ಒಂದು ಕತೆಗೆ ಚರಿತ್ರೆಯ ಹಿನ್ನಲೆಯಿದ್ದಾಗ ನೆಲದ ಮಹಿಮೆಯಿದ್ದಾಗ ಹೀಗೆ ಅದು ಮನಸ್ಸನ್ನು ತಟ್ಟುತ್ತದೆ ಎಂಬುದು ಮೇಲ್ನೋಟಕ್ಕೆ ಅನ್ನಿಸಿದರೂ ಬರಹಗಾರ ತನ್ನ ಸರಳ ಸಭ್ಯ ಹಾಗೂ ಆಕರ್ಷಕ ಶೈಲಿಯಿಂದ ಓದುಗರ ಹೃದಯಕ್ಕೆ ಇಳಿಯುವಂತೆ ಮಾಡುತ್ತಾನೆ ಅನ್ನುವುದು ನಿಜ. ಹಾಗಿಲ್ಲದಿದ್ದರೆ ಚರಿತ್ರೆಯ ಪುಸ್ತಕಗಳೆಲ್ಲವೂ ಹೀಗೇ ಪ್ರಿಯವೆನಿಸಬೇಕಿತ್ತು. ಆದರೆ ಮತ್ತೆ ಮತ್ತೆ ಚರಿತ್ರೆಯನ್ನು ಎಲ್ಲರೂ ಕತೆಯ ರೂಪದಲ್ಲಿ ಹೇಳಲು ಸಮರ್ಥರಲ್ಲ ಅನ್ನಿಸುವುದು ಅತ್ಯಪರೂಪವಾಗಿ ಬರುವ ಇಂತಹ ಪುಸ್ತಕಗಳಿಂದ.
ಡಾ. ಗಜಾನನ ಶರ್ಮ ಬರೆದ ಚೆನ್ನಭೈರಾದೇವಿ ಕಾದಂಬರಿ ಕುರಿತು ಪ್ರಿಯಾ ಭಟ್‌ ಕಲ್ಲಬ್ಬೆ ವಿಶ್ಲೇಷಣೆ

 

ಕರಿಮೆಣಸಿನ ರಾಣಿಯ ಅಕಳಂಕ ಚರಿತೆಯನ್ನು ಕಾದಂಬರಿ ರೂಪದಲ್ಲಿ ಡಾ. ಗಜಾನನ ಶರ್ಮ ಅವರು ಬರೆಯುತ್ತಿರುವಾಗಲೇ ಅವರ ಅನೇಕ ಪೋಸ್ಟ್ ಗಳಲ್ಲಿ ಬಿಡಿ ಬರಹಗಳನ್ನು ಓದಿ ಕಾದಂಬರಿ ಪುಸ್ತಕರೂಪದಲ್ಲಿ ಪ್ರಕಟವಾಗುವುದಕ್ಕೆ ಕಾಯುತ್ತಿದ್ದವರಲ್ಲಿ ನಾನೂ ಒಬ್ಬಳು. ಶರ್ಮರ ಮೊದಲ ಕಾದಂಬರಿ ಪುನರ್ವಸು ಓದಿದ ಮೇಲೆ ಯಾರಿಗಾದರೂ ಲೇಖಕರ ಮುಂದಿನ ಬರಹಗಳ ಕುರಿತು ನಿರೀಕ್ಷೆ ಹುಟ್ಟದಿರದು. ಅದೂ ಮತ್ತೊಮ್ಮೆ ನಮ್ಮ ನೆಲದ ಚರಿತ್ರೆಯಲ್ಲಿ ಆಳಿದ ರಾಣಿಯೊಬ್ಬಳ ಬಗೆಗೆ ಐತಿಹಾಸಿಕ ಸಂಶೋಧನೆಗಳನ್ನೊಳಗೊಂಡ ಕಥಾನಕವನ್ನು ಓದುವುದು ಭಾಗ್ಯವೇ.

