ತಮ್ಮ ವಿಮರ್ಶೆಯ ಕೃತಿಗಳಲ್ಲಿ ಮುಳಿಯ ತಿಮ್ಮಪ್ಪಯ್ಯನವರು ತೋರಿಸಿಕೊಟ್ಟ ದೇಸೀ ವಿಮರ್ಶೆಯ ಮಾರ್ಗದ ಮಹತ್ವವನ್ನು ಕೂಡ ಸರಿಯಾಗಿ ಗುರುತಿಸಲಾಗಿಲ್ಲ. ಉದಾಹರಣೆಗೆ ಅವರು ಪಂಪನ ‘ಆದಿಪುರಾಣ’ವು ರಸಕಾವ್ಯ, ‘ವಿಕ್ರಮಾರ್ಜುನ ವಿಜಯ’ವು ಶೀಲ ಪ್ರತಿಪಾದನೆಯ ಕಾವ್ಯ ಎಂದು ಗುರುತಿಸಿರುವುದು ಮಹತ್ವದ ಸಂಗತಿಯಾಗಿದೆ. ಭಾರತೀಯ ಕಾವ್ಯಮೀಮಾಂಸೆಯನ್ನು ಅರಗಿಸಿಕೊಂಡವರ ಒಳನೋಟ ಇದು. ಅಲ್ಲದೆ ಅರಿಸ್ಟಾಟಲ್ ಕೂಡ ‘ಇಥೋಸ್’ ಅನ್ನುವುದನ್ನು ‘ಪಾತ್ರ’ ಎನ್ನುವ ಅರ್ಥದಲ್ಲಿ ಬಳಸದೆ ‘ಶೀಲ’ ಎನ್ನುವ ಅರ್ಥದಲ್ಲಿಯೇ ಬಳಸಿದ್ದ.
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಮುಳಿಯ ತಿಮ್ಮಪ್ಪಯ್ಯನವರ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

 

ದಕ್ಷಿಣ ಕನ್ನಡದ ವಿದ್ವತ್ ಪರಂಪರೆಯ ಪಥಾನ್ವೇಷಕ ಕವಿ, ಸಂಶೋಧಕ – ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಕನ್ನಡಕ್ಕೆ ನೀಡಿದ ಕೊಡುಗೆ ಬಹು ಆಯಾಮಗಳಲ್ಲಿ ವಿಸ್ತರಿಸಿರುವಂಥದ್ದು. ‘ಕವಿಕುಲ ಗುರು’ ಎನ್ನಬಹುದಾದ ಮುಳಿಯ ತಿಮ್ಮಪ್ಪಯ್ಯನವರು ದಕ್ಷಿಣ ಕನ್ನಡದ ಆಧುನಿಕ ಕವಿಗಳಲ್ಲಿ ಒಬ್ಬರು ಮಾರ್ಗ ಪ್ರವರ್ತಕರು.

ದಕ್ಷಿಣ ಕನ್ನಡದ ನವೋದಯ ಸಾಹಿತ್ಯದ ಇಬ್ಬರು ಗುರುಗಳಲ್ಲಿ ಒಬ್ಬರು ಪಂಜೆ ಮಂಗೇಶರಾಯರಾದರೆ ಇನ್ನೊಬ್ಬರು ಮುಳಿಯ ತಿಮ್ಮಪ್ಪಯ್ಯ. (ಸೇಡಿಯಾಪು ಕೃಷ್ಣ ಭಟ್ಟರು ಮೂವರು ಗುರುಜನರನ್ನು ಗುರುತಿಸಿದ್ದಾರೆ. “ಹೊಸಗನ್ನಡಕ್ಕೆ ದಕ್ಷಿಣ ಕನ್ನಡದ ಗುರುಜನರು ಮೂವರು – ಕಿರುಗವನ, ಕಿರುಗತೆಗಳ ಕೊಂಡಾಟದ ಪಂಜೆಯವರು; ಪ್ರಾಸಭಂಜಕ, ದೇಶವಿದೇಶ ಕಾವ್ಯ ಮಾರ್ಗ ಮಹಾರಥಿಕ, ಸಂಶೋಧಕ ಮನೋರಂಜಕ ಪೈಯವರು; ಕನ್ನಡ ಶಬ್ದ ಭಂಡಾರಿ, ಹಳೆಗನ್ನಡ ಕಾವ್ಯಾರಣ್ಯ ಕೇಸರಿ, ಪ್ರೌಢ ವಿದ್ಯಾರ್ಥಿ ಮನೋಹಾರಿ ಮುಳಿಯದವರು…” ನಾನು ಗೋವಿಂದ ಪೈಗಳನ್ನು ಪಂಜೆಯವರ ಮಾರ್ಗಕ್ಕೆ ಗಟ್ಟಿತನವನ್ನು ಕೊಟ್ಟವರೆಂದು ಪರಿಗಣಿಸಿದ್ದೇನೆ).

ದಕ್ಷಿಣ ಕನ್ನಡದಲ್ಲಿ ಪಂಜೆಯವರಿಂದ ಆರಂಭವಾದ ಆಧುನಿಕ ಪರಂಪರೆಯೂ, ಮುಳಿಯರಿಂದ ಆರಂಭವಾದ ಮಾರ್ಗ ಪರಂಪರೆಯೂ ಜತೆ ಜತೆಯಾಗಿ ಸಾಗಿ ಈ ಭಾಗದ ಕಾವ್ಯ ಸೃಷ್ಟಿಗೆ ಒಂದು ಕರ್ಷಣ ಗುಣವನ್ನು ಕೊಟ್ಟಿವೆ. ಮುಳಿಯ ಪರಂಪರೆಯನ್ನು ಮುದ್ದಣನಿಂದಲೂ ಗುರುತಿಸಬಹುದು. ಆದರೆ ಮುಳಿಯ ತಿಮ್ಮಪ್ಪಯ್ಯನವರು ಮುದ್ದಣನಲ್ಲಿ ಒಮ್ಮೆ ವಿರಮಿಸಿದ ಕನ್ನಡದ ಮಾರ್ಗ ಸಂಪ್ರದಾಯದ ಕಾವ್ಯವನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡು, ಹೊಸ ಬಗೆಯಲ್ಲಿ ಮುಂದುವರಿಸಿದರು. ತಮ್ಮ ನಂತರದವರ ಮೇಲೆ ಬೀರಿದ ಪ್ರಭಾವವೇ ಅವರನ್ನು ಈ ಮಾರ್ಗದ ಪ್ರವರ್ತಕರಾಗಿ ಗುರುತಿಸಲು ಕಾರಣವಾಗಿದೆ.

ಮೂರನೆಯ ದಾರಿಯನ್ನು ದೇಸೀ ಪರಂಪರೆ ಎಂದು ಗುರುತಿಸಬಹುದು. ಪಾರ್ತಿ ಸುಬ್ಬ, ಪಾವಂಜೆ ಲಕ್ಷ್ಮೀನಾರಣಪ್ಪಯ್ಯ ಮುಂತಾದವರ ಮಾರ್ಗ ಇದು. ಇದನ್ನು ಕೂಡ ದಕ್ಷಿಣ ಕನ್ನಡದ ಸಾಹಿತ್ಯ ಪರಂಪರೆ ಒಪ್ಪಿಕೊಂಡು ಅರಗಿಸಿಕೊಳ್ಳಲು ಪ್ರಯತ್ನಿಸಿದೆ ಎನ್ನುವುದು ಬಹಳ ಮುಖ್ಯವಾಗಿದೆ.

ಸ್ವತಃ ಮುಳಿಯ ತಿಮ್ಮಪ್ಪಯ್ಯ ಪಂಪನ ಬಗ್ಗೆ ಬರೆದಷ್ಟೇ ಬದ್ಧತೆಯಿಂದ ಯಕ್ಷಗಾನ ಕವಿ ಪಾರ್ತಿ ಸುಬ್ಬನ ಬಗ್ಗೆಯೂ ಬರೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಪಂಜೆ ಮಂಗೇಶರಾಯರು ದಾಸರ ಹಾಡುಗಳ ಮಟ್ಟುಗಳನ್ನು ಬಳಸಿಕೊಂಡು ಹೊಸ ಕಾಲದ ಮಟ್ಟುಗಳನ್ನು ಸೃಷ್ಟಿಸಿದರು. ಹೀಗೆ ಪರಂಪರೆಯ ಬಗ್ಗೆ ಗೌರವ ಇಟ್ಟುಕೊಂಡ ಕಾರಣದಿಂದಾಗಿ ಇಲ್ಲಿನ ಕವಿಗಳು ಮಹತ್ವದ ಸಾಧನೆ ಮಾಡಲು ಸಾಧ್ಯವಾಯಿತು.

ಈ ಬರಹದಲ್ಲಿ ಮುಳಿಯ ತಿಮ್ಮಪ್ಪಯ್ಯನವರ ಜೀವನ ಸಾಧನೆಗಳ ಕಿರುನೋಟದ ಜತೆಗೆ ಕನ್ನಡ ಕಾವ್ಯ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಪ್ರಧಾನವಾಗಿ ಗುರುತಿಸಲು ಪ್ರಯತ್ನಿಸಲಾಗಿದೆ.

ಬದುಕು ಕಟ್ಟಿಕೊಂಡ ಬಗೆ

ಮುಳಿಯ ಕೇಶವ ಭಟ್ಟ ಮತ್ತು ಮೂಕಾಂಬಿಕ ಅಮ್ಮನವರ ಸುಪುತ್ರರಾಗಿ ತಿಮ್ಮಪ್ಪಯ್ಯನವರು ಜನ್ಮ ತಾಳಿದರು. (ಜನನ: ಮಾರ್ಚ್ 3, 1888. ವಿಟ್ಲ, ಬಂಟವಾಳ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ. ಮರಣ: ಜನವರಿ 16, 1950. ಮದ್ರಾಸ್). ವಿಟ್ಲ ಸೀಮೆಯಲ್ಲಿ ವಿಟ್ಲದರಸರಿಗೆ ಸರಿಸಾಟಿಯಾಗಿ ಅವರ ಕುಟುಂಬದ ಶ್ರೀಮಂತಿಕೆ, ಪ್ರಭಾವಗಳಿದ್ದವಂತೆ. ‘ಮುಳಿಯದರಸುಗಳು’ ಎಂದೇ ಹೆಸರಾಗಿದ್ದ ಮನೆತನದಲ್ಲಿ ಅವರು ಹುಟ್ಟಿದರು. ಅವರು ಹುಟ್ಟುವಾಗ ಕುಟುಂಬಕ್ಕೆ ಬಡತನ ಪ್ರಾಪ್ತಿಯಾಗಿತ್ತು. ಹಿರಿಯರ ಕ್ಷಾತ್ರ ಗುಣ, ಔದಾರ್ಯ ಮತ್ತು ಸಜ್ಜನಿಕೆಗಳ ಫಲವಾಗಿ ಆಸ್ತಿಪಾಸ್ತಿಗಳೆಲ್ಲ ಕರಗಿಹೋಗಿತ್ತು. ಕೊನೆಗೆ ಸಾಲಗಾರರು ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಿದ ಪ್ರಕರಣವೂ ನಡೆಯಿತು. ಆಗ ಒಲೆಯಲ್ಲಿ ಬೇಯುತ್ತಿದ್ದ ಅನ್ನದ ಪಾತ್ರೆಯನ್ನಿಳಿಸಿ ಅನ್ನವನ್ನು ಅಂಗಳಕ್ಕೊಗೆದ ಘಟನೆಯೂ ನಡೆದಿತ್ತಂತೆ. ತಂದೆ ಕೇಶವ ಭಟ್ಟರು ಅನಾರೋಗ್ಯದಿಂದ ಮಲಗಿದ್ದ ಮಂಚವನ್ನು ಎತ್ತಿಕೊಂಡು ಹೋದದ್ದನ್ನು ಎಳೆಯ ಮುಳಿಯರು ಕಣ್ಣಾರೆ ಕಂಡಿದ್ದರಂತೆ. ಸಾಲಗಾರರ ಕಾಟ ತಾಳಲಾರದೆ ಊರೂರು ಬದಲಾಯಿಸಬೇಕಾಗಿ ಬಂತು.

ಮುಳಿಯ ತಿಮ್ಮಪ್ಪಯ್ಯನವರ ಪ್ರಾಥಮಿಕ ಶಿಕ್ಷಣ ಮನೆಯ ಬಳಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ನಾಲ್ಕನೆಯ ತರಗತಿ ಕಲಿತ ಮೇಲೆ ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಬಲವಿಲ್ಲದ ಕಾರಣ ತಿಮ್ಮಪ್ಪಯ್ಯನವರು ವಿಟ್ಲ ಸೀಮೆಯಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದ ಕಲ್ಲಜೆ ಕೃಷ್ಣಶಾಸ್ತ್ರಿಗಳಲ್ಲಿ ಸಂಸ್ಕೃತಾಧ್ಯಯನ ಮಾಡಿದರು. ಕನ್ನಡವನ್ನು ಸ್ವತಂತ್ರವಾಗಿ ಓದುತ್ತಿದ್ದರು. ಆಗ ಮುಳಿಯ ಮನೆಯನ್ನು ತೊರೆದು ಪೆರುವಾಯಿ ಗ್ರಾಮದ ಗುಡ್ಡೆ ತೋಟ ಮತ್ತು ಕುಂಬಳ ಕೋಡಿ ಎಂಬ ಊರುಗಳಿಗೆ ಹೋಗಬೇಕಾಯಿತು. ಆ ವಿದ್ಯಾಭ್ಯಾಸವೂ ನಿಂತಿತು.

1906ರಲ್ಲಿ ಮುಳಿಯ ತಿಮ್ಮಪ್ಪಯ್ಯನವರು ಮನೆಯವರಿಗೆ ತಿಳಿಸದೆ ಕೇರಳದ ತಿರುವಾಂಕೂರಿಗೆ ಹೋಗಿ ಸಂಸ್ಕೃತ ಕಲಿಯಲು ಪ್ರಯತ್ನಿಸಿದರು. ಅಲ್ಲಿನ ಮಹಾರಾಜಾ ಕಾಲೇಜು ಸಂಸ್ಕೃತ ವಿದ್ಯಾದಾನಕ್ಕೆ ಹೆಸರಾಗಿತ್ತು. ಮಹಾರಾಜರ ಧರ್ಮಚ್ಛತ್ರದಲ್ಲಿ ಉಂಡು ಬ್ರಾಹ್ಮಣರ ಜಗಲಿಗಳಲ್ಲಿ ಮಲಗಿಕೊಂಡು, ಯಾರಾದರೂ ನಾಲ್ಕು ಕಾಸು ದಕ್ಷಿಣೆ ನೀಡಿದರೆ ಇತರ ಅವಶ್ಯಕತೆಗಳಿಗೆ ಬಳಸಿಕೊಂಡು ಕಷ್ಟದಲ್ಲಿ ಬದುಕಿದರು. ಅಲ್ಲಿ ಹಿರಿಯ ವಿದ್ಯಾರ್ಥಿಗಳು ಔದಾರ್ಯದಿಂದ ಹೇಳಿಕೊಡುತ್ತಿದ್ದ ಪಾಠದಿಂದ ತೃಪ್ತರಾಗದೆ ಮೈಸೂರಿಗೆ ಹೋಗಲು ನಿಶ್ಚಯಿಸಿದರು.

ತಿರುವಾಂಕೂರಿನಿಂದ ಮೈಸೂರಿಗೆ ಬಹುಪಾಲು ದೂರವನ್ನು ನಡೆದುಕೊಂಡೇ ಹೋಗಿ, ಮೈಸೂರಿನಲ್ಲಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ವಾರಾನ್ನದಿಂದ ಜೀವಿಸಿದರು. ಆ ಮೊದಲೇ ಸ್ವಲ್ಪ ಸಂಗೀತಾಭ್ಯಾಸ ಮಾಡಿದ್ದ ತಿಮ್ಮಪ್ಪಯ್ಯನವರು ಮೈಸೂರು ವಾಸುದೇವಾಚಾರ್ಯರ ಶಿಷ್ಯರಾಗಿ ಸಂಗೀತ ಕಲಿತರು. ಅವರ ಸುಶ್ರಾವ್ಯ ಕಂಠದಿಂದಾಗಿ ಮುಂದೆ ಅವರಿಗೆ ‘ಕೋಗಿಲೆ ತಿಮ್ಮಪ್ಪಯ್ಯ’ ಎಂಬ ಅಡ್ಡ ಹೆಸರು ಕೂಡ ಇತ್ತು. (ಒಂದು ಹವ್ಯಕ ಸಮಾಜದ ಗಣ್ಯರಲ್ಲಿ ಬೇರೆ ಒಂದಿಬ್ಬರು ತಿಮ್ಮಪ್ಪಯ್ಯನವರೂ ಇದ್ದದ್ದರಿಂದ ಒಂದು ಪ್ರತ್ಯೇಕ ಚಹರೆಯುಳ್ಳ ಅಡ್ಡಹೆಸರಿನ ಅಗತ್ಯ ಉಂಟಾದದ್ದರಿಂದ ಈ ಹೆಸರು ಬಂದದ್ದು. ಈ ಹೆಸರಿಗೆ ಇನ್ನೊಂದು ಕಾರಣ ‘ಕನ್ನಡ ಕೋಗಿಲೆ’ ಎನ್ನುವ ಪತ್ರಿಕೆಯನ್ನು ಮುಳಿಯರು ನಡೆಸುತ್ತಿದ್ದದ್ದು).

ಮುಳಿಯರು ಮೈಸೂರಿನ ವಿದ್ಯಾಭ್ಯಾಸ ಮುಗಿಸಿ, 1910ರಲ್ಲಿ ಊರಿಗೆ ಹಿಂದಿರುಗಿದರು. ಬದುಕುವ ದಾರಿ ಕಾಣದೆ, ವಾಚನ -ಪ್ರವಚನಗಳಲ್ಲಿ ತೊಡಗಿಕೊಂಡರು. ಆ ಕಾಲದಲ್ಲಿ ಹೆಚ್ಚಿನ ಮನೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಪುರಾಣ ವಾಚನ-ಪ್ರವಚನಗಳು ನಡೆಯುತ್ತಿದ್ದುದು ಸಾಮಾನ್ಯವಾಗಿತ್ತು. ಗಮಕಕ್ಕೆ ಹೇಳಿ ಮಾಡಿಸಿದ ಶಾರೀರ, ವಿದ್ವತ್ ಪೂರ್ಣ ಸರಳ ಸುಂದರ ಸರಸ ವ್ಯಾಖ್ಯಾನಗಳಿಂದ ತಿಮ್ಮಪ್ಪಯ್ಯನವರ ಹೆಸರು ಮನೆಮಾತಾಯಿತು. ಆಮೇಲೆ ಯಕ್ಷಗಾನ ತಾಳಮದ್ದಳೆಗಳಲ್ಲಿಯೂ ಅವರು ಭಾಗವಹಿಸತೊಡಗಿದರು. ಕವಿ ಭೂಷಣ ಕೆ.ಪಿ. ವೆಂಕಪ್ಪಶೆಟ್ಟರು ಆಗಿನ ಪ್ರಸಿದ್ಧ ಅರ್ಥದಾರಿಗಳಾಗಿದ್ದರು. ತಿಮ್ಮಪ್ಪಯ್ಯನವರ ವಿದ್ವತ್ತು, ವಾಗ್ವೈಖರಿಯನ್ನು ಮೆಚ್ಚಿದ ಅವರು ಮಂಗಳೂರಿನ ಕೆನರಾ ವಿದ್ಯಾಸಂಸ್ಥೆಗಳು ಮತ್ತು ಕೆನರಾ ಬ್ಯಾಂಕ್ ಸ್ಥಾಪಕ ಅಮ್ಮಂಬಳ ಶ್ರೀನಿವಾಸ ಪೈಗಳಿಗೆ ತಿಮ್ಮಪ್ಪಯ್ಯನವರನ್ನು ಪರಿಚಯಿಸಿಕೊಟ್ಟರು. ಅಮ್ಮೆಂಬಳ ಶ್ರೀನಿವಾಸ ಪೈಗಳು ಪುರಾಣ ಪ್ರವಚನಗಳನ್ನು ಏರ್ಪಡಿಸುತ್ತಿದ್ದರು. ಅವುಗಳಲ್ಲಿ ಭಾಗವಹಿಸತೊಡಗಿದ ಮುಳಿಯರ ವಿದ್ವತ್ತು ಅವರ ಗಮನ ಸೆಳೆಯಿತು. ಅಮ್ಮೆಂಬಳ ಶ್ರೀನಿವಾಸ ಪೈಗಳು ಅವರಿಗೆ 1911 ರಲ್ಲಿ ಕೆನರಾ ಹೈಸ್ಕೂಲಿನ ಅಧ್ಯಾಪಕರಾಗಿ ಉದ್ಯೋಗ ನೀಡಿದಾಗ ತಿಮ್ಮಪ್ಪಯ್ಯನವರ ಬದುಕು ಒಂದು ನೆಲೆಯನ್ನು ಕಂಡಿತು. ಮಂಗಳೂರಿನಲ್ಲಿ ಬಾಡಿಗೆಗೆ ಮನೆ ಹಿಡಿದು ಕುಟುಂಬವನ್ನು ಅಲ್ಲಿಗೆ ಕರೆದುಕೊಂಡು ಹೋದರು.

