ಸುಮ್ಮನೆ ನಿಂತ. ಚಿಂತೆಯಲ್ಲಿ ಮುಳುಗಿದ್ದ. ಅವಮಾನದ್ದು ಅನ್ನಿಸುವಂಥ ವಿಚಿತ್ರವಾದ, ಅರ್ಥವಿರದ ಅರ್ಧ ನಗು ತುಟಿಗಳ ಮೇಲೆ ಸುಳಿದಾಡುತ್ತಿತ್ತು. ಕೊನೆಗೆ ಹ್ಯಾಟು ಎತ್ತಿಕೊಂಡು ನಿಶ್ಶಬ್ದವಾಗಿ ರೂಮಿನಿಂದಾಚೆ ಬಂದ. ಚಿಂತೆಗಳು ಒಂದರೊಳಗೊಂದು ಕಲೆಸಿಹೋಗಿದ್ದವು. ಚಿಂತೆ ಮಾಡಿಕೊಂಡೇ ಗೇಟಿನಿಂದಾಚೆಗೆ ಹೋದ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಆರನೆಯ ಅಧ್ಯಾಯ

 

‘ನಂಬಕ್ಕಾಗಲ್ಲ! ನಂಬಲ್ಲ! ನಂಬಲ್ಲಾ ನಾನು!’ ಗೊಂದಲಗೊಂಡಿದ್ದ ರಝುಮಿಖಿನ್ ಮತ್ತೆ ಮತ್ತೆ ಹೀಗನ್ನುತ್ತ ರಾಸ್ಕೋಲ್ನಿಕೋವ್‍ ನ ವಾದವನ್ನು ಖಂಡಿಸಲು ಪ್ರಯತ್ನಪಡುತ್ತಿದ್ದ. ಅವರು ಆಗಲೇ ಬಕಲೇವ್ ವಸತಿಗೃಹದ ಹತ್ತಿರ ಬಂದಿದ್ದರು. ಪುಲ್ಚೇರಿಯ ಅಲೆಕ್ಸಾಂಡ್ರಿಯ, ದುನ್ಯಾ ಅವರಿಗಾಗಿ ಬಹಳ ಹೊತ್ತಿನಿಂದ ಕಾಯುತ್ತಿದ್ದರು. ಮಾತಿನ ಬಿಸಿ ಏರಿ ರಝುಮಿಖಿನ್ ಹೆಜ್ಜೆ ಹೆಜ್ಜೆಗೂ ರಸ್ತೆಯ ಮಧ್ಯೆಯೇ ನಿಂತುಬಿಡುತ್ತಿದ್ದ. ತಾವು ಆ ವಿಷಯದ ಬಗ್ಗೆ ಮೊಟ್ಟಮೊದಲ ಬಾರಿಗೆ ಮಾತಾಡುತ್ತಿದ್ದೇವೆ ಎಂದು ಉದ್ರಿಕ್ತನಾಗಿದ್ದ, ಮುಜುಗರಪಡುತ್ತಿದ್ದ.

‘ಬೇಡ, ಬಿಡು!’ ರಾಸ್ಕೋಲ್ನಿಕೋವ್ ತಣ್ಣಗೆ ಉಪೇಕ್ಷೆಯ ನಗು ನಕ್ಕ. ‘ಮಾಮೂಲಿನ ಹಾಗೆ ನೀನು ಏನೂ ಗಮನಿಸಲಿಲ್ಲ, ನಾನು ಮಾತ್ರ ಪ್ರತಿಮಾತನ್ನೂ ತೂಕ ಹಾಕಿ ನೋಡುತಿದ್ದೆ,’ ಅಂದ.

‘ನಿನಗೆ ಅನುಮಾನ ಜಾಸ್ತಿ, ಅದಕ್ಕೆ… ಹ್ಞೂಂ… ಯಾಕೆ… ಯಾಕೆ… ಪೋರ್ಫಿರಿಯ ಮಾತಿನ ದನಿ ವಿಚಿತ್ರವಾಗಿತ್ತು… ಅದರಲ್ಲೂ ಆ ದುಷ್ಟ ಝಮ್ಯೊತೋವ್! ನೀನಂದಿದ್ದು ಸರಿ, ಅವನ ಮನಸ್ಸಲ್ಲಿ ಏನೋ ಇದೆ – ಯಾಕೆ? ಯಾಕೆ?’

‘ರಾತ್ರಿಯೆಲ್ಲ ಯೋಚನೆ ಮಾಡಿರಬೇಕು ಅವನು.’

‘ಹಾಗಲ್ಲವೇ ಅಲ್ಲ. ಅವರಿಗೆ ಇಂಥ ತಲೆತಿರುಕ ಐಡಿಯ ಬಂದಿದ್ದರೆ ಅದು ಗೊತ್ತಾಗದ ಹಾಗೆ ಹುಷಾರಾಗಿರುತ್ತಿದ್ದರು, ತಮ್ಮ ಹತ್ತಿರ ಇರುವ ಇಸ್ಪೀಟೆಲೆ ಯಾವುದು ಅಂತ ಗೊತ್ತಾಗದ ಹಾಗೆ ಬಚ್ಚಿಟ್ಟುಕೊಂಡಿರುತಿದ್ದರು, ಹೀಗೆ ಬೇಕಾಬಿಟ್ಟಿ ಮಾತಾಡತಿರಲಿಲ್ಲ!’ ಅಂದ ರಝುಮಿಖಿನ್.

‘ಅವರ ಹತ್ತಿರ ಪುರಾವೆ, ನಿಜವಾದ ಪುರಾವೆ ಇದ್ದಿದ್ದರೆ, ಅಥವಾ ಬಲವಾದ ಸಂಶಯವಾದರೂ ಇದ್ದಿದ್ದರೆ ಆಗ ತಮ್ಮ ಆಟ ಬಚ್ಚಿಟ್ಟುಕೊಳ್ಳಕ್ಕೆ ನೋಡತಿದ್ದರು, ಸರಿಯಾದ ಹೊತ್ತು ಬಂದಾಗ ಶೋ ಮಾಡತಿದ್ದರು (‘ಸಂಶಯ ಇದ್ದಿದ್ದರೆ ನನ್ನ ರೂಮು ಯಾವತ್ತೋ ತಪಾಸಣೆ ಮಾಡತಿದ್ದರು!’ ಅಂದುಕೊಂಡ) ಅವರ ಹತ್ತಿರ ಪುರಾವೆ ಇಲ್ಲ. ಬಿಸಿಲುಗುದುರೆ ಸವಾರಿ ಮಾಡುತ್ತಿದ್ದಾರೆ. ಹೀಗೂ ಸರಿ ಹಾಗೂ ಸರಿ, ಅಸ್ಪಷ್ಟವಾದ ಯೋಚನೆ. ಅದಕ್ಕೇ ಉದ್ಧಟತನ ತೋರುತ್ತ ಗೊಂದಲ ಹುಟ್ಟಿಸಿ ನಾನೇನಾದರೂ ಎಡವುತ್ತೇನೋ ಅಂತ ನೋಡುತ್ತಿದ್ದಾರೆ. ಪುರಾವೆ ಇಲ್ಲ ಅಂತ ಅವನಿಗೆ ಸಿಟ್ಟು ಬಂದಿರಬಹುದು, ಆ ಸಿಟ್ಟು ಹೀಗೆ ಹೊರಕ್ಕೆ ಬಂದಿರಬಹುದು. ಅಥವಾ ಅವನ ಮನಸ್ಸಲ್ಲಿ ಏನೋ ಇರಬೇಕು… ಬಹಳ ಬುದ್ಧಿವಂತ… ತನಗೆ ಎಲ್ಲ ಗೊತ್ತು ಅಂತ ತೋರಿಸಿಕೊಂಡು ನನ್ನ ಹೆದರಿಸಿರಬಹುದು… ಇದು ಸೈಕಾಲಜಿ, ಬ್ರದರ್… ಸಾಕು! ಹೀಗೆಲ್ಲ ಮಾತಾಡಕ್ಕೆ ಅಸಹ್ಯ ಆಗತ್ತೆ!’ ಅಂದ ರಾಸ್ಕೋಲ್ನಿಕೋವ್.

‘ಅವಮಾನ, ಅವಮಾನ ಇದು! ನೀನು ನನಗೆ ಚೆನ್ನಾಗಿ ಗೊತ್ತು! ಆದರೆ… ನಾವು ಈ ವಿಷಯ ಮೊದಲನೆ ಸಾರಿ ಹೀಗೆ ಓಪನ್ನಾಗಿ ಮಾತಾಡತಿದೇವೆ. ಸ್ವಲ್ಪ ದಿನದಿಂದ ಅವರ ಮನಸ್ಸಲ್ಲಿ ಇಂಥ ಐಡಿಯ, ಅನುಮಾನದ ಹುಳ, ಸಂಶಯದ ಮೊಳಕೆ ನಾನೂ ಗಮನಿಸಿದ್ದೆ. ಸಂಶಯದ ಬೇರು ಎಲ್ಲಿದೆ? ನನಗೆ ಎಂಥಾ ಕೆಟ್ಟ ಕೋಪ ಬಂದಿತ್ತು ಗೊತ್ತಾ! ಅಲ್ಲಾ, ಸ್ಟೂಡೆಂಟು, ಬಡತನಕ್ಕೆ ಸಿಕ್ಕಿ ಜಜ್ಜಿ ಹೋದವನು, ಹೈಪೊಕಾಂಡ್ರಿಯ ಬಂದು ನರಳತಾ ಇರುವವನು, ಸನ್ನಿ ಹಿಡಿದವನು, ರಕ್ಷಣೆ ಇಲ್ಲದವನು, ತನ್ನ ಬೆಲೆ ಏನು ಅಂತ ತಿಳಿದವನು, ಆರು ತಿಂಗಳಿಂದ ಯಾರನ್ನೂ ನೋಡದೆ ಮೂಲೆ ಹಿಡಿದಿದ್ದವನು, ಚಿಂದಿ ಬಟ್ಟೆ, ಹರಕಲು ಶೂ ತೊಟ್ಟವನು, ಲೋಕಲ್ ಪೋಲೀಸಿನವರ ಮುಂದೆ ಬಂದು ನಿಂತಾ ಅಂತ, ಅವರು ಮಾಡೋ ಅ(ಬಹಳ ಒಳ್ಳೆಯದಾಯಿತು, ನನಗಂತೂ ಖುಷಿ! ನಾನಂತೂ ಒಪ್ಪಿಕೊಳ್ಳತೇನೆ) ವಮಾನ ಸಹಿಸಿಕೊಳ್ಳಬೇಕಾ? ಅನಿರೀಕ್ಷಿತವಾಗಿ ಆ ದುಷ್ಟ ಕೋರ್ಟು ಕೌನ್ಸಿಲರು ಚೆಬರೋವ್‍ ಗೆ ಸಿಕ್ಕ ಸಾಲದ ಪ್ರಾಮಿಸರಿ ಭಾರ ಹೊತ್ತಿದಾನೆ, ದುರ್ವಾಸನೆ, ನಲವತ್ತು ಡಿಗ್ರಿ ಸೆಖೆ, ದುರ್ವಾಸನೆ ಬಣ್ಣ, ಜನದ ಗುಂಪು, ಹಿಂದಿನ ದಿನ ನೋಡಿದ್ದ ಮುದುಕಿ ಕೊಲೆಯಾದ ಕಥೆ ಇವೆಲ್ಲ ಸೇರಿ ಬರೀ ಹೊಟ್ಟೆಯಲ್ಲಿದ್ದವನು ತಲೆ ತಿರುಗಿ ಬೀಳದೆ ಇನ್ನೇನಾಗತ್ತೆ! ಎಂಥಾವರೂ ಎಚ್ಚರ ತಪ್ಪಿ ಬೀಳತಾರೆ! ದೆವ್ವ ಹಿಡೀಲಿ! ಸುಮ್ಮನೆ ಇರಬೇಡ ರೋದ್ಯ! ನಿನ್ನ ಪರಿಸ್ಥಿತಿಯಲ್ಲಿ ಏನನ್ನಿಸತ್ತೆ ಗೊತ್ತು ನನಗೆ. ಜೋರಾಗಿ ನಕ್ಕುಬಿಡು, ಇನ್ನೂ ಒಳ್ಳೆಯದು ಅಂದರೆ ಅವರ ಮುಖದ ಮೇಲೆ ಉಗಿ! ಹತ್ತು ಏಟು ಹಾಕು—ಆಗಲೇ ಈ ಕೆಲಸ ಮಾಡಿದ್ದರೆ ಕಥೆ ಮುಗಿಯುತ್ತಿತ್ತು! ಉಗೀ ಅವರ ಮುಖಕ್ಕೆ! ಎಲ್ಲಿ ನಗು, ನೋಡಣ!’

