ಗದ್ಯಾನುವಾದದಲ್ಲಿ ಪದದ ಅರ್ಥ ಸೀಮಿತವಾಗಿದ್ದು, ಎಷ್ಟೋ ಅರ್ಥವಾಗದ ಪದಗಳ ಅರ್ಥವು ಆ ವಾಕ್ಯ, ಆ ಪ್ಯಾರಾ, ಆ ಸಂದರ್ಭಗಳು ಹೊರಡಿಸುವ ಅರ್ಥಗಳಲ್ಲೇ ಅಡಕವಾಗಿರುತ್ತದೆ. ಆದರೆ ಕಾವ್ಯಾನುವಾದದಲ್ಲಿ ಹಾಗಲ್ಲ. ಪ್ರತಿ ಪದವೂ ಒಂದು ವಾಕ್ಯದ, ಒಂದು ನುಡಿಯ ಘಟಕವಾಗಿರುತ್ತಲೇ; ತನ್ನ ಸ್ವತಂತ್ರ ಅಸ್ತಿತ್ವವನ್ನು, ಅಸ್ಮಿತೆಯನ್ನು ಬಿಟ್ಟುಕೊಡದೆ ಅನನ್ಯತೆಯನ್ನೂ ಉಳಿಸಿಕೊಂಡಿರುತ್ತದೆ. ಎರಡು ಭಾಷೆಗಳ ನಡುವೆ ಸುಲಭ ಗೋಚರವಾದ ಶಾರೀರಿಕ ರಚನೆಗಳ ವ್ಯತ್ಯಾಸವಿರುವಂತೆಯೇ, ಅಗೋಚರವಾದ ಸಾಂಸ್ಕೃತಿಕವೂ, ಜಾಯಮಾನದವೂ ಆದ ಆತ್ಮಸಂಬಂಧಿ ವ್ಯತ್ಯಾಸಗಳೂ ಇರುತ್ತವೆ.
ತೆಲುಗಿನ ಕವಿ ಅಜಂತಾ ಅವರ ಏಕೈಕ ಕವನಸಂಕಲನ ‘ಸ್ವಪ್ನಲಿಪಿ’ಯನ್ನು ಕವಿ ಚಿದಾನಂದ ಸಾಲಿ ಅನುವಾದಿಸಿದ್ದು, ಅನುವಾದಕರ ಮಾತುಗಳು ನಿಮ್ಮ ಓದಿಗೆ.

 

ಅಜಂತಾ (25.12.1929 – 2.5.1998) ಅವರ ನಿಜನಾಮ ಪೆನುಮರ್ತಿ ವಿಶ್ವನಾಥ ಶಾಸ್ತ್ರಿ. `ಆಂಧ್ರ ಪ್ರಭ’ ದೈನಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಜಂತಾ ಅವರು 1948ರಿಂದ 1992ರವರೆಗಿನ ಅವಧಿಯಲ್ಲಿ ಸುಮಾರು ನಲವತ್ತಕ್ಕಿಂತ ಹೆಚ್ಚು ಪದ್ಯಗಳನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ನಲವತೈದು ವರ್ಷಗಳಲ್ಲಿ ಅವರು ಬರೆದಿದ್ದು 40+ ಪದ್ಯಗಳನ್ನಷ್ಟೇ ಎಂಬುದು ಗಮನಾರ್ಹ ಸಂಗತಿಯಾಗಿದೆ. ಅದರಲ್ಲೂ ಒಂದಷ್ಟು ಪದ್ಯಗಳನ್ನು ಕೈ ಬಿಟ್ಟು ಕೇವಲ ಇಪ್ಪತ್ತೊಂಬತ್ತು ಪದ್ಯಗಳ ಈ ಸಂಕಲನವನ್ನು ಅವರು ಪ್ರಕಟಿಸಿದ್ದು 1993ರಲ್ಲಿ. ಅದೂ ತೆಲುಗಿನ ಮತ್ತೊಬ್ಬ ಪ್ರತಿಭಾಶಾಲಿ ಕವಿ ತ್ರಿಪುರನೇನಿ ಶ್ರೀನಿವಾಸ್ ರ ಒತ್ತಾಸೆಯ ಫಲವಾಗಿ.

`ಕವಿತೆಗಳನ್ನು ಬರೆದು ಸಮಾಜದ ಮೇಲೆ ತೂರಿಬಿಡುವುದಷ್ಟೇ ನನ್ನ ಕೆಲಸ’ ಎಂದು ಹೇಳಿಕೊಂಡಿರುವ ಅಜಂತಾರ ಸಂಕಲನವೊಂದನ್ನು ಪ್ರಕಟಿಸುವುದೆಂದು ತ್ರಿಪುರನೇನಿಯವರು ಆಲೋಚಿಸಿ ಅಜಂತಾರನ್ನು ಎಡತಾಕಿದರೆ ಅವರ ಹತ್ತಿರ ಪ್ರಕಟಿತ ಪದ್ಯದ ಒಂದು ಪ್ರತಿಯೂ ಇರಲಿಲ್ಲ. ಆದರೆ ಪ್ರತಿಯೊಂದು ಪ್ರಕಟಿತ ಪದ್ಯದ ಶೀರ್ಷಿಕೆ, ಸಾಲುಗಳು ಯಾವಾಗ ಬರೆದುದೆಂಬುದರ ವಿವರವೂ ಸೇರಿದಂತೆ, ಪ್ರತಿಯೊಂದು ಪದ್ಯಕ್ಕೆ ಅವರು ಬರೆದ ಹಲವು ವರ್ಷನ್ ಗಳೂ ಅವರ ಭಾವಕೋಶದಲ್ಲಿ ಭದ್ರವಾಗಿ ದಾಖಲಾಗಿದ್ದವು. ಸಂಕಲನಕ್ಕಾಗಿ ಮತ್ತೊಮ್ಮೆ ಈ ಎಲ್ಲ ಪದ್ಯಗಳನ್ನು ಅವರು ತಮ್ಮ ನೆನಪಿನ ಬಲದಿಂದ ಬರೆದುಕೊಟ್ಟದ್ದೊಂದು ವಿಶೇಷ ಸಂಗತಿಯೇ ಸರಿ. ಭಾರತೀಯ ಸಾಹಿತ್ಯದಲ್ಲಿ ಇಂಥ ಇನ್ನೊಂದು ಪ್ರಕರಣ ಇದ್ದಿರಲಿಕ್ಕಿಲ್ಲವೆನಿಸುತ್ತದೆ.

ಸಾಕಷ್ಟು ಗ್ರ್ಯಾಂಡ್ ಆಗಿಯೇ ಪ್ರಕಟವಾಗಿರುವ ಈ ಕೃತಿಯ ಅಕ್ಷರ ಜೋಡಣೆ ವಿಜಯವಾಡದಲ್ಲೂ, ಮುದ್ರಣ ಹೈದರಾಬಾದಿನಲ್ಲೂ ಆಗಿದ್ದರೆ; ಮುಖಪುಟ ಚಿತ್ರವನ್ನು ಅಮೇರಿಕಾದ ಜಾನ್ ಉನ್ ರೂ; ಸೆಂಟರ್ಸ್ಪ್ರೆಡ್ ಚಿತ್ರವನ್ನು ಭಾರತದ ಲಕ್ಷ್ಮಾಗೌಡ ಹಾಗೂ ಒಳಚಿತ್ರಗಳನ್ನು ಜರ್ಮನಿಯ ಮಾಕ್ರ್ಸ್ ಅರ್ನೆಸ್ಟ್ ರಚಿಸಿದ್ದಾರೆ. ಕೇವಲ ಅರವತ್ತೈದು ಪುಟಗಳ ಈ ಚಿಕ್ಕ ಹೊತ್ತಿಗೆಯ ಬೆಲೆ 1993ರಲ್ಲೇ ಒಂದು ನೂರು ರೂಪಾಯಿಯಾಗಿದೆ! ಹಾಗೆ 1993ರಲ್ಲಿ ಪ್ರಕಟವಾದ ಈ ಸಂಕಲನಕ್ಕೆ 1997ರ ಸಾಲಿನ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಲಭಿಸಿದ್ದು 1998ರಲ್ಲಿ. ಅದೇ ವರ್ಷ ಅಜಂತಾ ತಮ್ಮ ಅರವತ್ತೊಂಬತ್ತನೇ ವಯಸ್ಸಿನಲ್ಲಿ ತೀರಿಕೊಂಡರು.