(ಡಾ. ಗಜಾನನ ಶರ್ಮ)

ಕಾಡು ಕಂದರ ಜಲಪಾತ ಬೆಟ್ಟ ಹೀಗೆ ಓಡಾಡುವ ಹುಚ್ಚಿರುವ ನನಗೆ ಸುಮಾರು ಇಪ್ಪತ್ತು ವರ್ಷಗಳಷ್ಟು ಹಿಂದೆಯೇ ಮೇದಿನಿಯ ಹತ್ತು ಕಿ.ಮೀ ಗಿಂತ ಹೆಚ್ಚು ದೂರ ಕಡಿದಾದ ಬೆಟ್ಟವನ್ನು ಏರಿ ಅಲ್ಲಿಯ ಅಳಿದ ಕೋಟೆ ಉಳಿದ ಮಾಸ್ತಿಕಲ್ಲು ಇತ್ಯಾದಿ ಎಲ್ಲ ನೋಡಿ ರಾಣಿಯ ಬಗೆಗೆ ಮಾತನಾಡಿಕೊಂಡಿದ್ದು ನೆನಪಾಯಿತು! ಮೇದಿನಿ ಎಂಬ ಊರು ಯಾವ ದಿಕ್ಕಿನಿಂದ ಬಂದರೂ ಕನಿಷ್ಟ ಹತ್ತು ಕಿ.ಮಿ ಕಡಿದಾದ ಬೆಟ್ಟವನ್ನೇರಿಯೇ ಬರಬೇಕಾದ ಮತ್ತು ನಡೆಯುವುದರ ಹೊರತು ಬೇರೆ ಯಾವ ವಾಹನಗಳೂ ಸಂಚರಿಸದ ಕಾಡಿನ ಮಧ್ಯದ ಊರಾಗಿತ್ತು.(ಈಗ ಈ ಊರಿಗೆ ದಾರಿ ಆಗಿವೆ ಅಂತ ಕೇಳಿದ್ದೇನೆ. ಸಧ್ಯ ನಾನಂತೂ ಹೋಗಿಲ್ಲ)

ಇದು ಇಪ್ಪತ್ತು ವರುಷದ ಮೊದಲಿನ ವಿಷಯ. ಈ ಕತೆ ೧೫೦೦ ರ ಇಸ್ವಿಯದ್ದು. ಅಂತಹ ಕಡುಗಾಡಿನಲ್ಲಿ ಕೋಟೆ ನಿರ್ಮಿಸಿದ ರಾಣಿಯ ಕತೆ‌. ಕತ್ಲೆ ಕಾನು, ಮಿರ್ಜಾನ್ ಕೋಟೆ, ಕಾಗಾಲ್ ಕೋಟೆ, ಕಾನೂರು ಕೋಟೆ, ಗೇರುಸೊಪ್ಪೆ ಬಸದಿ, ಭೀಮೇಶ್ವರದ ಕಾಡು ಇವೆಲ್ಲ ಇಂದಿಗೂ ಈ ನಾಡಿನ ಜೀವನಾಡಿಯಂತೆ ದಟ್ಟವಾದ ಮಲೆಗಳಿಂದ ಕೂಡಿದ ಪ್ರದೇಶ. ಇಂದಿಗೂ ನೇರಾನೇರ ಪ್ರವೇಶಿಸಲು ದುರ್ಗಮವಾದ ಕಾಡುಗಳಿರುವ ಊರುಗಳಿರುವ ಈ ಭಾಗವನ್ನು ಆ ಕಾಲದಲ್ಲಿ ಚೆನ್ನಭೈರಾದೇವಿ ಹೇಗೆ ರಾಜ್ಯ ಕಟ್ಟಿ ಸಮೃದ್ಧವಾಗಿ ಆಳಿದ್ದಳೆಂಬುದನ್ನು ಓದುವಾಗ ಮೈ ನವಿರೇಳುತ್ತದೆ‌. ಕಂಠ ಗದ್ಗದವಾಗುತ್ತದೆ‌.

