ದಿವಂಗತ ಹಿರಿಯ ಬಲಿಪ ನಾರಾಯಣ ಭಾಗವತರು ಉಪಯೋಗಿಸುತ್ತಿದ್ದ ಜಾಗಟೆ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆಯವರು ಕೊಟ್ಟದ್ದು. ಇದು ಈಗಲೂ ಬಲಿಪ ಮನೆತನದ ಅತ್ಯಮೂಲ್ಯ ಆಸ್ತಿಯಂತಿದೆ. ಈ ಜಾಗಟೆ ತೆಂಕು ತಿಟ್ಟು ಯಕ್ಷಗಾನದ ಅನಭಿಷಿಕ್ತ ಸಾಮ್ರಾಟ ಮುನ್ನಡೆಸಿದ ಯಕ್ಷಗಾನಗಳಿಗೆ ಸಾಕ್ಷಿಯಂತೆ ಇರುವ, ಐತಿಹಾಸಿಕ ಮಹತ್ವವಿರುವ ಜಾಗಟೆ. ಈಗ ಅದು ನೋಡುತ್ತಿರುವುದು ಬಲಿಪ ಪರಂಪರೆಯ ನಾಲ್ಕನೆಯ ತಲೆಮಾರನ್ನು. ‘ಬಲಿಪ ಮಾರ್ಗ’ ಅಂಕಣದಲ್ಲಿ ಕೃಷ್ಣ ಪ್ರಕಾಶ ಉಳಿತ್ತಾಯ ಅವರು ಯಕ್ಷಗಾನದಲ್ಲಿ ಬಳಸುವ ಜಾಗಟೆಯ ವೃತ್ತಾಂತವನ್ನು ವಿವರಿಸಿದ್ದಾರೆ. 

 

ತಾಳಧಾರಿ

ತೆಂಕು ತಿಟ್ಟು ಯಕ್ಷಗಾನದಲ್ಲಿ ಯಾವ ಸಂದರ್ಭದಿಂದ ಭಾಗವತನಾದವನು ಜಾಗಟೆಯನ್ನು ಬಳಸಲು ಆರಂಭಿಸಿದ್ದು ಅನ್ನುವದನ್ನು ‘ಇದಮಿತ್ಥಂ’ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ಹೀಗೊಂದು ಊಹೆಯನ್ನು ಮಾಡಬಹುದು- ಪಾರ್ತಿಸುಬ್ಬ ಕವಿಯು ಕೇರಳದ ಕೊಟ್ಟಾರಕರ ಮಹಾರಾಜನ ಆಸ್ಥಾನದಲ್ಲಿ ಕಥಕ್ಕಳಿ ಮತ್ತು ‘ರಾಮನಾಟ್ಟಂ’ ಕಲೆಯನ್ನು ಕಲಿತು ತನ್ನ ಊರಿಗೆ ಬಂದು, ತೆಂಕುತಿಟ್ಟಿನ  ವಿವಿಧ ಅಂಗಗಳಲ್ಲಿ ಪರಿಷ್ಕರಣೆಗಳನ್ನು ಮಾಡಿದ ಸಂದರ್ಭದಲ್ಲಿ ಭಾಗವತನ ಕೈಗೆ ಜಾಗಟೆ ಮತ್ತು ಕೋಲು ಬಂದಿರಬೇಕು. ಜಾಗಟೆ ಕೋಲಿನ  ಬಳಕೆ  ಹೀಗೆ ಆರಂಭವಾದದ್ದಿರಬಹುದು ಎಂಬುದೊಂದು ಅಂದಾಜು. ಇದನ್ನು ಅನುಲಕ್ಷಿಸಿ ನೋಡುವಾಗ ಕಥಕ್ಕಳಿಯಲ್ಲಿ ಈಗಲೂ ಜಾಗಟೆಯೇ ಕಥಕ್ಕಳಿ ಹಾಡುಗಾರನ ಮುಖ್ಯ ವಾದ್ಯವಾಗಿ ಬಳಸಲ್ಪಡುತ್ತಿದೆ. ಮುಖ್ಯಹಾಡುಗಾರನ ಜತೆಗೆ ಹಾಡುವವನು ಚಕ್ರತಾಳವನ್ನು ಹಿಡಿದಿರುತ್ತಾನೆ. ಅದೇ ಪದ್ಧತಿಯಂತೆ ಯಕ್ಷಗಾನದಲ್ಲೂ ಸಂಗೀತಗಾರನ (ಒತ್ತು ಭಾಗವತ) ಕೈಗೆ ಚಕ್ರತಾಳ ಬಂದಿದೆ.

ಹೀಗೆ ಕಥಕ್ಕಳಿಯ ಬಳಕೆ ಯಕ್ಷಗಾನಕ್ಕೆ ಬಂದುದಾಗಿರಲೂಬಹುದು ಎಂಬುದು ಒಂದು ಊಹೆಯಷ್ಟೆ. ಯಾಕೆಂದರೆ ಜಾಗಟೆಯ ಬಳಕೆ ಪ್ರಾಚೀನ ಭಾರತದ ಸಂಗೀತ ಗ್ರಂಥಗಳಲ್ಲಿ ಅಷ್ಟೊಂದು ಕಾಣುವುದಿಲ್ಲ.  ಪಂಡರೀಕವಿಠ್ಠಲ ರಚಿಸಿದ, ‘ನರ್ತನನಿರ್ಣಯ’ ಎಂಬ ಗ್ರಂಥದಲ್ಲೂ ತಾಳವೆಂದರೆ ಇಂದು ನಾವು ಬಳಸುವ ಚಕ್ರತಾಳದ ರೀತಿಯ ವಿವರಣೆಯೇ ಆಗಿದೆ. ಬಡಗುತಿಟ್ಟು ಯಕ್ಷಗಾನದಲ್ಲಿ ಇಂದಿಗೂ “ಗುಬ್ಬಿತಾಳ” ಎಂಬ ಸಣ್ಣ ಲೋಹದ ತಾಳಗಳನ್ನು ಬಳಸುತ್ತಾರೆ. ಪ್ರಾಚೀನ ಯಕ್ಷಗಾನದ ಭಾಗವತನ ಕೈಯಲ್ಲಿ ಇಂತಹಾ ವರ್ತುಲಾಕಾರದ ತಾಳವೇ ಇದ್ದುದಿರಲೂಬಹುದು. ನರ್ತನನಿರ್ಣಯದ ‘ತಾಳಧರ್ತೃ’ ಪ್ರಕರಣದಲ್ಲಿ ಹೇಳಿರುವ “ತಾಳಧರ:” ಎಂಬ ಶ್ಲೋಕದಲ್ಲಿ ತಾಳಧಾರಿಗಿರಬೇಕಾದ ಅವಶ್ಯ ಗುಣಗಳು ಇವು:

ಲಕ್ಷ್ಯಲಕ್ಷಣ ಸಂಪನ್ನೋ ಗುಣವಾನ್ ಪ್ರತಿಭಾಪಟುಃ |

ಸಂಗೀತವಾದ್ಯನೃತ್ಯಸ್ಯಕಾಲಜ್ಞಸ್ತಾಲಧರ್ತೃಕಃ ||

ನೃತ್ಯದ ಲಕ್ಷ್ಯ ಮತ್ತು ಲಕ್ಷಣಗಳನ್ನು (ಪ್ರಯೋಗ ಮತ್ತು ಶಾಸ್ತ್ರ) ತಿಳಿದಿರುವವನಾಗಿ; ಗುಣವಂತನಾಗಿ; ಪ್ರತಿಭಾವಂತನಾಗಿ; ಸಂಗೀತ, ವಾದ್ಯ ಮತ್ತು ನೃತ್ಯ ಪ್ರಯೋಗಗಳನ್ನೂಮತ್ತು ಅದರ ಕಾಲೋಚಿತ-ಕಲೋಚಿತ ತಿಳಿವಳಿಕೆಯನ್ನು ಚೆನ್ನಾಗಿ ತಿಳಿದಿರುವವನನ್ನು ‘ತಾಲಧಾರ್ತೃಕ’ ಎಂದು ಅಥವಾ ತಾಳಧಾರಿ ಎಂದು ಕರೆಯುತ್ತಾರೆ.