1918ರಲ್ಲಿ ಸೈಂಟ್ ಅಲಾಶಿಯಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ಖಾಲಿಯಾದಾಗ ಅಲ್ಲಿಗೆ ಸೇರುವಂತೆ ಅವರಿಗೆ ಆಹ್ವಾನ ಬಂತು. ಹಾಗಾಗಿ ಕೆನರಾ ಹೈಸ್ಕೂಲು ಬಿಟ್ಟು ಅಲ್ಲಿಗೆ ಸೇರಿದರು. 1918 ರಿಂದ 1948 ರವರೆಗೆ ಸೈಂಟ್ ಅಲಾಶಿಯಸ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ದುಡಿದರು. ಅವರು ಕಾಲೇಜಿನಲ್ಲಿಯೂ ಶುದ್ಧ ಕನ್ನಡ ಬಳಸುವುದಕ್ಕೆ, ಇಂಗ್ಲಿಷ್ ಪದಗಳನ್ನು ಬಳಸದಿರುವುದಕ್ಕೆ ಹೆಸರಾಗಿದ್ದರು.

ಮಂಗಳೂರಿನಲ್ಲಿ ನೆಲೆಸಿ, ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾದ ಮೇಲೆ ಮುಳಿಯ ತಿಮ್ಮಪ್ಪಯ್ಯನವರು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು. ಈ ಸಮಯದಲ್ಲಿ ಅವರು ಚಂದ್ರಾವಳಿ ವಿಲಾಸ, ಸೊಬಗಿನ ಬಳ್ಳಿ, ಹಗಲಿರುಳು, ಬಡ ಹುಡುಗಿ, ನಡತೆಯ ನಾಡು ಮೊದಲಾದ ಕೃತಿಗಳನ್ನು ರಚಿಸಿದರು. ‘ಕನ್ನಡ ಕೋಗಿಲೆ’ ಮಾಸ ಪತ್ರಿಕೆಯನ್ನು ನಡೆಸಿದರು. ಇದು (1911-18) ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯಜೀವನದ ಮೊದಲನೆಯ ಘಟ್ಟ. ಇದು ಸೃಜನಶೀಲ ಕಾವ್ಯ ರಚನೆಯ ಕಾಲ. ಅವರ ಪತ್ರಿಕಾ ಸಂಪಾದಕೀಯ ಕಾರ್ಯವೂ ಈ ಘಟ್ಟದಲ್ಲಿಯೇ ನಡೆದದ್ದು.

ಸೈಂಟ್ ಅಲಾಶಿಯಸ್ ಕಾಲೇಜಿನಲ್ಲಿದ್ದ ಮೂವತ್ತು ವರ್ಷಗಳ ಕಾಲ (1919-1948) ಅವರ ಸಾಹಿತ್ಯದ ಎರಡನೆಯ ಘಟ್ಟ. ಅದು ಸಂಶೋಧನೆ ಮತ್ತು ವಿದ್ವತ್ ಕೃತಿಗಳ ರಚನೆಯ ಕಾಲ. ಎರಡೂ ಬಗೆಯ ಅನುಭವಗಳ ರಸಪಾಕವಾಗಿ ಅವರ ‘ನವನೀತ ರಾಮಾಯಣ’ ಮಹಾಕಾವ್ಯದ ಮೊದಲನೆಯ ಭಾಗವು 1940 ರಲ್ಲಿ ಪ್ರಕಟವಾಯಿತು. ಅದು ಅಪೂರ್ಣವಾಗಿ ಉಳಿದದ್ದು ಕನ್ನಡ ಕಾವ್ಯ ಕ್ಷೇತ್ರಕ್ಕೆ ಒಂದು ದೊಡ್ಡ ನಷ್ಟ. ಸೈಂಟ್ ಅಲಾಶಿಯಸ್ ಕಾಲೇಜಿನ ಅವಧಿಯಲ್ಲಿ ಅವರ ಪ್ರಬುದ್ಧ ಕೃತಿಗಳು ಬೆಳಕಿಗೆ ಬಂದವು. ‘ನಾಡೋಜ ಪಂಪ’ ಅವರನ್ನು ಎತ್ತರಕ್ಕೇರಿಸಿದ ಮೇರು ಕೃತಿ. ಕನ್ನಡದ ಓಜರೆಂದು ಖ್ಯಾತಿ ತಂದುಕೊಟ್ಟ ಮಹಾಕೃತಿ. ಸಮಸ್ತ ಭಾರತ ಸಾರ, ಪಾರ್ತಿಸುಬ್ಬ, ಕವಿರಾಜ ಮಾರ್ಗ ವಿವೇಕ, ಆದಿಪುರಾಣ ಸಂಗ್ರಹದಂತಹ ವಿದ್ವತ್ ಕೃತಿಗಳ ರಚನೆ ಈ ಕಾಲ ಘಟ್ಟದಲ್ಲಿ ನಡೆದಿದೆ.

ಸಂಸಾರ: 1916ರಲ್ಲಿ ತಿಮ್ಮಪ್ಪಯ್ಯನವರ ಮದುವೆ ಕರೋಪಾಡಿ ಗ್ರಾಮದ ಮಹಾಬಲ ಭಟ್ಟರ ಮಗಳು ದೇವಕಿಯೊಡನೆ ಜರುಗಿತು. ಇವರಿಗೆ ನಾಲ್ಕು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಮುಳಿಯ ಕೇಶವಯ್ಯ (ಸ್ವತಃ ಸಾಹಿತಿ; ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಭಾಷಾಂತರಕಾರರಾಗಿದ್ದರು; ಆಮೇಲೆ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ ಎಂದು ಮರುನಾಮಕರಣಗೊಂಡ ‘ಭಾಷಾ ನಿರ್ದೇಶನಾಲಯ’ದ ಮೊದಲನೆಯ ನಿರ್ದೇಶಕರಾಗಿದ್ದರು), ಮುಳಿಯ ಮಹಾಬಲ ಭಟ್ಟ (ಸ್ವತಃ ಲೇಖಕರು, ನ್ಯಾಯವಾದಿ, ಯಕ್ಷಗಾನ ತಾಳಮದ್ದಳೆಯ ಹವ್ಯಾಸಿ ಅರ್ಥಧಾರಿ ಮತ್ತು ಮಂಗಳೂರಿನ ಸಾಂಸ್ಕೃತಿಕ ವಲಯದ ನೇತಾರರಾಗಿದ್ದರು), ಮುಳಿಯ ಗೋಪಾಲಕೃಷ್ಣ ಭಟ್ (ಕೇಂದ್ರಸರಕಾರದ ಕಾರ್ಮಿಕ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾಗಿ ನ್ಯಾಯವಾದಿಯಾಗಿದ್ದರು) ಮತ್ತು ಮುಳಿಯ ರಾಘವಯ್ಯ (ಭಾರತ್ ಸರಕಾರದ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರು) – ಇವರು ಮುಳಿಯರ ಪುತ್ರರು. ಮೂಕಾಂಬಿಕೆ ಮತ್ತು ಜಯಲಕ್ಷ್ಮಿ ಪುತ್ರಿಯರು. ಮೂರನೆಯ ಹೆಣ್ಣುಮಗಳು ಗೌರಿ ಎಳವೆಯಲ್ಲಿಯೆ ತೀರಿಹೋಗಿದ್ದಳು. ದೇವಕಿಯಮ್ಮ 1945ರಲ್ಲಿ ತೀರಿಕೊಂಡರು.

ಮುಳಿಯರ ಕಿರಿಯ ಪುತ್ರ, ವಿಜ್ಞಾನಿ ಮುಳಿಯ ರಾಘವಯ್ಯ ಅವರು ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಮಾಲೆಯಲ್ಲಿ ತಂದೆಯವರ ಬಗ್ಗೆ ಒಳ್ಳೆಯ ಪುಸ್ತಕವೊಂದನ್ನು ಬರೆದು ಪ್ರಕಟಿಸಿದ್ದಾರೆ. ಅದನ್ನೂ ಈ ಬರೆಹದ ಸಂದರ್ಭದಲ್ಲಿ ಮಾಹಿತಿಗಾಗಿ ಬಳಸಿಕೊಳ್ಳಲಾಗಿದೆ. ಈ ಬರಹದ ಜತೆಗೆ ಮುಳಿಯ ತಿಮ್ಮಪ್ಪಯ್ಯನವರ ಕಾವ್ಯಭಾಗಗಳನ್ನು ಧಾರಾಳವಾಗಿ ಬಳಸಿಕೊಳ್ಳಲು ಮುಳಿಯ ರಾಘವಯ್ಯ ಅವರು ಈ ಲೇಖಕನಿಗೆ ಅನುಮತಿಯಿತ್ತಿದ್ದಾರೆ.

1940 ರಲ್ಲಿ ಮುಳಿಯರ ಅಂಗಾಲಿನಲ್ಲಿ ‘ಆಣಿ’ಯಂತಹ ನೋವು ಕಾಣಿಸಿಕೊಂಡು, ಅದರ ಚಿಕಿತ್ಸೆ ಫಲಕಾರಿಯಾಗದೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಅವರು ಆಸ್ಪತ್ರೆಗೂ ಸೇರಬೇಕಾಯಿತು. ಅಲ್ಲಿಂದ ಬಂದ ನಂತರ ಅವರಿಗೆ ಆ ಪಾದವನ್ನು ಸರಿಯಾಗಿ ಊರಲು ಸಾಧ್ಯವಾಗುತ್ತಿರಲಿಲ್ಲ. ಆಸ್ಪತ್ರೆಯಿಂದ ಬಂದನಂತರ ಅವರು ತಮ್ಮ ಮುಂಡಾಸನ್ನು ಬಿಟ್ಟು ಟೋಪಿಯೊಂದನ್ನು ಧರಿಸತೊಡಗಿದರು.

1948ರಲ್ಲಿ ಮುಳಿಯ ತಿಮ್ಮಪ್ಪಯ್ಯನವರು ನಿವೃತ್ತರಾಗಿ ಮಂಗಳೂರನ್ನು ತ್ಯಜಿಸಿದರು. ಮಗ ಮಹಾಬಲ ಭಟ್ಟರೊಡನೆ ಕೆಲ ಕಾಲ ಪೆರ್ಲದಲ್ಲಿದ್ದು ನಂತರ ಹಿರಿಯ ಮಗ ಕೇಶವ ಭಟ್ಟರ ಮದ್ರಾಸಿನ ಮನೆಯಲ್ಲಿದ್ದು ಹೃದಯಬೇನೆಗೆ ಚಿಕಿತ್ಸೆ ಪಡೆದರು. 1950ರಲ್ಲಿ ಕೊನೆಯುಸಿರೆಳೆದರು.

ಕನ್ನಡದ ಓಜ: ಮುಳಿಯ ತಿಮ್ಮಪ್ಪಯ್ಯ ಸೈಂಟ್ ಎಲೋಸಿಯಸ್ ಕಾಲೇಜಿನಲ್ಲಿ ಮೂವತ್ತು ವರ್ಷಗಳ ಕಾಲ ಅಧ್ಯಾಪನ – ಪ್ರವಚನ ನಡೆಸಿ ಅಸಂಖ್ಯ ಶಿಷ್ಯರಾಶಿಯನ್ನು ಗಳಿಸಿದರು. ಕನ್ನಡದ ಸವಿಯನ್ನು ತನ್ನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ನಾಡಿನಾದ್ಯಂತ ಎಲ್ಲರಿಗೂ ಉಣಿಸಿದರು. ಮುಳಿಯ ತಿಮ್ಮಪ್ಪಯ್ಯನವರ ವಿದ್ವತ್ ಪರಂಪರೆ ಮತ್ತು ಅವರು ಪ್ರಾರಂಭಿಸಿದ ಖಂಡಕಾವ್ಯ (ಕಿರಿಯ ಗಾತ್ರದ ಪದ್ಯ ಕಾವ್ಯಗಳು) ಪರಂಪರೆ ಮುಂದೆ ಕಡೆಂಗೋಡ್ಲು ಶಂಕರ ಭಟ್ಟ, ಸೇಡಿಯಾಪು ಕೃಷ್ಣ ಭಟ್ಟ ಮುಂತಾದವರಿಂದ ಮುಂದುವರಿಯಿತು. ಕಡೆಂಗೋಡ್ಲು ಶಂಕರ ಭಟ್ಟರು ಮುಳಿಯರ ಸೋದರಭಾವನಾಗಿದ್ದು ಮುಳಿಯರೇ ಅವರನ್ನು ಮಂಗಳೂರಿಗೆ ಕರೆಯಿಸಿ, ತಮ್ಮ ಮನೆಯಲ್ಲಿಟ್ಟುಕೊಂಡು ಶಿಕ್ಷಣವನ್ನು ಕೊಡಿಸಿದ್ದರು. ಅವರ ಇನ್ನೊಬ್ಬ ಸಂಬಂಧಿಕರಾದ ಖ್ಯಾತ ಕನ್ನಡ ಸಾಹಿತಿ – ವಿದ್ವಾಂಸ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರನ್ನೂ ಮಂಗಳೂರಿಗೆ ಕರೆಯಿಸಿ ವಿದ್ಯಾಭ್ಯಾಸ ಮುಂದುವರಿಸಲು ಪ್ರೋತ್ಸಾಹಿಸಿದವರು ಅವರೇ. ತೆಕ್ಕುಂಜರೂ ಸ್ವಲ್ಪ ಸಮಯದ ಮುಳಿಯರ ಮನೆಯಲ್ಲಿಯೇ ಇದ್ದವರು. ಮುಂದೆ ದಕ್ಷಿಣಕನ್ನಡದಲ್ಲಿ ಅಚ್ಚಗನ್ನಡದಲ್ಲಿ ಕಾವ್ಯ ರಚಿಸಿದ ಎರಡನೆಯವರಾದ ಕೊಳಂಬೆ ಪುಟ್ಟಣ್ಣ ಗೌಡರ ಮೇಲೆ ಆಂಡಯ್ಯನ ‘ಕಬ್ಬಿಗರ ಕಾವ’ ಮತ್ತು ಮುಳಿಯರ ‘ಸೊಬಗಿನ ಬಳ್ಳಿ’ ಅಚ್ಚಗನ್ನಡ ಕಾವ್ಯಗಳ ಪ್ರಭಾವ ಇತ್ತು.

ಒಮ್ಮೆ ಡಿ.ವಿ.ಜಿ. ಯವರೂ ಪಂಜೆಮಂಗೇಶರಾಯರೂ ತಿಮ್ಮಪ್ಪಯ್ಯನವರ ಮನೆಗೆ ಬಂದಿದ್ದಾಗ ಡಿ.ವಿ.ಜಿ. ಯವರು ಸರಸವಾಗಿ ಮಾತಾಡುತ್ತ ‘ಮುಳಿಯ’ ಅನ್ನುವುದಕ್ಕೆ ಮೂರು ಅರ್ಥಗಳಿವೆಯೆಂದು ವ್ಯಾಖ್ಯಾನಿಸಿದ್ದರು. ‘ಮುಳಿಯ’ ಅಂದರೆ ಕೋಪಿಸದ, ‘ಮುಳಿಯದ’ ಅಂದರೆ ಕೋಪವಿದ್ದರೂ ಅದನ್ನು ತೋರ್ಪಡಿಸಿಕೊಳ್ಳದ ಮತ್ತು ‘ಮುಳಿಯೆ’ ಅಂದರೆ ‘ಕೋಪವೆಂದರೆ ತಿಮ್ಮಪ್ಪಯ್ಯನವರ ಕೋಪ’ ಎಂಬ ಅರ್ಥಗಳನ್ನು ಅವರು ಹೇಳಿದಾಗ ತಿಮ್ಮಪ್ಪಯ್ಯನವರು ನಗುತ್ತ, “ನನ್ನ ವಿಷಯವನ್ನು ನಾನೇನು ಬಲ್ಲೆ? ನೀವು ಹೇಗೆಂದರೆ ಹಾಗೆ” ಎಂದರು.

ಮುಳಿಯ ತಿಮ್ಮಪ್ಪಯ್ಯನವರು ಸಂಸ್ಕೃತ ಮತ್ತು ಕನ್ನಡಗಳಲ್ಲಿ ತಳಸ್ಪರ್ಶಿಯಾದ ಜ್ಞಾನವನ್ನು ಹೊಂದಿದ್ದರೂ ಇಂಗ್ಲಿಷ್ ಭಾಷೆ ಅವರಿಗೆ ಬರುತ್ತಿರಲಿಲ್ಲ. ತಮ್ಮ ಸೇವಾವಧಿಯಲ್ಲಿ ಅವರು ಒಂದೇ ಒಂದು ಇಂಗ್ಲಿಷ್ ಶಬ್ದವನ್ನು ತರಗತಿಯಲ್ಲಿ ಬಳಸಿದ್ದರಂತೆ. ‘ಶಿರಸ್ತ್ರಾಣ’ ಅನ್ನುವುದಕ್ಕೆ ‘ಹೆಲ್ಮೆಟ್’ ಎಂದು ಅರ್ಥ ಹೇಳಿ ಅದೊಂದು ಸುದ್ದಿಯಾಗುವಂತೆ ಮಾಡಿದ್ದರು.

