ಮೊನ್ನೆ ಮಂಗಳವಾರದ ರೇಸಿನ ಬಗ್ಗೆ ನೀವು ಕೇಳಿರಬಹುದು. ಬಹುದು ಏನು ಕೇಳಿಯೇ ಇರುತ್ತೀರಿ. “race that stops the nation” ಅಂತ ಪ್ರಸಿದ್ಧವಾದ ರೇಸು. ಎಷ್ಟೆಲ್ಲಾ ಲೆಕ್ಕಾಚಾರದ ನಡುವೆನೂ ಈ ರೇಸು ಅದೃಷ್ಟದ ಪರೀಕ್ಷೆನೆ. ಇಂತಹ ಜಾಗತಿಕ ಆರ್ಥಿಕ ಮುಗ್ಗಟ್ಟಿನ ನಡುವಲ್ಲೂ ಇದರ ಉದ್ವೇಗಕ್ಕೇನೂ ಕಡಿಮೆಯಿಲ್ಲ. ಚೆಂದಚೆಂದದ, ಬಣ್ಣಬಣ್ಣದ ಬಟ್ಟೆಗಳೆಲ್ಲಾ ಹೊರಗೆ ಬಂದಿವೆ. ವಿಚಿತ್ರ, ವಿಲಕ್ಷಣ ಹ್ಯಾಟು ಟೋಪಿಗಳು ತಲೆಗಳ ಮೇಲೆ ರಾರಾಜಿಸುತ್ತಿವೆ. ಕಂಠಮಟ್ಟ ಕುಡಿಯಲು, ನೆತ್ತಿವರೆಗೂ ಅಮಲೇರಲು, ಬಿಯರು, ವೈನು, ಶಾಂಪೇನು ಧಾರಾಕಾರವಾಗಿ ಹರಿದಿದೆ. ಉದ್ದುದ್ದ ಕ್ಯೂನಲ್ಲಿ ಜನ ಬೇಸರವಿಲ್ಲದೆ ಕಾಯುತ್ತಿದ್ದಾರೆ.

ನಾನೂ ಆ ರೇಸಿನಲ್ಲಿ ಬೆಟ್ ಮಾಡೋದಕ್ಕೆ ಹೋಗಿ ನೋಡಿದರೆ ಬೆಟ್ ಕಟ್ಟಿಸಿಕೊಳ್ಳೋ ಅಂಗಡಿ ತುಂಬಾ ಜನ. ಕ್ಯೂನಲ್ಲಿ ಕಾದು, ಧರ್ಮಸ್ಥಳದ ಮಂಜುನಾಥನ್ನ ನೆನೆದು, ಕಡೆಗೂ ಒಂದು ಹತ್ತು ಡಾಲರ್ ಬೆಟ್ ಕಟ್ಟಿ ಬಂದೆ. ಬೆಟ್ ಕಟ್ಟಿದಾಗಲೇ ರೇಸಲ್ಲಿ ಎಲ್ಲಿಲ್ಲದ ಹುರುಪು ಉದ್ವೇಗ ಇರೋದು ತಾನೆ? ನಿಮಗೆ ಯಾವ ರೇಸಿನ ಬಗ್ಗೆ ಮಾತಾಡ್ತಿದೀನಿ ಅಂತ ಅನುಮಾನ ಬಂದಿರಬಹುದು.