ನರ್ತನನಿರ್ಣಯದ ತಾಳಸ್ತುತಿ ಎಂಬ ಪದ್ಯದಲ್ಲಿ ವರ್ತುಲಾಕಾರದ ಲೋಹದ ಎರಡು ವಾದ್ಯಗಳೆಂದು ತಾಳವನ್ನು ಹೇಳಲಾಗಿದೆ. ಆದರೆ ಯಕ್ಷಗಾನದ ತಾಳಧಾರಿಯಾದ ಭಾಗವತನಿಗಿರಬೇಕಾದ ಗುಣಗಳಿಗೆ ಹೊಂದುವಂತೆ ಪಂಡರೀಕವಿಠ್ಠಲನೂ ತಾಳಧಾರಿಯಲ್ಲಿರಬೇಕಾದ ಗುಣಗಳನ್ನು ಪ್ರಸ್ಫುಟವಾಗಿ ಹೇಳಿದ್ದಾನೆ. ನರ್ತನನಿರ್ಣಯ ಹದಿನಾರನೆಯ ಶತಮಾನದ ಗ್ರಂಥವೆಂದು ವಿದ್ವಾಂಸರಿಂದ ನಿರ್ಣಯಿಸಲ್ಪಟ್ಟಿದೆ. ಈ ಗ್ರಂಥವು ನರ್ತನ, ವಾದನ, ಗಾಯನಕ್ಕೆ ಸಂಬಂಧಿಸಿದ ರಂಗಕ್ರಿಯೆಗಳ ಮೇಲಿರುವ ಪ್ರಗಲ್ಭ ಗ್ರಂಥ. ಸಂಗೀತರತ್ನಾಕರದ ನಂತರ ಬಂದ ಉತ್ಕೃಷ್ಟವಾದ ಭಾರತೀಯ ನೃತ್ಯ-ವಾದನ-ಗಾಯನ ಲಕ್ಷ್ಯ-ಲಕ್ಷಣಗಳ ಕುರಿತಾದ ಬೃಹತ್ ಕೃತಿ.

ಜಾಗಟೆ ಘನವಾದ್ಯ ಪ್ರಭೇದಕ್ಕೆ ಸೇರಿರುವಂಥದ್ದು. ಯಕ್ಷಗಾನದಲ್ಲಿ ಘನವಾದ್ಯಪ್ರಕಾರಗಳಲ್ಲಿ ಜಾಗಟೆಗೆ ಪ್ರಧಾನ ಸ್ಥಾನ, ಆಮೇಲಿನದು, ಚಕ್ರತಾಳ (ಝಲ್ ಎಂಬ ಜೀರುನಾದವನ್ನು ಎಬ್ಬಿಸುವ ಎರಡು ವೃತ್ತಾಕಾರದ ತಾಳಗಳನ್ನು ಚಕ್ರತಾಳವೆಂದು ಕರೆಯುತ್ತಾರೆ), ಮದ್ದಳೆಗೆ ಹಾಕಿರುವ ಕುಂಡಲ ಮತ್ತು ನರ್ತಕನ ಗೆಜ್ಜೆ. ಜಾಗಟೆ ಅಂದರೆ ಕಂಚಿನ ಗೋಲಾಕಾರದ ತಾಳ. ಇದು ಭಾಗವತನ ಕೈಯ್ಯಲ್ಲಿದ್ದು ಹಾಡುವಾಗ ಆತ ತಾಳವನ್ನು ತೋರಿಸುವುದು, ಜಾಗಟೆಗೆ ಕೋಲಿನಿಂದ (ಹೆಚ್ಚಾಗಿ ಜಿಂಕೆಯ ಕೋಡನ್ನು ಬಳಸುತ್ತಾರೆ. ಅದಲ್ಲದೆ ಚೆನ್ನಾದ ಮರದ ಸಣ್ಣ ಕೋಲನ್ನೂ ಬಳಸುವುದುಂಟು). ಭಾಗವತನು ಜಾಗಟೆಗೆ ಇಕ್ಕುವ ಘಾತದ ಮೂಲಕ ಹಾಡಿನ ತಾಳವನ್ನು ತೋರಿಸುವುದು ತೆಂಕುತಿಟ್ಟು ಯಕ್ಷಗಾನದ ಕ್ರಮ. ಜಾಗಟೆಯನ್ನು ಆಯ್ಕೆ ಮಾಡುವಾಗಲೂ ಭಾಗವತರು ಅತ್ಯಂತ ಜಾಗ್ರತೆ ವಹಿಸುತ್ತಾರೆ. ತಮ್ಮ ಗಾಯನದ ಶ್ರುತಿಗೆ ಸಮವಾಗಿ ಇರುವ ಶ್ರುತಿಯ ಜಾಗಟೆಯನ್ನೇ ಭಾಗವತರು ಬಯಸುತ್ತಾರೆ-ಹುಡುಕುತ್ತಾರೆ-ಆಯ್ಕೆಮಾಡುತ್ತಾರೆ.

ಹಿರಿಯ ವಿದ್ವಾಂಸರಾದ ಡಾ.ರಾಘವ ನಂಬಿಯಾರರು ತಮ್ಮ ಮಹತ್ ಗ್ರಂಥವಾದ “ಹಿಮ್ಮೇಳ”ದಲ್ಲಿ ಈ ಹಿಂದೆ ಬಡಗುತಿಟ್ಟು ಯಕ್ಷಗಾನದಲ್ಲೂ ಜಾಗಟೆಯನ್ನು ಬಳಸುತ್ತಿದ್ದ ಬಗೆಗೆ ಗಮನ ಸೆಳೆಯುತ್ತಾರೆ. ಅವರಿಗೆ ಹೆಚ್.ಸುಬ್ಬಣ್ಣ ಭಟ್ ಎಂಬವರು ಕೊಟ್ಟ ಮಾಹಿತಿಯಂತೆ “ಮಂಜಪ್ಪ ಭಾಗವತರು ಬಡಗುತಿಟ್ಟಿನಲ್ಲಿ ತಾಳದ ಬದಲು ಜಾಗಟೆ ಹಿಡಿಯುತ್ತಿದ್ದ ಭಾಗವತರೆಂದು,  ಅವರು ಜಾಗಟೆಯಲ್ಲಿ ಕೋಲಿನಿಂದ ಬಲು ಚುರುಕಾಗಿ ತಾಳದ ನುಡಿತ ನೀಡುತ್ತಿದ್ದರೆಂದೂ ಶೇಷಗಿರಿ ಭಾಗವತರು ಹೇಳಿದ್ದಾರೆ” ಎಂದು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಅಂತೆಯೇ, “ ಬಡಗುತಿಟ್ಟಿನ ಶೇಷಗಿರಿ ಭಾಗವತರ ಗುರುಗಳಾದ ರಾಮಯ್ಯ ಭಾಗವತರು, ಮಾರಣಕಟ್ಟೆ (ಬಡಗು) ಮೇಳದ ಭಾಗವತರಾಗಿ ಹೆಸರು ಮಾಡಿದ ಬೈಕಾಡಿ ನಾರಣಿ ಭಾಗವತರು ಜಾಗಟೆ ಹಿಡಿದು ಹಾಡುತ್ತಿದ್ದರು. ಇವರು ಇಪ್ಪತ್ತನೆ ಶತಮಾನದ ಮೊದಲ ಪಾದದಲ್ಲಿ ಇದ್ದ ಭಾಗವತರು” ಎಂದು ಡಾ.ರಾಘವ ನಂಬಿಯಾರರು ತಮ್ಮ “ಹಿಮ್ಮೇಳ” ಗ್ರಂಥದಲ್ಲಿ ಹೇಳುತ್ತಾರೆ. (ಪುಟ 166)

ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಷಿಯವರ “ಯಕ್ಷಗಾನ ಪದಕೋಶ”  ಎಂಬ ಕೋಶದಲ್ಲಿ ಜಾಗಟೆಯ ಅರ್ಥವ್ಯಾಪ್ತಿ ಹೀಗಿದೆ: “ಭಾಗವತರು ಹಾಡುಗಾರಿಕೆಗೆ ಬಳಸುವ ತಾಳವಾದ್ಯ; ಕಂಚಿನ ಗಂಟೆ; ಕಂಚು, ಬೆಳ್ಳಿ ಮಿಶ್ರಣದ ಜಾಗಟೆಗಳೂ, ಕಬ್ಬಿಣದ ಜಾಗಟೆಯೂ ಬಳಕೆಯಲ್ಲುಂಟು. ಇದು ವೃತ್ತಾಕಾರದ ಸಪಾಟಾದ ಜಾಗಟೆ. ಇದರ ಬದಿಗೆ ತೂತುಗಳಿದ್ದು, ಅದಕ್ಕೆ ಹಗ್ಗ ಸಿಕ್ಕಿಸಿ ಇರುತ್ತದೆ. ಅದನ್ನು ಬಾರಿಸಲು ಜಿಂಕೆಯ ಕೊಂಬನ್ನು ಅಥವಾ ಮರದ ಕೋಲನ್ನು ಬಳಸುವರು”. “ಜಾಗಟೆ”ಯೆಂಬುದು “ಒಂದು ಬಗೆಯ ವರ್ತುಲಾಕಾರದ ಲೋಹವಾದ್ಯ” ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಅರ್ಥವನ್ನು ಕೊಡುತ್ತದೆ. ಜೇಗಂಟೆ, ಜಗ್ಗುಟೆ, ಜಾಂಗಟೆ, ಜಾಗಂಟೆ, ಜಾಗಟ, ಜಾಗಟೆ, ಜೇಗಟ, ಜೇಗಟೆ, ಜೇಗಳೆ, ಜೇಘಂಟೆ, ಝಾಂಗಟೆ, ಝಾಗಟೆ ಎಂದೂ ಈ ಲೋಹವಾದ್ಯವನ್ನು ಕರೆಯುತ್ತಾರೆ.

ಅಜ್ಜ ಜಾಗಟೆ ಕೊಟ್ಟರು

(ಮಂಜಯ್ಯ ಹೆಗ್ಗಡೆ)

ಅಜ್ಜ ಬಲಿಪರು (ದಿವಂಗತ ಹಿರಿಯ ಬಲಿಪ ನಾರಾಯಣ ಭಾಗವತರು) ಉಪಯೋಗಿಸುತ್ತಿದ್ದ ಜಾಗಟೆ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆಯವರು ಕೊಟ್ಟದ್ದು. ಇದು ಬಲಿಪ ಮನೆತನದ ಅತ್ಯಮೂಲ್ಯ ಆಸ್ತಿಯಂತಿದೆ. ಈ ಜಾಗಟೆ ತೆಂಕು ತಿಟ್ಟು ಯಕ್ಷಗಾನದ ಅನಭಿಷಿಕ್ತ ಸಾಮ್ರಾಟ ಮುನ್ನಡೆಸಿದ ಯಕ್ಷಗಾನಗಳಿಗೆ ಸಾಕ್ಷಿಯಂತೆ ಇರುವ ಐತಿಹಾಸಿಕ ಮಹತ್ತ್ವವಿರುವ ಜಾಗಟೆ. ಈಗ ಅದು ನೋಡುತ್ತಿರುವುದು ಬಲಿಪ ಪರಂಪರೆಯ ನಾಲ್ಕನೆಯ ತಲೆಮಾರನ್ನು. ಅಜ್ಜ ಬಲಿಪ ನಾರಾಯಣ ಭಾಗವತರಿಂದ ಮೊಮ್ಮಗ, ಬಲಿಪನಾರಾಯಣ ಭಾಗವತರಿಗೆ ಬಂದ ಈ ಜಾಗಟೆ, ಅನಂತರ ಅಂದರೆ ಪ್ರಸ್ತುತ ಮರಿಮಗ ಬಲಿಪ ಶಿವಶಂಕರ ಭಟ್ ಈ ಜಾಗಟೆಯನ್ನು ಉಪಯೋಗಿಸುತ್ತಿದ್ದಾರೆ.

ಶ್ರೀ ಬಲಿಪ ನಾರಾಯಣ ಭಾಗವತರು ತಮ್ಮ ಅಜ್ಜನಲ್ಲಿ (ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಡಿಮೆಮಾಡಿರುವಾಗ) ಅವರು ಬಳಸುತ್ತಿದ್ದ ಜಾಗಟೆ ಬೇಕೆಂದು ಕೇಳಿದ್ದರಂತೆ: “ ನೀವು ಹೇಗೂ ಈಗ ಪದ ಹೇಳುವುದಿಲ್ಲವಲಾ, ನಿಮ್ಮ ಜಾಗಟೆ ನನಗೆ ಕೊಡಿ” ಎಂದು ಕೇಳಿದರು. ಅದಕ್ಕೆ ಉತ್ತರಿಸುತ್ತಾ ಅಜ್ಜ ಬಲಿಪರು “ ನನಗೆ ಮತ್ತೆ ಜಾಗಟೆ ಬೇಕಾದ್ರೆ ನಾನು ನಿನ್ನನ್ನು ಹುಡುಕಿಕೊಂಡು ಬರಬೇಕೋ? ಅದೆಲ್ಲ ಬೇಡ, ನೀನು ನಿನ್ನ ಜಾಗಟೆಯಲ್ಲೇ ಪದ ಹೇಳು” ಎಂದು ಉತ್ತರಿಸಿದರು. ಆದರೆ ಅಜ್ಜನಿಗೆ ಮೊಮ್ಮಗನ ಮೇಲಿರುವ ವಾತ್ಸಲ್ಯ ಮತ್ತು ಈತನೇ ತನ್ನ ಹೆಸರನ್ನು ಉಳಿಸುವವನೆಂಬ ಭರವಸೆ ಇದ್ದುದರಿಂದ ಅಜ್ಜ ಬಲಿಪರು ಮಂಗಳೂರಿನಲ್ಲಿ ಅಸೌಖ್ಯದ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿರುವಾಗ ಬಲಿಪರ ತಂಗಿ ಭವಾನಿ ಅವರ ಬಳಿ,  ಜಾಗಟೆ ಮತ್ತು ಎರಡು ಪ್ರಸಂಗ ಪುಸ್ತಕಗಳನ್ನು “ಇದನ್ನು ನಾರಾಯಣನಿಗೆ ಕೊಡು” ಎಂದು ಹೇಳಿ ಕಳುಹಿಸಿ ಕೊಟ್ಟರು. ಇದನ್ನು ಬಲಿಪ ನಾರಾಯಣ ಭಾಗವತರು ಅತ್ಯಂತ ಗೌರವದಿಂದ ನೆನಪಿಸಿಕೊಳ್ಳುತ್ತಾರೆ.

ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ಹೋಗುವಾಗ ತಮ್ಮ ಜಾಗಟೆಯನ್ನೂ ತೆಗೆದುಕೊಂಡು ಹೋಗಿದ್ದರು ಎಂಬುದು ಇಲ್ಲಿ ಗಮನೀಯ. ಚಾರಿತ್ರಿಕವಾಗಿ ಬಹಳ ಮಹತ್ವದ ಈ ಜಾಗಟೆ ಯಕ್ಷಗಾನದ ಅತ್ಯಮೂಲ್ಯ ಆಸ್ತಿ. ಇದೇ ಜಾಗಟೆಯನ್ನೇ ಬಲಿಪರು ಈಗಲೂ ಬಳಸುತ್ತಿರುವುದು. ಈಗ ಬಲಿಪ ನಾರಾಯಣ ಭಾಗವತರ ಪುತ್ರ  ಬಲಿಪ ಶಿವಶಂಕರ ಭಟ್ ಇದನ್ನೇ ಬಳಸುತ್ತಿರುವುದು. ಈ ಜಾಗಟೆಯನ್ನು ವಿಶೇಷ ದಿನಗಳಲ್ಲಿ ಪೂಜೆಗೆ ಇಡುವ ಪದ್ಧತಿ ಈಗಲು ಇದೆ. ಬಲಿಪ ಮನೆಯಲ್ಲಿ ವರ್ಷಂಪ್ರತಿ ನಡೆಯುವ ತ್ರಿಕಾಲ ಪೂಜೆಯ (ದುರ್ಗಾರಾಧನೆಯನ್ನು ಅಂದರೆ ದೀಪಮಧ್ಯದಲ್ಲಿ ಮಂಡಲಬರೆದು ದುರ್ಗಾರಾಧನೆಯನ್ನು ದಿನದ ತ್ರಿಕಾಲಗಳಲ್ಲಿ ನಡೆಸುವುದು) ಸಂದರ್ಭದಲ್ಲಿ ಈ ಜಾಗಟೆಯನ್ನೂ ಪೂಜಿಸುವ ಕ್ರಮ ಇದೆ. ಇದು ಈಗಲೂ ನಡೆದುಕೊಂಡು ಬರುತ್ತಿದೆ.

ಹಿರಿಯ ಬಲಿಪರು ಅಸೌಖ್ಯದಿಂದ ಇದ್ದಾಗ ಮಂಗಳೂರಿನ ಆಸ್ಪತ್ರೆಗೆ ಹೋಗಬೇಕಾಯಿತು. ಆಗ ತಮ್ಮ ಜಾಗಟೆಯನ್ನೂ ತೆಗೆದುಕೊಂಡು ಹೋಗಿದ್ದರು ಎಂಬುದು ಗಮನೀಯ. ಚಾರಿತ್ರಿಕವಾಗಿ ಬಹಳ ಮಹತ್ವದ ಈ ಜಾಗಟೆ ಯಕ್ಷಗಾನದ ಅತ್ಯಮೂಲ್ಯ ಆಸ್ತಿ. ಇದೇ ಜಾಗಟೆಯನ್ನೇ ಬಲಿಪರು ಈಗಲೂ ಬಳಸುತ್ತಿದ್ದಾರೆ.

ಹಿರಿಯ ಬಲಿಪ ನಾರಾಯಣ ಭಾಗವತರು ಕೀರ್ತಿಶೇಷರಾದಾಗ ತಂದ ಗೌರವ ಗ್ರಂಥ ‘ಕಲಾತಪಸ್ವಿ’. ಯಕ್ಷಗಾನ ಕಲೆಯಲ್ಲಿ ಪ್ರಾಯಶಃ ಪ್ರಪ್ರಥಮ ಬಾರಿಗೆ ಕಲಾವಿದನೊಬ್ಬನ ಗೌರವಾರ್ಥ ಪ್ರಕಟವಾದ ಪುಸ್ತಕ. 1967ನೆಯ ಇಸವಿಯಲ್ಲಿ ಪ್ರಕಟವಾದ ಈ ಗ್ರಂಥದಲ್ಲಿ ತನ್ನ ಅಜ್ಜನ ಬಗೆಗೆ ಬಲಿಪ ನಾರಾಯಣ ಭಾಗವತರು (ಬಲಿಪ ನಾರಾಯಣ ಭಟ್ಟ, ಪಡ್ರೆ-ಎಂದು ಪುಸ್ತಕದಲ್ಲಿ ಹೆಸರಿಸಿದೆ) ಹೀಗೆ ಹೇಳಿದ್ದಾರೆ: “ಮರಣಕ್ಕೆ ಪೂರ್ವಭಾವಿಯಾಗಿಯೇ ಅವರು ಯಕ್ಷಗಾನ ಹಾಡುಗಾರಿಕೆಯ ಅನೇಕ ರಹಸ್ಯ ವಿಚಾರಗಳನ್ನು ಉಪದೇಶಿಸಿ, ಜಾಗಟೆಯನ್ನು ಅನುಗ್ರಹಿಸಿ ಆಶೀರ್ವದಿಸಿದ್ದಾರೆ. ಭಗವಂತನ ಅನುಗ್ರಹದಿಂದಲೂ, ಅಜ್ಜನ ಆಶೀರ್ವಾದ ಬಲದಿಂದಲೂ, ಅಂತಹ ಅಜ್ಜನ ಮೊಮ್ಮಗ ಇವನು ಎಂದು ಹೇಳಿಸಿಕೊಳ್ಳುವ ಯೋಗ್ಯತೆ ನನಗುಂಟಾಗಲಿ ಎಂದು ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತೇನೆ.”

ಜಾಗಟೆ ರಂಗ ನಿಯಂತ್ರಣದ ಪ್ರತೀಕ

ಯಕ್ಷಗಾನ ಕ್ಷೇತ್ರದಲ್ಲಿ ಭಾಗವತನಾದವನಿಗೆ ಜಾಗಟೆ ಪಡೆದು ಆಶೀರ್ವಾದ ಪಡೆಯುವುದೆಂದರೆ ಶಿಷ್ಯ ಸ್ವೀಕಾರ ಕಾರ್ಯದಂತೆ. ಅತ್ಯಂತ ಪವಿತ್ರವಾದ ಸಂದರ್ಭವದು. ಇಂದು ಯಕ್ಷಗಾನದಲ್ಲೂ (ತೆಂಕುತಿಟ್ಟು) ಒಬ್ಬ ಭಾಗವತ ರಂಗದಿಂದ ಇಳಿಯುವ ಸಂದರ್ಭ ಮತ್ತು ಪ್ರಸಂಗವನ್ನು ನಡೆಸಲು ಮತ್ತೋಬ್ಬ ರಂಗಕ್ಕೇರುವ ಸಂದರ್ಭ ಜಾಗಟೆಯ ಹಸ್ತಾಂತರ ಅಥವಾ ಸಾಂಕೇತಿಕವಾಗಿ ಇಳಿಯುವ ಭಾಗವತನ ಜಾಗಟೆಯನ್ನು ಸ್ಪರ್ಶಿಸಿ ಗೌರವಾರ್ಪಣೆ ಮಾಡುವುದು ಆನೂಚಾನವಾಗಿ ನಡೆದುಕೊಂಡು ಬಂದಿರುವ ಸಂಗತಿ. ಇತರ ಹಿಮ್ಮೇಳದವರೂ (ಚೆಂಡೆ, ಮದ್ದಳೆ, ಚಕ್ರತಾಳ) ರಂಗದಲ್ಲಿ ಕುಳಿತೊಡನೆ ಮಾಡಬೇಕಾದ ಮೊದಲ ಕೆಲಸವೆಂದರೆ ಭಾಗವತನ ಜಾಗಟೆಗೆ ವಂದಿಸುವುದು (ಜಾಗಟೆಯನ್ನು ಸ್ಪರ್ಶಿಸಿ ಹಣೆಗೆ ಒತ್ತಿಕೊಳ್ಳುವುದು). ಇವೆಲ್ಲ ಪರಂಪರೆಯಾಗಿ ಯಕ್ಷಗಾನದಲ್ಲಿ ಬಂದಿರುವಂತಹ ಅಲಿಖಿತ ಸಂಪ್ರದಾಯ.

