ವ್ಯಾಪಾರಿಯ ಜೊತೆ ನಾಳೆ ಲೋಡು ಎಷ್ಟು ಬರುತ್ತೆ, ಎಷ್ಟೊತ್ತಿಗೆ ಎಂದೆಲ್ಲ ಕೇಳಿದ. ಬೇಗನೆ ಎದ್ದಿದ್ದೆವು. ಹಣ್ಣಿನ ಬುಟ್ಟಿಗಳ ಇಳಿಸಿ ಹತ್ತಾರು ಅಂಗಡಿಗಳಿಗೆ ಹೊತ್ತೊಯ್ದು ಇಟ್ಟೆವು. ಇಡೀ ದಿನವೆಲ್ಲ ಹಗುರಾದ ಕೆಲಸಗಳನ್ನು ಮಾಡಿಸಿದ. ತರಕಾರಿ ಮೂಟೆಗಳನ್ನು ತಾನೇ ಹೊತ್ತು ಸಹಕರಿಸಿದ. ಜೋಡಿಸಿ ಇಡುವುದಷ್ಟೆ ನನ್ನ ಕೆಲಸವಾಗಿತ್ತು. ಮಧ್ಯಾನ್ಹವಾಗಿತ್ತು. ಶಿವರಾಂಪೇಟೆಯ ಸಂದಿಯ ಮಾಂಸದ ಹೋಟೆಲಿಗೆ ಕರೆದೊಯ್ದ. ಅಲ್ಲೆಲ್ಲ ನಮ್ಮಂತವರೇ ಇದ್ದರು. ನಿತ್ಯ ಕೂಲಿಗಳು. ಅದೇ ನರಕದಲ್ಲಿ ಸ್ವರ್ಗ ಕಾಣುವವರು. ದುಡಿಮೆಯ ಸಡಗರದಲ್ಲಿ ಅವರಾಗಲೇ ಕುಡಿದು ಅಮಲಾಗಿದ್ದರು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯಲ್ಲಿ ಹೊಸ ಬರಹ

ಸತ್ತೇ ಹೋದಂತೆ ಆಸ್ಪತ್ರೆಯ ಕಾರಿಡಾರಿನಲ್ಲಿ ಮಲಗಿದ್ದೆ. ಯಾರೊ ಎಚ್ಚರಿಸಿದರು. ಬೆದರಿ ಸುತ್ತ ನೋಡಿದ್ದೆ. ನನ್ನೆದುರು ಸ್ಟ್ರೆಚರ್ ನಿಂತಿತ್ತು. ಅಕ್ಕ ಪಕ್ಕ ರಾತ್ರಿ ಅಷ್ಟೊಂದು ಜನ ಸಾಲಾಗಿ ಮಲಗಿದ್ದ ಯಾರೊಬ್ಬರೂ ಕಾಣಲಿಲ್ಲ. ಆಸ್ಪತ್ರೆಯ ಇರಿಸು ಮುರಿಸು ವಾಸನೆಗಳು. ಇವನ್ಯಾರು ಎಂದು ದಿಟ್ಟಿಸಿದೆ. ಅವನೇ ಶವಗಳ ಶವಾಗಾರಕ್ಕೆ ಸ್ಟ್ರೆಚರ್ ಮೇಲೆ ಹಾಕಿಕೊಂಡು ಕಸವನ್ನು ಒಗೆದಂತೆ ಹೆಣಗಳ ಬಿಸಾಡುವವನು. ಮುಖ ತಿರುವಿದೆ. ಎದ್ದಕೂಡಲೆ ಈ ಯಮಕಿಂಕರನ ಮುಖವ ನೋಡಬೇಕಾಯಿತಲ್ಲಾ ಎಂದು. ಎದ್ದ ಕೂಡಲೆ ಬೇಸರವಾಯಿತು. ಅರೇ; ಅದಕ್ಯಾಕೆ ನೋವೂ… ನಿದ್ದೆ ಕೂಡ ಸಾವಿನ ಸಂಗಾತಿ ಅಲ್ಲವೇ ಎಂದು ಎದ್ದು ನಿಂತೆ. `ಎಲ್ಲಿ ಹೋಗ್ಬುಟ್ಟಿದ್ದೆಯೊ ಅನ್ಕಂಡಿದ್ದೆ’ ಎಂದು ನಗಾಡಿದ. `ಅದ್ಕೆ ಇನ್ನೂ ಸುಮಾರ್ದಿನ ಇದೆ’ ಎಂದು ಹೊರ ನಡೆದೆ. ಅಲ್ಲೊಂದು ಬಾಗಿಲ ಬಳಿ ಅಜ್ಜಿಯೊಂದು ಆಕಾಶವೆ ತಲೆ ಮೇಲೆ ಬಿದ್ದಂತೆ ಯಾರನ್ನೊ ಕಾಯುತ್ತ ಕೂತಿದ್ದಳು. ಯಾಕೆ ಅಜ್ಜಿ ಇಲ್ಲಿ ಗೇಟಲ್ಲಿ ಕೂತಿದ್ದಿಯೇ ಎಂದೆ. `ನನ್ನ ಸ್ವಸೆ ವಂಟೋದ್ಲು ಕನಪಾ; ನನ್ಮಗ ಗಾಡಿ ತರುಕೆ ವೋಗವುನೇ… ಕಾಯ್ತಾ ಕುಂತಿವಿನಿ’ ಎಂದಳು. ದುಃಖಿಸಿ ದಣಿದು ದನಿಯೇ ಅವಳಿಗೆ ಹೊರಡುತ್ತಿರಲಿಲ್ಲ. ಬ್ಯಾಗಲ್ಲಿದ್ದ ಹಣ್ಣುಗಳ ಕೊಡಬೇಕೆಂದು ಮಾತಾಡಿಸಿದ್ದೆ. ಈ ಸ್ಥಿತಿಯಲ್ಲಿ ಕೊಡುವುದು ತರವಲ್ಲ ಎನಿಸಿತು. ಮಕ್ಕಳು ಇನ್ನೂ ಚಿಕ್ಕವೇನೊ… ಕೇಳಿದೆ. `ಹೂಂಕಣಪ್ಪಾ. ಯಾಕೊ ರಾಜಾ ಅಂಗೆ ಕೇಳಿಯೇ… ವೋದೊಳು ವಾಪಸ್ಸು ಬಂದಳೇ…’ ಮರುಗಿದೆ. `ಎಲ್ರು ವೋಗುರೇ… ನೀನಾರು ಮೊಮ್ಮಕ್ಕಳಿಗೆ ಇದ್ದಿಯಲ್ಲಾ ತಾಯಾಗಿ’ ಎಂದು ಹೇಳಿ ಆಚೆ ಬಂದೆ. ಆ ಸಂಜೆ ಅಷ್ಟೊಂದು ಹಿಂಡಾಗಿ ಹಾಡಿ ನಲಿದು ಗೂಡು ಸೇರಿದ್ದ ಗಿಳಿಗಳ ಸದ್ದೇ ಇರಲಿಲ್ಲ. ವಾಹನಗಳ ದಟ್ಟಣೆಯ ಸದ್ದು ಪ್ರವಾಹದಂತೆ ಆವರಿಸಿತ್ತು. ಗುಜುಗುಜು ಜನ. ಆಸ್ಪತ್ರೆಗೆ ಬರುವವರು ಬರುತ್ತಿದ್ದರು; ಹೋಗುವವರು ಹೋಗುತ್ತಿದ್ದರು.

ಕೆಳಗಿಳಿದು ಸಯ್ಯಾಜಿ ರಾವ್ ರಸ್ತೆಗೆ ಬಂದೆ. ಅದೇ ಮಾರುಕಟ್ಟೆ. ಮಾರು ಮನುಷ್ಯನೇ ಎಷ್ಟು ಮಾರುವೆಯೊ ಮಾರು. ತಿನ್ನು ನರ ಪ್ರಾಣಿಯೇ ಎಷ್ಟೆಲ್ಲ ತಿನ್ನುವೆಯೊ ತಿನ್ನು… ಬೇಡುವವರೇ ಬೇಡಿ ಬೇಡಿ… ಬೇಡ ಎಂದರೆ ಬೇಡುವುದ ಬಿಟ್ಟುಬಿಡುವಿರಾ… ಮಾರಿಕೊಳ್ಳುವೆಯಾ ಸಸ್ತಾ ಬೆಲೆಗೆ ಜುಜುಬಿ ಕಾಸಿಗೇ ಮಾರಿಕೊ… ಆದಿ ಮಾನವನೇನು ನಿನ್ನಂತೆ ಮಾರುಕಟ್ಟೆ ಕಟ್ಟಿಕೊಂಡಿದ್ದನೇ… ಜಗತ್ತಿನ ಎಲ್ಲ ಬಜಾರುಗಳೂ ನಿನ್ನವೇ; ನೀನೇ ಯಜಮಾನ ನಿನ್ನ ನೀನೇ ಮಾರಿಕೊಳ್ಳಲು ನಿನಗೆ ನೀನೇ ದಲ್ಲಾಳಿ… ಎಷ್ಟು ಜನರ ಮಾರುವೆಯೊ ಮಾರು ಮಾರು ಸಾಯುವ ತನಕ ಹರಾಜು ಕೂಗುತ್ತಿರು. ಎಲ್ಲ ಪರವಾನಿಗಿ ಸಿಕ್ಕಿ ಬಿಟ್ಟಿದೆಯಲ್ಲಾ… ಸಾಧ್ಯವಾದರೆ ನಿನ್ನ ಎಲುಬುಗಳನ್ನು ಮಾರಬಹುದು… ಅಂಗಾಂಗಗಳ ಸತ್ತ ಕೂಡಲೆ ವ್ಯಾಪಾರ ಮಾಡಿಬಿಡಬಹುದು. ಬೇಕಾದವರಿಗೆ ಕಾಯ್ದಿಟ್ಟು ದುಪ್ಪಟ್ಟು ಬೆಲೆ ಏರಿಸಬಹುದು. ಮಾರು ಎಲ್ಲವನ್ನು ಮಾರಿಬಿಡು. ಈ ಗಾಳಿ ಮಳೆ ಮಿಂಚು ಮಾರುತ ಮೋಡಗಳ ಸಾರಾಸಗಟಾಗಿ ಮಾರು. ಬೆಳದಿಂಗಳ ನದಿ ದಂಡೆಗಳ ಸರಿರಾತ್ರಿಯಲ್ಲಿ ಅಮಲಿಗೆ ಮಾರಿಕೊ… ಸೂರ್ಯನ ಬೆಳಕಿನ ಕರವ ವಿಧಿಸು; ಕುಡಿವ ಹನಿಹನಿ ನೀರ ಮಾರುಕಟ್ಟೆಯ ಮಾಲೀಕನಾಗು… ಸಾಯುವವರ ಬಾಯಿಗೆ ಗುಟುಕು ನೀರಿಗೆ ರಿಯಾಯಿತಿಯ ಸರ್ಕಾರದಿಂದ ಪಡೆದುಕೊ… ಕೇಳುವುದಿಲ್ಲ ಯಾರೂ ತಡೆಯುವುದಿಲ್ಲ. ಬೇಡ ಎನ್ನುವುದೇ ಆಕಾಶ… ಛೇ; ಇದೇನಿದು ಕವಿತೆಯಂತೆ ಬಂದುಬಿಟ್ಟಿತಲ್ಲ ಯಾವುದೊ ವಿಚಾರ… ಈಗ ಯಾಕೆ ಬಂತು! ಸ್ಮಶಾನ ವೈರಾಗ್ಯವೇ… ತಾನೀಗ ಹೊರ ಬಂದದ್ದು ಬಡವರ ಆಸ್ಪತ್ರೆಯಿಂದಲ್ಲವೇ… ಹೌದೇ! ದೀನರ ಆ ಆಸ್ಪತ್ರೆಯೂ ಸ್ಮಶಾನದ ಒಂದು ಮೂಲೆಯೇ… ಹಾಗಾದರೆ ನಮ್ಮ ನಮ್ಮ ಮಲಗುವ ಕೊಠಡಿಗಳು ಸಮಾಧಿ ಸ್ವರೂಪಿ ಜೀವಂತ ಅಲಂಕಾರಿಕ ನೆಲೆಗಳೇ…

ಈ ವಿಚಾರಗಳ ಸಹವಾಸವೇ ಬೇಡ ಎಂದು ಮನಸ್ಸು ರೇಜಿಗೆ ಆಯಿತು. ಅದೇ ಸೆಕೆಂಡ್ ಹ್ಯಾಂಡ್ ರಸ್ತೆ ಬದಿಯ ಪುಸ್ತಕ ವ್ಯಾಪಾರಿಯ ಬಳಿ ಹೋದೆ. ಐದಾರು ಪುಸ್ತಕಗಳ ಖರೀದಿಸಿದೆ. ಅದರಲ್ಲಿ ಒಂದು `ಹೇಸರಗತ್ತೆ’. ಪುಸ್ತಕದ ಹೆಸರದು. ರಾಮಚಂದ್ರ ಶರ್ಮ ಅವರು ಬರೆದಿದ್ದ ಕವಿತೆಗಳ ಸಂಕಲನ. ಹೇಸರಗತ್ತೆ ಎಂಬ ಕವಿತೆಯನ್ನು ಆ ರಸ್ತೆ ಬದಿಯ ಮರದ ಕೆಳಗೇ ನಿಂತು ಒರಗಿಕೊಂಡು ಓದಿದೆ. ನಾನೇ ಒಂದು ಹೇಸರಗತ್ತೆ ಎನಿಸಿತು. ಇಥಿಯೋಪಿಯಾದ ಬೆಟ್ಟಗುಡ್ಡಗಳ ಮೇಲತ್ತಿ ಇಳಿಯುವ ಆ ಕತ್ತೆಗಳ ಪಾಡನ್ನು ಕವಿ ವರ್ಣಿಸಿದ್ದ ಪರಿ ಮಿಡಿಯುವಂತಿತ್ತು. ನನ್ನ ಸುತ್ತ ಜನ ಅವರವರ ಧಾವಂತಗಳಲ್ಲಿ ಗಡಿಬಿಡಿಯ ಹೆಜ್ಜೆಗಳ ಹಾಕುತ್ತ ಓಡುತ್ತಿರುವಂತೆ ಕಾಣುತ್ತಿದ್ದರು. ನನಗೆ ಹಾಗೆ ಒಬ್ಬ ಬೇವರ್ಸಿಯಾಗಿ ಬೀದಿ ಬದಿಯಲ್ಲಿ ನಿಂತು ಹಿತವಾದ ಏನನ್ನಾದರೂ ಓದುವುದು ಎಂದರೆ ಅಪರಿಮಿತ ಆನಂದ ಉಂಟಾಗುತ್ತಿತ್ತು. ಇನ್ನೊಂದು ಪುಸ್ತಕ ಬೋದಿಲೇರನ `ಪಾಪದ ಹೂವುಗಳು’ ನನಗಾಗಿಯೇ ಹೇಳಿ ಬರೆಸಿದ್ದಂತಹ ಪುಟ್ಟ ಪುಟ್ಟ ಕವಿತೆಗಳು. ಆಗಿನ್ನೂ ನನಗೆ ಲಂಕೇಶರ ಮಹತ್ವವೇ ಗೊತ್ತಿರಲಿಲ್ಲ. ಸುಮ್ಮನೆ ಗೊತ್ತಿತ್ತಷ್ಟೇ… ಬೋದಿಲೇರನೇ ಒಂದು ಎಂಡದ ಮಗ್ಗಿನಂತೆಯೊ ಮಡಕೆಯಂತೊ ಕಾಣುತ್ತಿದ್ದ. ಅವನಂತೆ ಬರೆಯಲು ಯತ್ನಿಸಿ ಹರಿದು ಹಾಕಿದ್ದೆ.