‘ಚೆನ್ನಾಗಿ ವಿವರಿಸಿದ! ಪರವಾಗಿಲ್ಲ!’ ಅಂದುಕೊಂಡ ರಾಸ್ಕೋಲ್ನಿಕೋವ್.

‘ಉಗಿಯುವುದು? ಅವರಿಗೆ? ನಾಳೆ ಇನ್ನೊಂದು ವಿಚಾರಣೆ ಎದುರಿಸಬೇಕಾಗತ್ತೆ! ಅವರಿಗೆ ಎಲ್ಲ ಹೇಳಿಕೊಂಡು ಕೂರುವುದಕ್ಕಾಗತ್ತೇನು? ಈಗಲೇ ಸಾಕಾಗಿಹೋಗಿದೆ. ನಿನ್ನೆ ಹೆಂಡದಂಗಡಿಯಲ್ಲಿ ಆ ಝಮ್ಯೊತೋವ್‍ ನ ಮಟ್ಟಕ್ಕೆ ಇಳಿದು ಮಾತಾಡಿದ್ದೇ ಅಸಹ್ಯ ಆಗಿದೆ…’ ಅಂದ ರಾಸ್ಕೋಲ್ನಿಕೋವ್.

‘ದೆವ್ವ ಹಿಡೀಲಿ! ಪೋರ್ಫಿರಿ ಹತ್ತಿರ ಮಾತಾಡತೇನೆ. ಅವನು ನನಗೆ ಸಂಬಂಧೀಕ. ಆ ಸಲುಗೆಯಲ್ಲಿ ಅವನನ್ನ ಹಿಡಿದು ಹಾಕತೇನೆ. ಇಂಥ ಅನುಮಾನದ ಬೇರು ಎಲ್ಲಿದೆ ಹೇಳಲಿ. ಇನ್ನ ಆ ಝಮ್ಯತೋವ್….’

‘ಕೊನೇಗೂ ಅರ್ಥ ಆಯಿತು ಇವನಿಗೆ!’ ಅಂದುಕೊಂಡ ರಾಸ್ಕೋಲ್ನಿಕೋವ್.

‘ತಾಳು!’ ರಝುಮಿಖಿನ್ ತಟ್ಟನೆ ನಿಂತು ರಾಸ್ಕೋಲ್ನಿಕೋವ್‍ ನ ಭುಜ ಹಿಡಿದು ಹೇಳಿದ. ‘ತಾಳು, ತಪ್ಪು ಮಾಡುತ್ತಿದ್ದೀಯ! ಈಗ ಹೊಳೆಯಿತು. ಪೂರಾ ತಪ್ಪು! ನೋಡು, ಇದೆಂಥ ಬೋನಿಗೆ ಬೀಳಿಸುವ ಆಟ? ಕೆಲಸದವರ ಬಗ್ಗೆ ಕೇಳಿದ ಪ್ರಶ್ನೆ ಯಾಮಾರಿಸುವುದಕ್ಕೆ ಕೇಳಿದ್ದು ಅನ್ನುತ್ತೀಯಲ್ಲಾ – ನೀನು ಆ ಕೆಲಸ ಮಾಡಿದ್ದರೆ ಅಪಾರ್ಟ್‍ಮೆಂಟಿಗೆ ಬಣ್ಣ ಬಳೀತಿದ್ದರು, ಕೆಲಸದವರಿದ್ದರು ಅಂತ ಹೇಳುತ್ತೀಯೇನು? ಅದಕ್ಕೆ ಬಲಾಗಿ ನಾನು ಏನೂ ನೋಡಿಲ್ಲ ಅನ್ನುತ್ತೀಯ! ಯಾರಾದರೂ ತಮ್ಮ ವಿರುದ್ಧ ತಾವೇ ಸಾಕ್ಷಿ ಹೇಳುತ್ತಾರೇನು?’

‘ನಾನು ಆ ಕೆಲಸ ಮಾಡಿದ್ದಿದ್ದರೆ ಹೇಳಿರುತ್ತಿದ್ದೆ, ಖಾಲಿ ಮನೇನೂ ನೋಡಿದೆ, ಕೆಲಸದವರನ್ನೂ ನೋಡಿದೆ ಅನ್ನುತ್ತಿದ್ದೆ.’ ಅಂದ ರಾಸ್ಕೋಲ್ನಿಕೋವ್. ಹಾಗನ್ನುವಾಗಲೇ ಅಸಹ್ಯಪಟ್ಟುಕೊಂಡ.

‘ನಮ್ಮ ವಿರುದ್ಧ ನಾವೇ ಯಾಕೆ ಹೇಳಬೇಕು?’

‘ರೈತರು, ಅಥವಾ ತೀರ ಅನುಭವ ಇಲ್ಲದ ಅಡ್ಡಕಸುಬಿಗಳು ಮಾತ್ರ ಎಲ್ಲ ಪ್ರಶ್ನೆಗೂ ಇಲ್ಲ, ನೋಡಿಲ್ಲ, ಗೊತ್ತಿಲ್ಲ ಅನ್ನುತ್ತಾರೆ. ಸ್ವಲ್ಪವಾದರೂ ಬುದ್ಧಿ ಬೆಳೆದಿರುವವನು, ಒಂದಿಷ್ಟಾದರೂ ಅನುಭವ ಇರುವವನು ಅಲ್ಲಗಳೆಯಲಾಗದ ಹೊರಗಿನ ಸಂಗತಿಗಳನ್ನ ಎಷ್ಟು ಸಾಧ್ಯವೋ ಅಷ್ಟು ಒಪ್ಪುತಾನೆ, ಅವಕ್ಕೆಲ್ಲ ಊಹಿಸಲಾಗದಂತ ಬೇರೆಯದೇ ವಿವರಣೆ, ಅವರಿಗೆ ಬೇರೆಯದೇ ಅರ್ಥ ಕೊಡುವಂಥ ವಿವರಣೆ, ಕೊಡುತ್ತಾನೆ. ಪೋರ್ಫಿರಿಯಂತೂ ನಾನು ಹೀಗೇ ಉತ್ತರ ಹೇಳತೇನೆ, ವಾಸ್ತವವನ್ನು ಒಪ್ಪಿದೆ ಅನ್ನುವ ಹಾಗೆ ತೋರಿಸಿಕೊಂಡು ಬೇರೆಯದೇ ವಿವರಣೆ ಯೋಚನೆ ಮಾಡುತ್ತಿರುತ್ತೇನೆ ಅಂತ ಊಹಿಸಿರುತ್ತಾನೆ..’

‘ಆದರೆ ನೀನು ಅವರನ್ನ ನೋಡಿದೇನೆ ಅಂದ ತಕ್ಷಣ ಎರಡು ದಿನ ಮೊದಲು ಅಲ್ಲಿ ಕೆಲಸಗಾರರು ಇರಲಿಲ್ಲ, ಹಾಗಾಗಿ ಕೊಲೆಯಾದ ದಿನವೇ ಏಳು-ಎಂಟು ಗಂಟೆಯ ಮಧ್ಯೆ ನೀನು ಅಲ್ಲಿಗೆ ಹೋಗಿದ್ದೆ ಅನ್ನತಾನೆ. ಬಹಳ ಸುಲಭವಾಗಿ ತೊಡರುಗಾಲು ಕೊಟ್ಟು ಬೀಳಿಸುತ್ತಾನೆ.’

‘ಅವನು ಅದೇ ಲೆಕ್ಕ ಹಾಕಿದ್ದ. ನನಗೆ ಯೋಚನೆ ಮಾಡಕ್ಕೆ ಸಮಯ ಇರಲ್ಲ, ಆತುರವಾಗಿ ಉತ್ತರ ಕೊಡುತ್ತೇನೆ, ಅಥವಾ ಎರಡು ದಿನ ಮೊದಲು ಕೆಲಸಗಾರರು ಅಲ್ಲಿರಲಿಲ್ಲ ಅನ್ನುವುದು ಮರೆತಿರುತ್ತೇನೆ ಅಂದುಕೊಂಡಿದ್ದ.’

‘ಅಂಥ ವಿಷಯ ಮರೆಯುವುದು ಹೇಗೆ?’

‘ಮರೆಯುವುದು ಸುಲಭ! ಜಾಣರು ಮೈಮರೆತು ಇಂಥ ಸಣ್ಣಪುಟ್ಟ ಸಂಗತಿಗಳಲ್ಲೇ ಎಡವುತ್ತಾರೆ. ಮನುಷ್ಯ ಜಾಣ ಆದಷ್ಟೂ ಸಣ್ಣ ಪುಟ್ಟ ವಿಚಾರಗಳೇ ತನ್ನನ್ನ ಬೀಳಿಸಬಹುದು ಅನ್ನುವುದನ್ನ ಮರೆತು ಸಿಕ್ಕಿಬೀಳುತ್ತಾನೆ. ಅದು ಪೋರ್ಫಿರಿಗೆ ಗೊತ್ತು. ಅವನು ನೀನಂದುಕೊಂಡಷ್ಟು ದಡ್ಡ ಅಲ್ಲ.’

‘ಹಾಗಾದರೆ, ಅವನು ಸ್ಕೌಂಡ್ರಲ್.’

ನಗದೆ ಇರಲು ಸಾಧ್ಯವಾಗಲಿಲ್ಲ ರಾಸ್ಕೋಲ್ನಿಕೋವ್‌ ಗೆ. ಇದುವರೆಗೆ ಗಂಭೀರವಾಗಿಯೋ ಅಸಹ್ಯಪಟ್ಟುಕೊಂಡೋ ಮಾತಾಡುತ್ತಿದ್ದವನು ಈಗ ಉತ್ಸಾಹದಿಂದ ಮಾತಾಡುತ್ತಿದ್ದೇನೆ ಅನ್ನುವುದೂ ಗಮನಕ್ಕೆ ಬಂದಿತ್ತು.

‘ಇದನ್ನೆಲ್ಲ ಖುಷಿಯಾಗಿ ಅನುಭವಿಸುತಿದ್ದೇನೆ!’ ಮನಸಿನಲ್ಲೇ ಅಂದುಕೊಂಡ..

ಅದೇ ಕ್ಷಣದಲ್ಲೇ ಕಸಿವಿಸಿ, ವಿವರಿಸಲಾಗದಂಥ ಯಾವುದೋ ಚಿಂತೆ ಮೊಳೆಯುತ್ತಿತ್ತು. ಬಕಲಯೇವ್ ವಸತಿಗೃಹದ ಹತ್ತಿರ ಬರುವ ಹೊತ್ತಿಗೆ ಅವನ ಕಸಿವಿಸಿ ದೊಡ್ಡದಾಗಿ ಬೆಳೆದಿತ್ತು.

‘ನೀನು ಒಬ್ಬನೇ ಹೋಗು, ನಾನು ಆಮೇಲೆ ಬರುತ್ತೇನೆ, ಬೇಗ ಬರುತ್ತೇನೆ,’ ರಾಸ್ಕೋಲ್ನಿಕೋವ್ ತಟ್ಟನೆ ಹೇಳಿದ.

‘ಇನ್ನೇನು ಬಂದುಬಿಟ್ಟೆವು, ಎಲ್ಲಿಗೆ ಹೊರಟೆ?’

‘ಹೋಗಬೇಕು, ಹೋಗಲೇಬೇಕು, ಏನೋ ಕೆಲಸ ಇದೆ… ಒಂದರ್ಧ ಗಂಟೆ ಅಷ್ಟೇ… ಹೇಳು ಅವರಿಗೆ.’

‘ನಿನ್ನಿಷ್ಟ. ನಾನೂ ಜೊತೆಗೆ ಬರತೇನೆ.’