ಭಾಗವತನಾದವನೂ ಕೂಡ ಹಾಡಲು ತೊಡಗುವ ಮುನ್ನ ಜಾಗಟೆಗೆ ವಂದಿಸಲೇಬೇಕು. ಉಳಿದ ಹಿಮ್ಮೇಳದವರೂ ಕೂಡ ಜಾಗಟೆಗೆ ವಂದನೆ ಸಲ್ಲಿಸಿಯೇ ತಮ್ಮ ವಾದ್ಯಗಳಿಗೆ ಗೌರವಪೂರ್ವಕ ನಮನಗಳನ್ನು ಕೊಟ್ಟು ನುಡಿಸಲು ತೊಡಗಬೇಕು. ಗಾಯನಕ್ಕೆ ಲಯಕಾರಿಯಾಗಿ ನಾದಕ್ಕೆ ಬೇಕಾದ ಚೌಕಟ್ಟನ್ನು ಕೊಡುವಂಥದ್ದು ಜಾಗಟೆ. ಭಾಗವತಿಕೆಗೆ ಕಾಲದ ಚೌಕಟ್ಟನ್ನೂ ಕೊಡುವಂಥದ್ದು. ಹಾಗಾಗಿ ಪ್ರಸಂಗದ ಗತಿ-ನಿಯಂತ್ರಕ ಪ್ರತೀಕವಾಗಿಯೂ “ಜಾಗಟೆ” ಮತ್ತು “ಗುಬ್ಬಿತಾಳ” (ಬಡಗುತಿಟ್ಟು ಯಕ್ಷಗಾನ) ಕಾಣಿಸುತ್ತವೆ. ನಿರ್ದೆಶಕನ ಸ್ಥಾನದ ಪ್ರತೀಕವಾಗಿಯೂ ಇದೆ. ಯಕ್ಷಗಾನದ ರಂಗಸ್ಥಳದಲ್ಲಿ ಅಪಸವ್ಯ ಘಟಿಸಿದರೆ, ಏನಾದರೂ ಕಥಾಚೌಕಟ್ಟು ಮೀರಿ ಮಾತನಾಡಿದರೆ ನಿಯಂತ್ರಿಸಲು ಭಾಗವತನು ಜಾಗಟೆಗೆ ಕೋಲಲ್ಲಿ ಒಂದು ಬಲವಾದ ಘಾತವನ್ನು ಕೊಡುವ ಮೂಲಕ ರಂಗಕ್ರಿಯೆಯನ್ನು ತಮ್ಮ ನಿಯಂತ್ರಣಕ್ಕೆ ತಂದುಕೊಳ್ಳುತ್ತಾರೆ. ವೇಷಧಾರಿಗಳು ಅನಗತ್ಯ ಮಾತಾಡಲು ತೊಡಗಿದರೆ ಹಿಂದಿನಿಂದ ಎರಡು ಮೂರು  ಮೂರು ಬಾರಿ ಮೆಲುದನಿಯಲ್ಲಿ ಜಾಗಟೆಯ ಸದ್ದು ಕೇಳಿಬರುತ್ತದೆ. ಇದರ ಅರ್ಥ, ‘ಮಾತು ನಿಲ್ಲಿಸಿ; ಪ್ರಸಂಗ ಮುಂದುವರಿಯಲಿ’ ಎಂದು. ದೊಡ್ಡ ಪೆಟ್ಟನ್ನು ಜಾಗಟೆಗೆ ಕೊಟ್ಟರೆ ಮುಂದಿನ ಪದ್ಯವನ್ನು ಆರಂಭಿಸುತ್ತೇನೆ ಎಂಬ ಅರ್ಥವಿದೆ.

ಬಲಿಪ ನಾರಾಯಣ ಭಾಗವತರು ಪ್ರಸಂಗದ ಪದ್ಯ ಹಾಡಿ, ಪಾತ್ರಧಾರಿ ತನ್ನ ಮಾತನ್ನು (ಅರ್ಥವನ್ನು) ಹೇಳುವ ಸಂದರ್ಭದಲ್ಲಿ ಜಾಗಟೆಯನ್ನು ಇಟ್ಟುಕೊಳ್ಳುವ ಕ್ರಮ ಸೊಗಸಾದದ್ದು. ಜಾಗಟೆಯ ಅಂಚಿನಲ್ಲಿರುವ ಎರಡು ತೂತುಗಳಿಗೆ (ಹಿಡಿಕೆಗಾಗಿ) ಹೆಣೆದ ಕಪ್ಪುದಾರಗಳ ಅಥವಾ ಇನ್ನಿತರ ದಾರಗಳ ಮಧ್ಯದಲ್ಲಿ ತಮ್ಮ ಜಾಗಟೆಯನ್ನು ತಾಡಿಸಲು ಬೇಕಾದ ಜಿಂಕೆಯ ಕೊಂಬಿನ ಕೋಲನ್ನು ತುರುಕಿಸಿ ಅದನ್ನು ತೊಡೆಯಲ್ಲಿಟ್ಟು ತಾಂಬೂಲ ಪೆಟ್ಟಿಗೆಗೆ ಕೈಯಿಕ್ಕಿ ವೀಳ್ಯದೆಲೆಗೆ  ಸುಣ್ಣಬಳಿಯುವ ಸೊಗಸಾದ ಚಿತ್ರ ಕಣ್ಣಮುಂದೆ ಬರುತ್ತದೆ.

ಬಲಿಪ ನಾರಾಯಣ ಭಾಗವತರು ಅಜ್ಜ ಕೊಟ್ಟ ಜಾಗಟೆಯನ್ನು ಬೇರೆ ಯಾವ ಭಾಗವತರಿಗೂ ಬಳಸಲು ಕೊಡುತ್ತಿರಲಿಲ್ಲ. ಅದನ್ನು ಅಷ್ಟೊಂದು ಪವಿತ್ರವಾಗಿ ಕಾಣುತ್ತಿದ್ದರು. ಇದು ಬಲಿಪರು ತಮ್ಮಅಜ್ಜನ ಮೇಲಿರಿಸಿದ ಗೌರವದ ಪ್ರತೀಕ. ಆ ಜಾಗಟೆಯ ಮೇಲಿರಿಸಿದ ಭಕ್ತಿಯ ದ್ಯೋತಕ.

ಜಾಗಟೆ ನುಡಿಸುವಲ್ಲೂ ಕಲೆಗಾರಿಕೆ

ಬಲಿಪ ನಾರಾಯಣ ಭಾಗವತರು ಜಾಗಟೆಗೆ ಕೋಲಿನಿಂದ ತಾಡಿಸುವ ಕ್ರಮವೂ ಸೊಗಸಾದದ್ದು. ಜಿಂಕೆಯ ಕೊಂಬಿನ ತುದಿಯಿಂದ ಜಾಗಟೆಗೆ ಘಾತಿಸುವಾಗ ಜಾಗಟೆ ಎಬ್ಬಿಸುವ “ಟಕ್” ಎಂಬ ನಾದ (ಜಾಗಟೆಯನ್ನು ಭಾಗವತನ ತೊಡೆಯ ಅಡ್ಡವಾಗಿ ಮೇಲಿಟ್ಟು  ಘಾತಿಸುವಾಗ ಏಳುವ ನಾದ) ಮತ್ತು “ಟಣ್” ಎಂಬ ನಾದ (ಜಾಗಟೆಯನ್ನು ಎತ್ತಿ ಘಾತಿಸುವಾಗ ಹೊರಡುವ ನಾದ) ಇವು ಅತ್ಯಂತ ಸಂಯಮದಿಂದ ಕೂಡಿದ್ದು. ಭಾಗವತನ ಮುಖದ ಸಮೀಪವಿರುವ ಮೈಕ್ ಈ ಜಾಗಟೆಯ ಘಾತಗಳನ್ನು ಸೆಳೆದುಕೊಳ್ಳದಿರುವಷ್ಟರ ಮೃದು ಘಾತಗಳು. ಆದರೆ, ವೇಷಧಾರಿಗೆ ಚೆಂಡೆ-ಮದ್ದಳೆಯವರಿಗೆ ಸ್ಫುಟವಾಗುವಂತಿರುವ ಘಾತಗಳು.