ನಾನಲ್ಲದ್ದನ್ನು ನಾನು ನಟಿಸಿ ನಗೆಪಾಟಲಾಗಲಾರೆ ಎಂದು ಕವಿಯಾಗುವ ಆಸೆಯನ್ನು ಕೈಬಿಟ್ಟಿದ್ದೆ. ಪುಸ್ತಕಗಳ ತಿರುವಿ ಹಾಕಿ ಬ್ಯಾಗಲ್ಲಿ ಇಟ್ಟುಕೊಂಡು ಮಲೆಯಾಳಿ ಚಹಾವಾಲನ ಬಳಿ ಬಂದೆ. ಎಲ್ಲಿ ನಮ್ಮ ಅಣ್ಣ ಎಂದು ಕೇಳಿದೆ. ನಗರ ಸಭೆಯತ್ತ ಹೋದ ಎಂದ. ಅವನು ಅಲ್ಲಿಂದ ಮತ್ತೆಲ್ಲಿಗೆ ಹೋಗುವನೊ ಎಂದು ದಾಪುಗಾಲು ಹಾಕಿದೆ. ಅದೇ ಕಛೇರಿಯಲ್ಲೇ ಅವನು ದೊಡ್ಡಣ್ಣ ಎನ್ನಿಸಿಕೊಳ್ಳುವ ಪಿಶಾಚಿ ಕೆಲಸ ಮಾಡುತ್ತಿದ್ದುದು. ಕೆಲಸದಿಂದ ಅವನನ್ನು ಕಿತ್ತು ಹಾಕಿದ್ದರು. ಅವನದು ಮುಗಿಯುತ್ತಿದ್ದ ಪಯಣ. ಅಲ್ಲೊಬ್ಬ ಪೌರಕಾರ್ಮಿಕನ ಜೊತೆ `ಅಣ್ಣ’ ಮಾತಾಡುತಿದ್ದ. ಅಂತಹ ಬಡಪಾಯಿಗಳಿಗೆ ಇವನು ಬಡ್ಡಿ ಇಲ್ಲದೆ ಚಿಲ್ಲರೆ ಸಾಲಗಳ ಕೊಡುತ್ತಿದ್ದ. ಮೂವರೂ ಕಾಕಾನ ಚಹಾದ ಪೆಟ್ಟಿಗೆ ಅಂಗಡಿಗೆ ಬಂದೆವು. ರಸ್ತೆ ಬದಿಯ ಆಯಕಟ್ಟಿನ ಜಾಗಕ್ಕೆ ನಗರ ಸಭೆಗೆ ಕಾಕಾ ಬಾಡಿಗೆ ಕಟ್ಟಿ ಅಧಿಕೃತ ಚಹಾ ವ್ಯಾಪಾರ ಮಾಡುತಿದ್ದ. ಬಿಸಿಯಾದ ಚಹಾ ಹಿತವಾಗಿತ್ತು. ಅಲ್ಲೇ ಪಾರ್ಕಿನ ಮುಂದೆ ಕಲ್ಲು ಬೆಂಚಿತ್ತು. ಕೂತು ಹರಟಿದೆವು. ಆ ಪೌರಕಾರ್ಮಿಕ ಬೆಳಿಗ್ಗೆಯೇ ಕುಡಿದು ಗಬ್ಬಾಗಿದ್ದ. ಕಛೇರಿಯ ಟಾಯ್ಲೆಟ್ ರೂಂಗಳ ತೊಳೆದಿದ್ದ. ಅವನು ಅಣ್ಣ ಸಿದ್ದರಾಜು ಕಾರ್ಮಿಕನ ಪರಿಚಯಿಸಿದ್ದ. ನನ್ನೊಳಗಿದ್ದ ಕಾರ್ಲ್‍ಮಾರ್ಕ್ಸ್‌ ಅವನನ್ನು ದಿಟ್ಟಿಸಿ ನೋಡಿದ್ದ. ಆ ಕ್ಷಣವೇ ಅಂಥವರ ಬಗ್ಗೆ ಕರಗಿ ಹೋಗುವುದು ನನ್ನ ದೌರ್ಬಲ್ಯ. `ಕಸ್ಟ ಎಲ್ರುಗೂ ಬತ್ತವೆ ವೋಯ್ತವೆ ಬೀಡೀ; ನಾನೂ ನಿಮ್ಮೋನೇ’ ಎಂದು ಸಹಾನುಭೂತಿ ತೋರಿದ್ದೆ. ತಕ್ಷಣ ಹತ್ತಿರವಾಗಿದ್ದ. ಕೈ ಹಿಡಿದು ಮಾತಾಡಿಸಿದ್ದ. ವಿಶ್ವಾಸದಲ್ಲಿ; `ನೋಡಪ್ಪಾ, ನಮ್ಮೋನು ಅಂತಿಯೇ… ನನ್ಮಗುಳು ಮದುವೆಗೆ ಬಂದವಳೆ. ಯಾರಾರ ನಿನ್ನಂತೋರು ಹುಡುಗ್ರು ಇದ್ರೆ ತೋರ್ಸಪ್ಪಾ… ಸಿದ್ರಾಜುಗೆ ನನ್ಮನೆ ಗೊತ್ತು’ ಎಂದು ಉಪಕಾರ ನಿರೀಕ್ಷಿಸಿದ. ನನ್ನ ಸೌಜನ್ಯಗಳು ಹತ್ತಾರು ಬಿಕ್ಕಟ್ಟುಗಳನ್ನು ಸೃಷ್ಠಿಸುತ್ತಿದ್ದವು. ಅವನ ವರಾನ್ವೇಷಣೆಗೆ ನಾನು ವರ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ನಾನೇ ಹರಿದ ಒಂದು ಬೂಟಿನಂತಿದ್ದೆ. ಬಹಳವಾಗಿ ಬಳಸಿ ಸವೆದು ನನ್ನ ಶೂ ಹರಿದು ಹೋಗಿತ್ತು. ಮತ್ತೆ ಮತ್ತೆ ಅದನ್ನು ಹೊಲೆಸಲು ಸಾಧ್ಯವಿರಲಿಲ್ಲ. ಒಂದೊ ಅದನ್ನು ಬಿಸಾಡಿ ಹೊಸದನ್ನು ಖರೀದಿಸಬೇಕಿತ್ತು. ಲಿಡ್ಕರ್ ಚಪ್ಪಲಿಯೇ ನನ್ನ ಕಾಲಿಗೆ ಲಾಯಕ್ಕು ಎಂದು ಷೋರೂಂಗೆ ಹೋಗಿ ದೊಡ್ಡ ಮನುಷ್ಯನಂತೆ ನೋಡಿ ಬಂದಿದ್ದೆ. ಬಿಸಾಡಿ ಬರಿಗಾಲಲ್ಲಿ ನಡೆಯುವುದು ಸಾಧ್ಯವಿರಲಿಲ್ಲ. ಆ ರೂಢಿ ಮರೆತುಹೋಗಿತ್ತು.

`ಗಂಡು ತೋರಿಸ್ತಿನಿ ಅಂದಲ್ಲಾ… ಯಾರೊ ಮದುವೆ ಗಂಡೂ’ ಎಂದು ಕೇಳಿದ ಸಿದ್ದರಾಮಣ್ಣ. `ಸುಮ್ನೆ ಅಂಗಂದೆ… ನಾನ್ಯಾವ ಗಂಡು ತೋರ್ಸುಕಾದದಣ್ಣ’. `ಅಲ್ಲೇ ಬಂತು ನೋಡು ಆಸೆ. ಅವುನು; ನೀನಿತ್ತಾಗೆ ಬಂದಾಗ; ಏನಂದ ಗೊತ್ತೇ… ಯೀ ವುಡ್ಗುನ್ಗೇ ನನ್ಮಗಳ ಕೊಡ್ಬೋದಲ್ಲುವೇ ಅಲ್ಲಿ ಇಲ್ಲಿ ಯಾಕುಡುಕ್ಲಿ ಅಂತಾ ಕಿವಿಗೇಳ್ದ. ನಾಳಕೆ ಮಗಳ ಕರ್ಕಬತ್ತನೇ… ಅದೇನೇಳಿಯೊ ಯೇಳಪ್ಪಾ’ ಎಂದ. `ಅಯ್ಯೋ ನಾನೆಲ್ಲಿ ಅಂಗಂದೆ? ಅಯ್ಯೋ ಪಾಪ ಅಂತಾ ಮರುಗ್ದೆ ಅಷ್ಟೆಯಾ… ನೀನಲ್ಲೆ ಯೇಳುಕಿರ್ಲಿಲ್ಲುವೇನಣ್ಣಾ… ಯಾಕಣ್ಣಾ ನಾನು ನಿಂಜೊತೆಗಿರುದು ಇಷ್ಟ ಇಲ್ಲುವೇ… ನೀನ್ಯಾಕಣ್ಣ ಸುಮ್ನಿದ್ದೇ’ ಎಂದು ಮೈಯನ್ನು ವದರಾಡಿಸಿಕೊಂಡು ಅಸಮಾಧಾನ ತೋರಿದೆ. `ಬಡೂರ್ಬಗ್ಗೆ ಸುಮ್ನೆ ಮಾತಾಡ್ಬಾರ್ದು ಅನ್ನುದು ಇದ್ಕೆಯಾ… ನೋಡ್ದಾ, ಯೀಗ ನಿನ್ನೆ ಯೆಂಗೆ ಯಿಡ್ಕತು ಅಂತಾ’ ಎಂದು ಇಕ್ಕಟ್ಟಿಗೆ ಸಿಲುಕಿಸಿದ. `ಅಂಗಾರೆ ಯಿವತ್ತು ರಾತ್ರಿಗೇ ಟಿಕೇಟ್ತಕಂದು ಯತ್ತಗಾರ ವಂಟೊಯ್ತಿನಿ ಬುಡಣ್ಣಾ’ ಎಂದು ಮುನಿಸಿಕೊಂಡೆ. ಪೇಚಿಗೆ ಸಿಲುಕಿದ್ದ ಕಂಡು ನಗಾಡಿದ. ಅದುಕ್ಯಾಕೊ ಯೀಪಾಟಿ ತಲೆ ಕೆಡಿಸ್ಕಂದಿಯೇ… ಆಗುದಿಲುವಂತೆ! ನಮ್ಮ ಹುಡುಗ ಬ್ಯಾಡ ಅಂತನೆ ಅಂತಾ ನಾನೆ ಯೇಳ್ತಿನಿ ಬಿಡೊ ಮಾರಾಯಾ’ ಎಂದ. ಸದ್ಯ! ಬಚಾವಾದೆ ಎಂದು ಉದಾರವಾಗಿ ಯಾವುದರ ಬಗೆಗೂ ಮಾತಾಡಬಾರದು ಎಂದು ಕಟ್ಟಾಜ್ಞೆ ವಿಧಿಸಿಕೊಂಡೆ. ಸಮಯ ಹೋದದ್ದೆ ಗೊತ್ತಾಗಲಿಲ್ಲ. ಹೊತ್ತು ಮುಳುಗಿತ್ತು. ಜಗಮಗಿಸುವ ದೀಪಾಲಂಕಾರಗಳ ಬೀದಿಗಳು ರಾರಾಜಿಸುತ್ತಿದ್ದವು.

