ಪೀಟರ್ ಪೆಟ್ರೊವಿಚ್ ಸಜ್ಜನನ ಹಾಗೆ ಮಹಿಳೆಯರಿಗೆ ವಂದಿಸಿದ. ಅವನ ಮುಖ ಮಾತ್ರ ಮೊದಲಿಗಿಂತ ಎರಡರಷ್ಟು ಗಂಭೀರವಾಗಿತ್ತು. ಅವನಿಗೆ ಸಮಾಧಾನವಿರಲಿಲ್ಲ, ಗೊಂದಲದಲ್ಲಿದ್ದಾನೆ ಅನಿಸುತ್ತಿತ್ತು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಕೂಡಾ ಮುಜುಗರಪಡುತ್ತಿದ್ದಳು. ಆತುರವಾಗಿ ಎಲ್ಲರನ್ನೂ ದುಂಡು ಮೇಜಿನ ಸುತ್ತ ಕೂರಿಸಿದಳು. ಮೇಜಿನ ಮೇಲೆ ಸಮೋವರ್‍ ನಲ್ಲಿ ಚಹಾ ಕುದಿಯುತ್ತಿತ್ತು. ದುನ್ಯಾ, ಪೀಟರ್ ಪೆಟ್ರೊವಿಚ್ ಎದಿರು ಬದಿರಾಗಿ ಕೂತರು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ನಾಲ್ಕು:ಎರಡನೆಯ ಅಧ್ಯಾಯ

 

ಎಂಟು ಗಂಟೆ ಆಗುವುದರಲ್ಲಿತ್ತು. ಪೀಟರ್ ಪೆಟ್ರೋವಿಚ್ ಬರುವುದಕ್ಕೂ ಮೊದಲು ಅಲ್ಲಿರಬೇಕೆಂದು ಅವರಿಬ್ಬರೂ ಬಕಲೇವ್ ವಸತಿಗೃಹದತ್ತ ಆತುರವಾಗಿ ನಡೆದರು.

‘ಯಾರದು, ಬಂದಿದ್ದು?’ ರಸ್ತೆಗಿಳಿದ ತಕ್ಷಣ ರಝುಮಿಖಿನ್ ಕೇಳಿದ.

‘ಸ್ವಿದ್ರಿಗೈಲೇವ್ ಅಂತ. ಜಮೀನ್ದಾರ. ಅವನ ಮನೇಲ್ಲೇ ನನ್ನ ತಂಗಿ ಗೌರ್ನೆಸ್ ಆಗಿ ಕೆಲಸ ಮಾಡುತ್ತಾ ಇದ್ದದ್ದು.. ಅವರ ಮನೆಯಲ್ಲಿದ್ದಾಗ ನನ್ನ ತಂಗಿಗೆ ಅವಮಾನ ಆಗಿತ್ತು. ಅದಕ್ಕೇ ಕೆಲಸ ಬಿಟ್ಟಳು. ಅವನು ಇವಳ ಮೇಲೆ ಕಣ್ಣಿಟ್ಟಿದ್ದ, ಅವನ ಹೆಂಡತಿ ಮಾರ್ಫಾಗೆ ಗೊತ್ತಾಗಿ ನನ್ನ ತಂಗಿಯನ್ನು ಕೆಲಸದಿಂದ ಬಿಡಿಸಿ ಕಳಿಸಿದಳು. ಆಮೇಲೆ ಗಂಡನದೇ ತಪ್ಪು ಅಂತ ಗೊತ್ತಾಗಿ ದುನ್ಯಾಳ ಕ್ಷಮೆ ಕೇಳಿದಳು. ಮಾರ್ಫಾ ಇದ್ದಕಿದ್ದ ಹಾಗೆ ಸತ್ತು ಹೋದಳು. ಇವತ್ತು ಬೆಳಿಗ್ಗೆ ನಮ್ಮಮ್ಮ ಮಾತಾಡತಾ ಇದ್ದದ್ದು ಅವಳ ಬಗ್ಗೇನೇ. ಯಾಕೆ ಅಂತ ಗೊತ್ತಿಲ್ಲ, ಈ ಮನುಷ್ಯನ್ನ ನೋಡಿದರೆ ತುಂಬ ಭಯ ಆಗತ್ತೆ. ಹೆಂಡತಿಯ ಕಾರ್ಯ ಮುಗಿಸಿದ ತಕ್ಷಣ ಇಲ್ಲಿಗೆ ಬಂದಿದಾನೆ. ಅವನು ತೀರ ವಿಚಿತ್ರ ಅವನಿಗೇನೋ ಬೇಕು… ಅವನಿಗೇನೋ ಗೊತ್ತಿದೆ… ದುನ್ಯಾನ ಅವನಿಂದ ಕಾಪಾಡಬೇಕು… ಇದನ್ನೇ ನಿನಗೆ ಹೇಳಬೇಕು ಅಂತಿದ್ದೆ.. ಕೇಳಿಸಿತಾ?’

‘ಕಾಪಾಡುವುದು? ಏನು ಮಾಡಕ್ಕೆ ಸಾಧ್ಯ ಅವನಿಗೆ? ಹೀಗೆ ನನಗೆ ಹೇಳಿದ್ದಕ್ಕೆ ಥ್ಯಾಂಕ್ಸ್, ರೋದ್ಯಾ… ಅವಳನ್ನ ಕಾಪಾಡಣ, ಖಂಡಿತ… ಎಲ್ಲಿರತಾನೆ ಅವನು?’

‘ಗೊತ್ತಿಲ್ಲ.’

‘ಛೆ! ಯಾಕೆ ಕೇಳಲಿಲ್ಲ? ಹೋಗಲಿ ಬಿಡು, ನಾನು ಪತ್ತೆ ಮಾಡತೀನಿ.’

ಸ್ವಲ್ಪ ಹೊತ್ತು ಸುಮ್ಮನಿದ್ದು, ‘ನೀನು ಸರಿಯಾಗಿ ನೋಡಿದೆಯಾ?’ ಅಂದ ರಾಸ್ಕೋಲ್ನಿಕೋವ್.

‘ಓಹೋ! ಗಮನ ಇಟ್ಟು ನೋಡಿದೆ.’

‘ನಿಜವಾಗಲೂ? ಸರಿಯಾಗಿ ನೋಡಿದೆಯಾ, ನಿಜಾನ?’

‘ಅವನ ಮುಖ ನೆನಪಿದೆ. ಸ್ಪಷ್ಟವಾಗಿ. ಸಾವಿರ ಜನದ ಮಧ್ಯೆ ಇದ್ದರೂ ಗುರುತು ಹಿಡೀತೇನೆ. ಜನಗಳ ಮುಖ ನನಗೆ ನೆನಪಿರತ್ತೆ.;
ಮತ್ತೆ ಸ್ವಲ್ಪ ಹೊತ್ತು ಮೌನವಿತ್ತು.

‘ಹ್ಞೂಂ… ಸರಿ ಹಾಗಾದರೆ… ಯಾಕೇಂದರೆ… ನಿನಗೆ ಗೊತ್ತಲ್ಲ… ಅಂದುಕೊಳ್ಳತಾ ಇದ್ದೆ… ಬರೀ ಊಹೆ… ಕಲ್ಪನೇನೇ ಇರಬಹುದು,’ ರಾಸ್ಕೋಲ್ನಿಕೋವ್ ಗೊಣಗಿದ.

‘ಏನಿದೆಲ್ಲ, ನೀನು ನನಗೆ ಅರ್ಥಾನೇ ಆಗಿಲ್ಲ.’

‘ನೀವೆಲ್ಲರೂ ನಾನು ಹುಚ್ಚ ಅನ್ನತಿದ್ದೀರಿ.’ ರಾಸ್ಕೋಲ್ನಿಕೋವ್ ಸೊಟ್ಟದಾಗಿ ನಕ್ಕು ಹೇಳಿದ. ‘ನಾನು ಹುಚ್ಚ ಇರಬಹುದು. ಈಗ ತಾನೇ ದೆವ್ವಾನ ಕಣ್ಣಾರೆ ಕಂಡೆ,’ ಅಂದ.

‘ಏನು ಹಾಗಂದರೆ?’

‘ಯಾರಿಗ್ಗೊತ್ತು? ನಿಜವಾಗಲೂ ನಾನು ಹುಚ್ಚ ಇರಬಹುದು, ಕಳೆದ ನಾಕೈದು ದಿನ ನಡೆದದ್ದು ಎಲ್ಲಾನೂ ನನ್ನ ಕಲ್ಪನೆ ಇರಬಹುದು…’

‘ಅಯ್ಯೋ, ರೋದ್ಯಾ ಮತ್ತೆ ಅಪ್‍ಸೆಟ್ ಆಗಿದೀಯ! ಏನಂದ ಅವನು? ಯಾಕೆ ಬಂದಿದ್ದ?’
ರಾಸ್ಕೋಲ್ನಿಕೋವ್ ಉತ್ತರ ಕೊಡಲಿಲ್ಲ. ರಝುಮಿಖಿನ್ ಸ್ವಲ್ಪ ಹೊತ್ತು ಯೋಚನೆ ಮಾಡಿದ.

‘ಸರಿ, ಹಾಗಾದರೆ ಇವತ್ತಿನ ನನ್ನ ವರದಿ ಕೇಳು. ನಿಮ್ಮ ರೂಮಿನ ಹತ್ತಿರ ಬಂದೆ, ನೀನು ಮಲಗಿದ್ದೆ. ಆಮೇಲೆ ನಾನು ಊಟ ಮುಗಿಸಿ ಪೋರ್ಫಿರೆಯನ್ನ ನೋಡಕ್ಕೆ ಹೋದೆ. ಝಮ್ಯತೋವ್ ಇನ್ನೂ ಅಲ್ಲೇ ಇದ್ದ. ಮಾತಾಡಕ್ಕೆ ನೋಡಿದೆ, ಮಾಮೂಲಾಗಿ ಮಾತಾಡಕ್ಕೆ ಆಗಲೇ ಇಲ್ಲ. ಅವರು ಅರ್ಥ ಮಾಡಿಕೊಳ್ಳಲ್ಲ, ಅಥವಾ ಅವರಿಗೆ ಅರ್ಥ ಆಗಲ್ಲ, ಹಾಗಂತ ಅವರಿಗೆ ಒಂದಿಷ್ಟೂ ಮುಜುಗರ ಕೂಡ ಇಲ್ಲ. ಪೋರ್ಫಿರೆಯನ್ನ ಕಿಟಕಿ ಹತ್ತಿರ ಕರಕೊಂಡು ಹೋಗಿ ಮಾತಾಡಿದೆ. ಯಾಕೋ ಸರಿ ಹೋಗಲಿಲ್ಲ. ಅವನು ಎಲ್ಲೋ ನೋಡುತ್ತಾ ನಿಂತಿದ್ದ, ನಾನೂ ಇನ್ನೆಲ್ಲೋ ನೋಡಿದೆ. ನಾನು ನಂಟರ ಸ್ಟೈಲಿನಲ್ಲಿ ಮುಷ್ಟಿ ಕಟ್ಟಿ ಅವನ ಮುಖ ಗುದ್ದುವ ಹಾಗೆ ಮಾಡಿ, ‘ನಿನ್ನ ಮುಖ ಚಚ್ಚಿ ಹಾಕತೇನೆ,’ ಅಂದೆ. ನನ್ನ ದುರುಗುಟ್ಟಿಕೊಂಡು ನೋಡಿದ. ಥೂ ಅಂದು ಬಂದುಬಿಟ್ಟೆ. ಇಷ್ಟೇ ಆಗಿದ್ದು. ಪೆದ್ದ ಕೆಲಸ. ಝಮ್ಯತೋವ್ ಜೊತೆ ಒಂದು ಮಾತೂ ಇಲ್ಲ. ಕೆಲಸ ಕೆಟ್ಟು ಹೋಯಿತು ಅಂದುಕೊಂಡೆ. ಆದರೆ ಮೆಟ್ಟಿಲು ಇಳೀತಾ ಇರೋವಾಗ, ‘ನಾವಿಬ್ಬರೂ ಯಾಕಿಷ್ಟು ತಲೆ ಕೆಡಿಸಿಕೊಂಡಿದೀವಿ?’ ಅನ್ನಿಸಿತು. ನೀನೇನಾದರೂ ಮಾಡಿದ್ದರೆ, ನಿನ್ನ ಮೇಲೆ ಆಪಾದನೆ ಬಂದಿದ್ದರೆ ಅದು ಬೇರೆ ಮಾತು ಈ ವಿಚಾರ ಕಟ್ಟಿಕೊಂಡು ನಿನಗೇನಾಗಬೇಕು? ನಿನಗೂ ಆ ಕೊಲೆಗೂ ಸಂಬಂಧವೇ ಇಲ್ಲ. ಥೂ ಹಾಳಾಗಲಿ ಅಂದುಕೊಂಡು ಸುಮ್ಮನೆ ಇದ್ದುಬಿಡು. ನಾನೇನಾದರೂ ನಿನ್ನ ಜಾಗದಲ್ಲಿದ್ದಿದ್ದರೆ ಅವರ ತಲೆ ಇನ್ನೂ ಕೆಡುವ ಹಾಗೆ ಮಾಡತಿದ್ದೆ. ತಲೆ ಕೆಡಿಸಿಕೊಂಡು ತಬ್ಬಿಬ್ಬಾಗಿ ನಾಚಿಕೆ ಪಡುವ ಹಾಗೆ ಮಾಡತಿದ್ದೆ. ಎಲ್ಲಾದರೂ ಸಾಯಲಿ ಅವರು. ಅವರನ್ನ ಆಮೇಲೆ ವಿಚಾರಿಸಿಕೊಳ್ಳಣ, ಈಗ ನನ್ನ ಜೊತೆ ನಗು!ʼ

