ಮನೆಗೆ ಮರಳುವ ಹೊತ್ತಿಗೆ ಈ ತೀರ್ಮಾನ ಅವನ ಕೋಪವನ್ನೂ ಕಹಿಯನ್ನೂ ಮನೆ ಬಿಡುವಾಗ ಇದ್ದುದಕ್ಕಿಂತ ಎರಡು ಪಟ್ಟು ಹೆಚ್ಚಿಸಿತು. ಕ್ಯಾತರೀನ ಇವಾನೋವ್ನಾ ಮನೆಯಲ್ಲಿ ನಡೆಯುತ್ತಿದ್ದ ಅಂತ್ಯ ಸಂಸ್ಕಾರದ ಊಟದ ಏರ್ಪಾಟು ಅವನ ಕುತೂಹಲವನ್ನು ಕೆರಳಿಸಿತು. ತನ್ನನ್ನೂ ಕರೆದಿದ್ದರೇನೋ ಅನ್ನುವ ಮಸುಕು ನೆನಪೂ ಇತ್ತು. ಅವನದೇ ತಾಪತ್ರಯಗಳಲ್ಲಿ ಮುಳುಗಿದ್ದರಿಂದ ಈ ಕೆಲಸಗಳನ್ನೆಲ್ಲ ಅವನು ಗಮನಿಸಿರಲೇ ಇಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ಐದು: ಮೊದಲನೆಯ ಅಧ್ಯಾಯ

ದುನ್ಯಾ, ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾರ ಜೊತೆಯಲ್ಲಿ ನಡೆಯಬಾರದ ಮಾತೆಲ್ಲ ನಡೆದ ನಂತರ ಬಂದಿದ್ದ ಹೊಸ ದಿನ ಪೀಟರ್‍ ಪೆಟ್ರೊವಿಚ್‌ನ ಸೊಕ್ಕು ಇಳಿಸಿ, ಅಮಲು ಇಳಿಸಿ ಗಂಭೀರವಾದ ಪರಿಣಾಮವನ್ನು ಬೀರಿತ್ತು. ಅವನ ಮನಸಿಗೆ ಸುಖವಿರಲಿಲ್ಲ. ನಿನ್ನೆಯ ದಿನ ಯಾವುದನ್ನು ಬದುಕಿನ ಅದ್ಭುತ ಘಟನೆಯಾಗುತ್ತದೆ ಎಂದು ಕಲ್ಪಿಸಿಕೊಂಡಿದ್ದನೋ ಆ ಘಟನೆ ಈಗ ಸಾವಿನಂಥ ಮುಕ್ತಾಯ ಕಂಡಿತ್ತು. ಮನಸು ಇದನ್ನು ಇನ್ನೂ ಒಪ್ಪಿರಲಿಲ್ಲ. ‘ಹೇಗೆ ಸಾಧ್ಯ ಹೀಗಾಗುವುದಕ್ಕೆ,’ ಅನ್ನುತ್ತ ಪೆಟ್ಟು ತಿಂದ ಗರ್ವ ಕಾಳಿಂಗ ಸರ್ಪದ ಹಾಗೆ ಇಡೀ ರಾತ್ರಿ ಅವನ ಮನಸಿನಲ್ಲಿ ಹೊರಳಿ ನರಳಾಡುತ್ತಿತ್ತು. ಹಾಸಿಗೆಯಿಂದೆದ್ದ ಪೀಟರ್ ಪೆಟ್ರೊವಿಚ್ ಕನ್ನಡಿಯಲ್ಲಿ ನೋಡಿಕೊಳ್ಳುವಾಗ ಪಿತ್ಥ ಕೆರಳಿ ಮುಖ ಹಳದಿಯಾಗಿದೆಯೋ ಅನ್ನಿಸಿ ಭಯವಾಗಿತ್ತು. ಹಾಗೇನೂ ಆಗಿರದೆ ಮುಖವನ್ನು ವಿವರವಾಗಿ ಪರೀಕ್ಷೆ ಮಾಡಿಕೊಂಡಾಗ ಸ್ವಲ್ಪ ಬಿಳಿಚಿದ್ದರೂ ಇತ್ತೀಚೆಗೆ ಒಂದಿಷ್ಟೇ ಊದಿದ ಹಾಗೆ ಕಾಣುತಿದ್ದರೂ ಲಕ್ಷಣಕೆಟ್ಟಿಲ್ಲ ಅನ್ನಿಸಿ ಸಮಾಧಾನವೂ ಆಗಿ, ಇವಳಿಗಿಂತ ಒಳ್ಳೆಯವಳು ಇನ್ನೊಬ್ಬಳು ಇನ್ನೆಲ್ಲಾದರೂ ಸಿಗಬಹುದು ಅನ್ನುವ ವಿಶ್ವಾಸವೂ ಹುಟ್ಟಿತು.

ಮರುಕ್ಷಣವೇ ವಾಸ್ತವದ ಎಚ್ಚರ ಮೂಡಿ ಜೋರಾಗಿಯೇ ಥೂ ಅಂದ. ಅದು ಅವನ ಜೊತೆಯಲ್ಲಿ ಕೋಣೆಯನ್ನು ಹಂಚಿಕೊಂಡಿದ್ದ ಯುವಕನಲ್ಲಿ ಸದ್ದಿಲ್ಲದ ಕುಟುಕು ನಗೆಯನ್ನು ಹುಟ್ಟಿಸಿತ್ತು. ಹಾಗೆ ನಕ್ಕ ಯುವಕನ ಹೆಸರು ಸೆಮ್ಯೊನೊವಿಚ್ ಲೆಬಿಸ್ಯಾತ್ನೊಕೊವಿಚ್. ಅದನ್ನು ಗಮನಿಸಿದ. ‘ಅವನ ಈ ನಗು ನಾನು ಅವನಿಗೆ ತಿರುಗಿಸಿಕೊಡಬೇಕಾದ್ದು,’ ಎಂದು ಮನಸಿನಲ್ಲೇ ಗುರುತು ಮಾಡಿಕೊಂಡ. ಹಾಗೆ ಲೆಕ್ಕ ತೀರಿಸಬೇಕು ಅನಿಸುವ ಹಲವು ಸಂಗತಿಗಳು ಇತ್ತೀಚೆಗೆ ಹೆಚ್ಚಾಗಿದ್ದವು. ‘ನಿನ್ನೆ ನಡೆದಿದ್ದನ್ನೆಲ್ಲ ಆಂದ್ರೆ ಸೆಮ್ಯೊನೊವಿಚ್‌ಗೆ ಹೇಳಬಾರದಿತ್ತು,’ ಅನ್ನಿಸಿ ಹೊಟ್ಟೆಯ ಉರಿ ಹೆಚ್ಚಿತು. ಆವೇಶದಲ್ಲಿ, ಕೆರಳಿ ತನ್ನ ಮನಸಿನಲ್ಲಿ ಇದ್ದದ್ದನ್ನೆಲ್ಲ ಅವನಿಗೆ ಹೇಳಿದ್ದು ಪೀಟರ್ ಪೆಟ್ರೊವಿಚ್ ನಿನ್ನೆ ಮಾಡಿದ್ದ ಎರಡನೆಯ ತಪ್ಪು. ಅಷ್ಟು ಸಾಲದೆ ಯಾರಾದರೂ ಪ್ಲಾನು ಮಾಡಿದ್ದರೋ ಅನ್ನುವ ಹಾಗೆ ಇಡೀ ದಿನ ತಾಪತ್ರಯದ ಮೇಲೆ ತಾಪತ್ರಯ.

ಸೆನೇಟಿನಲ್ಲೂ ಅವನು ವಾದ ಮಂಡಿಸುತ್ತಿದ್ದ ಕೇಸಿನಲ್ಲಿ ತಾಪತ್ರಯ ಎದುರಾಗಿತ್ತು. ಜೊತೆಗೆ ಮದುವೆ ಕೂಡಲೆ ನಡೆಯುತ್ತದೆನ್ನುವ ನಂಬಿಕೆಯಲ್ಲಿ ಬಾಡಿಗೆಯ ಫ್ಲಾಟನ್ನು ಹಿಡಿದಿದ್ದ. ಸ್ವಂತದ ದುಡ್ಡು ಕೊಟ್ಟು ಮನೆಗೆ ಸುಣ್ಣ, ಬಣ್ಣ, ಅಲಂಕಾರ ಮಾಡಿಸಿದ್ದ. ಫ್ಲಾಟಿನ ಯಜಮಾನ, ಯಾವನೋ ಜರ್ಮನ್ ಕಸುಬುದಾರ ಸಾಹುಕಾರ ದುಡ್ಡು ವಾಪಸ್ಸು ಕೊಡುವುದಿಲ್ಲ ವಜಾಹಾಕಿಕೊಳ್ಳುತ್ತೇನೆ ಅಂದಿದ್ದ. ಪೀಟರ್ ಪೆಟ್ರೊವಿಚ್ ಇಡೀ ಫ್ಲಾಟನ್ನು ಹೊಸತಾಗಿ ಕಟ್ಟಿಸಿದ್ದೋ ಅನ್ನುವಷ್ಟು ಚೆನ್ನಾಗಿ ಸಜ್ಜುಮಾಡಿಸಿದ್ದ. ಅಷ್ಟು ಸಾಲದೆಂದು ಮನೆಗೆ ಇನ್ನೂ ತಂದು ಹಾಕಿರದಿದ್ದ ಫರ್ನಿಚರಿನ ಮುಂಗಡದಲ್ಲಿ ಒಂದೇ ಒಂದು ರೂಬಲನ್ನೂ ವಾಪಸು ಕೊಡುವುದಿಲ್ಲ ಅಂದಿದ್ದರು ಅಂಗಡಿಯವರು. ‘ಏನು ಸೋಫಾ ಕುರ್ಚಿ ಸಿಗತ್ತೆ ಅಂತ ಮದುವೆ ಮಾಡಿಕೊಳ್ಳುತ್ತೇನಾ ನಾನು!’ ಪೀಟರ್ ಪೆಟ್ರೊವಿಚ್ ಮನಸಿನಲ್ಲೆ ಗುರುಗುಟ್ಟಿದ್ದರೂ ಇಲ್ಲವಾಗಿದ್ದ ಭರವಸೆಯೊಂದು ಮನಸಿನಲ್ಲಿ ಮತ್ತೆ ಮಿನುಗಿತ್ತು. ‘ಇನ್ನೇನೂ ಮಾಡಕ್ಕೆ ಆಗಲ್ಲ ಅನ್ನುವ ಹಾಗೆ ಎಲ್ಲಾನೂ ಮುಗಿದು ಹೋಯಿತಾ? ಇನ್ನೊಂದು ಸಾರಿ ಪ್ರಯತ್ನಪಟ್ಟು ನೋಡಲಾ?’ ದುನ್ಯಾಳ ನೆನಪು ಮನಸಿನಲ್ಲಿ ಮತ್ತೆ ಚಿಟುಕುಮುಳ್ಳಾಡಿಸಿತು. ಆ ಕ್ಷಣವನ್ನು ನೋವಿನಲ್ಲಿ ಕಳೆದ. ಕೇವಲ ಬಯಸುವುದರಿಂದಷ್ಟೇ ರಾಸ್ಕೋಲ್ನಿಕೋವ್‌ನನ್ನು ಕೊಲ್ಲಲು ಸಾಧ್ಯವಿದ್ದಿದ್ದರೆ ಪೀಟರ್ ಪೆಟ್ರೊವಿಚ್ ಆ ಕ್ಷಣವೇ ಆ ಆಸೆಯನ್ನು ಬಾಯಿಬಿಟ್ಟು ಹೇಳಿ ರಾಸ್ಕೋಲ್ನಿಕೋವ್ ಸಾಯುವ ಹಾಗೆ ಮಾಡಿಬಿಡುತ್ತಿದ್ದ.

‘ನಾನು ಮಾಡಿದ ಇನ್ನೊಂದು ತಪ್ಪು ಅಂದರೆ ಅವರಿಗೆ ದುಡ್ಡೇ ಕೊಡಲಿಲ್ಲ. ಲೆಬಿಝ್ಯಾತ್ನಿಕೋವ್‌ನ ಕೋಣೆಯತ್ತ ಹೋಗುತ್ತ ಹೀಗಂದುಕೊಂಡು ದುಃಖಪಟ್ಟ. ‘ದೆವ್ವ ಹಿಡೀಲಿ, ಅದು ಯಾಕೆ ಜಿಪುಣ ಯಹೂದಿ ತರ ಆಡಿದೆ? ನಾನೇನು ಅಂಥಾ ಲೆಕ್ಕಾಚಾರ ಹಾಕಿರಲಿಲ್ಲ! ಸ್ವಲ್ಪ ಬಿಗಿ ಮಾಡಿದರೆ ನನ್ನನ್ನೇ ಅವರ ಆಪತ್ಬಾಂಧವ ಅಂದುಕೊಳ್ಳುತ್ತಾರೆ ಅಂತ ಅಂದುಕೊಂಡಿದ್ದೆ. ಈಗೇನಾಯಿತು ನೋಡು!… ಥೂ!…. ಅವರಿಗೆ ಒಂದಷ್ಟು ದುಡ್ಡು, ಸಾವಿರದೈನೂರು ರೂಬಲ್ ಕೊಟ್ಟಿದ್ದಿದ್ದರೆ, ಮದುವೆಗೆ ಕೊಡಬೇಕಾದ ತೆರ ಅಂತ ಹೇಳಿದ್ದಿದ್ದರೆ, ಒಂದಷ್ಟು ಗಿಫ್ಟು, ಥರಾವರಿ ಬಾಕ್ಸು, ಸೋಪು, ಸಣ್ಣಪುಟ್ಟ ಅಲಂಕಾರದ ವಸ್ತು ನಾಪ್ಸ್ ಅಂಗಡಿಯಿಂದಲೋ ಇಂಗ್ಲಿಶ್ ಸ್ಟೋರಿನಿಂದಲೋ ತಂದು ಕೊಟ್ಟಿದ್ದಿದ್ದರೆ ಒಳ್ಳೆಯದಾಗತಿತ್ತು, ಸಂಬಂಧ ಗಟ್ಟಿಯಾಗತಿತ್ತು. ಅವರು ಅಷ್ಟು ಸುಲಭವಾಗಿ ನನ್ನ ಬೇಡ ಅನ್ನುವುದಕ್ಕಾಗುತ್ತಿರಲಿಲ್ಲ! ಮದುವೆ ಬೇಡ ಅಂದರೆ ಉಡುಗೊರೆ, ತೆರ ಕೊಟ್ಟ ದುಡ್ಡು ಎಲ್ಲಾನೂ ವಾಪಸ್ಸು ಕೊಡಬೇಕು ಅನ್ನುವ ಥರದ ಜನ ಅವರು. ವಾಪಸ್ಸು ಕೊಡೋದಕ್ಕೆ ಅವರಿಗೆ ಕಷ್ಟವಾಗುತಿತ್ತು. ಅವರ ಮನಸ್ಸೂ ಅವರನ್ನ ಚುಚ್ಚತಾ ಇತ್ತು. ಉದಾರವಾಗಿ ಸಹಾಯ ಮಾಡಿದ ಮನುಷ್ಯನ್ನ ಇಷ್ಟು ಸಲೀಸಾಗಿ ಒಲ್ಲೆ ಅಂತ ನಿರಾಕರಿಸುವುದಕ್ಕೆ ಆಗತಿರಲಿಲ್ಲ…

‘ತಪ್ಪು ಮಾಡಿಬಿಟ್ಟೆ ನಾನು.’ ಮತ್ತೆ ಗುರುಗುಟ್ಟಿ. ‘ಮೂರ್ಖ ನಾನು!’ ಎಂದು ಘೋಷಿಸಿದ—ತನ್ನ ಮನಸಿನೊಳಗೇ.

ಮನೆಗೆ ಮರಳುವ ಹೊತ್ತಿಗೆ ಈ ತೀರ್ಮಾನ ಅವನ ಕೋಪವನ್ನೂ ಕಹಿಯನ್ನೂ ಮನೆ ಬಿಡುವಾಗ ಇದ್ದುದಕ್ಕಿಂತ ಎರಡು ಪಟ್ಟು ಹೆಚ್ಚಿಸಿತು. ಕ್ಯಾತರೀನ ಇವಾನೋವ್ನಾ ಮನೆಯಲ್ಲಿ ನಡೆಯುತ್ತಿದ್ದ ಅಂತ್ಯ ಸಂಸ್ಕಾರದ ಊಟದ ಏರ್ಪಾಟು ಅವನ ಕುತೂಹಲವನ್ನು ಕೆರಳಿಸಿತು. ತನ್ನನ್ನೂ ಕರೆದಿದ್ದರೇನೋ ಅನ್ನುವ ಮಸುಕು ನೆನಪೂ ಇತ್ತು. ಅವನದೇ ತಾಪತ್ರಯಗಳಲ್ಲಿ ಮುಳುಗಿದ್ದರಿಂದ ಈ ಕೆಲಸಗಳನ್ನೆಲ್ಲ ಅವನು ಗಮನಿಸಿರಲೇ ಇಲ್ಲ. ಸ್ಮಶಾನಕ್ಕೆ ಹೋಗಿದ್ದ ಕ್ಯಾತರೀನ ಇವಾನೋವ್ನಳ ಬದಲಾಗಿ ಊಟದ ಮೇಜುಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಶ್ರೀಮತಿ ಲಿಪ್ಪೆವೆಶೆಲ್‌ಳನ್ನು ವಿಚಾರಿಸಿದ. ಸಂಸ್ಕಾರದ ಊಟ ಹಬ್ಬದ ಊಟದ ಹಾಗೆ ವ್ಯವಸ್ಥೆಯಾಗಿದೆ, ಇಡೀ ಅಪಾರ್ಟ್‌ಮೆಂಟಿನ ಮನೆಗಳವರನ್ನೆಲ್ಲ ಆಹ್ವಾನಿಸಲಾಗಿದೆ ಅನ್ನುವುದನ್ನು ತಿಳಿದ. ಹಾಗೆ ಆಹ್ವಾನ ಪಡೆದವರಲ್ಲಿ ತೀರಿಕೊಂಡ ಮನುಷ್ಯನಿಗೆ ಪರಿಚಯವಿಲ್ಲದವರೂ ಇದ್ದರು.