`ಅಣ್ಣಾ; ನಾಳೆ ಪುಲ್‍ಟೈಂ ಕೆಲ್ಸ ಮಾಡ್ತಿನಿ… ಖರ್ಚಿಗೆ ಕಾಸುಬೇಕೂ… ಕೂಲಿಯ ಜೊತೆಗೇ ಮಾಡಣ್ಣಾ’ ಎಂದು ವಿನಂತಿಸಿದೆ. `ಯಾಕಪ್ಪಾ… ಏನಪ್ಪಾ ಖರ್ಚೂ’ ಎಂದು ದಿಟ್ಟಿಸಿ ನೋಡಿದ. ಇವನಿಗೆ ಸುಳ್ಳು ವೇಷ ಹಾಕಿ ವಂಚಿಸಬಾರದು ಎನಿಸಿತು. ಎಲ್ಲವನ್ನು ಹೇಳಿದೆ. ಅದೇ ಅರಮನೆಯ ಮುಂದಿನ ಸುಂದರ ಹುಲ್ಲು ಹಾಸಿನ ಹೂ ರಾಶಿಗಳ ನರ್ತನದ ಎದಿರು ನಾನೇಳಿದ್ದಕ್ಕೆಲ್ಲ ಕಣ್ಣಲ್ಲಿ ನೀರು ಬಟ್ಟಾಡಿಸಿಕೊಂಡು ಆಲಿಸಿದ. ಮನುಷ್ಯರ ಒಳತೋಟಿಗೂ ಅವರ ಬಾಹ್ಯ ನಟನೆಯ ಸಭ್ಯತೆಗೂ ಎಷ್ಟೊಂದು ಅಂತರವಿದೆಯಲ್ಲಾ ಎನಿಸಿತೇನೊ ಅವನಿಗೆ. ನಾನು ನನ್ನ ತಾಯಿಯ ನರಕದ ಜೊತೆಗೆ ಅಪ್ಪನ ಕ್ರೌರ್ಯ ಪತಾಕೆಯ ಆರ್ಭಟವನ್ನು ಅಕ್ಷರಶಃ ಬಿಕ್ಕಿಬಿಕ್ಕಿ ಹೇಳುತ್ತಿದ್ದೆ. ಸಂತೈಸಿದ. ನಂಬದಾದ. ನನ್ನ ರೆಕಾರ್ಡ್ಸ್‌ಗಳನ್ನು ಮುಂದಿಟ್ಟು ತೋರಿಸಿ; ಮತ್ತೆ ನಾನು ಇನ್ನೊಂದು ಎಂ.ಎ., ಮಾಡಬೇಕೂ; ಅದರ ಖರ್ಚು ವೆಚ್ಚಗಳಿಗಾಗಿ ನಾನೇ ದುಡಿದು ಸಂಪಾದಿಸಬೇಕು ಎಂದೆ. ಅವನು ಮಾತು ಹೊರಡಿಸಲಾರದಷ್ಟು ನೊಂದುಕೊಂಡಿದ್ದ. ಮೊದಲೇ ಹೇಳಬಾರದಿತ್ತೇ… ನಿನ್ನಂತ ವಿದ್ಯಾವಂತ ಯುವಕನ ಪಾರ್ಕಲ್ಲಿ ಫುಟ್ಪಾತಲ್ಲಿ ಅಲ್ಲಿ ಇಲ್ಲಿ ಗಲ್ಲಿಯಲ್ಲಿ ಮಲಗಿಸಿದ್ದೆನಲ್ಲಾ ಎಂದು ಮೂಕನಾಗಿದ್ದ. ಗುರಿಯಿಲ್ಲದಂತೆ ಅನಾಥವಾಗಿ ಸುತ್ತಾಡಿದೆವು. ನಾನು ಮೊದಲ ಬಾರಿಗೆ ಅವನ ಕಣ್ಣಿಗೆ ಕಂಡಿದ್ದಾಗ ಆತ ಕೇಳಿದ್ದ ಯಾವ ಸ್ಕೆಚ್ ಹಾಕಿದ್ದೀಯಪ್ಪಾ ಎಂದಿದ್ದಕ್ಕೆ ಉತ್ತರ ಎಂಬಂತೆ… ನನ್ನ ಸ್ಕೆಚ್ ಏನು ಎಂದು ಗೊತಾಯಿತೇನಣ್ಣಾ ಎಂದು ಅತ್ತು ಕೆಂಪಾಗಿ ಊದಿಕೊಂಡಿದ್ದ ಕಣ್ಣುಗಳ ಇನ್ನಷ್ಟು ದಪ್ಪ ಮಾಡಿ ನಗುತ್ತ ಕೇಳಿದ್ದೆ. ಅವನ ಕಣ್ಣುಗಳು ಪಾತಾಳಕ್ಕೆ ಇಳಿದಂತಿದ್ದವು. ನಗಲಿಲ್ಲ ಅವನು. ಮಾತೇ ಆಡಲಿಲ್ಲ. ನಾನೇ ಏನೇನೊ ಗೊಣಗುಟ್ಟಿದೆ. ರಸ್ತೆ ಬದಿಯಲ್ಲಿ ಏನೊ ತಿಂದೆವು. ಮಾರುಕಟ್ಟೆಯ ಒಳಗಿನ ಹಣ್ಣಿನ ಅಂಗಡಿಯ ಮುಂದೆ ಮಲಗಿದೆವು.

ವ್ಯಾಪಾರಿಯ ಜೊತೆ ನಾಳೆ ಲೋಡು ಎಷ್ಟು ಬರುತ್ತೆ, ಎಷ್ಟೊತ್ತಿಗೆ ಎಂದೆಲ್ಲ ಕೇಳಿದ. ಬೇಗನೆ ಎದ್ದಿದ್ದೆವು. ಹಣ್ಣಿನ ಬುಟ್ಟಿಗಳ ಇಳಿಸಿ ಹತ್ತಾರು ಅಂಗಡಿಗಳಿಗೆ ಹೊತ್ತೊಯ್ದು ಇಟ್ಟೆವು. ಇಡೀ ದಿನವೆಲ್ಲ ಹಗುರಾದ ಕೆಲಸಗಳನ್ನು ಮಾಡಿಸಿದ. ತರಕಾರಿ ಮೂಟೆಗಳನ್ನು ತಾನೇ ಹೊತ್ತು ಸಹಕರಿಸಿದ. ಜೋಡಿಸಿ ಇಡುವುದಷ್ಟೆ ನನ್ನ ಕೆಲಸವಾಗಿತ್ತು. ಮಧ್ಯಾನ್ಹವಾಗಿತ್ತು. ಶಿವರಾಂಪೇಟೆಯ ಸಂದಿಯ ಮಾಂಸದ ಹೋಟೆಲಿಗೆ ಕರೆದೊಯ್ದ. ಅಲ್ಲೆಲ್ಲ ನಮ್ಮಂತವರೇ ಇದ್ದರು. ನಿತ್ಯ ಕೂಲಿಗಳು. ಅದೇ ನರಕದಲ್ಲಿ ಸ್ವರ್ಗ ಕಾಣುವವರು. ದುಡಿಮೆಯ ಸಡಗರದಲ್ಲಿ ಅವರಾಗಲೇ ಕುಡಿದು ಅಮಲಾಗಿದ್ದರು. ಅಲ್ಲೆ ದುಡಿದು ಅಲ್ಲೆ ಕುಡಿದು ಉಂಡು ನೋವ ಮರೆಯುತ್ತಿದ್ದರು. ಅಷ್ಟಾಗಿ ಗಾಳಿ ಬೆಳಕಿರಲಿಲ್ಲ ಆ ಹೋಟೆಲಲ್ಲಿ. ಕರಿದ ಮಾಂಸದ ಬಗೆ ಬಗೆಯ ಹೊಗೆ ಹಾಗು ಗಮಲು ಕುಣಿಯುತ್ತಿತ್ತು ಬಡವರ ಹಸಿವಿನ ನರ್ತಕಿಯಂತೆ. ಆ ಹೋಟೆಲನ್ನು ಹೊರಗಿಂದ ನೋಡಿದ್ದೆನೇ ವಿನಃ ಒಳಗೆ ಬಂದಿರಲಿಲ್ಲ. ಎದುರ ಬದುರ ಕೂತೆವು. ಇಕ್ಕಟ್ಟಾದ ಟೇಬಲು ಕುರ್ಚಿ. ಗಡದ್ದಾಗಿ ಬಟ್ಟಲು ತುಂಬ ಮಾಂಸವನ್ನು ಜಗಿಯುತ್ತಿದ್ದರು. ಕೆಲವರು ದಪ್ಪ ಮೂಳೆಗಳ ತುದಿಯ ದವಡೆ ಹಲ್ಲುಗಳ ನಡುವೆ ಇಟ್ಟು ಪುಡಿಗುಟ್ಟಿಸಿ ಎಲುಬಿನ ಒಳಗಿದ್ದ ತುಪ್ಪವ ಸೊರ್ರನೆ ಹೀರಿ ಸವಿಯುತ್ತಿದ್ದರು. ಆ ಮಳವಳ್ಳಿಯ ಪೈಲ್ವಾನ ನೆನಪಾದ. ಮಾಂಸವನ್ನು ಹೇಗೆ ತಿನ್ನಬೇಕು ಎಂದು ಪ್ರವಚನವನ್ನೆ ನೀಡುತ್ತಿದ್ದ. ಹಾಸ್ಟಲಲ್ಲಿ ಆ ಕಾಲಕ್ಕೆ ತಟ್ಟೆ ತುಂಬ ಮಾಂಸ ಮೊಟ್ಟೆ ಮೀನು ಬಡಿಸುತ್ತಿದ್ದರು. ಹಲವು ಬಾರಿ ತಟ್ಟೆಯಲ್ಲೆ ಬಿಟ್ಟುಬಿಡುತ್ತಿದ್ದೆ. ಅವನ್ನೆಲ್ಲ ಆ ಪೈಲ್ವಾನ ಹೀಗೆ ತಿನ್ನಬೇಕು ಎಂದು ಎಂಜಲೆನ್ನದೆ ಬಿಡಿಸಿ ಬಿಡಿಸಿ ಅಗಿದು ಜಗಿದು ತಿಂದು ತೋರುತ್ತಿದ್ದ.

ಆ ಹೋಟೆಲು ದನದ ಮಾಂಸದ ಸವಿಗೆ ಹೆಸರುವಾಸಿಯಾಗಿತ್ತು. ಮಟನ್ ಡ್ರೈಗೆ ಅಲ್ಲಿ ಚಟ್‌ಪಟಿ ಎಂದು ಕರೆಯುತ್ತಿದ್ದರು. ಬೇಯಿಸಿ ಸೋರಿಸಿಟ್ಟುಕೊಂಡಿದ್ದ ಮಾಂಸವನ್ನು ಮಸಾಲೆ ಹಾಕಿ ಹುರಿದು ಕೊಡುತ್ತಿದ್ದರು. ನನ್ನ ಅಪ್ಪ ಬಾಲ್ಯದಲ್ಲೇ ಆ ಮಾಂಸಾಹಾರವನ್ನು ಬಿಡಿಸಿದ್ದ. ಮನೆಯಲ್ಲಿ ಮಾಡುವಂತಿರಲಿಲ್ಲ. ಕೇರಿಯಲ್ಲಿ ಕೋಣಗಳ ಕಡಿದರೆ ಕೆಡಿಸಿ ಮಾಂಸದ ಮೇಲೆ ಸೀಮೆಣ್ಣೆ ಚೆಲ್ಲಿ ಕಡ್ಡಿಗೀರುತಿದ್ದ. ಪೋಲೀಸರ ಕರೆತರುತ್ತಿದ್ದ. ತಾನೇ ಒಬ್ಬ ನರಭಕ್ಷಕನಾಗಿದ್ದ ಅಪ್ಪನ ಆ ವರ್ತನೆ ನನ್ನ ಅರಿವಿಗೆ ನಿಲುಕದಾಗಿತ್ತು. ಅವನ ಜೊತೆ ತಿಂದೆ. ಮೂಲತಃ ನಾನು ಮಾಂಸ ಪ್ರಿಯನಲ್ಲ. ಸೊಪ್ಪಿನ ಸಾರಿದ್ದರೆ ಸಾಕು; ಒಂದಿಷ್ಟು ಮುದ್ದೆಯೊ ಅನ್ನವೊ ಉಂಡರೆ ಹೊಟ್ಟೆ ಬರ್ತಿ ಆಗುತಿತ್ತು. ದಡೂತಿ ಆಹಾರಕ್ಕೆ ಬೇಕಾದ ಹೊಟ್ಟೆಯೇ ನನಗೆ ಇರಲಿಲ್ಲ. ಭಾಗಶಃ ಹಸಿದು ಹಸಿದು ಒಂದಿಷ್ಟೇ ತಿಂದು ಅದೇ ದೇಹಕ್ಕೆ ರೂಢಿಯಾಗಿತ್ತು. ಹಾಗೆ ಅಲ್ಲಿ ಆನಂದದಿಂದ ಊಟ ಮಾಡುತ್ತಿದ್ದವರು ಈ ಲೋಕವನ್ನೇ ಮರೆತಂತಿದ್ದರು. ಅದು ಅವರಿಗಿದ್ದ ರೂಢಿ. ಅವನೇ ದುಡ್ಡು ಕೊಟ್ಟ. ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗೆ ಕರೆತಂದ. ನಿನಗೆ ಏನೇನು ಬೇಕೊ ತೆಗೆದಿಕೊ ಎಂದ. `ಈಗ್ಲೇ ಬ್ಯಾಡಾ; ಇನ್ನೂ ಟೈಂ ಇದೆ’ ಎಂದೆ. ಇರ್ಲಿ ತಕಪಾ ಎಂದು ಒತ್ತಾಯಿಸಿ ಪೆನ್ನು ಪೇಪರು ನೋಟ್ ಬುಕ್ ತೆಗೆದುಕೊಟ್ಟ. `ವೋದುಕೆ ಪುಸ್ತಕತಕೊ’ ಎಂದ. `ಅವೆಲ್ಲ ಲೈಬ್ರರಿಲಿ ಫ್ರೀಯಾಗಿ ಸಿಕ್ತವೆ’ ಎಂದು ಆನಂದ ಪಟ್ಟೆ. ಬ್ಯಾಗು ಹಿಡಿಸದಾಯಿತು. ಚಿಕ್ಕದೊಂದು ಬ್ಯಾಗನ್ನು ಕೊಡಿಸಿದ.