‘ಸರಿ, ನೀನು ಹೇಳಿದ್ದು!’ ಅಂದ ರಾಸ್ಕೋಲ್ನಿಕೋವ್. ಮನಸ್ಸಿನೊಳಗೆ ಮಾತ್ರ, ‘ನಾಳೆ ನಿನಗೆ ನಿಜ ಗೊತ್ತಾದರೆ ಏನನ್ನುತ್ತೀಯೋ?’ ಅಂದುಕೊಂಡ. ವಿಚಿತ್ರವೆಂದರೆ ‘ನಿಜ ಗೊತ್ತಾದಾಗ ರಝುಮಿಖಿನ್ ಏನಂದುಕೊಳ್ಳುತ್ತಾನೆ’ ಅನ್ನುವ ಯೋಚನೆ ಅವನಿಗೆ ಇದುವರೆಗೂ ಬಂದಿರಲೇ ಇಲ್ಲ. ಈಗ ಆ ಪ್ರಶ್ನೆ ಬಂದದ್ದರಿಂದ ರಝುಮಿಖಿನ್‍ ನನ್ನು ಗಮನವಿಟ್ಟು ನೋಡಿದ. ರಝುಮಿಖಿನ್ ಹೋಗಿ ಪೋರ್ಫಿರೆಯನ್ನು ಮಾತಾಡಿಸಿದ್ದರ ವರದಿ ತೀರ ಮುಖ್ಯವಲ್ಲ ಅನ್ನಿಸಿತು. ಪೋರ್ಫಿರೆಯನ್ನು ಕಂಡು ಬಂದಮೇಲೆ ಮತ್ತಿನ್ನೇನೇನೋ ನಡೆದಿತ್ತು.

ವಸತಿಗೃಹದ ಹಜಾರದಲ್ಲಿ ಅವರು ಪೀಟರ್ ಪೆಟ್ರೊವಿಚ್‍ ನನ್ನು ಕಂಡರು, ಅವನು ಸರಿಯಾಗಿ ಎಂಟು ಗಂಟೆಗೆ ಬಂದಿದ್ದ. ದುನ್ಯಾ ಮತ್ತು ಅವಳ ತಾಯಿ ಇರುವ ಕೋಣೆ ಯಾವುದೆಂದು ಹುಡುಕುತ್ತಿದ್ದ. ಹಾಗಾಗಿ ಮೂರೂ ಜನವೂ ಒಬ್ಬರ ಮುಖ ಇನ್ನೊಬ್ಬರು ನೋಡದೆ, ಒಬ್ಬರು ಇನ್ನೊಬ್ಬರನ್ನ ಮಾತಾಡಿಸದೆ ಒಟ್ಟಿಗೆ ರೂಮಿಗೆ ಹೋದರು. ಯುವಕರು ಮೊದಲು ಒಳಕ್ಕೆ ಹೋದರು, ಸೌಜನ್ಯದ ಕಾರಣಕ್ಕಾಗಿ ಪೀಟರ್ ಪೆಟ್ರೊವಿಚ್ ಸ್ವಲ್ಪ ಹೊತ್ತು ಹೊರಗೇ ನಿಂತಿದ್ದು ಕೋಟು ತೆಗೆದ. ಅವನನ್ನು ಬರಮಾಡಿಕೊಳ್ಳಲು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಬಾಗಿಲಿಗೇ ಓಡಿದಳು. ದುನ್ಯಾ ಅಣ್ಣನನ್ನು ಮಾತಾಡಿಸುತ್ತಿದ್ದಳು.

ಪೀಟರ್ ಪೆಟ್ರೊವಿಚ್ ಸಜ್ಜನನ ಹಾಗೆ ಮಹಿಳೆಯರಿಗೆ ವಂದಿಸಿದ. ಅವನ ಮುಖ ಮಾತ್ರ ಮೊದಲಿಗಿಂತ ಎರಡರಷ್ಟು ಗಂಭೀರವಾಗಿತ್ತು. ಅವನಿಗೆ ಸಮಾಧಾನವಿರಲಿಲ್ಲ, ಗೊಂದಲದಲ್ಲಿದ್ದಾನೆ ಅನಿಸುತ್ತಿತ್ತು. ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಕೂಡಾ ಮುಜುಗರಪಡುತ್ತಿದ್ದಳು. ಆತುರವಾಗಿ ಎಲ್ಲರನ್ನೂ ದುಂಡು ಮೇಜಿನ ಸುತ್ತ ಕೂರಿಸಿದಳು. ಮೇಜಿನ ಮೇಲೆ ಸಮೋವರ್‍ ನಲ್ಲಿ ಚಹಾ ಕುದಿಯುತ್ತಿತ್ತು. ದುನ್ಯಾ, ಪೀಟರ್ ಪೆಟ್ರೊವಿಚ್ ಎದಿರು ಬದಿರಾಗಿ ಕೂತರು. ರಝುಮಿಖಿನ್, ರಾಸ್ಕೋಲ್ನಿಕೋವ್ ಇಬ್ಬರೂ ಪುಲ್ಚೇರಿಯಳಿಗೆ ಎದುರಾಗಿ, ರಝುಮಿಖಿನ್ ಪೀಟರ್ ಪೆಟ್ರೊವಿಚ್‍ ಗೆ ಹತ್ತಿರವಾಗಿ, ರಾಸ್ಕೋಲ್ನಿಕೋವ್ ತಂಗಿಯ ಪಕ್ಕದಲ್ಲಿ ಕೂತರು.

ಸ್ವಲ್ಪ ಹೊತ್ತು ಮೌನವಿತ್ತು. ಪೀಟರ್ ಪೆಟ್ರೊವಿಚ್ ಸಾವಕಾಶವಾಗಿ ತನ್ನ ಅಚ್ಚ ಬಿಳಿಯ ಕರವಸ್ತ್ರ ತೆಗೆದ. ತೆಳುವಾದ ಸುಗಂಧ ಬೀರಿದ ಹಾಗಾಯಿತು. ಗೌರವಾನ್ವಿತ ಸತ್ಕುಲ ಪ್ರಸೂತನೊಬ್ಬ ಯಾವುದೋ ಕಾರಣಕ್ಕೆ ಭಂಗಿತನಾಗಿ ಯಾಕೆ ಹೀಗೆ ಎಂದು ಒತ್ತಾಯ ಮಾಡಿ ವಿವರಣೆ ಕೇಳುವವನ ಧಾಟಿಯಲ್ಲಿ ಅದನ್ನು ಮೂಗಿಗೆ ಅಡ್ಡ ಹಿಡಿದು ಸೀನಿದ. ತನ್ನ ಮಾತು ಮೀರಿದ್ದ ಕಾರಣಕ್ಕೆ ಈ ಇಬ್ಬರು ಹೆಂಗಸರನ್ನು ಶಿಕ್ಷಿಸಿ ಪಾಠ ಕಲಿಸಬೇಕು, ಕೋಟು ತೆಗೆಯದೆ ಹೀಗೇ ಹೊರಟು ಹೋಗಬೇಕು ಅನ್ನುವ ಯೋಚನೆ ಹಜಾರದಲ್ಲಿರುವಾಗಲೇ ಅವನಿಗೆ ಬಂದಿತ್ತು.
ಆದರೆ, ಧೈರ್ಯ ಬಂದಿರಲಿಲ್ಲ. ಇವರು ಯಾಕೆ ಇಷ್ಟು ಉದ್ಧಟರಾಗಿ ನನ್ನ ಆಜ್ಞೆ ಉಲ್ಲಂಘಿಸಿದರು ಅನ್ನುವುದಕ್ಕೆ ವಿವರಣೆ ಕೇಳಬೇಕು, ಅವರು ಹಾಗೆ ನಡೆದುಕೊಳ್ಳುವುದಕ್ಕೆ ಗಹನ ಕಾರಣವಿದ್ದರೆ ಅದನ್ನು ತಿಳಿಯಬೇಕು, ಈ ಹೆಂಗಸರಿಗೆ ಶಿಕ್ಷೆ ಕೊಡುವುದು ನನ್ನ ಕೈಯಲ್ಲೇ ಇದೆ, ಯಾವಾಗ ಬೇಕಾದರೂ ಕೊಡಬಹುದು ಅನಿಸಿತ್ತು. ಅವನ ಮನಸ್ಸು ಎಲ್ಲ ವಿಷಯದಲ್ಲೂ ಸ್ಪಷ್ಟತೆ ಇರಬೇಕು ಅನ್ನುವ ಮನಸ್ಸು..

‘ಪ್ರಯಾಣ ಸುಖಕರವಾಗಿತ್ತೋ?’ ಅಧಿಕಾರದ ದನಿಯಲ್ಲಿ ಕೇಳಿದ.

‘ದೇವರ ದಯ, ಪೀಟರ್ ಪೆಟ್ರೊವಿಚ್, ಸುಖವಾಗಿ ಬಂದೆವು.’

‘ಬಹಳ ಸಂತೋಷ, ತಾಯೀ. ಅವದೋತ್ಯ ರೊಮನೋವ್ನ, ನಿಮಗೆ ಬಹಳ ದಣಿವಾಗಲಿಲ್ಲ ಅಲ್ಲವೇ?’

‘ನನಗೇನೂ ಆಗಲಿಲ್ಲ, ಪ್ರಾಯದವಳು, ಗಟ್ಟಿಯಾಗಿದೇನೆ, ಅಮ್ಮ ಮಾತ್ರ ಬಹಳ ಕಷ್ಟಪಟ್ಟಳು.’

‘ಏನೂ ಮಾಡಕ್ಕಾಗಲ್ಲ. ರೈಲು ದಾರಿ ಬಹಳ ದೂರದ್ದು. ನಮ್ಮ ಮಾತೆ ಎಂದು ಕರೆಯುವ ಈ ರಶಿಯಾ ಅನ್ನುವ ದೇಶ ಬಹಳ ವಿಶಾಲವಾಗಿದೆ… ನಾನೆ ಸ್ಟೇಶನ್ನಿಗೆ ಬರಬೇಕು ಅಂತಿದ್ದೆ, ಆಗಲೇ ಇಲ್ಲ. ಇರಲಿ, ಬಹಳ ತೊಂದರೆಯೇನೂ ಆಗಲಿಲ್ಲ ತಾನೇ?’

‘ನಮ್ಮ ಎದೆ ಕುಸಿದು ಹೋಗಿತ್ತು,’ ಮಾತಿಗೆ ವಿಶೇಷವಾದ ಒತ್ತು ಕೊಟ್ಟು ಪುಲ್ಚೇರಿಯ ಹೇಳಿದಳು. ‘ದೇವರೇ ಕಳಿಸಿಕೊಟ್ಟ ಅನ್ನುವ ಹಾಗೆ ದ್ಮಿತ್ರಿ ಪ್ರೊಕೋಫ್ಯಿಚ್ ಬಂದರು, ಇಲ್ಲದಿದ್ದರೆ ನಮ್ಮ ಗತಿ ಏನಾಗುತ್ತಿತ್ತೋ ಏನೋ,’ ಅಂದಳು. ‘ಇಗೋ ಇವರೇ ದ್ಮಿತ್ರಿ,’ ಅನ್ನುತ್ತ ರಝುಮಿಖಿನ್‍ ನನ್ನು ಪೀಟರ್ ಪೆಟ್ರೊವಿಚ್‍ ಗೆ ಪರಿಚಯ ಮಾಡಿಸಿದಳು.