ಹಿಂದೊಮ್ಮೆ ಕ್ಯಾತರೀನ ಇವಾನೋವ್ನಳ ಜೊತೆ ಜಗಳವಾಡಿದ್ದ, ತನ್ನ ಫ್ಲಾಟನ್ನು ಹಂಚಿಕೊಂಡಿರುವ ಆಂದ್ರೆ ಸೆಮ್ಯೊನೊವಿಚ್ ಲೆಬೆಝ್ಯತ್ನಕೋವ್ ಕೂಡ ಆಹ್ವಾನಿತ ಅನ್ನುವುದು ತಿಳಿಯಿತು. ಪೀಟರ್ ಪೆಟ್ರೊವಿಚ್‌ಗೆ ಆಹ್ವಾನ ನೀಡಿದ್ದು ಮಾತ್ರವಲ್ಲ, ಅವನು ಬರುತ್ತಾನೆಂದು ತಾಳ್ಮೆಗೆಟ್ಟೂ ಕಾಯುತ್ತಿದ್ದರು. ಯಾಕೆಂದರೆ ಅಪಾರ್ಟ್‌ಮೆಂಟಿನ ಬಾಡಿಗೆದಾರರ ನಡುವೆ ಅವನು ಬಹುಮುಖ್ಯ ಅತಿಥಿಯಾಗಿದ್ದ. ಹಳೆಯ ಜಗಳಗಳಿದ್ದರೂ ಅಮಾಲಿಯ ಇವಾನೋವ್ನಳನ್ನೂ ಕರೆದಿದ್ದರು. ಹಾಗಾಗಿ ಅವಳು ಸಡಗರ ಪಡುತ್ತ ಉಸ್ತುವಾರಿ ನೋಡುತ್ತ ತಾರಾಡುತ್ತ ಖುಷಿಪಡುತ್ತಿದ್ದಳು. ಅಲ್ಲದೆ ಒಳ್ಳೆಯ ಉಡುಪು ತೊಟ್ಟು ಬಂದಿದ್ದಳು. ತನ್ನ ಉಡುಪಿನ ಅಂಚಿನ ಕಸೂತಿ ಬಗ್ಗೆ ಹೆಮ್ಮೆ ಪಡುತ್ತಿದ್ದಳು. ಇವೆಲ್ಲ ಸಂಗತಿಗಳು ವಿವರಗಳು ಪೀಟರ್‍ ಪೆಟ್ರೊವಿಚ್‌ಗೆ ಏನೋ ಐಡಿಯ ಕೊಟ್ಟಿದ್ದವು. ಹಾಗಾಗಿ ತನ್ನ ರೂಮಿಗೆ, ಅಂದರೆ ಆಂದ್ರೆ ಸೆಯೊನೊವಿಚ್ ಲೆಬೆಝ್ಯತ್ನಿಕೋವ್‌ನ ಕೋಣೆಗೆ ಏನೋ ಯೋಚನೆ ಮಾಡುತ್ತಾ ಹೋದ. ಪಾಯಿಂಟು ಏನೆಂದರೆ ರಾಸ್ಕೋಲ್ನಿಕೋವ್ ಕೂಡ ಅತಿಥಿಗಳ ಪಟ್ಟಿಯಲ್ಲಿದ್ದಾನೆ ಎಂದು ಅವನಿಗೆ ತಿಳಿದು ಬಂದಿತ್ತು.

ಆಂದ್ರೆ ಸೆಮ್ಯೊನೊವಿಚ್ ಯಾವ ಕಾರಣಕ್ಕೋ ಅವತ್ತು ಬೆಳಗ್ಗೆ ಮನೆಯಲ್ಲೇ ಉಳಿದಿದ್ದ. ಅವನಿಗೂ ಪೀಟರ್ ಪೆಟ್ರೋವಿಚ್‌ಗೂ ತೀರ ವಿಚಿತ್ರವಾದ, ಒಂದು ಥರ ಸಹಜವಾದ ಸಂಬಂಧ ಬೆಳೆದಿತ್ತು. ಅವನನ್ನು ಕಂಡರೆ ಪೀಟರ್ ಪೆಟ್ರೊವಿಚ್‌ಗೆ ಅಸಹ್ಯವಾಗುತ್ತಿತ್ತು, ಮಿತಿ ಮೀರಿದ ದ್ವೇಷ ಹುಟ್ಟುತ್ತಿತ್ತು. ಅವನ ಜೊತೆಯಲ್ಲಿ ವಸತಿ ಗೃಹದಲ್ಲಿ ಇರಲು ಶುರುಮಾಡಿದಾಗಿನಿಂದಲೂ ಹೀಗೇ. ಅವನ ಬಗ್ಗೆ ಸ್ವಲ್ಪ ಭಯವೂ ಇದ್ದ ಹಾಗಿತ್ತು. ಪೀಟರ್ಸ್‌ಬರ್ಗ್‌ಗೆ ಬಂದಾಗ ಅವನ ಜೊತೆಯಲ್ಲಿ ಉಳಿದರೆ ದುಡ್ಡು ಮಿಗುತ್ತದೆ ಅನ್ನುವ ಜಿಪುಣ ಕಾರಣಕ್ಕಲ್ಲ (ನಿಜವಾಗಿ ಅದೇ ಮುಖ್ಯ ಕಾರಣ), ಇನ್ನೊಂದು ಕಾರಣವೂ ಇತ್ತು. ಈ ಸೆಮ್ಯೊನೊವಿಚ್ ಒಂದು ಕಾಲದಲ್ಲಿ ಪೀಟರ್ ಪೆಟ್ರೊವಿಚ್‌ನ ಪೋಷಣೆಯಲ್ಲಿದ್ದವನು. ಅವನೀಗ ಯುವಕ ಪ್ರಗತಿಪರ ಚಿಂತಕನಾಗಿ ಖ್ಯಾತನಾಗಿದ್ದಾನೆ, ಕೆಲವು ಪ್ರಸಿದ್ಧ ಜನರ ಗುಂಪುಗಳಲ್ಲಿ ಅವನಿಗೆ ಪ್ರಮುಖ ಸ್ಥಾನವಿದೆ ಎಂದು ಕೇಳಿದ್ದ. ಈ ಸಂಗತಿ ಪೀಟರ್ ಪೆಟ್ರೊವಿಚ್‌ನನ್ನು ಸೆಳೆದಿತ್ತು. ಎಲ್ಲರನ್ನೂ ಅಸಹ್ಯಪಡುತ್ತ, ಟೀಕೆ ಮಾಡುತ್ತ, ವಿರೋಧಿಸುವ ಸರ್ವಜ್ಞರಂಥವರ ಗುಂಪಿನ ಬಗ್ಗೆ ಪೀಟರ್ ಪೆಟ್ರೊವಿಚ್‌ಗೆ ಭಯವಿತ್ತು, ಇಂಥದೇ ಎಂದು ಹೇಳಲಾಗದಂಥ ಭಯ ಅದು. ಅವನು ಊರಿನಲ್ಲಿ, ಅದರಲ್ಲೂ ಹಳ್ಳಿಯಲ್ಲಿರುವಾಗ ಇಂಥ ಗುಂಪುಗಳ ಬಗ್ಗೆ, ಅವುಗಳ ಶಕ್ತಿಯ ಬಗ್ಗೆ ಸ್ಪಷ್ಟವಾದ ಕಲ್ಪನೆಯಾಗಲೀ ಅಸ್ಪಷ್ಟವಾದ ಊಹೆಯಾಗಲೀ ಇರಲಿಲ್ಲ. ಪೀಟರ್ಸ್‌ಬರ್ಗಿನಲ್ಲಿ ನಿಹಿಲಿಸ್ಟರು, ಪ್ರಗತಿಪರರು, ಎಲ್ಲರನ್ನೂ ಹೀಗಳೆಯುವವರು ಇದ್ದಾರೆ ಎಂದು ಮಿಕ್ಕವರ ಹಾಗೆ ಅವನೂ ಸುಮ್ಮನೆ ಕೇಳಿದ್ದ ಅಷ್ಟೆ. ಇಂಥ ಹೆಸರುಗಳ ಪದಗಳ ಅರ್ಥ, ಮಹತ್ವವನ್ನು ಉತ್ಪ್ರೇಕ್ಷಿಸಿ, ವಿಕೃತಗೊಳಿಸಿ, ಅಸಂಗತಗೊಳಿಸಿಬಿಟ್ಟಿದ್ದ.

ಈ ಗುಂಪುಗಳು ಬಹಿರಂಗವಾಗಿ ಆಪಾದನೆ ಮಾಡುತ್ತವೆ, ಖಂಡಿಸುತ್ತೆ ಅನ್ನುವುದು ಬಹಳ ವರ್ಷಗಳ ಕಾಲ ಅವನಲ್ಲಿ ನಿಷ್ಕಾರಣವಾದ ಕಸಿವಿಸಿ, ಭಯಗಳನ್ನು ಹುಟ್ಟಿಸಿತ್ತು. ಅದರಲ್ಲೂ ತನ್ನ ವ್ಯವಹಾರಗಳನ್ನು ಪೀಟರ್ಸ್‌ಬರ್ಗ್‌ಗೆ ವರ್ಗಾಯಿಸುವ ಯೋಚನೆ ಬಂದಾಗ ಇದೇ ಕಾರಣಕ್ಕೆ ಬೆದರಿದ್ದ—ಮಕ್ಕಳು ಹೆದರುತ್ತಾರಲ್ಲ ಹಾಗೆ. ಕೆಲವು ವರ್ಷಗಳ ಹಿಂದೆ ಪೀಟರ್ ಪೆಟ್ರೊವಿಚ್ ಇನ್ನೂ ಪೂರ್ತಿಯಾಗಿ ತನ್ನ ಕಾಲಮೇಲೆ ನಿಂತಿರದಿದ್ದ ಕಾಲದಲ್ಲಿ ಸ್ಥಳೀಯವಾದ ಇಬ್ಬರು ದೊಡ್ಡಮನುಷ್ಯರನ್ನು ಇಂಥ ಸಂಘಟನೆಗಳು ಬಹಿರಂಗವಾಗಿ ಖಂಡಿಸಿ, ಆಪಾದಿಸಿದ್ದನ್ನೂ ಸಂಘಟನೆಗಳ ಕ್ರೌರ್ಯವನ್ನೂ ಕಂಡಿದ್ದ. ಅವನು ಆ ಇಬ್ಬರು ಸ್ಥಳೀಯ ದೊಡ್ಡಮನುಷ್ಯರ ಹಿಂಬಾಲಕನಾಗಿದ್ದ. ಅವರಲ್ಲಿ ಒಬ್ಬ ಗಣ್ಯನ ಮರ್ಯಾದೆ ಹೋಗಿತ್ತು, ಇನ್ನೊಬ್ಬನ ಬದುಕು ಪೂರ್ತಿ ಹಾಳಾಗಿತ್ತು. ಆ ಕಾರಣಕ್ಕೇನೇ ಪೀಟರ್ ಪೆಟ್ರೊವಿಚ್ ಪೀಟರ್ಸ್‌ಬರ್ಗ್‌ಗೆ ಬಂದ ತಕ್ಷಣ ಪರಿಸ್ಥಿತಿ ಹೇಗಿದೆ ಎಂದು ತಿಳಿಯುವುದಕ್ಕೆ. ಯುವಕರ ತಲೆಮಾರನ್ನು ಮಾತನಾಡಿಸುವ ಸಂದರ್ಭ ಬಂದರೆ, ಉದಾಹರಣೆಗೆ ರಾಸ್ಕೋಲ್ನಿಕೋವ್‌ನಂಥವರ ಜೊತೆ ಮಾತನಾಡುವಾಗ, ಬಾಯಿಪಾಠ ಮಾಡಿದ ಕೆಲವು ಪದ, ನುಡಿಗಟ್ಟು, ವಾಕ್ಯಗಳನ್ನು ಮತ್ತೆ ಮತ್ತೆ ಬಳಸುತ್ತಿದ್ದ.

ಆಂದ್ರೆ ಸೆಮ್ಯೊನೊವಿಚ್ ತೀರ ಸಾದಾ ಸಾಮಾನ್ಯ ಮನುಷ್ಯ ಅನ್ನುವುದು ಬಲು ಬೇಗನೆ ತಿಳಿದರೂ ಪೀಟರ್ ಪೆಟ್ರೊವಿಚ್‌ಗೆ ಸಮಾಧಾನವೂ ಆಗಲಿಲ್ಲ, ಧೈರ್ಯವೂ ಹುಟ್ಟಲಿಲ್ಲ. ಎಲ್ಲ ಪ್ರಗತಿಪರರೂ ಇಂಥವರೇ ಪೆದ್ದರು ಎಂದು ಅವನಿಗೆ ಗ್ಯಾರಂಟಿಯಾಗಿದ್ದಿದ್ದರೂ ಅವನ ಭಯ ತಗ್ಗುತ್ತಿರಲಿಲ್ಲ. ಯಾಕೆಂದರೆ ಆಂದ್ರೆ ಸೆಮ್ಯೊನೊವಿಚ್ ಹೇಳುತ್ತಿದ್ದ ಐಡಿಯಾ, ಸಿದ್ಧಾಂತ, ವ್ಯವಸ್ಥೆ ಇತ್ಯಾದಿಗಳಿಗೂ ಅವನ ಪೀಟರ್ ಪೆಟ್ರೊವಿಚ್‌ನ ಉದ್ದೇಶಕ್ಕೂ ಸಂಬಂಧವೇ ಇರಲಿಲ್ಲ. ಅವನ ಉದ್ದೇಶ ಸ್ಪಷ್ಟವಾಗಿತ್ತು: ಈ ಊರಲ್ಲಿ ಏನಾಗುತ್ತಿದೆ, ಹೇಗೆ ಆಗುತ್ತಿದೆ, ಪ್ರಗತಿಪರರಿಗೆ ವಿಶೇಷವಾದ ಶಕ್ತಿ, ಅಧಿಕಾರ ಇದೆಯೇ ಅನ್ನುವುದು ಗೊತ್ತಾದರೆ ಸಾಕಾಗಿತ್ತು ಅವನಿಗೆ. ವೈಯಕ್ತಿಕವಾಗಿ ತಾನು ಅಂಜಬೇಕಾದದ್ದು ಏನಾದರೂ ಇದೆಯೋ ಇಲ್ಲವೋ? ಈ ವ್ಯಾಪಾರವನ್ನೋ ಆ ವ್ಯಾಪರವನ್ನೋ ಹಿಡಿದರೆ ಅವರು ನನನ್ನೂ ಸಾರ್ವಜನಿಕವಾಗಿ ಖಂಡಿಸಿ ಅವಮಾನ ಮಾಡುತ್ತಾರೋ? ನನ್ನ ಯಾವ ಸಂಗತಿಯನ್ನು ಅವರು ಬಯಲಿಗೆಳೆಯುತ್ತಾರೆ, ಯಾಕೆ? ಈಗಿನ ದಿನಮಾನದಲ್ಲಿ ಯಾರ ಯಾವ ಥರದ ಗುಟ್ಟು ಬಯಲಾಗುತ್ತವೆ? ಈ ಪ್ರಗತಿಪರರಿಗೆ ನಿಜವಾಗಿಯೂ ಶಕ್ತಿ ಇರುವುದೇ ಆದರೆ ಸ್ವಲ್ಪ ಅವರ ಸ್ನೇಹ ಬೆಳೆಸಿಕೊಂಡು ಯಾಮಾರಿಸುವುದು ಒಳ್ಳೆಯದಲ್ಲವೇ? ಹೀಗೆ ಮಾಡಬಹುದೋ, ಬಾರದೋ? ಅವರ ಬೆಂಬಲವಿದ್ದರೆ ವ್ಯವಹಾರ ಮಾಡುವುದಕ್ಕೆ ಧೈರ್ಯ ಬರುತ್ತದಲ್ಲವೇ? ಸ್ವಲ್ಪದರಲ್ಲಿ ಹೇಳಬೇಕೆಂದರೆ ಇಂಥ ನೂರು ಪ್ರಶ್ನೆಗಳು ಪೀಟರ್ ಪೆಟ್ರೊವಿಚ್‌ನನ್ನು ಕಾಡುತ್ತಿದ್ದವು.

ಈ ಆಂದ್ರೆ ಸೆಮ್ಯೊನೊವಿಚ್ ಜೊಂಡಿನ ಹಾಗೆ ಸಣಕಲನಾದ, ನೈತಿಕವಾಗಿ ಭ್ರಷ್ಟನಾದ, ಗಿಡ್ಡ ಮನುಷ್ಯ. ಯಾವುದೋ ಇಲಾಖೆಯಲ್ಲಿ ಕಾರಕೂನನಾಗಿದ್ದ. ಮುಖ ರಕ್ತಹೀನವಾಗಿ ಕಾಣುತ್ತಿತ್ತು, ಕೆನ್ನೆಯ ಮೇಲಿನ ಕೂದಲನ್ನು ಮಟನ್ ಚಾಪ್ ಆಕಾರದಲ್ಲಿ ಕತ್ತರಿಸಿಕೊಂಡು ಆ ಬಗ್ಗೆ ಹೆಮ್ಮೆಪಡುತ್ತಿದ್ದ. ಅವನ ಕಣ್ಣು ಯಾವಾಗಲೂ ಕೆಂಪಗೆ ಊದಿಕೊಂಡಿರುತ್ತಿದ್ದವು.

ಅವನದು ಮೆದು ಮನಸ್ಸು, ಆದರೆ ಮಾತಿನಲ್ಲಿ ಮಾತ್ರ ಅತಿ ಆತ್ಮವಿಶ್ವಾಸದ ದನಿ, ಕೆಲವೊಮ್ಮೆ ಉದ್ಧಟತನದ ದನಿ ಇರುತ್ತಿತ್ತು. ಅವನ ದೇಹದ ಆಕಾರಕ್ಕೂ ಲಕ್ಷಣಕ್ಕೂ ಮಾತಿನ ರೀತಿಗೂ ಹೊಂದಿಕೆಯಾಗದೆ ತಮಾಷೆಯಾಗಿ ಕಾಣುತ್ತಿತ್ತು. ಆದರೂ ಮನೆಯ ಓನರು ಅಮಾಲಿಯ ಇವಾನೋವ್ನಾ ಮಾತ್ರ ಅವನನ್ನು ತನ್ನ ಅತ್ಯಂತ ಗೌರವಾನ್ವಿತ ಬಾಡಿಗೆದಾರ ಎಂದೇ ಭಾವಿಸಿದ್ದಳು. ಅಂದರೆ ಅವನು ಕುಡಿಯುವವನಲ್ಲ, ಬಾಡಿಗೆ ನಿಗದಿಯಾಗಿ ಕೊಡುವವನು ಎಂದಷ್ಟೇ ಅರ್ಥ. ಇವೆಲ್ಲ ಗುಣ ಏನೇ ಇದ್ದರೂ ಆಂದ್ರೆ ಸೆಮ್ಯೊನೊವಿಚ್ ಸ್ವಲ್ಪ ಪೆದ್ದ. ‘ಪ್ರಗತಿ’ಗೆ, ‘ನಮ್ಮ ಯುವ ತಲೆಮಾರಿಗೆ’ ಆವೇಶಪೂರ್ಣವಾಗಿ ಬದ್ಧನಾಗಿದ್ದ. ಕೆಲವರು ಸದ್ಯದ ಫ್ಯಾಶನ್ ಆಗಿ ಚಾಲ್ತಿಯಲ್ಲಿರುವ ಐಡಿಯಕ್ಕೆ ತತ್‌ಕ್ಷಣದಲ್ಲಿ ಚಂದಾದಾರರಾಗಿ ಕುರುಡಾಗಿ ಹಿಂಬಾಲಿಸುತ್ತಾರೆ. ಹಾಗೆ ಮಾಡುತ್ತ ಆ ಐಡಿಯವನ್ನು ಒರಟಾಗಿ ಕೀಳ್ಗೊಳಿಸಿ ಹೊಲಸಾಗಿಸುತ್ತಾರೆ. ತಾವು ಮುಖ್ಯವೆಂದು ಭಾವಿಸುವ ತತ್ವದ ಗಹನತೆಯನ್ನು ಕಳೆದು ಅದನ್ನೊಂದು ಕಾರ್ಟೂನು ಮಾಡುತ್ತಾರೆ, ಚಹರೆಗಳಿಲ್ಲದ, ಸ್ವಂತ ಬುದ್ಧಿ ಇರದ, ದುರ್ಬಲ ಮನಸಿನ, ನೀತಿಭ್ರಷ್ಟರಾದ, ಅಸಂಖ್ಯಾತ ಕ್ಷುದ್ರ ಪ್ರಾಮಾಣಿಕರಲ್ಲಿ ಅವನೂ ಒಬ್ಬ.

