ದಾರಿಗಳು ಹೀಗೆಯೇ ಇರುವುದಿಲ್ಲ

ದಾರಿಗಳು
ಹೀಗೆಯೇ ಇರುವುದಿಲ್ಲ
ಅನಿರೀಕ್ಷಿತ ತಿರುವುಗಳ ನಡುವೆ
ಯಾರೋ ಕಟ್ಟಿದ ಗೋಡೆ, ಇನ್ಯಾರೋ ತೋಡಿದ ಕಂದಕ
ತೂರಿ ಬಂದ ಮುಳ್ಳುಗಳು
ನಡೆಯುವುದನ್ನು ಕಲಿಸುತ್ತವೆ

ಸಂಬಂಧಗಳು
ಹೀಗೆಯೇ ಇರುವುದಿಲ್ಲ
ನಂಬಿಕೆಯ ಮಹಲುಗಳ ನಡುವೆ
ಯಾರದೋ ಅನುಮಾನ, ಇನ್ಯಾರದೋ ಬಿಗುಮಾನ
ಸ್ವಾರ್ಥ ತುಂಬಿದ ಮನಸ್ಸುಗಳು
ಬದುಕುವುದನ್ನು ಕಲಿಸುತ್ತವೆ

ಬಯಕೆಗಳು
ಹೀಗೆಯೇ ಇರುವುದಿಲ್ಲ
ಭರವಸೆಯ ನಾಳೆಗಳ ನಡುವೆ
ಅನಿಶ್ಚಿತತೆಯ ಆಟ, ಅನಿವಾರ್ಯತೆಯ ಪಾಠ
ಹೊಸ ಆಶಾವಾದಗಳು
ತೃಪ್ತವಾಗಿರುವುದನ್ನು ಕಲಿಸುತ್ತವೆ

ಇಲ್ಲಿ ಎಲ್ಲವೂ ಬದಲಾಗುತ್ತದೆ
ಕಾಲಕಾಲಕ್ಕೆ
ಕಾಲ ಕಲಿಸುವ ಪಾಠಕ್ಕೆ
ಮುಕ್ತವಾಗಿ ತೆರೆದುಕೊಂಡಿರಬೇಕು
ಕಾಲ ಎಲ್ಲವನ್ನೂ ಕಲಿಸುತ್ತದೆ
ಮತ್ತು
ಎಲ್ಲವನ್ನೂ ಮರೆಸುತ್ತದೆ

 

ಅನಿಲ್ ಗುನ್ನಾಪೂರ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಿರೇಮಸಳಿಯವರು
ಸದ್ಯ ಬಾಗಲಕೋಟೆಯಲ್ಲಿ ಸರ್ಕಾರಿ ಭೂಮಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಗುಬ್ಬಚ್ಚಿ ಗೂಡಿನಲ್ಲಿ…” ಇವರ ಪ್ರಕಟಿತ ಮೊದಲ ಕವನ ಸಂಕಲನ

 

(ಕಲಾಕೃತಿ: ಪ್ಯಾಬ್ಲೋ ಪಿಕಾಸೋ)