‘ಇವರನ್ನ ಭೇಟಿ ಮಾಡುವ ಸದವಕಾಶ ಸಿಕ್ಕಿತ್ತು… ನಿನ್ನೆ,’ ಸ್ನೇಹ ಕಿಂಚಿತ್ತೂ ಇಲ್ಲದೆ ಕಡೆಗಣ್ಣಿನಿಂದ ರಝುಮಿಖಿನ್‍ ನನ್ನು ನೋಡುತ್ತ ಪೀಟರ್ ಪೆಟ್ರೊವಿಚ್ ಗೊಣಗಿದ. ಹುಬ್ಬು ಗಂಟಿಕ್ಕಿಕೊಂಡು ಸುಮ್ಮನಾಗಿಬಿಟ್ಟ. ಕೆಲವರಿರುತ್ತಾರೆ- ಜನರೊಡನೆ ಇರುವಾಗ ಅತ್ಯಂತ ಸ್ನೇಹಮಯಿ ಸಜ್ಜನರಾಗಿ ಕಾಣಲು ಬಯಸುತ್ತಾರೆ, ಹಾಗೇ ನಟಿಸುತ್ತಾರೆ, ತಮಗಿಷ್ಟವಿಲ್ಲದ್ದು ಒಂದಿಷ್ಟು ನಡೆದರೂ ಸ್ನೇಹ, ಉತ್ಸಾಹ, ಸಜ್ಜನಿಕೆಯನ್ನೆಲ್ಲ ನೀಗಿಕೊಡು ಹಿಟ್ಟಿನ ಮೂಟೆಗಳ ಹಾಗಾಗಿ ಬಿಡುತ್ತಾರೆ. ಪೀಟರ್ ಪೆಟ್ರೊವಿಚ್ ಅಂಥವರಲ್ಲೊಬ್ಬ ಎಲ್ಲರೂ ಸುಮ್ಮನೆ ಕೂತರು. ರಾಸ್ಕೋಲ್ನಿಕೋವ್ ಮೌನವಾಗಿರಲು ಹಟ್ಟ ತೊಟ್ಟಿದ್ದ. ಮೌನ ಮುರಿಯುವುದು ದುನ್ಯಾಗೆ ಸದ್ಯಕ್ಕೆ ಇಷ್ಟವಿರಲಿಲ್ಲ.
ರಝುಮಿಖಿನ್‍ ಗೆ ಹೇಳುವುದಕ್ಕೇನೂ ಇರಲಿಲ್ಲ. ಹಾಗಾಗಿ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಗೆ ಕಳವಳ ಹುಟ್ಟಿತು.

‘ಮಾರ್ಫಾ ಹೋಗಿಬಿಟ್ಟಳಂತೆ, ಗೊತ್ತಾಯಿತಾ?’ ಅನ್ನುತ್ತ ತನಗೆ ಮುಖ್ಯವಾಗಿದ್ದ ವಿಷಯವನ್ನು ಮಾತಿಗೆತ್ತಿಕೊಂಡಳು.

‘ಹೂಂ, ಗೊತ್ತಾಯಿತು, ಅವಳು ತೀರಿಕೊಂಡ ಸ್ವಲ್ಪ ಹೊತ್ತಿಗೇ ವಿಷಯ ಕಿವಿಗೆ ಬಿತ್ತು. ಅವಳ ಗಂಡ ಸ್ವಿದ್ರಿಗೈಲೋವ್ ಹೆಂಡತಿಯ ಕಾರ್ಯ ಮುಗಿದ ತಕ್ಷಣ ಬಹಳ ಆತುರವಾಗಿ ಇಲ್ಲಿಗೆ, ಅಂದರೆ ಪೀಟರ್ಸ್‍ಬರ್ಗ್‍ ಗೆ ಬಂದಿದಾನಂತೆ. ನನಗೆ ಸುದ್ದಿ ತಿಳಿಯಿತು. ನಿಮಗೂ ಹೇಳುವುದಕ್ಕೆ ಬಂದೆ’

‘ಪೀಟರ್ಸ್‍ಬರ್ಗ್‍ ಗೆ? ಇಲ್ಲಿಗೆ?’ ದುನ್ಯಾ ಆತಂಕಪಡುತ್ತ ಕೇಳಿದಳು. ಅಮ್ಮನತ್ತ ನೋಡಿದಳು. ತಾಯಿ ಮಗಳ ನಡುವೆ ನೋಟ ಹರಿದಾಡಿತು..

‘ಹೌದು, ತಾಯೀ. ಅವನು ಆತುರವಾಗಿ ಹೊರಟದ್ದು, ಹೊರಡುವುದಕ್ಕೆ ಮೊದಲು ಏನೇನು ನಡೆಯಿತು ಅದನ್ನೆಲ್ಲ ನೋಡಿದರೆ ಅವನ ಮನಸಲ್ಲಿ ಏನೋ ಇದೆ ಅನಿಸತ್ತೆ.’

‘ದೇವರೇ! ನಮ್ಮ ದುನ್ಯಾ ಇಲ್ಲೂ ಆರಾಮವಾಗಿರಕ್ಕೆ ಬಿಡಲ್ಲವಾ ಅವನು?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಅಂದಳು.

‘ನೀವು ಆತಂಕ ಪಡಬೇಕಾಗಿಲ್ಲ. ಅವದೋತ್ಯ ರೊಮೊನೋವ್ನಾ ಅವರೂ ಚಿಂತೆಮಾಡುವ ಅಗತ್ಯವಿಲ್ಲ. ನೀವೇ ಅವನನ್ನ ನೋಡಬೇಕು, ಮಾತಾಡಬೇಕು ಅಂದುಕೊಂಡರೆ ಅದು ಬೇರೆ ಮಾತು. ಅವನ ಮೇಲೆ ಕಣ್ಣಿಟ್ಟಿದೇನೆ, ಎಲ್ಲಿದಾನೆ ಅಂತ ಹುಡುಕಿಸತಾ ಇದೇನೆ.’

‘ಅಯ್ಯೋ, ಪೀಟರ್ ಪೆಟ್ರೊವಿಚ್, ಒಂದು ಕ್ಷಣ ನನ್ನ ಎಷ್ಟು ಹೆದರಿಸಿಬಿಟ್ಟಿರಿ!’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ. ‘ಅವನನ್ನ ನಾನು ನೋಡಿರುವುದು ಎರಡೇ ಸಾರಿ. ಅವನನ್ನ ನೋಡುತಿದ್ದ ಹಾಗೆ ಭಯಬಿದ್ದಿದ್ದೆ. ಮಾರ್ಫಾ ಸಾವಿಗೆ ಅವನೇ, ಅವನೇ ಕಾರಣ, ಗೊತ್ತು, ನನಗೆ.’ ಅಂದಳು.

‘ಅದೆಲ್ಲ ಹೀಗೇ ಅಂತ ಹೇಳಕ್ಕಾಗಲ್ಲ. ಏನು ನಡೆಯಿತು ಅನ್ನುವ ಮಾಹಿತಿ ನನಗೆ ಸ್ಪಷ್ಟವಾಗಿ ಗೊತ್ತು. ಅವನ ನೀತಿಗೆಟ್ಟ ವರ್ತನೆ, ಅವನ ಸ್ವಭಾವದ ಕಾರಣಕ್ಕೇನೆ ಅವಳು ಬೇಗ ಸಾಯುವ ಹಾಗಾಯಿತು ಅನ್ನುವ ನಿಮ್ಮ ಅಭಿಪ್ರಾಯ ಒಪ್ಪತೇನೆ. ಅವನು ಈಗ ಸಾಹುಕಾರನೋ, ಅವನಿಗೆ ಮಾರ್ಫಾ ಎಷ್ಟು ದುಡ್ಡು ಬಿಟ್ಟು ಹೋಗಿದ್ದಾಳೋ ಗೊತ್ತಿಲ್ಲ. ಸದ್ಯದಲ್ಲೇ ತಿಳಿಯತ್ತೆ. ಒಂದಿಷ್ಟಾದರೂ ದುಡ್ಡು ಕೈಯಲ್ಲಿ ಆಡುವ ಹಾಗಿದ್ದರೆ ಅವನು ಖಂಡಿತ ಇಲ್ಲೂ ಹಳೆಯ ಚಾಳಿ ಮುಂದುವರೆಸುತಾನೆ. ಅವನಂಥವರು ಬಹಳ ಜನ ಇದ್ದಾರೆ. ಲಂಪಟತನದಲ್ಲಿ, ನೀಚತನದಲ್ಲಿ ಅವನನ್ನ ಮೀರಿಸಿವಂಥವರು ಮಾತ್ರ ಯಾರೂ ಇಲ್ಲ! ಮಾರ್ಫಾ ಹಣೆಬರಹ, ಎಂಟು ವರ್ಷದ ಹಿಂದೆ ಇಂಥವನನ್ನ ಪ್ರೀತಿ ಮಾಡಿದಳು, ಅವನು ಮಾಡಿದ್ದ ಸಾಲ ಎಲ್ಲಾ ತೀರಿಸಿದಳು, ಅವನು ಮಾಡಿದ್ದ ಕೊಲೆಯ ಕ್ರಿಮಿನಲ್ ಅಪರಾಧಕ್ಕೆ ಸೈಬೀರಿಯಾಕ್ಕೆ ಗಡೀಪಾರಾಗಿ ಶಿಕ್ಷೆ ಅನುಭವಿಸುವುದನ್ನ ತಪ್ಪಿಸುವುದಕ್ಕೆ ಬಹಳ ಕಷ್ಟಪಟ್ಟಳು, ಬಹಳ ದೊಡ್ಡ ತ್ಯಾಗ ಮಾಡಿದಳು ಅನ್ನುವುದು ನನಗೆ ಗೊತ್ತು. ಅಂಧಾ ಮನುಷ್ಯ ಅವನು, ಗೊತ್ತಾ?’

‘ಅಯ್ಯೋ ದೇವರೇ!’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ. ರಾಸ್ಕೋಲ್ನಿಕೋವ್ ಗಮನವಿಟ್ಟು ಕೇಳಿಸಿಕೊಳ್ಳುತಿದ್ದ.

‘ಇದೆಲ್ಲ ನಿಮಗೆ ಖಚಿತವಾಗಿ ಗೊತ್ತಾ?’ ದುನ್ಯಾ ನಿಷ್ಠುರವಾದ ದನಿಯಲ್ಲಿ ಕೇಳಿದಳು.