ಆದರೂ ಸೆಮ್ಯೊನೊವಿಚ್ ಲೆಬೆಝ್ಯತ್ನಿಕೋವ್ ಎಷ್ಟೇ ಉದಾರ ಹೃದಯಿ, ಕರುಣಾಮಯಿಯಾಗಿದ್ದರೂ ತನ್ನ ಜೊತೆಯಲ್ಲಿ ವಾಸಮಾಡುವ, ತನ್ನ ಹಿಂದಿನ ಪೋಷಕನಾಗಿದ್ದ ಪೀಟರ್ ಪೆಟ್ರೊವಿಚ್‌ನನ್ನು ಸಹಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತಿತ್ತು. ಹೇಗೋ ಏನೋ ಇಬ್ಬರಿಗೂ ಹಾಗೇ ಅನಿಸುವುದಕ್ಕೆ ಶುರುವಾಗಿತ್ತು. ಪೀಟರ್ ಪೆಟ್ರೊವಿಚ್ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಕ್ರಮೇಣ ಸೆಮ್ಯೊನೊವಿಚ್‌ಗೆ ಅನ್ನಿಸುವುದಕ್ಕೆ ಶುರುವಾಯಿತು. ‘ಈ ಮನುಷ್ಯ ಸರಿ ಇಲ್ಲ,’ ಎಂದು ಪೀಟರ್ ಪೆಟ್ರೊವಿಚ್‌ನನ್ನು ಗುಟ್ಟಾಗಿ ಉದಾಸೀನ ಮಾಡುವುದಕ್ಕೆ ಶುರು ಮಾಡಿದ.

ವ್ಯವಸ್ಥೆ ಕುರಿತು ಫೊರಿಯರ್‍ ಚಿಂತನೆಗಳನ್ನು, ಡಾರ್ವಿನ್‌ನ ವಿಕಾಸವಾದವನ್ನು ವಿವರಿಸಲು ಸೆಮ್ಯೊನೊವಿಚ್ ಪ್ರಯತ್ನಪಟ್ಟ. ಆದರೆ ಪೀಟರ್ ಪೆಟ್ರೊವಿಚ್ ಇತ್ತೀಚೆಗಂತೂ ತೀರ ಅಣಕಿಸುವವನ ಹಾಗೆ ಅವನ ಮಾತು ಕೇಳಿಸಿಕೊಳ್ಳುತ್ತಿದ್ದ, ಕೆಲವೊಮ್ಮೆ ಬೈದಾಡುತ್ತಿದ್ದ. ಸೆಮ್ಯೊನೊವಿಚ್‍ ತೀರ ಸಾಮಾನ್ಯನಾದ ಆಸಾಮಿ, ಸುಳ್ಳುಗಾರ, ಅವನಿಗೆ ದೊಡ್ಡ ಮನುಷ್ಯರ ಸಂಪರ್ಕ ಇಲ್ಲ, ತನ್ನ ಜೊತೆಗಾರರಲ್ಲೇ ಪ್ರಮುಖರಾದವರ ಒಡನಾಟವೂ ಇಲ್ಲ, ಮೂರನೆಯವರಿಂದ ವಿಷಯಗಳನ್ನು ಕೇಳಿ ಬಲ್ಲ ಅಷ್ಟೆ, ತತ್ವ ಪ್ರಚಾರದ ಕೆಲಸ ಕೂಡ ಸರಿಯಾಗಿ ಮಾಡಲು ಬರುವುದಿಲ್ಲ ಅವನಿಗೆ, ಯಾರ ಗುಟ್ಟುಗಳನ್ನಾಗಲೀ ವ್ಯವಹಾರವನ್ನಾಗಲೀ ಬಯಲು ಮಾಡಿ ಅವಮಾನಗೊಳಿಸುವಷ್ಟು ತಾಕತ್ತು ಅವನಿಗಿಲ್ಲ ಎಂದು ಪೀಟರ್‍ ಪೆಟ್ರೊವಿಚ್‌ಗೆ ಅನಿಸುತ್ತಿತ್ತು.

ಇಲ್ಲೇ ಒಂದು ಮಾತು ಹೇಳಬೇಕು. ಅವರಿಬ್ಬರೂ ಒಟ್ಟಿಗೆ ವಾಸಮಾಡಲು ಶುರುಮಾಡಿದ ಮೊದಲ ವಾರದಲ್ಲಿ ಪೀಟರ್ ಪೆಟ್ರೊವಿಚ್‍ ಬಹಳ ಸಂತೋಷದಿಂದ ಸೆಮ್ಯೊನೊವಿಚ್‌ನ ಹೊಗಳಿಕೆಯ ಮಾತುಗಳನ್ನು ಆಲಿಸುತ್ತಿದ್ದ. ಉದಾಹರಣೆಗೆ, ಸಂಘಟನೆಯ ಸ್ಥಾಪನೆಗೆ ಕಾಣಿಕೆ ನೀಡುವ ಮನಸ್ಸಿರುವ ಉದಾರಿ ಪೀಟರ್ ಪೆಟ್ರೊವಿಚ್, ದುನ್ಯಾಳನ್ನು ಮದುವೆಯಾದ ಮೊದಲ ತಿಂಗಳಲ್ಲೇ ಆಕೆ ಯಾರಾದರೂ ಪ್ರಿಯಕರನ ಸಂಬಂಧ ಬೆಳೆಸಿದರೆ ಅದನ್ನು ಆಕ್ಷೇಪಣೆ ಮಾಡದಷ್ಟು ಸ್ತ್ರೀ ಸ್ವಾತಂತ್ರ್ಯವಾದಿ ಪೀಟರ್ ಪೆಟ್ರೋವಿಚ್, ತನಗೆ ಹುಟ್ಟುವ ಮಕ್ಕಳಿಗೆ ಚರ್ಚಿನಲ್ಲಿ ದೀಕ್ಷಾಸ್ನಾನ ಕೊಡಿಸದಂಥ ಸಂಪ್ರದಾಯದ ವಿರೋಧಿ ಪೀಟರ್ ಪೆಟ್ರೊವಿಚ್ ಎಂದೆಲ್ಲ ಹೊಗಳಿ, ತನ್ನಲ್ಲಿ ಇಲ್ಲದ ಗುಣಗಳನ್ನೆಲ್ಲ ಆರೋಪಿಸಿ ಮೆಚ್ಚಿ ಪರಾಕು ನುಡಿದರೆ ಸಂತೋಷಪಟ್ಟು ಸುಖಿಸುತಿದ್ದ ಪೀಟರ್ ಪೆಟ್ರೊವಿಚ್.

ಅವತ್ತು ಒಂದು ದಿನ ಬೆಳಿಗ್ಗೆ ಪೀಟರ್ ಪೆಟ್ರೊವಿಚ್ ಯಾವ ಕಾರಣಕ್ಕೋ ಶೇಕಡಾ ಐದು ಬಡ್ಡಿದರದ ಬ್ಯಾಂಕ್ ಠೇವಣಿಯನ್ನು ನಗದು ಮಾಡಿಸಿ ತಂದು, ನೋಟುಗಳನ್ನೆಲ್ಲ ಮೇಜಿನ ಮೇಲೆ ಜೋಡಿಸಿ ಎಣಿಸುತ್ತ ಕೂತ್ತಿದ್ದ. ಎಂದೂ ದುಡ್ಡೇ ಇರದಿದ್ದ ಸೆಮ್ಯೊನೊವಿಚ್ ಕೋಣೆಯಲ್ಲಿ ಅಡ್ಡಾಡುತ್ತ ‘ಈ ದುಡ್ಡಿನ ಕಂತೆ ನೋಡಿದರೆ ನನಗೇನೂ ಅನಿಸಲ್ಲ,’ ಎಂದು ತನ್ನನ್ನೇ ನಂಬಿಸಿಕೊಳ್ಳುತ್ತ ಉದಾಸೀನವನ್ನೂ ತಿರಸ್ಕಾರವನ್ನು ನಟಿಸುತ್ತಿದ್ದ. ಸೆಮ್ಯೊನೊವಿಚ್ ಅಷ್ಟೊಂದು ದುಡ್ಡನ್ನು ಉದಾಸೀನ ಮಾಡಬಲ್ಲ ಅನ್ನುವ ನಂಬಿಕೆ ಪೀಟರ್‍ ಪೆಟ್ರೊವಿಚ್‌ಗೆ ಇರಲೇ ಇಲ್ಲ. ಹಾಗೆಯೇ ಪೀಟರ್ ಪೆಟ್ರೊವಿಚ್‌ಗೆ ನನ್ನ ಬಗ್ಗೆ ಅಪನಂಬಿಕೆ ಇದೆ ಎಂದು ಸೆಮ್ಯೊನೊವಿಚ್ ಕೂಡ ಕಹಿಯಾಗಿ ಅಂದುಕೊಳ್ಳುತ್ತಿದ್ದ. ‘ದುಡ್ಡಿನ ಕಂತೆಯ ಮುಂದೆ ಕೂತಿರುವ ನೀನು ಇತಿಹಾಸದಲ್ಲಿ ಲೆಕ್ಕಕ್ಕೇ ಇರದ ಅನಾಮಧೇಯ! ನನ್ನಂಥ ವಿಚಾರವಾದಿಯಲ್ಲ, ಪ್ರಗತಿಪರನಲ್ಲ,’ ಎಂದು ಪೀಟರ್ ಪೆಟ್ರೊವಿಚ್‌ನನ್ನು ಛೇಡಿಸುವ ಆಸೆಯಾಗುತ್ತಿತ್ತು ಅವನಿಗೆ.

ಸೆಮ್ಯೊನೊವಿಚ್ ತನ್ನ ಪ್ರಿಯ ವಿಷಯವಾದ ಸಂಘಟನೆಯನ್ನು ಕಟ್ಟುವುದನ್ನು ಕುರಿತು ಉತ್ಸಾಹದಿಂದ ಹೇಳುತ್ತಿದ್ದ, ಪೀಟರ್ ಪೆಟ್ರೊವಿಚ್ ಅವನ ಮಾತಿಗೆ ಗಮನ ಕೊಡುತ್ತಲೇ ಇರಲಿಲ್ಲ. ಸೆಮ್ಯೊನೊವಿಚ್‌ಗೆ ಸಿಟ್ಟು ಬರುತ್ತಿತ್ತು. ಪೀಟರ್ ಪೆಟ್ರೊವಿಚ್ ಮಣಿಕಟ್ಟಿನ ಮಣಿಗಳನ್ನು ಸರಿಸುತ್ತ ದುಡ್ಡು ಎಣಿಸುವುದರಲ್ಲಿ ಮುಳುಗಿದ್ದ. ಅವನು ಆಗೀಗ ಮಾಡುತ್ತಿದ್ದ ಟೀಕೆ, ಎತ್ತುತ್ತಿದ್ದ ಆಕ್ಷೇಪಣೆಗಳು ಕೂಡ ಸೆಮ್ಯೊನೊವಿಚ್‌ಗೆ ಅವಹೇಳನದ ಹಾಗೆ ಕಾಣುತ್ತಿದ್ದವು. ಏನೇ ಆದರೂ ಸೆಮ್ಯೊನೊವಿಚ್‍ ‘ಮಾನವೀಯ ಕರುಣೆ’ಯ ಮನುಷ್ಯ.

ನಿನ್ನೆಯ ದಿನ ದುನ್ಯಾಳ ಸಂಬಂಧ ಕಡಿದು ಹೋದದ್ದೇ ಪೀಟರ್ ಪೆಟ್ರೊವಿಚ್‌ನ ಈ ವರ್ತನೆಗೆ ಕಾರಣ ಎಂದು ತನಗೇ ಸಮಾಧಾನ ಹೇಳಿಕೊಂಡ. ಪ್ರಗತಿಪರ ವಿಚಾರಗಳಲ್ಲಿ ಯಾವುದನ್ನಾದರೂ ಈಗ ಆಯ್ದು ಹೇಳಿ ಪೀಟರ್ ಪೆಟ್ರವಿಚ್‌ನ ಮನಸಿಗೆ ಸಮಾಧಾನ ತರಬೇಕು, ಅವನ ಮಾನಸಿಕ ಬೆಳವಣಿಗೆಗೆ ಕಾರಣವಾಗುವಂಥ ಮಾತು ಹೇಳಬೇಕು ಅಂದುಕೊಳ್ಳುತ್ತಿದ್ದ.
ಸೆಮ್ಯೊನೊವಿಚ್‌ನ ಯೋಚನೆಗೆ ಭಂಗ ತರುವ ಹಾಗೆ, ‘ಇವತ್ತೇನೋ ಕಾರ್ಯದ ಊಟ ಇಟ್ಟುಕೊಂಡಿದ್ದಾಳಲ್ಲಾ?’ ಪೀಟರ್ ಪೆಟ್ರೊವಿಚ್ ತಟ್ಟನೆ ಕೇಳಿದ.

‘ಏನು, ನಿನಗೆ ಗೊತ್ತೇ ಇಲ್ಲವಾ? ನಾನೇ ನಿನ್ನೆ ಈ ವಿಚಾರ ಹೇಳಿದ್ದೆ, ಇಂಥ ಆಚರಣೆಗಳ ಬಗ್ಗೆ ಸಿದ್ಧಾಂತ ಏನು ಹೇಳುತ್ತದೆ ಅಂತ ವಿವರಿಸಿದ್ದೆ… ನಿನ್ನನ್ನೂ ಕರೆದಿದ್ದಳಲ್ಲ, ಕೇಳಿಸಿಕೊಂಡೆ. ನೀನೇ ಅವಳ ಜೊತೆ ಮಾತಾಡಿದೆ ನಿನ್ನೆ.’

‘ಅವಳೊಬ್ಬ ದಟ್ಟ ದರಿದ್ರ ಹೆಂಗಸು, ಆ ರಾಸ್ಕೋಲ್ನಿಕೋವ್ ಮಹಾ ಮೂರ್ಖ. ಅವನು ಕೊಟ್ಟ ದುಡ್ಡನ್ನೆಲ್ಲ ಊಟಕ್ಕೆ ಸುರೀತಾಳೆ ಅಂದುಕೊಂಡಿರಲಿಲ್ಲ… ಈಗ ತಾನೇ ಆ ಕಡೆಯಿಂದ ಬರತಾ ನೋಡಿದೆ, ಊಟದ ಸಿದ್ಧತೆ ನೋಡಿ ಆಶ್ಚರ್ಯವಾಯಿತು… ಎಷ್ಟೊಂದು ಜನಗಳನ್ನ ಕರೆದಿದ್ದಾರೆ… ಏನು ನಡೀತಿದೆಯೋ ದೆವ್ವಕ್ಕೇ ಗೊತ್ತು,’ ಯಾವುದೋ ಕಾರಣಕ್ಕೆ ಮಾತು ಮುಂದುವರೆಸುವ ಆಸೆ ಇರುವವನ ಹಾಗೆ ಅಂದ ಪೀಟರ್ ಪೆಟ್ರೊವಿಚ್.

‘ಏನು, ನನ್ನನ್ನೂ ಕರೆದಿದ್ದಾರೆ, ಅಂದೆಯಾ?’ ತಟ್ಟನೆ ತಲೆ ಎತ್ತಿದ. ‘ಯಾವಾಗ ಕರೆದರು? ನನಗೆ ನೆನಪೇ ಇಲ್ಲ. ನಾನು ಹೇಗಿದ್ದರೂ ಹೋಗಲ್ಲ. ಅಲ್ಲಾ ಯಾಕೆ ಹೋಗಲಿ? ನಿನ್ನೆ ಹಾಗೇ ಮಾತಾಡತಾ ಇರುವಾಗ ನೋಡಿ, ನೀವು ಬಡ ಅನಾಥ ವಿಧವೆ, ಸರ್ಕಾರಿ ನೌಕರನ ಹೆಂಡತಿ, ಒಂದು ವರ್ಷದ ಪಿಂಚಣಿಯನ್ನ ಮುಂಗಡ ತೆಗೆದುಕೊಳ್ಳೋದಕ್ಕೆ ಆಗುತ್ತದೋ ಪ್ರಯತ್ನಪಡಿ,’ ಅಂತ ಅಂದೆ, ಅದಕ್ಕೇ ಕರೆದಿರಬಹುದು.’ ಅಂದ.

‘ಹೋಗಬೇಕು ಅಂತ ನನಗೂ ಇಲ್ಲ,’ ಅಂದ ಸೆಮ್ಯೊನೊವಿಚ್.

‘ನಿನಗೆ ಅನ್ನಿಸಲ್ಲ, ಖಂಡಿತ ಅನ್ನಿಸಲ್ಲ. ಯಾಕೆ ಅಂದರೆ ನೀನೇ ನಿನ್ನ ಕೈಯಾರೆ ಅವಳನ್ನ ಹಿಡಿದು ಬಡಿದಿದ್ದೀಯ. ಹೋಗಕ್ಕೆ ಮುಜುಗರ ಆಗತ್ತೆ, ಹ್ಹೆಹ್ಹೆಹ್ಹೇ!’.

‘ಯಾರು ಹೊಡೆದದ್ದು? ಯಾರನ್ನ?’ ಸೆಮ್ಯೊನೊವಿಚ್ ಮುಖ ಕೆಂಪಾಯಿತು.

