ಈ ಚಿತ್ರದಲ್ಲಿ  ಮೊದಲ ಹಾಡಿನ ಭಾವದ ನೆಲೆಯಲ್ಲಿಯೇ ಚಿತ್ರದ ಕಥನವಿದೆ. ಚಿತ್ರ ತೆರೆದುಕೊಳ್ಳುತ್ತಿದ್ದಂತೆ ಈ ವಿಷಾದ ಭಾವವನ್ನು ಇನ್ನೊಂದು ರೀತಿಯಲ್ಲಿ ಸ್ಥಿರಪಡಿಸುತ್ತಾಳೆ ನಿರ್ದೇಶಕಿ. ಮದುವೆಗೆ ಸಿದ್ಧವಾಗುತ್ತಿರುವ ಮ್ಯಾಕ್ಸಿಮಾ ತನ್ನ ಸ್ಕರ್ಟಿನ ಸೊಂಟಕ್ಕಿರುವ ಬಟ್ಟೆಯ ಉದ್ದ ಸಾಲದೆಂದು ಕೂಗಾಡುವಾಗ ಮೆಲ್ಲನೆ ಹೆಜ್ಜೆ ಇಟ್ಟು ಬರುತ್ತಾಳೆ ಫಾಸ್ಟಾ. ಅವಳಿಗೆ ಎದುರಾಗುತ್ತದೆ ಮದುವೆಗೆ ಸಂಬಂಧಪಟ್ಟ ವಿಷಯ. ಮದುವೆ! ಅವಳಿಗೆ ಅಷ್ಟೇ ಸಾಕಾಗುತ್ತದೆ. ಗಂಡು-ಹೆಣ್ಣಿಗೆ ಸಂಬಂಧಿಸಿದ, ಅವರಿಬ್ಬರ ಸಮಾಗಮಕ್ಕೆ ಅನುವುಮಾಡಿಕೊಡುವ ವಿಷಯ!
 ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಪೆರು ದೇಶದ ʻದ ಮಿಲ್ಕ್ ಆಫ್‌ ಸಾರೋʼ ಕುರಿತು ಎ.ಎನ್. ಪ್ರಸನ್ನ ಬರಹ

 

ಪೆರು ಲ್ಯಾಟಿನ್ ಅಮೆರಿಕ ದೇಶಗಳಲ್ಲೊಂದು. ಆ‌ ದೇಶದಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಕಳೆದ ಶತಮಾನವಷ್ಟೇ ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಲ್ಯಾಟಿನ್ ಅಮೆರಿಕದ ಅನೇಕ ದೇಶಗಳಂತೆ ಪೆರು ಕೂಡ ವಸಾಹತು ಆಳ್ವಿಕೆಗೆ ಗುರಿಯಾಗಿತ್ತು. ಅದರೊಂದಿಗೆ ಅಂತರ್ ಯುದ್ಧಗಳು ಕೂಡ ಸಾಕಷ್ಟು ಸಂಭವಿಸಿ ಪೆರು ಎಲ್ಲ ದೃಷ್ಟಿಯಿಂದಲೂ ಜಗತ್ತಿನ ಗಮನ ಸೆಳೆಯುವ ಮಟ್ಟಿಗೆ ಅಭಿವೃದ್ಧಿ ಹೊಂದಿರಲಿಲ್ಲ. ಸರಿಸುಮಾರು ಇಂಥದೇ ಸ್ಥಿತಿಯಲ್ಲಿದ್ದ ಮೆಕ್ಸಿಕೋ ಮತ್ತು ಅರ್ಜಂಟೀನಾ ದೇಶಗಳು ಚಲನಚಿತ್ರಕ್ಕೆ ಸಂಬಂಧಿಸಿದಂತೆ ಸಾಧಿಸಿದ ಪ್ರಗತಿಯ ಮಟ್ಟವನ್ನು ತಲುಪಲಾಗಲಿಲ್ಲ.

(ಕ್ಲಾಡಿಯಾ ಲೋಸಾ)

1970ರ ನಂತರ ಚಲನಚಿತ್ರ ಉದ್ಯಮದಲ್ಲಿ ಒಂದಷ್ಟು ಚಟುವಟಿಕೆಗಳು ಕಂಡು ಬಂದು 1972 ರಲ್ಲಿ ಅಲ್ಲಿನ ಪ್ರಖ್ಯಾತ ಫುಟ್‌ಬಾಲ್ ಆಟಗಾರ ನಟಿಸಿದ ʻಚೋಲುʼ ಚಿತ್ರ ಸಾಕಷ್ಟು ಜನಪ್ರಿಯತೆ ಗಳಿಸಿತು. 21ನೇ ಶತಮಾನದಲ್ಲಿ ಹೊಲಟನ್ ರಿಲೇ ನಿರ್ಮಿಸಿದ ʻರೋಜಾ ಚುಂಬೆʼ ಹಾಗೂ ಡಾನಿಯಲ್ ಬಾರ್ಗಾ ವಿದಾ ನಿರ್ಮಾಣ ಮಾಡಿದ ʻಅಕ್ಟೋಬರ್ʼ ಜನಪ್ರಿಯತೆ ಗಳಿಸಿದವು. ಎಲ್ಲ ವಸಾಹತು ಆಳ್ವಿಕೆಗೆ ಒಳಪಟ್ಟ ದೇಶಗಳಂತೆ ಪೆರು ಜನರು ಕೂಡ ಅನೇಕ ಬಗೆಯ ಮಾನಸಿಕ ಹಾಗೂ ಇತರ ದೌರ್ಜನ್ಯಕ್ಕೆ ತುಳಿತಕ್ಕೆ ಒಳಗಾದವರೇ. ಇಂಥ ಹಿನ್ನಡೆಗಳ ನಡುವೆಯೂ ಅಲ್ಲಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಸೃಷ್ಟ್ಯಾತ್ಮಕ ಚಟುವಟಿಕೆಗಳು ಕಾಣಿಸಿಕೊಳ್ಳುತ್ತಲೇ ಇದ್ದವು.