ತಾಳದ ಎಲ್ಲಾ ಅಕ್ಷರಗಳನ್ನೂ ಜಾಗಟೆಯ ಘಾತದಲ್ಲಿ ಕಾಣಿಸಿ ಹಿಮ್ಮೇಳದವರಿ ಮತ್ತು ವೇಷಧಾರಿಗೆ ಯಾವುದೇ ಗೊಂದಲವನ್ನುಂಟುಮಾಡದೆ ನುಡಿಸುವಂತೆ-ಕುಣಿಯುವಂತೆ ಮಾಡುವ ಸುಭಗತನದ ಜಾಗಟೆಯ ಘಾತ ಬಲಿಪ ನಾರಾಯಣ ಭಾಗವತರದು. ಯಕ್ಷಗಾನದ ಅಷ್ಟತಾಳದ ಹಾಡಿಕೆಯಲ್ಲಿ,  ಬಿಡ್ತಿಗೆ ಸಂದರ್ಭದಲ್ಲಿ ಜಾಗಟೆಗೆ ಘಾತಿಸುವ ಬಲಿಪರ ಕ್ರಮ ಗಮನೀಯ. ಬಿಡ್ತಿಗೆ ಅಂದರೆ ಪದ್ಯವನ್ನು ಎತ್ತುಗಡೆಮಾಡಿ, ಜಾಗಟೆಯನ್ನು ಎತ್ತಿ ಹಿಡಿದು ನಿರ್ದಿಷ್ಟ ತಾಳಾವರ್ತ ಸಮಯ ವೇಷಧಾರಿ ತಾಳಾನುಸಾರಿಯಾದ ಕುಣಿತವನ್ನು ಕುಣಿಯಲು ಅವಕಾಶಕೊಡುವ ಸಂದರ್ಭ. ಅದಕ್ಕೆ ಹೊಂದಿಕೆಯಾಗುವ ನುಡಿತಗಳನ್ನು ಚೆಂಡೆ-ಮದ್ದಲೆಯವರು ನುಡಿಸುವುದು.

ಯಕ್ಷಗಾನದ ಅಷ್ಟತಾಳವೆಂದರೆ ಖಂಡ ಆಟತಾಳ ಅಂದರೆ 5+5+2+2 (ಖಂಡ ಲಘು+ಖಂಡ ಲಘು+ ದ್ರುತ+ದ್ರುತ). ಒಟ್ಟು ಹದಿನಾಲ್ಕು ಅಕ್ಷರ. ಬಿಡಿತದ ಸಂದರ್ಭ ಬಲಿಪರು ಜಾಗಟೆಯಲ್ಲಿ ಬಿಡಿತನ್ನು (ಬಿಡ್ತಿಗೆಯನ್ನು) ಘಾತದ ಮೂಲಕ ತೋರಿಸುವುದು ಏಳು ಘಾತಗಳ ಗುಂಪಿನಂತೆ. ಅಂದರೆ “ಟ್ಟಟ್ಟಟ್ಟಟ್ಟಟ್ಟಟ್ಟಟ್ಟ ಟ್ಟಟ್ಟಟ್ಟಟ್ಟಟ್ಟಟ್ಟಟ್ಟ” [ತಕಿಟತಕಧಿಮಿ ತಕಿಟತಕಧಿಮಿ] ಇದು ಬಹಳ ತಾರ್ಕಿಕವಾದದ್ದು. ಖಂಡ ಆಟತಾಳದ ಹದಿನಾಲ್ಕು ಅಕ್ಷರಗಳನ್ನು ಅರ್ಧಕ್ಕೆ ಮಾಡಿ ಏಳೇಳರ ಗುಂಪಿನಿಂದ ತೋರಿಸುವುದು ಸೊಗಸಾದ ತಾರ್ಕಿಕ ನೆಲೆಯದ್ದು. ತೆಂಕು ತಿಟ್ಟಿನ ಮತ್ತೋರ್ವ ಅಗ್ರಮಾನ್ಯ ಭಾಗವತರೂ ಪ್ರಸಂಗಕರ್ತರೂ ಆದ ದಿವಂಗತ ಅಗರಿ ಶ್ರೀನಿವಾಸ ಭಾಗವತರೂ ಇದೇ ತೆರನಾದ ಜಾಗಟೆಯ ಘಾತವನ್ನು ಅಷ್ಟತಾಳದ ಬಿಡ್ತಿಗೆಯ ಸಂದರ್ಭ ನುಡಿಸುತ್ತಿದ್ದರು ಎಂಬುದು ಇಲ್ಲಿ ಆನುಷಂಗಿಕವಾಗಿ ಗಮನಿಸಬೇಕಾದ ಸಂಗತಿ.

ಭೈರವಿಅಷ್ಟ ನಾಮಾಂಕಿತ ರಚನೆಗಳ ತ್ವರಿತ ಅಷ್ಟತಾಳದ ಪದ್ಯವನ್ನು ಹಾಡುವಾಗ ಜಾಗಟೆಯಲ್ಲಿ ತಾಳ ತೋರಿಸುವ ಬಲಿಪ ನಾರಾಯಣ ಭಾಗವತರ ಕ್ರಮವೂ ವಿಶಿಷ್ಟವಾದದ್ದು. ಹೆಚ್ಚಾಗಿ ಏರುಪದ್ಯ ಅಂದರೆ ವೀರರಸ, ರೌದ್ರರಸೋದ್ದೀಪಕ ಪದ್ಯಗಳನ್ನು ಹಾಡುವ ಸಂದರ್ಭದಲ್ಲಿ ಭೈರವಿಅಷ್ಟ ರಚನೆಯ ಹಾಡನ್ನು ಭಾಗವತರು ಅಂದರೆ ಹಾಡುಗಾರ ಹಾಡುತ್ತಾನೆ. ಈ ಸಂದರ್ಭದಲ್ಲಿ  ಬಲಿಪರು ಪದ್ಯದ ಮೊದಲ ಸೊಲ್ಲನ್ನು ಹಾಡಿ ( ಎತ್ತುಗಡೆ ಮಾಡಿ ) ಬಿಡ್ತಿಗೆಯನ್ನು ಸೂಚಿಸುವಾಗ ಜಾಗಟೆಯನ್ನು ಎತ್ತಿ ಹಿಡಿಯುವ ಮುನ್ನಿನ ವೀರರಸಾವೇಶದ ಆಲಾಪ ಮಾಡುವ ಸಮಯದಲ್ಲಿ ಜಾಗಟೆಯಲ್ಲಿ ಎರಡು ಘಾತದಲ್ಲಿ (ಜಾಗಟೆಯಲ್ಲಿ) ತೋರಿಸುವ ತಾಳವನ್ನು ಮೂರಾಗಿ ಪರಿವರ್ತಿಸಿ ಅಂದರೆ: “ ಟ . . ಟ . ಟ .; ಟ . . ಟ . ಟ .; ಟ . . ಟ . ಟ .; ಟ . . ಟ . ಟ .;“ (ಏಳಕ್ಷರದ ಎರಡಾವರ್ತ ಅಂದರೆ ಅಷ್ಟತಾಳದ ಒಂದಾವರ್ತ ಮಾತ್ರಾಸಂಖ್ಯೆ ಹದಿನಾಲ್ಕು ಅಕ್ಷರಕ್ಕೆ ಸರಿಹೊಂದುತ್ತದೆ) ಎಂದು ನುಡಿಸುವ ವಿಧಾನ ಈಗ ಅನ್ಯತ್ರ ಅತಿ ದುರ್ಲಭವೆನಿಸಿದೆ. ಹೀಗೆ ತಾಳ ಬಾರಿಸಿದಾಗ ಬಿಡಿತವೂ ಅದೇ ನಡೆಯಲ್ಲಿ ಸಾಗಲು ಅನುಕೂಲವಾಗುತ್ತದೆ. ಇದು ಈಗಿನ ಕ್ರಮವಾದ ಏಕತಾಳ ಲಯಾನುಸಾರಿ ಬಿಡಿದಿಂದಂತಲ್ಲದೆ ಶಾಸ್ತ್ರೀಯ ಚೌಕಟ್ಟನ್ನು ಹೊಂದಿರುವಂಥದ್ದು. ಇಂದು ಹೆಚ್ಚಿನ ಕಡೆಗಳಲ್ಲಿ ಭೈರವಿಅಷ್ಟ ನಾಮಾಂಕಿತ ಪದ್ಯಗಳನ್ನು ತ್ವರಿತ ಅಷ್ಟತಾಳದಲ್ಲಿ ಹಾಡುವಾಗ ಏಕತಾಲದ ಲಯದ ಬಿಡಿತವನ್ನೇ ಕಾಣಬಹುದು. ಈ ವಿಚಾರವನ್ನು ಕೆಳಗಿನ ಕೋಷ್ಟಕದಲ್ಲಿ ವಿವರಿಸಲಾಗಿದೆ.