ಒಂದು ಕತೆಗೆ ಚರಿತ್ರೆಯ ಹಿನ್ನಲೆಯಿದ್ದಾಗ ನೆಲದ ಮಹಿಮೆಯಿದ್ದಾಗ ಹೀಗೆ ಅದು ಮನಸ್ಸನ್ನು ತಟ್ಟುತ್ತದೆ ಎಂಬುದು ಮೇಲ್ನೋಟಕ್ಕೆ ಅನ್ನಿಸಿದರೂ ಬರಹಗಾರ ತನ್ನ ಸರಳ ಸಭ್ಯ ಹಾಗೂ ಆಕರ್ಷಕ ಶೈಲಿಯಿಂದ ಓದುಗರ ಹೃದಯಕ್ಕೆ ಇಳಿಯುವಂತೆ ಮಾಡುತ್ತಾನೆ ಅನ್ನುವುದು ನನಗಂತೂ ನಿಜ. ಹಾಗಿಲ್ಲದಿದ್ದರೆ ಚರಿತ್ರೆಯ ಪುಸ್ತಕಗಳೆಲ್ಲವೂ ಹೀಗೇ ಪ್ರಿಯವೆನಿಸಬೇಕಿತ್ತು. ಆದರೆ ಮತ್ತೆ ಮತ್ತೆ ಚರಿತ್ರೆಯನ್ನು ಎಲ್ಲರೂ ಕತೆಯ ರೂಪದಲ್ಲಿ ಹೇಳಲು ಸಮರ್ಥರಲ್ಲ ಅನ್ನಿಸುವುದು ಅತ್ಯಪರೂಪವಾಗಿ ಬರುವ ಇಂತಹ ಪುಸ್ತಕಗಳಿಂದ. ಕರಿಮೆಣಸಿನ ರಾಣಿಯ ಚರಿತ್ರೆಯನ್ನು ಕಳಂಕಿತವಾಗಿಸಿದ ಎಲ್ಲ ದಾಖಲೆಗಳನ್ನೂ ಪರಿಶೀಲಿಸಿ ಅದನ್ನು ಕೂಲಂಕುಶವಾಗಿ ವಿಮರ್ಶಿಸುತ್ತ ಪರಾಮರ್ಶಿಸುತ್ತ ಚೆನ್ನಭೈರಾದೇವಿ ಅಕಳಂಕಿತಳು ಹಾಗೂ ಅವಳ ಪರಾಕ್ರಮ ಅವಳ ಪ್ರತಿಭೆ ಧೈರ್ಯ ಸ್ಥೈರ್ಯ ಎಲ್ಲವನ್ನೂ ಕಾದಂಬರಿ ಬಿಡಿಸುತ್ತ ಸಾಗುತ್ತದೆ. ರಾಣಿಯ ಕತೆ ಶತಮಾನಗಳ ಹಿಂದೆ ಕೂಡ ಈ ನೆಲದಲ್ಲಿ ಹೆಣ್ಣುಮಕ್ಕಳು ಹೀಗೂ ಬದುಕಿದ್ದರೆಂಬ ದಾಖಲೆ ಕೂಡ ಹೌದು.

ಅಂತಹ ಕಡುಗಾಡಿನಲ್ಲಿ ಕೋಟೆ ನಿರ್ಮಿಸಿದ ರಾಣಿಯ ಕತೆ‌. ಕತ್ಲೆ ಕಾನು, ಮಿರ್ಜಾನ್ ಕೋಟೆ, ಕಾಗಾಲ್ ಕೋಟೆ, ಕಾನೂರು ಕೋಟೆ, ಗೇರುಸೊಪ್ಪೆ ಬಸದಿ, ಭೀಮೇಶ್ವರದ ಕಾಡು ಇವೆಲ್ಲ ಇಂದಿಗೂ ಈ ನಾಡಿನ ಜೀವನಾಡಿಯಂತೆ ದಟ್ಟವಾದ ಮಲೆಗಳಿಂದ ಕೂಡಿದ ಪ್ರದೇಶ.