“1948ರಲ್ಲಿ ಪ್ರಕಟವಾದ ಮೊದಲ ಪದ್ಯ `ಮರಗಳು ಉರುಳುತ್ತಿರುವ ದೃಶ್ಯ’ದಿಂದಲೇ ತೆಲುಗಿನ ಪ್ರಮುಖ ಕವಿಯಾಗಿ ಚರ್ಚೆಗೊಳಗಾದ ಕವಿ ಅಜಂತಾ” ಎಂದು ‘ಸ್ವಪ್ನಲಿಪಿ’ಯನ್ನು ಇಂಗ್ಲೀಷಿಗೆ ಅನುವಾದಿಸಿರುವ ತೆಲುಗಿನ ಮತ್ತೊಬ್ಬ ಕವಿ, `ಮೋ’ ಎಂದೇ ಖ್ಯಾತರಾಗಿರುವ ವೇಗುಂಟ ಮೋಹನ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಸಂಕಲನದಲ್ಲಿ ಪ್ರಕಟವಾದ ಆ ಕವಿತೆಯ ಕೆಳಗೆ ಅದರ ಕಾಲವನ್ನು 1954 ಎಂದು ನಮೂದಿಸಲಾಗಿದೆ. ಹಾಗಾದರೆ ಇಲ್ಲಿ ಪ್ರಕಟವಾಗಿರುವುದು ಆ ಕವಿತೆಯ ಎಷ್ಟನೇ ಪರಿಷ್ಕೃತ ಪ್ರತಿಯೋ!

(ಅಜಂತಾ)

ಅಜಂತಾರ ಕಾವ್ಯನಿಷ್ಠೆ ಅಚಲವಾದುದು. ನಲವತೈದು ವರ್ಷಗಳ ಸಾಹಿತ್ಯಿಕ ಜೀವನದಲ್ಲಿ ಅವರು ಬರೆದದ್ದು ಕವಿತೆಯನ್ನು ಮಾತ್ರ. ಪ್ರಕಟಿಸಿದ್ದು `ಸ್ವಪ್ನಲಿಪಿ’ ಎಂಬ ಒಂದೇ ಸಂಕಲನವನ್ನು ಮಾತ್ರ. ನಾನ್ ಅಕಾಡೆಮಿಕ್ ಹಿನ್ನೆಲೆಯ ಅಜಂತಾ ಆವರೆಗಿನ ತೆಲುಗು ಕಾವ್ಯ ಹಿಡಿದಿದ್ದ ದಿಕ್ಕನ್ನು ಬದಲಿಸಿದ ಪಥ ನಿರ್ಮಾತೃ ಕವಿ ಎಂದೇ ಪರಿಗಣಿತವಾಗಿದ್ದಾರೆ. ಅವರಿಗಿಂತ ಮೊದಲು ತೆಲುಗು ಕಾವ್ಯಶರಧಿಯಲ್ಲಿ ಒಂದು ಹೆದ್ದೊರೆಯಾಗಿ ಮೂಡಿ ಬಂದ ಮಹಾಕವಿ ಶ್ರೀಶ್ರೀ (ಶೀರಂಗಂ ಶ್ರೀನಿವಾಸರಾವು) (1910-1983) ಅವರ ಶೈಲಿಯ ಪ್ರಭಾವವನ್ನು ಅಜಂತಾ ಅವರ `ಬಹುಪಾಲು ಸಂಸ್ಕೃತಭೂಯಿಷ್ಠ’ವಾದ ಭಾಷೆ ಮತ್ತು ಮುಖ್ಯವಾದ `ಬೀಜಪದ ಹಾಗೂ ಘೋಷವಾಕ್ಯಗಳ ಪುನರುಚ್ಛರಣೆ’ಯ ಶೈಲಿಗಳಲ್ಲಿ ಗುರುತಿಸಲು ಅವಕಾಶವಿದೆ. ಶ್ರೀಶ್ರೀ ಅವರ ಕುರಿತಾಗಿಯೇ ಅಜಂತಾ ಬರೆದಿರುವ ಪದ್ಯವು, ಅಜಂತಾರ ಶೈಲಿಗೆ ಹೊರತಾದ ಅಭಿಮಾನ ಭಾವದಲ್ಲಿ ಮೂಡಿ ಬಂದಿರುವುದನ್ನು ಈ ಮಾತಿಗೆ ಸಾಕ್ಷಿಯಾಗಿ ಗಮನಿಸಬಹುದಾಗಿದೆ. ಅಕಾಡೆಮಿಕ್ ಹಿನ್ನೆಲೆಯ ತೆಲುಗಿನ ಜ್ಞಾನಪೀಠ ಲೇಖಕ ಡಾ. ಸಿ. ನಾರಾಯಣರೆಡ್ಡಿ (1931-2018) ಗಜಲ್, ಸಿನಿಮಾ ಹಾಡು ಮುಂತಾದ ಸಾಂಗೀತಿಕ ಗುಣ ಪ್ರಧಾನವಾದ ಕಾವ್ಯಮಾರ್ಗ ಹಿಡಿದು ಲಯದ ಬೆನ್ನು ಹತ್ತಿದ್ದಾಗ, ನಾನ್ ಅಕಾಡೆಮಿಕ್ ಹಿನ್ನೆಲೆಯ ಅಜಂತಾ ಅತಿ ಭಾರದ ಸಂಸ್ಕೃತಮಯ ಭಾಷೆಯಲ್ಲಿ ಜೀವನ ಬೀಭತ್ಸದ ಶೋಧನೆಯಲ್ಲಿ ತೊಡಗಿದ್ದರು. ಇವರಿಬ್ಬರೂ ಒಂದೇ ಓರಗೆಯವರು. ಒಂದೇ ಕಾಲಘಟ್ಟದಲ್ಲಿ ಪ್ರಕಟಗೊಂಡ ಕಾವ್ಯದ ಎರಡು ಬೇರೆ ಬೇರೆ ದಿಕ್ಕುಗಳಿವು.

`ಮನುಷ್ಯ ಸತ್ತರೂ ದೇಹ ಅವನದು ಮಣ್ಣಲಿ ಮಣ್ಣಾಗಿ ಕೊಳೆಯುವುದು;
ಮೃಗವು ಸತ್ತರೂ ಚರ್ಮವದರದು ಮೃದಂಗವಾಗಿ ನುಡಿಯುವುದು’

ಎಂದು ಹೇಳುವ ಸಿನಾರೆ ಮನುಷ್ಯನ ಅಹಮಿಕೆಯ ಪೊಳ್ಳುತನವನ್ನು ಮೆಲುದನಿಯಲ್ಲಿಯೇ, ಲಯಪ್ರಧಾನ ಸಾಲುಗಳಲ್ಲೇ ಹಿಡಿದುಕೊಟ್ಟರೆ;

`ಕತ್ತಲ ಹೊಳಪಲ್ಲಿ ನಿರ್ಜೀವ ಪ್ರತಿಮೆಯ ಖಡ್ಗನಾಟ್ಯ ನೋಡಿದೆ;
ಮತ್ತೊಂದು ಬದುಕಿನ ಬಾಗಿಲು ತೆರೆದುಕೊಳ್ಳುವುದೇನಾ ಸಾವೆಂದರೆ?’

