ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದ. ಆದರೆ ಶಮಿ-ವರುಣನ ನೋಟ ಸೇರಿದಾಗ ಅವರ ಕಣ್ಣುಗಳಲ್ಲಿ ಕಾಣುವ ತನ್ಮಯತೆ, ಹೊಳಪು ಅವನನ್ನು ಹೆದರಿಸುತ್ತಿತ್ತು.
ರೂಪ ಪ್ರಕಾಶನ ಪ್ರಕಟಿಸಿರುವ “ಉಮಾ ರಾವ್ ಕತೆಗಳು” ಪುಸ್ತಕದಿಂದ ಒಂದು ಕತೆ ನಿಮ್ಮ ಓದಿಗೆ

 

ಆಗತಾನೇ, ತನ್ನ ಮಗನೂ ತಾನು ಪ್ರೀತಿಸುವ ಹುಡುಗಿಯನ್ನೇ ಮೆಚ್ಚಿರುವುದನ್ನು ತಿಳಿದ ಅಗಸ್ತ್ಯನಿಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಆಯಿತು. ಅದಕ್ಕೆ ಕಾರಣಗಳು ಮೂರು. ಮೊದಲನೆಯದು- ಬದುಕಿನಲ್ಲಿ ಅವನೆಂದೂ ಸೋಲನ್ನು ಕಂಡವನಲ್ಲ. ಎರಡನೆಯದು- ಶರ್ಮಿಷ್ಠೆಯಲ್ಲಿ ಅವನಿಗೆ ಎಂಥಾ ಪ್ರೇಮವಿದೆಯೆಂದರೆ, ಮಗನಿಗೋಸ್ಕರವಾಗಿಯಾದರೂ ಅವಳನ್ನು ತ್ಯಾಗ ಮಾಡಿ ಬದುಕುವುದು ಸಾಧ್ಯವಿಲ್ಲವೆನ್ನುವುದು. ಮೂರನೆಯದು-ತನ್ನ ಮಗನನ್ನು “ಮಗ” ಎಂದು ಕರೆಯಬಹುದೇ ಎಂಬ ಪ್ರಶ್ನೆಗೆ 21 ವರ್ಷಗಳ ನಂತರವೂ ಅವನಿಗೆ ಉತ್ತರ ಸಿಕ್ಕಿಲ್ಲ.

ಅಸ್ಸಾಮಿನ ತಿನ್ ಸುಖಿಯಾದ ಹತ್ತಿರದ ಅನೇಕ ಟೀ ಪ್ಲಾಂಟೇಶನ್ ಗಳ ಒಡೆಯ ರಮಾನಂದ. ಅವರ ಐಶ್ವರ್ಯವನ್ನು ದಿನೇ ದಿನೇ ಮತ್ತಷ್ಟು ಹೆಚ್ಚಿಸಲು, ಪ್ರತಿವರ್ಷವೂ ಯೂರೋಪು, ಅಮೆರಿಕಾ ಪ್ರವಾಸಗಳಿಗೆ ಅನುವು ಮಾಡಿಕೊಡಲು, ಹತ್ತಾರು ದೊಡ್ಡ ದೊಡ್ಡ ಕಾರುಗಳನ್ನು ಮನ ಬಂದಾಗ ಬದಲಾಯಿಸುವುದನ್ನು ಸಾಧ್ಯವಾಗಿಸಲು ಅವರ ವಿಶಾಲವಾದ ಬಂಗಲೆಯನ್ನು ಏರ್ ಕಂಡಿಶನರ್ ಗಳೂ, ಸ್ಟೀರಿಯೋ, ವೀಡಿಯೋಗಳಲ್ಲದೆ ಅನೇಕ ಅತ್ಯಾಧುನಿಕ ಗ್ಯಾಡ್ಜೆಟ್ ಗಳಿಂದ ಸಜ್ಜುಗೊಳಿಸಲು-ಅಗಲವಾದ ಬಿದಿರಿನ ಹ್ಯಾಟುಗಳ ಕೆಳಗೆ ತಲೆ ಬಗ್ಗಿಸಿ, ತಮ್ಮ ಜೀವಮಾನವೆಲ್ಲಾ ದುಡಿಯುತ್ತಿದ್ದರು ನೂರಾರು ಕೂಲಿಗಳು. ರಮಾನಂದರ ಒಬ್ಬನೇ ಮಗ ಅಗಸ್ತ್ಯ. ಅವನು ಹುಟ್ಟಿದಾಗ ಜಾತಕ ನೋಡಿದ್ದ ಪಂಡಿತರು ರಮಾನಂದರಿಗೆ ಹೇಳಿದ್ದರಂತೆ “ನಿಮ್ಮ ಮಗನ ಜಾತಕ ಅಂತಿಂಥಾದ್ದಲ್ಲ. ತುಂಬಾ ಮೇಲೆ ಬರುವಂಥವನ ಜಾತಕ ಇದು. ಈ ರೀತಿ ಗ್ರಹಕೂಟಗಳು ಚಕ್ರವರ್ತಿಗಳ, ಮಹರ್ಷಿಗಳ ಜಾತಕಗಳಲ್ಲಿ ಮಾತ್ರ ಇರುತ್ತವೆ. ಅಗಸ್ತ್ಯ ಗೋತ್ರದಲ್ಲಿ ಹುಟ್ಟಿದ್ದ ತಮ್ಮ ಒಬ್ಬನೇ ಮಗನಿಗೆ ಅಗಸ್ತ್ಯನೆಂದೇ ಹೆಸರಿಟ್ಟಿದ್ದರು ರಮಾನಂದ-ಸುಭದ್ರ. ಆದರೆ ದುರ್ದೈವವೆಂದರೆ, ಮಗನ ಮಹತ್ಸಾಧನೆಗಳನ್ನು ನೋಡಿ ಸಂತೋಷಪಡುವಷ್ಟು ವರ್ಷ ಅವರು ಬದುಕಿರಲೇ ಇಲ್ಲ. ಅವನು 20ನೇ ವಯಸ್ಸಿನಲ್ಲಿ ಅಮೆರಿಕಾದಲ್ಲಿ ಓದುತ್ತಿದ್ದಾಗ, ಯೂರೋಪು ಪ್ರವಾಸ ಮುಗಿಸಿ ವಾಪಸ್ಸು ಬರುತ್ತಿದ್ದ ರಮಾನಂದ, ಸುಭದ್ರಾ ವಿಮಾನ ಅಪಘಾತದಲ್ಲಿ ಪ್ರಾಣಬಿಟ್ಟರು.

ಆದರೆ ಪಂಡಿತರ ಮಾತನ್ನು, ತನ್ನ 25ನೆಯ ವಯಸ್ಸಿಗೇ ಅಕ್ಷರಶಃ ನಿಜ ಮಾಡಿಸಲೋ ಎಂಬಂತೆ ಬೆಳೆದು ನಿಂತಿದ್ದ ಅಗಸ್ತ್ಯ. ಆರಡಿ ಎತ್ತರದ, ಅದಕ್ಕೆ ಸರಿದೂಗುವ ಮೈಕಟ್ಟಿನ ದೃಢಕಾಯ. ಎಂಥವರೂ ಮೋಹಗೊಳ್ಳುವ ರೂಪ. ಅಪ್ಪ ಬಿಟ್ಟು ಹೋಗಿದ್ದ ಎಸ್ಟೇಟುಗಳು, ಬಂಗಲೆ, ಲಕ್ಷಾಂತರ ರೂಪಾಯಿಗಳ ಆಸ್ತಿಯ ಒಡೆಯ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಜನೆಟಿಕ್ ಎಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್. ಅವನು ಬರೆದ ರಿಸರ್ಚ್ ಪೇಪರ್ ಗಳಿಂದ ಅಷ್ಟು ಚಿಕ್ಕ ವಯಸ್ಸಿನಲ್ಲೇ ಜಗದ್ವಿಖ್ಯಾತಿ. ಜೊತೆಗೆ ವಯೋಲಿನ್ ನುಡಿಸುವುದರಲ್ಲಿ ಪರಿಣಿತ, ಈಜುವುದರಲ್ಲಿ ನಿಸ್ಸೀಮ. ಇದಕ್ಕೆಲ್ಲಾ ಮೆರುಗು ಕೊಡುವಂತೆ ಮಿಮಿಯಂಥಾ ಹೆಂಡತಿ. ಅಮೆರಿಕಾದಲ್ಲಿ ತನ್ನ ಜೊತೆಗೇ ರಿಸರ್ಚ್ ಮಾಡುತ್ತಿದ್ದ ಹೂಗೂದಲಿನ ಚೆಲುವೆ ಮಿಮಿಯೊಡನೆ ಪರಿಚಯ, ಸ್ನೇಹ, ಪ್ರೇಮ, ಮದುವೆ. ಭಾರತಕ್ಕೆ ಆಗಮನ. ಅವನು ಆಗಾಗ ತಮಾಷೆ ಮಾಡುತ್ತಿದ್ದ “ಯೂ ನೋ ಸಮ್ಥಿಂಗ್, ಮಿಮಿ? ಅಗಸ್ತ್ಯ ಮಹರ್ಷಿ ತನಗೆ ತಕ್ಕ ಹುಡುಗಿ ಸಿಕ್ಕಲಿಲ್ಲಾಂತ, ಪ್ರಪಂಚದಲ್ಲಿರುವ ಎಲ್ಲಾ ಸುಂದರ ವಸ್ತುಗಳಿಂದ ಒಂದೊಂದಂಶ ತೆಗೆದು, ಲೋಪಾಮುದ್ರೇನ ಸೃಷ್ಟಿಸಿ ಮದುವೆ ಆದಾಂತ ನಮ್ಮ ಪುರಾಣ ಹೇಳುತ್ತೆ. ಆ ಕಾಲದಲ್ಲಿ ನೀನೇನಾದ್ರೂ ಇದ್ದಿದ್ರೆ ಅಗಸ್ತ್ಯನಿಗೆ ಅಂಥಾ ಸಮಸ್ಯೆ ಬರುತ್ತಿರಲಿಲ್ಲ.” ಒಟ್ಟಿನಲ್ಲಿ ಅಗಸ್ತ್ಯ ಪರಿಪೂರ್ಣ. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಯಾವ ಯುವಕನಲ್ಲಿಯೂ ಇರಬಹುದಾದಷ್ಟು ಹೆಮ್ಮೆ, ಸ್ವಾಭಿಮಾನ ಅವನಲ್ಲಿಯೂ ಇತ್ತು. ತನ್ನ ಹೆಸರು, ರೂಪ, ಪ್ರತಿಭೆ, ಸಾಮರ್ಥ್ಯ, ಹಣ, ಯಶಸ್ಸು, ಸ್ಕೂಲಿನಲ್ಲೇ ಇದ್ದ 206ರ “ಐಕ್ಯು,” ಮಿಮಿ-ಎಲ್ಲದರ ಬಗ್ಗೆ ಅವನ ಹೆಮ್ಮೆ, ಮೋಹಕ್ಕೆ ತಿರುಗಿ ದಿನೇದಿನೇ ಹೆಚ್ಚು ಹೆಚ್ಚು ಬೆಳೆದು ಅವನ ಮೈ ಮನಸ್ಸುಗಳ ಕಣ ಕಣಗಳಲ್ಲಿಯೂ ಮಿಡಿಯತೊಡಗಿತ್ತು. ಆ ಮೋಹವೇ ಅವನನ್ನು ಅಮರತ್ವದ ಹಂಬಲದೆಡೆಗೆ ಎಳೆಯತೊಡಗಿತ್ತು.