ಚೆನ್ನಭೈರಾದೇವಿ ಕಾದಂಬರಿಯ ಓದುವಾಗ ಸಾವಿರ ಪ್ರಶ್ನೆಗಳು ಕಾಡುತ್ತವೆ. ಮತ್ತು ನೂರಾರು ಪ್ರಶ್ನೆಗಳಿಗೆ ಉತ್ತರವೂ ಸಿಗುತ್ತದೆ. ಅರಮನೆಯ ಪಟ್ಟ ಏರದೆಯೂ ರಾಣಿಯಾಗಿದ್ದಳು. ಸರಳ ಬದುಕಿಗೆ ಮಾದರಿಯಾಗಿದ್ದಳು. ಮನುಷ್ಯರ ಹಾಗೆ ಜೀವದಯೆಯಿಂದ ಕೂಡಿದವಳು. ಶೀಘ್ರಕೋಪ, ಸಿಟ್ಟು, ಚಾಣಾಕ್ಷಮತಿ, ಸಮರವಿದ್ಯೆಯ ಪರಿಣಿತಳೂ ವ್ಯಾಪಾರ ವ್ಯವಹಾರ ವ್ಯವಸ್ಥೆ ಅತ್ಯುನ್ನತಗೊಳಿಸಿ ರಾಜ್ಯವನ್ನು ಆರ್ಥಿಕವಾಗಿ ಸುಭಿಕ್ಷವಾಗಿಸಿದವಳು ಈ ಎಲ್ಲವೂ ಒಂದು ಕಡೆಯಾದರೆ ಹೆಣ್ಣೊಬ್ಬಳು ಅಷ್ಟು ದೊಡ್ಡ ಸ್ಥಾನವನ್ನು ನಿರ್ವಹಿಸುತ್ತಲೂ ಅಂತರಂಗದಲ್ಲಿ ವಿರಕ್ತೆಯೂ, ಸಂನ್ಯಾಸಿಯೂ ಆಗಿರಬಲ್ಲಳು ಎಂಬುದನ್ನು ತುಂಬ ಸಾದೃಶ್ಯವಾಗಿಯೂ ವಿವರಿಸಿ ಅವಳ ವ್ಯಕ್ತಿತ್ವವನ್ನು ಉನ್ನತವಾಗಿಸಿದ್ದಾರೆ.

ಅವಧೇಶ್ವರಿ ಕಾದಂಬರಿ ಓದುವಾಗ ನನಗೆ ಕೊನೆಯಲ್ಲಿ ಅವಳನ್ಯಾಕೆ ಅಷ್ಟು ಹೀನಾಯವಾಗಿ ಚಿತ್ರಿಸಿದರು ಅಂತ ತುಂಬ ಅನ್ನಿಸಿತ್ತು! ಏನೆಲ್ಲ ಗೆದ್ದರೂ ಕಾಮವನ್ನು ಗೆಲ್ಲಲಾಗದಷ್ಟು ದುರ್ಬಲ ಹೆಣ್ಣಾದಳೇ ಅನ್ನುವ ನೋವೊಂದು ಉಳಿದುಹೋಗುತ್ತಿತ್ತು. ಚೆನ್ನಭೈರಾದೇವಿ ತನ್ನ ಸುತ್ತಲೂ ಅಷ್ಟೆಲ್ಲ ಕತೆಗಳು ಹುಟ್ಟಿಕೊಂಡರೂ ಏನೆಲ್ಲ ನಡೆದರೂ ಅಂತರಂಗದ ಅವಳ ಶುದ್ಧತೆಗೆ ಸರಿಸಾಟಿ ಯಾವುದೂ ಇಲ್ಲ ಎಂಬುದು ರಾಣಿಯಾಗಷ್ಟೇ ಅಲ್ಲ ಒಬ್ಬಳು ಹೆಣ್ಣಿನ ಚರಿತ್ರೆಯಾಗೂ ದಾಖಲೆಯಾಗಿದ್ದಾಳೆ.