ಸಂಬಂಧಿಕರು ಮನದ ಮುಂದೆ ಬಂದು ಹೋದರು. ಸುಮ್ಮನೆ ಅವರನ್ನೆಲ್ಲ ಒಂದು ನಿಟ್ಟುಸಿರಲ್ಲಿ ತೇಲಿ ಬಿಟ್ಟು ಅಮಾಯಕ ಸಿದ್ದರಾಮಣ್ಣನ ಕಂಡು ಮನಸ್ಸು ತುಂಬಿ ಬಂತು. ಸಿಟಿ ಬಸ್‌ಸ್ಟೇಷನ್‌ಗೆ ಕರೆತಂದ. `ಯಾಕಣ್ಣಾ’ ಎಂದೆ. ನೀನೆಲ್ಲಿ ಇರ್ಬೇಕೊ; ಅಲ್ಲೇ ಇರ್ಬೇಕು ಕನಪ್ಪಾ… ನನ್ನಂತ ಕೂಲಿಯವ್ನ ಜೊತೆಲಿರ್ಬಾರ್ದು. ಇನ್ನೂ ಒದುದದೆ ಅಂತಿಯೆ! ಅದ್ನೂ ವೋದ್ಬುಡು. ಎಲ್ಲನು ಮುಗ್ಸಿ ಕೆಲ್ಸ ತಕಂಡು ಒಂದಿನ ನನ್ನ ಉಡಿಕಂಡು ಬಾ… ಅವತ್ತು ನಾ ನಿನ್ಗೆ ಮೈಸೂರು ಪಾಕ್ ಕೊಡಿಸ್ತಿನಿ’ ಎಂದ. `ಯಾಕಣ್ಣಾ ಇಂಗ್ಮಾಡಿಯೇ… ಸೇರುಗಂಟ ನಿನ್ನ ಜೊತೆಲೆ ಇರ್ತಿನಣ್ಣಾ… `ನನ್ಗೆ ಯಾರು ಇಲ್ಲಣ್ಣಾ’, `ಯಾಕಂಗಂದಿಯೇ… ಪ್ರಪಂಚನೆ ಜೊತ್ಕದೆ ಅನ್ಕಂಡ್ರೆ ಅದೇ… ಇಲ್ಲಾ ಅಂದ್ರೆ ಏನೂ ಇಲ್ಲಾ… ಎಲ್ಲಾ ಅದೇ ಅನ್ನೋ ಅದಾಗಿದ್ದದೇ ಬರ್ತದೇ; ವೋಗು… ಅಲ್ಲೆ ಎಲ್ಲರ ಮರುದ ಕೆಳ್ಗೆ ಮಲ್ಗಿದ್ದು ಯಾಚ್ನ ಮಾಡ್ಕಂದು ಕಾಲೇಜ ಸೇರ್ಕೊ’ ಎಂದು ಬಸ್ಸು ಹತ್ತಿಸಿಯೇ ಬಿಟ್ಟ. ಅವನೊಬ್ಬ ಅನಾದಿ ವೇದಾಂತಿ ಎನಿಸಿತು. ಕಿಟಕಿಯ ಬಳಿ ಕೂತಿದ್ದೆ. ಈಗಿನಷ್ಟು ರಶ್ ಆಗ ಇರಲಿಲ್ಲ. ಕಿಟಕಿಯ ಬಳಿ ಬಂದು ಬುದ್ಧಿ ಹೇಳಿದ. ಆ ಪೌರಕಾರ್ಮಿಕನ ಮಗಳಿಗೆ ಒಂದು ಗಂಡು ತೋರಿಸು ಎಂದೆ. ಸುಮ್ನೆ ಅಂಗಂದಿದ್ದೆ ಕನಪಾ; ನಿನ್ನ ಏನಂದನು ಅಂತಾ ತಿಳ್ಕಮಾ ಅಂತಾ…’ ಆಯ್ತೂ; ಅಂತೆದ್ನೆಲ್ಲ ಮುದ್ರಿ ಮುದ್ದೆಕಟ್ಟಿ ಅತ್ತಾಗೆ ಬಿಸಾಕ್ಬುಟ್ಟು ಚೆನ್ನಾಗಿ ವೋದ್ಕ ಪಾ’ ಎಂದು ಕೈ ಬೀಸಿದ್ದ. ಅಳುವಿನ ಆಚೆಗಿನ ಸಂಕಟ ಉಕ್ಕುತ್ತ ಬಂದಿತ್ತು. ತಡೆದುಕೊಂಡೆ. ಅವನಿಂದ ನನಗೂ ಒಂದು ವಿಮೋಚನೆ ಬೇಕಿತ್ತು; ನನ್ನಿಂದ ಅವನಿಗೂ ಏನೊ ಬಿಡುಗಡೆ ಬೇಕಿತ್ತು. ರಾಮಸ್ವಾಮಿ ಸರ್ಕಲಿನ ಸ್ಟಾಪಿನಲ್ಲಿ ಇಳಿದುಕೊಂಡೆ. ಗಂಗೋತ್ರಿಯ ಬಾಗಿಲು ತೆರೆದಿರಲಿಲ್ಲ. ಪ್ರವೇಶಕ್ಕೆ ಇನ್ನೂ ಸಮಯವಿತ್ತು. ನನ್ನ ಹಲವು ಕಿರಿಯ ಮಿತ್ರರು ಮಹರಾಜ ಕಾಲೇಜಿನಲ್ಲೇ ಇದ್ದರು. ಅವರ ರೂಮಲ್ಲಿ ಹೇಗೊ ಕಾಲಕಳೆಯುವ ಎಂದು ಬಂದೆ. ಹಾಸ್ಟಲಿನ ಕಾರಿಡಾರಿನ ಲೈಟುಗಳು ಮಂದವಾಗಿ ಉರಿಯುತ್ತಿದ್ದವು.

ಆ ಜೂನಿಯರ್‌ನ ಬಾಗಿಲು ಬಡಿದೆ. ಚಿಲಕ ಹಾಕಿರಲಿಲ್ಲ. ತೆರೆದುಕೊಂಡಿತು. ಒಹ್! ಏನಣ್ಣಾ… ಇಸ್ಟೊತ್ತಲ್ಲಿ ಎಂದು ಚಕಿತನಾದ. ಆತ ಹಾಸನದ ಕಡೆಯವನು. ಬ್ಲೇಡೇಟ್ ಚಿಕ್ಕಣ್ಣನ ದೂರದ ಸಂಬಂಧಿ. ಊರಿಂದ ಬಂದೇನಣ್ಣಾ ಎಂದ. ಅವನ ಸುಖದುಃಖ ವಿಚಾರಿಸಿಕೊಂಡೆ. ಅವನ ನಡವಳಿಕೆ ಗೊತ್ತಾಯಿತು. ಇರಿಸಿಕೊಳ್ಳಲು ಮನಸ್ಸಿರಲಿಲ್ಲ. ನಾಟಕ ಮಾಡಿದ. ಈ ರಾತ್ರಿ ಇಲ್ಲಿರುತ್ತೇನೆ. ನಾಳೆ ಗಂಗೋತ್ರಿಗೆ ಹೋಗ್ತಿದ್ದೀನಿ ಎಂದೆ. ನಿರಾಳ ಆದ. ಹೇಗೊ ಆ ರಾತ್ರಿ ಕಳೆದೆ. ಬೆಳಿಗ್ಗೆ ಎದ್ದು ಸ್ನಾನಕ್ಕೆ ಹೋದೆ. ಇಷ್ಟು ಕೊಳೆಯಾದ ಬಟ್ಟೆಗಳ ತೊಳೆಯದೆ ಗಂಗೋತ್ರಿಗೆ ಹೋಗುವಂತಿರಲಿಲ್ಲ. ರಿಕ್ವೆಸ್ಟ್ ಮಾಡಿಕೊಂಡೆ. ಆ ಮಧ್ಯಾಹ್ನ ಎಲ್ಲ ಬಟ್ಟೆಗಳ ತೊಳೆದು ಒಣ ಹಾಕಿದೆ. ಬಿರು ಬಿಸಿಲಲ್ಲಿ ಒಣಗಿದವು. ಆ ಜೂನಿಯರ್ ಎಲ್ಲೊ ಹೊರಟು ಹೋಗಿದ್ದ. ಕೀ ಬಚ್ಚಿಟ್ಟಿದ್ದ. ಬಟ್ಟೆಗಳನ್ನೆಲ್ಲ ಜೋಡಿಸಿ ತಲೆದಿಂಬಿನ ಕೆಳಗಿಟ್ಟು ಮಲಗಿದೆ. ಅದೇ ಸರ್ಕಲ್ಲಿನ ಬಳಿ ಏನೊ ತಿಂದು ಬಂದಿದ್ದೆ. ಬೋರು ಹೊಡೆಯುತ್ತಿತ್ತು. ಬಿಸಿಲಿನ ಧಗೆ ಏರಿತ್ತು. ಸೀಗೇಕಾಯಿನ ಪುಡಿಯ ಕಲೆಸಿ ಮೈಗೆ ಮೆತ್ತಿಕೊಂಡು ಉಜ್ಜಿ ಉಜ್ಜಿ ಕೊಳೆಯ ಪೊರೆಯ ಎಡೆದು ತೊಳೆಯಬೇಕೆನಿಸಿತು. ಅರೆಬರೆ ತಲೆಗೂದಲ ನಾನೇ ಕತ್ತರಿಸಿ ಗಡ್ಡ ಟ್ರಿಮ್ ಮಾಡಿಕೊಂಡೆ. ತಣ್ಣೀರಲ್ಲಿ ಮೈ ಉಂತಿತ್ತು.
ಮಾರುಕಟ್ಟೆಯಲ್ಲಾಗಿದ್ದ ಕೊಳೆಯೆಲ್ಲ ಹೋಗಿತ್ತು. ಹಗುರಾಗಿದ್ದೆ. ಸುತ್ತಬೇಕೆನಿಸಿತು. ಅದೇ ಕೃಷ್ಣಮೂರ್ತಿ ಪುರಂಗೆ ಬಂದೆ. ಅದೊಂದು ಸಭ್ಯರ ಬಡಾವಣೆ. ಸಂಪ್ರದಾಯಸ್ಥ ಬ್ರಾಹ್ಮಣರ ವಟಾರಗಳು ನನ್ನನ್ನು ಯಾವತ್ತು ಸೆಳೆಯುತ್ತಿದ್ದವು. ಶ್ರೀರಾಮನವಮಿಯ ಆಚೀಚಿನ ದಿನಗಳು. ಆ ದೇಗುಲದ ಮಂಡಳಿಯವರೊ ಆ ಶ್ರೀರಾಮನವಮಿಯ ಹಬ್ಬದ ಸಲುವಾಗಿ ದೇಶದ ಪ್ರತಿಷ್ಠಿತ ಹಿಂದೂಸ್ತಾನಿ ಸಂಗೀತ ದಿಗ್ಗಜರ ಕರೆಸಿ ಗಾನ ಗೋಷ್ಠಿಗಳ ಏರ್ಪಡಿಸುತ್ತಿದ್ದರು. ನಾನು ಬಿ.ಎ. ಓದುವ ಮೂರು ವರ್ಷಗಳ ಕಾಲದಲ್ಲಿ ನಾನಲ್ಲಿ ವಿಖ್ಯಾತ ಗಾಯಕರ ನಾದಲೀಲೆಗೆ ಸಾಕ್ಷಿಯಾಗಿದ್ದೆ. ಅದು ಹೊಸದೊಂದು ಲೋಕವನ್ನು ಪರಿಚಯಿಸಿತ್ತು. ಆ ಸಂಗೀತ ರಸದ ಅಲೆಗಳಂತೆಯೇ ಆ ಅಗ್ರಹಾರದ ಚೆಲುವೆಯರು ಕಂಗೊಳಿಸಿ ಕಿನ್ನರಿಯರಂತೆ ನನ್ನ ಮನಸ್ಸನ್ನು ಸುಂಟರಗಾಳಿಯಂತೆ ಎಲ್ಲೊ ಎಳೆದೊಯ್ದು ಬಿಸಾಡುತ್ತಿದ್ದರು. ಹಳ್ಳಿಯ ಆ ತಮಟೆ ನಗಾರಿಗಳೆಲ್ಲಿ ಈ ಅಗ್ರಹಾರದ ಗಾನಸುಧೆ ಎಲ್ಲಿ ಎಂದು ಹೋಲಿಕೆಗೆ ಸಿಗದ ಸಂಬಂಧಗಳಲ್ಲಿ ಮೌನವಾಗುತ್ತಿದ್ದೆ.

ಅದೇ ಸಡಗರದ ಕಿರುದಾರಿ ಬೀದಿಗಳು. ಹಳೆಯ ಮೈಸೂರು ಹೆಂಚಿನ ಪಡಸಾಲೆ ಕಂಬಗಳ ಸಾಂಪ್ರದಾಯಿಕ ಮನೆಗಳು. ಚೆಂದದ ರಂಗೋಲಿ; ಹೂಗಿಡಗಳು… ಹಸನಾದ ಅಂಗಳಗಳು… ಸುಮ್ಮನೆ ತಿರುಗಾಡುತಿದ್ದೆ ಯಾರದೊ ಮನೆಗೆ ಬಂದಿರುವ ನೆಂಟನಂತೆ. ಹೂಗಿಡಕ್ಕೆ ನೀರು ಹಾಕುತಿದ್ದ ವಯಸ್ಕ ಹೆಂಗಸೊಬ್ಬರು ನನ್ನನ್ನು ಗಮನಿಸಿದರು. ಹಸನ್ಮುಖರಾಗಿ; `ಯಾರ ಮನೆಯ ಹುಡುಕುತ್ತಿದ್ದೀಯಪ್ಪಾ’ ಯಾರು ಬೇಕು…’, `ಸುಮ್ಮನೆ ಬಂದೆ ಆಗಾಗ ಹೀಗೆ ಬರ್ತಾ ಇರ್ತೇನೆ’ `ಅದನ್ನೆ ಕೇಳಿದ್ದು; ಯಾರಿಗಾಗಿ ಯಾರ ಮನೆಗೆ ಬರ್ತೀಯೆ’, `ನಿಮ್ಮಂತವರ ಮನೆಗೆ ಬರುವಂತವನೇ ನಾನೂ… ಬೀದಿಯಲ್ಲಿ ಬಂದು ಬೀದಿಯಲ್ಲೇ ಹೊರಟು ಹೋಗುವವನು’. ನಿಲ್ಲಪ್ಪಾ… ಹಾಗೆ ಹೇಳಿದರೆ ಅರ್ಥ ಏನೂ. ಸುಮ್ಮನೆ ಇಲ್ಲಿ ತನಕ ಯಾರೂ ಬರೋದಿಕ್ಕೆ ಆಗೋದಿಲ್ಲಾ ಅಲ್ಲವೇ’. ಅವರ ಪ್ರಶ್ನೆಗೆ ಏನು ಹೇಳಬೇಕೆಂದು ತಡವರಿಸುತಿದ್ದಂತೆಯೇ; `ಯಾರಮ್ಮ ಅದೂ’ ಎಂದು ಮುದ್ದಾದ ಅವರ ಮಗಳು ಮಲ್ಲಿಗೆ ಜಡೆಯವಳು ಹೊರ ಬಂದು ನೋಡಿದಳು. ಅಚ್ಚರಿಯಿಂದ ಒಂದು ಕ್ಷಣ ನನ್ನೆದೆ ಗೂಡು ಬೆಡಗಿನ ಉಸಿರ ಎಳೆದುಕೊಂಡು ಜೋರಾಗಿ ಸದ್ದು ಮಾಡಿತು. ಬೆರಗಾಗಿದ್ದೆ. `ಯಾರ ಜೊತೆ ಮಾತಾಡುತ್ತಿದ್ದೀರಿ… ಬೀದಿಯಲ್ಲಿ ನಿಲ್ಲಿಸಿಕೊಳ್ಳುವುದೇ… ಒಳಗೆ ಕರೆದು ಮಾತಾಡಬಾರದೇ… ಯಾರದೂ’ ಎಂದು ಆ ಹಿರಿಯರು ಹೊರಗೆ ಬಂದರು. ಅಚ್ಚರಿಯ ಮೇಲೆ ಅಚ್ಚರಿ ಆಯಿತು. ಒಂದು ಕಾಲಕ್ಕೆ ಅವರು ಹಾಸ್ಟಲಿಗೆ ಬಂದು ನಮಗೆ ಇಂಗ್ಲೀಷ್ ಕಲಿಸುತ್ತಿದ್ದ ಕೃಷ್ಣ ಮೂರ್ತಿ ಮಾಸ್ತರಾಗಿದ್ದರು. ನಾನಲ್ಲಿ ಅವರ ಮಡದಿಯ ಜೊತೆ ಅನಾಮಿಕನಾಗಿ ಮಾತನಾಡುತ್ತಿದ್ದುದಕ್ಕೆ ಒಂದು ಅವ್ಯಕ್ತ ಸಂಬಂಧ ಗೋಚರವಾಗಿತ್ತು. ಆಕಸ್ಮಿಕವೊ ನಾಟಕೀಯತೆಯೊ ಏನೊ ಒಟ್ಟಿನಲ್ಲಿ ಒಂದು ಸ್ಥಿತಿ ನಿರ್ಮಾಣ ಆಗಿತ್ತು. ಮಾಸ್ತರಿಗೂ ಏನೊ ಆಗಿತ್ತು.

