ನಾಲ್ಕನೆಯ ಮಹಡಿಗೆ ಹತ್ತುತ್ತಿರುವಾಗ, ‘ಹೋಗುತಿದ್ದ ಹಾಗೆ ಮೊಳಕಾಲೂರಿ ಕೂತು ಅವರಿಗೆ ಎಲ್ಲಾ ಹೇಳಿಬಿಡತೇನೆ,’ ಅಂದುಕೊಂಡ. ಮೆಟ್ಟಿಲು ಇಕ್ಕಟ್ಟಾಗಿದ್ದವು, ಕಡಿದಾಗಿದ್ದವು, ನೀರು ಚೆಲ್ಲಿ ವದ್ದೆಯಾಗಿದ್ದವು. ಎಲ್ಲ ಅಪಾರ್ಟ್ಮೆಂಟುಗಳ ಅಡುಗೆಮನೆಗಳೂ ಮೆಟ್ಟಿಲಿಗೆ ಮುಖ ಮಾಡಿಕೊಂಡು ಸುಮಾರಾಗಿ ಇಡೀ ದಿನ ಬಾಗಿಲು ತೆರೆದೇ ಇರುತಿದ್ದವು. ಹಾಗಾಗಿ ಯಾವಾಗಲೂ ಬಿಸಿ ಹಬೆಗೆ, ವಾಸನೆಗೆ ಉಸಿರು ಕಟ್ಟುತಿತ್ತು. ಜವಾನರು, ವಾಚ್ಮ್ಯಾನು, ಗಂಡಸರು, ಹೆಂಗಸರು, ಯಾರನ್ನೋ ನೋಡಲು ಬಂದವರುಜನ ಮೆಟ್ಟಿಲು ಹತ್ತುತ್ತಾ ಇಳಿಯುತ್ತಾ ಇದ್ದರು.
ಪ್ರೊ
. .ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಮೊದಲ ಅಧ್ಯಾಯ

 

ಹಾಗೇ ಬಹಳ ಹೊತ್ತು ಮಲಗಿದ್ದ. ಆಗೀಗ ಎಚ್ಚರ ಆದ ಹಾಗೆ ಅನ್ನಿಸುತಿತ್ತು. ಎಚ್ಚರವಾದಾಗ ರಾತ್ರಿ ಬಹಳ ಹೊತ್ತಾಗಿದೆ ಅನ್ನುವುದು ತಿಳಿಯುತಿತ್ತು. ಏಳಬೇಕು ಅನಿಸುತ್ತಿರಲಿಲ್ಲ. ಬೆಳಗಿನ ಜಾವ. ಸೋಫಾದ ಮೇಲೆ ಅಂಗಾತ ಮಲಗಿದ್ದ. ದಿಗ್ಭ್ರಾಂತಿ ಇನ್ನೂ ಹಾಗೇ ಇತ್ತು. ಬೀದಿಯಲ್ಲಿ ಭೀಕರವಾದ ಚೀರಾಟ ಕೇಳುತ್ತಿತ್ತು. ದಿನವೂ ರಾತ್ರಿ ಎರಡರಿಂದ ಮೂರು ಗಂಟೆಯ ನಡುವೆ ಅಂಥ ಕೂಗಾಟ ಕೇಳಿಸುತಿತ್ತು. ಈಗ ಆ ಗಲಾಟೆ ಕೇಳಿ ಎಚ್ಚರವಾಗಿತ್ತು.

‘ಕುಡುಕರನ್ನ ಹೆಂಡದಂಗಡಿಯಿಂದ ಓಡಿಸತಿದ್ದಾರೆ. ಎರಡು ಗಂಟೆ ಆಗಿರಬೇಕು,’ ಅಂದುಕೊಂಡ. ಸೋಫಾದಿಂದ ಯಾರೋ ಎಳೆದು ಹಾಕಿದರು ಅನ್ನುವ ಹಾಗೆ ದಡಕ್ಕನೆ ಎದ್ದ. ತಟ್ಟನೆ ಎಲ್ಲಾ ಜ್ಞಾಪಕಕ್ಕೆ ಬಂದಿತ್ತು.

ಹುಚ್ಚು ಹಿಡಿಯುತ್ತಿದೆಯೋ ಅನಿಸಿತು. ಭಯಂಕರ ನಡುಕ ಹುಟ್ಟಿತು. ಜ್ವರ ರಾತ್ರಿಯೇ, ನಿದ್ದೆಯಲ್ಲೇ ಶುರುವಾತ್ತು, ಆಗಲೇ ಈ ನಡುಕ ಹುಟ್ಟಿತ್ತು. ಹಲ್ಲು ಕಟಕಟ ಸದ್ದುಮಾಡಿದವು. ಇಡೀ ಮೈ ನಡುಗಿತು. ಬಾಗಿಲು ತೆರೆದು ಕೇಳಿಸಿಕೊಂಡ. ಇಡೀ ಮನೆ ಗಾಢವಾದ ನಿದ್ರೆಯಲ್ಲಿತ್ತು. ತನ್ನನ್ನೆ ನೋಡಿಕೊಳ್ಳುತ್ತ, ಸುತ್ತಲೂ ಕಣ್ಣಾಡಿಸುತ್ತ ನಿನ್ನೆ ರಾತ್ರಿ ರೂಮಿಗೆ ಬಂದಮೇಲೆ ಬಾಗಿಲ ಚಿಲಕ ಹಾಕುವುದು ಮರೆತು, ಬಟ್ಟೆಯನ್ನೂ ಬದಲಾಯಿಸದೆ, ಹ್ಯಾಟನ್ನೂ ತೆಗೆಯದೆ ಅದು ಹೇಗೆ ಮಲಗಿಬಿಟ್ಟೆ ಎಂದು ಆಶ್ಚರ್ಯ ಪಟ್ಟ. ಹ್ಯಾಟು ಉರುಳಿ ಅವನ ದಿಂಬಿನ ಪಕ್ಕದಲ್ಲಿ ನೆಲದ ಮೇಲೆ ಬಿದ್ದಿತ್ತು.

‘ಯಾರಾದರೂ ಬಂದಿದ್ದರೆ ನಾನು ಕುಡಿದಿದ್ದೇನೆ ಅಂದುಕೊಳ್ಳುತ್ತಿದ್ದರು…’ ಕಿಟಕಿಯ ಹತ್ತಿರಕ್ಕೆ ಧಾವಿಸಿ ಹೋದ. ಸಾಕಷ್ಟು ಬೆಳಕಿತ್ತು. ತಲೆಯಿಂದ ಕಾಲಿನವರೆಗೆ ನೋಡಿಕೊಂಡ. ಎಲ್ಲ ಬಟ್ಟೆಗಳನ್ನೂ ಪರೀಕ್ಷೆಮಾಡಿ ನೋಡಿದ—ಎಲ್ಲಾದರೂ ಏನಾದರೂ ಸುಳಿವು? ಹೀಗಲ್ಲ ನೋಡಬೇಕಾದದ್ದು. ಚಳಿಯಲ್ಲಿ ನಡುಗುತ್ತಲೇ ಬಟ್ಟೆಯನ್ನೆಲ್ಲಾ ಬಿಚ್ಚಿ ಮತ್ತೊಮ್ಮೆ ಒಂದೊಂದನ್ನೂ ವಿವರವಾಗಿ ಪರೀಕ್ಷೆಮಾಡಿದ. ಇನ್ನೊಂದು ಸಾರಿ ನೋಡಿದ. ತಿರುಗಿಸಿ, ಹೊರಳಿಸಿ, ನಂಬಿಕೆ ಬರದೆ, ಒಂದೊಂದೂ ಹೊಲಿಗೆಗೆ ಗಮನಕೊಟ್ಟು ಮೂರು ಬಾರಿ ಪರೀಕ್ಷೆಮಾಡಿ ನೋಡಿದ. ಎಲ್ಲೂ ಏನೂ ಕಲೆ ಇದ್ದ ಹಾಗಿರಲಿಲ್ಲ. ಒಂದೇ ಒಂದು ಕಡೆ, ಪ್ಯಾಂಟಿನ ತುದಿಯಲ್ಲಿ, ಅಂಚು ಹರಿದಿದ್ದ ಜಾಗದಲ್ಲಿ ಜೋತುಬಿದ್ದ ನೂಲಿನ ಎಳೆಗಳ ಮೇಲೆ ರಕ್ತ ಹೆಪ್ಪುಗಟ್ಟಿದ ಕಲೆ ಇದ್ದಹಾಗಿತ್ತು. ದೊಡ್ಡ ಚಾಕು ತೆಗೆದುಕೊಂಡು ದಾರದ ಎಳೆಗಳನ್ನು ಕತ್ತರಿಸಿಹಾಕಿದ. ಮತ್ತೇನೂ ಇದ್ದ ಹಾಗಿರಲಿಲ್ಲ. ತಟ್ಟನೆ ಪರ್ಸು ನೆನಪಾಯಿತು. ಮುದುಕಿಯ ಟ್ರಂಕಿನಿಂದ ತೆಗೆದುಕೊಂಡ ವಸ್ತುಗಳು ಇನ್ನೂ ಜೇಬಿನಲ್ಲೇ ಇರುವುದೂ ಜ್ಞಾಪಕ ಬಂತು! ಅವನ್ನೆಲ್ಲ ಜೇಬಿನಿಂದ ತೆಗೆದು ಬಚ್ಚಿಡುವುದನ್ನು ಮರೆತೇಬಿಟ್ಟಿದ್ದ! ಬಟ್ಟೆಯನ್ನೆಲ್ಲ ಪರೀಕ್ಷೆಮಾಡುತಿದ್ದಾಗ ಕೂಡ ನೆನಪು ಬಂದಿರಲಿಲ್ಲ! ಏನಾಗಿದೆ ಅವನಿಗೆ? ಜೇಬಿನಲ್ಲಿದ್ದದ್ದನೆಲ್ಲ ಸರಸರ ತೆಗೆದು ಮೇಜಿನ ಮೇಲೆಸೆದ. ಎಲ್ಲಾ ತೆಗೆದು, ಇನ್ನೇನೂ ಉಳಿಸಿಲ್ಲ ಅನ್ನುವುದನ್ನು ಖಚಿತಮಾಡಿಕೊಳ್ಳಲು ಜೇಬನ್ನು ಒಳ-ಹೊರಗು ಮಾಡಿ ನೋಡಿ, ಗುಡ್ಡೆಯಾಗಿದ್ದ ವಸ್ತುಗಳನ್ನೆಲ್ಲ ತೆಗೆದುಕೊಂಡು ಕೋಣೆಯ ಮೂಲೆಗೆ ಹೋದ. ಆ ಮೂಲೆಯಲ್ಲಿ ವಾಲ್ ಪೇಪರ್ ಹರಿದು ಜೋತಾಡಿತ್ತು, ತೂತು ಬಿದ್ದಿತ್ತು. ಎಲ್ಲವನ್ನೂ ಅಲ್ಲಿ ತುಂಬಿ ವಾಲ್‌ ಪೇಪರನ್ನು ಸರಿಯಾಗಿ ಎಳೆದು ಮರೆಮಾಡಿದ. ‘ಎಲ್ಲಾ ಹಿಡಿಸಿತು, ಏನೂ ಕಾಣಲ್ಲ, ಪರ್ಸು ಕೂಡಾ!’ ಅಂದುಕೊಳ್ಳುತ್ತ ಖುಷಿ ಪಟ್ಟು ನೆಟ್ಟಗೆ ನಿಂತ. ನೋಡಿದರೆ ಆ ಮೂಲೆ ಉಬ್ಬಿತ್ತು. ಭಯದಿಂದ ಕಂಪಿಸಿದ. ‘ದೇವರೇ! ಏನಾಗಿದೆ ನನಗೆ? ಬಚ್ಚಿಡುವುದು ಅನ್ನುತ್ತಾರಾ ಇದನ್ನ ಯಾರಾದರೂ? ಹೀಗಾ ಈ ಕೆಲಸ ಮಾಡುವುದು?’ ಬೈದುಕೊಂಡ.

ಅಲ್ಲಿ ಏನೇನೋ ವಸ್ತುಗಳು ಇರುತ್ತವೆ ಅನ್ನುವ ಯೋಚನೆ ಬಂದಿರಲಿಲ್ಲ ಅವನಿಗೆ. ಬರಿಯ ದುಡ್ಡು ಮಾತ್ರ ಇರುತ್ತದೆ ಅಂದುಕೊಂಡಿದ್ದ. ಹಾಗಾಗಿ ವಸ್ತುಗಳನ್ನು ಅಡಗಿಸಿಡುವ ಜಾಗ ಮೊದಲೇ ಗೊತ್ತುಮಾಡಿಕೊಂಡಿರಲಿಲ್ಲ.

‘ಯಾಕಿಷ್ಟು ಖುಷಿ? ವಸ್ತುಗಳನ್ನು ಬಚ್ಚಿಡುವುದು ಹೀಗೇನು? ನನ್ನ ಬುದ್ಧಿ ಕೈ ಕೊಡುತಿದೆ!’ ದಣಿದು ಸೋಫಾದ ಮೇಲೆ ಕೂತ. ಮತ್ತೆ ಮೈ ನಡುಕ ಹುಟ್ಟಿತ್ತು. ಕಾಲೇಜಿಗೆ ಹಾಕಿಕೊಂಡು ಹೋಗುತಿದ್ದ, ಈಗ ಅಲ್ಲೆ ಕುರ್ಚಿಯ ಮೇಲೆ ಬಿದ್ದಿದ್ದ ಹಳೆಯ ಕೋಟನ್ನು ಯಾಂತ್ರಿಕವಾಗಿ ಕೈಗೆತ್ತಿಕೊಂಡ. ಹರಿದು ಚಿಂದಿಯಾಗಿದ್ದರೂ ಬೆಚ್ಚಗಿತ್ತು. ಮರವೆಯಲ್ಲಿ ಅದ್ದಿಹೋದ.

ಐದು ನಿಮಿಷ ಕೂಡ ಆಗಿರಲಿಲ್ಲ. ಮತ್ತೆ ದಡಕ್ಕನೆ ಎದ್ದ. ಎದ್ದವನೇ ಬಟ್ಟೆಗಳನ್ನು ಗಬಕ್ಕನೆ ಬಾಚಿಕೊಂಡ. ‘ಇನ್ನೂ ಏನೂ ಮಾಡೇ ಇಲ್ಲ, ಆಗಲೇ ನಿದ್ದೆಹೋದೆನಲ್ಲಾ ಯಾಕೆ? ಕೊಡಲಿ ಸಿಕ್ಕಿಸಿಕೊಳ್ಳಲು ಕೋಟಿನೊಳಗೆ ಹಾಕಿಕೊಂಡಿದ್ದ ಚಿಂದಿ ಕುಣಿಕೆ ಅಲ್ಲೇ ಇದೆಯಲ್ಲಾ! ಮರೆತೆ, ಮರೆತೇ ಹೋದೆ! ಇಂಥಾ ಬಲವಾದ ಸಾಕ್ಷಿ ಮರೆತೇ ಬಿಟ್ಟೆ!’

ಕುಣಿಕೆಯನ್ನು ಎಳೆದು ಕಿತ್ತ. ಆತುರಾತುರವಾಗಿ ಹರಿದು ಚಿಂದಿಮಾಡಿದ. ಆ ಚಿಂದಿ ಚೂರುಗಳನ್ನೆಲ್ಲ ದಿಂಬಿನೊಳಕ್ಕೆ ತುಂಬಿದ.
‘ಚಿಂದಿ ಬಟ್ಟೆ ನೋಡಿದರೆ ಅನುಮಾನ ಬರಲ್ಲ, ಅನುಮಾನ ಬರಲಾರದು, ಬರಲಾರದು!’ ರೂಮಿನ ಮಧ್ಯೆ ನಿಂತು ಮತ್ತೆ ಮತ್ತೆ ಹೇಳಿಕೊಂಡ. ಮತ್ತೇನನ್ನೂ ಮರೆತಿಲ್ಲ ಅನ್ನುವುದನ್ನು ಗಟ್ಟಿಮಾಡಿಕೊಳ್ಳಲು ನೋವಾಗುವಷ್ಟು ಏಕಾಗ್ರತೆಯಿಂದ ನೆಲ, ಗೋಡೆ, ಸೋಫಾ ಎಲ್ಲವನ್ನೂ ನೋಡಿದ. ಸರಳವಾದ ವಿಚಾರವನ್ನು ಮಾಡುವ ಶಕ್ತಿ, ನೆನಪು, ನಂಬಿಕೆ ಎಲ್ಲ ಕಳೆದುಹೋಗುತ್ತಿವೆ ಅನ್ನಿಸಿ ಸಹಿಸಲಾಗದಷ್ಟು ಹಿಂಸೆಯಾಯಿತು.