ಎಂದು ಕೇಳುವ ಅಜಂತಾ ವಿಚಿತ್ರವಾಗಿ ಸಾವಿನಲ್ಲಿ ಬದುಕನ್ನು ಅರಸುತ್ತಾರೆ. ಕತ್ತಲಿನಲ್ಲಿ ಹೊಳಪನ್ನು ಕಾಣುತ್ತಾರೆ. ಭಿನ್ನ ಧ್ವನಿ, ವಿಶಿಷ್ಟ ಶೈಲಿ, ಆತ್ಮಛೇದಕವಾದ ಕ್ರೂರ ವಿಮರ್ಶೆ ಮತ್ತು ಬೀಭತ್ಸ ಚಿತ್ರಣಗಳ ಮೂಲಕ ಅಜಂತಾ ತೆಲುಗು ಕಾವ್ಯಕ್ಕೆ ಒಂದು ಹೊಸದನಿ ನೀಡಿದರು. ಒಂದರ್ಥದಲ್ಲಿ ಅವರು ಬೀಭತ್ಸ ಜೀವನದ ಪ್ರತಿರೂಪವಾದ ಒಂದೇ ಕವಿತೆಯನ್ನು ಹಲವು ರೂಪಗಳಲ್ಲಿ ಇಲ್ಲಿ ಹಿಡಿದಿದ್ದಾರೆ. `ವಚನಕವಿತ್ವಕ್ಕೆ ಗೌರವಯುತ ಸ್ಥಾನ ಕಲ್ಪಿಸಬೇಕೆಂಬುದೇ ನನ್ನ ಕಾವ್ಯದ ಗುರಿ’ ಎಂದು ಘೋಷಿಸಿದ ಅವರು ಅದಕ್ಕೆ ಬೇಕಾದ ಭದ್ರ ಅಡಿಪಾಯವನ್ನು ಸರಿಯಾಗೇ ಹಾಕಿದರು. ಅವರ ಸಮಕಾಲೀನರಾದ ಮತ್ತೊಬ್ಬ ಮುಖ್ಯ ಕವಿ ದೇವರಕೊಂಡ ಬಾಲಗಂಗಾಧರ ತಿಲಕ್ (1921-1966)ರಂಥವರಿಂದ ಹಿಡಿದು ಮುಂದೆ ಆ ಪರಂಪರೆಯನ್ನು ಸಶಕ್ತವಾಗಿ ಮುಂದುವರಿಸಿದ ಕೆ. ಶಿವಾರೆಡ್ಡಿಯವರವರೆಗೆ (1943- ) ಹಲವರ ಮೇಲೆ ಅಜಂತಾರ ಶೈಲಿಯ ಪ್ರಭಾವವಾಗಿರುವುದಕ್ಕೆ ಪುರಾವೆಗಳು ನಮ್ಮ ಕಣ್ಮುಂದೆಯೇ ಇವೆ. ದೇವರಕೊಂಡ ಬಾಲಗಂಗಾಧರ ತಿಲಕ್ ರ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತವಾದ ಏಕಮಾತ್ರ ಕವನ ಸಂಕಲನ `ಅಮೃತ ಸುರಿದ ರಾತ್ರಿ’ಯಲ್ಲಿನ `ನಿನ್ನೆ ರಾತ್ರಿ’ ಎಂಬ ಪದ್ಯದ ಮೇಲೆ, ಅಜಂತಾರ `ಸ್ವಪ್ನಲಿಪಿ’ ಸಂಕಲನದ `ಎಲ್ಲ ಒಂದೇ ಶಬ್ದ’ ಎಂಬ ಪದ್ಯದ ಸಾಲುಗಳು ಮತ್ತು ಶೈಲಿಯ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಶಿವಾರೆಡ್ಡಿಯವರ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ ಕವನ ಸಂಕಲನ `ಮೋಹನಾ ಓ ಮೋಹನಾ!’ವೂ ಒಳಗೊಂಡು ಅವರ ಎಲ್ಲ ಇಪ್ಪತೈದು ಕವನ ಸಂಕಲನಗಳ ಶೈಲಿಸಂವಿಧಾನ ಒಂದೇ ತೆರನಾಗಿದ್ದು (`ಅಂತರ್ಜನಂ’ ಎಂಬ ವಿಶಿಷ್ಟ ಶೈಲಿಯ ಸಂಕಲನವೊಂದನ್ನು ಹೊರತುಪಡಿಸಿ), ಅದು ಅಜಂತಾ ಕನಸಿದ `ವಚನ ಕವಿತ್ವಕ್ಕೆ ಗೌರವ ತಂದುಕೊಡುವ ಹಂಬಲ’ಕ್ಕೆ ಇಂಬಾಗಿ ದುಡಿಯುತ್ತ ಬಂದಿದೆ ಮತ್ತು ಪರಿಣಾಮಕ್ರಮದಲ್ಲಿ ತನ್ನದೇ ಆದ ಸ್ಪಷ್ಟ ಹೆಜ್ಜೆಗುರುತುಗಳನ್ನು ಮೂಡಿಸುತ್ತ ವಿಕಾಸಗತಿಯಲ್ಲಿ ಸಾಗಿದೆ. ಹಾಗೆ ಶಿವಾರೆಡ್ಡಿಯವರ ಪ್ರಭಾವವೂ ಅವರ ಓರಗೆಯವರಿಂದ ಹಿಡಿದು ಕಿರಿಯರವರೆಗೆ ತುಂಬಾ ಕವಿಗಳ ಮೇಲಾಗಿದೆ.

ಶಿವಾರೆಡ್ಡಿಯವರ ಕಾವ್ಯವನ್ನು ಹೇಗೆ ಅನಾಥ ಬಾಲ್ಯದ ಅನುಭವಗಳ ನೆಲೆಯಿಂದ ಒಂದು ವಿಭಿನ್ನ ಅಧ್ಯಯನಕ್ಕೆ ಒಳಪಡಿಸಿ ಅಭ್ಯಸಿಸಬೇಕಾದ ಅಗತ್ಯವಿದೆಯೋ ಹಾಗೆಯೇ ಅಜಂತಾರ ಪದ್ಯಗಳನ್ನು ಮನೋವೈಜ್ಞಾನಿಕ ನೆಲೆಯಿಂದ ಬೇರೊಂದು ಬಗೆಯ ಓದಿಗೆ ಒಳಪಡಿಸಿ ಅಭ್ಯಸಿಸಬೇಕಾದ ಅಗತ್ಯವಿದೆ. ಅವರ ಕಾವ್ಯಪರಿಶೀಲನೆಗೆ ಅದೊಂದು ಸೂಕ್ತವಾದ ಮಾರ್ಗವಾಗಿ ಒದಗಿಬರುವುದರಲ್ಲಿ ಅನುಮಾನವೇ ಇಲ್ಲ. ತೀವ್ರವಾದ ನಗರಪ್ರಜ್ಞೆಯ ಅಜಂತಾ ಕಾರ್ಯನಿರ್ವಹಿಸಿದ ಹೈದರಾಬಾದು ನಗರವು, ಅವರು ಬದುಕಿದ್ದ ಕಾಲಕ್ಕೆ ಈಗಿನಷ್ಟೂ ಆಧುನಿಕವಾಗಿರಲಿಲ್ಲ. ಈಗಲೂ ಕೂಡ ಹೈದರಾಬಾದು ನಗರವು ಅವರ ಪದ್ಯಗಳು ಪ್ರಕಟಿಸುವ ಅತಿನಾಗರ ಮತ್ತು ಅಮಾನುಷ ಲೋಕದಷ್ಟು ದೊಡ್ಡದೂ ಇಲ್ಲ, ಬೀಭತ್ಸವೂ ಅಲ್ಲ. ಇಂದಿನ ಮುಂಬೈ, ದೆಹಲಿ, ಬೆಂಗಳೂರುಗಳಂಥ ಮೆಟ್ರೊಪಾಲಿಟನ್ ಸಿಟಿಗಳ ಚಿತ್ರಣವನ್ನು ಅರ್ಧ ಶತಮಾನದ ಹಿಂದೆಯೇ ಅಜಂತಾ ಅವರು ಅದು ಹೇಗೆ ಹೈದರಾಬಾದಿನ ಮೂಲಕ ಪರಿಭಾವಿಸಿಕೊಂಡರೆಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ.