ಅಮರನಾಗಲು ಅಗಸ್ತ್ಯ ಕನಸು ಕಾಣತೊಡಗಿದ. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಪಣತೊಟ್ಟ. ಅವನ ಆ ಉತ್ಕಟ ಬಯಕೆಗೆ ಉತ್ತರವೋ ಎಂಬಂತೆ ದಿನವೆಲ್ಲಾ ಅವನ ತಲೆಯಲ್ಲಿ ಮಿಡಿಯಲು ಪ್ರಾರಂಭ ಮಾಡಿತು ಏಕತಾನ.

If the nucleus is knocked off from the fertilized ovum, and replaced by the nucleus of a body cell of the father, and planted back in to the uterus of the mother the baby to be born will be the `clone’ of the father.

ಫಲೀಕರಣಗೊಂಡ ಅಂಡದಿಂದ ಜೀವಕಣ ಕೇಂದ್ರವನ್ನು ಹೊರಹಾಕಿ ಅಲ್ಲಿ ತಂದೆಯ ಜೀವಕಣ ಕೇಂದ್ರದ ಒಂದು ಜೀವಕೋಶವನ್ನು ಸ್ಥಳಾಂತರ ಮಾಡಿ ಮತ್ತೆ ತಾಯಿಯ ಗರ್ಭಕೋಶದಲ್ಲಿ ಕೂಡಿಸಿದರೆ ಮುಂದೆ ಹುಟ್ಟುವ ಮಗು ತಂದೆಯ ತದ್ರೂಪಿ ಶಿಶುವಾಗಿರುತ್ತದೆ.

-ಹಾಗೆ ಮಾಡಿದರೆ, ತಾಯಿಯಿಂದ ಒಂದಂಶವನ್ನೂ ಪಡೆಯದೆ, ಕೇವಲ ಗರ್ಭದಲ್ಲಿ ಬೆಳೆದು ಹುಟ್ಟುವ ಮಗ ತನ್ನ ಪಡಿಯಚ್ಚಾಗುತ್ತಾನೆ. ಪೂರ್ಣವಾಗಿ ತನ್ನ ಪ್ರತಿಯಾಗುತ್ತಾನೆ. ಪೀಳಿಗೆಯಿಂದ ಪೀಳಿಗೆಗೆ ಹೀಗೇ ಮುಂದುವರಿಸಿದರೆ ತಾನು ಸಾವಿಲ್ಲದವನಾಗುತ್ತೇನೆ. ಇದುವರೆಗೂ ಕೇವಲ ಸಸ್ಯಗಳಲ್ಲಿ, ಕೆಲವು ಪ್ರಾಣಿಗಳಲ್ಲಿ ವಿಜ್ಞಾನ ಸಾಧಿಸಿರುವುದನ್ನು, ತಾನು ಮನುಷ್ಯನಲ್ಲಿ ಮೊದಲಬಾರಿ ಸಾಧಿಸುತ್ತೇನೆ. “ಕುಂಭ ಸಂಭವ”ವನ್ನು ಸೃಷ್ಟಿಸಿ ಅಗಸ್ತ್ಯ ಮಹರ್ಷಿಯನ್ನು ಮೀರಿ ಪ್ರಖ್ಯಾತನಾಗುತ್ತೇನೆ.

ತಕ್ಷಣ ಮಿಮಿಯೊಂದಿಗೆ ಅಮೆರಿಕಾಗೆ ಪ್ರಯಾಣ. ಅಲ್ಲಿನ ಲ್ಯಾಬೊರೇಟರಿಗಳಲ್ಲಿ ನಡೆದದ್ದೆಲ್ಲಾ ತುಂಬಾ ಗೋಪ್ಯ. ಅದನ್ನು ಬಹಿರಂಗಪಡಿಸುವುದು ಅಗಸ್ತ್ಯನಿಗೆ ಸ್ವಲ್ಪವೂ ಇಷ್ಟವಿಲ್ಲ. ಮಿಮಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ವಿಷಯ ಅವನು, ಮಿಮಿ ಮಾತ್ರ ತಿಳಿದಿರುವ ನಿಗೂಢ ರಹಸ್ಯ. ಅವಳ ಮಗು ಹುಟ್ಟುವವರೆಗೂ ಅಮೆರಿಕಾದಲ್ಲೇ ಇರಲು ನಿರ್ಧಾರ.
ಹೊಟ್ಟೆಯಲ್ಲಿ ಮಗು ಬೆಳೆದಂತೆ, ದೈಹಿಕವಾಗಿ ಆರೋಗ್ಯವಾಗಿದ್ದರೂ ಮಿಮಿ ದಿನೇ ದಿನೇ ಕಳೆಗುಂದಿದ್ದಳು. ಬಿಳಿಚಿಕೊಂಡಿದ್ದಳು. ಯಾವಾಗಲು ಹಕ್ಕಿಯಂತೆ ಉತ್ಸಾಹದಿಂದ ಇರುತ್ತಿದ್ದವಳು ಮೂಕಿಯಾಗಿದ್ದಳು. ತಾಯ್ತನ ಅವಳಿಗೆ ಮೆರುಗು ಕೊಡುವುದರ ಬದಲು ಸಾರಗುಂದಿಸಿತ್ತು. ಹೆರಿಗೆಯ ನೋವು ತಿನ್ನುತ್ತಾ, ಒದ್ದಾಡುತ್ತಾ ಲೇಬರ್ ವಾರ್ಡಿನಲ್ಲಿ ಮಲಗಿದ್ದಾಗ ಅವಳಲ್ಲಿ ಸ್ವಲ್ಪ ನಲಿವು ತರಿಸಲು ಅಗಸ್ತ್ಯ ಹೇಳಿದ್ದ “ನೋಡು… ಇನ್ನು ಸ್ವಲ್ಪ ಹೊತ್ತಷ್ಟೆ. ನಿನ್ನ ಮಗನ ಮುಖ ನೋಡಿದ ತಕ್ಷಣ ಎಲ್ಲಾ ಸರಿ ಹೋಗುತ್ತೆ… ಆಮೇಲೆ ನಿನ್ನ ಹಿಡಿಯೋರೇ ಇಲ್ಲ…”

ಮಿಮಿ ನೀರವ ನಗೆ ನಕ್ಕಿದ್ದಳು. “ನನ್ನ ಹೊಟ್ಟೇಲಿ ಹುಟ್ಟಿದ ಮಾತ್ರಕ್ಕೆ, ಅವನು ನನ್ನ ಮಗ ಅನ್ನೋದು ತಮಾಷೆ ಅಲ್ವೇ? ನನ್ನ ಒಂದು ಅಂಶವೂ ಇಲ್ಲದ ಆ ಜೀವಕ್ಕೆ, ನಾನು ತಾಯಿ ಹೇಗಾದೇನು?”

ಆರೋಗ್ಯವಾಗಿದ್ದು ಅತ್ಯಾಧುನಿಕ ಆಸ್ಪತ್ರೆಯಲ್ಲಿದ್ದು, ಏನೂ ತೊಂದರೆಯಿಲ್ಲದಿದ್ದರೂ ಇದ್ದಕ್ಕಿದ್ದಂತೆ ಅತಿ ರಕ್ತಸ್ರಾವವಾಗಿ, ಮಗ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟಿದ್ದಳು ಮಿಮಿ. ಅಪ್ಪಿತಪ್ಪಿ ಕೂಡ ಹೀಗೇನಾದರೂ ಅನಾಹುತ ಆಗಬಹುದೆಂದು ಸಂಶಯವೂ ಇಲ್ಲದ ಅಗಸ್ತ್ಯ ತಲೆಯ ಮೇಲೆ ಕೈಹೊತ್ತು ಕೂತಿದ್ದ. ಮನದಾಳದಿಂದ ಪ್ರಶ್ನೆಯೊಂದು ಹೆಡೆ ಎತ್ತಿತ್ತು. “ನನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಹೇಳುತ್ತಿದ್ದ ಗಂಡ, ಕೇವಲ ಒಂದು ಸಾಧನವಾಗಿ ಬಳಸಿಕೊಂಡ. ಅವನು ಅಮರತ್ವದೆಡೆಗೆ ಹೆಜ್ಜೆ ಹಾಕಲು ನಾನೊಂದು ಮೆಟ್ಟಿಲು ಮಾತ್ರ”-ಎಂದು ಮಿಮಿ ಕೊರಗಿ, ತನಗೆ ಇದೆಲ್ಲದರ ಬಗ್ಗೆ ಇದ್ದ ಅಸಮ್ಮತಿ ತೋರಿಸುವ ರೀತಿ ಅವಳ ಸಾವೇ? ತಾನೇ ಅವಳನ್ನು ಕೊಂದೆನೇ?

“ನಾನ್ಸೆನ್ಸ್, ಅಗಸ್ತ್ಯ. ಮಿಮಿ ಸತ್ತಿದ್ದು ಅನೆಕ್ಸ್ಪೆಕ್ಟೆಡ್ ಡೆಲಿವರಿ ಕಾಂಪ್ಲಿಕೇಶನ್ಸ್ ನಿಂದ. ಅಸಂಬದ್ಧ ವಿಷಯಗಳನ್ನೆಲ್ಲಾ ತಲೆಗೆ ತುಂಬಿಕೊಂಡು ಸುಮ್ಮನೆ ಯಾಕೆ ಕೊರಗ್ತೀಯಾ? ಡೋನ್ಟ್ ಅಲೋ ಯುವರ್ ಗಿಲ್ಟ್ ಟು ಸ್ವಾಲೋ ಯೂ ಅಪ್. ಮಿಮಿ ವಿಷಯ ಸುಮ್ಮನೆ ಯೋಚನೆ ಮಾಡೋದು ಬಿಟ್ಬಿಡು. ಆದದ್ದು ಆಗಿಹೋಯ್ತು. ನಿನ್ನ ಮುಂದಿನ ಬದುಕನ್ನು ನೋಡು. ಥಿಂಕ್ ಆಫ್ ವಾಟ್ ಈಸ್ ರೈಟ್ ಇನ್ ಫ್ರಂಟ್ ಆಫ್ ಯೂ- ಥಿಂಕ್ ಆಫ್ ಯುವರ್ ಫ್ಯಾನ್ಟಾಸ್ಟಿಕ್ ಫೀಟ್-ಥಿಂಕ್ ಆಫ್ ಯುವರ್ ಫಸ್ಟ್ ಸ್ಟೆಪ್ ಟುವರ್ಡ್ಸ್ ಇಮ್ಮಾರ್ಟ್ಯಾಲಿಟಿ.”