‘ಯಾಕಪ್ಪಾ? ನೀನೇ ಹೊಡೆದೆಯಂತಲ್ಲ ಕ್ಯಾತರೀನ ಇವಾನೋವ್ನಾಳನ್ನ? ಸುಮಾರು ಒಂದು ತಿಂಗಳ ಹಿಂದೆ… ಆ ವಿಚಾರ ನಿನ್ನೆ ಕೇಳಿದೆ… ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ನಿನ್ನ ವಿಚಾರ ಈ ಮಟ್ಟದ್ದು… ನಿನ್ನ ಏಟು ಬಿದ್ದ ಮೇಲೆ ಅವಳು ಕುಂಟಕ್ಕೆ ಶುರುಮಾಡಿದಳು. ಹ್ಹೆಹ್ಹೆಹ್ಹೇ!’

ಮನಸ್ಸು ಸ್ವಲ್ಪ ಹಗುರವಾಯಿತು ಅನ್ನುವ ಹಾಗೆ ಮತ್ತೆ ಮಣಿಕಟ್ಟಿನಲ್ಲಿ ಲೆಕ್ಕಾಚಾರ ಮುಂದುವರೆಸಿದ.

‘ಎಲ್ಲಾ ಸುಳ್ಳು! ನಾನ್ಸೆನ್ಸ್!’ ಆ ಕಥೆಯನ್ನು ನೆನಪು ಮಾಡಿದ್ದರಿಂದ ಸೆಮ್ಯೊನೊವಿಚ್ ಸಿಡಿದು ಬಿದ್ದ. ‘ಹಾಗೆಲ್ಲ ಏನೂ ಇಲ್ಲ! ನಡೆದದ್ದೇ ಬೇರೆ… ನೀನು ಏನೇನೋ ಕೇಳಿಸಿಕೊಂಡಿದ್ದೀಯ! ಗಾಳಿ ಸುದ್ದಿ! ಅವಳು ನನ್ನ ಪರಚೋದಕ್ಕೆ ಬಂದಳು, ಒಂದು ಕೆನ್ನೆ ಪರಚಿ ಹಾಕಿದಳು. ನನ್ನನ್ನ ನಾನು ಕಾಪಾಡಿಕೊ ಬೇಕಾಗಿತ್ತು… ಪ್ರತಿಯೊಬ್ಬರಿಗೂ ಆತ್ಮ ರಕ್ಷಣೆ ಮಾಡಿಕೊಳ್ಳೋದಕ್ಕೆ ಅವಕಾಶ ಇದೆ. ಅಲ್ಲದೆ ನನ್ನನ್ನ ಹಿಂಸೆ ಮಾಡೋದಕ್ಕೆ ಯಾರಿಗೂ ಅವಕಾಶ ಕೊಡಲ್ಲ, ಇದು ನನ್ನ ತತ್ವ. ಯಾಕೆಂದರೆ ಅದು ನಿರಂಕುಶಾಧಿಕಾರಕ್ಕೆ ದಾರಿ ಮಾಡಿಕೊಡತ್ತೆ. ಅವಳು ಪರಚಿದರೆ ನಾನು ಸುಮ್ಮನೆ ನಿಂತಿರಬೇಕಾಗಿತ್ತ? ಅವಳನ್ನ ದೂರ ತಳ್ಳಿದೆ ಅಷ್ಟೆ.’

‘ಹ್ಹೆ ಹ್ಹೆ ಹೇ!’ ಪೀಟರ್ ಪೆಟ್ರೊವಿಚ್ ದುಷ್ಟ ನಗು ನಗುತ್ತಲೇ ಇದ್ದ.

‘ನಿನ್ನ ಮೂಡು ಚೆನ್ನಾಗಿಲ್ಲ, ಅದಕ್ಕೇ ನನ್ನ ರೇಗಿಸಕ್ಕೆ ನೋಡತಾ ಇದೀಯ… ನಾನ್ಸೆನ್ಸ್. ಸ್ತ್ರೀ ಸಮಾನತೆಯ ಪ್ರಶ್ನೆಗೂ ಇದಕ್ಕೂ ಸಂಬಂಧವೇ ಇಲ್ಲ! ನೀನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನನ್ನ ನಿಲುವು ಏನಪ್ಪಾ ಅಂದರೆ, ಹೆಣ್ಣು ಎಲ್ಲಾ ವಿಷಯಗಳಲ್ಲೂ, ಕೆಲವರು ಹೇಳುವ ಹಾಗೆ ದೇಹದ ಬಲದಲ್ಲೂ, ಗಂಡಸಿಗೆ ಸಮಾನ ಅನ್ನೋದಾದರೆ ಇಂಥಾ ವಿಚಾರದಲ್ಲೂ ಸಮಾನಳೇ ಆಗಿರಬೇಕು. ಆಮೇಲೆ ವಿಚಾರ ಮಾಡಿದೆ, ಇಂಥ ಪ್ರಶ್ನೆಗೆ ಅವಕಾಶವೇ ಇರಬಾರದು. ಯಾಕೆಂದರೆ ಬರಲಿರುವ ಹೊಸ ಸಮಾಜದಲ್ಲಿ ಹೊಡೆದಾಟ ಇರಲ್ಲ, ಇರಲೇಬಾರದು… ಹೊಡೆದಾಟದಲ್ಲಿ ಸಮಾನತೆ ಹುಡುಕೋದು ವಿಚಿತ್ರ… ಅಂಥ ಪೆದ್ದ ಅಲ್ಲ ನಾನು… ಅಂಥ ಹೊಡೆದಾಟ ಈಗ ನಡೆದರೂ… ಭವಿಷ್ಯದ ಸಮಾಜದಲ್ಲಿ ಇರೋದೇ ಇಲ್ಲ… ಥೂ, ನಿನಗೆ ಈ ಜನಕ್ಕೆ ತಲೆ ಕೆಟ್ಟಿದೆ. ತಿಥಿಯಂಥ ಮೂಢ ನಂಬಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ ಅನ್ನುವ ತಾತ್ವಿಕ ಕಾರಣಕ್ಕೆ ನಾನು ಕಾರ್ಯದ ಊಟಕ್ಕೆ ಹೋಗತಾ ಇಲ್ಲವೇ ಹೊರತು ಅವಳ ಜೊತೆ ಜಗಳ ಆಡಿದೆ ಅಂತಲ್ಲ. ಇಂಥ ಆಚರಣೆಗಳನ್ನ ತಮಾಷೆ ಮಾಡಿ ನಗೋದಕ್ಕೆ ಹೋದರೂ ಹೋಗಬಹುದು. ಪಾದ್ರಿಗಳು ಬರತಾ ಇಲ್ಲ ತಿಥೀಗೆ. ಬಂದಿದ್ದರೆ ಖಂಡಿತ ನಾನೂ ಹೋಗಿರತಿದ್ದೆ, ಖಂಡಿತ.’

‘ಅಂದರೆ, ಯಾರೋ ಕರೆದ ಊಟಕ್ಕೆ ಹೋಗತೀಯ, ಹೋದವನೇ ತಟ್ಟೆಗೆ ಥೂ ಅಂತ ಉಗೀತೀಯ, ನಿನ್ನ ಊಟಕ್ಕೆ ಕರೆದವರಿಗೆ ಅವಮಾನ ಮಾಡತೀಯ, ಅಲ್ಲವಾ?’

ಕೆಲವರು ಸದ್ಯದ ಫ್ಯಾಶನ್ ಆಗಿ ಚಾಲ್ತಿಯಲ್ಲಿರುವ ಐಡಿಯಕ್ಕೆ ತತ್‌ಕ್ಷಣದಲ್ಲಿ ಚಂದಾದಾರರಾಗಿ ಕುರುಡಾಗಿ ಹಿಂಬಾಲಿಸುತ್ತಾರೆ. ಹಾಗೆ ಮಾಡುತ್ತ ಆ ಐಡಿಯವನ್ನು ಒರಟಾಗಿ ಕೀಳ್ಗೊಳಿಸಿ ಹೊಲಸಾಗಿಸುತ್ತಾರೆ.

‘ನಾನು ತಟ್ಟೆಗೆ ಉಗಿಯಲ್ಲ, ವಿರೋಧ ಮಾಡತೇನೆ ಮೂಢ ನಂಬಿಕೆಗಳನ್ನ. ಇದರಿಂದ ನಮ್ಮ ಸಂಘಟನೆಯ ತತ್ವಗಳನ್ನ ಪರೋಕ್ಷವಾಗಿ ಪ್ರಚಾರ ಮಾಡಿದ ಹಾಗಾಗತ್ತೆ. ಒಳ್ಳೆಯ ತತ್ವಗಳ ಪ್ರಚಾರ ಮಾಡುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಅದು ವಾಸ್ತವತೆಯ ಬೀಜ ಬಿತ್ತುವ ಕೆಲಸ. ಮುಂದೊಂದು ದಿನ ವಾಸ್ತವತೆ ಬೆಳೆಯುವುದಕ್ಕೆ ಅವಕಾಶವಾಗತ್ತೆ. ಹೀಗೆ ಮಾಡೋದರಿಂದ ಯಾರಿಗೆ ಕೆಟ್ಟದ್ದು ಬಯಸಿದ ಹಾಗಾಯಿತು? ಮೊದಮೊದಲು ಜನಕ್ಕೆ ನಾನು ಮಾಡುವ ಕೆಲಸದಿಂದ ಬೇಜಾರಾಗತ್ತೆ, ಆಮೇಲೆ ಕ್ರಮೇಣ ನಾನು ಮಾಡಿದ್ದು ಸರಿ ಅಂದುಕೊಳ್ಳತಾರೆ! ಜನ ಕಾಮ್ರೇಡ್ ಟ್ರೆಬ್ಯೇವಾಳನ್ನ (ಅವಳು ಈಗ ಸಂಘಟನೆಯಲ್ಲಿದಾಳೆ) ಹೇಗೆ ಬೈದರು ಗೊತ್ತಲ್ಲಾ? ಅವಳು ಮನೆ ಬಿಟ್ಟು ಬಂದಳು, ಪೂರ್ವಾಗ್ರಹಗಳು ತುಂಬಿರುವ ಕುಟುಂಬದಲ್ಲಿ ನಾನು ಬದುಕಲಾರೆ ಸಿವಿಲ್ ಮದುವೆ ಮಾಡಿಕೊಳ್ಳತಿದೀನಿ ಅಂತ ಅಪ್ಪನಿಗೆ ಕಾಗದ ಬರೆದಿಟ್ಟು ಬಂದುಬಿಟ್ಟಳು.

ಅಪ್ಪ ಅಮ್ಮನ ಹತ್ತಿರ ಹೀಗೆ ನಡೆದುಕೊಳ್ಳಬಾರದಾಗಿತ್ತು, ಇಷ್ಟು ಒರಟಾಗಿ ಬರೆಯಬಾರದಾಗಿತ್ತು ಅಂದರು. ಅದೆಲ್ಲ ನಾನ್ಸೆನ್ಸ್. ನನ್ನ ಅಭಿಪ್ರಾಯದಲ್ಲಿ ಅವಳು ಮೃದುವಾದ ಭಾಷೆಯಲ್ಲಿ ಬರೆಯಲೇಬಾರದಾಗಿತ್ತು. ಪ್ರತಿಭಟನೆ ಯಾವಾಗಲೂ ಪ್ರಬಲವಾಗಿರಬೇಕು. ವೆರನ್ಟೆ ಇದಾಳಲ್ಲ ಅವಳನ್ನ ನೋಡು. ಗಂಡನ ಜೊತೆ ಏಳು ವರ್ಷ ಇದ್ದಳು. ಇಬ್ಬರು ಮಕ್ಕಳನ್ನೂ ಗಂಡನ್ನೂ ಬಿಟ್ಟು ಬಂದಳು. ‘ನಿನ್ನ ಜೊತೆ ಸಂತೋಷವಾಗಿ ಬದುಕುವುದಕ್ಕೆ ಆಗಲ್ಲ, ಬೇರೊಂದು ರೀತಿಯ ಸಾಮಾಜಿಕ ವ್ಯವಸ್ಥೆ, ಸಾಮುದಾಯಿಕ ಸಂಘಟನೆ ಸಾಧ್ಯ ಅನ್ನುವುದನ್ನು ನನ್ನಿಂದ ಬಚ್ಚಿಟ್ಟಿದ್ದೀಯ ನೀನು. ದೊಡ್ಡ ಮನಸ್ಸಿನ ಕಾಮ್ರೇಡ್‌ನಿಂದ ಇದು ತಿಳಿಯಿತು. ನಾನು ನಿನ್ನ ಕ್ಷಮಿಸಲ್ಲ, ನನ್ನನ್ನು ಕಾಮ್ರೇಡ್‌ಗೆ ಒಪ್ಪಿಸಿಕೊಳ್ಳುತ್ತಿದ್ದೇನೆ. ನಾವಿಬ್ಬರೂ ಹೊಸ ಸಮುದಾಯ ಸಂಘಟನೆ ಕಟ್ಟುತಿದ್ದೇವೆ. ಇದನ್ನು ನೇರವಾಗಿ ಹೇಳುತ್ತಿದ್ದೇನೆ, ಯಾಕೆಂದರೆ ನಿನಗೆ ಮೋಸ ಮಾಡುವುದಕ್ಕೆ ನನಗಿಷ್ಟವಿಲ್ಲ. ನಿನಗೆ ಇಷ್ಟ ಬಂದ ಹಾಗೆ ನೀನು ಬದುಕು, ನನ್ನ ವಾಪಸ್ಸು ಕರೆದುಕೊಂಡು ಹೋಗಲು ಪ್ರಯತ್ನ ಮಾಡಬೇಡ, ನಿನಗೆ ಒಳ್ಳೆಯದಾಗಲಿ,’ ಅಂತ ಕಾಗದ ಬರೆದಳು.

‘ಇದೇ ತೆರೆಬ್ಯೇವಾ ಅಲ್ಲವಾ, ಮೂರನೆಯ ಸಿವಿಲ್ ಮದುವೆ ಆದಳು ಅಂತ ನೀನು ಹೇಳಿದ್ದು?ʼ

‘ಸರಿಯಾಗಿ ಲೆಕ್ಕ ಹಾಕಿದರೆ ಮೂರನೆಯದಲ್ಲ, ಎರಡನೆಯದು. ನಾಲ್ಕನೆಯದಾದರೇನು, ಹದಿನೈದನೆಯದಾದರೇನು? ಎಲ್ಲ ನಾನ್ಸೆನ್ಸ್. ನಮ್ಮಪ್ಪ ಅಮ್ಮ ಬದುಕಿದ್ದಿದ್ದರೆ ನನ್ನ ಪ್ರತಿಭಟನೆಯ ರುಚಿ ಅವರಿಗೆ ಎಷ್ಟು ಸಾರಿ ಎಷ್ಟು ಚೆನ್ನಾಗಿ ತೋರಿಸುತ್ತಿದ್ದೆ ಗೊತ್ತಾ? ಬದುಕಿರಬೇಕಾಗಿತ್ತು ಅವರು! ನಾನೇ ಒಂದು ಸಂದರ್ಭ ಸೃಷ್ಟಿ ಮಾಡಿ, ಅಪ್ಪ ಅಮ್ಮನ ಸಂಬಂಧ ಮುರಿದುಕೊಂಡು, ಪ್ರತಿಭಟಿಸಿ ಮನೆ ಬಿಟ್ಟು ಬಂದಿರತಿದ್ದೆ. ಅವರಿಗೆ ಆಶ್ಚರ್ಯ ಹುಟ್ಟಿಸತಿದ್ದೆ. ಏನು ಮಾಡಲಿ, ನನಗೆ ಯಾರೂ ಇಲ್ಲವಲ್ಲಾ!’

‘ಆಶ್ಚರ್ಯ ಹುಟ್ಟಿಸೋದಕ್ಕೆ ಯಾರೂ ಇಲ್ಲಾ ಅಂತಲಾ? ಹ್ಹೆಹ್ಹೇ… ಅದು ನಿನಗೆ ಬಿಟ್ಟದ್ದು. ನನಗೆ ಇಷ್ಟು ಹೇಳು: ಸತ್ತು ಹೋದನಲ್ಲ ಅವನ ಕೊನೆಯ ಮಗಳು, ಅದೇ ಸಣಕಲಿ, ಗೊತ್ತಲ್ಲಾ? ಅವಳ ಬಗ್ಗೆ ಜನ ಹೇಳೋದು ಪೂರ್ತಿ ನಿಜಾನಾ?ʼ

‘ನಿಜ ಆಗಿದ್ದರೆ ಏನೀಗ? ಅಂದರೆ ನನ್ನ ಸ್ವಂತ ಅಭಿಪ್ರಾಯ, ಸ್ವಂತ ನಂಬಿಕೆ ಏನಂದರೆ ಹೆಂಗಸಿನ ಮಾಮೂಲು ಗತಿ ಅದೇನೇ. ಯಾಕಾಗಬಾರದು? ಪೃಥಕ್ಕರಿಸಿ ನೋಡಣ. ವರ್ತಮಾನ ಕಾಲದ ಸಮಾಜದಲ್ಲಿ ಅದು ಮಾಮೂಲಲ್ಲ. ಯಾಕೆಂದರೆ ಅವಳನ್ನ ಬಲವಂತ ಮಾಡಿ ಆ ಕಸುಬಿಗೆ ದಬ್ಬುತ್ತಾರೆ. ಭವಿಷ್ಯದಲ್ಲಿ ಇದು ಸಹಜ ಸಾಮಾನ್ಯವಾಗಿರತ್ತೆ, ಯಾಕೆಂದರೆ ಹೆಣ್ಣಿಗೆ ತನಗೆ ಬೇಕಾದ ರೀತಿ ಬದುಕುವ ಅವಕಾಶ ಇರುತ್ತದೆ. ಅವಳ ದೇಹವೇ ಅವಳ ಮೀಸಲು ಬಂಡವಾಳ, ಅದನ್ನ ಬೇಕಾದ ಹಾಗೆ ಬಳಸುವುದು ಅವಳ ಹಕ್ಕು. ಬರಲಿರುವ ಸಮಾಜದಲ್ಲಿ ಮೀಸಲು ನಿಧಿಯನ್ನು ಬಳಸುವ ಅಗತ್ಯವೇ ಇರಲ್ಲ. ಸಮಾಜ ವ್ಯವಸ್ಥೆಯಲ್ಲಿ ಅವಳಿಗೆ ಯಾವ ಕಾರ್ಯ ಅದರ ಮಹತ್ವವೇನು ಅನ್ನುವುದು ಸಾಮರಸ್ಯದಿಂದ, ವೈಚಾರಿಕವಾಗಿ ನಿರ್ಧರಿಸಿದ್ದಾಗಿರುತ್ತದೆ. ಸೋನ್ಯಾ ವಿಚಾರಕ್ಕೆ ಬರುವುದಾದರೆ ಅವಳು ಕ್ರಿಯಾಶೀಲವಾಗಿ ವರ್ತಿಸಿದಳು, ಅವಳು ಇಟ್ಟ ಹೆಜ್ಜೆ ಈ ಸಾಮಾಜಿಕ ವ್ಯವಸ್ಥೆಯ ವಿರುದ್ಧವಾಗಿರುವ ಪ್ರತಿಭಟನೆಯ ಮೊದಲ ಹೆಜ್ಜೆ. ಅದರ ಬಗ್ಗೆ ನನಗೆ ಗೌರವವಿದೆ, ಸಂತೋಷ ಕೂಡ ಇದೆ!’