‘ಮಾರ್ಫಾ ನನ್ನ ಹತ್ತಿರ ಗುಟ್ಟಾಗಿ ಏನು ಹೇಳಿಕೊಂಡಳೋ ಅದನ್ನೇ ಹೇಳತಿದ್ದೇನೆ. ಮಾರ್ಫಾ ಸಾವಿನ ಕೇಸು ಕಾನೂನಿನ ದೃಷ್ಟಿಯಿಂದ ಅಸ್ಪಷ್ಟ ಅನ್ನೋದು ನಿಜ. ಫಾರಿನ್ನಿನವಳು ಒಬ್ಬಳು ಇಲ್ಲಿದ್ದಳು, ಈಗಲೂ ಇರಬಹುದು. ಅವಳ ಹೆಸರು ರೆಸಿಲ್ಶ್. ಸಣ್ಣದಾಗಿ ಲೇವಾದೇವಿ ಮಾಡತಿದ್ದಳು, ಬೇರೆ ವ್ಯವಹಾರಾನೂ ಇತ್ತು ಅವಳದು. ಸ್ವಿದ್ರಿಗೈಲೋವ್ ಅವಳಿಗೆ ತುಂಬ ಹತ್ತಿರವಾಗಿದ್ದ, ಅವಳ ಜೊತೆ ಗುಟ್ಟಾದ ಸಂಬಂಧಾನೂ ಇತ್ತು. ಅವಳ ಜೊತೆಯಲ್ಲಿ ಒಬ್ಬಳು ಹುಡುಗಿ ಇದ್ದಳು. ದೂರದ ಸಂಬಂಧ. ಅವಳು ಕಿವುಡಿ, ಮೂಗಿ ಅಂತೆ. ಹದಿನೈದೋ ಹದಿನಾಲ್ಕೋ ವರ್ಷದವಳು. ರೆಸಿಲ್‍ ಗೆ ಅವಳನ್ನ ಕಂಡರೆ ಸಿಕ್ಕಾಪಟ್ಟೆ ಸಿಟ್ಟು, ದ್ವೇಷ. ಆ ಹುಡುಗಿ ಪಾಪ, ತಿನ್ನೋ ಒಂದೊಂದು ತುತ್ತಿಗೂ ಬೈಗುಳ ಕೇಳಬೇಕಾಗಿತ್ತು, ಎಷ್ಟೋ ಸಲ ಏಟೂ ತಿನ್ನಬೇಕಾಗುತಿತ್ತು. ಒಂದು ದಿನ ನೆಲಮಾಳಿಗೆಯ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಳು.
ವಿಚಾರಣೆ ನಡೆದು ಆತ್ಮಹತ್ಯೆ ಅಂತಾಯಿತು. ಕೇಸು ಮುಗಿಯಿತು. ಆ ಮಗುವಿನ ಮೇಲೆ ಸ್ವಿದ್ರಿಗೈಲೋವ್ ಅತ್ಯಾಚಾರ ಮಾಡಿದ್ದ ಅನ್ನುವುದು ಆಮೇಲೆ ತಿಳಿಯಿತು. ನಿಜ, ಸಾಕ್ಷಿ ಪುರಾವೆ ಇರಲಿಲ್ಲ, ಎಲ್ಲಾ ಅಸ್ಪಷ್ಟ. ಇನ್ನೊಬ್ಬ ಹೆಂಗಸು, ಅವಳೂ ಜರ್ಮನ್ ಹೆಂಗಸು, ಬಜಾರಿ, ಕೋರ್ಟು ನಂಬದಂಥ ಸಾಕ್ಷಿಯ ಥರ ಇದ್ದವಳು, ತನಗೆ ಎಲ್ಲಾ ಗೊತ್ತು ಅನ್ನುತ್ತ ಮುಂದೆ ಬಂದಳು. ಮಾರ್ಫಾಳ ದುಡ್ಡು, ಪ್ರಯತ್ನ ಎರಡೂ ಸೇರಿ ಆ ಸಾಕ್ಷಿಯೂ ಮಾಯವಾಯಿತು. ಎಲ್ಲಾ ಬರೀ ಗಾಳೀಮಾತಾಗಿ ಉಳಿಯಿತು. ಅಲ್ಲಾ ಅವದೋತ್ಯ ರೊಮನೊವ್ನಾ, ಸ್ವಡ್ರಿಗೈಲೋವ್‍ ನ ಏಟು ತಿಂದು ಫಿಲಿಪ್, ಅದೇ ಅವನ ಮನೆಯಲ್ಲಿ ಜೀತಕ್ಕೆ ಇದ್ದವನು, ಸತ್ತು ಹೋದ ಕತೆ ಕೇಳಿದ್ದೀರಿ, ಅಲ್ಲವಾ? ಆವಾಗ ನೀವು ಅವನ ಮನೆಯಲ್ಲೇ ಇದ್ದಿರಿ.’.

‘ಕೇಳಿದೇನೆ. ನೇಣು ಹಾಕಿಕೊಂಡು ತೀರಿ ಹೋದ ಅನ್ನುತಿದ್ದರು.’

‘ಹ್ಞಾ, ಅದೇ, ಅದೇ. ಸ್ವಿದ್ರಿಗೈಲೋವ್ ಒಂದೇ ಸಮ ಬೈದು, ಹೊಡೆದು ಅವನು ನೇಣು ಹಾಕಿಕೊಳ್ಳುವ ಹಾಗೆ ಮಾಡಿದ.’

‘ಅದು, ನನಗೆ ತಿಳಿಯದು. ಅವನು ಹೈಪೊಕಾಂಡ್ರಿಯಾಕ್, ಬಹಳ ತತ್ವ ಹೇಳತಿದ್ದ, ಸಿಕ್ಕಾಪಟ್ಟೆ ಓದುತ್ತಾನೆ ಅನ್ನುತಿದ್ದರು ಮಿಕ್ಕ ಕೆಲಸದವರು ಸ್ವಿದ್ರಿಗೈಲೋವ್ ಅವನನ್ನ ತಮಾಷೆ ಮಾಡಿ ನಗುತಿದ್ದ ಅಂತ ಆ ಫಿಲಿಪ್ ಆತ್ಮಹತ್ಯೆ ಮಾಡಿಕೊಂಡನೇ ಹೊರತು ಏಟು ತಿಂದು ಅಲ್ಲ. ನಾನು ಅಲ್ಲಿದ್ದಾಗ ಸ್ವಿದ್ರಿಗೈಲೋವ್ ಕೆಲಸದವರನ್ನ ಚೆನ್ನಾಗಿ ನಡೆಸಿಕೊಳ್ಳುವುದು ನೋಡಿದೇನೆ. ಕೆಲಸದವರೂ ಅವನನ್ನ ಇಷ್ಟಪಡತಿದ್ದರು. ಫಿಲಿಪ್ ಸತ್ತದ್ದಕ್ಕೆ ಅವನು ಕಾರಣ ಅಂತ ಮಾತಾಡಿಕೊಂಡರೂ ಕೆಲಸದವರಿಗೆ ಸ್ವಿದ್ರಿಗೈಲೋವ್‍ ಮೇಲೆ ದ್ವೇಷ ಇರಲಿಲ್ಲ.’

‘ನೋಡಿ, ನೀವು ಯಾಕೋ ಏನೋ ಇದ್ದಕಿದ್ದ ಹಾಗೆ ಅವನ ಪರವಾಗಿ ಮಾತಾಡತಿದ್ದೀರಿ.’ ಅನ್ನುತ್ತ ಪೀಟರ್ ಪೆಟ್ರೊವಿಚ್ ಬಾಯಿ ಸೊಟ್ಟ ಮಾಡಿ ನಕ್ಕ. ‘ನಿಜವಾಗಲೂ ಅವನು ಕುತಂತ್ರಿ. ಹೆಂಗಸರನ್ನ ಬಲೆಗೆ ಕೆಡವಿಕೊಳ್ಳತಿದ್ದ. ಸತ್ತು ಹೋದ ಮಾರ್ಫಾನೇ ಇದಕ್ಕೆ ಉದಾಹರಣೆ. ಅವನು ನಿಮಗೂ ನಿಮ್ಮ ತಾಯಿಗೂ ಮೋಸ ಮಾಡೇ ಮಾಡತಾನೆ ಹುಷಾರು ಅಂತ ಎಚ್ಚರಿಕೆ ಕೊಡುವುದಷ್ಟೇ ನನ್ನ ಉದ್ದೇಶ. ನನ್ನ ಮಟ್ಟಿಗೆ ಹೇಳುವುದಾದರೆ ಅವನು ಸಾಲ ತೀರಿಸಲಾಗದೆ ಜೈಲುಪಾಲಾಗುವುದು ಗ್ಯಾರಂಟಿ. ಮಾರ್ಫಾಗೆ ಮಕ್ಕಳು ಮುಖ್ಯ. ಹಾಗಾಗಿ ಅವನಿಗೇ ಅಂತ ಹೆಚ್ಚೇನೂ ಆಸ್ತಿ ಬಿಟ್ಟಿರಲ್ಲ. ಅವಳು ಅವನಿಗೆ ಅಂತ ಬಿಟ್ಟಿರುವ ದುಡ್ಡು ಅವನಂಥವನಿಗೆ ಒಂದು ವರ್ಷದ ಖರ್ಚಿಗೂ ಆಗಲ್ಲ ಅನಿಸತ್ತೆ.’

ಮೂರೂ ಜನವೂ ಒಬ್ಬರ ಮುಖ ಇನ್ನೊಬ್ಬರು ನೋಡದೆ, ಒಬ್ಬರು ಇನ್ನೊಬ್ಬರನ್ನ ಮಾತಾಡಿಸದೆ ಒಟ್ಟಿಗೆ ರೂಮಿಗೆ ಹೋದರು. ಯುವಕರು ಮೊದಲು ಒಳಕ್ಕೆ ಹೋದರು, ಸೌಜನ್ಯದ ಕಾರಣಕ್ಕಾಗಿ ಪೀಟರ್ ಪೆಟ್ರೊವಿಚ್ ಸ್ವಲ್ಪ ಹೊತ್ತು ಹೊರಗೇ ನಿಂತಿದ್ದು ಕೋಟು ತೆಗೆದ.

‘ಪೀಟರ್ ಪೆಟ್ರೊವಿಚ್, ದಯವಿಟ್ಟು, ದಯವಿಟ್ಟು ಸ್ವಿದ್ರಿಗೈಲೊವ್ ಬಗ್ಗೆ ಮಾತಾಡಬೇಡಿ. ನನಗೆ ಸಾಕಾಗಿಹೋಗಿದೆ,’ ಅಂದಳು ದುನ್ಯಾ.

‘ನನ್ನನ್ನ ನೋಡಕ್ಕೆ ಬಂದಿದ್ದ,’ ರಾಸ್ಕೋಲ್ನಿಕೋವ್ ಮೊದಲ ಬಾರಿಗೆ ಮೌನ ಮುರಿದು ಮಾತಾಡಿದ.
ಎಲ್ಲರೂ ಉದ್ಗಾರ ತೆಗೆದರು. ಎಲ್ಲರೂ ಅವನತ್ತ ತಿರುಗಿದರು. ಪೀಟರ್ ಪೆಟ್ರೋವಿಚ್‍ ಗೆ ಕೂಡ ಕುತೂಹಲ ಹುಟ್ಟಿತ್ತು.

‘ಸುಮಾರು ಒಂದೂವರೆ ಗಂಟೆ ಮೊದಲು ಬಂದಿದ್ದ. ಆಗ ನಾನು ಮಲಗಿದ್ದೆ. ಒಳಕ್ಕೆ ಬಂದ. ಎಬ್ಬಿಸಿದ. ಅವನ ಪರಿಚಯ ಅವನೇ ಮಾಡಿಕೊಂಡ. ನಾನು ಅವನಿಗೆ ಹತ್ತಿರದವನಾಗತೇನೆ ಅಂತ ಆಸೆ ಇಟ್ಟುಕೊಂಡು ಲಘುವಾಗಿ, ಖುಷಿಯಾಗಿ ಮಾತಾಡಿದ. ಅಂದ ಹಾಗೆ, ದುನ್ಯಾ, ನಿನ್ನ ಭೇಟಿ ಮಾಡಬೇಕು ಅಂತ ಬೇಡಿಕೊಂಡ, ಅವನ ಪರವಾಗಿ ನಿನ್ನ ಹತ್ತಿರ ಮಾತಾಡಿ ಭೇಟಿ ಏರ್ಪಾಟು ಮಾಡು ಅಂತ ಕೇಳಿಕೊಂಡ. ಅವನೇ ಬಾಯಿ ಬಿಟ್ಟು ಸ್ಪಷ್ಟವಾಗಿ ಹೇಳಿದ, ಮಾರ್ಫಾ ಸಾಯುವುದಕ್ಕೆ ಒಂದು ವಾರ ಮೊದಲು ನಿನ್ನ ಹೆಸರಿಗೆ ಮೂರು ಸಾವಿರ ರೂಬಲ್ ಬರೆದಿಟ್ಟಿದಾಳಂತೆ. ಸದ್ಯದಲ್ಲೇ ಅದು ನಿನಗೆ ಸಿಗತ್ತಂತೆ.’

‘ದೇವರೇ! ಅವಳಿಗೆ ಸ್ವರ್ಗ ಸಿಗಲಿ ಅಂತ ಪ್ರಾರ್ಥನೆ ಮಾಡು, ದುನ್ಯಾ!’ ಅಂದಳು ಪುಲ್ಚೇರಿಯ.

‘ಸತ್ಯ ಅದು,’ ಪೀಟರ್ ಪೆಟ್ರೊವಿಚ್ ಬಾಯಿಬಿಟ್ಟ.