ತನ್ನ ಒಳದನಿಗೆ ಓಗೊಟ್ಟು, ತನ್ನನ್ನ ತಾನೇ ಸಮಾಧಾನ ಮಾಡಿಕೊಂಡು ತನ್ನ ಹೊಸ ಬದುಕಿಗೆ ನಾಂದಿ ಹಾಕಲೋ ಎಂಬಂತೆ, ಅಗಸ್ತ್ಯ ಎದ್ದು ಬಂದು ತನ್ನ ಮಗನನ್ನು ಎತ್ತಿಕೊಂಡ, ಬಾಚಿ ತಬ್ಬಿಕೊಂಡ. ಕೆಲವೇ ದಿನಗಳಲ್ಲಿ ಭಾರತಕ್ಕೆ ಮರಳಿದ.

ವರುಣ ಹುಟ್ಟಿದಂದಿನಿಂದ ಅಗಸ್ತ್ಯನ ಪ್ರಪಂಚ ಒಂದೇ. ಅವನು, ಮಗು. ಅವನಿಗೆ ತನ್ನ ಸೃಷ್ಟಿಯಲ್ಲಿದ್ದ ಮೋಹ, ಹುಚ್ಚು, ಅವನನ್ನು ಹೊರಜಗತ್ತಿನಿಂದ, ಜನರಿಂದ, ಕೊನೆಗೆ ತನ್ನ ಸಂಶೋಧನೆಯಿಂದ ಕೂಡ ದೂರಮಾಡಿತು. ತನ್ನದೇ ಆದ ಪ್ರಪಂಚವನ್ನು ಕಲ್ಪಿಸಿ ಕೊಟ್ಟಿತು.

ಅಗಸ್ತ್ಯ ಮಗುವಾಗಿದ್ದಾಗ ಅವನನ್ನು ನೋಡಿಕೊಳ್ಳುತ್ತಿದ್ದ ಆಯಾ, ಇಷ್ಟು ವರ್ಷಗಳೂ ಮನೆಯ ಉಸ್ತುವಾರಿಯ ಜವಾಬ್ದಾರಿ ಹೊತ್ತಿದ್ದಳು. ಈಗ ಮತ್ತೆ ವರುಣನನ್ನು ನೋಡಿಕೊಳ್ಳಲು ಅವಳನ್ನೇ ನೇಮಿಸಿದ ಅಗಸ್ತ್ಯ. ಸ್ಕೂಲಿಗೆ ಸೇರಿಸುವ ವಯಸ್ಸು ಬಂದಂತೆ, ತಾನು ಓದಿದ್ದ ಡೂನ್ ಸ್ಕೂಲಿಗೆ ವರುಣನನ್ನೂ ಕಳಿಸಿದ.

ಅಸ್ಸಾಮಿನ ಟೀ ಪ್ಲಾಂಟೇಶನ್ ಗಳಲ್ಲಿ, ನಾಗರಿಕತೆಯಿಂದ ದೂರವಾದ ಗಿರಿಧಾಮಗಳಲ್ಲಿ, ಅರಣ್ಯಗಳು, ಮರಳುಗಾಡುಗಳಲ್ಲಿ, ಕಾಲ ನಿಧಾನವಾಗಿ ಸಾಗುತ್ತದೆ. 20ನೇ ಶತಮಾನದ ನಾಗರಿಕತೆ. ಫಾಸ್ಟ್ ಲೈಫ್, ಬೃಹನ್ನಗರಗಳ ಮೇಲೆ ಒತ್ತಿದಂತೆ ಈ ಸ್ಥಳಗಳ ಮೇಲೆ ಅಷ್ಟು ಬೇಗ ತನ್ನ ಅಚ್ಚು ಒತ್ತಿರಲಿಲ್ಲ. ಜನರನ್ನು ರೋಬೋಟ್ ಗಳಾಗಿ ಮಾಡಿರಲಿಲ್ಲ. 25 ವರ್ಷಗಳಲ್ಲಿಯೂ ಅಲ್ಲಿನ ಬದುಕಿನ ರೀತಿ ಹೆಚ್ಚು ಬದಲಾಯಿಸಿಯೇ ಇರಲಿಲ್ಲ. ಆದ್ದರಿಂದ ಹೆಚ್ಚು ಕಡಿಮೆ ತಂದೆ ಬೆಳೆದ ಪರಿಸರದಲ್ಲಿ ಬೆಳೆದ ವರುಣನ ವ್ಯಕ್ತಿತ್ವ, ಅಗಸ್ತ್ಯನ ವ್ಯಕ್ತಿತ್ವಕ್ಕಿಂತ ಹೆಚ್ಚು ಬೇರೆಯಾಗಲಿಲ್ಲ.

ವರುಣನ ಮೂಲಕ ಅಗಸ್ತ್ಯ ಮತ್ತೆ ತನ್ನ ಬಾಲ್ಯಕ್ಕೆ ಮರಳಿದ. ಅವನೊಡನೆ ಮತ್ತೆ ಬೆಳೆಯತೊಡಗಿದ. ವರುಣ ಮಿಂಚುಹುಳುಗಳನ್ನು ಹಿಡಿಯಲು ಅವುಗಳ ಹಿಂದೆ ಹುಚ್ಚು ಮೋಹದಿಂದ ಓಡಿದಾಗ, ಮಧ್ಯಾಹ್ನದ ಹೊತ್ತು ಒಬ್ಬನೇ ಮನೆಯ ಹಿಂದೆ ಮರದ ಕೆಳಗಿದ್ದ ಕಲ್ಲುಬೆಂಚಿನ ಮೇಲೆ ಕುಳಿತು ಹಗಲುಗನಸು ಕಂಡಾಗ, 10 ವರ್ಷದವನಾಗಿದ್ದಾಗಲೇ ತನ್ನನ್ನು ಚೆಸ್ ನಲ್ಲಿ ಸೋಲಿಸಿದಾಗ, “ಜಂಗಲ್ ಬುಕ್” ಪ್ರತಿದಿನವೂ ಓದಿದಾಗ ವಿಜ್ಞಾನದಲ್ಲಿ ವಯಸ್ಸಿಗೆ ಮೀರಿದ ಆಸಕ್ತಿ ತೋರಿಸಿದಾಗ, ಗಂಟೆಗಟ್ಟಲೆ ಈಜು ಕೊಳದಲ್ಲಿ ಮೈಮರೆತಾಗ, ಕಪ್ ಸಾಸರ್ ಹಿಡಿದಾಗ, ಸೋಫಾದ ಮೇಲೆ ಕುಸಿದಾಗ, ನಡೆದಾಗ, ನಿಂತಾಗ ನಕ್ಕಾಗ-ತನ್ನಂತೆಯೇ, ತಾನೇ ಆಗಿ ಬೆಳೆಯತೊಡಗಿದ ಮಗನನ್ನು ನೋಡಿ ಅವನಿಗೆ ವರ್ಣನೆಗೆ ಮೀರಿದ ಆನಂದ, ವಿಚಿತ್ರ ತೃಪ್ತಿ.

ಅವನು ಸ್ಕೂಲಿಗೆ ಸೇರಿದ ಮೇಲೆ, ಪ್ರತಿ ರಜಾದಲ್ಲೂ, ಅವನು ಊರಿಗೆ ಬರುವುದನ್ನೇ ಕಾತರದಿಂದ ಕಾಯುತ್ತಿದ್ದ ಅಗಸ್ತ್ಯ. ಅವನು ತನ್ನೊಡನೆ ಇದ್ದಷ್ಟು ದಿನಗಳೂ, ಪ್ರತಿಯೊಂದು ನಿಮಿಷವನ್ನೂ ಅವನೊಡನೆ ಕಳೆಯುತ್ತಿದ್ದ. ಅವನು ಊರಲ್ಲಿಲ್ಲದಾಗ ಅಗಸ್ತ್ಯನ ಪ್ರಪಂಚವೆಂದರೆ ಪುಸ್ತಕಗಳು, ಪಕ್ಷಿಗಳು, ಈಜುಗೊಳ, ವಯೋಲಿನ್.

ಹಿಂದಿನ ದಿನವೇ ರಜಕ್ಕೆಂದು ಊರಿಗೆ ಬಂದಿದ್ದ ವರುಣ, ಅಂದು ಸಂಜೆಯೂ ಮ್ಯಾನೇಜರ್ ಮಗ ನಂದುವಿನೊಡನೆ ಮಿಂಚುಹುಳು ಹಿಡಿಯುತ್ತಾ ಆಟವಾಡುತ್ತಿದ್ದ. ಕಿಲಕಿಲನೆ ನಗುತ್ತಾ ಅಡ್ಡ ಬಂದ ರೆಂಬೆಗಳನ್ನು ಸರಿಸುತ್ತಾ, ಟೀ ಗಿಡಗಳ ಮಧ್ಯೆ ಓಡುತ್ತಿದ್ದ ಅವರನ್ನು ನೋಡುತ್ತಾ ಮೈ ಮರೆತು ಕಲ್ಲುಬೆಂಚಿನ ಮೇಲೆ ಕುಳಿತಿದ್ದ ಅಗಸ್ತ್ಯ ಯಾವುದರ ಪರಿವೆಯೂ ಇಲ್ಲದೆ, ಮಿಂಚುಹುಳುವೊಂದನ್ನು ಅಟ್ಟಿಸಿಕೊಂಡು ಅದರ ಹಿಂದೆ ಓಡುತ್ತಿದ್ದವರು, ಅವನು ನೋಡುತ್ತಿದ್ದಂತೆಯೇ ದೂರ ದೂರ ಹೋಗಿದ್ದರು. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಕೊಳದಂಚಿನವರೆಗೂ. ಆ ಕ್ಷಣದಲ್ಲಿ ವರ್ಷಗಳ ಹಿಂದಿನ ನೆನಪೊಂದು ಧುತ್ತೆಂದು ಅವನ ಮನಸ್ಸಿಗೆ ರಾಚಿತ್ತು, ಅವನನ್ನು ಮಂಜುಗಡ್ಡೆಯಾಗಿಸಿತ್ತು…