‘ಕೊಡಲಿ’ ಎನ್ನುವುದನ್ನು ‘ನೀಡಲಿ’ಎನ್ನುವ ಅರ್ಥದಲ್ಲಿ ಅವರು ಬಳಸುತ್ತಲೇ ಇರಲಿಲ್ಲ! ಆ ಶಬ್ದವು ಕುಠಾರ (‘ಕೊಡಲಿʼ) ಪ್ರಾಯವಾಗಿದೆ ಎನ್ನುವುದರಿಂದಾಗಿ! ಅವರಿಗೆ ವಿಪರೀತ ಕೋಪ ಬಂದಾಗ ‘ದುರ್ಬುದ್ಧಿ’ ಶಬ್ದವನ್ನು ಬಳಸುತ್ತಿದ್ದರಂತೆ. ಅದು ಅವರು ಪ್ರಯೋಗಿಸುತ್ತಿದ್ದ ಅತ್ಯಂತ ಕೆಟ್ಟ ಬೈಗುಳ! ಅವರು ಪಾಠ ಮಾಡುವಾಗ ಒಬ್ಬ ವಿದ್ಯಾರ್ಥಿಯ ಬಗ್ಗೆ ತೀರಾ ಅಸಮಾಧಾನಗೊಂಡರೆ ಅವನನ್ನು ‘ಮಂಗ’ ಎಂದು ಬೈಯ್ಯುತ್ತಿದ್ದರು. ತಾವು ಪಾಠ ಹೇಳುತ್ತಿದ್ದ ಅಲಾಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ತೀರಾ ಅಸಮಾಧಾನವಾದರೆ ‘ಮಲೆಮಂಗ’ ಎಂದರೆ ಅವರ ಕೋಪದ ತೀವ್ರತೆ ವಿದ್ಯಾರ್ಥಿಗಳಿಗೆ ಅರಿವಾಗುತ್ತಿತ್ತು. ವಿದ್ಯಾರ್ಥಿಗಳನ್ನು ‘ನೀವು’ ಎಂದು ಬಹುವಚನದಿಂದ ಕರೆಯಲಾರಂಭಿಸಿದವರು ಅವರೇ. ವಿದ್ಯಾರ್ಥಿಗಳನ್ನು ‘ಚಿರಂಜೀವಿ’ಗಳೆಂದು ಕರೆಯುತ್ತಿದ್ದ ಅವರು ತಮ್ಮ ಪತ್ನಿ ತೀರಿಕೊಂಡ ದುಃಖವನ್ನು ಮರೆಯಲು ಮರುದಿನದಿಂದಲೇ ಕಾಲೇಜಿಗೆ ಹೋಗಿ ಪಾಠ ಮಾಡಲಾರಂಭಿಸಿದರು.

ಮುಳಿಯ ತಿಮ್ಮಪ್ಪಯ್ಯನವರ ಕೃತಿಗಳು

ಮುಳಿಯ ತಿಮ್ಮಪ್ಪಯ್ಯನವರ ಲಭ್ಯ ಕೃತಿಗಳು ಸುಮಾರು ಇಪ್ಪತ್ತೆರೆಡು. ಅವುಗಳನ್ನು ಈ ಕೆಳಗಿನಂತೆ ಘಟ್ಟಗಳಾಗಿ ಗಮನಿಸಬಹುದು:

ಮೊದಲನೆಯ ಘಟ್ಟ (ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದ ಕಾಲ)

1.ಚಂದ್ರಾವಲೀ ವಿಲಾಸಂ (ಹಳಗನ್ನಡ ಗದ್ಯಕಾವ್ಯ) – 1913. 2. ಸೊಬಗಿನ ಬಳ್ಳಿ (ಅಚ್ಚಗನ್ನಡ ಪದ್ಯಕಾವ್ಯ) – 1917, 1931. 3. ನಡತೆಯ ನಾಡು (ಅಚ್ಚಗನ್ನಡ ಗದ್ಯ ಕೃತಿ)- 1917. 4. ಪ್ರೇಮಪಾಶ (ಭಾಮಿನಿ ಷಟ್ಪದಿಯ 57 ಪದ್ಯಗಳ ಖಂಡಕಾವ್ಯ) – 1917. 5.ಬಡಹುಡುಗಿ (ಕಥನ ಕಾವ್ಯ) – 1917. 6.ಹಗಲಿರುಳು (ನಾಟಕ) – 1918.

ಎರಡನೆಯ ಘಟ್ಟ (ಅಲಾಶಿಯಸ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಕಾಲ)

7. ಪಶ್ಚಾತ್ತಾಪ (ಸಾಮಾಜಿಕ ಕಾದಂಬರಿ) -1934, 1945. 8. ನಾಡೋಜ ಪಂಪ (ಸಂಶೋಧನೆ. ಜೀವನ ಮತ್ತು ಕೃತಿಗಳ ಸಮೀಕ್ಷೆ) – 1938, 1977. 9. ಆದಿಪುರಾಣ ಸಂಗ್ರಹ (ಪಂಪನ ಆದಿಪುರಾಣದ ಸಂಗ್ರಹ ಗದ್ಯಾನುವಾದ) – 1938. 10. ನವನೀತ ರಾಮಾಯಣ (ರಗಳೆ ಕಾವ್ಯ. ಅಪೂರ್ಣ) – 1940. 11. ಸಮಸ್ತ ಭಾರತ ಸಾರ (ಪಂಪಭಾರತದ ಸೃಜನಶೀಲ ಗದ್ಯಾನುವಾದ) – 1941. 12. ತ್ರಿಪುರದಾಹ (ತ್ರಿಪುರದಾಹ ಸಾಂಗತ್ಯದ ಗದ್ಯಾನುವಾದ) – 1941. 13. ಶಿವರಾಮ ಚರಿತ – ಸಂಂಪಾದನೆ (ನತ್ತ ಮೆಟ್ಟುವ ಹಾಡು) – 1943. 14. ಪಾರ್ತಿ ಸುಬ್ಬ ( ಯಕ್ಷಗಾನ ಕವಿ ಪಾರ್ತಿ ಸುಬ್ಬನ ಜೀವನ ಮತ್ತು ಕೃತಿಗಳ ಸಮೀಕ್ಷೆ) – 1945. 15. ಕವಿರಾಜ ಮಾರ್ಗ ವಿವೇಕ (ಭಾಗ 1) (ಕೃತಿ – ಕೃತಿಕಾರನ ಬಗೆಗೆ ಸಂಶೋಧನಾತ್ಮಕ ಕೃತಿ) – 1948. 16. ವೀರ ಬಂಕೆಯ (ಐತಿಹಾಸಿಕ ಕಾದಂಬರಿ) – 1948, 1949, 1983, 1983. 17. ಕನ್ನಡ ಸಾಹಿತ್ಯ ಮತ್ತು ಇತರ ಉಪನ್ಯಾಸಗಳು (ವಿಮರ್ಶೆ) – 1950, 1950, 1965.

ಮರಣೋತ್ತರ: 18. ಕನ್ನಡ ನಾಡೂ ದೇಸೀ ಸಾಹಿತ್ಯವೂ (1927 ರಲ್ಲಿ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ. ಕೃತಿ ರೂಪದಲ್ಲಿ ಮರಣೋತ್ತರ ಪ್ರಕಟಣೆ) – 1954. 19. ರಾವುತ ರಂಗಪ್ಪ (ಅಪೂರ್ಣ ನಾಟಕ) – 1959. 20. ಕವಿರಾಜ ಮಾರ್ಗ ವಿವೇಕ (ಭಾಗ 2) ಸಂಪಾದಕರು – ಮುಳಿಯ ಕೇಶವ ಭಟ್ಟ – 1973. 21. ಸಂಸ್ಕೃತಿ (ಚಿಂತನೆ) – 1981. 22. ಸೂರ್ಯಕಾಂತಿ ಕಲ್ಯಾಣ (ಯಕ್ಷಗಾನ ಪ್ರಸಂಗ) – ಅಪ್ರಕಟಿತ. 23. ಅಜೋದಯ (ಚೊಚ್ಚಲ ಕೃತಿ) – ಅಲಭ್ಯ.

ಮಾರ್ಗಾನ್ವೇಷಕ ಕವಿ

ಮುಳಿಯ ತಿಮ್ಮಪ್ಪಯ್ಯನವರ ಮಹತ್ವ ಇರುವುದು ಅವರು ಕನ್ನಡ ಮಾರ್ಗ ಕಾವ್ಯ ಪರಂಪರೆಯನ್ನು ಆಧುನಿಕ ಕಾವ್ಯ ಪರಂಪರೆಗೆ ಬೆಸೆಯುವ ಕೊಂಡಿಯಾಗಿರುವುದರಿಂದಾಗಿ. ಅದು ಹೇಗೆಂದರೆ, ಅವರು 1913 ರಲ್ಲಿ ರಚಿಸಿದ ‘ಚಂದ್ರಾವಲೀ ವಿಲಾಸಂ’ ಎನ್ನುವುದು ಕವಿ ಮುದ್ದಣನನ್ನು ಅನುಸರಿಸಿ ಬರೆದ ಗದ್ಯ ಕಾವ್ಯ. ಒಂದರ್ಥದಲ್ಲಿ ಮುದ್ದಣನ ಸಾಹಿತ್ಯ ಮಾರ್ಗ ಆಧುನಿಕ ಯುಗಕ್ಕೆ ಹೊಂದುವುದೋ ಎಂದು ಪ್ರಯೋಗಿಸಿ, ಪರೀಕ್ಷಿಸಿ ನೋಡಿದಂತೆ ಈ ಗದ್ಯ ಕಾವ್ಯವನ್ನು ಅವರು ಬರೆದರು. ಅದು ವಿಫಲ ಕೃತಿಯೇ. ಅನುಕರಣೆಯಾಗಿ ಮತ್ತು ಭಾಗಶಃ ಕಂಡುಬರುವ ಪ್ರಯೋಗಶೀಲತೆಯ ಹೊಳವುಗಳಿಂದಾಗಿ ಅದಕ್ಕೆ ಐತಿಹಾಸಿಕ ಮಹತ್ವ ಇದೆ. ಇದರಲ್ಲಿ ಉಪಕಥೆಯಾಗಿ ಬರುವ ಮೋಹಿನೀ ವೃತ್ತಾಂತದಲ್ಲಿ (ಹೊಗೆಸೊಪ್ಪಿನ ಕಥೆ) ಯಮನು ಪುರುಷಾಸಕ್ತಳಾದ ಮೋಹಿನಿಯನ್ನು ಮದುವೆಯಾಗಿ ಅವಳನ್ನು ಹತೋಟಿಯಲ್ಲಿಡಲಾಗದೆ ಪಾಡುಪಡುವ ಕಥೆ, ಅವಳಿಗೆ ಶಾಪ ಕೊಟ್ಟು ಅವಳು ಹೊಗೆಸೊಪ್ಪಾಗಿ ಜನಿಸುವ ಕಾಲ್ಪನಿಕ ಕಥೆಯಿದೆ. ಇದನ್ನು ಮುಳಿಯರು ಅರೇಬಿಯನ್ ನೈಟ್ಸ್ ಕಥೆಗಳಿಂದ ಪಡೆದು ಬಳಸಿರುವುದಾಗಿದೆ. ಮುಖ್ಯ ಕಥೆಯೂ ಯಕ್ಷಗಾನ ಪ್ರಸಂಗವೊಂದನ್ನು ಗದ್ಯಕಾವ್ಯವಾಗಿ ಬರೆದುದಾಗಿದೆ. ಶೈಲಿಯು ಮುದ್ದಣನ ರಾಮಾಶ್ವಮೇಧವನ್ನೇ ಹೋಲುತ್ತದೆ. ಪ್ರಾರಂಭವೂ ಮುದ್ದಣನನ್ನು ನೆನಪಿಸುತ್ತದೆ. “ಓವೋ ತಣ್ಗಾಳಿಯ ಪೆಂಪೆ! ಅದೋ ವೇಣುವಿನ ಮಧುರ ಸ್ವರದಿಂ ಓರೊರ್ಮೆ ತಿರುಗುತ್ತಂ ದಾಕ್ಷಿಣ್ಯಯುಕ್ತಂ ಪರಿಮಳಂ ಬೀರುತ್ತಂ ಮೆಲ್ಲನೆ ಸಂಚರಿಸುಗುಂ…..” – ಹೀಗೆ ಇದು ಪ್ರಾರಂಭವಾಗುತ್ತದೆ. ಮುದ್ದಣ ಮನೋರಮೆಯರ ಬದಲಿಗೆ ಇಲ್ಲಿ ಕಬ್ಬಿಗ ಮತ್ತು ಭಾರತಿ ಇದ್ದಾರೆ. ಮುಳಿಯರ ಉದ್ದೇಶವೂ ಮುದ್ದಣನನ್ನು ಅನುಕರಿಸುವುದೇ ಆಗಿತ್ತು. ಅವರೇ ಹೇಳುವಂತೆ, ಇದು “ಅದ್ಭುತ ರಾಮಾಯಣ ರಾಮಾಶ್ವಮೇಧಗಳೆಂಬ ಆರಾಮಗಳಲ್ಲಿ ವಿಹರಿಸಲಿಚ್ಛಿಸುವವರಿಗೆ ಪ್ರವೇಶದ್ವಾರವಾಗಿದೆ.”

ಅವರು ನಂತರ 1917 ರಲ್ಲಿ ಪ್ರಕಟವಾದ ಮೂರು ಕೃತಿಗಳಲ್ಲಿ ಎರಡು ಪ್ರಯೋಗಗಳನ್ನು ಮಾಡಿದ್ದಾರೆ (ಇವುಗಳನ್ನು 1917 ರ ಮುಂಚೆಯೇ ಒಂದೊಂದಾಗಿ ಬರೆದಿರಬಹುದು).

ಅವುಗಳಲ್ಲಿ ಒಂದು – ‘ಸೊಬಗಿನ ಬಳ್ಳಿ’ ಎನ್ನುವ ಮಹತ್ವದ ಅಚ್ಚಗನ್ನಡ ಕಾವ್ಯ. ಆಂಡಯ್ಯನ ‘ಕಬ್ಬಿಗರ ಕಾವ’ದ ಮಾದರಿಯಲ್ಲಿ ಯಾವ ಸಂಸ್ಕೃತ ಶಬ್ದವನ್ನೂ ಬಳಸದೆ, ಅಂತಹ ಸಂದರ್ಭ ಬಂದಾಗ ಸ್ವತಃ ಕನ್ನಡ ಶಬ್ದಗಳನ್ನು ಠಂಕಿಸಿ ಬಳಸುವ ವಿಧಾನ ‘ಅಚ್ಚಗನ್ನಡ’ ವಿಧಾನ. ಉದಾಹರಣೆಗೆ, ‘ದ್ವಾರಕೆ’ ಎಂದು ಬಳಸಬೇಕಾದಲ್ಲಿ ‘ದೋರಗೆ’ ಎಂದು ಬಳಸುವುದು. ಇದೊಂದು ರೀತಿ ಖಡ್ಗದ ಮೇಲಿನ ನಡಿಗೆಯಂತೆ. (ಕಡೆಗೂ ಮುಳಿಯ ತಿಮ್ಮಪ್ಪಯ್ಯ ಎರಡು ಮೂರು ಸಂಸ್ಕೃತ ಶಬ್ದಗಳನ್ನು ಬಳಸಿರುವುದನ್ನು ವಿಮರ್ಶಕರು ಗುರುತಿಸಿದ್ದಾರೆ! ಬಹುಶಃ ಅವರಿಗೆ ಅರಿವಿಲ್ಲದೆ ಅವು ಸೇರಿಹೋಗಿರಬೇಕು).

ರಶ್ಯನ್ ರೂಪನಿಷ್ಠ ವಿಮರ್ಶಕರಾದ ಶ್‍ಕ್ಲೋವ್‍ಸ್ಕಿ ಮತ್ತು ರೋಮನ್ ಯಾಕಬ್ಸನ್ ಹೇಳುವ ಪ್ರಕಾರ, ಉತ್ತಮ ಕಾವ್ಯದಲ್ಲಿ ಪದಬಳಕೆ ಮತ್ತು ಛಂದಸ್ಸುಗಳ ಮೂಲಕ ‘ಅಪರಿಚಿತೀಕರಣ’ ಗುಣವನ್ನು ಕೊಟ್ಟು ಕಾವ್ಯದ ಭಾಷೆಯನ್ನು ದಿನನಿತ್ಯದ ಭಾಷೆಗಿಂತ ಬೇರೆಯೇ ಆದ ಭಾಷೆಯನ್ನಾಗಿ ರೂಪಿಸಿರುವ ಕಾರಣ ಅದು ಉತ್ತಮ ಕಾವ್ಯವಾಗಿರುತ್ತದೆ. ‘ಸೊಬಗಿನ ಬಳ್ಳಿ’ ಕಾವ್ಯದ ಯಶಸ್ಸು ಈ ಬಗೆಯದು. ಈ ಕಾವ್ಯ ನವೋದಯ ಕಾಲದ ಓದುಗರಿಗೆ ಇಷ್ಟವಾಗಿದ್ದ ಕಾವ್ಯ. ಮುಳಿಯರು ಅಚ್ಚಗನ್ನಡದ ಬಳಕೆಯಲ್ಲಿ ಮುದ್ದಣನ ಗದ್ಯ ಮಾರ್ಗವನ್ನು ಬಿಟ್ಟು ಪದ್ಯ ಮಾರ್ಗವನ್ನು ಪ್ರಯೋಗಿಸಿ ಪರಿಶೀಲಿಸಿದ್ದನ್ನು ಇಲ್ಲಿ ಗುರುತಿಸಬಹುದು. ಇದು ಅವರಿಗೆ ಯಶಸ್ಸನ್ನು ನೀಡಿ ಸಹೃದಯರ ಪ್ರೀತಿಗೆ ಪಾತ್ರವಾಯಿತು.

`ಸೊಬಗಿನ ಬಳ್ಳಿ’ ಭಾಗವತದ ಶಂಬರಾಸುರ ವಧೆಯ ಕತೆಯನ್ನು ಸ್ವಲ್ಪ ಬದಲಾಯಿಸಿದ ಕೃತಿ. ಅಚ್ಚಗನ್ನಡವನ್ನು (ಆಂಡಯ್ಯನ ನಂತರ) ಬಳಸಿದ ಮೊದಲನೆ ಕೃತಿ ಎನ್ನುವ ಕೀರ್ತಿ ಇದಕ್ಕಿದೆ. “ಎಲ್ಲೆಲ್ಲಿಯೂ ಸಂಸ್ಕೃತವನ್ನು ತುರುಕಿಸಬೇಕು; ಸಂಸ್ಕೃತವನ್ನುಳಿದರೆ ಕನ್ನಡದ ಅಸ್ತಿತ್ವವೆ ಇಲ್ಲದಂತೆ; ಎಂದು ಹೇಳುವವರ ಸಂಸ್ಕೃತಾತಿಕ್ರಮವು ಯೋಗ್ಯವಲ್ಲವೆಂಬುದನ್ನು ತಿಳಿಸಲಿಕ್ಕಾಗಿ, ಈಗಿನ ಕಾಲದಲ್ಲಿಯೂ ಇರುವ ಕನ್ನಡದ ಸ್ವಾತಂತ್ರ್ಯವನ್ನು ತೋರಿಸಲಿಕ್ಕಾಗಿ ಮಾತ್ರವೇ ಇದನ್ನು ಬರೆದುದು” ಎಂದು ಅವರೇ ಮುಮ್ಮಾತಿನಲ್ಲಿ ಹೇಳಿದ್ದಾರೆ.