‘ನೀನೂ ನನಗೆ ಹಿಂಸೆ ಕೊಡುತ್ತೀಯಾ!’ ರಾಸ್ಕೋಲ್ನಿಕೋವ್ ರೇಗಿ, ಎಷ್ಟು ಕಹಿಯಾಗಿ ಕೇಳಿದನೆಂದರೆ, ಅವನ ಕಣ್ಣಲ್ಲಿ ಎಂಥ ಹತಾಶೆ ಇತ್ತೆಂದರೆ ರಝುಮಿಖಿನ್ ತಲೆ ತಗ್ಗಿಸಿದ. ಮನೆಯ ಮೆಟ್ಟಿಲ ಮೇಲೆ ನಿಂತು ನೋಡಿದ. ರಾಸ್ಕೋಲ್ನಿಕೋವ್ ದೊಡ್ಡ ಹೆಜ್ಜೆ ಹಾಕಿಕೊಂಡು ತನ್ನ ಮನೆಯ ದಿಕ್ಕಿಗೆ ಹೋಗುತ್ತಿದ್ದ. ಕೊನೆಗೆ ರಝುಮಿಖಿನ್ ಹಲ್ಲು ಕಡಿಯುತ್ತಾ ಮುಷ್ಟಿ ಬಿಗಿದು, ‘ಪೋರ್ಫಿರಿ ಸಿಕ್ಕರೆ ಈಗಲೇ ನಿಂಬೆಹಣ್ಣು ಹಿಂಡಿದ ಹಾಗೆ ಹಿಂಡಿಬಿಡುತ್ತೇನೆ,’ ಅಂದುಕೊಳ್ಳುತ್ತಾ ಪುಲ್ಚೇ ರಿಯ ಅಲೆಕ್ಸಾಂಡ್ರೋವ್ನಾ, ದುನ್ಯಾ ಇಬ್ಬರು ಬಹಳ ತಡವಾಯಿತೆಂದು ಆತಂಕಪಡುತ್ತಿರುತ್ತಾರೆ ಅನ್ನುವ ಆತುರದಲ್ಲಿ ಮೆಟ್ಟಿಲೇರಿ ಹೋದ.

*****

ರಾಸ್ಕೋಲ್ನಿಕೋವ್ ಮನೆಗೆ ತಲುಪಿದಾಗ ಅವನ ಹಣೆ, ಕಣತಲೆ ಬೆವೆತು ವದ್ದೆಯಾಗಿದ್ದವು. ಏದುಸಿರು ಬಿಡುತ್ತಿದ್ದ. ಆತುರಾತುರವಾಗಿ ಮೆಟ್ಟಿಲೇರಿದ. ಬೀಗ ಹಾಕಿರದ ತನ್ನ ಮನೆಯೊಳಕ್ಕೆ ಕಾಲಿಟ್ಟ. ತಕ್ಷಣವೇ ಬಾಗಿಲು ಮುಂದಿಕ್ಕಿ ಚಿಲುಕ ಹಾಕಿದ. ಬೆದರಿದ ಹುಚ್ಚನ ಹಾಗೆ ಮೂಲೆಯ ತೂತಿನತ್ತ ಧಾವಿಸಿದ. ವಾಲ್‍ ಪೇಪರು ಹರಿದುಹೋಗಿದ್ದ, ವಸ್ತುಗಳನ್ನು ಅವಿಸಿಟ್ಟ ಮೂಲೆ ಅದು. ಕೈ ಒಳಕ್ಕೆ ಹಾಕಿ ಹಲವು ನಿಮಿಷಗಳ ಕಾಲ ತಡಕಿ ತಡಕಿ ನೋಡಿದ. ವಾಲ್ ಪೇಪರು ಎಲ್ಲಾದರೂ ಹರಿದಿದೆಯೋ ಸುಕ್ಕಾಗಿದೆಯೋ ಪರಿಶೀಲಿಸಿದ. ಏನೂ ಆಗಿಲ್ಲವೆಂದು ಖಚಿತ ಮಾಡಿಕೊಂಡು, ಎದ್ದು ನಿಂತು ಆಳವಾಗಿ ಉಸಿರೆಳೆದುಕೊಂಡ. ಸ್ವಲ್ಪ ಹೊತ್ತಿಗೆ ಮೊದಲು ಅವನು ರಝುಮಿಖಿನ್ ಜೊತೆಗೆ ಬಕಲಯೇವ್ ವಸತಿಗೃಹದ ಮೆಟ್ಟಿಲ ಹತ್ತಿರ ಬರುತ್ತಿದ್ದ ಹಾಗೇ ‘ಯಾವುದೋ ಸರ, ಯಾವುದೋ ಕಫ್ ಲಿಂಕು, ಅಥವಾ ಆ ಮುದುಕಿ ವಸ್ತುಗಳನ್ನು ಮಾಲೀಕರ ಹೆಸರು ಬರೆದು ಸುತ್ತಿಟ್ಟಿದ್ದ ಪೇಪರಿನ ತುಂಡು, ಇಂಥ ಏನೋ ಒಂದು ಬೇರೆ ತೂತಿಗೋ, ಸಂದಿಗೋ ಬಿದ್ದು ಹೋಗಿರತ್ತೆ, ನನ್ನ ರೂಮಿನಲ್ಲಿ ತಟ್ಟನೆ ಅವರ ಕೈಗೆ ಸಿಕ್ಕಿ ಬಲವಾದ ಸಾಕ್ಷಿಯಾಗಿಬಿಡುತ್ತದೆ.’ ಅನ್ನುವ ಕಲ್ಪನೆ ಅವನ ಮನಸ್ಸಿಗೆ ಬಂದಿತ್ತು.

ಸುಮ್ಮನೆ ನಿಂತ. ಚಿಂತೆಯಲ್ಲಿ ಮುಳುಗಿದ್ದ. ಅವಮಾನದ್ದು ಅನ್ನಿಸುವಂಥ ವಿಚಿತ್ರವಾದ, ಅರ್ಥವಿರದ ಅರ್ಧ ನಗು ತುಟಿಗಳ ಮೇಲೆ ಸುಳಿದಾಡುತ್ತಿತ್ತು. ಕೊನೆಗೆ ಹ್ಯಾಟು ಎತ್ತಿಕೊಂಡು ನಿಶ್ಶಬ್ದವಾಗಿ ರೂಮಿನಿಂದಾಚೆ ಬಂದ. ಚಿಂತೆಗಳು ಒಂದರೊಳಗೊಂದು ಕಲೆಸಿಹೋಗಿದ್ದವು. ಚಿಂತೆ ಮಾಡಿಕೊಂಡೇ ಗೇಟಿನಿಂದಾಚೆಗೆ ಹೋದ.

‘ಅಗೋ, ಅಲ್ಲಿ! ಅವನೇ!’ ದೊಡ್ಡ ದನಿಯೊಂದು ಉದ್ಗಾರ ಕೇಳಿಸಿತು. ರಾಸ್ಕೋಲ್ನಿಕೋವ್ ತಲೆ ಎತ್ತಿ ನೋಡಿದ.

ವಾಚ್‍ ಮ್ಯಾನು ತನ್ನ ಗೂಡಿನ ಹತ್ತಿರ ನಿಂತಿದ್ದ. ನೋಡಿದರೆ ವ್ಯಾಪಾರಿಯ ಹಾಗೆ ಕಾಣುತ್ತಿದ್ದ ಗಿಡ್ಡ ಮನುಷ್ಯನೊಬ್ಬನಿಗೆ ರಾಸ್ಕೋಲ್ನಿಕೋವ್‍ ನನ್ನು ತೋರಿಸುತ್ತ ಮಾತಾಡುತ್ತಿದ್ದ. ಆ ಮನುಷ್ಯ ವೇಸ್ಟ್ ಕೋಟಿನ ಮೇಲೆ ಸಡಿಲವಾದ ಉದ್ದನೆ ಅಂಗಿಯಂಥ ಸ್ಮಾಕ್ ತೊಟ್ಟಿದ್ದ. ದೂರದಿಂದ ನೋಡಿದರೆ ಹೆಂಗಸಿನ ಹಾಗೆ ಕಾಣುತ್ತಿದ್ದ. ಜಿಡ್ಡು ಮೆತ್ತಿದ ಟೋಪಿ ಹಾಕಿದ್ದ. ತಲೆ ಬಗ್ಗಿಸಿ ನಿಂತಿದ್ದರಿಂದ ಗೂನನ ಹಾಗೆ ಕಾಣುತ್ತಿದ್ದ. ಸುಕ್ಕುಬಿದ್ದ ದಪ್ಪ ಮುಖ ನೋಡಿದರೆ ಐವತ್ತು ದಾಟಿದವನ ಹಾಗೆ ಕಾಣುತ್ತಿದ್ದ. ಊದಿದ ಹಾಗೆ ಕಾಣುತ್ತಿದ್ದ ಪುಟ್ಟ ಕಣ್ಣಲ್ಲಿ ಕಾಠಿಣ್ಯ, ಉದ್ವಿಗ್ನತೆ, ಮುನಿಸು ಕಾಣುತ್ತಿತ್ತು.

‘ಏನದು?’ ವಾಚ್‍ ಮ್ಯಾನಿನ ಹತ್ತಿರ ಬರುತ್ತ ರಾಸ್ಕೋಲ್ನಿಕೋವ್ ಕೇಳಿದ.

ವ್ಯಾಪಾರಿಯ ಹಾಗೆ ಕಾಣುತಿದ್ದವನು ಮುಖ ಬಿಗಿದುಕೊಂಡು ರಾಸ್ಕೋಲ್ನಿಕೋವ್‍ನನ್ನು ದಿಟ್ಟಿಸುತ್ತ, ಹುಷಾರಾಗಿ, ಆತುರ ಒಂದಿಷ್ಟೂ ಇಲ್ಲದೆ, ವಿವರವಾಗಿ ನೋಡಿದ. ಆಮೇಲೆ ಮುಖ ತಿರುಗಿಸಿ ನಿಧಾನವಾಗಿ ನಡೆಯುತ್ತ, ಒಂದೂ ಮಾತಾಡದೆ ಗೇಟಿಂದಾಚೆಗೆ ಹೊರಟು ಹೋದ.

‘ಏನಿದೆಲ್ಲ?’ ರಾಸ್ಕೋಲ್ನಿಕೋವ್ ಜೋರು ಮಾಡಿ ಕೇಳಿದ.

‘ಅದು ಯಾರೋ ಬಂದ, ಇಲ್ಲಿ ಸ್ಟೂಡೆಂಟು ಇದಾರಾ ಅಂತ ನಿಮ್ಮ ಹೆಸರು ಹೇಳಿ ಕೇಳಿದ, ಮನೆ ಯಾರ ಹತ್ತಿರ ಬಾಡಿಗೆಗೆ ತಗೊಂಡಿರಿ ಅಂದ, ಅಷ್ಟು ಹೊತ್ತಿಗೆ ನೀವು ಇಳಿದು ಬರುತ್ತಿದ್ದಿರಿ, ನಿಮ್ಮನ್ನ ತೋರಿಸಿದೆ, ನಿಮ್ಮನ್ನ ನೋಡಿದ. ಹೊರಟು ಹೋದ,’ ಅಷ್ಟೇ!’

ವಾಚ್‍ ಮ್ಯಾನು ಕೂಡ ಗೊಂದಲಕ್ಕೆ ಗುರಿಯಾಗಿದ್ದ. ತೀರ ಅಲ್ಲ. ಸ್ವಲ್ಪ ಹೊತ್ತು ನಿಂತು ಯೋಚನೆ ಮಾಡಿದ. ಆಮೇಲೆ ತನ್ನ ಗೂಡಿನೊಳಕ್ಕೆ ಹೊರಟು ಹೋದ.

ರಾಸ್ಕೋಲ್ನಿಕೋವ್ ಆ ವ್ಯಾಪಾರಿಯ ಹಿಂದೆಯೇ ಧಾವಿಸಿ ಹೋದ, ದೂರದಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿ, ಅವರಸರವಿಲ್ಲದೆ ಸಾವಧಾನವಾಗಿ ದೃಢವಾಗಿ ಹೆಜ್ಜೆ ಹಾಕುತ್ತ ಏನೋ ಯೋಚನೆ ಮಾಡುತ್ತ ನೆಲ ನೋಡಿಕೊಂಡು ಹೋಗುತ್ತಿದ್ದವನನ್ನು ಕಂಡ, ರಸ್ತೆ ದಾಟಿ ರಾಸ್ಕೋಲ್ನಿಕೋವ್ ಅವನನ್ನೇ ಕೆಲವು ಹೆಜ್ಜೆ ದೂರದಲ್ಲಿ ಹಿಂಬಾಲಿಸಿದ. ಅವನನ್ನು ದಾಟಿ ಹೋಗುತ್ತ ಓರೆಗಣ್ಣಿನಲ್ಲಿ ಅವನ ಮುಖವನ್ನು ಪಕ್ಕದಿಂದ ಗಮನಿಸಿದ. ಅವನೂ ರಾಸ್ಕೋಲ್ನಿಕೋವ್‍ ನನ್ನು ಕಂಡ, ತಕ್ಷಣವೇ ಮತ್ತೆ ನೆಲ ನೋಡುತ್ತ ನಡೆದ. ಒಂದು ನಿಮಿಷದಷ್ಟು ಹೊತ್ತು ಇಬ್ಬರೂ ಪಕ್ಕಪಕ್ಕದಲ್ಲಿ ಮಾತಿಲ್ಲದೆ ನಡೆದರು.