ಆಸ್ಟ್ರೇಲಿಯಾದ ಹಳ್ಳಿಯೂರುಗಳಲ್ಲಿ ನಾಯಿ, ಆಡು, ಅಷ್ಟೇ ಯಾಕೆ ಕಪ್ಪೆಗಳನ್ನು ಕೂಡ ರೇಸು ಓಡಿಸ್ತಾರೆ. ಹೋಗಬೇಕಾದತ್ತ ಹೋಗದ ಅವುಗಳಲ್ಲಿ ಒಂದು ಅಪ್ಪಿತಪ್ಪಿ ಹೋದಾಗ ಗೆಲ್ಲುವ ಅದರ ಮಾಲೀಕ ಎದೆಯುಬ್ಬಿಸಿ ಪ್ರೈಜ್ ಗೆಲ್ತಾನೆ. ಯಾವ ಪ್ರಾಣಿ ಗೆಲ್ಲತ್ತೆ ಅಂತ ಪಣಕಟ್ಟಿ ಉಳಿದವರು ಒಂದಷ್ಟು ಕಾಸು ಮಾಡಿಕೋತ್ತಾರೆ. ಮಾಡಲು ಕೆಲಸವಿಲ್ಲದಾಗ ಜನಪದ ಹಿಂದೆಲ್ಲಾ ಟೈಂಪಾಸಿಗೆ ನಡೆಸುತ್ತಿದ್ದ ಈ ರೇಸುಗಳು ಈಗ ಹಲವು ಕಡೆಗಳಲ್ಲಿ ಪರಂಪರೆಯಾಗಿ ಉಳಿದುಬಿಟ್ಟಿದೆ. ಪಣ ಕಟ್ಟೋದು ದೇಶದ ಒಂದು ಚಹರೆಯೇ ಆಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಮೊನ್ನೆ ಮಂಗಳವಾರದ ಕುದುರೆ ರೇಸಿನ ಬಗ್ಗೆ ನಿಮಗೆ ಹೇಳಬೇಕು.

ಅಲ್ಲಿ ಅಮೇರಿಕದಲ್ಲಿ ನವೆಂಬರ್ ನಾಲ್ಕರಂದು ಪ್ರೆಸಿಡೆಂಟಿನ ರೇಸು ನಡೆದಿರುವಾಗ ಆಸ್ಟ್ರೇಲಿಯಾದಲ್ಲಿ ಮೆಲ್ಬರ್ನ್ ಕಪ್‌ಗಾಗಿ ಕುದುರೆ ರೇಸು. ಆಸೀಗಳಿಗೆ ಯಾವುದು ಹೆಚ್ಚು ಮುಖ್ಯ ಅನ್ನುವ ಪ್ರಶ್ನೆಯೇ ಅನುಚಿತ. ಯಾಕೆಂದರೆ, ಪ್ರತಿ ನವಂಬರಿನ ಮೊದಲ ಮಂಗಳವಾರ ಮಧ್ಯಾಹ್ನ ಮೂರುಗಂಟೆಯ ಸುಮಾರಿಗೆ ಓಡೋ ಈ ರೇಸು ದೇಶವನ್ನೇ ನಿಲ್ಲಿಸತ್ತೆ. ಮೆಲ್ಬರ್ನಿನ ವಸಂತೋತ್ಸವದ ಅಂದಿನ ಎಂಟನೇ ರೇಸಿಗೆ ಕೀಬೋರ್ಡಿನ ಮೇಲಾಡುವ ಬೆರಳುಗಳು, ಸುತ್ತಿಗೆ ಹಿಡಿದ ಮೆಕಾನಿಕ್ ಕೈಗಳು, ಬ್ರಶ್ ಹಿಡಿದ ಕಲಾವಿದರ ಕೈಗಳು, ಸೈನಿಗೆ ಪೆನ್ ಹಿಡಿದ ಕೈಗಳು ನಿಶ್ಚಲ ಆಗುತ್ತವೆ. ಸಿರಿವಂತರು ಕಟ್ಟುವ ಸಾವಿರಾರು ಡಾಲರಿನಿಂದ ಹಿಡಿದು ಐವತ್ತು ಸೆಂಟಿಗೂ ಪಣಕಟ್ಟಬಹುದು ಅಂದರೆ ಈ ರೇಸಿನ ಪ್ರಭಾವ, ಸಮಭಾವ ಎಂತದು ಅನ್ನೋದು ತಿಳಿಯತ್ತೆ.

