ಈಗ ಎನಿಸುತ್ತದೆ, ನಾ ಎರಡು ದಿನ ರಜೆ ಹೋಗಿದ್ದಾಗ ಬಹುಶಃ ಅವರು ಕಾಸಿದ ನೀರು ಕುಡಿದಿದ್ದರು ಎನಿಸುತ್ತದೆ. ಅದುವರೆಗೆ ತಣ್ಣೀರನ್ನು ಕುಡಿದು ನಂತರ ಏಕದಂ ಕಾಸಿದ ನೀರು ಕುಡಿದಿದ್ದಕ್ಕೆ ಅವರಿಗೆ ನೆಗಡಿಯಾಗಿದೆ ಅನಿಸುತ್ತದೆ. ಅಸ್ತಮಾ ಪೇಷಂಟ್ ಒಬ್ಬರಿಗೆ ಹೀಗೆ ತಣ್ಣೀರು ಕುಡಿಸಬಾರದು ಎಂದು ಆಗ ನನಗೆ ಹೊಳೆಯಲೂ ಇಲ್ಲ. ಅದರ ಪರಿಣಾಮ ಏನಾಗಬಹುದು ಎಂಬ ಯಾವ ಎಚ್ಚರವೂ ಆಗ ಇರಲಿಲ್ಲ. ಆದರೆ ಹಾಗೆ ತಣ್ಣೀರನ್ನು ಕುಡಿಸಿದ್ದರಿಂದ ಬೇರೆಯಾವ ಸಮಸ್ಯೆ ಆಗಲಿಲ್ಲ ಎಂಬ ಸಮಾಧಾನ ಈಗ ಇದೆ.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಹನ್ನೆರಡನೆಯ ಕಂತು.

 

ನನ್ನ ಊರೇ ಎಂದು ನಂಬಿದ್ದ ತಾರಗೋಡನ್ನು ಬಿಟ್ಟು ಸಿದ್ದಾಪುರಕ್ಕೆ ಬಂದ ಹೊಸತರಲ್ಲಿ ನಾನು ಯಾವುದೋ ದೇವಲೋಕದಲ್ಲಿ ಬಂದಿಳಿದಂತೆ ಸಂಭ್ರಮಿಸಿದ್ದೆ. ಎಂಟತ್ತು ಮನೆಗಳಿರುವ ಸಾಲುಗೇರಿಯಂಥ ಊರು ತಾರಗೋಡು, ಬೆಟ್ಟ-ಗುಡ್ಡ ಹೊಳೆ, ಕಾಡು-ಮೇಡು ಇವಿಷ್ಟೇ ಗೊತ್ತಿದ್ದ ಆ ಪುಟ್ಟ ಹುಡುಗಿಗೆ ಸಿದ್ದಾಪುರವೆಂಬ ಪುಟ್ಟ ನಗರ ಒಂಥರದಲ್ಲಿ ಮಾಯಾನಗರಿ. ಅದಕ್ಕೂ ಮುಂಚೆ ಸಿದ್ದಾಪುರ ಮತ್ತು ಸಾಗರ ಎರಡೇ ಎರಡು ಪಟ್ಟಣವನ್ನು ನೋಡಿದ್ದು, ಅದೂ ಬಸ್ಸಲ್ಲಿ ಕುಳಿತಾಗ ಮಾತ್ರವಾಗಿತ್ತು.

ತಾರಗೋಡಿನಿಂದ ಎರಡು ಮೈಲಿ ದೂರ ನಡೆದು, ಇಟಗಿಗೆ ಬಂದು ಅಲ್ಲಿಂದ ಬಸ್ಸು ಹತ್ತಿ ಸಾಗರ ತಾಲೂಕಿನ ನನ್ನ ಅಜ್ಜನ ಮನೆ ಬೇಡರಕೊಪ್ಪಕ್ಕೆ ಹೋಗಬೇಕಿದ್ದರೆ ವಾಯಾ ಸಿದ್ದಾಪುರ ಮತ್ತು ಸಾಗರದ ಮೇಲೆಯೇ ಹೋಗಬೇಕಾಗಿತ್ತು. ಹಾಗೆ ಹೋಗುವಾಗಲೆಲ್ಲ ಮಧ್ಯಾಹ್ನದ ಹೊತ್ತು ಅಲ್ಲಿರುವ ಕೆಲವೇ ಕೆಲವು ಖಾನಾವಳಿಗಳಿಂದ ಬರುವ ಈರುಳ್ಳಿ ಸಾಂಬಾರಿನ ಪರಿಮಳ, ಅದರ ಹಿಂದೆಯೇ ರಾಜ್‍ ಕುಮಾರ್ ಅವರ ‘ಬಿಡಲಾರೆ ಎಂದೂನಿನ್ನ, ನೀನಾದೆ ನನ್ನೀ ಪ್ರಾಣ’ ಅಥವಾ ‘ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ…’ ಎಂಬ ರೇಡಿಯೋದಿಂದ ಬರುವ ಹಾಡುಗಳು… ಅವೆಲ್ಲ ಅದೆಷ್ಟು ತಟ್ಟಿಬಿಟ್ಟಿತ್ತೆಂದರೆ ರೇಡಿಯೋದಲ್ಲಿ ಇಂಥ ಹಾಡುಗಳನ್ನು ಕೇಳುತ್ತ ಇಂಥ ಸಾಂಬಾರು ತಿನ್ನುತ್ತ ಇಲ್ಲೇ ಹೀಗೇ ಇದ್ದುಬಿಡಬೇಕು ಎಂದೆನಿಸುತ್ತಿತ್ತು. ಹಾಗಾಗಿಯೇ ನನಗೆ ರಾಜ್‍ ಕುಮಾರ್ ಹಾಡುಗಳು ಮತ್ತು ಈರುಳ್ಳಿ ಸಾಂಬಾರಿನ ಪರಿಮಳ ಎರಡು ಸೊಗಡುಗಳೂ ಒಟ್ಟೊಟ್ಟಿಗೇ ಅಡರಿಕೊಳ್ಳುತ್ತವೆ ಮೂಗು ಮತ್ತು ಮನಸ್ಸುಗಳನ್ನು.

