ಲಿ ಚೀನಾದಲ್ಲಿ ಪಾದರಕ್ಷೆ, ದೀಪಗಳು, ಬಯೋಟೆಕ್, ಎಲೆಕ್ಟ್ರಾನಿಕ್ಸ್ ವಸ್ತುಗಳು ಸೇರಿದಂತೆ ಸಾವಿರಾರು ಉತ್ಪನ್ನಗಳನ್ನು ಉತ್ಪಾದಿಸುವ ಲಕ್ಷಾಂತರ ಕಾರ್ಖಾನೆಗಳು ಅಣಬೆಗಳಂತೆ ಹುಟ್ಟಿಕೊಂಡಿದ್ದವು. ಸರಕರಾವೂ ರಫ್ತು ಸುಂಕದಲ್ಲಿ ವಿನಾಯತಿ ಘೋಷಿಸಿದ್ದರಿಂದ ಉದ್ಯಮಿಗಳು ಡಾಲರ್ ಮೊತ್ತದಲ್ಲಿ ಲಾಭವನ್ನು ಕೊಳ್ಳೆಹೊಡೆಯುತ್ತಿದ್ದರು. ಆದರೆ ಯಾವಾಗ ಭಾರತ, ವಿಯಟ್ನಾಂ ಸೇರಿದಂತೆ ಏಷ್ಯಾದ ಇತರ  ದೇಶಗಳು ಈ ಉದ್ಯಮಕ್ಕೆ ಇಳಿದವೋ, ಚೀನಾದ ಲೆಕ್ಕಾಚಾರ ತಲೆಕಳಗಾಯಿತು. ಆರ್ಥಿಕವಾಗಿ ನಷ್ಟ ಎದುರಿಸಲಾರಂಭಿಸಿತು. ಚೀನಾದ ಸರಕುಗಳಿಗಿಂತ ಕಡಿಮೆ ದರದಲ್ಲಿ ಭಾರತ, ವಿಯಟ್ನಾಂ ಉತ್ಪನ್ನಗಳು ಪಾಶ್ಚಿಮಾತ್ಯ ಮಾರುಕಟ್ಟೆಯಲ್ಲಿ ದೊರಕಲಾರಂಭಿಸಿದವೋ ಚೀನಾದ ಸರಕುಗಳು  ಉಗ್ರಾಣದಲ್ಲೇ ಉಳಿಯತೊಡಗಿದವು.

ಇತ್ತೀಚಿನ ವರದಿಗಳ ಪ್ರಕಾರ ಚೀನಾದ ಕೈಗಾರಿಕೆ ನೆಲೆಗೊಂಡಿರುವ ದಂಗೂನ್‌ ಪ್ರಾಂತ್ಯದಲ್ಲಿ ಈ ವರ್ಷ ಅರವತ್ತು ಸಾವಿರ ಚಿಕ್ಕ ಉದ್ಯಮಗಳು ಆರ್ಥಿಕ ನಷ್ಟದಿಂದ ಮುಚ್ಚಿಲ್ಪಟ್ಟಿವೆ. ಲಕ್ಷಾಂತರ ಕಾರ್ಮಿಕರು ಕೆಲಸವಿಲ್ಲದೆ ಕೂತಿದ್ದಾರೆ. ಅಷ್ಟೇ ಅಲ್ಲ ಜಾಗತೀಕರಣದ ಪರಿಣಾಮ ಹೇಗಿರುತ್ತದೆ ನೋಡಿ, ಚೀನಾದಲ್ಲಿ ಮಾನವಸಂಪನ್ಮೂಲಗಳ ದರ ಹೆಚ್ಚು ಎಂದು ತಿಳಿಯುತ್ತಲೇ ಅಂತಾರಾಷ್ಟ್ರೀಯ ಕಂಪನಿಗಳು ಭಾರತ, ವಿಯಟ್ನಾಂಗಳತ್ತ ಮುಖಮಾಡಿವೆ. ಇಲ್ಲಿ ಅಗ್ಗವಾಗಿ ದೊರಕುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಲು ಎಷ್ಟು ಬೇಕಾದರೂ ಬಂಡವಾಳ ಸುರಿಯಲು ಆಸಕ್ತಿ ತೋರಿಸಿವೆ. ಅತ್ತ ಚೀನಾ ಜಾಗತೀಕರಣದಿಂದ ಪಡೆದ ಲಾಭಕ್ಕೆ ಈಗ ಬಡ್ಡಿ ತೆರಬೇಕಾಗಿದೆ.

ಸಗಟು, ಚಿಲ್ಲರೆ  ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಪೈಪೋಟಿ ಏನೇ ಇರಲಿ, ಚೀನಾ ಈಗ ಎದುರಿಸುತ್ತಿರುವುದು ಜಾಗತೀಕರಣದ ನಿಜವಾದ ಫಲ ಎನ್ನುತ್ತದೆ ಅಮೆರಿಕದ ಚೇಂಬರ್ ಆಫ್ ಕಾಮರ್ಸ್. ಅದು ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಜಾಗತೀಕರಣದಿಂದ ಲಾಭ ದೋಚಿಕೊಂಡ ಹಾಗೂ ನಷ್ಟ ಹೊಂದಿದ ದೇಶಗಳ ಹಾಗೂ ಕಂಪನಿಗಳ ವಿವರಗಳಿವೆ. ಈಗ ಹೇಳಿ ಕೇಳಿ ಜಾಗತೀಕರಣ ಎನ್ನುವುದು ನಮ್ಮ ನೆಲದಲ್ಲಿ ಜನಪ್ರೀಯವಾಗುತ್ತಿದೆ. ಎಲ್ಲಾ ದಾರಿಗಳು ಮುಂಬಯಿ ಶೇರು ಸೂಚ್ಯಂಕದತ್ತ ಮುಖಮಾಡಿ ನಿಂತಿರುವ ಈ ಹೊತ್ತಲ್ಲಿ ನಾವು ಚೀನಾದಲ್ಲಿ ಆಗುತ್ತಿರುವುದರ ಬಗ್ಗೆ ಯೋಚಿಸಬೇಕಾಗಿದೆ.

ಅಮೆರಿಕಕ್ಕೆ ಹೋದರೂ ಜೀತ ತಪ್ಪಲಿಲ್ಲ 

indian.jpgಅಮೆರಿಕದ ಲೂಸಿಯಾನದ ಸಮೀಪ ನ್ಯೂ ಓರ್‌ಲೇನ್ ಎಂಬ ಚಿಕ್ಕ ಪಟ್ಟಣವಿದೆ. ಈ ಪಟ್ಟಣಕ್ಕೆ ಹೊಂದಿಕೊಂಡೇ ಇರುವ ಮಿಸಿಸಿಪಿ ಹಡಗು ನಿರ್ಮಾಣ ಕಟ್ಟೆಯಲ್ಲಿ ಜೀತದಾಳುವಿನಂತೆ ಕೆಲಸ ಮಾಡುತ್ತಿದ್ದ  ನೂರಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ಇದೀಗ ಸ್ಥಳೀಯ ಟಿವಿ ವಾಹಿನಿಯೊಂದರ ಗಮನಕ್ಕೆ ಬಿದ್ದು ಬಿಡುಗಡೆಗಾಗಿ ಹಾತೊರೆಯುತ್ತಿದ್ದಾರೆ. ಎರಡು ವರ್ಷಗಳ ಕೆಳಗೆ ಕತ್ರೀನಾ ಬಿರುಗಾಳಿ ಬೀಸಿದಾಗ ನೆಲಕಚ್ಚಿದ ಹಡಗು ನಿರ್ಮಾಣ ಕಟ್ಟೆಯೊಂದರಲ್ಲಿ ಕೆಲಸ ಮಾಡಲು ಈ ಕಾರ್ಮಿಕರನ್ನು ಕರೆತರಲಾಗಿದೆ. ಅಮೆರಿಕದಲ್ಲಿ ಅತ್ಯುತ್ತಮ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ನಕಲಿ ಸಂಸ್ಥೆಯೊಂದು ಒಬ್ಬೊಬ್ಬರಿಂದ ಇಪ್ಪತ್ತುಸಾವಿರ ಡಾಲರ್‌ ಕಿತ್ತುಕೊಂಡು ಭಾರಿ ವಂಚನೆ ನಡೆಸಿದೆ. ತಾತ್ಕಾಲಿಕ ವೀಸಾ ಅವಧಿ ಮುಗಿದ ಈ ಕಾರ್ಮಿಕರು ಕನಿಷ್ಠ ಸೌಲಭ್ಯವೂ ಇಲ್ಲದ  ಹಡಗುಕಟ್ಟೆಯಲ್ಲಿ ನಿಕೃಷ್ಟ ಬದುಕು ನಡೆಸುತ್ತಿದ್ದರು, ಅವರನ್ನು ಎಷ್ಟು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂದರೆ ಅವರೆಲ್ಲರೂ ಈಗ ಮಾನಸಿಕವಾಗಿ ಅಸ್ವಸ್ಥರಾದವರಂತಾಗಿದ್ದಾರೆ ಎನ್ನುತ್ತಾರೆ ಇವರನ್ನು ಪತ್ತೆ ಹಚ್ಚಿರುವ ಅಮೆರಿಕದ ಡಬ್ಲ್ಯೂ‌ಎಲ್‌ಒಎಕ್ಸ್ -ಟಿವಿ ಚಾನೆಲ್.

ಈ ನತದೃಷ್ಠ ಭಾರತೀಯ ಕಾರ್ಮಿಕರ ಷೋಷಣೆ ಇಲ್ಲಿಗೇ ನಿಂತಿಲ್ಲ. ತಾತ್ಕಾಲಿಕ ವೀಸಾ ಅವಧಿ ಮುಗಿದ ನಂತರ ಇವರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗಿದೆ. ಪ್ರತಿಭಟಿಸಿದವರನ್ನು ಗಡಿಪಾರು ಮಾಡುವುದಾಗಿ, ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಸಲಾಗಿದೆ. ಅನೇಕರನ್ನು ದೈಹಿಕವಾಗಿ ಮರ್ಧಿಸಲಾಗಿದೆ. `ನಾವು ಎಲ್ಲಿದ್ದೇವೆ ಎಂದೇ ನಮಗೆ ಗೊತ್ತಿರಲಿಲ್ಲ, ನಮ್ಮನ್ನೆಲ್ಲಾ ಬಂದೂಕಿನ ಪಹರೆಯಲ್ಲಿ ಕೆಲಸ ಮಾಡಿಸುತ್ತಿದ್ದರು, ಒಂದೇ ಕೋಣೆಯಲ್ಲಿ ಇಪ್ಪತೈದು ಜನರನ್ನು ಕೂಡಿ ಹಾಕಲಾಗಿತ್ತು, ನಮ್ಮ ಸಂಬಳದಲ್ಲೇ ಈ ಕೋಣೆಯ ಬಾಡಿಗೆಯೆಂದು ಒಂದೂವರೆ ಸಾವಿರ ಡಾಲರ್ ಕಿತ್ತುಕೊಳ್ಳಲಾಗುತ್ತಿತ್ತು`, ಎಂದು ಅಳುತ್ತಲೇ ಕ್ಯಾಮರಾ ಮುಂದೆ ಹೇಳುತ್ತಾನೆ ಈ ಕಾರ್ಮಿಕರಲ್ಲಿ ಒಬ್ಬರಾಗಿರುವ ಕೇರಳದ ಸಾಬುಲಾಲ್ ವಿಜಯನ್. ಇದು ವಿಜಯನ್ ಒಬ್ಬರದೇ ಕಥೆ ಅಲ್ಲ, ಆತನೊಂದಿಗಿರುವ ಉಳಿದ ನೂರರಷ್ಟು ಕಾರ್ಮಿಕರ ಸ್ಥಿತಿಯೂ ಹೆಚ್ಚೂ ಕಡಿಮೆ ಇದೆ. ಇವೆರೆಲ್ಲಾ ಅಮೆರಿಕದಲ್ಲಿ ಉದ್ಯೋಗ ಕೊಡಿಸುತ್ತೇವೆ, ಮನೆ ಕೊಡಿಸುತ್ತೇವೆ, ಗ್ರೀನ್ ಕಾರ್ಡ್ ಕೊಡುತ್ತೇವೆ ಎಂದು ಹೇಳಿದ ಕಂಪನಿಯ ಮೋಸದ ಜಾಲಕ್ಕೆ ಬಿದ್ದವರು.

ಮಿಸಿಸಿಪಿಯಲ್ಲಿದ್ದ ಭಾರತೀಯ ಕಾರ್ಮಿಕರು ಕೊನೆಗೂ ಪ್ರತಿಭಟನೆಗೆ ಇಳಿಯುತ್ತಿದ್ದಂತೆ ಮಾನವ ಕಳ್ಳಸಾಗಾಣಿಕೆಯ ಮತ್ತೊಂದು ಮುಖ ತೆರೆದುಕೊಂಡಿದೆ. ಅಮೆರಿಕದ ಗೃಹ ಇಲಾಖೆ ಇದನ್ನು ಅಸಹ್ಯವಾದ, ಹೇವರಿಕೆ ಹುಟ್ಟಿಸುವ ಅಪರಾಧ ಎಂದು ಹೇಳಿದೆ. ದೇಶದ ವಿವಿಧ ಭಾಗಗಳಲ್ಲಿ ಈ ರೀತಿ ಕೆಲಸ ಮಾಡುತ್ತಿರಬಹುದಾದ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದೆ.

ಅಮೇರಿಕದಲ್ಲಿ ನಡೆದಂತೆ ಜಗತ್ತಿನ ಹಲವು ಭಾಗಗಳಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ. ಅರಬ್ ರಾಷ್ಟ್ರಗಳಲ್ಲಿ ಸಾವಿರಾರು ಭಾರತೀಯ ಕಾರ್ಮಿಕರು ತಮ್ಮ ವೀಸಾ ಅವಧಿ ಮುಗಿದು, ಅತ್ತ ಅಲ್ಲೂ ಇರಲಾಗದೆ ಇತ್ತ ಮರಳಿಯೂ ಬರಲಾಗದೆ ಪಡಬಾರದ ಕಷ್ಟ ಪಡುತ್ತಿದ್ದಾರೆ. ವಲಸೆ ಇಲಾಖೆ ಎಷ್ಟೇ ಕಠಿಣ ಕಾನೂನುಗಳನ್ನು ರೂಪಿಸಿದರೂ ಮಾನವ ಕಳ್ಳಸಾಗಾಣಿಕೆ ಚಾಪೆಯ ಕೆಳಗಿನಿಂದ ನುಸುಳುತ್ತಲೇ ಇದೆ.

(ಚಿತ್ರ ಕೃಪೆ-ಸಿಎನ್‌ಬಿಸಿ ಡಾಟ್ ಕಾಮ್)

ಹಾಕೋಣವೆಂದರೆ ಆಕೆಯ ಒಂದು ಚಿತ್ರವೂ ಸಿಗುತ್ತಿಲ್ಲ

(ಬರೆದವರು - ಅಬ್ದುಲ್ ರಶೀದ್)

haiku.jpgಸನ್ ಹೊ ಯನ್ ಎಂಬುದು ದಕ್ಷಿಣ ಕೊರಿಯಾದ ಕವಯಿತ್ರಿಯೊಬ್ಬರ ಹೆಸರು. ೨೦೦೩ರಲ್ಲಿ ತೀರಿಹೋದಾಗ ಆಕೆಗೆ ಎಂಬತ್ತು ವರ್ಷ ವಯಸ್ಸು. ಆಕೆ ಆರು ಕವಿತಾ ಸಂಕಲನಗಳನ್ನು ಬರೆದಿದ್ದಳು. ಜಪಾನಿನ ಅರಮನೆಯಲ್ಲಿ ನಡೆದ ಕಾವ್ಯ ಹಬ್ಬದಲ್ಲೂ ಆಕೆ ಕವಿತೆ ಓದಿದ್ದಳು. ಜಪಾನಿನ ಪ್ರಧಾನಮಂತ್ರಿ ದಕ್ಷಿಣ ಕೊರಿಯಾದ ಪ್ರಧಾನಮಂತ್ರಿಯ ಜೊತೆಗಿನ ಜಂಟಿ ಸುದ್ದಿಗೋಷ್ಠಿಯೊಂದರಲ್ಲಿ ಈಕೆಯ ಕವಿತೆಯನ್ನು ಓದಿದಾಗ ಕೊರಿಯಾದ ಜನರು ಯಾರು ಈಕೆ ನಮಗೇ ಗೊತ್ತಿಲ್ಲದ ನಮ್ಮ ದೇಶದ ಖ್ಯಾತ  ಕವಯಿತ್ರಿ ಎಂದು ಮೂಗು ಮುರಿದಿದ್ದರು. ಆಕೆ ಆ ಕವಿತೆಯಲ್ಲಿ ಕೊರಿಯಾ ಮತ್ತು ಜಪಾನ್ ಸ್ನೇಹದಿಂದ ಬಾಳಲಿ ಎಂದು ಬರೆದಿರುವುದು ಕೇಳಿದ ಮೇಲಂತೂ ಕೊರಿಯನ್ನರು ಉರಿದೇ ಬಿಟ್ಟಿದ್ದರು.

ಏಕೆಂದರೆ ಜಪಾನ್ ಕೊರಿಯಾ ದೇಶವನ್ನು ಮೂವತ್ತೈದು ವರ್ಷಗಳ ಕಾಲ ಆಳಿ ಹುರಿದು ಮುಕ್ಕಿತ್ತು. ಈ ಮೂವತ್ತೈದು ವರ್ಷಗಳ ಕಾಲದಲ್ಲಿಯೇ ಹುಟ್ಟಿ ಬೆಳೆದಿದ್ದ ಸನ್ ಎಂಬ ಈ ಕವಯಿತ್ರಿ ಸಹಜವಾಗಿಯೇ ಜಪಾನಿ ಭಾಷೆ ಕಲಿತಿದ್ದಳು. ನಾವು ಇಂಗ್ಲಿಷ್ ಕಲಿತ ಹಾಗೆ. ಬರೇ ಕಲಿತದ್ದು ಮಾತ್ರ ಅಲ್ಲ, ಆ ಭಾಷೆಯಲ್ಲಿ ಕವಿತೆಯನ್ನೂ ಬರೆಯಲು ಶುರುಮಾಡಿದ್ದಳು. ಅದರಲ್ಲೂ ಜಪಾನೀ ಹಾಯ್ಕುಗಳು ಆಕೆಯ ಪ್ರೀತಿ ಪಾತ್ರ ಬರವಣಿಗೆಯಾಗಿತ್ತು. ಅವಳಂತೆಯೇ ಜಪಾನಿ ಆಳ್ವಿಕೆಯ ಆ ತಲೆಮಾರಿನ ಪ್ರತಿಭಾವಂತ ಕೊರಿಯಾದ ಬರಹಗಾರರ ತಂಡವೇ ಜಪಾನ್ ಹಾಯ್ಕುಗಳನ್ನು ಬರೆದು ಓದಿ ಆನಂದಿಸುತ್ತಿದ್ದರು.

ಎರಡನೇ ಮಹಾಯುದ್ಧದಲ್ಲಿ ಜಪಾನ್ ಸೋತು, ಕೊರಿಯಾದಿಂದ ಕಾಲು ಕಿತ್ತಾಗ ಈ ಕವಿಗಳ ತಂಡ ನಾಲಗೆಯಿಲ್ಲದ ಬಾಯಿಗಳಂತಾಯಿತು. ಕೊರಿಯನ್ನರ ತಮಾಷೆಗೆ, ನಿರ್ಲಕ್ಷ್ಯಕ್ಕೆ ಗುರಿಯಾಗಬೇಕಾಯಿತು. ಸನ್ ತೀರಿ ಹೋದಾಗ ಸುಂದರ ಹಾಯ್ಕುಗಳನ್ನು ಬರೆದ ಮುದುಕಿಯೊಬ್ಬಳು ಇದುವರೆಗೆ ಬದುಕಿದ್ದಳು ಎಂದು ಯಾರೂ ನೆನಪಿಸಿಕೊಳ್ಳಲಿಲ್ಲ.

ಈಗ ಮಹಾಯುದ್ಧದ ನಂತರ, ಹಲವು ವರ್ಷಗಳ ಅನುಮಾನ, ದ್ವೇಷಗಳ ನಂತರ ಆರ್ಥಿಕ ಕಾರಣಗಳಿಗಾಗಿ ಜಪಾನ್ ಮತ್ತು ಕೊರಿಯಾ ಮತ್ತೆ ಹತ್ತಿರವಾಗಬೇಕು ಎಂದು ಹಲವು ಸುತ್ತಿನ ಮಾತುಕತೆಗಳನ್ನು ನಡೆಸುತ್ತಿದೆ. ಈಗ ಉಭಯತ್ರರಿಗೂ ಸನ್ ನೆನಪಾಗುತ್ತಿದ್ದಾರೆ. ಹಳೆಯ ಕಪಾಟುಗಳಿಂದ ಅವಳ ಕವಿತೆಯ ಪುಸ್ತಕಗಳನ್ನು ಹುಡುಕುವ ಪ್ರಯತ್ನ ಶುರುವಾಗಿದೆ. ಶತ್ರುವಿನ ಭಾಷೆಯಲ್ಲಿ ಬರೆದಿದ್ದಾಕ್ಕಾಗಿ ಒಂದು ಕಾಲದಲ್ಲಿ ಆಕೆಯನ್ನು ಹಳಿದಿದ್ದ ಮಂದಿ ಈಗ ರಾಜತಾಂತ್ರಿಕ ಮತ್ತು ವಾಣಿಜ್ಯಿಕ ಕಾರಣಗಳಿಗಾಗಿ ಆಕೆಯನ್ನು ಪುನರ್‌ಮೌಲ್ಯಮಾಪನಕ್ಕೊಳಪಡಿಸುತ್ತಿದ್ದಾರೆ.

ನೋಡಿ ದೇಶ, ಭಾಷೆ, ರಾಜಕೀಯ ಮತ್ತು ಕವಿತೆ ಹೇಗೆ ಒಂದನ್ನೊಂದು ಅವಲಂಬಿಸಿಕೊಂಡಿವೆ!  ಹಾಕೋಣವೆಂದರೆ ಆಕೆಯ ಒಂದು ಚಿತ್ರವೂ ಸಿಗುತ್ತಿಲ್ಲ.

ವಿದೇಶಿ ಮಾಧ್ಯಮಗಳ ಮೇಲೆ ಚೀನಾ ನಿರ್ಬಂಧ

(ಬರೆದವರು-ಜೋಮನ್ ವರ್ಗಿಸ್)

2346456355_20fb1fc188.jpgಕಳೆದ ಹತ್ತು ದಿನಗಳಿಂದ ಚೀನಾ ವಿರುದ್ಧ ಟಿಬೆಟನ್ನರ ಪ್ರತಿಭಟನೆ ಮುಂದುವರೆಯುತ್ತಿದೆ. ಇದು ತನ್ನ ಆಂತರಿಕ ವಿಷಯ, ಉಳಿದ ದೇಶಗಳು ಇದರಲ್ಲಿ ತಲೆಹಾಕುವುದು ಬೇಡ ಎಂದಿರುವ ಚೀನಾ ಈಗ ಮಾಧ್ಯಮಗಳ ಮೇಲೂ ಕೆಂಗಣ್ಣು ಬೀರಿದೆ. ವಿದೇಶಿ ಮಾಧ್ಯಮಗಳು ಬಿತ್ತರಿಸುತ್ತಿರುವ ಚಿತ್ರ-ವರದಿಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತಿದೆ ಎಂದಿರುವ ಅಲ್ಲಿನ ಸರಕಾರ, ಗಲಭೆಯ ಕುರಿತು ನೇರ ವರದಿ ಬಿತ್ತರಿಸುತ್ತಿದ್ದ ಕೆಲವು ವಿದೇಶಿ ವಾಹಿನಿಗಳು ಹಾಗೂ ಗಲಭೆಗೆ ಸಂಬಂಧಿಸಿದಂತೆ ಚಿತ್ರ, ವಿಡಿಯೋ ತುಣುಕುಗಳನ್ನು ಪ್ರಕಟಿಸಿದ ಕೆಲವು ಅಂತರ್ಜಾಲ ತಾಣಗಳ ಮೇಲೆ ನಿರ್ಬಂಧ ಹೇರಿದೆ.

ವಿದೇಶಿ ಚಾನೆಲ್‌ಗಳು ಸುದ್ದಿಯನ್ನು ವೈಭವೀಕರಿಸಿ ಬಿತ್ತರಿಸುತ್ತಿವೆ. ಹಿಂಸೆ ಹಾಗೂ ಕ್ರೌರ್ಯ ತುಂಬಿರುವ ಚಿತ್ರವನ್ನೇ ಪದೇ ಪದೇ ತೋರಿಸಲಾಗುತ್ತಿದೆ. ಕೆಲವು ವೆಬ್‌ಸೈಟ್‌ಗಳಲ್ಲೂ ಟಿಬೆಟನ್ನರ ಮೇಲೆ ಚೀನಾ ಸೈನಿಕರು ನಡೆಸುತ್ತಿರುವ ದಾಳಿಯ ಚಿತ್ರ ಹಾಗೂ ವಿಡಿಯೋ ಚಿತ್ರಗಳನ್ನಷ್ಟೇ ಪ್ರಕಟಿಸಲಾಗಿದೆ ಎಂದಿರುವ ಚೀನಾ ತನ್ನ ದೇಶದೊಳಗೆ ಯೂ ಟ್ಯೂಬ್, ನ್ಯೂಯಾರ್ಕ್ ಟೈಮ್ಸ್, ಸಿಎನ್‌ಎನ್‌, ಬಿಬಿಸಿ ಜಾಲತಾಣಗಳಿಗೆ ತಾತ್ಕಾಲಿಕವಾಗಿ ತಡೆ ಒಡ್ಡಿದೆ. ಜೊತೆಗೆ ಘಟನೆಯ ವರದಿ ಮಾಡಲು ಬಂದಿರುವ ವಿದೇಶಿ ವರದಿಗಾರರು ಟಿಬೆಟ್‌ ಹಾಗೂ ಸುತ್ತಮುತ್ತಲಿನ ಪ್ರಾಂತ್ಯಗಳಿಗೆ ತೆರಳದಿರುವಂತೆ, ವೈಯಕ್ತಿಕವಾಗಿ ಯಾರನ್ನೂ ಸಂದರ್ಶನ ಮಾಡದಿರುವಂತೆ ತಾಕೀತು ಮಾಡಿದೆ.

`ವಿದೇಶಿ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಯನ್ನು ನೋಡಿದರೆ, ಚೀನಾ ಟಿಬೆಟನ್ನರ ವಿರುದ್ಧ ನಿರ್ದಯವಾಗಿ ಕ್ರಮ ಕೈಗೊಳ್ಳುತ್ತಿದೆಯೆಂದೂ, ಎಷ್ಟು ಸಾಧ್ಯವೋ ಅಷ್ಟು ಕೆಡುಕುಗಳನ್ನು ಉಂಟುಮಾಡುತ್ತಿದೆಯಂದೂ ಚಿತ್ರಿಸಲಾಗುತ್ತಿದೆ. ಜೊತೆಗೆ ದಲಾಯಿ ಲಾಮರನ್ನು ದೇವರೆನ್ನುವ ಹಾಗೆ ಬಿಂಬಿಸಲಾಗುತ್ತಿದೆ`. ಆದರೆ ವಸ್ತುಸ್ಥಿತಿ ಇದಕ್ಕೆ ತುಂಬಾ ಭಿನ್ನವಾಗಿದೆ ಎನ್ನುತ್ತಾರೆ ಚೀನಾದ ಮಾಜಿ ವಿದೇಶಾಂಗ ವ್ಯವಹಾರಗಳ ಉನ್ನತ ಅಧಿಕಾರಿ ಜು ಜಿಕಾಯಿ. ಆದರೆ ವಿದೇಶಿ ವರದಿಗಾರರು ಜಿಕಾಯಿ ಹೇಳಿಕೆಯನ್ನು ಅಲ್ಲಗಳೆಯುತ್ತಾರೆ. ಒಲಿಂಪಿಕ್ಸ್‌ ಪಂದ್ಯಾವಳಿಗಳು ನಡೆಯಲಿರುವುದರಿಂದ ವಿದೇಶಿ ಮಾಧ್ಯಮಗಳಿಗೆ ವರದಿ ಮಾಡಲು ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದ್ದ ಚೀನಾ ಈಗ ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಚೀನಾದಲ್ಲಿರುವ ಮಾಧ್ಯಮ ಸ್ವಾತಂತ್ರ್ಯ ಸಮಿತಿ ಹಾಗೂ ವಿದೇಶಿ ವರದಿಗಾರರ ಒಕ್ಕೂಟ ಜಂಟಿಯಾಗಿ ಸರಕಾರದ ಕ್ರಮವನ್ನು ಪ್ರತಿಭಟಿಸುವ ಸಾಧ್ಯತೆ ಇದೆ.