‘ಮಾಡಿದ ತಪ್ಪಿಗೆ ಆಗಲೇ ಶಿಕ್ಷೆ ಶುರುವಾಯಿತೇ! ಇಷ್ಟು ಬೇಗ! ಅಗೋ ಅಗೋ ಅಲ್ಲಿ…!’ ಕತ್ತರಿಸಿ ಎಸೆದಿದ್ದ ಪ್ಯಾಂಟಿನ ಚುಂಗು ರೂಮಿನ ಮಧ್ಯೆ ನೆಲದ ಮೇಲೆ ಬಿದ್ದಿತ್ತು. ರೂಮಿಗೆ ಯಾರು ಬಂದರೂ ಎದ್ದು ಕಾಣುತಿತ್ತು. ‘ದಿಕ್ಕೇ ತೋಚುತ್ತಿಲ್ಲ. ಏನಾಗಿದೆ ನನಗೇ!’ ಅಂದುಕೊಂಡ.

ವಿಚಿತ್ರವಾದ ಯೋಚನೆ ಹುಟ್ಟಿತು. ‘ಬಟ್ಟೆಗಳಿಗೆಲ್ಲ ರಕ್ತ ಮೆತ್ತಿಕೊಂಡಿರಬೇಕು, ಎಲ್ಲೆಲ್ಲೂ ಕಲೆಗಳಾಗಿರಬೇಕು, ನನ್ನ ಕಣ್ಣಿಗೆ ಬಿದ್ದಿಲ್ಲ ಅಷ್ಟೆ. ನನ್ನ ವಿಚಾರ ಶಕ್ತಿ ಕುಂದುತ್ತಾ ಮನಸ್ಸು ಮಂಕಾಗುತ್ತಿರುವುದರಿಂದ ಗಮನಿಸಿರಲಾರೆ,’ ಅಂದುಕೊಂಡ. ಪರ್ಸಿನ ಮೇಲೆ ರಕ್ತ ಇತ್ತು ಅನ್ನುವುದು ತಟ್ಟನೆ ನೆನಪಿಗೆ ಬಂದಿತು. ‘ಪರ್ಸು ಜೇಬಿನಲ್ಲಿಟ್ಟುಕೊಂಡೆ, ಅಯ್ಯೋ ಜೇಬಿನೊಳಗೂ ರಕ್ತ ಮೆತ್ತಿಕೊಂಡಿರಬಹುದು!’ ಅಂದುಕೊಂಡ. ಜೇಬನ್ನು ತಲೆಕೆಳಗು ಮಾಡಿ ಹೊಲಿಗೆಗೆ ಎಲ್ಲಾದರೂ ರಕ್ತ ಮೆತ್ತಿದೆಯೋ ಎಂದು ನೋಡಿದ. ‘ಹಾಗಾದರೆ ನನ್ನ ಬುದ್ಧಿ ಪೂರಾ ಹಾಳಾಗಿಲ್ಲ, ನೆನಪಿನ ಶಕ್ತಿ ಉಳಿದಿದೆ, ನೋಡಿದ್ದು ಅರ್ಥವಾಗುತ್ತಿದೆ. ಸದ್ಯ! ಎಲ್ಲಾ ನಾನೇ ನೆನಪು ಮಾಡಿ ಅರ್ಥಮಾಡಿಕೊಂಡೆ! ಗೆದ್ದೆ!’ ಅನ್ನಿಸಿ ಸಂತೋಷಪಡುತ್ತಾ ಆಳವಾಗಿ ಉಸಿರೆಳೆದುಕೊಂಡ. ‘ಜ್ವರ ಬಂದು ದಣಿವಾಗಿ ಒಂದೆರಡು ಕ್ಷಣ ಭ್ರಮೆ ಹುಟ್ಟಿರಬೇಕು,’ ಅಂದುಕೊಂಡ. ಎಡಗಡೆಯ ಜೇಬಿನ ಬಟ್ಟೆಯನ್ನು ಪೂರಾ ಕಿತ್ತು ಹಾಕಿದ. ಆ ಕ್ಷಣದಲ್ಲಿ ಅವನ ಎಡ ಬೂಟಿನ ಮೇಲೆ ಬಿಸಿಲು ಬಿತ್ತು. ಹರಿದ ಬೂಟಿನೊಳಗಿಂದ ಕಾಲುಚೀಲ ಇಣುಕುತಿತ್ತು. ಅಲ್ಲಿ ರಕ್ತದ ಕಲೆ ಕಾಣುತ್ತಿವೆ ಅನ್ನಿಸಿತು. ಕಾಲು ಜಾಡಿಸಿ ಬೂಟು ತೆಗೆದ. ‘ರಕ್ತದ ಗುರುತು! ಹೆಬ್ಬೆರಳಿನ ಹತ್ತಿರ ಕಾಲು ಚೀಲ ಪೂರಾ ರಕ್ತವಾಗಿದೆ.’ ಅಂದರೆ ಚೆಲ್ಲಾಡಿದ್ದ ರಕ್ತದ ಮೇಲೆ ಅರಿವಿಲ್ಲದೆ ಕಾಲಿಟ್ಟಿರಬೇಕು. ‘ಈಗೇನು ಮಾಡಲಿ? ಈ ಕಾಲುಚೀಲ, ಹರಿದ ಜೇಬಿನ ಬಟ್ಟೆ ಎಲ್ಲಿಡಲಿ?’

ಅವನ್ನೆಲ್ಲ ಹಿಡಿದು ರೂಮಿನ ಮಧ್ಯೆ ನಿಂತಿದ್ದ. ‘ಒಲೆಗೆ ಹಾಕಿದರೆ? ಮೊದಲು ಒಲೆಯನ್ನೆ ಕೆದಕಿ ನೋಡತಾರೆ. ಸುಟ್ಟರೆ? ಹೇಗೆ ಸುಡಲಿ? ಬೆಂಕಿಕಡ್ಡಿ ಇಲ್ಲ. ಎಲ್ಲಾದರೂ ಹೋಗಿ ಬಿಸಾಕಬೇಕು, ಹೋಗಿ ಬಿಸಾಕಬೇಕು, ಬಿಸಾಕಬೇಕು’ ಮತ್ತೆ ಮತ್ತೆ ಅಂದುಕೊಳ್ಳುತ್ತಲೇ ಇದ್ದ. ಸೋಫಾಮೇಲೆ ಕೂರುತ್ತಾ ‘ತಡಮಾಡಬಾರದು, ಈಗಲೇ, ಈ ಕ್ಷಣವೇ ಹೋಗಿ ಬಿಸಾಕಬೇಕು!’ ಅನ್ನುತಿದ್ದರೂ ತಲೆ ಮಾತ್ರ ದಿಂಬಿನ ಮೇಲೆ ಒರಗಿತು. ಸಹಿಸಲಾಗದಷ್ಟು ಚಳಿ ಹುಟ್ಟಿ ಮೈ ಹಿಮದ ಹಾಗಿತ್ತು. ಓವರ್ ಕೋಟು ಮತ್ತೆ ಮೈಮೇಲೆ ಎಳಕೊಂಡ. ಬಹಳ ಹೊತ್ತು, ಗಂಟೆಗಳ ಕಾಲ ಹಾಗೇ ಬಿದ್ದುಕೊಂಡಿದ್ದು ಆವಾಗವಾಗ ‘ಹೋಗಬೇಕು, ಹೊತ್ತಾಯಿತು, ತಡಮಾಡಬಾರದು, ಎಲ್ಲ ತಗೊಂಡು ಹೋಗಿ ಬಿಸಾಕಬೇಕು!’ ಅಂತೆಲ್ಲ ಅಂದುಕೊಳ್ಳುತಿದ್ದ. ಸೋಫಾದಿಂದ ಏಳುವುದಕ್ಕೆ ಪ್ರಯತ್ನಪಟ್ಟ. ಆಗಲಿಲ್ಲ. ಕೊನೆಗೆ ಯಾರೋ ಬಾಗಿಲು ತಟ್ಟುವ ಸದ್ದು ಅವನನ್ನು ಎಬ್ಬಿಸಿತು.

‘ತೆಗೀ, ಬಾಗಿಲು ತೆಗೀ! ಎಲ್ಲಿ ಸತ್ತೆ ನೀನು! ಹೇಗೆ ಗೊರಕೆ ಹೊಡೀತಾನೆ ನೋಡು!’ ಬಾಗಿಲು ಗುದ್ದುತ್ತಾ ನಸ್ತಾಸ್ಯಾ ಚೀರಾಡುತಿದ್ದಳು. ‘ಹಗಲೂ ರಾತ್ರಿ ಗೊರಕೆ ಹೊಡೆಯೋದೇ, ನಾಯೀ ಥರಾ! ನಾಯಿ, ನಾಯಿ ಇವನು! ತೆಗೀತೀಯೋ ಇಲ್ಲವೋ ಬಾಗಿಲು? ಹತ್ತು ಗಂಟೆ ಆಯಿತೂ!’

‘ಮನೇಲಿಲ್ಲವೋ ಏನೋ!’ ಗಂಡಸಿನ ಧ್ವನಿ ಹೇಳಿತು.

‘ಹೋ! ವಾಚ್‌ಮ್ಯಾನ್ ದನಿ… ಯಾಕೆ, ಏನು ಬೇಕು ಅವನಿಗೆ?’ ಸೋಫಾ ಮೇಲೆ ದಡಕ್ಕನೆ ಎದ್ದು ಕೂತ. ನೋವಾಗುವಷ್ಟು ಜೋರಾಗಿ ಎದೆ ಬಡಿದುಕೊಳ್ಳುತಿತ್ತು.

‘ಹಾಗಾದರೆ ಒಳಗಿನಿಂದ ಚಿಲುಕ ಹಾಕಿದ್ದು ಯಾರು?’ ನಸ್ತಾಸ್ಯಾ ಆಕ್ಷೇಪಣೆ ಮಾಡಿದಳು. ‘ಚಿಲಕ ಹಾಕ್ಕೊಂಡು ನಿದ್ದೆಮಾಡಕ್ಕೆ ಶುರು ಮಾಡಿದಾನೆ! ಏನು ಖಜಾನೆ ಇದೆ ಒಳಗೆ, ಯಾರಾದರೂ ದೋಚಿಕೊಂಡು ಹೋಗತಾರೆ ನೋಡು! ಏ ಪೆದ್ದೂ, ತೆಗೀ ಬಾಗಿಲೂ!’

‘ಏನು ಬೇಕು ಅವರಿಗೆ? ವಾಚ್‌ಮ್ಯಾನ್ ಯಾಕೆ ಬಂದ? ಎಲ್ಲಾ ಪತ್ತೆ ಆಗಿದೆ. ಬಾಗಿಲು ತಗೆಯಲಾ, ಬೇಡವಾ? ಆಗಿದ್ದಾಗಲಿ, ನೋಡೇ ಬಿಡತೇನೆ…’ ಮುಂದಕ್ಕೆ ಬಗ್ಗಿ ಚಿಲಕ ತೆಗೆದ. ಮಲಗಿದಲ್ಲಿಂದ ಏಳದೆ ಚಿಲಕ ತೆಗೆಯುವ ಗಾತ್ರದ್ದು ಆ ರೂಮು.

ವಾಚ್‌ಮ್ಯಾನು, ನಸ್ತಾಸ್ಯಾ ಬಾಗಿಲಲ್ಲಿ ನಿಂತಿದ್ದರು.

ನಾಸ್ತಾಸ್ಯಾ ಅವನನ್ನು ವಿಚಿತ್ರವಾಗಿ ದಿಟ್ಟಿಸಿದಳು. ಆಗಿದ್ದಾಗಲಿ ಅನ್ನುವ ಹತಾಶೆಯಲ್ಲಿ ವಾಚ್‌ಮ್ಯಾನ್‌ ನನ್ನು ದಿಟ್ಟಿಸಿದ ಅವನು. ವಾಚ್‌ಮ್ಯಾನ್ ಅವನಿಗೊಂದು ಲಕೋಟೆ ಕೊಟ್ಟ. ಅದಕ್ಕೆ ಅರಗಿನ ಮುದ್ರೆ ಹಾಕಿತ್ತು.

‘ಸ್ಟೇಶನ್ನಿನಿಂದ ಸಮನ್ಸ್ ಬಂದಿದೆ,’ ಅಂದ.

‘ಯಾವ ಸ್ಟೇಶನ್ನು?’

‘ಪೋಲೀಸ್ ಸ್ಟೇಶನ್ನು… ಹೋಗಬೇಕಂತೆ. ಗೊತ್ತಾಯಿತಾ?’

‘ಪೋಲೀಸ್ ಸ್ಟೇಶನ್ನು! ಯಾಕೆ?…’

‘ನನಗೇನು ಗೊತ್ತು? ಸ್ಟೇಶನ್ನಿಗೆ ಹೋಗಬೇಕಂತೆ, ಹೋಗು,’ ಅನ್ನುತ್ತ ವಾಚ್‌ಮ್ಯಾನು ಅವನನ್ನ ದಿಟ್ಟಿಸಿದ, ಸುತ್ತಲೂ ನೋಡಿದ, ಹೊರಟ.

‘ಹುಷಾರಿಲ್ಲವಾ?’ ನಾಸ್ತಾಸ್ಯಾ ರಾಸ್ಕೋಲ್ನಿಕೋವ್‌ ನನ್ನು ಕೇಳಿದಳು. ಅವಳ ದೃಷ್ಟಿ ಅವನ ಮೇಲೇ ಇತ್ತು. ವಾಚ್‌ಮನ್ ಕೂಡ ತಿರುಗಿ ನೋಡಿದ. ‘ಅವನಿಗೆ ನಿನ್ನೆಯಿಂದ ಜ್ವರ ಇದೆ,’ ಅಂದಳು.

ಅವನು ಮಾತಾಡಲಿಲ್ಲ. ಲಕೋಟೆ ಒಡೆಯದೆ ಹಾಗೇ ಕೈಯಲ್ಲೆ ಹಿಡಿದುಕೊಂಡಿದ್ದ. ‘ಏಳಬೇಡ,’ ಅಂದಳು ನಾಸ್ತಾಸ್ಯಾ. ಅವಳ ಮನಸ್ಸಿನಲ್ಲಿ ಕರುಣೆ ಹುಟ್ಟಿತ್ತು. ‘ಹುಷಾರಿಲ್ಲದಿದ್ದರೆ ಹೋಗಬೇಡ, ಅರ್ಜೆಂಟು ಮಾಡುವುದಕ್ಕೆ ಏನೂ ಬೆಂಕಿ ಬಿದ್ದು ಉರೀತಾ ಇಲ್ಲ. ಏನದು, ನಿನ್ನ ಕೈಯಲ್ಲಿ?’ ಅಂದಳು.

ನೋಡಿಕೊಂಡ. ಪ್ಯಾಂಟಿನ ಕತ್ತರಿಸಿದ ಅಂಚು, ಕಾಲುಚೀಲ, ಪ್ಯಾಂಟಿನ ಜೇಬಿನ ಹರಿದ ಬಟ್ಟೆ ಬಲಗೈಯಲ್ಲಿದ್ದವು. ಅವನ್ನು ಹಿಡಿದುಕೊಂಡು ಹಾಗೇ ನಿದ್ದೆ ಹೋಗಿದ್ದ. ಮುಂದೆ ಈ ಸಂದರ್ಭ ನೆನಪುಮಾಡಿಕೊಳ್ಳುತ್ತಾ ಜ್ವರದ ಅರ್ಧ ಎಚ್ಚರದಲ್ಲೂ ಹಿಡಿತ ಬಿಗಿಮಾಡಿ ಹಾಗೇ ನಿದ್ದೆ ಹೋಗುತಿದ್ದದ್ದನ್ನು ಮನಸ್ಸಿಗೆ ತಂದುಕೊಳ್ಳುತಿದ್ದ.

‘ವಜ್ರ ವೈಡೂರ್ಯ ಅನ್ನುವ ಹಾಗೆ ಚಿಂದಿ ಬಟ್ಟೆ ಕೈಯಲ್ಲಿ ಹಿಡಿದುಕೊಂಡೇ ನಿದ್ದೆ ಹೋಗಿದಾನೆ ನೋಡು…’ ಅನ್ನುತ್ತ ಹಿಸ್ಟೀರಿಯ ಬಂದವಳ ಹಾಗೆ ನಕ್ಕಳು. ಅವನು ಕೈಯಲ್ಲಿದ್ದದ್ದನ್ನೆಲ್ಲ ತಟಕ್ಕನೆ ಕೋಟಿನ ಅಡಿಯಲ್ಲಿ ತುರುಕಿ ಅವಳನ್ನು ದುರುದುರು ನೋಡಿದ.

ಅವನ ಬುದ್ಧಿ ಕದಡಿತ್ತು. ಏನೂ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಆದರೂ ‘ನಾನು ಅರೆಸ್ಟಾಗುವುದಿದ್ದರೆ ನನ್ನ ಜೊತೆ ಇವರು ಹೀಗೆ ನಡೆದುಕೊಳ್ಳುತ್ತಿರಲಿಲ್ಲ,’ ಅಂದುಕೊಂಡ.

‘ಪೋಲೀಸು…’ ಅಂದ.

‘ಟೀ ಇದೆ, ತರತೇನೆ ತಾಳು, ಸ್ವಲ್ಪ ಕುಡಿ…’ ಅಂದಳು ನಾಸ್ತಾಸ್ಯಾ.