ಜೂಜಾಡೋರು, ಕುದುರೆ ಬಾಲಕ್ಕೆ ದುಡ್ಡು ಕಟ್ಟೋರು ಅಂದರೆ ಮುಖ ಮುರಿಯೋರಿಗೆ ಇದೆಲ್ಲಾ ವಿಚಿತ್ರ ಅನ್ನಿಸಬಹುದು. ನನಗೂ ಹಾಗೇ ಅನ್ನಿಸ್ತಿತ್ತು. ಆದರೆ ಈಗ ನಾನೂ ವರ್ಷಕ್ಕೊಂದು ಸಲ ಈ ರೇಸಲ್ಲಿ ಯಾವ ಕುದುರೆ ಓಡತ್ತೆ? ಅದರ ವಿಚಾರ ಏನು ಅಂತ ಒಂದೆರಡು ಕಡೆ ನೋಡಿ ದುಡ್ಡು ಕಟ್ಟಿತೀನಿ. ರೇಸಾಗೋವಾಗ ಎಲ್ಲರ ಜತೆ ನಿಂತು ನನ್ನ ಕುದುರೆ ಗೆಲ್ಲತ್ತಾ ಅಂತ ಉಸಿರು ಬಿಗಿ ಹಿಡಕೊಂಡು ನೋಡ್ತೀನಿ. ಈ ದೇಶಕ್ಕೆ ಬಂದು ನಾನೂ ಕೆಟ್ಟು ಹೋದನಾ ಅಂತ ಅನುಮಾನ ಒಂದೊಂದು ಸಲ ತಲೆ ಕೆಡಸತ್ತೆ. ಆದರೆ ಮೊನ್ನೆ ಯಾರೋ, ಧರ್ಮಸ್ಥಳದ ಹಿಂದಿನ ಧರ್ಮಾಧಿಕಾರಿಗಳಿಗೆ, ಹಳೆಕಾರಿನ ಮೋಹದ ಜತೆಗೆ ಕುದುರೆ ಜೂಜಿನ ಮೋಹವೂ ಇತ್ತು ಅಂತ ಹೇಳಿದರು. ಹಾಗಾದರೆ ನಾನು ಪೂರ್ತಿ ಕೆಟ್ಟಿಲ್ಲ ಅಂತ ಸಮಾಧಾನ ಮಾಡಿಕೊಂಡೆ.

ಮೊನ್ನೆ ರೇಸಲ್ಲಿ, ಪಂಡಿತರೆಲ್ಲಾ ಐರಿಶ್ ಕುದುರೆ “Septimus” ಗೆಲ್ಲತ್ತೆ, ಇಲ್ಲದಿದ್ದರೆ “Mad Rush” ಅಥವಾ “Profound Beauty” ಗೆಲ್ಲತ್ತೆ ಅಂತ ಎಲ್ಲರ ದಾರಿ ತಪ್ಪಿಸಿದರು. ದೇಶಭಕ್ತ ಆಸೀಗಳು – ಆಸೀ ಕುದುರೆ “Barbaricus” ಮೇಲೆ ದುಡ್ಡು ಹಾಕಿದ್ದರು. ದೇಶದ ಪ್ರಧಾನಿ ರಡ್ “Zipped” ಮೇಲೆ ದುಡ್ಡು ಕಟ್ಟಿದ್ದ. ಎಲ್ಲರಿಗೂ ನಾಮ ಹಾಕಿ “Viewed” ಅನ್ನೋ ಕುದುರೆ ಗೆತ್ತು. ಅದರ ಟ್ರೈನರನಕೈಯಡಿ ಮೆಲ್ಬರ್ನ್ ಕಪ್‌ನಲ್ಲಿ ಗೆದ್ದ ಹನ್ನೆರಡನೇ ಕುದುರೆ ಇದು ಅಂತ ರೇಸ್ ಆದ ಮೇಲೆ ನನಗೆ ಗೊತ್ತಾಗಿದ್ದು.