‘ಸರಿ, ಸರಿ, ಮತ್ತೇನು?’ ದುನ್ಯಾ ಆತುರ ಮಾಡಿದಳು.

‘ಆಮೇಲೆ, ಹೇಳಿದ—ನಾನೇನೂ ಶ್ರೀಮಂತ ಅಲ್ಲ. ಎಲ್ಲಾ ಆಸ್ತಿ ಮಕ್ಕಳಿಗೆ ಹೋಗತ್ತೆ. ಅವರು ಈಗ ಚಿಕ್ಕಮ್ಮನ ಹತ್ತಿರ ಇದಾರೆ, ಅಂದ. ಮತ್ತೆ, ನಮ್ಮ ಮನೆಯ ಹತ್ತಿರವೇ ಎಲ್ಲೋ ಇಳಕೊಂಡಿದೀನಿ ಅಂದ. ಎಲ್ಲಿ ಅಂತ ನಾನು ಕೇಳಲಿಲ್ಲ…’

‘ದುನ್ಯಾಶಾಗೆ ಏನು ಹೇಳಬೇಕು ಅಂತಿದಾನೆ? ನಿನಗೆ ಹೇಳಿದನಾ?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಭಯಪಟ್ಟುಕೊಳ್ಳುತ್ತ ಕೇಳಿದಳು.

‘ಹೇಳಿದ, ಅದನ್ನ.’

‘ಏನಂತೆ?ʼ

‘ಆಮೇಲೆ ಹೇಳತೇನೆ,’ ಅಂದು ರಾಸ್ಕೋಲ್ನಿಕೋವ್ ಟೀ ಕುಡಿಯುವುದಕ್ಕೆ ಮನಸ್ಸು ಕೊಟ್ಟ.
ಪೀಟರ್ ಪೆಟ್ರೊವಿಚ್ ಜೇಬಿನಿಂದ ಗಡಿಯಾರ ತೆಗೆದು ನೋಡಿದ.

‘ನನಗೆ ಏನೋ ಕೆಲ ಇದೆ. ನಿಮಗೆ ಅಡ್ಡಿಮಾಡಲ್ಲ, ಹೋಗತೇನೆ,’ ಅನ್ನುತ್ತ ಅಸಮಾಧಾನ ತೋರಿಸಿ ಏಳುವುದಕ್ಕೆ ನೋಡಿದ

‘ಇರಿ, ಪೀಟರ್ ಪೆಟ್ರೊವಿಚ್, ನೀವು ಸಾಯಂಕಾಲ ಪೂರಾ ಇಲ್ಲೇ ಇರತೀನಿ ಅಂದಿದ್ದಿರಿ. ಅಲ್ಲದೇ ಅಮ್ಮನ ಹತ್ತಿರ ಏನೋ ಮಾತಾಡಬೇಕು ಅಂತ ಬರೆದಿದ್ದಿರಿ,’ ಅಂದಳು ದುನ್ಯಾ.

‘ಹೌದು,’ ಗಂಭೀರವಾಗಿ ಗಟ್ಟಿದನಿಯಲ್ಲಿ ಹೇಳುತ್ತ ಪೀಟರ್ ಪೆಟ್ರೊವಿಚ್ ಮತ್ತೆ ಕುಳಿತ. ಕೂತರೂ ಹ್ಯಾಟನ್ನು ಕೈಯಲ್ಲಿ ಹಿಡಿದೇ ಇದ್ದ.
‘ನಿಮ್ಮ ತಾಯಿಯವರ ಹತ್ತಿರ ನಿಮ್ಮ ವಿಚಾರವನ್ನೇ ಮಾತಾಡಬೇಕು ಅಂತಿದ್ದೆ. ಹಾಗೇ ಇನ್ನೂ ಕೆಲವು ಮುಖ್ಯ ವಿಚಾರ ಇದ್ದವು. ಏನೇ ಇದ್ದರೂ ನಿಮ್ಮಣ್ಣನಿಗೆ ನನ್ನೆದುರಿನಲ್ಲಿ ಸ್ವಿದ್ರಿಗಲೈವ್ ಏನು ಹೇಳಿದ ಅನ್ನುವುದನ್ನ ಹೇಳುವುದಕ್ಕೆ ಇಷ್ಟವಿಲ್ಲ. ಹಾಗೇ… ನನಗೂ ಅಷ್ಟೇ… ಬೇರೆಯವರ ಎದುರಿಗೆ ಈ ವಿಚಾರ ಮಾತಾಡಕ್ಕೆ ಇಷ್ಟವಿಲ್ಲ. ಅಲ್ಲದೆ, ನನ್ನ ಮುಖ್ಯವಾದ ಕೋರಿಕೆಯನ್ನೇ ನೀವು ನೆರವೇರಿಸಿಲ್ಲ.’
ಪೀಟರ್ ಪೆಟ್ರೊವಿಚ್ ಮುಖದಲ್ಲಿ ಕಹಿಯನ್ನು ತೋರುತ್ತ ಮೌನಕ್ಕೆ ಜಾರಿದ.

‘ನಮ್ಮಣ್ಣ ಬರಬಾರದು ಅಂತ ನೀವು ಅಂದಿದ್ದಿರಿ, ನಿಜ. ಅಣ್ಣ ಬರಲೇಬೇಕು ಅಂತ ಒತ್ತಾಯ ಮಾಡಿದ್ದು ನಾನು, ಅದಕ್ಕೇ ಬಂದಿದಾನೆ. ನಮ್ಮಣ್ಣ ನಿಮಗೆ ಅವಮಾನ ಮಾಡಿದ ಅಂತ ಬರೆದಿದ್ದಿರಿ. ಅದೇನು ಅಂತ ಮಾತಾಡಿ ಬಗೆಹರಿಸಿಕೊಳ್ಳುವುದು ಮುಖ್ಯ, ನಿಮ್ಮಿಬ್ಬರ ಮಧ್ಯೆ ಸ್ನೇಹ ಇರಬೇಕು. ಒಂದು ವೇಳೆ ರೋದ್ಯಾ ನಿಮಗೆ ಅವಮಾನ ಮಾಡಿದ್ದೇ ನಿಜವಾಗಿದ್ದರೆ ಅವನು ನಿಮ್ಮ ಕ್ಷಮೆ ಕೇಳಲೇಬೇಕು, ಅಷ್ಟೇ ಅಲ್ಲ ಕೇಳೇ ಕೇಳತಾನೆ.’ ಅಂದಳು ದುನ್ಯಾ.

ಪೀಟರ್ ಪೆಟ್ರೊವಿಚ್ ತಕ್ಷಣವೆ ದರ್ಪ ತೋರಿಸಿದ.

‘ಅವದೋತ್ಯ ರೊಮನೋವ್ನ, ಕೆಲವು ಥರದ ಅಪಮಾನಗಳಿರತವೆ, ಎಷ್ಟೇ ಒಳ್ಳೆಯ ಮನಸಿದ್ದರೂ ಮರೆಯಬೇಕು ಅಂದರೂ ಮರೆಯಲು ಆಗುವುದಿಲ್ಲ. ಮಾನ ಅಪಮಾನಗಳ ನಡುವೆ ತೆಳುವಾದ ಗೆರೆ ಇರುತ್ತದೆ. ಅದನ್ನು ದಾಟಿದರೆ ಮುಗಿಯಿತು. ಮತ್ತೆ ಮೊದಲಿನ ಹಾಗೆ ಇರುವುದಕ್ಕೆ ಆಗೋದೇ ಇಲ್ಲ…’

‘ಪೀಟರ್ ಪೆಟ್ರೊವಿಚ್, ಅದನ್ನಲ್ಲ ನಾನು ಹೇಳಿದ್ದು,’ ದುನ್ಯಾ ಅವನ ಮಾತನ್ನು ತಡೆದು ಹೇಳಿದಳು. ಸ್ವಲ್ಪ ಅಸಹನೆ ಇತ್ತು ಅವಳ ದನಿಯಲ್ಲಿ. ‘ದಯವಿಟ್ಟು ಅರ್ಥ ಮಾಡಿಕೊಳ್ಳಿ. ಈ ವಿಷಯವನ್ನು ಎಷ್ಟು ಬೇಗ ಇತ್ಯರ್ಥ ಮಾಡಿಕೊಳ್ಳುತ್ತೇವೋ ಅನ್ನುವುದರ ಮೇಲೆ ನಮ್ಮ ಇಡೀ ಭವಿಷ್ಯ ನಿಂತಿದೆ. ಮೊದಲಿಗೇ ಸ್ಪಷ್ಟವಾಗಿ ಹೇಳಿಬಿಡತೇನೆ. ಈ ವಿಷಯವನ್ನ ಹೀಗಲ್ಲದೆ ಬೇರೆ ರೀತಿ ನೋಡುವುದಕ್ಕೆ ನನಗೆ ಸಾಧ್ಯವೇ ಇಲ್ಲ. ನೀವು ನನಗೆ ಬೆಲೆ ಕೊಡುತ್ತೀರಿ ಅಂತಾದರೆ ಈ ವಿಷಯ ಇವತ್ತೇ ಇಲ್ಲೇ ಮುಗಿಯಬೇಕು. ಮತ್ತೆ ಹೇಳತೇನೆ, ನಮ್ಮ ಅಣ್ಣ ತಪ್ಪು ಮಾಡಿದ್ದೇ ಆಗಿದ್ದರೆ ಖಂಡಿತ ನಿಮ್ಮ ಕ್ಷಮೆ ಕೇಳೇ ಕೇಳತಾನೆ.’

‘ನೀವು ಈ ಪ್ರಶ್ನೆಯನ್ನ ಹೀಗೆ ನೋಡುತ್ತಿರುವುದು ಆಶ್ಚರ್ಯ,’ ಪೀಟರ್ ಪೆಟ್ರೊವಿಚ್ ರೇಗುತ್ತಿದ್ದ. ‘ನಿಮಗೆ ಬೆಲೆ ಕೊಡುತ್ತೇನೆ, ನಿಮ್ಮನ್ನ ಆರಾಧಿಸುತೇನೆ, ಹಾಗೇನೇ ನಿಮ್ಮ ಮನೆಯಲ್ಲಿ ಯಾರೋ ಒಬ್ಬರನ್ನ ಒಂದಿಷ್ಟೂ ಇಷ್ಟಪಡದೆಯೂ ಇರಬಹುದು. ನಿಮ್ಮ ಕೈ ಹಿಡಿಯುವುದು ಸಂತೋಷ, ಆದರೂ ನನಗೆ ಹೊಂದಾಣಿಕೆ ಆಗದ ನಿಮ್ಮ ಮನೆಯವರ ಜೊತೆ ಹೊಂದಿಕೊಳ್ಳಬೇಕು ಅನ್ನುವ ಹಂಗು…’

‘ಇಷ್ಟೊಂದು ಸಿಡುಕು ಬೇಡ, ಪೀಟರ್ ಪೆಟ್ರೊವಿಚ್,’ ದುನ್ಯಾ ಭಾವ ತುಂಬಿ ಹೇಳಿದಳು. ನೀವು ಬುದ್ಧಿವಂತರು ದೊಡ್ಡ ಮನಸಿನವರು ಅಂತ ಅಂದುಕೊಂಡಿದೇನೆ. ನೀವು ಹಾಗೇ ಇರಬೇಕು ಅನ್ನುವುದು ನನ್ನಾಸೆ. ನಾನು ನಿಮ್ಮ ವಧು ಅನ್ನುವ ವಾಗ್ದಾನ ಕೊಟ್ಟಿದೇನೆ. ನನ್ನನ್ನು ನಂಬಿ. ನಾನು ಯಾರ ಬಗ್ಗೆನೂ ಪಕ್ಷಪಾತ ಮಾಡಲ್ಲ. ನಿಮ್ಮ ಮತ್ತೆ ಅಣ್ಣನ ವಿಷಯದಲ್ಲಿ ನಾನು ನ್ಯಾಯಾಧೀಶಳಾಗಿ ಇರತೇನೆ ಅನ್ನುವುದು ನಿಮ್ಮ ಹಾಗೇ ನಮ್ಮಣ್ಣನಿಗೂ ಆಶ್ಚರ್ಯ ತಂದಿದೆ. ನಿಮ್ಮ ಕಾಗದ ಸಿಕ್ಕು ಈ ಭೇಟಿ ನಡೆಯಬೇಕು ಅಂತಾದಮೇಲೆ ನನ್ನ ಮನಸಲ್ಲಿ ಏನಿದೆ ಅನ್ನೋದನ್ನ ಅಣ್ಣನಿಗೂ ಹೇಳಿಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ. ನಿಮ್ಮ ಮಧ್ಯೆ ಶಾಂತಿ, ಸಮಾಧಾನ ಇರದೆ ಇದ್ದರೆ ನಾನು ನಿಮ್ಮಿಬ್ಬರಲ್ಲಿ ಒಬ್ಬರನ್ನ ಆರಿಸಿಕೊಳ್ಳಬೇಕಾಗತ್ತೆ, ಇಲ್ಲಾ ನೀವು, ಇಲ್ಲಾ ಅವನು ಅಂತ. ನಾನು ತಪ್ಪು ಆಯ್ಕೆ ಮಾಡಬಾರದು, ನೀವು ಬೇಕು ಅಂದರೆ ಅಣ್ಣನ ಜೊತೆ ಸಂಬಂಧ ಮುರಿದುಕೊಳ್ಳಬೇಕು, ಅಣ್ಣ ಬೇಕು ಅಂದರೆ ನಿಮ್ಮ ಸಂಬಂಧ ಮುರಿದುಕೊಳ್ಳಬೇಕು. ನನ್ನ ಅಣ್ಣ ನನಗೆ ಬೇಕೋ, ನೀವು ನನ್ನ ಮೆಚ್ಚಿದ್ದೀರೋ, ನನಗೆ ಬೆಲೆಕೊಡುತ್ತೀರೋ? ಅಣ್ಣನೋ ನೀವೋ ನಾನು ಯಾರನ್ನು ನನ್ನವರು ಅಂದುಕೊಳ್ಳಬೇಕು ಅನ್ನುವುದು ಸ್ಪಷ್ಟವಾಗಬೇಕು ನನಗೆ.’

