ನಿಜಾರ್ಥದ ಕವಿ ಗೊತ್ತಿರುವುದನ್ನು ವಿವರಿಸುವುದಿಲ್ಲ, ಅರ್ಥಮಾಡಿಕೊಂಡಿದ್ದನ್ನು ಅರ್ಥಮಾಡಿಸುತ್ತಾನೆ. ಅಸ್ತಿತ್ವದ ಹುಡುಕಾಟ ವ್ಯಸನವಾಗುತ್ತ ಪ್ರೇಮ ಕಾಮ ಕೊನೆಗೆ ಸ್ವಾರ್ಥದೊಂದಿಗೂ ತಾದ್ಯಾತ್ಮ ಸ್ಥಾಪಿತವಾಗದ ಸ್ಥಿತಿಯಲ್ಲಿ ಪದರು ಪದರಾಗಿ ವಿಕಸನಗೊಂಡ ಪ್ರಜ್ಞೆ ಕಣ್ಣಾಮುಚ್ಚಾಲೆಯ ದೈನಿಕಗಳಲ್ಲಿ ಲೀನವಾಗುವ ಕ್ರಮವನ್ನು ಕಾಣಿಸುವ ವಿಶಿಷ್ಟ ಕವನಗಳಿವು. ನಾವೇ ಸೃಷ್ಟಿಸಿಕೊಂಡ ನರಕದಲ್ಲಿ ದೂರುಗಳು ತಪ್ಪೊಪ್ಪಿಗೆಯನ್ನು ಧ್ವನಿಸುತ್ತವೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಇಂದ್ರಕುಮಾರ್ ಎಚ್.ಬಿ. ಅವರ “ಬಾವಿಗ್ಯಾನವ ಮರೆತು” ಕವನ ಸಂಕಲನಕ್ಕೆ ಮಮತಾ ಆರ್. ಬರೆದ ಮುನ್ನುಡಿ

 

ಇಂದ್ರಕುಮಾರ್ ಎಚ್. ಬಿ. ಅವರ ಕವನ ಸಂಕಲನ ‘ಬಾವಿಗ್ಯಾನವ ಮರೆತು’ ಒಂದು ಧ್ಯಾನದ ಓದನ್ನು ಬಯಸುತ್ತದೆ. ಸಂಕಲನದ ಒಟ್ಟು ಕವಿತೆಗಳು ಕವಿಯ ಸಂವೇದನೆಯ ಆಳ ಮತ್ತು ಅರಿವಿನ ಹರಿವನ್ನು ಮೈಗೂಡಿಸಿಕೊಂಡಿರುವ ಪರಿ ಭಾಷೆಗೆ ಮೀರಿದ ಭಾವ ಒಂದು ಕ್ಲೀಷೆಯಷ್ಟೆ ಎನಿಸುವಷ್ಟು ಸಶಕ್ತ ಅಭಿವ್ಯಕ್ತಿಯಿಂದ ಕೂಡಿದೆ. ಜಗತ್ತು ತನಗಿಂತ ಹೆಚ್ಚಿನ ಸೂಕ್ಷತೆಯನ್ನು ಹೊಂದಿರುವುದಿಲ್ಲ ಎಂದು ಖಾತ್ರಿ ಇರುವ ಕವಿಗೆ, ಹೇಳಲಾಗುವುದಿಲ್ಲ ಹೇಳಬೇಕಾಗುವುದಿಲ್ಲ ಎನ್ನುವ ತೊಡಕು ಉಂಟಾಗುವುದಿಲ್ಲ. ಭಾಷೆಯಲ್ಲಿ ಸಾಧ್ಯವಾಗುವ ಹೇರಳ ನ್ಯಾಸ ವಿನ್ಯಾಸ ಅವರ ಪ್ರಸ್ತುತ ಸಂಕಲನದ ಕವನಗಳ ಸ್ಥಾಯಿಭಾವವಾದ ‘ನೋವು’ ಹರಳುಗಟ್ಟಿದ ಅರ್ಥದಲ್ಲಿ ಮೂಡಿಬರುವಂತೆ ಮಾಡಿವೆ. ಸಂವಹನದ ಜೊತೆ ಜೀವನವೂ ಹೆಚ್ಚೆಚ್ಚು ವರ್ಚುವಲ್ ಆಗುತ್ತಿರುವ ಮನ್ವಂತರದಲ್ಲಿ ಗೊತ್ತಿರುವುದನ್ನು ಮತ್ತು ಸರ್ಚ್ ಇಂಜಿನ್ನುಗಳಿಂದ ಗೊತ್ತು ಮಾಡಿಕೊಂಡಿರುವುದನ್ನು ಚೆನ್ನಾಗಿ ವಿವರಿಸುವ ಕಲೆಗಾರಿಕೆ ಮುನ್ನೆಲೆಗೆ ಬರುತ್ತಿದೆ. ಬೋಧಕರಿಗೆ ವಾಗ್ಮಿಗಳಿಗೆ ಮಾರುಕಟ್ಟೆ ತಂತ್ರಗಾರಿಕೆಯ ಉದ್ಯೋಗಿಗಳಿಗೆ ಒಪ್ಪುವಂತಹ ಈ ಕಲೆಗಾರಿಕೆಯನ್ನು ಕಸುಬು ಮಾಡಿಕೊಳ್ಳುವ ಕವಿಗಳಿಂದ ಕವಿತ್ವ ಮಂಕಾಗುತ್ತದೆ. ನಿಜಾರ್ಥದ ಕವಿ ಗೊತ್ತಿರುವುದನ್ನು ವಿವರಿಸುವುದಿಲ್ಲ, ಅರ್ಥಮಾಡಿಕೊಂಡಿದ್ದನ್ನು ಅರ್ಥಮಾಡಿಸುತ್ತಾನೆ. ಇಂದ್ರಕುಮಾರ್ ಅವರು ಒಬ್ಬ ನಿಜಾರ್ಥದ ಕವಿ.
ಅಸ್ತಿತ್ವದ ಹುಡುಕಾಟ ವ್ಯಸನವಾಗುತ್ತ ಪ್ರೇಮ ಕಾಮ ಕೊನೆಗೆ ಸ್ವಾರ್ಥದೊಂದಿಗೂ ತಾದ್ಯಾತ್ಮ ಸ್ಥಾಪಿತವಾಗದ ಸ್ಥಿತಿಯಲ್ಲಿ ಪದರು ಪದರಾಗಿ ವಿಕಸನಗೊಂಡ ಪ್ರಜ್ಞೆ ಕಣ್ಣಾಮುಚ್ಚಾಲೆಯ ದೈನಿಕಗಳಲ್ಲಿ ಲೀನವಾಗುವ ಕ್ರಮವನ್ನು ಕಾಣಿಸುವ ವಿಶಿಷ್ಟ ಕವನಗಳಿವು. ನಾವೇ ಸೃಷ್ಟಿಸಿಕೊಂಡ ನರಕದಲ್ಲಿ ದೂರುಗಳು ತಪ್ಪೊಪ್ಪಿಗೆಯನ್ನು ಧ್ವನಿಸುತ್ತವೆ.