ಪ್ರತಿಸಲ ಸಿದ್ದಾಪುರದಲ್ಲಿ ಅಥವಾ ಸಾಗರದಲ್ಲಿ ಅದೆಷ್ಟೇ ಹೊತ್ತಿಗೆ ಇಳಿಯಲಿ ನನಗೆ ಹಸಿವಾಗಿಬಿಡುತ್ತಿತ್ತು. ಹಸಿವಾಗುತ್ತದೆಂದು ಬಡೀ ಮುಖ ಮಾಡಿಕೊಂಡು ಹೇಳಿದಾಗ ಅಮ್ಮ ಮುಖ ಸಿಂಡರಿಸಿದರೆ, ಅಪ್ಪ, ಮಗಳ ಈ ಬಡಿಮುಖ ನೋಡಲಾರದವನೆಂಬಂತೆ ‘ಇಡ್ಲಿ ಸಾಂಬಾರು ತಿಂತೀಯಾ’ ಎಂದು ಕೇಳುತ್ತಿದ್ದ. ಹೂ… ಎಂದು ಖುಷಿಯಿಂದ ತಲೆ ಅಲ್ಲಾಡಿಸುತ್ತಿದ್ದೆ. ಹಾಗೆ ಅದೆಷ್ಟು ಸಲ ಸುಳ್ಳುಸುಳ್ಳೆ ಹಸಿವೆಯೆಂದು ಹೋಟೆಲ್‍ ನಲ್ಲಿ ಇಡ್ಲಿ ಸಾಂಬಾರು ತಿಂದಿದ್ದೇನೋ… ಹಾಗೆ ಹೋಟೆಲ್‍ ಗೆ ಹೊಕ್ಕಾಗಲೆಲ್ಲ ಇಡ್ಲಿ ಸಾಂಬಾರು ಅಥವಾ ಮಸಾಲೆ ದೋಸೆಯ ಪರಿಮಳದ ಜೊತೆಗೆ ಈ ಹಾಡುಗಳು ಕೇಳಿಬರುವಾಗಲೆಲ್ಲ ಇಂಥ ಯಾವುದಾದರೂ ನಗರಗಳಲ್ಲಿ ನಾನಿರಬಾರದಿತ್ತಾ ಎನಿಸುತ್ತಿತ್ತು. ಅದ್ಯಾವ ಘಳಿಗೆಯಲ್ಲಿ ಹಾಗೆಲ್ಲ ಅಂದುಕೊಳ್ಳುತ್ತಿದ್ದೆನೋ. ಕಡೆಗೆ ಸಿದ್ದಾಪುರದಲ್ಲಿಯೇ ನಾವು ಇರುವಂತಾಗಿದ್ದು ಮಾತ್ರ ಅನಿವಾರ್ಯ ಮತ್ತು ಸೋಜಿಗ ಎರಡೂ.

ಇದೆಲ್ಲ ನಡೆದದ್ದು 70ರ ದಶಕದಲ್ಲಿ. ಅಂದರೆ 78-79ರ ಹೊತ್ತಲ್ಲಿ. ಸಿದ್ದಾಪುರದಲ್ಲಿ ಆಗ ಇದ್ದ ಎರಡೇ ಎರಡು ಶಾಲೆಗಳಲ್ಲಿ ಬಾಲಿಕೊಪ್ಪ ಶಾಲೆ ತುಂಬ ಪ್ರಸಿದ್ಧವಾಗಿತ್ತು. ಯಾರಾದರೂ ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದರೆ ಬಾಲಿಕೊಪ್ಪ ಶಾಲೆಗೆ ಸೇರಿಸಿ, ಚೆನ್ನಾಗಿದೆ ಎನ್ನುತ್ತಿದ್ದರು. ಹಾಗೆ ಅಪ್ಪ ನನ್ನನ್ನು ಬಾಲಿಕೊಪ್ಪ ಶಾಲೆಗೆ ನಾಲ್ಕನೇ ಕ್ಲಾಸ್‍ ಗೆ ಸೇರಿಸಿದ್ದ. ಶಾಲೆಯ ಹೆಡ್‍ ಮಾಸ್ತರು ಎಲ್.ಜಿ.ಹೆಗಡೆಯವರು ಅಪ್ಪನ ಬಳಿ ‘ನಮ್ಮಲ್ಲಿ ಸಮವಸ್ತ್ರ ಹಾಕಿಕೊಂಡು ಬರಬೇಕು, ನೀಲಿ ಸ್ಕರ್ಟ್, ಬಿಳಿ ಫಲಕ ಮತ್ತು ಗುಲಾಬಿ ರಿಬ್ಬನ್‍ ನಿಂದ ಎರಡು ಜಡೆ ಹಾಕಿ ಎತ್ತಿಕಟ್ಟಿಬರಬೇಕು, ಇದು ನಮ್ಮ ಶಾಲೆಯ ನಿಯಮ’ ಎಂದಿದ್ದರು. ಸರಿ ಎಂದು ಅಪ್ಪ ತಲೆ ಅಲ್ಲಾಡಿಸಿ, ನನ್ನನ್ನ ಎಂದಿನಂತೆ ಅವನ ಪರಿಚಯದವರಾದ ಬಟ್ಟೆ ಕೃಷ್ಣನ ಅಂಗಡಿಗೆ ಹೋಗಿ ಎರಡು ಜೊತೆ ನೀಲಿ ಸ್ಕರ್ಟ್, ಬಿಳಿ ಬ್ಲೌಸ್ ಹೊಲಿಸಿದ.

ಬ್ಲೌಸ್‍ ಗೆ ಗುಬ್ಬಿ ತೋಳಿರಲಿ, ಸ್ಕರ್ಟ್‍ ಗೆ ಫ್ಲೇಟ್ ನೆರಿಗೆ ಇರಲಿ ಎಂದು ತಾನೇ ಮುತುವರ್ಜಿಯಿಂದ ಹೇಳಿ ಹೊಲಿದುಕೊಟ್ಟ ಕೃಷ್ಣ. ಅದುವರೆಗೆ ಸಮವಸ್ತ್ರ ಎಂದರೇನೆಂದೇ ಗೊತ್ತಿರದ, ನನಗಿದ್ದ ಕೆಲವೇ ಅಂಗಿಗಳನ್ನೇ ಹಾಕಿಕೊಂಡು ಸರಿಯಾಗಿ ತಲೆಯನ್ನೂ ಬಾಚದೇ ಶಾಲೆಗೆ ಹೋಗುತ್ತಿದ್ದ ನನಗೆ ಇಲ್ಲೊಂದು ನೀಲಿ ಸ್ಕರ್ಟ್, ಗುಬ್ಬಿ ತೋಳಿನ ಬಿಳಿ ಫಲಕ, ಗುಲಾಬಿ ರಿಬ್ಬನ್ನಿನಿಂದ ಎರಡು ಜಡೆಯನ್ನು ಎತ್ತಿಕಟ್ಟಿ, ಸಿದ್ದಾಪುರದ ಬೀದಿಗಳಲ್ಲಿ ಪಾಟಿಚೀಲವನ್ನು ಹೆಗಲಿಗೇರಿಸಿಕೊಂಡು ಹೋಗಬೇಕು ಎಂಬುದೇ ಒಂಥರಾ ಥ್ರಿಲ್‍ ನ ವಿಷಯ. ಹೀಗೆ ಇವನ್ನೆಲ್ಲ ಹಾಕಿಕೊಂಡು, ಎಲ್ಲಿಯೂ ಕಟ್ಟಡಗಳು, ಓಡಾಡುವ ಬಸ್ಸುಗಳು, ಆಗಾಗ ಕಾಣಿಸಿಕೊಳ್ಳುವ ಜೀಪುಗಳು.. ಅದೆಂಥ ಖುಷಿ ಎಂದರೆ ನಾನೊಬ್ಬಳು ದೊಡ್ಡ ಸಿಟಿಯಲ್ಲಿ ಓದುತ್ತಿರುವವಳು, ಭಯಂಕರ ಹುಶಾರಿನವಳು ಎಂದೆಲ್ಲ ಅನಿಸಲಿಕ್ಕೆ ಶುರುವಾಗಿತ್ತು. ನಾಲ್ಕರಿಂದ 7ನೇ ತರಗತಿಯವರೆಗೆ ಅದೇಶಾಲೆಯಲ್ಲಿ ನನ್ನ ಕಲಿಕೆ.