ಮೆಲ್ಬರ್ನ್ ಇರೋ ವಿಕ್ಟೋರಿಯಾ ರಾಜ್ಯಕ್ಕೇ ಆವತ್ತು “ವಸಂತೋತ್ಸವ” ಅಂತ ರಜೆ. ದಿಂಡುದಿಂಡಾಗಿ ರೇಸ್‌ಕೋರ್ಸಿಗೆ ಜನ ಬರ್ತಾರೆ. ಕುದುರೆ ಜೂಜಲ್ಲದೆ, ಹಿಂದೆ ಸಿರಿವಂತರ ಅಣಕಿಸೋದಕ್ಕಂತಲೇ ವಿಲಕ್ಷಣದ ಟೊಪ್ಪಿಗೆ ತೊಡತಿದ್ದರಂತೆ. ಈಗ ಅದೇ ಸೀರಿಯಸ್ಸಾಗಿ, ಅವರ ನಡುವೇನೆ ಕಾಂಪಿಟಿಶನ್ ನಡೆಯತ್ತೆ. ಜತೆಗೆ ಡ್ರೆಸ್ ಕಾಂಪಿಟಿಶನ್, ಅದರ ಸುತ್ತ ಹರಿಯೋ ವೈನು ಶಾಂಪೇನಿನ ಹೊಳೆ – ನೀವು ನೆನಸಿಕೊಳ್ಳಬಹುದಾದ ಎಲ್ಲ “ಕ್ಷುಲ್ಲಕ”ಗಳೂ ಇಲ್ಲಿಯ ಒಂದು ಭಾಗ! ಟೀವಿ ಮುಂದೆ ಇದನ್ನ ನೋಡೋಕಂತಲೇ ಅರ್ಧ ಜನ ನೆರೀತಾರೆ. ಆದರೆ ನನ್ನ ಜತೆ ಕೆಲಸ ಮಾಡೋ ಮೂರ್ನಾಕು ತಲೆಮಾರಿನ ಆಸೀ ಗುಮ್ ಅಂತ ದೂರ ಕೂತಿದ್ದ. ಬೆಟ್ ಕೂಡ ಕಟ್ಟಿರಲಿಲ್ಲ. “ಯಾಕೋ ಮಾರಾಯ?” ಅಂತ ಕೇಳಿದೆ. ನಿಟ್ಟುಸಿರು ಬಿಟ್ಟು ಅವನ ತಂದೆ ಬೆಟ್ ಮಾಡಿ ಮಾಡಿ ದುಡ್ಡೆಲ್ಲಾ ಕಳಕೊಂಡು ಮಕ್ಕಳನ್ನ ಬೀದಿ ಪಾಲು ಮಾಡುವಲ್ಲಿಗೆ ತಂದಿದ್ನಂತೆ. ಅದಕ್ಕೆ ಇವನು ಕುದುರೆ, ಜೂಜಿನ ಕಡೆ ತಿರುಗಿ ನೋಡಲ್ಲ ಅಂತ ಅಂದು ತನ್ನ ಕೆಲಸಕ್ಕೆ ಮರಳಿದ. ಧರ್ಮಸ್ಥಳದ ಮಂಜುನಾಥನ ದಯೆ ಆಸ್ಟ್ರೇಲಿಯಾದಲ್ಲಿ ಎಫೆಕ್ಟ್ ಇಲ್ಲ ಅಂತ ಕಾಣತ್ತೆ. ನನ್ನ ಕುದುರೆ ಗೆಲ್ಲೋದಿರಲಿ ಎಷ್ಟನೇ ಸ್ಥಾನದಲ್ಲಿತ್ತು ಅಂತಾನೂ ಟೀವೀಲಿ ಹೇಳಲಿಲ್ಲ.