(ಇಂದ್ರಕುಮಾರ್ ಎಚ್.ಬಿ.)

‘ಒಲ್ಲದ ಲೇವಾದೇವಿ’ ‘ಕರೆಯದ ಒಲೆಗಳು’ ಮತ್ತಿತರ ಕವನಗಳಲ್ಲಿ ‘ತಾಯಿ’ ತನ್ನ ಪೊರೆಯುವ, ಸಾಕುವ ಗುಣವನ್ನಷ್ಟೆ ಅಲ್ಲ ತನ್ನನ್ನು ತಾನೇ ಸಂಭಾಳಿಸಿಕೊಳ್ಳುವ ಶಕ್ತಿಯಿಂದ ತನ್ನನ್ನು ಅಸಹಾಯಕ ಸ್ಥಿತಿಯಲ್ಲಿ ತಂದು ನಿಲ್ಲಿಸುವ ಸಮಾಜದ ಸಾಂಘಿಕ ಸಂಸ್ಥೆಗಳನ್ನೆಲ್ಲ ತನ್ನೆದುರು ನಿಕೃಷ್ಟಗೊಳಿಸಬಲ್ಲಳು. ಸಂಕಲನದ ಪ್ರಾತಿನಿಧಿಕ ಕವನವಾದ ‘ಬಾವಿಗ್ಯಾನವ ಮರೆತು’ ಕವಿತೆಯಲ್ಲಿ ಅವಳ ನಿರಾಕರಣೆಯು ಆತ್ಮವಂಚನೆಯನ್ನು ನೀಗಿಕೊಳ್ಳುವುದರ ಜೊತೆ ಸುಪ್ತವಾಗಿರುವುದನ್ನು ಅನಾವರಣಗೊಳಿಸುವ ಮಾದರಿಯಾಗುತ್ತದೆ.

ಒಮ್ಮೆಲೆ ಎಲ್ಲ ಕೈಬಿಡುವಂತೆ ಕರೆದಿತ್ತಿರಬೇಕು ಬಾವಿ
ಊರ ಹಳ್ಳವನ್ನೂ ಮರೆಸುವ
ಹಳ್ಳವನ್ನೇ ಸೃಷ್ಟಿಸಿದ್ದಾಳೆಂದರು..

ಬದುಕುವ ಜಿದ್ದು ಮತ್ತು ಜಿಗುಟುತನದ ಸ್ತ್ರೀತನದ ಬೇರುಗಳ ಇದಿರು ಉಡಾಫೆ ಬೇಜವಾಬ್ದಾರಿ ಸೋಗಲಾಡಿತನದ ಪುರುಷ ಪಲಾಯನಗಳು ಮತ್ತು ಇದಕ್ಕೆ ಕಾರಣವಾಗುವ ಸಮಾಜದ ಮೇಲಿನ ಸಿಟ್ಟು ಮತ್ತದನ್ನು ಅರ್ಥಹೀನಗೊಳಿಸುವ ನಿಟ್ಟುಸಿರು undefined ಎರಡೂ ಸಿಗುತ್ತವೆ. ‘ಕಂಬಿಯೊಳಗಿನ ಮಾಯಾಬಜಾರು’ ಕವನ ನನ್ನ ಸಾರ್ವಕಾಲಿಕ ಮೆಚ್ಚಿನ The Shawshank Redemption ಸಿನೆಮಾ ನೆನಪಿಸಿ ನನಗೆ ರೋಮಾಂಚನವನ್ನು ನೀಡಿತು. ಆ ಸಿನೆಮಾದ ವೈಬ್ಸನ್ನು ಉಂಟುಮಾಡಿದ ಸಾಲುಗಳಿವು…

ಮಾಡಿದ ತಪ್ಪಿಗೆ ಮಾಡದ ತಪ್ಪಿಗೆ
ಯಾರೊ ಮಾಡಿದ ತಪ್ಪಿಗೆ
ತಪ್ಪು ಮಾಡದೇ ಬಂದ ತಪ್ಪಿಗೆ
ಗುಹಾಂತರ ದೇವಾಲಯದುರಿನ ಮೊಬೈಲ್ ಸದ್ದು ಎಂಬ ಕವನದ ಸಮಾಪ್ತಿ ಸಾಲುಗಳಿವು…