ನನಗೆ ಚೆನ್ನಾಗಿ ನೆನಪಿರುವುದು ಮಾತ್ರ 5ನೇ ಕ್ಲಾಸಿನ ಅನುಭವಗಳು. 5ನೇ ಕ್ಲಾಸಿಗೆ ನಮಗೆ ಕ್ಲಾಸ್ ಟೀಚರ್ ಆಗಿದ್ದವರು ಸುಮಿತ್ರಾಬಾಯಿ ಅರ್ಚಕ ಅಕ್ಕೋರು. ತುಂಬ ಸ್ಟ್ರಿಕ್ಟ್ ಎಂದು ಆಗಲೇ ಹೆಸರು ಪಡೆದಿದ್ದರು. ಹಾಗಾಗಿ ಅವರೆಂದರೆ ಶಾಲೆಯಲ್ಲಿ ಎಲ್ಲರಿಗೂ ಗೌರವವಿದ್ದರೆ ಮಕ್ಕಳಿಗೆಲ್ಲ ಹೆದರಿಕೆ ಇತ್ತು. ಆ ಕ್ಲಾಸಿನಲ್ಲಿ ಹೆಣ್ಣುಮಕ್ಕಳಲ್ಲಿ ನಾನು ಮತ್ತು ಗಂಡು ಮಕ್ಕಳಲ್ಲಿ ಸುಧೀರ್ ಬೇಂಗ್ರೆ ಇಬ್ಬರೇ ಪಾಸಾಗುತ್ತಿದ್ದೆವು. ಹಾಗಾಗಿ ಆ ಅಕ್ಕೋರಿಗೆ ನಮ್ಮಿಬ್ಬರನ್ನು ಕಂಡರೆ ವಿಶೇಷವಾದ ಪ್ರೀತಿ. ನನ್ನನ್ನು ಕ್ಲಾಸಿಗೆ ಮುಖ್ಯಮಂತ್ರಿ ಮಾಡಿದ್ದರು. ದಿನಾ ಪಾಠ ಓದಿ ಹೇಳುವುದಲ್ಲದೆ ಅಲ್ಲಿದ್ದವರಿಗೆ ಪ್ರಶ್ನೆ ಬೇರೆ ಕೇಳಬೇಕು. ಇದು ದಿನನಿತ್ಯದ ನನ್ನ ಕರ್ತವ್ಯಗಳಲ್ಲೊಂದಾಗಿತ್ತು. ಯಾರಿಗೆ ಉತ್ತರ ಬರೋದಿಲ್ಲವೋ ಅವರಿಗೇ ಕೇಳು ಎಂದು ಅಕ್ಕೋರು ಹೇಳಿದ್ದರಿಂದ, ಕೊಂಡ್ಲಿಯಿಂದ ಒಬ್ಬ ನಾರಾಯಣ, ಮತ್ತು ವೀರಭದ್ರ ಎಂದಿಬ್ಬರು ಬರುತ್ತಿದ್ದರು. ಸದಾ ಅವರಿಗೇ ಪ್ರಶ್ನೆ ಕೇಳುತ್ತಿದ್ದೆ. ಅವರು ಉತ್ತರ ಬರದೇ ತಡಬಡಾಯಿಸಿಕೊಂಡು ಎದ್ದು ನಿಲ್ಲುತ್ತಿದ್ದರು. ಅಕ್ಕೋರು ಚೆನ್ನಾಗಿ ಇಬ್ಬರಿಗೂ ಹೊಡೆಯುತ್ತಿದ್ದರು. ಹಾಗೆ ನಾನು ಅವರಿಬ್ಬರಿಗೆ ಅದೆಷ್ಟು ಸಲ ಹೊಡೆಸಿದ್ದೀನೋ. ಈಗ ಅನಿಸುತ್ತದೆ, ಪಾಪ, ಅವರಿಬ್ಬರು ನನಗೆ ಅದೆಷ್ಟು ಶಾಪ ಹಾಕಿದ್ದರೋ ಏನೋ ಎಂದು.

ಪ್ರತಿಸಲ ಸಿದ್ದಾಪುರದಲ್ಲಿ ಅಥವಾ ಸಾಗರದಲ್ಲಿ ಅದೆಷ್ಟೇ ಹೊತ್ತಿಗೆ ಇಳಿಯಲಿ ನನಗೆ ಹಸಿವಾಗಿಬಿಡುತ್ತಿತ್ತು. ಹಸಿವಾಗುತ್ತದೆಂದು ಬಡೀ ಮುಖ ಮಾಡಿಕೊಂಡು ಹೇಳಿದಾಗ ಅಮ್ಮ ಮುಖ ಸಿಂಡರಿಸಿದರೆ, ಅಪ್ಪ, ಮಗಳ ಈ ಬಡಿಮುಖ ನೋಡಲಾರದವನೆಂಬಂತೆ ‘ಇಡ್ಲಿ ಸಾಂಬಾರು ತಿಂತೀಯಾ’ ಎಂದು ಕೇಳುತ್ತಿದ್ದ. ಹೂ… ಎಂದು ಖುಷಿಯಿಂದ ತಲೆ ಅಲ್ಲಾಡಿಸುತ್ತಿದ್ದೆ.

ಈ ಅಕ್ಕೋರಿಗೆ ಸುರಗಿ ಹೂವೆಂದರೆ ತುಂಬ ಇಷ್ಟವಾಗಿತ್ತು. ದಿನಾ ಸುರಗಿ ದಂಡೆಯನ್ನು ಮುಡಿದು ಬರುತ್ತಿದ್ದುದಲ್ಲದೆ, ಕೈಯ್ಯಲ್ಲಿ ಅರ್ಧಡಜನ್ ಕೆಂಪು ಅಥವಾ ಹಸಿರು ಪ್ಲೇನ್ ಬಳೆಗಳು ಅವುಗಳ ಹಿಂದೆಮುಂದೆ ಎರಡು ಚಿನ್ನದ ಬಳೆಗಳು. ಆಗ ಅವು ನನ್ನನ್ನು ಎಷ್ಟು ಆಕರ್ಷಿಸಿತ್ತೆಂದರೆ ಜೀವನದಲ್ಲಿ ಒಮ್ಮೆಯಾದರೂ ಎರಡು ಚಿನ್ನದ ಬಳೆಗಳ ನಡುವೆ ಕೈತುಂಬ ಪ್ಲೇನ್ ಬಳೆಗಳನ್ನು ಹಾಕಿಕೊಳ್ಳಬೇಕೆಂದು. ಅಂಥ ಅಕ್ಕೋರು ಒಂದು ದಿನ ಕ್ಲಾಸ್‍ ನಲ್ಲೊಂದು ವಿಷಯವನ್ನು ಅರುಹಿದರು. ಅದೆಂದರೆ ‘ನನಗೆ ಅಸ್ತಮಾ ಇದೆ. ನಾನು ಕಾದಾರಿಸಿದ ನೀರನ್ನೇ ಕುಡಿಯುವುದು. ನನಗೆ ದಿನಾ ಒಂದು ಬಾಟಲ್ ಕಾದಾರಿದ ನೀರು ಬೇಕು. ಯಾರು ನನಗೆ ನೀರು ತಂದುಕೊಡುತ್ತೀರಿ’ ಎಂದು ಕೇಳಿದರು. ಆಗೆಲ್ಲ ಅಕ್ಕೋರು, ಮೇಷ್ಟ್ರುಗಳಿಗೆ ಪ್ರಿಯವಾಗಿ ನಡೆದುಕೊಳ್ಳುವುದೆಂದರೆ ಅದು ದೇವರಿಗೆ ಪೂಜೆ ಸಲ್ಲಿಸಿದಂತೆ ಎಂಬ ಭಾವನೆ ನಮಗೆಲ್ಲ. ಅದಕ್ಕೆ ತಕ್ಷಣ ‘ಅಕ್ಕೋರೆ ನಮ್ಮನೆಯಲ್ಲಿ ಮಾಡ್ತಾರೆ’ ಅಂದುಬಿಟ್ಟೆ. ‘ಸರಿ ಹಾಗಿದ್ರೆ. ನಾಳೆಯಿಂದ ನೀನು ನನಗೆ ಕಾಸಿದ ನೀರನ್ನು ತಂದುಕೊಡಬೇಕು’ ಎಂದು ಹೇಳಿಬಿಟ್ಟರು. ಆಯಿತು ಎಂದು ತಲೆ ಅಲ್ಲಾಡಿಸಿ ಮಧ್ಯಾಹ್ನದ ಊಟಕ್ಕೆ ಮನೆಗೆ ಹೋದೆ.