ಬೀಜಿಂಗ್ ಒಲಿಂಪಿಕ್ಸ್‌ನ್ನು ಬಹಿಷ್ಕರಿಸುವುದಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹೇಳಿದ ನಂತರ ಟಿಬಿಟನ್ನರ ಪ್ರತಿಭಟನೆ ಹೆಚ್ಚಿದೆ. ಸೋಮವಾರ ಗ್ರೀಕ್‌ನಲ್ಲಿ ಒಲಿಂಪಿಕ್ಸ್ ಜ್ಯೋತಿಯ ವಿಧ್ಯುಕ್ತ ಸಮಾರಂಭ ನಡೆದ ನಂತರ ವಿದೇಶಿ ಮಾಧ್ಯಮಗಳು ಟಿಬೆಟ್ ವಿಷಯವನ್ನೇ ಮುಖ್ಯವಾಗಿ ವರದಿ ಮಾಡುತ್ತಿದೆ. ವಿದೇಶಿ ಮಾಧ್ಯಮಗಳ ವರದಿ ಚೀನಾವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಲಿಂಪಿಕ್ಸ್ ಪಂದ್ಯಾವಳಿಗೂ ಟೆಬೆಟನ್ನರ ಪ್ರತಿಭಟನೆಗೂ ಸಂಬಂಧ ಕಲ್ಪಿಸಬೇಡಿ ಎಂದು ಚೀನಾ ಮಾಧ್ಯಮಗಳಿಗೆ ಕೇಳಿಕೊಂಡರೂ, ಸುದ್ದಿಯ ಪ್ರವಾಹದಲ್ಲಿ ಅದೆಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ. ಕೊನೆಯಲ್ಲಿ ಅದು ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದೆ.

ಫಿತ್ನಾ ಎಂಬ ಇನ್ನೊಂದು ಅವಹೇಳನಕಾರಿ ಚಿತ್ರ!

(ಬರೆದವರು - ಜೋಮನ್ ವರ್ಗೀಸ್)

geert-wilders.jpgಡಚ್‌ನ ಬಲಪಂಥೀಯ ರಾಜಕಾರಣಿಯೊಬ್ಬರು ಇಸ್ಲಾಂ ಧರ್ಮವನ್ನು ಹಳಿದು ತಯಾರಿಸಿದ್ದಾರೆ ಎನ್ನಲಾದ ಹದಿನೈದು ನಿಮಿಷಗಳ ಸಾಕ್ಷ್ಯಚಿತ್ರವೊಂದನ್ನು ಅಂತರ್ಜಾಲಕ್ಕೆ ಸೇರಿಸಲು ನೆಟ್‌ವರ್ಕ್ ಸಲ್ಯೂಷನ್ ನಿರಾಕರಿಸಿದೆ. `ಫಿತ್ನಾ` ಎಂಬ ಹೆಸರಿನ ಈ ಕಿರು ಸಾಕ್ಷ್ಯಚಿತ್ರ, ಬಿಡುಗಡೆಗೆ ಪೂರ್ವದಲ್ಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ಗೀರ್ಟ್ ವೈಲ್ಡರ್ಸ್ ಎನ್ನುವ ಡಚ್‌ನ ಬಲಪಂಥೀಯ ರಾಜಕಾರಿಣಿ ನಿರ್ಮಿಸಿರುವ ಈ ಸಾಕ್ಷ್ಯಚಿತ್ರದಲ್ಲಿ ಇಸ್ಲಾಂ ಧರ್ಮದ ವಿರುದ್ಧ ಹಲವು ಅವಹೇಳನಕಾರಿ ಶಬ್ದಗಳನ್ನು ಹಾಗೂ ಸಂದೇಶಗಳನ್ನೂ ಬಳಸಲಾಗಿದೆ ಎನ್ನುವುದು ಚಿತ್ರವನ್ನು ನಿಷೇಧ ಮಾಡಿರುವ ವೆಬ್ ಅತಿಥೇಯ ಕಂಪನಿ ನೆಟ್‌ವರ್ಕ್ ಸಲ್ಯೂಷನ್ ಹೇಳಿಕೆ. ಈಗಾಗಲೇ ಚಿತ್ರದ ಬಗ್ಗೆ ಇರಾನ್, ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಗೀರ್ಟ್ ಇಸ್ಲಾಂ ವಿರುದ್ಧ ಯಾಕೆ ಸಾಕ್ಷ್ಯಚಿತ್ರ ನಿರ್ಮಿಸಬೇಕು ಮತ್ತು ಅದನ್ನು ಯಾಕೆ ಅಂತರ್ಜಾಲಕ್ಕೆ ಸೇರಿಸಬೇಕು ಎನ್ನುವುದು ಇಲ್ಲಿನ ಪ್ರಶ್ನೆ. ಹಾಗೆ ಸಾಕ್ಷ್ಯಚಿತ್ರ ನಿರ್ಮಿಸುವ ಮೂಲಕ ವೈಯಕ್ತಿಕವಾಗಿ ಒಂದಿಷ್ಟು ಪ್ರಚಾರ ಪಡೆಯುವುದು ಹಾಗೂ ಇಸ್ಲಾಂ ವಿರುದ್ಧ ತನಗಿರುವ ಸಿಟ್ಟನ್ನು ಹೊರಹಾಕುವುದು ಗೀರ್ಟ್‌ನ ಉದ್ದೇಶವಿರಬಹುದು. ಅಥವಾ ಸಾವಿರಾರು ವರ್ಷಗಳ ಹಿಂದೆ  ನಡೆದ ಪವಿತ್ರ ಯುದ್ದಕ್ಕೆ ಸೇಡು ತೀರಿಸಿಕೊಳ್ಳುವ ಹವಣಿಕೆ ಇರಬಹುದು. ಅಥವಾ ಎರಡು ವರ್ಷಗಳ ಹಿಂದೆ ತನ್ನದೇ ದೇಶದ ಪುಸ್ತಕ ಪ್ರಕಾಶನ ಸಂಸ್ಥೆಯೊಂದು ವ್ಯಂಗ್ಯಚಿತ್ರಗಳಲ್ಲಿ ಮುಸ್ಲಿಂಮರನ್ನು ಟೀಕಿಸಿದಂತೆ ತಾನೂ ಇಸ್ಲಾಂ ವಿರುದ್ಧ ಏನಾದರೂ ಮಾಡಬೇಕೆಂಬ ಮನಸ್ಥಿತಿ ಇರಬಹದು, ಹೀಗೆ ನಾವು ಹಲವು ಕೋನಗಳಲ್ಲಿ ಗೀರ್ಟ್‌ನ ಚಿತ್ರನಿರ್ಮಾಣವನ್ನು  ವಿಶ್ಲೇಷಿಸಬಹುದು. ಆದರೆ ನಿಜವಾಗಿಯೂ ಆತ ಮುಸ್ಲಿಂರನ್ನು ದ್ವೇಷಿಸಬೇಕು ಎನ್ನುವ ಕಾರಣಕ್ಕೇ ಈ ಚಿತ್ರ ತೆಗೆದಿದ್ದಾನೆಯೇ ಅಥವಾ ಇದರಲ್ಲಿ ಬೇರೇನಾದರೂ ಇದೆಯೇ ಎನ್ನುವುದನ್ನು ಚಿತ್ರ ನೋಡಿದ ನಂತರವೇ ಹೇಳಲು ಸಾಧ್ಯ.

ಒಂದೆಡೆ ತಾನು ನಿರ್ಮಿಸಿದ ಸಾಕ್ಷ್ಯಚಿತ್ರ ಇಷ್ಟೆಲ್ಲಾ ಸುದ್ದಿ ಮಾಡುತ್ತಿರುವುದನ್ನು ನೋಡಿದ ಗೀರ್ಟ್ ಖುಷಿಯಾಗಿದ್ದಾನೆ. ಇನ್ನೊಂದೆಡೆ ಇಸ್ಲಾಂ ರಾಷ್ಟ್ರಗಳ ಪ್ರತಿಭಟನೆ ನೋಡಿ ಡಚ್ ಸರಕಾರಕ್ಕೆ ತಲೆನೋವು ಪ್ರಾರಂಭವಾಗಿದೆ. ಈ ನಡುವೆ ಡಚ್ ದಿನಪತ್ರಿಕೆಯೊಂದಕ್ಕೆ ಪತ್ರ ಬರೆದು ತನ್ನ ಚಿತ್ರದ ಬಗ್ಗೆ ಸಮರ್ಥಿಸಿಕೊಂಡಿರುವ ಗೀರ್ಟ್, ತಾನು ನಿರ್ಮಿಸಿರುವ ಚಿತ್ರದಲ್ಲಿ ಇಸ್ಲಾಂ ಧರ್ಮ ಹಾಗೂ ಕುರಾನ್ ಬಗ್ಗೆ ಹೆಚ್ಚೇನೂ ಹೇಳಿಲ್ಲ, ಇಸ್ಲಾಂ ಸಿದ್ಧಾಂತಗಳು ಸ್ವಾತಂತ್ರ್ಯಕ್ಕೆ  ಹೇಗೆ ಅಡ್ಡಿಯಾಗಿದೆ ಎನ್ನುವುದನ್ನು ಹೇಳಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ. ಗೀರ್ಟ್‌ನ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಡಚ್ ಸರಕಾರ ಕುಮ್ಮಕ್ಕು ನೀಡಿದೆಯೇ ಎಂಬ ಆಪಾದನೆಗೆ ಉತ್ತರವಾಗಿ, ಅದು ಆತನ ವೈಯಕ್ತಿಕ ದೃಷ್ಠಿಕೋನವಷ್ಟೇ ಸರಕಾರದಲ್ಲ ಎಂಬ ಪ್ರತಿಕ್ರಿಯೆ ಬಂದಿದೆ.

ಗೀರ್ಟ್‌ನ ಬಲಪಂಥೀಯ ವಿಚಾರಧಾರೆ ಏನೇ ಇರಲಿ, ಚಿತ್ರದಲ್ಲಿ ಅವನ್ನೆಲ್ಲಾ ತರಲು ಆತ ಪ್ರಯತ್ನಿಸಿದ್ದರೆ ಅದು ಒಂದಿಷ್ಟು ಅನಾಹುತಗಳಿಗೆ ಕಾರಣವಾಗಲಿದೆ. ಹೋಲಿವಾರ್ ನಂತರ ಹಾಲೆಂಡ್‌ನಲ್ಲಿ ಸೂಕ್ಷ್ಮವಾಗಿರುವ ಇಸ್ಲಾಂ ಮತ್ತು ಕ್ರಿಶ್ಚಿಯನ್ ಸಂಬಂಧಗಳಲ್ಲಿ ಇದು ಇನ್ನಷ್ಟು ಅಂತರ ಮೂಡಿಸಹುದು. ಎರಡು ವರ್ಷಗಳ ಹಿಂದೆ ಇಸ್ಲಾಂ ಮೂಲಭೂತವಾದಿಯೊಬ್ಬ ಡಚ್ ನಿರ್ದೇಶಕರೊಬ್ಬರನ್ನು ಹತ್ಯೆ ಮಾಡಿದ ನಂತರ ತಾನೇ ಸ್ವತಃ ಪೊಲೀಸ್ ರಕ್ಷಣೆಯಲ್ಲಿರುವ ಗೀರ್ಟ್, ಈಗ ಇಸ್ಲಾಂ ವಿರುದ್ಧ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಹೊರಟಿದ್ದು, ಮತ್ತು ಅದನ್ನು ಅಂತರ್ಜಾಲಕ್ಕೆ ಸೇರಿಸಲು ಶತಾಯಗತಾಯ ಪ್ರಯತ್ನಿಸುತ್ತಿರುವುದು ಸತ್ವಕ್ಕಿಂತ ವಿವಾದಗಳ ಕಡೆಗೇ ಆತನ ಆಸಕ್ತಿ ಹೆಚ್ಚಿದೆ ಎನ್ನುವುದನ್ನು ತೋರಿಸುತ್ತಿದೆಯೇನೋ.

 ಭೂತಾನ್-ರಾಜನಿಗೇ ಬೇಡವಾದ ರಾಜಪ್ರಭುತ್ವ

bhutan.jpg(ಬರೆದವರು-ಜೋಮನ್ ವರ್ಗೀಸ್)

ಭೂತಾನದ ರಾಜನೇ ರಾಜಪ್ರಭುತ್ವ ಸಾಕು ಪ್ರಜಾಪ್ರಭುತ್ವ ಬೇಕು ಎಂದು ಹಂಬಲಿಸುತ್ತಿದ್ದಾರೆ. ಪ್ರಪಂಚದ ಬೇರ್ಪಟ್ಟ ದೇಶಗಳಲ್ಲಿ ಒಂದು ಎಂಬ ಹಣೆಪಟ್ಟಿ ಹೊಂದಿರುವ ಈ ಪರ್ವತಗಳ ಪ್ರಸ್ಥಭೂಮಿಯಲ್ಲಿ ತಡವಾಗಿ ಆದರೂ ಪ್ರಜಾಪ್ರಭುತ್ವದ ಬೆಳಕು ಹರಿದು ಬರಲಿ ಎನ್ನುವದು ಅಲ್ಲಿನ ದೊರೆ ಜಿಗ್ಮೆ ಸಿಂಗ್ ವಾಂಗ್‌ಚುಕ್ ಆಸೆ. ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಾಗಿ ಅವರು ತಮ್ಮ ಪ್ರಜೆಗಳ ಮನವೊಲಿಸುತ್ತಿದ್ದಾರೆ.ಹಾಗೆ ನೋಡಿದರೆ ಐದು ತಲೆಮಾರುಗಳ ರಾಜಾಡಳಿತವನ್ನು ಅನುಭವಿಸಿರುವ ಭೂತಾನಿಗರು, ಪ್ರಜಾಪ್ರಭುತ್ವ ಇರದಿದ್ದ ಕಾಲದಲ್ಲಿಯೂ ಬುದ್ಧನ ಶಾಂತಿ ಹಾಗೂ ಸಹನೆಯನ್ನೇ ಪಾಲಿಸಿಕೊಂಡು ಬಂದಿದ್ದಾರೆ. ಈಗ ಸಂವಿಧಾನ ಸರಕಾರದೆಡೆಗೆ ವಾಂಗ್‌ಚುಕ್ ಒಲವು ತೋರಿಸಿರುವುದು ದೇಶದ ಹೊರಗಿನವರಿಗೆ ಬದಲಾವಣೆಯ ವಿಷಯವಾಗಿ ಕಂಡರೂ, ರಾಜಕೀಯ, ಚುನಾವಣೆ, ಪ್ರನಾಳಿಕೆ ಎಂದೆಲ್ಲಾ ಪರಿಚಯವಿರದ ಅಲ್ಲಿನ ಹಳೆಯ ತಲೆಮಾರಿನವರಿಗೆ ಶಕ್ತನಾದ ರಾಜನಿಗಿಂತಲೂ ಪ್ರಜಾಪ್ರಭುತ್ವ ಎನ್ನುವುದು ಶಕ್ತವಾಗಿರುತ್ತದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಈ ಅನುಮಾನದ ನಡುವೆಯೇ ಅವರು ದೊರೆಯ ಮಾತಿನಂತೆ ಮೊದಲ ಬಾರಿಗೆ ಚುನಾವಣೆ ಎದುರಿಸಲು ಸಿದ್ದರಾಗುತ್ತಿದ್ದಾರೆ. ಈ ನಡುವೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ದೇಶದ ಕೆಲವೆಡೆ ಬಾಂಬ್ ಸ್ಫೋಟಗಳು ನಡೆದಿವೆ. ಭೂತಾನ್‌‌‌‌ನಲ್ಲಿ ನೆಲೆಸಿರುವ ಕೆಲವು ನೇಪಾಳಿ ಜನಾಂಗೀಯರಿಗೆ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಲು ಅನುಮತಿ ನೀಡಲಾಗಿಲ್ಲ ಎನ್ನುವುದು ಈ ಸ್ಫೋಟಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ನೇಪಾಳ ಮೂಲದ ಕೆಲವು ಮಾವೋವಾದಿ ಸಂಘಟನೆಗಳು ಚುನಾವಣೆಗೆ ಅಡ್ಡಿಪಡಿಸುವ ಬೆದರಿಕೆ ಒಡ್ಡಿದ್ದರೂ, ಐವತ್ತೆರಡು ವರ್ಷದ ವಾಂಗ್‌ಚುಕ್ ಮಾತ್ರ ಚುನಾವಣೆ ನಡೆದೇ ನಡೆಯುತ್ತದೆ ಎನ್ನುವ ವಿಶ್ವಾಸ ಹೊಂದಿದ್ದಾರೆ. ಭೂತಾನ್ ಜಗತ್ತಿನ ಬೇರ್ಪಟ್ಟ ದೇಶವಲ್ಲ, ನಮ್ಮ ದೇಶವನ್ನು ಜಗತ್ತಿಗೆ ತೆರೆದಿಡಬೇಕು, ಪ್ರಜಾಪ್ರಭುತ್ವದ ಮೂಲಕ ವ್ಯವಸ್ಥಿತ ಅಭಿವೃದ್ಧಿ ಸಾಧಿಸಬೇಕು, ಸಂಸತ್ತು, ಸಂವಿಧಾನ ನಮ್ಮಲ್ಲೂ ಇರಬೇಕು ಎಂದು ಅವರು ಹಲವು ಕನಸು ಹೊಂದಿದ್ದಾರೆ.ಈಗ ಪ್ರಜಾಪ್ರಭುತ್ವದ ಹೊಸ್ತಿಲಲ್ಲಿ ನಿಂತಿರುವ ಭೂತಾನ್, ಸಾಂಪ್ರದಾಯಿಕ ಹಿಮಾಲಯದ ಬೌದ್ಧ ಧರ್ಮ ಹಾಗೂ ಸಂಸ್ಕೃತಿಯನ್ನು ಎಚ್ಚರಿಕೆಯಿಂದ ಉಳಿಸಿಕೊಂಡಿರುವ ಏಕೈಕ ಸ್ಥಳ ಎನ್ನುವುದನ್ನು ಮರೆಯುವಂತಿಲ್ಲ. ಇದರಿಂದಾಗಿಯೇ ಇಲ್ಲಿ ವಿದೇಶಿ ಪ್ರಭಾವ ಹಾಗೂ ಪ್ರವಾಸಿಗರನ್ನು ದೂರವಿಡಲಾಗಿದೆ. ಚೀನಾ, ಭಾರತ ಹಾಗೂ ಟಿಬೆಟ್‌ಗಳಿಗೆ ಅಂಟಿಕೊಂಡಿದ್ದರೂ, ಈ ದೇಶಗಳ ಯಾವುದೇ ಪ್ರಭಾವವೂ ತನ್ನೊಳಗೆ ಬಿಟ್ಟುಕೊಡದ ಈ ದೇಶದಲ್ಲಿ ಪ್ರಜಾಪ್ರಭುತ್ವ ಬಂದ ನಂತರ ಏನೆಲ್ಲಾ ಬದಲಾವಣೆಗಳಾಗಬಹುದೋ ಎನ್ನುವುದು ಸಂಪ್ರದಾಯವಾದಿಗಳ ಆತಂಕ. ಆದರೆ ಪ್ರಜಾಪ್ರಭುತ್ವದಿಂದ ಎಲ್ಲವೂ ಬದಲಾಗಲಿದೆ ಎನ್ನುವುದು ದೊರೆಯ ಅಭಿಮತ. ಎರಡನ್ನೂ ಕಾದು ನೋಡಬೇಕಿದೆ.

ಹುಸೇನ್ ಚಿತ್ರಕ್ಕೆ ೧.೬ ಮಿಲಿಯನ್ ಡಾಲರ್

(ಬರೆದವರು - ಜಿತೇಂದ್ರ)

husain.jpgಕಲಾವಿದ ಎಂ ಎಫ್ ಹುಸೇನ್  ಬಿಡಿಸಿರುವ ಕಲಾಕೃತಿ ಒಂದು ನ್ಯೂಯಾರ್ಕ್‌ನಲ್ಲಿ  ೧.೬ ಮಿಲಿಯನ್  ಡಾಲರ್ ದಾಖಲೆ ಮೊತ್ತಕ್ಕೆ ಮಾರಾಟ ಆಗಿದೆ.

ಭಾರತದ ಪಿಕಾಸೋ ಎಂದೇ ಖ್ಯಾತಿಯಾದ ಮಕ್ಬುಲ್ ಫಿದಾ ಹುಸೇನರು ೧೯೭೧ರಲ್ಲಿ ಚಿತ್ರಿಸಿದ್ದ ‘ಗಂಗಾ-ಯಮುನಾ’ ಶೀರ್ಷಿಕೆಯ ಈ ಚಿತ್ರವನ್ನು  ನ್ಯೂಯಾರ್ಕ್‌ನ ಕ್ರಿಸ್ಟಿನ್ ಸಂಸ್ಥೆ ಹರಾಜಿಗಿರಿಸಿತ್ತು. ಭಾರತೀಯ ಚಿತ್ರಕಾರರೊಬ್ಬರ ಕಲಾಕೃತಿ ಈ ಪ್ರಮಾಣದ ಹಣಕ್ಕೆ ಹರಾಜಾಗಿರುವುದು ದಾಖಲೆಯೇ ಸರಿ. ಈ ಮೂಲಕ ಅವರು ಅತಿ ಹೆಚ್ಚು ಸಂಭಾವನೆ ಪಡೆದ ಭಾರತೀಯ ಚಿತ್ರಕಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಸುಮಾರು ಆರು ದಶಕಗಳಿಂದಲೂ ಚಿತ್ರ ರಚನೆಯಲ್ಲಿ ತೊಡಗಿಕೊಂಡಿರುವ ಹುಸೇನ್ ಭಾರತದ ಅತ್ಯುತ್ತಮ ಚಿತ್ರಕಾರರಲ್ಲಿ ಒಬ್ಬರೆಂಬ ಖ್ಯಾತಿ ಗಳಿಸಿದ್ದಾರೆ.

ಇಷ್ಟೆಲ್ಲ ಜನಪ್ರಿಯತೆಯ ಜೊತೆಗೆ , ವಿವಾದಗಳು ಕೂಡ ಅವರನ್ನು ಬಿಟ್ಟಿಲ್ಲ. ಶುಕ್ರವಾರ ಕ್ರಿಸ್ಟಿನ್ ಒಳಗಡೆ ಹರಾಜು ನಡೆಸುತ್ತಿದ್ದರೆ , ಹರಾಜು ನಿಲ್ಲಿಸುವಂತೆ ಒತ್ತಾಯಿಸಿ ಇಂಡೋ ಅಮೆರಿಕನ್ ಬುದ್ದಿಜೀವಿಗಳ ಗುಂಪೊಂದು ಹೊರಗಡೆ ಪ್ರತಿಭಟನೆ ನಡೆಸುತ್ತಿತ್ತು. ಹುಸೇನರ ಚಿತ್ರಗಳ ಹರಾಜು ಪ್ರಕ್ರಿಯೆ ಹಿಂತೆಗೆದುಕೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಇಂಡೋ ಅಮೆರಿಕನ್ ಬುದ್ದಿಜೀವಿಗಳ ಬಳಗ ವಾರದ ಹಿಂದೆ ಕ್ರಿಸ್ಟಿನ್ ಸಂಸ್ಥೆಗೆ ಪತ್ರ ಬರೆದಿತ್ತು. ಆದರೆ ಹರಾಜು ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲು ಕ್ರಿಸ್ಟಿನ್ ನಿರಾಕರಿಸಿತ್ತು.

ಹಿಂದು ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ್ದಾರೆ ಅನ್ನೋದು ಹುಸೇನ್ ಮೇಲೆ ಹಿಂದಿನಿಂದಲೂ ಇರುವ ಆರೋಪ. ಈ ಕಾರಣಕ್ಕಾಗಿ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಹುಸೇನ್ ವಿರುದ್ಧ ಪ್ರತಿಭಟನೆ ಕೂಡ ನಡೆದಿತ್ತು. ಹುಸೇನ್ ೨೦೦೬ರಲ್ಲಿ ಈ ಕುರಿತು ಕ್ಷಮೆ ಯಾಚಿಸಿದ್ದರು. ಅವರ ವಿರುದ್ಧ ಭಾರತದಲ್ಲಿ ಅನೇಕ ದೂರುಗಳು ದಾಖಲಾಗಿತ್ತು. ತಮ್ಮ ವಿರುದ್ಧದ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣ, ಕಳೆದ ವರ್ಷ ಮುಂಬೈ ಪೋಲಿಸರು ಹುಸೇನ್‌ಗೆ ಸೇರಿದ ಆಸ್ತಿಯನ್ನೂ ವಶಪಡಿಸಿಕೊಂಡಿದ್ದರು.

ಈ ಎಲ್ಲಾ ವಿವಾದಗಳ ಸಲುವಾಗಿ ಭಾರತ ತೊರೆದಿದ್ದ ೮೯ ವರ್ಷ ವಯಸ್ಸಿನ ಹುಸೇನ್, ಸದ್ಯ ಮಧ್ಯ ಪ್ರಾಚ್ಯದಲ್ಲಿ ನೆಲೆಸಲು ಯೋಚಿಸುತ್ತಿದ್ದಾರೆ.  

 ಮೇಯಲ್ಲಿ ಚುನಾವಣೆ ಗ್ಯಾರಂಟಿ

(ಬರೆದವರು ಸುಲೋಚನಾ ವೆಂಕಟೇಶ್)

map_karnataka.jpgಚುನಾವಣೆಗಳು ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆಗಳ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಈಗ ಅದನ್ನು ಚುನಾವಣಾ ಆಯೋಗವೂ ಖಚಿತ ಪಡಿಸಿದೆ. ಇಲ್ಲಿಯವರೆಗಿನ ಎಲ್ಲಾ ಊಹಾಪೋಹಗಳ ಹಿಂದೆ ಇದ್ದದ್ದು ಕರ್ನಾಟಕದ ಕಾಂಗ್ರೆಸ್ ಗೆ ಇದ್ದ ನಾಯಕತ್ವದ ಕೊರತೆ. ಈ ಕಾರಣದಿಂದಾಗಿಯೇ ಕಾಂಗ್ರೆಸ್ ಚುನಾವಣೆಯನ್ನು ಹೇಗಾದರೂ ಮಾಡಿ ಕೆಲ ಕಾಲ ಮುಂದೆ ತಳ್ಳಲು ಪ್ರಯತ್ನಿಸಿತ್ತು. ಕ್ಷೇತ್ರ ಪುನರ್ ವಿಂಗಡಣೆಯಂತೆಯೇ ಚುನಾವಣೆ ನಡೆಯಲಿ ಎಂದು ನ್ಯಾಯಾಲಯ ಹೇಳಿದಾಗ ಹೆಚ್ಚು ಸಂತೋಷ ಪಟ್ಟದ್ದು ಕಾಂಗ್ರೆಸ್. ಅದರ ಲೆಕ್ಕಾಚಾರದಂತೆ ಕ್ಷೇತ್ರ ಪುನರ್ ವಿಂಗಡಣೆ ನಡೆದು ಚುನಾವಣೆ ನಡೆಯಲು ಇನ್ನೂ ಕನಿಷ್ಠ ಆರು ತಿಂಗಳು ಬೇಕಿತ್ತು.

ಈ ಹಿಂದಿನ ಎಲ್ಲಾ ಉದಾಹರಣೆಗಳನ್ನು ಪರಿಶೀಲಿಸಿದರೂ ರಾಷ್ಟ್ರಪತಿ ಆಡಳಿತವನ್ನು ಆರು ತಿಂಗಳ ನಂತರ ವಿಸ್ತರಿಸುವ ನಿರ್ಧಾರವನ್ನು ವಿಶೇಷ ಸಂದರ್ಭಗಳಲ್ಲಷ್ಟೇ ಕೈಗೊಳ್ಳಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಂಥ ಕ್ರಮಗಳಿಗಾಗಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸಿದ ಉದಾಹರಣೆಯಂತೂ ಇಲ್ಲವೇ ಇಲ್ಲ. ಈ ಹಿಂದಿನ ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭದಲ್ಲಿಯೂ ಇಂಥ ತೊಂದರೆ ಎದುರಾಗಿತ್ತು. ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದ ಕ್ಷೇತ್ರ ವಿಂಗಡಣೆಯನ್ನು ಈಗಿನಂತೆ ಯಾವ ಕಂಪ್ಯೂಟರ್ ಸವಲತ್ತೂ ಇಲ್ಲದೆ ಸಮಯಕ್ಕೆ ಸರಿಯಾಗಿ ಮುಗಿಸಿ ಚುನಾವಣೆ ನಡೆಸುವಲ್ಲಿ ಆಯೋಗ ಯಶಸ್ವಿಯಾಗಿತ್ತು. ಅಂಥದ್ದರಲ್ಲಿ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೆ ತಿಂಗಳುಗಳ ಕಾಲ ಬೇಕು ಎಂದರೆ ಕಾಂಗ್ರೆಸ್ ಹೊರತು ಪಡಿಸಿದರೆ ಇನ್ನಾರೂ ನಂಬಲು ಸಾಧ್ಯವಿಲ್ಲ, ಮತದಾರರ ಪಟ್ಟಿ ಪರಿಷ್ಕರಣೆಯನ್ನೂ ದಾಖಲೆ ವೇಗದಲ್ಲಿ ಸಾಧಿಸುವುದು ಈಗ ಕಷ್ಟವೇನೂ ಅಲ್ಲ.