`ಸೊಬಗಿನ ಬಳ್ಳಿ’ ಯ ವಸ್ತು ಪೌರಾಣಿಕ. ಭಾಗವತದ ಶಂಬರಾಸುರ ವಧೆಯ ಕತೆಯನ್ನು ಸ್ವಲ್ಪ ಬದಲಾಯಿಸಿದ ಕೃತಿ ಅದು. ಇದರ ಕಥಾಭಾಗ ಹೀಗೆ: ದ್ವಾರಕೆಯಲ್ಲಿ ರುಕ್ಮಿಣಿ ಸಂತಾನಾಪೇಕ್ಷೆಯನ್ನು ವ್ಯಕ್ತಪಡಿಸಿದಾಗ ಶ್ರೀಕೃಷ್ಣನು ಶಂಬರಾಸುರನನ್ನು ಕೊಲ್ಲುವ ಮಗನನ್ನು ಅವಳಲ್ಲಿ ಪಡೆಯುವೆಮೆಂದು ಹೇಳುತ್ತಾನೆ. ಹಾಗೆ ಹುಟ್ಟಿದವನೇ ‘ಇಚ್ಚೆಗ’.

ಶಂಬರನು ಕಾಡಿಗೆ ಬೇಟೆಯಾಡಲು ಹೋದಾಗ, ಗಂಡ ಕಾಮನನ್ನು ಕಳೆದುಕೊಂಡ ‘ಇಚ್ಚೆಗಳು’ (ರತಿಯು) ಕಾಡುಪಾಲಾಗಿದ್ದವಳು ಈಗ ಪೊದೆಗಳೆಡೆಯಿಂದ ಹೊರಗೆ ಬಂದು, ತನಗೆ ಶಂಬರಾಸುರನ ಮನೆಯಲ್ಲಿ ಆಶ್ರಯ ಕೊಡಬೇಕು, ಕೆಲಸ ಮಾಡಿಕೊಂಡಿರಬೇಕೆಂದು ಕೋರಿಕೊಳ್ಳುತ್ತಾಳೆ. ಶಂಬರನು ಅವಳನ್ನು ಅಡಿಗೆಯ ಕೆಲಸಕ್ಕೆಂದು ಕರೆದೊಯ್ಯುತ್ತಾನೆ (ಆ ಭಾಗದ ಪದ್ಯಗಳನ್ನು ಕೆಳಗೆ ಕೊಡಲಾಗಿದೆ).
ನಾರದರು ಆ ಮಗುವಿನಿಂದಲೇ ನಿನಗೆ ಮರಣ ಎಂದು ತಿಳಿಸಿದಾಗ ಶಂಬರನು ದ್ವಾರಕೆಗೆ ಹೋಗಿ, ಮಗುವನ್ನು ಕದ್ದು ಸಮುದ್ರಕ್ಕೆ ಎಸೆಯುತ್ತಾನೆ. ಆದರೆ ಕಡಲು ಅದನ್ನು ದಡಸೇರಿಸಿ, ಮೀನುಗಾರನೊಬ್ಬನು ಅದನ್ನು ಅದನ್ನು ರಕ್ಷಿಸಿ ಶಂಬರನಿಗೆ ಕೊಡುತ್ತಾನೆ. ಶಂಬರನು ಅದನ್ನು ಅಡುಗೆಯವಳಿಗೆ (ರತಿ) ಸಾಕಲು ಕೊಡುತ್ತಾನೆ.

ಒಮ್ಮೆ ರತಿಯು ಹೂದೋಟದಲ್ಲಿ ದುಃಖಿಸುತ್ತಿದ್ದಾಗ ನಾರದರು ಬಂದು, ‘ಕಾಮನು (ಇಚ್ಚೆಗನು) ಇಲ್ಲಿಗೆ ಬರುವನು, ಅವನು ಶಂಬರಾಸುರನನ್ನು ವಧಿಸುವನು, ನಿನಗೆ ಹಿಂದಿನ ನಿನ್ನ ರೂಪ ಮರಳಿ ಬರುವುದು’ ಎಂದು ಸಮಾಧಾನ ಪಡಿಸುತ್ತಾರೆ. ರತಿಗೆ ಹಿಂದಿನ ಸೌಂದರ್ಯ ಮರಳುತ್ತದೆ. ಶಂಬರಾಸುರನು ಅಲ್ಲಿಗೆ ಬಂದು ರತಿಯ ಸೌಂದರ್ಯಕ್ಕೆ ಮರುಳಾಗಿ ಅವಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆಗ ಇಚ್ಚೆಗನು ಕಾಮನಾಗಿ ಅವನನ್ನು ಕೊಂದು ರತಿಯೊಂದಿಗೆ ದ್ವಾರಕೆಗೆ ಮರಳುತ್ತಾನೆ.

ಈ ಕಥೆ ಭಾಗವತದಲ್ಲಿದೆ. ಕೃಷ್ಣ ರುಕ್ಮಿಣಿಯರ ಮಗ, ಕಾಮನ ಅವತಾರವಾದ ಪ್ರದ್ಯುಮ್ನನನ್ನು ಶಂಬರ ಕಡಲಿಗೆಸೆದಾಗ ಅದನ್ನೊಂದು ಮೀನು ತಿಂದಿರುತ್ತದೆ. ಮೀನನ್ನು ಅಡಿಗೆಯ ಕೆಲಸಕ್ಕಿದ್ದ ರತಿ ಕತ್ತರಿಸಿದಾಗ ಪ್ರದ್ಯುಮ್ನ ಹೊರಬೀಳುತ್ತಾನೆ. ಆ ಕಥೆಯನ್ನು ಮುಳಿಯರು ಅಲ್ಲಲ್ಲಿ ಸರಳೀಕರಿಸಿದ್ದಾರೆ ಮತ್ತು ಬದಲಾಯಿಸಿದ್ದಾರೆ.

ಈ ಕಾವ್ಯದಲ್ಲಿ ಎಂಟು ‘ಮುಗುಳು’(ಭಾಗ)ಗಳಿದ್ದು ಪ್ರತಿಯೊಂದು ಮುಗುಳು ಕೂಡ ಬೇರೆ ಬೇರೆ ಛಂದಸ್ಸುಗಳಲ್ಲಿರುವುದು ಅದರ ವೈಶಿಷ್ಟ್ಯ ಅದನ್ನು ತಿಳಿಯಲಿಕ್ಕಾಗಿ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

ಸೊಬಗಿನ ಬಳ್ಳಿ ಕಾವ್ಯದ ಆಯ್ದ ಭಾಗ

ಮುಗಿಲಿರದ ಮಳೆಯೋ ಮಳೆಗೆಂದಾದ ಮುಗಿಲೋ
ಬೆಗಡಿರದ ಹುಚ್ಚೊ ಹುಚ್ಚಿಂಗಾದ ಬೆಗಡೋ
ಬಗೆಯನಿಂತತ್ತಿತ್ತಲೆಳೆವ ಕವಲೆಡೆಯೊಳ್
ನೆಗೆದುದರಸನ ಮೋರೆಯೊಳ್ ನಗೆಯ ಮುಗುಳು  7

ಕಣ್ಣಾರೆ ಕಂಡುಂ ಪರಾಂಬರಿಸಬೇಕು
ಎನ್ನುವರ್ಬಲ್ಲವರು ತೊಡರಿದೇಂ ಸಾಕು
ರನ್ನೆಯೆಡೆಗೆಯ್ದಿ ನಿಟ್ಟಿಸುತಾಕೆಯೊಳವಂ
ಪನ್ನೀರ ಪನಿಯಮಾತಿಂ ತಂಪುಗೆಯ್ವೆಂ  8

ಎಂದೆಣಿಸಿ ಮನ್ನೆಯರನೊಡನೆ ಬೀಳ್ಕೊಡುತ
ಮುಂದೆಯ್ದು ವಾಕೆಳದಿಯಡಿಯೊಳಡಿಯಿಡುತ
ಒಂದರೆ ನಿವಿಸದಲ್ಲಿ ರಾಣಿಯರಮನೆಗೆ
ಬಂದು ನೋಡಿದನು ಬೇವಸವೇರೆಬಗೆಗೆ  9 

ಎಳವಳ್ಳಿದಳಿರು ಬಾಡಲ್ಕೆನಿಸು ಬಿಸುವು
ಕೊಳಬೇಕು ಮೆದುಮೆಯ್ಯ ಮಡದಿಯಾ ಕದಪು
ಜಳವಾಂತು ಕಂದಲುಯ್ಯಲೆಯೊಳೋಸರಿಸಿ
ಮಲಗಿರ್ದಳಳಲನೇಂ ತೂಗುತಿಹಳೆನಿಸಿ  10

ತಲೆಯಡಿಯೊಳೊಂದುಕೆಯ್ ತೂಂತಲಿನ್ನೊಂದು
ಜಳಜಳಿಪಕಂಬನಿಯನೊರಸುತಿರಲಂದು
ಗಳಿಲನಿನಿಯನ ಬರವನರಿಯುತಾಪನಿತು
ಅಳಲಮಸಿಪರೆದ ಮೋರೆಯನೊರಸಿ ಕೂತು 11

ಎರವುಗೊಂಡಾಂತ ಸಂತಸವನೇತೋರಿ
ಮಿರುಗುವ ಮುಗುಳ್ನೆಗೆಯ ಬಗೆಯನೇಬೀರಿ
ಅರಸಿಯಿರಲೊಳವರಿತು ಸಿರಿಯಾಣ್ಮನೆಂದಂ
ಸುರಿದ ಜೇನ್ನೆಯ್ಯೊಳಿನಿದಹುದೆ ಕಡಲಂದಂ  12

ನಲ್ಲೆ ಕತ್ತಲೆಯದಿನಿಸಿನಿಸಾಗಿ ಮುಸುಕೆ
ಮೆಲ್ಲಮೆಲ್ಲನೆ ಮಾಸುವಾ ಬಯ್ಗಿನಂಕೆ
ಯಲ್ಲಿಹುದು ಮೋರೆ ಕತ್ತಲೆಕವಿಯಲಿಹುದೆ
ಸೊಲ್ಲಿಸೀ ರಾಯನಿರೆ ಸಂದೆಯಂಬಡದೆ  13

ಅದೇ ವೇಳೆಗೆ ಮುಳಿಯರು ವಸ್ತುವಿನಲ್ಲಿ ಇನ್ನೊಂದು ಪ್ರಯೋಗವನ್ನು ಮಾಡಿದರು. ಕಾವ್ಯಕ್ಕೆ ಆಧುನಿಕ ವಸ್ತುವನ್ನು ಬಳಸಿಕೊಂಡು ತಮ್ಮ ಕಾಲದ ಕಥೆಗಳನ್ನು ಹೇಳುವ ಪ್ರಯತ್ನವನ್ನು ಅವರು ಮೊದಲು ಪ್ರಯೋಗಿಸಿ ನೋಡಿದ್ದು ‘ಪ್ರೇಮ ಪಾಶ’ ಎನ್ನುವ ಭಾಮಿನಿ ಷಟ್ಪದಿಯಲ್ಲಿರುವ 57 ಪದ್ಯಗಳ ಕಿರು ಕಾವ್ಯದಲ್ಲಿ. ಇದರಲ್ಲಿ ಮುಳಿಯರು ಆಧುನಿಕ ಭಾಷೆಯನ್ನು ಹಳೆಯ ಛಂದಸ್ಸಿನಲ್ಲಿ ಕೊಡಲು ಸ್ವಲ್ಪ ಕಷ್ಟಪಟ್ಟಿರುವುದು ಗೊತ್ತಾಗುತ್ತದೆ. ಅವರು ಅನ್ಯ ಭಾಷೆಯ ಪದ ಬಳಸಬಾರದು, ಅಚ್ಚಗನ್ನಡವನ್ನೇ ಬಳಸಬೇಕು ಎಂಬ ತಮ್ಮ ಕಟ್ಟುಪಾಡು ಕಾವ್ಯದ ಬೆಳವಣಿಗೆಗೆ ಸಾಧುವಲ್ಲ ಎಂದು ಕಂಡುಕೊಂಡು ದಿನಬಳಕೆಯ ಭಾಷೆಯನ್ನು ಬಳಸಲು ಪ್ರಾರಂಭಿಸಿದುದು ಈ ಕಾವ್ಯದಲ್ಲಿ ಕಂಡುಬರುವ ಬದಲಾವಣೆ. ಇಲ್ಲಿ ಬರುವ ಉಪಮೆಗಳೂ ತುಳುನಾಡಿನ ಗ್ರಾಮೀಣ ಬದುಕಿನವು. ಉದಾಹರಣೆಗೆ – ‘ಅವಳಾಶೆ ಕಲ್ಲಿಲ್ಲದ ಗುಳಿಗನಂತೆ ಅಲೆದುದಿರಬಹುದು’ ಎಂಬ ಉಪಮೆಯನ್ನು ನೋಡಿ. ತುಳು ನಾಡಿನವರಿಗಲ್ಲದೆ ಬೇರೆಯವರಿಗೆ ಇದು ಅರ್ಥವಾಗುವುದು ಕಷ್ಟ! ಗುಳಿಗ ಒಂದು ದೈವ. ಇಂತಹ ದೈವಭೂತಗಳನ್ನು ಯಾರಾದರೂ ಭಕ್ತರು ‘ಕಲ್ಲು ಹಾಕಿ’ (ಅಂದರೆ ಕಲ್ಲಿನಲ್ಲಿ ಆವಾಹಿಸಿ ಪ್ರತಿಷ್ಠಾಪಿಸಿ) ನಂಬಿದರೆ ಮಾತ್ರ ಅವುಗಳಿಗೊಂದು ನೆಲೆ, ಅವುಗಳಿಗೂ ಜನರಿಗೂ ದ್ವಿಪಕ್ಷಕ್ಕೂ ನೆಮ್ಮದಿ. ಇಲ್ಲದಿದ್ದರೆ ಅವು ಜನರಿಗೆ ‘ಉಪದ್ರವ’ ಕೊಡುತ್ತಾ ಇರುತ್ತವೆ. ತಮಗೊಂದು ಕಲ್ಲು ಹಾಕಿ ನಂಬುವವರೆಗೆ ಅವುಗಳು ಕೂಡ ಅತಂತ್ರ. (ಇಂತಹ ರೂಪಕಗಳು ಅಡಿಗರಲ್ಲೂ ಇವೆ). ಈ ಕವಿತೆಯ ಕೆಲವು ಪದ್ಯಗಳು ಹೀಗಿವೆ:

ಈ ಕವಿತೆಯಲ್ಲಿ ನಾಯಕ ‘ರಾಜ’ ಬಗ್ದಾದಿಗೆ ಯುದ್ಧಕ್ಕೆ ಹೋಗುತ್ತಾನೆ, ಅವನು ಹಡಗಿನಿಂದ ಸಮುದ್ರಕ್ಕೆ ಸತ್ತನೆಂದು ಸುಳ್ಳು ಪತ್ರವನ್ನು ಅವನ ಪ್ರಿಯತಮೆ ‘ಪುಟ್ಟಮ್ಮ’ಳಿಗೆ ಅವರ ಪ್ರೇಮವನ್ನು ಸಹಿಸದವರು ಬರೆದಿರುತ್ತಾರೆ. ಇಲ್ಲಿ ಬರುವ ಸನ್ನಿವೇಶಗಳು, ‘ಅಂಚೆಯಾಳು’, ‘ಇಂಗ್ರಜಿ’ ಎನ್ನುವಂತಹ ಶಬ್ದಗಳು ಆಧುನಿಕ ಕಾಲಕ್ಕೆ ಸಂಬಂಧಿಸಿವೆ. ಇದನ್ನು ಕಥನ ಕವನ ಅನ್ನಬಹುದು. ಇದರ ನಿರೂಪಣೆಯ ತಂತ್ರವು ಸಣ್ಣ ಕತೆಯಂತಿದೆ. ನಗರದಲ್ಲಿರುವ ನಿರೂಪಕನನ್ನು ಸಂಜೆ ಹೊತ್ತಿನ ವಾಕಿಂಗಿಗಾಗಿ ಮಿತ್ರರು ಕರೆಯುತ್ತಾರೆ. ದಾರಿಯಲ್ಲಿ ಒಂದು ಮನೆಯ ಬಾಗಿಲಲ್ಲಿ ಕಥಾನಾಯಕಿ ಚಿಂತಾಮಗ್ನಳಾಗಿರುವುದನ್ನು ನಿರೂಪಕ ಕಾಣುತ್ತಾನೆ. ನಂತರ ಅವಳಿಗೆ ಪತ್ರ ಸಿಕ್ಕಿದ ಕತೆ, ಅವಳ ದುಃಖಕ್ಕೆ ಕಾರಣವೇನೆಂದು ನಗರದ ಜನರು ತಲೆಕೆಡಿಸಿಕೊಳ್ಳದ ಬಗ್ಗೆ ನಿರೂಪಕನ ಟೀಕೆ (ಅಲ್ಲಲ್ಲಿ ನಗರಜೀವನದ ಬೇರೆ ಟೀಕೆಯೂ ಇದೆ. ಉದಾಹರಣೆಗೆ: “ಹತ್ತಿರದ ವರ ಕಾಮಧೇನುವನು ಗಣನೆಗೆಯ್ಯದೆ ಡಬ್ಬಿಹಾಲನು ಮನದಣಿಯೆ ಕುಡಿಯುವರು”). ಎರಡನೆಯ ಭಾಗದಲ್ಲಿ ಪುಟ್ಟಮ್ಮನ ಆತ್ಮಹತ್ಯಾ ಪ್ರಯತ್ನ, ಕಾಡಿನಲ್ಲಿ ರಾತ್ರಿ ಹೊತ್ತು ಮರಕ್ಕೆ ನೇಣುಹಾಕಿಕೊಳ್ಳಲು ಹೋದ ಅವಳನ್ನು ‘ರಾಜ’ ಕಾಪಾಡಿ ಕಥನ ಸುಖಾಂತವಾಗುತ್ತದೆ. ಇದನ್ನು ದೇಶದ ಪರಿಸ್ಥಿತಿಗೆ ರೂಪಕವಾಗಿಸುವ ಪ್ರಯತ್ನ ಕವಿಯದು.

ಈ ರೀತಿಯ ಅವಾಸ್ತವ ಅಥವಾ ಭಾವುಕ ಸನ್ನಿವೇಶಗಳ ಸಣ್ಣಕತೆಗಳನ್ನು ನವೋದಯದ ಮೊದಲನೆಯ ಘಟ್ಟದಲ್ಲಿ (ಈ ಕಥನ ಕವನದ ನಂತರ) ಕೆ. ಹೈದರ್, ಎಸ್. ವೆಂಕಟರಾಜ (ಮೂವತ್ತರ ದಶಕದಲ್ಲಿ) ಬರೆದಿದ್ದಾರೆ.