ಆಗೆಲ್ಲ 11.30ಗೆ ಮಧ್ಯಾಹ್ನ ಶಾಲೆ ಬಿಡುವು ಇರುತ್ತಿತ್ತು. ನಂತರ ಶುರುವಾಗುವುದು 2 ಗಂಟೆಗೆ. ಹಾಗಾಗಿ ಊಟಕ್ಕೆ ಹೋದವಳು ಅಮ್ಮನ ಬಳಿ ‘ಅಮ್ಮಾ, ಅಕ್ಕೋರಿಗೆ ದಿನಾ ಕಾದಾರಿದ ನೀರು ಬೇಕಡ. ನಾ ತಂದುಕೊಡ್ತಿ ಹೇಳಿದ್ದಿ’ ಅಂದೆ. ಅದನ್ನು ಕೇಳಿದ ಅಮ್ಮನಿಗೆ ಎಲ್ಲಿತ್ತೋ ಸಿಟ್ಟು, ‘ನಮ್ಮನೆಯಲ್ಲಿ ಯಾರು ಕಾಸಿದ ನೀರು ಕುಡಿತ? ದಿನಾ ಎಲ್ಲಿ ಮಾಡಲಾಗ್ತು? ಅದಕ್ಕೆಲ್ಲ ಸ್ವಲ್ಪಾ ಚುಮ್ನೆ ಎಣ್ಣೆ ಬೇಕಾ? ಅಲ್ಲಿ ಸೊಸೈಟಿಯಲ್ಲಿ ಕ್ಯೂನಲ್ಲಿ ನಿಂತ್ಕಂಡು ಸಕ್ರೆ, ಚುಮ್ನೆ ಎಣ್ಣೆ ತಪ್ಪ ಅಷ್ಟೊತ್ತಿಗೆ ಜೀವ ಬಿದ್ಹೋಗ್ತು. ಆ ಖಂಡಿತ ಕಾದ್ನೀರು (ಕಾದಾರಿದ ನೀರು) ಮಾಡಿಕೊಡತ್ನಿಲ್ಲೆ’ ಎಂದು ಅಮ್ಮ ಕಡಾಖಂಡಿತವಾಗಿ ಹೇಳಿಬಿಟ್ಟಳು. ಏನು ಮಾಡಬೇಕೆಂದೇ ತೋಚಲಿಲ್ಲ. ಇಲ್ಲಿ ಅಕ್ಕೋರಿಗೆ ಮಾತು ಕೊಟ್ಟಾಗಿದೆ. ಈಗ ತಂದುಕೊಡುವುದಿಲ್ಲ ಎಂದು ಹೇಳಲು ಸರಿಹೋಗುತ್ತಿಲ್ಲ. ಮನೆಯಲ್ಲಿ ಅಮ್ಮ ಬೈಯ್ಯುತ್ತಾಳೆ. ಏನು ಮಾಡಲಿ? ಅದೇ ಗೊಂದಲದಲ್ಲೇ ಊಟ ಮಾಡಿ ಶಾಲೆಗೆ ಹೋದೆ. ಅವತ್ತಿಡೀ ದಿನ ಅದೇ ಕೊರೆಯತೊಡಗಿತು. ಅಲ್ಲದೆ ಆ ಅಕ್ಕೋರು ಸಿಕ್ಕಾಪಟ್ಟೆ ಸ್ಟ್ರಿಕ್ಟ್. ತಪ್ಪು ಮಾಡಿದರೆ ಕೋಲಿನಿಂದ ಹೊಡೆಯುವುದಲ್ಲದೆ ಉಟಾಬಸ್ ಬೇರೆ ತೆಗೆಸಿಬಿಡುತ್ತಾರೆ. ಒಂದುಸಲ ಹೀಗೇ ಹೇಳದೇ ಕೇಳದೆ 4 ದಿವಸ ರಜೆ ಹಾಕಿ ಅಪ್ಪ-ಅಮ್ಮನೊಟ್ಟಿಗೆ ನೆಂಟರೊಬ್ಬರ ಮದುವೆಮನೆಗೆ ಹೋಗಿಬಿಟ್ಟಿದ್ದೆ. ಹೇಳದೇ ಹೋಗಿದ್ದೀಯಾ ಎಂದು 100 ಉಟಾಬಸ್ ಹಾಕಲು ಹೇಳಿದ್ದರು. ಉಟಾಬಸ್ ತಾನೆ, ಇದೇನು ಸುಲಭ ಎಂದು ತೆಗೆಯತೊಡಗಿದೆ. ಒಂದು, ಎರಡು… ಹತ್ತಾಗುವಷ್ಟರಲ್ಲಿ ಕಾಲು ನೋವು ಶುರುವಾಯಿತು.