ಇನ್ನು ಕಾದಂಬರಿಯ ಕುರಿತಾಗಿ ಬಹಳಷ್ಟು ವಿಮರ್ಶೆಗಳು ಚರ್ಚೆಗಳು ಆಗುತ್ತಿವೆ. ಆಗಬೇಕಿದೆ. ಒಬ್ಬ ಓದುಗಳಾಗಿ ಸಾಮಾನ್ಯ ಓದುಗಳಂತೆ ನೋಡುವಾಗ ಕತೆ ಒಂದಿನಿತೂ ಬೇಸರವಿಲ್ಲದೇ ಓದಿಸಿಕೊಳ್ಳುತ್ತದೆ. ಅದೇ ಕಾಲದ ಗೋವಾದಲ್ಲಿಯ ಪೋರ್ಚುಗೀಸರ ದುಶ್ಕೃತ್ಯಗಳನ್ನು ಮತಾಂತರ ಹಾಗೂ ಇತರ ಯುದ್ಧ ರಾಜಕೀಯ ವಿವರಗಳನ್ನು ಕಾದಂಬರಿಗೆ ಪೂರಕವಾಗಿಯಷ್ಟೇ ತೆಗೆದುಕೊಂಡು ಇಡೀ ಕಾದಂಬರಿ ನಗಿರೆ ಮತ್ತು ಹಾಡುವಳ್ಳಿಯ ರಾಣಿಯ ಇತಿಹಾಸಕ್ಕೇ ಪೂರಕವಾಗಿಯೆ ನಿಂತಿರುವುದು ಲೇಖಕರ ಸಾಮರ್ಥ್ಯ ಮತ್ತು ವಸ್ತುಪ್ರಜ್ಞೆ. ವಿಷಯಾಂತರವಾಗಿಸುವ ಎಷ್ಟೊಂದು ಪೂರಕ ಘಟನೆಗಳು ಸಮಾನಾಂತರ ಕಾಲದಲ್ಲಿಯೇ ನಡೆಯುತ್ತಿರುವಾಗ ಅದನ್ನೂ ಸೇರಿಸಿ ಇನ್ನೂ ನೂರಾರು ಪುಟಗಳ ಬರೆಯಬಹುದಾದರು ಕಾದಂಬರಿ ಎಲ್ಲಿಯೂ ತನ್ನ ಮೂಲದಿಂದ ಹೊರಳದಿರುವಂತೆ ಬರೆದಿರುವುದು ಲೇಖಕರ ಸಂಯಮದ ಬರಹಕ್ಕೆ ಸಾಕ್ಷಿ. ಇದನ್ನೇ ಇನ್ನೊಂದು ಮಗ್ಗುಲಿಗೆ ಹೊರಳಿಸಿದರೆ ಸ್ವಪ್ನ ಸಾರಸ್ವತದ ಅದೇ ಕತೆಗಳು ಮತ್ತಷ್ಟು ರೂಪ ಪಡೆಯಬಹುದು. ಕಾಲ ದೇಶಗಳ ಕತೆಗಳಲ್ಲಿ ಸಿಕ್ಕಿಕೊಳ್ಳುವ ಪರಿಯೇ ಚರಿತ್ರೆ!

