ಸಾವುಹಕ್ಕಿ

ನೆಲದಾಗಸದ ನೀಲಿಮಣ್ಣ-
ಕೈಯ್ಯ ಬೊಗಸೆದುಂಬಿ
ಧೂಳುದಾರಿಗೆ ಚದುರಿದ
ಹೊಂಗೆ ತರಗಲೆಗಳ ಬೆರಳಲಿಡಿದು
ಉಳಿದ ಕೆಲವೆ ನಾಳೆಗಳ
ಮೂಸುತ್ತೇನೆ ಪ್ರೀತಿಯಿಂದ.

ಕಾಡಹಾದಿಯ ಅನಾಮಿಕ-
ಹೆಜ್ಜೆಗುರುತುಗಳ ಜಾಡಹಿಡಿದು
ಕಾಲನ ಪಾದಪರಧಿಯ ಬಳಿ
ಬಿಮ್ಮನೆ ಸೋತು ಕುಳಿತು
ಈ ಕಾಲುದಾರಿಯ ಸವೆಯಿಸಿದ
ನಿನ್ನೆಗಳ ಬೆನ್ನ ಮೇಲೆ-
ಬರೆಯುತ್ತೇನೆ
ಎಳೆಮುದುಕನ ಚಿತ್ರವನು.

ಸಾವುಹಕ್ಕಿ-
ಮನೆಯಿದರಿನ ಮಾಮರದಲಿ
ಗೂಡು ಕಟ್ಟಿದ ದಿನ,
ಎಲ್ಲ ಬಾಗಿಲು ಕಿಟಕಿಗಳ
ತೆರೆದಿಟ್ಟು ಓರೆಯಾಗಿ
ಅಂಗಾತ ಮಲಗುತ್ತೇನೆ
ನಿರ್ಜೀವ ನೆಲದ ಮೇಲೆ

ಚಿತ್ರಗುಪ್ತನ ಪುಸ್ತಕದಲ್ಲೀಗ ಯಮನ ಹೆಸರಿದೆ

ಒಬ್ಬಂಟಿ ನಿಂತೆ
ಗುಡಿಗಿನಾರ್ಭಟದ
ಮಳೆಯ ರಾತ್ರಿಯಲಿ
ಜಾಲಿ ಮರದಡಿಗೆ.
ಕೊಂಬೆಗಳ ಸೀಳುತ-
ಬಂದ ಸಿಡಿಲು ಹಾದು-
ಹೋಯಿತು ಬಲಬದಿಗೆ
ನನ್ನ ಸುಡದೆ.

ಹೆಜ್ಜೆಯೂರಿದೆ
ನಿದ್ದೆಗಣ್ಣಲ್ಲಿ ಎಚ್ಚರತಪ್ಪಿ
ಸುಡುಗೆಂಡಗಳ ಮೇಲೆ.
ಅಂಗಾಲು ಬುಡದಿಂದ
ಪುಟಿದು ಬಂದ
ಹಿಮದ ಚಿಟ್ಟೆಗಳು
ನೀರಾಗದೇ ಉಳಿದವು
ಗಾಳಿಯ ತೆಕ್ಕೆಯಲಿ

ಕಾಲ್ಜಾರಿ ಬಿದ್ದೆ
ಬಾನೆತ್ತರ ಬೆಟ್ಟದಿಂದ
ಹಾಳು ಕಂದಕದೊಳಗೆ
ಅಲ್ಲಿ ಸುತ್ತಲೂ ಸಂಜೀವಿನಿ.

ಸಾಯದೇ ನಾ ಉಳಿದೆ.
ಚಿತ್ರಗುಪ್ತನ ಪುಸ್ತಕದಲ್ಲೀಗ-
ಯಮನ ಹೆಸರಿದೆ.

ವಿಜ್ಞಾನದ ವಿದ್ಯಾರ್ಥಿಯಾದ ಅಜಯ್ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು.
ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆ, ಅ.ನ.ಕೃ ಕಥಾ ಸ್ಪರ್ಧೆಗಳಲ್ಲಿ ಬಹುಮಾನಿತರು.
‘ಗಗನಸಿಂಧು’, (ಕಾವ್ಯ) ‘ಡಯಾನಾ ಮರ’, ‘ಕಲಲ ಕನ್ನೀಟಿ ಪಾಟ’, ‘ವಿಮುಕ್ತೆ’ (ಅನುವಾದ) ಪ್ರಕಟಿತ ಕೃತಿಗಳು.
ಸದ್ಯ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಎಂ.ಎಸ್ಸಿ (ಭೌತಶಾಸ್ತ್ರ) ಓದುತ್ತಿದ್ದಾರೆ.