‘ನೀನು ನನ್ನ ಬಗ್ಗೆ ವಾಚ್‍ ಮ್ಯಾನ್ ಹತ್ತಿರ ವಿಚಾರಿಸತಿದ್ದೆ?’ ಕೊನೆಗೂ ರಾಸ್ಕೋಲ್ನಿಕೋವ್ ಕೇಳಿದ, ಅವನ ದನಿ ಮೆಲುವಾಗಿ, ಮೃದುವಾಗಿತ್ತು.

ವ್ಯಾಪಾರಿ ಉತ್ತರ ಕೊಡಲಿಲ್ಲ, ತಲೆ ಎತ್ತಿ ನೋಡಲೂ ಇಲ್ಲ. ಇಬ್ಬರೂ ಮತ್ತೆ ಮೌನವಾದರು.

‘ಬಂದಿದ್ದು ಯಾಕೆ… ನನ್ನ ಬಗ್ಗೆ ಕೇಳಿದ್ದು ಯಾಕೆ… ಈಗ ಸುಮ್ಮನಿರೋದು ಯಾಕೆ… ಏನಿದೆಲ್ಲ?’ ರಾಸ್ಕೋಲ್ನಿಕೋವ್ ದನಿ ನಡುಗುತ್ತಿತ್ತು, ಶಬ್ದಗಳು ಯಾಕೋ ಸ್ಪಷ್ವವಾಗಿ ಬರಲಿಲ್ಲ.

ವ್ಯಾಪಾರಿ ಈಗ ಕಣ್ಣೆತ್ತಿ ರಾಸ್ಕೋಲ್ನಿಕೋವ್ ನನ್ನು ಮಂಕಾಗಿ, ಭಯ ಹುಟ್ಟಿಸುವ ಹಾಗೆ ನೋಡಿದ.

‘ಕೊಲೆಗಾರ!’ ಇದ್ದಕಿದ್ದ ಹಾಗೆ ಮೆಲ್ಲಗೆ, ಸ್ಪಷ್ಟವಾಗಿ, ಖಚಿತವಾಗಿ ಹೇಳಿದ.

ಅವನ ಪಕ್ಕದಲ್ಲಿ ನಡೆಯುತ್ತಿದ್ದ ರಾಸ್ಕೋಲ್ನಿಕೋವ್‍ ಗೆ ಕಾಲಲ್ಲಿ ಬಲವೇ ಇಲ್ಲ ಎಂದು ತಟ್ಟನೆ ಅನಿಸಿತು. ಬೆನ್ನು ಹುರಿಯಲ್ಲಿ ಚಳುಕು ಹರಿಯಿತು. ಎದೆ ಬಡಿತ ಒಂದು ಕ್ಷಣ ನಿಂತು ಮರುಕ್ಷಣವೇ ಕಟ್ಟು ಕಳಚಿದ ಹಾಗೆ ಜೋರಾಗಿ ಬಡಿದುಕೊಂಡಿತು. ಸುಮಾರು ನೂರು ಹೆಜ್ಜೆ ಪಕ್ಕಪಕ್ಕದಲ್ಲೇ ಹೀಗೇ ಮೌನವಾಗಿ ನಡೆದರು.

‘ಏನು ನಿನ್ನ… ಏನು… ಯಾರು ಕೊಲೆಗಾರ?’ ರಾಸ್ಕೋಲ್ನಿಕೋವ್ ಗೊಣಗಿದ. ಅವನ ದನಿ ಕುಗ್ಗಿತ್ತು.

‘ನೀನು ಕೊಲೆಗಾರ,’ ಅವನು ಮತ್ತೂ ಸ್ಪಷ್ಟವಾಗಿ, ಅಧಿಕಾರಯುತವಾಗಿ, ದ್ವೇಷ ತುಂಬಿದ ದನಿಯಲ್ಲಿ, ಗೆದ್ದವನ ಹಾಗೆ ನಗುತ್ತಾ ಹೇಳಿದ. ಮತ್ತೆ ಕಣ್ಣೆತ್ತಿ ರಾಸ್ಕೋಲ್ನಿಕೋವ್‍ ನ ಬಿಳಿಚಿದ ಮುಖವನ್ನು, ಸತ್ತಂತಿದ್ದ ಕಣ್ಣನ್ನು ನೇರವಾಗಿ ದಿಟ್ಟಿಸಿದ. ಆ ಹೊತ್ತಿಗೆ ಅವರು ರಸ್ತೆಗಳು ಕೂಡುವ ಜಾಗಕ್ಕೆ ಬಂದಿದ್ದರು. ವ್ಯಾಪಾರಿ ಎಡಕ್ಕೆ ತಿರುಗಿ ನಡೆದ. ಮತ್ತೆ ಹಿಂದಕ್ಕೆ ನೋಡದೆ ನಡೆದ. ರಾಸ್ಕೋಲ್ನಿಕೋವ್ ನಿಂತಲ್ಲೆ ನಿಂತ. ಹೋಗುತ್ತಿದ್ದವನ ಬೆನ್ನನ್ನೇ ಬಹಳ ಹೊತ್ತು ದಿಟ್ಟಿಸಿದ. ಐವತ್ತು ಹೆಜ್ಜೆ ನಡೆದ ವ್ಯಾಪಾರಿ ತಿರುಗಿ ನೋಡಿದ ಅನಿಸಿತು. ನೋಡುವುದು ಕಷ್ಟವಾಗಿತ್ತು, ಆದರೂ ಆ ಮನುಷ್ಯ ಮತ್ತೆ ನಕ್ಕ ಹಾಗೆ, ತಣ್ಣಗೆ ದ್ವೇಷದಿಂದ ನಕ್ಕ ಹಾಗೆ, ಗೆಲುವಿನ ನಗೆ ನಕ್ಕ ಹಾಗೆ ಅನಿಸಿತು ರಾಸ್ಕೋಲ್ನಿಕೋವ್‍ ಗೆ.

ದುರ್ಬಲವಾದ ಹೆಜ್ಜೆಗಳನ್ನು ನಿಧಾನವಾಗಿ ಎತ್ತಿಡುತ್ತ, ಮಂಡಿ ಥರಗುಡುತ, ಭಯಂಕರ ಚಳಿಗೆ ನಡುಗುತ್ತಿರುವವನ ಹಾಗೆ ರಾಸ್ಕೋಲ್ನಿಕೋವ್ ವಾಪಸ್ಸು ಬಂದು, ಮೆಟ್ಟಿಲೇರಿ ತನ್ನ ರೂಮು ಸೇರಿಕೊಂಡ. ಕ್ಯಾಪು ತೆಗೆದು ಮೇಜಿನ ಮೇಲಿಟ್ಟ, ಸೋಫಾದ ಪಕ್ಕ ನಿಶ್ಚಲ ನಿಂತ – ಹತ್ತು ನಿಮಿಷ. ಮೈಯಲ್ಲಿ ಕಸುವಿಲ್ಲದೆ, ಸೋಫಾದ ಮೇಲೆ ಮೈ ಚಾಚಿ, ಸಣ್ಣಗೆ ನರಳಿ, ಕಣ್ಣು ಮುಚ್ಚಿಕೊಂಡ. ಅರ್ಧ ಗಂಟೆ ಹೊತ್ತು ಹಾಗೇ ಮಲಗಿದ್ದ. ತಲೆಯಲ್ಲಿ ಯಾವ ಯೋಚನೆಯೂ ಇರಲಿಲ್ಲ. ಯಾವು ಯಾವುದೋ ಯೋಚನೆ, ಅಥವಾ ಯೋಚನೆಯ ತುಂಡು ತುಂಡು ಚಿತ್ರಗಳು, ಯಾವುದೇ ಕ್ರಮವಿರದೆ, ಒಂದಕ್ಕೊಂದು ಸಂಬಂಧವಿರದೆ ಮನಸಿನಲ್ಲಿ ಹಾದು ಹೋಗುತ್ತಿದ್ದವು. ಚಿಕ್ಕಂದಿನಲ್ಲಿ ನೋಡಿದ್ದ ಯಾರ ಯಾರದೋ ಮುಖ, ಒಮ್ಮೆ ಮಾತ್ರ ನೋಡಿ ಮತ್ತೆಂದೂ ನೆನಪು ಮಾಡಿಕೊಂಡಿರದ ಮುಖ, ಚರ್ಚಿನ ಗಂಟೆ ಗೋಪುರ, ಯಾವುದೋ ಹೆಂಡದಂಗಡಿಯ ಬಿಲಿಯರ್ಡ್ ಟೇಬಲ್ಲು, ಅದರ ಪಕ್ಕದಲ್ಲಿ ನಿಂತ ಯಾರೋ ಆಫೀಸರು, ನೆಲಮಾಳಿಗೆಯ ಸಿಗರೇಟು ಅಂಗಡಿಯಲ್ಲಿದ್ದ ಸಿಗಾರ್ ವಾಸನೆ, ಹೆಂಡದಂಗಡಿ, ಹಿತ್ತಿಲಲ್ಲಿದ್ದ ಮಹಡಿ ಮೆಟ್ಟಿಲು, ಕಗ್ಗತ್ತಲು ತುಂಬಿದ್ದು, ಮೆಟ್ಟಿಲ ಮೇಲೆಲ್ಲ ಮುಸುರೆ, ಮೊಟ್ಟೆಯ ಮುರಿದ ಚಿಪ್ಪು ಚೆಲ್ಲಾಡಿವೆ, ಭಾನುವಾರದ ದಿನ ಎಲ್ಲಿಂದಲೋ ಕೇಳುವ ಚರ್ಚಿನ ಗಂಟೆ ಸದ್ದು… ಹೀಗೆ ಒಂದರ ಹಿಂದೆ ಇನ್ನೊಂದು ಚಿತ್ರ, ಸುಂಟರಗಾಳಿಯ ಹಾಗೆ ಮನಸಿನಲ್ಲಿ ಗಿರಗಿರ ಸುತ್ತುತ್ತಿದ್ದವು. ಕೆಲವನ್ನು ಚಿತ್ರವಾಗಿ ಭದ್ರ ಮಾಡಿಕೊಳ್ಳಲು ಹೆಣಗಿದ. ಎಲ್ಲ ಸತ್ತು ಮರೆಯಾಗುತ್ತಿದ್ದವು. ಮನಸಿನ ಮೇಲೆ ಎಂಥದೋ ಭಾರ, ಸಹಿಸಲಾಗದ್ದಲ್ಲ, ಒಂದೊಂದು ಸಾರಿ ಚೆನ್ನಾಗಿದೆ ಅಂತಲೂ ಅನಿಸುತ್ತಿದ್ದ ಭಾರ… ಸಣ್ಣಗೆ ಚಳಿ. ಚಳಿ ಹೋಗುತ್ತಲೇ ಇಲ್ಲ, ಚಳಿಯೂ ಚೆನ್ನಾಗಿದೆ.

ರಝುಮಿಖಿನ್ ಹೆಜ್ಜೆ ಶಬ್ದ. ಆತುರದ ಹೆಜ್ಜೆ. ಅವನ ಧ್ವನಿ. ರಾಸ್ಕೋಲ್ನಿಕೋವ್ ಕಣ್ಣು ಮುಚ್ಚಿ ನಿದ್ರೆ ನಟಿಸಿದ. ರಝುಮಿಖಿನ್ ಬಾಗಿಲು ತೆಗೆದ. ಸ್ವಲ್ಪ ಹೊತ್ತು ಬಾಗಿಲಲ್ಲೆ ನಿಂತ. ನಿಶ್ಶಬ್ದವಾಗಿ ಒಳಕ್ಕೆ ಕಾಲಿಟ್ಟ. ಹುಷಾರಾಗಿ ಸೋಫಾದ ಹತ್ತಿರ ಬಂದ. ನಸ್ತಾಸ್ಯಳ ಪಿಸುದನಿ ಕೇಳಿಸಿತು:

ಜಾಣರು ಮೈಮರೆತು ಇಂಥ ಸಣ್ಣಪುಟ್ಟ ಸಂಗತಿಗಳಲ್ಲೇ ಎಡವುತ್ತಾರೆ. ಮನುಷ್ಯ ಜಾಣ ಆದಷ್ಟೂ ಸಣ್ಣ ಪುಟ್ಟ ವಿಚಾರಗಳೇ ತನ್ನನ್ನ ಬೀಳಿಸಬಹುದು ಅನ್ನುವುದನ್ನ ಮರೆತು ಸಿಕ್ಕಿಬೀಳುತ್ತಾನೆ. ಅದು ಪೋರ್ಫಿರಿಗೆ ಗೊತ್ತು. ಅವನು ನೀನಂದುಕೊಂಡಷ್ಟು ದಡ್ಡ ಅಲ್ಲ.