ಈ ಅಂಶಗಳನ್ನು ಕಾಂಗ್ರೆಸ್ ಹೈ ಕಮಾಂಡ್ ಸ್ವಲ್ಪ ಮೊದಲೇ ಅರಿತಿತ್ತು ಎಂಬಂತೆ ಕಾಣಿಸುತ್ತದೆ. ಎಸ್ ಎಂ ಕೃಷ್ಣ ಅವರನ್ನು ರಾಜ್ಯಪಾಲರ ಪದವಿಯಿಂದ ತೆರವುಗೊಳಿಸಿ ಸಕ್ರಿಯ ರಾಜಕಾರಣಕ್ಕೆ ಮರಳಲು ಸೂಚಿಸಿದ್ದೂ ಇದೇ ಕಾರಣಕ್ಕಾಗಿ. ಕೃಷ್ಣ ಸಕ್ರಿಯ ರಾಜಕಾರಣಕ್ಕೆ ಬರುತ್ತಾರೆಂಬುದು ಸ್ಪಷ್ಟವಾದಾಗಲೇ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವುದೂ ಖಚಿತವಾಗಿತ್ತು.

ಈ ಬಾರಿಯ ಚುನಾವಣೆ ಹಿಂದಿನ ಯಾವ ಚುನಾವಣೆಗಳನ್ನೂ ಹೋಲುವುದಿಲ್ಲ. ಕರ್ನಾಟಕದ ರಾಜಕೀಯ ನಕ್ಷೆಯೇ ಈಗ ಪೂರ್ಣ ಬದಲಾಗಿದೆ. ಕರ್ನಾಟಕವನ್ನು ಯಾವ ರಾಜಕೀಯ ಪಕ್ಷ ಆಳಿದರೂ ನಿಜವಾದ ಬಹುಮತ ಇರುತ್ತಿದ್ದುದು ಪ್ರಬಲ ಸಮುದಾಯಗಳಾದ ವೀರಶೈವರು ಮತ್ತು ಒಕ್ಕಲಿಗರಿಗೆ. ಕಳೆದ ವಿಧಾನಸಭೆಯಲ್ಲಿದ್ದ ಶಾಸಕರನ್ನು ಜಾತಿವಾರು ವಿಂಗಡಿಸಿದರೆ ಇದು ಚೆನ್ನಾಗಿ ಅರ್ಥವಾಗುತ್ತದೆ. ಒಟ್ಟು 224 ಸ್ಥಾನಗಳಲ್ಲಿ 77 ಸ್ಥಾನಗಳಲ್ಲಿ ವೀರಶೈವರಿದ್ದರು. 45 ಸ್ಥಾನಗಳು ಒಕ್ಕಲಿಗರವು. ಈ ಎರಡೂ ಜಾತಿಗಳವರ ಒಟ್ಟು ಸಂಖ್ಯೆ ಶೇಕಡಾ 27ನ್ನು  ಮೀರುವುದಿಲ್ಲ. ಕ್ಷೇತ್ರಗಳ ರಚನೆಯೇ ಈ ಜಾತಿಗಳಿಗೆ ಅನುಕೂಲ ಕಲ್ಪಿಸುತ್ತಿತ್ತು. ಪುನರ್ ವಿಂಗಡಣೆ ಈ ಅಸಮಾನತೆಯನ್ನು ಬಹುಮಟ್ಟಿಗೆ ಹೋಗಲಾಡಿಸಿದೆ. ಇದರ ಜತೆಗೆ ಈವರೆಗೂ ರಾಜ್ಯ ವಿಧಾನಸಭೆಯಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕದೇ ಸೊರಗಿದ್ದ ನಗರ ಕರ್ನಾಟಕಕ್ಕೆ ತಕ್ಕ ಪ್ರಾತಿನಿಧ್ಯ ದೊರೆಯುತ್ತಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದಲೇ 38 ಮಂದಿ ಶಾಸಕರಿರುತ್ತಾರೆ. ರಾಜ್ಯದ ಉಳಿದೆಲ್ಲೆಡೆಯೂ ಈ ಬದಲಾವಣೆ ನಡೆದಿರುವುದರಿಂದ ನಗರ ಪ್ರದೇಶಗಳನ್ನೇ ಪ್ರತಿನಿಧಿಸುವ ಶಾಸಕರ ಸಂಖ್ಯೆ ಹೆಚ್ಚಾಗಲಿದೆ.

ಈ ಬದಲಾವಣೆಗಳು ರಾಜಕೀಯ ಪಕ್ಷಗಳ ಹಳೆಯ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗಾಗಿಸುವುದಂತೂ ನಿಜ. ನಗರ ಪ್ರದೇಶಗಳ ಮತಗಳೆಲ್ಲಾ ನಮಗೇ ಎಂದು ಬಿಜೆಪಿ ಬೀಗುವಂತೆಯೂ ಇಲ್ಲ. ಕಳೆದ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಪರಿಗಣಿಸಿದರೆ ನಗರ ಪ್ರದೇಶದಲ್ಲಿ ಎಸ್ ಎಂ ಕೃಷ್ಣ ಅವರ ಕುರಿತಂತೆ ಹೆಚ್ಚಿನ ಒಲವಿದೆ. ಹಾಗೆಯೇ ಲಿಂಗಾಯಿತರ ಓಟುಗಳು ನಿರ್ಣಾಯಕವಾಗಿರುವುದರಿಂದ ನಮಗೆ ಹೆಚ್ಚು ಅನುಕೂಲ ಎಂಬ ಬಿಜೆಪಿಯ ಲೆಕ್ಕಾಚಾರವೂ ತಪ್ಪಿದೆ. ಲಿಂಗಾಯಿತರ ಮತಗಳು ನಿರ್ಣಾಯಕವಾಗಿದ್ದ ಸುಮಾರು 30 ಕ್ಷೇತ್ರಗಳು ಹೊಸ ಸ್ವರೂಪ ಪಡೆದುಕೊಂಡಿವೆ.  ಈ ಎಲ್ಲವುಗಳ ಪರಿಣಾಮವಾಗಿ ಈ ಬಾರಿಯ ಚುನಾವಣೆ ನೂರಕ್ಕೆ ನೂರರಷ್ಟು ಹೊಚ್ಚ ಹೊಸ ಚುನಾವಣೆ.

ಆ ಮುಖಾ- ಈ ಮುಖಾ 

[ ಬರೆದವರು ಜೋಮನ್ ವರ್ಗೀಸ್.]

aaa-mukha-eee-mukha.jpgನಿಮ್ಮ ಮುಖ ನಿಮ್ಮ ಮನಸ್ಸಿನ ಕನ್ನಡಿ ಎನ್ನುವ ಮಾತಿದೆ. ಆದರೆ ಇತ್ತೀಚೆಗೆ ಅಮೆರಿಕದ ಮನಶಾಸ್ತ್ರಜ್ಞರು ಸಂಶೋಧನೆ ನಡೆಸಿದಾಗ ಹೊರಬಿದ್ದ ಫಲಿತಾಂಶವೇ ಬೇರೆ. ಪೌರಾತ್ಯರ ಮುಖವನ್ನು ನೋಡಿ ಅವರ ಭಾವನೆಯನ್ನು ತಿಳಿಯುವುದು ತುಂಬಾ ಕಷ್ಟ ಎನ್ನುತ್ತಾರೆ ಅವರು. ಅಮೆರಿಕದಲ್ಲಾದರೆ ಒಬ್ಬ ವ್ಯಕ್ತಿಯ ಮುಖ ನೋಡಿದೊಡನೆ ಇವನು ಹೀಗಿದ್ದಾನೆ, ಹೀಗಿರಬಹುದು ಎಂದು ಭಾಗಶಃ ಭಾಗ ಹೇಳಿಬಿಡಬಹುದಂತೆ. ಆದರೆ ಜಾಪಾನಿನವರ ವಿಚಾರದಲ್ಲಿ ಹಾಗಲ್ಲ, ಜಾಪಾನಿಗರು ಒಂದಿಡಿ ಸಮೂಹದ ಭಾವವನ್ನು ಪ್ರತಿನಿಧಿಸುತ್ತಾರಂತೆ.

ಇದು ಹೇಗೆ ಅಂತ ಅಮೆರಿಕದ ಮನಶಾಸ್ತ್ರಜ್ಞರು ಸಂಶೋಧನೆ  ನಡೆಸಿದರಂತೆ. ಆಗ ಗೊತ್ತಾಗಿದ್ದು ಪೌರಾತ್ಯ ಮತ್ತು ಪಾಶ್ಚಿಮಾತ್ಯ ದೇಶಗಳ ಜನರ ನಡುವಿನ ಭಾವನಾತ್ಮಕ ವ್ಯತ್ಯಾಸಗಳು. ಅಮೆರಿಕಾದ ವ್ಯಕ್ತಿಯೊಬ್ಬ ತಾನು ತುಂಬಾ ಖುಷಿಯಲ್ಲಿದ್ದರೆ ಸಹಜವಾಗಿ ಮುಖದಲ್ಲಿ ಮಂದಹಾಸ ಹೊಂದಿರುತ್ತಾನೆ. ತನ್ನ ಸುತ್ತಲ ಜಗತ್ತು, ತಾನು ವಾಸಿಸುವ ಪರಿಸರ, ತನ್ನ ಕುಟುಂಬದ ಇತರ ಸದಸ್ಯರು ದುಃಖದಲ್ಲಿರೆ, ಅಥವಾ ವಿಷಾದ ಹೊಂದಿದ್ದರೆ ಅದ್ಯಾವುದೂ ಇವನ ಮೇಲೆ ಅಷ್ಟೊಂದು ಪರಿಣಾಮ ಬೀರಿದಂತೆ ಕಾಣುವುದಿಲ್ಲ. ಆತನ ಮುಖದಲ್ಲಿ ಆತನ ವೈಯಕ್ತಿಕ ಭಾವವಷ್ಟೇ ಇರುತ್ತದೆ. ಆದರೆ ಪೌರಾತ್ಯರು ಹಾಗಲ್ಲವಂತೆ, ತಮ್ಮ ಊರಿನಲ್ಲಿ ಯಾರಿಗಾದರೂ ಏನಾದರೂ ಆಗಿದ್ದರೆ, ತನ್ನ ಸುತ್ತಲಿನ ಗುಂಪು ದುಃಖದಲ್ಲಿದ್ದರೆ ಅದರ ಪರಿಣಾಮ ಇವರ ಮುಖದ ಮೇಲೂ ಬೀರಿರುತ್ತದೆಯಂತೆ.

ಪೌರತ್ಯ ಹಾಗೂ ಪಾಶ್ಚಿಮಾತ್ಯ ಜನರ ನಡವಿನ ಭಾವನಾತ್ಮಕ ವ್ಯತ್ಯಾಸ ತಿಳಿಯುತ್ತಿದ್ದಂತೆ ಅಮೆರಿಕದ ವಿಜ್ಞಾನಿಗಳು ಇದನ್ನು ಧೃಡೀಕರಿಸಲು ಮತ್ತೊಂದು ಪರೀಕ್ಷೆ ಮಾಡಿದರು. ಎರಡೂ ದೇಶಗಳ ಮೂವತ್ತು ವಿದ್ಯಾರ್ಥಿಗಳನ್ನು ಎರಡು ಬೇರೆ ಗುಂಪುಗಳಾಗಿ ಕೂಡಿಸಿ, ಚಿಕ್ಕ ಗುಂಪೊಂದರ ಚಿತ್ರ ಬಿಡಿಸಲು ಹೇಳಿದರಂತೆ. ಅಮೆರಿಕದ ವಿದ್ಯಾರ್ಥಿಗಳು ಬಿಡಿಸಿದ ಚಿತ್ರದಲ್ಲಿ ಎಲ್ಲ ಮುಖಗಳು ನಗುತ್ತಲಿದ್ದರೆ, ಪಾಶ್ಚಿಮಾತ್ಯ ವಿದ್ಯಾರ್ಥಿಗಳು ಬಿಡಿದ ಚಿತ್ರಗಳು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿದ್ದವಂತೆ. ಜೊತೆಗೆ ಚಿತ್ರದ ಮಧ್ಯಭಾಗದಲ್ಲಿ ನಿಂತಿರುತ್ತಿದ್ದ ವ್ಯಕ್ತಿ ಮಾತ್ರ ಸ್ವಲ್ಪ ಹರ್ಷಚಿತ್ತನಾಗಿದ್ದರೆ ಹಿಂದಿನ ಸಾಲಿನಲ್ಲಿದ್ದವರೆಲ್ಲರೂ ಮ್ಲಾನವದನರಾಗಿ ಚಿತ್ರಿತರಾಗಿದ್ದರಂತೆ.

ಸರಿ, ಇದು ಯಾಕೆ ಹೀಗೆ ಅಂತ ಮತ್ತೆ ತಲೆಕೆಡಿಸಿಕೊಂಡರಂತೆ. ನಂತರ ಎರಡೂ ದೇಶಗಳ ಸಾಂಸ್ಕೃತಿಕ ಭಿನ್ನತೆಗಳು ಹಾಗೂ ಜೀವನ ಶೈಲಿಯನ್ನು ಅಧ್ಯಯನ ಮಾಡಿದರಂತೆ. ಈ ಮಕ್ಕಳು ಬಿಡಿಸಿದ ಚಿತ್ರಗಳನ್ನೇ ಮುಂದಿಟ್ಟುಕೊಂಡು ಜಪಾನಿಲ್ಲಿ ಹದಿನಾರರಿಂದ ಇಪ್ಪತ್ತನೇ ಶತಮಾನದ ನಡುವೆ ಚಿತ್ರಿಸಲಾದ ಪೋರ್ಟ್‌ರೇಟ್ ಚಿತ್ರಗಳನ್ನು ಸಂಶೋಧಕರು ಹುಡುಕಿ ಇವೆಲ್ಲದಕ್ಕೂ ಕಾರಣ ಕಂಡುಹಿಡಿದರಂತೆ. ಆ ಚಿತ್ರಗಳಲ್ಲಿ ಕೂಡ ಇಂಥದ್ದೇ ಮುಖಭಾವ ಇತ್ತಂತೆ. ಆಗ ಅಮೆರಿಕನ್ನರಿಗೆ ಗೊತ್ತಾಯಿತಂತೆ ಜಪಾನಿಗರು ನಮ್ಮಂತಲ್ಲ, ಅವರ ಮುಖಚರ್ಯೆ ಒಂದು ಸಮುದಾಯವನ್ನೇ ಪ್ರತಿನಿಧಿಸುತ್ತದೆ ಎಂದು.

ಅಮೆರಿಕ ಮತ್ತು ಜಪಾನಿಗರ ವಿಚಾರ ಹೋಗಲಿ, ದಿನವೂ ತಮ್ಮ ಮುಖವನ್ನೇ ಕನ್ನಡಿಯಲ್ಲಿ ನೋಡಿಕೊಂಡು ಅದೃಷ್ಟ ಹಳಿಯುವ ನಮ್ಮಂತವರ ಮುಖಭಾವ ಹೇಗಿರಬಹುದು? ಇದಕ್ಕೆ ಕನ್ನಡಿಯೇ ಉತ್ತರಿಸಬೇಕು. ಅಥವಾ ನಮ್ಮಲ್ಲೂ ಯಾರದರೂ ಇಂಥದೊಂದು ಸಂಶೋಧನೆ ನಡೆಸಬೇಕು!

ಕಿರಿಕಿರಿ ಕರೆಗಳಿಗೆ ಕಡಿವಾಣ

(ಬರೆದವರು - ಜಿತೇಂದ್ರ)

suddi-pic.jpgಭಾರತದಲ್ಲಿನ ಮೊಬೈಲ್ ಗ್ರಾಹಕರು ಇನ್ನು ಮುಂದೆ ಅನಗತ್ಯ ಕರೆಗಳ ಕಿರಿಕಿರಿ ಅನುಭವಿಸೋ ಕಷ್ಟ ಕಡಿಮೆಯಾಗಬಹುದು. ಟೆಲಿ ಮಾರ್ಕೆಟರ್‌ಗಳ ಅನಗತ್ಯ ಕರೆಗಳಿಗೆ ಟ್ರಾಯ್ ದಂಡ ವಿಧಿಸಲಿದೆ. ನಿಮಗೆ ಲೋನ್ ಕೊಡ್ತೇವೆ, ಕ್ರೆಡಿಟ್ ಕಾರ್ಡ್ ನೀಡ್ತೇವೆ, ವಿಮೆ ಮಾಡಿಸಿ ಅಂತೆಲ್ಲ ಹೇಳಿಕೊಂಡು ಬರುವ ಕರೆಗಳಿಗೆ ಅವಕಾಶ ನೀಡುವ ಮೊಬೈಲ್ ಸೇವಾ ಪೂರೈಕೆದಾರರಿಗೆ ಇಪ್ಪತ್ತು ಸಾವಿರದವರೆಗೂ ದಂಡ ವಿಧಿಸಬಹುದು ಎಂದು ಅದು ಹೇಳಿದೆ.

ಟೆಲಿ ಮಾರ್ಕೆಟರ್‌ಗಳ ಇಂತಹ ಅನಗತ್ಯ ಕರೆಗಳು ನಿಮಗೆ ಬರುತ್ತಿದ್ದರೆ ನೀವು ಮಾಡಬೇಕಾದದ್ದು ಇಷ್ಟೆ. ಅಂತಹ ಕರೆ ಬಂದ ಹದಿನೈದು ದಿನದೊಳಗೆ ಆ ವಿಷಯವನ್ನು ನಿಮ್ಮ ಮೊಬೈಲ್ ಸೇವಾ ಪೂರೈಕೆದಾರರಿಗೆ ತಿಳಿಸಬೇಕು. ಆದರೆ ಅದಕ್ಕೂ ಮುನ್ನ ನೀವು ಅನಗತ್ಯ ಕರೆಗಳನ್ನು ರದ್ದು ಮಾಡುವ ಸೇವೆ (ಡಿಎನ್‌ಸಿ)ಗೆ ನೊಂದಾಯಿಸಲ್ಪಟ್ಟಿರಬೇಕು.

ಭಾರತೀಯ ದೂರಸಂವಹನ ನಿಯಂತ್ರಣ ಪ್ರಾಧಿಕಾರ ಹೇಳುವ ಪ್ರಕಾರ ಅನಗತ್ಯ ವಾಣಿಜ್ಯ ಕರೆಗಳಿಗೆ ಸೇವಾ ಪೂರೈಕೆದಾರರೇ ಮೊದಲ ಹೊಣೆಯಾಗುತ್ತಾರೆ. ಇಂತಹ ಮೊದಲ ಅನಗತ್ಯ ಕರೆಗೆ ಪೂರೈಕೆದಾರರಿಗೆ ಐದು ಸಾವಿರ ದಂಡ ವಿಧಿಸಲಾಗುತ್ತದೆ. ನಂತರವೂ ಇದು ಪುನರಾವರ್ತಿಸಿದರೆ ಇಪ್ಪತ್ತು ಸಾವಿರದವರೆಗೂ ದಂಡದ ಪ್ರಮಾಣ ಏರಿಕೆಯಾಗುತ್ತೆ. ಟ್ರಾಯ್ ಈ ಕುರಿತು ಸೇವಾ ಪೂರೈಕೆದಾರರು ಹಾಗೂ ಟೆಲಿ ಮಾರ್ಕೆಟರ್‌ಗಳಿಗೆ ನಿರ್ದೇಶನ ನೀಡಿದೆ. ಅದರಂತೆ ಡಿಎನ್‌ಸಿ ಸೇವಾದಾರರಿಗೆ ಕರೆ ಮಾಡೋ ಟೆಲಿ ಮಾರ್ಕೆಟರ್‌ಗಳು ಮೊದಲ ಬಾರಿಯ ಕರೆಗೆ ಐದುನೂರು ರೂಪಾಯಿ ದಂಡ ಕಟ್ಟಬೇಕಾಗುತ್ತೆ. ಮತ್ತೆ ಇಂತಹ ಕರೆಗಳನ್ನು ಮಾಡುತ್ತಾ ಹೋದರೆ ಪ್ರತಿ ಅನಗತ್ಯ ಕರೆಗೂ ೧೦೦೦ ರೂ. ಹೆಚ್ಚುವರಿ ದಂಡ ಬೀಳುತ್ತೆ.

ಟೆಲಿ ಮಾರ್ಕೆಟಿಂಗ್ ಬಗ್ಗೆ ಹೆಚ್ಚು ಹೆಚ್ಚು ದೂರುಗಳು ದಾಖಲಾಗುತ್ತಿರುವ ಕಾರಣ ಟ್ರಾಯ್ ಈ ಕ್ರಮ ಕೈಗೊಂಡಿದೆ. ಜೊತೆಗೆ ಟೆಲಿ ಮಾರ್ಕೆಟಿಂಗ್ ಕರೆಗಳ ಹೆಚ್ಚಳ ಕುರಿತು ದೇಶದ ಸಂಸತ್ತು ಮತ್ತು ನ್ಯಾಯಲಯಗಳ ಕಣ್ಣು ಬಿದ್ದ ಹಿನ್ನಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಸಿದೆ. ಆದಾಗ್ಯೂ, ಭಾರತದ ೨೫೦ ದಶಲಕ್ಷ ಮೊಬೈಲ್ ಬಳಕೆದಾರರಲ್ಲಿ ಕೇವಲ ೮.೩ ದಶಲಕ್ಷ ಬಳಕೆದಾರರು ಮಾತ್ರ ಡಿಎನ್‌ಸಿ ಸೇವೆಗೆ ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಹೆಚ್ಚು ಜನ ಮೆಟ್ರೊ ನಗರವಾಸಿಗಳೇ ಆಗಿದ್ದಾರೆ. ಹೀಗಾಗಿ ಎಷ್ಟು ಜನರಿಗೆ ಇದರ ಉಪಯೋಗ ಲಭ್ಯ ಆಗುತ್ತೆ ಅನ್ನೋದು ಟ್ರಾಯ್ ಮುಂದಿರುವ ಪ್ರಶ್ನೆ.

ಆದರೆ ಯಾವುದೇ ಮೊಬೈಲ್ ಕಂಪನಿ ಟ್ರಾಯ್‌ನ ಈ ನಿಯಮದ ಬಗ್ಗೆ ತುಟಿ ಬಿಚ್ಚಿ ಮಾತಾಡಿಲ್ಲ. ಸುಮಾರು ಹದಿನೈದು ಸಾವಿರ ನೋಂದಾಯಿತವಲ್ಲದ ಟೆಲಿ ಮಾರ್ಕೆಟರ್‌ಗಳು ಇಂತಹ ಕರೆಗಳನ್ನು ಮಾಡುತ್ತಿದ್ದು, ಅವರೆಲ್ಲರನ್ನೂ ನಿಯಂತ್ರಿಸೋದು ನಮ್ಮ ಕೈಯಲಿಲ್ಲ ಅಂತಾರೆ ಅವರು.

(ಚಿತ್ರ ಕೃಪೆ-ಎಕನಾಮಿಕ್ಸ್ ಟೈಮ್ಸ್)

ಬ್ರೌಸಿಗರ ಖಾಸಗಿತನ ಕದಿಯಬೇಡಿ- ವೆಬ್ ಜನಕನ ಮನವಿ 

(ಬರೆದವರು-ಜಿತೇಂದ್ರ)

tim-bernes-lee.jpgಅಂತರ್‌ಜಾಲದಲ್ಲಿ ತಮ್ಮ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ವ್ಯವಸ್ಥೆಗಳ ವಿರುದ್ಧ ಗ್ರಾಹಕರು ತಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯ ಇದೆ. ಹಾಗಂತ ಹೇಳ್ತಾ ಇದ್ದಾರೆ ವೆಬ್ ನಿರ್ಮಾತೃಗಳಲ್ಲೊಬ್ಬರಾದ ಟಿಮ್ ಬರ್ನರ್‍ಸ್. ಅಂತರ್‌ಜಾಲದ ಭವಿಷ್ಯದ ಕುರಿತ ಭಯವೇ ಅವರ ಈ ಹೇಳಿಕೆಗೆ ಕಾರಣ.

ಇತ್ತೀಚೆಗಷ್ಟೆ ಫೋರ್ಮ್ ಅನ್ನೋ ಕಂಪನಿ ಆನ್‌ಲೈನ್ ಜಾಹಿರಾತುದಾರರಿಗೆ ಅನುಕೂಲವಾಗುವಂತೆ ವೆಬ್ ಬಳಕೆದಾರರ ಖಾಸಗಿ ಮತ್ತು ವೆಬ್ ಆಸಕ್ತಿಗಳನ್ನು ಒದಗಿಸುವ ಜಾಹಿರಾತು ವ್ಯವಸ್ಥೆಯೊಂದನ್ನು ಪರಿಚಯಿಸಿತ್ತು. ಅದರಂತೆ ವೆಬ್ ಬಳಕೆದಾರರ ವೈಯುಕ್ತಿಕ ಆಸಕ್ತಿ, ಅಭಿರುಚಿಗಳು ಆನ್‌ಲೈನ್ ಜಾಹಿರಾತುದಾರರಿಗೆ ವರ್ಗಾ ಆಗಿ, ಸಂಬಂಧಪಟ್ಟ ಜಾಹಿರಾತುದಾರರು ವೆಬ್ ಬಳಕೆದಾರರ ಅಗತ್ಯಗಳಿಗೆ ಹೋಲಿಕೆಯಾಗುವ ಜಾಹಿರಾತುಗಳನ್ನು ಕಳುಹಿಸಿ, ತಮ್ಮ ಉತ್ಪನ್ನ ಕೊಳ್ಳುವಂತೆ ವೆಬ್ ಗ್ರಾಹಕರಿಗೆ ದುಂಬಾಲು ಬೀಳುತ್ತಿದ್ದರು. ಅಂತರಜಾಲ ಸೇವೆ ಒದಗಿಸುವ ಪ್ರಮುಖ ಸೇವಾದಾರರು (ಐಎಸ್‌ಪಿ), ಫೋರ್ಮ್‌ನ ಈ ಯೋಜನೆಯನ್ನು ಬಳಸಿಕೊಳ್ಳಲು ಯೋಚಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇಂತಹದ್ದೊಂದು ವ್ಯವಸ್ಥೆ ಬಂದರೆ ನನ್ನ ಅಂತರ್‌ಜಾಲ ಸೇವೆಯನ್ನೆ ಬದಲಿಸಿಬಿಡ್ತೀನಿ ಅಂತಾರೆ ಬರ್ನರ್‍ಸ್. ನಮ್ಮ ಖಾಸಗಿ ದಾಖಲೆಗಳು ಮತ್ತು ವೆಬ್ ಇತಿಹಾಸಗಳು ನಮಗಷ್ಟೆ ಸೇರಬೇಕು. ನೆಟ್ ಸರಬರಾಜು ಅನ್ನೋದು ಒಂದು ಮನೆಗೆ ನೀರು ಸರಬರಾಜು ಮಾಡೋ ಹಾಗೆ. ಅಲ್ಲಿಂದ ನೀರು ಬರಬೇಕೆ ಹೊರತು ನಮ್ಮ ಮನೆಯಿಂದ ನೀರು ಹೋಗೊ ಹಾಗೆ ಇಲ್ಲ. ನಾನು ಯಾವ ವೆಬ್‌ಸೈಟ್‌ಗೆ ಹೋಗಬೇಕು ಬಿಡಬೇಕು ಅನ್ನೋದನ್ನ ಐಎಸ್‌ಪಿಗಳು ನಿರ್ದೇಶಿಸೋ ಅಗತ್ಯ ಇಲ್ಲ ಎನ್ನುವುದು ಅವರ ಅಭಿಪ್ರಾಯ.

ಇನ್ನೊಂದೆಡೆ , ಈ ಬಗ್ಗೆ ಯಾವಾಗ ಮಾಧ್ಯಮಗಳು ನಕಾರಾತ್ಮಕವಾಗಿ ಬರೆಯೋಕೆ ಶುರು ಮಾಡಿದವೋ ಆಗಿಂದ ಫೋರ್ಮ್ ತನ್ನ ಯೋಜನೆಗೆ ಒಳಪಡಲು  ಬಯಸದ ಗ್ರಾಹಕರು ಇದರಿಂದ ಸಾರ್ವತ್ರಿಕವಾಗಿ ಹೊರಗುಳಿಯುವ ಆಯ್ಕೆಯೊಂದನ್ನು ನೀಡಿದೆ. ತಮ್ಮ ಗ್ರಾಹಕರ ವೆಬ್ ಹುಡುಕಾಟದ ಹವ್ಯಾಸಗಳಲ್ಲಿ ಮೂಗು ತೂರಿಸೋದು ನ್ಯಾಯವೇ ಅಂತ ಖಾಸಗಿ ಹಕ್ಕುಗಳ ಪ್ರತಿಪಾದಕರು ಐಎಸ್‌ಪಿಗಳನ್ನು ಪ್ರಶ್ನಿಸುತ್ತಿದ್ದಾರೆ.

ಈ ಹಂತದಲ್ಲಿ ಗ್ರಾಹಕರು ತಮ್ಮ ಹಕ್ಕುಗಳನ್ನು ಉಪಯೋಗಿಸಿಕೊಳ್ಳೋದು ಬಹಳ ಮುಖ್ಯ. ಇಂತಹದ್ದೊಂದು ವ್ಯವಸ್ಥೆ ಹೇಗೆಲ್ಲ ಉಪಯೋಗ ಆಗುತ್ತೆ ಅಂತ ನಾವು ಕಾಣೋ ಅಗತ್ಯ ಇಲ್ಲ ಅನ್ನೋದು ಬರ್ನರ್‍ಸ್ ವಾದ. . ಫೇಸ್ ಬುಕ್ ಮತ್ತು ಮೈ ಸ್ಪೇಸ್‌ನಂಥ ನೆಟ್‌ವರ್ಕ್ ಮೂಲಕ ಅಂತರಜಾಲ ಬಳಕೆ ಹೆಚ್ಚುತ್ತಿದೆಯಾದರೂ, ಯುವ ಜನತೆ ವೆಬ್‌ಗಳಲ್ಲಿ ತಮ್ಮ ಖಾಸಗಿ ವಿಷಯಗಳನ್ನು ಸೇರಿಸುತ್ತಿರುವುದು ಅಪಾಯಕಾರಿ ಅಂತ ಬರ್ನರ್‍ಸ್ ಕಳವಳ ವ್ಯಕ್ತಪಡಿಸುತ್ತಾರೆ.