`ಹೇ ನೀನೇನಯ್ಯಾ! ನೇರ ಒಳಗೆ ಬರಬಹುದಿತ್ತಲ್ಲಾ. ನಾನು ಅಂತವನೇನಯ್ಯಾ… ಬಾಬಾ ಒಳಗೆ ಬಾ. ಬಹಳ ಕಾಲ ಆಗಿತ್ತಲ್ಲವೆ ಕಂಡು… ಮುಗಿತಾ ಎಂ.ಎ… ಯೋಗ್ಯ ಕಣಯ್ಯ ನೀನೂ. ನಿನ್ನಂತವರಿಗೆ ಮಾತ್ರ ಗುರುಭಕ್ತಿ ಇರೋದು. ನನ್ನನ್ನ ಹುಡುಕ್ಕೊಂಡು ಬಂದೆಯಲ್ಲಾ… ನಾಲ್ಕು ಇಂಗ್ಲೀಷ್ ವಾಕ್ಯಗಳ ಕಲಿಸಿದ್ದಕ್ಕೂ ಸಾರ್ಥಕ ಆಯಿತು ಬಿಡಯ್ಯಾ…’

`ಹೇ ಇವಳೇ… ಇವನು ನನ್ನ ಶಿಷ್ಯ; ಬಹಳ ಬುದ್ಧಿವಂತ. ಆ ಶ್ರೀ ರಾಘವೇಂದ್ರಾಯ ನಮಃ ಪತ್ರಿಕೆ ತಂದು ತೋರ್ಸಿದ್ದೆ ಅಲ್ಲವೇ… ನನ್ನ ಶಿಷ್ಯ ದೆವ್ವದ ಕತೆಯ ಎಷ್ಟು ಸೊಗಸಾಗಿ ಬರೆದಿದ್ದಾನೆ ಎಂದು ಹೇಳಿದ್ದೆ ಅಲ್ಲವೇ… ಇವನೇ ಆ ಕಥೆಗಾರ! ಪಾನಕ ತಂದುಕೊಡೇ… ನನ್ನ ಮಗಳು ಶಾರದೆಯೂ ಓದಿದ್ದಾಳಯ್ಯಾ… ಆ ಶಕ್ತಿ ಶಾರದೆಯೆ ನಿನ್ನನ್ನು ಮೆಚ್ಚಿ ಒಲಿದಿರುವಾಗ ನಮ್ಮ ಮಾತೇನು ಮುಖ್ಯಾ… ಬಿಡು ಬಿಡೂ… ಶಾರದೆ ನಿನ್ನ ಜೊತೆಗೆ ಇರ್ತಾಳೆ ಅಂದ ಮೇಲೆ ಯಾವ ವಿಘ್ನಗಳೂ ಬರಲಾರವು ಬಿಡೂ’ ಎಂದು ಹೇಳುತ್ತಿದ್ದಂತೆಯೆ ಅವರ ಮಗಳು ನಗಾಡುತ್ತ ಒಳ ಮನೆಗೆ ಹೋಗಿದ್ದನ್ನು ಹಿಂತಿರುಗಿ ನೋಡಿದೆ. `ಈ ಶಾರದೆ ಅಲ್ಲಯ್ಯಾ ನಿನಗೆ ಒಲಿದು ಮೆಚ್ಚಿರುವುದೂ ಆ ಶಕ್ತಿ ಶಾರದೆ’ ಎಂದು ತಿದ್ದಿಕೊಂಡರು. ಅವರ ಮಾತಿನಿಂದ ನಾನು ಯಾರು ಎಂಬುದೇ ಮರೆತು ಹೋಗಿತ್ತು. ಪಾನಕ ಕುಡಿದೆ. ಪ್ರಾಯದ ಹೆಣ್ಣಿನ ನಗೆಗೆ ಆಕಾಶವನ್ನೆ ಹೊರಬಲ್ಲೆ ಎಂಬ ಉತ್ಸಾಹ ಬಂದುಬಿಡುತ್ತದಲ್ಲಾ… ಅಯೋಗ್ಯ ಎಂದೆನಿಸಿಕೊಂಡಿರುವ ನಾನು ಈ ಬ್ರಾಹ್ಮಣರಿಂದ ಇಷ್ಟೊಂದು ಹೊಗಳಿಸಿಕೊಳ್ಳುತ್ತಿರುವುದೂ ಕೂಡ ಒಂದು ರಿಯಾಯಿತಿ ನಾಟಕ ಇರಬಹುದೇ ಎಂಬ ಸಂಶಯ ಮೂಡಿತು.

`ಸುಮ್ಮನೆ ಬಂದೇನಯ್ಯಾ… ಏನಾದರೂ ಉದ್ದೇಶವಿತ್ತೋ…’

`ಸುಮ್ಮನೆ ಬಂದೆ… ಅಕಸ್ಮಾತ್ ನೀವು ಕಂಡರೆ ಮಾತಾಡುವ ಎನಿಸಿತ್ತು. ಸಿಕ್ಕಿದಿರಿ. ಮಾತಾಡಿ ಹಾರೈಸಿದಿರಿ… ಸಾಕೆನಗೆ… ಬರ್ತೀನಿ ಸಾರ್…’

`ಇರಯ್ಯಾ; ರಾತ್ರಿ ಇಲ್ಲೇ ಊಟ ಮಾಡಿಕೊಂಡು ಹೋಗು… ಶ್ರೀರಾಮನವಮಿಯ ಪಾಯಸ ಕೋಸುಂಬರಿ ಚಿತ್ರಾನ್ನ ತಿಂದು ಹೋಗೂ…’

`ಬೇಡ ಸಾರ್, ಫ್ರೆಂಡ್ಸ್ ಕಾಯ್ತಾ ಇರ್ತಾರೆ…’

`ಆಯ್ತು ಹೋಗೂ… ಇವತ್ತು ಕಿಶೋರಿ ಅಮೋಣ್ಕರ್ ಅಂತಾ ಮಹಾ ಗಾಯಕಿ ಹಾಡ್ತಿದ್ದಾರೆ. ಆಕೆಯ ನಾದಲೀಲೆಯ ಆರೋಹಣ ಅವರೋಹಣಗಳು ಕಡಲ ಅಲೆಯಂತೆ ಇರುತ್ತವೆ. ಜೀವನದಲ್ಲಿ ಸುಮ್ಮನೆ ಅವನ್ನೆಲ್ಲ ಕಿವಿ ಮೇಲೆ ಹಾಕಿಕೊ… ಮುಂದೆ ಬೇಕಾಗುತ್ತವೆ’

ಆ ಮಳವಳ್ಳಿಯ ಪೈಲ್ವಾನ ನೆನಪಾದ. ಮಾಂಸವನ್ನು ಹೇಗೆ ತಿನ್ನಬೇಕು ಎಂದು ಪ್ರವಚನವನ್ನೆ ನೀಡುತ್ತಿದ್ದ. ಹಾಸ್ಟಲಲ್ಲಿ ಆ ಕಾಲಕ್ಕೆ ತಟ್ಟೆ ತುಂಬ ಮಾಂಸ ಮೊಟ್ಟೆ ಮೀನು ಬಡಿಸುತ್ತಿದ್ದರು. ಹಲವು ಬಾರಿ ತಟ್ಟೆಯಲ್ಲೆ ಬಿಟ್ಟುಬಿಡುತ್ತಿದ್ದೆ. ಅವನ್ನೆಲ್ಲ ಆ ಪೈಲ್ವಾನ ಹೀಗೆ ತಿನ್ನಬೇಕು ಎಂದು ಎಂಜಲೆನ್ನದೆ ಬಿಡಿಸಿ ಬಿಡಿಸಿ ಅಗಿದು ಜಗಿದು ತಿಂದು ತೋರುತ್ತಿದ್ದ.

ನಾನು ಗುಪ್ತವಾಗಿ ಹಿಂದೂಸ್ತಾನಿ ಸಂಗೀತವ ಆರಾಧಿಸುತ್ತಿದ್ದೆ. ಆ ಸಂಗೀತ ಪರಂಪರೆಯ ನಾಭಿಯಾಳದ ಅಲೆ ಅಲೆಯ ತರಂಗಗಳು ಮಧ್ಯ ಏಷ್ಯಾದ ಮರುಭೂಮಿಯ ಸುತ್ತಿಕೊಂಡು ಬಂದು ನಮ್ಮ ಎದೆಯಾಳಕ್ಕೆ ಇಳಿದಿರುವ ದಾರಿ ನನಗೆ ಗೊತ್ತಿತ್ತು. ಕದ್ದು ಮುಚ್ಚಿ ಸರಸ್ವತಿ ಪುರಂನ ಬ್ರಾಹ್ಮಣರ ಮನೆಯಲ್ಲಿ ಸಂಗೀತ ಕಲಿಯಲು ಹೋಗಿ ಆಗದೆ ಹತಾಶೆಯಿಂದ ಕೈಬಿಟ್ಟಿದ್ದೆ. ನಾನಲ್ಲದ ನಾನಾಗಲು ಸಾಕಷ್ಟು ಬೈಸಿಕಲ್ ತುಳಿದಿರುವೆ ಎನಿಸಿತು. ಉಸಿರಾಟದಲ್ಲೆ ನಾದ ಲಯ ಸ್ವರವಿದೆ ಎಂದಿದ್ದರಲ್ಲವೆ ಯಾರೊ ಯಾವುದೊ ಒಂದು ಸಂಗೀತ ಕಛೇರಿಯಲ್ಲಿ `ಗಾನಭಾರತಿ’ ಎಂಬ ಒಂದು ಸಂಸ್ಥೆಯನ್ನು ಎಸ್.ಅನಂತನಾರಾಯಣ ಅವರು ಕಟ್ಟಿದ್ದರು ಎನಿಸುತ್ತದೆ. ನಾನಾಗ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿಯಾಗಿದ್ದೆ. ಆಗಾನ ಭಾರತೀಯ ಬಳಗಕ್ಕೆ ಅವರು ನನ್ನನ್ನು ಸದಸ್ಯನನ್ನಾಗಿ ಮಾಡಿಕೊಂಡಿದ್ದರು. ನನ್ನ ಗಾನ ಪ್ರತಿಭೆ ಯಾರಿಗೂ ಗೊತ್ತಿರಲಿಲ್ಲ. ರಾಗ ಸಂಯೋಜನೆಯತ್ತ ಗಮನವಿತ್ತು. ಬಂಜಗೆರೆಗೆ ಒಂದಿಷ್ಟು ಗೊತ್ತಿತ್ತು. ಬೆಳದಿಂಗಳಲ್ಲಿ ಹಾಸ್ಟಲಿನ ವಿಶಾಲ ಅಂಗಳದ ಕಟ್ಟೆ ಮೇಲೆ ಕೂತು ನಾನು ಗೆಳೆಯರಿಗಾಗಿ ಹಾಡುತ್ತಿದ್ದೆ. ನೀನು ಸಂಗೀತ ಕಲಿತಿದ್ದೀಯಾ ಎಂದು ಕೆಲವರು ಕೇಳುತ್ತಿದ್ದರು. ಮೊದಲ ಬಾರಿಗೆ ಅಂಬೇಡ್ಕರ್ ಹಬ್ಬದಲ್ಲಿ ಹಾಡಿ ಯಡವಟ್ಟಾಗಿದ್ದ ನಂತರ ನಾನೆಂದೂ ಸಾರ್ವಜನಿಕವಾಗಿ ಹಾಡುವ ಧೈರ್ಯ ಮಾಡಿರಲಿಲ್ಲ. ಅನಂತನಾರಾಯಣ್ ಅವರು ಪ್ರಸಿದ್ಧ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು. ಅವರಿಗೆ ನನ್ನ ಸಂಗೀತಾಸಕ್ತಿ ಹೇಗೆ ತಿಳಿದಿತ್ತೊ ಏನೊ… ಅದನ್ನೆಲ್ಲ ನೆನೆಯುತ್ತ ಶ್ರೀರಾಮ ದೇಗುಲದ ಬಳಿ ಬಂದಿದ್ದೆ. ಮಾರಿ ಹಬ್ಬಗಳಲ್ಲಿ ಕುಡಿದು ಕುಣಿದು ಕುಪ್ಪಳಿಸಿ ತಮಟೆ ನಗಾರಿಗಳಲ್ಲಿ ಜಾತ್ರೆ ತುಂಬ ಇಟ್ಟಾಡುವ ಸುಖದಂತೆಯೇ ಆ ಸಭ್ಯ ಬ್ರಾಹ್ಮಣರು ರಾಮಾರಾಧನೆಯಲ್ಲಿ ಮುಳುಗಿದ್ದರು.

ಎಲ್ಲೆಲ್ಲು ರೇಶಿಮೆ ಸೀರೆಯ ಚಿತ್ತಾಕರ್ಷಕ ಹೆಂಗಸರು. ಪ್ರಾಯ ಚಿಮ್ಮುವ ಹುಡುಗಿಯರು. ವೇದಕಾಲೀನ ಆಚಾರ ವಿಚಾರಗಳ ಮಡಿವಂತರು ಎತ್ತಿಕೊಂಡು ಕುಣಿಸಬೇಕು ಎಂಬಂತೆ ಕಾಣುವ ಮುದ್ದು ಮಕ್ಕಳು… ಅವರದೇ ಒಂದು ಅಸ್ಪೃಶ್ಯ ಲೋಕ! ಮುಟ್ಟಿಸಿಕೊಳ್ಳಲು ಭಯವಾಗುವ ಸ್ಥಿತಿ. ಅನ್ಯತೆಯಲ್ಲಿ ಕಿತ್ತುಕೊಂಡು ಓಡಿಹೋಗಬೇಕು ಎನಿಸುವ ಕೀಳರಿಮೆಯ ಭಾವ… ನಮ್ಮದು ಎನ್ನುವುದೂ ಕಟ್ಟಿಹಾಕುತ್ತದೆ; ಪರರ ರೀತಿ ನೀತಿ ಎಂಬುದೂ ಹೊರಕ್ಕೆ ಹಾಕಿಬಿಡುತ್ತದೆ. ಅವೆರಡರ ಮಧ್ಯೆ ಸಿಲುಕಿದ್ದೆ. ಸಂಗೀತ ಆಲಿಸುವುದು ನನಗೆ ತಾಯ ಜೋಗುಳವಾಗಿತ್ತು. ತಬ್ಬಲಿತನವ ನೀಗಿಕೊಳ್ಳುವ ಉಪಾಯವಾಗಿತ್ತು. ದುಃಖವನ್ನು ಸಾಂದ್ರವಾಗಿ ದೀರ್ಘ ಆಲಾಪಗಳಲ್ಲಿ ಒಡಲ ಉರಿಯ ಉರಿಸುವುದಾಗಿತ್ತು.