‘ಎಬ್ಬಿಸಬೇಡ. ಮಲಕ್ಕೊಳ್ಳಿ. ಆಮೇಲೆ ಏನಾದರೂ ತಿನ್ನತಾನೆ.’

‘ಸರಿ.’

ತುದಿಗಾಲಲ್ಲಿ ನಡೆಯುತ್ತ ಬಾಗಿಲು ಮುಚ್ಚಿಕೊಂಡು ಇಬ್ಬರೂ ಹೊರಟು ಹೋದರು. ಇನ್ನರ್ಧ ಗಂಟೆ ಕಳೆಯಿತು ರಾಸ್ಕೋಲ್ನಿಕೋವ್ ಕಣ್ಣು ಬಿಟ್ಟ. ಕೂತ. ತಲೆಯ ಹಿಂದೆ ಕೈಗಳನ್ನು ಕಟ್ಟಿಕೊಂಡು ಮತ್ತೆ ಅಂಗಾತ ಮಲಗಿದ.

‘ಎಲ್ಲಿದಾನೆ ಅವನು? ಯಾರಿದು, ನೆಲದಿಂದ ಎದ್ದು ಬಂದವನು? ಬೈಬಲಿನಲ್ಲಿ ಬರುತ್ತಾನಲ್ಲ, ಸತ್ತು ಮತ್ತೆ ಎದ್ದು ಬಂದ ಲಾಝರಸ್? ಎಲ್ಲಿದ್ದಾನೆ? ಏನು ನೋಡುತ್ತಿದ್ದಾನೆ? ಇರುವುದನ್ನೆಲ್ಲ ನೋಡುತ್ತಿದ್ದಾನೆ, ಅದಕೆ ಸಂಶಯವಿಲ್ಲ. ಎಲ್ಲಿ ನಿಂತಿದಾನೆ, ಎಲ್ಲಿಂದ ಇದನ್ನೆಲ್ಲ ನೋಡುತ್ತಿದ್ದಾನೆ? ಈಗ ತಾನೇ ನೆಲದೊಳಗಿಂದ ಎದ್ದು ಬಂದದ್ದು ಯಾಕೆ? ಇದನ್ನೆಲ್ಲ ನೋಡವುದಕ್ಕೆ ಹೇಗೆ ಸಾಧ್ಯ?… ಹ್ಞಂ…’ ರಾಸ್ಕೋಲ್ನಿಕೋವ್‍ ಗೆ ಚಳಿಯಾಗುತ್ತ, ಮೈ ನಡುಗುತ್ತಿತ್ತು. ‘ನಿಕೊಲಾಯ್‍ ಗೆ ಬಾಗಿಲ ಹಿಂದೆ ಸಿಕ್ಕ ಒಡವೆ ಪೆಟ್ಟಿಗೆ—ಹೇಗೆ ಸಾಧ್ಯ? ಸಾಕ್ಷಿಯೋ? ನೂರಾರು ಸಣ್ಣ ಸಂಗತಿ ನಿರ್ಲಕ್ಷ್ಯ ಮಾಡಿ ಅವೆಲ್ಲ ಈಗ ಈಜಿಪ್ಟಿನ ಪಿರಮಿಡ್ಡಿನ ಗಾತ್ರದ ಸಾಕ್ಷಿ! ನೊಣ ಹಾರಿಬಂತು, ನೋಡಿತು. ಸಾಧ್ಯವಾ?’

ಇದ್ದಕಿದ್ದ ಹಾಗೆ ಅಸಹ್ಯ ಅನಿಸಿತು, ಮೈಯಲ್ಲಿ ಶಕ್ತಿಯೇ ಇಲ್ಲ ಅನಿಸಿತು.

ಕಹಿಯಾಗಿ ನಗುತ್ತ ಯೋಚನೆ ಮಾಡಿದ. ‘ಗೊತ್ತಿರಬೇಕಾಗಿತ್ತು ನನಗೆ. ಹೀಗಾಗಬಹುದು ಅಂತ ಮೊದಲೇ ತಿಳಿದಿದ್ದರೂ ಅದು ಹೇಗೆ ಕೊಡಲಿ ಹಿಡಿದು ನನ್ನ ಕೈಗೆ ರಕ್ತ ಮೆತ್ತಿಕೊಂಡೆ! ಮೊದಲೇ ಗೊತ್ತಿರಬೇಕಾಗಿತ್ತು… ಹ್ಞಾ, ಮೊದಲೇ ಗೊತ್ತಿತ್ತಲ್ಲಾ!…’ ಹತಾಶನಾಗಿ ಪಿಸುಗುಟ್ಟಿಕೊಂಡ.

ಆಗಾಗ ಯಾವುದೋ ಯೋಚನೆ ಬಂದು ಮನಸ್ಸು ತಡೆದು ನಿಲ್ಲುತಿತ್ತು.

‘ಇಲ್ಲ. ಅವರೇ ಬೇರೆ ಥರ. ಅವರು ನಿಜವಾದ ಮಹಾತ್ಮರು, ಒಡೆಯರು. ಏನು ಬೇಕಾದರೂ ಮಾಡುವುದಕ್ಕೆ ಅವರಿಗೆ ಅನುಮತಿ ಇದೆ. ಟೌಲಾನ್ ನಾಶಮಾಡತಾನೆ, ಪ್ಯಾರಿಸನ್ನು ಮರಣದ ಬಚ್ಚಲುಮನೆ ಮಾಡುತ್ತಾನೆ, ಒಂದು ಇಡೀ ಸೈನ್ಯವನ್ನ ಈಜಿಪ್ಟಿನಲ್ಲಿ ಮರೀತಾನೆ. ಮಾಸ್ಕೋ ಯುದ್ಧದಲ್ಲಿ ಐದು ಲಕ್ಷ ಜನರನ್ನ ಕಳಕೊಳ್ಳುತ್ತಾನೆ, ಆಮೇಲೆ ವಿಲ್ನಾದಲ್ಲಿ ಜಾಣ ಮಾತು ಹೇಳಿ ತಪ್ಪಿಸಿಕೊಳ್ಳುತ್ತಾನೆ. ಅಂಥ ನೆಪೋಲಿಯನ್ ಸತ್ತಾಗ ಅವನಿಗೆ ಸ್ಮಾರಕ ಕಟ್ಟುತ್ತಾರೆ, – ಹೀಗೆ ಅವರಿಗೆ ಏನು ಬೇಕಾದರೂ ಮಾಡುವುದಕ್ಕೆ ಅನುಮತಿ ಇದೆ. ಇಲ್ಲ, ಅವರು ರಕ್ತ ಮಾಂಸಗಳಿಂದಾದ ಮನುಷ್ಯರಲ್ಲ, ಕಂಚಿನಲ್ಲಿ ಕಬ್ಬಿಣದಲ್ಲಿ ಆದವರು!’

ಇದ್ದಕಿದ್ದ ಹಾಗೆ ಬಂದ ಆಲೋಚನೆ ನಗು ಹುಟ್ಟಿಸಿತ್ತು.

‘ನೆಪೋಲಿಯನ್, ಪಿರಮಿಡ್ಡು, ವಾಟರ್ಲೂ, ಮತ್ತೆ ಬಡಕಲು ಮೈಯ ಮುದುಕಿ, ಗಿರವಿ ಇಟ್ಟುಕೊಂಡು ಸಾಲ ಕೊಡುವ ಮುದುಕಿ, ಯಾರೋ ರಿಜಿಸ್ಟ್ರಾರನ ಬಡಕಲು ಮೈ ಮುಂಡೆ, ಅವಳ ಮಂಚದ ಕೆಳಗೆ ಕೆಂಪು ಪೆಟ್ಟಿಗೆ— ಪೋರ್ಫಿರಿ ಪೆಟ್ರೋವಿಚ್‍ ಗೆ ಇಂಥ ಕಲಸುಮೇಲೋಗರದ ತುತ್ತು ಜೀರ್ಣ ಮಾಡಿಕೊಳ್ಳಕ್ಕಾಗತ್ತಾ? ಅರಗಲ್ಲ ಅವರಿಗೆ! ಸೌಂದರ್ಯ ಶಾಸ್ತ್ರಕ್ಕೆ ವಿರುದ್ಧ ಇದು. ಉದಾಹರಣೆಗೆ ನೆಪೋಲಿಯನ್ನು ಹಳೇ ಮುದುಕಿಯ ಮಂಚದ ಕೆಳಗೆ ತವಳಿ ಹೋಗಿ ಬಚ್ಚಿಟ್ಟುಕೊಳ್ಳಕ್ಕೆ ಸಾಧ್ಯವಾ! ನಾನ್ಸೆನ್ಸ್!…’ ಸುಮ್ಮಸುಮ್ಮನೆ ಅಬ್ಬರ ಮಾಡತಾ ಇದೇನೆ, ಜ್ವರ ಹೆಚ್ಚಿ ಉದ್ವಿಗ್ನತೆ ಹುಟ್ಟತ್ತೆ ಅನಿಸಿದ ಕ್ಷಣಗಳೂ ಇದ್ದವು.

‘ಹಾಳು ಮುದುಕಿ, ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ!’ ಯೋಚನೆಗಳು ದುಡುಕಿ ನುಗ್ಗಿದವು. ‘ಆ ಮುದುಕಿ ಮಿಸ್ಟೇಕು. ಮುಖ್ಯ ವಿಷಯ ಅವಳಲ್ಲ! ಅವಳು ಕಾಯಿಲೆ ಥರ ಬಂದಳು. ನನಗೆ ಆತುರ… ಅವಳನ್ನ ಮೀರಿ ಹೋಗಬೇಕಾಗಿತ್ತು. ನಾನು ಕೊಂದದ್ದು ಮನುಷ್ಯ ಜೀವಿಯನ್ನಲ್ಲ, ಒಂದು ತತ್ವವನ್ನ. ಆದರೂ ನಾನು ಮೀರಿ ಹೋಗಲಿಲ್ಲ, ಇತ್ತಲೇ ಉಳಿದೆ.… ಕೊಲೆ ಮಾಡುವುದಕ್ಕಷ್ಟೇ ನನಗೆ ಆಗಿದ್ದು. ಅದನ್ನೂ ಸರಿಯಾಗಿ ಮಾಡಲಿಲ್ಲ ಅಂತ ಈಗ ಅನ್ನಿಸತಾ ಇದೆ… ತತ್ವ? ಈಗ ತಾನೇ ಆ ಪೆದ್ದ ರಝುಮಿಖಿನ್ ಸಮಾಜವಾದಿಗಳನ್ನ ಬೈಯುತ್ತಾ ಇದ್ದನಲ್ಲ? ಎಲ್ಲರ ಸುಖ ಸಂತೋಷಕ್ಕೆ ಕಷ್ಟಪಟ್ಟು ದುಡಿಯುವವರಂತೆ. …ಇಲ್ಲ ನನಗೆ ಇರೋದು ಒಂದೇ ಬದುಕು. ಇದು ಕಳೆದರೆ ಮತ್ತೆ ಎಂದೂ ಸಿಗಲ್ಲ. ಎಲ್ಲರಿಗೂ ಸಂತೋಷ ಸಿಗುವ ಕಾಲದವರೆಗೆ ಕಾಯಕ್ಕಾಗಲ್ಲ. ನನ್ನ ಬದುಕು ನಾನು ಬದುಕಬೇಕು, ಇಲ್ಲದಿದ್ದರೆ ಬದುಕದೆ ಇರೋದೇ ವಾಸಿ. ಅಂದರೇನು? ‘ಎಲ್ಲಾರೂ ಸುಖವಾಗಿರುವ ದಿನಗಳು ಬರುತ್ತವೆ,’ ಅಂತ ನಾನು ಮಾಡಬೇಕಾದ ಕೆಲಸ ಮಾಡದೆ ಸುಮ್ಮನೆ ಇರುವಾಗ ನಮ್ಮಮ್ಮ ಹಸಿದುಕೊಂಡಿರಬೇಕು ಅನ್ನುವವನಲ್ಲ. ‘ಸರ್ವರ ಸುಖಶಾಂತಿಯ ಭವನಕ್ಕೆ ನೀನು ಕಲ್ಲು ಹೊರುತ್ತಿದ್ದೀಯ’ ಅನ್ನತಾರೆ. ‘ಹ್ಹ ಹ್ಹ ಹ್ಹಾ! ನನ್ನ ಗತಿ ಏನು? ನನಗಿರೋದು ಒಂದೇ ಬದುಕು, ನನಗೂ ಬಯಕೆಗಳಿವೆ, ಆಸೆಗಳಿವೆ…’