ಆಗೋದಿಲ್ಲವೆಂದರೆ ಅಕ್ಕೋರು ಎದುರಿಗೆ ಕೋಲು ಹಿಡಿದು ನಿಂತಿದ್ದರು, ಅಂತೂ ಇಂತೂ 50 ಉಟಾಬಸ್ ತೆಗೆದು ಒಂದುವಾರ ಕಾಲುನೋವಿನಿಂದ ಒದ್ದಾಡಿದ್ದೆ. ಅದೆಲ್ಲ ನೆನಪಾಗಿ ಈ ಉಟಾಬಸ್ ತೆಗೆಯೋ ಕಷ್ಟ ಯಾರಿಗೆ ಬೇಕು ಎಂದುಕೊಂಡೇ ಬೆಳಗ್ಗೆ ಎದ್ದು ಶಾಲೆಗೆ ರೆಡಿಯಾಗುತ್ತಿದ್ದೆ. ಅಮ್ಮನ ಮನಸ್ಸೂ ಕರಗಲಿಲ್ಲ. ಕಾದ್ನೀರು ಮಾಡಿರಲಿಲ್ಲ. ತಿಂಡಿ ತಿಂದು ಸಮವಸ್ತ್ರ ಧರಿಸಿ ಶಾಲೆಗೆ ಹೋಗಲು ತಯಾರಿ ಮಾಡುತ್ತಿರುವಾಗಲೇ ಒಂದು ಯೋಚನೆ ಬಂತು. ಅಡುಗೆ ಮನೆಯಲ್ಲಿ ತಾಮ್ರದ ಹಂಡೆಯ ತುಂಬ ಅಮ್ಮ ತಣ್ಣೀರನ್ನು ತುಂಬಿಸಿಟ್ಟಿದ್ದಳು. ಬಾಟಲ್‍ ನಲ್ಲಿ ಆ ನೀರನ್ನೇ ತುಂಬಿದೆ. ನೀರು ಕಾಸಿದ್ದಾ, ತಣ್ಣೀರಾ ಎಂದು ಅಕ್ಕೋರಿಗೆ ಹೇಗೆ ತಿಳಿಯುತ್ತದೆಂದು ಯೋಚಿಸಿ ಅದೇ ನೀರನ್ನೇ ಅಕ್ಕೋರಿಗೆ ಕೊಟ್ಟೆ. ಅಕ್ಕೋರು ಕುಡಿದರು. ಮಾರನೇ ದಿನದಿಂದಲೇ ಅಕ್ಕೋರಿಗೆ ನನ್ನ ತಣ್ಣೀರಿನ ಬಾಟಲ್ ನೀರು ಸರಬರಾಜು ನಡೆಯತೊಡಗಿತು. ಆಗ ನಾನು ಅಕ್ಕೋರಿಗೆ ನೀರು ತಂದುಕೊಡುತ್ತಿದ್ದೇನೆಂಬುದೇ ದೊಡ್ಡ ಹೆಮ್ಮೆಯ ಸಂಗತಿ. ಹಾಗಾಗಿ ಅದು ತಣ್ಣೀರೋ, ಬಿಸಿನೀರೋ, ಕಾದಾರಿದ ನೀರೋ.. ಎಂದೆಲ್ಲ ಯೋಚಿಸಲು ಹೋಗಲೇ ಇಲ್ಲ.

ಹೀಗೇ ಕೆಲವು ತಿಂಗಳುಗಳು ಕಳೆದಿರಬಹುದು. ಮಧ್ಯದಲ್ಲಿ ಏನಕ್ಕೋ ನಾನು 2 ದಿನ ರಜ ಹಾಕುವ ಸಂದರ್ಭ ಬಂತು ನನಗೆ. ಈಸಲ ಅಕ್ಕೋರಿಗೆ ಹೇಳಿ, ಅವರ ಅನುಮತಿ ಪಡೆದೇ ರಜೆ ಹಾಕಿ ಹೋಗಿದ್ದೆ. ರಜ ಮುಗಿಸಿ ಬಂದು ನೋಡುತ್ತೇನೆ. ಅಕ್ಕೋರಿಗೆ ಹುಷಾರಿಲ್ಲ. ಕೆಮ್ಮು, ಗಂಟಲು ಕೆರೆತ, ಎಲ್ಲ ಶುರುವಾಗಿತ್ತು. ನನ್ನ ನೋಡಿದವರೇ ‘ಭಾರತಿ, ಎಂತ ಇದು, ನೀನೇನಾದ್ರೂ ತಣ್ಣೀರನ್ನು ತಂದುಕೊಟ್ಯಾ ಹೇಗೆ? ನಂಗೆ ನೆಗಡಿ, ಗಂಟಲು ಕೆರೆತ ಶುರುವಾಗಿಬಿಟ್ಟಿದೆ’ ಎಂದರು. ಒಂದುಕ್ಷಣ ಗಾಬರಿಯಾದರೂ ಸಾವರಿಸಿಕೊಂಡು ‘ಇಲ್ಲ ಅಕ್ಕೋರೆ, ನಾ ಕಾದ್ನೀರೇ ತಂದುಕೊಟ್ಟದ್ದು’ ಎಂದೆ. ‘ಹೌದಾ, ಏನಕ್ಕೆ ನಂಗೆ ಇದು ಶುರುವಾಯ್ತೋ. ಮೊದ್ಲೇ ನಂಗೆ ಅಸ್ತಮಾ ಇದೆ. ಈ ನೆಗಡಿ ಶುರುವಾದರೆ ಇನ್ನೂ ಕಷ್ಟ’ ಎಂದು ತಮ್ಮೊಳಗೆಂಬಂತೇ ಹೇಳಿಕೊಂಡರು ಅಕ್ಕೋರು.

ಮತ್ತೆ ಮಾರನೇ ದಿನದಿಂದ ನನ್ನ ತಣ್ಣೀರಿನ ಸಮಾರಾಧನೆ ಶುರುವಾಯಿತು. ಆ ಇಡೀ ವರ್ಷ ಅವರಿಗೆ ನಾನು ತಣ್ನಿರನ್ನೇ ಅವರಿಗೆ ಕುಡಿಸಿದ್ದೇನೆ. ಆದರೆ ಅವರಿಗ್ಯಾವ ಆರೋಗ್ಯದ ಸಮಸ್ಯೆಯೂ ಬರಲಿಲ್ಲ. ಕಡೆಗೆ ನಾನು ಬೇರೆ ಕ್ಲಾಸಿಗೆ ಹೋದೆ. ಅವರಿಗೆ ನೀರು ಕೊಡುವ ಸೌಭಾಗ್ಯ ನನಗೆ ಒದಗಿ ಬರಲಿಲ್ಲ. ಈಗ ಎನಿಸುತ್ತದೆ, ನಾ ಎರಡು ದಿನ ರಜೆ ಹೋಗಿದ್ದಾಗ ಬಹುಶಃ ಅವರು ಕಾಸಿದ ನೀರು ಕುಡಿದಿದ್ದರು ಎನಿಸುತ್ತದೆ. ಅದುವರೆಗೆ ತಣ್ಣೀರನ್ನು ಕುಡಿದು ನಂತರ ಏಕದಂ ಕಾಸಿದ ನೀರು ಕುಡಿದಿದ್ದಕ್ಕೆ ಅವರಿಗೆ ನೆಗಡಿಯಾಗಿದೆ ಅನಿಸುತ್ತದೆ. ಅಸ್ತಮಾ ಪೇಷಂಟ್ ಒಬ್ಬರಿಗೆ ಹೀಗೆ ತಣ್ಣೀರು ಕುಡಿಸಬಾರದು ಎಂದು ಆಗ ನನಗೆ ಹೊಳೆಯಲೂ ಇಲ್ಲ. ಅದರ ಪರಿಣಾಮ ಏನಾಗಬಹುದು ಎಂಬ ಯಾವ ಎಚ್ಚರವೂ ಆಗ ಇರಲಿಲ್ಲ. ಆದರೆ ಹಾಗೆ ತಣ್ಣೀರನ್ನು ಕುಡಿಸಿದ್ದರಿಂದ ಬೇರೆಯಾವ ಸಮಸ್ಯೆ ಆಗಲಿಲ್ಲ ಎಂಬ ಸಮಾಧಾನ ಈಗ ಇದೆ.