ಈ ಕಾವ್ಯದಲ್ಲಿ ತಮಗೆ ಇದರ ‘ಅವಾಸ್ತವ’ ಸನ್ನಿವೇಶದಿಂದಾಗಿ ಯಶಸ್ಸು ಸಿಗಲಿಲ್ಲ ಎನ್ನುವ ಅರಿವು ಮುಳಿಯರಿಗೇ ಆಗಿತ್ತು. ಹಾಗಾಗಿ ಅವರು ಈ ಕಾವ್ಯವನ್ನು ಮತ್ತೆ ಹೆಚ್ಚಾಗಿ ಉಲ್ಲೇಖಿಸಿರಲಿಲ್ಲ. ಹಾಗಾಗಿ ಅವರ ಕೃತಿಗಳ ಪಟ್ಟಿಯಲ್ಲಿ ಇದರ ಹೆಸರೇ ಇಲ್ಲ! (ಮುಳಿಯ ರಾಘವಯ್ಯ ಮತ್ತು ಸುಬ್ರಹ್ಮಣ್ಯ ಭಟ್ ಇಬ್ಬರೂ ಉಲ್ಲೇಖಿಸುವುದಿಲ್ಲ). ವಿಕಿಪೀಡಿಯದಲ್ಲಿ ಇದನ್ನು ‘ಸಾಮಾಜಿಕ ಕಾದಂಬರಿ’ ಎಂದು ದಾಖಲಿಸಿದ್ದಾರೆ! ಮುಳಿಯರ ಶಿಷ್ಯ, ಸಂಬಂಧಿಕ, ಅವರ ಮನೆಯಲ್ಲಿಯೇ ಸ್ವಲ್ಪ ಕಾಲ ಇದ್ದ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಹೀಗೆನ್ನುತ್ತಾರೆ:

“ಪ್ರೇಮಪಾಶವೆಂಬ ತಿಮ್ಮಪ್ಪಯ್ಯನವರ ಒಂದು ಕೃತಿ ಮೈಸೂರಿನ ‘ಕಾದಂಬರೀ ಸಂಗ್ರಹ’ವೆಂಬ ಮಾಸಪತ್ರಿಕೆಯಲ್ಲಿ ಅಚ್ಚಾಗಿತ್ತೆಂದು ತಿಳಿದುಬಂದಿದೆ. ಇದು ಗದ್ಯದಲ್ಲಿತ್ತೋ, ಪದ್ಯದಲ್ಲಿತ್ತೋ, ಕಥಾವಸ್ತುವೇನು, ಇದರ ಸ್ಥಾನಮಾನವೇನು ಮುಂತಾದ ಯಾವ ವಿಷಯವೂ ಗೊತ್ತಿಲ್ಲ. ಅವರು ಸಹ ಇದರ ಪ್ರಸ್ತಾಪವನ್ನು ಮಾಡಿದಂತೆಯೇ ಇಲ್ಲ. ಪ್ರಾಯಶಃ ಅವರಿಗೆ ಅದು ತಮ್ಮ ಬಾಲಿಶ ಕೃತಿಯೆಂದು ತೋರಿದ್ದಿರಲೂ ಬಹುದು.” (ಪುಟ 48. ಮುಳಿಯ ತಿಮ್ಮಪ್ಪಯ್ಯ: ಜೀವನ ಮತ್ತು ಕಾರ್ಯ. ಕ.ಸಾ.ಪ. 1972.) ಅದು ಪ್ರಕಟವಾದ ಪತ್ರಿಕೆಯನ್ನು ನೋಡಿ ವಿಕಿಪಿಡಿಯ ಸಂಪಾದಕರು ಅದನ್ನು ಕಾದಂಬರಿ ಎಂದು ಪರಿಗಣಿಸಿರಬೇಕು. 1988 ರಲ್ಲಿ ಮುಳಿಯ ಮಹಾಬಲ ಭಟ್ಟರ ಸಂಪಾದಕತ್ವದಲ್ಲಿ ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಮಿತಿ ಪ್ರಕಟಿಸಿದ ‘ಮುಳಿಯ ತಿಮ್ಮಪ್ಪಯ್ಯ ಸಮಗ್ರ ಸಾಹಿತ್ಯ’ದ ಮೊದಲನೆಯ ಸಂಪುಟದಲ್ಲಿ ಇದು ಸೇರಿದೆ.

ಈ ಬಗೆಯ ಆಧುನಿಕ ವಸ್ತು ಮತ್ತು ಸನ್ನಿವೇಶಗಳ ಮೂಲಕ ಬದುಕಿನ ಅರ್ಥವನ್ನು ಬಗೆದು ತೋರಿಸಿ ಮಾರ್ಗದರ್ಶನ ಮಾಡುವ ವಿಧಾನವು ಸರಿಯಾದ ಮಾರ್ಗ ಎಂದು ತಿಳಿಯಲು ‘ಪ್ರೇಮ ಪಾಶ’ ಕಾವ್ಯರಚನೆಯಿಂದ ಮುಳಿಯರಿಗೆ ಸಾಧ್ಯವಾಯಿತು. ಅವರು ಸ್ವತಃ ಶ್ರೇಷ್ಠ ವಿಮರ್ಶಕರಾದುದರಿಂದ ಅವರಿಗೆ ಇದು ಅರಿವಾಯಿತು. ಆ ಕಾವ್ಯ ಬರೆಯುವಾಗಲೇ ಅವರು ಅದರ ವಸ್ತು ತೀರಾ ಅವಾಸ್ತವ (ರಾತ್ರಿ ಹೊತ್ತು ನಾಯಕಿ ನಿರಾಶೆಯಿಂದ ಕಾಡಿನ ಮರವೊಂದಕ್ಕೆ ನೇಣು ಹಾಕಿಕೊಳ್ಳಲು ಹೋಗುವುದು; ಅಲ್ಲಿಗೆ ಅವನ ಪ್ರಿಯಕರ ಬಂದು ತಡೆಯುವುದು, ಸುಳ್ಳು ಪತ್ರದ ಸತ್ಯಾಂಶವನ್ನು ಇಬ್ಬರೂ ಅರಿತುಕೊಂಡು ಸುಖಾಂತವಾಗುವುದು; ನಿಜವಾದ ಪಾಶದ ಬದಲಿಗೆ ಪ್ರೇಮಪಾಶದ ವಶವಾಗುವುದು) ಎನ್ನುವುದು ಮುಳಿಯರಿಗೇ ಗೊತ್ತಿತ್ತು. ತಮ್ಮ ಕಾವ್ಯ ‘ಶೀಲ ನಿರ್ಮಾಣಕ್ಕಾಗಿ’ ಎನ್ನುವ ಆಶಯವಿದ್ದುದರಿಂದ ಅವರು ಇದನ್ನು ಬರೆದಿದ್ದರು. ಆದರೂ ಒಂದು ಮಾತು ಕಾವ್ಯದ ಒಳಗೆಯೆ ಬಂದಿದೆ. ಹೀಗೆ –

ಕಟ್ಟು ಕತೆ ತಾನಲ್ಲವಿದು ನೀ
ವೆಷ್ಟಕೂ ನಂಬದೆ ಕವಿಯ ನುಡಿ
ಲೊಟ್ಟೆಯೆನ್ನುವಿರೇನು ಆಗಲಿ ಲೊಟ್ಟೆಯೇ ನಿಜದ||
ಗುಟ್ಟನರಿಯಿರಿ ಸಂಸ್ಕೃತಿಯೆನಲು
ಹುಟ್ಟಿ ಸಾವಾ ಸುಳ್ಳು ಅದರಿಂ
ಶ್ರೇಷ್ಟವಾಗಿಹ ಸತ್ಯರೂಪನ ಕಂಡು ಹಿಡಿವಂತೆ ||2-36||

ಆನುಷಂಗಿಕವಾಗಿ – ಆಡುಮಾತಿನ ಸೊಗಸನ್ನು ಇಲ್ಲಿ ಕಾಣಬಹುದು. “ಇದೆಲ್ಲ ಲೊಟ್ಟೆ ಎನ್ನುತ್ತೀರಾ? ಆಗಲಿ, ಹಾಗೆಯೇ ಆಗಲಿ, ಲೊಟ್ಟೆಯೇ!” ಎನ್ನುವುದು ತುಳುನಾಡಿನ ಆಡುಮಾತಿನ ಒಂದು ಬಗೆ. ಲೊಟ್ಟೆ ಅಂದರೆ ‘ಸುಳ್ಳಿನ ಕಂತೆ’!

ಈ ಕಾವ್ಯ ಪ್ರಕಟವಾದ ವರ್ಷ 1917 ಎಂದೇ ಇದ್ದರೂ ಇದು ‘ಬಡ ಹುಡುಗಿ’ ಕಾವ್ಯದಷ್ಟು ನಯಗಾರಿಕೆಯಿಲ್ಲದ ಕಾವ್ಯವಾದುದರಿಂದ ಇನ್ನೂ ಎರಡು ಮೂರು ವರ್ಷ ಹಿಂದೆಯೇ ಬರೆದಿರಬಹುದು ಅನಿಸುತ್ತದೆ.

ಒಂದರ್ಥದಲ್ಲಿ ಮುದ್ದಣನ ಸಾಹಿತ್ಯ ಮಾರ್ಗ ಆಧುನಿಕ ಯುಗಕ್ಕೆ ಹೊಂದುವುದೋ ಎಂದು ಪ್ರಯೋಗಿಸಿ, ಪರೀಕ್ಷಿಸಿ ನೋಡಿದಂತೆ ಈ ಗದ್ಯ ಕಾವ್ಯವನ್ನು ಅವರು ಬರೆದರು. ಅದು ವಿಫಲ ಕೃತಿಯೇ. ಅನುಕರಣೆಯಾಗಿ ಮತ್ತು ಭಾಗಶಃ ಕಂಡುಬರುವ ಪ್ರಯೋಗಶೀಲತೆಯ ಹೊಳವುಗಳಿಂದಾಗಿ ಅದಕ್ಕೆ ಐತಿಹಾಸಿಕ ಮಹತ್ವ ಇದೆ.

ಮುಳಿಯರ ‘ಬಡಹುಡುಗಿ’ (1917) ಆಧುನಿಕ ಯುಗದ ಸಣ್ಣ ಕಾವ್ಯ ಅಥವಾ ‘ಖಂಡ ಕಾವ್ಯ’ಗಳಿಗೆ ದಾರಿ ತೆರೆದುಕೊಟ್ಟ ಕಾವ್ಯ ಮಾರ್ಗ. ಇದರಲ್ಲಿ ಪಂಜೆ ಮಾರ್ಗದ ಗೋವಿಂದ ಪೈಗಳೂ ಕ್ರಮಿಸಿದ್ದಾರೆ. `ಬಡಹುಡುಗಿ’ ಆಧುನಿಕ ಭಾಷೆಯಲ್ಲಿದೆ. ಅದರ ವಸ್ತುವೂ ಸಮಕಾಲೀನ. ಅದು ಮಂಗಳೂರಿನಲ್ಲಿ ನಡೆದ ಘಟನೆಯೊಂದನ್ನಾಧರಿಸಿದ ಕಥನ ಕವನ. ಇದರಲ್ಲಿ ಎರಡು ಭಾಗಗಳಿವೆ. 25 ಮತ್ತು 42 ಚೌಪದಿಗಳಿಂದ ಕೂಡಿದ ಕಥನ ಕಾವ್ಯ ಇದು.

ಮಂಗಳೂರಿನ ಸೋಮಯ್ಯನಿಗೆ ನಾಗಮ್ಮನೆಂಬ `ಕೊರಳಿಗೆ ಬಂದ’ ಮಗಳು. ಸೋಮಯ್ಯನೈಗೆ ಕಿತ್ತು ತಿನ್ನುವ ಬಡತನ. ಅವನು ಒಬ್ಬ ಮದುವೆ ದಲಾಳಿ ಸುಬ್ಬ ದೀಕ್ಷಿತನ ವಂಚನೆಗೆ ಒಳಗಾಗಿ ಒಂದು ಸಾವಿರ ರೂಪಾಯಿಗೆ ಅವಳನ್ನು ಶಿರಸಿಯ ವೃದ್ಧ ಬ್ರಾಹ್ಮಣನಿಗೆ ಮಾರುತ್ತಾನೆ. ದೀಕ್ಷಿತನು ಆಮೇಲೆ ಹಣವನ್ನೂ ಕೊಡದೆ ವಂಚಿಸುತ್ತಾನೆ. ಹಲವು ವರ್ಷಗಳ ಇಬ್ಬರು ಗಂಡು ಮಕ್ಕಳೂ ಮಡಿಯುತ್ತಾರೆ. ನಂತರ ಇವರ ಪಾಡು ಇನ್ನಷ್ಟು ಕಷ್ಟವಾಗಿ ನಿರ್ಗತಿಕರಾಗಿ ಭಿಕ್ಷೆ ಬೇಡುತ್ತಾ ನಾಗಮ್ಮನನ್ನು ಮದುವೆ ಮಾಡಿಕೊಟ್ಟ ನಾಗೂರಿಗೆ ತಲುಪುತ್ತಾರೆ. ಅಲ್ಲಿ ಇವರನ್ನು ಕಂಡು ನಾಗಮ್ಮ ತನ್ನ ಮಗನ ಮೂಲಕ ವೃದ್ಧರನ್ನು ಮನೆಗೆ ಕರೆಯಿಸಿ, ತಾನೀಗ ಕ್ರೈಸ್ತಳಾದುದರಿಂದ ಅವರ ‘ಮಡಿ’ ಕೆಡದಂತೆ ಎಳನೀರನ್ನು ಕೊಡುವುದು ಸಮಾಜದ ವ್ಯವಸ್ಥೆಯನ್ನು ಪರಿಸ್ಥಿತಿಯ ವ್ಯಂಗ್ಯದ ಮೂಲಕ ಪರಿಚಯಿಸುವ ಪರಿಣಾಮಕಾರಿ ವಿಧಾನವಾಗಿದೆ. ನಾಗಮ್ಮ ಯಾಕೆ ಹೀಗೆ ಮಾಡಿದಳೆಂದರೆ, ನಾಗಮ್ಮನ ಮುದಿ ಗಂಡ ಸತ್ತು ನಿರ್ಗತಿಕಳಾದಾಗ ಕ್ರೈಸ್ತ ತರುಣನೊಬ್ಬ ಮರು ಮದುವೆಯಾಗಿ ಅವಳಿಗೆ ಬಾಳುಕೊಟ್ಟಿದ್ದನು. ಕೊನೆಗೆ ಸೋಮಯ್ಯ ದಂಪತಿ ನಿರ್ಗತಿಕರಾಗಿ ಅವಳ ಆಶ್ರಯಕ್ಕೆ ಹೋಗಿ ಬೀಳುವ ಹಾಗಾಗುತ್ತದೆ. ನಾಗಮ್ಮನ ಮಗ ಈ ದಂಪತಿಗಳ ಜಾತಿ ಕೆಡದಂತೆ ಅವರಿಗೆ ಪ್ರತ್ಯೇಕ ಮನೆ ಕಟ್ಟಿಸಿಕೊಟ್ಟು ಕಾಪಾಡುತ್ತಾನೆ. ಈ ಕಾವ್ಯದಲ್ಲಿ ಮುಳಿಯದವರ ಆಧುನಿಕ ಮನೋಭಾವವನ್ನು ಕಾಣಬಹುದು. ಈ ಕಾವ್ಯದ ಭಾಷೆ ಕೂಡ ಸಾಮಾನ್ಯರಿಗೆ ಅರ್ಥವಾಗುವಂತೆ ಸರಳವಾಗಿದೆ.

ಈ ಖಂಡ ಕಾವ್ಯದ ನೀತಿಯೂ ಪ್ರಗತಿಪರವಾಗಿದೆ:
ಜಾತಿ ಜಾತಿಯೆನ್ನುತ್ತ ಸಾವರಲ್ಲದೆ ಅದರ
ನೀತಿ ನೀರಾಗಿ ಕೆಳಹರಿಯದಂತೆ
ಓತು ಸರಿಯಾದ ಬಾಂಧವ್ಯದಿಂ ಕಟ್ಟದಿರ
ಲಾ ತಂದೆ ತಾಯಿಗಳ ತಪ್ಪಲ್ಲವೇ?

ಮುಳಿಯ ತಿಮ್ಮಪ್ಪಯ್ಯನವರ ಪ್ರಯೋಗಗಳಲ್ಲಿ ಈ ಕೊನೆಯ ಬಗೆ ಆಧುನಿಕ ಕವಿಗಳಿಗೆ ಅನುಸರಿಸಲು ಯೋಗ್ಯವಾಗಿತ್ತು. ಇದರ ಸರಳ ಸುಂದರ ಕನ್ನಡ, ದೇಸೀ ಪ್ರಯೋಗಗಳು, ಕರುಣರಸಾತ್ಮಕವಾದ ವಸ್ತು – ಇವೆಲ್ಲವುಗಳಿಂದ ಇದು ಕನ್ನಡದ ಶಾಶ್ವತ ಕೀರ್ತಿಯ ಕಾವ್ಯಗಳಲ್ಲಿ ಒಂದೆಂದು ಮಾನ್ಯವಾಗಿದೆ.

ಅವರ ನಂತರದ ತಲೆಮಾರಿನ ಕಡೆಂಗೋಡ್ಲು ಶಂಕರ ಭಟ್ಟರಿಗೆ ಮತ್ತು ಸೇಡಿಯಾಪು ಕೃಷ್ಣ ಭಟ್ಟರಿಗೆ ಸರಿಯಾದ ದಾರಿ ಎಂದು ಕಂಡಿತು. ಹಾಗಾಗಿ ಈ ಬಗೆಯ ಖಂಡ ಕಾವ್ಯಗಳನ್ನು ಅವರಿಬ್ಬರು ಪ್ರಧಾನವಾದ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಸ್ವೀಕರಿಸಿದರು. ಸಣ್ಣ ಕಾವ್ಯಗಳ ಮಾದರಿ ಅವರಿಬ್ಬರಲ್ಲಿ ಪರಿಪೂರ್ಣತೆಯನ್ನು ಪಡೆಯಿತು (ಮುಂದೆ ಈ ಇಬ್ಬರು ಕವಿಗಳನ್ನೂ ಪರಿಚಯ ಮಾಡಿಕೊಳ್ಳುವವರಿದ್ದೇವೆ). ಮುಳಿಯ ಪರಂಪರೆಯ ಕಥನ ಕವನಗಳಲ್ಲಿ ಮುಖ್ಯವಾದವುಗಳು – ಕಡೆಂಗೋಡ್ಲು ಶಂಕರ ಭಟ್ಟರ ಕಥನ ಕವನಗಳು, ಸೇಡಿಯಾಪು ಕೃಷ್ಣ ಭಟ್ಟರ ಸಣ್ಣ ಕಾವ್ಯಗಳು ಮತ್ತು ಕೊಳಂಬೆ ಪುಟ್ಟಣ್ಣ ಗೌಡರ `ಕಾಲೂರ ಚೆಲುವೆ’, ಅ. ಗೌ. ಕಿನ್ನಿಗೋಳಿಯವರ ಖಂಡ ಕಾವ್ಯಗಳು ಮತ್ತು ಕೆಲವು ಮೈನರ್ ಕವಿಗಳ ಖಂಡಕಾವ್ಯಗಳು.

ಗೋವಿಂದ ಪೈಗಳು ಮುಳಿಯ ತಿಮ್ಮಪ್ಪಯ್ಯನವರ ಖಂಡ ಕಾವ್ಯ ಪ್ರಯೋಗಗಳಿಂದ ಆಕರ್ಷಿತರಾಗಿದ್ದಿರಬೇಕು. ಅವರು ಈ ಪ್ರಕಾರದಲ್ಲಿ ಕೆಲವು ಒಳ್ಳೆಯ ಕೃತಿಗಳನ್ನು ನೀಡಿದ್ದಾರೆ. 1928ರಲ್ಲಿ ಪ್ರಕಟವಾದ `ಶ್ರೀ ಗೊಮ್ಮಟ ಜಿನಸ್ತುತಿ’ಯಲ್ಲಿ ಭರತ ಬಾಹುಬಲಿಯ ಕತೆಯನ್ನು ಮತ್ತೇಭವಿಕ್ರೀಡಿತ ವೃತ್ತದಲ್ಲಿ ಬರೆದಿದ್ದಾರೆ. ಖಂಡಕಾವ್ಯಗಳಾದ `ಗೊಲ್ಗೊಥಾ’ 1931ರಲ್ಲಿ ಮತ್ತು `ವೈಶಾಖಿ’ 1947ರಲ್ಲಿ ಪ್ರಕಟವಾದವು. ಜಿ. ಆರ್. ಪಾಂಡೇಶ್ವರ 1927ರಲ್ಲಿ `ಕೊಳಲಕೃಷ್ಣ’ ಖಂಡಕಾವ್ಯವನ್ನು ಪ್ರಕಟಿಸಿದರು.

