ನೀನು –
ಮೋಡದ ಗೂಡೊಳಗಿಂದ
ಬುಸುಗುಡುವ ಹಾವು-
ಧಕ್ಕನೆ ನೆಲಕ್ಕುದುರುವ
ಪದರು ಪದರು ಸದ್ದು.
ತೀರವಿರದ ನೀರಮೈ ಸವರಿ
ಮೇಲಕ್ಕಾರಿ ಮಾಯವಾದ
ರಂಗಿಲ್ಲದ ರಣಹದ್ದು.

ನೀನೆಯೇನು –
ಜಾಡುತಪ್ಪಿದ ಕಾಡನವಿಲ
ಕೊರಳ ಕೂದಲ ಬಣ್ಣಹೀರಿ
ಬಿಳಿ ಬೆರಸಿ ತಿಳಿಯಾಗಿಸಿದ್ದು ?
ಅದರಿಂದ-
ಬಾನಿಗೆ ಬಣ್ಣ ಬಳಿದದ್ದು ?
ನೀರಲ್ಲಿ ನೀಲಿಚೆಲ್ಲಿದ್ದು ?

 

ವಿಜ್ಞಾನದ ವಿದ್ಯಾರ್ಥಿಯಾದ ಅಜಯ್ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು.
ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆ, ಅ.ನ.ಕೃ ಕಥಾ ಸ್ಪರ್ಧೆಗಳಲ್ಲಿ ಬಹುಮಾನಿತರು.
‘ಗಗನಸಿಂಧು’, (ಕಾವ್ಯ) ‘ಡಯಾನಾ ಮರ’, ‘ಕಲಲ ಕನ್ನೀಟಿ ಪಾಟ’, ‘ವಿಮುಕ್ತೆ’ (ಅನುವಾದ) ಪ್ರಕಟಿತ ಕೃತಿಗಳು.
ಸದ್ಯ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಎಂ.ಎಸ್ಸಿ (ಭೌತಶಾಸ್ತ್ರ) ಓದುತ್ತಿದ್ದಾರೆ.