‘ಇಲ್ಲ… ಹೋಗತೇನೆ, ಈಗಲೇ ಹೋಗಬೇಕು,’ ಅಂತ ಗೊಣಗುತ್ತ ಎದ್ದು ನಿಂತ.

‘ಮಹಡಿ ಮೆಟ್ಟಿಲು ಇಳಿಯುವುದಕ್ಕೂ ಶಕ್ತಿ ಇಲ್ಲ ನಿನಗೆ…’

‘ಹೋಗ್ತೇನೇ…’

‘ಸರಿ, ನಿನ್ನಿಷ್ಟ…’

ಅವಳು ವಾಚ್‌ಮ್ಯಾನ್ ಜೊತೆ ಹೊರಟು ಹೋದಳು. ಅವನು ತಕ್ಷಣವೇ ಬೆಳಕಿಗೆ ಹೋಗಿ ಕಾಲುಚೀಲವನ್ನೂ ಕತ್ತರಿಸಿದ್ದ ಪ್ಯಾಂಟಿನ ತುದಿಯನ್ನೂ ಪರೀಕ್ಷೆಮಾಡಿದ. ‘ಒಂದೆರಡು ಕಲೆ ಇವೆ, ಎದ್ದು ಕಾಣಲ್ಲ. ಕೊಳೆ ಆಗಿದೆ, ಮಾಸಿದೆ, ರಕ್ತದ ಕಲೆಯೂ ಬಣ್ಣ ಕಳೆದುಕೊಂಡಿದೆ. ಯಾರಿಗಾದರೂ ಅನುಮಾನ ಇದ್ದರೆ ಮಾತ್ರ ಕಂಡೀತು, ಇಲ್ಲದಿದ್ದರೆ ಇಲ್ಲ. ಅಂದರೆ, ಸದ್ಯ ದೇವರೇ, ನಾಸ್ತಾಸ್ಯ ಏನೂ ನೋಡಿಲ್ಲ, ಅವಳಿಗೆ ಅರ್ಥವಾಗಿಲ್ಲ!’ ಅಂದುಕೊಂಡ. ನಡುಗುವ ಬೆರಳಲ್ಲಿ ಲಕೋಟೆಯನ್ನು ಹರಿದು, ಒಳಗಿದ್ದ ಕಾಗದ ತೆಗೆದು ಓದಿದ. ಸಮನ್ಸಿನಲ್ಲಿ ಏನಿದೆ ಅನ್ನುವುದನ್ನು ಪೂರ್ತಿ ತಿಳಿಯುವುದಕ್ಕೆ ಬಹಳ ಹೊತ್ತು ಬೇಕಾಯಿತು. ಮಧ್ಯಾಹ್ನ ಒಂದೂವರೆಗೆ ಡಿಸ್ಟ್ರಿಕ್ಟ್ ಸೂಪರಿಂಟೆಂಡೆಂಟ್ ಸ್ಟೇಶನ್ನಿಗೆ ಬರಬೇಕೆಂಬ ಮಾಮಾಲಿ ಪತ್ರ.

‘ಇದೇನಿದು? ಯಾಕೆ? ಪೋಲೀಸಿನವರ ಜೊತೆ ಯಾವ ವ್ಯವಹಾರವೂ ಇರಲಿಲ್ಲ! ಕರೆಕ್ಟಾಗಿ ಇವತ್ತೆ ಯಾಕೆ?’ ಎಂದು ಕೇಳಿಕೊಳ್ಳುತ್ತ ಹಿಂಸೆಪಟ್ಟುಕೊಂಡ. ‘ದೇವರೇ, ಬೇಗ ಮುಗಿದು ಹೋಗಲಪ್ಪಾ!’ ಅಂದುಕೊಂಡ. ಮೊಳಕಾಲೂರಿ ಕೂತ. ಜೋರಾಗಿ ನಕ್ಕ. ಪ್ರಾರ್ಥನೆಗೆ ಕೂತದ್ದಕ್ಕಲ್ಲ, ತನ್ನ ಬಗ್ಗೆಯೇ ನಗು ಬಂದಿತ್ತು ಅವನಿಗೆ. ದಡಬಡದನೆ ಬಟ್ಟೆ ತೊಟ್ಟುಕೊಂಡ. ‘ಹಾಳಾಗುವುದಿದ್ದರೆ ಆಗಲಿ, ಚಿಂತೆ ಇಲ್ಲ! ಈ ಕಾಲುಚೀಲ ಹಾಕಿಕೊಳ್ಳಬೇಕು! ಇನ್ನಷ್ಟು ಧೂಳು ಮೆತ್ತಿಕೊಂಡು ಕಲೆ ಮಾಯವಾಗತ್ತೆ,’ ಅನ್ನುವ ಯೋಚನೆ ತಟ್ಟನೆ ಬಂದಿತ್ತು. ಹಾಕಿಕೊಳ್ಳುತಿದ್ದ ಹಾಗೇ ಅಸಹ್ಯ ಅನ್ನಿಸಿ, ಭಯ ಅನ್ನಿಸಿ ತೆಗೆದುಬಿಟ್ಟ. ಬೇರೆಯ ಕಾಲುಚೀಲ ಇಲ್ಲ ಅನ್ನುವುದು ನೆನಪಿಗೆ ಬಂದು ಮತ್ತೆ ಹಾಕಿಕೊಂಡ. ಮತ್ತೆ ಜೋರಾಗಿ ನಕ್ಕ. ‘ಎಲ್ಲಾ ಬರೀ ಸಂಪ್ರದಾಯ, ನಾವು ನೋಡುವ ದೃಷ್ಟಿ ಹೇಗೋ ಹಾಗೆ,’ ಒಂದು ಕ್ಷಣ ಇಂಥ ಯೋಚನೆ ಸುಳಿದು ಹೋಯಿತು. ಮೈ ಮಾತ್ರ ಕಂಪಿಸಿತು. ‘ಇಗೋ, ಕೊನೆಗೂ ಹಾಕಿಕೊಂಡೆ!’ ನಗು ತಕ್ಷಣವೇ ಹತಾಶೆಗೆ ದಾರಿ ಮಾಡಿತ್ತು.
‘ಇಲ್ಲ, ನನ್ನ ಮನಸ್ಸು ಗಟ್ಟಿ ಇಲ್ಲ…’ ಅನಿಸಿತು. ಕಾಲು ನಡುಗುತಿದ್ದವು. ‘ಭಯ,’ ಅಂದುಕೊಂಡ. ತಲೆ ತಿರುಗುತಿತ್ತು, ನೋಯುತಿತ್ತು, ಜ್ವರ ಹೆಚ್ಚಾಗಿತ್ತು. ‘ಟ್ರಿಕ್ಕು ಮಾಡತಾ ಇದಾರೆ! ನನ್ನ ಕಂಗಾಲುಮಾಡಿ, ಗಾಬರಿ ಹುಟ್ಟಿಸಿ ಹಿಡಿಯಬೇಕು ಅಂತ ಇದ್ದಾರೆ, ಜ್ವರದ ಸನ್ನಿ ಹಿಡಿದು ಬಾಯಿಗೆ ಬಂದದ್ದು ಏನಾದರೂ ಹೇಳಿಬಿಟ್ಟರೆ…!’ ಅನ್ನಿಸಿತು.

ರೂಮಿನಲ್ಲಿ ಎಲ್ಲ ಇದ್ದದ್ದು ಇದ್ದ ಹಾಗೇ ಬಿಟ್ಟು ಹೋಗತಾ ಇದೇನೆ, ವಾಲ್‌ ಪೇಪರಿನ ಹಿಂದೆ ಅದು ಹಾಗೇ ಇದೆ ಅನ್ನುವ ನೆನಪು ಮೆಟ್ಟಿಲಿಳಿಯುವಾಗ ಬಂದಿತ್ತು. ‘ನಾನು ಇಲ್ಲದೆ ಇದ್ದಾಗ ಬಂದು ಹುಡುಕಿ ನೋಡಬಹುದು,’ ಅಂದುಕೊಳ್ಳುತ್ತ ನಿಂತ. ಎಂಥ ಹತಾಶೆ, ಸಿನಿಕತನ ಮೂಡಿತ್ತೆಂದರೆ ಜೋರಾಗಿ ಕೈ ಬೀಸಿ, ‘ಮುಗಿದು ಹೋಗಲಿ ಬೇಗ, ಅಷ್ಟೆ…’ ಅಂದುಕೊಂಡ.

ರಸ್ತೆಯಲ್ಲಿ ಮತ್ತೆ ಅದೇ ಧಗೆ; ಎಷ್ಟೋ ದಿನದಿಂದ ಹನಿಯಷ್ಟೂ ಮಳೆಯಿಲ್ಲ. ಮತ್ತೆ ಅದೇ ಧೂಳು, ಇಟ್ಟಿಗೆ ಚೂರು, ಸುಣ್ಣ, ಗಾರೆ; ಅಂಗಡಿ, ಹೆಂಡದಂಗಡಿಗಳಿಂದ ಅದೇ ವಾಸನೆ, ಅದೇ ಕುಡುಕರು, ಚಿಲ್ಲರೆ ವ್ಯಾಪಾರಿಗಳು, ಮುರುಕಲು ಗಾಡಿಗಳು. ಬಿಸಿಲು ರಾಚುತಿತ್ತು, ಕಣ್ಣು ನೋಯುತಿತ್ತು, ತಲೆ ತಿರುಗುತಿತ್ತು—ಜ್ವರ ಬಂದವರು ತಟ್ಟನೆ ಬಿಸಿಲಿಗೆ ಕಾಲಿಟ್ಟರೆ ಆಗುತ್ತದಲ್ಲ ಹಾಗೇ.

ಆ ರಸ್ತೆಯ ತಿರುವಿಗೆ ಬಂದಾಗ, ಚಡಪಡಿಸುತ್ತಾ ಆ ಮನೆಯತ್ತ ನೋಡಿ, ನೋಡುತಿದ್ದ ಹಾಗೇ ಕಣ್ಣು ಹೊರಳಿಸಿದ.

ಸ್ಟೇಶನ್ನಿನ ಕಡೆಗೆ ಹೆಜ್ಜೆ ಹಾಕುತ್ತಾ, ‘ಅವರೇನಾದರೂ ಕೇಳಿದರೆ ಹೇಳಿಬಿಡುವುದು ಒಳ್ಳೆಯದು,’ ಅಂದುಕೊಂಡ.

ಸ್ಟೇಶನ್ನು ಅವನ ಮನೆಯಿಂದ ಎರಡು ಫರ್ಲಾಂಗು ಕೂಡ ಇರಲಿಲ್ಲ. ಈಗ ಹೊಸ ಕಟ್ಟಡದಲ್ಲಿ, ನಾಲ್ಕನೆಯ ಅಂತಸ್ತಿನಲ್ಲಿ ಇತ್ತು. ಹಳೆಯ ಸ್ಟೇಶನ್ನಿಗೆ ಬಹಳ ಹಿಂದೆ ಒಂದು ಸಾರಿ ಹೋಗಿದ್ದ. ಗೇಟು ದಾಟಿದಮೇಲೆ ಬಲಗಡೆ ಮೆಟ್ಟಿಲು ಕಂಡವು. ರೈತನೊಬ್ಬ ದೊಡ್ಡ ಬುಕ್ಕು ಹೊತ್ತುಕೊಂಡು ಮೆಟ್ಟಿಲು ಹತ್ತುತಿದ್ದ. ‘ಜವಾನ ಇರಬೇಕು. ಅಂದರೆ ಸ್ಟೇಶನ್ನು ಅಲ್ಲೇ ಮೇಲೆ ಇರಬೇಕು,’ ಅಂದುಕೊಳ್ಳುತ್ತ ಮೆಟ್ಟಿಲು ಹತ್ತಿದ. ಯಾರನ್ನೂ ಏನೂ ಕೇಳುವ ಮನಸ್ಸು ಇರಲಿಲ್ಲ.

ನಾಲ್ಕನೆಯ ಮಹಡಿಗೆ ಹತ್ತುತ್ತಿರುವಾಗ, ‘ಹೋಗುತಿದ್ದ ಹಾಗೆ ಮೊಳಕಾಲೂರಿ ಕೂತು ಅವರಿಗೆ ಎಲ್ಲಾ ಹೇಳಿಬಿಡತೇನೆ,’ ಅಂದುಕೊಂಡ. ಮೆಟ್ಟಿಲು ಇಕ್ಕಟ್ಟಾಗಿದ್ದವು, ಕಡಿದಾಗಿದ್ದವು, ನೀರು ಚೆಲ್ಲಿ ವದ್ದೆಯಾಗಿದ್ದವು. ಎಲ್ಲ ಅಪಾರ್ಟ್ಮೆಂಟುಗಳ ಅಡುಗೆಮನೆಗಳೂ ಮೆಟ್ಟಿಲಿಗೆ ಮುಖ ಮಾಡಿಕೊಂಡು ಸುಮಾರಾಗಿ ಇಡೀ ದಿನ ಬಾಗಿಲು ತೆರೆದೇ ಇರುತಿದ್ದವು. ಹಾಗಾಗಿ ಯಾವಾಗಲೂ ಬಿಸಿ ಹಬೆಗೆ, ವಾಸನೆಗೆ ಉಸಿರು ಕಟ್ಟುತಿತ್ತು. ಜವಾನರು, ವಾಚ್‌ ಮ್ಯಾನು, ಗಂಡಸರು, ಹೆಂಗಸರು, ಯಾರನ್ನೋ ನೋಡಲು ಬಂದವರು-ಜನ ಮೆಟ್ಟಿಲು ಹತ್ತುತ್ತಾ ಇಳಿಯುತ್ತಾ ಇದ್ದರು. ಸ್ಟೇಶನ್ ಆಫೀಸಿನ ಬಾಗಿಲೂ ತೆರೆದಿತ್ತು. ಅಲ್ಲೂ ಗಾಳಿ ಇರದೆ ಉಸಿರು ಕಟ್ಟುತಿತ್ತು. ಕೋಣೆಗಳಿಗೆ ಹೊಸದಾಗಿ ಬಳಿದಿದ್ದ ಬಣ್ಣದ ವಾಸನೆ, ರಾನ್ಸಿಡ್ ಆಯಿಲ್ ವಾಸನೆ ಅವನ ಮೇಲೆ ಎರಗಿ ವಾಂತಿ ಬರುವ ಹಾಗಾಯಿತು.

ಸ್ವಲ್ಪ ಹೊತ್ತು ಕಾದು ಮುಂದಿನ ಕೋಣೆಗೆ ಹೋದ. ಎಲ್ಲ ಕೋಣೆಗಳೂ ತಗ್ಗು ಚಾವಣಿಯ ಕಿರು ಕೋಣೆಗಳೇ. ಅಸಹನೆ ಹೆಚ್ಚುತಿತ್ತು. ಮುಂದೆ ಮುಂದೆ ಹೋದ. ಯಾರೂ ಅವನನ್ನು ಗಮನಿಸಲೂ ಇಲ್ಲ. ಅಲ್ಲೊಂದು ರೂಮಿನಲ್ಲಿ ಗುಮಾಸ್ತರು ಕೂತು ಬರೆಯುತಿದ್ದರು. ಅವನಿಗಿಂತ ಸ್ವಲ್ಪವೇ ಉತ್ತಮವಾದ ಬಟ್ಟೆ ತೊಟ್ಟಿದ್ದರು. ವಿಚಿತ್ರವಾದ ಜನದ ಹಾಗೆ ಕಾಣುತಿದ್ದರು. ಅವರಲ್ಲೊಬ್ಬನ ಹತ್ತಿರ ಹೋದ.

‘ಏನು ಬೇಕು?’

ಸಮನ್ಸ್ ತೋರಿಸಿದ.

ಅದನ್ನು ನೋಡಿದ ಗುಮಾಸ್ತ, ‘ಸ್ಟೂಡೆಂಟಾ?’ ಎಂದು ಕೇಳಿದ.

‘ಸ್ಟೂಡೆಂಟ್ ಆಗಿದ್ದೆ.’

ಗುಮಾಸ್ತ ಅವನನ್ನು ಮೇಲಿಂದ ಕೆಳಗಿನವರೆಗೂ ನೋಡಿದ. ಕುತೂಹಲವೂ ಇರಲಿಲ್ಲ, ಆಸಕ್ತಿಯೂ ಇರಲಿಲ್ಲ. ಒಪ್ಪ ಓರಣವಿಲ್ಲದ ಮನುಷ್ಯನ ಹಾಗೆ, ಜಡ ಮನಸ್ಸಿನವನ ಹಾಗೆ ಕಾಣುತಿದ್ದ. ‘ಇವನನ್ನ ನಂಬಿದರೆ ಉಪಯೋಗವಿಲ್ಲ,’ ಅನ್ನಿಸಿತು ರಾಸ್ಕೋಲ್ನಿಕೋವ್‌ ಗೆ. ಆ ಮನುಷ್ಯ ಕೊನೆಯ ಕೋಣೆಯತ್ತ ಬೆರಳು ತೋರಿಸುತ್ತಾ ಹೆಡ್ ಗುಮಾಸ್ತರ ಹತ್ತಿರ ಹೋಗು ಅಂದ.