ಶ್ರೀರಾಮನ ಭಕ್ತಿಯ ಅಲೆಯ ಜೊತೆಗೆ ಅಲ್ಲೇನೊ ದೈವಿಕ ಸಡಗರವಿತ್ತು. ನಮ್ಮ ಮಾರಮ್ಮನ ಹಬ್ಬಗಳಲ್ಲಿ ಕಿಚ್ಚಿನ ಆಕ್ರೋಶದ ಸಂಕಟವೊ ಆವೇಶವೊ ಆನಂದವೊ ಮೈದುಂಬಿ ಕೋಣಗಳ ನೆತ್ತರಲ್ಲಿ ಮಾರಿ ಮಾತೆಗೆ ನಮಿಸಿ ಶರಣಾಗುವ ಭಕ್ತಿ ತರ್ಕದ ಎಲ್ಲೆ ಮೀರಿ ಜನುಮವೇ ಜಾತ್ರೆಯಾಗಿಬಿಡುತ್ತಿತ್ತು. ಈ ಬ್ರಾಹ್ಮಣರ ಸದ್ಭಕ್ತಿ ಸದ್ಗುಣ ಸಂಸ್ಕಾರಗಳಲ್ಲಿ ಮೃಗೀಯತೆಯೇ ಇಲ್ಲವೇ… ಒಂದು ತೊಟ್ಟು ರಕ್ತವನ್ನೂ ಇವರು ಹರಿಸುವುದೇ ಇಲ್ಲವೇ… ಬಾಬಾ ಸಾಹೇಬರು ನೆನಪಾದರು. ಅವರು ಮನುಸ್ಮೃತಿಯ ಸುಟ್ಟುಹಾಕಿದ್ದು ಕಣ್ಣ ಮುಂದೆ ಬಂತು. ಈ ಸದ್ಯ ಅವನ್ನೆಲ್ಲ ಇಲ್ಲಿ ಆಲೋಚಿಸುವುದು ಬೇಡ ಎಂಬಂತೆ ಆ ಇಂಗ್ಲೀಷ್ ಮಾಸ್ತರ ಮಗಳು ಶಾರದೆ ತಾಯ ಜೊತೆ ಕಂಡು ನಗಾಡಿ ಮಾಯವಾದಳು. ಮತ್ತೆ ಮತ್ತೆ ಕಣ್ಣುಗಳು ಅವಳಿಗಾಗಿ ಹುಡುಕಾಡಿದವು. ಮರುಭೂಮಿಯ ಮರೀಚಿಕೆಯಂತೆ ಕಂಡಿದ್ದಳೇನೊ…

ವೇದಿಕೆಗೆ ಇನ್ನೂ ಆ ಮಹಾನ್ ಗಾಯಕಿ ಕಿಶೋರಿ ಅಮೋಣ್ಕರ್ ಬಂದಿರಲಿಲ್ಲ. ಆ ಬ್ರಾಹ್ಮಣರಲ್ಲಿದ್ದ ಕೆಲ ಉದಾರಿಗಳು ಅಮೋಣ್ಕರ್‌ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು… `ಆಕೆಯ ತಾಯಿ ಕನ್ಯಾಕುಮಾರಿಯ ದೇಗುಲದ ಸೇವಕಿ, ನರ್ತಕಿ, ಗಾಯಕಿ ಕಿಶೋರಿ ಆ ಸಮುದ್ರ ದಂಡೆಯ ದೇವಾಲಯದಲ್ಲಿ ಬೆಳೆದವಳು ಎಂದು ಹೇಳುತ್ತಾರೆ. ಉನ್ನತ ಸಂಸ್ಕಾರದವಳು. ಕಡಲ ಅಲೆಗಳು ಆ ಮೀನಾಕ್ಷಿ ದೇಗುಲದ ಬಂಡೆಗೆ ಬಂದು ಬಡಿಯುವಂತೆಯೆ ಅವಳ ಎತ್ತರದ ದನಿಯ ಅಲೆಗಳು ನಮ್ಮ ಎದೆಗೆ ಬಡಿಯುತ್ತವೆ’ ಎಂದು ಹೇಳುತ್ತಿದ್ದಂತೆಯೆ ನನ್ನ ಕುತೂಹಲ ಇಮ್ಮಡಿಸಿತು. ಹಾಗೆ ಮಾತಾಡುತ್ತಿದ್ದವರ ಪೈಕಿ; `ನೋಡು ನೋಡೂ… ಅವರೇ ಅನಂತಮೂರ್ತಿ.. ನಮ್ಮವರು. ಬಹಳ ದೊಡ್ಡ ಸಾಹಿತಿ’ ಎಂದು ಪಕ್ಕದವರಿಗೆ ತೋರುತ್ತಿದ್ದರು. ನೋಡಿದೆ. ಸೆಳೆಯುವ ವ್ಯಕ್ತಿತ್ವ. ಮೃದು ನಗೆಯ ಕಣ್ಣುಗಳು. ಅವರಿಗೆಂದೇ ಖುರ್ಚಿ ಮುಂಭಾಗದಲ್ಲಿ ಮೀಸಲಿತ್ತು ಎನಿಸುತ್ತದೆ. ಅಲ್ಲಿ ಕೂತರು. ಅಮೋಣ್ಕರ್‌ ಬಂದು ಸಭೆಗೆ ನಮಸ್ಕರಿಸಿ; ಪಕ್ಕವಾದ್ಯದವರಿಗೆ ಏನೊ ಹೇಳಿ ಇಂಗ್ಲೀಷಿನಲ್ಲಿ ತಾವೀಗ ಯಾವ ಹಾಡು ಹಾಡುವೆ ಎಂದು ಸೂಚಿಸಿ ಆರಂಭಿಸಿದರು.

ಹೆಪ್ಪುಗಟ್ಟಿದ ಭಾವನದಲ್ಲಿ ಮೋಡ ಮುಸುಕಿದಂತೆ ಇಡೀ ಜನ ಜಾತ್ರೆ ನೀರವ ಮೌನದಲ್ಲಿ ನಾದಕ್ಕೆ ಕಿವಿಗೊಟ್ಟಿತು. ತರತರಂಗಗಳು ಮಂಡಲ ಮಂಡಲವಾಗಿ ಏರಿ ಏರಿ ಎದ್ದೆದ್ದು ಬೀಸಿದವು. ಆಕಾಶಕ್ಕೆ ಒಪ್ಪಿಸುವಂತೆ ಏನನ್ನೊ ಪ್ರಾರ್ಥಿಸುವಂತೆ ನಾದದ ರೆಕ್ಕೆ ಬಿಚ್ಚಿ ಗಗನಕ್ಕೆ ಹಾರುವಂತೆ ಹಾಡತೊಡಗಿದರು. ತಂತಾನೆ ಮುಂದಿದ್ದ ಹಿರಿಯರ ತಲೆಗಳು ತೂಗತೊಡಗಿದ್ದವು. ಬೋರ್ಗರೆವ ಪ್ರವಾಹ ದುತ್ತೆಂದು ಪ್ರಪಾತಕ್ಕೆ ದುಮ್ಮಿಕ್ಕಿದಂತೆ ರಾಗಝರಿಯ ಅದುಮಿಡಿದು ತೂರಿದಂತೆ ಆಲಾಪಗಳ ಝೇಂಕರಿಸಿದರು. ತಬಲ ಹಾರ್ಮೊನಿಯಂ ಕೊಳಲು ತಂಬೂರಿಗಳ ನುಡಿಸುವವರು ಕೊಚ್ಚಿ ಹೋಗುವಂತೆ ಸ್ವರವನ್ನು ಅಮೋಣ್ಕರ್‌ ಮತ್ತೆ ಮೇಲೇರಿಸಿದರು. ಕಣ್ಣು ಮುಚ್ಚಿ ಆಕಾಶವನ್ನು ಹಿಡಿದಂತೆ ಕೈಯ ಚಾಚಿ ನಾಭಿಯಾಳದಿಂದ ಹೊರಡಿಸುತ್ತಿದ್ದ ಆರೋಹಣ ಅವರೋಹಣಗಳು ನೆರೆದಿದ್ದವರನ್ನೆಲ್ಲ ಮಂತ್ರ ಮುಗ್ಧರನ್ನಾಗಿಸಿದ್ದವು. ನಾನು ಆ ಲಯನಾದ ಹೊಳೆಯಲ್ಲಿ ಲಯವೇ ಆಗಿದ್ದೆ. ನನಗೇ ಗೊತ್ತಿಲ್ಲದೆ ಸ್ಟೇಜಿನ ಮುಂದಿನ ರೆಡ್ ಕಾರ್ಪೆಟ್ ಮೇಲೆ ಕೂತಿದ್ದೆ. ಹೇಗೆ ಅಷ್ಟು ಹತ್ತಿರ ಹೋಗಿದ್ದೆನೊ ತಿಳಿಯಲಿಲ್ಲ. ಆಗಾಗ ಮಿಂಚಿನಂತೆ ಆ ಮಹಾಗಾಯಕಿ ಕಣ್ಣು ಬಿಟ್ಟು ಮುಚ್ಚಿಕೊಳ್ಳುತ್ತಿದ್ದರು. ಅವರ ದೃಷ್ಟಿಗೆ ನಾನು ಸುಮ್ಮನೆ ಕಂಡರೂ ಸಾಕೆಂದು ಬಾಯಿ ಬಿಟ್ಟುಕೊಂಡು ಜನ್ಮ ಸಾರ್ಥಕ ಆಯಿತೆಂದು ಆಲಿಸುತ್ತಿದ್ದೆ. ನನ್ನಂತವನು ಆ ಗಾಯಕಿಯ ನಾದನದಿಗೆ ಬೆಲೆಕಟ್ಟಲು ಸಾಧ್ಯವಿರಲಿಲ್ಲ. ವೇದಿಕೆಯೇ ಕಿನ್ನರ ಲೋಕದಂತೆ ಮಾಯಾಮಯವಾಗಿತ್ತು. ನನಗೆ ತಾತನಾಗಬೇಕಿದ್ದ ಚಿಕ್ಕವ್ವ ಮಾದೇವಿಯ ತಂದೆ ಮಾದಯ್ಯ ಆ ರಾತ್ರಿ ಕಂಸಾಳೆಯ ನಾದ ಲೀಲೆಯಲ್ಲಿ ಮಗಳ ಆತ್ಮವ ಹೊತ್ತೊಯ್ಯುವಂತೆ ಹಾಡುತ್ತಿದ್ದುದು ನೆನಪಾಯಿತು. ಎಲ್ಲಿಯ ಮಾದಯ್ಯ, ಆ ಚಿಕ್ಕಮ್ಮ ಮಾದೇವಿ… ಈ ಗಾನ ದೇವತೆ ಕಿಶೋರಿ ಅಮೋಣ್ಕರ್‌ ಎಂದು ದಾರಿ ಕಾಣದೆ ತಲ್ಲಣಿಸಿದೆ. ದುಃಖಿಸದೇ ದುಃಖಿಸುವ ಪ್ರಾರ್ಥನೆಯೇ ಈ ಗಾನಸಿರಿ ಎಂದು ಕೇಳಿಕೊಂಡೆ. ಸಂಗೀತ ವಿದ್ವಾನ್‌ಗಳು ವ್ಯಾಖ್ಯಾನ ಮಾಡುತ್ತಿದ್ದರು. ಯಾರೊಬ್ಬರು ಎದ್ದು ಆಚೀಚೆ ಹೋಗಿರಲಿಲ್ಲ. ಆ ಯುವತಿಯರ ಮೇಲಿನ ಸೆಳೆತವೇ ಹೊರಟು ಹೋಗಿತ್ತು. ಮಳೆಯಲ್ಲಿ ತೋಯ್ದಂತಾಗಿದ್ದೆ. ಸಂಗೀತ ಕಛೇರಿ ಮುಗಿದಿತ್ತು. ನೆಲಕ್ಕೆ ಹೂತು ಹೋದಂತೆ ಕಾಲುಗಳು ಅಲ್ಲೇ ಅಂಟಿಕೊಂಡಿದ್ದವು. ಬಿಡಿಸಿಕೊಂಡು ಎದ್ದು ರಸ್ತೆಗೆ ಬಂದೆ. ದೇಹ ಮನಸ್ಸು ಭಾರವಾಗಿದ್ದವು. ಆ ಸಂಗೀತ ಆಲಿಸಿ ಆನಂದಿಸಿದೆನೊ ದುಃಖಿಸಿದೆನೊ ಎಂಬುದೆ ಗೊತ್ತಾಗಲಿಲ್ಲ.