ಕಾದಂಬರಿಯಲ್ಲಿ ಶಬಲೆ, ಪ್ರಧಾನಿಗಳು, ಸತ್ರಾಜಿತ, ಸಿದ್ಧಾಂತಿಗಳು, ನಾಗಬ್ಬೆ ಇತ್ಯಾದಿ ಪಾತ್ರಗಳು ಪ್ರಮುಖವಾಗಿವೆ. ಆದರೆ ಇಡೀ ಐವತ್ನಾಲ್ಕು ವರ್ಷದ ಆಳ್ವಿಕೆಯಲ್ಲಿ ಪ್ರಮುಖ ಘಟ್ಟಗಳಷ್ಟೇ ಕತೆಯಾಗಿವೆ. ರಾಜಮಾತೆ ಬೈರಾಂಭೆ ಹಾಗೂ ಮಾವ ಕೃಷ್ಣ ದೇವರಸನ ವಿಷಯದಲ್ಲಿ ಬಹಳಷ್ಟು ಪ್ರಶ್ನೆಗಳು ಉಳಿಯುತ್ತವೆ. ಹಾಗೇ ಕೃಷ್ಣದೇವರಸನ ಪತ್ನಿಯರು, ಮಕ್ಕಳ ವಿಚಾರದಲ್ಲಿ ರಾಣಿಯ ಇತರ ಅರಮನೆಯ ಸಂಬಂಧಿಸಿದ ಹೆಚ್ಚು ವಿವರಗಳು ಸಿಗುವುದಿಲ್ಲ. ಮುಖ್ಯವಾಗಿ ಪ್ರಮುಖ ವಿರೋಧಿಗಳಾಗಿದ್ದ ಕೆಳದಿಯ ಅರಸರ ಬಗೆಗಾಗಲೀ ಕೊನೆಯಲ್ಲಿ ರಾಣಿಯನ್ನು ಸೋಲಿಸಿ ಬಂಧಿಸಿದ ವಿವರಗಳ ಹೊರತಾಗಿ ಬೇರೇನೂ ಬರುವುದೇ ಇಲ್ಲ.

ಇದೆಲ್ಲದರ ಹೊರತಾಗಿಯೂ ಕತೆ ಚೆನ್ನಭೈರಾದೇವಿಯನ್ನೇ ಕೇಂದ್ರಿಕರಿಸಿಕೊಂಡು ಪೂರ್ಣವೆನಿಸುತ್ತದೆ. ಶತಮಾನಗಳ ಹಿಂದೆ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದ ದೀರ್ಘಕಾಲ ಕಾಡಿನ ನಾಡನ್ನೂ ಸಮೃದ್ಧವಾಗಿ ಆಳಿದ ರಾಣಿಯ ಚರಿತ್ರೆ ಓದಿ ಮುಗಿಸುವಾಗ ಹೃದಯತುಂಬಿ ಬರುತ್ತದೆ. ಅದೇನೊ ನಾಡು ನೆಲ ಜಲದ ವಿಷಯವೆಂದರೆ ಮಣ್ಣಿನ ಚರಿತ್ರೆಯೆಂದರೆ ಹೆಣ್ಣಿನ ಚರಿತ್ರೆ ಎಂದರೆ ಮನುಷ್ಯ ಕುತೂಹಲ ಕೆರಳಿಸುವ ವಿಷಯ. ಅಧಃಪತನದ ಕತೆಗಳ ಕೇಳಿ ಮರುಗುವುದಕ್ಕಿಂತ ಇಂತಹ ಧೀರೋದಾತ್ತ ಕತೆಗಳು ನಮ್ಮಲ್ಲಿ ಮತ್ತಷ್ಟು ಬರಲಿ. ಶರ್ಮರ ಈ ಕಾದಂಬರಿ ಚೆನ್ನಾಭೈರಾದೇವಿಯಷ್ಟೇ ಪ್ರಸಿದ್ಧಿ ಪಡೆಯಲಿ.

 

(ಕೃತಿ: ಚೆನ್ನಭೈರಾದೇವಿ, ಲೇಖಕರು: ಡಾ. ಗಜಾನನ ಶರ್ಮ, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ: 395/-)