ಇನ್ನೂ ಮುಂದೆ, ನಾಲ್ಕನೆಯ ರೂಮಿಗೆ ಹೋದ. ಸಣ್ಣ ಕೋಣೆಯಲ್ಲಿ ಜನ ಕಿಕ್ಕಿರಿದಿದ್ದರು. ಮಿಕ್ಕ ಕೋಣೆಗಳಲ್ಲಿದ್ದ ಜನಕ್ಕಿಂತ ಇಲ್ಲಿದ್ದವರು ಸ್ವಲ್ಪ ಸ್ವಚ್ಛವಾದ ಒಳ್ಳೆಯ ಉಡುಪು ತೊಟ್ಟಿದ್ದರು. ಇಬ್ಬರು ಮಹಿಳೆಯರಿದ್ದರು. ಅವರಲ್ಲೊಬ್ಬಾಕೆ ಸಾವಿನ ದುಃಖದಲ್ಲಿದ್ದಳು. ಬಡತನದ ಉಡುಪು ಅವಳದ್ದು ಹೆಡ್ ಗುಮಾಸ್ತನ ಮೇಜಿನ ಎದುರು ಕೂತಿದ್ದಳು. ಅವನು ಹೇಳಿದ್ದನ್ನು ಬರೆದುಕೊಳ್ಳುತಿದ್ದಳು. ಇನ್ನೊಬ್ಬಾಕೆ ಸ್ಥೂಲ ಕಾಯದ, ಕೆಂಪು ಕೆಂಪು ಮುಖದ ಮಹಿಳೆ. ಅದ್ಭುತವಾಗಿ ಡ್ರೆಸ್ಸು ಮಾಡಿಕೊಂಡಿದ್ದಳು. ಅವಳ ಎದೆಯ ಮೇಲೆ ಸಾಸರ್ ಗಾತ್ರದ ಬ್ರೂಚ್ ಇತ್ತು. ಆಕೆ ಒಂದು ಪಕ್ಕದಲ್ಲಿ ನಿಂತು ಯಾತಕ್ಕೋ ಕಾಯುತಿದ್ದಳು. ರಾಸ್ಕೋಲ್ನಿಕೋವ್ ತನ್ನ ಸಮನ್ಸ್ ಪತ್ರವನ್ನು ಹೆಡ್ ಗುಮಾಸ್ತನಿಗೆ ಕೊಟ್ಟ. ಅವನು ಸುಮ್ಮನೆ ಕಣ್ಣಾಡಿಸಿ, ‘ವೇಟ್ ಮಾಡು,’ ಅಂದು ದುಃಖದಲ್ಲಿದ್ದ ಮಹಿಳೆಯ ವಿಚಾರಕ್ಕೆ ಗಮನಕೊಟ್ಟ.

ರಾಸ್ಕೋಲ್ನಿಕೋವ್ ಸ್ವಲ್ಪ ಸರಾಗವಾಗಿ ಉಸಿರಾಡಿದ. ‘ಬೇರೆ ಯಾವುದೋ ವಿಚಾರಕ್ಕೆ ಕರೆಸಿರಬೇಕು!’ ನಿಧಾನವಾಗಿ ಧೈರ್ಯ ಕೂಡಿತು. ‘ಸಮಾಧಾನವಾಗಿರು, ಧೈರ್ಯ ಕಳಕೊಳ್ಳಬೇಡ,’ ಎಂದು ಮನಸ್ಸಿಗೆ ಬುದ್ಧಿ ಹೇಳಿದ.
‘ಒಂದಿಷ್ಟೆ ಎಚ್ಚರ ತಪ್ಪಿದರೂ, ಒಂದಿಷ್ಟೆ ಪೆದ್ದುತನ ತೋರಿಸಿದರೂ ಸಿಕ್ಕಿಬೀಳತೇನೆ! ಅಯ್ಯೋ, ಇಲ್ಲಿ ಗಾಳಿಯೇ ಇಲ್ಲವಲ್ಲಾ, ಉಸಿರು ಕಟ್ಟತಿದೆ, ತಲೆ ತಿರಗತಿದೆ, ಮನಸ್ಸು…ಕೂಡಾ…’

ಮನಸ್ಸಿನಲ್ಲಿ ತಳಮಳವೆದ್ದಿರುವುದು ಗೊತ್ತಾಗುತಿತ್ತು. ಮನಸ್ಸಿನ ಹತೋಟಿ ತಪ್ಪುತ್ತಿದೆ ಅನ್ನಿಸಿತು. ಸಂಬಂಧವೇ ಇಲ್ಲದ ಬೇರೆ ಯಾವುದಾದರೂ ವಿಷಯದ ಮೇಲೆ ಮನಸ್ಸು ನಿಲ್ಲಿಸಬೇಕು ಅಂದುಕೊಂಡರೂ ಸಾಧ್ಯವಾಗಲಿಲ್ಲ. ಹೆಡ್ ಗುಮಾಸ್ತನ ಬಗ್ಗೆ ಕುತೂಹಲ ಹುಟ್ಟಿತ್ತು. ಅವನ ಮನಸ್ಸಲ್ಲಿ ಏನಿರಬಹುದು ಎಂದು ಅವನ ಮುಖ ನೋಡಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ. ಸುಮಾರು ಇಪ್ಪತ್ತೆರಡು ವಯಸ್ಸಿನ ತೀರ ಎಳೆಯ ಯುವಕ ಅವನು. ಕಪ್ಪಿಟ್ಟ ಮುಖ ನೋಡಿದರೆ ವಯಸ್ಸಾದವನ ಹಾಗೆ ಕಾಣುತಿದ್ದ. ಫ್ಯಾಶನ್ನಿನ ಬಟ್ಟೆ ತೊಟ್ಟಿದ್ದ. ಪೊಮೇಡ್ ಹಚ್ಚಿದ ತಲೆಗೂದಲನ್ನು ಒತ್ತಿ ಬಾಚಿ ಮಧ್ಯದಲ್ಲಿ ಬೈತಲೆ ತೆಗೆದಿದ್ದ. ಕೈಯಲ್ಲಿ ಹಲವು, ಒಂದಲ್ಲ ಹಲವು, ಉಂಗುರ ಇದ್ದವು. ವೇಸ್ಟ್ ಕೋಟಿಗೆ ಬಂಗಾರದ ಚೈನು ಇತ್ತು. ಆಫೀಸಿಗೆ ಬಂದಿದ್ದ ವಿದೇಶೀಯನ ಜೊತೆ ತಕ್ಕಷ್ಟು ಚೆನ್ನಾಗಿ ಫ್ರೆಂಚು ಮಾತಾಡಿದ.

ಹಾಗೇ ಮಾತಾಡುತ್ತಾ, ಕಣ್ಣು ಕೋರೈಸುವ ಹಾಗೆ ಅಲಂಕಾರ ಮಾಡಿಕೊಂಡಿದ್ದ ಕೆಂಪು ಮುಖದ ಸ್ಥೂಲ ಕಾಯ ಮಹಿಳೆಗೆ ‘ದಯವಿಟ್ಟು ಕುಳಿತುಕೊಳ್ಳಿ, ಲೂಸಿಯಾ ಇವಾನೋವ್ನಾ,’ ಎಂದು ಹೇಳಿದ. ಪಕ್ಕದಲ್ಲೆ ಖಾಲಿ ಕುರ್ಚಿ ಇದ್ದರೂ ಕುಳಿತುಕೊಳ್ಳುವ ಧೈರ್ಯ ಇಲ್ಲದವಳ ಹಾಗೆ ಅವಳು ನಿಂತೇ ಇದ್ದಳು.

ಅವಳು ‘ಇಕ್ ಡಾನ್ಕೆ’ ಎಂದು ಜರ್ಮನ್ ಭಾಷೆಯಲ್ಲಿ ಥ್ಯಾಂಕ್ಸ್ ಹೇಳಿ ಅವಳ ಸಿಲ್ಕಿನ ಬಟ್ಟೆ ಸರಬರ ಸದ್ದು ಮಾಡುವ ಹಾಗೆ ಕುರ್ಚಿಯ ಮೇಲೆ ಕುಳಿತಳು. ಬಿಳಿಯ ಕಸೂತಿಯ ಅಂಚು ಇದ್ದ ತೆಳು ನೀಲಿ ಬಣ್ಣದ ಅವಳ ದಿರುಸು ಬೆಲೂನಿನ ಹಾಗೆ ಉಬ್ಬಿ ಇಡೀ ಅರ್ಧ ಆಫೀಸನ್ನೆ ಆವರಿಸುವ ಹಾಗೆ ಕಂಡಿತು. ವಾಕರಿಕೆ ಬರುವಷ್ಟು ತೀವ್ರವಾದ ಪರ್ಫ್ಯೂಮಿನ ವಾಸನೆ ಬರುತಿತ್ತು. ಅವಳ ನಗುವಿನಲ್ಲಿ ಹೇಡಿತನವೂ ಉದ್ಧಟ ಧೈರ್ಯವೂ ಬೆರೆತು ಅವಳ ಕಸಿವಿಸಿಯನ್ನು ತೋರುತಿತ್ತು. ದುಃಖದ ಉಡುಗೆ ತೊಟ್ಟಿದ್ದ ಮಹಿಳೆ ಕೊನೆಗೂ ಬರೆಯುವುದು ಮುಗಿಸಿ ಏಳುವುದರಲ್ಲಿದ್ದಳು. ಅಷ್ಟರಲ್ಲಿ ಏನೋ ಸದ್ದು ಕೇಳಿಸಿತು. ಆಫೀಸರು ಒಳಕ್ಕೆ ಬಂದ; ತುಂಬ ಖುಷಿಯಲ್ಲಿರುವವನ ಹಾಗೆ, ಒಂದೊಂದು ಹೆಜ್ಜೆಗೂ ಭುಜ ಎಗರಿಸಿಕೊಂಡು ಹೆಜ್ಜೆ ಹಾಕುತ್ತ ಬಂದ. ಅಧಿಕಾರ ಲಾಂಛನವಿದ್ದ ಕ್ಯಾಪನ್ನು ಮೇಜಿನ ಮೇಲೆಸೆದು ಆರಾಮ ಕುರ್ಚಿಯ ಮೇಲೆ ಕೂತ. ಅವನನ್ನು ನೋಡುತಿದ್ದ ಹಾಗೇ ಸ್ಥೂಲ ಕಾಯದ ಮಹಿಳೆ ತಟ್ಟನೆದ್ದು ನಿಂತಳು, ಪರವಶಳಾದವಳ ಹಾಗೆ ಗೌರವ ತೋರುತ್ತ ಅವನೆದುರು ತಾನು ಕೂತಿರುವುದು ಸಾಧ್ಯವೇ ಇಲ್ಲ ಅನ್ನುವ ಹಾಗೆ ನಿಂತೇ ಇದ್ದಳು. ಅಧಿಕಾರಿ ಅವಳನ್ನ ಗಮನಿಸಲೂ ಇಲ್ಲ. ಅವನು ಲೆಫ್ಟಿನೆಂಟ್, ಅಂದರೆ, ಪೋಲೀಸ್ ಮುಖ್ಯಸ್ಥನ ಸಹಾಯಕ. ಮುಖದ ಮೇಲಿದ್ದ ಕೆಂಚು ಮೀಸೆ, ಅವನ ಸಣ್ಣ ಆಕಾರ ಎಲ್ಲವೂ ಕೇವಲ ಉದ್ಧಟತನವನ್ನು ಮಾತ್ರ ತೋರುತಿದ್ದವು. ಕಣ್ಣಂಚಿನಲ್ಲೆ ರಾಸ್ಕೋಲ್ನಿಕೋವ್‌ ನತ್ತ ನೋಡಿದ. ಆ ಓರೆ ನೋಟದಲ್ಲಿ ಕೋಪವಿತ್ತು. ರಾಸ್ಕೋಲ್ನಿಕೋವ್‌ ನ ಉಡುಪು ಚಿಂದಿಯೆದ್ದಿದ್ದರೂ ಅವನ ನಿಲುವಿನಲ್ಲಿ ಆ ಉಡುಪಿಗೆ ತಕ್ಕ ದೈನ್ಯವಿರಲಿಲ್ಲ. ರಾಸ್ಕೋಲ್ನಿಕೋವ್ ಅವಿವೇಕಿಯ ಹಾಗೆ ಅಧಿಕಾರಿಯನ್ನೆ ಬಹಳ ಹೊತ್ತು ದಿಟ್ಟಿಸಿನೋಡುತಿದ್ದ. ಅದರಿಂದ ಅಧಿಕಾರಿ ಕೆರಳಿದ್ದ.

‘ಏನು ಬೇಕು ನಿನಗೆ?’ ಕಿರುಚಿದ. ಇಂಥ ಚಿಂದಿಯುಟ್ಟ ಭಿಕ್ಷುಕನಂಥವನು ನನ್ನಂಥ ಅಧಿಕಾರಿಯ ಬೆಂಕಿಯಂಥ ನೋಟವನ್ನು ತಪ್ಪಿಸಿಕೊಳ್ಳುವ ಯೋಚನೆ ಕೂಡ ಮಾಡುತ್ತಿಲ್ಲವಲ್ಲ ಅನ್ನುವ ಆಶ್ಚರ್ಯದಲ್ಲಿ ಅವನ ದನಿ ಏರಿತ್ತು.

‘ನನಗೆ… ನೋಟೀಸು… ಬಂದಿತ್ತು…’ ರಾಸ್ಕೋಲ್ನಿಕೋವ್ ತಡವರಿಸುತ್ತ ಮಾತಾಡಿದ.

‘ಅದೇ, ಸ್ಟೂಡೆಂಟು, ಬಾಕಿ ದುಡ್ಡು ವಸೂಲಿ ಕೇಸು,’ ಗುಮಾಸ್ತ ಫೈಲಿನಿಂದ ಮುಖವೆತ್ತಿ ಬಡಬಡಿಸಿದ. ರಾಸ್ಕೋಲ್ನಿಕೋವ್‌ ನ ಮುಂದೆ ಒಂದು ರಿಜಿಸ್ಟರ್ ಹಿಡಿದು, ಪುಟ ತಿರುವಿ, ‘ಇಗೋ, ನೋಡು!’ ಅಂದ.

‘ದುಡ್ಡು? ಯಾವ ದುಡ್ಡು?… ಹಾಗಾದರೆ ಖಂಡಿತ ಇದು ಅದಕ್ಕಲ್ಲ!’ ಅಂದುಕೊಂಡ ರಾಸ್ಕೋಲ್ನಿಕೋವ್. ಸಂತೋಷದಲ್ಲಿ ಮೈ ಕಂಪಿಸಿತು. ವರ್ಣಿಸಲಾಗದಂಥ ನಿರಾಳ ಮೂಡಿತು. ಬೆನ್ನ ಮೇಲಿದ್ದ ಭಾರ ಈಗ ಇಲ್ಲ ಅನ್ನಿಸಿತ್ತು.

‘ನೀನು ಎಷ್ಟು ಹೊತ್ತಿಗೆ ಬರಬೇಕು ಅಂತ ಅದರಲ್ಲಿ ಬರೆದಿದೆ, ಎಷ್ಟು ಹೊತ್ತಿಗೆ ಬರತಾ ಇದೀಯ? ಒಂಬತ್ತು ಗಂಟೆಗೆ ಬಾ ಅಂದರೆ ಈಗ ಹನ್ನೊಂದು ದಾಟಿದ ಮೇಲೆ ಬಂದಿದೀಯಾ!’ ಲೆಫ್ಟಿನೆಂಟ್ ಕೂಗಾಡಿದ. ಯಾಕೋ ತನಗೆ ಅವಮಾನವಾಗುತ್ತಿದೆ ಅನ್ನಿಸಿತ್ತು ಅವನಿಗೆ.

ಸೋಫಾಮೇಲೆ ಕೂರುತ್ತಾ ‘ತಡಮಾಡಬಾರದು, ಈಗಲೇ, ಈ ಕ್ಷಣವೇ ಹೋಗಿ ಬಿಸಾಕಬೇಕು!’ ಅನ್ನುತಿದ್ದರೂ ತಲೆ ಮಾತ್ರ ದಿಂಬಿನ ಮೇಲೆ ಒರಗಿತು. ಸಹಿಸಲಾಗದಷ್ಟು ಚಳಿ ಹುಟ್ಟಿ ಮೈ ಹಿಮದ ಹಾಗಿತ್ತು. ಓವರ್ ಕೋಟು ಮತ್ತೆ ಮೈಮೇಲೆ ಎಳಕೊಂಡ.