(ಚಿತ್ರ ಕೃಪೆ-ಟೆಲಿಗ್ರಾಫ್)

ಮಹಾತ್ಮಾ ಗಾಂಧಿಯ ನಂತರದ ಮಹಾಲೇಖಕ ಚೇತನ್ ಭಗತ್! 

(ಬರೆದವರು ಅಬ್ದುಲ್ ರಶೀದ್)

best-seller.jpgಒಂದು ಕಾಲದಲ್ಲಿ ಭಾರತ ದೇಶದಲ್ಲಿ ಬರಹಗಾರರು ಅಂದರೆ ಸಖತ್ ಕಷ್ಟಜೀವಿಗಳಾಗಿ ಬದುಕುತ್ತಿರಬೇಕು ಎನ್ನುವ ಅಲಿಖಿತ ಕಟ್ಟಾಜ್ಞೆ ಇತ್ತು. ಬರಹ ಅಂದರೆ ಲೇಖಕನು ಲೇಖನಿಯನ್ನು ನೋವಿನಲ್ಲಿ ಅದ್ದಿ ತೆಗೆದು, ಹಿಂಡಿ, ಭಟ್ಟಿ ಇಳಿಸಿ, ಓದುಗನ ಹೃದಯಕ್ಕೆ ಇಳಿಸುವುದು ಎಂದು ಹೇಳಲಾಗುತಿತ್ತು. ಬಡತನವೋ, ವಿರಹವೋ, ಪ್ರೇಮವೋ, ವಂಚನೆಯೋ, ಸ್ತ್ರೀ ಶೋಷಣೆಯೋ-ಏನಾದರೂ ಆಗಲಿ. ಲೇಖಕನು ಇವುಗಳನ್ನು ಬಿಟ್ಟು ಬೇರೇನಾದರೂ ಬರೆದಲ್ಲಿ ಆತನನ್ನು ಭೂರ್ಜ್ವಾ ಎಂದು ಕರೆದು ಹೆಡೆಮುರಿಗೆ ಕಟ್ಟಲಾಗುತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಡತನವೋ, ಸಿರಿತನವೋ, ಬರವೋ, ಗರವೋ ಅದೆಲ್ಲ ಮುಖ್ಯವಲ್ಲ. ಸಾವಿರಗಟ್ಟಲೆ ಕಾಪಿಗಳು ಖರ್ಚಾಗುವಂತೆ ಬರೆಯಬಲ್ಲವನೇ ಬರಹಗಾರರ ಪರಮಾತ್ಮ ಎಂದು ಕರೆಯಲ್ಪಡುತ್ತಾನೆ.

ಉದಾಹರಣೆಗೆ ಇತ್ತೀಚಿಗೆ ಇಂಡಿಯಾದ ಬೆಸ್ಟ್ ಸೆಲ್ಲರ್ ಎಂದು ಕರೆಯಲ್ಪಡುತ್ತಿರುವ ಚೇತನ್ ಭಗತ್ ಎಂಬ ಕಾದಂಬರಿಕಾರರ ಕಥಾನಕವನ್ನೇ ಕೇಳಿ. ಇವರು ಒಬ್ಬರು ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್. ಜರ್ಮನ್ ಮೂಲದ ಡಾಯಿಶ್ ಬ್ಯಾಂಕ್‌ನಲ್ಲಿ ಉನ್ನತ ಅಧಿಕಾರಿ. ಅಹ್ಮದಾಬಾದಿನ IIT ಯಲ್ಲಿ ಇದ್ದವರು. ಎಲ್ಲರೂ ಗಾಲ್ಫ್ ಆಡಲು ಮೈದಾನದ ಕಡೆ ಧಾವಿಸುತ್ತಿದ್ದಾಗ, ಇವರು, `ಇಲ್ಲ ನಾನು ಹೀಗೆ ಆಟವಾಡಿ ಈ ನರ ಜನ್ಮವನ್ನು ವ್ಯರ್ಥ ಮಾಡಲಾರೆ, ಕಾದಂಬರಿ ಬರೆದು ಖ್ಯಾತನಾಗುವೆ` ಎಂದು ಗಂಟೆಗಟ್ಟಲೆ ಹಠ ಹಿಡಿದು ಕುಳಿತು ಪೇಜುಗಟ್ಟಲೆ ಬರೆದು ಹರಿದು ಪುನಃ ಬರೆದು ಈಗ ಭಾರತದ ಅತ್ಯಂತ ಪ್ರತಿಗಳು ಮಾರಾಟವಾಗುವ ಅದ್ವಿತೀಯ ಲೇಖಕ ಎಂದು ಕರೆಸಿಕೊಂಡಿದ್ದಾರೆ. ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಆತ್ಮಕತೆಯ ನಂತರ ಇಷ್ಟೊಂದು ಪ್ರತಿಗಳು ಮಾರಾಟವಾದ ಪುಸ್ತಕ ಅಂದರೆ ಇವರದೇ ಎಂದು ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ವರದಿ ಮಾಡಿದೆ.

ಆದರೆ ಈ ಸುದ್ದಿ ಕೇಳಿ ನಾವು ಆಹಾ! ಅಂತ ರೋಮಾಂಚನಗೊಂಡು ಇವರು ಬರೆದ ಗ್ರಂಥಗಳನ್ನು ಓದಲು ತೊಡಗಿದರೆ ಮೊದಲ ಕೆಲವು ಪುಟಗಳಿಗೇ ಸುಸ್ತಾಗುತ್ತದೆ. ಇವರ ಒಂದು ಕಾದಂಬರಿಯ ಹೆಸರು `ಕಾಲ್‌ಸೆಂಟರಿನಲ್ಲಿ ಒಂದು ರಾತ್ರಿ’ ಮೊದಲ ಮುದ್ರಣದಲ್ಲೇ ೫೦ ಸಾವಿರ ಪ್ರತಿ ಖಾಲಿಯಾಗಿದೆ. ಬೆಲೆ ನೂರು ರೂಪಾಯಿ ಅಂದರೆ ಕೇವಲ ಎರಡೂವರೆ ಡಾಲರ್. ಓದಿ ಬಿಸಾಕಬಹುದಾದಂತ ಬೆಲೆ ಅಂತ ಕಾಲ್‌ಸೆಂಟರ್ ಸಾಹಿತ್ಯಾಸಕ್ತರು ಕೊಳ್ಳುತ್ತಿದ್ದಾರಂತೆ. ವಸ್ತುವಿನಲ್ಲಿ ಕಾಮೆಡಿ ಇದೆಯಂತೆ. ವಾಸ್ತುವಿನಲ್ಲಿ ಬಾಲಿವುಡ್ ಇದೆಯಂತೆ. ಆದರೆ ಅದರಲ್ಲಿ ಸತ್ವವೇನೂ ಇಲ್ಲ ಅಂತ ಟೈಮ್ಸ್ ಆಫ್ ಇಂಡಿಯಾ ಬರೆದಿದೆ.

ಇವರ ಇನ್ನೊಂದು ಕಾದಂಬರಿ `ಪೈವ್ ಪಾಯಿಂಟ್ ಸಮ್‌ ಒನ್` ಇದರಲ್ಲೂ ಸತ್ವ ಏನೂ ಇಲ್ಲ ಬರಿ ಜಲ್ಲೆ ಅಂತ ನಮ್ಮ ಎಂ.ಎಸ್. ಶ್ರೀರಾಮ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.

ಹಾಗಾದರೆ ಹೀಗಾದರೆ ಅಂತ ಏನೂ ಗೊಣಗಬೇಡಿ ಬೆಸ್ಟ್ ಸೆಲ್ಲರ್ ಅಂದರೆ ಬೆಸ್ಟ್ ಸೆಲ್ಲರ್. ಕಾದಂಬರಿಕಾರ ಅಂದರೆ ಕಾಲಜ್ಞಾನಿ ಅಲ್ಲ. ಕಾಲಕ್ಕೆ ತಕ್ಕ ಹಾಗೆ ಕೋಲ ಕಟ್ಟುವ ಕೋಡಂಗಿ ಅನ್ನುವುದು ಈ ಸುದ್ದಿಯ ಹಿಂದಿನ ನೀತಿ. ಇನ್ಯಾಕೆ ತಡ ಒಂದು ಕೋಲಾ ಕುಡಿದು ಕಾದಂಬರಿ ಬರೆಯಲು ಶುರುಮಾಡಿ.

ಗೂಗಲ್ ಸೇರಿದರೆ ಜಾರುಬಂಡಿ ಆಡಬಹುದು

(ಬರೆದವರು ಅಬ್ದುಲ್ ರಶೀದ್)

google_zurich.jpgನಿಮಗೆ ಕೆಲಸದ ಜಾಗದಲ್ಲಿ ಜಾರು ಬಂಡಿಯಲ್ಲಿ ಜಾರಬೇಕು ಅಂತ ಇದ್ರೆ, ಆಫೀಸಲ್ಲೊಂದು ಆಟದ ಕೋಣೆ ಇರಬೇಕಿತ್ತು ಎಂಬ ಆಸೆ ಇದ್ರೆ, ಊಟ ತಿಂಡಿ ಫ್ರೀಯಾಗಿರಬೇಕು, ಜ್ಯೂಸ್ ಕುಡಿಯಲು ಪಾರ್ಲರ್ ಬೇಕು ಅಂತೆಲ್ಲ ಹಗಲು ಕನಸು ಕಾಣ್ತಾ ಇದ್ರೆ ನೀವು ತಕ್ಷಣ ಅರ್ಜಿ ಸಲ್ಲಿಸಬೇಕಾದ ವಿಳಾಸ ಗೂಗಲ್ ಕಂಪೆನಿ. ಏಕೆಂದರೆ ಅಲ್ಲಿ ಇದೆಲ್ಲಾ ಇದೆ ಅಂತ ಬಿಬಿಸಿ ಹೇಳ್ತಾ ಇದೆ.

ಸ್ವಿರ್ಟರ್‌ಲೆಂಡ್‌ನ ವಿಹಾರಗೃಹಗಳ ಮಾದರಿಯ ಮೀಟಿಂಗ್ ಪಾಡ್‌ಗಳು, ಮೇಲಂತಸ್ತಿನಿಂದ ಇಳಿಯಲು ಜಾರು ಕಂಬಗಳು, ಹತ್ತಲು ಏರು ಕಂಬಗಳು, ತಳ ಅಂತಸ್ತಿನ ಕೆಫೆಟೇರಿಯಾದೊಳಕ್ಕೆ ಧುಮುಕಲು ಜಾರು ಬಂಡಿಗಳು ಇವೆಲ್ಲಾ ಇರುವ ಗೂಗಲ್‌ನ ಇಂಜಿನಿಯರಿಂಗ್ ಕೇಂದ್ರ ಸ್ಥಾನ ಜ್ಯೂರಿಚ್‌ನಲ್ಲಿ ಸಿದ್ಧ ಆಗ್ತಾ ಇದೆ. ಈ ಕಂಪೆನಿಯ ಮುನ್ನೂರು ಮಂದಿ ಉದ್ಯೋಗಸ್ಥರಿಗಾಗಿ ಈ ಕಾರ್ಯವಿಹಾರಧಾಮ ಆರಂಭವಾಗ್ತಾ ಇದೆ. ಇದನ್ನು ನಿರ್ಮಿಸುತ್ತಿರುವ ಇಂಜಿನಿಯರ್‌ಗಳೂ ಆಮೇಲೆ ಇಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಈ ರೋಮಾಂಚಕ ಕಚೇರಿ ಗೂಗಲ್‌ನ ವಿಶಿಷ್ಟ ವ್ಯಾಪಾರಿ ಶೈಲಿಯನ್ನ ಜಗತ್ತಿಗೆ ತೋರಿಸುವ ಒಂದು ಪ್ರಯತ್ನ. ಜೊತೆಗೆ ಗೂಗಲ್ ಅಂದರೆ ಬರೀ ಅಮೆರಿಕಾ ಅಲ್ಲ. ಯುರೋಪೂ ಹೌದು ಅಂತ ಹೇಳುವ ಜಾಣತನ.

ಗೂಗಲ್ ಇರೋದೇ ಹೀಗೆ. ಎಲ್ಲವನ್ನು ದೊಡ್ಡ ದನಿಯಲ್ಲಿ ಕೂಗಿ ಹೇಳ್ತದೆ. ಅದರ ಕೂಗಿಗೆ ಅಷ್ಟೇ ಜೋರಾಗಿ ಮರು ಕೂಗೂ ಕೇಳಿ ಬರುತ್ತೆ. ನಾಗರಿಕ ಹಕ್ಕುಗಳಿಗೆ ಹೋರಾಡುವ ಮಂದಿ ಈ ಗೂಗಲ್ ಸರ್ಚ್ ಮಾಡುವ ನೆಪದಲ್ಲಿ ಇದ್ದಬದ್ದ ಖಾಸಗಿ ವ್ಯವಹಾರಗಳೊಳಗೆ ಮೂಗು ತೂರಿಸಿ, ಅಂಕಿಅಂಶ ಸಂಗ್ರಹಿಸಿ ಜಾಹಿರಾತಿನ ಬಳಕೆಗಳಿಗೆ ಮಾರಿಕೊಳ್ತಾ ಇದೆ ಎಂದು ಗಲಾಟೆ ಎಬ್ಬಿಸ್ತಾ ಇದಾರೆ. ಗೂಗಲ್ ಇದೇ ದುರಾಲೋಚನೆಯಿಂದ ಡಬಲ್ ಕ್ಲಿಕ್ ಎಂಬ ಜಾಹೀರಾತು ಕಂಪನಿಯನ್ನು ಖರೀದಿಸಿದೆ ಅಂತ ಆಪಾದಿಸುತ್ತಾ ಇದಾರೆ.

ಇದು ಯಾವುದಕ್ಕೂ ಸೊಪ್ಪು ಹಾಕದ ಗೂಗಲ್ ಎಲ್ಲಕ್ಕಿಂತ ದೊಡ್ಡವರು ನಮ್ಮ ಇಂಜಿನಿಯರ್‌ಗಳು, ಅವರನ್ನು ಖುಷಿಯಲ್ಲಿಟ್ಟರೆ ಯಾರಿಗೂ ಏನೂ ಮಾಡಕ್ಕಾಗಲ್ಲ ಅಂತ ಅವರಿಗಾಗಿ ಕನಸಿನಂತಹ ಕಚೇರಿಗಳನ್ನು ಕಟ್ಟಿಕೊಡ್ತಾ ಇದೆ. ಇದು ಬರೀ ಊಟ ತಿಂಡಿಯ ವಿಷಯ ಅಲ್ಲ. ಗೂಗಲ್‌ನ ಗುಣಮಟ್ಟದ ಸಂಕೇತವೂ ಹೌದು. ಖುಷಿಯಲ್ಲಿರುವ ಉದ್ಯೋಗಿಗಳು ಎಷ್ಟು ಎತ್ತರಕ್ಕೆ ಒಂದು ಕಂಪೆನಿಯನ್ನು ಒಯ್ಯಬಹುದು ಅನ್ನೋದಕ್ಕೆ ನಾವೇ ಒಂದು ಉದಾಹರಣೆ ಅಂತ ಹೇಳ್ತಾ ಇದೆ.

ಒಂದು ಕಾಲದಲ್ಲಿ ಪಾರ್ಕು, ನರ್ಸರಿ ಸ್ಕೂಲು ಇಲ್ಲಿ ಮಾತ್ರ ಇದ್ದ ಜಾರುಬಂಡಿಗಳು ಮತ್ತು ಏರು ಕಂಬಗಳು ನೀವು ಗೂಗಲ್ ಸೇರಿದ್ರೆ ಅಲ್ಲೂ ಸಿಗುತ್ತೆ.

ಮೊದಲೆಲ್ಲಾ ಹಗಲುಗನಸುಗಳು ಬರೀ ಹಗಲುಗನಸುಗಳಾಗಿತ್ತು ಅಂತ ಬದುಕಿನಲ್ಲಿ ಬಹಳ ಕಷ್ಟ ಪಟ್ಟ ವಾಸ್ತವವಾದಿಗಳು ಹೇಳ್ತಿದ್ರು. ಈಗ ಬಿಬಿಸಿ ಓದಿದ ಮೇಲೆ ‘ಚೆನ್ನಾಗಿ ಓದು ಕಂದಾ, ಗೂಗಲ್‌ನಲ್ಲಿ ಜಾರುಬಂಡಿ ಜಾರು ಕಂದಾ’ ಅಂತ ಅಮ್ಮಂದಿರು ಜೋಗುಳ ಹಾಡ್ತಿದ್ದಾರಂತೆ.

ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷತೆಯ ಚಿಂತೆ

(ಬರೆದವರು-ಜಿತೇಂದ್ರ)

indian-students.jpgಅಮೆರಿಕಾದ ಕಾಲೇಜುಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೀಗ ತಮ್ಮ ಸುರಕ್ಷತೆಯ ಪ್ರಶ್ನೆ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿನ ಕಾಲೇಜು ಕ್ಯಾಂಪಸ್‌ಗಳಲ್ಲಿ ನಡೆದ ಶೂಟೌಟ್‌ಗಳು ಅಮೆರಿಕನ್ನರ ಜೊತೆಗೆ ಭಾರತೀಯರನ್ನು ಚಿಂತೆಗೀಡುಮಾಡಿವೆ.

ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆ ಪ್ರಕಟಿಸಿರುವಂತೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅಮೆರಿಕಾಕ್ಕೆ ಓದಲು ಬಂದ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಅತಿ ಹೆಚ್ಚಾಗಿದ್ದಾರೆ. ವಿದ್ಯಾಭ್ಯಾಸಕ್ಕೆಂದು ಅಮೆರಿಕಾಕ್ಕೆ ತೆರಳಿದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಶೇಕಡಾ ಹತ್ತರಷ್ಟು ಹೆಚ್ಚಾಗಿದೆ. ೮೩,೮೩೩ ಭಾರತೀಯರು ಅಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಭಾರೀ ಸಂಖ್ಯೆಯಲ್ಲಿರುವ ಈ ವಿದ್ಯಾರ್ಥಿಗಳ ಸುರಕ್ಷತೆ  ತುಸು ಕಷ್ಟಕರವಾಗಿದೆ ಎನ್ನುತ್ತವೆ ಅಂಕಿಅಂಶಗಳು.

 ಖಾಸಗಿಯಾಗಿ ಬಂದೂಕು ಹೊಂದಲು ಮುಕ್ತ ಪರವಾನಿಗೆ ಇರುವ ಅಮೆರಿಕಾ ದೇಶದ ಕ್ಯಾಂಪಸ್‌ಗಳಲ್ಲಿ  ಒಂದು ವರ್ಷದಲ್ಲೇ ನಾಲ್ವರು ಭಾರತೀಯ ವಿದ್ಯಾರ್ಥಿಗಳು  ಗುಂಡೇಟಿಗೆ ಬಲಿಯಾಗಿದ್ದಾರೆ. ಮುಂಬೈನ ಮಿನಾಲ್ ಪಾಂಚಾಲ್ ಮತ್ತು ಮತ್ತು ಭಾರತೀಯ ಮೂಲದ ಸಿವಿಲ್ ಮತ್ತು ಪರಿಸರ ಇಂಜಿನಿಯರಿಂಗ್ ಪ್ರಾಧ್ಯಾಪಕ ಜಿವಿ ಲೋಘನಾಥನ್ ,ಲೂಸಿಯಾನ ರಾಜ್ಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಾದ ಚಂದ್ರಶೇಖರ್ ರೆಡ್ಡಿ ಕೊಮ್ಮ ಮತ್ತು ಕಿರಣ್‌ಕುಮಾರ್ ಆಲಂ ಉತ್ತರ ಕರೊಲಿನಾದ ಡ್ಯೂಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಭಿಜಿತ್ ಸಾವಿಗೀಡಾಗಿದ್ದಾರೆ. ಇನ್ನೊಂಡೆದೆ ನ್ಯೂ ಮೆಕ್ಸಿಕೊ ವಿಶ್ವವಿದ್ಯಾಲಯದಲ್ಲಿ ವ್ಯಕ್ತಿಯೊಬ್ಬ ಸತತ ಆರು ತಿಂಗಳ ಕಾಲ ಭಾರತೀಯ ವಿದ್ಯಾರ್ಥಿಗಳನ್ನು ಸಾಕಷ್ಟು ಪೀಡಿಸಿದ್ದಾನೆ.

ಇಂತಹ ಘಟನೆಗಳಿಂದಾಗಿ, ಇಂದು ಅಮೆರಿಕಾದಲ್ಲಿನ ಭಾರತೀಯ ವಿದ್ಯಾರ್ಥಿ ಸಮುದಾಯ ತನ್ನ ಸುರಕ್ಷತೆ ಕುರಿತು ಕಳವಳಕ್ಕೀಡಾಗಿದೆ. ಕೆಲವೆಡೆ ಕ್ಯಾಂಪಸ್ ಹೊರಗೆ ಉಳಿಯುವುದು ಅಸುರಕ್ಷಿತ ಎಂದು ಗೊತ್ತಿದ್ದರೂ ವಿದ್ಯಾರ್ಥಿಗಳು ಅದನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೊರಗಡೆ ಅಡ್ಡಾಡುವಾಗ ಮತ್ತು ಪ್ರವಾಸ ಮಾಡುವ ಸಂದರ್ಭ ಗುಂಪಾಗಿ ಹೋಗುವಂತೆ ಸಲಹೆ ಮಾಡಲಾಗುತ್ತಿದೆ. ಇನ್ನು ಕೆಲವೆಡೆ  ಸೂಕ್ತ ಬಂದೋಬಸ್ತ್ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಪ್ರತಿಯೊಂದು ಶೂಟೌಟ್ ನಡೆದಾಗಲೂ ಅಲ್ಲಿನ ಭಾರತೀಯ ವಿದ್ಯಾರ್ಥಿಗಳು ಈ ಮೇಲ್ ಮೂಲಕ ಪರಸ್ಪರ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ವೈಯುಕ್ತಿಕವಾಗಿ ತಮ್ಮ ರಕ್ಷಣೆಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಸುರಕ್ಷತೆಯ ಸಲುವಾಗಿ ಭಾರತೀಯ ವಿದ್ಯಾರ್ಥಿಗಳು ಅನೇಕ ಸಂಘಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಕ್ಯಾಂಪಸ್‌ನಲ್ಲಿ ಒಟ್ಟಾಗಿ ಸೇರುವ ಭಾರತೀಯ ವಿದ್ಯಾರ್ಥಿಗಳಲ್ಲೀಗ ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.

ಸಲಿಂಗಪ್ರೇಮ, ಮರಣದಂಡನೆ ಮತ್ತು ಗಡಿಪಾರು

(ಬರೆದವರು- ಜಿತೇಂದ್ರ)

ಮೆಹ್‌ದಿ ಕಜೇಮಿ ಎಂಬ ಇರಾನಿನ ಈ ಹುಡುಗನ ತಲೆಯ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಸಲಿಂಗಪ್ರೇಮ ಬದುಕಿಗೆ ಉರುಳಾಗುತ್ತಿದೆ. ಈಗ ಹಾಲೆಂಡಿನಲ್ಲಿರುವ ಈತನ ವೀಸಾ ಅವಧಿ ಮುಗಿದಿದ್ದು, ತನ್ನ ದೇಶಕ್ಕೆ ಹಿಂತಿರುಗಿದರೆ ಮರಣದಂಡನೆಗೆ ಗುರಿಯಾಗುವ ಅಪಾಯ ಎದುರಿಸುತ್ತಿದ್ದಾನೆ.

ಸದ್ಯ ಎಲ್ಲಿಯೂ ನೆಲೆ ಸಿಗದ ಈ ಹುಡುಗನ ಅವಾಂತರಕ್ಕೆ ಕಾರಣವಿಷ್ಟು. ಮೂರು ವರ್ಷಗಳ ಹಿಂದೆ ಇಂಗ್ಲಿಷ್ ಕಲಿಯಲೆಂದು ಈತ ವಿದ್ಯಾರ್ಥಿ ವೀಸಾ ಪಡೆದು ಬ್ರಿಟನ್ನಿಗೆ ಬಂದ.ಇರಾನಿನಲ್ಲಿದ್ದ ಅವನ ಗೆಳೆಯನನ್ನು ಅಲ್ಲಿನ ಪೊಲೀಸರು ಬಂಧಿಸುವ ತನಕ ಎಲ್ಲವೂ ಚೆನ್ನಾಗಿತ್ತು. ಲೈಂಗಿಕ ಅಪರಾಧ ಎಸಗಿದ್ದಕ್ಕಾಗಿ ಇರಾನಿನಲ್ಲಿ ೨೦೦೫ರಲ್ಲಿ ಮರಣದಂಡನೆಗೆ ಗುರಿಯಾದ ಕಜೇಮಿ ಗೆಳೆಯ , ಸಾಯುವುದಕ್ಕೆ ಮುನ್ನ ತಾನು ಕಜೇಮಿಯೊಂದಿಗೆ ಸಲಿಂಗ ಪ್ರೇಮ ಹೊಂದಿದ್ದಾಗಿ ಬಾಯಿಬಿಟ್ಟ.

ಯುರೋಪಿನ ದೇಶಗಳಲ್ಲಾಗಿದ್ದರೆ ಇದು ಅಪರಾಧವಲ್ಲ. ಆದರೆ ಸಲಿಂಗಪ್ರೇಮ ಕಾನೂನುಬಾಹಿರವಾಗಿರುವ ಇಸ್ಲಾಮಿಕ್ ದೇಶದಲ್ಲಿ ಇಂತಹದ್ದೊಂದು ಸಂಬಂಧಕ್ಕೆ ಮರಣದಂಡನೆಯ ಶಿಕ್ಷೆ ಇದೆ.
ಕಜೇಮಿಗೆ ಹೇಗೊ ಈ ವಿಷಯ ತಿಳಿಯಿತು. ಇನ್ನೊಂಡೆದೆ ಆತನ ವೀಸಾ ಅವಧಿಯೂ ಮುಗಿಯುತ್ತಾ ಬಂದಿತ್ತು. ಆತ ಇರಾನಿಗೆ ಹಿಂತಿರುಗಲು ಹೆದರಿ , ಬ್ರಿಟನ್ ಪೌರತ್ವ ಕೋರಿ ಅರ್ಜಿ ಸಲ್ಲಿಸಿದ. ಅರ್ಜಿ ತಿರಸ್ಕೃತವಾದಾಗ, ಇರಾನಿಗೆ ಗಡಿಪಾರಾಗುವುದರಿಂದ ತಪ್ಪಿಸಿಕೊಳ್ಳಲು ಹಾಲೆಂಡ್‌ಗೆ ಜಾರಿಕೊಂಡ. ಅಲ್ಲಿಯೂ ಒಂದಾರು ತಿಂಗಳಿದ್ದು, ಬಳಿಕ ಅಲ್ಲಿಯೇ ವಾಸಿಸಲು ಅರ್ಜಿ ಹಾಕಿದ. ಆದರೆ ಆ ಅರ್ಜಿ ತಿರಸ್ಕರಿಸಿದ ಹಾಲೆಂಡ್ ಸರ್ಕಾರ ಆತನನ್ನು ಬ್ರಿಟನ್‌ಗೆ ಕಳುಹಿಸಲು ತೀರ್ಮಾನಿಸಿದೆ.

ಇನ್ನು ಕೆಲವೇ ದಿನಗಳಲ್ಲಿ ಕಜೇಮಿ ಬ್ರಿಟನ್‌ಗೆ ಗಡಿಪಾರಾಗಲಿದ್ದಾನೆ. ಬಳಿಕ ಅವನನ್ನು ಬ್ರಿಟನ್‌ನಿಂದ ಇರಾನಿಗೆ ಗಡಿಪಾರು ಮಾಡಲಾಗುವುದು. ತಾನು ಸಲಿಂಗಪ್ರೇಮಿಯಾದ ಕಾರಣಕ್ಕೆ ಮಾತ್ರವಲ್ಲದೆ ಮಾಧ್ಯಮಗಳ ಅತಿಪ್ರಚಾರದಿಂದಾಗಿಯೂ ತನ್ನ ಪ್ರಾಣಕ್ಕೆ ಕುತ್ತು ಬಂದಿರುವುದಾಗಿ ಕಜೇಮಿ ಗೊಣಗುತ್ತಿದ್ದಾನೆ. ಯುರೋಪಿನ ಮಾನವ ಹಕ್ಕುಗಳ ವಲಯದಲ್ಲಿ ಈ ಕುರಿತು ಸಣ್ಣದೊಂದು ಚರ್ಚೆ ಆರಂಭವಾಗಿದೆ. ಇನ್ನೊಂಡೆದೆ ಕಜೇಮಿ ಉಳಿವಿಗಾಗಿ ಯರೋಪ್‌ನ ಸಲಿಂಗ ಪ್ರೇಮಿಗಳು ಹೋರಾಟ ಆರಂಭಿಸಿದ್ದಾರೆ.