`ಗೊಲ್ಗೊಥಾ’ ದಲ್ಲಿ ಬಳಸಿರುವ ಸರಳ ರಗಳೆಯನ್ನು ಪೈಗಳು `ಝಂಪೆ ರಗಳೆ’ ಎಂದು ಕರೆದಿದ್ದಾರೆ. ಮುಂದೆ ಮುಳಿಯ ತಿಮ್ಮಪ್ಪಯ್ಯನವರು ಬರೆಯಲಾರಂಭಿಸಿದ ‘ನವನೀತ ರಾಮಾಯಣ’ ಮಹಾಕಾವ್ಯವನ್ನು ಇದೇ ಝಂಪೆ ರಗಳೆಯಲ್ಲಿ ಬರೆದಿರುವುದು ಪರಸ್ಪರ ಪ್ರೇರಣೆಯನ್ನು ಸೂಚಿಸುವಂತಿದೆ. ಪೂರ್ಣಗೊಂಡಿದ್ದರೆ ‘ನವನೀತ ರಾಮಾಯಣ’ ಮುಳಿಯ ತಿಮ್ಮಪ್ಪಯ್ಯನವರ ಬಹಳ ಮುಖ್ಯ ಕೃತಿಯಾಗುತ್ತಿತ್ತು.

ನವನೀತ ರಾಮಾಯಣ: ಇದು ಝಂಪೆ ರಗಳೆ ಅಥವಾ ಈಗ ಸರಳ ರಗಳೆ ಎಂದು ಕರೆಯಲ್ಪಡುವ ಛಂದಸ್ಸಿನಲ್ಲಿರುವ ಮಹಾಕಾವ್ಯ. ಇದರ ಒಂದನೆಯ ಭಾಂಡ ಮಾತ್ರ ಪ್ರಕಟವಾಗಿದೆ. ರಾಮಾಯಣವನ್ನು ಮಥಿಸಿ, ನವನೀತವನ್ನು (ಬೆಣ್ಣೆ) ಓದುಗರಿಗೆ ಕೊಡುವ ಉದ್ದೇಶದಿಂದ ಕವಿ ಇದರ ರಚನೆಗೆ ಮನಮಾಡಿದ್ದಾರೆ. ಒಂದು ಪಾತ್ರೆಯಲ್ಲಿ (ಭಾಂಡ) ನಮಗೆ ಸಿಕ್ಕಿರುವುದಷ್ಟೂ ಪರಿಶುದ್ಧವಾದ ಕಾವ್ಯ ನವನೀತವೇ ಆಗಿದೆ.

ಕಾವ್ಯದ ಪ್ರಾರಂಭದಲ್ಲಿ ಬನವಾಸಿಯ ವರ್ಣನೆಯಿದೆ (ಅದನ್ನು ಇಲ್ಲಿ ಉದಾಹರಣೆಗೆ ಕೊಟ್ಟಿರುವ ಸಾಲುಗಳಲ್ಲಿ ಕಾಣಬಹುದು). ವೇದವತಿ ಇಲ್ಲಿನ ತಪೋವನದಲ್ಲಿ ತಪೋನಿರತೆಯಾಗಿದ್ದಳು. ರಾವಣನು ಅವಳ ಕೈಹಿಡಿಯಲು ಪ್ರಯತ್ನಿಸಿದಾಗ ಅವನ ಕೈಸೋಕಿತೆಂದು ಅವಳು ತನ್ನ ಶರೀರವನ್ನು ವೇದಸಾಗ್ನಿಯಲ್ಲಿ ಸುಟ್ಟುಹಾಕುತ್ತಾಳೆ. ರಾವಣನಿಗೆ ಬುದ್ಧಿ ಹೇಳಲು ವಾಲ್ಮೀಕಿ ಪುಲಸ್ತ್ಯನೊಡನೆ ಲಂಕೆಗೆ ಹೋಗುತ್ತಾನೆ. ಆದರೆ ಅವನು ಮಿಥಿಲೆಗೆ ಸೀತಾ ಸ್ವಯಂವರಕ್ಕೆ ಹೋಗಿದ್ದ ಕಾರಣ ಅವರಿಗೆ ಸಿಗುವುದಿಲ್ಲ. ಇತ್ತ ರಾವಣನಿಗೆ ಒಂದು ಸುದ್ದಿ ಸಿಕ್ಕಿರುತ್ತದೆ. ವಿಶ್ವಾಮಿತ್ರ ಋಷಿಯು ರಾಕ್ಷಸರ ಸಂಹಾರಕ್ಕೆ ರಾಮ ಲಕ್ಷ್ಮಣರನ್ನು ಎತ್ತಿ ಕಟ್ಟುತ್ತಿದ್ದಾನೆ; ಈಗ ಸೀತಾ ಸ್ವಯಂವರಕ್ಕೆ ಅವರನ್ನು ಕರೆದೊಯ್ಯುತ್ತಿದ್ದಾನೆ ಎನ್ನುವ ಸುದ್ದಿ. ರಾವಣನು ಮಯನ ನೆರವಿನಿಂದ ಮಾಯಾ ಮಿಥಿಲೆಯನ್ನು ನಿರ್ಮಿಸಿ, ರಾಮ ಲಕ್ಷ್ಮಣರ ದಾರಿ ತಪ್ಪಿಸಲು ಪ್ರಯತ್ನಿಸುತ್ತಾನೆ. ವಿಶ್ವಾಮಿತ್ರನ ರಕ್ಷೋಘ್ನ ಮಂತ್ರದಿಂದ ಮಾಯಾಮಿಥಿಲೆ ಬಯಲಾಗುತ್ತದೆ. ರಾಮ ಲಕ್ಷ್ಮಣರೊಡನೆ ವಿಶ್ವಾಮಿತ್ರ ನಿಜ ಮಿಥಿಲೆಗೆ ತಲುಪುತ್ತಾನೆ. ಸೀತೆಯನ್ನು ಗೆಲ್ಲುತ್ತಾನೆ.

ಇಲ್ಲಿ ಸೋತ ರಾವಣನು ಪರಶುರಾಮನನ್ನು ಕೆರಳಿಸಿ ರಾಮನತ್ತ ಕಳುಹಿಸುತ್ತಾನೆ. ನಂತರ ಅವನ ಪಟ್ಟಾಭಿಷೇಕದ ಸಂದರ್ಭದಲ್ಲಿ ಮಂಥರೆಯ ಮೂಲಕ ಕೈಕೆಯಿಯನ್ನು ಎತ್ತಿಕಟ್ಟಿ ರಾಮನನ್ನು ಕಾಡಿಗೆ ಕಳುಹಿಸುವಲ್ಲಿ ಸಫಲನಾಗುತ್ತಾನೆ. ರಾಮ, ಲಕ್ಷ್ಮಣ, ಸೀತೆ ಚಿತ್ರಕೂಟವನ್ನು ತಲುಪುವವರೆಗಿನ ಕಥೆಯನ್ನು ಅವರು ಬರೆದಿದ್ದಾರೆ.

ಮುಂದೆ ಇನ್ನೆರಡು ಭಾಂಡಗಳಲ್ಲಿ ರಾಮನ ಪಟ್ಟಾಭಿಷೇಕ ಮತ್ತು ಅಶ್ವಮೇಧಾನಂತರ ರಾಮ ಪರಂಧಾಮ ಇವುಗಳನ್ನು ಚಿತ್ರಿಸುವ ಉದ್ದೇಶ ಅವರಿಗಿತ್ತಂತೆ. ಅಲ್ಲದೆ ಉನ್ಮತ್ತ ರಾಘವ ನಾಟಕದಂತೆ ರಾಮನಿಗೆ ವಾಲಿವಧೆಯಿಂದ ಮಾನಸಿಕ ಕ್ಷೋಭೆ ಉಂಟಾಗುವಮ್ತೆ ಚಿತ್ರಿಸುವ ಯೋಚನೆಯೂ ಇತ್ತೆಂದು ತೆಕ್ಕುಂಜ ದಾಖಲಿಸಿದ್ದಾರೆ. ಆದರೆ ಸಾಹಿತ್ಯದಲ್ಲಿ ಇಂತಹ ಮಾಹಿತಿಗಳು ನಮ್ಮ ಕುತೂಹಲವನ್ನು ತಣಿಸಬಹುದೇ ಹೊರತು, ಪ್ರಕಟಿತ ಕೃತಿ ಎಲ್ಲಿಗೆ ನಿಂತಿದೆ ಅಷ್ಟೇ ಸತ್ಯ ಎಂದು ಪರಿಗಣಿಸಲಾಗುತ್ತದೆ.

ಈಗಿರುವ ಭಾಗಗಳೇ ಹೊಸ ಕಲ್ಪನೆಗಳೊಂದಿಗೆ ಸೊಗಸಾಗಿ ಬಂದಿವೆ. ಮುಳಿಯರು ಮಾಡಿಕೊಳ್ಳುವ ಬದಲಾವಣೆಗಳು ಓದುಗರಿಗೆ ಆನಂದ ಕೊಡುವಂತಿವೆ! ಉದಾಹರಣೆಗೆ ಮಂಥರೆಯನ್ನು ರಾವಣನು ಅಯೋಧ್ಯೆಯಲ್ಲಿ ‘ಪ್ಲಾಂಟ್’ ಮಾಡಿದ್ದನೆಂಬಂತೆ ಬದಲಾಯಿಸಿಕೊಂಡಿರುವುದು ಆ ಸನ್ನಿವೇಶಕ್ಕೂ ಒಂದು ಹೊಸ ಅರ್ಥವನ್ನು ಕೊಡುತ್ತದೆ.

ಮುಳಿಯರ ಸಹವರ್ತಿಗಳಾಗಿದ್ದ ತೆಕ್ಕುಂಜರು ಹೇಳುವಂತೆ, ಈ ಕಾವ್ಯದಲ್ಲಿ “ಆ ಕಾಲದ ರಾಜಕೀಯ ತಂತ್ರಗಳು ಇದರಲ್ಲಿ ಪ್ರತಿಮಾರೂಪದಲ್ಲಿ” ಇವೆ. ಹೀಗೆ ಇಲ್ಲಿ ತಂತ್ರ ಪ್ರತಿತಂತ್ರಗಳ ಮೂಲಕ ಪ್ರತಿನಾಯಕನ ಕೈವಾಡ ಉದ್ದಕ್ಕೂ ಇರುವಂತೆ ರಾಮಾಯಣವನ್ನು ಮರುವ್ಯಾಖ್ಯಾನಿಸುತ್ತ ಈ ಮಹಾಕಾವ್ಯವನ್ನು ರಚಿಸಲು ಅವರು ಉದ್ಯುಕ್ತರಾಗಿದ್ದರು. ಇದು ಪೂರ್ಣವಾಗಿದ್ದರೆ ಬಹಳ ವಿಶಿಷ್ಟವಾದ ಮಹಾಕಾವ್ಯವಾಗುತ್ತಿತ್ತು. ‘ನವನೀತ ರಾಮಾಯಣ’ ಆಧುನಿಕ ಕಾದಂಬರಿಯಂತಹ ಕಥಾ ಸಂವಿಧಾನವನ್ನು ಹೊಂದಿದೆ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ಕೂಡ ಇದು ಕಾದಂಬರಿಯಂತಿರುವುದನ್ನು ಗುರುತಿಸಿದ್ದಾರೆ.

ಮೇಲೆ ಪರಿಚಯಿಸಿದ ಕಾವ್ಯಕೃತಿಗಳನ್ನು ಮತ್ತೊಮ್ಮೆ, ಕಾಲಾನುಕ್ರಮದಲ್ಲಿ ಗಮನಿಸಿದರೆ ಮುಳಿಯ ತಿಮ್ಮಪ್ಪಯ್ಯನವರ ಪ್ರಯೋಗಶೀಲತೆಯ ಪಕ್ಷಿನೋಟ ದೊರಕುವುದು.

ತಿಮ್ಮಪ್ಪಯ್ಯನವರ ಕಾವ್ಯ ಕೃತಿಗಳು (ಬಿಡಿ ಕವಿತೆಗಳನ್ನು ಹೊರತುಪಡಿಸಿ)

ಪ್ರಯೋಗ: ಚಂದ್ರಾವಲೀ ವಿಲಾಸಂ (ಹಳಗನ್ನಡ ಗದ್ಯಕಾವ್ಯ) – 1913.
1.ಸೊಬಗಿನ ಬಳ್ಳಿ (ಅಚ್ಚಗನ್ನಡ ಪದ್ಯಕಾವ್ಯ) – 1917.
2. ಪ್ರೇಮಪಾಶ (ಭಾಮಿನಿ ಷಟ್ಪದಿಯ 57 ಪದ್ಯಗಳ ಖಂಡಕಾವ್ಯ) – 1917.
3. ಬಡಹುಡುಗಿ (ಕಥನ ಕಾವ್ಯ) – 1917.
4. ಪ್ರಬುದ್ಧ: ನವನೀತ ರಾಮಾಯಣ (ರಗಳೆ ಕಾವ್ಯ. ಅಪೂರ್ಣ) – 1940.

ಮುಳಿಯ ತಿಮ್ಮಪ್ಪಯ್ಯನವರ ಹೊಸ ಚಿಂತನೆಗಳು:

ಭಾರತೀಯ ಶಿಷ್ಟ ಸಾಹಿತ್ಯ ಮತ್ತು ದೇಸೀ ಸಾಹಿತ್ಯದ ಆಳವಾದ ಪರಿಚಯವಿದ್ದುದರಿಂದ ಮತ್ತು ಆಧುನಿಕ ಇಂಗ್ಲಿಷ್ ಶಿಕ್ಷಣ ಪಡೆಯದೆ ಇದ್ದುದರಿಂದ ಮುಳಿಯ ತಿಮ್ಮಪ್ಪಯ್ಯನವರಿಗೆ ಖಚಿತವಾದ ತಿಳಿವಳಿಕೆ ಮತ್ತು ಸ್ವತಂತ್ರವಾಗಿ ಯೋಚಿಸಿ ಹೇಳುವ ಧೈರ್ಯವಿತ್ತು. ಮಂಜೇಶ್ವರ ಗೋವಿಂದ ಪೈಗಳು ಪ್ರಾಸ ಬಿಟ್ಟು ಪದ್ಯ ಬರೆದಾಗ ಇಂಗ್ಲಿಷ್ ವಿದ್ಯೆಗೆ ಒಲಿದ ಪಂಜೆ ಮಂಗೇಶರಾಯರೂ ಸೇರಿದಂತೆ ಎಲ್ಲರೂ ಅವರನ್ನು ಖಂಡಿಸಿದಾಗ ತಿಮ್ಮಪ್ಪಯ್ಯನವರೊಬ್ಬರೇ ಪೈಗಳನ್ನು ಸಮರ್ಥಿಸಿಕೊಂಡರು. ಪದ್ಯಕ್ಕೆ ಪ್ರಾಸವಿರಲೇಬೇಕೆಂಬುದೇನೂ ಇಲ್ಲವೆಂದು ಪ್ರತಿಪಾದಿಸಿದರು. ಇದರಿಂದ ಅವರು ಪರಂಪರೆಗೆ ಬದ್ಧರಾಗಿದ್ದೂ ಸಂಪ್ರದಾಯ ಶರಣರಾಗಿರಲಿಲ್ಲವೆನ್ನುವುದು ತಿಳಿಯುತ್ತದೆ. ಸೇಡಿಯಾಪು ಹೀಗೆ ಹೇಳುತ್ತಾರೆ. “ತಿಮ್ಮಪ್ಪಯ್ಯನವರು ಹೊಸತನ್ನೇ ಸದಾ ಹಾರೈಸುತ್ತಿದ್ದರು. ಹೊಸತನ್ನೇ ಸೃಜಿಸಲು ಸದಾ ಯತ್ನಿಸುತ್ತಿದ್ದವರು. ಆದರೆ ಯಾವುದೋ ಪರಭಾಷೆಯಲ್ಲಿ ಇದ್ದುದನ್ನು ಕನ್ನಡಕ್ಕೆ ತಂದು-ಅಂಗಡಿಯಿಂದ ಹೊಸ ಸೀರೆ ತರುವಂತೆ ತಂದು-ಇದು ಹೊಸತು ಎಂದು ಕಾಣಿಸುವುದು ಅವರ ಮಾರ್ಗವಾಗಿರಲಿಲ್ಲ. ಮಗ್ಗದಿಂದಲೇ ಎತ್ತಿ ತಂದ ಹೊಸ ಸೀರೆಯ ಹಾಗೆ ಕನ್ನಡದಲ್ಲಿಯೇ ಹೊಸತನ್ನು ಸೃಷ್ಟಿಸುವುದು ಅವರ ಗುರಿ.”

ಅಚ್ಚಗನ್ನಡದ ಹುಚ್ಚರಾದ ಮುಳಿಯದವರ ಕೃತಿಗಳಲ್ಲಿ ಅಪೂರ್ವವಾದ ಶಬ್ದಪ್ರಯೋಗಗಳೂ, ದೇಸೀ ಗಾದೆಗಳೂ, ಅವರೇ ರಚಿಸಿದ ನುಡಿಗಟ್ಟುಗಳೂ ಕಾಣಸಿಗುತ್ತವೆ. ಮುಳಿಯ ತಿಮ್ಮಪ್ಪಯ್ಯನವರ ಕಾವ್ಯ ಹಾಗೂ ಸಣ್ಣ ಕವನಗಳಲ್ಲಿ ದೇಸೀ ಛಂದಸ್ಸಿನ ಸುಂದರವಾದ ಬಳಕೆಯಿದೆ. ಅವರು ಪ್ರಾರಂಭದಲ್ಲಿ ಯಕ್ಷಗಾನಕ್ಕೆ ಮನಸೋತವರು; ತಾಳಮದ್ದಳೆಯ ಅರ್ಥಧಾರಿಗಳಾಗಿ ವೇದಿಕೆ ಏರುತ್ತಿದ್ದವರು. ಸ್ವತಃ ‘ಸೂರ್ಯಕಾಂತಿ ಕಲ್ಯಾಣ’ ಎಂಬ ಯಕ್ಷಗಾನ ಪ್ರಸಂಗವನ್ನು ಬರೆದಿದ್ದಾರೆ. ಯಕ್ಷಗಾನ ಕವಿ ಪಾರ್ತಿಸುಬ್ಬನ ಬಗ್ಗೆ ಅಧ್ಯಯನಪೂರ್ಣವಾದ ಪುಸ್ತಕ ಬರೆದು ಅವನ ಕಾವ್ಯದ ಹಿರಿಮೆಯನ್ನು ತೋರಿಸಿಕೊಟ್ಟಿದ್ದಾರೆ.