ಹೊಂದಿಕೊಳ್ಳಲು ಕಷ್ಟವಾಗುತ್ತಿದೆ
ಕೃತಕ ಬುದ್ಧಿಯ ಕ್ರತ್ರಿಮ ಲೋಕಕ್ಕೆ

ಆಧುನಿಕ ಪರಿಕರ ಮತ್ತು ಚಲನೆಗಳ ಪರಿಸರಕ್ಕೆ ಹೊಂದಿಕೆಯಾಗದಿರುವಷ್ಟೆಯಲ್ಲ ಅಪರಿಚಿತನಾಗುತ್ತ ಅಸಂಬದ್ಧನಾಗುತ್ತ ಅಬ್ಸಲೀಟ್ ಆಗಿಬಿಡುವ ಅಪಾಯವನ್ನು ಹೇಳುತ್ತಿದ್ದಂತೆ ಮುಂಬರುವ ಆರ್ಟಿಫೀಶಿಯಲ್ ಇಂಟಲಿಜನ್ಸಿನ ಸಾಮ್ರಾಜ್ಯಶಾಹಿಯ ನಾಗರೀಕರಾಗಲಿರುವ ನಮ್ಮಲ್ಲಿ ಸಣ್ಣ ನಡುಕ ಹುಟ್ಟುವುದು ಸುಳ್ಳಲ್ಲ.

ತಂತಮ್ಮ ಜೀವನಗಾಥೆಯನ್ನು ಹಾಡುವ ಸಂಭ್ರಮಿಸುವ ಜನರೇಷನ್ನು ಒಂದಿತ್ತು ಎಂಬ ಮಸುಕಾದ ನೆನಪನ್ನು ಸಹ ನಿವಾರಿಸುವ ನಮ್ಮ ಇವತ್ತಿನ ಪರಕೀಯತೆಯ ದಿನಮಾನದ ನೋಟವನ್ನು ನೀಡುವ ‘ಪಶ್ಚಾತಾಪವಾಗದೇ ಪರಿಶುದ್ಧವಾದಂತೆ’ ‘ಅಂತಹುದೊಂದು ಕಲ್ಪಿತ ಜಾಗ’, ‘ಗರ್ದಿ ಗಮ್ಮತ್ತು ಬಲು ಜೋರಿತ್ತು’ ಮತ್ತಿತರ ಕವನಗಳಿವೆ. ‘ಒಳನೋಟದ ಸಾವಧಾನ’ ಕವನದ ಸಾಲುಗಳಿವು…

ಅದೇ ಅದೇ ದಾರಿಗಳಲ್ಲಿ ಸಾಗಿ
ಇಡಿಯ ಅವಸರದ ಮುಟ್ಟುವಿಕೆಯನ್ನು ಈಗ
ಸಮಾಧಾನದಿ ಮುಟ್ಟಿ

ಈ ಕಾಲಕ್ಕೆ ಹೆಚ್ಚು ಸೂಕ್ತವೆನಿಸುವ ಮತ್ತು ನನ್ನ ಮೆಚ್ಚಿನ ಸಾಹಿತ್ಯ ಅಭಿವ್ಯಕ್ತಿ ಪ್ರಕಾರವಾದ ಡಾರ್ಕ್ ಹ್ಯೂಮರ್ ಹಿನ್ನೆಲೆಯ ಕವನಗಳಾದ ‘ಬೇನಾಮಿ ಎಲವಿನ ಒಲವು’, ‘ರಕುಸವೇಷದಿ ಪ್ರಕಟಗೊಂಡು’, ‘ವೃತ್ತಿಧರ್ಮದ ಕರ್ಮ’ ವಿಶಿಷ್ಟ ಗಮನ ಸೆಳೆಯುತ್ತವೆ. ಬಹಳಷ್ಟು Kafkaesque ವಾತಾವರಣದ ಕವಿತೆಗಳಿವೆ. Kafka ನ ಗುಂಗು ಹತ್ತಿಸಿಕೊಂಡವರಷ್ಟೇ ಬಲ್ಲರು ಅಂತಹ ಬರವಣಿಗೆಯ ನಶೆ.
ಕತ್ತಲು ಮತ್ತು ಬೆಳಕಿನ ನಡುವಿನ ಪೂರಕ, ಅತೀತ, ವಿರೋಧ, ಸಮೀಕರಣಗಳ ಬಗೆಗಿನ ಕವಿಯ ಜಿಜ್ಞಾಸೆ, ಮನುಷ್ಯ ಸಂಬಂಧಗಳು ಸೃಷ್ಟಿಸುವ ನೆರವು ಮತ್ತು ಹೊರೆ ಎರಡೂ ಭಾವಗಳ ಸಮರ್ಪಕ ರೂಪಕವಾಗಿ ಬಳಕೆಯಾಗಿದೆ.