ಕ್ವೆ ನದಿಯ ನೆನಪು

(ಬರೆದವರು-ಜೋಮನ್ ವರ್ಗೀಸ್)

kwayi-bridge.jpg`ದ ಬ್ರಿಡ್ಜ್ ಆನ್ ದ ರಿವರ್ ಕ್ವೆ ‘  ಎಂಬ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರವನ್ನು ನೀವು ನೋಡಿರಬಹದು. ಎರಡನೆಯ ಮಹಾಯುದ್ದದ ಸಂದರ್ಭದಲ್ಲಿ ಲಕ್ಷಾಂತರ ಏಷ್ಯಾದ ಯುದ್ಧ ಖೈದಿಗಳನ್ನು ಬಳಸಿಕೊಂಡು ಕಟ್ಟಲಾದ ಈ ಸೇತುವೆಯನ್ನು` ಡೆತ್ ರೈಲ್ವೇ’ ಎಂದೇ ಇಂದಿಗೂ ಕರೆಯಲಾಗುತ್ತದೆ. ಇತಿಹಾಸದ ಬಹು ದೊಡ್ಡ ಸಾಮೂಹಿಕ ದುರಂತ ಎಂದು ಬಣ್ಣಿಸಲಾಗುವ ರಿವರ್ ಕ್ವೆ ಸೇತುವೆಗೆ ಆರು ದಶಕದ ನೆನಪು ತುಂಬುತ್ತಿರುವ ಈ ಹೊತ್ತಿನಲ್ಲಿ, ಸೇತುವೆ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿ ದುರಂತ ಅಂತ್ಯ ಕಂಡ ಎಪ್ಪತ್ತು ಸಾವಿರಕ್ಕೂ ಹೆಚ್ಚು ಸೈನಿಕರ ನೆನಪು ಮಾಡಿಕೊಳ್ಳಲಾಗುತ್ತಿದೆ.

ರಿವರ್ ಕ್ವೆ ದುರಂತದಲ್ಲಿ ಮೃತಪಟ್ಟ ಸೈನಿಕರನ್ನು ಸಾಮೂಹಿಕವಾಗಿ ಹೂಳಲಾದ ಸ್ಥಳದಲ್ಲಿ ಈಗ ಬಾಳೆ ಹಾಗೂ ನಿಂಬೆ ಹಣ್ಣಿನ ತೋಟ ನಳನಳಿಸುತ್ತಿದೆ.  ಇಲ್ಲಿನ ಸಾಮೂಹಿಕ ಸ್ಮಶಾನ ಈಗ ವಿದೇಶಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಆದರೆ ಲಕ್ಷಾಂತರ ಸೈನಿಕರ ರಕ್ತ ಹರಿದ ಮಣ್ಣಿನಲ್ಲಿ ಬೆಳೆದು ನಿಂತಿರುವ ಮರಗಳ ಹಣ್ಣುಗಳನ್ನು ನಾವು ತಿನ್ನುವುದಿಲ್ಲ ಎನ್ನುತ್ತಾರೆ ಅಲ್ಲಿಯ  ಎಪ್ಪತ್ತೆಂಟು ವರ್ಷದ ವಯೋವೃದ್ದೆ ಒಬ್ಬರು. ತಾನು ಬಾಲ್ಯದಲ್ಲಿ ನೋಡಿದ ರಿವರ್ ಕ್ವೆ ದುರಂತ ಆಕೆಯ ಕಣ್ಣೆದುರಿಗಿದೆ. ಥಾಯ್ ಭಾಷೆ ಮಾತನಾಡುವ ಈ ಊರಿನಲ್ಲಿ ಮರದ ಕೊರಡಿನಿಂದ ಚಿಕ್ಕದಾಗಿ ನೆಲ ಗೆಬರಿದರೂ  ಸೈನಿಕರ ತಲೆಬರುಡೆಗಳು ಕಾಣಿಸುತ್ತದೆ. ವಿದೇಶಿ ಪ್ರವಾಸಿಗರ ಕೇಕೆ, ಸಂಭ್ರಮಗಳ ಮಧ್ಯೆ ಈ ವೃದ್ದೆ ಇವೆಲ್ಲವನ್ನೂ ನೆನಪು ಮಾಡಿಕೊಂಡು ಬಿಕ್ಕುತ್ತಾಳೆ.

ಇಂಡೋನೇಷಿಯಾ, ಮಲೇಷಿಯಾ, ಬರ್ಮಾ, ಚೈನಾ, ಭಾರತ ಸೇರಿದಂತೆ ಲಕ್ಷಾಂತರ ಬ್ರಿಟಿಷ್ ಸೈನಿಕರೂ ರಿವರ್ ಕ್ವೆ ದುರಂತದಲ್ಲಿ ಹೂತು ಹೋಗಿದ್ದಾರೆ. ರಬ್ಬರ್ ಪ್ಲಾಂಟೇಷನ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ತಮಿಳು ಕಾರ್ಮಿಕರನ್ನು ಬಲವಂತದಿಂದ ಸೇತುವೆ ನಿರ್ಮಾಣಕ್ಕೆ ಎಳೆದು ತರಲಾಗಿದೆ. ಪ್ರತಿಭಟಿಸಿದವರನ್ನು, ಓಡಿ ಹೋದವರನ್ನು ನಿರ್ಧಯವಾಗಿ ಗುಂಡಿಟ್ಟು ಕೊಲ್ಲಲಾಗಿದೆ. ಸಾವಿರಾರು ಯುದ್ಧ ಖೈದಿಗಳು ಹಸಿವಿನಿಂದ, ಕೆಲವರು ಮಾರಕ ಕಾಯಿಲೆಗಳಿಂದ, ಕೆಲವರು ಜಪಾನಿನ ಸೈನಿಕರ ಬಾಯೊನೆಟ್‌ಗಳ ತಿವಿತದಿಂದ, ಸಾಮೂಹಿಕ ಹತ್ಯೆಗಳಲ್ಲಿ ದಯನೀಯವಾಗಿ ಸಾವನ್ನಪ್ಪಿದ್ದಾರೆ.

ಥಾಯ್‌ಲಾಂಡ್‌ನ ಕಾಂಚನಬುರಿಯಲ್ಲಿ ನಿರ್ಮಾಣಗೊಂಡಿರುವ ಎರಡು ಬೃಹತ್ ಸಮಾಧಿಗಳಲ್ಲಿ ಲಕ್ಷಾಂತರ ಏಷ್ಯನ್ ಸೈನಿಕರು ಚಿರನಿದ್ರೆಗೆ ಜಾರಿದ್ದಾರೆ. ರಿವರ್ ಕ್ವೆ ದುರಂತದ ಕ್ರೌರ್ಯ ಈ ಶತಮಾನದ ಜನರಿಗೆ ತಟ್ಟದಿರಲಿ ಎನ್ನುವ ಆಶಯದಲ್ಲಿ ಈ ಸ್ಮಶಾನದ ತುಂಬೆಲ್ಲಾ ಸುಂದರವಾದ ಹೂವಿನ ಸಸಿಗಳನ್ನು ಬೆಳಸಲಾಗಿದೆ. ಹಸಿರು ಲಾನ್ ಹೊದೆಸಲಾಗಿದೆ. ಈ ವರ್ಷ ಅವರ ನೆನಪು ಮಾಡಿಕೊಳ್ಳಲು ಅಲ್ಲಿನ ಸರಕಾರ ಸಿದ್ದವಾಗಿದೆ. ರಿವರ್ ಕ್ವೆ ಸೇತುವೆ ದುರಂತ ಮರೆತು ಹೋಗುತ್ತಿದ್ದಂತೆ ಮತ್ತೆ ನೆನಪಾಗುತ್ತಿದೆ.

ಇಂಗ್ಲೆಂಡಿನಲ್ಲಿ ಪಾಠಶಾಲೆ ಮೊದಲನೆಯ ಜನನಿ

london-schools.jpgಎರಡು ಮೂರು ವರ್ಷಗಳ ಹಿಂದಿನ ಮಾತು. ಕೇರಳದ ಆದಿವಾಸಿ ಕುಟುಂಬವೊಂದರಲ್ಲಿ ಹನ್ನೊಂದು ವರ್ಷದ ಬಾಲೆಯೊಬ್ಬಳು ತಾಯಿಯಾಗಿದ್ದಳು. ತಾನು ಏನಾಗಿದ್ದೇನೆ ಎಂಬ ಅರಿವೂ ಇಂದಿಗೂ ಮೂಡದ ಈ ಚಿಕ್ಕ ಹುಡುಗಿ ಅಂದು ತನ್ನ ಮಗುವನ್ನು ಮಡಿಲಲ್ಲಿಟ್ಟು ಹೊಸ ಆಟಿಕೆಯೆಂಬಂತೆ ನೋಡಿದ್ದಳು. ಕೇರಳದಂತಹ, ಸಾಕ್ಷರತೆಯಲ್ಲಿ ಮುಂದಿರುವ ರಾಜ್ಯದಲ್ಲಿ ನಡೆದ ಈ ಘಟನೆ ದೇಶಾದ್ಯಂತ ತಲ್ಲಣ ಸೃಷ್ಠಿಸಿತ್ತು. ಇತ್ತೀಚೆಗೆ ಪ್ರಾನ್ಸ್‌ನಿಂದಲೂ ಇಂತದೊಂದು ಸುದ್ದಿ ವರದಿಯಾಗಿತ್ತು. ಆದರೆ ಅಲ್ಲಿನ ಹೈಸ್ಕೂಲ್ ಹುಡುಗಿ ತಾಯಿಯಾಗಿದ್ದು ತನ್ನ ಸ್ವೇಚ್ಛಾಚಾರದಿಂದ.

ಘಟನೆ ಮತ್ತು ದೇಶ ಬೇರೆ ಬೇರೆಯಾಗಿದ್ದರೂ ಎರಡೂ ಕೌಟುಂಬಿಕ ವ್ಯವಸ್ಥೆಯ ಮೇಲೆ ಬಿದ್ದ ಆಘಾತಗಳು. ಕುಟುಂಬ ಎಂಬ ಸಂಕೀರ್ಣವಾದ, ಸೂಕ್ಷ್ಮವಾದ ವ್ಯವಸ್ಥೆಯ ಮೇಲೆ ಬೀಳುವ ಇಂತಹ ಆಘಾತಗಳು ಅಲ್ಲಿನ ಮಕ್ಕಳನ್ನು ಹೇಗೆ ಭಾಧಿಸುತ್ತದೆ, ಅವರನ್ನು ಮಾನಸಿಕವಾಗಿ ಹೇಗೆ ಅಸ್ವಸ್ಥರನ್ನಾಗಿ ಮಾಡುತ್ತದೆ ಎಂಬ ಗಂಭೀರವಾದದ್ದೊಂದು ಸುದ್ದಿ ಇಂಗ್ಲೆಂಡಿನಿಂದ ವರದಿಯಾಗಿದೆ. ಇಂಗ್ಲೆಂಡಿನಲ್ಲಿ ಮದುವೆಯಾಗುವುದು, ವಿಚ್ಛೇಧನ ಪಡೆಯುವುದು ಎಲ್ಲವೂ ಸಹಜ ಎನ್ನುವಷ್ಟು ಸಾಮಾನ್ಯವಾಗಿದೆ. ಹೆತ್ತವರಿಗೆ ಇದರಿಂದ ಎಷ್ಟೇ ಸ್ವಾತಂತ್ರ್ಯ ಸಿಕ್ಕಿದ್ದರೂ ತೀವ್ರ ಆಘಾತಕ್ಕೊಳಗಾಗಿರುವವರು ಅಲ್ಲಿನ ಮಕ್ಕಳು. ಅಲ್ಲಿನ ಸಾವಿರಾರು ಮಕ್ಕಳಿಗೆ ಮನೆಯಲ್ಲಿ ಹೇಗಿರಬೇಕು, ಊಟಕ್ಕೆ ಹೇಗೆ ಕುಳಿತುಕೊಳ್ಳಬೇಕು, ಹಿರಿಯರಿಗೆ  ಹೇಗೆ ವಿಶ್ ಮಾಡಬೇಕು, ನೀರು ಹೇಗೆ ಕುಡಿಯಬೇಕು, ಸ್ಫೂನ್ ಹೇಗೆ ಹಿಡಿಯಬೇಕು ಎಂಬಿತ್ಯಾದಿ ಸಾಮಾನ್ಯ ಜ್ಞಾನವೇ ಇಲ್ಲವಂತೆ. ಅಪ್ಪ ಅಮ್ಮ ಕಲಿಸಬೇಕಾದ ಈ ಪಾಠಗಳೆನ್ನೆಲ್ಲಾ ಈಗ ಅಲ್ಲಿನ ಶಾಲೆಗಳಲ್ಲಿ ಶಿಕ್ಷಕರು ಹೇಳಿಕೊಡಬೇಕಾಗಿದೆ. ಹಾಗಾಗಿ ಶಿಕ್ಷಕರು ಮಕ್ಕಳ ಬಾಡಿಗೆ ತಾಯಿ ತಂದೆಯರಾಗಿದ್ದಾರೆ ಎಂದು ದಿ ಡೈಲಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. 

ಇದು ಒಂಥರ ತಮಾಷೆಯ ವಿಷಯವಾಗಿ ಕಾಣಬಹದು. ಆದರೆ ಮಕ್ಕಳಿಗೆ ಇದನ್ನು ಹೇಳಿಕೊಡಬೇಕಾದವರು ಪಾಲಕರೇ ಅಲ್ಲವೇ? ವಿಷಯದ ಹಿಂದಿರುವ ಗಂಭೀರತೆಗೆ ಕಾರಣ ಹುಡುಕಿದರೆ ಅದು ಮತ್ತಷ್ಟು ಆಘಾತಕಾರಿಯಾಗಿದೆ. ಇಂಗ್ಲೆಂಡಿನಲ್ಲಿ ವಿಚ್ಚೇದಿತ ಹಾಗೂ ವಿವಾಹಪೂರ್ವ ತಾಯಂದಿರ ಸಂಖ್ಯೆ ಹೆಚ್ಚುತ್ತಿದೆ. ಹತ್ತು ವರ್ಷಗಳ ಕೆಳಗೆ ಇಪ್ಪತೈದು ಲಕ್ಷವಿದ್ದ ಈ ಸಂಖ್ಯೆ ಈಗ ಮೂರು ಮಿಲಿಯನ್ ಸಮೀಪ ಬಂದಿದೆ. ಇವರಲ್ಲಿ ಅನೇಕರಿಗೆ ಕೆಲಸವಿಲ್ಲ. ಅಲ್ಲಿನ ಒಂಟಿ ಪಾಲಕರು ತಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಲು ಸಾಧ್ಯವಾಗುತ್ತಿಲ್ಲ. ತೀರಾ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಪಾಲಕರು ಹೇಳಿಕೊಡಹಬೇಕಾದ ಸಾಮಾನ್ಯ ವರ್ತನೆಗಳನ್ನು ಅಲ್ಲಿನ ಶಾಲೆಗಳು ಮತ್ತು ಚರ್ಚ್‌ಗಳಲ್ಲಿ ಕಲಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಸಿಗದ ಮಕ್ಕಳು ಅಡ್ಡದಾರಿ ಹಿಡಿಯುತ್ತಿದ್ದಾರೆ, ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದಾರೆ, ಇದನ್ನು ಹೀಗೆಯೇ ಬಿಟ್ಟರೆ ಮೊದೊಂದು ದಿನ ಇಡಿ ಸಮಾಜ ವ್ಯವಸ್ಥೆಯೇ ಏರುಪೇರಾಗತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅಲ್ಲಿನ ಶಾಲೆ ಮತ್ತು ಕಾಲೇಜುಗಳ ಒಕ್ಕೂಟದ ಕಾರ್ಯದರ್ಶಿ ಜಾನ್ ಡನ್‌ಫೋರ್ಡ್.

ಇಂಗ್ಲೆಂಡಿನಂತ ಮುಂದುವರೆದಿದೆ ಎಂದು ಅನಿಸಿಕೊಂಡಿರುವ ದೇಶವೊಂದರಲ್ಲಿ ಕುಟುಂಬ ವ್ಯವಸ್ಥೆ ಹೇಗೆ ಹದಗೆಡುತ್ತಾ ಹೋಗುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ. ಹಾಗೆ ನೋಡಿದರೆ ನಮ್ಮಲ್ಲೂ ಇಂತಹ ಉದಾಹರಣೆಗಳ ಸಂಖ್ಯೆ ಕಡಿಮೆಯೇನೂ ಇಲ್ಲವಲ್ಲ.

ಮಹಿಳೆಯರ ಸ್ಥಿತಿಗತಿ- ಸಮೀಕ್ಷೆ ಹೇಳುವುದೇ ಬೇರೆ

(ಸುದ್ದಿಯನ್ನು ಬರೆದವರು-ಜಿತೇಂದ್ರ)

indian-womanjpg.jpgಭಾರತದ ಪತ್ರಿಕೆಗಳ ಮುಖಪುಟಗಳು, ಟಿವಿಗಳ ಹೆಡ್‌ಲೈನ್‌ಗಳು  ಭಾರತೀಯ ದುಡಿಯುವ ಮಹಿಳೆಯ ಹೊಸ ಸಂತೋಷದ ಮುಖಗಳನ್ನು ಗಂಟೆಗಟ್ಟಲೆ ಚೀರಿ ಹೇಳುತ್ತಿವೆ. ಆದರೆ ವಾಸ್ತವ ಬೇರೆಯೇ ಇದೆ.  ೨೦೦೭ರ ಭಾರತದ ಆದಾಯ ಮತ್ತು ಉಳಿತಾಯ ಸರ್ವೆ ಬೇರೆಯೇ ಕಥೆಯನ್ನು ಹೇಳುತ್ತಿದೆ. ಈ ಸಮೀಕ್ಷೆಯ ಮುಖ್ಯ ಅಂಶಗಳು ಕೆಳಗಿವೆ.

ಭಾರತದಲ್ಲಿನ ಮಹಿಳೆಯರ ಪೈಕಿ ಶೇಕಡಾ ೧೩ರಷ್ಟು  ಮಂದಿ ಮಾತ್ರ ಉದ್ಯೋಗಸ್ತರಾಗಿದ್ದಾರೆ. ಅವರಲ್ಲೂ ಹತ್ತರಲ್ಲಿ ಒಂಬತ್ತು ಮಂದಿ ಅಸುರಕ್ಷಿತ ವಲಯಗಳಲ್ಲಿ ದುಡಿಯುತ್ತಿದ್ದಾರೆ. ನಗರ ಪ್ರದೇಶಗಳಲ್ಲಿನ ಮಹಿಳೆಯರಿಗೆ ಉದ್ಯೋಗ ಅನ್ನೋದು ಆಯ್ಕೆಯಾದರೆ ಹಳ್ಳಿಗಳಲ್ಲಿನ ಹೆಂಗಸರಿಗೆ ಉದ್ಯೋಗ ಅನಿವಾರ್‍ಯವಂತೆ. ಕೃಷಿಯೇ ಪ್ರಧಾನವಾಗಿರೋ ನಮ್ಮ ದೇಶದಲ್ಲಿ ಶೇ. ೩೫ಕ್ಕೂ ಹೆಚ್ಚು ನಾರಿಯರು ಜಮೀನಿನಲ್ಲಿ ಕೆಲಸ ಮಾಡ್ತಿದಾರೆ. ಅದರಲ್ಲೂ ಉದ್ಯೋಗಸ್ತ ಮಹಿಳೆಯರಲ್ಲಿ ಶೇ.೪೫ ರಷ್ಟು ಜನ ವರ್ಷಕ್ಕೆ ಐವತ್ತು ಸಾವಿರಕ್ಕಿಂತ ಕಡಿಮೆ ಸಂಬಳ ತೆಗೆದುಕೊಳ್ಳುತ್ತಾರೆ.

ಹೋಗಲಿ ತೆಗೆದುಕೊಂಡಷ್ಟು ಸಂಬಳವನ್ನು ತಾವೇ ಖರ್ಚು ಮಾಡ್ತಿದಾರ ಅಂತ ನೋಡಿದ್ರೆ ಅದೂ ಇಲ್ಲ. ಶೇ.೨೬ರಷ್ಟು ಮಹಿಳೆಯರು ಮಾತ್ರ ತಾವು ಗಳಿಸೋ ಹಣದ ಕುರಿತು ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಬಹುಪಾಲು ಮಹಿಳೆಯರು ಕೆಲಸಕ್ಕೆ ಅಂತ ದೂರದೂರಿಗೆ ಹೋಗುವುದಿಲ್ಲವಂತೆ.ದುಡಿಯುವ ಒಟ್ಟು ಮಹಿಳೆಯರಲ್ಲಿ ಶೇ.೮೦ ರಷ್ಟು ಮಂದಿ ಗ್ರಾಮೀಣ ಪ್ರದೇಶದಿಂದ ಬಂದವರಾಗಿರುತ್ತಾರೆ. ಬಡತನ ಇರೋ ಮನೆ ಹೆಣ್ಣುಮಕ್ಕಳು ದುಡಿಯೋ ಅವಕಾಶಗಳೇ ಜಾಸ್ತಿ.

ನಗರ ಮತ್ತು ಗ್ರಾಮೀಣಪ್ರದೇಶದಲ್ಲಿರೂ ಬಹುಪಾಲು ಶಿಕ್ಷಿತ , ಶ್ರೀಮಂತ ಕುಟುಂಬಗಳು ತಮ್ಮ ಹೆಣ್ಣುಮಕ್ಕಳು ಹೊರಗೆ ದುಡಿಯಬಾರದು ಅಂತಲೇ ಭಾವಿಸಿವೆ. ನಗರದಲ್ಲಿನ ಗೃಹಿಣಿಯರ ಆದಾಯ ಎರಡರಿಂದ ಐದು ಲಕ್ಷ. ಅವರಲ್ಲಿ ದುಡಿಯುವವರ ಸಂಖ್ಯೆ ಶೇ.೧೩ರಷ್ಟು ಮಾತ್ರ. ಶೇ.೯ರಷ್ಟು ಮಹಿಳೆಯರು ಮಾತ್ರ ಐದು ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದ್ದಾರೆ.

 ನಮ್ಮ ಹಳ್ಳಿಗಳ ಗೃಹಿಣಿಯರ ಆದಾಯ ವರ್ಷಕ್ಕೆ ಐವತ್ತು ಸಾವಿರದಿಂದ ಐದು ಲಕ್ಷ. ಅವರಲ್ಲಿ ಕೆಲಸ ಮಾಡುವವರು ಶೇ. ೧೬ ರಿಂದ ೧೯ ಮಂದಿ. ಇನ್ನೂ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಶೇ.೪.೭ರಷ್ಟು ಮಹಿಳೆಯರು ಮಾತ್ರ ಹೊರಗಡೆ ಕೆಲಸ ಮಾಡ್ತಿದಾರಂತೆ. ಈ ವಿಷಯದಲ್ಲಿ ಉತ್ತರ ಭಾರತದವರಿಗಿಂತ, ದಕ್ಷಿಣದವರು ಎಷ್ಟೋ ವಾಸಿ. ತಮಿಳುನಾಡಿನಲ್ಲಿ ಶೇ.೩೯ ಮಹಿಳೆಯರು ಹೊರಗಡೆ ದುಡೀತಾರೆ.  ಕರ್ನಾಟಕದಲ್ಲಿ ಶೇ.೨೩.೭ ಮಹಿಳೆಯರು ಉದ್ಯೋಗಸ್ತರು.

ಇದನ್ನೆಲ್ಲಾ ನೋಡ್ತಾ ಇದ್ರೆ, ನಾವೀಗ ಮಹಿಳಾ ಸಬಲೀಕರಣಕ್ಕೆ ನೀಡುತ್ತೀರೂ ಬೆಂಬಲ ಏನೇನು ಸಾಲದು ಅಂತಾನೇ ಅರ್ಥ.  ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯಿಂದ ಹಿಡಿದು , ನಮ್ಮ ಮೈಸೂರಿನ ಮೊದಲ ಮಹಿಳಾ ಬಸ್ ಚಾಲಕಿ ನಿಂಗಮ್ಮನಂಥವರ ವರೆಗೂ ಪ್ರತಿ ಮಹಿಳೆಯ ಸಾಧನೆ ಗುರುತಿಸಬೇಕು. ಅವರಿಂದ ಮತ್ತಷ್ಟು ಹೆಣ್ಣುಮಕ್ಕಳು ಸ್ಪೂರ್ತಿ ಪಡೆದು ಮುನ್ನುಗ್ಗಬೇಕು. ಅಂತಹದ್ದೊಂದು ಭರವಸೆಯನ್ನಾದರೂ ಮಹಿಳೆಯರು ಬೆಳೆಸಿಕೊಳ್ಳಬೇಕು ಎನ್ನುತ್ತಾರೆ ಸಮಾಜಶಾಸ್ತ್ರಜ್ಞರು.

ಅಮೆರಿಕಕ್ಕೆ ಗೂಗಲ್ ಚಿಂತೆ

(ಬರೆದವರು- ಜಿತೇಂದ್ರ)

ಅಮೆರಿಕಕ್ಕೆ ಯಾವಾಗಲೂ ತನ್ನ ಭದ್ರತೆಯದ್ದೇ ಚಿಂತೆ. google1.jpg ಫಿಡೆಲ್ ಕ್ಯಾಸ್ಟ್ರೋ ಆಯಿತು. ಆಮೇಲೆ ಬಿನ್ ಲಾದೆನ್. ಈಗ ಗೂಗಲ್ ಸರದಿ. ಇತ್ತೀಚೆಗೆ ಗೂಗಲ್‌ನಲ್ಲಿ ಪ್ರಕಟವಾದ ಮಿಲಿಟಿರಿ ನೆಲೆಯ ಬೀದಿ ಚಿತ್ರಗಳು ಅಮೆರಿಕದ ನಿದ್ದೆ ಕೆಡಿಸಿವೆ. ಇನ್ನು ಮುಂದೆ ತನ್ನ ರಕ್ಷಣಾ ನೆಲೆಗಳ ಯಾವುದೇ ಚಿತ್ರಗಳು ಹಾಗೂ ನಕ್ಷೆಗಳನ್ನು ಪ್ರಕಟಿಸದಂತೆ ಪೆಂಟಗಾನ್ ಗೂಗಲ್ ಮೇಲೆ ನಿಷೇಧ ಹೇರಿದೆ. ಇಷ್ಟಕ್ಕೆಲ್ಲಾ ಕಾರಣ ಅಮೆರಿಕಾದ ಟೆಕ್ಸಾಸ್‌ನಲ್ಲಿನ ಫೋರ್ಟ್ ಸಾಮ್ ಹೌಸ್ಟನ್ ಸೇನಾ ನೆಲೆಯ ಚಿತ್ರಗಳು ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಬಂದದ್ದು.

ಗೂಗಲ್‌ನಲ್ಲಿ ಸಿಕ್ಕ ಬೀದಿ ಚಿತ್ರಗಳಲ್ಲಿ ಸೇನಾ ನೆಲೆಗಳ ಸಂಪೂರ್ಣ ಚಿತ್ರಣವಿದ್ದು, ಇನ್ನು ಮುಂದೆ ಗೂಗಲ್‌ನ ವಾಹನಗಳಿಗೆ ಸೇನಾ ನೆಲೆ ಪ್ರವೇಶಿಸಲು ಅನುಮತಿ ನೀಡದಿರುವಂತೆ ಅಲ್ಲಿನ ರಕ್ಷಣಾ ಇಲಾಖೆ ತನ್ನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಗೂಗಲ್ ಮತ್ತದರ ಉತ್ಪನ್ನಗಳ ಕುರಿತು ನಮ್ಮ ತಕರಾರಿಲ್ಲ. ಆದರೆ ರಕ್ಷಣೆಗೆ ತೊಡಕಾಗುವ ಚಿತ್ರಗಳನ್ನು ಪ್ರಕಟಿಸುವುದು ಸರಿಯಲ್ಲ ಎಂದು ಮಿಲಿಟರಿ ಅಧಿಕಾರಿಯೊಬ್ಬರು ನುಡಿದಿದ್ದಾರೆ. ಇದೇನಾದರೂ ವಿರೋಧಿಗಳ ಕೈಗೆ ಸಿಕ್ಕಿದ್ದೇ ಆದಲ್ಲಿ ತಮ್ಮ ಭದ್ರತೆಗೆ ಕುತ್ತು ಖಂಡಿತ ಅನ್ನೋದು ಅವರ ತಳಮಳಕ್ಕೆ ಕಾರಣ.

ಈ ರೀತಿಯ ಬೀದಿ ವೀಕ್ಷಣೆಯ ಚಿತ್ರ ಮತ್ತು ನಕ್ಷೆಗಳು ದೊರೆತದ್ದಾದರೂ ಎಲ್ಲಿಂದ ಎಂದವರು ತಲೆ ಕೆಡಿಸಿಕೊಂಡಿದ್ದಾರಂತೆ. ಇನ್ನೊಂದೆಡೆ, ತನ್ನ ಕೈತಪ್ಪಿನಿಂದಾಗಿ ಇಂತಹದ್ದೊಂದು ನಕ್ಷೆ ಪ್ರಕಟವಾಗಿರುವುದಾಗಿ ಗೂಗಲ್ ಹೇಳಿಕೊಂಡಿದೆ. ಸುದ್ದಿ ತಿಳಿದ ತಕ್ಷಣವೇ ಅಂತಹ ನಕ್ಷೆಗಳೆಲ್ಲವನ್ನೂ ಅಳಿಸಿಹಾಕಿರುವುದಾಗಿ ಹೇಳಿದೆ.