2006ರಲ್ಲಿ ಕ್ಲಾಡಿಯಾ ಲೋಸಾಳ ʻಮೆಡಿನೋಸಾʼ ಚಿತ್ರ ನಿರ್ಮಾಣವಾಯಿತು. ಈಕೆ ಪೆರು ದೇಶದ ಪ್ರಖ್ಯಾತ ಬರಹಗಾರ ಹಾಗೂ 2010ರ ನೊಬೆಲ್ ಪ್ರಶಸ್ತಿ ವಿಜೇತ ಮರಿಯ ವರ್ಗಾಸ್‌ ಲೋಸಾನ ಸಂಬಂಧಿ. ಆ ಚಿತ್ರದಲ್ಲಿ ಕ್ಲಾಡಿಯಾ ಲೋಸಾ ಲ್ಯಾಟಿನ್‌ ಅಮೆರಿಕದ ಮತ್ತೊಂದು ದೇಶ ಕೊಲಂಬಿಯಾದ 1982ರ ನೊಬೆಲ್‌ ಪ್ರಶಸ್ತಿ ವಿಜೇತ ಗಾಬ್ರಿಯೆಲ್ ಗಾರ್ಸಿಯಾ ಮಾರ್ಕೆಸ್‌ನ ಬರಹಗಳು ಪ್ರಚುರಪಡಿಸಿದ ಮ್ಯಾಜಿಕಲ್ ರಿಯಲಿಸಂ ಅಂಶಗಳಿಂದ ಪ್ರಭಾವಿತಗೊಂಡು ಆ ಬಗೆಯದೇ ಅಂಶಗಳನ್ನು ತನ್ನ ಚಿತ್ರದಲ್ಲಿ ಅಳವಡಿಸಲು ಪ್ರಯತ್ನಿಸಿ ಯಶಸ್ವಿಯಾದಳು. ಅನಂತರ ಅವಳು 2009ರಲ್ಲಿ ತಯಾರಿಸಿದ ʻದ ಮಿಲ್ಕ್‌ ಆಫ್‌ ಸಾರೋʼ ಅನೇಕ ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿತು. ಈ ಚಿತ್ರಕ್ಕೆ ಸಂಬಂಧಿಸಿದಂತೆ ಕುತೂಹಲ ಅಂಶವೊಂದಿದೆ. ಇದರಲ್ಲಿ ನಟಿಸಿ ಸಾಕಷ್ಟು ಮನ್ನಣೆ ಗಳಿಸಿದ ಮೆಗಾಲಿ ಸೋಲಿ ಎಂಬ ನಟಿ ಚಿತ್ರದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದದ್ದು ಸೋಜಿಗವೇ. ಆಕೆ ಸಾಮಾನ್ಯ ಹಿನ್ನೆಲೆಯಲ್ಲಿ ಬಂದವಳು ಮತ್ತು ರಸ್ತೆಯಲ್ಲಿ ತಿಂಡಿತಿನಿಸುಗಳನ್ನು ಮಾರುವ ಕೆಲಸ ಮಾಡುವುದು ಆಕೆಯ ವೃತ್ತಿಯಾಗಿತ್ತು. ತನ್ನ ಚಿತ್ರದಲ್ಲಿ ನಟಿಸಲು ಅಗತ್ಯ ಸಾಮರ್ಥ್ಯ ಇರುವಂಥ ನಟಿಯನ್ನು ಹುಡುಕುತ್ತಿರುವಾಗ ಕ್ಲಾಡಿಯಾ ಲೋಸಾಗೆ ಕಂಡದ್ದು ಮೆಗಾಲಿ ಸೋಲಿ. ಅವಳಲ್ಲಿ ಅಡಗಿರುವ ಶಕ್ತಿಯನ್ನು ಗುರುತಿಸಿ, ಅಭಿನಯವಷ್ಟೇ ಅಲ್ಲದೆ ಚಿತ್ರದಲ್ಲಿ ಹಾಡುವುದಕ್ಕೂ ಕೂಡ ಅವಕಾಶ ಕಲ್ಪಿಸಿದಳು.