ರಾತ್ರಿಗಳು ಬೆಳಗಿದವು – ಎನ್ನುವುದು
ಮೂರ‍್ನಾಲ್ಕು ತಲೆಮಾರು ಉರಿಸಿ
ಕಾಲ ಸರಿಸಿ ಬಿಟ್ಟಿತು
ದುಗುಡದಿಂದ ಸೆರೆಯಿಂದ
– ಎಂದು ಈಗ ಹೊಳೆಯಿತು

ಸಿಸಿಫ್‌ಸನದು – ಸಾಮರ್ಥ್ಯಕ್ಕೆ ಅಂಟಿಕೊಳ್ಳುವ ಶಾಪವೂ, (ಪುರಾಣಗಳಲ್ಲಿ ಹಲವಾರು ಉದಾಹರಣೆಗಳಿವೆ) ಯಾಂತ್ರಿಕತೆಗೆ ಸೀಮಿತಗೊಂಡು ನಿರಾಳವಾಗುವ ವರವೋ ಅಥವಾ ‘ಕರ್ಮಣ್ಯೆ ವಾಧಿಕಾರಸ್ತೆ ಮಾ ಫಲೇಷು ಕದಾಚನ’ ಎಂಬ ಪರಿಹಾರವೂ ಎಂದೆಲ್ಲ ಮತ್ತೊಮ್ಮೆ ಯೋಚಿಸುವಂತೆ ಮಾಡಿದ ‘ನಂಬಿದರಷ್ಟೆ ಈ ನಂಬುಗೆಯ ಆಟ’ ಕವನದ ಸಾಲುಗಳಿವು..

ಮುಟ್ಟಿಸಿಬಿಟ್ಟು
ನಿಟ್ಟುಸಿರುಬಿಟ್ಟು
ಮತ್ತದೇ ಕೆಲಸವನು
ಮರೆತಂತೆ ಮಾಡುವ ಸಂಚಾರ ಮೋಹಿ

ಮನುಷ್ಯನ ನೆಚ್ಚಿನ ಬೇಟೆ ಜಿಂಕೆ ಕಡವೆ ಹುಲಿ ಸಿಂಹಗಳಲ್ಲ, ಗೊತ್ತಿದ್ದೂ ಮಾನವತೆಯ ಸೋಗಿನಲ್ಲಿ ನಡವಳಿಕೆಯ ನಾಜೂಕುತನದಲ್ಲಿ ಆಗಾಗ ಮರೆಮಾಚುವ ಸತ್ಯವಿದು. ಈ ಸತ್ಯ ‘ಅಂತಹುದೊಂದು ಕಲ್ಪಿತ ಜಾಗ’ ಎಂಬ ಸಂಕೀರ್ಣ ಕವಿತೆಯಲ್ಲಿ ಪ್ರಸ್ತುತ ಪಡಿಸಲಾಗಿದೆ. ಕಲ್ಪನೆ ವಾಸ್ತವವಾಗಿ ಬದಲಾಗುವುದರಲ್ಲಷ್ಟೆ ಅದರ ಸಾರ್ಥಕತೆ ಅಡಗಿಲ್ಲ, ಕಲ್ಪಿಸಿ ಕಲ್ಪನೆಯಾಗಿಯಾದರೂ ಸ್ಥಾಪನೆಯಾಗಬಲ್ಲ ಸುಪ್ತಪ್ರಜ್ಞೆಯ ಸುಪ್ತನೆಲೆಗಳ ಅನ್ವೇಷಣೆ ಮುಖ್ಯ.

ಅಸ್ತಿತ್ವದ ಹುಡುಕಾಟ ವ್ಯಸನವಾಗುತ್ತ ಪ್ರೇಮ ಕಾಮ ಕೊನೆಗೆ ಸ್ವಾರ್ಥದೊಂದಿಗೂ ತಾದ್ಯಾತ್ಮ ಸ್ಥಾಪಿತವಾಗದ ಸ್ಥಿತಿಯಲ್ಲಿ ಪದರು ಪದರಾಗಿ ವಿಕಸನಗೊಂಡ ಪ್ರಜ್ಞೆ ಕಣ್ಣಾಮುಚ್ಚಾಲೆಯ ದೈನಿಕಗಳಲ್ಲಿ ಲೀನವಾಗುವ ಕ್ರಮವನ್ನು ಕಾಣಿಸುವ ವಿಶಿಷ್ಟ ಕವನಗಳಿವು. ನಾವೇ ಸೃಷ್ಟಿಸಿಕೊಂಡ ನರಕದಲ್ಲಿ ದೂರುಗಳು ತಪ್ಪೊಪ್ಪಿಗೆಯನ್ನು ಧ್ವನಿಸುತ್ತವೆ.

ಬದುಕಿನ ಪಯಣದ ಪರಿವರ್ತನೆಗಳ ಪ್ರೀತಿ ಚಿತ್ರಗಳೆ ನೆನಪಿನ ದೋಷದ ಮಲಿನತೆಯನ್ನು ನಾಸ್ಟಾಲ್ಜಿಕ್ ಡಾರ್ಕ್ ರೂಮಿನಲ್ಲಿ ತೊಳೆದು ಶುದ್ಧೀಕರಿಸಿದ ಬಿಂಬವನ್ನು ಮನದುಂಬಿಸಿಕೊಳ್ಳುವ ಪ್ರೇಮಪತ್ರಗಳ ಜನರೇಷನ್ನಿನ ಅಸಫಲ ಪ್ರೇಮ ಪ್ರಕರಣಗಳ ರಮ್ಯತೆ ಕವಿತೆಯ ವಸ್ತುವಾಗುವುದೇ ಒಂದು ಪ್ರಣಯಾಂತಿಕ ಅನುಭವ.

ಆಕೆ ಇನ್ನಾದರೂ ಒದ್ದೆ ಮೈಯಲ್ಲಿ
ಬಾಗಿಲಾಚೆ ನಿಂತಿರಬಹುದೆ..