ಹೀಗೆ ಅಕ್ಕೋರಿಗೆ ನೀರು ಕುಡಿಸಿದ್ದರೂ ಅವರ ಆ ಶಿಸ್ತು, ಎಲ್ಲ ವಿಷಯಗಳ ಕುರಿತು ಅವರಿಗಿರುವ ಆಸಕ್ತಿ ಕುರಿತು ತುಂಬ ಸೋಜಿಗ ಎನಿಸುತ್ತಿತ್ತು. ನಮ್ಮೆಲ್ಲರಿಗೆ ಡಾನ್ಸ್, ಹಾಡು ಹೇಳಿಕೊಟ್ಟು, ಸದಾ ಪ್ರಾಕ್ಟೀಸು ಮಾಡಿಸುತ್ತಿದ್ದರು. ಅದೆಷ್ಟು ಪ್ರಯೋಗಗಳು ಇರುತ್ತಿದ್ದವು ಅಲ್ಲಿ. ಒಂದು ಶಾಲಾವಾರ್ಷಿಕೋತ್ಸವ ಇರಲಿ, ಆಗಸ್ಟ್ 15 ಇರಲಿ, ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲೊಂದಿಷ್ಟು ಡಾನ್ಸ್ ಇರಲೇ ಬೇಕು. ಹೀಗೆ ನಮ್ಮನ್ನೆಲ್ಲ ತಯಾರು ಮಾಡಿದವರು ಅವರು. ಅದೆಲ್ಲಕ್ಕಿಂತ ಮುಖ್ಯವಾಗಿ ಆಗಲೇ ಅವರಿಗೆ ಹೆಣ್ಣುಮಕ್ಕಳನ್ನು ಬೈಯ್ಯುವುದು, ಕೇವಲವಾಗಿ ನೋಡುವುದು ಎಂದರೆ ಆಗುತ್ತಿರಲಿಲ್ಲ. ಯಾರಾದರೂ ಹೆಣ್ಣುಮಕ್ಕಳಿಗೆ ಬೈದರೆ ತಕ್ಷಣ ಅವರಿಗೆ ಹೊಡೆತ ಬೀಳುತ್ತಿತ್ತು. ಅದಕ್ಕೆ ಸಾಕ್ಷಿಯಾದ ಒಂದು ಘಟನೆ ಈಗಲೂ ಮರುಕಳಿಸುತ್ತಲೇ ಇರುತ್ತದೆ ನನಗೆ.
ನನ್ನ ಕ್ಲಾಸ್ಮೇಹಟ್ ಸುಧೀರ್ ಬೇಂಗ್ರೆ ತುಂಬ ಚೆನ್ನಾಗಿ ಹಾಡುತ್ತಾನೆ. ಒಮ್ಮೆ ಶಾಲೆಯಲ್ಲಿ ಚಲನಚಿತ್ರಗೀತೆ ಸ್ಪರ್ಧೆ ಇತ್ತು. ಅದಕ್ಕೆ ಸುಧೀರ …
ಬೇಡ..ನಂಬಬೇಡ.. ಜೀವ ಹೋದರೂ
ಹೆಂಗಸರನ್ನು ಎಂದಿಗು ನೀನು ನಂಬಬೇಡ…
ರಾವಣ ಸತ್ತ ಸೀತೆಯಿಂದ
ಕೀಚಕ ಬಿದ್ದ ದ್ರೌಪದಿಯಿಂದ
ವಿಶ್ವಾಮಿತ್ರ ಮೇನಕೆಯಿಂದ
ಹೆಣ್ಣಿನಿಂದಲೇ ನಾನು ಕೆಟ್ಟೆನು
ನೀನು ಹೀಗೆಯೇ ಹಾಳಾದೀಯ
ಬೇಡ ನಂಬಬೇಡ ಜೀವಹೋದರೂ
ಹೆಂಗಸರನ್ನು ಎಂದಿಗೂ ನೀನು ನಂಬಬೇಡ

ಈ ಹಾಡಿಗೊಂಥರಾ ರಿದಮ್ ಇದೆ. ನಾವೂ ಹಾಡಿಗೆ ತಕ್ಕಹಾಗೆ ಚಪ್ಪಾಳೆ ತಟ್ಟುತ್ತ ಖುಷಿಯಿಂದ ಕೇಳ್ತಾ ಇದ್ವಿ. ಹುಡುಗರಂತೂ ಚಪ್ಪಾಳೆ, ಶಿಳ್ಳೆ ಹೊಡೀತಿದ್ರು. ಆ ಸ್ಪರ್ಧೆಗೆ ನಿರ್ಣಾಯಕರಾಗಿ ಇದ್ದವರು ಇದೇ ಅಕ್ಕೋರಿದ್ದರು. ತುಂಬ ಚೆನ್ನಾಗಿ ಹಾಡಿದ್ದ, ಹಾಗಾಗಿ ಅವನಿಗೇ ಫಸ್ಟ್ ಫ್ರೈಜ್ ಬರುತ್ತದೆಂದು ನಮ್ಮೆಲ್ಲರ ಅಂದಾಜು. ಆದರೆ ಸುಧೀರ್ ಬೇಂಗ್ರೆಗೆ ಬಹುಮಾನವೂ ಬರಲಿಲ್ಲ. ಸ್ಪರ್ಧೆ ಮುಗಿದಮೇಲೆ ಕ್ಲಾಸಿಗೆ ಬಂದವರೇ ಇದೇ ಅಕ್ಕೋರು ‘ಹೆಣ್ಮಕ್ಕಳನ್ನು ಅವಹೇಳನ ಮಾಡೋ ಹಾಡನ್ನು ಹಾಡ್ತೀಯೇನೋ.. ನಿಂಗೆ ಬೇರೆ ಯಾವ ಹಾಡೂ ಸಿಗ್ಲಿಲ್ವಾ, ಇದೇ ಹಾಡು ಸಿಕ್ತಾ ನಿಂಗೆ? ಹೆಣ್ಮಕ್ಕಳನ್ನು ನಂಬಬಾರ್ದಾ? ನೀವು ಗಂಡಸರನ್ನು ಮಾತ್ರ ನಂಬ ಬೇಕೇನೋ? ಎಂದು ಬೆತ್ತ ತಗೊಂಡು ಎಗ್ಗಿಲ್ಲದೆ ಚೆನ್ನಾಗಿ ಹೊಡೆದಿದ್ದರು. ಪಾಪ ಸುಧೀರ ಅಳುತ್ತಾ ನಿಂತಿದ್ದ. ನಮಗೆಲ್ಲ ಆಶ್ಚರ್ಯ ಮತ್ತು ಭಯದಿಂದ ನೋಡುತ್ತ ನಿಂತಿದ್ದೆವು. ಅಷ್ಟು ಚೆನ್ನಾಗಿ ಹಾಡಿದ್ದ ಸುಧೀರನಿಗೆ ಯಾಕೆ ಅಕ್ಕೋರು ಹೀಗೆಲ್ಲ ಹೊಡೆದ್ರು ಎಂದು ಅರ್ಥವೇ ಆಗಲಿಲ್ಲ. ಕಡೆಗೆ 7ನೇ ತರಗತಿ ಕ್ಲಾಸ್ ಮೇಷ್ಟ್ರು ‘ಏನಾ ಸುಧೀರ, ಅಕ್ಕೋರು ನಿಂಗ ಹೊಡೆದ್ರೇನೋ..ಯಾಕೆ ಆ ಹಾಡು ಹೇಳಕ್ಕೆ ಹೋದೆ ಮಾರಾಯಾ? ಮೊದ್ಲೇ ಅವರು ನೊಂದಿದ್ದಾರೆ’ ಎಂದರು.