`ಪರಿಭಾವನೆ’ ಎಂಬ ಪದವೇಕೆಂದರೆ, ಇದೇ ಹೈದರಾಬಾದನ್ನು `ಅತ್ತರಿನಂಥ ಜೀವನವಿಧಾನ’ ಎಂದು ವಿವರಿಸುವ ಮತ್ತೊಬ್ಬ ಕವಿ ಆಶಾರಾಜು(1954- )ವಯಸ್ಸಿನಲ್ಲಿ ಅಜಂತಾರಿಗಿಂತ ಕಾಲು ಶತಮಾನದಷ್ಟು ಚಿಕ್ಕವರು. ಈ ನಗರದೊಂದಿಗಿನ ತಮ್ಮ ಕಳ್ಳು-ಬಳ್ಳಿ ಸಂಬಂಧದ ಕುರಿತೇ ಆಶಾರಾಜು ಅಭಿಮಾನದ ದನಿಯಲ್ಲಿ ಎರಡು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಆದರೆ ಅಜಂತಾ ಮಹಾನಗರಗಳು ಹೇಗೆ ಕಾಲಕ್ರಮೇಣ ನಡೆದಾಡುವ ಶವಗಳ ಸ್ಮಶಾನಗಳಾಗಿ ಬದಲಾಗುವವೆಂಬುದನ್ನು ಮೊದಲೇ ಮುನ್ನೂಹೆ ಮಾಡಿದಂತೆ ಅವುಗಳ ಬೀಭತ್ಸ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಅವರ ಕಾವ್ಯದಲ್ಲಿ, ಕತ್ತರಿಸಿದ ಕೈಗಳ ಮನುಷ್ಯ ಅವನದೇ ಕಡಿದ ತಲೆಯನ್ನು ಹಿಡಿದುಕೊಂಡು ನಗರಾರಣ್ಯದ ಬೀದಿಗಳಲಿ ಓಡಾಡುತ್ತಿದ್ದಾನೆ; ಕೊಲೆಯಾದವನೂ ಅವನೇ, ಕೊಲೆಗಾರನೂ ಅವನೇ ಎಂಬ ಚಿತ್ರವನ್ನವರು ರಕ್ತದಲ್ಲಿ ಬಿಡಿಸಿದ್ದಾರೆ. ಸಾವು, ಬೆಂಕಿ, ಭಯ, ಉದ್ವಿಗ್ನತೆ, ಏಕಾಕಿತನ, ಅಸಹಾಯಕತೆ, ಗಾಯ, ಗಾಯಾಳು, ರಕ್ತ, ಛಿದ್ರ ವಿಚ್ಛಿದ್ರವಾದ ದೇಹ, ಮಸುಕಾದ ಕನ್ನಡಿ, ಅಸ್ಪಷ್ಟ ಬಿಂಬ ಮುಂತಾದ ಪ್ರತಿಮೆಗಳು ಇವರ ಕಾವ್ಯದುದ್ದಕ್ಕೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.

ಅತಿ ಎನಿಸುವಷ್ಟು ಸಂಸ್ಕೃತಭೂಯಿಷ್ಠವಾದ ಭಾಷೆ ಅಜಂತಾರ ಶೈಲಿ. ಎಷ್ಟೋ ಅಚ್ಚತೆಲುಗು ಪದಗಳಿರುವಾಗಲೂ ಅವರು ಅತಿ ಕಠಿಣವೆನಿಸುವ ಸಂಸ್ಕೃತ ಪದಗಳ ಮೊರೆಹೋಗುತ್ತಾರೆ. ಉದಾಹರಣೆಗೆ ಸಾವಿಗೆ `ಮೃತ್ಯು’ವನ್ನು; ಹೋರಾಟಕ್ಕೆ `ಸಂಗ್ರಾಮ’ವನ್ನು; ಬೋಳುತಲೆಗೆ `ಇಂದ್ರಲುಪ್ತಕ’ವನ್ನು; ಹೆಜ್ಜೆಸಪ್ಪಳಕ್ಕೆ `ಪದಘಟ್ಟನ’ವನ್ನು; ರಾಜರಿಗೆ `ರಾಜ್ಯಾಧಿಪತಿ’ಯನ್ನು; ಚೌಕಕ್ಕೆ `ಚತುರಶ್ರ’ವನ್ನು; ತೋರುಬೆರಳಿಗೆ `ತರ್ಜನಿ’ಯನ್ನು; ಒಗಟಿಗೆ `ಪ್ರವಲ್ಹಿಕ’ವನ್ನು ಬಳಸುತ್ತಾರೆ. ಈ ಎಲ್ಲ ಪದಗಳಿಗೆ ಸಂವಾದಿಯಾಗಿ ಅಚ್ಚತೆಲುಗು ಪದಗಳು ಇದ್ದೇ ಇವೆ.

ಹಾಗೆಯೇ ಪುನರುಚ್ಛರಣೆ ಅಜಂತಾರ ಒಂದು ವಿಶಿಷ್ಟ ಶೈಲಿ. `ಎಲ್ಲ ಒಂದೇ ಶಬ್ದ’ ಪದ್ಯದಲ್ಲಿನ `ಹೇಳಲಿಲ್ಲವೆ, ನಾನು ಹೇಳಲಿಲ್ಲವೆ?’ ಎಂಬ ಸಾಲು ಆರು ಸಲ; `ಸುಷುಪ್ತಿ’ ಪದ್ಯದಲ್ಲಿನ `ಎಲ್ಲೂ ಯಾರೂ ಇಲ್ಲ, ಎಲ್ಲ ಮನೆ ಸೇರಿಕೊಂಡಿದ್ದಾರೆ’ ಎಂಬ ಸಾಲು ಹನ್ನೆರಡು ಸಲ; `ಕಫ್ರ್ಯೂ ನೆರಳಲ್ಲಿ’ ಪದ್ಯದಲ್ಲಿನ `ಎಲ್ಲಿದ್ದೇನೆ, ನಾನು ಎಲ್ಲಿದ್ದೇನೆ?’ ಎಂಬ ಸಾಲು ಆರು ಸಲ; `ದಿನಾ ನೋಡ್ತಲೇ ಇದ್ದೀನಿ’ ಪದ್ಯದ ಶೀರ್ಷಿಕೆ ಸಾಲು ನಾಲ್ಕು ಸಲ; `ಅನಾಮಿಕ’ ಪದ್ಯದ `ಮಹಾಸರ್ಪಗಳು ಮಾತಾಡವು/ ಮಹಾವೃಕ್ಷಗಳು ಮಾತಾಡವು’ ಎಂಬ ಇಡೀ ಎರಡು ಸಾಲಿನ ನುಡಿ ಮೂರು ಸಲ ಪುನರಾವರ್ತನೆಯಾಗಿವೆ. `ಅನಾಮಿಕ’ ಪದ್ಯದಲ್ಲಿ ಇರುವುದೇ ಹದಿನೈದು ಸಾಲು, ಅದರಲ್ಲಿ ಆರು ಸಾಲುಗಳು ಈ ಪುನರಾವೃತ್ತಿಗೇ ಹೋಗಿವೆ. ಇದು ಅವರ ಶೈಲಿ ಎಂಬುದೇನೋ ನಿಜ, ಆದರೆ ಈ ಶೈಲಿಯ ನಿರ್ಮಾಣದ ಹಿಂದೆ ಪ್ರೇರಣೆಯಾಗಿ ಕೆಲಸ ಮಾಡಿರುವ ಸಂಗತಿಗಳೇನು ಎಂಬುದನ್ನೂ ಗಮನಿಸಬೇಕಾಗಿದೆ.