ರೋಡಿನಲ್ಲಿ ಅವಳು ಬಾಯಿ ಬಿಡುವುದಿಲ್ಲ
ತನ್ನ ಪ್ರಿಯತಮನ ಮರ್ಯಾದೆ ತೆಗೆಯುವುದಿಲ್ಲ..
(ಸರ್ವನಾಮಗಳ ಸುಳಿಯಲಿ)

(ಮಮತಾ ಆರ್.)

ಬಾಳುವ, ಬೆಳಗುವ, ಉಳಿಯುವ, ಉಳಿಸುವ, ಗಳಿಸುವ, ಬೆಳೆಯುವ ತುಳಿಯುವ, ಆಟಗಳಲ್ಲಿ ಪಳಗಿರಲಾರದವನನ್ನು ನಿಲುವು ಬದ್ಧತೆಗಳ ಸಮೇತ ಬುಡಮೇಲು ಮಾಡಬಲ್ಲ ಎಲ್ಲ ತರಹದ ಎಲ್ಲ ಸ್ತರಗಳ ರಾಜಕಾರಣಗಳ ಎದುರು ‘ಗೈರು ಹಾಜರಿ’ ಎನ್ನುವುದು ದೈನ್ಯ ನೆಲೆಯಲ್ಲೂ ಪಲಾಯನ ಮಾಡದೆ ಆಯ್ಕೆ ಮಾಡಿಕೊಂಡ ಪ್ರತಿರೋಧ. ನಮ್ಮ ಸಮಕಾಲೀನ ಸ್ಥಿತ್ಯಂತರಗಳು ಹೆಚ್ಚಿನ ಸಂಖ್ಯೆಯ ಗೈರುಹಾಜರಿಗಳಿಗೆ ಸಾಕ್ಷಿಯಾಗುತಿವೆ..

ಕೇಸಿತ್ತು ನನ್ನ ಮೇಲೆ
ನಾನು ಗೈರುಹಾಜರಿಯವನೆಂದು

ಇಂದ್ರಕುಮಾರ ಅವರ ಅಸ್ಮಿತೆ, ಯೋಚನಾ ಪ್ರಕ್ರಿಯೆ ಮತ್ತು ಸಂವೇದನೆಗಳು ಎಷ್ಟೊಂದು ಆಳವಾಗಿವೆ ಎಂದರೆ ಅಭಿವ್ಯಕ್ತಿ ತುಸು ಸರಳವಾದರೂ ಪರಿಣಾಮಕಾರಿಯಾಗಿ ಧ್ವನಿಸಬಲ್ಲವು ಮತ್ತು ಸಹೃದಯರಿಗೆ ಇನ್ನಷ್ಟು ಸನಿಹವಾಗಬಲ್ಲವು.

ಸಣ್ಣಕತೆಗಳ ಅನನ್ಯ ಶೈಲಿಯ ಬರಹಗಾರರಾಗಿ ಇಂದ್ರಕುಮಾರ್ ಎಚ್.ಬಿ. ಅವರು ಈಗಾಗಲೇ ಸುಪ್ರಸಿದ್ಧರು. ಕವಿತೆಗಳಲ್ಲೂ ತಮ್ಮ ಸೃಜನಶೀಲ ಪ್ರತಿಭೆಯನ್ನು ಪ್ರಯೋಗ ಮಾಡಬಲ್ಲರು ಅನ್ನುವುದಕ್ಕಿಂತ ಈ ಪ್ರಕಾರದಲ್ಲೂ ಅವರ ಕೈ ಈಗಾಗಲೇ ಪಳಗಿದೆ ಎನ್ನುವುದಕ್ಕೆ ಪ್ರಸ್ತುತ ಕವನಸಂಕಲನವೆ ಸಾಕ್ಷಿ. ವಿಶಾಲ ಕ್ಯಾನವಾಸಿನಲ್ಲಿ ಅಭಿವ್ಯಕ್ತಿಗೊಂಡಿರುವ ಕವಿತೆಗಳಿಗೆ ನನ್ನ ಈ ಪುಟ್ಟ ಬರವಣಿಗೆ ಸೀಮಿತ ಪರಿಚಯವಷ್ಟೆ.

ಈ ಸಂಕಲನದ ಸತ್ವಯುತ ಕವನಗಳ ಸಂಖ್ಯೆ ಮತ್ತು ಸಾಂದ್ರತೆ ಮರು ಓದು ಮತ್ತು ವಿಸ್ತೃತ ಬರವಣಿಗೆಯನ್ನು ಬಯಸುವಂತವು. ಅಂದಹಾಗೆ ಒಂದು ಓದು, ಒಂದು ವಿಮರ್ಶೆಯನ್ನು ಧಿಕ್ಕರಿಸುವ Anti Cannonization ಕಾಲದ ಓದುಗ, ಈ ಕೃತಿಯನ್ನು ಕೈಗೆತ್ತಿಕೊಂಡಲ್ಲಿ ತನ್ನ ಅಭಿರುಚಿಗೆ ತಕ್ಕಂತೆ ಮಾರ್ಪಾಡಾಗಬಲ್ಲ ಕಸ್ಟಮೈಜ್ಡ್ ಕವಿತೆಯೊಂದನ್ನು ಖಂಡಿತವಾಗಿ ಪಡೆದುಕೊಳ್ಳುತ್ತಾನೆ ಎಂದು ಮಾತ್ರ ಖಂಡಿತ ಹೇಳಬಲ್ಲೆ.