ನೀರು ಕಾಸಿದ್ದಾ, ತಣ್ಣೀರಾ ಎಂದು ಅಕ್ಕೋರಿಗೆ ಹೇಗೆ ತಿಳಿಯುತ್ತದೆಂದು ಯೋಚಿಸಿ ಅದೇ ನೀರನ್ನೇ ಅಕ್ಕೋರಿಗೆ ಕೊಟ್ಟೆ. ಅಕ್ಕೋರು ಕುಡಿದರು. ಮಾರನೇ ದಿನದಿಂದಲೇ ಅಕ್ಕೋರಿಗೆ ನನ್ನ ತಣ್ಣೀರಿನ ಬಾಟಲ್ ನೀರು ಸರಬರಾಜು ನಡೆಯತೊಡಗಿತು. ಆಗ ನಾನು ಅಕ್ಕೋರಿಗೆ ನೀರು ತಂದುಕೊಡುತ್ತಿದ್ದೇನೆಂಬುದೇ ದೊಡ್ಡ ಹೆಮ್ಮೆಯ ಸಂಗತಿ. ಹಾಗಾಗಿ ಅದು ತಣ್ಣೀರೋ, ಬಿಸಿನೀರೋ, ಕಾದಾರಿದ ನೀರೋ.. ಎಂದೆಲ್ಲ ಯೋಚಿಸಲು ಹೋಗಲೇ ಇಲ್ಲ.

ಆಗ ಇದ್ಯಾವುದೂ ನಮಗೆ ತಿಳಿದಿರಲಿಲ್ಲ. ಅಕ್ಕೋರು ಹೊಡೆದದ್ದಷ್ಟೇ ನಮಗೆ ಬೇಸರದ ವಿಷಯವಾಗಿತ್ತು. ಅಷ್ಟರ ನಂತರ ಬಾಲಿಕೊಪ್ಪ ಶಾಲೆ ಮುಗಿಸಿ, ಹೈಸ್ಕೂಲು, ಕಾಲೇಜು ಎಲ್ಲ ಮುಗಿಸಿದ ಮೇಲೆ ಬದುಕು ಕಟ್ಟಿಕೊಳ್ಳಲು ಎಲ್ಲೆಲ್ಲೋ ಹೋಗಬೇಕಾದ ಸಂದರ್ಭ ಬಂತು. ಈ ಅಕ್ಕೋರು, ಈ ಕ್ಲಾಸ್‍ ಮೇಟ್‍ ಗಳೆಲ್ಲ ಎಲ್ಲೆಲ್ಲಿ ಹೋದರೋ… ನಮ್ಮದೇ ಲೋಕದಲ್ಲಿ ನಾವು ಕಳೆದೇ ಹೋಗಿದ್ದೀವಿ ಎನ್ನುವ ಹೊತ್ತಿಗೇ ಅಚಾನಕ್ ಆಗಿ ಇದೇ ಸುಧೀರ್ ಬೇಂಗ್ರೆ ಸಿಕ್ಕ. ಅವನನ್ನು ನೋಡಿದ ಕೂಡ್ಲೇ ನೆನಪಾಗಿದ್ದು ಈ ಹಾಡು. ನೆನಪಿದ್ಯೇನೋ ಎಂದು ಕೇಳಿ ಇಬ್ಬರೂ ಮನಸಾರೆ ನಕ್ಕಿದ್ದೆವು.

ಕಳೆದ ಬಾರಿ ಊರಿಗೆ ಹೋದಾಗ ಸುಧೀರ್ ಮತ್ತು ನಾನು ಸೇರಿ ಇದೇ ಅಕ್ಕೋರನ್ನು ಭೇಟಿ ಮಾಡಲು ಚಂದ್ರಗುತ್ತಿಗೆ ಹೋಗಿದ್ದೆವು. ಈಗ ಅಕ್ಕೋರಿಗೆ 86 ವರ್ಷವಾಗಿದೆ. ಕಳೆದ ದಿನಗಳ ನೆನಪು ಅಷ್ಟಾಗಿ ಇಲ್ಲ. ಬರೀ ನಾವೆಲ್ಲ ಅವರ ಸ್ಟೂಡೆಂಟ್ಸ್ ಎಂದು ಮಾತ್ರ ನೆನಪಿದೆ. ಸುಮಾರು ನೆನಪುಗಳನ್ನು ಕೆದಕಿದೆ. ‘ಅಕ್ಕೋರೆ ನಿಮಗೆ ಅಸ್ತಮಾ ಇತ್ತು. ಅದಿಕ್ಕೆ ನಾ ನಿಮಗೆ ದಿನಾ ನೀರು ತಂದುಕೊಡುತ್ತಿದ್ದೆ’ ಎಂದು ನೆನಪಿಸಿದೆ. ಸದ್ಯ ಬಿಸಿನೀರು ಎಂದು ತಣ್ಣಿರನ್ನೇ ತಂದುಕೊಡುತ್ತಿದ್ದೆ ಎಂದು ಹೇಳಲು ಹೋಗಲಿಲ್ಲ. ‘ಹೌದೇನೇ.. ಈಗಲೂ ನಂಗೆ ಗಂಟಲು ಕೆರೆತ, ನೆಗಡಿ ತಪ್ಪಲಿಲ್ಲ ನೋಡು’ ಎಂದರು. ಈಗಲೂ ನೀವು ತಣ್ಣೀರನ್ನೇ ಕುಡಿದಿದ್ದರೆ ಇವೆಲ್ಲ ತಪ್ಪುತ್ತಿತ್ತೇನೋ ಎಂದು ಮನಸಲ್ಲೇ ಎಂದುಕೊಂಡೆ. ಅದೇಹೊತ್ತಿಗೆ ಸುಧೀರ ಒಂದು ಹಾಡು ಹೇಳಿದ. ಅದೆಷ್ಟು ಚೆನ್ನಾಗಿ ಹೇಳ್ತೀಯೋ ಎಂದು ಅವನ ತಲೆಮುಟ್ಟಿ ಹರಸಿದರು. ತಕ್ಷಣ ‘ಅಕ್ಕೋರೆ ಇವನು 5ನೇಕ್ಲಾಸಲ್ಲಿರೋವಾಗ ಒಂದು ಹಾಡು ಹೇಳಿದ್ದಕ್ಕೆ ನೀವು ಚೆನ್ನಾಗಿ ಅವನಿಗೆ ಹೊಡೆದಿದ್ದಿರಿ ನೆನಪಿದೆಯಾ’ ಎಂದು ಇಬ್ಬರೂ ಮುಖಮುಖ ನೋಡಿಕೊಂಡು ನಗುತ್ತಲೇ ಕೇಳಿದೆ.

