ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ. ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ.
ಸುಧಾ ಎಂ. ಚೊಚ್ಚಲ ಕಥಾ ಸಂಕಲನ “ಅಪೂರ್ಣವಲ್ಲ” ಕುರಿತು ಮಹಾಬಲ ಭಟ್‌ ಅವರ ಬರಹ

ಸುಧಾ ಎಂ. ಅವರ ಚೊಚ್ಚಲ ಕಥಾಸಂಕಲನ ಅಪೂರ್ಣವಲ್ಲ… ಒಂದು ಪೂರ್ಣಪ್ರಮಾಣದ ತೃಪ್ತಿಯನ್ನು ನೀಡುವ ಉತ್ತಮ ಕೃತಿ. ಹಳ್ಳಿಯ ಬದುಕಿನ ಸೊಗಡನ್ನೂ, ಹಳ್ಳಿಗರ ಹೃದಯದ ಭಾವನೆಗಳನ್ನೂ ಹಿಡಿದಿಡುವಲ್ಲಿ ಲೇಖಕಿಯ ಬರಹಗಳು ಸಶಕ್ತವಾಗಿವೆ. ಕಾರ್ತಿಕಾದಿತ್ಯ ಬೆಳ್ಗೋಡು ಅವರು ಬೆನ್ನುಡಿಯಲ್ಲಿ ಹೇಳಿದಂತೆ ‘ಪ್ರತೀ ಕಥೆಯ ಪಾತ್ರಗಳನ್ನು ಅವರು ಯಾಂತ್ರಿಕವಾದ ನೆಲೆಗಟ್ಟಿನಲ್ಲಿ ಕಟ್ಟದೆ, ಭಾವನೆಗಳೊಂದಿಗೆ ಒಂದು ನಮೂನೆಯ ಪ್ರೀತಿಯೊಂದಿಗೆ ಪರಸ್ಪರ ಬೆಸೆಯುತ್ತಾರೆ.’ ಅವರ ಕಥೆಗಳನ್ನು ಒಂದೊಂದಾಗಿ ಬಿಚ್ಚುತ್ತಾ ಹೋಗೋಣ.

(ಸುಧಾ ಎಂ.)

ಕೃತಿಯ ಹೆಸರನ್ನೇ ಹೊಂದಿರುವ ಮೊದಲ ಕಥೆ ಒಬ್ಬ ಪ್ರೇಮಿಯದ್ದು. ಅವನ ಪ್ರೇಯಸಿ ಇನ್ನೊಂದು ಮದುವೆಯಾಗಿರುವುದು ಗೊತ್ತಿದ್ದರೂ ಅವನನ್ನು ಭಗ್ನಪ್ರೇಮಿ ಎಂದು ಕರೆಯಲಾಗದು. ಯಾಕೆಂದರೆ ಅವನು ತನ್ನ ಪ್ರೇಮನಿವೇದನೆಯನ್ನೇ ಮಾಡಿಕೊಂಡಿರಲಿಲ್ಲ. ಅಷ್ಟೇ ಅಲ್ಲ ಆ ಪ್ರೇಮ ಇನ್ನೂ ಅವನ ಹೃದಯದಲ್ಲಿ ಸತ್ತಿಲ್ಲ. ಅದರ ಜೀವಂತಿಕೆಯೇ ಅವನನ್ನು ಅವಿವಾಹಿತನನ್ನಾಗಿಯೇ ಇರಿಸಿದೆ. ಒಂದಿನ ಅಚಾನಕ್ಕಾಗಿ ಅವಳೇ ಸಿಕ್ಕಾಗ ಅವನ ಹೃದಯ ಅರಳಿದ ಪರಿಯನ್ನು ಲೇಖಕಿ ಸೊಗಸಾಗಿ ಚಿತ್ರಿಸಿದ್ದಾರೆ. ಹೃದಯದ ಅದೆಷ್ಟೋ ಭಾವನೆಗಳು ಹೀಗೆಯೇ ವ್ಯಕ್ತವಾಗದೆ ಹುದುಗಿಹೋಗಿರುತ್ತವೆ. ಸ್ನೇಹದ ಮಧ್ಯೆ ಪ್ರೇಮದ ಮಾತು ಬಂದರೆ ಅದು ಕೆಟ್ಟ ಭಾವನೆಯೆಂದು ಪರಿಗಣಿತವಾಗುತ್ತದೆ ಎಂಬ ಅಳುಕು ಆ ಸಂದರ್ಭದಲ್ಲಿರುತ್ತದೆ.