‘ಆದರೂ ಅವಳನ್ನ ಮನೆಯಿಂದ ಹೊರಗೆ ಹಾಕುವುದಕ್ಕೆ ನೀನೇ ಕಾರಣ ಅಂತ ಕೇಳಿದೇನೆ!’ ಅಂದ ಪೀಟರ್ ಪೆಟ್ರೊವಿಚ್.!”
ಲೆಬೆಝ್ಯಾತ್ನಿಕೋವ್‌ಗೆ ಸಿಟ್ಟು ಬಂತು.

‘ಬರೀ ಗಾಳಿ ಮಾತು! ಹಾಗೆಲ್ಲ ಏನೂ ನಡೀಲಿಲ್ಲ, ಇಲ್ಲವೇ ಇಲ್ಲ! ಎಲ್ಲಾನೂ ಕ್ಯಾತರೀನ ಇವಾನೋವ್ನಾ ಹೇಳಿದ ಬರೀ ಸುಳ್ಳು. ನಾನು ಯಾವ ಥರದಲ್ಲೂ ಸೋನ್ಯಾನ ಬಲವಂತ ಮಾಡಲಿಲ್ಲ! ಬಹಳ ನಿರಾಸಕ್ತನಾಗಿ ಅವಳ ಬೆಳವಣಿಗೆಯಾಗಲೆಂದು ಬಯಸುತ್ತಿದ್ದೆ, ಅವಳಲ್ಲಿ ಪ್ರತಿಭಟನೆಯ ಶಕ್ತಿ ಬೆಳೆಯಲು ಸಹಾಯಮಾಡುತ್ತಿದ್ದೆ… ಅವಳು ಪ್ರತಿಭಟಿಸುವುದಷ್ಟೇ ನನಗೆ ಬೇಕಾಗಿದ್ದದ್ದು. ಹೇಗೂ ಸೋನ್ಯಾ ಆ ಮನೆಯಲ್ಲಿ ಹಾಗೇ ಇರುವುದಕ್ಕೆ ಸಾಧ್ಯವಿರಲಿಲ್ಲ.’

‘ಯಾವುದಾದರೂ ಸಮುದಾಯ ಸಂಘಟನೆಗೆ ಅವಳನ್ನು ಕರೆದಿದ್ದೆಯಾ?’

‘ನಾನು ಮಾಡತಿರೋದು ತಪ್ಪು ಅನ್ನೋ ಹಾಗೆ ನಗತಾ ಇದೀಯ. ನಿನಗೆ ಏನೂ ಅಂದರೆ ಏನೂ ಅರ್ಥ ಆಗಲ್ಲ. ಸಮುದಾಯ ಸಂಘಟನೆಗಳಲ್ಲಿ ಇಂಥ ಪಾತ್ರಗಳು ಇರಲ್ಲ. ಇಂಥ ಪಾತ್ರಗಳು ಇರಬಾರದು ಅನ್ನುವ ಕಾರಣಕ್ಕಾಗಿಯೇ ಸಮುದಾಯ ಸಂಘಟನೆಗಳನ್ನು ರೂಪಿಸಿರುವುದು. ಈಗ ಸೋನ್ಯಾ ವಹಿಸುತ್ತಿರುವ ಪಾತ್ರ ಸಮುದಾಯ ಸಂಘಟನೆಯಲ್ಲಿ ಪೂರಾ ಬದಲಾಗುತ್ತದೆ. ಈ ಸಮಾಜದಲ್ಲಿ ಯಾವುದು ಸ್ಟುಪಿಡ್ ಅನಿಸುತ್ತದೋ ಅದು ಅಲ್ಲಿ ಸಹಜವಾದ ಕೆಲಸವಾಗಿ ಬದಲಾಗುತ್ತದೆ. ಎಲ್ಲಾದಕ್ಕೂ ಸಂದರ್ಭ ಮುಖ್ಯ, ಪರಿಸರ ಮುಖ್ಯ. ಮನುಷ್ಯ ತನ್ನಷ್ಟಕ್ಕೆ ಏನೇನೂ ಅಲ್ಲ, ಪರಿಸರವೇ ಪ್ರಧಾನ. ಸೋನ್ಯಾ ಈಗ ಕೂಡ ನನ್ನ ಜೊತೆ ಚೆನ್ನಾಗೇ ಮಾತಾಡತಾಳೆ ಅಂದರೆ ನನ್ನನ್ನ ಅವಳು ಶತ್ರು ಅಂತಲೋ ತಪ್ಪಿತಸ್ಥ ಅಂತಲೋ ತಿಳಿದಿಲ್ಲ ಅಂತಾಯಿತು. ಅವಳನ್ನ ಈಗ ಸಾಮುದಾಯಿಕ ಸಂಘಟನೆಗೆ ಪುಲಾಯಿಸುತ್ತಿರುವುದೂ ಬೇರೆಯದೇ ತಳಹದಿಯ ಮೇಲೆ. ಇದರಲ್ಲಿ ತಮಾಷೆ ಅನ್ನಿಸೋಂಥದ್ದು, ನಗೋಂಥದ್ದು ಏನಿದೆ? ನಾವು ನಮ್ಮದೇ ಸಾಮುದಾಯಿಕ ಸಂಘಟನೆ ಕಟ್ಟತೇವೆ, ಮೊದಲು ಇದ್ದ ಸಂಘಟನೆಗಿಂತ ವಿಶಾಲ ತಳಹದಿಯದ್ದು ಇದು. ಈಗ ನಮ್ಮ ಬದ್ಧತೆ ದೃಢವಾಗಿದೆ. ಈಗ ನಾವು ನಿರಾಕರಿಸುವ ಸಂಗತಿಗಳು ಹೆಚ್ಚಾಗಿವೆ!

ಡೊಬ್ರೊಲ್ಯುಬೋ ಸಮಾಧಿಯಿಂದ ಎದ್ದು ಬಂದರೆ ಅವನ ಜೊತೆ ವಾದ ಮಾಡತೇನೆ. ಬೆಲಿನ್ಸ್ಕಿ ಬಂದರೆ ಬೇಡ ಅಂತ ತಿರಸ್ಕಾರ ಮಾಡತೇನೆ. ಈ ಮಧ್ಯೆ ಸೋನ್ಯಾಳ ಬೆಳವಣಿಗೆಗೆ ಗಮನ ಕೊಡುತ್ತಿದ್ದೇನೆ. ಅವಳ ಸ್ವಭಾವ ಬಹಳ ಒಳ್ಳೆಯದು, ಸುಂದರವಾದದ್ದು.’

‘ಹಾಗಾದರೆ ಅವಳ ಸ್ವಭಾವದ ಸೌಂದರ್ಯವನ್ನು ಬಳಸಿಕೊಳ್ಳುತ್ತಿದ್ದೀಯಾ, ಹ್ಞಾ? ಹೆಹ್ಹೇ!’

‘ಇಲ್ಲ, ಇಲ್ಲ! ತದ್ವಿರುದ್ಧ…’

‘ಆಹಾ, ತದ್ವಿರುದ್ಧ! ಎಂಥಾ ಮಾತು!’

‘ಇಲ್ಲ, ನನ್ನ ಮಾತು ನಂಬು! ನಿನ್ನಿಂದ ಬಚ್ಚಿಡುವುದಕ್ಕೆ ನನಗೇನು ಕಾರಣ ಇದೆ, ಹೇಳು ನೋಡಣ? ತದ್ವಿರುದ್ಧವಾಗಿ ನನಗೇ ವಿಚಿತ್ರ ಅನಿಸುತ್ತಿದೆ. ಅವಳು ವಿಶೇಷವಾಗಿ ನನ್ನ ಜೊತೆ ಮಾತಾಡುವಾಗ ತುಂಬ ಭಯಪಟ್ಟವಳ ಹಾಗೆ ಸದ್ಗೃಹಿಣಿಯ ಹಾಗೆ, ಸೌಜನ್ಯ ತೋರಿಸತಾಳೆ, ನಾಚಿಕೊಳ್ಳತಾಳೆ.’

‘ಮತ್ತೆ ನೀನು ಅವಳಿಗೆ ಶಿಕ್ಷಣ ಕೊಟ್ಟು ಬೆಳವಣಿಗೆ ಆಗುವ ಹಾಗೆ ಮಾಡತಿದೀಯ, ಹೆಹ್ಹೆ! ಅಂದರೆ ಈ ಸೌಜನ್ಯ, ನಾಚಿಕೆ ಇವೆಲ್ಲ ನಾನ್ಸೆನ್ಸ್ ಅಂತ ಶಿಕ್ಷಣ ಕೊಡತಾ ಇದೀಯಾ?’

‘ಖಂಡಿತ ಇಲ್ಲ! ಖಂಡಿತ ಇಲ್ಲ! ಬೆಳವಣಿಗೆ, ಶಿಕ್ಷಣ ಇಂಥ ಪದಗಳನ್ನ ಎಷ್ಟು ಪೆಕರು ಪೆಕರಾಗಿ, ಅರ್ಥಮಾಡಿಕೊಂಡಿದೀಯ! ಪೆಕರು ಅಂದದಕ್ಕೆ ಸಾರಿ. ನಿನಗೆ ಏನೇನೂ ಅರ್ಥ ಆಗಲ್ಲ! ನೀನು ಈ ತತ್ವಗಳನ್ನ ಅರ್ಥಮಾಡಿಕೊಳ್ಳಕೆ ಇನ್ನೂ ಸಿದ್ಧನಾಗಿಲ್ಲ. ನಮಗೆ ಮಹಿಳೆಯರ ಸ್ವಾತಂತ್ರ್ಯ ಮುಖ್ಯ. ನಿನ್ನ ಮನಸ್ಸಲ್ಲಿರೋದೇ ಬೇರೆ.. ಪಾವಿತ್ರ್ಯ, ನಾಚಿಕೆ ಈ ಪ್ರಶ್ನೆಗಳನ್ನೆಲ್ಲ ಪಕ್ಕಕ್ಕೆ ಇಡೋಣ. ಇವೆಲ್ಲ ಕೆಲಸಕ್ಕೆ ಬಾರದವು, ತಮಗೇ ತೊಂದರೆ ಅಂತ ಹೆಂಗಸರೇ ಅಂದುಕೊಳ್ಳುತ್ತಿದ್ದಾರೆ ಯಾಕೆ ಅಂದರೆ ಇವೆಲ್ಲ ಅವರ ಇಚ್ಛೆಗೆ ಸಂಬಂಧಿಸಿದ್ದು. ಸಹಜವಾಗೇ ಅವಳೇನಾದರೂ ನನ್ನ ಹತ್ತಿರ ಬಂದು ‘ನೀನು ಬೇಕು ನನಗೆ,’ ಅಂದರೆ ನಾನು ಅದೃಷ್ಟವಂತ ಅಂದುಕೊಳ್ಳತೇನೆ! ಯಾಕೆ ಅಂದರೆ ನನಗೂ ಆ ಹುಡುಗಿ ಇಷ್ಟ. ಆದರೆ, ಇದುವರೆಗೂ ಅವಳನ್ನು ಯಾರೂ ನನ್ನಷ್ಟು ಮರ್ಯಾದೆಯಿಂದ, ಗೌರವಪೂರ್ವಕವಾಗಿ ಮಾತಾಡಿಸಿಲ್ಲ. ನಾನು ಆಸೆ ಇಟ್ಟುಕೊಂಡು ಕಾಯತೇನೆ, ಅಷ್ಟೆ!’

‘ಇದೆಲ್ಲಕ್ಕಿಂತ ಅವಳಿಗೆ ಏನಾದರೂ ಉಡುಗೊರೆ ತಂದುಕೊಟ್ಟಿದ್ದರೆ ಹೆಚ್ಚು ಉಪಯೋಗ ಆಗತಿತ್ತು. ನಿನಗೆ ಅಂಥ ಯೋಚನೆ ಬಂದಿರಕ್ಕೆ ಸಾಧ್ಯನೇ ಇಲ್ಲ. ಬೆಟ್ ಕಟ್ಟತೇನೆ ಬೇಕಾದರೆ!’

‘ನಿನಗೆ ಏ-ನೂ ಅರ್ಥ ಆಗಲ್ಲ. ಹಾಗೆ ಕೊಟ್ಟ ಉಡುಗೊರೆ ಇಸಕೊಳ್ಳುವ ಸ್ಥಿತಿಯಲ್ಲಿದಾಳೆ, ನಿಜಾನೇ. ಆದರೆ, ಇಲ್ಲಿರುವ ಪ್ರಶ್ನೆನೇ ಬೇರೆ! ತೀರಾ ಬೇರೆ ಪ್ರಶ್ನೆ! ನೀನು ಅವಳನ್ನ ತಿರಸ್ಕಾರ ಮಾಡತಿದ್ದೀಯ, ಅಷ್ಟೆ. ಅಸಹ್ಯ ಪಡುವಂಥ, ತಿರಸ್ಕಾರ ಮಾಡುವಂಥ ಪರಿಸ್ಥಿತಿ ಯಾವುದು ಅಂತ ನೀನು ಅಂದುಕೊಂಡಿದೀಯೋ ಅದು ಅವಳದ್ದು ಅಂದುಕೊಂಡಿದ್ದೀಯ, ಅವಳೇ ಅಸಹ್ಯ ಅಂತ ತಿಳಿದಿದ್ದೀಯ. ಹಾಗಾಗಿ ನೀನು ಅವಳನ್ನ ಮನುಷ್ಯಳು ಅಂತಾನೇ ನೋಡತಾ ಇಲ್ಲ. ಅವಳ ಸ್ವಭಾವಾನೇ ನಿನಗೆ ಇನ್ನೂ ಅರ್ಥ ಆಗಿಲ್ಲ. ಅವಳಂತೂ ಇತ್ತೀಚೆಗೆ ಓದುವುದನ್ನೇ ಬಿಟ್ಟಿದಾಳೆ, ನನ್ನ ಹತ್ತಿರ ಮೊದಲಿನ ಹಾಗೆ ಪುಸ್ತಕ ಕೇಳತಾ ಇಲ್ಲ. ಅವಳಿಗಿರುವ ಶಕ್ತಿ. ಪ್ರತಿಭಟನೆಯ ದೃಢ ನಿರ್ಧಾರ (ಒಂದು ಸಾರಿ ಆಗಲೇ ಅದನ್ನ ತೋರಿಸಿಕೊಂಡಿದಾಳೆ) ಇವಕ್ಕೆ ತಕ್ಕ ಹಾಗೆ ಅವಳು ಇನ್ನೂ ಸ್ವಾವಲಂಬಿ ಆಗಿಲ್ಲ, ಅಥವಾ ಅವಳಿಗೆ ಪೂರ್ಣ ಸ್ವಾತಂತ್ರ ಸಿಕ್ಕಿಲ್ಲ ಅಂತಲೂ ಅನ್ನಬಹುದು. ಕೆಲವು ಬಗೆಯ ಮೌಢ್ಯಗಳಿಂದ, ಪೂರ್ವಾಗ್ರಹಗಳಿಂದ ಬಿಡಿಸಿಕೊಳ್ಳುವುದಕ್ಕೆ ಆಗಿಲ್ಲ ಅವಳಿಗೆ. ಇಷ್ಟೆಲ್ಲ ಇದ್ದರೂ ಕೆಲವು ಪ್ರಶ್ನೆಗಳನ್ನ ತೀರ ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದಾಳೆ.

ಉದಾಹರಣೆಗೆ [ವಾಟ್ ಈಸ್ ಟು ಬಿ ಡನ್‍ ನಲ್ಲಿ ಹೇಳಿರುವ ಹಾಗೆ] ಗಂಡಸರು ಹೆಣ್ಣುಮಕ್ಕಳ ಕೈಗೆ ಮುತ್ತು ಕೊಡುವ ಪದ್ಧತಿ ಇದೆಯಲ್ಲ ಅದು ಗಂಡಸರು ಹೆಂಗಸರಿಗೆ ತೋರಿಸುವ ಅಗೌರವ, ಹೆಂಗಸರು ಮನುಷ್ಯರೇ ಅಲ್ಲ, ತಮ್ಮ ಸಮಾನರಲ್ಲ ಅನ್ನುವ ಭಾವದಿಂದ ಹುಟ್ಟಿದ್ದು ಅಂತ ಅವಳಿಗೆ ಗೊತ್ತಿದೆ. ನಾವು ಈ ವಿಷಯ ಚರ್ಚೆ ಮಾಡುತಿದ್ದೆವು. ಫ್ರಾನ್ಸಿನ ಕೆಲಸಗಾರರ ಪ್ರಶ್ನೆ ಚರ್ಚೆ ಮಾಡುತಿದ್ದೆವು. ಈಗ ಭವಿಷ್ಯದ ಸಮಾಜದಲ್ಲಿ ಕೋಣೆಯೊಳಕ್ಕೆ ಕಾಲಿಡುವ ಸ್ವಾತಂತ್ರ್ಯದ ಬಗ್ಗೆ ಅವಳಿಗೆ ವಿವರಿಸತಾ ಇದೇನೆ.’

‘ಏನು ಹಾಗಂದರೆ?’

‘ಇತ್ತೀಚೆಗೆ ಈ ವಿಷಯ ಚರ್ಚೆ ಮಾಡತಿದ್ದೆವು. ಸಾಮುದಾಯಿಕ ಸಂಘಟನೆಯ ಒಬ್ಬ ವ್ಯಕ್ತಿ ಯಾವುದೇ ಹೊತ್ತಿನಲ್ಲಾದರೂ ಇನ್ನೊಬ್ಬರ, ಗಂಡಸಾದರೂ ಸರಿ ಹೆಂಗಸಾದರೂ ಸರಿ, ಕೋಣೆಗೆ ಹೋಗುವ ಸ್ವಾತಂತ್ರ್ಯ ಇದೆಯೋ ಅನ್ನುವ ಪ್ರಶ್ನೆ.. ಸರಿ, ಚರ್ಚೆ ಮಾಡಿ ಅಂಥ ಸ್ವಾತಂತ್ರ್ಯ ಇದೆ ಅಂತ ತೀರ್ಮಾನ ಮಾಡಿದೆವು.’

‘ಆ ಹೊತ್ತಿನಲ್ಲಿ ಕೋಣೆಯಲ್ಲಿರುವ ಅವನೋ ಅವಳೋ ಅನಿವಾರ್ಯವಾದ ದೇಹ ಬಾಧೆ ತೀರಿಸಿಕೊಳ್ಳತಾ ಇದ್ದರೂ ಪರವಾಗಿಲ್ಲವಾ! ಹ್ಹೆ ಹ್ಹೆ ಹ್ಹೇ!’