ಸಂಕಲನದ ಮೂರು ಕವಿತೆಗಳು…

ಬಾವಿಗ್ಯಾನವ ಮರೆತು…

ಅಮ್ಮ ಹಾರಿಕೊಂಡ ಬಾವಿಯ ನೀರು
ಕುಡಿಯಬಹುದೆ
ಪ್ರಶ್ನೆಯಿದೆ ವರ್ಷಗಳಿಂದ
ತಂದೆಗೆ ಕೇಳಲಾಗುವುದಿಲ್ಲ..
ಅವನು ನಿರ್ಗಮನಕ್ಕೆ ಆರಿಸಿಕೊಂಡದ್ದು
ಮರವನ್ನು ಹಗ್ಗವನ್ನು
ಅದು ನೆರಳಿನ ಮರ..
ಹಸಿವಿಗೆ ಹಣ್ಣುಕೊಡುವಂಥದ್ದಲ್ಲ..
ಅಕ್ಕತಂಗಿಯರೋ
ಬಾವಿಯ ಸೆಳೆತಕ್ಕೆ ಹೆದರಿ
ಹಿತ್ತಲ ದಾರಿಯೇ ಬಿಟ್ಟಿದ್ದಾರೆ..
ನನ್ನ ಜೊತೆಗೇ ಹುಟ್ಟಿದ್ದಂತಿದ್ದ
ಹಿತ್ತಲ ಬಾವಿಯನ್ನು
ಪಾಳು-ಬೋಳು-ಬಂಜೆಯೆಂದು ಜರಿದವರಿಗೆ
ಜಂಗುಜೀಡು ಜೇಡಬಾವಲಿ ದಾಟಿ
ಅದರೊಳಗೆ ದೃಷ್ಟಿ ಇಳಿಸದವರಿಗೆ
ಅಮ್ಮ ಹಾರಿಕೊಂಡೇ ತೋರಿಸಬೇಕಾಯಿತು..
ಪಾತಾಳದಲ್ಲಿದ್ದ ಮುಳುಗುವಷ್ಟೇ ನೀರನ್ನು

ಇಷ್ಟುದಿನ ನೀರನ್ನಷ್ಟೆ ಕುಡಿಸಿ ಬದುಕಿಸಿದವಳಿಗೆ
ನೀರು ಕುಡಿಸಿತವಳಿಗೆ ಬಾವಿ

ಅವಮಾನ ಮುಚ್ಚಿಕೊಳ್ಳುವ ಹರಸಾಹಸದಿ
ಬೆವರುತ್ತ ಒರಲುತ್ತ ಕೆಮ್ಮುತ್ತ
ಕಟ್ಟಿಗೆಯಾರಿಸುತ್ತ ಮುಳ್ಳು ಕೆಬರುತ್ತಿದ್ದವಳಿಗೆ
ಒಮ್ಮೆಲೆ ಎಲ್ಲ ಕೈಬಿಡುವಂತೆ ಕರೆದು ನುಂಗಿರಬೇಕು ಬಾವಿ

ಎಲ್ಲ ಮುಗಿದು ನಿಸ್ತೇಜ ಲೋಕದ ಮಂಕು
ಮೆಲ್ಲಗೆ ಹರಡುತ್ತಿದ್ದಾಗ
ಹಿತ್ತಿಲಬಾವಿಯ ನೀರು
ಉಕ್ಕೇರಿ ಹರಿಯತೊಡಗಿತ್ತು…
ಊರ ಜನ
‘ನೀರಿಲ್ಲದ ಬಾವಿ ಆಹುತಿ ಬೇಡಿತ್ತು..
ಈಡೇರಿತು ನೋಡಿ’ ಎಂದು ಮಾತಾಡಿಕೊಂಡರು..

ಬಾವಿಯೊಳಗಿನ ಬಾಗಿಲ ತೆರೆದಿದ್ದಾಳೆ
ಅವಳು..
ಉಸಿರುಸಿಕ್ಕು ಸಾಯುತ್ತಿದ್ದ ಜಲಮಾತೆಗಾಗಿ
ತಳದ ಕಿಟಕಿಯನ್ನು ತೆರೆಯಲು ಹೋದಳೆ?
ಕಿಟಕಿ ಬಾಗಿಲಾಗಿ ಬಾಗಿಲು ಲೋಕವಾಗಿ
ತೆರೆದುಕೊಂಡಿರಬಹುದೆ
ಅದನ್ನು ಆಹುತಿ ಎನ್ನಲಾದೀತೇ?

‘ಅವಳು ಹಾರಿದ ಬಾವಿಗೆ
ಅವಳದ್ದೇ ಗುಣ
ಊರ ಹಳ್ಳವನ್ನೂ ಮರೆಸುವ
ಹಳ್ಳವನ್ನೇ ಸೃಷ್ಟಿಸಿದ್ದಾಳೆ’ ಅಂದರು..
ಬಲುಜೋರಿನ ನೀರನ್ನು ದಿಟ್ಟಿಸುತ್ತ ನಿಂತೆ

ಕರೆಯದ ಒಲೆಗಳು

ಒಲೆ ಮಾಡುವ ಮಣ್ಣಿನ ಹುಡುಕಾಟ
ನಡೆಸಿದ್ದಳು ನನ್ನಜ್ಜಿ
‘ಅಲೆದಾಟದ ಬದುಕು ಮುಗಿಯಿತು ನಮ್ಮದು
ಇನ್ನು ಹೋದಲೆಲ್ಲ ಒಲೆಹೂಡುವ
ಬಿಟ್ಟು ನಡೆಯುವ ಕಷ್ಟವಿಲ್ಲ’ ಎಂದೆ
– ಕೇಳಲಿಲ್ಲ ಅವಳು