ಅಜಂತಾರ ಕಾವ್ಯನಿಷ್ಠೆ ಅಚಲವಾದುದು. ನಲವತೈದು ವರ್ಷಗಳ ಸಾಹಿತ್ಯಿಕ ಜೀವನದಲ್ಲಿ ಅವರು ಬರೆದದ್ದು ಕವಿತೆಯನ್ನು ಮಾತ್ರ. ಪ್ರಕಟಿಸಿದ್ದು `ಸ್ವಪ್ನಲಿಪಿ’ ಎಂಬ ಒಂದೇ ಸಂಕಲನವನ್ನು ಮಾತ್ರ. ನಾನ್ ಅಕಾಡೆಮಿಕ್ ಹಿನ್ನೆಲೆಯ ಅಜಂತಾ ಆವರೆಗಿನ ತೆಲುಗು ಕಾವ್ಯ ಹಿಡಿದಿದ್ದ ದಿಕ್ಕನ್ನು ಬದಲಿಸಿದ ಪಥ ನಿರ್ಮಾತೃ ಕವಿ ಎಂದೇ ಪರಿಗಣಿತವಾಗಿದ್ದಾರೆ.

ಒಬ್ಬ ಕವಿಯಾಗಿ ಅಜಂತಾ ತಮ್ಮನ್ನು ರೂಪಿಸಿದ ಕಾವ್ಯ ಪರಿಕರಗಳಿಗಾಗಿ, ತಾವು ರೂಪಿಸಿದ ಕವಿಸಮಯಗಳಿಗಾಗಿ ತೆಲುಗಿಗಿಂತ ಹೆಚ್ಚು ಪಾಶ್ಚಾತ್ಯ ಕವಿಗಳಿಂದ ಪ್ರೇರಣೆಗಳನ್ನು ಪಡೆದಿರುವಂತೆ ಕಾಣಿಸುತ್ತದೆ. ಮಹಾಕವಿ ಶ್ರೀಶ್ರೀ ಮತ್ತು ಕಥೆಗಾರ ರಾಚಕೊಂಡ ವಿಶ್ವನಾಥ ಶಾಸ್ತ್ರಿಯವರನ್ನು ಕುರಿತು ಇರುವ ಎರಡು ಪದ್ಯಗಳನ್ನು ಬಿಟ್ಟರೆ ಇವರ ಕಾವ್ಯದಲ್ಲೆಲ್ಲೂ ತೆಲುಗಿನ ಪೂರ್ವಸೂರಿ ಕವಿಗಳ ಉಲ್ಲೇಖವಾಗಲಿ, ಪ್ರಭಾವವಾಗಲಿ ಕಾಣಸಿಗುವುದೇ ಇಲ್ಲ. ಆದರೆ `ಸ್ಲಂ ಕ್ಲಿಯರೆನ್ಸ್’ ಪದ್ಯದ ಮೊದಲಿಗೆ ಪೀಟರ್ ರಿಲೇಯ ಕವಿತೆಯ ಸಾಲನ್ನು ಉಲ್ಲೇಖಿಸುತ್ತಾರೆ. `ನಿನ್ನ ರೂಮಿನ ಗೋಡೆಗಳ ಮೇಲಿನ ಬೆಂಕಿಕಣ್ಣು ನಾನೇ’ ಪದ್ಯದ

`ಕಾಲಮೇಘದಂಚುಗಳ ಮೇಲೆ ಬರುತ್ತಿರುವ
ಸಾವಿನ ರಥದ ಸಾರಥಿಯಾಗಿರಬಹುದು’

ಎಂಬ ಸಾಲಿನಲ್ಲಿ ಮ್ಯಾಥ್ಯೂ ಅರ್ನಾಲ್ಡ್ ನ

`At my back I always hear
Time’s winged chariot is arriving near’

ಎಂಬ ಸಾಲುಗಳನ್ನು ನೆನಪಿಸುತ್ತಾರೆ. `ಪರಿತ್ಯಾಗಿ ಪರಿವೇದನೆ’, `ಬೇರುಗಳು ಇಲ್ಲೇ’ ಪದ್ಯಗಳಲ್ಲಿ ಆತ್ಮಕಥನಾತ್ಮಕ ವಸ್ತುಗಳನ್ನೂ; `ಮಂತ್ರವಾದಿ’ ಪದ್ಯದಲ್ಲಿ ಮೆಟಫಿಸಿಕಲ್ ವಸ್ತುವನ್ನೂ; `ಆತ್ಮಘೋಷ’, `ರಾಜಕೀಯ ಕೂಳುಬಾಕ’ ಪದ್ಯಗಳಲ್ಲಿ ರಾಜಕೀಯ ವಸ್ತುಗಳನ್ನೂ ನಿರ್ವಹಿಸುತ್ತ ತಮ್ಮ ಕಾವ್ಯಕ್ಕೆ ವಸ್ತುಪರವಾಗಿ ನಿರ್ದಿಷ್ಟ ಗಡಿಯಿಲ್ಲವೆಂದು ಸಾಬೀತುಪಡಿಸಿದ್ದಾರೆ. ವಸ್ತುವೇನೇ ಇದ್ದರೂ ಶೈಲಿ ಮಾತ್ರ ಮತ್ತದೇ ಬೀಭತ್ಸ, ಬೀಭತ್ಸ, ಬೀಭತ್ಸ.

(ಚಿದಾನಂದ ಸಾಲಿ)

ಹಾಗಾಗಿ ಇದು ಐವತ್ತು ವರ್ಷ ಹಿಂದೆ ಪ್ರಕಟವಾದ, ಈ ಕಾಲದ ಮಹಾನಗರದ ಮನುಷ್ಯನ ಛಿದ್ರೂಪವನ್ನು ಪ್ರಕಟಿಸುತ್ತಿರುವ ಒಂದು ಬೀಭತ್ಸ ಕಾವ್ಯ.