ಒಂದು ಕ್ಷಣ ಬಿಟ್ಟು ‘ಸೌಂದರ್ಯಾತ್ಮಕವಾಗಿ ನೋಡಿದರೆ ನಾನು ಉಣುಗಿನಂಥ ಕ್ಷುದ್ರ ಮನುಷ್ಯ, ಇನ್ನೇನೂ ಅಲ್ಲ,’ ಅನ್ನುವ ಶರಾ ಸೇರಿಸಿಕೊಂಡ, ಹುಚ್ಚನ ಹಾಗೆ ತಟ್ಟನೆ ಗಹಗಹಿಸಿ ನಕ್ಕ. ‘ಹೌದು, ನಿಜವಾಗಲೂ ನಾನೊಂದು ಉಣುಗು,’ ಈ ವಿಚಾರವನ್ನ ಗಟ್ಟಿಯಾಗಿ ಹಿಡಿದು, ಕೆದಕಿ, ಆಡುತ್ತ ತನ್ನನ್ನೇ ಹೀಗಳೆದುಕೊಳ್ಳುವುದರಲ್ಲಿ ಖುಷಿ ಕಂಡ. ‘ಯಾಕೆಂದರೆ, ಮೊದಲನೆಯದಾಗಿ, ನಾನು ಉಣುಗು ಅಂತ ಈಗ ಅಂದುಕೊಳ್ಳತಾ ಇದೇನೆ. ಎರಡನೆಯದಾಗಿ, ‘ಇದನ್ನೆಲ್ಲ ನಾನು ಸ್ವಂತದ ಸುಖಕ್ಕಾಗಿ ಮಾಡುತಿಲ್ಲ, ಅದ್ಭುತವಾದ, ಉದಾತ್ತವಾದ ಗುರಿಯನ್ನು ಮನಸಿನಲ್ಲಿಟ್ಟುಕೊಂಡು ಈ ಕೆಲಸ ಮಾಡುತ್ತಿದ್ದೇನೆ,’ ಅಂತ ಇಡೀ ಒಂದು ತಿಂಗಳ ಕಾಲ ವಿಧಿಯ ಜೊತೆ ಚೆಲ್ಲಾಟ ಆಡಿದೆ—ಹ್ಹ ಹ್ಹ ಹ್ಹಾ! ಮೂರನೆಯದಾಗಿ, ಎಲ್ಲಾ ಥರದಲ್ಲೂ ನ್ಯಾಯ ಸಿಗಬೇಕು ಅಂತ ಅಳೆದು, ಸುರಿದು, ಲೆಕ್ಕ ಹಾಕಿ, ಈ ಭೂಮಿಯ ಮೇಲಿರುವ ಅತ್ಯಂತ ವ್ಯರ್ಥವಾದ ಹೇನೊಂದನ್ನು ಹುಡುಕಿ ಅವಳನ್ನ ಕೊಂದೆ. ಹೆಚ್ಚೂ ಅಲ್ಲ ಕಡಮೆಯೂ ಅಲ್ಲ, ನನ್ನ ತತ್ವದ ಅನುಷ್ಠಾನದ ಮೊದಲ ಹೆಜ್ಜೆಗೆ ಎಷ್ಟು ಬೇಕೋ ಅಷ್ಟು ಮಾತ್ರವನ್ನು ಅವಳ ಪೆಟ್ಟಿಗೆಯಿಂದ ಎತ್ತಿಕೊಂಡೆ. (ಉಳಿದದ್ದೆಲ್ಲ ಅವಳ ಉಯಿಲಲ್ಲಿ ಬರೆದಿರುವ ಹಾಗೆ ಯಾವುದೋ ಮಠಕ್ಕೆ ಸೇರತ್ತೆ—ಹ್ಹ ಹ್ಹಾ!)… ಮತ್ತೆ ಕೊನೆಯದಾಗಿ,’ ಹಲ್ಲು ಕಡಿಯುತ್ತ ಹೇಳಿಕೊಂಡ, ‘ಆ ಕೊಲೆಯಾದ ಹೇನಿಗಿಂತ ಕೀಳಾದ, ದುಷ್ಟನಾದ ಉಣುಗು ಇರಬಹುದು ನಾನು. ಹೀಗೆ ಆಗಬಹುದು ಅಂತ, ಅವಳ ಕೆಲಸ ಮುಗಿಸಿದ ಮೇಲೆ ನಾನು ಹೀಗೆಲ್ಲ ಅಂದುಕೊಳ್ಳತೇನೆ ಅಂತಲೂ ಅಂದುಕೊಂಡಿದ್ದೆ. ಇದಕ್ಕೆ ಹೋಲಿಸಬಹುದಾದಷ್ಟು ಭೀಕರವಾದದ್ದು ಯಾವುದಾದರೂ ಇದೆಯೇ? ಅಯ್ಯೋ ಕೀಳುತನವೇ, ಕ್ಷುಲ್ಲಕತನವೇ! …

ಕುದುರೆಯ ಮೇಲೆ ಕೂತು ಕತ್ತಿ ಹಿರಿದು ‘ಅಲ್ಲಾಹ್‍ ನ ಆಣತಿ, ಪರಿಪಾಲಿಸಿ ಗದಗುಡುವ ಜೀವಿಗಳೇ!’ ಎನ್ನುತ್ತ ಸಾಗಿದ ಪ್ರವಾದಿ ಈಗ ಚೆನ್ನಾಗಿ ಅರ್ಥವಾಗುತ್ತಿದ್ದಾನೆ. ಪ್ರವಾದಿ ಮಾಡಿದ್ದು ಸರಿ. ಮೊದಲ ದರ್ಜೆಯ ಸೈನ್ಯ ಕಟ್ಟಿ ಬೀದಿಗೆ ಇಳಿದು ಮುಗ್ಧರು ಅಪರಾಧಿಗಳು ಎಲ್ಲರನ್ನೂ ತರಿದೊಟ್ಟಿ ದಂಡಿಸುತ್ತಾನೆ—ಯಾಕೆ ಹೀಗೆ ಅನ್ನುವ ವಿವರಣೆಯನ್ನೂ ಕೊಡದೇ! ‘ಪರಿಪಾಲಿಸಿ ಗದಗುಡುವ ಜೀವಿಗಳೇ,’ ಅನ್ನುತ್ತಾನೆ. ‘ನಿಮ್ಮ ಇಚ್ಛೆ, ನಿಮ್ಮ ಆಸೆ ಮರೆತುಬಿಡಿ. ಯಾಕೆಂದರೆ… ಅದು ಯಾವುದೂ ನಿಮ್ಮ ಅಳವಿನದ್ದಲ್ಲ! …ಓಹ್, ಏನು ಮಾಡಿದರೂ ಆ ಮೂಳಿ ಮುದುಕಿಯನ್ನ ಕ್ಷಮಿಸಲಾರೆ!’

ಅವನ ಕೂದಲೆಲ್ಲ ಬೆವರಿನಲ್ಲಿ ತೊಯ್ದಿದ್ದವು. ನಡುಗುವ ತುಟಿ ಒಣಗಿತ್ತು. ನಿಶ್ಚಲ ನೋಟ ಚಾವಣಿಯಲ್ಲಿ ನೆಲೆಸಿತ್ತು.

‘ನನ್ನಮ್ಮ! ನನ್ನ ತಂಗಿ! ಎಷ್ಟೊಂದು ಪ್ರೀತಿಸಿದ್ದೆ ಅವರನ್ನ! ಈಗ ಯಾಕೆ ಅವರನ್ನ ಕಂಡರೆ ಆಗಲ್ಲ? ಹೌದು, ಅವರ ಮೇಲೆ ದ್ವೇಷ ನನಗೆ. ಅವರು ನನ್ನ ಹತ್ತಿರ ಇದ್ದರೆ ಆಗಲ್ಲ… ಇವತ್ತು ಬೆಳಗ್ಗೆ ಅಮ್ಮನ ಹತ್ತಿರ ಹೋಗಿ ಮುತ್ತು ಕೊಟ್ಟೆ, ಜ್ಞಾಪಕ ಇದೆ… ಅಮ್ಮನ್ನ ಅಪ್ಪಿಕೊಂಡಾಗ
‘ಅಮ್ಮನಿಗೆ ಗೊತ್ತಾದರೆ? ಅವಳು…’ ಅನ್ನುವ ಯೋಚನೆ ಬಂದಿತ್ತು… ನಾನೇ ಎಲ್ಲಾ ಹೇಳಿಬಿಡಲಾ? ಆಮೇಲೆ ಅವಳು…’ ಅನ್ನಿಸಿತು. ನಾನು ಅಂಥವನೇ, ಹೇಳಿದರೂ ಹೇಳಿಯೇನು… ಅವಳೂ ನನ್ನ ಹಾಗೇ ಇರಬಹುದು,’ ಅಂದುಕೊಳ್ಳುತ್ತ ಮನಸ್ಸನ್ನೆಲ್ಲ ಆವರಿಸುತ್ತಿದ್ದ ಸನ್ನಿಯ ಬಡಬಡಿಕೆಯ ವಿರುದ್ಧ ಹೆಣಗಾಡಿದ. ‘ಆ ಮೂಳಿ ಮುದುಕೀನ ಕಂಡರೆ ಆಗಲ್ಲ. ಅವಳೇನಾದರೂ ಮತ್ತೆ ಬದುಕಿ ಬಂದರೆ ಅವಳನ್ನ ಮತ್ತೆ ಕೊಲ್ಲತೇನೆ.! ಪಾಪ, ಬಡಪಾಯಿ ಲಿಝವೆಟ! ಅವಳು ಯಾಕೆ ಆ ಹೊತ್ತಿಗೆ ಅಲ್ಲಿಗೆ ಬರಬೇಕಾಗಿತ್ತು?… ವಿಚಿತ್ರ ಅಲ್ಲವಾ? ಅವಳ ಬಗ್ಗೆ ನನಗೆ ಯೋಚನೆ ಏನೂ ಬಂದೇ ಇಲ್ಲ… ಅವಳನ್ನ ನಾನು ಕೊಂದೇ ಇಲ್ಲ ಅನ್ನೋ ಹಾಗೆ!… ಲಿಝಾವೆಟಾ! ಸೋನ್ಯಾ! ಅಯ್ಯೋ ಪಾಪ ಅನಿಸುವಂಥ ಜೀವಗಳು. ಸಾಧುಗಳು, ವಿಧೇಯರು, ಸೌಮ್ಯವಾದ ಕಣ್ಣು… ಪಾಪದವರು!… ಯಾಕೆ ಅವರು ಅಳುವುದೇ ಇಲ್ಲ?… ಯಾಕೆ ಅವರು ನರಳುವುದೇ ಇಲ್ಲ?… ಇರೋದನ್ನೆಲ್ಲ ಕೊಡತಾರೆ… ಕಣ್ಣು ಅಷ್ಟೊಂದು ಮೃದು, ಅಷ್ಟೊಂದು ಸೌಮ್ಯ…. ಸೋನ್ಯಾ, ಸೋನ್ಯಾ! ಸೌಮ್ಯ ಸೋನ್ಯಾ!…’