ಜಾಗಟೆ ಬಳಕೆಯಲ್ಲಿ ಶ್ರದ್ಧೆ:

ಜಾಗಟೆಯ ಬಳಕೆಯಲ್ಲಿ ಬಲಿಪ ನಾರಾಯಣ ಭಾಗವತರು ಯಾವತ್ತೂ ಔದಾಸಿನ್ಯವನ್ನು ತೋರಿದ್ದಿಲ್ಲ. ಹಿಂದಿನ ಪರಂಪರೆಯಲ್ಲಿ ಯಾವ ರೀತಿ ಭಾಗವತನಾದವ ಜಾಗಟೆಯನ್ನು ಬಳಸುತ್ತಿದ್ದನೋ ಅದೇ ತೆರನಾಗಿ ಜಾಗಟೆಯನ್ನು ಶ್ರದ್ಧೆಯಿಂದ ಬಳಸುತ್ತಿದ್ದಾರೆ. “ಭಾಮಿನಿ” “ವಾರ್ಧಕ”, “ದ್ವಿಪದಿ” “ಕಂದ” “ವಚನ” ರಚನೆಗಳ ಹಾಡಿಕೆಯ ಸಂದರ್ಭ ತಾಳರಹಿತವಾಗಿಯೇ ಹಾಡುವುದು ಯಕ್ಷಗಾನದ ಕ್ರಮ. ಇಂಥ ಸಂದರ್ಭ ಬಲಿಪ ನಾರಾಯಣ ಭಾಗವತರು ಜಾಗಟೆಯನ್ನು ತನ್ನ ಕಿವಿಗೆ ಸಮೀಪವಾಗಿ ಹಿಡಿದಿರಿಸಿ ಪದ್ಯವನ್ನು ಹಾಡುವ ರೀತಿ ಸೊಬಗಿನದು.

ಯಕ್ಷಗಾನದಲ್ಲಿ ಸತಾಲ ಪದ್ಯಗಳು ಅಂದರೆ ತಾಳಸಹಿತವಾದ ಹಾಡುಗಳು ಮತ್ತು ತಾಳರಹಿತ ಪದ್ಯಗಳೆಂದು ಇವೆ. ಪದ್ಯ ಹಾಡುವಾಗ ಜಾಗಟೆಯಲ್ಲಿ ತಾಳವನ್ನು ಘಾತಗಳ ಮೂಲಕ ತೋರಿಸುತ್ತಾ ಹಾಡುವುದು ಸತಾಲ ಪದ್ಯಗಳು. ತಾಳರಹಿತ ಹಾಡುಗಳಲ್ಲಿ ಜಾಗಟೆಯಲ್ಲಿ ತಾಳ ತೋರಿಸುವ ಕ್ರಮ ಇರುವುದಿಲ್ಲ. ಜಾಗಟೆಯನ್ನು ಕಿವಿಯ ಸಮೀಪ ಇಟ್ಟುಕೊಂಡು ತಾಳರಹಿತವಾಗಿ ಹಾಡಲ್ಪಡುವ ರಚನೆಗಳಾದ ಭಾಮಿನಿ ವಾರ್ಧಕ, ಕಂದ, ದ್ವಿಪದಿ, ವೃತ್ತ, ವಚನಗಳನ್ನು ಹಾಡುತ್ತಾರೆ. ಜಾಗಟೆಯನ್ನು ಕಿವಿಗಾನಿಸಿ ಹಿಡಿಯುವುದರಿಂದ ಹಾಡುಗಾರನ ಕಿವಿತುಂಬ ಶ್ರುತಿಯ ನಾದ ಮತ್ತು ತನ್ನ ಹಾಡಿನ ಗುಂಫನ ತುಂಬಿಕೊಳ್ಳುವುದು. ಈ ಗುಂಗು ಹಾಡಲು ಅನುಕೂಲ ಕಲ್ಪಿಸುತ್ತದೆ. ಸತಾಲದ ಹಾಡಿಕೆಯ ಸಂದರ್ಭ, ಬಿಡಿತ ಅಥವಾ ಬಿಡ್ತಿಗೆಯ ಸಮಯದಲ್ಲಿ ತಾಳವನ್ನು ಎತ್ತಿಹಿಡಿಯುವುದಾಗಲಿ, ತಾಳದ ಎಲ್ಲಾ ಅಕ್ಷರಗಳನ್ನು ಸ್ಪುಟಗೊಳಿಸಿ ಘಾತದ ಮೂಲಕ ತೋರಿಸುವುದಾಗಲಿ, ಮುಂತಾದ ಜಾಗಟೆಯ ಮೂಲಕ ನಡೆಯುವ ರಂಗ ಕ್ರಿಯೆಗಳಲ್ಲಿ ಬಲಿಪರಿಗಿರುವ ಶ್ರದ್ಧೆ ಅವರನ್ನು ಭೌಮವಾಗಿಸುತ್ತದೆ. ಅಜ್ಜ (ಹಿರಿಯ) ಬಲಿಪ ನಾರಾಯಣ ಭಾಗವತರು ವೇಷಧಾರಿಗಳು ತಾಳ ತಪ್ಪಿ ಕುಣಿಯುತ್ತಿದ್ದರೆ ತಮ್ಮ ಜಾಗಟೆಯ ಕೋಲಿನಲ್ಲಿ ರಂಗಸ್ಥಳದಲ್ಲೇ ಹಿಂದಿನಿಂದ ವೇಷಧಾರಿಯ ಬೆನ್ನಿಗೆ ಮೆಲ್ಲನೆ ಬಡಿದು ಕುಣಿತವನ್ನು ಸರಿದಾರಿಗೆ ತರುತ್ತಿದ್ದರು. ಯಕ್ಷಗಾನದಲ್ಲಿ ರಂಗದ ನೇಪಥ್ಯವಾಗಿ ಮಧ್ಯದಲ್ಲಿ ಭಾಗವತನು ಇದ್ದರೆ ಆತನ ಬಲಭಾಗದಲ್ಲಿ ಮದ್ದಳೆವಾದಕ; ಎಡಭಾಗದಲ್ಲಿ ಚೆಂಡೆವಾದಕ (ಈತನ ಪಕ್ಕ ಚಕ್ರತಾಳ ಬಾರಿಸುವವನೂ ನಿಂತಿರುತ್ತಾನೆ) ಮತ್ತು ಭಾಗವತನ ಹಿಂದೆ ಹಾರ್ಮೋನಿಯಂ/ಪುಂಗಿ ನುಡಿಸುವವರು ಭಾಗವತನ ಹಾಡಿಗೆ ಆಧಾರಶ್ರುತಿಗಾಗಿ ನಿಂತು ನುಡಿಸುತ್ತಿರುತ್ತಾರೆ. ಇವರ ಎದುರು ಭಾಗದಲ್ಲಿ ವೇಷಧಾರಿಗಳು ಕುಣಿದು ನಟಿಸುತ್ತಾರೆ.