…ಅಗಸ್ತ್ಯ, ರಾಮ ನಗುನಗುತ್ತಾ, ತಮಾಷೆ ಮಾಡುತ್ತಾ ಮಿಂಚು ಹುಳುಗಳ ಹಿಂದೆ ಓಡುತ್ತಿದ್ದಾರೆ, ಬೊಗಸೆಯಲ್ಲಿ ಹಿಡಿದು ಪುಟ್ಟ ಡಬ್ಬಿಯೊಂದರಲ್ಲಿ ತುಂಬುತ್ತಿದ್ದಾರೆ. ರಾತ್ರಿಯಾಗುತ್ತಿದೆ. ಕತ್ತಲು ಹರಡುತ್ತಿದೆ. ಆ ಮಿಂಚುಹುಳುಗಳನ್ನು ಹಿಡಿದು, ತಾನೇ ಮಾಡಿಕೊಂಡಿದ್ದ ಲ್ಯಾಬೋರೇಟರಿಯಲ್ಲಿದ್ದ ಗಾಜಿನ ಜಾಡಿಯಲ್ಲಿ ತುಂಬಿಡುವ ಹುಚ್ಚು ಅಗಸ್ತ್ಯನಿಗೆ. ತನ್ನ ಮನೆಯ ಮೂಲೆಯಲ್ಲಿ ಬೆಂಕಿಪೊಟ್ಟಣ ಒಂದರಲ್ಲಿ ತುಂಬಿಟ್ಟುಕೊಳ್ಳುವ ಆಸೆ ರಾಮನಿಗೆ. ಯಾವ ಪರಿವೆಯೂ ಇಲ್ಲದೆ ಮಿಂಚುಹುಳದ ಹಿಂದೆ ಓಡುತ್ತಾ ಅವರು ಕೊಳದಂಚು ತಲುಪುತ್ತಾರೆ. ಒಂದು ಹುಳು ಇವರ ತಲೆಯ ಮೇಲೆಯೇ ಹಾರುತ್ತಿದೆ-ಕೆಳಗೆ ಮೇಲೆ ಜೋರಾಲಿಯಾಡಿ, ಇವರ ಕೈಗೆ ಸಿಗದೆ, ಇವರೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿದೆ. ಅದನ್ನು ಹಿಡಿಯಲು ಇಬ್ಬರೂ ಪಣತೊಟ್ಟಿದ್ದಾರೆ. ಅದರ ಹಿಂದೆ ಓಡುತ್ತಿದ್ದಾರೆ. ಆ ಒಂದು ಹುಳಕ್ಕೋಸ್ಕರ ಅವರಿಗೇ ಅರಿವಿಲ್ಲದಂತೆ, ನಿಧಾನವಾಗಿ ಅವರಿಬ್ಬರ ಮನಸ್ಸಿನಲ್ಲಿ ಸ್ಪರ್ಧೆ ಉಂಟಾಗಿದೆ-ಅಗಸ್ತ್ಯನ ಮನಸ್ಸು ಗಟ್ಟಿಯಾಗುತ್ತಿದೆ, ಏನಾದರೂ ಮಾಡಿ ತಾನೇ ಅದನ್ನು ಹಿಡಿಯಬೇಕು, ರಾಮನಿಗೆ ಬಿಡಬಾರದು. ಆದರೆ ಈಗ ಹುಳು ಕೊಳದ ನೀರಿನ ಮೇಲೆ ಹಾರತೊಡಗಿದೆ-ಬೇಕೆಂದೇ ಇವರನ್ನು ಆಟವಾಡಿಸಲೋ ಎಂಬಂತೆ ಅಲ್ಲೇ ಸುತ್ತು ಹೊಡೆಯುತ್ತಿದೆ. ಹಿಡಿಯಬೇಕಾದರೆ ಕೊಚ್ಚೆ ನೀರಿನಲ್ಲಿ ಕಾಲಿಡಬೇಕು. ನೀರೊಳಗೆ ನಡೆಯಬೇಕು, ಮೆಲ್ಲನೆ ಒಂದೆರಡು ಹೆಜ್ಜೆ ನೀರಿನಲ್ಲಿ ನಡೆದಿದ್ದಾರೆ-ಕಣ್ಣೆಲ್ಲಾ ಆ ಹುಳದ ಮೇಲೇ. ಈಗ ಅದು ಅವರ ತಲೆಯ ಮೇಲೆಯೇ ಹಾರುತ್ತಿದೆ. ಸುತ್ತುತ್ತಿದೆ. ಒಂದು ಕ್ಷಣ ಇಬ್ಬರೂ ಅದರತ್ತ ದಿಟ್ಟಿಸುತ್ತಾರೆ. ಫಕ್ಕನೆ ಇಬ್ಬರೂ ಅದಕ್ಕಾಗಿ ಕೈ ಬೀಸುತ್ತಾರೆ, ಥಟ್ಟನೆ ಗಾಳಿಯಲ್ಲಿ ಅವರಿಬ್ಬರ ಕೈಗಳೂ ಸೇರುತ್ತವೆ-ಬೆಸೆದುಕೊಳ್ಳುತ್ತವೆ. ಇದರ ಮಧ್ಯೆ ಮಿಂಚು ಹುಳು ಸಿಕ್ಕಿಹಾಕಿಕೊಂಡಿದೆ-ಅಗಸ್ತ್ಯ ಕೂಗುತ್ತಾನೆ.

“ಇದು ನಾನು ಹಿಡಿದದ್ದು… ಬಿಟ್ಬಿಡು…”

“ಇಲ್ಲ ನಾನು ಮೊದಲು ಹಿಡಿದದ್ದು…”

“ರಾಮ… ಬಿಡು…”

ರಾಮ ಕೈ ಬಿಡುವುದಿಲ್ಲ. ಅಗಸ್ತ್ಯನಿಗೆ ಸೋಲಿನ ಪರಿಚಯವಿಲ್ಲ.

“ರಾಮ… ನಾನು ಹೇಳ್ತಿದೀನಿ, ಮಿಂಚುಹುಳು ನಂದು…”

ರಾಮ ಜಗ್ಗುವುದಿಲ್ಲ. ಆ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಅಗಸ್ತ್ಯನಿಗೆ ತನ್ನ, ರಾಮನ ನಡುವಿನ ಅಂತರ ಗೋಚರವಾಗಿದೆ. ತಮ್ಮ ಎಸ್ಟೇಟಿನಲ್ಲಿ ದುಡಿಯುವವರ ಮಗ, ತನ್ನೊಡನೆ ಸ್ಪರ್ಧಿಸುವುದು ಸರಿಯೆನಿಸುವುದಿಲ್ಲ. ಆದರೆ, ರಾಮನ ಬಾಲ್ಯದ ಉತ್ಸಾಹ ತಮ್ಮಿಬ್ಬರ ನಡುವಿನ ಅಂತರವನ್ನು ಅವನ ಮಟ್ಟಿಗೆ ಮರೆಮಾಡಿದೆ. ಅದನ್ನು ಬಿಟ್ಟುಕೊಡಲು ಅವನು ತಯಾರಿಲ್ಲ.

“ರಾಮ… ಅದು ನಂದು… ಬಿಟ್ಬಿಡು…”

“ಇಲ್ಲ… ಅದು ನನ್ನ ಕೈಲಿದೆ…”

“ಬಿಡ್ತೀಯೋ ಇಲ್ವೋ…” ಅವನು ಗರ್ಜಿಸುತ್ತಾನೆ.

ರಾಮ ಅಲ್ಲಾಡುವುದಿಲ್ಲ. ಅವನ ಹಿಡಿತ ಜೋರಾಗುತ್ತಿದೆ. ಅಗಸ್ತ್ಯ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ, ಎಡಗೈಯಿಂದ ಅವನನ್ನು ತಳ್ಳುತ್ತಾನೆ. ರಾಮ ತತ್ತರಿಸಿ ಬೀಳುತ್ತಾನೆ, ಕೊಚ್ಚೆ ನೀರಿನಲ್ಲಿ ಮಗುಚಿಕೊಳ್ಳುತ್ತಾನೆ. ತನ್ನ ಬಲಗೈ ಮುಷ್ಠಿ ನಿಧಾನವಾಗಿ ಬಿಡಿಸಿದಾಗ, ಅದರಲ್ಲಿ ಸತ್ತ ಮಿಂಚುಹುಳು ಮಲಗಿದೆ. ಆ ಕ್ಷಣದಲ್ಲಿ ರಾಮನಿಗೆ ಪಾಠ ಕಲಿಸಿದ ಮಿಂಚುಹುಳು ತನ್ನದಾದ ತೃಪ್ತಿ, ಅವನನ್ನು ಖುಷಿಯಾಗಿಸುತ್ತದೆ. ಆದರೆ ಬೋರಲಾಗಿ ಬಿದ್ದಿದ್ದ, ರಾಮನ ಬಾಯಿಯಿಂದ ಏನೂ ಸ್ವರ ಹೊರಡುತ್ತಿಲ್ಲ. ಕೇವಲ ಕಾಲುಗಳು ಎರಡು ನಿಮಿಷ ಪಟಪಟನೆ ಬಡಿದುಕೊಳ್ಳುತ್ತಿವೆ. “ಸರಿಯಾಗಿ ಆಯ್ತು” ಎಂದು ಅಗಸ್ತ್ಯ ಗೆಲುವಿನ ನಗೆಬೀರಿ ರಾಮನತ್ತ ನೋಡುತ್ತಾನೆ. ಆದರೆ, ರಾಮನ ಕಾಲ್ಬಡಿತ ನಿಧಾನವಾಗಿ ಕೆಲವೇ ಕ್ಷಣಗಳಲ್ಲಿ ಸ್ತಬ್ಧವಾಗುತ್ತದೆ… ಆಗ ಅಗಸ್ತ್ಯ ಕಲ್ಲು ಗೊಂಬೆಯಾಗುತ್ತಾನೆ. ಹೆದರಿಕೆಯಿಂದ ನಡುಕ ಹುಟ್ಟಿ, ಮೈ ಬೆವರಿನಿಂದ ತೊಯ್ದುಹೋಗತೊಡಗುತ್ತದೆ.

ಏದುತ್ತಾ ಮನೆಗೆ ಬಂದು ಅಗಸ್ತ್ಯ ತಂದೆಗೆ ಹೇಳುತ್ತಾನೆ “ನಾವಿಬ್ಬರೂ ಕೊಳದ ಹತ್ತಿರ ಆಟಕ್ಕೆ ಹೋಗಿದ್ವಿ, ರಾಮ ಕಾಲು ಜಾರಿ ಬಿದ್ದು ಬಿಟ್ಟ. ನಾನೆಷ್ಟು ಪ್ರಯತ್ನಪಟ್ರೂ ತೆಗೆಯೋಕೆ ಆಗ್ಲಿಲ್ಲ..”