ʻದ ಮಿಲ್ಕ್ ಆಫ್‌ ಸಾರೋʼ ಚಿತ್ರದ ಕಥಾವಸ್ತು ಹೀಗಿದೆ: ಬಸುರಿಯೊಬ್ಬಳು ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಆ ಬಳಿಕ  ಹೆಣ್ಣು ಮಗುವೊಂದು ಹುಟ್ಟುತ್ತದೆ. ಆ ತಾಯಿಯು, ತಾನು ಮಗುವಿಗೆ ಶೋಕವೆನ್ನುವ ಕಹಿ ಹಾಲು ಕುಡಿಸುತ್ತಿದ್ದೇನೆ ಎಂಬ ಮನಃಸ್ಥಿತಿಯಿಂದ ಬೆಂಡಾಗಿರುತ್ತಾಳೆ. ಈ ದುರವಸ್ಥೆಯ ಹಿನ್ನೆಲೆಯಲ್ಲಿ ಹುಟ್ಟಿದ ಮಗುವಿಗೂ ಆ ಭಾವನೆಯೇ ತುಂಬಿರುತ್ತದೆ. ಬೆಳೆದ ಮೇಲೆ ಭಯ, ಹಿಂಜರಿಕೆ ಮತ್ತು ಪುರುಷರನ್ನು ಕಂಡರೆ ದ್ವೇಷ ನೆಲೆಗೂಡಿರುತ್ತದೆ. ಈ ಹಿನ್ನೆಲೆಯವಳು ಆ ಭಾವನೆಯನ್ನು ನಿಯಂತ್ರಿಸಿಕೊಂಡು ಸ್ವತಂತ್ರಳಾಗುವ ಬಗೆಯನ್ನು ಚಿತ್ರ ತೆರೆದಿಡುತ್ತದೆ.

ʻದ ಮಿಲ್ಕ್‌ ಆಫ್‌ ಸಾರೋʼ ಚಿತ್ರ ಪ್ರಾರಂಭವಾಗುವುದಕ್ಕೆ ಮುಂಚೆಯೇ ರೂಪಕವೆನಿಸುವ ಕಪ್ಪನೆ ಫ್ರೇಮ್‌ಗಳ ಹಿನ್ನೆಲೆಯಲ್ಲಿ ಸಾಕಷ್ಟು ದೀರ್ಘ ಅವಧಿಯ ವಿಷಾದ ಪೂರ್ಣ ಹಾಡು ಕೇಳಿಸುತ್ತದೆ. ಇನ್ನೂ ಹಾಡು ಮುಗಿದಿರುವುದಿಲ್ಲ, ಆಗಲೇ ತಾನೆಷ್ಟು ಬೇಡಿಕೊಂಡರೂ ಬಿಡದೆ ಅತ್ಯಾಚಾರ ಮಾಡಿದ ವಿವರಗಳನ್ನು ನೆನಪಿಸಿಕೊಂಡು ಹಾಡುತ್ತಿರುವ ವಯಸ್ಸಾದ ಮುದುಕಿಯ ಮುಖ ನಮಗೆದುರಾಗುತ್ತದೆ. ನಮಗೆ ಕಾಣುವುದು ಕೇವಲ ವಯಸ್ಸಾದ ಹೆಂಗಸಷ್ಟೇ ಅಲ್ಲ. ನೆಮ್ಮದಿಯ ಸೋಂಕಿಲ್ಲದ ಆಕೆಯ ಮುಖಭಾವ ಮತ್ತು ಇಡೀ ಮುಖದ ತುಂಬಾ ಹರಡಿದ ಅನೇಕ ಸುಕ್ಕುಗಳು. ಕೆಲವು ಸೆಕೆಂಡುಗಳ ನಂತರ ಅವಳನ್ನು ಸಂತೈಸುವುದಕ್ಕೆ ಇನ್ನೊಂದು ಹೆಣ್ಣಿನ ಮುಖ ಅತಿಸಮೀಪ ಚಿತ್ರಿಕೆಯಲ್ಲಿ ಕಾಣುತ್ತೇವೆ. ನಂತರ ಅವಳೇ ಫಾಸ್ಟಾ ಎಂದು ಗೊತ್ತಾಗುತ್ತದೆ. ಅನಂತರವೇ ಮುಖ್ಯ ಚಿತ್ರ ಪ್ರಾರಂಭ.

ಅಂತರ್ ಯುದ್ಧಗಳು ಕೂಡ ಸಾಕಷ್ಟು ಸಂಭವಿಸಿ ಪೆರು ಎಲ್ಲ ದೃಷ್ಟಿಯಿಂದಲೂ ಜಗತ್ತಿನ ಗಮನ ಸೆಳೆಯುವ ಮಟ್ಟಿಗೆ ಅಭಿವೃದ್ಧಿ ಹೊಂದಿರಲಿಲ್ಲ. ಸರಿಸುಮಾರು ಇಂಥದೇ ಸ್ಥಿತಿಯಲ್ಲಿದ್ದ ಮೆಕ್ಸಿಕೋ ಮತ್ತು ಅರ್ಜಂಟೀನಾ ದೇಶಗಳು ಚಲನಚಿತ್ರಕ್ಕೆ ಸಂಬಂಧಿಸಿದಂತೆ ಸಾಧಿಸಿದ ಪ್ರಗತಿಯ ಮಟ್ಟವನ್ನು ತಲುಪಲಾಗಲಿಲ್ಲ.

ಚಿತ್ರದಲ್ಲಿ ಹಾಡುಗಳು ಬಹುಮುಖ್ಯವಾಗಿವೆ. ಭಾವಸಾಂದ್ರತೆಯ ಸಂದರ್ಭಗಳು ಉಂಟಾದಾಗ ನಿರ್ದೇಶಕಿ ನಿರೂಪಣೆಗೆ ಹಾಡುಗಳನ್ನು ಬಳಸುತ್ತಾಳೆ. ಈ ಬಗೆಯ ನಿರೂಪಣೆ ನಿಜಕ್ಕೂ ವಿಶೇಷ. ಹಾಡುಗಳು ಪದ್ಯವನ್ನು ವಾಚಿಸಿದ ರೀತಿಯಲ್ಲಿರುತ್ತವೆ ಮತ್ತು ಯಾವುದೇ ಬಗೆಯ ಭಾವೋನ್ಮಾದ ಇರುವುದಿಲ್ಲ.