ಕಾವ್ಯಾನುವಾದ ಒಡ್ಡುವ ಸವಾಲುಗಳನ್ನು ಎದುರಿಸುವ ಖುಷಿಯೇ ಬೇರೆ. ಅದಕ್ಕೆ ಬೇರೊಂದು ಹೋಲಿಕೆ ಸಿಗಲಾರದು. ಗದ್ಯಾನುವಾದದಲ್ಲಿ ಪದದ ಅರ್ಥ ಸೀಮಿತವಾಗಿದ್ದು, ಎಷ್ಟೋ ಅರ್ಥವಾಗದ ಪದಗಳ ಅರ್ಥವು ಆ ವಾಕ್ಯ, ಆ ಪ್ಯಾರಾ, ಆ ಸಂದರ್ಭಗಳು ಹೊರಡಿಸುವ ಅರ್ಥಗಳಲ್ಲೇ ಅಡಕವಾಗಿರುತ್ತದೆ. ಆದರೆ ಕಾವ್ಯಾನುವಾದದಲ್ಲಿ ಹಾಗಲ್ಲ. ಪ್ರತಿ ಪದವೂ ಒಂದು ವಾಕ್ಯದ, ಒಂದು ನುಡಿಯ ಘಟಕವಾಗಿರುತ್ತಲೇ; ತನ್ನ ಸ್ವತಂತ್ರ ಅಸ್ತಿತ್ವವನ್ನು, ಅಸ್ಮಿತೆಯನ್ನು ಬಿಟ್ಟುಕೊಡದೆ ಅನನ್ಯತೆಯನ್ನೂ ಉಳಿಸಿಕೊಂಡಿರುತ್ತದೆ. ಎರಡು ಭಾಷೆಗಳ ನಡುವೆ ಸುಲಭ ಗೋಚರವಾದ ಶಾರೀರಿಕ ರಚನೆಗಳ ವ್ಯತ್ಯಾಸವಿರುವಂತೆಯೇ; ಅಗೋಚರವಾದ ಸಾಂಸ್ಕೃತಿಕವೂ, ಜಾಯಮಾನದವೂ ಆದ ಆತ್ಮಸಂಬಂಧಿ ವ್ಯತ್ಯಾಸಗಳೂ ಇರುತ್ತವೆ. ಹಾಗಾಗಿ ಪ್ರತಿ ಸಲದ ಕಾವ್ಯಾನುವಾದದಲ್ಲೂ ಎದುರಾಗುವ ತೊಡಕುಗಳು, ಅರ್ಥಸಮಸ್ಯೆಗಳು, ಧ್ವನಿಸಮಸ್ಯೆಗಳು ಬೇರೆ ಬೇರೆಯೇ ಆಗಿರುತ್ತವೆ. ಅದರಲ್ಲೂ ತುಂಬಾ ಶಕ್ತಿಶಾಲಿ ಕವಿಯೊಬ್ಬರು ತಮಗೇ ವಿಶಿಷ್ಟವಾದ ಶೈಲಿಯಲ್ಲಿ ಸೃಷ್ಟಿಸಿದ ವಿನೂತನ ಪದಪುಂಜಗಳನ್ನು, ಉದ್ದೇಶಿತ ಭಾಷೆಯ ಜಾಯಮಾನಕ್ಕೆ, ಹೊರಗಿನದೆನ್ನಿಸದಂತೆ ತಂದುಕೊಳ್ಳುವ ಸಮಸ್ಯೆಯು ತುಂಬಾ ಜಟಿಲವಾದುದು. ಉದಾಹರಣೆಗೆ `ರಾಜಕೀಯ ಕೂಳುಬಾಕ’ ಪದ್ಯದಲ್ಲಿನ `ಕ್ರಕಚಶ್ಮಶ್ರು’ ಎಂಬ ಪದಪುಂಜ. ಇಂಥ ಸಂದರ್ಭಗಳಲ್ಲಿ ಅನುವಾದಕನು ಅನಿವಾರ್ಯವಾಗಿ ಮೂಲಾನುಸಾರಿಕೆಯನ್ನು ಬದಿಗಿಟ್ಟು ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ.

`ನಡುಸ್ತುನ್ನ ರೊಡ್ಡು ಮಧ್ಯಲೋ ಮಟಮಾಯ ಕಾವಡಂ ಮೃತ್ಯುವು’ ಎಂಬ ಸಾಲನ್ನು ಪದಶಃ ಅನುವಾದಿಸಿದರೆ `ನಡೆಯುತ್ತಿರುವ ರಸ್ತೆ ನಡುವೆಯೇ ಮಟಮಾಯ ಆಗುವುದು ಸಾವು’ ಎಂದಾಗುತ್ತದೆ. ಇಲ್ಲಿ ಮಟಮಾಯ ಆಗುವುದು ನಡೆಯುತ್ತಿರುವ ರಸ್ತೆಯೋ, ಅದರ ಮೇಲೆ ನಡೆಯುತ್ತಿರುವ ವ್ಯಕ್ತಿಯೋ- ಹೀಗೆ ಹಲವು ಅರ್ಥ ಪದರುಗಳಿರುವಂತೆ ಸಾಲುಗಳನ್ನು ಬಳಸುತ್ತಾರೆ ಅಜಂತಾ. ಮಟಮಾಯ ಆಗುವು`ದೇ’ ಸಾವು ಅಂತ ಮಾಡಿದರೂ ಅರ್ಥಸಂಕೋಚ ಉಂಟಾಗಿಬಿಡುವ ಸಾಧ್ಯತೆಯಿರುತ್ತದೆ. ಇಲ್ಲಿ ಮೂಲಾನುಸಾರಿಕೆ ಮುಖ್ಯವಾಗುತ್ತದೆ. ಆದರೆ `ಹತುಡು ಹಂತಕುಡು ಅತಡೇ’ ಎಂಬುದನ್ನು `ಕೊಲೆಯಾದವನೂ ಅವನೇ, ಕೊಲೆಗಾರನೂ ಅವನೇ’ ಎಂದು ಮಾಡಿಕೊಳ್ಳಲಾಗಿದೆ. ಮೂಲದಲ್ಲಿ ಅವನೇ ಎಂಬುದು ಒಂದೇ ಸಲ ಬಂದಿದ್ದು, ಹಾಗೆಯೇ ಅದು ಅಲ್ಲಿ ಧ್ವನಿಪೂರ್ಣವಾಗಿ ಕೇಳಿಸುತ್ತದೆ. ಆದರೆ ಕನ್ನಡದಲ್ಲಿ `ಕೊಲೆಯಾದವನೂ, ಕೊಲೆಗಾರನೂ ಅವನೇ’ ಎಂಬುದಕ್ಕಿಂತ `ಕೊಲೆಯಾದವನೂ ಅವನೇ, ಕೊಲೆಗಾರನೂ ಅವನೇ’ ಎಂಬುದೇ ಹೆಚ್ಚು ಧ್ವನಿಪೂರ್ಣವಾಗಿ ಕೇಳಿಸುತ್ತದೆ. `ಹಂತಕುಡಿಕಿ ಬಲಿಪಶುವಿಕಿ ಇಪ್ಪುಡು ತೇಡಾ ಲೇದು’ ಎಂಬ ಸಾಲು ಪದಶಃ ಅನುವಾದದಲ್ಲಿ `ಕೊಲೆಗಾರನಿಗೂ ಕೊಲೆಯಾದವನಿಗೂ ಈಗ ಅಂತರವಿಲ್ಲ’ ಎಂದಾಗುತ್ತದೆ. ಆದರೆ ಇಲ್ಲಿ `ಕೊಲೆಗಾರನಿಗೂ ಕೊಲೆಯಾದವನಿಗೂ ಈಗ `ಅಂಥ’ ಅಂತರವಿಲ್ಲ’ ಎಂದು ಮಾಡಿಕೊಂಡು ಮೂಲದಲ್ಲಿ ಇಲ್ಲದ `ಅಂಥ’ ಎಂಬ ಪದವನ್ನು ಸೇರಿಸಿಕೊಳ್ಳಲಾಗಿದೆ. ಇದು ಮತ್ತು ಇಂಥ ಹಲವು ಸಂಗತಿಗಳು ಅನುವಾದಕರನ್ನು ಮುಖ್ಯ ಸಮಸ್ಯೆಗಳಾಗಿ ಕಾಡಿಬಿಡುತ್ತವೆ. ಕೆಲವು ಮೇಲ್ನೋಟಕ್ಕೆ
ಬಾಲಿಶವೆನ್ನಿಸಿದರೂ ದಿನಗಟ್ಟಲೇ ಕೆಲಸ ಸಾಗದಂತೆ ನಿಲ್ಲಿಸಿಬಿಡುತ್ತವೆ. ಥಾಮಸ್ ಮೂರ್ ನ `ತ್ರೀ ಹಾರ್ಸಸ್’ ಮತ್ತು ವಿಲಿಯಂ ಬ್ಲೇಕ್ ನ `ಎ ಪಾಯ್ಸನ್ ಟ್ರೀ’ ಪದ್ಯಗಳನ್ನು ಎಷ್ಟೊಂದು ಜನ ಎಷ್ಟೊಂದು ಬಗೆಗಳಲ್ಲಿ ಅನುವಾದಿಸಿದ್ದಾರೆ. ಗುರುದೇವ ರವೀಂದ್ರನಾಥ ಟ್ಯಾಗೊರರ ‘ಗೀತಾಂಜಲಿ’ ಸಂಕಲನದ ಕನ್ನಡಾನುವಾದಗಳೇ ಈವರೆಗೆ ಇಪ್ಪತ್ತೆಂಟರಷ್ಟು ಬಂದಿವೆ ಎಂದು ಒಂದು ಸಮೀಕ್ಷೆ ಹೇಳುತ್ತದೆ. ಇವೆಲ್ಲವು ಅನುವಾದವೂ ಒಂದು ಸೃಜನಶೀಲ ಕ್ರಿಯೆಯಾಗಿದೆ ಎಂಬುದನ್ನು ಸಾರಿ ಹೇಳುತ್ತಿವೆ ಎನಿಸುತ್ತದೆ.