‘ಅವದೋತ್ಯ ರೊಮೊನೋವ್ನ,’ ಪೀಟರ್ ಪೆಟ್ರೊವಿಚ್ ಮುಖಹಿಂಡಿಕೊಂಡು ಹೇಳಿದ. ‘ನಿಮ್ಮ ಮಾತಿಗೆ ದೊಡ್ಡ ದೊಡ್ಡ ಅರ್ಥ ಇದೆ. ಅಷ್ಟೇ ಅಲ್ಲ, ಇದು ಕೆಟ್ಟ ಶಕುನ ಅನ್ನಿಸತಿದೆ. ನಾನು ನಿಮ್ಮ ಭಾವೀ ಪತಿ ಅನ್ನುವ ಸಂಬಂಧದ ಮಿತಿ ಮೀರಿ ತಪ್ಪು ಮಾಡತಿದೀರಿ. ನೀವು ಬಹಳ ವಿಚಿತ್ರವಾದ ರೀತಿಯಲ್ಲಿ, ಮನಸಿಗೆ ನೋವಾಗುವ ಹಾಗೆ ಇಬ್ಬರನ್ನೂ ತೂಗಿ ನೋಡುತ್ತಿದ್ದೀರಿ, ನನ್ನನ್ನೂ ಆ..ಆ.. ಸೊಕ್ಕಿನ ಹುಡುಗನ್ನೂ ಇಬ್ಬರನ್ನೂ ಒಂದೇ ಅನ್ನೋ ಹಾಗೆ ಮಾತಾಡುತ್ತೀರಲ್ಲ! ನಿಮ್ಮ ಮಾತು ಕೇಳಿದರೆ ಕೊಟ್ಟ ಮಾತು ಮುರಿಯುತ್ತೀರಿ ನೀವು ಅನಿಸತ್ತೆ. ‘ನೀವು ಅಥವಾ ಅವನು’ ಅನ್ನುತ್ತೀರಿ. ನನಗೆ ಎಷ್ಟು ಬೆಲೆ ಕೊಡುತ್ತೀರಿ ಅಂತ ಗೊತ್ತಾಗತ ಇದೆ. ನಮ್ಮ ಸಂಬಂಧದಲ್ಲಿ ಇಂಥ ಹಂಗು ಇರಬಾರದು…’

‘ಏನೂ!’ ದುನ್ಯಾ ಕೆರಳಿದಳು. ‘ನನ್ನ ಜೀವನದಲ್ಲೇ ಅತಿ ಅಮೂಲ್ಯವಾಗಿದ್ದದ್ದರ ಪಕ್ಕದಲ್ಲಿ ನಿಮ್ಮನ್ನು ಇರಿಸಿದರೆ, ಇದುವರೆಗೆ ನನ್ನ ಇಡೀ ಜೀವನವೇ ಆಗಿದ್ದರ ಪಕ್ಕದಲ್ಲಿ ನಿಮ್ಮನ್ನಿಸಿರಿದರೆ, ಅದರಿಂದ ನಾನು ನಿಮಗೆ ಬೆಲೆ ಕೊಡತಾ ಇಲ್ಲ, ನಾನು ತಪ್ಪು ಮಾಡತಾ ಇದೀನಿ ಅನಿಸತ್ತಾ?’

ರಾಸ್ಕೋಲ್ನಿಕೋವ್ ಸದ್ದಿಲ್ಲದೆ ವ್ಯಂಗ್ಯವಾಗಿ ನಕ್ಕ. ರಝುಮಿಖಿನ್ ಉದ್ವೇಗದಲ್ಲಿ ಕಂಪಿಸುತ್ತಿದ್ದ. ಪೀಟರ್ ಪೆಟ್ರೊವಿಚ್ ದುನ್ಯಾಳ ಆಕ್ಷೇಪಣೆ ಒಪ್ಪದೆ ಇನ್ನೂ ರೇಗುತ್ತ, ನಿರ್ಬಂಧ ಹೇರುವ ಹಾಗೆ ಮಾತಾಡಿದ. ಮಾತಾಡಿದ ಹಾಗೆಲ್ಲ ತನ್ನ ಮಾತಿನ ರುಚಿಗೆ ತಾನೇ ಮರುಳಾಗಿ ಖುಷಿಪಡುತ್ತಿದ್ದ.

‘ಅಣ್ಣನ ಮೇಲೆ ಇರುವುದಕ್ಕಿಂತ ಕೈ ಹಿಡಿಯುವ ಭಾವೀ ಪತಿಯ ಬಗ್ಗೆ, ಜಾಸ್ತಿ ಪ್ರೀತಿ ಇರಬೇಕು,’ ನೀತಿವಾಕ್ಯದ ಹಾಗೆ ಹೇಳಿದ. ನನ್ನನ್ನ ಅವನ ಮಟ್ಟಕ್ಕೆ ಇಳಿಸುವುದು ನನಗೆ ಇಷ್ಟ ಆಗಲ್ಲ… ನಿಮ್ಮ ಅಣ್ಣ ಎದುರಿಗಿದ್ದರೆ ನಾನು ಹೇಳಬೇಕಾದದ್ದನ್ನೆಲ್ಲ ಹೇಳಕ್ಕೆ ಆಗಲ್ಲ ಅಂತ ಸ್ಪಷ್ಟವಾಗಿ ನಾನು ತಿಳಿಸಿದ್ದರೂ ಅವನನ್ನ ಕರೆಸಿದ್ದೀರಿ. ಒಂದು ಮುಖ್ಯವಾದ ವಿಷಯದ ಬಗ್ಗೆ, ನನಗೆ ಅನ್ಯಾಯ ಅನ್ನಿಸುವಂಥ ವಿಷಯದ ಬಗ್ಗೆ ನಿಮ್ಮ ತಾಯಿಯವರನ್ನ ಈಗ ವಿವರಣೆ ಕೇಳತೇನೆ,’ ಅನ್ನುತ್ತ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳತ್ತ ತಿರುಗಿದ. ‘ನಿನ್ನೆ, ರಝುಡ್ಕಿನ್… ಸರಿಯಾ (ಕ್ಷಮಿಸಿ, ನಿಮ್ಮ ಹೆಸರು ಮರೆತುಹೋಗಿದೆ ಅನ್ನುತ್ತ ರಝುಮಿಖಿನ್‍ ನತ್ತ ತಲೆಬಾಗಿ ವಂದಿಸಿ ಮುಂದುವರೆಸಿದ) ‘ಮಿತಿ ಮೀರಿ ಮಾತಾಡಿದ ನಾನು ಯಾವಾಗಲೋ ನಿಮ್ಮ ಹತ್ತಿರ ಖಾಸಗಿಯಾಗಿ ಕಾಫಿ ಕುಡಿಯುತ್ತ ಆಡಿದ ಮಾತನ್ನ ನಿಮ್ಮ ಮಗ ತಿರುಚಿ ಹೇಳಿದ.
ಸುಖವಾಗಿ ಬೆಳೆದ ಹುಡುಗಿಯರನ್ನ ಮದುವೆ ಆಗುವುದಕ್ಕಿಂತ ಬದುಕಿನ ಕಷ್ಟ ಅನುಭವಿಸಿದ ಬಡ ಹುಡುಗಿಯನ್ನ ಮದುವೆಯಾದರೆ ಲಾಭ ಹೆಚ್ಚು, ಸಂಸಾರ ಚೆನ್ನಾಗಿರತ್ತೆ ಅನ್ನುವ ಮಾತನ್ನ ನಿಮಗೆ ಹೇಳಿದ್ದೆ. ನಿಮ್ಮ ಮಗ ಬೇಕು ಅಂತಲೇ ನನ್ನ ಮಾತಿನ ಅರ್ಥವನ್ನ ಅಸಂಬದ್ಧವಾಗಿ ಹಿಗ್ಗಿಸಿ ನನ್ನ ಮನಸಲ್ಲಿ ಏನೋ ಕೆಟ್ಟ ಉದ್ದೇಶ ಇದೆ ಅಂದ. ನಿಮ್ಮ ಕಾಗದದಲ್ಲಿ ನೀವು ಬರೆದದ್ದನ್ನ ಓದಿ ಹಾಗನ್ನಿಸಿರಬಹುದು. ಇದು ಹಾಗಲ್ಲ ಅಂತ ನೀವು ಸಾಬೀತು ಮಾಡಿದರೆ ನನ್ನ ಮನಸಿಗೆ ಎಷ್ಟೋ ನಿರಾಳ ಆಗತ್ತೆ. ಹೇಳಿ, ನನ್ನ ಮಾತನ್ನ ಯಾವ ಅರ್ಥದಲ್ಲಿ ನಿಮ್ಮ ಮಗನಿಗೆ ಮುಟ್ಟಿಸಿದ್ದಿರಿ?’

‘ಮರೆತು ಹೋಗಿದೆ,’ ತಬ್ಬಿಬ್ಬಾಗಿದ್ದ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಹೇಳಿದಳು. ‘ನನಗೆ ಹೇಗೆ ಅರ್ಥವಾಯಿತೋ ಹಾಗೆ ಹೇಳಿದ್ದೆ. ರೋದ್ಯಾ ಅದನ್ನ ನಿಮ್ಮ ಹತ್ತಿರ ಹೇಗೆ ಹೇಳಿದನೋ ಗೊತ್ತಿಲ್ಲ. ಸ್ವಲ್ಪ ಹೆಚ್ಚು ಮಾಡಿ ಹೇಳಿದ್ದರೂ ಇರಬಹುದು.’

‘ನಿಮ್ಮ ಮಾತಿನಲ್ಲಿ ಅಂಥ ಸೂಚನೆ ಇರದಿದ್ದರೆ ಅವನು ಅಷ್ಟು ದೊಡ್ಡದು ಮಾಡತಿರಲಿಲ್ಲ.’

‘ಪೀಟರ್ ಪೆಟ್ರೊವಿಚ್ ನಿಮ್ಮ ಮಾತನ್ನ ನಾನಾಗಲೀ ನನ್ನ ಮಗಳಾಗಲೀ ತಪ್ಪಾಗಿ ತಿಳಿಯಲಿಲ್ಲ ಅನ್ನುವುದಕ್ಕೆ ನಾವು ಇಲ್ಲಿಗೆ ಬಂದಿರುವುದೇ ಸಾಕ್ಷಿ,’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಗಂಭೀರವಾಗಿ ನುಡಿದಳು.

‘ಸರಿಯಾಗಿ ಹೇಳಿದೆ, ಅಮ್ಮಾ!’ ದುನ್ಯಾ ಅಂದಳು.