ಎರಡನೆಯ ಕಥೆ ಹಾಳಿ ಹಳ್ಳಿಯ ಬದುಕಿನ ಕರುಣಾಮಯ ಬದುಕನ್ನು ತೆರೆದಿಡುತ್ತದೆ. ನೆರೆಬಂದಾಗ ಹೊಳೆದಾಟುವುದು, ಗದ್ದೆಯ ಹಾಳಿಯ ಮೇಲೆ ನಡೆದುಹೋಗುವುದು ಮುಂತಾದ ಹಳ್ಳಿಯ ಚಿತ್ರಗಳನ್ನು ಈ ಕಥೆ ಕಟ್ಟಿಕೊಡುತ್ತದೆ.

ಬಿದ್ದಾಗ ಬರದವರು ಎಂಬ ಮೂರನೆಯ ಕಥೆ ಒಂದು ನೀಳ್ಗತೆ. ದಿನಕರನೆಂಬ ಇಂಜಿನಿಯರಿಂಗ್ ಓದಿದ ವ್ಯಕ್ತಿ, ವಿದೇಶದಲ್ಲಿ ಕೆಲಸ ಮಾಡುತ್ತ, ಹಳ್ಳಿಯ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳುವ ಕಥಾನಕ. ಒಂಟಿ ಮನೆಯ ಬದುಕು, ಅಪ್ಪನ ಮೇಲಿನ ಅಪಾರ ಪ್ರೀತಿ ಇವು ಎಳೆ ಎಳೆಯಾಗಿ ಹೆಣೆಯಲ್ಪಟ್ಟಿವೆ. ಜೊತೆಗೆ, ಕಷ್ಟದಲ್ಲಿದ್ದಾಗ ಬರದವರು, ಮಗ ಓದಿ ವಿದೇಶದಲ್ಲಿದ್ದಾನೆ ಎಂದಾಕ್ಷಣ ಜಾತಕ ಹಿಡಿದು ಬರುವ ಸೋಗಲಾಡಿತನವನ್ನೂ ಲೇಖಕಿ ಬಿಚ್ಚಿಟ್ಟಿದ್ದಾರೆ.

ನಾಲ್ಕನೆಯ ಕಥೆ ಹಿಸೆ, ಗಂಡುಮಕ್ಕಳು ದೊಡ್ಡವರಾದಾಗ ಅಪ್ಪನನ್ನೇ ಹಿಸೆ ಕೇಳುವ ಮಟ್ಟಕ್ಕೆ ಇಳಿಯುತ್ತಾರೆ ಎಂಬ ಕಹಿ ಸತ್ಯವನ್ನು ನಮ್ಮ ಮುಂದಿಡುತ್ತದೆ. ಗಂಡುಮಕ್ಕಳೆಂದು ಬೀಗುವುದು ಮುಖ್ಯವಲ್ಲ, ಅವರಿಗೆ ಬೇಕು ಬೇಕಾದ್ದನ್ನೆಲ್ಲ ಒದಗಿಸುತ್ತ ಜೀವನದ ಕಷ್ಟವೆಂದರೇನು ಎಂಬುದೇ ತಿಳಿಯದಂತೆ ಬೆಳೆಸುವುದು ಸರಿಯಲ್ಲ ಎಂಬ ಪಾಠವನ್ನು ಈ ಕಥೆ ತಿಳಿಸಿಕೊಡುತ್ತದೆ.