ಕೊನೆಗೆ ಒಂದು ತಕರಾರೆಂದರೆ `ಬೇರುಗಳು ಇಲ್ಲೇ..’ ಎಂಬ ಆತ್ಮಕಥನಾತ್ಮಕ ಪದ್ಯದಲ್ಲಿ, ದೊಡ್ಡ ಮಗ `ಎಲ್ಲೋ ಶೋಷಿತ ಜನರ ಹೃದಯಗಳಲ್ಲಿ ಸಂಚರಿಸುತ್ತಿರುವುದಾಗಿ ಹರಡಿದ ಸುದ್ದಿ’ ಕೇಳಿ ಕವಿ ಕಂಪಿಸಿಹೋಗ್ತಾರೆ. ಇದೆಂಥ ಪ್ರತಿಗಾಮಿ ಧೋರಣೆ ಎಂದುಕೊಳ್ಳುವ ಹೊತ್ತಿಗೆ `ಯಾವಾಗ, ಎಲ್ಲಿ, ಯಾವ ದುರ್ವಾರ್ತೆ ಮುರಕೊಂಡು ಬೀಳುವುದೋ ಎಂಬ ಭಯ’ ಎಂಬ ಸಾಲಿನಲ್ಲಿ ಕವಿ ಕಣ್ಮರೆಯಾಗಿ ಒಬ್ಬ ತಂದೆ ಕಾಣಿಸಿಕೊಳ್ಳುತ್ತಾನೆ. ಕಟ್ಟಾ ಮಾಕ್ರ್ಸಿಸ್ಟ್ ಆದ ಮಹಾಕವಿ ಶ್ರೀಶ್ರೀ ಅವರನ್ನು ಅಭಿಮಾನದಿಂದ ಕಾಣುವ, `ಕಾವ್ಯ ನಿಜವಾಗಿ ಒಂದು ರಹಸ್ಯ ಕ್ರಾಂತಿ’ ಎಂದು ಗಾಢವಾಗಿ ನಂಬುವ ಕವಿ, ನಿಜದ ಕ್ರಾಂತಿಯೆಡೆಗೆ ಮಗ ಆಕರ್ಷಿತನಾದ ಸುದ್ದಿ ಕೇಳಿ ಎಲ್ಲಿ ಎನ್ ಕೌಂಟರ್ ಆಗಿಬಿಡುವನೋ ಎಂದು ಹೆದರಿಕೆ ವ್ಯಕ್ತಪಡಿಸುತ್ತಾರೆ. ಕವಿಯ ಬರೆಹದ ತಾತ್ವಿಕತೆ ಮತ್ತು ಅವನು ಬದುಕಿನಲ್ಲಿ ನಿರ್ವಹಿಸುತ್ತಿರುವ ಪಾತ್ರಗಳು ಮುಖಾಮುಖಿಯಾದಾಗ ಬದುಕಿನ ಹಳವಂಡವೇ ಮೇಲುಗೈಯಾಗುವುದನ್ನು ಕವಿತೆ ತುಂಬಾ ಧ್ವನಿಪೂರ್ಣವಾಗಿ ಹಿಡಿದಿಟ್ಟಿದೆ. ಇಂಥ ಕವಲಿನ ಸಂದರ್ಭಗಳಲ್ಲಿ ಸಿದ್ಧಾಂತವನ್ನು ತ್ಯಜಿಸಿ, ಬದುಕಿನ ಪಾತ್ರಕ್ಕೆ ಶರಣಾದವರ ಅನೇಕ ಉದಾಹರಣೆಗಳು ವಾಸ್ತವದಲ್ಲಿ ನಮ್ಮ ಮುಂದಿರುವುದು ನಿಜವಾದರೂ; ಆಶಯದ ದೃಷ್ಟಿಯಿಂದಲಾದರೂ ಕವಿ ತಾನು ನೆಚ್ಚಿದ ಜನಹಿತ ಸಿದ್ಧಾಂತವನ್ನೇ ತನ್ನ ಕಾವ್ಯದಲ್ಲಿ ಕೊನೆಗೆ ಗೆಲ್ಲಿಸಿದ್ದರೆ ಚೆನ್ನಾಗಿತ್ತು ಎಂಬ ಪ್ರಶ್ನೆ ಉಳಿಯುತ್ತದೆ.

ಅದೇನೇ ಇದ್ದರೂ ಇಲ್ಲಿನ ಕವಿತೆಗಳು ಕನ್ನಡದ ಓದುಗರಿಗೆ ಇಷ್ಟವಾದರೆ ಅದು ಕವಿ ಅಜಂತಾರ ಕಾವ್ಯದ ದೇಶಕಾಲಾತೀತ ಗುಣದ ಶಕ್ತಿಯೆಂದೂ; ಹಾಗಲ್ಲದೆ ಯಾವುದೋ ಒಂದು ಪದ ಶುಷ್ಕವಾಗಿ ಉಳಿದಿದ್ದು ರಸಾಭಾಸಕ್ಕೆ ತೊಡಕುಂಟು ಮಾಡಿದರೆ ಅದು ಅನುವಾದದ ದೋಷವೇ ಎಂದೂ ವಿನಮ್ರಪೂರ್ವಕವಾಗಿ ತಿಳಿಸಲಿಚ್ಛಿಸುವೆ.