ಮೊದಲ ಹಾಡಿನ ಭಾವದ ನೆಲೆಯಲ್ಲಿಯೇ ಚಿತ್ರದ ಕಥನವಿದೆ. ಚಿತ್ರ ತೆರೆದುಕೊಳ್ಳುತ್ತಿದ್ದಂತೆ ಈ ವಿಷಾದ ಭಾವವನ್ನು ಇನ್ನೊಂದು ರೀತಿಯಲ್ಲಿ ಸ್ಥಿರಪಡಿಸುತ್ತಾಳೆ ನಿರ್ದೇಶಕಿ. ಮದುವೆಗೆ ಸಿದ್ಧವಾಗುತ್ತಿರುವ ಮ್ಯಾಕ್ಸಿಮಾ ತನ್ನ ಸ್ಕರ್ಟಿನ ಸೊಂಟಕ್ಕಿರುವ ಬಟ್ಟೆಯ ಉದ್ದ ಸಾಲದೆಂದು ಕೂಗಾಡುವಾಗ ಮೆಲ್ಲನೆ ಹೆಜ್ಜೆ ಇಟ್ಟು ಬರುತ್ತಾಳೆ ಫಾಸ್ಟಾ. ಅವಳಿಗೆ ಎದುರಾಗುತ್ತದೆ ಮದುವೆಗೆ ಸಂಬಂಧಪಟ್ಟ ವಿಷಯ. ಮದುವೆ! ಅವಳಿಗೆ ಅಷ್ಟೇ ಸಾಕಾಗುತ್ತದೆ. ಗಂಡು-ಹೆಣ್ಣಿಗೆ ಸಂಬಂಧಿಸಿದ, ಅವರಿಬ್ಬರ ಸಮಾಗಮಕ್ಕೆ ಅನುವುಮಾಡಿಕೊಡುವ ವಿಷಯ! ಈ ಆಲೋಚನೆಯೇ ಸಾಕು, ಅವಳ ಮನಸ್ಸು ಎತ್ತಲೋ ಹಾರುತ್ತದೆ; ದೃಷ್ಟಿ ಎಲ್ಲೋ ನೋಡಿಯೂ ನೋಡದ ಕಡೆಗೆ. ಅವಳು ಕಷ್ಟದಿಂದ ಹೆಜ್ಜೆ ಇಡುತ್ತಿರುವುದು ಕಾಣುತ್ತದೆ. ಒಂದೆರಡು ಹೆಜ್ಜೆಗಳಷ್ಟೇ. ನಂತರ ಕುಸಿದು ಬೀಳುತ್ತಾಳೆ. ಪುರುಷ ಸಂಬಂಧಿತ ವಿಷಯ ಎಂದ ಕೂಡಲೆ ಫಾಸ್ಟಾಳ ಪ್ರತಿಕ್ರಿಯೆ ಹೇಗಿರಬಹುದು ಎಂದು ನಮಗೆ ಮನದಟ್ಟಾಗುತ್ತದೆ. ಹೀಗಾಗಿ ಒಬ್ಬಂಟಿಯಾಗಿರುವುದೇ ಅವಳ ಮನಸ್ಸಿನ ಚೌಕಟ್ಟು. ಅದು ಪ್ರಕೃತಿಧರ್ಮಕ್ಕೆ ವಿರುದ್ಧವಾಗಿದ್ದರೂ ಸರಿಯೇ. ಒಟ್ಟಾರೆಯಾಗಿ ಬರಡು. ಎಲ್ಲ ಬಗೆಯ ಹೂ-ಹಸಿರುಗಳಿಂದ ದೂರ.

ಫಾಸ್ಟಾಳನ್ನು ಗುಣಪಡಿಸುವುದಕ್ಕೆ ಅವಳ ಚಿಕ್ಕಪ್ಪ ಡಾಕ್ಟರ್ ಬಳಿಗೆ ಕರೆದುಕೊಂಡು ಹೋಗುತ್ತಾನೆ. ಅವಳನ್ನು ಪರೀಕ್ಷಿಸಿದ ನಂತರ ಡಾಕ್ಟರ್ ಚಿಕ್ಕಪ್ಪನ ಜೊತೆ ಮಾತನಾಡುತ್ತ, ಫಾಸ್ಟಾ ಯೋನಿಯಲ್ಲಿ ಆಲೂಗಡ್ಡೆ ಇಟ್ಟುಕೊಂಡರುವುದು ಗೊತ್ತಿದೆಯೇ ಎಂದು ಕೇಳಿ ದಂಗುಬಡಿಸುತ್ತಾನೆ. ಅದರ ಬದಲು ಬೇರೆ ಯಾವುದಾದರೂ ಗರ್ಭನಿರೋಧಕ ವಸ್ತುವನ್ನು ಬಳಸಬಹುದು ಎಂದೂ ತಿಳಿಸುತ್ತಾನೆ. ಡಾಕ್ಟರ್ ಹೇಳಿದ್ದನ್ನು ಫಾಸ್ಟಾ ಸುತರಾಂ ಒಪ್ಪುವುದಿಲ್ಲ. ಅದನ್ನು ಬಾಯಿಬಿಟ್ಟು ಹೇಳದೆ ಅವರನ್ನು ಹಿಗ್ಗಾಮುಗ್ಗಾ ಥಳಿಸುತ್ತೇನೆ ಎನ್ನುವಂತೆ ರಭಸದ ಹೆಜ್ಜೆಗಳನ್ನಿಟ್ಟು ಕುದಿಯುತ್ತ ಹೊರಗೆ ಬರುತ್ತಾಳೆ.