ಚರ್ಚಾಸ್ಪದ ಪುಸ್ತಕ ಪ್ರಶಸ್ತಿ

(ಬರೆದವರು- ಜಿತೇಂದ್ರ)

boy1.jpgಓದುಗರಲ್ಲಿ ಗೊಂದಲ ಹಾಗೂ ವಾಗ್ವಾದಗಳಿಗೆ ಕಾರಣವಾಗುವ ಪುಸ್ತಕಕ್ಕೂ ಒಂದು ಬಹುಮಾನ ಕೊಟ್ಟರೆ ಹೇಗೆ. ಈ ವರ್ಷದಿಂದ ಹೀಗೂ ಒಂದು ಬಹುಮಾನ ನೀಡಲು ವ್ಯವಸ್ಥೆಯಾಗಿದೆ. ಓದುಗರ ನಡುವೆ ಸಾಕಷ್ಟು ಚರ್ಚೆ,ವಿವಾದಗಳಿಗೆ ಪ್ರೇರಣೆಯಾಗುವ ಅತ್ಯುತ್ತಮ  ಪುಸ್ತಕ ಒಂದಕ್ಕೆ ಉತ್ತಮ ಚರ್ಚಾಸ್ಪದ ಪುಸ್ತಕ ಎಂಬ ಬಹುಮಾನ ದೊರೆತಿದೆ. ಓದುಗ ದೊರೆಗಳೇ ಬಹುಮಾನಿತ ಪುಸ್ತಕದ ಆಯ್ಕೆ ಮಾಡಿದ್ದಾರೆ.

ಈ ಬಾರಿಯ ಬಹುಮಾನ ಗಿಟ್ಟಿಸಿರುವುದು ಬ್ರಿಟಿಷ್ ಲೇಖಕ ಜೊನಥಾನ್ ಟ್ರಿಗೆಲ್‌ರ ಬಾಯ್ ಎ ಎಂಬ ಕಾದಂಬರಿ. ವಿಶ್ವ ಪುಸ್ತಕ ದಿನದಂದು ಈ ಪುಸ್ತಕಕ್ಕೆ ಐದು ಸಾವಿರ ಡಾಲರ್‌ಗಳ ನಗದು ಪುರಸ್ಕಾರ ದೊರೆಯಲಿದೆ.

 ಇಷ್ಟಕ್ಕೂ ಬಹುಮಾನ ಗಿಟ್ಟಿಸುವಂಥಹದ್ದು ಪುಸ್ತಕದಲ್ಲೇನಿದೆ ಮಹಾ ಅಂತ ನೀವು ಕೇಳುತ್ತೀರಾ.  ಇರುವುದಿಷ್ಟೆ. ಚಿಕ್ಕಂದಿನಲ್ಲಿ ಯಾವುದೋ ಅಪರಾಧ ಮಾಡಿ ಜೈಲು ಸೇರಿದ ಹುಡುಗನೊಬ್ಬ ,ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬಂದು, ತನ್ನ ಹಳೆಯ ನೆನಪುಗಳು ಹಾಗೂ ಕುಖ್ಯಾತಿಯೊಟ್ಟಿಗೆ ಬದುಕು ಸಾಗಿಸಲು  ಹೆಣಗುವುದು.

ಇಷ್ಟೇ ಆಗಿದಿದ್ದರೆ ಈ ಕಾದಂಬರಿಗೆ ಬಹುಮಾನ ಬರುತ್ತಿರಲಿಲ್ಲವೇನೊ. ಆದರೆ ಇದು ಟೋಡ್ಲರ್ ಜೇಮ್ಸ್ ಬಲ್ಗರ್‌ನ ಜುವೆನೈಲ್ ಕಿಲ್ಲರ್‍ಸ್ ಪುಸ್ತಕದ ನಕಲು ಎಂದು ಯಾರೋ ಖ್ಯಾತೆ ತೆಗೆದರು. ಇದೇ ದೊಡ್ಡದೊಂದು ಚರ್ಚೆಗೆ ಮುನ್ನುಡಿಯಾಯಿತು. ಪುಸ್ತಕ ಕ್ಲಬ್‌ಗಳು ಮತ್ತು ಓದುಗರ ನಡುವೆ ಈ ಕುರಿತು ಮಾತೋ ಮಾತು. ಚರ್ಚೆಗಳು ಕಾವೇರತೊಡಗಿದವು. ಈ ವಿವಾದಗಳಿಂದಾಗಿಯೇ, ಸ್ಪರ್ಧೆಯಲ್ಲಿದ್ದ ನೂರು ಪುಸ್ತಕಗಳನ್ನು ಹಿಂದಿಕ್ಕಿದ ಬಾಯ್ ಎ ಬಹುಮಾನ ಗಿಟ್ಟಿಸುವ ಮಟ್ಟಕ್ಕೆ ತಲುಪಿತು.

ಪುಸ್ತಕಗಳ ಮಾರಾಟಕ್ಕಾಗಿ ಬಾಯಿಮಾತಿನ ಪ್ರಚಾರವನ್ನೆ ಹೆಚ್ಚು ಅವಲಂಬಿಸುವಂತೆ ಮಾಡುವುದು ಪ್ರಶಸ್ತಿಯ ಮುಖ್ಯ ಉದ್ದೇಶ. ಅಂತೆಯೇ ಬಾಯ್ ಎ ಕಾದಂಬರಿ ಕೂಡ ಪ್ರಚಾರಕ್ಕೆ ಬಂದಂದಿನಿಂದ ಅದರ ಮಾರಾಟ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.

 ಕನ್ನಡದಲ್ಲಿ ಹೀಗೊಂದು ಪ್ರಶಸ್ತಿ  ಶುರು ಮಾಡಿದರೆ ,ಯಾವ ಪುಸ್ತಕಕ್ಕೆ ಚರ್ಚಾಸ್ಪದ ಪುರಸ್ಕಾರ ನೀಡಬಹುದು. ಪ್ರತಿಕ್ರಿಯಿಸಿ.

ಹೆತ್ತೊಡಲು ಬಾಡಿಗೆಗಿದೆ

(ಬರೆದವರು- ಜಿತೇಂದ್ರ)

mother.jpgಮಾತೃವಾತ್ಸಲ್ಯದ ಕುರಿತು ಹಲವು ದಂತಕಥೆಗಳು ಜಾರಿಯಲ್ಲಿರುವ ಭಾರತದಲ್ಲಿ ಬಾಡಿಗೆ ತಾಯ್ತನ ಹೆಚ್ಚು ಸುದ್ದಿ ಮಾಡುತ್ತಿದೆ. ತುಂಬಾ ಸಂಕೀರ್ಣವಾದ, ಸೂಕ್ಷ್ಮವಾದ ತಾಯ್ತನವನ್ನು ಬಾಡಿಗೆಗೆ ಪಡೆಯುವುದು ಹಾಗೂ ಕೊಡುವುದು ಭಾರತದಲ್ಲಿ ಈಗ ತೀರಾ ಸುಲಭದ ವಿಷಯ ಎನ್ನುವಂತಾಗಿದೆ. ತಮ್ಮ ಗರ್ಭವನ್ನು ಬಾಡಿಗೆಗೆ ನೀಡುವ ತಾಯಂದಿರ ಸಂಖ್ಯೆ ಭಾರತದಲ್ಲಿ ಹೆಚ್ಚಿರುವುದರಿಂದ ಹಾಗೂ ಕಡಿಮೆ ಹಣಕ್ಕೆ ಇಲ್ಲಿನ ಮಹಿಳೆಯರು ಇದಕ್ಕೆ ಒಪ್ಪುವುದರಿಂದ, ಜೊತೆಗೆ  ಕಾನೂನಿನ ತೊಡುಕುಗಳು ಭಾರತದಲ್ಲಿ ಕಡಿಮೆ ಇರುವುದರಿಂದ  ಹಲವು ವಿದೇಶೀ ದಂಪತಿಗಳು ತಮ್ಮ ಮಗುವಿಗಾಗಿ ಭಾರತೀಯ ಗರ್ಭಕೋಶಗಳನ್ನು ಹುಡುಕಿಕೊಂಡು ಬರುತ್ತಿರುವುದಾಗಿ ಇಂಟರ್ ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ವರದಿ ಮಾಡಿದೆ.

ಇತ್ತೀಚೆಗೆ ಹೀಗೆ ಬಂದಿರುವ ದೂರದ ಇಸ್ರೇಲಿನ ಜೋಡಿಯೊಂದಕ್ಕೆ, ಮುಂಬೈ ನಗರದ ಮಹಿಳೆಯೊಬ್ಬರು ತಮ್ಮ ಗರ್ಭವನ್ನು ಬಾಡಿಗೆ ನೀಡಿದ್ದಾರೆ. ಗರ್ಭದಲ್ಲಿ ಬೆಳೆಯುತ್ತಿರುವುದು ತನ್ನ ಮಗುವಲ್ಲ ಎಂದು ಆಕೆಗೆ ತಿಳಿದಿದ್ದರೂ, ತಾಯಿಯಾಗುವ ಸಂಭ್ರಮದಲ್ಲಿ ಅದೆಲ್ಲವನ್ನೂ ಅವರು ಕ್ಷಣಕಾಲ ಮರೆತಿದ್ದಾರೆ. ಅಷ್ಟಕ್ಕೂ ತಾನು ಮಾಡುತ್ತಿರುವುದು ಒಂದು ಪುಣ್ಯದ ಕೆಲಸ ಎಂದೇ ಭಾವಿಸಿರುವ ಆಕೆ ಈ ಮಗುವಿಗೆ ಬಾಡಿಗೆ ಬೆಸುಗೆ ನೀಡಲು ಮುಂದಾಗಿದ್ದಾಳೆ. ಬಾಡಿಗೆ ತಾಯ್ತನ ಎನ್ನುವುದು ದೊಡ್ಡ ಉದ್ಯಮವಾಗಿದೆ, ತನ್ನನ್ನು ಈ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಮಧ್ಯವರ್ತಿಗಳು, ಹೆರಿಗೆ ಮಾಡಿಸಲು ಒಪ್ಪಿರುವ ಕ್ಲಿನಿಕ್‌ನವರು ಲಕ್ಷಾಂತರ ರೂಪಾಯಿ ಹಣ ಸುಲಿಯುತ್ತಿದ್ದಾರೆ ಎಂಬಿತ್ಯಾದಿ ವಿಷಯಗಳೆಲ್ಲಾ ಆಕೆಯ ಲೋಕಜ್ಞಾನಕ್ಕೆ ತಿಳಿದಿಲ್ಲವಾದರೂ, ತಾನು ಸಹ ಒಂದಷ್ಟು ಹಣಕ್ಕಾಗಿಯೇ ಈ ಕೆಲಸವನ್ನು ಮಾಡಲು ಒಪ್ಪಿಕೊಂಡಿದ್ದೇನೆ ಎನ್ನುವ ಪುಟ್ಟ ಪಶ್ಚಾತಾಪ ಆಕೆಯ ಮುಖದಲ್ಲಿ ಇರುವಂತಿದೆ.

ಆದರೆ ಇದೆಲ್ಲಾ ಸಹಜ ಎನ್ನುವಂತೆ ಓಡಾಡಿಕೊಂಡಿರುವ ಇಸ್ರೇಲಿನ ಈ ದಂಪತಿ, ಹುಟ್ಟಲಿರುವ ತಮ್ಮ ಮಗುವಿಗೆ ಕುಲಾವಿ ಹೊಲಿಸಲು ಬಟ್ಟೆ ಹುಡುಕುತ್ತಿದ್ದಾರೆ. ಮಗು ಯಾರಂತಿರಬೇಕು, ಏನೆಂದು ಹೆಸರಿಡಬೇಕು? ಎಷ್ಟು ದಿವಸದ ನಂತರ ಮನೆಗೆ ಕರೆದೊಯ್ಯಬೇಕು, ದಿನಕ್ಕೆ ಎಷ್ಟು ಬಾರಿ ಎದೆಹಾಲುಣಿಸಬೇಕು, ಬಾಡಿಗೆ ತಾಯ್ತನಕ್ಕೆ ನೀಡಿದ ದುಡ್ಡು ಜಾಸ್ತಿಯಾಯಿತೇ? ಇನ್ನೂ ಅಗ್ಗದ ದರಕ್ಕೆ ಬೇರೆ ತಾಯಂದಿರು ಸಿಗುತ್ತಿದ್ದರೆ ಎಂಬಿತ್ಯಾದಿ ಚರ್ಚೆ, ಕನಸುಗಳ ನಡುವೆ ಹೆರಿಗೆಯ ದಿನಗಳಿಗಾಗಿ ಅವರು ಎದುರು ನೋಡುತ್ತಿದ್ದಾರೆ.

ಬಾಡಿಗೆ ಗರ್ಭದಾರಣೆಯನ್ನು ಕೆಲವು ಯುರೋಪಿಯನ್ ರಾಷ್ಟ್ರಗಳು ನಿಷೇಧಿಸಿವೆ. ಭಾರತದಲ್ಲಿ ಕಾನೂನಿನ ಅಸ್ಪಷ್ಟತೆಯಿಂದಾಗಿ ಇದರ ದುರುಪಯೋಗವೂ ನಡೆಯುತ್ತಿದೆ. ಕೆಲವು ಖಾಸಗಿ ಕ್ಲಿನಿಕ್‌ಗಳು ವೈದ್ಯಕೀಯ ಉಪಚಾರ, ವಿಮಾನದ ಟಿಕೆಟ್ಟುಗಳು, ವಿದೇಶಿ ಪ್ರವಾಸ, ಅತ್ಯಾಧುನಿಕ ಸೌಲಭ್ಯಗಳ ಆಸ್ಪತ್ರೆಯಲ್ಲಿ ಹೆರಿಗೆ, ಇತ್ಯಾದಿ ಪ್ಯಾಕೆಜ್ ಘೋಷಿಸಿ, ಬಾಡಿಗೆ ತಾಯಂದಿರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದೆ. ವಿದೇಶಿಯರು ಇಂಟರ್‌ನೆಟ್ ಮೂಲಕ ತಮ್ಮ ಬಾಡಿಗೆ ತಾಯಿಯನ್ನು ಗೊತ್ತು ಪಡಿಸುವ ಮಟ್ಟಿಗೆ ಈ ಉದ್ಯಮ ಬೆಳೆದಿದೆ.

ಔಟ್‌ಸೋರ್ಸಿ0ಗ್ ಎನ್ನುವುದು ತಾಯ್ತನಕ್ಕೂ ಅಂಟಿಕೊಳ್ಳುತ್ತಿದೆ.

ಕ್ರಿಕೆಟ್-ಭಾರತಕ್ಕೆ ಐತಿಹಾಸಿಕ ಜಯ

(ಬರೆದವರು- ಜಿತೇಂದ್ರ)

cricket.jpgಇಪ್ಪತ್ಮೂರು ವರ್ಷಗಳ ಇತಿಹಾಸ ಪುನರಾವರ್ತನೆಗೊಂಡಿದೆ.  ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಭಾರತ ವಿಶ್ವ ಚಾಂಪಿಯನ್ನರನ್ನು ಮಣಿಸಿ ಸಿಬಿ ಕ್ರಿಕೆಟ್ ಸರಣಿ ಜಯಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತಕ್ಕಿದು ಮೊದಲ ಏಕದಿನ ಸರಣಿ ಜಯ. ಈ ಮೂಲಕ ಭಾರತ ಎರಡು ದಶಕಗಳ ಹಳೆಯ ತ್ರಿಕೋನ ಸರಣಿಯಲ್ಲಿ ಆತಿಥೇಯರನ್ನು ಸೋಲಿಸಿದ ಮೂರನೇ ರಾಷ್ಟ್ರವೆಂಬ ಸ್ಥಾನ ಗಿಟ್ಟಿಸಿದೆ.
 
ಮಂಗಳವಾರ ಮಾಡು ಇಲ್ಲವೇ ಮಡಿ ಎಂಬಂತಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯನ್ನರು ಒಂಭತ್ತು ರನ್ನುಗಳಿಂದ ಸೋತು ಹೋಗಿದ್ದಾರೆ. ತೆಂಡುಲ್ಕರ್‌ರ ಜವಾಬ್ದಾರಿಯುತ ಆಟದ ನೆರವು ಪಡೆದ ಭಾರತ ಸ್ಪರ್ಧಾತ್ಮಕ ಮೊತ್ತ ಪೇರಿಸಿದ್ದಲ್ಲದೆ, ಉತ್ತಮ ಬೌಲಿಂಗ್ ಸಂಯೋಜನೆ ಮೂಲಕ ಗೆಲವು ಪಡೆದಿದೆ. ಅಂತಿಮ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ವೇಗಿ ಪ್ರವೀಣ್ ಕುಮಾರ್ ನಾಲ್ಕು ವಿಕೆಟ್ ಉರುಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತನ್ನ ತವರಿನಲ್ಲಿ ಸೋಲರಿಯದ ಸರದಾರರಾಗಿದ್ದ ಕಾಂಗರೂಗಳಿಗಿದು ಸತತ ಎರಡನೇ ಏಕದಿನ ಸೋಲು.  

ಆಟಕ್ಕಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿ ಗಿಟ್ಟಿಸಿದ ಸರಣಿಯ ಮೊದಲ ಫೈನಲ್ ಪಂದ್ಯವನ್ನು ಭಾರತ ಜಯಸಿತ್ತು. ಸಿಡ್ನಿ ವಿವಾದದ ಬಳಿಕ ಎರಡು ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ವಿಶ್ವದ ಎರಡು ಅಗ್ರ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣೆಸುವುದನ್ನು ನೋಡಲು ಕ್ರಿಕೆಟ್ ಪ್ರಿಯರು ಸಾಕಷ್ಟು ಕುತೂಹಲದಿಂದಲೇ ಕಾದಿದ್ದರು ಕೂಡ.

ಧೋನಿ ನಾಯಕತ್ವದ ಯುವಪಡೆ ವಿಶ್ವ ಚಾಂಪಿಯನ್ನರನ್ನು ಈ ರೀತಿ ಮಣ್ಣು ಮುಕ್ಕಿಸುತ್ತದೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಅನುಭವಿ ಆಟಗಾರರಾದ ದ್ರಾವಿಡ್ ಮತ್ತು ಗಂಗೂಲಿಯವರನ್ನು ಕೈಬಿಟ್ಟು ಭಾರೀ ಟೀಕೆಗೆ ಒಳಗಾಗಿದ್ದ ಆಯ್ಕೆಗಾರರು ಯುವ ಪಡೆಯ ಮೇಲಿರಿಸಿದ್ದ ನಂಬಿಕೆ ಮಾತ್ರ ಹುಸಿಯಾಗಲಿಲ್ಲ. ಅನನುಭವಿ ಮಧ್ಯಮ ಕ್ರಮಾಂಕದೊಂದಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ನಡೆಸಿದ ನಾಯಕ ಧೋನಿ ಕಡೆಗೂ ತಂಡವನ್ನು ಯಶಸ್ಸಿನ ದಡ ಮುಟ್ಟಿಸಿದ್ದಾರೆ. ಫೈನಲ್ ಪಂದ್ಯಗಳಲ್ಲಿ ಸಚಿನ್ ತಮ್ಮ ಜವಾಬ್ದಾರಿಯನ್ನು ಪೂರ್ಣವಾಗಿ ನಿರ್ವಹಿಸಿದ್ದಾರೆ. ಇಶಾಂತ್, ಮತ್ತು ಪ್ರವೀಣ್ ಕುಮಾರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ತಮ್ಮ ಆಯ್ಕೆ ಸಮರ್ಥಿಸಿ ಕೊಂಡಿದ್ದಾರೆ.

ಇನ್ನೊಂಡೆದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವ ಆಟಗಾರರಾದ ಆಡಂ ಗಿಲ್‌ಕ್ರಿಸ್ಟ್ ಮತ್ತು  ಹಾಗ್‌ರಿಗೆ ಸರಣಿ ಗೆಲುವಿನ ಮೂಲಕ ಬೀಳ್ಕೊಡುಗೆ ನೀಡ ಬಯಸಿದ್ದ ಆಸೀಸರ ಬಯಕೆ ಈಡೇರದೆ ಹೋಗಿದೆ. ಈ ಸರಣಿ ಗೆಲುವಿನಿಂದ ಅತ್ಯಂತ ಆನಂದವಾಗಿರುವುದು ಬಹುಶಃ ಹರ್ಭಜನ್‌ಗೆ. ಒಂದರ ಮೇಲೊಂದು ವಿವಾದಗಳು ಮತ್ತು ಆಸೀಸ್ ಪ್ರೇಕ್ಷಕರ ಕೀಟಲೆಗೆ ಗುರಿಯಾಗಿದ್ದ ಭಜ್ಜಿ ಈಗ ಸಮಾಧಾನದ ನಿಟ್ಟುಸಿರು ಬಿಡುತ್ತಿರಬಹುದು. ಕೆಲವು ಪಂದ್ಯಗಳಲ್ಲಿ ಕ್ರೀಡಾಸ್ಪೂರ್ತಿಯನ್ನು ಮರೆತವರಂತೆ ಆಡಿದ ಆಸ್ಟ್ರೇಲಿಯನ್ನರು ಈಗ ಸೋಲಿಗೆ ಕಾರಣ ಹುಡುಕುತ್ತಿರಬಹುದು.

ರಷ್ಯಾದಲ್ಲೂ ಚುನಾವಣೆ ಅಕ್ರಮ

(ಬರೆದವರು-ಜೋಮನ್ ವರ್ಗೀಸ್)

medvedev.jpgಅಮೇರಿಕದಲ್ಲಿ ಚುನಾವಣಾ ಪೂರ್ವ ಪ್ರಚಾರವೇ ಇಷ್ಟೊಂದು ಅಬ್ಬರವಾಗಿರುವಾಗ, ರಷ್ಯಾದಲ್ಲಿ ನೂತನ ಅಧ್ಯಕ್ಷರ ಆಯ್ಕೆ ಹೆಚ್ಚು ಕಡಿಮೆ ಮುಗಿದೇ ಹೋಗಿದೆ. ಲೆನಿನ್, ಗೋಬರ್ಚಿವ್‌ರಂತಹ ನಾಯಕರು ಹೊಸ ದೃಷ್ಠಿಕೋನದಲ್ಲಿ ನೋಡಿದ ರಷ್ಯಾಕ್ಕೆ, ಪುಟಿನ್ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿರುವ ಡಿಮಿತ್ರಿ ಮೆಡ್ವೆದೆವ್ ನಾಯಕರಾಗಿದ್ದಾರೆ. ದಿಮಿತ್ರಿ ಆಯ್ಕೆ ಬಹುತೇಕ ನೀರೀಕ್ಷಿತವಾಗಿದ್ದರಿಂದ ಚುನಾವಣಾ ಫಲಿತಾಂಶದ ಕುರಿತು ರಷ್ಯನ್ನರು ಅಷ್ಟೇನೂ ಕಾತರದ ಕುತೂಹಲ ಉಳಿಸಿಕೊಂಡಿರಲಿಲ್ಲ.

ಆದರೆ, ಹೊಸ ಅಧ್ಯಕ್ಷನನ್ನು ಘೋಷಿಸುವ ಮೊದಲೇ ಈ ಬಾರಿ ಚುನಾವಣೆ ಅಷ್ಟೊಂದು ಸಮರ್ಪಕವಾಗಿರಲಿಲ್ಲ ಎಂಬ ಮಾತು ಅಲ್ಲಿನವರಿಂದಲೇ ಕೇಳಿಬರುತ್ತಿದೆ. ರಷ್ಯಾ ಚುನಾವಣೆಯ ಮೇಲೆ ವಿಶೇಷವಾಗಿ ನಿಗಾ ಇರಿಸಿದ್ದ ಯೂರೋಪ್ ಸಂಸತ್ತಿನ ಪ್ರತಿನಿಧಿಗಳ ತಂಡ `ಈ ಚುನಾವಣೆ ಪ್ರಜಾಸತ್ತಾತ್ಮಕವಾಗಿರಲಿಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ತಾನು ಎಂಟು ವರ್ಷಗಳಿಂದ ಅನುಸರಿಸಿಕೊಂಡು ಬಂದಿದ್ದ ಅಭಿವೃದ್ಧಿಯ ಪಥವನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಈ ವಿಜಯ ಲಭಿಸಿದೆ ಎಂದು ಪುಟಿನ್ ಪ್ರತಿಕ್ರಿಯಿಸಿದ್ದರೂ, ಚುನಾವಣೆಯಲ್ಲಿ ಏನೋ ನಡೆದಿದೆ ಎಂಬ ಸಣ್ಣ ಗುಮಾನಿ ಈಗ ರಷ್ಯಾದಾದ್ಯಂತ ಆವರಿಸಿದೆ.

ರಷ್ಯಾದ ಕೇಂದ್ರ ಚುನಾವಣಾ ಆಯೋಗ ಹೊರಬಿಟ್ಟಿರುವ ಫಲಿತಾಂಶದಂತೆ ಮೆಡ್ವೆದೆವ್ ಪ್ರತಿಶತ ಎಪ್ಪತ್ತರಷ್ಟು ಮತಗಳೊಂದಿಗೆ ಭಾಗಶಃ ಆಯ್ಕೆಯಾಗಿದ್ದಾರೆ. ಆದರೆ ಚುನಾವಣಾ ಕಣದಲ್ಲಿದ್ದ ಮತ್ತೋರ್ವ ಪ್ರಭಲ ಪ್ರತಿಸ್ಪರ್ಧಿ, ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಗೆನಡಿ ಜ್ಯುಗನೊವ್ ಈ ಚುನಾವಣೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ತಿಳಿಸಿದ್ದಾರೆ.  ರಷ್ಯಾದ ಸುದ್ದಿ ಸಂಸ್ಥೆಯೊಂದಕ್ಕೆ ಅವರು ನೀಡಿರುವ ಸಂದರ್ಶನದಲ್ಲಿ, ಮೆಡ್ವೆದೆವ್ ಪರವಾಗಿ ಮತ ಹಾಕುವಂತೆ ಅನೇಕ ಸರಕಾರಿ ಅಧಿಕಾರಿಗಳಿಗೆ ಒತ್ತಡ ಹೇರಲಾಗಿತ್ತು. ಕೆಲವರಿಗೆ ಭೂರಿ ಬೋಜನ, ಮೋಜು, ಮಸ್ತಿ, ಉಚಿತ ಸಿನೆಮಾ ಟಿಕೇಟ್ ಆಹ್ವಾನ ನೀಡಲಾಗಿತ್ತು ಎಂದು ಆಪಾದಿಸಿದ್ದಾರೆ. ಪ್ರಜಾಪ್ರಭುತ್ವ ದೇಶವೊಂದರಲ್ಲಿ ಚುನಾವಣೆಯಿಂದ ಏನೆಲ್ಲಾ ನಿರೀಕ್ಷೆ ಇಟ್ಟುಕೊಳ್ಳಲಾಗುತ್ತದೆಯೋ ಅದು ಯಾವುದೂ ರಷ್ಯಾದಲ್ಲಿ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಗೆನಡಿ ಆರೋಪದಲ್ಲಿ ಸತ್ಯವಿದ್ದರೆ ಅವರು ಹೇಳುವಂತೆಯೇ ರಷ್ಯಾದಲ್ಲಿ ಚುನಾವಣೆಯಿಂದ ಏನೂ ನಿರೀಕ್ಷೆ ಇತ್ತೋ ಅದು ಈಡೇರಿಲ್ಲ. ಆದರೆ ಗೆಲುವಿನ ಸಂಭ್ರಮದಲ್ಲಿರುವ ಡಿಮಿತ್ರಿ ಈ ಎಲ್ಲ ಆರೋಪಗಳನ್ನು ಸಾರಸಗಟಾಗಿ ಅಲ್ಲಗಳೆದಿದ್ದಾರೆ. ತಕ್ಷಣಕ್ಕೆ ಏನೂ ಪ್ರತಿಕ್ರಿಯೆ ನೀಡದಿದ್ದರೂ, ರಷ್ಯಾದ ಕೇಂದ್ರ ಚುನಾವಣಾ ಆಯೋಗ, ದೂರುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದೆ.

ಒಂದಂತೂ ಸತ್ಯ, ಚುನಾವಣೆಯಲ್ಲಿ  ಅಕ್ರಮ ನಡೆಯುವುದು ಭಾರತದಲ್ಲಿ ಮಾತ್ರವಲ್ಲ ರಷ್ಯಾದಲ್ಲೂ ಇದೆ. ಆದರೆ ಅವರು ಮತದಾರರಿಗೆ ನೀಡುವ ಆಮಿಷಗಳು ನಮ್ಮವರಿಗಿಂತ ಸ್ವಲ್ಪ ಬೇರೆ ಎನ್ನುವುದು ಮಾತ್ರ ವಿಶೇಷ.

ಇಂಗ್ಲೆಂಡಿನಲ್ಲೂ ಸಾಲ ಮನ್ನಾ..