‘ನನಗೆ ಅದು ಸಿಕ್ಕಿದ್ದೇ ಕಾಲು ಗಂಟೆ ಮೊದಲು,’ ರಾಸ್ಕೋಲ್ನಿಕೋವ್ ಗಟ್ಟಿ ದನಿಯಲ್ಲಿ ಹೇಳಿದ. ಇದ್ದಕಿದ್ದ ಹಾಗೆ ಕೋಪ ಬಂದಿತ್ತು. ಈ ಕೋಪದಿಂದ ಒಂದು ಥರ ಸುಖ ಸಿಗುತಿತ್ತು. ‘ಜ್ವರ ಬಂದು ಸಾಯತಾ ಇದ್ದರೂ ಬಂದಿದೀನಲ್ಲ, ಅಷ್ಟು ಸಾಕು,’ ಅಂದ.

‘ಕೂಗಾಡಬೇಡ!’

‘ನಾನು ಕೂಗಾಡತಾ ಇಲ್ಲ, ಮೆತ್ತಗೇ ಹೇಳತಾ ಇದೇನೆ. ಕೂಗಾಡತಾ ಇರುವುದು ನೀವು. ನಾನು ಸ್ಟೂಡೆಂಟು. ಯಾರಾದರೂ ನನ್ನ ಮೇಲೆ ಎಗರಾಡಿದರೆ ಇಷ್ಟ ಆಗಲ್ಲ.’

ಸಹಾಯಕ ಆಫೀಸರನಿಗೆ ಎಂಥ ಕೋಪ ಬಂದಿತೆಂದರೆ ಅರ್ಥವಾಗುವ ಹಾಗೆ ಮಾತು ಕೂಡ ಆಡಲು ಆಗಲಿಲ್ಲ. ಬಾಯಿ ತಡವರಿಸಿ ಏನೇನೋ ಸದ್ದು ಹೊರಡಿಸಿದ. ತಟ್ಟನೆ ಎದ್ದು ನಿಂತು, ‘ಸುಮ್ಮನೆ ಇರು! ಇದು ಆಫೀಸು. ಮರ್ಯಾದೆಯಿಂದ ನಡೆದುಕೊಳ್ಳಬೇಕು!’ ಅಂದ.

‘ನೀವೂ ಆಫೀಸಲ್ಲೆ ಇದ್ದೀರಿ. ಬರೀ ಕೂಗಾಡತಾ ಇರುವುದು ಮಾತ್ರ ಅಲ್ಲ, ಸಿಗರೇಟೂ ಸೇದುತ್ತಾ ಇದ್ದೀರಿ. ನಮಗೆಲ್ಲ ಅವಮಾನ ಆಗುವ ಹಾಗೆ ನಡೆದುಕೊಳ್ಳತಾ ಇದ್ದೀರಿ!’ ಇಷ್ಟು ಹೇಳಿದ್ದರಿಂದ ರಾಸ್ಕೋಲ್ನಿಕೋವ್‌ ಗೆ ವಿವರಿಸಲಾಗದಂಥ ಸಂತೋಷವಾಗಿತ್ತು. ಗುಮಾಸ್ತ ಮುಖದಲ್ಲಿ ನಗುವಿಟ್ಟುಕೊಂಡು ಅವನನ್ನು ನೋಡುತಿದ್ದ. ಕೋಪಿಷ್ಠ ಲೆಫ್ಟಿನೆಂಟ್ ತಬ್ಬಿಬ್ಬಾಗಿದ್ದ.

‘ಅದನ್ನ ಕೇಳುವುದಕ್ಕೆ ನೀನು ಯಾರು! ಕೇಳಿದ್ದಕ್ಕೆ ಉತ್ತರ ಕೊಡು, ಅಷ್ಟೆ! ಇವನಿಗೆ ತೋರಿಸಿ, ಅಲೆಕ್ಸಾಂಡರ್ ಗ್ರಿಗೊರಿಯೆವಿಚ್. ನಿನ್ನ ಮೇಲೆ ಕಂಪ್ಲೇಂಟು ಬಂದಿವೆ! ರಣಹದ್ದಿನಂಥವನು, ಸಾಲ ತಗೊಂಡು ಕೈ ಎತ್ತಿದ್ದೀಯ!ʼ

ಅವನ ಮಾತು ರಾಸ್ಕೋಲ್ನಿಕೋವ್ ಕಿವಿಗೆ ಬೀಳಲೇ ಇಲ್ಲ. ಗಬಕ್ಕನೆ ಕಾಗದ ತೆಗೆದುಕೊಂಡು ಏನು ಉತ್ತರ ಹೇಳಲೆಂದು ಯೋಚನೆ ಮಾಡುತಿದ್ದ. ಎರಡು ಸಾರಿ ಓದಿದರೂ ಏನೂ ತಿಳಿಯಲಿಲ್ಲ.

‘ಏನಿದು?’ ಎಂದು ಗುಮಾಸ್ತನನ್ನು ಕೇಳಿದ.

‘ನೀನು ಪ್ರಾಮಿಸರಿ ನೋಟು ಬರಕೊಟ್ಟು ಸಾಲ ತೆಗೆದುಕೊಂಡಿದ್ದೆಯಲ್ಲ, ಅದಕ್ಕೆ ಸಂಬಂಧಪಟ್ಟಿದ್ದು. ಅಸಲು, ಬಡ್ಡಿ, ಕಚೇರಿ ಖರ್ಚು, ಜುಲ್ಮಾನೆ ಎಲ್ಲ ಸೇರಿ ಈಗ ತೀರಿಸಬೇಕು ಅಥವಾ ಯಾವಾಗ ತೀರಿಸುತ್ತೀಯ ಅನ್ನುವುದನ್ನ ಬರೆದು ರುಜು ಹಾಕಿಕೊಡಬೇಕು. ಸಾಲ ತೀರಿಸುವವರೆಗೆ ನೀನು ಊರು ಬಿಟ್ಟು ಎಲ್ಲೂ ಹೋಗುವ ಹಾಗಿಲ್ಲ, ನಮಗೆ ತಿಳಿಸದೆ ನಿನ್ನ ಆಸ್ತಿ ಮಾರಾಟಮಾಡುವ ಹಾಗಿಲ್ಲ. ನಿನಗೆ ಸಾಲ ಕೊಟ್ಟವರು ನಿನ್ನ ಆಸ್ತಿಯನ್ನ ಮಾರಾಟ ಮಾಡಿ ಸಾಲಕ್ಕೆ ವಜಾ ಹಾಕಿಕೊಳ್ಳಬಹುದು, ಇದು ಕಾನೂನು.’

‘ನಾನು ಯಾರಿಗೂ ಏನೂ ಕೊಡಬೇಕಾಗಿಲ್ಲ!’

‘ನಮಗೆ ಅದೆಲ್ಲ ಗೊತ್ತಿಲ್ಲ. ಒಂದು ನೂರ ಹದಿನೈದು ರೂಬಲ್ ವಸೂಲಿ ಮಾಡಿಕೊಡಿ ಎಂದು ನಿನ್ನ ಪ್ರಾಮಿಸರಿ ನೋಟು ಒಪ್ಪಿಸಿ ಅರ್ಜಿಕೊಟ್ಟಿದಾರೆ. ಪತ್ರವು ಕಾನೂಬದ್ಧವಾಗಿದೆ ಅನ್ನುವ ಪ್ರಮಾಣ ಪತ್ರ ಕೊಟ್ಟಿದಾರೆ. ನೀನು ಕೌನ್ಸಿಲರ್ ಚೆಬರೋವ್‌ ಗೆ ಕೊಡಬೇಕಾದ ಹಣವನ್ನು ಝಾರಿನಿಟ್ಸಿನ್‌ ನ ವಿಧವೆ ಒಂಬತ್ತು ತಿಂಗಳ ಹಿಂದೆ ಕೊಟ್ಟಿದ್ದಳು, ಸದರಿ ಮೊತ್ತ ವಾಪಸು ಕೊಡುವುದಾಗಿ ಪತ್ರ ಬರೆದುಕೊಟ್ಟಿದ್ದೆ ನೀನು. ಅದಕ್ಕೆ ನಿನ್ನ ವಿವರಣೆ ಕೇಳುವುದಕ್ಕೆ ಕರೆಸಿದ್ದೇವೆ,’ ಎಂದ ಗುಮಾಸ್ತ.

‘ಆಕೆ ನಮ್ಮ ಮನೆಯ ಓನರು!’

‘ಆದರೇನಂತೆ?’

ಅಯ್ಯೋ ಪಾಪ ಅನ್ನುವ ಹಾಗೆ ವಿಷಾದದ ನಗು ತಂದುಕೊಂಡು, ಇದೇ ಮೊದಲ ಸಾರಿ ಆಫೀಸಿಗೆ ಬಂದು ಬೈಯಿಸಿಕೊಳ್ಳುತ್ತಿರುವ ಯುವಕನನ್ನು ‘ಗೆದ್ದೆ! ಈಗೇನು ಹೇಳುತ್ತೀಯ?’ ಎಂದು ಕೇಳುವಂಥ ಅಹಂ ಕೂಡ ಅವನಲ್ಲಿತ್ತು.

‘ಪ್ರಾಮಿಸರಿ ನೋಟು, ಸಾಲ ವಸೂಲಿ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವವರು ಯಾರು! ಚಿಂತೆ ಮಾಡುವುದಕ್ಕೆ, ಗಮನಕೊಡುವುದಕ್ಕೆ ಯೋಗ್ಯವಾದ ವಿಷಯವೇ ಇದು? ಅಲ್ಲೆ ನಿಂತಿದ್ದ, ಓದಿದ, ಕೇಳಿಸಿಕೊಂಡ, ಉತ್ತರಕೊಟ್ಟ, ಮುಗೀತು,’ ಅನ್ನಿಸಿತು ರಾಸ್ಕೋಲ್ನಿಕೋವ್‍ ಗೆ. ಎಲ್ಲವೂ ಯಾಂತ್ರಿಕವಾಗಿ ನಡೆದಿತ್ತು. ಬದುಕಿದೆ, ಮೈಮೇಲೆ ಕವಿದು ಬೀಳುವುದರಲ್ಲಿದ್ದ ಅಪಾಯ ದೂರವಾಯಿತು ಅನ್ನುವ ಗೆಲುವಿನ ಭಾವವಷ್ಟೆ ಅವನಲ್ಲಿ ತುಂಬಿತ್ತು. ಭವಿಷ್ಯದ ಚಿಂತೆ, ನಡೆದ ಸಂಗತಿಯ ವಿಶ್ಲೆಷಣೆ, ಸಂಶಯ, ಪ್ರಶ್ನೆ ಯಾವುದೂ ಇಲ್ಲದೆ ಈ ಕ್ಷಣದಲ್ಲಿ ಸುರಕ್ಷಿತವಾದ ಪ್ರಾಣಿಯ ಹಾಗೆ ಸ್ವಚ್ಛಂದ ಸಹಜ ಸಂತೋಷ ಅನುಭವಿಸುತಿದ್ದ. ಅದೇ ಹೊತ್ತಿಗೆ ಆಫೀಸಿನಲ್ಲಿ ಬಿರುಗಾಳಿಯೊಂದು ಏಳುತಿತ್ತು. ತನಗೆ ಅವಮಾನವಾಯಿತೆಂದು ಇನ್ನೂ ಕುದಿಯುತಿದ್ದ ಲೆಫ್ಟಿನೆಂಟ್ ತನ್ನೆಲ್ಲ ಗುಡುಗು ಸಿಡಿಲಬ್ಬರವನ್ನು ಬಡಪಾಯಿ ಶ್ರೀಮಂತ ಮಹಿಳೆಯ ಮೇಲೆ ತೋರುತಿದ್ದ. ಅವಳೋ ಮುಖದ ಮೇಲೆ ಅತೀ ಪೆದ್ದ ನಗುವನ್ನಿಟ್ಟುಕೊಂಡು ಅವನನ್ನೆ ದಿಟ್ಟಿಸುತಿದ್ದಳು. ದುಃಖದ ಉಡುಪು ತೊಟ್ಟಿದ್ದವಳು ಆಗಲೇ ಹೋಗಿಬಿಟ್ಟಿದ್ದಳು. ಲೆಫ್ಟಿನೆಂಟ್ ಈಗ ಶ್ರೀಮಂತ ಮಹಿಳೆಯ ಮೇಲೇ ಕೂಗಾಡಿದ. ‘ನಿಮ್ಮ ಮನೆಯಲ್ಲಿ ನಿನ್ನೆ ರಾತ್ರಿ ಏನಾಯಿತು? ಹ್ಞಾ? ಅಸಹ್ಯ, ಲಂಪಟತನ, ಇಡೀ ಬೀದಿಗೆ ಕೇಳುವಷ್ಟು ಗಲಾಟೆ? ಹೊಡೆದಾಟ, ಬಡಿದಾಟ, ಕುಡಿತ? ಏನು ಜೈಲಿಗೆ ಹೋಗಬೇಕು ಅಂತ ಆಸೆಯಾ? ಹತ್ತು ಸಾರಿ ಹೇಳಿದೇನೆ, ಇನ್ನೂ ಎಷ್ಟು ಸಾರಿ ಹೇಳಬೇಕು?’

ರಾಸ್ಕೋಲ್ನಿಕೋವ್‌ ನ ಕೈಯಲ್ಲಿದ್ದ ಕಾಗದ ಕೆಳಗೆ ಬಿತ್ತು. ಹೀಗೆ ಬೈಸಿಕೊಂಡ ಶ್ರೀಮಂತ ಮಹಿಳೆಯನ್ನು ಕಣ್ಣರಳಿಸಿ ನೋಡಿದ. ವಿಚಾರ ಏನೆಂದು ತಕ್ಷಣ ಅರ್ಥವಾಯಿತು ಅವನಿಗೆ. ಕಣ್ಣೆದುರು ನಡೆಯುತಿದ್ದ ಕಥೆಯನ್ನು ಖುಷಿಯಾಗಿ ನೋಡುತ್ತಾ, ಕೇಳುತ್ತಾ ನಗಬೇಕು, ನಗಬೇಕು, ನಗಬೇಕು ಅಂದುಕೊಂಡ.

‘ಇಲ್ಯಾ ಪೆಟ್ರೋವಿಚ್ ಸಾರ್,’ ಎಂದು ಮನವೊಲಿಸುವ ಹಾಗೆ ಶುರು ಮಾಡಿದ ಗುಮಾಸ್ತ ಸರಿಯಾದ ಸಮಯಕ್ಕೆ ಬರಲೆಂದು ಸುಮ್ಮನಾದ. ಸಿಟ್ಟು ಬಂದಾಗ ಲೆಫ್ಟಿನೆಂಟ್ ಇಲ್ಯಾ ಪೆಟ್ರೋವಿಚ್ ಯಾರ ಮಾತನ್ನೂ ಕೇಳುವುದಿಲ್ಲ ಅವನ್ನುವುದು ಅವನ ಸ್ವಂತ ಅನುಭವ.

ಈ ಮೊದಲು ಇಲ್ಯಾ ಪೆಟ್ರೊವಿಚ್‍ ನ ಬಿರು ಮಾತಿಗೆ ಹೆದರಿ ಕಂಪಿಸಿದ್ದ ಶ್ರೀಮಂತ ಮಹಿಳೆ ಈಗ ವಿಚಿತ್ರವೆನಿಸುವ ಹಾಗೆ ಅವನ ಬೈಗುಳ ಹೆಚ್ಚಿದಷ್ಟೂ ಸ್ನೇಹ ತೋರುತ್ತ, ಮರುಳು ಮಾಡುವ ಮಾದಕ ನಗೆಯನ್ನು ಅವನತ್ತ ಬೀರುತ್ತಿದ್ದಳು. ಈ ಕಾಲಿನಿಂದ ಆ ಕಾಲಿಗೆ ಮೈಯ ಭಾರ ಬದಲಾಯಿಸುತ್ತ ಮಾತಾಡಲು ಅವಕಾಶ ಸಿಕ್ಕೀತೆ ಎಂದು ಅಸಹನೆಯಿಂದ ಕಾಯುತಿದ್ದಳು. ಕೊನೆಗೂ ಅವಕಾಶ ಸಿಕ್ಕಿತು.