ನಿದ್ದೆಗೆ ಹೇಗೆ ತೇಲಿಹೋದನೋ ಅವನಿಗೆ ಗೊತ್ತಾಗಲಿಲ್ಲ. ಅದು ಹೇಗೆ ರಸ್ತೆಗೆ ಬಂದೆನೋ ನೆನಪಿಲ್ಲವಲ್ಲಾ, ವಿಚಿತ್ರ ಅಂದುಕೊಂಡ. ಸಂಜೆ ಬಹಳ ಹೊತ್ತಾಗಿತ್ತು. ಮುಸ್ಸಂಜೆಯ ಕತ್ತಲು ಗಾಢವಾಗುತ್ತಿತ್ತು. ಹುಣ್ಣಿಮೆಯ ಚಂದ್ರ ಉಜ್ವಲವಾಗಿದ್ದ. ಆದರೆ ಮಾತ್ರ ಗಾಳಿಯಾಡದೆ ಉಬ್ಬಸವಾಗುತ್ತಿತ್ತು. ಜನ ಗುಂಪಾಗಿ ರಸ್ತೆಯ ಮೇಲೆ ನಡೆಯುತ್ತಿದ್ದರು. ಕಾರ್ಮಿಕರು, ಕೆಲಸಗಾರರು, ಆಫೀಸು ನೌಕರರು ಮನೆಗೆ ಹೋಗುತ್ತಿದ್ದರು, ಇತರ ಜನ ಸುಮ್ಮನೆ ಸುತ್ತಾಡುತ್ತಿದ್ದರು. ಸುಣ್ಣದ ವಾಸನೆ, ಧೂಳು, ಮಲೆತ ನೀರಿನ ನಾತ ಬೆರೆತಿದ್ದವು. ರಾಸ್ಕೋಲ್ನಿಕೋವ್ ದುಃಖಪಡುತ್ತ, ಅನ್ಯಮನಸ್ಕನಾಗಿ ನಡೆಯುತ್ತಿದ್ದ. ಯಾವುದೋ ಉದ್ದೇಶ ಇಟ್ಟುಕೊಂಡು ಮನೆಯಿಂದ ಹೊರಟದ್ದು ನೆನಪಿತ್ತು, ಬಲು ಬೇಗ ಏನೋ ಮಾಡಬೇಕು ಅಂದುಕೊಂಡಿದ್ದ. ಯಾಕೆ ಹೊರಟ, ಏನು ಮಾಬೇಕು ಅಂದುಕೊಂಡಿದ್ದ ಅದು ಮಾತ್ರ ಮರೆತುಹೋಗಿತ್ತು. ಇದ್ದಕಿದ್ದ ಹಾಗೆ ನಿಂತ. ರಸ್ತೆಯ ಆ ಬದಿಯಲ್ಲಿ ಯಾರೋ ಒಬ್ಬ ನಿಂತು ರಾಸ್ಕೋಲ್ನಿಕೋವ್‍ ನನ್ನು ಕೈ ಬೀಸಿ ಕರೆಯುತ್ತಿದ್ದ. ಅವನಿದ್ದಲ್ಲಿಗೆ ಹೋಗಲು ರಾಸ್ಕೋಲ್ನಿಕೋವ್ ರಸ್ತೆ ದಾಟಲು ಹೊರಟ. ಇದ್ದಕಿದ್ದ ಹಾಗೆ ಆ ಮನುಷ್ಯ ಏನೂ ನಡೆದೇ ಇಲ್ಲವೇನೋ ಅನ್ನುವ ಹಾಗೆ ತಲೆ ತಗ್ಗಿಸಿಕೊಂಡು ನಡೆದುಬಿಟ್ಟ, ತಿರುಗಿಯೂ ನೋಡಲಿಲ್ಲ, ರಾಸ್ಕೋಲ್ನಿಕೋವ್‍ ನನ್ನು ಕರೆದೇ ಇಲ್ಲ ಅನ್ನುವ ಹಾಗೆ ಹೆಜ್ಜೆ ಹಾಕಿದ.

‘ನಿಜವಾಗಲೂ ನನ್ನ ಕರೆದನಾ?’ ರಾಸ್ಕೋಲ್ನಿಕೋವ್ ಯೋಚನೆ ಮಾಡಿದ, ಆದರೂ ಅವನ ಹಿಂದೆ ನಡೆದ. ಹತ್ತು ಹೆಜ್ಜೆ ನಡೆಯುವುದರೊಳಗೆ ಅವನು ಯಾರೆನ್ನುವುದು ತಟ್ಟನೆ ಹೊಳೆಯಿತು, ಭಯವಾಯಿತು. ಅವನು ಆಗಲೇ ಬಂದಿದ್ದ ವ್ಯಾಪಾರಿ. ಮೊದಲಿದ್ದ ಉಡುಪಿನಲ್ಲೇ ಇದ್ದ. ರಾಸ್ಕೋಲ್ನಿಕೋವ್ ಅವನ ಹಿಂದೆ ಸ್ವಲ್ಪ ದೂರದಲ್ಲಿ ನಡೆಯುತ್ತಿದ್ದ. ಅವನ ಎದೆ ಜೋರಾಗಿ ಬಡಿದುಕೊಳ್ಳುತ್ತಿತ್ತು. ಇಬ್ಬರೂ ಮುಖ್ಯ ರಸ್ತೆಯ ಪಕ್ಕದ ಗಲ್ಲಿಗೆ ತಿರುಗಿದರು. ವ್ಯಾಪಾರಿ ಇನ್ನೂ ತಿರುಗಿ ನೋಡಲಿಲ್ಲ. ‘ನಾನು ಅವನ ಹಿಂದೆ ಹಿಂದೆ ಬರುತ್ತಿರುವುದು ಗೊತ್ತೋ ಅವನಿಗೆ?’ ರಾಸ್ಕೋಲ್ನಿಕೋವ್ ಯೋಚನೆ ಮಾಡಿದ. ವ್ಯಾಪಾರಿ ದೊಡ್ಡ ಮನೆಯೊಂದರ ಗೇಟಿನತ್ತ ತಿರುಗಿದ. ರಾಸ್ಕೋಲ್ನಿಕೋವ್ ಅದೇ ಗೇಟಿನತ್ತ ಆತುರವಾಗಿ ಹೆಜ್ಜೆ ಹಾಕಿದ್ದ. ವ್ಯಾಪಾರಿಯೇನಾದರೂ ತಿರುಗಿ ನೋಡಿ ಕರೆಯುತ್ತಾನೋ ಅಂದುಕೊಂಡ. ಕಮಾನಿನ ಹಾಗಿದ್ದ ಮಹಾದ್ವಾರದಲ್ಲಿ ತಡೆದು ನಿಂತ. ಅಂಗಳಕ್ಕೆ ಕಾಲಿಟ್ಟು ಮುಂದೆ ಸಾಗಿದ ವ್ಯಾಪಾರಿ ದಿಢೀರನೆ ತಿರುಗಿ ಮತ್ತೆ ಕೈ ಬೀಸಿ ಕರೆದಹಾಗೆ ಅನ್ನಿಸಿತು. ರಾಸ್ಕೋಲ್ನಿಕೋವ್ ತಕ್ಷಣವೇ ಗೇಟು ದಾಟಿದ. ವ್ಯಾಪಾರಿ ಅಂಗಳದಲ್ಲಿ ಕಾಣಲಿಲ್ಲ. ‘ಅಂದರೆ ಅವನು ನೇರ ಮೊದಲ ಮಹಡಿಗೆ ಹೋಗಿರಬೇಕು,’ ಅಂದುಕೊಂಡು ರಾಸ್ಕೋಲ್ನಿಕೋವ್ ಅತ್ತಲೇ ಧಾವಿಸಿದ.

ದೃಢವಾಗಿ ಆತುರವಿಲ್ಲದೆ ಹೆಜ್ಜೆ ಹಾಕುತ್ತ ಯಾರೋ ತನಗಿಂತ ಎರಡು ಅಂತಸ್ತು ಮೇಲೆ ನಡೆಯುತ್ತಿರುವುದು ಕೇಳಿಸಿತು. ವಿಚಿತ್ರವೆಂದರೆ ಮಹಡಿ ಮೆಟ್ಟಿಲು ಪರಿಚಿತ ಅನಿಸುತಿತ್ತು! ಇಗೋ ಮೊದಲ ಮಹಡಿಯ ಕಿಟಕಿ; ಕಿಟಕಿಯ ಗಾಜಿನಿಂದ ಬೆಳುದಿಂಗಳು ನಿಗೂಢವಾಗಿ, ದುಃಖಗೊಂಡ ಹಾಗೆ ಮೆಟ್ಟಲ ಮೇಲೆ ಬೀಳುತ್ತಿತ್ತು. ಇಗೋ ಇಲ್ಲಿ ಎರಡನೆಯ ಮಹಡಿ. ಹ್ಹಾ! ಬಣ್ಣ ಬಳಿಯುವವರು ಕೆಲಸ ಮಾಡುತ್ತಿದ್ದ ಅಪಾರ್ಟ್‍ಮೆಂಟು ಇದೇನೇ… ಈ ಕಟ್ಟಡ ಅವನಿಗೆ ತಕ್ಷಣವೇ ಗುರುತು ಸಿಕ್ಕಲಿಲ್ಲ ಯಾಕೆ? ಅವನಿಗಿಂತ ಮುಂದೆ ಸಾಗುತ್ತಿದ್ದವನ ಹೆಜ್ಜೆ ಸದ್ದು ಮಸುಕಾಯಿತು. ‘ಅಂದರೆ, ಎಲ್ಲೋ ನಿಂತಿರಬೇಕು ಅಥವಾ ಬಚ್ಚಿಟ್ಟುಕೊಂಡಿರಬೇಕು,’ ಇಗೋ ಮೂರನೆಯ ಮಹಡಿ. ಇನ್ನೂ ಮುಂದೆ ಹೋಗಬೇಕೋ? ಎಷ್ಟು ನಿಶ್ಶಬ್ದ, ಭಯ ಆಗುವ ಹಾಗೆ… ಮುಂದೆ ನಡೆದ. ಅವನದೇ ಹೆಜ್ಜೆ ಸದ್ದು ಭಯ ಹುಟ್ಟಿಸಿದವು. ದೇವರೇ, ಎಷ್ಟು ಕತ್ತಲಾಗಿದೆ! ಇಲ್ಲೇ ಎಲ್ಲೋ ಮೂಲೆಯಲ್ಲಿ ಬಚ್ಚಿಟ್ಟುಕೊಂಡಿರಬೇಕು ಆ ವ್ಯಾಪಾರಿ. ಆಹ್! ಅಪಾರ್ಟ್‍ಮೆಂಟಿನ ಬಾಗಿಲು ಹಾರು ಹೊಡೆದಿತ್ತು. ಒಂದು ಕ್ಷಣ ಯೋಚನೆ ಮಾಡಿ ಒಳಕ್ಕೆ ಕಾಲಿಟ್ಟ. ತಲೆಬಾಗಿಲು ನಿರ್ಜನ, ಕತ್ತಲು. ಯಾರೂ ಇಲ್ಲ, ಇದ್ದವರನ್ನೆಲ್ಲ ಹೊರಕ್ಕೆಲ್ಲೋ ಕರೆದುಕೊಂಡು ಹೋಗಿದ್ದ ಹಾಗೆ. ರಾಸ್ಕೋಲ್ನಿಕೋವ್ ಸದ್ದು ಮಾಡದೆ ತುದಿಗಾಲಲ್ಲಿ ನಡೆಯುತ್ತ ಮನೆಯೊಳಕ್ಕೆ ಹೋದ. ಇಡೀ ರೂಮನ್ನು ಪ್ರಖರವಾದ ಬೆಳುದಿಂಗಳ ಪ್ರವಾಹ ತುಂಬಿತ್ತು. ರೂಮಿನಲ್ಲಿದ್ದದ್ದೆಲ್ಲ ಇದ್ದ ಹಾಗೇ ಇದ್ದವು: ಕುರ್ಚಿ, ಕನ್ನಡಿ, ಹಳದಿ ಸೋಫಾ, ಕಟ್ಟು ಹಾಕಿದ್ದ ಚಿತ್ರಗಳು. ತಾಮ್ರವರ್ಣದ ದುಂಡು ಚಂದಿರ ಕಿಟಕಿಯನ್ನು ತುಂಬಿದ್ದ. ‘ಬೆಳುದಿಂಗಳಿದೆ ಅಂತಲೇ ಇಷ್ಟು ನಿಶ್ಚಲ, ನಿಶ್ಶಬ್ದ. ಏನೋ ಒಗಟು ಕೇಳಿದ ಹಾಗೆ,’ ಅಂದುಕೊಂಡ ರಾಸ್ಕೋಲ್ನಿಕೋವ್.

ನಿಂತ, ಕಾದ. ಬಹಳ ಹೊತ್ತು ಕಾದ. ಚಂದ್ರ ಮೌನ ಹೆಚ್ಚಿದಷ್ಟೂ ರಾಸ್ಕೋಲ್ನಿಕೋವ್‍ ನ ಎದೆ ಜೋರು ಜೋರಾಗಿ ಬಡಿದುಕೊಳ್ಳುತ್ತಿತ್ತು, ನೋವು ಕೂಡ ಆಗುತ್ತಿತ್ತು. ಇನ್ನೂ ಅದೇ ನಿಶ್ಚಲ ಮೌನ. ಇದ್ದಕಿದ್ದ ಹಾಗೆ ಕರಕರ ಸದ್ದು, ಎಲ್ಲೋ ಕೊಂಬೆ ಮುರಿದ ಹಾಗೆ. ಮತ್ತೆ ಎಲ್ಲವೂ ನಿಶ್ಚಲ, ಮೌನ. ಹಾರಿ ಬಂದ ನೊಣ ಕಿಟಕಿಯ ಗಾಜಿಗೆ ಬಡಿದು ಕೆಳಗೆ ಬಿದ್ದು ಗುಂಯ್ ಸದ್ದು ಮಾಡಿತು. ಅದೇ ಹೊತ್ತಿಗೆ ಮೂಲೆಯಲ್ಲಿ, ಬೀರು ಮತ್ತು ಕಿಟಕಿಯ ಮಧ್ಯೆ ಹೆಂಗಸರ ವೆಲ್ವೆಟ್ ಕೋಟು ನೇತುಬಿದ್ದಿತ್ತು. ‘ಇದೇನು ಮಾಡುತ್ತಿದೆ ಇಲ್ಲಿ? ಮೊದಲು ಇಲ್ಲಿರಲಿಲ್ಲ ಇದು…’ ಅಂದುಕೊಂಡ. ನಿಧಾನವಾಗಿ ಸದ್ದು ಮಾಡದೆ ಅದರ ಹತ್ತಿರ ಹೋದ. ಆ ಕೋಟಿನ ಹಿಂದೆ ಯಾರೋ ಬಚ್ಚಿಟ್ಟುಕೊಂಡಿದ್ದಾರೆ ಅನ್ನಿಸಿತು. ಹುಷಾರಾಗಿ ಕೋಟನ್ನು ಸರಿಸಿದ. ಮೂಲೆಯಲ್ಲಿ ಅಲ್ಲೊಂದು ಕುರ್ಚಿ ಇತ್ತು. ಕುರ್ಚಿಯ ಮೇಲೆ ಮೂಳಿ ಮುದುಕಿ ಮುದುರಿಕೊಂಡು, ಮುಖ ಕಾಣದ ಹಾಗೆ ತಲೆ ಬಗ್ಗಿಸಿ ಕೂತಿದ್ದಳು. ಅದು ಅವಳೇ. ‘ಹೆದರಿದ್ದಾಳೆ,’ ಅಂದುಕೊಂಡ.