ರೂಮಿಗೆ ಬಂದಾಗ ಹೊತ್ತಾಗಿತ್ತು. ಐದಾರು ಸಲ ಬಾಗಿಲು ಬಡಿದೆ. ಆತ ತೆಗೆಯಲಿಲ್ಲ. ಗದರಿಸಿ ಕರೆಯುವಂತಿರಲಿಲ್ಲ. ಮೆಲ್ಲಗೆ ಕರೆದೆ. ಭಯಂಕರ ನಿದ್ದೆಯಲ್ಲಿ ಮುಳುಗಿದ್ದವನಂತೆ ನಟಿಸಿ ಬಾಗಿಲು ತೆಗೆದಿದ್ದ. ಅವನು ಏನು ಕೆಲಸ ಮಾಡುತಿದ್ದ ಎಂದು ಊಹಿಸಬಹುದಿತ್ತು. ಅವನೊಬ್ಬ ಕಲ್ಪನೆಯ ಕೈಕಸುಬುದಾರ ಎಂಬುದು ತಿಳಿಯುತಿತ್ತು. ಎಂತಹ ಅವಸ್ಥೆಗಳು… ದಣಿದಿತ್ತು ಮನಸ್ಸು. ನಾಳೆ ಇನ್ಯಾರನ್ನು ಕೋರಬೇಕೊ ತಾತ್ಕಾಲಿಕ ನೆಲೆಗೆ ಎಂದು ಯೋಚಿಸುತ್ತಿದ್ದಂತೆಯೆ ನಿದ್ದೆ ಬಂದು ಬಿಟ್ಟಿತ್ತು. ಆಗಾಗ ಎಚ್ಚರವಾಗುತಿತ್ತು. ತುಂಡು ತುಂಡು ನಿದ್ದೆ. ಅದದೇ ರಾಗಾಲಾಪಗಳ ಅಲೆಗಳು ಬಡಿದೆಚ್ಚರಿಸುತ್ತಿದ್ದವು. ಪ್ರಾಣಿಗಳೂ ಹಾಗೆ ಗೊರಕೆ ಹೊಡೆಯುವುದಿಲ್ಲವೇನೊ… ಹಾಗೆ ಗೊರಕೆ ಕೊರೆಯುತಿದ್ದ. ಮುಂಜಾವಿಗೇ ಎದ್ದಿದ್ದ. `ಅಣ್ಣಾ ರೂಂ ನಂಬರ್ ನೂರ ಮುವತ್ತರಲ್ಲಿ ನಿಮ್ಮ ಫ್ರೆಂಡ್ ಒಬ್ಬನೆ ಇದ್ದಾನೆ. ಅವರ ಜೊತೆ ಇರಿ. ನಾನು ಅರ್ಜೆಂಟಾಗಿ ಎಲ್ಲೊ ಹೋಗಿದ್ದು ಬರಬೇಕು’ ಎಂದು ನನ್ನನ್ನು ಹೊರ ಹಾಕಲು ಉಪಾಯ ಹುಡುಕಿದ್ದ ಆ ಜೂನಿಯರ್. `ಆಯ್ತಪ್ಪಾ… ಒಳ್ಳೆದೆ ಆಯ್ತು. ಕೃಷ್ಣಪ್ಪ ತಾನೇ… ಬ್ಯಾಡಾ ಅನ್ನೋದಿಲ್ಲಾ. ಓಕೇ; ಅಲ್ಲಿಗೇ ವೋಯ್ತಿನಿ’ ಎಂದೆ. ಸರ್ಕಲ್ಲಿಗೆ ಕರೆದೊಯ್ದೆ. ತಟ್ಟೆ ಇಡ್ಲಿ ಕೆಂಪು ಚಟ್ನಿ ತಿನ್ನಿಸಿದೆ. ಬಿಸಿಯಾದ ಚಹಾ ಕುಡಿದೆವು. ಬ್ಯಾಗನ್ನು ಹೆಗಲಿಗೆ ಏರಿಸಿಕೊಂಡಿದ್ದೆ. ಒಂದು ವೇಳೆ ಕೃಷ್ಣಪ್ಪ ಸಿಗದಿದ್ದರೆ ಬೇರೆ ದಾರಿ ಹುಡುಕಿದರಾಯಿತು ಎಂದು ಮುನ್ನೆಚ್ಚರಿಕೆ ವಹಿಸಿದ್ದೆ. ಅವನು ಹೊರಟು ಹೋದ. ಹಿಂತಿರುಗಿ ಬಂದು ಬಾಗಿಲು ನೋಡಿದೆ. ಬೀಗ ಹಾಕಿತ್ತು. ಕೇಳಿದೆ. ಈಗ ತಾನೆ ಸ್ನಾನಕ್ಕೆ ಹೋದ ಎಂದರು. ಮೊದಲ ಮಹಡಿಯಲ್ಲೆ ಕಾದೆ. ವಿಶ್ವಾಸಕ್ಕೆ ಮುಪ್ಪೇ ಇಲ್ಲ. ಬಂದ ಕೃಷ್ಣಪ್ಪ, ಕಂಡ ಕೂಡಲೆ; ಅವನ ಮಳವಳ್ಳಿ ಶೈಲಿಯ ನುಡಿಯಲ್ಲಿ ಬಾಯಿ ತುಂಬ `ವೋ; ಗಣೇಷೂ… ಯೇನಪಾ; ದೇವ್ರು ಬಂದಂಗೆ ಬಂದಿದ್ದಿಯಲ್ಲಪ್ಪಾ… ನನ್ಕೈಗೆ ಸಿಕ್ಕನೇ ಇನ್ನವ್ನು ಅನ್ಕಂದಿದ್ದೆ ಕಪ್ಪಾ… ಬಂದಲ್ಲಾ… ಬಾ’ ಎಂದು ಅಕ್ಕರೆಯಿಂದ ರೂಮಿಗೆ ಕರೆದುಕೊಂಡ. ಆ ಕೊಠಡಿ ಅವನ ಅಕ್ಕನ ಮಗನ ರೂಮಾಗಿತ್ತು. ಆತ ರಜೆಗೆ ಹೊರಟು ಹೋಗಿದ್ದ. ಕೃಷ್ಣಪ್ಪ ಬಿ.ಎಸ್ಸಿಯಲ್ಲಿ ಬಹಳ ಸಲ ಫೇಲಾಗಿದ್ದ. ಛಲಬಿಡದೆ ಆ ಗಣಿತ ಪತ್ರಿಕೆಯ ಮುಗಿಸಿ ಪಾಸು ಮಾಡಲೇಬೇಕೆಂದು ತ್ರಿವಿಕ್ರಮನಂತೆ ಪ್ರತಿಸಲ ಹೋರಾಡುತ್ತಿದ್ದ. ಫೇಲಾಗುವುದರ ಬಗ್ಗೆ ಆತನಿಗೆ ಒಮ್ಮೆಯೂ ಪಶ್ಚಾತ್ತಾಪ ಇರಲಿಲ್ಲ. ತಾನು ಸ್ವಂತ ಬುದ್ಧಿಯಿಂದ ಲೆಕ್ಕ ಮಾಡಿ ಬರೆಯುತ್ತಿರುವೆ… ಅರಿವುಗೇಡಿಗಳು ಬೇಕೆಂತಲೆ ನನ್ನನ್ನು ಪಾಸು ಮಾಡುತ್ತಿಲ್ಲ ಎಂದು ವಿಡಂಬಿಸುತ್ತಿದ್ದ. ಅವನು ಜೊತೆಗೆ ಸಿಗಲಾಗಿ ನಿಶ್ಚಿಂತನಾದೆ. ಇನ್ನೊಂದು ಮಂಚದಲ್ಲಿ ಆಸೀನನಾದೆ. ಕೃಷ್ಣಪ್ಪ ಮಜವಾಗಿದ್ದ. ತಾನೊಬ್ಬನೆ ಸುಖ ಪಟ್ಟರೆ ಸಾಲದು; ಜೊತೆಗಿರುವವರೂ ಎಂಜಾಯ್ ಮಾಡಬೇಕು ಎಂದು ಜೋಪಾನ ಮಾಡುತಿದ್ದ. ಗದ್ದೆ ಸೀಮೆಯವನು. ಹತ್ತಾರು ಎಕರೆ ನೀರಾವರಿ ಜಮೀನಿತ್ತು. ದುಡಿಯಲು ಆಳುಗಳಿದ್ದರು. ಅವನ ಜೇಬಲ್ಲಿ ಯಾವತ್ತೂ ಹಣವಿರುತ್ತಿತ್ತು. ಇವನ ಜೊತೆ ಹೋದರೆ ದಾರಿ ಖಂಡಿತ ತಪ್ಪುತ್ತೀಯೆ ಎಂದು ಗೆಳೆಯರು ಎಚ್ಚರಿಸಿದ್ದರು. ಅಪರೂಪಕ್ಕೆ ಅವನ ಜೊತೆ ಸುತ್ತಾಡುತಿದ್ದೆ. ಅವನೇ ಬಂದು ಒತ್ತಾಯಿಸಿ ಕರೆದುಕೊಂಡು ಹೋಗುತ್ತಿದ್ದ. ಕಾಲೇಜು ಜೀವನವೇ ಅಂತಿಮ ಸುಖ ಎಂದು ಭಾವಿಸಿದ್ದ. ಫೇಲಾದದ್ದು ಅವನ ಅಪೇಕ್ಷೆಗಳಿಗೆ ಪೂರಕವೇ ಆಗಿತ್ತು. ಹಳ್ಳಿಗೆ ಹಿಂತಿರುಗಲು ಬಯಸುತ್ತಿರಲಿಲ್ಲ. ಮಗನಿಗಾಗಿ ಎಷ್ಟಾದರೂ ಖರ್ಚಾಗಲಿ ಎಂದು ಅವನ ತಂದೆ ಮುಂದಿದ್ದರು.

ಅವನ ನೀತಿ ಅನೀತಿ ಆ ಕ್ಷಣದಲ್ಲಿ ಮುಖ್ಯ ಎನಿಸಿರಲಿಲ್ಲ. ತರಲೆ ಎಂದು ಅವನಿಗೆ ಹೆಸರಿಟ್ಟಿದ್ದರು. ಹಳ್ಳಿಯ ನಾಟಕದ ಪದಗಳ ಕರುಣಾಮಯವಾಗಿ ಹಾಡುತಿದ್ದ. ತಪ್ಪು ಮಾಡುವ ವಯಸ್ಸು; ಆದರೆ ತಿದ್ದಿಕೊಳ್ಳುತ್ತಿರಲಿಲ್ಲ. ಕಷ್ಟ ಪಡುತ್ತಿರಲಿಲ್ಲ. ಕ್ಷಣಿಕ ಸುಖವೇ ಜೀವನ ಎಂದುಕೊಂಡಿದ್ದ. ಅವನು ಬೆಳೆದು ಬಂದಿದ್ದ ರೀತಿಯೇ ಅಂಥಾದ್ದು. ಹಾಗೆ ಸ್ವೇಚ್ಛೆಯಾಗಿದ್ದವರದೇ ಬೇರೆ ಕ್ರಮ. ಎರಡನೇ ವರ್ಷದ ಬಿ.ಎ. ಕಲಿಯುವಾಗ ನನ್ನ ಸಹವಾಸಿಯಾಗಿದ್ದವನು. ಖಾಲಿದ್ ಥೇಟ್ ಇಂಗ್ಲೆಂಡಿನಿಂದ ಬಂದಂತಿದ್ದ. ತಂದೆ ತಾಯಿಗಳು ಲಂಡನ್‌ನಲ್ಲಿದ್ದರು. ಅಂತಹ ಮಹರಾಜ ಕಾಲೇಜಿನ ಹಾಸ್ಟಲಿಗೆ ಬಂದಿದ್ದು ಅಚ್ಚರಿ. ಮೂಲತಃ ಹೈದ್ರಾಬಾದಿನ ನಿಜಾಮರ ವಂಶಸ್ಥ. ಬಡತನ ಗೊತ್ತಾಗಲಿ ಎಂದು ಇಂಗ್ಲೆಂಡಿನಿಂದ ಅವನ ತಂದೆ ಭಾರತಕ್ಕೆ ಕರೆತಂದು ಇಲ್ಲಿ ಸೇರಿಸಿದ್ದ. ನನ್ನ ಬಡತನದ ಒಂದು ಇಂಚೂ ಕೂಡ ಅವನಿಗೆ ವಿವರಿಸಿದರೂ ತಿಳಿಯುತ್ತಿರಲಿಲ್ಲ. ರಾಜ ಮನೆತನದ ಅವನನ್ನು ನೋಡಲು ಪ್ರತಿ ತಿಂಗಳು ಬೇರೆ ಬೇರೆ ಕಾರಲ್ಲಿ ಸಂಬಂಧಿಕರು ಬಂದು ಹೋಗುತ್ತಿದ್ದರು. ಅವನಿಗಾಗಿ ಅವರು ತರುತ್ತಿದ್ದ ತಿನಿಸುಗಳ ಯಾವ ಹೆಸರೂ ರುಚಿಯೂ ನನಗೆ ಗೊತ್ತಿರಲಿಲ್ಲ. ಕೊಟ್ಟರೂ ತಿನ್ನುತ್ತಿರಲಿಲ್ಲ. ಕೊನೆಗೆ ನನ್ನ ದೀನ ಸ್ಥಿತಿಯ ಕಂಡು ಕೊಡಗಿನ ಕಾಫಿ ತೋಟಗಳ ಮನೆಯಿಂದ ಬಂದ ಶ್ರೀಮಂತ ಹುಡುಗರ ರೂಮಿಗೆ ಹೊರಟು ಹೋಗಿದ್ದ. ಅವನ ಮುಂದೆ ಕೀಳರಿಮೆಯಿಂದ ಕುಗ್ಗಿ ಹೋಗುತ್ತಿದ್ದುದು ತಪ್ಪಿತ್ತು. ಬಡತನವನ್ನು ವಿವರಿಸಿದರೆ ಅರ್ಥವಾಗುವ ಸಂಗತಿ ಅಲ್ಲ. ಅದನ್ನು ಬದುಕುವ ರೀತಿಯೆ ಅವನಿಗೆ ಗೊತ್ತಿರಲಿಲ್ಲ. ಕೃಷ್ಣಪ್ಪನದು ಅಂತಹ ಸಿರಿವಂತಿಕೆ ಅಲ್ಲವಾದರೂ ಮಜವಾಗಿ ಇರಬೇಕು ಎಂಬುದೇ ಅವನ ವ್ಯಸನವಾಗಿತ್ತು. ನನಗೊ ಆ ಧೀನವಾದ ತಳಜಾತಿಯ ಅಪಮಾನದ ಸಂಕಟವೇ ಏನೊ ಒಂದು ದಿಕ್ಕು ಎಂಬ ಭಾವನೆಯನ್ನು ಬಿತ್ತಿತ್ತು. ಜಾತಿಯ ಅಪಮಾನಗಳನ್ನು ಜೋಪಾನವಾಗಿ ಬಚ್ಚಿಟ್ಟುಕೊಳ್ಳುತ್ತಿದ್ದೆ. ನನ್ನ ಮನೆಯೇ ನನಗೆ ಶಾಪವಾಗಿತ್ತು. ಆ ಸಾಕೇತನ ಜೊತೆಯಲ್ಲಿ ಬಂದೂಕು ಹಿಡಿಯಲು ನನಗೆ ಮನಸ್ಸಿರಲಿಲ್ಲ. ಬಂಜಗೆರೆ ಅಷ್ಟೊತ್ತಿಗಾಗಲೆ ಕರ್ನಾಟಕ ವಿಮೋಚನಾ ರಂಗ ಕಟ್ಟಿಕೊಂಡು ಜಾಗೃತಿ ಆರಂಭಿಸಿದ್ದ. ನನ್ನನ್ನು ಆತ ಕರೆದಿರಲಿಲ್ಲ. ಹೋರಾಟಗಳಿಗೆ ಆಹ್ವಾನ ಪತ್ರಿಕೆ ನೀಡಿ ಕರೆಯುವ ಪದ್ಧತಿ ಇರಲಿಲ್ಲ. ಸಾಕೇತನಂತೆಯೆ ಬಂಜಗೆರೆಯೂ ತಳಮಟ್ಟದ ಜನರ ಬಳಿ ಹೊರಟು ಹೋಗಿದ್ದ. ಹೇಡಿಯಾದೆನೇ ನಾನೂ… ಬದ್ಧತೆ ಇಲ್ಲದ ಬೊಗಳೆಯಾಗಿದ್ದೆನೇ ನಾನೂ… ಈಗ ಬೀದಿ ಬೀದಿ ಅಲೆಯುತ್ತಿರುವೆನಲ್ಲಾ ಎಂದು ದಿಕ್ಕೆಟ್ಟ ಸ್ಥಿತಿಯ ನೆನೆಯುತ್ತ ಕೃಷ್ಣಪ್ಪನ ಹಂಗಿಗೆ ಒಳಗಾಗಿದ್ದೆ. ಸದ್ಯ ಅವನ ತಪ್ಪು ಹೆಜ್ಜೆಗಳ ತುಳಿದಿರಲಿಲ್ಲ. ಧಾರಾಳ ಮನುಷ್ಯ! ಬಡತನಕ್ಕೆ ಮರುಗುತ್ತಿದ್ದ. ಕೈಲಾದ ಸಹಾಯ ಮಾಡುತಿದ್ದ.