ಬಹುಶಃ ಅಲ್ಲಿಗೇ ನಿಂತಿರಬಹುದೆ
ಅವಳ ಬಾಳುವೆಯ ಸ್ಮರಣೆ?
ಮಣ್ಣಿನ ಒಲೆ ಹೂಡಿಯೇ ತೀರುವವಳಿಗೆ
‘ಅಪಾರ್ಟ್ಮೆಂಟ್ ಫ್ಲಾಟ್‌ನಲ್ಲಿ
ಹೊಗೆಯೇಳಿಸಿದರೆ ಶಂಖನಾದ ಮೊಳಗಿಸಿದರೆ
ಅಲ್ಲೋಲಕಲ್ಲೋಲವಾಗಿಬಿಡುತ್ತದೆ
ಸ್ವಸ್ಥ ಸಮಾಜದಲ್ಲೊಂದು ಅಸ್ವಸ್ಥ ಬದುಕಿನವರೆಂದು
ದೂರುಕೊಡುತ್ತಾರೆ ದೂಷಿಸುತ್ತಾರೆ
ಒಳಗೇನು ಬೇಯಿಸಿದಿರಿ ಏನು ಕುದಿಸಿಕೊಳ್ಳುತ್ತಿರುವಿರಿ
ಎಂದು ಕಣ್‌ಬಾಯ್ ತೆರೆದು ಎಲ್ಲರೂ ಕೇಳುತ್ತಾರೆ’ ಅಂದೆ
ತಲೆಕೊಡವಿದವಳ ಹಠಕ್ಕೆ ಏನು ಹೇಳುವುದು
ಮುನಿದು ಕೂತವಳ ರಮಿಸಿ ಮಾತನಾಡಿಸಲಾಯಿತು
ಅವಳ ಆಸೆಯಿಷ್ಟೇ
‘ಒಲೆ ಕರೆಯುತ್ತಿದೆ ಯಾರೋ ಬರುತ್ತಾರೆ’
ಅನ್ನಬೇಕಿದೆ ಅವಳಿಗೆ

ಹೊಳೆವ ಕಿಚನ್ನಿನಲ್ಲಿ
ಕೇವಲ ಸುಕೋಮಲ ಶಿಸ್ತಿನ
ನೀಲಿಯಗ್ನಿಗೆ ಮಾತ್ರ ಸಲಿಗೆ
‘ನಿನ್ನ ದನಪ್ರವೇಶ-ಅಗ್ನಿಪ್ರವೇಶ ಸಲ್ಲದು
ಗೋಮೂತ್ರ- ಸಗಣಿ ಸಾರಿಸಿ ಬಳಿದು
ಉರುಮಂಜು ಹಚ್ಚಿ ಸುಣ್ಣದಲ್ಲಿ
ಚಿತ್ತಾರ ಬಿಡಿಸುವುದೆಲ್ಲ ಈಗ
ತಪ್ಪು ತಪ್ಪು’ ಅಂದೆ.. ಬೆಪ್ಪಾಗಿಸಿತು ನನ್ನ
ಅವಳ ಆ ನೋಟ

ತತ್ಕಾಲಕ್ಕೆ ಮೂರು ಇಟ್ಟಿಗೆ ತಂದುಕೊಡುವೆ
ಇಲ್ಲೇ ನಾಲ್ಕು ಪುಳ್ಳೆಗಳಿಗೆ ಕಿಡಿಹೊತ್ತಿಸಿ
ಕ್ಷಣಕಾಲ ಕಣ್ತುಂಬಿಸಿಕೋ ಹೊಗೆಯನ್ನು ಅಂದೆ
ಬಿಳಿಗೂದಲ ಮುದಿತಲೆ ಕೊಡವಿತು ಸೆಡವಿನಲಿ

ಬರುವವರ ಬಾರದವರ
ಕರೆಯದೇ ಯುಗ ಕಳೆಯಿತು
ಇದ್ದವರ ಮಾತ್ರ ನೆನಪಿಸಿಕೊಳ್ಳುವ ಲೋಕವಿದು
ಇರುವವರೆಲ್ಲರೂ ಸುತ್ತಲಿರುವವರು ಮಾತ್ರ
ಇಲ್ಲಿ ಯಾರೂ ಬಾರರು
ಒಲೆ ಕರೆದರೂ ಕಾಗೆ ಕೂಗಿದರೂ ಅಂದೆ
ಶೋಕೇಸಿನಲ್ಲಿನ ಹೊಸ ರೆಡಿಮೇಡ್ ಮಣ್ಣಿನ ಒಲೆ
ದಿಟ್ಟಿಸುತ್ತ ಕೂತವಳಿನ್ನೂ ಮಾತು ಮುರಿದಿಲ್ಲ..

ಕಂಬಿಗಳೊಳಗಿನ ಮಾಯಾಬಜಾರು

ಊಟದ ರುಚಿ ಕುರಿತ ಮಾತುಕತೆಗೆ
ಜನರಿಲ್ಲ ಇಲ್ಲಿ
ಅರುಚಿಯೋ ಅಭಿರುಚಿ ಇಲ್ಲವೋ
ತಿಳಿಯದು..
ಇಲ್ಲಿ ನೀರನ್ನು ಪ್ರೀತಿಸಿದ ಸಾರು – ಸದಾ ಆರೋಪಿ
ನಿಸ್ಸಾರ ನಿಸ್ಸತ್ವದ ಸಾರಿಗಿಲ್ಲ ಪೈಪೋಟಿ
ನೋಡುತ್ತಿರುವುದು ಅನುಭವಿಸುತ್ತಿರುವುದಷ್ಟೇ ಸರಿ
ಒಂಥರಾ ಬಾವಿಕಪ್ಪೆಗಳ ಸಂಬಂಧಿಕರಿವರು..