ಊರಿನಲ್ಲಿ ಸತ್ತ ಅವಳ ಅಮ್ಮನನ್ನು ಇನ್ನಷ್ಟು ಸಮಯ ಕಾಪಾಡಿಕೊಳ್ಳುವ ಕ್ರಿಯೆಯಲ್ಲಿ, ಮಾತಿನ ಜೊತೆ ಮತ್ತೆ ಹಿನ್ನೆಲೆಯಲ್ಲಿ ಹಾಡು ಪ್ರವೇಶಿಸುತ್ತದೆ. ಮತ್ತೆ ಅದೇ ವಿಷಾದದ ಭಾವ. ಮಾತು ಅತಿ ಕಡಿಮೆ. ಎಲ್ಲವೂ ನಮ್ಮ ಕಣ್ಣಿಗೆ ಹತ್ತಿರವಾಗುತ್ತವೆ ಹೆಚ್ಚಾಗಿ ಮಿಡ್‌ ಶಾಟ್‌ಗಳಲ್ಲಿ.
ಸತ್ತ ಅಮ್ಮನನ್ನು ಹೂಳಲು ಕಾಫಿನ್ ಬೇಕಾಗುವುದರಿಂದ ಅದನ್ನು ತಯಾರಿಸುವವನ ಬಳಿಗೆ ಅವಳ ಚಿಕ್ಕಪ್ಪ ಹೋಗುತ್ತಾನೆ. ಉದ್ದಾನುದ್ದ ಹಾಲ್‌ನಲ್ಲಿ ಗೋಡೆಗೆ ಒರಗಿಸಿಟ್ಟಿದ್ದ ಹತ್ತಾರು ಬಗೆಯ ಕಾಫಿನ್‌ಗಳು ಸತ್ತವರಿಗಿಂತ ಅವೇ ಪ್ರಮುಖವಾಗುವ ವಿಲಕ್ಷಣವನ್ನು ಎತ್ತಿ ತೋರಿಸುತ್ತವೆ.

ಊರಿನಲ್ಲೊಬ್ಬಳಿಗೆ ಫಾಸ್ಟಾಳ ಬಗ್ಗೆ ಇನ್ನಿಲ್ಲದಷ್ಟು ಮರುಕ. ಅವಳಿಗೊಂದು ಕೆಲಸ ಕೊಡಿಸುತ್ತಾಳೆ. ಆಯಿಂದಾ ಎಂಬುವಳ ಮನೆಯಲ್ಲಿ ಕೆಲಸ ಮಾಡುವುದು. ಪಿಯಾನೋ ವಾದಕಿಯಾದ ಆಯಿಂದಾ ಫಾಸ್ಟಾಳಿಗಿಂತ ಸಾಕಷ್ಟು ವಯಸ್ಸಾಗಿರುವಾಕೆ. ಮಗನಿದ್ದರೂ ಅವನೆಲ್ಲೋ ಬೇರೆಡೆ ಇದ್ದು ಒಂಟಿ ಇರುವಾಕೆ. ಆ ಮನೆ ಇರುವುದು ಅದೆಷ್ಟೋ ಎಕರೆ ಹೂಗಿಡ, ಮರಗಳು ತುಂಬಿ ಹಸಿರು ಜಿನುಗುವ ಗಾರ್ಡನ್‌ ನಡುವೆ.
ಅವುಗಳನ್ನು ನೋಡಿಕೊಳ್ಳುವುದಕ್ಕೆ ಒಬ್ಬ ಮೇಸ್ತ್ರಿ. ಆ ಮನೆ ಇರುವ ಪ್ರದೇಶದ್ದೊಂದು ವಿಶಿಷ್ಟತೆ. ಅದರ ಮುಂಬಾಗಿಲು ಎನ್ನುವಂಥ ಶಟರ್‌ ಓಪನ್‌ ಮಾಡಿದಾಗ ಮುಂದುಗಡೆಯೇ ಗಿಜಿಗಿಜಿ ಎನ್ನುವ ಸಣ್ಣಸಣ್ಣ ಅಂಗಡಿಗಳು, ತಳ್ಳುವ ಗಾಡಿಗಳು ಹಾಗೂ ಜನರ ಓಡಾಟದಿಂದ ಕಿಕ್ಕಿರಿದ ವಿಸ್ತಾರ. ಹೀಗೆ ಒಂದಕ್ಕೊಂದು ತದ್ವಿರುದ್ಧವಾಗಿದ್ದು ಫಾಸ್ಟಾಳ ಮನಸ್ಸಿನ ಇನ್ನೊಂದು ಮಗ್ಗುಲನ್ನು ಬಿಂಬಿಸುತ್ತದೆ.