‘ಏಯ್ ಸುಮ್ನಿರೇ, ಹಾಡು ಹೇಳಿದ್ದಕ್ಕೆಲ್ಲ ನಾ ಎಂತಕ್ಕೆ ಹೊಡೀಲಿ ನೀ ಸುಮ್‍ ಸುಮ್ನೆ ಹೇಳ್ತಿಯಾ’ ಎಂದು ಗದರಿದಂತೆ ಹೇಳಿದರು. ‘ಇಲ್ಲ ಅಕ್ಕೋರೆ ಖರೇವಾಗ್ಲೂ ಹೊಡಿದಿದ್ರೀ, ಬೇಕಿದ್ರೆ ಆ ಹಾಡು ಕೇಳಿ ನೀವು’ ಎಂದು ಸುಧೀರನಿಗೆ ಹಾಡಲು ಹೇಳಿದೆ.

ಸುಧೀರ ಅದೇ ಧಾಟಿಯಲ್ಲಿ ಶುರುಮಾಡಿದ…
ಬೇಡ..ನಂಬಬೇಡ..ಜೀವ ಹೋದರೂ
ಹೆಂಗಸರನ್ನು ಎಂದಿಗೂ ನೀನು ನಂಬಬೇಡ
ರಾವಣ ಸತ್ತ ಸೀತೆಯಿಂದ
ಕೀಚಕ ಬಿದ್ದ ದ್ರೌಪದಿಯಿಂದ
ವಿಶ್ವಾಮಿತ್ರ ಮೇನಕೆಯಿಂದ
ಹೆಣ್ಣಿನಿಂದಲೇ ನಾನು ಕೆಟ್ಟೆನು
ನೀನು ಹೀಗೆಯೇ ಹಾಳಾದೀಯ
ಬೇಡ ನಂಬಬೇಡ ಜೀವಹೋದರೂ
ಹೆಂಗಸರನ್ನು ಎಂದಿಗೂ ನೀನು ನಂಬಬೇಡ
ಎಂದು ಹಾಡು ಕೇಳಿದ ಮೇಲೆ, ಅಕ್ಕೋರು, ‘ಇದೇ ಹಾಡಾಗಿದ್ರೆ ನಾ ಹೊಡೆದಿದ್ದು ಸರೀನೇ ಇತ್ತು ಬಿಡು, ಇನ್ನೂ ಹೊಡೀಬೇಕಾಗಿತ್ತು ನಾನು’ ಎಂದರು. ಅಷ್ಟರ ನಂತರ ಹೆಣ್ಣುಮಕ್ಕಳ ಕುರಿತು ಇದ್ದ ಇಂಥ ಹಾಡುಗಳೆಲ್ಲ ಲೇವಡಿ ಮಾಡುವಂಥ ಹಾಡು ಎಂಬುದು ತಿಳಿದು, ಮತ್ತೆ ಆ ಹಾಡುಗಳನ್ನು ಕೇಳುತ್ತಲೇ ಇರಲಿಲ್ಲ.

ಹೀಗೆ ಹಾಡು, ಡಾನ್ಸ್ ಹೇಳಿಕೊಡುತ್ತಿದ್ದ ಅಕ್ಕೋರು ಈಗ ಕಾಲುನೋವಿನಿಂದ ವಾಕರ್ ಹಿಡಿದು ನಡೆಯುತ್ತಾರೆ. ‘ಅಮ್ಮ ಮತ್ತು ನಾನು ಇಬ್ಬರೇ ಇದ್ದೆವು. ಅಮ್ಮ ಅವರಿವರ ಮನೆಯ ಕೆಲಸ ಮಾಡಿ ನನ್ನ ಓದಿಸಿದರು. ಆಗ ನಾನು ಬರೀ ಎಸ್ಸೆಸ್ಸೆಲ್ಸಿವರೆಗೆ ಓದಿ ಈ ಟೀಚರ್ ಕೆಲ್ಸ ಮಾಡಿದೆ. ಕಡೆಗೆ ಬಿಎ ಪಾಸು ಮಾಡಿಕೊಂಡೆ. ಅದಿಲ್ಲದಿದ್ದರೆ ನಾನೂ ಅಮ್ಮನ ಹಾಗೇ ಅವರಿವರ ಮನೆಗೆಲಸ ಮಾಡಿಕೊಂಡು ಬದುಕಬೇಕಾಗಿತ್ತೋ ಏನೋ’ ಎಂದು ನಿಟ್ಟುಸಿರು ಬಿಟ್ಟರು. ‘ನಿಮ್ಮ ತಲೆ ಇರುವುದು ಜಡೆಗೆ ಹೂವು ಮುಡಿದುಕೊಂಡು ಬಂದು ಅಲಂಕಾರಕ್ಕಾಗಿ ಅಲ್ಲ, ಅದನ್ನು ಸ್ವಲ್ಪ ಉಪಯೋಗಿಸಿ, ಸ್ವಲ್ಪ ಕಲೀರಿ, ನೀವು ನಿಮ್ಮ ಅಮ್ಮಂದಿರ ಹಾಗೆ ಮುಸುರೆ ತಿಕ್ಕುತ್ತ ಕೂರಬೇಡಿ’ ಎಂದು ಹೆಣ್ಣುಮಕ್ಕಳಿಗೇ ಸದಾ ಹೇಳುತ್ತಿದ್ದ ಅವರ ಮಾತುಗಳು, ನಾವೆಲ್ಲ 5ನೇ ತರಗತಿಯಲ್ಲಿರುವಾಗಲೇ ಸ್ತ್ರೀವಾದವನ್ನು ಮಂಡಿಸಿದ್ದ ಅರ್ಚಕ ಅಕ್ಕೋರಿನ ಬಗ್ಗೆ ಈಗ ಗೌರವ ಹೆಚ್ಚಾಯಿತು. ಸ್ತ್ರೀವಾದದ ಕುರಿತು ಅಷ್ಟೆಲ್ಲ ಪ್ರಚಾರವಾಗದೇ ಇದ್ದ ಸಮಯದಲ್ಲಿ ಅದೂ ಅಂಥ ಸಣ್ಣ ಪಟ್ಟಣಗಳಲ್ಲಿ ಇವೆಲ್ಲ ಗೊತ್ತೇ ಇರದ ಸಂದರ್ಭದಲ್ಲಿ ಅಂಥ ಯಾವ ಹಾಡುಗಳನ್ನೂ ಗಂಡುಮಕ್ಕಳಿಗೆ ಹೇಳಲು ಕೊಡದೆ ಹೆಣ್ಣುಮಕ್ಕಳ ಪರವಾಗಿ ಶಾಲೆಯಲ್ಲಿ ಧ್ವನಿ ಎತ್ತಿದ ಶಿಕ್ಷಕಿಯಾಗಿದ್ದ ಅರ್ಚಕ ಅಕ್ಕೋರಿನ ಬಗ್ಗೆ ನಿಜಕ್ಕೂ ಅಭಿಮಾನ ತುಂಬಿಬಂತು.