ತಲೆಮಾರು ಎಂಬ ಕಥೆ ಹಳ್ಳಿಯ ಮನೆಯೊಂದರ ಚಿತ್ರಣವನ್ನು ನೀಡುತ್ತದೆ. ತುಂಬಿ ತುಳುಕುತ್ತಿದ್ದ ಮನೆಯೊಂದು ತಲೆಮಾರುಗಳ ನಂತರ ಜೇಡರಬಲೆಯ ಬೀಡಾಗಿ ಹೋಗುವುದಕ್ಕೆ ಕಾರಣ ಏನು? ಪೇಟೆಯ ಥಳುಕು ಬಳುಕಿನ ಜೀವನದ ಆಕರ್ಷಣೆಯೊ, ಹಳ್ಳಿಯ ಜೀವನದ ಬಗೆಗಿನ ತಾತ್ಸಾರವೊ ಎಂಬೆಲ್ಲ ವಿಷಯಗಳ ಚರ್ಚೆ ಈ ಕಥೆಯಲ್ಲಿದೆ.

ಫಿರ್ಖಾನ್-ಸೋಮಿ ಎಂಬ ಬುಡಕಟ್ಟು ಜನಾಜಂಗದ ಜೋಡಿಯ ಸುತ್ತ ಹೆಣೆದ ಕಥೆ ಬಲಿ. ಕಾಡಿನಲ್ಲಿ ವಾಸಿಸುತ್ತ, ಕಾಡನ್ನು ಪ್ರೀತಿಸುತ್ತ, ಕಾಡನ್ನೇ ಜೀವನವನ್ನಾಗಿಸಿಕೊಂಡ ಈ ಜೋಡಿಯ ಮೂಲಕ ಕಾಡಿನ ಬುಡಕಟ್ಟು ಜನಾಂಗದ ಜೀವನಚಿತ್ರಣವನ್ನು ಲೇಖಕಿ ನೀಡಿದ್ದಾರೆ. ಮಧ್ಯೆ ಮಧ್ಯೆ ಕೊಂಕಣಿ ಭಾಷೆಯ ಸಂಭಾಷಣೆಯನ್ನೂ ಅಳವಡಿಸಿ ಚಿತ್ರಣವನ್ನು ನೈಜವಾಗಿಸಿದ್ದಾರೆ. ಅಂಥವರ ಜೀವನದಲ್ಲಿ ಹೊರಗಿನಿಂದ ಪ್ರವೇಶಿಸುವ ವಿಶಾಲ್ ಎಂಬ ಸ್ವಾರ್ಥಿ, ತನ್ನ ಸ್ಮಗ್ಲಿಂಗ್ ವ್ಯವಹಾರಕ್ಕೆ ವನವಾಸಿಗಳನ್ನು ಬಳಸಿಕೊಳ್ಳುತ್ತಾ, ಅವರಿಗೂ ಕಳ್ಳದಂಧೆಯ ರುಚಿಹತ್ತಿಸಿ ಕೆಡಿಸುತ್ತಾನೆ. ಮತಾಂತರದ ಪ್ರಯತ್ನದ ಬಗ್ಗೆ ಅದರ ವಿರುದ್ಧದ ಹೋರಾಟದ ಬಗ್ಗೆಯೂ ಇಲ್ಲಿ ಉಲ್ಲೇಖ ಇದೆ. ಕೊನೆಗೆ ವಿಶಾಲನ ಸ್ವಾರ್ಥಕ್ಕೆ ಸೋಮಿಯ ಜೀವ ಬಲಿಯಾಗಿ ಹೋಗುತ್ತದೆ.

ಕಣಿ ಎನ್ನುವ ಕಥೆ ಜೀವನದಲ್ಲಿ ನೊಂದ ಹೆಣ್ಣುಮಗಳೊಬ್ಬಳ ಮನೋಗತವನ್ನು ತೆರೆದಿಡುತ್ತದೆ. ಜೋಗತಿಯೊಬ್ಬಳ ಕಣಿಯ ಮಾತಿನ ಮೋಡಿಗೊಳಗಾಗುತ್ತ, ತನ್ನೆಲ್ಲ ನೋವುಗಳನ್ನು ಕಥಾನಾಯಕಿ ತೆರೆದಿಡುತ್ತಾಳೆ. ಕುಟುಂಬದಲ್ಲಿ ಆರ್ಥಿಕ ಕಷ್ಟ ಎದುರಾದಾಗ ಯಾವ ರೀತಿಯಲ್ಲಿ ನಿಭಾಯಿಸಬೇಕು, ಅದು ಜೀವನವನ್ನು ಯಾವರೀತಿ ಜರ್ಜರಿತವನ್ನಾಗಿ ಮಾಡಿಬಿಡುತ್ತದೆ ಎಂಬುದನ್ನು ಕಥೆ ಚಿತ್ರಿಸಿಕೊಡುತ್ತದೆ.

ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ.

ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ. ವಿಧವಾ ವಿವಾಹದಂತಹ ಸಾಮಾಜಿಕ ಸುಧಾರಣೆಗಳ ಬಗ್ಗೆ ಭಾಷಣ ಬಿಗಿಯುವ ಮಠ ಮಾನ್ಯಗಳೇ ನಿಜವಾಗಿ ಅಂಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರನ್ನು ಬಹಿಷ್ಕರಿಸುತ್ತದೆ ಎಂಬ ವಿಡಂಬನೆಯನ್ನು ಈ ಕಥೆಯಲ್ಲಿ ಹೊರಗೆಡಹಿದ್ದಾರೆ.

ಹೀಗೆ ಒಂಭತ್ತು ಕಥೆಗಳ ಈ ಸಂಕಲನದ ತುಂಬೆಲ್ಲ ಹಳ್ಳಿಯ ಜೀವನದ ಏಳು-ಬೀಳುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಹಳ್ಳಿಯ ಜೀವನದ ಮೇಲೆ ಲೇಖಕಿಗಿರುವ ಪ್ರೀತಿ, ಇಲ್ಲಿಯ ಸಿರಿಯನ್ನೆಲ್ಲ ತೊರೆದು ತಂದೆ ತಾಯಿಯರನ್ನು ಅನಾಥರನ್ನಾಗಿ ಮಾಡಿ ಹೋಗುವ ಆಧುನಿಕ ಪೀಳಿಗೆಯ ಮೇಲಿರುವ ತಾತ್ಸಾರ ಸ್ಪಷ್ಟವಾಗಿ ವ್ಯಕ್ತವಾಗಿವೆ. ಇಲ್ಲಿನ ಕಥೆಗಳು ಸರಳವಾಗಿ ಹೇಳಲ್ಪಟ್ಟಿವೆ. ಭಾಷೆಯಲ್ಲಿಯೂ ಗ್ರಾಂಥಿಕತೆ ಇಲ್ಲ. ಹಳ್ಳಿಯ ಆಡುಭಾಷೆಯನ್ನೇ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಕಥಾಹಂದರಕ್ಕಿಂತ ಪಾತ್ರಗಳ ಮೂಲಕ ಲೇಖಕಿ ಹೇಳಿಸುವ ವಿಚಾರಗಳು, ಚಿಂತನೆಗಳು ಮುಖ್ಯವೆನಿಸುತ್ತವೆ. ಅವೇ ಇಲ್ಲಿನ ಕಥೆಗಳ ಜೀವ. ಒಟ್ಟಿನಲ್ಲಿ ಲೇಖಕಿ ಒಂದು ಚೆಂದದ ಕಥಾಸಂಕಲನವನ್ನು ಇತ್ತಿದ್ದಾರೆ. ಚೊಚ್ಚಲ ಕೃತಿಯಲ್ಲೇ ಭರವಸೆಯನ್ನು ಮೂಡಿಸಿದ್ದಾರೆ.

(ಕೃತಿ: ಅಪೂರ್ಣವಲ್ಲ (ಕಥಾ ಸಂಕಲನ), ಲೇಖಕರು: ಸುಧಾ ಎಂ., ಪ್ರಕಾಶಕರು: ಸ್ವಸ್ತಿ ಪ್ರಕಾಶನ (9483617879/9945546615.), ಪುಟಗಳು: 112, ಬೆಲೆ: 120/-)