ಆಯಿಂದಾಳಂಥ ಶ್ರೀಮಂತಳ ಮನೆಯಲ್ಲಿ ಕೆಲಸ ಮಾಡಲು ಎಂಥವರಿಗೂ ಇಷ್ಟವೇ. ಕೆಲಸದ ಪಾಡಿಗೆ ಕೆಲಸವಾಗುತ್ತದಷ್ಟೆ. ಮನೆಯಾಕೆಗೆ ಕೆಲಸದಾಕೆ ಇಷ್ಟವಾಗಬೇಕೆನ್ನುವ ಅಗತ್ಯವಿರುವುದಿಲ್ಲ. ಆದರೆ ಫಾಸ್ಟಾಳ ವಿಷಯದಲ್ಲಿ ಆಗುವುದೇ ಬೇರೆ. ಆಯಿಂದಾಳಿಗೆ ಅವಳು ಮಾಡುವ ಕೆಲಸಕ್ಕಿಂತ ಅವಳು ಗುನುಗುನಿಸುವ ಹಾಡು, ಅದರ ಸಾಲುಗಳು ಇಷ್ಟ! ಆ ಹಾಡುಗಳು ವಿಷಾದವನ್ನೇ ಒಂದಿಲ್ಲೊಂದು ಬಗೆಯಲ್ಲಿ ಹೊಮ್ಮಿಸುವಂಥವು. ಅಷ್ಟೆಲ್ಲ ಶ್ರೀಮಂತಿಕೆಯಿದ್ದೂ ಆಕೆ ರಸರಹಿತ ಒಂಟಿ ಜೀವ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಹಿಂದೊಂದು ಸಲ ಹಾಡಿದ್ದನ್ನು ಮತ್ತೆ ಹಾಡು ಎಂದು ಆಯಿಂದಾ ಕೇಳಿದರೆ ಅದು ತನ್ನಷ್ಟಕ್ಕೆ ಹುಟ್ಟಿ ಬರುವ ಹಾಡು ಮತ್ತೆ ಹಾಡಲು ಬರುವುದಿಲ್ಲ ಎಂದು ಬಾಯಿ ಬಿಟ್ಟು ಹೇಳದೆ ಕೇವಲ ಸೂಚಿಸುತ್ತಾಳೆ ಫಾಸ್ಟಾ! ಇದಕ್ಕೆ ಆಯಿಂದಾ ಮರು ಪ್ರಶ್ನೆ ಮಾಡುವುದಿಲ್ಲ.

ಫಾಸ್ಟಾಳ ತಾಯಿಗೆ ಇನ್ನೂ ಕಾಫಿನ್‌ ಸಿದ್ಧವಾಗಿರುವುದಿಲ್ಲ. ಆಗ ಚಿಕ್ಕಪ್ಪ ಫಾಸ್ಟಾಳನ್ನು ಭೇಟಿ ಮಾಡುವ ದೃಶ್ಯ ನಿಜಕ್ಕೂ ಮಾರ್ಮಿಕ. ದೊಡ್ಡ ʻಇಂಟುʼ ಮಾರ್ಕಿನ ಹಾಗೆ ಹಾಕಿದ್ದ ಬಟ್ಟೆ ಮುನ್ನೆಲೆಯಲ್ಲಿ. ಹಿಂದೆ ಫಾಸ್ಟಾ ಮತ್ತು ಅವಳ ಚಿಕ್ಕಪ್ಪ ಕುಳಿತಿರುತ್ತಾರೆ. ಅವಳ ತಾಯಿಗೆ ಅವಶ್ಯಕವಾದ ಕಾಫಿನ್‌ ಕೊಳ್ಳಲು ಬೇಕಾದ ಹಣದ ಬಗ್ಗೆ ಆಡಿದ ಮಾತು ಮುಂದುವರಿಸುತ್ತಾನೆ. ಮನೆಯಾಕೆ ಏನಾದರೂ ಕೊಟ್ಟಿದ್ದಾಳೆಯೇ ಎಂಬ ಪ್ರಶ್ನೆಗೆ ಎಂದಿನಂತೆ ಗಂಭೀರ ಮುಖಮುದ್ರೆಯಿಂದ ತಿಂಗಳ ಕೊನೆಗೆ ಸಿಗುತ್ತದೆ ಎನ್ನುತ್ತಾಳೆ. ಹಾಗಿದ್ದರೆ ತಾನೇ ಅದಕ್ಕೆ ವ್ಯವಸ್ಥೆ ಮಾಡುತ್ತೇನೆಂದು ಹೇಳುತ್ತಾನೆ ಚಿಕ್ಕಪ್ಪ. ಈ ದೃಶ್ಯದಲ್ಲಿ ಲೌಕಿಕಕ್ಕೆ ಸಂಬಂಧಿಸುವುದರ ಜೊತೆ ಇನ್ನೂ ಹಲವನ್ನು ʻಇಂಟುʼ ಸಾಂಕೇತಿಸುವ ಸಾಧ್ಯತೆಯನ್ನು ಕಾಣಬಹುದು.