(ಬರೆದವರು-ಅಬ್ದುಲ್ ರಶೀದ್)

indian-bank.jpgಈ ಸಲದ ಕೇಂದ್ರ ಬೆಜೆಟ್ಟಿನಲ್ಲಿ ಸಾಲ ಮನ್ನಾ ಆಗಿರುವುದು ಬಡಪಾಯಿ ರೈತರ ಮುಖದಲ್ಲಿ ಮಾತ್ರ ನಗು ಅರಳಿಸಿಲ್ಲ. ಬ್ಯಾಂಕಿನ ಮಂದಿ ಕೂಡ ಒಳಗೊಳಗೆ ಖುಷಿ ಪಡುತ್ತಿದ್ದಾರೆ. ಅದಕ್ಕೆ ಒಂದು ಕಾರಣ ಸಾಲ ವಸೂಲಿಗಾಗಿ ರೈತರ ಬೆನ್ನು ಹತ್ತಿ ಹೊಲಗದ್ದೆ, ಮಳೆಬಿಸಿಲು ಅಂತ ಅಲೆಯಬೇಕಾಗಿಲ್ಲವಲ್ಲ ಅಂತ. ಎರಡನೆಯ ಕಾರಣ ಬ್ಯಾಂಕಿನಲ್ಲಿ ದಶಕಗಳಿಂದ ದೂಳು ತಿನ್ನುತ್ತಾ ಬಿದ್ದಿರುವ ಸಾಲದ ಕಡತಗಳು ಕಡಿಮೆ ಆಗುತ್ತದಲ್ಲ ಅಂತ. ರೈತರು ಕಂತು ಕಂತುಗಳಲ್ಲಿ ಕಷ್ಟಪಟ್ಟು ಕಟ್ಟ ಬೇಕಾಗಿದ್ದ ಅರವತ್ತು ಸಾವಿರ ಕೋಟಿ ರೂಪಾಯಿಗಳನ್ನು ಈಗ ಸರಕಾರ ಒಂದೆ ಪೆಟ್ಟಿಗೆ ಕಟ್ಟಿ ಕೊಡಲಿದೆ. ಹಾಗಾಗಿ ಬ್ಯಾಂಕಿನ ಮಂದಿ ಹೊರಗೆ ಕೊರಗಿದರೂ ಒಳಗೊಳಗೆ ಖುಷಿಯಲ್ಲೇ ಇದ್ದಾರೆ.

uk-loan1.jpgಇತ್ತ ಭಾರತದ ಬ್ಯಾಂಕಿರುಗಳ ಮುಖದಲ್ಲಿ ಈ ಪರಿಯ ನಗು ಅರಳಿದರೆ, ಅತ್ತ ಇಂಗ್ಲೆಂಡಿನ ಬ್ಯಾಂಕುಗಳು ಸರಿ ಸುಮಾರು ಏಳು ಬಿಲಿಯನ್ ಪೌಂಡ್‌ಗಳಷ್ಟು ಗೃಹ ಸಾಲವನ್ನು ಮನ್ನಾ ಮಾಡಿದೆ. ಮನೆಕಟ್ಟಲು ತೆಗೆದುಕೊಂಡ ಸಾಲವನ್ನು ತೀರಿಸಲು ಪಡಿಪಾಟಲು ಪಡುತ್ತಿರುವ ಇಂಗ್ಲೆಂಡಿನ ಮಧ್ಯಮವರ್ಗದ ಸಂಸಾರಗಳ ಗೋಳನ್ನು ನೋಡಲಾರದೆ ಬ್ಯಾಂಕುಗಳು ಈ ಉದಾರತೆ ಪ್ರದರ್ಶಿಸುತ್ತಿವೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಸಾಲದ ಮೇಲಿನ ಬಡ್ಡಿ ಏರುತ್ತಿರುವ, ಆಹಾರ ಪದಾರ್ಥಗಳ ಬೆಲೆ ಹಾಗೂ ಅಪರಿಮಿತ ಆದಾಯ ತೆರಿಗೆಗಳಿಂದ ತತ್ತರಿಸಿರುವ ಬ್ರಿಟನ್ ನಾಗರಿಕರು ಸಾಲವನ್ನು ಕಟ್ಟುವುದು ಕಷ್ಟವೇ ಇದೆ ಎಂದು ಅರಿತುಕೊಂಡಿರುವ ಬ್ರಿಟಿಷ್ ಬ್ಯಾಂಕುಗಳು ಈ ಅನುಕೂಲ ತೋರಿಸಿದೆ. ಈಗಾಗಲೇ ಕೊಟ್ಟಿರುವ ಸಾಲದ ಮೇಲೆ ಕರುಣೆ ತೋರಿಸಿರುವ ಈ ಬ್ಯಾಂಕುಗಳು ಹೊಸ ಸಾಲ ವಾಪಾಸು ಕೊಡಬಲ್ಲ ತಾಕತ್ತಿರುವವರಿಗೆ ಮಾತ್ರ ಸಾಲ ಕೊಡಲು ಶುರು ಮಾಡಿದೆ. ಆದರೆ ಸಾಲ ಬೇಕಾಗಿರುವುದು ತಾಕತ್ತಿಲ್ಲದವರಿಗೆ ಎಂಬುದನ್ನು ಮರೆತಿದೆ.

ಕೆಲವು ಸಂಗತಿಗಳು ಸಾರ್ವಕಾಲಿಕ. ಅವುಗಳಿಗೆ ದೇಶ ಕಾಲಗಳ ಪರಿಮಿತಿ ಇಲ್ಲ. ಸಾಲ ವಾಪಾಸು ಕೊಡಲು ಇರುವ ಮನುಷ್ಯನ ಕಷ್ಟಗಳೂ ಸಾರ್ವಕಾಲಿಕವಾಗುತ್ತಿದೆ.

ಕಾಸುಕಾಸಿಗೂ ಲೆಕ್ಕ ಹೇಳಬೇಕಾದ ಮುಷರಫ್

(ಬರೆದವರು-ಅಬ್ದುಲ್ ರಶೀದ್)

musharaff.jpgಯಾರಿಗೂ ಕ್ಯಾರೇ ಅನ್ನದೆ ಭೂಲೋಕದಲ್ಲೆಲ್ಲಾ ಹಾರಾಡುತ್ತಿದ್ದ ಪಾಕಿಸ್ತಾನದ ಅನಭಿಷಿಕ್ತ ದೊರೆ ಜನರಲ್ ಪರ್ವೇಜ್ ಮುಷರಫ್, ಈಗ ಚುನಾವಣೆಯ ನಂತರ ಪ್ರತಿ ಪೈಸೆಗೂ ಲೆಕ್ಕ ಒಪ್ಪಿಸಬೇಕಾದ ಪರಿಸ್ಥಿತಿ ತಂದುಕೊಂಡಿದ್ದಾರೆ. ಮೊನ್ನೆ ಮೂರು ದಿನಗಳ ಕಾಲ ಇಂಗ್ಲೆಂಡಿಗೆ ಹೋಗಿದ್ದಾಗ ಒಂದು ಇರುಳಿಗೆ ೨೧ಲಕ್ಷ ಕೇಳುವ ಹೋಟೆಲಲ್ಲಿ ಉಳಿದುಕೊಂಡ ಜನರಲ್ ಸಾಹೇಬರು ಪಾಕಿಸ್ತಾನದ ಖಜಾನೆಗೆ ೬೩ ಲಕ್ಷಗಳ ತೂತು ಕೊರೆದಿದ್ದಾರೆ ಎಂದು ಈ ಬಾರಿ ಆರಿಸಿಬಂದಿರುವ ಪಾಕ್ ಸಂಸದರು ಬೊಬ್ಬೆ ಹೊಡೆಯತ್ತಿದ್ದಾರೆ.

ಜನರಲ್ ಸಾಹೇಬರ ದುಂದುಗಾರಿಕೆಯನ್ನು ಪಾಕಿನ ಸಂಸತ್ತು ಎಳೆದು ಹಿಂಜಿ ಚರ್ಚೆ ಮಾಡುತಿದ್ದಾಗ ಮುಷರಫ್ ಅವರದೇ ಉಸ್ತುವಾರೀ ಸರಕಾರದ ಯಾವೊಬ್ಬ ಮಂತ್ರಿಯೂ ಅವರ ಬೆಂಬಲಕ್ಕೆ ಬರಲಿಲ್ಲ. ಒಂದು ರೀತಿಯಲ್ಲಿ ಹಿಂದೆ ಜೊತೆಗಿದ್ದವರೂ ಈಗ ಎದುರಿರುವರೂ ಎಲ್ಲರೂ ಸೇರಿ ಮುಷರಫ್ ಮೇಲೆ ಚೆನ್ನಾಗಿಯೇ ಸಿಟ್ಟು ತೀರಿಸಿಕೊಳ್ಳುತಿದ್ದಾರೆ. ಒಂದು ಕಾಲದಲ್ಲಿ ಅಮೇರಿಕಾ ಮತ್ತು ಯುರೋಪ್‌ಗಳಿಗೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸಖನಂತೆ ಪ್ರಿಯನಾಗಿದ್ದ ಮುಷರಫ್ ಈಗ ಏಕಾಂಗಿಯಂತೆ ಅಧ್ಯಕ್ಷರ ಅರಮನೆಯಲ್ಲಿ ಶತಪಥ ತಿರುಗುತ್ತಿದ್ದಾರೆ.

ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರದ ಪರಂಪರೆಯಲ್ಲಿ ಕೊಂಚ ಅಪರೂಪದವರಂತೆ, ಕೊಂಚ ಸಂಭಾವಿತರಂತೆ, ಅಲ್ಲಿನ ರಾಜಕಾರಣಿಗಳಿಗೆ ಹೋಲಿಸಿದರೆ ಕೊಂಚ ಪ್ರಾಮಾಣಿಕನಂತೆ ಕಾಣಿಸುವ ಮುಷರಫ್ ಈಗ ಹೋಟೆಲ್ ರೂಮಿನ ಖರ್ಚಿಗೂ ಲೆಕ್ಕ ಹೇಳಬೇಕಾಗಿದೆ. ಮುಂದೊಂದು ದಿನ ಪಾಕಿಸ್ತಾನದ ಸಂಸತ್ತು ಮನಸ್ಸು ಮಾಡಿದರೆ ಅವರು ಪದಚ್ಯುತರೂ ಆಗಬಹುದಾಗಿದೆ.

ಸಾಧಾರಣವಾಗಿ ಮಿಲಿಟರೀ ಸರ್ವಾಧಿಕಾರಿಗಳು ಸರ್ವಾಧಿಕಾರಿಗಳಾಗಿಯೇ ವೀರ ಮರಣವನ್ನಪ್ಪುತ್ತಾರೆ. ಆದರೆ ಅದು ಯಾಕೋ ಸರಿಯಿಲ್ಲ ಎಂದು ಅರಿತಿರುವಂತೆ ಕಾಣುವ ಮುಷರಫ್ ನಿವೃತ್ತ ಜೀವನ ಬಯಸುತ್ತಿದ್ದಾರೆ.

ಮಾರ್ಕ್ವೆಜ್ ಬರೆದಿರುವ ಆಟಂ ಆಫ್ ದಿ ಪ್ಯಾಟ್ರಿಯಾರ್ಕ್ ಎಂಬ ಕಾದಂಬರಿಯಲ್ಲಿ ನಿವೃತ್ತ ಸರ್ವಾಧಿಕಾರಿಯೊಬ್ಬನ ಒಂಟಿತನವನ್ನು ಪೇಜುಗಟ್ಟಲೆ ಬರೆಯಲಾಗಿದೆ. ಮುಷರಫ್ ಮನಸ್ಸಿನ ಈಗಿನ ತಳಮಳಗಳನ್ನು ಅರಿಯಬೇಕಾದವರು ಆ ಕಾದಂಬರಿಯನ್ನು ಓದಬಹುದಾಗಿದೆ.

ಅಂತರ್ಜಾಲಕ್ಕೆ ಜೂಸಿನ ವೇಗ

(ಸುದ್ದಿಯನ್ನು ಬರೆದವರು-ಜೋಮನ್ ವರ್ಗೀಸ್)

computer-cafe.jpgಅಂತರ್ಜಾಲ ಸೇವೆಗೆ ಇನ್ನಷ್ಟು ವೇಗ ಹೆಚ್ಚಿಸಲು ಲಕ್ಸಂಬರ್ಗ್ ಮೂಲದ ಜೂಸ್ ಕಂಪನಿ ತಾನು ತಯಾರು ಎಂದು ಹೇಳಿದೆ. ದಿನಂಪ್ರತಿ ಸೈಬರ್ ಕೆಫೆಗಳ ಮೂಲಕ ಜಾಲ ಸಂಪರ್ಕ ಪಡೆಯುತ್ತಿರುವ ಐದುನೂರು ಮಿಲಿಯನ್ ಜಾಗತಿಕ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರಜ್ಞಾನ ರೂಪಿಸಲಾಗಿದೆ.  ಜೂಸ್ ಅಭಿವೃದ್ಧಿ ಪಡಿಸಿರುವ ಪರ್ಸನಲ್ ಡೆಸ್ಕ್‌ಟಾಪ್ ವ್ಯವಸ್ಥೆಯನ್ನು ಯಾವುದೇ ಗಣಕಯಂತ್ರಕ್ಕೆ ಅಳವಡಿಸಬಹುದು. ಇದೊಂದು ಉಚಿತ ತಂತ್ರಾಂಶವಾಗಿದ್ದು, ಆನ್‌ಲೈನ್ ಮಾಹಿತಿ ಸಂಗ್ರಹಣೆ, ರವಾನೆ ಮತ್ತು ಕ್ರೂಢೀಕರಣಕ್ಕೆ ಸಹಾಯಕವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ. 

ಜೂಸ್‌ಟಾಪ್ ಎಂಬ ಹೆಸರಿನ ಈ ಪರ್ಸನಲ್ ಡೆಸ್ಕ್‌ಟಾಪ್‌ಗೆ ಹೆಚ್ಚಿನ ಬೇಡಿಕೆ ಇರುವುದು ಬ್ಯಾಂಡ್‌ವಿಡ್ತ್ ಸಂಪರ್ಕ ತೀರಾ ನಿಧಾನವಾಗಿರುವ ಸ್ಥಳಗಳಲ್ಲಿ. ಮೂರನೇ ಜಗತ್ತಿನ ಸೈಬರ್ ಕೆಫೆಗಳಲ್ಲಿ ಈ ಸಮಸ್ಯೆ ತೀರಾ ಸಾಮಾನ್ಯವಾಗಿರುವುದರಿಂದ ಅಲ್ಲಿನ ಜಾಲಿಗರನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಇದನ್ನು ತಯಾರಿಸಲಾಗಿದೆ. ಸಾರ್ವಜನಿಕ ಬಳಕೆಗೆ ಲಭ್ಯವಿರುವ ಈ ತಂತ್ರಾಂಶವನ್ನು ವೈಯಕ್ತಿಕ ಗಣಕಯಂತ್ರ ಬಳಕೆದಾರರೂ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಹಾಗೆ ಅಳವಡಿಸಿಕೊಳ್ಳುವುದರ ಮೂಲಕ ಇ-ಮೇಲ್, ಇನ್‌ಸ್ಟೆಂಟ್ ಮಸೇಜ್ ಹಾಗೂ ಕಡತ ರವಾನೆಯನ್ನೂ ನಿಧಾನಗತಿಯ ಅಂತರ್ಜಾಲ ಸೇವೆಯ ನಡುವೆಯೂ ವೇಗವಾಗಿ ಮಾಡಬಹುದಾಗಿದೆ ಎನ್ನುತ್ತಾರೆ ಫಿಲಿಪೈನ್ಸ್ ನ್ಯಾಷನಲ್ ಕಂಪ್ಯೂಟರ್ ಸೆಂಟರ್‌ನ ಎಲೊಸ ಸಾನ್ ಮೇಥೊ.

ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಒದಗಿಸುತ್ತಿರುವ ಸೈಬರ್ ಕಫೆಗಳಿಗೆ ಇದರಿಂದ ಹೆಚ್ಚು ನೆರವಾಗಲಿದೆ. ಜೂಸ್ ಅಭಿವೃದ್ಧಿ ಪಡಿಸಿರುವ ಪ್ರತ್ಯೇಕ ಸ್ಟೋರೇಜ್ ಡಿವೈಸ್‌ನ್ನು ಗಣಕಯಂತ್ರಕ್ಕೆ ಅಳವಡಿಸುವುದರ ಮೂಲಕ  ಚುರುಕಿನ ಅಂತರ್ಜಾಲ ಸಂಪರ್ಕ ಪಡೆಯಬಹುದು. ಚೀನಾದಲ್ಲಿ ಈ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಈ ಸೇವೆಯನ್ನು ಜನಪ್ರಿಯಗೊಳಿಸಲು ಇಂಟರ್‌ನ್ಯಾಷನಲ್ ಟೆಲಿಕಮ್ಯುನಿಕೇಷನ್ ಯೂನಿಯನ್ ಜೊತೆ ಸೇರಿ ಜೂಸ್ ಕಾರ್ಯನಿರ್ವಹಿಸಲಿದೆ ಎಂದು ಬಿಬಿಸಿ ವರದಿ ಮಾಡಿದೆ.

ಅರಬರ ನಾಡಿನಲ್ಲೂ ಅಸ್ಪೃಶ್ಯರು

(ಸುದ್ದಿಯನ್ನು ಬರೆದವರು-ಅಬ್ದುಲ್ ರಶೀದ್)

yemen.jpgಅಸ್ಪೃಶ್ಯತೆ ಅನ್ನುವುದು ಭಾರತಕ್ಕೆ ಅಂಟಿದ ಶಾಪ ಅಂದವರು ಮಹಾತ್ಮಾಗಾಂಧಿ. ಅಸ್ಪೃಶ್ಯತೆ ಅನ್ನುವುದು ವರ್ಣಬೇಧದ ರೂಪದಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೂ ಇತ್ತು. ಹಿಂದೆ ಅಮೇರಿಕಾದಲ್ಲಿಯೂ ಇತ್ತು. ನಮ್ಮಲ್ಲಿ ಈ ತರಹ ಇಲ್ಲ ಎಂದು ಇಸ್ಲಾಮಿಕ್ ದೇಶಗಳು ಹೇಳಿಕೊಳ್ಳುತ್ತಿದ್ದವು. ಆದರೆ ಇದು ಅಲ್ಲೂ ಇದೆ ಎಂದು ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಯೆಮನ್ ಎಂಬ ಅರಬ್ ದೇಶದ ಈ ಅಸ್ಪೃಶ್ಯರ ಕುಲದ ಹೆಸರು ಅಲ್‌ಹಕ್‌ದಂ. ಇವರು ನೋಡಲು ಆಫ್ರಿಕನ್ನರ ಚಹರೆ ಹೊಂದಿದ್ದಾರೆ. ಇವರದು ಜಾಡಮಾಲಿ ಕೆಲಸ. ಇರುವುದು ನಗರಗಳ ಅಂಚಿನ ಕೊಳಗೇರಿಗಳಲ್ಲಿ. ಇವರು ಮೃತದೇಹಗಳನ್ನು ತಿನ್ನುತ್ತಾರೆ. ಹೆಂಗಸರು ದೇಹಮಾರಿ ಬದುಕುತ್ತಾರೆ ಎಂದೆಲ್ಲ ಈ ಕುಲದ ಕುರಿತ ಕತೆಗಳ ಕಂತೆಯೇ ಇದೆ. ಆದರೆ ನಿಜ ಏನೆಂದರೆ ಇವರು ಇಸ್ಲಾಂ ಎಂಬುದು ಈ ಖಂಡದಲ್ಲಿ ಉದಯಿಸುವ ಎಷ್ಟೋ ವರ್ಷಗಳ ಹಿಂದೆಯೇ ಯೆಮನ್ ದೇಶವನ್ನು ಕೊಳ್ಳೆ ಹೊಡೆಯಲು ಕೆಂಪು ಸಮುದ್ರ ದಾಟಿ ಬಂದ ಇಥಿಯೋಪಿಯಾದ ಸೇನೆಯೊಂದರ ಅಳಿದುಳಿದ ಮಂದಿಯ ವಂಶಸ್ಥರು ಎಂಬುದು.

ಈ ಅಸ್ಪೃಶ್ಯ ಕುಲದ ಯುವಕನೊಬ್ಬ ಹೇಳುವ ಹಾಗೆ ಇವರ ಪಾಲಿಗೆ ಯೆಮನ್ನಿನ ಎಲ್ಲ ಬಾಗಿಲುಗಳೂ ಮುಚ್ಚಲ್ಪಟ್ಟಿವೆ. ಇವರಿಗೆ ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ. ಪೆಟ್ರೋಲಿನ ಅಲ್ಪ ಸ್ವಲ್ಪ-ಶ್ರೀಮಂತಿಕೆಯಲ್ಲಿ ತೇಲುತ್ತಿರುವ ಈ ಅರಬ್ ದೇಶದಲ್ಲಿ ಅಲ್ ಹಕ್‌ದಂಗಳನ್ನು ಮುನುಷ್ಯರ ಹಾಗೆಯೂ ಕಾಣಲಾಗುತ್ತಿಲ್ಲ.

ಆದರೆ ಈ ದಿನದ ಈ ಸುದ್ದಿಯ ವಿಶೇಷ ಇರುವುದು ಬರೆಯ ಈ ಅಸ್ಪೃಶ್ಯತೆಯಲ್ಲಿ ಮಾತ್ರವಲ್ಲ.

ಅಂದ ಹಾಗೆ ಯೆಮನ್ ಎಂಬುದು ಜನಸಂಖ್ಯೆಯ ಪ್ರಕಾರ ಇಸ್ಲಾಮಿಕ್ ರಾಷ್ಟ್ರವಾದರೂ ಸೈದ್ಯಾಂತಿಕವಾಗಿ ಸಮಾಜವಾದಿ ಗಣರಾಜ್ಯ. ೧೯೯೦ರಲ್ಲಿ ಏಕೀಕರಣವಾಗುವ ಮೊದಲು ಯೆಮನ್ನಿನ ದಕ್ಷಿಣ ಭಾಗ ಮಾರ್ಕ್ಸಿಸ್ಟ್ ರಾಜ್ಯವಾಗಿತ್ತು.

ಮನುಷ್ಯರು ಮನುಷ್ಯರನ್ನು ಕೀಳಾಗಿ ಕಾಣುವುದಕ್ಕೆ ದೇಶ, ಕಾಲ ಹಾಗೂ ರಾಜಕೀಯ ಸಿದ್ಧಾಂತಗಳು ಮಾನದಂಡಗಳೇನೂ ಅಲ್ಲ ಎನ್ನುವುದು ಈ ಸುದ್ದಿಯ ನೀತಿಪಾಠ.

(ಚಿತ್ರ ಕೃಪೆ- ನ್ಯೂಯಾರ್ಕ್ ಟೈಮ್ಸ್)

ಫೈರ್‌ಫಾಕ್ಸ್-ಬೆಂಕಿಯ ನರಿಯ ಮೂರನೇ ಅವತಾರ

(ಸುದ್ದಿಯನ್ನು ಬರೆದವರು-ಅಬ್ದುಲ್ ರಶೀದ್)

firefox.jpgಯಾಕೋ ಆಮೆ ಮತ್ತು ಮೊಲದ ಓಟದ ಕತೆ ನೆನಪಾಗುತ್ತಿದೆ. ಅಂತರ್ಜಾಲದ ಅಂಗಳದಲ್ಲಿ ಪಾಳೆಗಾರನಂತೆ ಕೂತಿರುವ ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು ಮೊಝಿಲ್ಲಾ ಫೈರ್‌ಫಾಕ್ಸ್ ಎನ್ನುವ ಬೆಂಕಿಯ ನರಿ ಹಿಂದಿಕ್ಕುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಮೊಝಿಲ್ಲಾ ಇದೀಗ ಹೊರಬಿಡುತ್ತಿರುವ ಫೈರ್‌ಫಾಕ್ಸ್-೩ ಆವೃತ್ತಿ ಪ್ರಾಯೋಗಿಕ ಹಂತದಲ್ಲಿಯೇ ಇಂಟರ್ನೆಟ್ ಹುಡುಕು ಪ್ರಿಯರ ಮುದ್ದಿಗೆ ಪಾತ್ರವಾಗುವ ಆಸೆ ಹೊತ್ತು ಬರುತ್ತಿದೆ.

ಹುಡುಕುವುದು ಅಂದರೆ ಸರ್ಚ್ ಮಾಡುವುದು ಇದೀಗ ಅಂತರ-ಜಾಲಿಗರ ಮೊತ್ತ ಮೊದಲ ಆದ್ಯತೆ. ಈ ಹುಡುಕುವ ಕ್ರಿಯೆಯನ್ನು ಒಂದು ಅದ್ಭುತ ಅನುಭವವನ್ನಾಗಿಸಲು ಫೈರ್‌ಫಾಕ್ಸ್-೩ರಲ್ಲಿ ಎಲ್ಲ ಕಸರತ್ತನ್ನೂ ಮಾಡಿದ್ದೇವೆ ಎಂದು ಮೊಝಿಲ್ಲಾ ಫೌಂಡೇಶನ್ನಿನ ಅಧ್ಯಕ್ಷೆ ಮಿಷೆಲ್‌ಬೇಕರ್ ಬಿಬಿಸಿಗೆ ಹೇಳಿದ್ದಾರೆ.

ಇಲ್ಲಿಯವರೆಗೆ ನಿಮಗೇನಾದರು ಹುಡುಕಬೇಕಿದ್ದರೆ, ಉದಾಹರಣೆಗೆ ಮಲ್ಲಿಕಾ ಶೆರಾವತ್‌ಳ ಚಿತ್ರಗಳನ್ನು ಹುಡುಕಬೇಕಿದ್ದರೆ ಹುಡುಕುವ ಅಂಕಣದೊಳಗೇ ಅವಳ ಹೆಸರನ್ನು ನಮೂದಿಸಿ ಹುಡುಕಬೇಕಿತ್ತು. ಇನ್ನು ಮುಂದೆ ಫೈರ್‌ಫಾಕ್ಸ್‌ನಲ್ಲಿ ವಿಳಾಸ ಬರೆಯುವ ಕಡೆ ನೀವು ಅವಳ ಹೆಸರು ಬರೆದರೆ ಸಾಕು, ನೀವು ಇದುವರೆಗೆ ನೋಡಿದ ಮಲ್ಲಿಕಾ ಶೆರಾವತಳ ಹೆಸರಿರುವ  ಹತ್ತು ಹಳೆಯ ಯುಆರ್‌‌ಎಲ್‌ಗಳು ಕಂಗೊಳಿಸುತ್ತವೆ.

`ಇದು ಇಷ್ಟೇ ಅಲ್ಲ. ನಮ್ಮದು ಇನ್ನು ಮುಂದೆ ಇನ್ನೂ ಚೆನ್ನಾಗಿರುತ್ತದೆ. ತಣ್ಣಗಿರುತ್ತದೆ ಹಾಗೂ ಸುಲಭವಿರುತ್ತದೆ` ಎಂದು ಹೇಳಿರುವ ಮಿಷೆಲ್, ಮೈಕ್ರೋಸಾಫ್ಟ್ ಎಂಬ ಮೊಲವನ್ನು ಕೊಂಚ ಸ್ವ-ವಿಮರ್ಶೆಯಲ್ಲಿ ತೊಡಗುವಂತೆ ಮಾಡಿದೆ.

ಫಿಲಂಫೇರ್ ಮತ್ತು ಆಸ್ಕರ್ ಪ್ರಶಸ್ತಿಗಳು

(ಸುದ್ದಿಯನ್ನು ಬರೆದವರು-ಸುಲೋಚನಾ ವೆಂಕಟೇಶ್)

ಭಾರತದ ಆಸ್ಕರ್ ಎಂದೇ ಕರೆಯಲ್ಪಡುವ ಫಿಲಂಫೇರ್ ಪ್ರಶಸ್ತಿಗಳು ಈ ಬಾರಿ ಖ್ಯಾತನಾಮರ ಪಾಲಾಗಿದ್ದರೆ, ನೈಜ ಆಸ್ಕರ್ ೨೦೦೮ರ ಅಕಾಡೆಮಿ ಪ್ರಶಸ್ತಿಗಳನ್ನು ಅಮೇರಿಕಾದ ಹೊರಗಿನ ತಾರೆಗಳು ಬಾಚಿಕೊಂಡಿದ್ದಾರೆ.

darsheel.jpgಶಾರುಕ್‌ಖಾನ್-ಅತ್ಯುತ್ತಮ ನಟ, ಕರೀನಾ ಕಪೂರ್-ಅತ್ಯುತ್ತಮ ನಟಿ, ಅಮೀರ್ ಖಾನ್-ಅತ್ಯುತ್ತಮ ನಿರ್ದೇಶಕ, ಎ.ಆರ್. ರೆಹಮಾನ್-ಅತ್ಯುತ್ತಮ ಸಂಗೀತ ನಿರ್ದೇಶಕ. ಯಾವುದೇ ಅಚ್ಚರಿಯಿಲ್ಲದ, ಹೊಸಬರೂ ಯಾರೂ ಅಲ್ಲದ ಖ್ಯಾತ ತಾರೆಗಳೇ ಮತ್ತೆ ಮತ್ತೆ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಚಿತ್ರಗಳು ಯಾಕೋ ಏನೋ ನೋಡುಗರಲ್ಲಿ ಅಂತಹ ಪುಳಕಗಳನ್ನೇನೂ ಹುಟ್ಟಿಸುವುದಿಲ್ಲ. ಒಂದಾದರೂ ಪ್ರಶಸ್ತಿ ನಾವು ಇದುವರೆಗೂ ಕಾಣದ್ದರ ಕಡೆಗೆ ನಮ್ಮ ಕಣ್ಣು ಹಾಯುವ ಹಾಗೆ ಮಾಡಿದರೆ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೇ ಕಳೆ ಬಂದು ಬಿಡುತ್ತದೆ. ಈ ಬಾರಿಯ ಫಿಲಂಫೇರ್ ಪ್ರಶಸ್ತಿಯ ಯಾದಿಯಲ್ಲಿ ಅಂತಹದೊಂದು ಸಣ್ಣ ಕಳೆ ತಂದು ಕೊಟ್ಟಿರುವುದು ತಾರೆ ಜಮೀನ್ ಪರ್ ಚಿತ್ರದ ಬಾಲನಟ ದರ್ಶೀಲ್ ಸಫಾರಿ. ಆತನಿಗೆ ವಿಮರ್ಶಕರು ಸೂಚಿಸಿದ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.