‘ನೀನು ಮೂರು ಹೊತ್ತೂ ಈ ‘ದೇಹಬಾಧೆ’ ಬಗ್ಗೆನೇ ಮಾತಾಡತೀಯ.. ಥೂ! ನನಗೆ ಸಿಟ್ಟು ಬರತ್ತೆ, ನನ್ನ ಮೇಲೇನೇ! ನಮ್ಮ ಈ ದೇಹಬಾಧೆ ವಿಷಯ ನಿನಗೆ ಸರಿಯಾದ ತಿಳಿವಳಿಕೆ ಬರುವವರೆಗೆ ಈ ವಿಷಯವನ್ನ ನಮ್ಮ ಸಮುದಾಯ ಸಂಘಟನೆಯಲ್ಲಿ ನಿರ್ವಹಿಸುತ್ತೇವೆ ಅನ್ನುವುದನ್ನ ನಿನಗೆ ಹೇಳಬಾರದಾಗಿತ್ತು ನಾನು. ನೀನು, ನಿನ್ನಂಥವರು, ಎಲ್ಲೋ ಕಿವಿಗೆ ಬಿದ್ದ ಮಾತುಗಳನ್ನ ಅರ್ಥ ಮಾಡಿಕೊಳ್ಳದೆ ಎಸೆದಾಡತೀರಿ! ಅದರಲ್ಲೇ ಏನೋ ಹೆಮ್ಮೆ ನಿಮಗೆ! ಥೂ! ನಿನ್ನಂಥ ಹೊಸಬರಿಗೆ ನಮ್ಮ ಹೊಸ ವ್ಯವಸ್ಥೆಯ ಬಗ್ಗೆ ನಂಬಿಕೆ ಬಂದಮೇಲೆ, ಮಿಕ್ಕ ಎಲ್ಲ ವಿಷಯ ನೀವು ಅರ್ಥಮಾಡಿಕೊಂಡ ಮೇಲೆ, ಇದನ್ನ ಹೇಳಬೇಕಾಗಿತ್ತು. ದಯವಿಟ್ಟು ಹೇಳಪ್ಪಾ, ಮಲದಗುಂಡಿಗಳಲ್ಲಿ ನಾಚಿಕೆ ಪಡುವಂಥದ್ದು, ತಿರಸ್ಕಾರ ಮಾಡುವಂಥದ್ದು ಏನಿದೆ? ಅವನ್ನ ಸ್ವಚ್ಛ ಮಾಡೋದಕ್ಕೆ ನಾನೇ ತಯಾರು! ಅದರಲ್ಲಿ ಆತ್ಮ ತ್ಯಾಗದ ಅಂಶ ಏನೇನೂ ಇಲ್ಲ. ಅದು ಮಾಡಲೇಬೇಕಾದ, ಸಾಮಾಜಿಕವಾಗಿ ಉಪಯುಕ್ತವಾದ ಕಸುಬು. ರಫೇಲ್ ಅಥವ ಪುಷ್ಕಿನ್ ಮಾಡುವ ಕೆಲಸಕ್ಕಿಂತ ಗೌರವಕ್ಕೆ ಅರ್ಹವಾದ ಉದಾತ್ತವಾದ ಕೆಲಸ. ಯಾಕೆಂದರೆ ಅದು ಅಗತ್ಯವಾದ ಕೆಲಸ!’

‘ಹೆಚ್ಚು ಉದಾತ್ತವಾದ ಕೆಲಸ, ಹೆ ಹ್ಹೆ ಹ್ಹೇ ಹ್ಹೇ!’

‘ಏನು ಉದಾತ್ತ ಅಂದರೆ? ಮನುಷ್ಯರ ಕೆಲಸಗಳನ್ನ ಉದಾತ್ತ, ಸಾಮಾನ್ಯ, ಕೀಳು ಅಂತ ವಿಂಗಡಿಸುವುದು ನನಗೆ ಅರ್ಥವಾಗಲ್ಲ. ಅದೆಲ್ಲ ನಾನ್ಸೆನ್ಸ್, ಅಸಂಬದ್ಧ, ಹಳೆಯ ಪೂರ್ವಾಗ್ರಹ ತುಂಬಿಕೊಂಡಿರುವ ಶಬ್ದಗಳು. ಇಂಥ ಧೋರಣೆಯನ್ನ ಪ್ರತಿಭಟಿಸಿ ನಿರಾಕರಿಸತೇನೆ. ಮನುಷ್ಯ ಕುಲಕ್ಕೆ ಯಾವುದು ಉಪಯುಕ್ತವೋ ಅದೇ ಉದಾತ್ತ! ನೀನು, ನಿಮ್ಮಂಥವರು ಎಷ್ಟೇ ಕಿಸಿಕಿಸಿ ನಕ್ಕರೂ ನನಗೆ ಅರ್ಥವಾಗುವುದು ‘ಉಪಯೋಗ’ ಅನ್ನುವ ಪದ ಮಾತ್ರ!’

ಪೀಟರ್ ಪೆಟ್ರೊವಿಚ್ ಬಹಳ ನಗುತ್ತಿದ್ದ. ದುಡ್ಡು ಎಣಿಸಿ, ಎತ್ತಿಡುವ ಕೆಲಸ ಮುಗಿಸಿದ್ದ. ಆದರೂ ಯಾಕೋ ಏನೋ ಸ್ವಲ್ಪ ದುಡ್ಡು ಮೇಜಿನ ಮೇಲೇ ಉಳಿದಿತ್ತು. ಮಲದ ಗುಂಡಿಯ ಪ್ರಶ್ನೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ, ಜಗಳ, ಮನಸ್ತಾಪಕ್ಕೆ ಎಷ್ಟೋ ಬಾರಿ ಕಾರಣವಾಗಿತ್ತು. ಪೀಟರ್ ಪೆಟ್ರೊವಿಚ್ ಯಾವುದೋ ಎದೆಯ ಭಾರ ಇಳಿಸಿಕೊಳ್ಳುವುದಕ್ಕೆ, ಸೆಮ್ಯೊನೊವಿಚ್‌ನನ್ನು ರೇಗಿಸುವುದಕ್ಕೆ ಹೀಗೆ ಮಾತಾಡುತಿದ್ದರೆ ಸೆಮ್ಯೊನೊವಿಚ್ ನಿಜವಾಗಲೂ ಕೆರಳಿ ಕೋಪಗೊಂಡಿದ್ದ.

‘ನಿನ್ನೆ ದಿನ ನೀನು ಅಂದುಕೊಂಡದ್ದು ಆಗಲಿಲ್ಲ, ಸೋತು ಹೋದೆ ಅಂತ ಸಿಟ್ಟುಮಾಡಿಕೊಂಡು ಬಾಯಿಗೆ ಬಂದದ್ದು ಹೇಳತಿದ್ದೀಯ,’ ಕೊನೆಗೂ ಸೆಮ್ಯೊನೊವಿಚ್ ಸಿಡಿದು ಬಿದ್ದ. ಅವನು ‘ಸ್ವಾತಂತ್ರ್ಯ’ ‘ಪ್ರತಿಭಟನೆ’ಗಳ ಬಗ್ಗೆ ಎಷ್ಟೇ ಮಾತಾಡಿದರೂ ಪೀಟರ್ ಪೆಟ್ರೊವಿಚ್‌ನನ್ನು ಎದುರಿಸುವ ಧೈರ್ಯ ನಿಜವಾಗಿ ಅವನಿಗಿರಲಿಲ್ಲ. ಅವನ ಬಗ್ಗೆ ಗೌರವ ಇರಿಸಿಕೊಂಡೇ ಮಾತಾಡುತ್ತಿದ್ದ. ಇದು ಬಹಳ ವರ್ಷಗಳಿಂದ ಬೆಳೆದು ಬಂದಿದ್ದ ಅಭ್ಯಾಸ.

‘ನನಗೆ ಒಂದು ವಿಷಯ ಹೇಳು,’ ಪೀಟರ್ ಪೆಟ್ರೊವಿಚ್ ಅವನ ಮಾತು ತಡೆದು ಕೇಳಿದ. ‘ನಿನ್ನ ಕೈಯಲ್ಲಿ ಆಗತ್ತಾ…, ಅಲ್ಲಾ ಸರಿಯಾಗಿ ಕೇಳಬೇಕು ಅಂದರೆ… ಈ ಹುಡಗಿಯನ್ನ ಈಗಲೆ ಇಲ್ಲಿಗೆ ಬರಬೇಕು ಅಂತ ಹೇಳುವಷ್ಟು ಅವಳ ಪರಿಚಯ ನಿನಗೆ ಇದೆಯಾ? ನಿನ್ನ ಕೈಯಲ್ಲಿ ಆಗತ್ತ? ಇಲ್ಲಿಗೆ, ಈ ರೂಮಿಗೆ, ಒಂದು ನಿಮಿಷ ಕರೀತೀಯ? ಇಷ್ಟು ಹೊತ್ತಿಗೆ ಅವರೆಲ್ಲ ಚರ್ಚಿನಿಂದ ವಾಪಸು ಬಂದಿರಬೇಕು. ಜನ ಓಡಾಡುವ ಸದ್ದು ಕೇಳತಿತ್ತು. ನಾನು ಅವಳನ್ನ ನೋಡಲೇಬೇಕು.’

‘ಯಾಕೆ?’ ಸೆಮ್ಯೊನೊವಿಚ್ ಆಶ್ಚರ್ಯಪಟ್ಟು ಕೇಳಿದ.

‘ನಾನು ಇಲ್ಲಿಂದ ಇವತ್ತೋ ನಾಳೆನೋ ಹೊರಡತೇನೆ. ಅದನ್ನ ಅವಳಿಗೆ ಹೇಳಬೇಕಾಗಿತ್ತು. ನಾವು ಮಾತಾಡುವಾಗ ನೀನು ಇಲ್ಲೇ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ನೀನು ಏನೇನು ಅಂದುಕೊಳ್ಳುತ್ತೀಯೊ ದೇವರಿಗೇ ಗೊತ್ತು.’
‘ಏನೂ ಅಂದುಕೊಳ್ಳಲ್ಲ ನಾನು… ಅವಳ ಹತ್ತಿರ ಏನು ಕೆಲಸ ಅಂತ ಮಾಮೂಲಾಗಿ ಕೇಳಿದೆ, ಅಷ್ಟೆ. ಈಗಲೇ ಹೋಗಿ ಕರೀತೇನೆ. ನಿಮ್ಮ ವ್ಯವಹಾರಕ್ಕೆ ನಾನು ಅಡ್ಡ ಬರಲ್ಲ.’

ಮುಂದೆ ಐದೇ ನಿಮಿಷದಲ್ಲಿ ಅವನು ಸೋನ್ಯಾಳನ್ನು ಕರೆದುಕೊಂಡು ಬಂದ. ಅವಳು ಬಹಳ ಆಶ್ಚರ್ಯಪಟ್ಟುಕೊಳ್ಳುತ್ತ, ಹಾಗೆಯೇ ಅಂಜುತ್ತ ಬಂದಳು. ಇಂಥ ಸಂದರ್ಭ ಬಂದಾಗಲೆಲ್ಲ ಹೆದರುತ್ತಿದ್ದಳು ಅವಳು. ಹೊಸ ಮುಖ, ಹೊಸ ಪರಿಚಯ ಅವಳಿಗೆ ದಿಗಿಲು ತರುತ್ತಿದ್ದವು. ಚಿಕ್ಕಂದಿನಲ್ಲೂ ಆಗುತ್ತಿದ್ದ ಇಂಥ ಭಯ ಈಗ ದೊಡ್ಡವಳಾದಮೇಲೆ ಇನ್ನೂ ಹೆಚ್ಚಾಗಿತ್ತು… ಪೀಟರ್ ಪೆಟ್ರೊವಿಚ್ ಅವಳನ್ನು ‘ಸಜ್ಜನಿಕೆಯಿಂದ, ಸ್ನೇಹಪೂರ್ವಕ’ವಾಗಿ ಮಾತನಾಡಿಸಿದ. ಮಾತಿನಲ್ಲಿ ‘ಇವಳನ್ನು ನಾನು ಬಲ್ಲೆ,’ ಅನ್ನುವ ಲಘುವಾದ ಪರಿಚಯದ ಛಾಯೆ ಇತ್ತು. ತನ್ನಂಥ ಶ್ರೀಮಂತ ಗೌರವಾನ್ವಿತನು ಇಂಥ ವಿಶೇಷ ಕುತೂಹಲ ಹುಟ್ಟಿಸುವ ಯುವತಿಯನ್ನು ಹೀಗೆ ಮಾತಾಡಿಸುವುದೇ ಸರಿ ಎಂದು ಪೀಟರ್ ಪೆಟ್ರೊವಿಚ್ ಅಂದುಕೊಂಡಿದ್ದ. ಅವಳಲ್ಲಿ ‘ಧೈರ್ಯ’ ತುಂಬಿದ, ಮೇಜಿನ ಮತ್ತೊಂದು ಬದಿಯಲ್ಲಿ ತನಗೆದುರಾಗಿ ಕೂರಿಸಿಕೊಂಡ. ಸೋನ್ಯಾ ಕೂತು ಸುತ್ತಲೂ ನೋಡಿದಳು. ಸೆಮ್ಯೊನೊವಿಚ್‌ನನ್ನು ನೋಡಿದಳು, ಮೇಜಿನ ಮೇಲೆ ಇದ್ದ ದುಡ್ಡು ನೋಡಿದಳು. ಮತ್ತೆ ತಟ್ಟನೆ ಪೀಟರ್ ಪೆಟ್ರೊವಿಚ್‌ನನ್ನು ನೋಡಿದಳು. ಅವನ ಮೇಲೆ ನೆಟ್ಟ ದೃಷ್ಟಿಯನ್ನು ಹೊರಳಿಸಲು ಆಗಲೇ ಇಲ್ಲ. ಸೆಮ್ಯೊನೊವಿಚ್ ಬಾಗಿಲ ಕಡೆಗೆ ಹೆಜ್ಜೆ ಹಾಕಿದ. ಪೀಟರ್ ಪೆಟ್ರೊವಿಚ್ ಎದ್ದು ನಿಂತ. ‘ಕುಳಿತೇ ಇರು’ ಅನ್ನುವ ಹಾಗೆ ಸೋನ್ಯಾಳಿಗೆ ಸನ್ನೆ ಮಾಡಿದ. ತಾನು ಬಾಗಿಲ ಬಳಿಗೆ ಹೋಗಿ ಸೆಮ್ಯೊನೊವಿಚ್‌ನನ್ನು ತಡೆದ.

‘ಈ ರಾಸ್ಕೋಲ್ನಿಕೋವ್—ಇದಾನಾ ಅಲ್ಲಿ? ಬಂದಿದಾನಾ?’ ಪಿಸುದನಿಯಲ್ಲಿ ಕೇಳಿದ.

‘ರಾಸ್ಕೋಲ್ನಿಕೋವ್? ಹ್ಞೂಂ. ಯಾಕೆ? ಅಲ್ಲಿದಾನೆ… ಈಗ ತಾನೇ ಬಂದ… ನೋಡಿದೆ. ಯಾಕೆ?’

‘ಹಾಗಾದರೆ, ದಯವಿಟ್ಟು ನೀನು ನಮ್ಮ ಜೊತೆಯಲ್ಲೇ ಇರು. ಅವಳ ಜೊತೆಯಲ್ಲಿ ನನ್ನೊಬ್ಬನನ್ನೇ ಬಿಟ್ಟು ಹೋಗಬೇಡ… ಇದು ಸಣ್ಣ ವಿಚಾರ, ಆದರೆ ಜನ ಏನೇನು ಆಡಿಕೊಳ್ಳುತ್ತಾರೋ ದೇವರಿಗೇ ಗೊತ್ತು. ರಾಸ್ಕೋಲ್ನಿಕೋವ್ ಅವರಿಗೆಲ್ಲ ಏನೇನೋ ಹೇಳಬಾರದು… ಗೊತ್ತಾಯಿತಲ್ಲ?’

‘ಓ, ತಿಳಿಯಿತು, ತಿಳಿಯಿತು!ʼ ಸೆಮ್ಯೊನೊವಿಚ್ ತಟ್ಟನೆ ಅರ್ಥಮಾಡಿಕೊಂಡ. ‘ನಿನಗೆ ಹಾಗೆ ಕೇಳುವ ಹಕ್ಕಿದೆ. ಆದರೆ ನನ್ನ ಕೇಳಿದರೆ ನೀನು ಸುಮ್ಮಸುಮ್ಮನೆ ಅತಿಯಾಗಿ ಭಯಪಡತಿದ್ದೀಯ ಅನಿಸತ್ತೆ. ಆದರೂ, ನೀನು ಇರು ಅಂದರೆ ಇರತೇನೆ, . ಕಿಟಕಿ ಹತ್ತಿರ ನಿಂತಿರತೇನೆ, ನಿಮಗೆ ಅಡ್ಡಿ ಮಾಡಲ್ಲ…’

ಪೀಟರ್ ಪೆಟ್ರೊವಿಚ್ ಹೋಗಿ ಸೋನ್ಯಾಳ ಎದುರಿಗೆ ಸೋಫಾದ ಮೇಲೆ ಕುಳಿತ. ಅವಳನ್ನು ಗಮನವಿಟ್ಟು ನೋಡಿದ. ಕಠಿಣ ಅನ್ನಿಸುವಷ್ಟು ಮುಖ ಬಿಗಿದುಕೊಂಡು—ಸುಮ್ಮನೆ ಏನೇನೋ ಅಂದುಕೋಬೇಡ—ಅನ್ನುವಂಥ ಭಾವ ತಂದುಕೊಂಡ. ಸೋನ್ಯಾ ತೀರ ಮುಜುಗರಪಟ್ಟಳು.

‘ಸೋನ್ಯಾ ಸೆಮ್ಯೊನೋವ್ನಾ, ಮೊದಲಿಗೆ ನಿಮ್ಮ ತಾಯಿಯವರ… ಸರಿ ತಾನೇ ನಾನು ಹೇಳಿದ್ದು? ಅಂದರೆ ಕ್ಯಾತರೀನ ಇವಾನೋವ್ನಾ ನಿಮ್ಮ ತಾಯಿ ಥರಾನೇ ಅಲ್ಲವಾ?..’ ಪ್ರೀತಿ ಸ್ನೇಹಗಳ ಉದ್ದೇಶ ಇದೆ ಅನಿಸಿದರೂ ಘನ ಗಂಭೀರವಾಗಿ ಕೇಳಿದ.

‘ಸರಿ, ಸರ್, ಸರಿ. ನಮ್ಮ ತಾಯಿ ಥರಾ,’ ಸೋನ್ಯಾ ದಡಬಡಿಸಿ ಅಂಜುತ್ತ ಹೇಳಿದಳು.