ತಕ್ಷಣ ಆಳುಗಳು ಲಾಂದ್ರ ಹಿಡಿದು ಕೊಳದತ್ತ ಓಡಿಹೋಗುತ್ತಾರೆ. ಸ್ವಲ್ಪ ಹೊತ್ತಿನನಂತರ, ಮಾತಿಲ್ಲದೆ ರಾಮನ ದೇಹವನ್ನು ಹೊತ್ತು ತರುತ್ತಾರೆ. ರಾಮನ ತಾಯಿ ಎದೆ ಹೊಡೆದು ಕೊಳ್ಳುತ್ತಾಳೆ…

ಏರು ದನಿಯಲ್ಲಿ ಅಳತೊಡಗುತ್ತಾಳೆ.

“ವರುಣಾ… ವರುಣಾ…” ಕಿರುಚುತ್ತಾ ಓಡಿಬಂದ ತಂದೆಯನ್ನು ನೋಡಿ, ಕೊಳದಂಚಿನಲ್ಲಿ ನಿಂತಿದ್ದ, ವರುಣ-ನಂದೂ ಬೆಚ್ಚಿಬಿದ್ದರು. ಅವರ ತಲೆಯ ಮೇಲೆ ಮಿಂಚು ಹುಳುವೊಂದು ಹಾರಾಡುತ್ತಿದೆ…

“ಆಟ ಸಾಕು, ಕತ್ತಲಾಯಿತು… ಬೇಗ ಬನ್ನಿ… ಮನೆಗೆ ಹೋಗೋಣ…” ತಂದೆಯಿಂದ ಅಪರೂಪಕ್ಕೆ ಬಂದ ಗದರಿಕೆ ಕೇಳಿ ವರುಣ ತತ್ತರಿಸಿದ. ಆದರೆ, ಹಿಂತಿರುಗಿ ಬರುವ ಮುಂಚೆ, ಒಂದು ಕ್ಷಣ ಅಚ್ಚರಿಯಿಂದ ತಂದೆಯ ಕಣ್ಣಿನಾಳದಲ್ಲಿ ದಿಟ್ಟಿಸಿದ, ಏನೋ ಹುಡುಕುವವನಂತೆ.

ಮನೆಗೆ ಬಂದು, ಅಗಸ್ತ್ಯ ಎಷ್ಟೋ ಹೊತ್ತು ಶಾಕ್ ಹೊಡೆದವನಂತೆ ಕಣ್ಣುಮುಚ್ಚಿ ಕುಳಿತಿದ್ದ. ಅಂದು ರಾತ್ರಿಯೆಲ್ಲಾ ಅವನಿಗೆ ನಿದ್ದೆ ಇಲ್ಲ. ತನ್ನ ಎಲ್ಲಾ ಜೀನ್ ಗಳನ್ನೂ ಅನುವಂಶಿಕವಾಗಿ ಪಡೆದಿರುವ ವರುಣ, ತನ್ನ ನೆನಪುಗಳನ್ನೂ ಅನುವಂಶಿಕವಾಗಿ ಪಡೆದಿರುತ್ತಾನೆಯೇ? ತಾನು ಕೊಲೆಗಾರನೆನ್ನುವ ಸತ್ಯ, ಅವನ ಮನದಾಳದಲ್ಲಿ ಅಡಗಿದೆಯೇ? ಕೆಲವು ನೆನಪುಗಳು ಅದನ್ನು ಹೊತ್ತವರೊಂದಿಗೇ ಸತ್ತರೆ ಒಳ್ಳೆಯದಲ್ಲವೇ? ಪೀಳಿಗೆಯಿಂದ ಪೀಳಿಗೆಗೆ, ಬೇಡದ ನೆನಪುಗಳನ್ನು, ದೌರ್ಬಲ್ಯಗಳನ್ನು ಅಳಿಸದೆಯೇ ಮುಂದುವರಿಸುತ್ತಿ ದ್ದೇನೆಯೇ ತಾನು? ಇದುವರೆಗೂ ತಮ್ಮಿಬ್ಬರ ಏಕತೆ ಅವನಿಗೆ ಕೊಡುತ್ತಿದ್ದ ಆನಂದ, ತೃಪ್ತಿ ಅದೇಕೋ ಇಂದು ವಿಕರಾಳರೂಪ ತಾಳಿದಂತೆ ಭಾಸವಾಗುತ್ತಿದೆ.

17ನೇ ವಯಸ್ಸಿನಲ್ಲಿ, ಮುಂದಿನ ಓದಿಗಾಗಿ ಮಗನನ್ನು ಅಮೆರಿಕಾಗೆ ಕಳಿಸಿದ ಅಗಸ್ತ್ಯ ಪೂರಾ ಏಕಾಕಿಯಾದ. ದಿನವೆಲ್ಲಾ ತನ್ನ ಪುಸ್ತಕಗಳ, ಪಕ್ಷಿಗಳ ಪ್ರಪಂಚದಲ್ಲಿ ಮುಳುಗಿರುತ್ತಿದ್ದ. ಅವನಿಗೆ, ಅಪರೂಪವಾಗಿ ಅವನು ಹೋಗಿದ್ದ ನ್ಯೂಇಯರ್ ಪಾರ್ಟಿ ಯೊಂದರಲ್ಲಿ, ಹತ್ತಿರದ ಎಸ್ಟೇಟಿನಿಂದ ಬಂದಿದ್ದ ಘನಶ್ಯಾಮನ ಮಗಳು ಶರ್ಮಿಷ್ಠಾಳ ಪರಿಚಯವಾಗಿತ್ತು. 19 ವರ್ಷದ ಮಿಂಚಿನಂತಹ ಹುಡುಗಿ ಶರ್ಮಿಷ್ಠಾ ಆಗತಾನೇ ಗ್ರಾಜುಯೇಶನ್ ಮುಗಿಸಿ ಊರಿಗೆ ಬಂದಿದ್ದಳು. ದಿನೇ ದಿನೇ ಅವರಿಬ್ಬರನ್ನೂ ಹತ್ತಿರ ತಂದಿತ್ತು-ಇಬ್ಬರ ಆಕರ್ಷಕ ವ್ಯಕ್ತಿತ್ವ, ಈಜುವ ಹುಚ್ಚು, ಪಕ್ಷಿಗಳ ಮೋಹ, ಪುಸ್ತಕ ಪ್ರೇಮ ಮತ್ತು ಸಾಧಾರಣತೆ ಹಾಗೂ ವ್ಯವಸ್ಥೆಯ ಬಗ್ಗೆ ಅವರಿಗಿದ್ದ ಜಿಗುಪ್ಸೆ, ಮಿಮಿಯ ನಂತರ ಹೆಣ್ಣಿನ ಸಂಪರ್ಕವನ್ನೇ ಹೊಂದಿಲ್ಲದ ಅವನ ಜೀನವದಲ್ಲಿ ಶರ್ಮಿಷ್ಠಾ ಬೆಳಕಾಗಿ, ತಂಗಾಳಿಯಾಗಿ, ಪರಿಮಳವಾಗಿ ಬಂದಿದ್ದಳು. ಅವಳೊಡನೆ ಸಂಬಂಧ ಆಳವಾದಂತೆ, ಪ್ರೀತಿ ಬೇರೂರಿದಂತೆ, ಅಗಸ್ತ್ಯ ಹೊಸ ಮನುಷ್ಯನಾಗಿದ್ದ.

ಅಸ್ಸಾಮಿನ ಟೀ ಪ್ಲಾಂಟೇಶನ್ ಗಳಲ್ಲಿ, ನಾಗರಿಕತೆಯಿಂದ ದೂರವಾದ ಗಿರಿಧಾಮಗಳಲ್ಲಿ, ಅರಣ್ಯಗಳು, ಮರಳುಗಾಡುಗಳಲ್ಲಿ, ಕಾಲ ನಿಧಾನವಾಗಿ ಸಾಗುತ್ತದೆ. 20ನೇ ಶತಮಾನದ ನಾಗರಿಕತೆ. ಫಾಸ್ಟ್ ಲೈಫ್, ಬೃಹನ್ನಗರಗಳ ಮೇಲೆ ಒತ್ತಿದಂತೆ ಈ ಸ್ಥಳಗಳ ಮೇಲೆ ಅಷ್ಟು ಬೇಗ ತನ್ನ ಅಚ್ಚು ಒತ್ತಿರಲಿಲ್ಲ.

ವಿಚಿತ್ರ ಸ್ವಭಾವದ, ಯಾರೊಡನೆಯೂ ಬೆರೆಯದ ಬುದ್ಧಿಜೀವಿಯೆಂದು ಹೆಸರಾಗಿದ್ದ, ಇನ್ನೂ ತಾರುಣ್ಯದ ಮೆರುಗು ಮಾಸದಿದ್ದರೂ 20 ವರ್ಷದ ಹುಡುಗನ ತಂದೆಯಾದವನೊಡನೆ ಬೆಸೆಯತೊಡಗಿದ್ದ ತಮ್ಮ ಮಗಳ ಬದುಕನ್ನು, ಅವಳ ತಂದೆ ತಾಯಿಗಳು ಮೆಚ್ಚದಿದ್ದುದು ಆಶ್ಚರ್ಯವೇನಿಲ್ಲ. ಶರ್ಮಿಷ್ಠಾಳನ್ನು ಅಗಸ್ತ್ಯನಿಂದ ದೂರ ಮಾಡಲು, ಅಂತಹ ಸಂಬಂಧದಿಂದ ಉಂಟಾಗಬಹುದಾದ ಅಸಂತೋಷ, ಸಮಸ್ಯೆಗಳನ್ನು ವಿವರಿಸಿ ಹೇಳಿದರು, ಹೆದರಿಸಿದರು. ಏನಾದರೂ ಮಾಡಿ ಅವಳ ಮನವೊಲಿಸಲು ಪ್ರಯತ್ನಿಸಿದರು. ಯಾವುದಕ್ಕೂ ಅವಳ ಮನಸ್ಸು ಅಲ್ಲಾಡದಾಗ, ಅವರ ಸಂಬಂಧದ ಗಟ್ಟಿತನದ ಅರಿವು ಅವರಿಗಾಗಿತ್ತು. ಆಗ ಎಂದೂ ತನಗೆ ಬೇಕಾದದ್ದನ್ನು ಮಾಡಿಯೇ ತೀರುವ ಶರ್ಮಿಷ್ಠಾಳ ಮನಸ್ಸು ಬದಲಾಯಿಸುವ ಪ್ರಯತ್ನ ಬಿಟ್ಟುಕೊಟ್ಟರು. ಎಂದಿನಂತೆಯೇ ಶರ್ಮಿಷ್ಠಾ ಗೆದ್ದಿದ್ದಳು.