ಒಮ್ಮೆ ಆಯಿಂದಾಳ ಕತ್ತಿನಲ್ಲಿನ ಮುತ್ತಿನ ಸರ ಕಳಚಿ ಬಿದ್ದು ಮುತ್ತುಗಳು ನೆಲದ ಮೇಲೆ ಬೀಳುತ್ತವೆ. ಇದೂ ಕೂಡ ಚಿಂದಿಯಾದ ಅವಳ ಮನಃಸ್ಥಿತಿಯನ್ನು ಬಿಂಬಿಸುತ್ತದೆ. ಫಾಸ್ಟಾ ಅವುಗಳಲ್ಲಿ ಕೆಲವನ್ನು ಎತ್ತಿ ಕೊಡುತ್ತಾಳೆ. ಅವನ್ನು ಅಂಗೈ ಅಗಲದ ಹರಿವಾಣದಲ್ಲಿ ಹಾಕಿಡುತ್ತಾಳೆ ಆಯಿಂದಾ. ಅಷ್ಟೇ ಅಲ್ಲದೆ ಫಾಸ್ಟಾ ತನಗಿಷ್ಟವೆನಿಸುವ ಹಾಡು ಹಾಡಿದಾಗಲೆಲ್ಲ ಒಂದೊಂದು ಮುತ್ತನ್ನು ಅವಳಿಗೆ ಕೊಡುತ್ತಾಳೆ! ವಿಶೇಷವೆಂದರೆ ಅದನ್ನು ಪಡೆಯುವಾಗ ಅಥವ ಆ ನಂತರ ಸಂತೋಷದ ಛಾಯೆ ಫಾಸ್ಟಾಳ ಮುಖದಲ್ಲಿರುವುದಿಲ್ಲ. ಒಂದು ಬಗೆಯ ನಿರ್ಭಾವುಕತೆ. ಅದೊಂದು ರೀತಿ ಒಬ್ಬರು ಇನ್ನೊಬ್ಬರನ್ನು ಪ್ರತಿಫಲಿಸುತ್ತಾರೆ ಎನ್ನುವ ಹಾಗೆ.

ಆಯಿಂದಾಳ ಗಾರ್ಡನ್ನಿನ ಮೇಸ್ತ್ರಿ ಫಾಸ್ಟಾಳ ಹಿತೈಶಿ. ಅವಳು ಮನೆ ಮುಂದಿನ ಶಟರ್‌ ತೆಗೆಯುವುದು ಅವನಿಗೆ ಮಾತ್ರ. ಅದೂ ಬಂದಿರುವವನು ಅವನೇ ಎಂದು ಖಚಿತಗೊಂಡ ನಂತರ. ಅವನು ಓಡಾಡುವುದು ಸೈಕಲ್‌ನಲ್ಲಿ. ಅವಳು ಸುಧಾರಿಸಬೇಕೆಂದು ಅವನ ಅಪೇಕ್ಷೆ. ಇದನ್ನು ಬಿಂಬಿಸುವ ರೂಪಕದಲ್ಲಿ ಸೈಕಲನ್ನು ಭುಜಕ್ಕೇರಿಸಿಕೊಂಡು ನೂರಾರು ಮೆಟ್ಟಿಲುಗಳ ಎತ್ತರವನ್ನು ಹತ್ತುತ್ತಿರುವ ಅವನು ಮತ್ತು ಒಂದಷ್ಟು ದೂರದಲ್ಲಿ ಅವಳನ್ನು ಕಾಣುತ್ತೇವೆ.

ಫಾಸ್ಟಾ ಮತ್ತು ಆಯಿಂದಾಳ ಒಡನಾಟದ ನಡುವೆಯೇ ಮಾರ್ಕೋಸ್‌ನೊಂದಿಗೆ ಮ್ಯಾಕ್ಸಿಮಾಳ ಮದುವೆಗೆ ಸಂಬಂಧಿಸಿದ ಸಂಗತಿಗಳು ಸಮಾನಾಂತರವಾಗಿ ಜರುಗುತ್ತಿರುತ್ತವೆ. ಜೊತೆಗೆ ಊರಿನವರು ಸಂಭ್ರಮಿಸುವುದು ಕೂಡ. ಇವೆಲ್ಲದರ ನಡುವೆ ಅವರಿರುವ ಅಂಗಳದಲ್ಲಿಯೇ ಸಾಕಷ್ಟು ಉದ್ದಗಲ ತೋಡಿ ಅದಕ್ಕೆ ಪ್ಲಾಸ್ಟಿಕ್‌ ಶೀಟೊಂದನ್ನು ಅಳವಡಿಸಿ ಮಕ್ಕಳಾಡುವ ಸ್ವಿಮಿಂಗ್‌ ಪೂಲ್‌ ಸಿದ್ಧಪಡಿಸುವುದು ವಿಶೇಷವೆನಿಸುತ್ತದೆ. ಅಲ್ಲಿಯೂ ಮುನ್ನೆಲೆಗೆ ಬರುವುದು ಮಕ್ಕಳು ಮಾತ್ರ. ಆದರೆ ಅದು ಸೂಚಿಸುವ ಸಂತಾನ ಎನ್ನುವುದು ಕೂಡ ಫಾಸ್ಟಾಳಿಗೆ ಬೇಡವಾದ ಸಂಗತಿ.

ಮ್ಯಾಕ್ಸಿಮಾಳನ್ನು ಮದುವೆಯಾಗಲಿರುವ ಮಾರ್ಕೋಸ್‌ನ ಗೆಳೆಯ ಫಾಸ್ಟಾಳಲ್ಲಿ ಅನುರಕ್ತನಾಗುತ್ತಾನೆ. ನಿರೀಕ್ಷಿಸಿದ ಹಾಗೆ ತಕ್ಷಣವೇ ಅವಳಿಂದ ಉತ್ತೇಜನವಿರುವುದಿಲ್ಲ. ಆದರೆ ಅವಳಿಗೆ ಬಾಳಿನ ಹೊಸ ಹೊಳಹುಗಳು ದೊರಕುತ್ತವೆ; ಅವಳನ್ನು ಯೋಚನೆಗೆ ಹಚ್ಚುತ್ತವೆ. ಹಿತ ಭಾವಗಳು ಇಣುಕುತ್ತವೆ.