‘ಹಾಗಾದರೆ ಈ ಮಾತಲ್ಲೂ ನಾನೇ ತಪ್ಪು,’ ಪೀಟರ್ ಪೆಟ್ರೊವಿಚ್ ಭಂಗಿತನಾಗಿ ಅಂದ.

‘ಪೀಟರ್ ಪೆಟ್ರೊವಿಚ್, ನೀವು ರೋಡಿಯಾನ್‍ ನನ್ನು ಬೈಯುತ್ತ ಇರುತ್ತೀರಿ. ನೀವೇ ಅವನ ಬಗ್ಗೆ ಸುಳ್ಳು ಮಾತನನ್ನು ಇವತ್ತು ಪತ್ರದಲ್ಲಿ ಬರೆದಿದ್ದಿರಿ,’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಧೈರ್ಯ ತಂದುಕೊಂಡು ಮಾತಾಡಿದಳು.

‘ಅಂಥ ಸುಳ್ಳೇನೂ ಬರೆದ ನೆನಪಿಲ್ಲ, ತಾಯೀ.’

‘ಬರೆದಿದ್ದೀಯ,’ ಪೀಟರ್ ಪೆಟ್ರೋವಿಚ್‍ ನತ್ತ ನೋಡದೆ ಮೊನಚು ದನಿಯಲ್ಲಿ ಮಾತಾಡಿದ ರಾಸ್ಕೋಲ್ನಿಕೋವ್. ‘ನಿನ್ನೆ ದಿನ ನಾನು ಅಪಘಾತಕ್ಕೆ ಗುರಿಯಾಗಿ ಸತ್ತ ಮನುಷ್ಯನ ಹೆಂಡತಿಗೆ ಸಹಾಯವಾಗಲೆಂದು ದುಡ್ಡು ಕೊಟ್ಟರೆ ಅವನ ಮಗಳಿಗೆ ಕೊಟ್ಟಿದ್ದೇನೆ ಅಂತ ಬರೆದಿದ್ದೀಯ. ಆ ಹುಡುಗಿಯನ್ನು ನಾನು ನೋಡಿದ್ದೇ ನಿನ್ನೆ. ನನ್ನ ಮನೆಯವರ ಜೊತೆ ಮನಸ್ತಾಪವಾಗಲೆಂದೇ ನೀನು ನಿನಗೆ ಪರಿಚಯವೇ ಇರದ ಹುಡುಗಿಯ ಬಗ್ಗೆ ಕೀಳಾಗಿ ಬರೆದಿದ್ದೀಯ. ಇದು ಚಾಡಿ ಹೇಳುವ ಕೀಳು ಬುದ್ಧಿ.’

‘ಕ್ಷಮಿಸಬೇಕು,’ ಕೋಪದಲ್ಲಿ ಸಿಡಿದು ಮಾತಾಡಿದ ಪೀಟರ್ ಪೆಟ್ರೊವಿಚ್. ‘ನೀನು ಹೇಗಿದ್ದೀಯ, ಏನು ಮಾಡತಾ ಇದೀಯ, ನಿನ್ನ ಗುಣ ಸ್ವಭಾವ ಹೇಗೆ, ನಿನ್ನ ಬಗ್ಗೆ ಏನ್ನಿಸಿತು ಅಂತ ನಿಮ್ಮ ತಾಯಿ, ತಂಗಿ ಕೇಳಿದ್ದರಿಂದ ವಿವರವಾಗಿ ಬರೆದೆ. ನಾನು ಬರೆದ ಪತ್ರದಲ್ಲಿ ಒಂದೇ ಒಂದು ಸತ್ಯವಲ್ಲದ ಸಾಲನ್ನು ತೋರಿಸು ನೋಡಣ! ನೀನು ಅವರಿಗೆ ದುಡ್ಡು ಕೊಟ್ಟೆ ಅನ್ನುವುದು ನಿಜವಲ್ಲವಾ, ಆ ಕುಟುಂಬದಲ್ಲಿ ಅಯೋಗ್ಯರಾದವರು ಯಾರೂ ಇಲ್ಲವಾ?’

‘ಹೇಳತೇನೆ, ಕೇಳು. ನಿನ್ನ ಹತ್ತಿರ ಬೇಕಾದಷ್ಟು ದುಡ್ಡಿರಬಹುದು, ನೀನು ಸದ್ಗುಣಗಳ ಸಂಪನ್ನನೇ ಆಗಿರಬಹುದು, ಆದರೂ ನೀನು ಬೈಗುಳ ಕಲ್ಲು ಎಸೆಯುತ್ತಿದ್ದೀಯಲ್ಲಾ ಆ ನತದೃಷ್ಟ ಹುಡುಗಿಯ ಕಿರುಬೆರಳಿಗೂ ಸಮವಲ್ಲ ನೀನು’

‘ಅಂದರೇ, ಆ ಹುಡುಗಿಯನ್ನ ನಿನ್ನ ತಾಯಿಗೆ, ತಂಗಿಗೆ ಪರಿಚಯ ಮಾಡಿಸಲು ತೀರ್ಮಾನ ಮಾಡಿದ್ದೀಯ ಅನ್ನು.’

‘ಆಗಲೇ ಪರಿಚಯ ಮಾಡಿಸಿದೇನೆ, ಅಷ್ಟೇ ಅಲ್ಲ, ಅಮ್ಮ ಮತ್ತೆ ನನ್ನ ತಂಗಿಯ ಮಧ್ಯ ಅವಳನ್ನ ಕೂರಿಸಿದ್ದೇನೆ, ತಿಳಕೋ.’

‘ರೋದ್ಯಾ!’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಉದ್ಗರಿಸಿದಳು.
ದುನ್ಯಾಳ ಮುಖ ಕೆಂಪಾಯಿತು. ರಝುಮಿಖಿನ್ ಹುಬ್ಬು ಗಂಟಿಕ್ಕಿದ. ಪೀಟರ್ ಪೆಟ್ರೊವಿಚ್ ಉದ್ಧಟನ ಹಾಗೆ ಕಹಿಯಾಗಿ ನಕ್ಕ.

‘ನೋಡಿದಿರಾ ಅವ್ದೋತ್ಯ ರೊಮನೋವ್ನಾ, ಇಲ್ಲಿ ಯಾವ ಥರದ ಹೊಂದಾಣಿಕೆ ಸಾಧ್ಯ, ಹೇಳಿ. ಈ ವಿಷಯ ವಿವರಿಸಿದ್ದಾಯಿತು, ಇಲ್ಲಿಗೆ ಇತ್ಯರ್ಥವಾಯಿತು ಎಂದು ಭಾವಿಸುತ್ತೇನೆ. ನಾನು ಹೊರಡತೇನೆ, ಮನೆಯವರ ಸಂತೋಷದ ಮಾತುಕತೆಗೆ, ರಹಸ್ಯಗಳ ವಿನಿಮಯಕ್ಕೆ ಅಡ್ಡಿಯಾಗುವುದಿಲ್ಲ,’ (ಕುರ್ಚಿಯಿಂದ ಎದ್ದು ಹ್ಯಾಟು ಎತ್ತಿಕೊಂಡ). ‘ಹೋಗತಾ ಒಂದು ಮಾತು ಹೇಳುತೇನೆ, ಇಂಥ ಭೇಟಿ, ಇಂಥ ರಾಜಿ ವ್ಯವಹಾರಗಳಿಗೆ ನನ್ನ ಕರೆಯಬೇಡಿ. ಈ ವಿಷಯಕ್ಕೆ ಸಂಬಂಧ ಪಟ್ಟಹಾಗೆ ಇದನ್ನೆಲ್ಲ ಹೇಳತಾ ಇರೋದು ನಿಮಗೆ ತಾಯೀ. ಯಾಕೆಂದರೆ ನನ್ನ ಪತ್ರ ನಿಮಗೆ, ನಿಮಗೆ ಮಾತ್ರ ಬರೆದದ್ದು ನಾನು.’

ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಬೇಸರಗೊಂಡಳು,

‘ನಮ್ಮನ್ನ ನಿಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕು ಅಂತ ನೋಡತಿದೀರ, ಪೀಟರ್ ಪೆಟ್ರೊವಿಚ್. ನಿಮ್ಮ ಆಸೆಯನ್ನು ಯಾಕೆ ನೆರವೇರಿಸಲಾಗಲಿಲ್ಲ ಅನ್ನುವುದಕ್ಕೆ ದುನ್ಯಾ ಕಾರಣ ಹೇಳಿದಳು. ಅವಳ ಉದ್ದೇಶ ಒಳ್ಳೆಯದಾಗಿತ್ತು. ಅಲ್ಲದೆ ನೀವು ನನಗೆ ಪತ್ರ ಬರೆಯುವಾಗ ಆಜ್ಞೆ ಮಾಡುವ ರೀತಿಯಲ್ಲಿತ್ತು ಅದು. ನಿಮ್ಮ ಮಾತನ್ನೆಲ್ಲ ಆಜ್ಞೆ ಅಂತಲೇ ತಿಳಿಯಬೇಕಾ ನಾನು? ನೀವು ನಮ್ಮ ಬಗ್ಗೆ ಸೂಕ್ಷ್ಮವಾಗಿ, ಕಾಳಜಿಯಿಂದ ನಡಕೊಳ್ಳಬೇಕು. ಯಾಕೆಂದರೆ ನಾವು ಎಲ್ಲಾನೂ ಬಿಟ್ಟು ಇಲ್ಲಿಗೆ ಬಂದು ನಿಮಗೆ ಒಪ್ಪಿಸಿಕೊಂಡಿದೇವೆ, ನಿಮ್ಮ ಅಧೀನಕ್ಕೆ ಆಗಲೇ ಒಳಪಟ್ಟಿದೇವೆ,’ ಅಂದಳು.

‘ಆ ಮಾತು ಪೂರಾ ನಿಜ ಅಲ್ಲ. ಅದರಲ್ಲೂ ಮಾರ್ಫಾ ನಿಮಗೆ ನಿಮಗೆ ಮೂರು ಸಾವಿರ ರೂಬಲ್ ಹಣ ಬಿಟ್ಟು ಹೋಗಿದಾಳೆ ಅಂತ ಈಗ ತಾನೇ ಗೊತ್ತಾಯಿತಲ್ಲ. ನೀವು ನನ್ನನ್ನ ಹೀಗೆ ಬೇರೆ ಥರ ಮಾತಾಡಿಸತಾ ಇರೋದಕ್ಕೆ ಅದೇ ಕಾರಣ ಅನಿಸತ್ತೆ,’ ಕುಟುಕುವ ರೀತಿಯಲ್ಲಿ ಹೇಳಿದ ಪೀಟರ್ ಪೆಟ್ರೊವಿಚ್.

‘ನಿಮ್ಮ ಮಾತು ಕೇಳಿದರೆ ನಾವು ಕೈಲಾಗವರ ಹಾಗೇ ಇರುತ್ತೇವೆ, ನಿಮ್ಮ ಹಂಗಿಗೆ ಬೀಳುತ್ತೇವೆ ಅಂತ ನೀವು ತಿಳಿದಿದ್ದಿರಿ ಅಂದುಕೊಳ್ಳಬೇಕಾಗತ್ತೆ,’ ದುನ್ಯಾ ರೇಗಿ ಹೇಳಿದಳು.

‘ಅಂದುಕೊಳ್ಳಿ ನನಗೇನು. ಆ ಸ್ವಿದ್ರಿಗೈಲೇವ್ ನಿಮ್ಮ ಅಣ್ಣನ ಹತ್ತಿರ ಗುಟ್ಟು ಹೇಳಿದ್ದಾನೆ, ಅದನ್ನು ಕೇಳಿ ನಿಮ್ಮಣ್ಣನಿಗೆ ಬಲ ಬಂದಿದೆ, ನಿಮಗೂ ಖುಷಿ ಆಗಿದೆ ಅನ್ನಿಸತ್ತೆ.’

‘ಅಯ್ಯೋ ದೇವರೇ!’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.
ರಝುಮಿಖಿನ್ ಕುಳಿತ ಕುರ್ಚಿಯಲ್ಲೇ ಕೊಸರಾಡುತ್ತಿದ್ದ.

‘ತಂಗೀ, ಇದು ನಿನಗೇ ನಾಚಿಕೆಗೇಡು, ಅಲ್ಲವಾ?’ ರಾಸ್ಕೋಲ್ನಿಕೋವ್ ಕೇಳಿದ.