‘ಹಾಗಿದ್ರೆ ಆಕೆಯ ಕ್ಷಮೆ ಕೇಳಬೇಕು. ಯಾವುಯಾವುದೋ ಕೆಲಸ, ನಾನು ಹೊರಗೆ ಹೋಗಲೇ ಬೇಕಾಗಿದೆ, ಹಾಗಾಗಿ ನಿಮ್ಮ ಮನೆಯ ಭೋಜನ… ಅಂದರೆ, ಕಾರ್ಯದ ಊಟಕ್ಕೆ ಬರಲಾರೆ. ನಿಮ್ಮ ತಾಯಿಯವರು ಬಹಳ ಪ್ರೀತಿಯಿಂದ ಕರೆದಿದ್ದರು…’

‘ಸರಿ, ಸರ್. ಹೇಳತೇನೆ, ಈಗಲೇ ಹೇಳತೇನೆ ಸರ್’ ಸೋನ್ಯಾ ತಟ್ಟನೆ ಎದ್ದಳು. ‘ಮಾತಿನ್ನೂ ಮುಗಿದಿಲ್ಲ.’ ಪೀಟರ್ ಪೆಟ್ರೊವಿಚ್ ಅವಳನ್ನು ತಡೆದ. ಸಭ್ಯ ಸಮಾಜದ ಶಿಷ್ಟಾಚಾರದ ಅರಿವು ಇಲ್ಲದ ಸೋನ್ಯಾಳ ಸರಳತೆ, ಅಜ್ಞಾನಗಳನ್ನು ಕಂಡವನ ಹಾಗೆ ನಕ್ಕ. ‘ನನ್ನ ಪರಿಚಯವೇ ನಿಮಗೆ ಪೂರ್ತಿಯಾಗಿ ಇಲ್ಲ ಸೋನ್ಯಾ ಸೆಮ್ಯೊನೋವ್ನಾ. ಇಂಥ ಅಮುಖ್ಯವಾದ ವಿಚಾರ ನಿಮಗೆ ಹೇಳುವುದಕ್ಕೆ ಅಂತಲೇ ನಿಮ್ಮಂಥವರಿಗೆ ತೊಂದರೆ ಕೊಟ್ಟು ನನ್ನ ಹತ್ತಿರಕ್ಕೆ ಕರೆಸಿಕೊಂಡೆ ಅಂದುಕೊಂಡಿರಾ? ಮುಖ್ಯವಾದ ವಿಚಾರ ಬೇರೆ ಇದೆ, ಇವರೇ.’

ಸೋನ್ಯಾ ದಡಕ್ಕನೆ ಕೂತಳು. ಇನ್ನೂ ಮೇಜಿನ ಮೇಲೇ ಇದ್ದ ಗರಿಗರಿಯಾದ ನೋಟುಗಳ ಬಣ್ಣ ಅವಳ ಕಣ್ಣಿನಲ್ಲಿ ಮಿಂಚಿದವು. ತಟ್ಟನೆ ಮುಖ ತಿರುಗಿಸಿ ಪೀಟರ್ ಪೆಟ್ರೊವಿಚ್‌ನನ್ನು ನೋಡಿದಳು.—ಬೇರೆಯವರಿಗೆ ಸೇರಿದ ದುಡ್ಡನ್ನು. ದಿಟ್ಟಿಸುವುದು, ಅದರಲ್ಲೂ ತಾನು ದಿಟ್ಟಿಸುವುದು ಅಸಭ್ಯ ಅನಿಸಿತು. ನೋಟವನ್ನು ಪೆಟ್ರೋವಿಚ್‌ನ ಮೇಲೆ ನಿಲ್ಲಿಸಲು ಪ್ರಯತ್ನಪಟ್ಟಳು. ಚಿನ್ನದ ಕಟ್ಟು ಇರುವ ಭೂತಗನ್ನಡಿಯನ್ನು ಎತ್ತಿ ಹಿಡಿದಿದ್ದ ಅವನ ಎಡದ ಕೈಯ ಮಧ್ಯದ ಬೆರಳಿನಲ್ಲಿದ್ದ ದೊಡ್ಡ, ಮಜಬೂತಾದ ಹರಳು ಕಟ್ಟಿದ ಸುಂದರವಾದ ಚಿನ್ನದುಂಗುರ ಕಂಡಿತು. ಮತ್ತೆ ತಟ್ಟನೆ ಮುಖ ತಿರುಗಿಸಿದಳು, ಪೀಟರ್ ಪೆಟ್ರೊವಿಚ್‌ನ ಕಣ್ಣು ದಿಟ್ಟಿಸಿದಳು.. ಮೊದಲಿಗಿಂತ ಇನ್ನೂ ಭಾರವಾದ ಮೌನವನ್ನು ಇನ್ನೂ ಸ್ವಲ್ಪ ಹೊತ್ತು ಮುಂದುವರೆಸಿ ಆಮೇಲೆ ಮಾತಾಡಿದ.

‘ನಿನ್ನೆ ಹೀಗೇ ಹೋಗತಾ ಇರುವಾಗ ನಿಮ್ಮ ತಾಯಿಯವರ ಜೊತೆ ಒಂದೆರಡು ಮಾತಾಡಿದೆ. ಅಷ್ಟರಿಂದಲೇನೇ ಪಾಪ ಆಕೆ –ಹಾಗನ್ನಬಹುದಾದರೆ—ಅಸಹಜವಾದ ಸ್ಥಿತಿಯಲ್ಲಿದ್ದಾರೆ ಅನ್ನಿಸಿತು…’

‘ಹೌದು, ಸರ್… ಅಸಹಜ, ಸರ್.’ ಸೋನ್ಯಾ ಅವನ ಮಾತಿಗೆ ತಟ್ಟನೆ ಹೂಂಗುಟ್ಟಿದಳು.

‘ಸರಳವಾಗಿ ಹೇಳಬೇಕು ಅಂದರೆ, ಅವಳಿಗೆ ಕಾಯಿಲೆ—ಹುಷಾರಿಲ್ಲ.’

‘ಹೌದು, ಸರ್. ಸರಳವಾಗಿ ಹೇಳಬೇಕು ಅಂದರೆ, ಅವಳಿಗೆ ಕಾಯಿಲೆ, ಸರ್.’

‘ಹಾಗಾಗಿ, ಇವರೇ, ನಿಮ್ಮ ತಾಯಿಯವರ ಆರೋಗ್ಯ ಸ್ಥಿತಿ ನೋಡಿದರೆ ಮಾನವೀಯತೆಯ ಭಾವನೆಯಿಂದ, ಕರುಣೆಯಿಂದ ಅನ್ನಿ, ನನ್ನಿಂದ ಕೈಲಾದ ಸಹಾಯವಾಗಬೇಕು ಅನಿಸಿತು. ನಿಮ್ಮ ತಾಯಿಯವರ ಪಾಲಿಗೆ ಬರಲಿರುವ ಅನಿವಾರ್ಯ ದುರಂತದ ನಂತರ ಈ ಬಡ ಕುಟುಂಬ ಸಂಪೂರ್ಣವಾಗಿ ಕೇವಲ ನಿಮ್ಮನ್ನೆ ಅವಲಂಬಿಸಬೇಕಾಗತ್ತೆ.’

ಸೋನ್ಯಾ ತಟ್ಟನೆ ಎದ್ದು ನಿಂತಳು. ‘ಪಿಂಚಣಿ ಸಿಗುವುದು ಸಾಧ್ಯವಿರಬಹುದು ಅಂತ ಅವಳಿಗೆ ಹೇಳಿದಿರಾ? ಯಾಕೇಂದರೆ ನಿನ್ನೆ ನೀವಾಗಿಯೇ ಅವಳಿಗೆ ಪಿಂಚಣಿ ಕೊಡಿಸುತೇನೆ ಅಂತ ಹೇಳಿದಿರಂತೆ ಹೌದೇ?’

‘ಖಂಡಿತ ಇಲ್ಲ. ಒಂದು ಥರ ಅಸಂಬದ್ಧ ಇದು. ಸೇವೆಯಲ್ಲಿರುವಾಗಲೇ ಸರ್ಕಾರಿ ಅಧಿಕಾರಿ ತೀರಿಕೊಂಡರೆ, ಮನೆಯವರಿಗೆ ಮೇಲಿನವರ ಸಂಪರ್ಕ ಇದ್ದರೆ, ತಾತ್ಕಾಲಿಕ ಸಹಾರ ದೊರೆಯಬಹುದು ಅಂದೆ. ತೀರಿಕೊಂಡ ನಿಮ್ಮ ತಂದೆಯವರು, ಪಾಪ, ಸೇವೆಯ ಅವಧಿಯನ್ನು ಪೂರ್ಣಗೊಳಿಸಿಲ್ಲ ಅಂತ ಕಾಣತ್ತೆ. ಇತ್ತೀಚೆಗಂತೂ ಕೆಲಸಕ್ಕೇ ಹೋಗುತ್ತಿರಲಿಲ್ಲ. ಸ್ವಲ್ಪದರಲ್ಲಿ ಹೇಳಬೇಕು ಅಂದರೆ, ಪಿಂಚಣಿ ಅನ್ನುವುದು ಸಿಗುವ ಸಾಧ್ಯತೆ ತೀರ ಕಡಮೆ. ಅದಕ್ಕೆ ಬದಲಾಗಿ ಶಿಕ್ಷೆ… ಅಲ್ಲಾ, ನಿಮ್ಮ ತಾಯಿ ಆಗಲೇ ಪಿಂಚಣಿಯ ಯೋಚನೆ ಮಾಡತಿದಾರಲ್ಲಾ ಹೆಹ್ಹೆಹ್ಹೇ!’

‘ಹೌದು, ಸರ್. ಪಿಂಚಣಿ ಬಗ್ಗೆ ಯೋಚನೆ… ಯಾಕೆ ಅಂದರೆ ಅವಳು ಎಲ್ಲರನ್ನೂ ನಂಬತಾಳೆ… ಮರುಕ ಜಾಸ್ತಿ,.. ಹಾಗಾಗಿ ಎಲ್ಲಾ ಮಾತು ಎಲ್ಲಾ ಜನರನ್ನ ನಂಬತಾಳೆ… ಕ್ಷಮಿಸಿ ಸರ್,’ ಸೋನ್ಯಾ ಹೊರಡುವುದಕ್ಕೆ ಮತ್ತೆ ಎದ್ದಳು.

‘ಪ್ಲೀಸ್, ಇರಿ. ನನ್ನ ಮಾತು ಪೂರ್ತಿ ಕೇಳಿಲ್ಲ.’

‘ಸರಿ, ಸರ್. ನಿಮ್ಮ ಮಾತು ಪೂರ್ತಿ ಕೇಳಿಲ್ಲ,’ ಸೋನ್ಯಾ ಗೊಣಗಿದಳು.

‘ಕೂತುಕೊಳ್ಳಿ ಇವರೇ, ಹಾಗಾದರೆʼ..
ಸೋನ್ಯಾ ತೀರ ಸಿಗ್ಗುಗೊಂಡು ಮತ್ತೆ ಕುಳಿತಳು, ಮೂರನೆಯ ಬಾರಿಗೆ.

‘ಆಕೆಯ ಪರಿಸ್ಥಿತಿ ನೋಡಿದರೆ, ಅಯ್ಯೋ ಪಾಪ ಅನಿಸುವ ಮಕ್ಕಳನ್ನು ನೋಡಿದರೆ, ಆಗಲೇ ಹೇಳಿದೆನಲ್ಲಾ, ನನ್ನ ಕೈಯಲ್ಲೇನಾಗತ್ತೋ ಅದನ್ನ ಮಾಡಬೇಕು, ನನ್ನಿಂದ ಸಹಾಯವಾಗಬೇಕು ಅನಿಸತ್ತೆ. ಅಂದರೆ ಆಕೆಗಾಗಿ ಚಂದಾ ಎತ್ತಬಹುದು, ಲಾಟರಿ ಥರದ್ದು ಏನಾದರೂ ಮಾಡಬಹುದು, ಸಾಮಾನ್ಯವಾಗಿ ಸಂಬಂಧಿಕರು ಇಂಥ ಕೆಲಸ ಮಾಡತಾರೆ, ಅಥವ ಸಹಾಯ ಮಾಡುವ ಮನಸಿರುವ ಹೊರಗಿನವರೂ ಸಾಮಾನ್ಯವಾಗಿ ಮಾಡತಾರೆ. ಅದನ್ನೇ ನಿಮಗೆ ಹೇಳಬೇಕು ಅಂತಿದ್ದೆ, ಈ ಕೆಲಸ ಆಗಬಹುದು.’

‘ಸರಿ, ಸರ್. ಒಳ್ಳೆಯದು, ಸರ್… ದೇವರು ಒಳ್ಳೆಯದು..’ ಸೋನ್ಯಾ ಬಡಬಡಿಸಿದಳು. ಪೀಟರ್ ಪೆಟ್ರೊವಿಚ್‌ನನ್ನು ದಿಟ್ಟಿಸುತ್ತಿದ್ದಳು.

‘ಅದನ್ನೆಲ್ಲ ಮಾಡಬಹುದು, ಇವರೇ… ಅದು ಆಮೇಲಿನ ಕೆಲಸ… ಅಂದರೆ, ಇವತ್ತೇ ಬೇಕಾದರೂ ನಾವು ಶುರು ಮಾಡಬಹುದು. ಇವತ್ತು ಸಾಯಂಕಾಲ ಸಿಗೋಣ, ಮಾತಾಡಣ, ಅಸ್ತಿಭಾರ ಅನ್ನತಾರಲ್ಲ ಅದನ್ನ ಹಾಕಣ. ಇವತ್ತೇ ಸಾಯಂಕಾಲ ಏಳು ಗಂಟೆಗೆ ಸಿಗಬೇಕು, ಇಲ್ಲೇ. ಸೆಮ್ಯೊನೊವಿಚ್ ಕೂಡ ಇರತಾನೆ ಅಂದುಕೊಂಡಿದೇನೆ. ನಾನೂ ಇರತೇನೆ. ಆದರೆ. ಮೊದಲೇ ಒಂದು ವಿಷಯ ಹೇಳಿಬಿಡಬೇಕು. ಅದನ್ನ ಹೇಳುವುದಕ್ಕೆ ಅಂತಲೇ ನಿಮ್ಮನ್ನು ಕರೆಸಿ ತೊಂದರೆ ಕೊಟ್ಟದ್ದು. ಏನಂದರೆ, ಇವರೇ ನನ್ನ ಅಭಿಪ್ರಾಯದಲ್ಲಿ ಕ್ಯಾತರೀನ ಇವಾನೋವ್ನಾ ಅವರ ಕೈಗೆ ದುಡ್ಡು ಕೊಡುವುದು ಅಪಾಯಕಾರಿ, ಕೊಡಬಾರದು. ಇವತ್ತು ಏರ್ಪಾಟು ಮಾಡಿರುವ ಭೋಜನವನ್ನೇ ನೋಡಿ. ನಾಳೆ ಊಟಕ್ಕೆ ಗತಿ ಇಲ್ಲ ಅನ್ನತಾರಲ್ಲ ಅಂಥ ಸ್ಥಿತಿಯಲ್ಲಿರುವವರು, ಶೂ ಇಲ್ಲ, ಹಾಕಿಕೊಳ್ಳುವ ಬಟ್ಟೆ ಇಲ್ಲ ಅನ್ನುವ ಸ್ಥಿತಿಯಲ್ಲಿ ಇರುವವರು, ಇವತ್ತು ಜಮೈಕ ರಮ್ ತರತಾರೆ, Madeira ಕೂಡ ತರತಾರೆ ಕಾಫಿ ತರಿಸತಾರೆ ನೋಡಿ. ಹೀಗೆ ನನ್ನ ಕಣ್ಣಿಗೆ ಬಿತ್ತು ಇದೆಲ್ಲ. ನಾಳೆ ದಿನ ಇದೆಲ್ಲ ಭಾರ ನಿಮ್ಮ ಹೆಗಲಿಗೇ ಏರತ್ತೆ. ತುತ್ತು ಅನ್ನ ಹೊಂದಿಸುವುದೂ ನಿಮ್ಮ ಜವಾಬ್ದಾರಿ ಆಗತ್ತೆ. ಎಂಥ ಅಸಂಬದ್ಧ. ಹಾಗಾಗಿ ಚಂದಾ ಎತ್ತುವುದು ಸರಿ, ಆ ಕೆಲಸ ನಿಮ್ಮ ನತದೃಷ್ಟ ವಿಧವೆ ತಾಯಿಯ ಗಮನಕ್ಕೂ ಬರದ ಹಾಗೆ ಮಾಡಬೇಕು, ದುಡ್ಡಿನ ಸಂಗತಿ ಅವರಿಗೆ ತಿಳಿಯಲೇಬಾರದು, ಸರೀನಾ ನಾನು ಹೇಳಿದ್ದು?’

‘ಗೊತ್ತಿಲ್ಲ, ಸಾರ್, ನನಗೆ. ಇವತ್ತು ಮಾತ್ರ ಅವಳು ಹೀಗಿದಾಳೆ… ಅವಳ ಜೀವನದಲ್ಲಿ ಇದೇ ಮೊದಲು… ಗಂಡನ ನೆನಪಿಗೆ ಏನಾದರೂ ಮಾಡಬೇಕು, ಗೌರವ ತೋರಿಸಬೇಕು ಜನ ನೆನಪಿಟ್ಟುಕೊಳ್ಳುವ ಹಾಗೆ ಮಾಡಬೇಕು ಅನ್ನಿಸಿತು ಅವಳಿಗೆ. ಇಲ್ಲಾಂದರೆ ಅವಳು ತುಂಬ ಬುದ್ಧಿವಂತೆ, ಸರ್. ಹೇಗಿದ್ದರೂ ನಿಮ್ಮ ಇಷ್ಟದ ಹಾಗೇ ಆಗಲಿ, ಸರ್. ನಿಮಗೆ ನಾನು ತುಂಬ, ತುಂಬ, ತುಂಬ… ಅವರೆಲ್ಲಾರೂನೂ… ದೇವರು ನಿಮಗೆ… ಅನಾಥರು ಸಾರ್ ಅವರೆಲ್ಲ…’ ಮಾತು ಮುಗಿಸಲು ಆಗಲಿಲ್ಲ ಸೋನ್ಯಾಗೆ. ಅಳುವುದಕ್ಕೆ ಶುರು ಮಾಡಿದಳು.