ತಾವು ಮತ್ತು ಲಂಕೇಶರು `ಅಜಂತಾ’ ಬಗ್ಗೆ ಮಾತನಾಡಿಕೊಂಡಿದ್ದನ್ನು ಸ್ಮರಿಸಿ, `ಸ್ವಪ್ನಲಿಪಿ’ಯನ್ನು ಅನುವಾದಿಸಲು ಸೂಚಿಸಿ ಸಲಹೆ ನೀಡಿದ ಕನ್ನಡದ ಮುಖ್ಯ ಕವಿಗಳೂ, ಕೇಂದ್ರ ಸಾಹಿತ್ಯ ಅಕಾದೆಮಿಯ ಅಧ್ಯಕ್ಷರೂ ಆದ ಡಾ. ಚಂದ್ರಶೇಖರ ಕಂಬಾರರಿಗೆ; ಅಜಂತಾ ಅವರ `ಸ್ವಪ್ನಲಿಪಿ’ಯ ಕುರಿತು ತಿಳಿಸಿದ ತೆಲುಗಿನ ಏಕೈಕ ಕಬೀರ್ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಕವಿ ಕೆ. ಶಿವಾರೆಡ್ಡಿಯವರಿಗೆ; ಈ ಕಾರ್ಯವನ್ನು ನನಗೆ ನೀಡಿದ ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷಾ ಸಲಹಾ ಸಮಿತಿಯ ಸಂಚಾಲಕರಾದ ಹಿರಿಯ ವಿಮರ್ಶಕರೂ, ಆತ್ಮೀಯರೂ ಆದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಮತ್ತು ಆತ್ಮೀಯರಾದ ಸಾಹಿತ್ಯ ಅಕಾದೆಮಿಯ ದಕ್ಷಿಣ ಭಾರತ ವಲಯ ಕಚೇರಿಯ ಪ್ರಾದೇಶಿಕ ಕಾರ್ಯದರ್ಶಿಗಳಾದ ಶ್ರೀ ಎಸ್. ಪಿ. ಮಹಾಲಿಂಗೇಶ್ವರ ಭಟ್ ಅವರಿಗೆ, ಅಜಂತಾರ ಪದ್ಯಗಳನ್ನು ನಾನು ಅನುವಾದಿಸಿದ್ದನ್ನು ಕೇಳಿ, ಕೂಡಲೇ ಇದರ ಪ್ರಕಟಣೆಗೆ ಒತ್ತಾಸೆಯಾಗಿ ನಿಂತ ಕನ್ನಡದ ಮುಖ್ಯ ಕವಿಗಳೂ, ಸದ್ಯ ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷಾ ಸಲಹಾ ಸಮಿತಿಯ ಸಂಚಾಲಕರೂ ಆಗಿರುವ ಡಾ. ಸಿದ್ಧಲಿಂಗಯ್ಯ ಅವರಿಗೆ ಗೌರವಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವೆ.

ಈ ಸಂಕಲನದ ಶೋಧಕಾರ್ಯದಲ್ಲಿ ನೆರವಾದ ನವದೆಹಲಿಯ ಕವಿ ರಮೇಶ್ ಅರೋಲಿ, ಹೊಸಪೇಟೆಯ ಕಲಾವಿದ ಸೃಜನ್, ಹೈದರಾಬಾದಿನ ಹಿರಿಯ ಅನುವಾದಕ ರಂಗನಾಥ ರಾಮಚಂದ್ರರಾವ್, ಕಡೆಗೆ ನವದೆಹಲಿಯ ಸಾಹಿತ್ಯ ಅಕಾದೆಮಿ ಪ್ರಧಾನ ಕಚೇರಿಯ ಗ್ರಂಥಾಲಯದ `ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ ಕೃತಿಗಳ ವಿಭಾಗ’ದಿಂದ ಒಂದು ಪ್ರತಿ ದೊರಕಿಸಿಕೊಟ್ಟ ಅಕಾದೆಮಿಯ ಸಿಬ್ಬಂದಿ, ಗೆಳೆಯ ಎಲ್. ಸುರೇಶಕುಮಾರ್ ಅವರಿಗೆ ವಿಶೇಷ ಧನ್ಯವಾದಗಳನ್ನರ್ಪಿಸುವೆ. ಅನುವಾದದ ಗೊಂದಲಗಳನ್ನು ಪರಿಹರಿಸಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಅನುವಾದಕ ಮಿತ್ರರಾದ ಬಿ. ಸುಜ್ಞಾನಮೂರ್ತಿ, ಕಲಬುರ್ಗಿಯ ಬೋಡೆ ರಿಯಾಜ್ ಅಹ್ಮದ್, ಕೋಲಾರದ ಸ. ರಘುನಾಥ, ಪ್ರಜಾವಾಣಿಯ ಎಸ್. ಸೂರ್ಯಪ್ರಕಾಶ್ ಪಂಡಿತ್ ಮತ್ತು ಮಡದಿ ಎನ್. ಕೆ. ನಂದಿನಿ; ಅನುವಾದದಲ್ಲಿ ಈ ಪದ್ಯಗಳು ಹೇಗೆ ಕೇಳಿಸುತ್ತವೆ ಎಂದು ಪ್ರತಿಕ್ರಿಯೆ ನೀಡಿದ ಮೊದಲ ಓದಿನ ಕೇಳುಗ, ಕವಿಮಿತ್ರ ಆರಿಫ್ ರಾಜಾ ಹಾಗೂ ಅಕಾದೆಮಿಯ ಸಿಬ್ಬಂದಿ ಮಿತ್ರ ಷಣ್ಮುಖಾನಂದ ಇವರೆಲ್ಲರಿಗೆ ಪ್ರೀತಿಪೂರ್ವಕ ನೆನೆಕೆಗಳನ್ನು ಸಲ್ಲಿಸುವೆ.

ಚಿದಾನಂದ ಸಾಲಿ ಅನುವಾದಿಸಿದ ಅಜಂತಾ ಅವರ ಒಂದು ಕವಿತೆ

ಮಂತ್ರವಾದಿ

ಗೋಡೆಗೆ ನೇತಾಡುತ್ತಿರುವ ದೇಹವಲ್ಲ ಕನ್ನಡಿಯೆಂದರೆ!
ಅದು ನಿನ್ನ ಅಂತರಂಗ

ಕನ್ನಡಿಯಲ್ಲಿ ನಿನ್ನ ಪ್ರತಿಬಿಂಬದ ಹಿಂದೆ
ಸದಾ ಒಬ್ಬ ಮಂತ್ರವಾದಿ ಇರುತ್ತಾನೆ
ಕುದುರೆ ಮೇಲೆ ಕುಳಿತಿರುವ ಒಬ್ಬ ಸಾಹಸಿ ಇರುತ್ತಾನೆ
ಹೊರಪ್ರಪಂಚದ ರಹಸ್ಯಗಳ
ಮುರಿದುಕೊಂಡು ತಿನ್ನುತ್ತಿರುವ ಒಬ್ಬ ವಿದೂಷಕನಿರುತ್ತಾನೆ

ಕನ್ನಡಿಯೆಂದರೆ ನಿನ್ನೊಳಗಿನೊಳಗಿನ ಪ್ರಪಂಚ

ಕನ್ನಡಿಯೊಳಗೆ
ಅಲೆಗಳ ಮೇಲೆ ಕದಲುತ್ತಿರುವ
ಪ್ರತಿಬಿಂಬಗಳ ಅಡೆತಡೆ ನಿವಾರಣೆ ಸಾಧ್ಯವಿಲ್ಲವಾಗಿ
ನೇರವಾಗಿ ನಾನೇ ಒಂದು ಕ್ಷಣ ಕನ್ನಡಿಯೊಳಗೆ ಪ್ರವೇಶಿಸಿದೆ

ಕನ್ನಡಿಯಲ್ಲಿ ಈಗ ನನ್ನ ಪ್ರತಿಬಿಂಬವಿಲ್ಲ;
ನಾನು ಮಾತ್ರ ಅಲ್ಲೇ ಇದ್ದೇನೆ ಅಶರೀರಿಯಾಗಿ.
1990