ಕೋಟಿನೊಳಗೆ ದಾರದ ಗಂಟಿಗೆ ಸಿಕ್ಕಿಸಿದ್ದ ಕೊಡಲಿ ತೆಗೆದು ಮುದುಕಿಯ ತಲೆಯ ಮೇಲೆ ಹೊಡೆದ. ಒಂದು ಸಾರಿ, ಇನ್ನೊಂದು ಸಾರಿ. ವಿಚಿತ್ರ. ಮುದುಕಿ ಮಿಸುಕಲಿಲ್ಲ- ಎರಡು ಸಾರಿ ಏಟು ಬಿದ್ದರೂ. ಮರದಲ್ಲಿ ಮಾಡಿಟ್ಟ ಮುದುಕಿಯ ಹಾಗೆ ಸುಮ್ಮನೆ ಇದ್ದಳು. ಭಯವಾಯಿತು. ಬಗ್ಗಿ ನೋಡಿದ. ಅವಳೂ ತಲೆಯನ್ನು ಇನ್ನೂ ಬಗ್ಗಿಸಿ ಮುಖ ಮರೆಮಾಡಿಕೊಂಡಳು. ನೆಲದವರೆಗೂ ಬಗ್ಗಿ ಕೆಳಗಿನಿಂದ ಅವಳ ಮುಖ ನೋಡಿದ. ನೋಡಿದ ತಕ್ಷಣ ಸತ್ತೆ ಅನಿಸಿತು. ಮುದುಕಿ ಕುರ್ಚಿಯ ಮೇಲೆ ಕೂತು ನಗುತ್ತಿದ್ದಳು. ಮೃದುವಾಗಿ, ಅವನಿಗೆ ಕೇಳಿಸಬಾರದು ಹಾಗೆ ಸದ್ದಿಲ್ಲದೆ ನಗುತ್ತಿದ್ದಳು. ಇದ್ದಕಿದ್ದ ಹಾಗೆ ಅನಿಸಿತು—ಮಲಗುವ ಮನೆಯ ಬಾಗಿಲು ಒಂದಿಷ್ಟೆ ತೆರೆದಿದೆ, ಅಲ್ಲಿಂದಲೂ ನಗು, ಪಿಸುಮಾತು ಕೇಳುತ್ತಿದೆ. ಆಕ್ರೋಶ ಹುಟ್ಟಿತು. ಶಕ್ತಿಯೆಲ್ಲಾ ಬಿಟ್ಟು ಮುದುಕಿಯ ತಲೆಯ ಮೇಲೆ ಮತ್ತೆ ಮತ್ತೆ ಮತ್ತೆ ಹೊಡೆದ. ಕೊಡಲಿಯ ಒಂದೊಂದು ಏಟು ಬಿದ್ದಾಗಲೂ ರೂಮಿನಿಂದ ಕೇಳುತ್ತಿದ್ದ ಪಿಸುಮಾತು, ನಗು, ಜೋರಾಗುತ್ತಿದ್ದವು. ಮೂಳಿ ಮುದುಕಿ ನಗು ತಡೆಯಲಾಗದೆ ಅವಳ ಮೈ ಕುಲುಕುತ್ತಿತ್ತು.

ಓಡಿ ಹೋಗಬೇಕು ಇಲ್ಲಿಂದ. ಆಗಲ್ಲ. ಬಾಗಿಲಲ್ಲಿ ಜನ ತುಂಬಿಕೊಂಡಿದಾರೆ. ಮೆಟ್ಟಿಲಿಗೆ ಮುಖ ಮಾಡಿರುವ ಎಲ್ಲ ಮನೆಗಳ ಬಾಗಿಲೂ ತೆರೆದುಕೊಂಡಿವೆ. ಮನೆಮನೆಯ ಬಾಗಿಲಲ್ಲಿ, ಒಂದೊಂದೂ ಮಹಡಿಯ ತಿರುವಿನ ದೊಡ್ಡ ಮೆಟ್ಟಿಲ ಮೇಲೆ, ಎಲ್ಲ ಮಹಡಿಯ ಎಲ್ಲ ಮೆಟ್ಟಿಲಮೇಲೆ, ಕೆಳಗಿನವರೆಗೂ ಜನ, ಜನ, ತಲೆಗೆ ತಲೆ ತಾಕುವ ಹಾಗೆ ನಿಂತಿದ್ದಾರೆ. ನಿಶ್ಶಬ್ದವಾಗಿ ನೋಡುತ್ತಿದ್ದಾರೆ, ಕಾಯುತ್ತಿದ್ದಾರೆ, ಮೌನವಾಗಿದ್ದಾರೆ… ಅವನ ಎದೆ ಕುಸಿಯಿತು. ಕಾಲು ನೆಲಕ್ಕೆ ಬೇರು ಬಿಟ್ಟಿದ್ದವು. ನಿಂತಲ್ಲಿಂದ ಅಲುಗಲು ನಿರಾಕರಿಸಿದವು… ಚೀರಬೇಕು ಜೋರಾಗಿ… ಎಚ್ಚರವಾಯಿತು ಅವನಿಗೆ.

ಆಳವಾಗಿ ಉಸಿರೆಳೆದುಕೊಂಡ. ವಿಚಿತ್ರವೆಂದರೆ ಕನಸು ಇನ್ನೂ ಮುಂದುವರೆಯುತಿದ್ದ ಹಾಗಿತ್ತು. ಅವನ ರೂಮಿನ ಬಾಗಿಲು ತೆರೆದಿತ್ತು. ಅವನಿಗೆ ಪರಿಚಯವೇ ಇರದ ಯಾರೋ ಒಬ್ಬ ಹೊಸ್ತಿಲ ಮೇಲೆ ನಿಂತು ಅವನನ್ನೇ ನೋಡುತ್ತಿದ್ದ.

ರಾಸ್ಕೋಲ್ನಿಕೋವ್‍ ಗೆ ಇನ್ನೂ ಕಣ್ಣು ಪೂರ್ತಿ ತೆಗೆಯಲು ಆಗಿರಲಿಲ್ಲ. ತಕ್ಷಣವೇ ಮತ್ತೆ ಕಣ್ಣು ಮುಚ್ಚಿಕೊಂಡ. ಅಲ್ಲಾಡದೆ ಅಂಗಾತ ಮಲಗಿದ್ದ. ‘ಇದೂ ಕನಸೋ ಅಲ್ಲವೋ?’ ಅಂದುಕೊಳ್ಳುತ್ತ ಕಣ್ಣ ರೆಪ್ಪೆ ಒಂದಿಷ್ಟೇ ಇಷ್ಟು ತೆರೆದು ರೆಪ್ಪೆಗಳ ಬಿರುಕಿನಿಂದ ನೋಡಿದ. ಅಪರಿಚಿತ ಇನ್ನೂ ಅಲ್ಲೇ ನಿಂತು ರಾಸ್ಕೋಲ್ನಿಕೋವ್‍ ನನ್ನು ನೋಡುತ್ತಿದ್ದ. ಇದ್ದಕಿದ್ದ ಹಾಗೆ ಹುಷಾರಾಗಿ ಒಳಗೆ ಕಾಲಿಟ್ಟು ಬಾಗಿಲು ಮುಚ್ಚಿದ. ಬಂದು, ಮೇಜಿನ ಪಕ್ಕದಲ್ಲಿ ನಿಂತ. ರಾಸ್ಕೋಲ್ನಿಕೋವ್‍ ನ ಮೇಲೆ ಇರಿಸಿದ್ದ ದೃಷ್ಟಿ ಕದಲಿಸದೆ ಒಂದು ನಿಮಿಷ ಸುಮ್ಮನೆ ನಿಂತಿದ್ದ. ಆಮೇಲೆ ಮೆಲುವಾಗಿ ಸದ್ದಿಲ್ಲದೆ ಬಂದು ಸೋಫಾದ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕೂತ. ಹ್ಯಾಟನ್ನು ಕುರ್ಚಿಯ ಪಕ್ಕದಲ್ಲಿ ನೆಲದ ಮೇಲಿಟ್ಟ. ಮುಂದೆ ಬಾಗಿ ವಾಕಿಂಗ್‍ ಸ್ಟಿಕ್ಕಿನ ಮೇಲೆ ಎರಡೂ ಅಂಗೈ ಊರಿ, ಕೈಯ ಮೇಲೆ ಗಲ್ಲ ಊರಿ, ಸುಮ್ಮನೆ ಕೂತ. ಬಹಳ ಹೊತ್ತು ಕಾಯುವುದಕ್ಕೆ ಸಿದ್ಧನಾಗಿ ಬಂದಿದ್ದ. ರಾಸ್ಕೋಲ್ನಿಕೋವ್‍ ನ ಮುಚ್ಚಿದ ರೆಪ್ಪೆಗಳ ನಡುವಿನ ಬಿರುಕಿನಿಂದ ಕಂಡ ಹಾಗೆ ಅವನು ಯುವಕನಲ್ಲ, ದಷ್ಟಪುಷ್ಟ ಮೈ, ‍ದಟ್ಟವಾದ ಪೊದೆಯಂಥ ಬಿಳಿಯ ಗಡ್ಡ…

ಸುಮಾರು ಹತ್ತು ನಿಮಿಷ ಕಳೆದವು. ಇನ್ನೂ ಸ್ವಲ್ಪ ಬೆಳಕಿತ್ತು. ರಾತ್ರಿ ಇಳಿಯುತ್ತಿತ್ತು. ರೂಮಿನೊಳಗೆ ಪೂರಾ ನಿಶ್ಶಬ್ದ, ಮೆಟ್ಟಿಲ ಮೇಲೂ ಸದ್ದಿಲ್ಲ. ದೊಡ್ಡ ನೊಣವೊಂದು ಗುಂಯ್‍ಗುಡುತ್ತ ಬಂದು, ಕಿಟಕಿಗೆ ಬಡಿದು ಎಚ್ಚರ ತಪ್ಪಿ ಬಿತ್ತು. ಇನ್ನು ಸಹಿಸುವುದಕ್ಕೆ ಆಗಲ್ಲ. ರಾಸ್ಕೋಲ್ನಿಕೋವ್ ತಟಕ್ಕನೆ ಎದ್ದು ಕೂತ.

‘ಯಾರು? ನಿಮಗೇನು ಬೇಕು?’

‘ಓ, ನೀನು ಮಲಗಿರಲಿಲ್ಲ, ನಿದ್ದೆ ಬಂದ ಹಾಗೆ ಆಟ ಕಟ್ಟಿದ್ದೆ. ನನಗೆ ಗೊತ್ತು.’ ಅಪರಿಚಿತ ಅಂದ. ಸದ್ದಿಲ್ಲದೆ ನಗುತ್ತಿದ್ದ. ‘ನನ್ನ ಪರಿಚಯ ನಾನೇ ಮಾಡಿಕೊಳ್ಳುತ್ತೇನೆ. ನಾನು ಅರ್ಕಡಿ ಇವಾನೊವಿಚ್ ಸ್ವಿಡ್ರಿಗೈಲೇವ್.’

(ಅಪರಾಧ ಮತ್ತು ಶಿಕ್ಷೆ ಭಾಗ ಮೂರು ಮುಕ್ತಾಯ)