ಮುಳಿಯದವರು ಕನ್ನಡ ಕಾವ್ಯದಲ್ಲಿ ಕೆಲವು ಪ್ರಯೋಗಗಳನ್ನು ಮಾಡಿದರು. ಹೊಸಗನ್ನಡದಲ್ಲಿ ಅನುಷ್ಟುಪ್ ಶ್ಲೋಕವನ್ನು ರಚಿಸಿದವರು ಅವರೊಬ್ಬರೇ ಎಂದು ಸೇಡಿಯಾಪಿನವರು ತೋರಿಸಿಕೊಟ್ಟಿದ್ದಾರೆ.

ಹಗಲೂ ಇರುಳೂ ತಾವು ತಿರುಗುತ್ತಿರುವಂದದಿ |
ಸುಖವೂ ದುಃಖವೂ ಮೇಲೆ ಮೇಲೆ ಬಪ್ಪುದು ಮಂದಿಗೆ ||
ಎಲ್ಲಕೂ ಕರ್ತೃವಾ ದೇವನದಕ್ಕಾನು ನಿಮಿತ್ತವೈ |
ಸೂಜಿ ಚಿಪ್ಪಿಗನೊಪ್ಪಿಂದೆ ನೂಲಂಬಟ್ಟೆಯೊಳೊಯ್ವವೊಲ್ ||

– ಇದು ಅವರ `ಹಗಲಿರುಳು’ (1918) ನಾಟಕದ ಒಂದು ಶ್ಲೋಕ. ಮುಳಿಯದವರು ಹಲವು ಸಣ್ಣ ಕವನಗಳನ್ನು ಬರೆದಿದ್ದಾರೆ.
ಅವುಗಳಲ್ಲಿ ಒಂದು ‘ಇವಳ್ಯಾರು’ ಎನ್ನುವುದು. ಅದು ಹೀಗಿದೆ:

ಇವಳ್ಯಾರು?
(ಚೌಪದಿ)

ಬೆಳಗಾಯ್ತು ಕಣ್ದೆರೆದೆನೊರ್ವೆ ಚೆಲ್ವಾಕೆ |
ಬಳಿಯಾಗಡಂಗಳೊಳಗೊಂದರ ಕೊರಲ್ಗೆ |
ಸೆಳೆದು ಮುಪ್ಪುರಿವಳ್ಳಿಯಂ ಬಿಗಿವುತದನು |
ಇಳಿಸಿ ಬಾವಿಯೊಳೊಯ್ಯುತಂ ಜೀವನವನು ||೧||

ತುಂಬುತನೆಲ್ಲವನು ಕೊಂಡೊಯ್ದಳಲ್ಲಲ್ಲಿ |
ಅಂಬುವದು ಮುಗಿಯೆ ಬಂದಳ್‌ ಪೂರ್ವದಲ್ಲಿ |
ತುಂಬಿಸಿದ ಕೊಡದೆ ಸೆರೆಯಿರೆ ಕಿಟ್ಟವಿತ್ತು |
ಅಂಬುಜಾಂಬಕಿ ನೀರನೊಯ್ದಳಾ ಹೊತ್ತು ||೨||

ಪಳೆದಾಯ್ತು ಪಾತ್ರೆಮೊಡೆದುದು ತೆಗೆದು ಬಿಸುಟಳ್‌ |
ಬಳಿಕಮಿನ್ನೊಂದನುಪಯೋಗಿಸುತ್ತೆಳೆದಳ್‌ |
ತಳುವದಳಿಯಲ್‌ ಪೊಸತನಿದಕೊಂಡು ಬರ್ಪಳ್‌ |
ಎಳೆದಪಳಿದೇ “ನೂಟ ಬಿತ್ತಗಳ್ಗೆನ್ನಲ್” ||೩||

ಅರೆರೆ ಪುರ್ಬಿನೊಳು ಜರ್ಬಿಂ ಪರ್ಬಿಸುವಳು |
ಪರಿವ ಕಡೆಗಣ್ಗಳೇನೋ ಸನ್ನೆಗೈವಳ್‌ |
ಮಿರುಪ ತುಟಿದಳಿರೆಡೆಯ ಮುಗುಳನಿದೋ ತೋರ್ಪಳ್‌ |
ಸರಿವರನದೆಂತಾದೊಡುಂ ವಶಂಗೈವಳ್‌ ||೪||
ಎಂದುಮೀಕ್ಷಿಪೆನರಿಯೆನಿವಳ ಪೆಸರಮ್ಮಾ |
ಣೆಂದು ಪಲವರ್‌ ಪಲವು ಪರಿಯಿಂದಲೊರೆಯೆ |
ಸಂಧಿಸದು ನಿಶ್ಚಯಂ ಮನತೆನಗೆಮರೆಯ |
ದಂದದಿಂ ತಿಳುಹಿಸಲ್‌ ವಂದಿಸುವೆನಯ್ಯ ||೫||

ಮುಳಿಯ ತಿಮ್ಮಪ್ಪಯ್ಯನವರು ಶಾಸ್ತ್ರೀಯ ಚೌಕಟ್ಟಿನೊಳಗೆ ಹೊಸತನಕ್ಕೆ ಸ್ಪಂದಿಸಿದ್ದಕ್ಕೆ ಉದಾಹರಣೆಯಾಗಿ ‘ಒಂದೆ ಕನ್ನಡಂ’ ಎಂಬ ಕವನದ ಸಾಲುಗಳನ್ನು ಕೇಳಿ :

ಮುಗಿಲು ಮುಸುಕಿ ಮಿನುಗಿ ಮಿಂಚಿ ಗುಡುಗುಡಿಸುವ ಬಾಂದಳಂ
ಪಡುವ ಮೂಡ ದಿಕ್ಕಿನತ್ತ ಸಿಡಿವ ಸಿಡಿಲ ಸಂಕುಲಂ
ನರಲ್ವ ಮಂತ್ರ ಹೊರಳ್ವ ತಂತ್ರದಿಂದ ತಾಯ್ನೆಲಕ್ಕೆ ಮೆಯ್ಯ
ಬಲಿಯನೀವ ಭಟರ ನೋಡು ಕನ್ನಡದೊಳು ಹುರುಪುಗೂಡು || 1 ||
ನಡುವೆ ಪಂಜರದೊಳಗಿರ್ಪೆವೆಂದು ಕೆಲರ ನಂಬುಗೆ
ಹುದುಗಿ ಹಚ್ಚಡದೊಳು ಗುಮ್ಮಗಂಜೆವೆಂಬ ನಾಲಗೆ
ಹುಡುಗರಾಟವಿಂಪು ಹುಚ್ಚರಾಟ ಕಾಟವೆಂಬುದನ್ನು
ಬಗೆಯೊಳೂರು ಬಳಿದೋರು ಬಿರಿದ ಮುಗುಳ ಕಂಪುವೀರು || 2 ||
ಕೆಲಬರಿತ್ತ ಕೆಲಬರತ್ತ ಕೆಲಬರುತ್ತ ತಮ್ಮ ತಮ್ಮ
ಗಡಿಯನೊತ್ತೆ ತಡೆದರುಂಟೆ ಬೆಡಗದವರಿಗೆಂದರುಂಟು
ಕಡಿದು ರಾಹುಗೊಂದು ಕೇತುಗೊಂದು ಬೂತುಗೊಂದು ಬಲಿಯ
ಕೊಡುವುದೂ ಕೆಲರ ಬೆಡಗು ಬಗಡದಲ್ತೆ ಕನ್ನಡಕ್ಕೆ || 3 ||
ಅತ್ತ ಗೋದಾವರೀ ಇತ್ತ ಕಾವೇರಿ ಸಂ
ಕಲ್ಪಗೈವರಿನ್ನುಮಿಹರು ನಮ್ಮ ಕನ್ನಡದೊಳೀಗ
ಎತ್ತ ಗೋದಾವರೀ ಅದೆತ್ತ ಕಾವೇರಿಯೆ
ನ್ನುತ್ತ ಕೇಳು ಸೋಂಬನಿಯಿಳಿಸುತ್ತ ಬಗೆಯನೊಂದುಗೊಳಿಸು || 4 ||
ತಡೆವುದೀಗ ಕಾಲವಲ್ಲ ಗುರುವಿಳಿದನು ದ್ವಾದಶಕ್ಕೆ
ಹೊರಡುತತ್ತ ಹರಿದ ಮೇಲೆ ದಶಮದತ್ತ ಸಂದ ಮೇಲೆ
ಕೋಳಿ ಕೋ ಎಂದ ಮೇಲೆ, ಕೂಳು ತಂಗುಳಾದ ಮೇಲೆ
ಕನ್ನಡಕ್ಕೆ ಮೊಸರೆನುವರ ಬಿನ್ನಣವನು ನಗುತ ನೋಡು || 5 ||
ಕವಲುವಡೆದ ಕನ್ನಡಂಗಳೆಂತು ಸಂದುವಳುಕುತೊಂದು
ವೆರೆಯಲುಂಟು, ಬಿಸಿಲ ಬರಗಲೇತಕೆನ್ನುವಣ್ಣನೇ !
ಕವಲದೆಲ್ಲ ನುಡಿಯೊಳುಂಟು ದೀಪದಡಿಗೆ ಕತ್ತಲುಂಟು
ಕವಲು ನಾಲಗೆಯೊಳೆ ನಲಿಯಬೇಡವೆಂಬ ತಮ್ಮನುಂಟು || 6 ||
ತಲೆಯೆ ಬೇರೆ ಕಾಲೆ ಬೇರೆ ಬೇರೆಬೇರೆಯಂಗದಿಂದ
ಬಳೆದ ಮೈ ಬೇರೆಯಹುದೆ? ತಿಳಿದ ನೀರನೊಂದಿ ಬೆಳೆದು
ಹಲವು ಬೇರೆ ಗಿಡವೆನಿಸುತ ತನ್ನ ತಾನೆಯುದ್ಧರಿಸುತ
ಬಳೆವ ಮಂತ್ರವಿಡಿದು ತಲೆಯನೆತ್ತಲೊಂದೆ ಕನ್ನಡಂ || 7 ||
(1936ರ `ತ್ರಿವೇಣಿ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ)

ಈ ಕವಿತೆಯಲ್ಲಿ ಗಣವಿಪರ್ಯಾಸ ಮಾಡಿದರೂ ತಾಳಕ್ಕೆ ಹೊಂದಿಕೊಳ್ಳುವ ಲಕ್ಷಣವಿದೆ. ಪ್ರಾಸವಿಲ್ಲದ ಇದು ರಗಳೆಯ ಒಂದು ಪ್ರಯೋಗವೆನ್ನುವುದನ್ನು ಗಮನಿಸಬೇಕು. ಈ ಕವನದಲ್ಲಿ ಪ್ರಾಸವಾಗಲಿ ಗಣಗಳಾಗಲಿ ಇಲ್ಲದೆ ಆಧುನಿಕ ಭಾವಗೀತೆಯಾಗಿರುವುದನ್ನು ಗಮನಿಸಿದರೆ ಮುಳಿಯದವರು ಪರಂಪರೆಯಲ್ಲಿ ಸ್ಥಿರವಾಗಿ ನಿಂತು ಹೊಸತನಕ್ಕೆ ತುಡಿದವರೆನ್ನುವುದು ಸ್ಪಷ್ಟವಾಗುತ್ತದೆ.

ಕೋಗಿಲೆ ತಿಮ್ಮಪ್ಪಯ್ಯ

ತಿಮ್ಮಪ್ಪಯ್ಯನವರು 1914 ರಿಂದ 1919ರ ವರೆಗೆ ‘ಕನ್ನಡ ಕೋಗಿಲೆ’ ಎಂಬ ಸಾಹಿತ್ಯಿಕ ಮಾಸಪತ್ರಿಕೆಯನ್ನು ತಾವೇ ಸಂಪಾದಕರಾಗಿ ಪ್ರಕಟಿಸುತ್ತಿದ್ದರು. ಮಂಗಳೂರಿನ ಪ್ರಭಾವಶಾಲೀ ಗಣ್ಯರಾಗಿದ್ದ ಪೇಜಾವರ ಭೋಜರಾಯರ ಪ್ರೇರಣೆ ಮತ್ತು ಬೆಂಬಲದಿಂದ ‘ಕನ್ನಡ ಕೋಗಿಲೆ’ ಪ್ರಾರಂಭವಾಗಿತ್ತು. ಅದು ನಾಡಿನ ಅನೇಕ ವಿದ್ವಾಂಸರ ಲೇಖನಗಳನ್ನು ಪ್ರಕಟಿಸುತ್ತಿತ್ತು. ತಿಮ್ಮಪ್ಪಯ್ಯನವರು ಸ್ವತಃ ತಮ್ಮ ರಾಷ್ಟ್ರಪ್ರೇಮ, ಕೃತಿ ವಿಮರ್ಶೆ, ಸಾಹಿತ್ಯ ವಿಚಾರದ ಲೇಖನಗಳು, ಕಾವ್ಯಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದಲ್ಲದೆ, ಇತರರಿಗೂ ಅವಕಾಶ ನೀಡಿ ಪ್ರೋತ್ಸಾಹಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ಸಾಹಿತ್ಯ ಪ್ರಕಾರಕ್ಕೆ ಮಹತ್ವ ನೀಡಿದ ಆದ್ಯ ಪತ್ರಿಕೆಯಾಗಿ ಅದು ಮುಖ್ಯವಾಗಿದೆ. ಹಣದ ತೊಂದರೆಯಿಂದಾಗಿ ಈ ಪತ್ರಿಕೆಯನ್ನು 1919ರಲ್ಲಿ ನಿಲ್ಲಿಸಬೇಕಾಯಿತು.

ಮುಳಿಯ ತಿಮ್ಮಪ್ಪಯ್ಯನವರ ಕೃತಿ ಪಂಚಕ

ಮುಳಿಯ ತಿಮ್ಮಪ್ಪಯ್ಯನವರ ಕಾವ್ಯದ ಬಗ್ಗೆ, ಅದು ಬೀರಿದ ಪ್ರಭಾವದ ಬಗ್ಗೆ ಅಧ್ಯಯನ ನಡೆದಿಲ್ಲ. ಅವರ ಕಾವ್ಯ ಸಾಧನೆಯನ್ನು ಅವರದೇ ಆದ ವಿದ್ವತ್ಪೂರ್ಣ ವಿಮರ್ಶೆಯ ಕೃತಿಗಳ ಸೂರ್ಯಪ್ರಭೆ ಮಂಕಾಗಿಸಿದೆ. ಮುಳಿಯರ ಕೃತಿ ಪಂಚಕಗಳೆಂದು ಇಂದು ಗುರುತಿಸಲ್ಪಡುತ್ತಿರುವ ಐದು ಮಹತ್ವದ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ದೊಡ್ಡ ಕೊಡುಗೆಗಳೆನ್ನುವುದು ಸಾರ್ವಕಾಲಿಕ ಸತ್ಯವಾಗಿದೆ. ಆ ಐದು ಕೃತಿಗಳು – 1. ನಾಡೋಜ ಪಂಪ (ಸಂಶೋಧನೆ. ಜೀವನ ಮತ್ತು ಕೃತಿಗಳ ಸಮೀಕ್ಷೆ) – 1938, 1977. 2. ಆದಿಪುರಾಣ ಸಂಗ್ರಹ (ಪಂಪನ ಆದಿಪುರಾಣದ ಸಂಗ್ರಹ ಗದ್ಯಾನುವಾದ) – 1938. 3. ಸಮಸ್ತ ಭಾರತ ಸಾರ (ಪಂಪಭಾರತದ ಸೃಜನಶೀಲ ಗದ್ಯಾನುವಾದ) – 1941. 4. ಪಾರ್ತಿ ಸುಬ್ಬ ( ಯಕ್ಷಗಾನ ಕವಿ ಪಾರ್ತಿ ಸುಬ್ಬನ ಜೀವನ ಮತ್ತು ಕೃತಿಗಳ ಸಮೀಕ್ಷೆ) – 1945. 5. ಕವಿರಾಜ ಮಾರ್ಗ ವಿವೇಕ.

ಪಂಪನ ಕಾವ್ಯದ ಬಗೆಗೆ ಬರೆದ ವಿಮರ್ಶಾತ್ಮಕ ಕೃತಿ ‘ನಾಡೋಜ ಪಂಪ’ ತಿಮ್ಮಪ್ಪಯ್ಯನವರ ಅಮೂಲ್ಯ ಕೃತಿ. ಒಬ್ಬ ಕವಿಯ ಕೃತಿಯ ಬಗೆಗೆ ಇಷ್ಟು ದೀರ್ಘವಾದ ಆಳವಾದ ವಿಮರ್ಶೆ ಕನ್ನಡದಲ್ಲಿ ಆ ವರೆಗೆ ಬಂದಿರಲಿಲ್ಲ. ಈ ಬೃಹತ್ ಗ್ರಂಥದಲ್ಲಿ ಎರಡು ಭಾಗಗಳಿವೆ. ಸಂಸ್ಕೃತಕ್ಕೆ ವಾಲ್ಮೀಕಿಯಂತೆ ಕನ್ನಡಕ್ಕೆ ಆದಿಕವಿ ಪಂಪನೆಂದು ಸಾರಿದ ತಿಮ್ಮಪ್ಪಯ್ಯನವರು ಚಾಳುಕ್ಯ ವಂಶದ ಅರಿಕೇಸರಿಯೊಡನೆ ಅರ್ಜುನನನ್ನು ಸಮೀಕರಿಸಿದ ಪಂಪನ ಪೆಂಪನ್ನು ತೋರಿಸಿದ್ದಾರೆ. ಮುಳಿಯರು ಆತನ ದೇಶ-ಕಾಲ-ಕಾವ್ಯಗಳ ಆಳವಾದ ಅಧ್ಯಯನವನ್ನು ಈ ಗ್ರಂಥದಲ್ಲಿ ನಡೆಸಿದ್ದಾರೆ. ಚಾಳುಕ್ಯವಂಶದ ಅರಿಕೇಸರಿ, ಪಂಪನ ವಂಶಾವಳಿ, ಕಾಲ, ಮತ್ತು ವೆಂಗಿಮಂಡಲ ನಾಡು, ಪಂಪನ ಕಾವ್ಯಗಳು, ಕಾವ್ಯಧರ್ಮ ಮತ್ತು ಧರ್ಮಗಳ ಬಗ್ಗೆ, ಪಂಪನ ದೇಸಿ, ಮಹಾಕಾವ್ಯವೆಂದರೇನು ಎಂಬುದರ ಕುರಿತು, ಆದಿಪುರಾಣದ ರಸಪ್ರವಾಹದ ಬಗೆಗೆ, ಸಮಸ್ತ ಭಾರತ ಶೈಲಿಯ ಕುರಿತು ಚರ್ಚಿಸಿದ್ದಾರೆ. ಪಂಪನ ಕುರಿತಾದ ಅವರ ಅಧ್ಯಯನ ಅಗಾಧ, ಅನಂತ, ಅಪಾರ. ಪಂಪನನ್ನು ಕನ್ನಡದ ನಾಡೋಜನೆಂದು ಗುರುತಿಸಿದವರು ಮುಳಿಯರೇ. ಅವರನ್ನೇ ಕನ್ನಡದ ಓಜ ಎಂದು ಗುರುತಿಸುವುದುಂಟು.