ಆಸ್ಕರ್ ಅಕಾಡೆಮಿ ಪ್ರಶಸ್ತಿಯ ಈ ಬಾರಿಯ ಒಂದು ವಿಶೇಷವೇನೆಂದರೆ ಇದು ಈ ಪ್ರಶಸ್ತಿಯ ಎಂಬತ್ತನೇ ವಾರ್ಷಿಕೋತ್ಸವ. ಇನ್ನೊಂದು ವಿಶೇಷ ಈ ಬಾರಿಯ ಪ್ರಶಸ್ತಿ ವಿಜೇತ ತಾರೆಗಳು ಅಮೇರಿಕಾ ಖಂಡದಿಂದ ಹೊರಗಿರುವವರು. oscars.jpgದೇರ್ ವಿಲ್ ಬಿ ಬ್ಲಡ್ ಚಿತ್ರದ ನಾಯಕ ನಟ ಇಂಗ್ಲೆಂಡಿನ ಡೇನಿಯಲ್ ಡೇ ಲಿವೀಸ್ ಅತ್ಯುತ್ತಮ ನಟನಿಗಿರುವ ಪ್ರಶಸ್ತಿಯನ್ನು ಗೆದ್ದು ಕೊಂಡಿದ್ದರೆ, ಸ್ಪೇನಿನ ನಟ ಝೇವಿಯರ್ ಬಾರ್ಡೆಂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ನೋ ಕಂಟ್ರಿ ಫಾರ್ ಓಲ್ಡ್ ಮೆನ್ ಚಿತ್ರಕ್ಕಾಗಿ ಪಡೆದು ಕೊಂಡಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿ ಪ್ರಾನ್ಸಿನ ಮಾರಿಯಾನ್ ಕೊಟಿಲಾರ್ಡ್ ಪಾಲಾಗಿದ್ದರೆ, ಟಿಲ್ಡಾ ಸ್ವಿಂಟನ್ ಎಂಬ ಬ್ರಿಟಿಷ್‌ನಟಿ ಅತ್ಯುತ್ತಮ ಪೋಷಕಿ ನಟಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ಬಾರಿಯ ಆಸ್ಕರ್ ಪ್ರಶಸ್ತಿಯ ಸಿಂಹಪಾಲು ಜೋಯಲ್ ಹಾಗೂ ಇತಾನ್ ಕೊಹೆನ್ ನಿರ್ಮಿಸಿದ ನೋ ಕಂಟ್ರಿ ಫಾರ್ ಓಲ್ಡ್ ಮೆನ್ ಚಿತ್ರಕ್ಕೆ. ಈ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಚಿತ್ರ ಪ್ರಶಸ್ತಿಗಳೂ ದಕ್ಕಿದೆ. ಹಾಲಿವುಡ್‌ನ ಬರಹಗಾರರು ಮುನಿಸಿಕೊಂಡು ಮುಷ್ಕರಕ್ಕಿಳಿಯದಿದ್ದರೆ, ಈ ಬಾರಿಯ ಆಸ್ಕರ್ ಇನ್ನಷ್ಟು ಬಣ್ಣಬರಿತವಾಗಿರುತ್ತಿತ್ತು ಎಂದು ಬಲ್ಲವರು ಹೇಳುತ್ತಾರೆ.

ಗಾಂಧೀಜಿ ತನಗೆ ಸ್ಫೂರ್ತಿ ಎಂದ ಒಬಾಮ

( ಈ ಸುದ್ದಿಯನ್ನು ಬರೆದವರು ಜೋಮನ್ ವರ್ಗೀಸ್)

rotate1.jpgಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಚುನಾವಣೆಯ ಹಾದಿಯಲ್ಲಿ ಹಿಲೆರಿ ಕ್ಲಿಂಟನ್‌ಳ ನೆಮ್ಮದಿಯನ್ನು ಕೆಡಿಸಿರುವ ಬರಾಕ್ ಒಬಾಮ, ಗಾಂಧೀಜಿ ಅಂದರೆ ತಮಗೆ ತುಂಬಾ ಸ್ಫೂರ್ತಿ ಎಂದು ಹೇಳಿದ್ದಾರೆ. ಈಗ ಇದಕ್ಕಿದ್ದಂತೆ ಅವರಿಗೆ ಗಾಂಧೀಜಿ ನೆನಪಾಗಲು ಕಾರಣ ಏನಿರಬಹುದು ಎನ್ನುವುದು ಭಾರತೀಯರಿಗಿಂತ ಹೆಚ್ಚಾಗಿ ಅಮೆರಿಕನ್ನರಿಗೆ ಕುತೂಹಲ ತಂದಿದೆ. ಒಬ್ಬ ಸಾಮಾನ್ಯ ಮನುಷ್ಯನೂ ಅಸಾಮಾನ್ಯವಾದುದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ಗಾಂಧೀಜಿ ಮಾದರಿ, ಅವರು ಜನರ ನಡುವಿನಿಂದ ಆರಿಸಿಬಂದ ವ್ಯಕ್ತಿ ಎಂದು ಒಬಾಮ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಅಲ್ಲಿನ ಇಂಡಿಯನ್ ಅಬ್ರಾಡ್ ಪತ್ರಿಕೆಗೆ ಲೇಖನ ಬರೆದಿರುವ ಅವರು ತಾವೂ ಕೂಡ ಗಾಂಧೀಜಿಯಂತೆ ಜನರನ್ನು ಪ್ರತಿನಿಧಿಸಲು ಬಯಸುತ್ತಿರುವುದಾಗಿ ಪರೋಕ್ಷವಾಗಿ ಅವರು ಹೇಳಿಕೊಂಡಿದ್ದಾರೆ.

ಒಬಾಮ ಈ ರೀತಿ ಹೇಳಿಕೊಂಡಿರುವುದರಲ್ಲಿ ಹಾಗೆ ನೋಡಿದರೆ ಯಾವುದೇ ಅಸಹಜತೆ ಕಾಣಿಸುವುದಿಲ್ಲ. ಆದರೆ ಅಮೆರಿಕದಂತಹ ದೇಶವೊಂದರ ಅಧ್ಯಕ್ಷ ಹುದ್ಧೆಗೆ ಸ್ಪರ್ಧಿಸುತ್ತಿರುವ ವ್ಯಕ್ತಿ ಚುನಾವಣಾ ಅಖಾಡದಲ್ಲಿ ನಿಂತು ಹೀಗೆ ಹೇಳುವಾಗ ಅದು ಮಹತ್ವ ಪಡೆದುಕೊಳ್ಳುತ್ತದೆ. ಈ ಹೇಳಿಕೆ ಅಮೆರಿಕದಲ್ಲಿರುವ ಭಾರತೀಯ ಮತದಾರರನ್ನು ಓಲೈಸುವ ಪ್ರಯತ್ನ ಇರಬಹುದು ಅನಿಸುತ್ತದೆ. ಹಾಗೆ ನೋಡುವಾಗ ಲಕ್ಷಾಂತರ ಭಾರತೀಯ ಮತದಾರರ ಬೆಂಬಲವನ್ನು ಗಳಿಸಿಕೊಳ್ಳಲು ಒಬಾಮ ಸರಿಯಾದ ಅಸ್ತ್ರವನ್ನೇ ಪ್ರಯೋಗಿಸಿದ್ದಾರೆ ಎಂದೆನಿಸುತ್ತದೆ. ನನಗೆ ತುಂಬಾ ಜನ ಇಂಡೋ-ಅಮೆರಿಕನ್ನರು ಧೀರ್ಘಕಾಲದಿಂದ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ ಅವರಿಗೆಲ್ಲಾ ನಾನು ಅಬಾರಿ ಎನ್ನುತ್ತಲೇ ಗಾಂಧೀಜಿ ಹಾಗೂ ಭಾರತೀಯರ ಬಗ್ಗೆ ಪ್ರೀತಿಯ ಮಾತನ್ನಾಡಿದ್ದಾರೆ.

ಡೆಮಾಕ್ರಾಟ್ ಪಕ್ಷದೊಳಗಿನ ಚುನಾವಣೆಯಲ್ಲಿ ಈಗ ಒಬಾಮ ಕೊಂಚ ಮುಂದಿದ್ದಾರೆ. ತಾವು ಹಿಂದಿದ್ದ ಸಂದರ್ಭದಲ್ಲಿ ಭಾರತಕ್ಕೆ ಹೊರಗುತ್ತಿಗೆ ನೀಡುವ ಅಮೆರಿಕನ್ ಕಂಪನಿಗಳಿಗೆ ಯಾವುದೇ ತೆರಿಗೆ ವಿನಾಯತಿ ಇಲ್ಲ ಎಂದು ಘೋಷಿಸಿದ್ದ ಅವರು, ಈಗ ಅದರ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ. ತೆರಿಗೆ ವಿನಾಯತಿ ಘೋಷಿಸುವುದರಿಂದ ಕೆಲಸ ಕೈತಪ್ಪಿ ಹೋಗಲಿರುವ ಲಕ್ಷಾಂತರ ಅಮೆರಿಕನ್ನರ ವಿರೋಧವನ್ನೂ, ಘೋಷಿಸದೇ ಇದ್ದರೆ ಭಾರತದ ಕಂಪನಿಗಳ ವಿರೋಧವನ್ನೂ ಜಾಣತನದಿಂದ ಎದುರಿಸಲು ಒಬಾಮ ಹೊಸ ತಂತ್ರವೊಂದನ್ನು ಹುಡುಕುತ್ತಿದ್ದಾರೆ. ಅತ್ತ ಕಡೆ ಅಮೆರಿಕನ್ನರನ್ನೂ ಈ ಕಡೆ ಅಲ್ಲಿರುವ ಭಾರತೀಯ ಮೂಲದವರ ಮತಗಳನ್ನೂ ಕಳೆದುಕೊಳ್ಳಲು ಒಬಾಮೆಗೆ ಇಷ್ಟವಿದ್ದಂತಿಲ್ಲ.

ನಲವತ್ತೇಳು ವರ್ಷ ವಯಸ್ಸಿನ, ಹೆಚ್ಚು ಮಾತೂ ಆಡದ ಒಬಾಮ ತಮಗಿರುವ ಭಿನ್ನ ವರ್ಚಿಸ್ಸಿನಿಂದಲೇ ಅಮೆರಿಕ ಚುನಾವಣೆಯಲ್ಲಿ ಮೇಲೇರತೊಡಗಿದ್ದಾರೆ. ಒಬಾಮ ಜಾನ್ ಎಫ್‌.ಕೆನಡಿ ತರಹ ಎನ್ನುತ್ತಿದ್ದ ಅವರ ಬೆಂಬಲಿಗರು ಈಗ ಅವರು ಗಾಂಧೀಜಿ ತರಹ ಎನ್ನಬಹುದು. ಆದರೆ ಗಾಂಧಿಯಾಗುವುದಕ್ಕೂ ಗಾಂಧೀಜಿ ತರಹ ಇರುವುದಕ್ಕೂ ನಡುವಿನ ವ್ಯತ್ಯಾಸ ಬಹಳ ದೊಡ್ಡದು.

ಖಾಸಗಿ ಎಫ್‌.ಎಂ ವಾರ್ತೆಗಳು

( ಈ ಸುದ್ದಿಯನ್ನು ಬರೆದವರು ಜೋಮನ್ ವರ್ಗೀಸ್)

radio.jpgಖಾಸಗಿ ಎಫ್.ಎಂ ರೇಡಿಯೋ ಚಾನೆಲ್‌ಗಳಲ್ಲಿ ಇನ್ನು ಮುಂದೆ ನೀವು ವಾರ್ತೆಯನ್ನೂ ಕೇಳಬಹುದು. ಮನೋರಂಜನೆಗೆ ಸೀಮಿತವಾಗಿದ್ದ ಎಫ್‌.ಎಂ ಚಾನೆಲ್‌ಗಳು ಸುದ್ದಿಯನ್ನು ಬಿತ್ತರಿಸಲು ಭಾರತದ ಪ್ರಸಾರ ನಿಯಂತ್ರಣ ಮಂಡಳಿ ಟ್ರಾಯ್ ಅನುಮೋದನೆ ನೀಡಿದೆ. ಜೊತಗೆ ವಿದೇಶಿ ನೇರ ಬಂಡವಾಳ ಹೂಡಿಕೆಯ ಬಳಕೆಯನ್ನು ಪ್ರತಿಶತ 49ಕ್ಕೆ ಹೆಚ್ಚಿಸುವಂತೆ ಅದು ಕೋರಿಕೊಂಡಿದೆ. ಟ್ರಾಯ್ ಪ್ರಕಟಿಸಿರುವ ಈ ಹೊಸ ನಿರ್ಧಾರ ರೇಡಿಯೋ ಸುದ್ದಿ ಪ್ರಸಾರದಲ್ಲಿ ಹೊಸ ಬದಲಾವಣೆಗಳನ್ನು ತರಬಹುದು. ಇಲ್ಲಿಯವರೆಗೆ ಬಾನುಲಿ ಸುದ್ದಿ ಪ್ರಸಾರದಲ್ಲಿ ಏಕಸ್ವಾಮ್ಯತೆ ಹೊಂದಿ ಆರಾಮಾಗಿದ್ದ ಆಕಾಶವಾಣಿ ಆರೋಗ್ಯಕರ ಸ್ಪರ್ಧೆಯೊಂದನ್ನು ಎದುರಿಸಲು ಮೈಕೊಡವಿಕೊಳ್ಳಬೇಕಾಗಿದೆ.

ಭೌಗೋಳಿಕವಾಗಿ ಹೆಚ್ಚು ಜನರನ್ನು ತಲುಪುವ ಏಕೈಕ ಸಮೂಹ ಮಾಧ್ಯಮ ಎಂದು ಕರೆಯಿಸಿಕೊಳ್ಳುವ ರೇಡಿಯೋ ಇದರಿಂದ ಇನ್ನಷ್ಟು ಬಲಗೊಳ್ಳಲಿದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ ಖಾಸಗಿ ಒಡೆತನದ ಎಫ್.ಎಂ ರೇಡಿಯೋ ನಿಲಯಗಳಿಗೆ ಸುದ್ದಿ ಬಿತ್ತರಿಸುವ ಸ್ವಾತಂತ್ರ್ಯವೂ ದೊರೆಯುತ್ತಿದ್ದಂತೆ ಅವುಗಳು ಏನೆಲ್ಲಾ ಹೊಸ ತಂತ್ರಗಳನ್ನು ಅಳವಡಿಸಲಿದೆ ಎನ್ನುವುದು ಕುತೂಹಲದ ವಿಷಯ. ಹಾಗೆ ನೋಡಿದರೆ 2005ರಲ್ಲಿ ಎಫ್.ಎಂ ವಾಹಿನಿಗಳ ಪ್ರಸಾರ ಅಭಿವೃದ್ಧಿಗಾಗಿ ಹೊರತರಲಾದ ನೂತನ ಕಾಯಿದೆಯಿಂದಾಗಿ ದೇಶದಲ್ಲಿ 175ಕ್ಕೂ ಹೆಚ್ಚು ಖಾಸಗಿ ಎಫ್‌.ಎಂ ರೇಡಿಯೋ ನಿಲಯಗಳು ಹೊಸದಾಗಿ ಪ್ರಾರಂಭಗೊಂಡವು. ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಹೋಲಿಸಿದರೆ ಇದು ಕ್ಷಿಪ್ರಗತಿಯ ಬೆಳವಣಿಗೆ.

ವಿದೇಶಿ ನೇರ ಬಂಡವಾಳ ಹೂಡಿಕೆ ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿರುವುದರಿಂದ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಟ್ರಾಯ್ ನಿರ್ಧರಿಸಿದೆ. ಈಗ ಟ್ರಾಯ್ ಸೂಚಿಸಿರುವಂತೆ ಖಾಸಗಿ ಎಫ್‌ಎಂ ಚಾನೆಲ್‌ಗಳು ಆಕಾಶವಾಣಿ, ದೂರದರ್ಶನ ಹಾಗೂ ಅಧಿಕೃತ ಸುದ್ದಿ ಸಂಸ್ಥೆಗಳಿಂದ ಸುದ್ದಿಯನ್ನು ಬಳಸಿಕೊಳ್ಳಬಹುದಾಗಿದೆ. ಹೀಗೆ ಅನುಮೋದನೆಯನ್ನು ನೀಡಿರುವ ಟ್ರಾಯ್ ಎಫ್‌‌.ಎಂ ಚಾನೆಲ್‌ಗಳಗೆ ಒಂದಿಷ್ಟು ನಿಯಮಗಳನ್ನೂ ರಚಿಸಿ, ಪ್ರಸಾರ ಸೇವೆಗಾಗಿ ಮುಂಗಡ ಹಣವನ್ನೂ ನಿರ್ಧರಿಸಿದೆ. ಜೊತೆಗೆ ಈಶಾನ್ಯ ರಾಜ್ಯಗಳು ಹಾಗೂ ಜಮ್ಮು ಕಾಶ್ಮೀರದಲ್ಲಿ ಈ ಸೇವೆ ಪ್ರಾರಂಭಿಸಲಿರುವವರಿಗೆ ಮೂರು ವರ್ಷಗಳ ಪ್ರಾರಂಭಿಕ ಪ್ರಸಾರ ಸೇವೆಗಾಗಿ ಸ್ಪಲ್ಪ ಮಟ್ಟಿಗಿನ ರಿಯಾಯಿತಿಯನ್ನೂ ಘೋಷಿಸಿದೆ.

ಟ್ರಾಯ್ ಏನೆಲ್ಲಾ ನಿಯಮಗಳನ್ನು ರಚಿಸಿದರೂ, ವಾರ್ತೆಯನ್ನು ಓದುವ ರೇಡಿಯೋ ಜಾಕಿಯ ಕೈಯಲ್ಲಿ ಇದರ ಸೂತ್ರ ಅಡಗಿದಂತಿದೆ. ವಾರ್ತೆಯನ್ನು ಓದುವಾಗ ಆತ ತನ್ನ ಎಂದಿನ ಶೈಲಿಗೆ ಮರಳಿದರೆ ಏನೆಲ್ಲಾ ತಮಾಷೆಗಳಾಗಬಹುದೋ ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ಎಫ್‌.ಎಂ ದಿನಭವಿಷ್ಯದ ಮೂಲಕ ತಮ್ಮ ದಿನ ಪ್ರಾರಂಭಿಸುವ ಅನೇಕರಿಗೆ ಈ ಸುದ್ದಿ ಖುಷಿ ತಂದಂತಿದೆ.

del.icio.us Digg FURL Yahoo! My Web 2.0 Reddit |
  1. ರೇಣುಕಾ ನಿಡಗುಂದಿ:

    ಈಗಾಗಲೇ ವಿವಾದದಲ್ಲಿ ಬಳಲಿರುವ, ತಂಟೆ ತಕರಾರುಗಳಿಂದ ಬೇಸತ್ತ ಸುದ್ದಿಗಳು ಕೆಂಡಸಂಪಿಗೆಯಲ್ಲಿ ಅರಳುವುದು ಬೇಡ ಅಂತಾ ನನ್ನ ಪ್ರಾಮಾಣಿಕ ಅನಿಸಿಕೆ.

  2. basavakumar t.n:

    kendasampige hesaru mattu vihaya eradu chennagide.
    abhinandanegalondige.
    basavakumar.
    kodikal,mangalore.

  3. ನೂರ್ ಜಹಾನ್:

    ನಮ್ಮ ಕ್ಯಾ೦ಪಸ್ನಲ್ಲಿರುವ ಮರದಲ್ಲಿ ಕೆ೦ಡಸ೦ಪಿಗೆ ಅರಳಿ ಅದರ ಪರಿಮಳ ಈ ವರ್ಷ ಹೆಚ್ಚಾಗಿದೆ.

  4. sumi:

    very disturbing

  5. jitendra:

    dear editor
    website nodide.. columns and concept chennagide… but clear agi odoke agtilla…

  6. jitendra:

    dear editor
    neevu kuuda a ghatanege pratyaksha saakshi agiruvudarinda suddiyannu innastu vistaaravaagi bareya bahudittu…. pustaka bidugageya hindina dinavee (sunday) adarallina amshagala ottu saara prakatisuva muulaka, maadyamagalu (some news papers and tv channels)vivaada huttu hakuva mulaka agabahudagidda gaayakke modale uppu savaridavu… odugara kutuhaala tanisalu hoogi vivada srustisidantaayitu…
    modalu banjageere … iga vishvanath….
    mundenaguvudo kaadu nodabeku….
    vivadada nepadalladaru kannada pustakagalige pukkate prachara siguttiruvudantu kushiya sangatiye…..

  7. ರಾಮು:

    `ಹಕ್ಕಿ ಬೇಕೇ ಎಂದು ಬಾಂಬ್‌ ಸ್ಫೋಟಿಸಿಕೊಂಡು ` ಬರೇ ಸುದ್ದಿಯ ಹಾಗಿಲ್ಲ. ನಮ್ಮ ಒಳಕ್ಕಿಳಿದು ಕಲಕುವ ಹಾಗೆ ಇದೆ. ನಮ್ಮಕಾಡುಗಳ ನಕ್ಸಲೈಟ್ ಕಂದಮ್ಮಗಳನ್ನೂ ನೆನಪಿಸುತ್ತಾ ಈ ಸುದ್ದಿ ನಮ್ಮೆದೆಯ ಮೂಗುಗಾಯದ ಮೇಲೆ ಬೆರಳಾಡಿಸುತ್ತದೆ.

  8. jyotiguruprasad:

    very much moving,responsible and relevant presentation of a good editor.’hakki beke…’ article odi karulu churukkennuttide.

  9. ಸುಪ್ರೀತ್.ಕೆ.ಎಸ್:

    ಕ್ಯಾಂಟರ್‌ಬರಿ ಕಥೆಗಳು

    ಭೈರಪ್ಪನವರ ‘ಗ್ರಹಣ’ ಕಾದಂಬರಿಯಲ್ಲಿ ಸಹ ಇಂಥದ್ದೊಂದು ಸನ್ನಿವೇಷ ಬರುತ್ತದೆ. ‘ಮಠ’ದ ಸ್ವಾಮಿ ಮದುವೆಯಾಗ ಬಯಸಿದಾಗ ಜನರೆಲ್ಲಾ ಸ್ವಾಮಿಜಿಗೆ ಗ್ರಹಣ ಬಡಿದಿದೆ ಎಂದು ಭಾವಿಸಿರ್ತಾರೆ…

  10. d.sabhagani:

    Dear Rasheed,
    Is Dr. Williams only trying to be in the news? Please see his website (http://www.archbishopofcanterbury.org.) which clarifies:
    The Archbishop made no proposals for sharia in either the lecture or the interview, and certainly did not call for its introduction as some kind of parallel jurisdiction to the civil law.
    In his lecture, the Archbishop sought carefully to explore the limits of a unitary and secular legal system in the presence of an increasingly plural (including religiously plural) society and to see how such a unitary system might be able to accommodate religious claims….(”if we are to think intelligently about the relations between Islam and British law, we need a fair amount of ‘deconstruction’ of crude oppositions and mythologies, whether of the nature of sharia or the nature of the Enlightenment”)

  11. jithendra:

    askar nalli barateeyara paalu ide….. hechhina suddige nale patrike nodi….

  12. mayura:

    It is not surprising that there is untouchability in Yemen. In fact, Islam itself clearly divides mankind into Momin(Believers) and Kaafir(Non-believers). So this is not surprising at all.

    The issue is whether these ethopian migrants have converted to islam and are still being discriminated against. If that is the case, then the myth that Islam heralds brotherhood and is egalitarian religion is disproved.

  13. jyotiguruprasad:

    Samajavadhi YEMENallu asprishyate iruvudu thilidu bahala novaythu. Idu manushyatvada kaggole. Manassina kobbina thiligeditanada prabhava.Elliyavarege maanaviyate janma thaleyuvudillavo alliyavarege yava dharma-sampattu-siddanta kelasakkebaradu. Thanks for this human insight..

  14. jinke subbanna:

    ೬೩,೦೦೦ ಕೋಟಿ ಸಾಲ/ಬಡ್ಡಿ ಮನ್ನಾ knee jerk reaction. ರೈತರು ಸಾಲದ ಸುಳಿಯಲ್ಲಿ ಸಿಕ್ಕಿಬೀಳಲು ಮುಖ್ಯ ಕಾರಣ ಉತ್ಪಾದನೆಗೆ ನ್ಯಾಯವಾದ ಬೆಲೆ ಸಿಗದಿರುವುದು. ಹಾಗಾಗಿ ಉತ್ಪಾದನೆಗೆ ನ್ಯಾಯವಾದ ಬೆಲೆ ದೊರಕಿಸುವುದೇ ಪರಿಹಾರ. ಸಾಲದ ಸುಳಿಯಿ೦ದ ಹೊರಗೆ ಬರಲು ೨-೩ ವರ್ಷ ಮರುಪಾವತಿ ರಜೆ ಕೊಡಲಿ. ಧನಾತ್ಮಕ ಪ್ರೇರಣೆ ಅಗತ್ಯ. ಉತ್ಫಾದನೆ ಮತ್ತು ಉತ್ಫಾದಕತೆಗೆ ಪ್ರೋತ್ಸಾಹ ಕೊಡಬೇಕು.ರಾಸಾಯನಿಕಗಳ ಬಳಕೆ ಮಿತಗೊಳಿಸುವ ಕುರಿತು ಗ೦ಭೀರ ಕೆಲಸ (ಚಿ೦ತನೆ ಅಲ್ಲ) ತುರ್ತಾಗಿ
    ಆಗಬೇಕು.
    ಸಾಲ ಪಡೆಯದ ರೈತರಿಗೆ ಅನ್ಯಾಯವಾಗಬಾರದು, ಮತ್ತು ನೈತಿಕತೆ ಎತ್ತಿಹಿಡಿಯುವುದು ಅತೀ ಅವಶ್ಯ, ಇದು ನ್ಯಾಯವಾದ ಬೆಲೆಯಿ೦ದ ಮಾತ್ರ ಸಾಧ್ಯ. ಉಸಿರು ಬಿಗಿಹಿಡಿಯಿರಿ, ಅಕ್ಕಿಗೆ, ಹಾಲಿಗೆ ಕನಿಷ್ಟ ರೂ೩೦, ಅಗತ್ಯ. ಬೇರೆ ಧಾನ್ಯ ಬೇಳೆ ಕಾಳುಗಳ ನ್ಯಾಯ ಬೆಲೆ ನನ್ನ ಅರಿವಿನ ಹೊರಗೆ. ವರಮಾನ ತೆರಿಗೆ ಮಿತಿಗಿ೦ತ ಕೆಳಗಿನವರಿಗೆ ಪಡಿತರ ವ್ಯವಸ್ಥೆಯಡಿ ಆಹಾರ ಧಾನ್ಯ ಸಿಗಲಿ.

  15. ambi:

    kendasampigeya antarjala roopiyagiddaru adara suvasane matra nijavaagiyu kampu.

  16. jyotiguruprasad:

    cricket suddi eshtu bega prakatisiddeeri! nanna maganigu kuda idannu nodi bahala kushiyaaitu.Bajji kade haagu whole indian team kade ETHICS ittu. Naavu gedvi…

  17. sritri:

    ಆವರಣ,ಆನುದೇವಾ,ಹಳ್ಳಿ ಹಕ್ಕಿಯ ಹಾಡು - ಇವುಗಳ ನಡುವೆ ಬಿರುಸಿನ ಸ್ಪರ್ಧೆ ಏರ್ಪಡಬಹುದು :)

  18. vivek prakash:

    namaskara,
    idondu nijikku adbhuta prayatna.
    adigara bagge kelavu srujanatmaka lekhana moodi barali
    endu aashisuttene.

    shubhashayagalondige..
    viveka.

  19. shreenidhi odilnala:

    kendasampige chennagide. hosa hosa vishayagalu bartha irli. best of luck.

ಪ್ರತಿಕ್ರಿಯಿಸಿ


© ಹಕ್ಕುಗಳು - ಲೆಮನ್-ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್
ನಮ್ಮ ಬಗ್ಗೆ,  ಸಂಪರ್ಕ: editor@kendasampige.com