ಜಾಗಟೆ ಪೆಟ್ಟಿನಲ್ಲಿ ಪಾಠ

ಕುರಿಯ ವಿಠಲ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ವೇಷಧಾರಿಯಾಗಿ ಹೆಸರಾದವರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮೇಳವನ್ನು ಹಲವಾರು ವರುಷ ನಡೆಸಿದವರು. ಅವರ ಅನುಭವದ ಮಾತನ್ನು ಓದೋಣ: “ ಒಂದು ದಿನ ‘ಬಿಲ್ಲಹಬ್ಬ’ದಲ್ಲಿ ಕೃಷ್ಣನ ಪಾತ್ರ ವಹಿಸಿದ್ದೆ. ತಡೆದ ಗೋಪಿಕಾಸ್ತ್ರೀಯರನ್ನು ಸಾಂತ್ವನಗೊಳಿಸಿ ಬೀಳ್ಕೊಡುವ ಸಂದರ್ಭದಲ್ಲಿ ಭಾಗವತರು-

“ಬಾಲೆಯರು ಕೇಳಿ” ಎಂಬ ಪದ್ಯವನ್ನೆತ್ತಿಕೊಂಡು ವಿವಿಧ ವಿಸ್ತಾರಗಳಲ್ಲಿ ಹಾಡಿ, ತಾಳಗಳಲ್ಲೂ ವಿವಿಧ ಬದಲಾವಣೆ ಮಾಡಿ, ಕೊನೆಗೆ “ಬಾಯಿತಾಳ”ವನ್ನೂ ಹಾಕಿ ವೇಷಧಾರಿಗಳನ್ನು ಕುಣಿಸತೊಡಗಿದರು.

ಅವರೆತ್ತಿಕೊಂಡ ತಾಳದ ಲಯವೆಲ್ಲಿ ಎಂದು ತಿಳಿಯದೆ ನಾನು ಕುಣಿಯದೆ ನಿಂತುಕೊಂಡೆ. ಕೈಗೆಟಕುವಷ್ಟು ಸಮೀಪದಲ್ಲೇ ಇದ್ದ ನನ್ನ ಬೆನ್ನಿಗೆ ಜಾಗಟೆಯ ಕೋಲಿನಿಂದಲೇ ಒಂದೇಟು ಬಿತ್ತು. ಆ ಪೆಟ್ಟಿಗೆ ಸರಿಯಾಗಿ “ಥೈ ತಿತ್ತ ಥೈ” ಎಂಬ ಬಾಯಿತಾಳವು ಕೇಳಿಸಿತು. ಕಾಲು ಕುಣಿಯಲೇ ಬೇಕಾಯಿತು.

ಆ “ಥೈ ತಿತ್ತ ಥೈ” ಅದೆಷ್ಟು ತ್ವರಿತಗತಿಯಲ್ಲಿ ಹೋಗಿ ಮುಕ್ತಾಯವಾಯಿತೆಂದು ನಾನು ಹೇಳಲಾರೆ. ಮೂಗು ಬಾಯಿಗಳಲ್ಲಿ ಉಸಿರು ಹೊರಹೊಮ್ಮುತ್ತಾ ಇದ್ದ ನನಗೆ ಅರ್ಥ ಹೇಳುವುದು ತೀರಾ ಕಷ್ಟವಾಯಿತು.

ಅಂದಿನಿಂದ ತಾಳದ ಲಯಜ್ಞಾನವನ್ನು ಸುಲಭವಾಗಿ ಹಿಡಿದುಕೊಳ್ಳುತ್ತಾ ಬಂದೆ. ರಂಗದಲ್ಲಿ ಕುಣಿಯಬೇಕಾದ ಪದ್ಯಗಳಿಗೆ ಕುಣಿಯದೇ ಇದ್ದರೆ ಭಾಗವತರು ಕ್ಷಮಿಸುತ್ತಿರಲಿಲ್ಲ. ವೇಷಧಾರಿಯ ಆಯಾಸವನ್ನೂ ಲಕ್ಷಿಸುತ್ತಿರಲಿಲ್ಲ. ನಿಂತರೆ ಗಂಟೆಕೋಲಿನಿಂದ ಬೆನ್ನಿಗೆ ಒತ್ತಿ ಮುಂದೆ ತಳ್ಳುತ್ತಿದ್ದರು. “ಕುಣಿ” ಎಂದು ಬಾಯಲ್ಲೂ ಹೇಳುತ್ತಿದ್ದರು. “ಆ ಯಾ ಸ” ಎಂದು ಹೇಳಿದರೆ, ‘ಬಣ್ಣವೇಕೆ ಹಾಕಿದೆ” ಎಂಬ ಪ್ರಶ್ನೆ ಸಿದ್ಧವಾಗಿರುತ್ತಿತ್ತು. ತಾಳದ ಗುಟ್ಟನ್ನೂ, ವಿಷಮಗತಿಯಲ್ಲಿ ಕುಣಿಯುವ ರಹಸ್ಯವನ್ನೂ ಅವರ ಭಾಗವತಿಕೆಯಿಂದಲೇ ನಾನು ಅನುಭವ ಮಾಡಿಕೊಂಡವನು.”

“ಯಕ್ಷಗಾನ ಕಲಾತಪಸ್ವಿ”ಎಂಬ  ಸಂಸ್ಮರಣಾ ಗ್ರಂಥದಲ್ಲಿ ಕುರಿಯ ವಿಠಲಶಾಸ್ತ್ರಿಗಳು ಈ ಮಾತುಗಳನ್ನು ದಾಖಲಿಸಿದ್ದಾರೆ.

ಟಿಪ್ಪಣಿ: ತಿತ್ತತ್ತೈ ಎಂಬುದು ಒಂದು ಯಕ್ಷಗಾನದ ವಿಶಿಷ್ಟ ತಾಳ. ಇದನ್ನು ತೆಂಕುತಿಟ್ಟು ಯಕ್ಷಗಾನದಲ್ಲಿ “ತಿತ್ತಿತ್ತೈ” ಎಂದು ಕರೆದರೆ, ಬಡಗುತಿಟ್ಟು ಯಕ್ಷಗಾನ ಪರಂಪರೆಯಲ್ಲಿ “ಕೋರೆ” ತಾಳವೆಂದು ಕರೆಯುತ್ತಾರೆ. ನರ್ತನತಾಳವೆಂದೂ ಕರೆಯುವುದುಂಟು. “ತಕದಿಮಿತಕಿಟ” ಎಂಬ ಮಾತ್ರಾಗತಿಯನ್ನು ಅರ್ಧಕ್ಕೆ ವಿಭಜಿಸಿ ಬರುವ ಮೂರುವರೆ ಮಾತ್ರಾಕಾಲದ ಈ ತಾಳ ಯಕ್ಷಗಾನದಲ್ಲಿ ಬಹುವಾಗಿಯೇ ಬಳಸಲ್ಪಡುತ್ತದೆ. ಇತರ ಸಂಗೀತ ಪದ್ದತಿಗಳಲ್ಲಿ ಈ ರೀತಿಯ ಗತಿವಿನ್ಯಾಸವನ್ನು ಹೊಂದಿರುವ ತಾಳದ ಬಳಕೆ ಇಲ್ಲವೇ ಇಲ್ಲವೆಂಬಷ್ಟು ವಿರಳ.