ವೃದ್ಧಖೈದಿಗಳ ನಡುರಾತ್ರಿಯ ಮಾತು
ಬೆಳಗಿನವರೆಗೂ ಮುಂದುವರೆದರೇನೂ ನಷ್ಟವಿಲ್ಲ
ಎಲ್ಲಿಗೂ ಯಾರಿಗೂ ತಡವಾಗುವುದೇ ಇಲ್ಲವಲ್ಲ..
ಎಲ್ಲ ಅಗುಳ ಮೇಲೂ ಜೈಲು ಎಂದು ಬರೆದಂತೆ
ಟಿವಿನೋಡುತ್ತಿರುವ ನಮಗಷ್ಟೆ ಕಾಣಿಸುತ್ತಿರಬಹುದೆ?
ಊಟದಲ್ಲಿ ಹೊರಗಿನ ಪ್ರಪಂಚವ ಮರೆಸುವ
ಉಪ್ಪನ್ನು ಬೆರೆಸಲಾಗಿದೆಯೆ..

ಹೆಚ್ಚು ಸಮಯದಿಂದಿರುವವ ಹೆಚ್ಚು ಗಣ್ಯರು
ತಪ್ಪನ್ನು ಖಾತ್ರಿ ಪಡಿಸಿಕೊಳ್ಳಲು
ಪದೇ ಪದೇ ಮಾಡಿದವರಿರಬೇಕು..
ಮಾಡಿದ ತಪ್ಪಿಗೆ ಮಾಡದ ತಪ್ಪಿಗೆ
ಯಾರೋ ಮಾಡಿದ ತಪ್ಪಿಗೆ
ತಪ್ಪು ಮಾಡದೇ ಬಂದ ತಪ್ಪಿಗೆ
ತಲೆ ಕೊಟ್ಟು ಒಳ ಬಂದ ಕೆಲವರ ಪಾಲಿಗಂತೂ
ಜೈಲಿನ ಬಾಗಿಲು ಒಳಹೋಗಲಷ್ಟೆ

ಪಕ್ಕದ ಸೆಲ್ಲಿನವನಿಗೆ
ಮೂರು ದಿನಗಳಿಂದ ಬೇಧಿಯಾಗಿಲ್ಲವಂತೆ
ಆ ಪಕ್ಕದ ಸೆಲ್ಲಿನವನಿಗೆ ಹೇರ್‌ಡೈ ಬೇಕಂತೆ
ಎದುರಿನವರಿಗೆ ಜೋಕ್ಸ್ ಹೇಳುವ ಹುಕಿ..
ಇನ್ನೊಬ್ಬನಿಗೆ ಹೆಂಡತಿಯ ಮೇಲೆ ಅನುಮಾನವಂತೆ
ಅಣ್ಣ ಅಪ್ಪ ತಮ್ಮ ಚಿಕ್ಕಪ್ಪ ಮಾವ.. ಎಲ್ಲ
ಸಂಬಂಧಗಳನು ಒಂದೇ ಸೋಪಿನಲ್ಲಿ
ತೊಳೆದುಕೊಂಡವರಿವರು
ತಲೆಗೂದಲು ಮೀಸೆ ಗಡ್ಡ ಇದ್ದರೂ ಇರದಿದ್ದರೂ
ಬಾಯಿವಾಸನೆ ನಿದ್ದೆನಡಿಗೆ ಇದ್ದರೂ ಇರದಿದ್ದರೂ
ಸರಿಯೆ..
ಕೈತುತ್ತು, ಬೀದಿಬದಿಯ ರುಚಿಗಳು, ತಿಥಿಯೂಟಗಳು,
ಕದ್ದ ಕೋಳಿ, ಸಾಕಿದ ಕುರಿ ರುಚಿ ಹೇಗಿರುತ್ತದೆಂದು..
ತಿಳಿಯಬೇಕಿರುವುದಿಲ್ಲ.. ಬೆಳಕು ಕತ್ತಲ ನಡುವೆ
ದೈನಿಕವೊಂದು ನಿರಾಯಾಸ ಜಾರಬೇಕಷ್ಟೆ..

ಮಗ ಹೇಗೆ ಗೊರಕೆ ಹೊಡೆವನು
ಮಗಳು ಯಾರ ಹೋಲುವಳು
ಅಪ್ಪನ ಸತ್ತು ವಾರವಾಗಿರಬಹುದೆ
ಹೆಂಡತಿ ಈಗ ಚಿನ್ನದ ಕನಸು ಬಿಟ್ಟಿರುವಳೆ
– ಯಾರು ಹೇಳಬೇಕು ವಾರ್ತೆಗಳ

ತಪ್ಪು ಮರೆತು ಹೋಗಿ, ತಪ್ಪಿದಲ್ಲಿಗೆ ಹೋಗಲಾಗದವರ
ಜೀವಿತ ಅವಧಿ ಜೀವಾವಧಿ ನಡುವಿನ
ಅವಧಿಯವರ ಮನೋವ್ಯಾಧಿಯಲ್ಲದ
ವ್ಯಾಧಿಯನ್ನು ಅರ್ಥಮಾಡಿಸುವ ಬಗೆ ಹೇಗೆ ?

(ಕೃತಿ: ಬಾವಿಗ್ಯಾನವ ಮರೆತು (ಕವನ ಸಂಕಲನ), ಲೇಖಕರು: ಇಂದ್ರಕುಮಾರ್ ಎಚ್.ಬಿ., ಪ್ರಕಾಶಕರು: ಇಂಪನಾ ಪುಸ್ತಕ)