‘ಹಾಗಾದರೆ, ನೋಡೀಮ್ಮಾ, ಇದನ್ನ ಮನಸಿನಲ್ಲಿಟ್ಟುಕೊಳ್ಳಿ. ಈಗ ದಯವಿಟ್ಟು ಇದನ್ನ ತಗೊಳ್ಳಿ. ನಿಮ್ಮವರಿಗೆಲ್ಲ ಉಪಯೋಗವಾಗಲಿ, ಇದು ಮೊದಲ ಚಂದಾ. ನನ್ನ ಕೈಯಲ್ಲಿ ಎಷ್ಟು ಕೊಡುವುದಕ್ಕೆ ಆಗುತ್ತದೋ ಅಷ್ಟು ಕೊಟ್ಟಿದೇನೆ. ಮತ್ತೆ ಇನ್ನೊಂದು ಕೋರಿಕೆ, ದಯವಿಟ್ಟು ದುಡ್ಡಿನ ವಿಷಯದಲ್ಲಿ ನನ್ನ ಹೆಸರನ್ನು ಎಲ್ಲೂ ತರಬಾರದು, ನನಗೂ ಜವಾಬ್ದಾರಿಗಳಿವೆ, ಇವರೇ. ಸದ್ಯ ಕೊಡಕ್ಕಾಗುವುದು ಇಷ್ಟೆ….’

ಪೀಟರ್ ಪೆಟ್ರೊವಿಚ್ ಹತ್ತು ರೂಬಲ್ ನೋಟನ್ನು ಹುಷಾರಾಗಿ ಬಿಡಿಸಿ ಸೋನ್ಯಾಗೆ ಕೊಟ್ಟ. ಅದನ್ನು ತೆಗೆದುಕೊಂಡ ಸೋನ್ಯಾ ನಾಚಿದಳು ತಟ್ಟನೆದ್ದಳು, ಏನೋ ಗೊಣಗಿ ಬೆನ್ನು ಬಾಗಿಸಿ ನಮಸ್ಕಾರ ಮಾಡಿ ಹೊರಟು ಹೋದಳು. ಪೀಟರ್ ಪೆಟ್ರೊವಿಚ್ ಬಾಗಿಲವರೆಗೂ ಅವಳ ಜೊತೆಯಲ್ಲಿ ಹೋಗಿ ಕಳಿಸಿಕೊಟ್ಟ. ಬಾಗಿಲಿನಿಂದಾಚೆಗೆ ಚಿಮ್ಮಿ, ಮುಜುಗರಪಡುತ್ತ, ಕಸಿವಿಸಿಪಡುತ್ತ ಕ್ಯಾತರೀನಳ ಹತ್ತಿರಕ್ಕೆ ಓಡಿಹೋದಳು.

ಈ ದೃಶ್ಯ ನಡೆಯುತ್ತಿರುವಾಗ ಸೆಮ್ಯೊನೊವಿಚ್ ಕಿಟಕಿಯ ಪಕ್ಕದಲ್ಲಿ ನಿಂತಿದ್ದ, ಅಥವಾ ಅವರ ಮಾತಿಗೆ ಅಡ್ಡಿಯಾಗದ ಹಾಗೆ ಕೋಣೆಯಲ್ಲಿ ಅಡ್ಡಾಡುತ್ತಿದ್ದ. ಸೋನ್ಯಾ ಹೋದಮೇಲೆ ಪೀಟರ್ ಪೆಟ್ರೊವಿಚ್‌ನ ಹತ್ತಿರಕ್ಕೆ ಹೋಗಿ ಗಂಭೀರವಾಗಿ ಕೈ ಕುಲುಕಿದ.
‘ಎಲ್ಲಾನೂ ಕೇಳಿದೆ, ಎಲ್ಲಾನೂ ನೋಡಿದೆ,’ ಸೆಮ್ಯೊನೊವಿಚ್ ನೋಡಿದೆ ಎಂಬ ಮಾತಿಗೆ ಒತ್ತು ಕೊಟ್ಟು ಹೇಳಿದ. ‘ಎಂಥ ಘನವಾದ ಕೆಲಸ—ಅಂದರೆ, ಮಾನವೀಯವಾದ ಕೆಲಸ! ಕೃತಜ್ಞತೆ ಕೂಡ ಬೇಡ ಅಂದೆ ನೀನು. ಅದನ್ನ ನಾನು ನೋಡಿದೆ. ನಾನು ನಂಬಿರುವ ತತ್ವಕ್ಕೆ ಅನುಗುಣವಾಗಿ ಖಾಸಗಿ ದಾನಗಳನ್ನು ನಾನು ಮೆಚ್ಚಲಾರೆ. ಯಾಕೆಂದರೆ ಅದು ಕೆಡುಕಿನ ಮೂಲವನ್ನು ನಾಶಮಾಡದೆ ಕೆಡುಕನ್ನು ಪೋಷಿಸುತ್ತದೆ. ಆದರೂ ನೀನು ಮಾಡಿದ ಕೆಲಸ ನೋಡಿ ಸಂತೋಷವಾಯಿತು ಎಂದು ಹೇಳದೆ ಇರಲಾರೆ. ಹೌದು, ಹೌದು, ನನಗೆ ಬಹಳ ಇಷ್ಟವಾಯಿತು.’

‘ಹ್ಞಾ, ನಾನ್ಸೆನ್ಸ್!’ ಪೀಟರ್ ಪೆಟ್ರೊವಿಚ್ ಗೊಣಗಿದ. ಕಳವಳಗೊಂಡವನ ಹಾಗೆ ಕಂಡ. ಸೆಮ್ಯೊನೊವಿಚ್‌ನನ್ನು ಗಮನವಿಟ್ಟು ನೋಡಿದ.

‘ಉಹ್ಞೂಂ. ನಾನ್ಸೆನ್ಸ್ ಅಲ್ಲವೇ ಅಲ್ಲ! ನಿನ್ನೆ ಆದ ಘಟನೆಯಿಂದ ನಿನಗೆ ಅವಮಾನವಾಗಿತ್ತು, ರೇಗಿತ್ತು. ಅಂಥ ಹೊತ್ತಿನಲ್ಲಿ ನೀನು ಬೇರೆಯವರ ದುರದೃಷ್ಟದ ಬಗ್ಗೆ ಯೋಚನೆ ಮಾಡುತ್ತೀಯಲ್ಲ!—ಇಂಥ ಮನುಷ್ಯ ಸಾಮಾಜಿಕ ತತ್ವದ ದೃಷ್ಟಿಯಿಂದ ತಪ್ಪೇ ಮಾಡುತ್ತಿರಲಿ, ಗೌರವಕ್ಕೆ ಅರ್ಹನಾದವನು! ನೀನು ಹೀಗೆ ಮಾಡುತ್ತೀಯ ಅನ್ನುವ ನಿರೀಕ್ಷೆಯೂ ಇರಲಿಲ್ಲ. ಅದರಲ್ಲೂ ನಿನ್ನ ಅಭಿಪ್ರಾಯ ಕೇಳಿದ ಮೇಲೆ. ಅಯ್ಯೋ! ನಿನ್ನ ಅಭಿಪ್ರಾಯಗಳೇ ನಿನ್ನ ಬೆಳವಣಿಗೆಗೆ ಅಡ್ಡಿಯಾಗಿವೆ! ನಿನ್ನೆ ನಿನಗೆ ಆದ ಸೋಲಿನಿಂದ ನಿನಗೆ ಎಷ್ಟು ನೋವಾಗಿರಬೇಕು, ಸಂಕಟವಾಗಿರಬೇಕು.’ ಸೆಮ್ಯೊನೊವಿಚ್ ಒಂದೇ ಸಮ ಉದ್ಗರಿಸುತ್ತಲೇ ಇದ್ದ. ಪೀಟರ್ ಪೆಟ್ರೊವಿಚ್‌ನ ಮೇಲೆ ಅವನಿಗೆ ಮತ್ತೆ ಅಭಿಮಾನ ಹುಟ್ಟಿತ್ತು. ‘ಅಲ್ಲಾ, ನೀನು ಯಾಕೆ ದುನ್ಯಾಳನ್ನ ಕಾನೂನು ಬದ್ಧವಾಗಿ ಮದುವೆಯಾಗಬೇಕು ಅನ್ನುತ್ತೀಯೋ ತಿಳಿಯದು. ಮದುವೆ ಯಾಕೆ ಕಾನೂನು ಬದ್ಧವಾಗಬೇಕು? ನಿನಗೆ ಸಿಟ್ಟು ಬಂದರೆ ನನಗೆ ಎರಡೇಟು ಹಾಕು. ನಿನ್ನ ಮದುವೆ ಮುರಿದು ಬಿದ್ದದ್ದು ನನಗಂತೂ ಸಂತೋಷ. ನಿನ್ನಂಥ ಉದಾತ್ತ ವ್ಯಕ್ತಿ ಮತ್ತೆ ಮನುಷ್ಯ ಕುಲಕ್ಕೆ ದೊರೆತಂತಾಯಿತು… ನೋಡು ನಾನಂತೂ ಮನಸಿಲ್ಲಿದ್ದದ್ದು ಹೇಳಿದೇನೆ.’

‘ನನ್ನ ತಲೆ ಮೇಲೆ ಕೊಂಬು ಬೆಳೆಯುವುದು, ಬೇರೆಯವರ ಮಕ್ಕಳಿಗೆ ಅಪ್ಪ ಆಗುವುದು ನನಗಿಷ್ಟವಿಲ್ಲ. ಅದಕ್ಕೇ ನನಗೆ ಕಾನೂನು ಬದ್ಧ ಮದುವೆ ಬೇಕು’ ಅಂದ ಪೀಟರ್ ಪೆಟ್ರೊವಿಚ್. ಮಾತಿಗೆ ಉತ್ತರ ಹೇಳಿದರೂ ಮುಖದಲ್ಲಿ ವಿಷಾದವಿತ್ತು, ಮನಸಿನಲ್ಲಿ ಏನೋ ಚಿಂತೆ ಇತ್ತು.

‘ಮಕ್ಕಳು?’ ಯುದ್ಧ ತುರಗವು ಕಹಳೆಯ ದನಿ ಕೇಳಿ ಹೇಷಾರವ ಮಾಡುವ ಹಾಗೆ ಮಕ್ಕಳ ಪ್ರಸ್ತಾಪ ಬಂದ ತಕ್ಷಣ ಸೆಮ್ಯೊನೊವಿಚ್ ಅವೇಶಕ್ಕೆ ಒಳಗಾದ. ‘ಮಕ್ಕಳೆನ್ನುವುದು ಸಾಮಾಜಿಕ ಪ್ರಶ್ನೆ, ಪ್ರಮುಖವಾದ ಪ್ರಶ್ನೆ, ಒಪ್ಪತೇನೆ. ಆದರೆ ಮಕ್ಕಳ ಪ್ರಶ್ನೆಯನ್ನು ಬೇರೆ ಥರದಲ್ಲೇ ಬಗೆಹರಿಸಬೇಕು. ಮಕ್ಕಳು ಬೇಡವೇ ಬೇಡ, ಸಂಸಾರವೂ ಬೇಡ ಅನ್ನುವವರೂ ಒಂದಷ್ಟು ಜನ ಇದ್ದಾರೆ. ಮಕ್ಕಳ ವಿಚಾರ ಆಮೇಲೆ ಮಾತನಾಡೋಣ. ಸದ್ಯಕ್ಕೆ ಕೊಂಬಿನ ವಿಚಾರ ನೋಡಣ! [ಮೋಸ ಹೋದ ಗಂಡನ ತಲೆಯ ಮೇಲೆ ಕೊಂಬು ಬರುತ್ತದೆ ಅನ್ನುವುದು] ಪುಷ್ಕಿನ್ ಥರ ಯೋಚನೆ ಮಾಡುವವರ ಕಲ್ಪನೆ. ಭವಿಷ್ಯದ ನಿಘಂಟುವಿನಲ್ಲಿ ತಲೆಯ ಮೇಲಿನ ಕೊಂಬು ಅನ್ನುವ ನಮೂದು ಇರುವುದೇ ಇಲ್ಲ. ಅಲ್ಲದೆ ಏನು ಕೊಂಬು? ಎಂಥ ಭ್ರಮೆ? ಯಾವ ಕೊಂಬು? ಕೊಂಬು ಯಾಕೆ? ಎಂಥ ನಾನ್ಸೆನ್ಸ್! ಸಿವಿಲ್ ಮದುವೆಗಳು ಒಪ್ಪಿತವಾದಾಗ ತಲೆಯ ಮೇಲೆ ಕೊಂಬು ಇರುವುದೇ ಇಲ್ಲ.

ಕೊಂಬು ಅನ್ನುವುದು ಕಾನೂನು ಬದ್ಧ ಮದುವೆಯ ಸಹಜ ಪರಿಣಾಮ. ಕಾನೂನು ಬದ್ಧ ಮದುವೆಗೆ ಮನುಷ್ಯ ತೋರುವ ಪ್ರತಿಭಟನೆಯ ಸಂಕೇತ. ಹಾಗಾಗಿ ಅದು ಅವಮಾನವಲ್ಲ. ಕೊಂಬಿನ ವಿಚಾರ ಮಾಡುವುದೇ ಅಸಂಗತ. ಅಕಸ್ಮಾತ್ತಾಗಿ ನಾನು ಕಾನೂನುಬದ್ಧ ಮದುವೆಯಾದರೂ ನನ್ನ ತಲೆಯ ಮೇಲೆ ನೀನು ಹೇಳುವಂತ ಕೊಂಬು ಬಂದರೂ ನನಗೆ ಸಂತೋಷವೇ! ಆಗ ನನ್ನ ಹೆಂಡತಿಗೆ ಹೇಳತೇನೆ—‘ಗೆಳತೀ, ಈ ಮೊದಲು ನಾನು ನಿನ್ನನ್ನು ಬರೀ ಪ್ರೀತಿಸುತ್ತಿದ್ದೆ, ಈಗ ಮದುವೆ ಎಂಬ ವ್ಯವಸ್ಥೆಯನ್ನು ನೀನು ವಿರೋಧಿಸಿದ್ದೀಯಲ್ಲ, ಪ್ರತಿಭಟನೆ ತೋರಿದ್ದೀಯಲ್ಲ, ಅದಕ್ಕಾಗಿ ನಿನ್ನ ಮೇಲೆ ಗೌರವ ಮೂಡಿದೆ ಈಗ,’—ಅನ್ನುತೇನೆ. ನಗತಾ ಇದೀಯ? ಯಾಕೆ ನಗತೀಯ ಅಂದರೆ ಹಳೆಯ ಪೂರ್ವಾಗ್ರಹಗಳಿಂದ ಬಿಡಿಸಿಕೊಂಡಿಲ್ಲ ನೀನು. ದೆವ್ವ ಹಿಡಿಯಲಿ, ಕಾನೂನು ಬದ್ಧ ಮದುವೆಯಲ್ಲಿ ಮೋಸವಾದಾಗ ಅಷ್ಟೊಂದು ಹಿಂಸೆ, ಕಿರಿಕಿರಿ ಯಾಕಾಗತ್ತೆ? ಯಾಕೆ ಅಂದರೆ ಮದುವೆ ಎಂಬ ವ್ಯವಸ್ಥೆಯಲ್ಲಿ ಗಂಡು ಹೆಣ್ಣು ಇಬ್ಬರೂ ಅವಮಾನಿತರಾಗಿರತಾರೆ. ಸಿವಿಲ್ ಮದುವೆಯಲ್ಲಿ ಆಗುವ ಹಾಗೆ ಎಲ್ಲ ಗಂಡಸರ ತಲೆಯ ಮೇಲೂ ಕೊಂಬು ಇರುವಾಗ ಅದು ಅದು ಅಗೌರವ ಅನಿಸಲ್ಲ, ಕೊಂಬು ಅನ್ನುವ ಅವಮಾನದ ಹೆಸರೂ ಇರಲ್ಲ ಅದಕ್ಕೆ. ಅದಕ್ಕೆ ಬದಲಾಗಿ ಹೆಂಡತಿಯಾದವಳು ಗೌರವ ಕೊಡತಾಳೆ. ಯಾಕೆ ಅಂದರೆ, ಗಂಡನಾದವನು ತನ್ನ ಸಂತೋಷಕ್ಕೆ ಅಡ್ಡಿ ಬರಲಿಲ್ಲ, ತನ್ನ ಹೊಸ ಗಂಡನ ಮೇಲೆ ಸೇಡು ತೀರಿಸಿಕೊಳ್ಳುವ ಯೋಚನೆ ಮಾಡದಿರುವಷ್ಟು ಪ್ರಬುದ್ಧನಾಗಿದ್ದಾನೆ ಅನ್ನುವ ಕಾರಣಕ್ಕೆ. ದೆವ್ವ ಹಿಡಿಯಲಿ.

ಒಂದೊಂದು ಸಲ ನನಗೆ ಕನಸು ಬೀಳತ್ತೆ. ನನಗೆ ಮದುವೆಯಾದರೆ, ಅದು ಸಿವಿಲ್ ಮದುವೆಯೋ ಕಾನೂನು ಬದ್ಧ ಮದುವೆಯೋ ಯಾವುದೇ ಆಗಲಿ, ನನ್ನ ಹೆಂಡತಿ ಪ್ರೇಮಿಯನ್ನು ಹುಡುಕಿಕೊಳ್ಳಲು ತಡಮಾಡಿದರೆ ನಾನೇ ಒಬ್ಬ ಪ್ರಿಯಕರನನ್ನು ಕರೆದುಕೊಂಡು ಬರುತ್ತೇನೆ, ‘ಗೆಳತೀ, ನಿನ್ನ ಪ್ರೀತಿಸತೇನೆ, ಅದರಾಚೆಗೆ ನೀನು ನನಗೆ ಗೌರವ ಕೊಡಬೇಕು ಎಂದು ಬಯಸುತ್ತೇನೆ!’ ಅನ್ನತೇನೆ. ಸರಿಯಾ?’

ಆ ಮಾತು ಕೇಳುತ್ತ ಪೀಟರ್ ಪೆಟ್ರೊವಿಚ್ ಕುಲುಕುಲು ನಕ್ಕ. ನಗುವಿನಲ್ಲಿ ಉತ್ಸಾಹವಿರಲಿಲ್ಲ. ಹಾಗೆ ನೋಡಿದರೆ ಅವನು ಆ ಮಾತೆಲ್ಲ ಕೇಳಿಸಿಕೊಳ್ಳುತ್ತಲೇ ಇರಲಿಲ್ಲ. ಬೇರೆ ಇನ್ನೇನೋ ಯೋಚನೆ ಮಾಡುತ್ತಿದ್ದ. ಸೆಮ್ಯೊನೊವಿಚ್ ಕೂಡ ಅದನ್ನು ಕೊನೆಗೂ ಗಮನಿಸಿದ. ಪೀಟರ್ ಪೊಟ್ರೊವಿಚ್ ಕೈ ಉಜ್ಜಿಕೊಳ್ಳುತ್ತ ಆಗಾಗ ಯೋಚನೆಯಲ್ಲಿ ಮುಳುಗುತ್ತಿದ್ದ. ಇದನ್ನೆಲ್ಲ ಸೆಮ್ಯೊನೊವಿಚ್ ಅರ್ಥಮಾಡಿಕೊಂಡ, ನಂತರದಲ್ಲಿ ಇದನ್ನೆಲ್ಲ ನೆನಪು ಮಾಡಿಕೊಂಡ.