ಹಾಗೊಂದು ದಿನ ಸಾಕಮ್ಮನ ಮೆಸ್ಸಿಗೆ ಕರೆದೊಯ್ದ. ಬಾಯಿ ರುಚಿ ವಿಪರೀತ. ನೂರಡಿ ರಸ್ತೆಯ ಸಣ್ಣ ಓಣಿಯಲ್ಲಿ ಆ ಮೆಸ್ ಇತ್ತು. ವಿದ್ಯಾರ್ಥಿಗಳಿಗೆಂದೇ ಮಾಡಿಸಿದಂತಿತ್ತು. ಅದು ಒಂದು ಮನೆ. ಉಪ್ಪರಿಗೆಯಲ್ಲಿ ಬೇರೆಯವರಿದ್ದರು. ನೀನಿಲ್ಲೆ ಊಟ ಮಾಡಿ ಕೂತಿರು ಎಂದು ಹೇಳಿ ಮೇಲೆ ಹೋಗುತಿದ್ದ. ಬೆವೆತು ಸುಸ್ತಾಗಿ ಇಳಿದು ಬರುತ್ತಿದ್ದ. ಕೇಳಿದರೆ ಮಾತಾಡುತ್ತಿರಲಿಲ್ಲ. ಊಟ ಮಾಡಣ್ಣಾ ಎಂದರೆ… ನಂದು ಮೇಲೇ ಆಯ್ತು ನಡಿ ಹೋಗುಮಾ ಎನ್ನುತ್ತಿದ್ದ. ಗೊತ್ತಾಗಿತ್ತು. ಅನುಮಾನಿಸಿ ಕೇಳಿದ್ದೆ. ಹೌದು… ನಿಜಾ… ನಾಳೆ ನಿನ್ನನ್ನೂ ಮೇಲೆ ಕರೆದೊಯ್ಯುವೆ. ಅದೇನು ಮಾಡಿಯೊ ಮಾಡಿಕೊ ಎಂದು ನಗಾಡಿದ್ದ. ಅವರು ಹೇಗಿರುತ್ತಾರೆ ಹೇಗೆ ನಡೆದುಕೊಳ್ಳುತ್ತಾರೆ ಎಂಬ ಕುತೂಹಲವಿತ್ತು.

ಮರುದಿನ ಇಬ್ಬರೂ ಆ ಮೆಸ್ಸಿಗೆ ಬೇಗನೆ ಹೋಗಿದ್ದೆವು. ಕೃಷ್ಣಪ್ಪನಿಗೆ ಅಲ್ಲಿ ರಾಜ ಮರ್ಯಾದೆ ಇತ್ತು. ದಡೂತಿ ಹೆಂಗಸು ಎದುರಿಗೆ ಕೂರಿಸಿಕೊಂಡಳು. ಮಾಜಿ ವೇಶ್ಯೆ. ಆದರೂ ಪ್ರಬುದ್ಧ ತಾಯಂತೆ ಕಾಣುತ್ತಿದ್ದಳು. ಹೇ ಜ್ಯೂಸ್ ತಂದು ಕೊಡ್ರೆ ಎಂದು ಹುಡುಗಿಯರ ಕರೆದಳು. ನಾಲ್ಕು ಜನ ಐನಾತಿ ಚೆಂದುಳ್ಳಿ ಚೆಲುವೆಯರು ನಗುತ್ತ ಗೆಜ್ಜೆ ಸದ್ದಲ್ಲಿ ಬಂದರು. ಅಲಂಕಾರಗೊಂಡಿದ್ದರು. ನಲಿವಂತೆ ವಯ್ಯಾರದಲಿ ಮಾತಾಡಿದರು. ಇವರು ನಿಮ್ಮ ಹೊಸ ಸ್ನೇಹಿತರಾ ಎಂದು ನನ್ನತ್ತ ನೋಡಿ ಕೇಳಿದರು. ಪುರಾತನ ಗೆಳೆಯ ಎಂದು ಪರಿಚಯಿಸಿದ. ಹೋಗಪ್ಪಾ… ಒಳಗೆ ಹೋಗಿ ಮಾತಾಡು ಎಂದಳು ಆ ತಾಯಂತ ಹೆಂಗಸು. ಕೂದಲು ನರೆತಿದ್ದವು. ಆ ವೃತ್ತಿಯ ಲವಲೇಶದ ಪಶ್ಚಾತ್ತಾಪವೇ ಅವಳಲ್ಲಿ ಇರಲಿಲ್ಲ. ಕರೆದೊಯ್ದು ಊಟ ಬಡಿಸು ಎನ್ನುವ ದನಿ ಆಕೆಯ ಮಾತಲ್ಲಿತ್ತು. ಕೃಷ್ಣಪ್ಪ ಒಂದು ಕೊಠಡಿಗೆ ಹೋದ. ಇನ್ನು ಮೂವರು ಮತ್ತೊಂದು ರೂಮಲ್ಲಿ ಕೂತು ಹರಟುತ್ತಿದ್ದರು. ಯಾರು ಇಷ್ಟ ಆದರಪ್ಪಾ ಎಂದು ಆಥಿತ್ಯ ಭಾವದಲ್ಲಿ ಕೇಳಿದಳು. ಖಂಡಿತ ಪ್ರಾಯದ ಯಾವ ಹುಡುಗರೂ ಅವರ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಇಷ್ಟು ಚೆಂದವತಿಯರು ಈ ಕೆಲಸಕ್ಕೆ ಹೇಗೆ ಸಿಲುಕಿದರು ಎಂಬ ವಿಷಾದದ ದೆವ್ವ ನನ್ನ ಹೆಗಲ ಮೇಲೆ ಕೂತು ಬೋಳಾಗುತ್ತಿದ್ದ ನನ್ನ ತಲೆಬುರುಡೆಯ ಮೇಲೆ ಹೊಡೆಯುತ್ತಿತ್ತು. ಆ ತಾಯಂತ ಹೆಂಗಸಿಗೆ ನನ್ನ ಸ್ಥಿತಿಯ ವಿವರಿಸಿದ್ದೆ ಸೂಚ್ಯವಾಗಿ. ನನ್ನ ಅತ್ತೆಯರ ಗತಿಯನ್ನು ಹೇಳಿದ್ದೆ. ಅವರ ಜೊತೆ ಮಾತಾಡಿಸಬೇಕು; ಹತ್ತಿರದಿಂದ ನೋಡಬೇಕು… ಸ್ನೇಹ ಮಾಡಿಕೊಳ್ಳಬೇಕು ಎಂಬುದಷ್ಟೇ ನನಗಿದ್ದ ಆಸಕ್ತಿ. ಮೂವರನ್ನೂ ಕರೆದಳು. ಎದುರೇ ಕೂತರು. ನೋಡಿದೆ. ನನ್ನ ಅಕ್ಕತಂಗಿಯರಂತೇ ಕಂಡರು. ಯಾವ ವ್ಯತ್ಯಾಸವೂ ಕಾಣಲಿಲ್ಲ. ರಸಿಕ ಹೆಣ್ಣಿನ ಪಾತ್ರಗಳ ಓದಿದ್ದಕ್ಕೂ ಎದುರೇ ಕೂತು ಅವರು ಮಾತಾಡುತಿದ್ದ ರೀತಿಗೂ ತುಂಬ ವ್ಯತ್ಯಾಸವಿತ್ತು. ನಾನೊಬ್ಬ ವಿಠನಂತೆ ಕಂಡಿದ್ದವನು ಅವರ ಕಣ್ಣಲ್ಲಿ ಕ್ಷಣ ಮಾತ್ರದಿ ಬದಲಾಗಿದ್ದೆ. ಅಣ್ಣಾ ಎಂದು ಕರೆದಿದ್ದರು. ನನ್ನ ತಂಗಿ ಶಾಂತಿ ನೆನಪಾದಳು. ಅದೊಂದು ಹಬ್ಬದಲ್ಲಿ ಬಾ ಎಂದು ಕೈ ಹಿಡಿದು ಚುಂಬಿಸಿ ಕೇಳಿದ್ದ ಹಳ್ಳಿಯ ಚೆಲುವೆ ಮೆಲ್ಲಗೆ ತೇಲಿ ಬಂದಳು.

`ಅಣ್ಣಾ ನಿಮ್ಮ ಗಂಗೋತ್ರಿ ಅಡ್ರೆಸ್ ಕೊಡಿ… ಅಲ್ಲೆಲ್ಲ ನೋಡುವ ಆಸೆ… ಕರೆಸ್ಪಾಂಡೆಲಿ ಡಿಗ್ರಿ ಕಂಪ್ಲೀಟ್ ಮಾಡುವ ಆಸೆ’ ಎಂದಳು ಒಬ್ಬಾಕೆ. ಅರ್ಧಕ್ಕೆ ಓದು ಬಿಟ್ಟಿದ್ದವರು ಅವರು. ವಿಳಾಸ ಕೊಟ್ಟಿದ್ದೆ. ಕೃಷ್ಣಪ್ಪ ಹೊರಗೆ ಬಂದಿದ್ದ. ಕೂತು ಹರಟೆ ಹೊಡೆಯಲು ಅದು ಕ್ಯಾಂಪಸ್ಸಿನ ಕ್ಯಾಂಟೀನ್ ಆಗಿರಲಿಲ್ಲ. ಕಳಿಸಿಕೊಟ್ಟರು. ನಾನು ಇನ್ನೊಂದು ಎಂ.ಎ.ಗೆ ಸೇರಿಆದಮೇಲೆ ಇಲ್ಲಿಗೆ ಬರುವೆ ಎಂದು ಹೇಳುವಷ್ಟರಲ್ಲಿ ಏನೊ ಸಂಕಟ ಮೂಡಿತ್ತು. ವಾಪಸ್ಸು ಪಂಜರಕ್ಕೆ ಕೂಡಿ ಹಾಕಿದಂತೆ ರೂಮಿನ ಒಳಕ್ಕೆ ಆ ಹೆಂಗಸು ಅವರನ್ನು ಕಳಿಸಿಬಿಟ್ಟಿದ್ದಳು. ಕೃಷ್ಣಪ್ಪ ಸಂತೃಪ್ತನಾಗದಂತಿದ್ದ. ಊಟ ಮಾಡೆಂದು ಒತ್ತಾಯಿಸಿದ. ಇಲ್ಲಿ ಬೇಡಣ್ಣಾ ಎಂದೆ. ಸ್ಟಾರ್ ಹೋಟ್ಲೆಲಿ ಮಾಡಿಯಾ ಎಂದು ಹೆಗಲ ಮೇಲೆ ಕೈ ಹಾಕಿದ. ಆ ಮಂಡ್ಯದ ಮೆಸ್ ಹಾಸ್ಟಲಿನ ಹಿಂದೆಯೆ ಇದೆಯಲ್ಲಾ… ಅಲ್ಲಿಗೆ ಹೋಗುವಾ ಎಂದೆ. ಅಪ್ಪಟ ಹಳ್ಳಿಗಾಡಿನ ರುಚಿಯ ಊಟ. ಮಾಯಿಗೌಡ ಮೆಸ್ ಎಂದು ಆಗ ಬಡ ವಿದ್ಯಾರ್ಥಿಗಳೆಲ್ಲ ಅಲ್ಲಿಗೇ ಉಣ್ಣಲು ಹೋಗುತ್ತಿದ್ದರು. ರಾಗಿ ಮುದ್ದೆ ಅನ್ನ ಸಾಂಬಾರ್ ಪಲ್ಯ ಅಷ್ಟೇ… ಹಳ್ಳಿ ಹೆಂಗಸರು ಮಾಡುತ್ತಿದ್ದ ಆ ಹುರುಳಿಕಾಳಿನ ಸಾರಿಗೆ ಅರಮನೆಯ ವೈಭವ ಇತ್ತು. ಹೊಟ್ಟೆ ತುಂಬ ಉಂಡೆವು. ಹದಿನೈದು ದಿನಗಳು ಕೃಷ್ಣಪ್ಪನ ಜೊತೆ ಗಳಿಗೆಯಂತೆ ಕಳದುಹೋಗಿದ್ದವು. ಎಂ.ಎ. ಪ್ರವೇಶಕ್ಕೆ ಅರ್ಜಿ ಕರೆದಿದ್ದರು. ಕೃಷ್ಣಪ್ಪನ ಪರೀಕ್ಷೆಯು ಮುಗಿದಿತ್ತು. ಅದೇನು ಬರೆದಿದ್ದನೊ! ಅವನೊಬ್ಬನೆ ಆ ಹಳೆಯ ಬ್ಯಾಚಿನಲ್ಲಿ ಪಾಸಾಗದೆ ಉಳಿದಿದ್ದವನು. ಗಣಿತ ಪತ್ರಿಕೆಯ ಉತ್ತರ ಬರೆಯಲು ಹೆಚ್ಚು ಕಡಿಮೆ ನೂರು ಪುಟಗಳ ಏನೇನೊ ಲೆಕ್ಕೋತ್ತರಗಳ ಬರೆದಿದ್ದ. ಆದರೂ ಮತ್ತೆ ಅವನು ಫೇಲಾಗಿದ್ದ. ಗಂಗೋತ್ರಿಗೆ ಹೋಗಿ ನಾನು ಅರ್ಜಿಸಲ್ಲಿಸಿ ಕಾಯುತಿದ್ದೆ.