ಶರ್ಮಿಷ್ಠಾ-ಅಗಸ್ತ್ಯ ಒಲವು ಮಾತ್ರ ಸೃಷ್ಟಿಸಬಹುದಾದ ಸುಂದರ ಪ್ರಪಂಚದಲ್ಲಿ ಮುಳುಗಿಹೋದರು. ಪ್ರತಿದಿನ ಸಂಜೆ, ಸೂರ್ಯ ಮುಳುಗುವ ಹೊತ್ತಿಗೆ ಕೊಳದಂಚಿನಲ್ಲಿ, ಕಣ್ಣೋಟ ಸಾಗುವವರೆಗೂ ಹರಡಿದ್ದ ಟೀ ಗಿಡಗಳ ಹಚ್ಚ ಹಸುರಿನ ನಡುವೆ, ಕೈಹಿಡಿದು ಗಂಟೆಗಟ್ಟಲೆ ತಿರುಗಾಡುತ್ತಿದ್ದಾಗ, ತನ್ನೆಲ್ಲಾ ಭಾವನೆಗಳನ್ನೂ, ಕನಸುಗಳನ್ನೂ ಅವಳೊಡನೆ ಹಂಚಿಕೊಂಡಾಗ, ಅಗಸ್ತ್ಯನಿಗೆ ಇದುವರೆಗೂ ಏನೋ ಒಂದು ಕೊರತೆಯಿದ್ದ ಬದುಕು ಈಗ ತುಂಬಿಕೊಂಡ ಭಾವನೆ, ಮತ್ತೆ ಪರಿಪೂರ್ಣತೆ ಪಡೆದ ಅನುಭವ.

ಅಂದು ಬೆಳಗ್ಗೆ ಒಂದು ತಿಂಗಳ ರಜಕ್ಕಾಗಿ ವರುಣ ಊರಿಗೆ ಬರುವವನಿದ್ದ. ಅಗಸ್ತ್ಯನಿಗೆ ಅವನನ್ನು ಯಾವಾಗ, ನೋಡುವೆನೋ ಎಂದು ಕಾತರ. ಅಗಸ್ತ್ಯನಿಂದ ಮಗನ ವಿಷಯವನ್ನೆಲ್ಲಾ ಕೇಳಿದ್ದ ಶರ್ಮಿಷ್ಠಾಗೆ ತಡೆಯಲಾರದಷ್ಟು ಕುತೂಹಲ.

ಏರ್ ಪೋರ್ಟಿಗೆ ಹೊರಡುವ ಮೊದಲು ಟೀ ಕುಡಿಯುತ್ತಾ ಕುಳಿತಿದ್ದಾಗ ಅಗಸ್ತ್ಯ ಅವಳ ಕಣ್ಣಲ್ಲಿ ಕಣ್ಣಿಟ್ಟು, “ಶಮಿ, ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಗೊತ್ತಾ? ನೀನು ನನ್ನ ಲೈಫ್ ನಲ್ಲಿ ಬರುವ ಮುಂಚೆ ಎಂಥಾ ಕೊರತೆ ಇತ್ತೂಂತ ನಂಗೆ ಈಗ ಅರ್ಥ ಆಗ್ತಾ ಇದೆ! ಯೂ ಹ್ಯಾವ್ ಗಿವನ್ ಏ ನ್ಯೂ ಡೈಮೆನ್ಷನ್ ಟು ಮೈ ಲೈಫ್” ಎಂದು ಹೇಳಿ ಮುತ್ತಿಟ್ಟಿದ್ದ. ಹಾಗೆಯೇ ಕೆಂಪಾಗಿದ್ದ, “ನಾನೊಬ್ಬ ಲವ್-ಸ್ಟ್ರಕ್ ಟೀನೇಜರ್ ನ ಹಾಗೆ ಮಾತಾಡ್ತಾ ಇದೀನಿ” ಅಂತ.
ವರುಣನನ್ನು ಕರೆದುಕೊಂಡು ಬರಲು ಏರ್ ಪೋರ್ಟಿಗೆ ಇಬ್ಬರೂ ಹೊರಟರು. ಪ್ಲೇನ್ ನೆಲ ಮುಟ್ಟುತ್ತಿದ್ದಂತೆಯೇ ವರುಣ ಇವರಿಬ್ಬರತ್ತ ನಡೆದು ಬಂದ. ಅಗಸ್ತ್ಯ ಅವರಿಬ್ಬರನ್ನೂ ಪರಿಚಯ ಮಾಡಿಸಿದ.

“ವರುಣ”

“ಶರ್ಮಿಷ್ಠಾ… ನಮಗೆ ಶಮಿ.”

ವರುಣನ ಕಣ್ಣುಗಳು ಹೊಳಪೇರಿದುವು. ನಗುತ್ತಾ ಹೇಳಿದ “ನಿಮ್ಮ ವಿಷಯ ಎಲ್ಲಾ ಕಾಗದದಲ್ಲಿ ಓದೀ, ಓದೀ ನಿಮ್ಮನ್ನ ಮೀಟ್ ಮಾಡೋಕೆ ಕಾಯ್ತಾ ಇದ್ದೆ…”
ಶಮಿ ಬೆಚ್ಚಿದಳು. ಇದುವರೆಗೂ, ಅಗಸ್ತ್ಯನನ್ನೇ ಅಚ್ಚು ಹೊಡೆದು, ಕೇವಲ ಕೆಲವು ವರ್ಷಗಳು ಚಿಕ್ಕವನನ್ನಾಗಿ ಮಾಡಿದಂತಿದ್ದ ಅವನ ರೂಪವನ್ನು ನೋಡಿ ದಿಗ್ಭ್ರಮೆಗೊಂಡಿದ್ದ ಶಮಿ, ಈಗ ಅವನ ಧ್ವನಿ ಕೇಳಿ, ಅಗಸ್ತ್ಯನೇ ಮಾತಾಡುತ್ತಿದ್ದಾನೆನ್ನುವಂತೆ ಅವನತ್ತ ನೋಡಿದಳು. ಇವಳ ಗಲಿಬಿಲಿ ನೋಡಿ ಅವರಿಬ್ಬರೂ ಬಿದ್ದು ಬಿದ್ದು ನಗತೊಡಗಿದರು. ಶಮಿ ನಗಲು ಪ್ರಯತ್ನ ಮಾಡಿದಳು. ಆದರೆ ಅವರ ಹೋಲಿಕೆಯಲ್ಲಿ ಅದೇಕೋ ಅವಳಿಗೆ ತಮಾಷೆ ಕಾಣಲಿಲ್ಲ. ಬದಲು ಮನದಾಳದಲ್ಲಿ ಅರ್ಥವಾಗದ ದುಗುಡದ ನೆರಳು ಹಾದುಹೋಯಿತು.

ವರುಣ ಊರಿಗೆ ಬಂದಮೇಲೆ ಮನೆಯ ವಾತಾವರಣಕ್ಕೆ ಕಳೆಯೇರಿತ್ತು. ದಿನವೆಲ್ಲಾ ವರುಣ, ಅಗಸ್ತ್ಯ, ಶಮಿ ಒಟ್ಟಿಗೆ ಕಳೆಯುತ್ತಿದ್ದರು. ವರುಣ, ಅಗಸ್ತ್ಯ ಮೈಮರೆತು ಜಿನೆಟಿಕ್ ಎಂಜಿನಿಯರಿಂಗ್ ನಲ್ಲಿ ಆಗುತ್ತಿರುವ ಬ್ರೇಕ್-ಥ್ರೂಗಳ ಬಗ್ಗೆ ಚರ್ಚಿಸುತ್ತಿದ್ದರು. ಅಮೆರಿಕಾ, ಅಲ್ಲಿನ ಯೂನಿವರ್ಸಿಟಿಗಳು. ಹುಡುಗಿಯರು, ಕಂಪ್ಯೂಟರ್, ಕಲ್ಚರ್, ನ್ಯೂಟ್ರಾನ್ ಬಾಂಬ್, ನೈಟ್ ಕ್ಲಬ್ ಗಳು, ಪೀಟ್ಸಾ, ಡ್ರಗ್ ಅಡಿಕ್ಷನ್, ರೋನಾಲ್ಡ್ ರೀಗನ್ ಜೀವನದ ರೀತಿ-ಎಲ್ಲದರ ಬಗ್ಗೆ ವರುಣ ರಸವತ್ತಾಗಿ ಗಂಟೆಗಟ್ಟಲೆ ಮಾತಾಡುತ್ತಿದ್ದ. ಮೂರು ಜನವೂ ಈಜುವುದಕ್ಕಾಗಿ, ಬರ್ಡ್ ವಾಚಿಂಗಿಗೆ, ಪಿಕ್ನಿಕ್ಗಳಿಗೆ ಒಟ್ಟಿಗೆ ಹೋಗು ತ್ತಿದ್ದರು. ರಾತ್ರಿ ಊಟವಾದ ಮೇಲೆ ವರುಣ ವಯೋಲಿನ್ ನುಡಿಸಿದಾಗ ಮೈಮರೆತು ಕೇಳುತ್ತಿದ್ದರು. ಆದರೆ ಯಾವುದಾದರೂ ಗಹನವಾದ ವಿಷಯ ಮೂರು ಜನರಲ್ಲೂ ಚರ್ಚೆಗೆ ತಿರುಗಿದಾಗ ವರುಣ-ಅಗಸ್ತ್ಯರ ಅಭಿಪ್ರಾಯಗಳು ಅಚ್ಚು ಹೊಡೆದಂತೆ ಒಂದೇ ಆಗಿರುತ್ತಿದ್ದುವು. ತಂದೆ-ಮಗ ಒಬ್ಬರನ್ನೊಬ್ಬರು ಮೆಚ್ಚಿಸಲು ಹಾಗೆ ಮಾಡುವವರಲ್ಲ. ಅವರಿಬ್ಬರೂ ತುಂಬಾ ದೃಢ ವ್ಯಕ್ತಿತ್ವ ಉಳ್ಳವರೆನ್ನುವುದು ಶಮಿಗೆ ಚೆನ್ನಾಗಿ ಗೊತ್ತು. ಹೆಚ್ಚು ಸಲ ಅಂತಹ ಚರ್ಚೆಗಳಲ್ಲಿ ಶಮಿ ಇವರಿಗೆ ಎದುರಾಗುತ್ತಿದ್ದಳು. ಅವರಿಬ್ಬರನ್ನೂ ನೋಡು ನೋಡುತ್ತಾ, ಒಂದೇ ಶ್ರುತಿಯ ಎರಡು ತಂತಿಗಳಂತೆ ಮಿಡಿಯುವ ಅವರ ಪ್ರಜ್ಞೆಯನ್ನು ನೋಡಿ ಅಚ್ಚರಿಯಾಗುತ್ತಿತ್ತು. ಜೊತೆಗೆ ಏನೋ ಕಸಿವಿಸಿಯಾಗುತ್ತಿತ್ತು. ಎಲ್ಲೋ ಏನೋ ತನಗೆ ಅರ್ಥವಾಗದ, ತನ್ನ ತಿಳಿವಳಿಕೆಗೆ ಮೀರಿದ ತಂತು ಒಂದಿದೆ ಎನ್ನಿಸುತ್ತಿತ್ತು.

ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದ. ಆದರೆ ಶಮಿ-ವರುಣನ ನೋಟ ಸೇರಿದಾಗ ಅವರ ಕಣ್ಣುಗಳಲ್ಲಿ ಕಾಣುವ ತನ್ಮಯತೆ, ಹೊಳಪು ಅವನನ್ನು ಹೆದರಿಸುತ್ತಿತ್ತು. ಮನಸ್ಸಿನ ಮೂಲೆಯಲ್ಲಿ ತಲೆ ಎತ್ತತೊಡಗಿದ್ದ ತನ್ನ ಶಂಕೆ ನಿಜವಾಗಬಾರದು ಎಂದು ಕಂಗೆಡುವಂತೆ ಮಾಡುತ್ತಿತ್ತು.

ವರುಣ ಊರಿಗೆ ಹೊರಡಲು ಒಂದು ವಾರ ಉಳಿದಿತ್ತು. ಅಂದು ಸಂಜೆ ಶಮಿ-ವರುಣ ತಿರುಗಾಡಲು ಎಸ್ಟೇಟಿನತ್ತ ಹೊರಟಿದ್ದರು. ಅವರು ಕರೆದರೂ, ಏನೋ ಓದುತ್ತಿದ್ದ ಅಗಸ್ತ್ಯ ಸ್ವಲ್ಪ ಹೊತ್ತಾದ ಮೇಲೆ ಬಂದು ಅವರನ್ನು ಸೇರುವುದಾಗಿ ಹೇಳಿದ್ದ. ಒಂದು ಗಂಟೆಯ ನಂತರ ಅವರಿಬ್ಬರನ್ನೂ ಹುಡುಕಿಕೊಂಡು ಹೊರಟಿದ್ದ. ದಿನಾ ಸಂಜೆ ಮೂವರೂ ಕುಳಿತುಕೊಳ್ಳುತ್ತಿದ್ದ ಕೊಳದಂಚಿನತ್ತ ಕಾಲುಹಾಕಿದ. ಆದರೆ ಅವರು ಸುತ್ತಮುತ್ತಲೂ ಎಲ್ಲೂ ಕಾಣಲಿಲ್ಲ. ಅವರಿಗಾಗಿ ಕಣ್ಣು ಹಾಯಿಸುತ್ತಾ ನಡೆಯತೊಡಗಿದ. ಸುತ್ತುವರಿದ ಹಸಿರು ಹಸಿರು, ಪಚ್ಚೆತೆನೆ, ಹಕ್ಕಿಗಳ ಕೂಗು ಇವುಗಳಲ್ಲಿ ಮೈಮರೆತು ಅವರನ್ನು ಹುಡುಕುತ್ತಾ ನಿಧಾನವಾಗಿ ಹೆಜ್ಜೆ ಹಾಕತೊಡಗಿದ. ಇದ್ದಕಿದ್ದಂತೆ ಎದುರಿಗಿದ್ದ ಬೃಹಾದಾಕಾರದ ಮರದ ಹಿಂದಿನಿಂದ ಅವರ ಧ್ವನಿ ಕೇಳಿ ಬೆಚ್ಚಿ ಬಿದ್ದ. ಅವರಿಬ್ಬರೂ ಮರದ ಹಿಂದಿದ್ದರಿಂದ ಅವನು ತುಂಬಾ ಹತ್ತಿರ ಬರುವವರೆಗೂ ಕಣ್ಣಿಗೆ ಬಿದ್ದಿರಲಿಲ್ಲ. ಒಂದು ಹೆಜ್ಜೆ ಮುಂದಿಟ್ಟವನು, ಹಾಗೇ ಕಲ್ಲಾಗಿ ನಿಂತ. ಶಮಿ, ವರುಣ ಅಪ್ಪುಗೆಯಲ್ಲಿ ಮೈಮರೆತಿದ್ದರು. ವರುಣನ ಒಲವಿನ ಮೆಲುನುಡಿ ಇವನತ್ತ ತೇಲಿಬಂದಿತು. “ಶಮಿ, ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಗೊತ್ತಾ. ಇದುವರೆಗೂ ನನ್ನ ಲೈಫ್ ನಲ್ಲಿ ಎಂಥಾ ಕೊರತೆ ಇತ್ತೂಂತ ಈಗ ಗೊತ್ತಾಗ್ತಾ ಇದೆ. ಯೂ ಹ್ಯಾವ್ ಗಿವನ್ ಎ ನ್ಯೂ ಡೈಮೆನ್ಷನ್ ಟು ಮೈ ಲೈಫ್.”

ಅಲ್ಲಾಡದೆ ಎಷ್ಟೋ ಹೊತ್ತು ಹಾಗೇ ನಿಂತಿದ್ದ ಅಗಸ್ತ್ಯ. ಆಮೇಲೆ ದಿಕ್ಕುಗಾಣದವನಂತೆ ಸರ ಸರನೆ ಮನೆಯತ್ತ ವಾಪಸ್ಸು ಹೆಜ್ಜೆ ಹಾಕತೊಡಗಿದ.
“ಶಮಿ, ಯೂ ಹಾವ್ ಗಿವನ್ ಎ ನ್ಯೂ ಡೈಮೆನ್ಷನ್ ಟು ಮೈ ಲೈಫ್…”

ಅವನ ಮನದಲ್ಲಿ ಚಂಡಮಾರುತ್ತ ಏಳತೊಡಗಿತ್ತು. ಆದರೆ ನಿಧಾನವಾಗಿ ಅರಿವು ಮೂಡತೊಡಗಿತ್ತು. ಹೌದು ಶಮಿ ವರುಣನನ್ನು ಪ್ರೀತಿಸುತ್ತಾಳೆ, ತನಗಿಂತ ಹೆಚ್ಚಾಗಿ ಅವನನ್ನು ಪ್ರೀತಿಸುತ್ತಾಳೆ, ಅವನನ್ನು ಬಯಸುತ್ತಾಳೆ. ತನ್ನಲ್ಲಿ ಅವಳು ಮಾರುಹೋದ, ಮೋಹಿಸಿದ ಎಲ್ಲಾ ಗುಣಗಳ ಜೊತೆ, ಅವಳ ವಯಸ್ಸಿನ ಸಂಗೀತಕ್ಕೆ ತಾಳ ಹಾಕುವ ಯೌವನ ಅವನಲ್ಲಿದೆ. ಅವಳು ವರುಣನನ್ನು ಪ್ರೀತಿಸುವುದು ಅವಳ ಕೈಮೀರಿದ ವಿಷಯ, ಪ್ರಕೃತಿದತ್ತವಾದ ವಿಷಯ.
ಏದುತ್ತಾ ಮನೆಗೆ ಬಂದು, ತನ್ನ ರೂಮಿನ ಬಾಗಿಲನ್ನು ಬಡಿದು ಹಾಸಿಗೆಯ ಮೇಲೆ ಧೊಪ್ಪನೆ ಕುಕ್ಕರಿಸಿದ ಅಗಸ್ತ್ಯ, ತನಗೆ ವಿಪರೀತ ತಲೆನೋವು ಎಂದೂ, ರಾತ್ರಿ ಊಟಕ್ಕಾಗಿ ಕಾಯಬಾರದೆಂದೂ ವರುಣನಿಗೆ ಹೇಳಲು ಅಡಿಗೆಯವನಿಗೆ ಹೇಳಿದ.

ಅಗಸ್ತ್ಯನಿಗೆ ಬದುಕಿನಲ್ಲಿ ಮೊದಲ ಬಾರಿ ಆಯಾಸವೆನಿಸಿತ್ತು. ತನ್ನ ಜೀವನದುದ್ದಕ್ಕೂ, ಹೆಜ್ಜೆ ಹೆಜ್ಜೆಗೂ ತನ್ನೊಡನೇ ತಾನು ಎದುರಾಗುತ್ತಾ ಸ್ಪರ್ಧಿಸುತ್ತಾ ನಡೆಯುತ್ತಿದ್ದೇನೆನಿಸಿತ್ತು. ತುಂಬಾ ದಣಿವೆನಿಸಿತ್ತು. ತಾನು ಕೇವಲ ವರುಣನ ಭೂತಕಾಲವಾಗಿ ನೆನಪುಗಳು ಮಾತ್ರವಾಗಿ ಮಾರ್ಪಾಡಾಗುತ್ತಿದ್ದೇನೆಯೇ ಎಂಬ ಭಯ ಮನಸ್ಸನ್ನು ನಿಧಾನವಾಗಿ ಆವರಿಸತೊಡಗಿತು.

ತಲೆಯ ಮೇಲೆ ಕೈಹೊತ್ತು ಗಂಟೆಗಟ್ಟಲೆ ಕೂತಿದ್ದ ಅಗಸ್ತ್ಯನಿಗೆ ಸಮಯ ಹೋದದ್ದೇ ತಿಳಿಯದು. ಮನಸ್ಸಿಲ್ಲದೆ ಹಾಸಿಗೆಯ ಮೇಲೆ ಉರುಳಿಕೊಂಡಾಗ, ಅರ್ಧರಾತ್ರಿಯಾದರೂ ನಿದ್ದೆಬಾರದು. ತಲೆಯ ತುಂಬಾ ಭಾವನೆಗಳ ಕಥಕ್ಕಳಿ, ಬದುಕಿನ ಘಟನೆಗಳೆಲ್ಲಾ ತುಣುಕು ತುಣುಕಾಗಿ ಅವನನ್ನು ಅಪ್ಪಳಿಸತೊಡಗಿದೆ. ತಲೆ ಸಿಡಿಯುತ್ತಿದೆ. ತಾನು ಒಂಟಿ ತುಂಬಾ ಒಂಟಿ, ಎನಿಸುತ್ತಿದೆ-ಅದರಿಂದ ಏನೋ ವಿಚಿತ್ರ ಹೆದರಿಕೆ ಅವನನ್ನು ಕಾಡತೊಡಗಿದೆ. ತನ್ನ ಇಷ್ಟು ವರ್ಷಗಳ ಸಂತಸ ತೃಪ್ತಿ ಎಲ್ಲಾ ಭ್ರಮೆ ಎನಿಸತೊಡಗಿದೆ.