‘ನಮ್ಮ ಮನೇಲಿ ಗಲಾಟೆ ಇರಲಿಲ್ಲ, ಸಾರ್,’ ಬಾಣಲಿಗೆ ಸುರಿದ ಬಟಾಣಿ ಕಾಳಿನ ಹಾಗೆ ಮಾತು ಉದುರಿಸಿದಳು. ಅವಳು ರಶ್ಯನ್ ಭಾಷೆ ಸಲೀಸಾಗಿ ಮಾತಾಡಿದರೂ ಜರ್ಮನ್ ಉಚ್ಚಾರ ಕೇಳಿಸುತಿತ್ತು. ‘ಅವಮಾನ ಆಗುವಂಥದ್ದು ಏನೂ ಇರಲಿಲ್ಲ ಸಾರ್. ನನ್ನ ತಪ್ಪು ಏನೂ ಇಲ್ಲ. ನಮ್ಮದು ಮರ್ಯಾದಸ್ಥರ ಮನೆ. ಜಗಳ, ಗಲಾಟೆ ಅಂದರೆ ನನಗೆ ಆಗಲ್ಲ. ಅವನು ಮಾತ್ರ ಪೂರಾ ಕುಡಿದುಕೊಂಡು ಬರತಾನೆ. ಇನ್ನೂ ಮೂರು ಪಾಟಲು ಕೊಡು ಅಂತಾನೆ. ಹೊಂದು ಕಾಲು ಮೇಲೆತ್ತಿ ಒಂದೇ ಕಾಲಲ್ಲಿ ಲೆಗ್ ಹಾರ್ಮೋನಿ ಬಾರಸ್ತಾನೆ. ಮರ್ಯಾದಸ್ಥರ ಮನೇನಲ್ಲಿ ಹೀಗೆಲ್ಲ ಮಾಡಭಾರದು ಹಂತೀನಿ. ಅವನು ಲೆಗ್ ಹಾರ್ಮೊನಿ ಮುರದು ಹಾಕದ. ಅವನಿಗೆ ಮಾನ, ಮರ್ಯಾದೆ ಇಲ್ಲ. ಪಾಟಲು ತಗೊಂಡು ಹೆಲ್ಲಾರನೂ ಹೊಡೆಯೋದಕ್ಕೆ ಶುರುಮಾಡಿದ. ನಾನು ಓಡಿ ಹೋಗಿ ವಾಚ್‌ಮ್ಯಾನ್ ಕರಕೊಂಡು ಬರತೀನಿ. ಕಾರ್ಲ್ ಬಂದ. ಅವನು ಕಾರ್ಲ್ ಮೊಖಕ್ಕೆ ಗುದ್ದಿದ. ಹೆನ್ರಿಯೆಟೆಗೂ ಹೊಡದ. ನನ್ನ ಕೆನ್ನೆಗೆ ಹೈದು ಹೇಟು ಹಾಕಿದ. ಹಿದು ಮರ್ಯಾದಸ್ಥರ ಮನೆ ಹಂತ ಕೂಗಿ ಏಳತಾನೇ ಹಿದ್ದೆ, ಸಾರ್. ಅವನು ಬೀದಿ ಕಡೆ ಇರುವ ಕಿಟಕಿ ತೆಗೆದು, ಅಂದೀ ಥರಾ ಗುರುಗುರು ಶಬ್ದ ಮಾಡಿಕೊಂಡು ಕಿಟಕಿ ಹತ್ತಿ ನಿಂತುಕೊಂಡ. ಹವಮಾನ, ಬೀದಿಗೆ ಕಾಣಿಸುವ ಹಾಗೆ ಕಿಟಕಿಯಲ್ಲಿ ನಿಂತು ಅಂದೀ ಥರಾ ಗುರುಗುರು… ಥೂ ಥೂ ಧೂ. ಕಾರ್ಲ್ ಹೋಗಿ ಅವನ ಕೋಟು ಹಿಡಿದು ಹೆಳೆದಾ. ನಿಜ ಸಾರ್, ಕೋಟು ಹರೀತು. ಅದಕ್ಕೆ ಹದಿನೈದು ರೂಬಲ್ ದಂಡ ಕೊಡಬೇಕು ಅಂತ ಕೂಗಾಡಿದ. ಕೊಡದೆ ಇದ್ದರೆ ಎಲ್ಲಾ ಪೇಪರಿನಲ್ಲಿ ಬರೀತೀನಿ ಹಂದ. ಹೈದು ರೂಬಲ್ ನಾನೇ ಕೊಟ್ಟೆ, ಸಾರ್.’

‘ಹಾಗಾದರೆ ಅವನು ಸಾಹಿತೀ?’

‘ಹೌದು, ಸಾರ್. ಸ್ವಲ್ಪಾನೂ ಮರ್ಯಾದೇನೇ ಹಿಲ್ಲ, ಅಂತೇನೆ…’

‘ಸಾಕು, ಸಾಕು! ನಿನಗೆ ಮೊದಲೇ ಹೇಳಿದೇನೆ…’

‘ಸಾರ್…!’ ಗಮನ ಸೆಳೆಯುವ ಹಾಗೆ ಗುಮಾಸ್ತ ಮತ್ತೆ ಕರೆದ. ಲೆಫ್ಟಿನೆಂಟ್ ತಟ್ಟನೆ ಅವನ ಕಡೆ ನೋಡಿದ. ಗುಮಾಸ್ತ ಕಂಡೂ ಕಾಣದ ಹಾಗೆ ತಲೆ ತೂಗಿದ.

‘…ಸರಿಯಮ್ಮಾ, ನಿಮಗೆ ಕೊನೆಯ ಸಾರಿ ಹೇಳತೇನೆ, ನಿಜವಾಗಲೂ ಕೊನೇ ಸಾರಿ. ಮತ್ತೆ ಹೇಳಲ್ಲ. ನಿಮ್ಮಂಥ ಮರ್ಯಾದಸ್ಥರ ಮನೇಲ್ಲಿ ಇನ್ನೊಂದು ಸಾರಿ ಗಲಾಟೆ ಏನಾದರೂ ಆದರೆ ಜೈಲಿಗೆ ತಳ್ಳತೇನೆ, ಮರ್ಯಾದಸ್ಥರು ಹೇಳುವ ಹಾಗೆ-ನಿಮ್ಮನ್ನ ಬಂಧನಕ್ಕೆ ಗುರಿಪಡಿಸತೇನೆ. ಕೇಳಿಸಿತಾ? ಆ ಲೇಖಕ, ಸಾಹಿತಿ, ಕೋಟು ಹರಿಯಿತು ಅಂತ ಮರ್ಯಾದಸ್ಥರ ಮನೆಯಲ್ಲಿ ಐದು ರೂಬಲ್ ವಸೂಲಿ ಮಾಡಿದನಾ?’ ರಾಸ್ಕೋಲ್ನಿಕೋವ್‌ ನನ್ನು ತಿರಸ್ಕಾರದಿಂದ ದಿಟ್ಟಿಸುತ್ತಾ ‘ಸಾಹಿತಿಗಳೇ ಹೀಗೆ. ಮೊನ್ನೆ ಹೆಂಡದಂಗಡಿಗೆ ಹೋಗಿದ್ದ ಸಾಹಿತಿಯನ್ನ ಅಂಗಡಿಯವನು ದುಡ್ಡು ಕೇಳಿದರೆ ನಿಮ್ಮ ಮೇಲೆ ಪೇಪರಿಗೆ ಬರೀತೇನೆ ಅಂದನಂತೆ. ಇನ್ನೊಬ್ಬ ಸಾಹಿತಿ ಸ್ಟೀಮ್ ಬೋಟಿನಲ್ಲಿ ಸ್ಟೇಟ್ ಕೌನ್ಸಿಲರು, ಅವನ ಹೆಂಡತಿ, ಮಗಳ ಎದುರಿಗೆ ಆಡಬಾರದ ಮಾತೆಲ್ಲ ಆಡಿದ. ಇನ್ನೂ ಒಬ್ಬ ಸಾಹಿತಿಯನ್ನ ಹೊಡೆದು ಬೇಕರಿಯಿಂದ ಆಚೆಗೆ ನೂಕಿದರು. ಈ ಲೇಖಕರು, ಸಾಹಿತಿಗಳು, ಸ್ಟೂಡೆಂಟುಗಳು ಹೀಗೇನೇ… ಹೊರಡಿ, ಇನ್ನ… ನಿಮ್ಮ ಮನೆ ಕಡೆ ನಾನೇ ರೌಂಡು ಬರತೇನೆ, ಕೇಳಿಸಿತಾ?’

ಲೂಸಿಯ ಇವಾನೋವ್ನ ಆತುರಾತುರವಾಗಿ ಹೊರಟಳು. ಎಲ್ಲಾ ದಿಕ್ಕಿಗೂ ತಲೆ ಬಾಗಿಸಿ ಗೌರವ ಕೊಡುತ್ತ ಹಿಂದು ಹಿಂದಕ್ಕೆ ಹೆಚ್ಚೆ ಹಾಕುತ್ತಾ ಹೋಗಿ ಒಳಕ್ಕೆ ಬರುತಿದ್ದ ಪೋಲೀಸ್ ಮುಖ್ಯಸ್ಥ ನಿಕೊಡಿಮ್ ಫೋಮಿಚ್‌ ಗೆ ಡಿಕ್ಕಿ ಹೊಡೆದಳು. ನಳನಳಿಸುವ ಮುಖದ, ದಟ್ಟವಾದ ಸೈಡ್‌ಬರ್ನ್ ಇದ್ದ ಯುವಕ ಆಫೀಸರ್ ಅವನು. ಲೂಸಿಯ ಇವಾನೋವ್ನಾ ಮೆಟ್ಟಿಬಿದ್ದು, ಅವನಿಗೆ ನೆಲ ಮುಟ್ಟಿ ನಮಸ್ಕರಿಸಿ, ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಆಫೀಸಿನಿಂದ ಹಾರಿ ಹೋದಳು.

‘ಏನಿದು, ಗುಡುಗು, ಸಿಡಿಲು, ಬಿರುಗಾಳಿ, ಚಂಡಮಾರುತದ ಅಬ್ಬರ! ಕೆಳಗೆ ಬೀದಿಗೇ ಗಲಾಟೆ ಕೇಳುತ್ತಿದೆಯಲ್ಲಾ! ಸಿಕ್ಕಾಪಟ್ಟೆ ಕೋಪ ಬಂದಿರಬೇಕು! ಕುದಿಯುತ್ತಾ ಇದಾನೆ!’ ಮುಖ್ಯಸ್ಥ ನಿಕೋಡಿಮ್ ಫೋಮಿಚ್‌ ಇಲ್ಯಾ ಪೆಟ್ರೊವಿಚ್‌ನನ್ನು ನೋಡುತ್ತ ಸ್ನೇಹದ ದನಿಯಲ್ಲಿ ಮಾತಾಡಿದ.

ಸಭ್ಯನ ಹಾಗೆ ‘ಏನಿಲ್ಲ’ ಅನ್ನುವುದೂ ಕಷ್ಟವಾಗಿ ಪೆಟ್ರೊವಿಚ್, ‘ಎ-ಹೆಹೇ-ಏ-ಏನಿ-ಲ್ಲಾ…’ ಅನ್ನುತ್ತ ತಡವರಿಸಿ, ಹಾಳೆಗಳನ್ನು ಹಿಡಿದುಕೊಂಡು ಒಂದೊಂದು ಹೆಜ್ಜೆಗೆ ಒಂದೊಂದು ಭುಜ ಮುಂದೊತ್ತುತ್ತ ಅವನದೇ ಶೈಲಿಯಲ್ಲಿ ಮತ್ತೊಂದು ಟೇಬಲ್ಲಿನತ್ತ ಹೋದ. ‘ಸಾರ್, ಇಲ್ಲಿ ನೋಡಿ ಈ ಸಾಹಿತಿ, ಅಥವಾ ಸ್ಟೂಡೆಂಟು… ಅಲ್ಲಾ… ಸ್ಟೂಡೆಂಟು ಆಗಿದ್ದವನು ಅನ್ನಿ, ಸಾಲ ಕೊಡಬೇಕಾಗಿತ್ತು, ಕೊಟ್ಟಿಲ್ಲ. ಪ್ರಾಮಿಸರಿ ನೋಟು ಬರಕೊಟ್ಟಿದಾನೆ. ಸಾಲ ತೀರಿಸಿಲ್ಲ, ರೂಮು ಖಾಲಿ ಮಾಡು ಅಂದರೆ ಮಾಡಿಲ್ಲ. ಇವನ ಮೇಲೆ ಬಹಳ ಕಂಪ್ಲೇಂಟು ಇವೆ. ಇಂಥಾವನು ನನ್ನ ಜೊತೆ ಜಗಳ ತೆಗೀತಾನೆ. ನಾನು ಅವನ ಎದುರಿಗೆ ಸಿಗರೇಟು ಸೇದಬಾರದಂತೆ! ನೋಡಿ, ಈ ದೊಡ್ಡ ಮನುಷ್ಯನನ್ನ! ಈ ಸಭ್ಯಸ್ಥನ ಅವತಾರ ನೋಡೀ!’

ರಾಸ್ಕೋಲ್ನಿಕೋವ್‌ ನನ್ನು ನೋಡುತ್ತಾ ‘ಮಿತ್ರಾ, ಬಡತನ ಅನ್ನುವುದು ಕೆಟ್ಟದಲ್ಲ, ಪಾಪವಲ್ಲ. ನೀನು ಸಿಡಿಗುಂಡಿನಂಥವನು. ತಪ್ಪು ಮಾಡಿದರೆ ಸಹಿಸುವವನಲ್ಲ. ಅವನಿಂದ ನಿನಗೆ ಏನೋ ಬೇಜಾರಾಗಿದೆ ತಡೆಯುವುದಕ್ಕಾಗದೆ ಸಿಡಿದು ಮಾತಾಡಿದ್ದೀಯ. ಹಾಗೆ ಮಾಡಬಾರದು. ಅವನು ತುಂಬಾ ದೊಡ್ಡ ಮನಸ್ಸಿನವನು. ಸಿಡಿಮದ್ದು, ಸಿಡಿಮದ್ದು ಅವನು. ಭಗ್ ಅಂತ ಹೊತ್ತಿಕೊಂಡುಬಿಡತಾನೆ! ಆದರೂ ಅವನದು ಚಿನ್ನದಂಥ ಮನಸ್ಸು! ನಮ್ಮ ರೆಜಿಮೆಂಟಿನಲ್ಲಿ ಅವನನ್ನು ಗನ್ ಪೌಡರ್ ಅನ್ನತಾ ಇದ್ದೆವು,’ ಅಂದ ಪೋಲೀಸ್ ಮುಖ್ಯಸ್ಥ ನಿಕೋಡಿಮ್ ಫೋಮಿಚ್.

ಹೊಗಳಿಕೆಯಿಂದ ಸಮಾಧಾನಪಟ್ಟಿದ್ದ ಇಲ್ಯಾ ಪೆಟ್ರೊವಿಚ್, ‘ಎಂಥಾ ರೆಜಿಮೆಂಟು ನಮ್ಮದು!’ ಅಂದ. ಆದರೂ ಒಂದಿಷ್ಟು ಮುನಿಸು ಉಳಿದಿತ್ತು. ಅವರೆಲ್ಲರಿಗೂ ಸಂತೋಷವಾಗುವಂಥ ವಿಶೇಷವಾದ ಮಾತು ಏನಾದರು ಹೇಳಬೇಕು ಎಂದು ರಾಸ್ಕೋಲ್ನಿಕೋವ್‌ ಗೆ ತಟ್ಟನೆ ಅನ್ನಿಸಿತು.

ನಿಕೋಡಿಮ್‌ ನತ್ತ ನೋಡುತ್ತ, ‘ದಯವಿಟ್ಟು ಕ್ಷಮಿಸಿ, ಕ್ಯಾಪ್ಟನ್. ನೀವು ನನ್ನ ಪರಿಸ್ಥಿತಿ ಸ್ವಲ್ಪ ಅರ್ಥಮಾಡಿಕೊಳ್ಳಿ. ನಾನು ಅವಮರ್ಯಾದೆ ತೋರಿಸಿದ್ದರೆ ಖಂಡಿತ ಕ್ಷಮೆ ಕೇಳುತ್ತೇನೆ. ನಾನು ಬಡ ವಿದ್ಯಾರ್ಥಿ. ಕಾಯಿಲೆ ಇದೆ. ಬಡತನದಲ್ಲಿ ಬೆಂದಿದೇನೆ, (ಅದೇ ಮಾತು ಹೇಳಿದ: ‘ಬೆಂದಿದೇನೆ’). ಕಾಲೇಜು ಬಿಟ್ಟೆ, ಯಾಕೆ ಅಂದರೆ ದುಡ್ಡಿರಲಿಲ್ಲ. ಇನ್ನೇನು ಬರುವುದರಲ್ಲಿದೆ. ನಮ್ಮಮ್ಮ ಮತ್ತೆ ಅಕ್ಕ –ವೈ ಪ್ರಾಂತದವರು… ಸದ್ಯದಲ್ಲೆ ದುಡ್ಡು ಕಳಿಸತಾರೆ… ಸಾಲ ತೀರಿಸತೇನೆ. ನಮ್ಮ ಮನೆ ಓನರು ತುಂಬ ಒಳ್ಳೆಯ ಹೆಂಗಸು. ನನ್ನ ಮನೆ ಪಾಠ ತಪ್ಪಿ ಹೋಯಿತು, ನಾಲ್ಕು ತಿಂಗಳಿಂದ ಬಾಡಿಗೆ ಕೊಟ್ಟಿಲ್ಲ ಅನ್ನುವ ಸಿಟ್ಟು ಇದೆ. ಅದಕ್ಕೇ ನನಗೆ ಊಟ ಕೂಡ ಕಳಿಸತಾ ಇಲ್ಲ. ಈ ಪ್ರಾಮಿಸರಿ ನೋಟು ಏನು ಅನ್ನುವುದು ನನಗೆ ಅರ್ಥವೇ ಆಗಿಲ್ಲ! ದುಡ್ಡು ಕೊಡಬೇಕು ಅಂತ ಈಗ ಬಲವಂತ ಮಾಡತಿದಾಳೆ! ಹ್ಯಾಗೆ ಕೊಡಲಿ, ನೀವೇ ಹೇಳಿ!…’ ಅಂದ.