‘ಹೌದಣ್ಣ, ನಾಚಿಕೆ ಆಗಿದೆ,’ ಅಂದು ಪೀಟರ್ ಪೆಟ್ರೊವಿಚ್‍ ನತ್ತ ತಿರುಗಿ ಕೋಪದಲ್ಲಿ ದುಮುಗುಡುತ್ತ, ‘ಗೆಟ್ ಔಟ್,’ ಅಂದಳು.
ಹೀಗೆ ಮಾತು ಮುಗಿದೀತು ಅನ್ನುವ ನಿರೀಕ್ಷೆಯೇ ಇರಲಿಲ್ಲ ಪೀಟರ್ ಪೆಟ್ರೊವಿಚ್‍ ಗೆ ಅವನಿಗೆ ತನ್ನ ಅಧಿಕಾರದ ಮೇಲೆ ನಂಬಿಕೆ ಇತ್ತು. ತನಗೆ ಬಲಿಯಾಗಲಿರುವವರು ಅಸಹಾಯಕರಾಗಿಯೇ ಇರುತ್ತಾರೆ ಎಂದೂ ನಂಬಿಕೊಂಡಿದ್ದ. ನಡೆದದ್ದನ್ನು ನಿಜವೆಂದು ನಂಬಲು ಆಗಿರಲಿಲ್ಲ ಅವನಿಗೆ. ಪೀಟರ್ ಪೆಟ್ರೊವಿಚ್‍ ನ ಮುಖ ಬಣ್ಣ ಕಳೆದುಕೊಂಡಿತು, ತುಟಿ ನಡುಗಿದವು.

‘ಅವದೋತ್ಯ ರೊಮನೋವ್ನ, ನಿನ್ನ ಹತ್ತಿರ ಈ ಮಾತೆಲ್ಲ ಕೇಳಿ ನಿಮ್ಮ ಹೊಸ್ತಿಲು ದಾಟಿದರೆ, ಹೇಳತೇನೆ ಕೇಳು, ನಾನು ಮತ್ತೆ ವಾಪಸ್ಸು ಬರುವವನಲ್ಲ. ಚೆನ್ನಾಗಿ ಯೋಚನೆ ಮಾಡಿ ಹೇಳು. ನನ್ನ ಮಾತು ಅಂದರೆ ಮಾತು,’ ಅಂದ ಪೀಟರ್ ಪೆಟ್ರೊವಿಚ್.

‘ಎಂಥ ಸೊಕ್ಕಿನ ಮಾತು! ನೀವು ವಾಪಸ್ಸು ಬರುವುದು ನನಗೆ ಬೇಕಾಗಿಲ್ಲ!’ ದುನ್ಯ ತಟ್ಟನೆ ಎದ್ದು ನಿಂತು ಗಟ್ಟಿಯಾಗಿ ಹೇಳಿದಳು.

‘ಏನು? ಅಷ್ಟೇನಾ, ಹಾಗಾದರೆ!’ ಕೊನೆಯ ಕ್ಷಣದವರೆಗೂ ಹೀಗಾಗಬಹುದೆಂಬ ಕಲ್ಪನೆಯೇ ಇರದಿದ್ದ ಪೀಟರ್ ಪೆಟ್ರೊವಿಚ್‍ ಗೆ ಮಾತಿನ ಎಳೆ ತಪ್ಪಿ ಹೋಗಿತ್ತು.

‘ಅಷ್ಟೇ ಹಾಗಾದರೆ. ತಿಳಿದಿರಲಿ ಅವ್ದೋತ್ಯ ರೊಮನೋವ್ನಾ, ನಾನು ನಿಮ್ಮ ಮೇಲೆ ದೂರು ಕೊಡಬಹುದು.’

‘ಹೀಗೆ ಅವಳ ಹತ್ತಿರ ಮಾತಾಡುವ ಅಧಿಕಾರ ಏನಿದೆ ನಿನಗೆ?’ ಅವನ ಮಾತನ್ನು ತಡೆಯುತ್ತ ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಕೋಪದಲ್ಲಿ ಹೇಳಿದಳು. ‘ಏನಂತ ದೂರು ಕೊಡುತ್ತೀಯ? ಅವಳ ಮೇಲೆ ನಿನಗೆ ಯಾವ ಹಕ್ಕು ಇದೆ? ನನ್ನ ದುನ್ಯಾನ ನಿನ್ನಂಥವನಿಗೆ ಕೊಡತೇನೆ ನಾನು ಅಂದುಕೊಂಡಿದೀಯಾ? ಹೊರಡು ಇಲ್ಲಿಂದ. ನಿನ್ನ ಮಾತು ಕೇಳಿ ದಾರಿ ತಪ್ಪಿದೆವು. ಮುಖ್ಯವಾಗಿ ನನ್ನದೇ ತಪ್ಪು…’

ಪೀಟರ್ ಪೆಟ್ರೊವಿಚ್ ಕೋಪದಲ್ಲಿ ಹುಚ್ಚನಾಗಿದ್ದ. ಆದರೂ ಪುಲ್ಚೇರಿಯ ಅಲೆಕ್ಸಾಂಡ್ರೋವ್ನ, ‘ನೀವು ಮಾತುಕೊಟ್ಟಿದ್ದಿರಿ, ಈಗ ಕೊಟ್ಟ ಮಾತು ತಪ್ಪುತಿದ್ದೀರಿ… ಅಲ್ಲದೇ ನಿಮ್ಮ ಮಾತು ನಂಬಿ ನನಗೆ ಖರ್ಚೂ ಸಾಕಷ್ಟಾಗಿದೆ…’

ಈ ಕೊನೆಯ ಮಾತು ಪೀಟರ್ ಪೆಟ್ರೊವಿಚ್‍ ನ ಸ್ವಭಾವಕ್ಕೆ ಎಷ್ಟು ಚೆನ್ನಾಗಿ ಹೊಂದುತ್ತಿತ್ತೆಂದರೆ ಕೋಪದಿಂದ ಕೆಂಪಾಗಿ, ಸಿಟ್ಟು ತಡೆದುಕೊಳ್ಳಲು ಹೆಣಗುತ್ತಿದ್ದ ರಾಸ್ಕೋಲ್ನಿಕೋವ್ ಫಕ್ಕನೆ ನಕ್ಕುಬಿಟ್ಟ. ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಮಾತ್ರ ತಾಳ್ಮೆ ಕಳಕೊಂಡಳು.
‘ಖರ್ಚು? ಯಾವ ಖರ್ಚು! ನಮ್ಮ ಪೆಟ್ಟಿಗೆ ಸಾಗಿಸುವುದಕ್ಕೆ ಕೊಟ್ಟದ್ದಾ. ಕಂಡಕ್ಟರು ಅದನ್ನು ಮುಫತ್ತಾಗೇ ಸಾಗಿಸಿದ! ನಾವು ನಿನ್ನನ್ನು ಮಾತಿಗೆ ಕಟ್ಟು ಹಾಕಿದೆವಾ? ದೇವರೇ! ಪೀಟರ್ ಪೆಟ್ರೊವಿಚ್, ಎಚ್ಚರ ಇಟ್ಟುಕೊಂಡು ಮಾತಾಡು. ನಮ್ಮನ್ನ ಮಾತಿಗೆ ಕಟ್ಟು ಹಾಕಿರೋದು ನೀನು, ನಿನ್ನನ್ನ ನಾವು ಕಟ್ಟಿ ಹಾಕಿಲ್ಲ.’

‘ಹೊರಡತೇನೆ, ತಾಯೀ! ಕೊನೆಯ ಮಾತು ಹೇಳಿಬಿಟ್ಟು ಹೋಗತೇನೆ!’ ಕೋಪದಿಂದ ಸ್ಥಿಮಿತ ಕಳೆದುಕೊಂಡಿದ್ದ ಅವನು. ‘ನಿನ್ನ ಬಗ್ಗೆ ಊರೆಲ್ಲ ಮಾತಾಡಿಕೊಳ್ಳತಾ ಇದ್ದಾಗ, ನಿನ್ನ ಹೆಸರು ಕೆಟ್ಟಿದ್ದಾಗ, ನಿನ್ನ ಕೈ ಹಿಡಿಯುವುದಕ್ಕೆ ಒಪ್ಪಿದೆ ಅನ್ನುವುದನ್ನ ನಿನ್ನ ತಾಯಿ ಮರೆತಿದ್ದಾಳೆ! ನಿನಗೋಸ್ಕರ ನಾನು ಜನರ ಮಾತನ್ನೂ ಲೆಕ್ಕಕ್ಕೆ ತಗೊಳ್ಳಲಿಲ್ಲ. ನನ್ನ ಕೈ ಹಿಡಿದರೆ ನಿನಗೆ ಒಳ್ಳೆಯ ಹೆಸರು ಬರತ್ತೆ, ಮರ್ಯಾದೆ ಸಿಗತ್ತೆ ಹಾಗಾಗಿ ನೀನು ನನ್ನ ಬಗ್ಗೆ ಕೃತಜ್ಞಳಾಗಿರತೀಯ ಅಂತ ಅಂದುಕೊಂಡಿದ್ದೆ. ನನ್ನ ಕಣ್ಣು ಈಗ ತೆರೆಯಿತು. ಜನದ ಮಾತಿಗೆ ಕಿವಿ ಕೊಡದೆ ನಾನು ಆತುರಪಟ್ಟೆ ಅನ್ನಿಸತ್ತೆ….’

‘ಇವನಿಗೆ ತಲೆ ಕೆಟ್ಟಿದೆಯಾ, ಏನು ಕಥೆ?’ ಕುರ್ಚಿಯಿಂದೇಳುತ್ತ ಕೈ ಎತ್ತಲು ಸಿದ್ಧನಾಗಿ ರಝುಮಿಖಿನ್ ಗಟ್ಟಿಯಾಗಿ ಕೇಳಿದ.

‘ನೀಚ, ದುಷ್ಟ ನೀನು!’ ಅಂದಳು ದುನ್ಯಾ.

‘ಸುಮ್ಮನಿರು, ಮಾತಾಡಬೇಡ!’ ಅನ್ನುತ್ತ ರಾಸ್ಕೋಲ್ನಿಕೋವ್ ತಡೆದ. ಪೀಟರ್ ಪೆಟ್ರೊವಿಚ್‍ ನ ತೀರ ಸಮೀಪಕ್ಕೆ ಹೋಗಿ ನಿಂತ.

‘ಗೆಟ್ ಔಟ್!’ ಮೆಲುದನಿಯಲ್ಲಿ ಸ್ಪಷ್ಟವಾಗಿ ಹೇಳಿದ. ‘ಇನ್ನೊಂದೇ ಒಂದು ಅಕ್ಷರ ಮಾತಾಡಿದರೂ..’
ಪೀಟರ್ ಪೆಟ್ರೊವಿಚ್ ಅವನನ್ನು ಕೆಲವು ಕ್ಷಣ ದುರುಗುಟ್ಟಿ ನೋಡಿದ. ಮುಖ ಬಣ್ಣಗೆಟ್ಟಿತ್ತು, ಮತ್ಸರದಿಂದ ವಿಕಾರವಾಗಿತ್ತು, ಬೆನ್ನು ತಿರುಗಿಸಿ ಹೊರಟುಬಿಟ್ಟ. ಆಗಿದ್ದಕ್ಕೆಲ್ಲ ರಾಸ್ಕೋಲ್ನಿಕೋವ್ ಕಾರಣ ಎಂದು ಬೈದುಕೊಂಡು, ಅವನ ಮೇಲೆ ಮತ್ತಾರಿಗೂ ಇರದಷ್ಟು ಮತ್ಸರ, ದ್ವೇಷ ಹೊಟ್ಟೆಯಲ್ಲಿಟ್ಟುಕೊಂಡು ಹೊರಟು ಹೋದ. ವಿಶೇಷವೆಂದರೆ ಮೆಟ್ಟಿಲಿಳಿಯುತ್ತಿರುವಾಗ ಕೂಡ ಬರೀ ಹೆಂಗಸರನ್ನಷ್ಟೇ ಆದರೆ ಮತ್ತೆ ರಿಪೇರಿ ಮಾಡಿಕೊಳ್ಳಬಹುದು ಅಂತ ಕಲ್ಪಸಿಕೊಂಡೇ ಹೆಜ್ಜೆ ಹಾಕಿದ.