ಮುಳಿಯ ತಿಮ್ಮಪ್ಪಯ್ಯನವರು ಮಹಾಕವಿ ಪಂಪನ ‘ಆದಿಪುರಾಣ’ವನ್ನು ‘ಆದಿಪುರಾಣ ಸಂಗ್ರಹ’ ಎಂಬ ಹೆಸರಿನಿಂದಲೂ, ‘ವಿಕ್ರಮಾರ್ಜುನ ವಿಜಯ’ವನ್ನು ‘ಸಮಸ್ತಭಾರತ ಸಾರ’ ಎಂಬ ಹೆಸರಿನಿಂದಲೂ ಗದ್ಯರೂಪದಲ್ಲಿ ನೀಡಿದ್ದಾರೆ. ಇವು ಸೃಜನಶೀಲ ಗದ್ಯಾನುವಾದಗಳು. ಅವರು ‘ನಾಡೋಜ ಪಂಪ’ ಮತ್ತು ‘ಆದಿಪುರಾಣ ಸಂಗ್ರಹʼಗಳನ್ನು ತಾವೇ ಪ್ರಕಟಿಸಿ ಮಾರಾಟ ಮಾಡಲು ಕಷ್ಟಪಟ್ಟರು.

‘ಕವಿರಾಜಮಾರ್ಗ ವಿವೇಕ’, ಕನ್ನಡದ ಮೊದಲ ಲಕ್ಷಣ ಗ್ರಂಥವಾದ ಕವಿರಾಜ ಮಾರ್ಗವನ್ನು ಕುರಿತ ಸಂಶೋಧನ ಗ್ರಂಥ. ಕವಿರಾಜಮಾರ್ಗಕಾರ ಯಾರು, ನೃಪತುಂಗನೇ ಶ್ರೀವಿಜಯನೆ ಎಂಬುದನ್ನು ವಿಸ್ತಾರವಾಗಿ ವಿವೇಚಿಸಿ, ಶ್ರೀವಿಜಯನೆಂಬ ತೀರ್ಮಾನಕ್ಕೆ ಬರುತ್ತಾರೆ. ಇಲ್ಲಿಯೂ ಅವರ ಚಾರಿತ್ರಿಕ ವಿವೇಚನೆ ಮತ್ತು ಮೀಮಾಂಸೆಯ ವಿಶ್ಲೇಷಣೆ ಉನ್ನತ ಮಟ್ಟದ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ.
ಐದನೆಯದಾಗಿ, ಯಕ್ಷಗಾನ ಕವಿ ಪಾರ್ತಿಸುಬ್ಬನ ಬಗೆಗಿನ ತಮ್ಮ ಸಂಶೋಧನೆಗಳ ಆಧಾರದ ಮೇಲೆ ತಿಮ್ಮಪ್ಪಯ್ಯನವರು ಪಾರ್ತಿಸುಬ್ಬನ ಜೀವನ ಮತ್ತು ಕೃತಿಗಳ ಬಗ್ಗೆ ಒಂದು ಮಹತ್ವದ ಗ್ರಂಥವನ್ನು ಪ್ರಕಟಿಸಿದ್ದಾರೆ. ಯಕ್ಷಗಾನದತ್ತ ಪಂಡಿತರ ಗಮನ ಹರಿಯದ ದಿನಗಳಲ್ಲಿ ಯಕ್ಷಗಾನದ ಬಗ್ಗೆ ತಿಮ್ಮಪ್ಪಯ್ಯನವರ ಅಧ್ಯಯನ ಅವರ ಸ್ವತಂತ್ರ ಮನೋವೃತ್ತಿಗೆ ಇನ್ನೊಂದು ಉದಾಹರಣೆಯಾಗಿದೆ.

ತಮ್ಮ ವಿಮರ್ಶೆಯ ಕೃತಿಗಳಲ್ಲಿ ಮುಳಿಯ ತಿಮ್ಮಪ್ಪಯ್ಯನವರು ತೋರಿಸಿಕೊಟ್ಟ ದೇಸೀ ವಿಮರ್ಶೆಯ ಮಾರ್ಗದ ಮಹತ್ವವನ್ನು ಕೂಡ ಸರಿಯಾಗಿ ಗುರುತಿಸಲಾಗಿಲ್ಲ. ಉದಾಹರಣೆಗೆ ಅವರು ಪಂಪನ ‘ಆದಿಪುರಾಣ’ವು ರಸಕಾವ್ಯ, ‘ವಿಕ್ರಮಾರ್ಜುನ ವಿಜಯ’ವು ಶೀಲ ಪ್ರತಿಪಾದನೆಯ ಕಾವ್ಯ ಎಂದು ಗುರುತಿಸಿರುವುದು ಮಹತ್ವದ ಸಂಗತಿಯಾಗಿದೆ. ಭಾರತೀಯ ಕಾವ್ಯಮೀಮಾಂಸೆಯನ್ನು ಅರಗಿಸಿಕೊಂಡವರ ಒಳನೋಟ ಇದು. ಅಲ್ಲದೆ ಅರಿಸ್ಟಾಟಲ್ ಕೂಡ ‘ಮೈಥೋಸ್’ ಅನ್ನುವುದನ್ನು ‘ಪಾತ್ರ’ ಎನ್ನುವ ಅರ್ಥದಲ್ಲಿ ಬಳಸದೆ ‘ಶೀಲ’ ಎನ್ನುವ ಅರ್ಥದಲ್ಲಿಯೇ ಬಳಸಿದ್ದ (‘ಮೈಥೋಸ್’ನ ಇಂಗ್ಲಿಷ್ ಅನುವಾದ ‘ಕ್ಯಾರಕ್ಟರ್’ ಕೂಡ ಅದನ್ನು ಸೂಚಿಸಬಲ್ಲುದು). ಮುಳಿಯರು ಪಾತ್ರಗಳ ಮನೋಧರ್ಮ ವಿಕಾಸ ಮತ್ತು ಅವುಗಳು ಪ್ರತಿಪಾದಿಸುವ ಮೌಲ್ಯವನ್ನು ವಿವೇಚಿಸುತ್ತಾರೆ. ಅವರ ‘ಆದಿಪುರಾಣ’ದ ವಿಮರ್ಶೆ ರಸಪ್ರಸ್ಥಾನದ ಆನ್ವಯಿಕ ವಿಮರ್ಶೆ; ‘ವಿಕ್ರಮಾರ್ಜುನ ವಿಜಯ’ದ ವಿಮರ್ಶೆ ರೀತಿ ಪ್ರಸ್ಥಾನದ ಆನ್ವಯಿಕ ವಿಮರ್ಶೆ ಎಂದು ಡಾ. ಸುಬ್ರಹ್ಮಣ್ಯ ಭಟ್ ಗುರುತಿಸಿದ್ದಾರೆ. ಜತೆಗೆ ಚಾರಿತ್ರಿಕ ವಿಧಾನವನ್ನೂ, ಮನಶ್ಶಾಸ್ತ್ರೀಯ ವಿಮರ್ಶೆಯ ಒಳನೋಟಗಳನ್ನೂ ಮುಳಿಯರ ವಿಮರ್ಶೆಯಲ್ಲಿ ಕಾಣಬಹುದು.

1927ರಲ್ಲಿ ಮಂಗಳೂರಿನಲ್ಲಿ ಆರ್. ತಾತಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಂಡಿಸಿದ ‘ಆಂಡಯ್ಯನೂ ಕನ್ನಡಮೇನಿಪ್ಪಾ ನಾಡು’ ಎಂಬ ಪ್ರಬುದ್ಧವಾದ ಪ್ರಬಂಧ ಅವರ ಅಧ್ಯಯನದ ಆಳವನ್ನು ಪರಿಚಯಿಸಿ, ಅವರ ಪ್ರಖರ ಚಿಂತನೆಯ ಪರಿಚಯವನ್ನು ಮಾಡಿಕೊಟ್ಟಿತು. ಕನ್ನಡ ಸಾರಸ್ವತಲೋಕದಲ್ಲಿ ಅವರು ಆದರಣೀಯರಾದರು. ಆನಂತರ ಈ ಕೃತಿ ಪಂಚಕಗಳು ಬಂದವು.

ಇತರ ಕೃತಿಗಳು

ಮುಳಿಯ ತಿಮ್ಮಪ್ಪಯ್ಯನವರು ‘ಪಶ್ಚಾತ್ತಾಪ’ ಎಂಬ ಸಾಮಾಜಿಕ ಕಾದಂಬರಿ, ಮತ್ತು ‘ವೀರ ಬಂಕೆಯ’ ಎಂಬ ಐತಿಹಾಸಿಕ ಕಾದಂಬರಿಗಳನ್ನು ಬರೆದಿದ್ದಾರೆ. ‘ಪಶ್ಚಾತ್ತಾಪ’ ಕಾದಂಬರಿಯಲ್ಲಿ ತಮ್ಮ ಊರಿನ ಹಾಗೂ ಕುಟುಂಬದ ವ್ಯಕ್ತಿಗಳ ಹಾಗೂ ಪರಿಸರದ ಚಿತ್ರಣವಿರುವುದರಿಂದ ಬಹಳ ಆಸಕ್ತಿ ಹುಟ್ಟಿಸುತ್ತದೆ, ಜೀವನಾನುಭವವನ್ನು ನೀಡುತ್ತದೆ. ಅವರ ಕಾದಂಬರಿಗಳು ಮರುಮುದ್ರಣವನ್ನು ಕಂಡಿರುವುದು ಅವುಗಳ ಸತ್ವಕ್ಕೆ ಸಾಕ್ಷಿ. ಈ ಲೇಖನದಲ್ಲಿ ಅವರ ಇತರ ಬರವಣಿಗೆಯ ಬಗ್ಗೆ ಚರ್ಚಿಸುವುದಕ್ಕೆ ಅವಕಾಶವಾಗದು.

‘ಶಿವರಾಮ ಚರಿತ’ (‘ನತ್ತ ಮೆಟ್ಟುವ ಹಾಡು’ ಎಂಬ ಅಫುರ್ವ ಕೃತಿಯ ಸಂಪಾದನೆ ಮತ್ತು ‘ನತ್ತ ಮೆಟ್ಟು’ ಎನ್ನುವ ಕುಣಿತ ಕಲಾಪ್ರಕಾರದ ಪರಿಚಯ – ವಿವರಣೆ), ‘ತ್ರಿಪುರದಾಹದ ಗದ್ಯಾನುವಾದ’, ‘ಸಂಸ್ಕೃತಿ’ ಎಂಬ ಚಿಂತನ ಪ್ರಧಾನ ಗ್ರಂಥ ಇತ್ಯಾದಿ ಇತರ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ‘ಹಗಲಿರುಳು’ (ನಾಟಕ), ‘ಸೂರ್ಯಕಾಂತಿ ಕಲ್ಯಾಣ’ (ಯಕ್ಷಗಾನ ಪ್ರಸಂಗ) ಮತ್ತು ‘ರಾವುತ ರಂಗಪ್ಪ’ (ಅಪೂರ್ಣ ನಾಟಕ) ಅವರ ರಂಗಕೃತಿಗಳು.

ನಾಡಿನ ಮನ್ನಣೆ

ಕನ್ನಡದ ಆದಿಕವಿ ಪಂಪನ ಸಹಸ್ರ ಸಾಂವತ್ಸರಿಕೋತ್ಸವ 1941ರಲ್ಲಿ ಅವನ ಹುಟ್ಟೂರು ಲಕ್ಷ್ಮೇಶ್ವರದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಉತ್ಸವದ ಅಧ್ಯಕ್ಷ ಸ್ಥಾನವನ್ನಲಂಕರಿಸಲು ಸ್ವಾಗತಸಮಿತಿಯವರಿಗೆ ಯೋಗ್ಯರೆಂದು ಕಂಡುಬಂದ ಏಕೈಕ ವ್ಯಕ್ತಿ ಮುಳಿಯ ತಿಮ್ಮಪ್ಪಯ್ಯನವರು. ಪಂಪನ ಕುರಿತಾದ ‘ನಾಡೋಜ ಪಂಪ’, ‘ಆದಿಪುರಾಣ ಸಂಗ್ರಹ’ ಮತ್ತು ‘ಸಮಸ್ತ ಭಾರತಸಾರ’ ಎಂಬ ಪರಿಚಯಗ್ರಂಥಗಳ ಮೂಲಕ ಪಂಪನನ್ನು ಸಮಗ್ರವಾಗಿ ಅರಿತುಕೊಂಡು ಕನ್ನಡಿಗರಿಗೆ ಪರಿಚಯಿಸಿದ ಮುಳಿಯ ತಿಮ್ಮಪ್ಪಯ್ಯನವರು ನಾಡಿಗೆ ನಾಡೇ ಹೆಮ್ಮೆ ಪಡುವಂಥ ವಿದ್ವಾಂಸರಾಗಿದ್ದರು.

ಮುಳಿಯ ತಿಮ್ಮಪ್ಪಯ್ಯನವರು ಆಗತಾನೇ ಕಾಲಿನ ಹಿಮ್ಮಡಿ ಶಸ್ತ್ರಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತಿದ್ದ ಕಾರಣ ಲಕ್ಷ್ಮೇಶ್ವರಕ್ಕೆ ಹೋಗಲು ಹಿಂಜರಿದರು. ಆದರೆ ಸಮಿತಿಯವರು ಈ ಅಧ್ಯಕ್ಷತೆ ತಮಗಲ್ಲದೆ ಬೇರೆ ಯಾರಿಗೂ ಒಪ್ಪುವುದಿಲ್ಲ ಎಂದು ಇವರನ್ನು ಒಪ್ಪಿಸಿದರು. ಆ ಉತ್ಸವದಲ್ಲಿ ಮುಳಿಯ ತಿಮ್ಮಪ್ಪಯ್ಯನವರಿಗೆ ಅತ್ಯಪೂರ್ವವಾದ ಮನ್ನಣೆ ಲಭಿಸಿತು. ನೂರ ಒಂದು ಎತ್ತುಗಳನ್ನು ಕಟ್ಟಿದ ಅವರ ಮೆರವಣಿಗೆ ಸಾಗುತ್ತಿದ್ದಂತೆ ಹೆಜ್ಜೆ ಹೆಜ್ಜೆಗೆ ಸಂಘ ಸಂಸ್ಥೆಗಳಿಂದ ಹೂಮಾಲೆ ಅರ್ಪಣೆ. ಜನರು ತಾವು ಪಂಪನನ್ನೇ ಗೌರವಿಸುತ್ತಿದ್ದೇವೋ ಎಂಬಷ್ಟು ಸಂಭ್ರಮಿಸಿದರು. ಅವರಿಗೆ ಬಿದ್ದ ಹಾರಗಳ ಸಂಖ್ಯೆ ‘ನಾಡೋಜ ಪಂಪ’ದ ಆರೂನೂರು ಪುಟಗಳನ್ನು ಮೀರಿಸಿತ್ತು.

1931 ರಲ್ಲಿ ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಳಿಯ ತಿಮ್ಮಪ್ಪಯ್ಯನವರನ್ನು ಅಧ್ಯಕ್ಷರನ್ನಾಗಿ ಆರಿಸಲಾಗಿತ್ತು. ಇದರಿಂದಾಗಿ, ಇಂಗ್ಲಿಷ್ ಕಲಿತು, ಕನ್ನಡದಲ್ಲಿ ಬರೆಯುತ್ತಿದ್ದ ಸಾಹಿತಿಗಳಿಗೆ ಅಸಮಾಧಾನವಾಗಿತ್ತು. ಆದರೆ ಕಾರವಾರ ಸಮ್ಮೇಳನದಲ್ಲಿ ತಿಮ್ಮಪ್ಪಯ್ಯನವರ ಭಾಷಣ ಕೇಳಿದ ಬಿ.ಎಂ. ಶ್ರೀಕಂಠಯ್ಯನವರು ಅವರ ಬಳಿಗೆ ಬಂದು “ನಿಮ್ಮಂತಹ ಘನ ವಿದ್ವಾಂಸರನ್ನು ನನಗೆ ನಿಮ್ಮೂರ ಕೆಲ ವಿದ್ವಾಂಸರೇ ಪರಿಚಯ ಮಾಡಿಸಲಿಲ್ಲ” ಎಂದರಂತೆ.

ಕೀರ್ತಿಶೇಷರಾದುದು

ಮುಳಿಯ ತಿಮ್ಮಪ್ಪಯ್ಯನವರು ತೀರಿಕೊಂಡಾಗ ಸೇಡಿಯಾಪು ಕೃಷ್ಣ ಭಟ್ಟರು ಮಂಗಳೂರಿನ ಪತ್ರಿಕೆಯೊಂದರಲ್ಲಿ ಹೀಗೆ ಬರೆದರು :

“……. ಮದ್ರಾಸ್ ಮಹಾನಗರದಲ್ಲಿ ಕನ್ನಡದೇವಿಯ ಕಂಠಹಾರದೊಂದು ದೊಡ್ಡ ಮುತ್ತು ಜಗುಳಿಬಿದ್ದು ಕಣ್ಮರೆಯಾಯಿತು! ಕನ್ನಡ ಕಾನನದೊಂದು ಕೋಗಿಲೆ ಹಾರಿಯೇ ಹೋಯಿತು! ….. ತಮ್ಮ ಅಷ್ಟೊಂದು ದೀರ್ಘವಲ್ಲದ ಜೀವನದಲ್ಲಿ ಪಟ್ಟ ಪಾಡುಗಳೆಷ್ಟು, ಹಾಡಿದ ಹಾಡುಗಳೆಷ್ಟು! ಕಲಿಸಿದ ವಿದ್ಯಾರ್ಥಿಗಳೆಷ್ಟು, ನಲಿಸಿದ ಜನ ಜಾಲವೆಷ್ಟು!


ಪಂಪನ ಭಕ್ತ, ಪಾರ್ತಿಸುಬ್ಬನ ಮಿತ್ರ, ಕವಿರಾಜಮಾರ್ಗದ ಪುರಸ್ಕರ್ತ! ಅಚ್ಚಗನ್ನಡದ ಹುಚ್ಚ! – ಕ್ಷಮಿಸು. ನಮೋ ನಮೋ! ಕನ್ನಡ ತಿರುಳನ್ನು ಕಂಡು ಉಂಡು ಉಣಿಸಿದ ಪಂಡಿತರಲ್ಲಿ ಕನ್ನಡ ಕಾವ್ಯ ಪಾಠಕರಲ್ಲಿ ಪರಮೋಚ್ಛ! ಸಿರಿವಂತರ ಕುಲದಲ್ಲಿ ಜನಿಸಿಯೂ ಕಡುಬಡವ, ಬದುಕನ್ನೆಲ್ಲಾ ಬಡತನದಲ್ಲಿಯೇ ಕಳೆದೂ ಮನಸ್ವಿ, ವರ್ಚಸ್ವಿ, ಯಶಸ್ವಿ, ಹಳಗನ್ನಡ – ಹೊಸಗನ್ನಡ ಹಾರದ ಮಧ್ಯಮಣಿ, ನಮ್ಮ ಮುದ್ದಿನ ಮುದ್ದಣ ನವೋದಯದ ಮುಂಗೋಳಿ ಸ್ವರವೆತ್ತಿ ಕೂಗಿ ಕೆಲೆದು ನುಡಿಯಿಸಿದ ಕನ್ನಡವಕ್ಕಿ ನಮ್ಮ ಮುಳಿಯದ ಪಂಡಿತವಕ್ಕಿ”.

ಮುಳಿಯ ತಿಮ್ಮಪ್ಪಯ್ಯ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಅಳಿಯದ ಹೆಸರು.