‘ಅದಕ್ಕೂ ನಮಗೂ ಸಂಬಂಧ ಇಲ್ಲಾ…’ ಗುಮಾಸ್ತ ಮಧ್ಯದಲ್ಲೆ ಬಾಯಿ ಹಾಕಿದ.

‘ಸ್ವಲ್ಪ ತಾಳಿ, ಸ್ವಲ್ಪ ತಾಳಿ. ನಿಜ, ನಿಮ್ಮ ಮಾತು,’ ಅನ್ನುತ್ತಾ ರಾಸ್ಕೋಲ್ನಿಕೋವ್ ಗುಮಾಸ್ತನನ್ನು ಬಿಟ್ಟು ನಿಕೋಡಿಮ್‌ ನನ್ನು ಉದ್ದೇಶಿಸಿಯೇ ಮಾತಾಡಿದ. ಈ ವಿಚಾರದಲ್ಲಿ ಯಾವ ಆಸಕ್ತಿಯೂ ಇಲ್ಲ, ಏನೋ ಕಾಗದ ಪತ್ರ ಹುಡುಕುತಿದ್ದೇನೆ ಎಂಬಂತೆ ತಿರಸ್ಕಾರವನ್ನು ನಟಿಸುತಿದ್ದ ಇಲ್ಯಾ ಪೆಟ್ರೊವಿಚ್‌ ಗೂ ಈ ಮಾತು ಹೇಳುತಿದ್ದೇನೆ ಎಂದು ಸೂಚಿಸುವುದಕ್ಕೆ ರಾಸ್ಕೋಲ್ನಿಕೋವ್ ಪ್ರಯತ್ನಪಟ್ಟ. ‘ನಾನು ಅವರ ಮನೆಯಲ್ಲಿ ಮೂರು ವರ್ಷದಿಂದ ಇದೇನೆ. ಊರಿಂದ ಬಂದಾಗಿನಿಂದಲೂ. ಮೊದಲಲ್ಲಿ… ಮೊದಲಲ್ಲಿ… ಸರಿ ಹೇಳತೇನೆ, ಮೊದಲು ನಮ್ಮ ಮನೆಯ ಓನರಮ್ಮ ಇದಾಳಲ್ಲ ಅವಳ ಮಗಳನ್ನ ಮದುವೆಯಾಗತೇನೆ ಅಂತ ಹೇಳಿದ್ದೆ. ಬರೀ ಮಾತಿನಲ್ಲಿ ಹೇಳಿದ್ದು ಅಷ್ಟೆ. ಹುಡುಗಿ ಚೆನ್ನಾಗಿದ್ದಳು, ಇಷ್ಟವಾಗಿತ್ತು, ಅಂದರೂ ಅದು ಪ್ರೀತಿ ಅಲ್ಲ. ವಯಸ್ಸಿನಲ್ಲಿ ಹುಟ್ಟುವ ಸೆಳೆತ. ನಮ್ಮ ಓನರು ಆ ದಿನಗಳಲ್ಲಿ ಧಾರಾಳವಾಗಿ ಸಾಲ ಕೊಡುತಿದ್ದಳು. ನಾನು ಮುಂದಾಲೋಚನೆ ಇಲ್ಲದೆ ಬದುಕತಿದ್ದೆ.”

‘ಇಂಥ ವಿವರಗಳು ನಮಗೆ ಬೇಕಾಗಿಲ್ಲ, ನೀನು ಹೇಳುವುದೂ ಬೇಡ,’ ಇಲ್ಯಾ ಪೆಟ್ರೊವಿಚ್ ಒರಟಾಗಿ ಹೇಳಿದ. ರಾಸ್ಕೋಲ್ನಿಕೋವ್ ಅವನನ್ನು ತಡೆದು ತಡವರಿಸಿಕೊಂಡು ಮಾತಾಡಿದ. ‘ಹೇಗಾಯಿತು, ಏನಾಯಿತು… ಎಲ್ಲ ಹೇಳತೇನೆ. ನಿಮಗೆ ಬೇಕಾಗಿಲ್ಲ, ನಿಜ… ಆದರೂ. ಒಂದು ವರ್ಷದ ಹಿಂದೆ ಆ ಹುಡುಗಿ ಟೈಫಸ್ ಆಗಿ ಸತ್ತು ಹೋದಳು. ನಾನು ಮಾಮೂಲೀ ಬಾಡಿಗೆದಾರನಾಗಿ ಉಳಿದೆ. ಓನರಮ್ಮ ಈಗಿರುವ ಮನೆಗೆ ಬಂದಳು, ಆವಾಗ ವಿಶ್ವಾಸದಿಂದಲೇ ಹೇಳಿದಳು—ನಿನ್ನ ಮೇಲೆ ನಂಬಿಕೆ ಇದೆ, ಆದರೂ ನೂರ ಐವತ್ತು ರೂಬಲ್‌ ಗಳಿಗೆ ಪ್ರಾಮಿಸರಿ ನೋಟು ಕೊಡು ಅಂದಳು. ಬರೆದುಕೊಟ್ಟೆ. ಅದು ನಾನು ಆಕೆಗೆ ತೀರಿಸಬೇಕಾಗಿರುವ ಸಾಲ. ನಾನು ಈ ಕಾಗದ ಬರಕೊಟ್ಟಾಗ ಎಷ್ಟು ಸಾಲ ಬೇಕಾದರೂ ತಗೋ, ನಾನೇನು ನಿನ್ನ ಪತ್ರ ಬಳಸಿಕೊಂಡು ದಾವ ಹಾಕಲ್ಲ, ನಿನ್ನ ಕೈಲಾದಾಗ ಸಾಲ ವಾಪಸ್ಸು ಕೊಡು ಅಂದಿದ್ದಳು. ಈಗ ನಾನು ಹೇಳುತಿದ್ದ ಮನೆ ಪಾಠಗಳೂ ಇಲ್ಲ. ಹೊಟ್ಟೆಗು ಗತಿ ಇಲ್ಲ ನನಗೆ. ಇಂಥ ಹೊತ್ತಿನಲ್ಲಿ ಸಾಲ ವಾಪಸ್ಸು ಕೇಳಬಹುದಾ? ಏನು ಹೇಳಲಿ ನಾನು?’

‘ನಿನ್ನ ಗೋಳಿನ ಕಥೆ ಕಟ್ಟಿಕೊಂಡು ನಮಗೇನೂ ಆಗಬೇಕಾಗಿಲ್ಲ. ಸಾಲ ತೀರಿಸುತ್ತೀಯಾ? ಯಾವಾಗ? ಅಷ್ಟನ್ನ ಬರದು ಕೊಡು. ನಿನ್ನ ಪ್ರೀತಿ, ನಿನ್ನ ಬಡತನ, ನಿನ್ನ ಹಸಿವು ಇವಕ್ಕೂ ನಮಗೂ ಸಂಬಂಧ ಇಲ್ಲ,’ ಇಲ್ಯಾ ಪೆಟ್ರೊವಿಚ್ ಸಿಟ್ಟಿನಲ್ಲಿ ಹೇಳಿದ.

‘ಅಷ್ಟು ಕ್ರೂಯಲ್ ಆಗಬಾರದು…’ ನಿಕೋಡಿಮ್ ಫೋಮಿಚ್‌ ಗೊಣಗಿಕೊಂಡ. ಟೇಬಲ್ಲಿನ ಮೇಲಿದ್ದ ಕಾಗದಗಳಿಗೆ ರುಜು ಹಾಕುವುದಕ್ಕೆ ಶುರುಮಾಡಿದ.

‘ಬರಿ,’ ಅಂದ ಗುಮಾಸ್ತ.

‘ಏನು ಬರೀಲಿ?’ ರಾಸ್ಕೋಲ್ನಿಕೋವ್ ಒಡ್ಡನ ಹಾಗೆ ಕೇಳಿದ.

‘ಹೇಳತೇನೆ, ಅದನ್ನ ಬರಿ.’

ಹೀಗೆಲ್ಲ ಮಾತಾಡಿದ ಮೇಲೆ ಗುಮಾಸ್ತನಿಗೆ ನನ್ನ ಮೇಲೆ ಗಮನ ಕಡಮೆಯಾಗಿದೆ, ಒಂದು ಥರ ತಿರಸ್ಕಾರ ತೋರಿಸುತಿದ್ದಾನೆ ಅನ್ನುವ ಕಲ್ಪನೆ ರಾಸ್ಕೋಲ್ನಿಕೋವ್ ಮನಸ್ಸಿಗೆ ಬಂದಿತು. ವಿಚಿತ್ರವೆಂದರೆ, ‘ಯಾರು ಏನಂದುಕೊಂಡರೆ ನನಗೇನು?’ ಅನ್ನುವ ಉದಾಸೀನವೂ ಅದು ಹೇಗೋ ತಟ್ಟನೆ ಅವನ ಮನಸ್ಸಿನಲ್ಲಿ ಹುಟ್ಟಿತ್ತು. ಅವನು ಒಂದಿಷ್ಟಾದರೂ ಯೋಚನೆ ಮಾಡಿದ್ದಿದ್ದರೆ ಈಗೊಂದು ನಿಮಿಷದ ಹಿಂದೆ ಏನೆಲ್ಲ ಮಾತಾಡಿದೆ, ನನ್ನ ಮನಸ್ಸಿನ ಭಾವನೆಗಳನ್ನ ಅವರ ಮೇಲೆ ಹೇರುವುದಕ್ಕೆ ನೋಡಿದೆ ಅನ್ನುವ ಆಶ್ಚರ್ಯ ಹುಟ್ಟುತಿತ್ತು. ಈ ಭಾವಗಳು ಎಲ್ಲಿಂದ ಬಂದವು? ಈ ಕ್ಷಣದಲ್ಲಿ ರೂಮಿನಲ್ಲಿರುವವರು ಪೋಲೀಸಿನವರಾಗಿರದೆ ಎಲ್ಲರೂ ಅವನ ಗೆಳೆಯರು, ಆಪ್ತರೇ ಆಗಿದ್ದರೂ ತನ್ನವರ ಬಗ್ಗೆ ಮನುಷ್ಯ ಸಾಮಾನ್ಯರು ಸಾಮಾನ್ಯವಾಗಿ ಹೇಳಿಕೊಳ್ಳುವಂಥ ಯಾವ ಶಬ್ದವೂ ಅವನ ತಲೆಗೆ ಹೊಳೆಯಲಿಲ್ಲ. ಅವನ ಮನಸ್ಸು ಹಾಗೆ, ಅಷ್ಟು ಖಾಲಿಯಾಗಿತ್ತು.

ಮಂಕು ಹಿಡಿಸುವಂಥ ನೋವು, ಕೊನೆಯಿರದ ಒಬ್ಬಂಟಿತನ, ಇವರೆಲ್ಲ ಯಾರೋ ನಾನು ಯಾರೋ ಅನ್ನುವ ಭಾವ ಅವನ ಮನಸ್ಸನ್ನು ಆವರಿಸಿತ್ತು. ಇಂಥ ಅಗಾಧ ಅಸಹ್ಯ, ತಿರಸ್ಕಾರಗಳು ಹುಟ್ಟುವುದಕ್ಕೆ ಇಲ್ಯಾ ಪೆಟ್ರೊವಿಚ್‌ ನ ಮುಂದೆ ಅವನು ಅಷ್ಟೊಂದು ಭಾವುಕವಾಗಿ ಮಾತಾಡಿದ್ದು ಕಾರಣವಲ್ಲ, ಇಲ್ಯಾ ತಾನು ಗೆದ್ದೆ ಎಂದು ಭಾವಿಸಿದ್ದೂ ಕಾರಣವಲ್ಲ. ನಾನು ಏನು ಹೇಳಿದರೇನು, ಇವರ ಗರ್ವ, ಈ ಲೆಫ್ಟಿನೆಂಟು, ಈ ಆಫೀಸರು, ಈ ಜರ್ಮನ್ ಹೆಂಗಸು, ಈ ಸಾಲ, ಈ ಪೋಲೀಸ್‌ ಸ್ಟೇಶನ್ನು ಇತ್ಯಾದಿ ಇತ್ಯಾದಿಗಳಿಂದ ನನಗೇನಾಗಬೇಕು ಅನ್ನಿಸಿಬಿಟ್ಟಿತು. ಅವನನ್ನು ಜೀವಂತವಾಗಿ ದಹಿಸಬೇಕು ಎಂಬ ಶಿಕ್ಷೆಯನ್ನು ಆ ಕ್ಷಣದಲ್ಲಿ ವಿಧಿಸಿದ್ದರೂ ಅದನ್ನು ಅವನು ಪೂರ್ತಿ ಗಮನಕೊಟ್ಟು ಕೇಳಿಸಿಕೊಳ್ಳುತ್ತಿರಲಿಲ್ಲ, ವಿಚಲಿತನಾಗುತ್ತಿರಲಿಲ್ಲ. ಹಿಂದೆ ಎಂದೂ ಆಗಿರದ ತೀರ ಹೊಸತಾದ, ಪೂರಾ ಅಪರಿಚಿತವಾದ ಅನುಭವ ಅವನಿಗೆ ಆಗುತ್ತಿತ್ತು. ‘ಪೋಲೀಸ್‌ ಸ್ಟೇಶನ್ನಿನಲ್ಲಿರುವ ಈ ಜನರ ಎದುರಿಗೆ, ಒಂದು ನಿಮಿಷದ ಹಿಂದೆ ಮಾಡಿದ ಹಾಗೆ ಮನಸ್ಸಿನ ಭಾವನೆ ಹೇಳಿಕೊಳ್ಳಲಾರೆ, ಭಾವನೆ ಇರಲಿ ಏನೂ ಹೇಳಿಕೊಳ್ಳಲಾರೆ, ಇವರು ಪೋಲೀಸಿನವರಲ್ಲದೆ ಸ್ವಂತ ಅಣ್ಣ, ಅಕ್ಕ ಆಗಿದ್ದರೂ ಅಷ್ಟೇ, ಪರಿಸ್ಥಿತಿ ಎಂಥದ್ದು ಬಂದರೂ ಇವರ ಜೊತೆ ಮಾತಾಡುವುದು, ಹೇಳಿಕೊಳ್ಳುವುದು ಸಾಧ್ಯವೇ ಇಲ್ಲ…’ ಇಂಥ ಭಾವನೆ, ಪೂರ್ತಿ ಅರ್ಥವಾಗದಿದ್ದರೂ ಅವನಲ್ಲಿ ಹುಟ್ಟಿತ್ತು. ಅಂಥ ಭಯಂಕರವಾದ ವಿಚಿತ್ರವಾದ ನೋವು ಅವನಿಗೆಂದೂ ಆಗಿರಲಿಲ್ಲ. ಇದು ಮನಸ್ಸಿನಲ್ಲಿ ಮೂಡಿದ ಎಚ್ಚರವಲ್ಲ ಬರಿಯ ಅನಿಸಿಕೆ, ಬರಿಯ ಐಡಿಯ, ಸ್ವಚ್ಛಂದವಾಗಿ ತನಗೆ ತಾನೇ ಮೂಡಿದ್ದು ಅನ್ನುವ ಸಂಗತಿ ಅವನಿಗೆ ಹಿಂಸೆಕೊಡುತಿತ್ತು. ಇಂಥ ಅನುಭವ ಹಿಂದೆ ಎಂದೂ ಆಗಿರಲಿಲ್ಲ.

ಪ್ರಾಮಿಸರಿ ನೋಟಿಗೆ ಸಂಬಂಧಪಟ್ಟ ಮಾಮೂಲು ಉತ್ತರವನ್ನು ಗುಮಾಸ್ತ ಹೇಳಿ ಬರೆಸುತಿದ್ದ. ಅಂದರೆ, ಈಗ ಸಾಲ ತೀರಿಸಲು ಸಾಧ್ಯವಿಲ್ಲ, ಇಂಥಾ ತಾರೀಕಿನ ಹೊತ್ತಿಗೆ ಖಂಡಿತ ಕೊಡುತ್ತೇನೆ, ಅಲ್ಲಿಯವರೆಗೆ ಊರು ಬಿಟ್ಟು ಹೋಗುವುದಿಲ್ಲ, ನನ್ನ ಆಸ್ತಿ ಪಾಸ್ತಿ ಮಾರಾಟ ಮಾಡುವುದಿಲ್ಲ, ಇತ್ಯಾದಿ ಇತ್ಯಾದಿ.

‘ಸರಿಯಾಗಿ ಪೆನ್ನು ಕೂಡ ಹಿಡಿದುಕೊಳ್ಳುವುದಕ್ಕೆ ಆಗತಾ ಇಲ್ಲ, ಹುಷಾರಿಲ್ಲವಾ?’ ಗುಮಾಸ್ತ ತಟ್ಟನೆ ಕುತೂಹಲ ತಾಳಿ ರಾಸ್ಕೋಲ್ನಿಕೋವ್‌ ನನ್ನು ಕೇಳಿದ.