ಆಯಿಂದಾಳ ಮನೆಯಲ್ಲಿರುವ ಪಿಯಾನೋ ತುಂಡಾಗಿ ಬಿದ್ದಿರುತ್ತದೆ. ಹಾಗಿದ್ದರೂ ಅದರಲ್ಲಿ ಶಬ್ದ ತರಂಗಗಳು ಹೊಮ್ಮುವ ಸಾಧ್ಯತೆಗಳನ್ನು ಗುರುತಿಸುತ್ತಾಳೆ ಫಾಸ್ಟಾ. ಇದರಿಂದ ಮೃದು ಭಾವಗಳ ತುಣುಕುಗಳು ಇರುವುದನ್ನು ಸೂಚಿಸುತ್ತಲೇ ಹೊಸ ಪಿಯಾನೋ ಬಂದದ್ದನ್ನು ಸಂಭ್ರಮಿಸುತ್ತಾಳೆ ಫಾಸ್ಟಾ. ಕ್ರಮೇಣ ಅವಳು ಕೆಂಪು ಪಕಳೆಗಳಿರುವ ಹೂವನ್ನು ತುಟಿಗಂಟಿಸಿಕೊಂಡು ತನ್ನಲ್ಲಾದ ಬದಲಾವಣೆಯನ್ನು ತೋರುತ್ತಾಳೆ. ಗಾರ್ಡನ್ನಿನ ಮೇಸ್ತ್ರಿ ಸಾಮಾನ್ಯಳಂತಿರಲು ಅವಳನ್ನು ಹುರಿದುಂಬಿಸುತ್ತ, ಸಾವನ್ನು ಬಿಟ್ಟರೆ ಬೇರೆಲ್ಲವನ್ನೂ ನಿಭಾಯಿಸಬಹುದು ಎಂದದ್ದಕ್ಕೆ ಅತ್ಯಾಚಾರ ಮಾತ್ರ ಹಾಗಲ್ಲವೆಂದು ಅಬ್ಬರಿಸುತ್ತಾಳೆ.

ಆಯಿಂದಾಳ ಹೊಸ ಪಿಯಾನೋ ಮೊಳಗಲು ತೊಡಗುತ್ತದೆ. ಅದು ಫಾಸ್ಟಾಳಲ್ಲಿ ಮೃದು ಭಾವನೆಗಳ ಬುಗ್ಗೆ ಏಳುವಂತೆ ಮಾಡುತ್ತದೆ. ಅತ್ಯಂತ ದೀರ್ಘ ಅವಧಿಯ ಈ ದೃಶ್ಯದಲ್ಲಿ ಬಿರುಸಿನಿಂದ ಅಷ್ಟು ದೂರದಿಂದ ಧಾವಿಸುವ ಫಾಸ್ಟಾ, ಕೊನೆಗೆ ನಿಲ್ಲುವುದು ಆಯಿಂದಾಳ ವಾದ್ಯ ಗೋಷ್ಠಿಯ ವೇದಿಕೆಯ ಪಕ್ಕದಲ್ಲಿ. ವಾದ್ಯ ಗೋಷ್ಠಿ ಮುಗಿದು ಆಯಿಂದಾಳಿಗೆ ಚಪ್ಪಾಳೆಗಳ ಸುರಿಮಳೆಯಾದರೆ ಫಾಸ್ಟಾಳಲ್ಲಿ ಬೇರೊಂದು ಬಗೆಯ ಹಬ್ಬಕ್ಕೆ ಸಿದ್ಧತೆ ಶುರುವಾಗುತ್ತದೆ.

ಅವಳು ಆಯಿಂದಾಳಿಂದ ದೂರವಾಗಿ ತನ್ನತನವನ್ನು ಅರಿಯುವ ಧೈರ್ಯವನ್ನು ತೋರುತ್ತಾಳೆ. ಗಾರ್ಡನ್‌ನ ಮೇಸ್ತ್ರಿಯ ಬಳಿಗೆ ಧಾವಿಸುತ್ತಾಳೆ. ತನ್ನ ಯೋನಿಯೊಳಗಿರುವ ವಸ್ತುವನ್ನು ಹೊರತೆಗೆಯುವಂತೆ ಭಾವದುದ್ವೇಗದಿಂದ ಕೇಳಿಕೊಳ್ಳುತ್ತಾಳೆ; ಸಾಮಾನ್ಯಳಾಗಿ ಪರಿವರ್ತನೆ ಹೊಂದುತ್ತಾಳೆ. ಹಾಗೆಯೇ ರೂಪಕವೆನ್ನುವಂತೆ ನಿರೂಪಿಸಿರುವ ಮರಳು ಭೂಮಿಯನ್ನು ದಾಟಿ, ವಿಸ್ತಾರ ಸಾಗರದೆದುರು ಹರುಷದ ಅಲೆಗಳನ್ನು ನಿರೀಕ್ಷಿಸುತ್ತ ನಿಲ್ಲುತ್ತಾಳೆ.

ಇವೆಲ್ಲವೂ ಒಗ್ಗೂಡಿ ನಮ್ಮಲ್ಲಿ ಮೆಚ್ಚುಗೆಯ ಹಬ್ಬವನ್ನು ಹುಟ್ಟಿಸುತ್ತಾಳೆ ನಿರ್ದೇಶಕಿ. ಜೊತೆಗೆ ಆಕೆಗೆ ಅಗತ್ಯವಾದ ಸಹಕಾರ ನೀಡಿದವರೆಲ್ಲರನ್ನೂ ಮೆಚ್ಚುವ ಸಣ್ಣ ನಗುವನ್ನು ತಡೆ ಹಿಡಿಯುವುದು ಸಾಧ್ಯವೇ?