ಹಾಗೆಯೇ ಒದ್ದಾಡುತ್ತಾ, ಚಡಪಡಿಸುತ್ತಾ, ಹೊರಳಾಡುತ್ತಿದ್ದ ಅಗಸ್ತ್ಯನಿಗೆ ಮುಂಜಾವಿನ ಹೊತ್ತಿಗೆ ಸ್ವಲ್ಪ ಮಂಪರು… ಕನಸು…

…ಒಂದು ಮರಳುಗಾಡು… ಮೊದಲು, ಕೊನೆಯಿಲ್ಲದ ಮರಳುಗಾಡು… ಸಂಜೆಗತ್ತಲು ಹರಡುತ್ತಿದೆ. ಅಲ್ಲಿ ತಾನೊಬ್ಬನೇ ನಿಂತಿದ್ದೇನೆ. ಕಷ್ಟಪಟ್ಟು, ಕಣ್ಣುಜ್ಜಿ ನೋಡಿದಾಗ ಮಸುಕು ಕತ್ತಲಿನಲ್ಲಿ ಎಲ್ಲಾ ಸ್ವಲ್ಪ ಸ್ವಲ್ಪವಾಗಿ ಸ್ಪಷ್ಟವಾಗತೊಡಗಿದೆ. ಆಗ ದೂರದಲ್ಲಿ, ತುಂಬಾ ದೂರದಲ್ಲಿ ಜೋಡಿಯೊಂದು ಕೈಹಿಡಿದು ನಡೆಯುತ್ತಿರುವುದು ಕಾಣಬರುತ್ತಿದೆ… ಹೌದು… ಅವರು ವರುಣ-ಶಮಿ… ಶಮಿ-ವರುಣ… ಅವರಿಬ್ಬರೂ ಜೊತೆಯಾಗಿ ನಡೆಯುತ್ತಿದ್ದಾರೆ… ತನಗೆ ಭಯವಾಗತೊಡಗಿದೆ. ಹೆದರಿಕೆಯಿಂದ ಮೈಬೆವರಿ, ಕೈಕಾಲು ನಡುಗತೊಡಗಿದೆ… ತಾನು ಒಂಟಿಯಾಗಿ ಉಳಿಯಬಾದರು. ಕತ್ತಲಾಗುವ ಮುಂಚೆ ಅವರನ್ನು ಸೇರಬೇಕು… ಕಪ್ಪು ಕತ್ತಲು ತನ್ನನ್ನು ನುಂಗಿ ಅವರಿಂದ ಬೇರೆ ಮಾಡುವ ಮುಂಚೆ ಅವರನ್ನು ಮುಟ್ಟಲೇಬೇಕು… ತಾನು ಬೇಗ ಬೇಗ ಹೆಜ್ಜೆ ಹಾಕುತ್ತೇನೆ.. ಆದರೆ ಕಾಲುಗಳು ಭಾರವಾಗಿ ಸೀಸದಂತಾಗಿವೆ… ಅವರಿಬ್ಬರೂ ಅತ್ತಿತ್ತ ನೋಡದೆ ಸೀದಾ ನಡೆಯುತ್ತಿದ್ದಾರೆ… ತಮ್ಮ ಪ್ರಪಂಚದಲ್ಲೇ ಮಗ್ನರಾಗಿ ಬೇರೆ ಯಾತರ ಅರಿವೂ ಇಲ್ಲದೆ ಹೆಜ್ಜೆ ಹಾಕುತ್ತಿದ್ದಾರೆ…

ಈಗ ತಾನು ನಡಿಗೆಯ ವೇಗ ಹೆಚ್ಚು ಮಾಡಿದಂತೆ, ತಮ್ಮ ನಡುವಿನ ಅಂತರ ಸ್ವಲ್ಪ ಕಡಿಮೆಯಾಗಿದೆ… ತಾನು ಮತ್ತಷ್ಟು ಬೇಗ ಬೇಗ ನಡೆಯುತ್ತೇನೆ… ಅಂತರ ಇನ್ನೂ ಕಡಿಮೆಯಾಗಿದೆ… ಈಗ ಅವರು ಕೇವಲ ಹತ್ತು ಹೆಜ್ಜೆ ದೂರದಲ್ಲಿ ನಡೆಯ ತೊಡಗಿದ್ದಾರೆ… ಅವರ ಆಕೃತಿಗಳು ಸ್ಪಷ್ಟವಾಗಿ ಕಾಣತೊಡಗಿದೆ… ಬಿಗಿಯಾಗಿ ಒಬ್ಬರ ಕೈ ಒಬ್ಬರು ಹಿಡಿದು, ಮೈಗೆ ಮೈ ತಾಕಿಸುತ್ತಾ, ಏನೋ ಮಾತನಾಡುತ್ತಾ, ನಡೆಯುತ್ತಿದ್ದಾರೆ… ಮಧ್ಯೆ ಮಧ್ಯೆ ನಗುತ್ತಿದ್ದಾರೆ… ತಾನು ನಡಿಗೆಯ ವೇಗ ಹೆಚ್ಚಿಸಿದಂತೆ ತನಗೆ ಮೇಲುಸಿರು ಬರತೊಡಗಿದೆ… ತಲೆ ಸುತ್ತು ಬರತೊಡಗಿದೆ… ಕಣ್ಣು ಕತ್ತಲಿಡುತ್ತಿದೆ… ಎಲ್ಲಾ ಮಂಜಾಗತೊಡಗಿದೆ… ಉಹೂಂ… ತಾನು ಹಿಂದುಳಿಯಬಾರದು… ಒಂಟಿಯಾಗಬಾರದು… ಮತ್ತೆ ತಲೆಕೊಡವಿ, ಕಣ್ಣುಜ್ಜಿ ಅವರತ್ತ ನೋಡಿದಾಗ ಅವರು ಎದುರು ಬದುರು ನಿಂತಿದ್ದಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಪ್ರಪಂಚವನ್ನೇ ಮರೆತಿದ್ದಾರೆ. ಅರೆ! ಆದರೆ ಇದೇನು?

ಅಲ್ಲಿರುವುದು ಶಮಿ ಅಲ್ಲ… ಮಿಮಿ! ಹೌದು, ತನ್ನ ಮಿಮಿ! ಶರ್ಮಿಷ್ಠಾಳ ಜಾಗದಲ್ಲಿ ಮಿಮಿ ನಿಂತಿದ್ದಾಳೆ… ಸುತ್ತಲೂ ನೋಡಿದಾಗ ಶಮಿಯ ಪತ್ತೆಯೇ ಇಲ್ಲ, ಅವಳು ಅದೃಶ್ಯಳಾಗಿದ್ದಾಳೆ. ಕೆಂಪು ಡ್ರೆಸ್ಸಿನಲ್ಲಿ ಚೆಲುವಾಗಿ ಕಾಣುತ್ತಿರುವ ಮಿಮಿಯ ಹೊಂಗೂದಲು ಹಾರಾಡುತ್ತಿದೆ… ನೀಲಿ ಕಣ್ಣುಗಳು ಹೊಳೆಯುತ್ತಿವೆ… ವರುಣ ಬಾಗಿ ಮಿಮಿಯ ಕಿವಿಯಲ್ಲಿ ಹೇಳುತ್ತಿದ್ದಾನೆ- “ಯೂ ಹ್ಯಾವ್ ಗಿವನ್ ಎ ನ್ಯೂ ಡೈಮೆನ್ಷನ್ ಟು ಮೈ ಲೈಫ್…” ಹೇಳಿ ಮುತ್ತಿಡುತ್ತಿದ್ದಾನೆ. ಮತ್ತೆ ಇಬ್ಬರೂ ನಗುತ್ತಾ ತನ್ನತ್ತ ಬೆನ್ನು ತಿರುಗಿಸಿ ನಡೆಯತೊಡಗಿದ್ದಾರೆ… ತಾನು ಏದುತ್ತಾ ಅವರ ಹಿಂದೆ ಓಡುತ್ತಿದ್ದೇನೆ… ಆದರೆ ಅವರು ದೂರ ದೂರ ಹೊರಟು ಹೋಗುತ್ತಿದ್ದಾರೆ… ದೂರದಲ್ಲಿ ಒಂದು ಚುಕ್ಕೆ ಮಾತ್ರವಾಗುತ್ತಿದ್ದಾರೆ… ಆದರೆ ಅವನ ನಗು ಮಾತ್ರ ಕೇಳಿ ಬರುತ್ತಿದೆ… ಅವರ ಒಲವಿನ, ಸಂತಸದ ನಗು… ಅದು ತನ್ನನ್ನು ಸುತ್ತುವರಿದು, ವಾತಾವರಣವನ್ನೆಲ್ಲಾ ತುಂಬಿ, ಕಿವಿಯಲ್ಲಿ ಭೋರ್ಗರೆಯುತ್ತಿದೆ… ಮಿಮಿ-ವರುಣರ ನಗು…

ಧಡಕ್ಕನೆ ಅಗಸ್ತ್ಯ ಎದ್ದು ಕೂತಾಗ, ಅವನ ತಲೆಯಿಂದ ಕಾಲ್ಬೆರಳವರೆಗೂ ಬೆವರಿನಿಂದ ತೋಯ್ದುಹೋಗಿತ್ತು. ಎದೆ ಧಡಧಡನೆ ಹೊಡೆದುಕೊಳ್ಳುತ್ತಿತ್ತು. ಗಂಟೆ ಐದು ಹೊಡೆಯುತ್ತಿತ್ತು. ತುಂಬಾ ದಣಿವೆನಿಸುತ್ತಿತ್ತು. ನಿಧಾನವಾಗಿ ತಲೆ ತಗ್ಗಿಸಿದ ಅಗಸ್ತ್ಯ, ಜೀವನದಲ್ಲಿ ಮೊದಲಬಾರಿ ಅಸಹಾಯಕತೆಯಿಂದ ತಲೆತಗ್ಗಿಸಿದ. ಸ್ವಲ್ಪ ಹೊತ್ತಿನ ನಂತರ ಏನೋ ನಿಶ್ಚಯ ಮಾಡಿಕೊಂಡಂತೆ, ಟೇಬಲ್ ಲ್ಯಾಂಪಿನ ಸ್ವಿಚ್ ಒತ್ತಿದ ರೂಮೆಲ್ಲಾ ಬೆಳಕಾಯಿತು.

ಪಕ್ಕದಲ್ಲೇ ಟೇಬಲ್ ಮೇಲೆ ಇದ್ದ ನಿದ್ರೆ ಗುಳಿಗೆಗಳ ಬಾಟಲ್ ಗಾಗಿ ಕುಡಿದವನಂತೆ ತಡಕಾಡಿದ, ಮುಚ್ಚಳ ತೆಗೆದು, ಬೊಗಸೆ ತುಂಬಾ ಮಾತ್ರೆಗಳನ್ನು ಸುರಿದುಕೊಂಡ, ಹೂಜಿಯಿಂದ ಒಂದು ಲೋಟ ತಣ್ಣೀರು ಬಗ್ಗಿಸಿಕೊಂಡು, ಒಂದೊಂದಾಗಿ ಮಾತ್ರೆಗಳನ್ನು ನುಂಗತೊಡಗಿದ, ಹೊಟ್ಟೆ ಭಾರವಾಗಿ ಒಡೆದುಹೊಗುತ್ತಿದೆ ಎನಿಸುವವರೆಗೂ, ತನ್ನ ಬೊಗಸೆ ಖಾಲಿಯಾಗುವವರೆಗೂ…