‘ಹ್ಞೂಂ… ತಲೆ ತಿರುಗತಾ ಇದೆ… ಮುಂದೆ ಹೇಳೀ!’

‘ಅಷ್ಟೆ, ರುಜು ಹಾಕು.’

ಆ ಕಾಗದವನ್ನು ಎತ್ತಿಕೊಂಡ ಗುಮಾಸ್ತ ಬೇರೆಯ ಫೈಲಿನಲ್ಲಿ ಮುಳುಗಿ ಹೋದ.

ರಾಸ್ಕೋಲ್ನಿಕೋವ್ ಪೆನ್ನು ವಾಪಸ್ಸು ಕೊಟ್ಟ. ಎದ್ದೇಳುವ ಬದಲಾಗಿ ಮೊಳಕೈಯನ್ನು ಟೇಬಲ್ಲಿನ ಮೇಲೆ ಊರಿ ಎರಡೂ ಕೈಯಲ್ಲಿ ತಲೆ ಒತ್ತಿ ಹಿಡಿದುಕೊಂಡ. ತಲೆಗೆ ಯಾರೋ ಮೊಳೆ ಬಡಿಯುತಿದ್ದ ಹಾಗಿತ್ತು. ವಿಚಿತ್ರವಾದೊಂದು ಯೋಚನೆ ತಟ್ಟನೆ ಮೂಡಿತು. ಈಗ ಎದ್ದು, ನಿಕೋಡಿಮ್ ಫೋಮಿಚ್‌ ಹತ್ತಿರ ಹೋಗಿ, ನಿನ್ನೆ ನಡೆದದ್ದನ್ನು ಅವನಿಗೆ ಎಲ್ಲಾ ವಿವರವಾಗಿ ಹೇಳಿ, ಅಪಾರ್ಟ್ಮೆಂಟಿಗೆ ಕರಕೊಂಡು ಹೋಗಿ, ಆ ಮೂಲೆಯಲ್ಲಿ ಅವಿತಿಟ್ಟಿದ್ದ ವಸ್ತುಗಳನ್ನು ತೋರಿಸಿದರೆ ಹೇಗೆ-ಅನ್ನುವ ಯೋಚನೆ. ಅದೆಂಥ ಬಲವಾದ ಒತ್ತಡವೆಂದರೆ ಆಗಲೇ ಕುರ್ಚಿಯಿಂದ ಎದ್ದು ಎರಡು ಹೆಜ್ಜೆ ಇಟ್ಟಿದ್ದ. ‘ಒಂದು ನಿಮಿಷ ಯೋಚನೆ ಮಾಡಬೇಕಲ್ಲವಾ?’ ಅನ್ನುವ ವಿಚಾರ ತಲೆಯಲ್ಲಿ ಓಡಿತು.
‘ಯೋಚನೆ ಮಾಡುವುದೆಲ್ಲ ಬೇಕಾಗಿಲ್ಲ, ಸುಮ್ಮನೆ ಈ ಹೊರೆ ಇಳಿಸಿದರೆ ಒಳ್ಳೆಯದು!’ ಅನ್ನಿಸಿತು. ನೆಲದಲ್ಲಿ ಬೇರು ಬಿಟ್ಟವನ ಹಾಗೆ ನಿಂತ. ನಿಕೋಡಿಮ್ ಫೋಮಿಚ್‌ ಉದ್ವಿಗ್ನನಾಗಿ ಇಲ್ಯಾ ಪೆಟ್ರೊವಿಚ್‌ ಗೆ ಏನೋ ಹೇಳುತಿದ್ದ. ಅವನ ಒಂದೆರಡು ಮಾತು ಕಿವಿಗೆ ಬಿದ್ದವು.

‘ಇಂಪಾಸಿಬಲ್. ಇಬ್ಬರಿಗೂ ಬಿಡುಗಡೆ ಆಗತ್ತೆ! ಮೊದಲನೆಯದಾಗಿ ಅವರ ವಿರುದ್ಧ ಏನೂ ಸಾಕ್ಷಿ ಇಲ್ಲ. ಅವರೇ ಮಾಡಿದ್ದಾದರೆ ವಾಚ್‌ಮ್ಯಾನ್‌ ನ ಯಾಕೆ ಕರೆದುಕೊಂಡು ಬಂದರು? ಸಿಕ್ಕಿಬೀಳಬೇಕು ಅಂತಲಾ? ಅಥವಾ ತಾವು ಮಾಡಿಲ್ಲ ಅಂತ ತೋರಿಸಿಕೊಳ್ಳುವುದಕ್ಕಾ? ಉಹ್ಞುಂ, ಅಷ್ಟೊಂದು ಜಾಣತನ ಇರಲಾರದು! ವಾಚ್‌ಮ್ಯಾನು, ಹೆಂಗಸು ಇಬ್ಬರೂ ಆ ಸ್ಟೂಡೆಂಟು ಗೇಟು ದಾಟಿ ಬಂದಿದ್ದನ್ನು ನೋಡಿದಾರೆ. ಅವನು ಸ್ನೇಹಿತರ ಹತ್ತಿರ ಮಾತಾಡುತ್ತ ಇದ್ದ, ವಾಚ್‌ಮ್ಯಾನ್ ಹತ್ತಿರ ಬಂದು ಮುದುಕಿಯ ಮನೆ ನಂಬರು ಕೇಳಿದಾನೆ. ಕೊಲೆ ಮಾಡುವ ಉದ್ದೇಶಕ್ಕೆ ಬಂದಿದ್ದರೆ ಹೀಗೆ ಮಾಡುತಿದ್ದನಾ? ಇನ್ನು, ಕೋಚ್, ಬೆಳ್ಳಿ ಸಾಮಾನಿನ ಅಂಗಡಿಯಲ್ಲಿ ಅರ್ಧಗಂಟೆ ಇದ್ದು ಆಮೇಲೆ ಮುದುಕಿ ಹತ್ತಿರ ಹೋದ. ಅವನು ಹೋದದ್ದು ಏಳೂ ಮುಕ್ಕಾಲಿಗೆ… ಯೋಚನೆ ಮಾಡು…’

‘ಆದರೆ, ಸಾರ್, ಅವರು ಬಾಗಿಲು ತಟ್ಟಿದರು, ಚಿಲಕ ಹಾಕಿತ್ತು, ವಾಚ್‌ಮ್ಯಾನ್ ಕರಕೊಂಡು ಬರುವ ಹೊತ್ತಿಗೆ ಮೂರು ನಿಮಿಷ ಆಯಿತು, ಆಗ ಬಾಗಿಲ ಚಿಲಕ ಹಾಕಿರಲಿಲ್ಲ ಅನ್ನುತಾರಲ್ಲ, ಇದರ ಕಥೆ ಏನು…’

‘ಅದೇ ಮತ್ತೆ. ಕೊಲೆಗಾರ ಒಳಗೇ ಇದ್ದ, ಬಾಗಿಲ ಚಿಲಕ ಹಾಕಿಕೊಂಡಿದ್ದ. ಕೋಚ್ ಪೆದ್ದನ ಥರ ವಾಚ್‌ಮ್ಯಾನ್‌ ನ ಕರಕೊಂಡು ಬರುವುದಕ್ಕೆ ಹೋಗದೆ ಇದ್ದಿದ್ದರೆ ಖಂಡಿತ ಸಿಕ್ಕಿಬೀಳತಿದ್ದ. ಅವನು ಹೋದ ಅವಕಾಶ ನೋಡಿಕೊಂಡು ಕೊಲೆಗಾರ ಆಚೆಗೆ ಬಂದು ಹೇಗೋ ಮೆಟ್ಟಿಲು ಇಳಿದು ಹೋಗಿದಾನೆ. ಆ ಕೋಚ್ ಎರಡೂ ಕೈಯಲ್ಲಿ ಶಿಲುಬೆಯಾಕರದಲ್ಲಿ ಕ್ರಾಸ್ ಮಾಡಿಕೊಳ್ಳುತ್ತಾ, ‘ನಾನು ಅಲ್ಲೇ ಇದ್ದಿದ್ದರೆ ಅವನು ಬಂದು ನನ್ನನ್ನೂ ಕೊಂದು ಹಾಕುತ್ತಿದ್ದ,’ ಅನ್ನತಾನೆ. ಈಗ ಚರ್ಚಿಗೆ ಹೋಗಿ ಥ್ಯಾಂಕ್ಸ್ ಗೀವಿಂಗ್ ಹರಕೆ ತೀರಿಸತಾನೆ ಅಂತ ಕಾಣತ್ತೆ… ಹ್ಹೆಹ್ಹೆ…!’

‘ಕೊಲೆಗಾರನನ್ನ ಯಾರೂ ನೋಡಿ ಕೂಡ ನೋಡಲಿಲ್ಲವಾ?’

‘ಹೇಗೆ ನೋಡತಾರೆ? ಆ ಮನೆ ನೋಹನ ನೌಕೆ ಥರ ಇದೆ,’ ಅವರ ಮಾತು ಕೇಳುತಿದ್ದ ಗುಮಾಸ್ತ ಕೂತಲ್ಲಿಂದಲೇ ಟಿಪ್ಪಣಿ ಸೇರಿಸಿದ.

‘ಕೇಸು ಕ್ಲಿಯರ್ ಆಗಿದೆ!’ ಮುಖ್ಯಸ್ಥ ನಿಕೋದಿಮ್ ಫೋಮಿಚ್ ಖಾರವಾಗಿ ಹೇಳಿದ.

‘ಇಲ್ಲ, ಕೇಸು ತುಂಬ ಅಸ್ಪಷ್ಟ,’ ಲೆಫ್ಟಿನೆಂಟ್ ಇಲ್ಯಾ ಪೆಟ್ರೊವಿಚ್ ಹಟ ಮಾಡುವವನ ಹಾಗೆ ಹೇಳಿದ.

ರಾಸ್ಕೋಲ್ನಿಕೋವ್ ಹ್ಯಾಟು ಎತ್ತಿಕೊಂಡು ಬಾಗಿಲ ಕಡೆ ಹೆಜ್ಜೆ ಹಾಕಿದ; ಬಾಗಿಲವರೆಗೂ ಹೋಗಲು ಆಗಲಿಲ್ಲ…
ಎಚ್ಚರಗೊಂಡಾಗ ಕುರ್ಚಿಯ ಮೇಲೆ ಕೂತಿದ್ದ, ಬಲಗಡೆ ಯಾರೋ ಅವನನ್ನು ಹಿಡಿದುಕೊಂಡಿದ್ದರು, ಎಡಗಡೆ ಇನ್ನು ಯಾರೋ ಒಬ್ಬ ಹಳದೀ ಲೋಟದಲ್ಲಿ ಹಳದೀ ನೀರು ಹಿಡಿದು ನಿಂತಿದ್ದ, ನಿಕೋದಿಮ್ ಫೋಮಿಚ್‌ ಅವನ ಎದುರು ನಿಂತು ದಿಟ್ಟಿಸಿನೋಡುತಿದ್ದ. ರಾಸ್ಕೋಲ್ನಿಕೋವ್ ಕುರ್ಚಿಯಿಂದ ಎದ್ದ.

‘ಹುಷಾರಿಲ್ಲವಾ?’ನಿಕೋದಿಮ್ ಫೋಮಿಚ್ ಬಿಗುಮಾನದಲ್ಲಿ ಕೇಳಿದ.

‘ರುಜು ಹಾಕುವುದಕ್ಕೆ ಪೆನ್ನು ಹಿಡಿದುಕೊಳ್ಳುವುದಕ್ಕೂ ಆಗತಿರಲಿಲ್ಲ ಅವನಿಗೆ,’ ಗುಮಾಸ್ತ ತನ್ನ ಸೀಟಿನಲ್ಲಿ ಕೂತು ಫೈಲು ಎತ್ತಿಕೊಳ್ಳುತ್ತ ಹೇಳಿದ.

‘ಆರೋಗ್ಯ ಕೆಟ್ಟು ಎಷ್ಟು ದಿನ ಆಯಿತು?’ ಇಲ್ಯಾ ಪೆಟ್ರೊವಿಚ್ ಕೂತಲ್ಲಿದಂದಲೇ ಕೇಳಿದ. ಈ ಕಾಯಿಲೆಯ ಮನುಷ್ಯ ಎಚ್ಚರ ತಪ್ಪಿದಾಗ ಅವನೂ ಬಂದು ನೋಡಿದ್ದ, ಅವನಿಗೆ ಎಚ್ಚರವಾಗುತಿದ್ದ ಹಾಗೇ ತನ್ನ ಜಾಗಕ್ಕೆ ವಾಪಸ್ಸು ಹೋಗಿದ್ದ.

‘ನಿನ್ನೆಯಿಂದ…’ ರಾಸ್ಕೋಲ್ನಿಕೋವ್ ಗೊಣಗಿದ.

‘ನಿನ್ನೆ ಹೊರಗೆ ಹೋಗಿದ್ದೆಯಾ?’

‘ಹ್ಞೂಂ.’

‘ಕಾಯಿಲೆ ಇದ್ದರೂ?’

‘ಹ್ಞೂಂ, ಕಾಯಿಲೆ ಇದ್ದರೂ.’

‘ಎಷ್ಟು ಹೊತ್ತಿನಲ್ಲಿ?’

‘ಸಾಯಂಕಾಲ ಏಳು ಗಂಟೆ ಆಗಿತ್ತು.’

‘ಎಲ್ಲಿಗೆ ಹೋಗಿದ್ದೆ?’

‘ಹೀಗೇ ರಸ್ತೆ ಮೇಲೆ ಹೋದೆ.’

‘ನಿಜಾ ತಾನೇ.’

ತನ್ನನ್ನು ದಿಟ್ಟಿಸುತಿದ್ದ ಇಲ್ಯಾ ಪೆಟ್ರೊವಿಚ್ ನಿಂದ ತನ್ನ ಜ್ವರದ ನೋಟ ಕದಲಿಸದೆ ರಾಸ್ಕೋಲ್ನಿಕೋವ್ ಪುಟ್ಟ ಪುಟ್ಟ ವಾಕ್ಯದಲ್ಲಿ ಉತ್ತರ ಹೇಳಿದ.

‘ನೆಟ್ಟಗೆ ನಿಂತುಕೊಳ್ಳುವುದಕ್ಕೂ ಆಗಲ್ಲ ಅವನಿಗೆ, ಅಂಥಾದ್ದರಲ್ಲಿ…ʼ ನಿಕೋದಿಮ್ ಫೋಮಿಚ್ ಮಾತು ಶುರುಮಾಡಿದ.

‘ಆದರೂ ಪರವಾಗಿಲ್ಲ!’ ಇಲ್ಯಾ ಪೆಟ್ರೊವಿಚ್ ವಿಶೇಷವೇನೋ ಹೇಳುವ ದನಿಯಲ್ಲಿ ನುಡಿದ ನಿಕೋದಿಮ್ ಫೋಮಿಚ್ ಏನೋ ಹೇಳುವವನಿದ್ದ. ಆದರೆ ತಮ್ಮನ್ನೆ ಗಮನಿಸುತಿದ್ದ ಗುಮಾಸ್ತನನ್ನು ನೋಡಿ ಸುಮ್ಮನಾದ. ಎಲ್ಲರೂ ಇದ್ದಕಿದ್ದ ಹಾಗೆ ಸುಮ್ಮನಾದರು. ವಿಚಿತ್ರ ಅನಿಸುತಿತ್ತು.

‘ಸರಿ, ನೀನಿನ್ನು ಹೋಗಬಹುದು,’ ಇಲ್ಯಾ ಪೆಟ್ರೊವಿಚ್ ಮಾತು ಮುಗಿಸಿದ.

ರಾಸ್ಕೋಲ್ನಿಕೋವ್ ಹೊರಕ್ಕೆ ಬಂದ. ಅವನು ಬರುತಿದ್ದ ಹಾಗೇ ಒಳಗೆ ಜೋರಾದ ಚರ್ಚೆ ಶುರುವಾಗಿತ್ತು. ಮಿಕ್ಕೆಲ್ಲರಿಗಿಂತ ನಿಕೋದಿಮ್ ಫೋಮಿಚ್‌ ನ ಪ್ರಶ್ನೆಗಳು ಜೋರಾಗಿ ಕೇಳುತಿದ್ದವು. ರಸ್ತೆಗೆ ಬರುತಿದ್ದ ಹಾಗೇ ರಾಸ್ಕೋಲ್ನಿಕೋವ್ ಪೂರಾ ಚೇತರಿಸಿಕೊಂಡಿದ್ದ.

‘ಕಳ್ಳ ನನ್ನಮಕ್ಕಳು! ಸರ್ಚ್ ಮಾಡತಾರೆ! ನನ್ನ ಮೇಲೆ ಡೌಟು ಅವರಿಗೆ!’ ಮೊದಲಿದ್ದ ಭಯ ಈಗ ಮತ್ತೆ ಅವನನ್ನು ಪೂರಾ ಆವರಿಸಿಕೊಂಡಿತ್ತು.